ಒಂದು ಪ್ರೇಮದ ಆಯಸ್ಸು ಎಷ್ಟು?
ಇದೊಂದು ಪ್ರಶ್ನೆಯನ್ನೊಬ್ಬ ನಿನ್ನೆ ನನ್ನ ವಾಟ್ಸಪ್ ಗೆ ತಳ್ಳಿದ.
ನಾನು ಕ್ಷಣಕಾಲ ಈ ಪ್ರಶ್ನೆ ಕುರಿತು ಯೋಚಿಸಿದೆ.
ಅಮೇಲೆ ನನ್ನ ಕೆಲಸಗಳಲ್ಲಿ ಕಳೆದುಹೋದೆ.
ಇವತ್ತು ಬೇಗನೇ ಎದ್ದು ಕುಳಿತಿದ್ದೆ. ಮತ್ತೆ ಅವನು ಕಳುಹಿಸಿದ ಪ್ರಶ್ನೆಯನ್ನು ನೋಡಿದೆ. ನನಗೆ ಆಪ್ತರಾದ ಕೆಲವರಿಗೆ ಕಳುಹಿಸಿದೆ.
ಯಾರಿಂದಲೂ ಉತ್ತರ ಬರಲಿಲ್ಲ. ಅವರೂ ನನ್ನ ಹಾಗೇ ಕೆಲಸಗಳಲ್ಲಿ ಕಳೆದುಹೋಗಿದ್ದಾರಾ ಅಥವಾ ಅವರೂ ಅವರ ಆಪ್ತರಿಗೆ ಕಳುಹಿಸಿ ಉತ್ತರಕ್ಕೆ ಕಾಯುತ್ತಿದ್ದಾರಾ?
ನನ್ನ ಪರಿಚಯದ ಹುಡುಗನೊಬ್ಬನಿದ್ದ. ಅವನಿಗೆ ಒಂದು ಪ್ರೀತಿ ಹುಟ್ಟಿತು. ಅವಳು ಅವನು ನನಗೆ ತಿಳಿದಿರುವಂತೆ ಎರಡು ವರ್ಷ ನಿರಂತರ ಪ್ರೀತಿಸಿದರು. ಆಗಾಗ್ಗೆ ಡೇಟಿಂಗ್ ಮಾಡುತ್ತಿದ್ದರು. ಜೊತೆಯಾಗಿ ಊಟಕ್ಕೆ ಹೋಗುತ್ತಿದ್ದರು. ಲಾಂಗ್ ಡ್ರೈವ್ ಮಾಡುತ್ತಾ ಕಾಡಿನ ದಾರಿಗಳಲ್ಲಿ ಕಳೆದುಹೋಗುತ್ತಿದ್ದರು. ಒಂದು ದಿನ ಆ ಹುಡುಗ ಸಿಕ್ಕಿದ. ಖಿನ್ನನಾಗಿದ್ದ. ನಾನೇನೂ ಕೇಳಲಿಲ್ಲ. ಅವನೂ ಹೇಳಲಿಲ್ಲ. ಆಮೇಲೆ ಮಂದಿರವೊಂದರಲ್ಲಿ ಆ ಹುಡುಗಿ ಮತ್ತೊಬ್ಬ ಹುಡುಗ ನನಗೆ ಕಂಡರು. ಅವರಿಬ್ಬರು ಸುತ್ತಾಡುವುದು ಕಂಡಿತು. ಈ ಹುಡುಗ ಏಕೆ ಖಿನ್ನನಾಗಿದ್ದಾನೆ ಎಂದು ಸ್ಪಷ್ಟವಾಯಿತು.
ಇದಾದ ತಿಂಗಳಲ್ಲಿ ಆ ಹುಡುಗಿ ಮತ್ತು ಈ ಹುಡುಗ ಕಾರಲ್ಲಿ ಜೊತೆಯಾಗಿ ಓಡಾಡುವುದು ಕಾಣಿಸಿತು.
ನಾನು ಬಹಳ ಅಪಾರ್ಥ ಮಾಡಿಕೊಂಡೆ ಎಂದನಿಸಿತು.
ಇಷ್ಟಾಗಿ ಆಸ್ಪತ್ರೆಯೊಂದರಲ್ಲಿ ಆ ಹುಡುಗಿ ಸಿಕ್ಕಳು. ಟೆಸ್ಟ್ ಗೆ ಬಂದಿದ್ದು ಎಂದಳು. ಆಕೆಗೆ ಆಗಲೇ ಅರೇಂಜ್ಡ್ ಮದುವೆಯಾಗಿತ್ತು.
ಆಶೀರ್ವಾದ ಮಾಡಿ ಎಂದಳು.
ಮತ್ತೊಂದು ದಿನ ಆ ಹುಡುಗಿಯೂ ಈ ಹುಡುಗನೂ ಕಾರಲ್ಲಿ ಬಂದಿಳಿದು ಪಾನಕದ ಮಳಿಗೆಯಲ್ಲಿ ಹಣ್ಣಿನ ರಸ ಕುಡಿಯುವುದು ಕಂಡಿತು.
ಇಂದು ಆ ಹುಡುಗರಿಬ್ಬರು ಸಿಕ್ಕರೆ ಪ್ರೇಮದ ಆಯಸ್ಸು ಎಷ್ಟು ಎಂದು ಹೇಳಬಹುದು.

ಮೊನ್ನೆ ಒಬ್ಬಳು ಸಿಕ್ಕಳು.
ಅವಳು ಮನಬಿಚ್ಚಿ ಹೇಳಿದ ಕತೆ ಇಷ್ಟು.
ನಿಜ ಹೇಳುವೆ, ನನಗೆ ಅವನ ಮೇಲೆ ಲವ್ವಾಯ್ತು. ನೇರವಾಗಿ ಹೇಳಿದೆ. ಆ ಭಡವನಿಗೆ ಅದು ಹಾದರದಂತೆ ಕಂಡಿತು. ಬರೀ ಕಾಮದ ವಿಚಾರ ಮಾತನಾಡುತ್ತಿದ್ದ.
ಬಾ ಪ್ರೀತಿಸೋಣ ಅಂತ ಕರೆದೆ.
ತಾನೊಬ್ಬ ಚಿರವಿರಹಿ ಎಂದೂ ತಾನು ಪ್ರೇಮಿಸಿ ವಂಚಿಸಲ್ಪಟ್ಟು ಖಿನ್ನತೆಗೆ ಜಾರಿರುವುದಾಗಿಯೂ ಹೇಳಿ ಅತ್ತ. ಅವನನ್ನು ಸಮಾಧಾನಪಡಿಸಿ ಮಲಗಿಸುವ ಹೊತ್ತಿಗೆ ನನ್ನಲ್ಲಿ ಹುಟ್ಟಿದ ಪ್ರೇಮ ಸತ್ತೇ ಹೋಯ್ತು ಅಂದಳು.
ಅವಳಿಗೆ ನಾನು ಒಂದು ಪ್ರೇಮದ ಆಯಸ್ಸು ಎಷ್ಟು ಎಂದು ಕೇಳಬಾರದು.

ಸಹಸ್ರಶೀರ್ಷಾ ಪುರುಷಃ
ಸಹಸ್ರಾಕ್ಷ
ಸಹಸ್ರಪಾತ್
ಸ ಭೂಮಿಮ್ ವಿಶ್ವತೋ ವೃತ್ವಾ
ಅತ್ಯತಿಷ್ಠದ್ದಶಾಂಗುಲಮ್


ಹ್ಯಾಪಿ ಪುರುಷ ದಿನ.

Comments

Popular posts from this blog

ಒಳಗೆ ಕೆಲಸ ನಡೆಯುತ್ತಿದೆ

ನೇಪಾಳ ಕಲಿಸುವ ಪಾಠಗಳು

ಪುನರಾಗಮನಾಯಚ