20170530

ಕ್ಷೇಮ ತರುವಾಯ ತಿಳಿಸುವುದೇನೆಂದರೆ....
ಈ ಕಥೆ ನನ್ನದಲ್ಲ.ಕಥೆಯ ಪಾತ್ರವೂ ನಾನಲ್ಲ.ಆದರೆ ಶೋಭಾ ಮತ್ತು ಈ ಕಥಾನಾಯಕ ತೀರಾ ನನ್ನದು.ಕಥೆ ಹುಟ್ಟಿಬರುವ ಹೊತ್ತಿನಲ್ಲಿ ಶೋಭಾ ಇರಲಿಲ್ಲ,ನಾನೂ ಇರಲಿಲ್ಲ.ಆದರೆ ಶೋಭಾ ಕಥೆ ಹುಟ್ಟುತ್ತಾ ನನ್ನವಳಾಗುತ್ತಾ ಇರುವುದನ್ನು ನಾನು ಕಥೆಯುದ್ದಕ್ಕೂ ಗಮನಿಸಿದ್ದೆ.ಏಕೆಂದರೆ ಈ ಕಥೆಗೆ ನಾನೇ ನಾಯಕ.ಆದರೆ ನಾನೇಕೆ ನಾಯಕನಾಗಬೇಕು? ಈ ಕಥೆಯಲ್ಲಿ ಶೋಭಾ ಏಕೆ ನನ್ನ ಭ್ರಾಮಕ ನಿಲುವಿನೊಳಗೆ ಮೈದೆಳೆಯಬೇಕು ಎಂಬ ಪ್ರಶ್ನೆಗೆ ನನಗಂತೂ ಕಥೆಯುದ್ದಕ್ಕೂ ಎಲ್ಲೂ ಇಗೋ ಇದು ಎಂಬ ಉತ್ತರ ಸಿಗಲೇ ಇಲ್ಲ.
ನಿನಗಾದರೂ ಸಿಗುತ್ತಾ?
ಸಿಗಲೇಬೇಕು ಎಂದು ನಾನಂತೂ ಬಯಸುವವನಲ್ಲ.ಕಥೆ ಬರೆದ ಮಾತ್ರಕ್ಕೆ ಅದು ನನ್ನದೇ ಆಗಿ ಉಳಿಯುವುದಿಲ್ಲ ಹೇಗೆಯೋ ಹಾಗೇ ಕಥೆಯಲ್ಲಿ ಬಹುಮುಖ್ಯವಾಗಿ ಕಾಣಸಿಗುವ ಶೋಭಾ ಕೂಡಾ ನಿನ್ನವಳೇ ಆಗಲೂಬಹುದು.ಕಥೆ ಓದುತ್ತಾ ಓದುತ್ತಾ ನಿನ್ನ ಜೀವನದ ಲಹರಿಯಲ್ಲಿ ಹಾದು ಹೋಗುವ ಕಥೆಗಾರನೊಬ್ಬ ನಾನೇ ಆಗಬಹುದು,ಅಥವಾ ನೀನೂ ಕಾಣುವ ಇನ್ನೊಬ್ಬ ಶೋಭಾ ನಿನ್ನ ಭಾವಪ್ರಪಂಚದಲ್ಲಿ ಸ್ಥಾಯೀ ಆಗಬಹುದು.
ಇಷ್ಟಕ್ಕೂ ಕಥೆ ಏನು ಎಂದು ನೀನು ಕೇಳುತ್ತಿ ಮತ್ತು ನಾನು ಹೇಳುತ್ತೇನೆ.
ಈ ಕಥೆಗೆ ನಾನು ಕಂಡುಕೊಂಡ ಕಾಲ ದೇಶ ಮತ್ತು ಭಾಷೆಯನ್ನು ಪ್ರಯತ್ನಪೂರ್ವಕವಾಗಿ ನಾನು ಕಾಣಿಸುತ್ತಿದ್ದೇನೆ ಎಂದು ನೀನು ಭಾವಿಸಿದರೆ ಅದಕ್ಕೆ ನಾನೇ ಹೊಣೆಗಾರ.
ಓದುಗ ಬಂಧುವೇ ನಿನಗೆ ಸುಮ್ಮನೇ ಓದುತ್ತಾ ಹೋಗುವುದಷ್ಟೇ ಕೆಲಸ.ಈ ಕಥೆಗೆ ಎಂದೂ ಎಲ್ಲೂ ಕಾರ್ಯಕಾರಣ ಸಂಬಂಧವೇ ಇಲ್ಲ.ಅದನ್ನು ಕಟ್ಟಿಕೊಂಡರೆ ನಿನಗೆ ಸೋಲು ನಿಶ್ಚಿತ.
ಕಥೆ ಶುರುವಾಗುವ ಹೊತ್ತಿಗೆ ನೀನೂ ಒಂದು ಕಾಲ ದೇಶವನ್ನು ಸ್ಥಾಪಿಸಿಕೊಳ್ಳಲೇ ಬೇಕು.ಅದಕ್ಕಾಗಿ ನೀನು ನಿನ್ನ ಮನೋಭೂಮಿಕೆಯಲ್ಲಿ ಒಂದು ತಿಟ್ಟು ಕಟ್ಟಿಕೊಳ್ಳಬೇಕು.ಅಲ್ಲೇ ನಾನು ಬಂದೆ,ಶೋಭಾ ಕೂಡಾ.ಓದುಗಬಂಧುವೇ ನೀನು ಗಂಡಾಗಿದ್ದರೆ ನನ್ನನ್ನು ನಿನ್ನ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಡ.ನೀನು ಹೆಣ್ಣಾಗಿದ್ದರೆ ಶೋಭಾಳನ್ನು ನಿನ್ನ ಮನಸ್ಸಿನ ಮುಷ್ಠಿಯಲ್ಲಿ ರೂಪಿಸಿಕೊಳ್ಳಬೇಡ.
ಸಡಿಲ ಮಾಡಿಕೋ...ನಿನ್ನ ಮನಸ್ಸು,ನಿನ್ನ ಭಾವ,ನಿನ್ನ ಗಂಡು ಅಥವಾ ಹೆಣ್ತನವನ್ನು.
ಕಥೆ ಶುರು ಮಾಡಿದೆ ನೋಡು....ಬಾ ನನ್ನೊಳಗೆ,ನಾನು ಕರೆದೊಯ್ಯುವ ಕಾಲ ದೇಶ ಮತ್ತು ಪಾತ್ರದೊಳಗೆ...

ಮುಕ್ತಾಯದ ಅಧ್ಯಾಯದ ಹಿಂದಿನ ಪುಟ:

ಬಹಳ ದಿನಗಳ ಬಳಿಕ ಸಿಕ್ಕ ಸುಬ್ಬಪ್ಪಣ್ಣ ಅದೂ ಇದೂ ಮಾತನಾಡುತ್ತಾ ಶೋಭನ ಗಂಡ ಸತ್ತು ಹೋದ ವಿಷಯ ಹೇಳಿದ.
ಅರೆಕ್ಷಣ ದಂಗಾದೆ.
ಶೋಭನ ಗಂಡ ಸತ್ತನಾ? ಅಂತ ನಾನು ಕೇಳಿದ ಗೌಜಿಗೆ ಸ್ವಲ್ಪ ಕಾಲ ಮಾತು ನಿಲ್ಲಿಸಿದ ಸುಬ್ಬಪ್ಪಣ್ಣನ ಲಹರಿಯಲ್ಲಿ ಶೋಭನ ಗಂಡನ ಬಗೆಗೆ ಇವನಿಗೇಕೆ ಅಷ್ಟೊಂದು ಕುತೂಹಲ ಎಂಬ ಪ್ರಶ್ನೆಯಂತೂ ಖಂಡಿತಕ್ಕೂ ಎದ್ದಿರಲಿಲ್ಲ.
ಆದರೆ ಶೋಭನ ಬಗೆಗೆ ಇವನಿಗೆ ಅದೆಂಥದ್ದೋ ಕೊಂಚ ಸಲುಗೆ ಇದ್ದ ಹಾಗೇ ಕಾಣುತ್ತಿದೆ.ಹಾಗಾಗಿ ಅವಳ ಗಂಡ ಸತ್ತ ವಿಚಾರದಲ್ಲಿ ಇಂವ ಅವಾಕ್ಕಾಗಿದ್ದಾನೆ ಎಂಬುದು ಕಾಣದೆಯೂ ಉಳಿದಿರಲಿಲ್ಲ.
ನಾನು ಸ್ವಲ್ಪ ಹೊತ್ತು ಸುಮ್ಮನಾದೆ.ಆಮೇಲೆ ಶೋಭನ ಗಂಡನಿಗೆ ಸಾಯುವುದೆಂಥದ್ದು ಬಂತಪ್ಪಾ ಎಂದು ಕೇಳಿದೆ.
ಸಾಯುವುದಕ್ಕೆ ಕಾರಣ ಎಂದೇನಿರುತ್ತದೆ ಮಾರಾಯ? ಆಯುಷ್ಯ ಮುಗಿಯುವಾಗ ಎಲ್ಲರೂ ಸಾಯುವವರೇ.
ಅದರಲ್ಲಿ ನೀನು ನಾನು ಅಂತ ಏನು ಇರುತ್ತದೆ.ಅಂಥ ಮಹರ್ಷಿಗಳೇ ಉಳಿದಿದ್ದಾರಾ? ಎಂದು ಸುಬ್ಬಪ್ಪಣ್ಣ ಹೇಳುತ್ತಾ ಇರುವುದು ಯಾರಿಗೆ ಈ ಸಾಂತ್ವನದ ನುಡಿಗಟ್ಟು ಎಂದು ನನಗೆ ಕೆಲಕಾಲ ಹಾಸ್ಯ ಎನಿಸಿತು.
ಯಾರನ್ನೂ ಸಾವು ಬಿಡುವುದಿಲ್ಲ ಅಂತ ನನಗೂ ಗೊತ್ತಿದೆ ಸುಬ್ಬಪ್ಪಣ್ಣಾ,ಆದರೆ ಸಾವು ಎನ್ನುವುದು ಎಲ್ಲರನ್ನೂ ಕ್ಷಣ ಹೊತ್ತಾದರೂ ಹೆದರಿಸದೇ ಇರುತ್ತದಾ? ಯಾರಾದರೂ ಸತ್ತರು ಎಂದು ಹೇಳಿದರೆ ಖಡಕ್ ವೇದಾಂತ ಮಾತನಾಡಿದ ನೀನೂ ಕೂಡಾ ಆ ಸುದ್ದಿಯನ್ನು ಹಾಗೇ ಸ್ವೀಕರಿಸುತ್ತೀಯಾ? ಎಂದು ಕೇಳಿದೆ.
ಅದು ಹೌದು ಮಾರಾಯ,ನಾನಾದರೂ ಅಂವ ಸತ್ತ ಇಂವ ಸತ್ತ ಅಂತ ಹೇಳುವುದು ಕೇಳಿದರೂ ಏನಾಯಿತು ಅವನಿಗೆ? ಅಂತ ಕೇಳೀಯೇ ಕೇಳುತ್ತೇನೆ.ಆ ಮಟ್ಟಿಗೆ ನಿನ್ನ ಮಾತಿಗೆ ನಾನೂ ಕಬೂಲು ಎಂದ ಸುಬ್ಬಪ್ಪಣ್ಣ ಸಣ್ಣಗೆ ನಗುತ್ತಾ.
ಹೌದಲ್ಲವಾ? ಯಾರಾದರೂ ಸತ್ತರೆ ಹೌದಾ ಸಾಯುವುದಕ್ಕೆ ಏನಾಯಿತು ಎಂದು ಕೇಳಿಯೇ ನಾವು ಆ ಸಾವನ್ನು ಒಪ್ಪುತ್ತೇವೆ.ಅವನ ಸಾವಿಗೆ ಕಾರಣವಾದುದು ನನಗೂ ಆಗಬಹುದಾ ಅಂತ ಸ್ವಲ್ಪವಾದರೂ ಲೆಕ್ಕಹಾಕಿ ಕೆಲವು ಸೆಕುಂಡಾದರೂ ವೈರಾಗ್ಯಪೀಡಿತರಾಗಿ ಇರದೇ ಇರುವುದಕ್ಕೇ ಆಗುವುದಿಲ್ಲ ಮಾರಾಯಾ ಎಂದು ನಾನು ಹೇಳಿದಾಗ ಸುಬ್ಬಪ್ಪಣ್ಣ ಹೌದೌದು ಎಂದು ಹೇಳಿ ತಲೆಯಾಡಿಸಿದ.
ಆಮೇಲೆ ನಮ್ಮ ಮಾತುಗಳು ಶೋಭನ ಗಂಡ ಸತ್ತ ವಿಷಯದಿಂದ ಹೊರಳಿ ಬೇರೆಲ್ಲೋ ತಿರುಗಿ ತಿರುಗ ಹೋಯಿತು.
ಅದೇ ರಾತ್ರಿ ನಾನು ಊಟಕ್ಕೆ ಕುಳಿತಾಗ ಶೋಭನನ್ನು ಒಮ್ಮೆ ಕಂಡು ಬರಲೇಬೇಕು ಎಂದು ನಿರ್ಧರಿಸಿದ್ದು.
ಹಾಗೇ ನಿರ್ಧರಿಸಿದ ರಾತ್ರಿಯೇ ನಾನು ಬಸ್ ಹತ್ತಿದ್ದು ಮತ್ತು ಮರುದಿನ ಮಧ್ಯಾಹ್ನದ ಹೊತ್ತಿಗೆ ಬೆಳಗಾವಿಗೆ ಬಂದು ಇಳಿದದ್ದು.


ಕ್ಷೇಮ ತರುವಾಯ ತಿಳಿಸುವುದೇನೆಂದರೆ-೨

ನನ್ನ ಬಳಿ ಶೋಭಳ ನಂಬರ್ ಇಲ್ಲ.ಇರುವುದಕ್ಕೆ ಕಾರಣವೂ ಇಲ್ಲ.ಆದರೆ ಅವಳ ಮನೆ ಬೆಳಗಾವಿ ಶಹರದ ಮಿಲಿಟ್ರಿ ಮಹಾದೇವ ಟೆಂಪಲ್ ಪಕ್ಕ ಎಲ್ಲೋ ಇದೆ ಎಂಬುದಷ್ಟೇ ಗೊತ್ತಿತ್ತು.ಅಲ್ಲೆಲ್ಲಾ ಸುತ್ತಾಡಿ ಆ ಮನೆಯನ್ನು ಗೊತ್ತುಮಾಡುವುದೇ ಕಷ್ಟ ಎಂದು ಸುಬ್ಬಪ್ಪಣ್ಣ ಹೇಳಿದ್ದ.ಏಕೆಂದರೆ ಅದು ಬೇರೆ ಕಂಟೋನ್ಮೆಂಟ್ ಏರಿಯಾ.ಆದರೆ ಅಲ್ಲೇ ಅದೇ ಫಾಸಲೆಯಲ್ಲಿ ಇದೆ.ಅಲ್ಲೇ ಒಂದು ಫೇಡಾ ಮಾರುವ ಅಂಗಡಿಯ ಹಿಂಭಾಗದಲ್ಲಿ ಆ ಮನೆ ಇದೆ.ಪ್ರಸಾದ್‌ರಾಯರ ಮನೆ ಎಂದರೆ ಖಂಡಿತಕ್ಕೂ ಹೇಳುತ್ತಾರೆ ಎಂದು ಸುಬ್ಬಪ್ಪಣ್ಣ ಹೇಳಿದ ಚಹರೆಯನ್ನು ಹೊತ್ತುಕೊಂಡೇ ನಾನು ಮಿಲಿಟ್ರಿ ಮಹಾದೇವ ಟೆಂಪಲ್‌ನಲ್ಲಿ ಸಮವಸ್ತ್ರದವನು ಕೊಟ್ಟ ತೀರ್ಥವನ್ನು ಕುಡಿದು ಹೊರಬಂದಿದ್ದೆ.
ನನ್ನ ಲೆಕ್ಕಾಚಾರ ಎಲ್ಲಾ ಪಕ್ಕಾ ಆಗಿತ್ತು.
ನಾನು ಮಧ್ಯಾಹ್ನ ಹೊರಳಿಕೊಂಡ ವೇಳೆಗೆ ಶೋಭಳ ಮನೆಯೊಳಗೆ ಬಂದು ಸೇರಿದ್ದೆ.
ನಾನು ಪ್ರಸಾದರಾಯರ ಮನೆಗೆ ಬಂದಾಗ ಶೋಭ ಇರಲಿಲ್ಲ.ಪ್ರಸಾದರಾಯರಿಗೂ ನನ್ನ ಹೆಚ್ಚಿನ ಪರಿಚಯವೂ ಇದ್ದ ಹಾಗೇ ಕಾಣಲೂ ಇಲ್ಲ.ನಾನು ಇಂಥವನು ಇಲ್ಲಿಂದ ಬಂದೆ ಹೀಗೀಗೆ ಎಂದೆಲ್ಲಾ ಹೇಳಿದಾಗ ಅವರು ತುಂಬಾ ಆತ್ಮೀಯರಾಗುತ್ತಿರುವ ಹಾಗೇ ನನಗೆ ಕಾಣಿಸತೊಡಗಿತು. ಅವರು ಮಾತಿಗೆ ತೊಡಗುತ್ತಿರುವ ರೀತಿಯಲ್ಲಿ ಬ್ರಿಟಷ್ ಗೈರತ್ತು ನನಗೆ ಕಂಡೇ ಕಂಡಿತು.ಲಿಪ್ಟನ್ ಚಹ ಕಂಪನಿಯಲ್ಲಿ ತಾನು ಬ್ರಿಟಿಷರ ಜೊತೆ ಕೆಲಸ ಮಾಡುತ್ತಿದ್ದ ವೈಖರಿಯನ್ನು ಅವರು ಹೇಳುವುದರೊಂದಿಗೆ ತನ್ನ ಗೋತ್ರಪ್ರವರ ಶುರು ಮಾಡಿದರು.ಅವರು ಅದೆಷ್ಟು ಮೋಹಕವಾಗಿ ಬ್ರಿಟಷ್ ಕಾಲದ ಜೀವನ ಶೈಲಿಯನ್ನು ವಿವರಸಿತೊಡಗಿದರು ಎಂದರೆ ಸಮಯ ಜಾರಿ ಜಾರಿ ಸೀದಾ ಸೀದಾ ಬ್ರಿಟಿಷರ ಕಾಲಕ್ಕೆ ಹೊಡೆಯುತ್ತಿದೆ ಎಂದು ನನಗೆ ಅನಿಸತೊಡಗಿತು.ಪ್ರಸಾದರಾಯರು ಬ್ರಿಟಿಷ್ ಕಾಲದ ಜೀವನ ಕ್ರಮ,ಆಗಿನ ಬೆಳಗಾವಿ,ತಾನು ಸೈಕಲ್ ಹೊಡೆಯುತ್ತಾ ಲೈನ್ ಮೇಲೆ ಹೋಗುತ್ತಿದ್ದುದನ್ನು ಮಂಡಿಸುತ್ತಿದ್ದ ರೀತಿಗೆ ನನಗೆ ಒಬ್ಬ ಕರ್ನಲ್ ನನ್ನು ಭೇಟಿಯಾದ ರಿವಾಜಿನಂತೆ ಕಾಣಿಸತೊಡಗಿತು.
ಪ್ರಸಾದರಾಯರ ಮಾತುಗಳ ಓಘದ ಮಧ್ಯೆ ನನ್ನ ಕಣ್ಣುಗಳು ಶೋಭಳನ್ನು ಹುಡುಕುತ್ತಿದ್ದವು.ಶೋಭ ಎಲ್ಲಿ ಎಂದು ಕೇಳಬೇಕು ಎಂದು ಮನಸ್ಸು ಪ್ರಯತ್ನಿಸುತ್ತಿತ್ತಾದರೂ ಅದಕ್ಕೆ ಇನ್ನೂ ಹೊತ್ತು ಬಂದಿಲ್ಲ ಎಂದುಕೊಂಡು ಪ್ರಸಾದರಾಯರ ಮಾತುಗಳಿಗೇ ಕಿವಿಯಾಗಿದ್ದೆ.ಶೋಭಾ..? ಎಂದು ಮಾತಿನ ಮಧ್ಯೆ ಹೇಳಿಕೊಂಡಿದ್ದರೆ ಪ್ರಸಾದರಾಯರು ಏನಾದರೂ ಉತ್ತರ ನೀಡುತ್ತಿದ್ದರೋ ಏನೊ?ಆದರೆ ನಾನು ಕೇಳಲಿಲ್ಲ.
ಪ್ರಸಾದರಾಯರು ಶೋಭಳ ಕುರಿತು ಏನಾದರೂ ಮಾತನಾಡುತ್ತಾರೆ ಎಂದು ಅವರು ಮಾತಿನ ವೇಗದ ನಡುವೆ ಅಲ್ಲಲ್ಲಿ ನೀಡುತ್ತಿದ್ದ ಮೌನದ ಸಂದರ್ಭದಲ್ಲಿ ನಾನು ನಿರೀಕ್ಷಿಸಿದರೆ ಪ್ರಸಾದರಾಯರು ಹೇಳುತ್ತಿಲ್ಲ.  ಶೋಭಳ ಮನೆಯ ಹಿರಿಯನಂತೆ ಕಾಣಿಸಬೇಕಾಗಿದ್ದ ಪ್ರಸಾದರಾಯರು ನನಗೆ ಮಂಜಾಗುತ್ತಾ ಆಗುತ್ತಾ ಕೊನೆಕೊನೆಗೆಮಿಲಿಟ್ರಿಮ್ಯಾನ್‌ನಂತೆ ಕಾಣಿಸತೊಡಗಿದರು.
ಲಿಪ್ಟ್‌ನ್ ಚಹ ಕಂಪನಿಯಲ್ಲಿ ಬ್ರಿಟಿಷರ ಜೊತೆ ಕೆಲಸ ಮಾಡುತ್ತಿದ್ದ ಅನುಭವಾಮೃತವನ್ನು ಪ್ರಸಾದರಾಯರು ಇನ್ನು ಮೂರು ಜಾಮ ಕಳೆದರೂ ನಿಲ್ಲಿಸುವುದಿಲ್ಲ ಎಂಬುದು ನನಗೆ ಖಚಿತವಾಗತೊಡಗಿತು.ಈ ಮುದುಕನಿಗೆ ಸ್ಟೇಶನ್ ಬದಲಾಗಿದೆ.ಭದ್ರಾವತಿ ರೇಡಿಯೋ ಹಚ್ಚಿದರೆ ಧಾರವಾಡ ರೇಡಿಯೋ ಕೇಳುತ್ತಿದೆ ಎಂದು ನನ್ನದೇ ಭಾಷೆಯಲ್ಲಿ ಪ್ರಸಾದರಾಯರನ್ನು ಮನಸ್ಸಲ್ಲೇ ಗೇಲಿ ಮಾಡಿದೆ.
ಪ್ರಸಾದರಾಯರು ಯಾವ ಪರಿಚಯವೂ ಇಲ್ಲದ ಮತ್ತು ಯಾವ ಕಾರಣಕ್ಕೂ ಯಾವ ಸಂಬಂಧವೂ ಇಲ್ಲದ ತನ್ನ ಜೊತೆ ಇಷ್ಟೆಲ್ಲಾ ಮಾತನಾಡುತ್ತಾರೆ ಎಂದಾದರೆ ಅವರ ಬಂಧುಗಳ,ಗೆಳೆಯರ ಗತಿ ಏನು ಎಂದು ನಾನು ನನ್ನಷ್ಟಕ್ಕೇ ಯೋಚಿಸುತ್ತಿದ್ದಾಗಲೇ ಪ್ರಸಾದರಾಯರು ಟ್ರಾವೆಲ್ಸ್‌ನಲ್ಲಿ ಬದರಿಕಾಶ್ರಮಕ್ಕೆ ತೀರ್ಥಯಾತ್ರೆ ಹೋದ ತಮ್ಮ ಪ್ರವಾಸ ಕಥನ ಶುರು ಮಾಡುವುದಕ್ಕೂ ಶೋಭ ಮನೆಯೊಳಗೆ ಬಂದು ಸೇರುವುದಕ್ಕೂ ಸರಿಹೋಯಿತು.
ಅದೆಷ್ಟು ಕಾಲದಿಂದ ನಾನು ಕಾಣದ ಹುಡುಗಿ ಈ ಶೋಭ!
ಎಲ್ಲಿದ್ದೀಯಾ ಓದುಗ ಬಂಧುವೇ?
ಇಗೋ ನೋಡು ನಾನು ಮತ್ತು ಶೋಭಾ ಮುಖಾಮುಖಿಯಾಗುತ್ತಿದ್ದೇವೆ.ಈ ಸರಿಹೊತ್ತಿಗೆ ನೀನೂ ಕಣ್ ಸಾಕ್ಷಿಯಾಗಿದ್ದರೆ ಮಾತ್ರಾ ಸಾಲದು,ಮನಸ್ಸಾಕ್ಷಿಯೂ ಆಗಿ ನಿಲ್ಲಬೇಕು.ನೀನು ಪುರುಷ ಓದುಗನಾದರೆ ಶೋಭಳ ಜೊತೆ,ಸ್ತ್ರೀ ಓದುಗಳಾದರೆ ನನ್ನ ಜೊತೆ ಬಂದು ನಿಲ್ಲು.ಇನ್ನು ಮುಂದೆ ನಾನಿರಬೇಕಾಗಿಲ್ಲ.ಇದು ನೀನೇ ಆಗುವ ಹೊತ್ತು.ಏಕೆಂದರೆ ಈ ಕಥೆಯಲ್ಲಿ ನಾನು ನಿಮಿತ್ತ ಮಾತ್ರಾ.ನಿನ್ನ ಅಂತಃಕರಣವನ್ನು ನನ್ನ ಜೊತೆ ಪಗಡೆ ಆಟಕ್ಕೆ ಇಡು.ಶೋಭಳ ಜೊತೆಗೆ ಇಟ್ಟರೂ ಸೈ.ಕೊನೆಯಲ್ಲಿ ಗೆಲ್ಲುವುದು ಯಾರೆಂಬುದನ್ನು ನೋಡೇ ಬಿಡೋಣವಂತೆ.
ಅರೇ ಇದೇನಿದು ಏಕಾಏಕಿ ಕಥೆಗಾರ ಪಂಥಾಹ್ವಾನಕ್ಕೆ ಮುಂದಾಗಿದ್ದಾನೆ ಎಂದು ವಿಮುಖನಾಗುತ್ತಿದ್ದೀಯೇನು?ಓದುಗಬಂಧುವೇ ನೀನಿಲ್ಲದೇ ಹೋದರೆ ಈ ಕಥೆಯನ್ನು ನಾನು ಯಾರಿಗೆಂದು ಹೇಳೋಣ? ಪ್ರಸಾದರಾಯರಿಗೆ ಅವರದ್ದೇ ಕಥೆ ಇದೆ,ಶೋಭಳಿಗೆ ಈ ಕಥೆ ಅವಳ ಮೂಲಕವೇ ಹರಿಯುತ್ತಿದೆ,ಇನ್ನು ಅವಳ ಸತ್ತು ಹೋದ ಗಂಡನಿಗೆ ಕಥೆ ಹೇಳೋಣ ಎಂದರೆ ಇದೇನಿದು ಸತ್ತ ಮನೆಯಲ್ಲಿ ಪುರಾಣಪಾರಾಯಣವೇ?
ಹಾಗಾಗಿ ನೀನೇ ನನ್ನ ಶೋತೃ.ನನ್ನನ್ನೂ ಶೋಭಳನ್ನೂ ಯಾವ ಕಾರಣಕ್ಕೂ ಸಮೀಕರಿಸಬೇಡ ಕಣೋ.ತೀರಾ ಭಯಂಕರವಾಗಿ ನಾನೂ ಹೇಳಬಲ್ಲೆ.ಆದರೆ ಶಿಷ್ಟಾಚಾರ ಎಂದು ಸುಮ್ಮನಿದ್ದೇನೆ.ಕಥೆಯ ಮತ್ತೊಂದು ಭಾಗದಲ್ಲಿ ನೀನೂ ಅದನ್ನು ಕೇಳಿಸಿಕೊಳ್ಳುವ ತವಕ ಹೊಂದಿದ್ದರೆ ಹೇಳಿಯೇ ಬೀಡೋಣವಂತೆ ಏನಿಗ?
ನೋಡು ಈಗ ನಾನು ನಿನ್ನನ್ನು  ಪರಿವಿಡಿಗೇ ಕರೆದೊಯ್ಯುತ್ತೇನೆ..
ಈ ಮಧ್ಯ ವಯಸ್ಸಿನಲ್ಲಿ ಶೋಭ ಕುರಿತಾದ ಈ ಭಾವನೆ ಯಾವ ರೀತಿಯದ್ದು ಎಂದು ಬೆಳಗಾವಿಗೆ ಬಸ್ ಏರುತ್ತಿದ್ದಂತೆ ಶುರುಮಾಡಿದ್ದ ನನ್ನ ಮನಸ್ಸಿನ ಕಾಗುಣಿತ ಯಾವ ಪದವಾಕ್ಯವನ್ನೂ ಅಂತಿಮಗೊಳಿಸದೇ ನಿಂತಲ್ಲೇ ನಿಂತುಹೋಗಿತ್ತು.ಶೋಭ ಮತ್ತು ನಾನು ಎಂದು ನನ್ನದೇ ಅಧ್ಯಾಯವೊಂದನ್ನು ನಾನು ಕಟ್ಟಿ ಅದೆಷ್ಟು ವರ್ಷಗಳಾಗಿದ್ದವು.ಆ ಅಧ್ಯಾಯದಲ್ಲಿ ಇನ್ಯಾರೂ ಬರುವುದಿಲ್ಲ.ಒಂದೊಮ್ಮೆ ಬಂದಿದ್ದರೆ ಅದು ಕಾದಂಬರಿಯೋ ಅಥವಾ ಧಾರಾವಾಹಿಯೋ ಆಗಿ ಸಾಯುತ್ತಿತ್ತು.ಶೋಭ ನನ್ನ ಪಾಲಿಗೆ ಇದ್ದ ಒಂದು ಅಧ್ಯಾಯ ಮಾತ್ರವೇ? ಇರಲಿಕ್ಕಿಲ್ಲ.ಆ ಮೇಲೆ ಆಕೆಗೂ ಹಲವಾರು ಪುಟಗಳಿದ್ದುವಲ್ಲಾ?ಆ ಪುಟಗಳನ್ನು ಯಾರು ಬರೆದರು?ಯಾರು ತೆರೆದರು?ಯಾರು ಓದಿದರು?..
ನನ್ನ ಪಾಲಿಗೆ ಆ ಮೇಲಿನ ಅವಳ ಪುಟಗಳೆಲ್ಲಾ ಬರಿ ಖಾಲಿ.
ತೀವ್ರತೆಯೇ ಅಪಾಯಕಾರಿ ಕಣೋ ಎಂದಿದ್ದಳು ಶೋಭ.ಯಾವುದು ತೀವ್ರತೆ ಮತ್ತು ಅದು ಏತರದ್ದು ಎಂದು ಆಗ ಕೇಳಿದ್ದೆ.ಈಗ ಅದರ ಅಗತ್ಯವಿಲ್ಲ.ಪ್ರೇಮದ ತೀವ್ರತೆ ಎಂದೇನಾದರೂ ನಾನು ಆಗ ಭಾವಿಸಿದ್ದರೆ ಅದು ಈಗ ಈ ಹಂತದಲ್ಲಿ ಈ ಬೆಳಗಾವಿ ಶಹರದ ಬಡಾವಣೆಯಲ್ಲಿ ಈ ಎರಡಂತಸ್ತಿನ ಮನೆಯ ಪ್ರವೇಶದ್ವಾರದ ಮೊದಲ ಕೊಠಡಿಯಲ್ಲಿ ನನ್ನೆದುರು ನಿಂತ ಶೋಭ ಎಂಬ ಪ್ರತ್ಯಕ್ಷ ಉತ್ತರವಾಗಿ ಸಿಗುತ್ತಿರಲಿಲ್ಲ.
ಏನೋ ಮಾರಾಯಾ?
ಶೋಭ ಕುಶಲೋಪರಿಗೆ ನಾನು ಮಾತಿನ ಮೂಲಕ ಉತ್ತರಿಸಲಿಲ್ಲ.
ಒಂದು ನಗು ಬಿಡಿಸಿ ಇಟ್ಟೆ.
ಆಕೆ ಹಾಗೇ ಶುರುವಿಟ್ಟುಕೊಂಡಾಗ ಇದೇ ಬಗೆಯನ್ನು ಕೊಟ್ಟು ನೋಡಬೇಕು ಎಂದು ನಾನು ನಿರ್ಧರಿಸಿಯೇ ಬಂದಿದ್ದೆ.
ಶೋಭ ನಗಲಿಲ್ಲ.
ಶೋಭಾ ನಗಲೇ ಇಲ್ಲ ಎಂದರೆ ಅವಳ ಮುಖ ಅಂದಗೆಟ್ಟಂತೂ ಕಾಣಲಿಲ್ಲ.
ಕಣ್ ಅರಳಿಸಿ ಹೌದು ಕಣೋ ನನಗೆ ಅರ್ಥವಾಗುತ್ತಿದೆ ಎಂದು ನೋಟದಲ್ಲೇ ನೆಟ್ಟು ನಿಂತಳು.
ಅವಳು ಹೇಳುವುದಕ್ಕೆ ಏನೆಲ್ಲಾ ಸಿದ್ಧತೆ ಮಾಡಿದಂತೆ ಕಾಣಿಸಲಿಲ್ಲ.ಆದರೆ ಅವಳ ಮೌನದ ಹೊದ್ದಿನಲ್ಲಿ ಒಂದು ನಿಖರತೆ ಇತ್ತು.ನೀನೇಕೆ ಬಂದೆ ಎಂಬುದನ್ನು ಅರ್ಥಮಾಡಿಕೊಂಡೇ ಈ ಅಚಾನಕವೂ,ಆತ್ಮೀಯವೂ ಆದ ಘಳಿಗೆಯಲ್ಲಿ ನಾನು ನಿಂತಿದ್ದೇನೆ ಎಂದು ಶೋಭ ಹೇಳುತ್ತಿದ್ದಾಳೆ ಎಂದು ನನಗೆ ಗೊತ್ತಾಗಿತ್ತು.
ನಾನು ಮಂದಸ್ಮಿತ ಲಲಾಟ ಲಲಾಮನಾಗಿದ್ದೆ, ಬಹುಹೊತ್ತು.
ಪ್ರಸಾದರಾಯರು ಲಿಪ್ಟನ್ ಚಹ ಕಂಪನಿಯಲ್ಲಿ ಬ್ರಿಟಿಷರ ಶಿಸ್ತಿನ ಕುರಿತು ಮತ್ತೆ ಏನೋ ಹೇಳಬೇಕು ಎಂದು ನನ್ನ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದರೆ,ಶೋಭ ಈ ಹೊತ್ತಿನಲ್ಲಿ ನನ್ನಿಂದ ನಿರೀಕ್ಷಿಸುತ್ತಿರುವುದು ಇನ್ನೇನೋ ಇದೆ ಎಂದು ನಾನು ಅಂದುಕೊಂಡೆ.
ಆದರೆ ಶೋಭ ಅದೇ ಲಿಪ್ಟನ್ ಚಹ ಕಂಪನಿಯಲ್ಲಿ ಇದ್ದ ಕರ್ನಲ್ ಬರೂವಾ ಬಗ್ಗೆ ಹೇಳಿ,ಅದನ್ನು ಎಷ್ಟು ಕೇಳಿದರೂ ಸಾಕೇ ಸಾಕಾಗದು ಎಂದು ಮಾವನಿಗೆ ತಾಕೀತು ಮಾಡಿದಂತೆ ಮಾಡಿ ನನ್ನೆದುರಿನ ಖುರ್ಸಿಯಲ್ಲಿ ನನಗಾಗಿಯೇ ಎಂಬಂತೆ ಕೂತೇ ಬಿಟ್ಟಳು.
 ಇಷ್ಟು ಕಾಲ ಕಳೆದರೂ ತನ್ನ ತುಂಟತನ ಬಿಟ್ಟಿಲ್ಲ ಎಂಬುದು ನನಗೆ ಅರ್ಥವಾಗೇ ಬಿಟ್ಟತು.ಹದಿಹರೆಯದಲ್ಲಿ ಇದ್ದ ಮೋಜು ಈ ಕಾಲದಲ್ಲೂ ಇರುತ್ತದೆ ಎಂದು ನಂಬಿದವನು ನಾನಲ್ಲ.ಇರಲು ಸಾಧ್ಯವೂ ಇಲ್ಲ ಎಂಬುದು ನನ್ನ ಬದುಕಿನ ಹಾದಿಗಳಲ್ಲೇ ಕಂಡುಕೊಂಡದ್ದಾಗಿತ್ತು.ಶೋಭ ನಾನು ಎಂದೋ ಕಳೆದುಕೊಂಡ ಬಾಲ್ಯವನ್ನು   ಇನ್ನು ಇಟ್ಟುಕೊಂಡಿದ್ದಾಳೆ ಎಂಬುದನ್ನು ನಾನು ಆಕೆ ಖುರ್ಸಿಯಲ್ಲಿ ಕುಳಿತ ಭಂಗಿಗೇ ಗೊತ್ತುಮಾಡಿಕೊಂಡೆ. ಅದೆಷ್ಟು ಬಾರಿ ಬಾಲ್ಯಕ್ಕೆ ಮರಳಬೇಕು ಎಂದು ಪ್ರಯತ್ನಿಸಿ ವಿಫಲನಾಗಿದ್ದ ನನಗೆ ಶೋಭ  ಈ ಹೊತ್ತಿನಲ್ಲಿ ಆ ರೀತಿ ಬಾಲ್ಯವನ್ನು ಉಳಿಸಕೊಳ್ಳುವ ಪಾಠ ಹೇಳಿಕೊಡುತ್ತಿದ್ದಾಳೆಯೇನೋ ಎಂದನಿಸಿತು.
ಅದೇ ಶೋಭ...ಮುಖದಲ್ಲಿ ಮಾತ್ರಾ ಕೊಂಚ ಸುಕ್ಕುಗಳ ಆಗಮನದ ಸೂಚನೆಗಳನ್ನು ಬಿಟ್ಟರೆ ಉಳಿದಂತೆ ಎಲ್ಲಾ ಸೀದಾ ಸಾಫ್.
ಬರೂವಾ ಕುರಿತು ಪ್ರಸಾದರಾಯರು ಮಾತನಾಡುತ್ತಾರೆ ಎಂದುಕೊಂಡ ಹೊತ್ತಿಗೆ ಅವರಿಗೆ ಜೋರಾಗಿ ಕೆಮ್ಮು ಬರತೊಡಗಿ ಅವರು ಸಾರಿ ಸಾರಿ ಜೆಂಟ್ಲಮ್ಯಾನ್...ಸೀಯೂ ಲೇಟರ್ ಎಂದು ತನ್ನ ಬೆಡ್‌ರೂಂನತ್ತ ಧಾವಂತದಿಂದ ಎದ್ದು ಹೋದಮೇಲೆ ನನಗಂತೂ ಬದುಕಿದೆಯಾ ಬಚಾವು ಎಂದನಿಸಿ,ಶೋಭಳ ಕಣ್ಣುಗಳಿಗೆ ನೆಟ್ಟರೆ, ಆಕೆ ಪಕಪಕ ನಕ್ಕು ಒಳಗೆ ಈರುಳ್ಳಿ ಬೇಯಿಸಲು ತೊಡಗಿದ್ದಾರೆ.ಈರುಳ್ಳಿ ಬೆಂದ ಘಾಟಿಗೆ ಈ ಮಾವನಿಗೆ ಕೆಮ್ಮು ಬಂದೇ ಬರುತ್ತದೆ.ಅದಕ್ಕೇ ನಾನು ಹೇಳಿದ್ದು ಬರೂವಾ ಬಗ್ಗೆ ಮಾತನಾಡಿ ಎಂದು ಮತ್ತಷ್ಟು ನಕ್ಕು ತನ್ನ ತೊಡೆಗಳ ಮೇಲೆ ಕೈಬೆರಳುಗಳಿಂದ ಸರಿಗಮಸರಿಗಮಪ ಎಂಬಂತಿರಬಹುದಾದ ಲಯದಲ್ಲಿ ಆಡಿಸತೊಡಗಿದಳು.


ಕ್ಷೇಮ ತರುವಾಯ ತಿಳಿಸುವುದೇನೆಂದರೆ..ಭಾಗ-೩

ಇದು ಕಮಲ್ ಬಸ್ತಿ, ಅದು ರಾಮಕೃಷ್ಣಾಶ್ರಮ ಎಂದಳು ಶೋಭ.
ಮೊದಲು ಎಲ್ಲಿಗೆ ಹೋಗೋಣ ಎಂದಳು.
ನಾನು ಎರಡೂ ದಿಕ್ಕಿಗೆ ಮುಖವಿಟ್ಟೆ.ರಾಮಕೃಷ್ಣಾಶ್ರಮದಲ್ಲಿ  ನೂರಾರು ಜನರು ಧ್ಯಾನದಲ್ಲಿ ಕುಳಿತಿರುತ್ತಾರೆ.ಅಲ್ಲಿ ಹೋದರೆ ನಾನೂ ನೀನೂ ಧ್ಯಾನ ಮಾಡಬಹುದು ಎಂದಳು.
ನೀನು ಹೇಗಂತಿಯೋ ಹಾಗೇ,ನಾನಂತೂ ನೀನೆಂದ ಹಾಗೇ ಎಂದೆ.ಅದೇನೋ ಫಾಸಿಗೆ ಹಾಕುವ ಜೈಲಿದೆಯಲ್ಲಾ..
ಹೂಂ.. ಹಿಂಡಲಗಾ ಜೈಲು,ಹೋಗ್ತಿಯಾ??
ಅದನ್ನೊಂದು ಬಿಟ್ಟು ಬೇರೆಲ್ಲಿಗಾದರೂ ಕರೆದುಕೊಂಡೋಗು.ನಾನು ನೋಡೇ ನೋಡ್ತೇನೆ.ನನಗೆ ನೇಣು ಹಾಕುವುದು ಮಾತ್ರಾ ಆಗಲ್ಲ.ಅಸ್ವಸ್ಥನಾಗಿ ಬಿಡುತ್ತೇನೆ ಎಂದೆ.
ಶೋಭ ಸೈಲೆಂಟಾದಳು.
ಅವಳ ಕಾರು ಸೀದಾ ಸೀದಾ ರಾಮಕೃಷ್ಣಾಶ್ರಮದತ್ತ ತಿರುಗದೇ ಹೂಂ..ಬಾ ಇಲ್ಲಿದೆ ನೋಡು ಈ ಬಸದಿ...ಸ್ವಲ್ಪ ಕಾಲ ಇಲ್ಲಿ ಸುತ್ತಾಡೋಣ,ಆಮೇಲೆ ಆಶ್ರಮ ಎಂದಳು.
ಶೋಭ ಶೋಭಾ....ಅಂದೆ ದೊಡ್ಡದಾಗಿ,ಅದೇನೋ ಹಳೆ ಸಿನಿಮಾ ಹಾಡಿನ ಸಾಲನ್ನೆತ್ತಿದವನಂತೆ.
ಶ್..ನಿನ್ನಜ್ಜಿ....ಎಷ್ಟು ದೊಡ್ಡದಾಗಿ ಕಿರುಚುತ್ತೀಯಾ ..ಅಂತ ಶೋಭ ಅದೇ ಪುಟ್ಟ ಕೈಗಳಿಂದ ನನ್ನ ಕೆನ್ನೆಗೆ ಮೆದುವಾಗಿ ಭಾರಿಸಿದಳು.
ನಾನು ಉಸುರಿದೆ...ಶೋಭ..ದೊಡ್ಡದಾಗಿ ಬೊಬ್ಬೆ ಹೊಡೆಯಬೇಕು ಎನಿಸುತ್ತದೆ.ಅಂಥದ್ದೊಂದು ಜಾಗ ಇದ್ದರೆ ಕರೆದುಕೊಂಡು ಹೋಗು ಎಂದೆ.
ಗೋಲಗುಂಬಜ್ ಎಂದು ನಕ್ಕಳು.
ಕಾರು ಕಮಲ್ ಬಸ್ತಿ ಹೊರಭಾಗದಲ್ಲಿ ನಿಲ್ಲಿಸಿದವಳು ಕಲ್ಲಿನ ಹೊದ್ದಿನಲ್ಲಿ ಪೂರ್ತಿ ಮುಳುಗಿಸಿಟ್ಟಂತೆ ಕಾಣುವ ಬಸದಿಯತ್ತ ನಡೆದಳು.ಅವಳ ಹೆಜ್ಜೆಯ ದೃಢತೆ ಎಷ್ಟಿಂತೆಂದರೆ ನಾನೂ ಮಾತೆತ್ತದೇ,ಅವಳ ಮೌಖಿಕ ಆದೇಶಕ್ಕೆ ಕಾಯದೇ ಹಿಂಬಾಲಿಸುವುದು ಅನಿವಾರ್ಯ ಎಂಬ ಹಾಗಿತ್ತು.ಪುಟ್ಟ ಬಸದಿಯ ಒಳಗೆ ಅರ್ಚಕನೊಬ್ಬ ಜಿನ ಮೂರ್ತಿಗೆ ಅಭಿಷೇಕ ಮಾಡಿಸುತ್ತಿದ್ದ.ಅಭಿಷೇಕ ಮಾಡುತ್ತಿದ್ದವನಿಗೆ ಅದೇನೋ ಮಂತ್ರ ಹೇಳಿಸುತ್ತಿದ್ದ.ಅಭಿಷೇಕ ಮಾಡುವ ಕರ್ತೃ ಚಿಚಿನಾ ವಿವಿದಾ,ಚಿಚಿನಾ ವಿವಿದ ಅಂತ ಪ್ರತಿ ಮಂತ್ರದ ಸಾಲಿಗೆ ಕೊನೆಯದಾಗಿ ಉಲ್ಲೇಖಿಸುತ್ತಿದ್ದ.
ಏನಿದು ಎಂದು ಯಾರಲ್ಲಾದರೂ ಕೇಳೋಣ ಎಂದುಕೊಂಡೆ.ಅಲ್ಲಿದ್ದ ಭಕ್ತರ ಏಕಾಗ್ರತೆಗೆ ಭಂಗ ಬರಬಹುದು ಎಂದು ಸುಮ್ಮನಾದೆ.ಬಸದಿಯೊಳಗೆ ದೀಪದ ಎಣ್ಣೆಯ ಘಾಟು ಮನಸ್ಸನ್ನು ಅಪಹರಿಸುತ್ತಿತ್ತು.ಬರೀ ಎಣ್ಣೆಯ ಘಾಟು ಅಲ್ಲ.ಇನ್ನೆಲ್ಲಾ ಬಗೆಬಗೆಯ ದ್ರವ್ಯಗಳ ಪರಿಮಳವೂ ಸೇರಿಕೊಂಡಿದೆ ಎನಿಸಿತು.
 ಸನ್ಯಾಸಿಬೆಟ್ಟದ ನೆತ್ತಿಯಲ್ಲಿ ಪ್ರಾಚೀನ ಬಸದಿಯ ಗೋಡೆಗಳ ಮೇಲೆ ನಾನೊಂದು ಸಾಲು ಬರೆಯುತ್ತಿದ್ದಂತೆ ಭಾಸವಾಯಿvದ್ದಿನ್ನೊಮ್ಮೆ ಅದೇ ಬೆಟ್ಟ ಏರಬೇಕು,ಅಲ್ಲಿ ಆ ಹಳೆಯ ಬಸದಿಯ ಗೋಡೆಯ ಮೇಲೆ ಮತ್ತದೇ ಸಾಲುಗಳನ್ನು ಬರೆಯಬೇಕು..ನಾನು ಬರೆಯುವಾಗ ಶೋಭ ಗೋಡೆಯ ಹಿಂಭಾಗದಲ್ಲಿ ನನಗಾಗಿ ಕಾಯುತ್ತಿರಬೇಕು...ಮುಕ್ತಾಯವಾಗದ ಸಾಲುಗಳನ್ನು ಮುಗಿಸಬೇಕು...ಉಫ್..
ಹತ್ತು ಮಿನಿಟಿಗೂ ಮುನ್ನವೇ ಕಮಲ್ ಬಸ್ತಿಯಿಂದ ಹೊರಗೆ ಬಂದು ಕಾರನ್ನೇರಿದೊಡನೆ,ಶೋಭ ಕೇಳಿದಳು...ಆಹಾ...ಫಟಿಂಗನೇ...ಸನ್ಯಾಸಿಬೆಟ್ಟದ ಬಸದಿಯ ನೆನಪು ಮಾಡಿಕೊಂಡೆಯಾ ಹೇಗೆ?
ಶೋಭಾ....
ಹೌದೇ ಹೌದು ಕಣೆ..ಎಕ್ಸಾಕಟ್ಲೀ....ನೀನೂ ಕ್ಯಾಚ್ ಮಾಡಿಕೊಂಡೆಯಾ?
ನಾವಿಬ್ಬರೂ ಒಂದೇ ವೇವ್‌ಲೆಂಥ್‌ನಲ್ಲಿ ಸಾಗುತ್ತಿದ್ದೇವಾ...?
ಅಂದಿನಿಂದ ಇಂದಿನ ತನಕವೂ...???
ನನ್ನ ಬಣ್ಣದ ಚಾಕ್‌ಪೀಸು ಮುಗಿದಿತ್ತು.ನನಗೆ ಅದನ್ನು ಸಂಕಪ್ಪಗದ್ದಪ್ಪ ಮೇಸ್ತರರು ಜೀಜಾಬಾಯಿ ಬಗ್ಗೆ ಮಾಡಿದ ಭಾಷಣಕ್ಕಾಗಿ ಕೊಟ್ಟಿದ್ದರು.ಶೋಭಳ ಬಳಿ ಇರುವುದು ಪಿಂಕ್ ಕಲರ್ ಚಾಕ್‌ಪೀಸ್.ಅದನ್ನು ಅವಳಿಗೆ ದೇಶಭಕ್ತಿ ಗೀತೆ ಹಾಡಿದ್ದಕ್ಕೆ ಬಹುಮಾನವಾಗಿ ಅದೇ ಸಂಕಪ್ಪಗದ್ದಪ್ಪ ಮೇಸ್ತರರು ಕೊಟ್ಟಿದ್ದರು.
ಒಂದೇ ಒಂದು ಸಾರಿ ನಿನ್ನ ಚಾಕ್‌ಪೀಸ್ ಕೊಡೆ.ಬರೆದ ಸಾಲು ಪೂರ್ತಿ ಮುಗಿಸುತ್ತೇನೆ ಎಂದು ಬಸದಿಯ ಹೊರಭಾಗಕ್ಕೆ ಬಂದು ಅವಳಿಗೆ ಮನವಿ ಇಟ್ಟಿದ್ದೆ.
ಏನು ಬರೆದಿದ್ದೀ ಅಂತ ಮೊದಲು ಹೇಳು,ಆಮೇಲೆ ಕೊಡುತ್ತೇನೆ ಎಂದಳು.
ಅದು ಆಮೇಲೆ ಹೇಳುತ್ತೇನೆ,ಈಗ ಚಾಕ್ ಕೊಟ್ಟರೆ ಅದನ್ನು ಕಂಪ್ಲೀಟ್ ಮಾಡಿ ಆಮೇಲೆ ನೀನೇ ಬಂದು ಓದಲು ಹೇಳುತ್ತೇನೆ ಎಂದು ಅಂಗಲಾಚಿದೆ.
ಶೋಭ ಊಹೂಂ ಅಂತ ಹಠ ತೊಟ್ಟಳು.
ಪ್ಲೀಸ್ ಕಣೇ..
ಏನು ಬರೆದಿದ್ದೀ ಅಂತ ಹೇಳಿದರೆ ಮಾತ್ರಾ...
ಏನೂ ಇಲ್ಲ...
ಏನೂನೂ ಇಲ್ಲದಿದ್ದರೆ ಚಾಕ್‌ಪೀಸ್ ಯಾಕೇ ಅಂತ ಬಲಗೈ ಮುಷ್ಠಿ ಮಾಡಿ ಗಾಳಿಯಲ್ಲಿ ತೇಲಾಡಿಸಿದಳು.
ಶೋಭ....ಕೊಡೇ ಅಂದೆ
ಕೊಡುವುದಿಲ್ಲ, ಎಸೆಯುತ್ತೇನೆ ಎಂದವಳೇ ಬೆಟ್ಟದ ಮೇಲಿಂದ ಕೆಳಗೆ ಪ್ರಪಾತಕ್ಕೆ ಎಂಬ ಹಾಗೇ ರೊಯ್ಯನೇ ಎಸೆದೇ ಬಿಟ್ಟಳು.
ನಾನು ಬಸದಿಯ ಗೋಡೆ ಮೇಲೆ ಬರೆದ ಸಾಲು ಕೊನೆಗೂ ಪೂರ್ತಿ ಮಾಡಲಾಗಲಿಲ್ಲ.ಏಕೆಂದರೆ ನನ್ನ ಬಳಿ ಇದ್ದ ಚಾಕ್‌ಪೀಸ್ ಮುಗಿದಿತ್ತು.ಶೋಭ ಇದ್ದ ಪೀಸ್‌ನ್ನು ಎಸೆದಿದ್ದಳು.ಅಲ್ಲಿ ಇನ್ಯಾರೂ ಇರಲಿಲ್ಲ.ನಾವಿಬ್ಬರೇ.
ನೀನೊಮ್ಮೆ ಸನ್ಯಾಸಿಬೆಟ್ಟದ ಬಸದಿಯ ಗೋಡೆ ಮೇಲೆ ಅದೇನೋ ಬರೆದಿದ್ದು,ನನ್ನ ಬಳಿ ಚಾಕ್‌ಪೀಸ್ ಕೇಳಿದ್ದು,ನಾನು ಕೊಡಲ್ಲ ಅಂತ ಎಸೆದಿದ್ದು ನೆನಪಿದೆಯಾ?
ಹೂಂ..ಈ ಬಾರಿ ನಾನು ಅವಾಕ್ಕಾಗಲಿಲ್ಲ.
ಈ ಮುಂಜಾನೆಯಿಂದ ಇಬ್ಬರೂ ಒಂದೇ ಧಾಟಿಯಲ್ಲಿ ಏಕಕಾಲಕ್ಕೆ ಯೋಚಿಸುತ್ತಿದ್ದಾರೆ ಎಂದು ನನಗೆ ಭಾಸವಾಗಿತ್ತು.
ಏಯ್ ಆಗ ನೀನು ಅಲ್ಲಿ ಏನೋ ಬರೆದದ್ದು? ಈಗಲಾದರೂ ಹೇಳೋ ಎಂದಳು.
ಆಶ್ಚರ್ಯ ಆಗಲಿಲ್ಲ.
ಮುಂದಿನ ಲೊಕೇಶನ್? ಅಂತ ಕೇಳಿದೆ.
ಆಶ್ರಮ ಅಂದಳು.
ಅಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳೋ ಪ್ರೋಗ್ರಾಂ ಇದೆಯಾ?
ಇದೆ.
ಧ್ಯಾನ ಮುಗಿದ ಮೇಲೆ ನಿನಗೇ ಹೊಳೆಯುತ್ತದೆ, ಆ ಕಾಲದಲ್ಲಿ ಆ ಬೆಟ್ಟದ ಆ ಪಾಳು ಬಸದಿಯ ಗೋಡೆಯಲ್ಲಿ ನಾನು ಆ ಬಣ್ಣದ ಚಾಕ್‌ಪೀಸ್‌ನಲ್ಲಿ ಏನು ಬರೆದಿದ್ದೆ ಎಂದು ..ಎಂದೆ
ಆಹಾ...ಇದಕ್ಕೇನೂ ಕಮ್ಮಿಯಿಲ್ಲ ಎಂದಳು ಶೋಭ.
ಇಬ್ಬರೂ ಆಶ್ರಮದ ಮೆಟ್ಟಿಲೇರುತ್ತಾ ಏರುತ್ತಾ ಒಳಗೆ ಬಂದೆವು.ಅಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಮೌನ ಆವರಿಸಿತ್ತು.


ಓದುಗಬಂಧುವೇ..ಕಥೆ ಇನ್ನೂ ಶುರುವಾಗಿಲ್ಲ.ಏಕೆಂದರೆ ಕಥೆಯ ಪಾತ್ರ ಅಂತ ಈ ಕಥೆಗಾರ ಕೆತ್ತಲು ತೊಡಗಿದ್ದಾನೆ,ಅಸಲಿಗೆ ಇವುಗಳೆಲ್ಲಾ ಪಾತ್ರಗಳೇ ಅಲ್ಲ.ಕಥೆಯ ನವಿರು,ಕಥೆಯ ಘಮ ಎರಡೂ ಈಗಾಗಲೇ ನಿನಗೆ ಅನುಭವಕ್ಕೆ ಬಂದಿದ್ದರೆ ಐ ಯಾಮ್ ಸ್ಸಾರಿ...ನೀನು ತುಂಬಾ ತುಂಬಾ ಪೂವರ್ ರೀಡರ್ ಅಷ್ಟೇ.
ಆಶ್ರಮದ ಮೆಟ್ಟಿಲನ್ನು ಹತ್ತಿಸಿ ಈ ಕಥೆಗಾರ ಮತ್ತು ಆತನ ಜೊತೆ ಇರುವ ಆ ಹುಡುಗಿ...ಮುಂದೆ ತೆರೆದುಕೊಳ್ಳುವ ರೀತಿಗಳಿವೆಯಲ್ಲಾ ಅವುಗಳೆಲ್ಲಾ ನಿನ್ನವೇ ಆಗಿರಬೇಕು ಎಂಬುದು ಈ ಕಥೆಗಾರನ ಛಲ.ಅದಕ್ಕಾಗಿ ಇಬ್ಬರನ್ನೂ ಹುತ್ತದೊಳಗೆ ಇಳಿಸಿಬಿಡಬೇಕು.ಸುಮ್ಮಸುಮ್ಮನೇ ಈ ನಗರದ ಝಂಝಾಟದೊಳಗೆ ಅವರಿಬ್ಬರೂ ಹುತ್ತ ಕಟ್ಟಿಕೊಳ್ಳಲು ಎಲ್ಲಿದೆ ಜಾಗ ಅಂತ ಆಶ್ರಮದೊಳಗೆ ಕರೆದೊಯ್ಯುತ್ತಿದ್ದೇನೆ...ಹೇಯ್ ಓದುಗ ದೊರೆಯೇ...ಮತ್ತೆ ಹೇಳುತ್ತಿದ್ದೇನೆ,ನೀನು ಹೆಣ್ಣಾದರೆ ಶೋಭಳಾಗು,ಗಂಡಾದರೆ ಅವಳ ಜೊತೆಗಿರುವ ಆ ಗಂಡೇ ಆಗು...ಸನ್ಯಾಸಿಬೆಟ್ಟದ ಬಸದಿಯ ಗೋಡೆಯಲ್ಲಿ ಬರೆದ ಸಾಲು ಏನೆಂದು ಈಗ ನಿನಗೆ ಗೊತ್ತೇ ಆಗಿದೆ.....ಬಾಕಿ ಮೊಖ್ತಾ..


ಕ್ಷೇಮ ತರುವಾಯ ತಿಳಿಸುವುದೇನೆಂದರೆ_ಭಾಗ ೪

ನನಗೆ ಧ್ಯಾನದಲ್ಲಿ ಆಸಕ್ತಿ ಇರಲಿಲ್ಲ.ಶೋಭಳಿಗೆ ಇತ್ತು.ಶೋಭ ಆಶ್ರಮದ ಮೆಟ್ಟಿಲೇರುತ್ತಿದ್ದಂತೆ ತೀರಾ ಅಂತರ್ಮುಖಿಯಾಗುತ್ತಿದ್ದಾಳೇನೋ ಅನಿಸಿತು.ಟೇಬಲ್ಲ ಮೇಲಿದ್ದ ತುಂಡು ಚಾಪೆಗಳನ್ನೆರರಡು ಎತ್ತಿಕೊಂಡು ಹಾಸಿದಳು.ಕೈಸನ್ನೆಯಲ್ಲಿ ಬಾ ಇಲ್ಲಿ ನನ್ನ ಜೊತೆ ಕೂರು ಎಂದು ಕರೆದಳು.
ನಾನು ಶೋಭಳ ಬಳಿ ಸ್ವಸ್ತಿಕಾಸನದಲ್ಲಿ ಕುಳಿತೆ,ಶೋಭ ವಜ್ರಾಸನದಲ್ಲಿ ಕುಳಿತು ಕಣ್ ಮುಚ್ಚಿದಳು.ಮುಂದೇನು ಮಾಡಬೇಕು ಎಂದು ಗೊತ್ತಾಗದೇ ನಾನು ಪಿಳಿಪಿಳಿ ಕಣ್ ಬಿಡುತ್ತಾ ಸುಮ್ಮನೇ ಇದ್ದುಬಿಟ್ಟೆ.ನನ್ನ ಮುಂದೆ ಆರೇಳು ಮಂದಿ ಕುಳಿತಿದ್ದರು.ಹಿಂಭಾಗದಲಿ ಅಷ್ಟೇ ಇದ್ದ ಹಾಗೇ ಕಾಣಿಸಿತು.ಒಟ್ಟಾರೆ ಆ ವಿಶಾಲ ಸಭಾಂಗಣದಲ್ಲಿ ಮೂವತ್ತು ಮಂದಿ ಇರಬಹುದು ಎಂದುಕೊಂಡೆ.ಕಣ್ಣಿಲ್ಲೇ ಲೆಕ್ಕ ಹಾಕಿದೆ.ಎಲ್ಲರೂ ಧ್ಯಾನಸ್ಥರಾಗಿದ್ದರು,ನನ್ನನ್ನು ಬಿಟ್ಟು.
ಶೋಭ?
ಅವಳೂ ಆಗಲೇ ತುರೀಯಾವಸ್ಥೆಗೆ ತೆರಳಿದವಳಂತೆ ಕುಳಿತಿದ್ದಳು.ದೀರ್ಘ ಶ್ವಾಸ ಹರಿಯಬಿಡುತ್ತಿದ್ದಳು.ಅವಳ ಅಂತರ್ಮುಖಿ ಧ್ಯಾನದ ಲಹರಿ ನೋಡುತ್ತಾ ನಾನು ಧ್ಯಾನದ ಕುರಿತು ಕನಿಷ್ಠತಮ ಜ್ಞಾನವೂ ಇಲ್ಲದೇ ಚಡಪಡಿಸಿದೆ.
ನಾನೇಕೆ ಶೋಭಳ ಹಿಂದೆ ಬಂದು ಅವಳ ಆಜ್ಞಾಧಾರಕನಂತೆ ಇಲ್ಲಿ ಕೂರಬೇಕಿತ್ತು ಎಂದುಕೊಂಡೆ.ನಾನು ಹೊರಗೆ ಪಾರ್ಕ್‌ನಲ್ಲಿ ಕುಳಿತುಕೊಳ್ಳಬಹುದಿತ್ತು.ಆಶ್ರಮಕ್ಕೆ ಸುತ್ತು ಹಾಕುತ್ತಾ ವಿಹರಿಸಬಹುದಿತ್ತು.ಇವಳು ಕರೆದಳು ಎಂದು ಕುಳಿತುಕೊಳ್ಳಬೇಕಾದ ದದುಧ ನನ್ನದೇನಿತ್ತು ಎಂದುಕೊಂಡೆ.
ಶೋಭ ಕಣ್ ತೆರೆಯುವ ಹೊತ್ತಿಗೆ ಕಾಯಬೇಕಾಗುತ್ತದೆ ಎಂದುಕೊಂಡೆ.ಎಷ್ಟು ಹೊತ್ತು ಹೀಗಿರುತ್ತಾಳೋ?
ಎದ್ದು ಹೊರಗೆ ಹೋದರೆ ಎಂದುಕೊಂಡೆ.
ಇಷ್ಟೆಲ್ಲಾ ಆಗುವ ವೇಳೆಗೆ ಅರ್ಧಗಂಟೆ ಕಳೆದಿರಬೇಕು.ಶೋಭ ಕಣ್ ತೆರೆದಳು.ಮೊದಲ ದೃಷ್ಟಿ ನನ್ನತ್ತ ಬೀರಿದಳು.ಮುಗುಳ್ನಗೆ ನಕ್ಕಳು.ಧ್ಯಾನ ಮಾಡಿದೆಯಾ ಎಂದು ಪಿಸುಗುಟ್ಟಿದಳು.
ಇಲ್ಲ ಎಂದೆ ತಲೆಯಾಡಿಸುತ್ತಾ.
ನಕ್ಕಳು.ಆ ನಗುವಿನಲ್ಲಿ ಹುಸಿ ಮುನಿಸಿತ್ತು.
ಮೊದಲು ಎದ್ದವಳೇ ಶೋಭ.ಅವಳ ಬಳಿಕ ನಾನು.ತುಂಡುಚಾಪೆಯನ್ನು ಅದೇ ಟೇಬಲ್ಲು ಮೇಲಿಟ್ಟಳು.ಬಾ ನನ್ನ ಜೊತೆ ಎಂದು ಕರೆದಳು ಕೈಸನ್ನೆಯಲ್ಲಿ.
ಅವಳನ್ನು ಹಿಂಬಾಲಿಸಿದೆ.
ಹೊರಗೆ ಕಾಲಿಡುತ್ತಲೇ ," ಆಶ್ರಮದ ಸುತ್ತು ಒಂದು ರೌಂಡು ಹೊಡೆಯೋಣ ಬಾ " ಎಂದಳು.
ಅವಳನ್ನು ಹಿಂಬಾಲಿಸಿದೆ.ದಕ್ಷಿಣ ಭಾಗದಲ್ಲಿ ಬರುತ್ತಿದ್ದಂತೆ ಇಡೀ ಆಶ್ರಮದ ಸುತ್ತ ಹೊನಲು ಹೊನಲಾಗಿ ಬೀರುತ್ತಿದ್ದ ಎಲ್ಲ ಬೆಳಕೂ ಆರಿಹೋಯಿತು.ಮಂದಬೆಳಕಿನಲ್ಲಿ ಶೋಭ ನನ್ನ ಮುಂದೆ ಇದ್ದವಳು ತಿರುಗಿ ನಿಂತಳು.
ಎಷ್ಟು ಸುಂದರವಾಗಿದೆ ಅಲ್ಲ ಈ ನಕ್ಷತ್ರದ ಬೆಳಕರಾಶಿ ಎಂದಳು.
ಹೌದೌದು ತುಂಬಾ ಎಂದೆ.
ಅಷ್ಟೇ ನನಗೆ ಗೊತ್ತಿರುವುದು,ಅಷ್ಟರಲ್ಲಾಗಲೇ ಶೋಭ ನನ್ನ ಕೈಯನ್ನು ತನ್ನ ಕೈಗೆ ಟಂಕಿಸಿಕೊಂಡಾಗಿತ್ತು.
ಬೆರಳುಗಳನ್ನು ಸಾಕ್ಷಾತ್ ಬಂಧಿಸಿಕೊಂಡವಳೇ ಬಾ ಬಾ..ಕಾರಿನ ತನಕ ಹೀಗೆ ಕೈಕೈಹಿಡಿದುಕೊಂಡು ನಡೆಯುತ್ತಾ ಹೋಗೋಣ ಎಂದಳು.
ಶೋಭಳ ಧ್ವನಿಯಲ್ಲಿ ಆರ್ದ್ರತೆ ಇತ್ತೇ?ಮಾದಕತೆ ಇತ್ತೇ ಮಧುರವಿತ್ತೇ?ಮುಗ್ಧತೆ ಇತ್ತೇ ಒಂದೂ ಗೊತ್ತಾಗಲಿಲ್ಲ.
ನನ್ನ ಬೆರಳುಗಳನ್ನು ಅವಳು ಬಿಗಿ ಮಾಡುತ್ತಿರುವ ಅನುಭವ ಬಿರುಸಾಗಿ ನನಗೆ ವೇದ್ಯವಾಗುತ್ತಿತ್ತು.
ಆದರೆ ಆ ಮಂದಬೆಳಕಲ್ಲಿ ಶೋಭಳ ಕಣ್ಣುಗಳನ್ನು ನಾನು ಊಹಿಸುವುದಷ್ಟೇ ಸಾಧ್ಯವಿತ್ತು.
ಕಾರಿನ ಬಾಗಿಲು ತೆರೆಯುತ್ತಿದ್ದಂತೆ ಶೋಭ ಮತ್ತು ನನ್ನ ಕೈಗಳ ಬಂಧ ಬಿಡುಗಡೆಯಾಯಿತು.ಮೊದಲು ಕೈ ಬಿಡಿಸಿಕೊಂಡವನು ನಾನೇ ಎಂದು ನನಗನಿಸಿತು.
ಶೋಭ ಕೀಯನ್ನು ನನ್ನತ್ತ ಚಾಚಿದಳು.
ನಾನು ಡ್ರೈವಿಂಗ್ ಸೀಟ್ ಮೇಲೆ ಕುಳಿತುಕೊಂಡೆ.ಪಕ್ಕದಲ್ಲಿ ಶೋಭ.
ನನಗೆ ಹಾದಿಯ ಗುರುತಿಲ್ಲ ಎಂದೆ.
ರೈಟ್‌ಗೆ ತಗೋ ಎಂದಳು.
ಮುಕ್ಕಾಲು ಮೈಲಿ ಕಾರು ಸಾಗುವ ತನಕ ನಮ್ಮಿಬ್ಬರಲ್ಲಿ ಮಾತುಗಳಿರಲಿಲ್ಲ.ನನಗೆ ಮೌನ ಮುರಿದುಕೊಳ್ಳಬೇಕು ಎಂದನಿಸಿತು.ಅಷ್ಟರಲ್ಲೇ ಶೋಭ ..ಲಾಂಗ್ ಡ್ರೈವ್ ಹೊರಟುಬಿಡೋಣ ಎಂದಳು.
ನಾನು ಅವಳತ್ತ ಕತ್ತು ಚಾಚಿದೆ.
ಈ ರಾತ್ರಿಯಲ್ಲಾ? ಎಂದೆ
ಹೂಂ...ಶೋಭಳ ಧ್ವನಿಯಲ್ಲಿ ಇದ್ದ ನಿರ್ಧಾರ ತೀರಾ ಬಿಗುವಾಗಿದೆ,ಅಷ್ಟೇ ತೀವ್ರವಾಗಿದೆ ಎಂದು ನನಗೆ ಭಾಸವಾಗುತ್ತಿದ್ದಂತೆ,ಆಜೂಬಾಜು ಒಂದರವತ್ತು ಮೈಲಿ,ಕೊಲ್ಹಾಪುರ..ಹೋಗಿ ಬರೋಣ ಎಂದಳು.
ನಾನು ಈ ಮಧ್ಯವಯಸ್ಸಿನಲ್ಲಿ ಈ ಸರಿ ರಾತ್ರಿಯಲ್ಲಿ, ಈ ಅಪರಿಚಿತ ಊರಿನಲ್ಲಿ,ಅದೆಷ್ಟೋ ಕಾಲದ ಬಳಿಕ ಭೇಟಿಯಾಗುತ್ತಿರುವ,ಅಕ್ಷರಶಃ ಹೊಸಬಳೇ ಎನಿಸುವ ಮಹಿಳೆಯ ಜೊತೆ ಅನುಚಿತನಾಗಿದ್ದೇನೋ ಎಂದುಕೊಂಡು ಕೊಂಚ ಅಧೀರನಾದೆ.
ಅಷ್ಟೇನೂ ಕನ್‌ಫ್ಯೂಸ್ ಆಗೋ ಅಗತ್ಯವಿಲ್ಲ...ನಾವೇನು ಅಲ್ಲಿ ಸ್ಟೇ ಮಾಡುವ ಪ್ರೋಗ್ರಾಂ ಇಲ್ಲ.ಸುಂದರವಾಗಿದೆ ರಸ್ತೆ.ಕತ್ತಲನ್ನು ಸೀಳುತ್ತಾ ಮಿಡ್‌ನೈಟ್ ಲಾಂಗ್ ಡ್ರೈವ್ ಹೋಗುತ್ತಿರೋಣ.ಮತ್ತೆ ಬೆಳಗಾಗುವುದರೊಳಗೆ ಮನೆ ಸೇರಿಕೊಳ್ಳುತ್ತೇವೆ..ಶೋಭ ಶಹರದ ಹೊರಭಾಗಕ್ಕೆ ಹೊರಳಿಕೊಳ್ಳಲು ಹಾದಿ ಸೂಚಿಸುತ್ತಾ ಹೇಳಿದಳು.
ನನಗೇನೂ ಸಮಸ್ಯೆ ಇಲ್ಲ.ಹೋಗೋಣ ಏನಂತೆ ಎಂದೆ
ನನ್ನ ಎಡಗೈಯನ್ನು ತನ್ನತ್ತ ಎಳೆದುಕೊಂಡ ಶೋಭ ಬೆರಳುಗಳನ್ನು ನೇವರಿಸತೊಡಗಿದಳು.
ರಸ್ತೆಗೆ ದೃಷ್ಟಿ ನೆಟ್ಟಿದ್ದೆ.ಮನಸ್ಸು ಶೋಭಳ ಅಂತರಂಗವನ್ನು ಪ್ರವೇಶಿಸುತ್ತಿದೆ ಎಂದುಕೊಂಡೆ.
ಇದಕ್ಕಿಂತ ದೊಡ್ಡ ಧ್ಯಾನಸ್ಥ ಸ್ಥಿತಿ ಬೇರಿಲ್ಲ ಎಂಬಂತಾಗಿದ್ದೆ ನಾನು.
ಈಗ ಹೇಳು....ಏಕೆ ಬಂದೆ ಇಲ್ಲಿಗೆ?
ಶೋಭ ಎಸೆದ ಪ್ರಶ್ನೆಗೆ ನಾನು ಅವಾಕ್ಕಾಗಿದ್ದೆ.
ಡ್ರೈವಿಂಗ್ ಸೀಟಿನಲ್ಲಿ ಚಡಪಡಿಸಿದೆ.
ನೀನು ನನ್ನನ್ನು ಹುಡುಕೊಂಡು ಬಂದೆ ಹೌದು ತಾನೇ.
ಹೂಂ..
ಏನಿತ್ತು ಅಂಥ ತ್ವರಿತ?
ಏನೂ ಇಲ್ಲ.ಸುಬ್ಬಪ್ಪಣ್ಣ ಸಿಕ್ಕಿದ್ದ,ನಿನ್ನ ವಿಷಯ ಹೇಳಿದ.ಮನಸ್ಸು ತಡೆದುಕೊಳ್ಳಲಾಗಲಿಲ್ಲ.ಹೊರಟು ಬಂದೆ.
ಅಷ್ಟೇ ಇರಲಿಕ್ಕಿಲ್ಲ ಎಂದು ನನಗನಿಸುತ್ತಿದೆ.
ನಿಜ ಶೋಭ.ಅದಕ್ಕಿಂತ ಹೆಚ್ಚೇನೂ ಇಲ್ಲ.ಇದು ಒಂಥರಾ ಕರ್ಟಿಸಿ ವಿಸಿಟ್ ಅಷ್ಟೇ ಅಂದೆ.
ಆಮೇಲೆ ಅನಿಸಿತ್ತು.ಇಷ್ಟೊಂದು ವಿನೀತನಾಗಿ ಶೋಭಳ ಜೊತೆ ವಿವರಿಸುವ ಅಗತ್ಯವೇನಿತ್ತು ಅಂತ.
ಶೋಭ ಹೆದ್ದಾರಿಯತ್ತ ದಿಟ್ಟಿ ನೆಟ್ಟಿದ್ದಳು.ಅವಳ ಕಣ್ಣುಗಳಲ್ಲಿ ಏನು ವಿವರಿಸುವಂತಿದೆ ಎಂಬುದು ಆ ಮಂದಬೆಳಕಿನಲ್ಲಿ ಗೊತ್ತಾಗುತ್ತಿರಲಿಲ್ಲ.ಟಾಪ್ ಲೈಟ್ ಹಾಕಬೇಕು ಎಂದರೆ ನನ್ನ ಎಡಗೈ ಅವಳ ಬಲಗೈ ಜೊತೆಗೆ ಬಂಧಿಯಾಗಿತ್ತು.ಅದನ್ನು ಕೊಸರಿಕೊಳ್ಳಲು ನನಗೆ ಆ ಕ್ಷಣಕ್ಕೆ ಸಾಧ್ಯವಾಗದು.
ಅವಳ ಮುಂದಿನ ಮಾತಿಗೆ ನಾನು ಕಾಯುತ್ತಿದ್ದೆ.
ಅದು ನನ್ನ ಆಗಮನದ ಕುರಿತಾಗಿ ಅವಳ ಶಂಕೆಗಳ ಮೇಲೆ ಇರಬಹುದು ಎಂದುಕೊಂಡಿದ್ದೆ.
ಶೋಭ ನಿಟ್ಟುಸಿರು ಬಿಟ್ಟ ಹಾಗೇ ಕೇಳಿಸಿತು.ಕಾರಿನ ವೇಗವನ್ನು ತಗ್ಗಿಸಿ ಅವಳತ್ತ ಮತ್ತೊಮ್ಮೆ ನೋಡಿದೆ.
ಶೋಭ ನನ್ನ ಕೈಬೆರಳುಗಳನ್ನು ತನ್ನ ಮುಖದತ್ತ ಎಳೆದುಕೊಂಡಳು.ಕಾರು ಆಗಲೇ ನಿಧಾನವಾಗಿತ್ತು.ಇದಕ್ಕಿಂತ ಕಮ್ಮಿ ವೇಗದಲ್ಲಿ ಸಾಗಲಾರೆ ಎಂದು ಹೇಳುತ್ತಿದ್ದ ಕಾರಿಗೆ ಗರಿಷ್ಠ ಗೇರು ಎಳೆದುಕೊಂಡು ಸಮಾಧಾನ ಮಾಡುತ್ತಿದ್ದೆ.
ಶೋಭ..ಅಂದೆ
ಕೊಲ್ಹಾಪುರದಲ್ಲಿ ನಾವು ಸ್ಟೇ ಮಾಡುತ್ತೇವೆ ಎಂದಳು ಶೋಭ.
ಏನೆಂದೆ?
ನಾವಿಬ್ಬರೂ ಇಂದು ರಾತ್ರಿ ಕೊಲ್ಹಾಪುರದಲ್ಲೇ ಉಳಿದುಕೊಂಡು ಬಿಡೋಣ..ಮತ್ತೆ ಬೆಳಗಾಂಗೆ ನಾಳೆ ಮಧ್ಯಾಹ್ನ ವಾಪಾಸ್ಸಾಗುತ್ತೇವೆ..ಎಂದಳು ಶೋಭ.
ನನಗೇಕೋ ನಾನು ಅಯಾಚಿತವಾಗಿ ಒಂದು ಸುಳಿಗೆ ಸಿಲುಕುವ ಭಾಸವಾಯಿತು.
ಶೋಭ ನನ್ನ ಕೈಬೆರಳುಗಳನ್ನು ಬಿಗಿಯಾಗಿ ತನ್ನ ಮುಷ್ಠಿಯಲ್ಲಿ ಅವುಕಿ ಕಣ್ಣುಗಳಿಗೆ ಒತ್ತಿಕೊಂಡಳು.
ಆಮೇಲೆ ನಿಧಾನವಾಗಿ ಕೈ ಸಡಿಲ ಮಾಡಿ ನನ್ನ ಕೈಯನ್ನು ಸ್ಟೇರಿಂಗ್ ಮೇಲೆ ಇಟ್ಟು ಕೈ ಹಿಂಪಡೆದಳು.
ಆಮೇಲೆ ಶೋಭ ಆ ಕ್ಷಣದ ವರೆಗಿನ ಮಾಧುರ್ಯವನ್ನು ಕಳಚಿಕೊಂಡ ಹಾಗೇ ....ತನ್ನ ಸ್ವಗತ ಎಂಬ ಹಾಗೆಯೂ ,ನನ್ನ ಕಿವಿಗೆ ಮಾತ್ರಾ ಎಂಬ ಹಾಗೆಯೂ ಹೇಳಿದಳು....
"ನಾನೇ ಅವನನ್ನು ಸಾಯಿಸಿದೆ......."
ನಾನು ಕಾರನ್ನು ಗಕ್ಕನೇ ನಿಲ್ಲಿಸಿದೆ.
ಗಂಟೆ ಹನ್ನೊಂದರ ಸನಿಹದಲ್ಲಿತ್ತು.ಇನ್ನೊಂದು ಗಂಟೆ ಕಳೆದರೆ ನಾಳೆ ಆರಂಭವಾಗುತ್ತದೆ...

ಕ್ಷೇಮ ತರುವಾಯ ತಿಳಿಸುವುದೇನೆಂದರೆ..ಭಾಗ ೫

ಎಲ್ಲವೂ ಚೆನ್ನಾಗಿತ್ತು.ಜಾತಕ ನೋಡಿ ಮದುವೆ ಮಾಡಿದ್ದರು.ನನ್ನದು ಕುಜದೋಷದ ಜಾತಕವಂತೆ.ಹುಟ್ಟಿದ ಹದಿನೇಳನೇ ದಿನಕ್ಕೆ ಅಪ್ಪ ಜಾತಕ ಮಾಡಿಸಿ ತಂದಿಟ್ಟು ಅಮ್ಮನಿಗೆ ಹೇಳಿದಾಗ ಅಮ್ಮ ಹೌಹಾರಿದಳಂತೆ.ಹಸಿಸಹಸಿ ಬಾಣಂತಿ ಬಳಿ ಯಾಕೆ ಇದನ್ನೆಲ್ಲಾ ಹೇಳಬೇಕಿತ್ತು ಎಂದು ಅಜ್ಜಿಮನೆ ಅಜ್ಜಿ ಕೋಪದಿಂದ ಅಳಿಯನಿಗೆ ಎರಡು ಬಿಡುಮಾತು ಹೇಳಿದ್ದೂ ಆಗಿತ್ತಂತೆ.
ಕುಜದೋಷ ಎಂದರೆ ಏನು ಗೊತ್ತಲ್ಲ ನಿನಗೆ? ಅದೇ ಗಂಡಸಾಯುವ ಯೋಗ.ಮದುವೆ ಆದಮೇಲೆ ತಾಳಿಕಟ್ಟಿದವನನ್ನೇ ಮುಕ್ಕಿ ತಿನ್ನುತ್ತಾಳೆ ಅಂತ ಅದೆಷ್ಟು ಸಾರಿ ಅಪ್ಪ ಅಮ್ಮ ಬೈತಿದ್ದರು ಎಂದರೆ ನಾನು ಹೋವರ್ಕ್ ಮಾಡದಿದ್ದಾಗ,ಭಜನೆ ಮಾಡಲು ಉದಾಸೀನಳಾಗಿ ಅಡಗಿ ಕುಳಿತಾಗ,ತಿಂಗಳ ಮುಟ್ಟಿನ ದಿನಗಳಲ್ಲಿ ಅಪ್ಪಿತಪ್ಪಿ ಯಾವುದೋ ಒಂದು ಬಟ್ಟೆ ತುಂಡು  ಮುಟ್ಟಿ ಮೈಲಿಗೆ ಮಾಡಿದಾಗ ಹೀಗೇ ಬೈಯುತ್ತಲೇ ಇದ್ದರು.ಅದು ನನಗೋ ಕಂಠಪಾಠವಾಗಿತ್ತು.ಆಮೇಲೆ ಮದುವೆಗೆ ಗಂಡು ಹುಡುಕುವಾಗ ತಗೋ ಇದೇ ಪರಿಪಾಠ ಶುರುವಾಯಿತು.ಕುಜದೋಷದ ಜಾತಕ ಅಂತ ಜಾತಕ ಹೋದಲೆಲ್ಲಾ ರಿಟರ್ನ್ ಬರತೊಡಗಿತು.ಕುಜದೋಷಕ್ಕೆ ಪರಿಹಾರ ಏನು ಅಂತ ಅಪ್ಪನಿಗೆ ಗೊತ್ತೇ ಇತ್ತು.ಹಾಗಾಗಿ ಅಪ್ಪ ಕಿಂಚಿತ್ತೂ ಆತಂಕಪಟ್ಟವನಲ್ಲ.ಆಮೇಲೆ ಇದೇ ಬೆಳಗಾವಿಯ ಸಂಬಂಧ ಕೂಡಿ ಬಂತು.ಕುಜದೋಷ ಇದ್ದ ಹೆಣ್ಣಿಗೆ ಅದೇ ದೋಷ ಇದ್ದ ಗಂಡು ಹುಡುಕಿ ಇವನನ್ನು ಆಯ್ಕೆ ಮಾಡಿದರು.ಇವನಿಗೂ ಕುಜದೋಷ ಅಂದರೆ ಹೆಂಡತಿ ಸಾಯೋ ದೋಷ.ಗಂಡುಹೆಣ್ಣು ಎದುರುಬದುರಾದಾಗ ಈ ದೋಷ ಪರಸ್ಪರ ಹೊಡೆದುಹೋಗುತ್ತದೆಯಂತೆ.ಭಾಗಾಕಾರದ ಹಾಗೇ.ಮದುವೆಗೆ ತಿಂಗಳಿದ್ದಾಗ ಕುಂಭವಿವಾಹ ಮಾಡಿದರು.ಕುಂಭದ ಜೊತೆ ಮದುವೆ.ದೊಡ್ಡ ಮಡಕೆಗೆ ಹಾರ ಹಾಕಿಸಿದರು.ಮಡಕೆಯೇ ತಾಳಿ ಕಟ್ಟಿದಂತೆ ಮಾಡಿ ಕತ್ತಿಗೆ ಕೆಂಪುದಾರ ಬಿಗಿದರು.ಆಮೇಲೆ ಮಡಕೆ ಒಡೆದು ಹಾಕಿದರು.ಕೆಂಪುದಾರ ಕಿತ್ತರು.ಇದೆಲ್ಲಾ ಎರಡು ಗಂಟೆಯೊಳಗೆ ನಡೆದುಹೋಯಿತು.ಆಮೇಲೆ ಊಟ.ಊಟಕ್ಕೆ ಕೇಸರಿಭಾತ್ ಮಾಡಲಾಗಿತ್ತು,ನನಗೆ ಚೆನ್ನಾಗಿ ನೆನಪಿದೆ,ಹಾಗಲಕಾಯಿ ಮೆಣಸ್ಕಾಯಿಯೂ ಇತ್ತು.
ನಾನು ವಿಧವೆಯಾದ ಲೆಕ್ಕದಲ್ಲಿ ಆ ಊಟ..ಹೆಹೆಹೆ...
ಮುಂದೆ ಇವನ ಜೊತೆ ಮದುವೆ.ಆಮೇಲೆ ಸಂಸಾರ...
ಇಪ್ಪತ್ತನೇ ವರ್ಷಕ್ಕೆ ಇಂವ ಸತ್ತು ಹೋದ..!
ಇಷ್ಟೇ....
ಶೋಭ ಮಾತು ನಿಲ್ಲಿಸಿದಳು.ಇದೇನಿದೂ ಸ್ವಗತವೋ ,ಅಹವಾಲೋ...
ನಃದುಃಖಃ ಪಂಚಭಿಸ್ಸಹ....
ನಾನು ಆಗಲೇ ಕಾರಿನ ಸೀಟನ್ನು ನಿಡಿದಾಗಿ ಬಿಡಿಸಿಟ್ಟು ಎರಡೂ ಕೈಗಳನ್ನು ಹಿಂದಕ್ಕೆ ಕಟ್ಟಿ ಕಣ್ಣುಮುಚ್ಚಿ ಮಲಗಿದ್ದೆ.
ಶೋಭ ಅದೇ ರೀತಿ ಸೀಟಿನಲ್ಲಿದ್ದುದರಿಂದ ನನ್ನ ಪಕ್ಕದಲ್ಲೇ ಮಲಗಿಕೊಂಡ ಹಾಗೇ ಕಾಣುತ್ತಿತ್ತು.
ಅವಳೇನೋ ಇನ್ನೂ ಹತ್ತಿರ ಬರುವ ಹಾಗೇ ಕಾಣಿಸಿತು.ನಾನು ಅಧೀರನಾಗದಂತೆ ಸಿದ್ಧತೆ ಮಾಡಿಕೊಂಡೆ.
ಇಂವ ಒಂದು ರಾತ್ರಿ ಸರೀ ಸುಮಾರು ಎರಡು ಗಂಟೆ ಇರಬಹುದೇನೋ ಧಿಗ್ಗನೇ ಎದ್ದು ಕುಳಿತ.
ಅವನು ಏಳುವ ರಭಸಕ್ಕೆ ನನಗೆ ನಿದ್ದೆ ಹಾರಿಹೋಯಿತು.ಏನಾಯಿತು ಎಂದೆ.ಏನಿಲ್ಲ ಎಂದ.ಆಮೇಲೆ ನನಗೇಕೋ ಭಯವಾಗುತ್ತಿದೆ ಎಂದ.ಏನು ಭಯ ಎಂದೆ.ಮಾತನಾಡಲಿಲ್ಲ.ಆಮೇಲೆ ಮಲಗಿದ ನಿದ್ದೆ ಮಾಡಿದ.
ಮತ್ತೆ ಮೂರನೇ ದಿನಕ್ಕೆ ಇದು ಮರಳಿತು.
ಆಮೇಲೆ ನಿತ್ಯವೂ ಹೀಗೆಯೇ.
ಇದು ವಯಸ್ಸಿನ ಕಾರಣವಿರಬಹುದು ಎಂದುಕೊಂಡೆ.ಖಾಸಾ ವೈದ್ಯರಲ್ಲಿಗೆ ನಾನೇ ಕರೆದುಕೊಂಡು ಹೋದೆ.ಅವರು ಒಂಥರಾ ಆಂಕ್ಸೈಟಿ ಅಷ್ಟೇ ಎಂದರು.ಅದೇನೋ ಮಾತ್ರೆ ಅರ್ಧ ತುಂಡು ತಿನ್ನು ಎಂದರು.ಕೆಲವು ತಿಂಗಳ ಬಳಿಕ ಮತ್ತೆ ಇಂವ ಹಾಗೇ ಶುರು ಮಾಡಿದ.ನನಗೆ ಗೊತ್ತಾಯಿತು,ಇಂವನಿಗೆ ಪ್ಯಾನಿಕ್ ಅಟಾಕ್ ಆಗುತ್ತಿದೆ ಎಂದು.ಕಾರಣ ಮಾತ್ರಾ ಗೊತ್ತಾಗಲಿಲ್ಲ.ಕೊನೆ ತನಕವೂ ಗೊತ್ತೇ ಆಗಲಿಲ್ಲ.
ಆಮೇಲೆ ಒಂದು ದಿನ ಹೇಳಿದ,ನನಗೆ ಯಾರನ್ನು ಕಂಡರೂ ಭಯವಾಗುತ್ತದೆ ಅಂತ.
ಆ ಕ್ಷಣಕ್ಕೆ ನನಗೆ ಪರಿಸ್ಥಿತಿ ಕೈ ತಪ್ಪುತ್ತಿದೆ ಎಂದು ಗೊತ್ತಾಯಿತು.ಇದೇ ಮಾಂವ ಇದ್ದಾರಲ್ಲ,ಪ್ರಸಾದರಾಯರಿಗೆ ನೇರಾತಿನೇರ ಹೇಳಿದೆ.ಅವರು ಅದೇನೋ ತಾಯಿತ,ಮಂತ್ರ ಅಂತ ಮಾಡಿಸಿದರು.
ವರ್ಷ ಕಳೆವ ಹೊತ್ತಿಗೆ ಇಂವ ಖಿನ್ನತೆಗೀಡಾದ.ಗುಳಿಗೆಗಳನ್ನು ನುಂಗಿಸಿದ್ದೇ ನುಂಗಿಸಿದ್ದು...ಆಮೇಲೆ ಒಂದು ದಿನ ಅಂದರೆ ಒಂದು ಜುಲೈನಲ್ಲಿ ಬೆಳಗ್ಗೆ ಹಾಸಿಗೆಯಲ್ಲಿ ಮೂರ್ತಿ ಥರ ಕುಳಿತಿದ್ದ.ಎಷ್ಟು ಮಾತನಾಡಿಸಿದರೂ ಊಹೂಂ ಮಾತನಾಡಲಾರ.
ಮೌನಕ್ಕೆ ಬಿದ್ದ.
ವಾರಗಟ್ಟಲೆ ಮಾತೇ ಆಡಲಿಲ್ಲ.ಪ್ರೀತಿಯಿಂದ ಓಲೈಸಿದೆ,ಕುಲುಕಿದೆ,ಬೈದೆ,ಹೊಡೆದೆ..ಎಷ್ಟೆಂದರೂ ಮಾತೇ ಇಲ್ಲ.
ನಮ್ಮ ಡಾಕ್ಟರ್ ಹೇಳಿದ,ಸುಮ್ಮನಿರಿ ನೀವೂ...ಅದಕ್ಕೆ ಅದೇ ಔಷಧಿ.ಡೋಂಟ್ ಫೋರ್ಸ್...ಅವನ ಮೌನವನ್ನು ಮುರಿಯಬೇಡಿ...
ಮೂರು ವರ್ಷ ಆರು ತಿಂಗಳು ಒಂಭತ್ತು ದಿನ ಇಂವ ಒಂದು ಶಬ್ದವನ್ನೂ ಹೊರಳಿಸಲಿಲ್ಲ...
ನನಗೆ ಆಮೇಲೆ ಎಲ್ಲಾ ರೂಢಿಯಾಯಿತು.ಇಂವ ಮಾತನಾಡದಿದ್ದರೂ ನನ್ನ ಎಲ್ಲಾ ಮಾತುಗಳಿಗೆ ಸ್ಪಂದಿಸುತ್ತಿದ್ದ.ಊಟಕ್ಕೆ ಬಾ ಎಂದರ ಎಬರುವವನು.ಕಾಫಿ ಕುಡಿ ಎಂದರೆ ಕುಡಿಯುವವನು.ಹಣ್ಣು ಕೊಟ್ಟರೆ ತಿನ್ನುವವನು.ಬ್ರಶ್ ಮಾಡುತ್ತಿದ್ದ,ಸ್ನಾನ ಮಾಡುತ್ತಿದ್ದ...ಎಲ್ಲರ ಹಾಗೇ ಇದ್ದ.ಮಾತು ಮಾತ್ರಾ ಇರಲೇ ಇಲ್ಲ.
ಇಂವನಿಗೆ ಯಾವ ಬಯಕೆಗಳೂ ಇರಲಿಲ್ಲ.ಹಾಗಾಗಿ ಇಂವನಿಗೆ ಮಾತಿನ ಅಗತ್ಯವೇ ಬೀಳಲಿಲ್ಲ.ಭಾವನೆಗಳೇ ನೆಲಕಚ್ಚಿಕೊಂಡಿದ್ದವು.ಏನಾದರೂ ಬರೆಯುತ್ತಾನೋ ಎಂದು ಸಾವಿರಾರು ಬಾರಿ ಕದ್ದು ಮುಚ್ಚಿ ಅವನನ್ನು ಪರಿಶೀಲಿಸುತ್ತಿದ್ದೆ.ಊಹೂಂ..ಏನೂ ಬರೆದಿಲ್ಲ,ಎಲ್ಲೂ ಬರೆದಿಲ್ಲ,ಒಂದಕ್ಷರವೂ ಕಾಣಿಸಲಿಲ್ಲ.
ಮಾತಿನ ಅಗತ್ಯವನ್ನು ತೊರೆದು ನಿಂತ ಇಂವನಲ್ಲಿ ನನಗೆ ಏನನ್ನು ಹುಡುಕಬೇಕೋ ಗೊತ್ತಾಗಲಿಲ್ಲ.
ಆ ಒಂದು ರಾತ್ರಿ ಇಂವನನ್ನು ತಬ್ಬಿಕೊಂಡೆ.ಮೈಮೇಲೆ ಮಲಗಿಕೊಂಡೆ.ಒಂದು ಹೆಣ್ಣು ಏನೆಲ್ಲಾ ತನ್ನವನ ಜೊತೆ ಮಾಡಬೇಕೋ ಅದನ್ನೆಲ್ಲಾ ಮಾಡಿದೆ.
ಅದೇ ಕೊನೆ...ಅದುವೇ ಕೊನೆಯಾಯಿತು..
ಕ್ಷೇಮ ತರುವಾಯ ತಿಳಿಸುವುದೇನೆಂದರೆ ..ಭಾಗ- ೬


ಶೋಭ ಸೀಟಿನಲ್ಲಿ ಎಡಭಾಗಕ್ಕೆ ತಲೆ ಹೊರಳಿಸಿಕೊಂಡಳು.ಅವಳ ಕಂಠ ಆರಿದೆ ಎಂದು ನನಗೆ ಗೊತ್ತಾಯಿತು.ಕೈಗಳೆರಡನ್ನೂ ಚಾಚಿ ಅವಳನ್ನು ಬರಸೆಳೆದುಕೊಂಡೆ.ಕೊಸರಿಕೊಂಡಳು.ಡೋರ್ ತೆರೆದು ಆ ಕತ್ತಲಲ್ಲಿ ಕಾರಿನಿಂದ ಇಳಿದು ಹೋದಳು.ಅವಳು ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಮುಂದೆ ಮುಂದೆ ಸಾಗುತ್ತಿದ್ದಳು.ನಾನೂ ಕಾರಿನಿಂದ ಇಳಿದು ಅವಳನ್ನು ಹಿಂಬಾಲಿಸಿದೆ..
ಶೋಭ ನಿಧಾನ ಹೆಜ್ಜೆಯನ್ನು ಅತಿಕ್ರಮಿಸಿಕೊಂಡೆ.ಶೋಭ ಹೆದ್ದಾರಿಯ ಮೋರಿ ಮೇಲೆ ಕುಸಿದಂತೆ ಕುಳಿತಳು.ಹೊರಗಿನ ಥಂಡಿ ಹವಾ ಹುಯ್ಯಲಿಟ್ಟಂತೆ ಅನುಭವವಾಗುತ್ತಿತ್ತು.ಒಳಗೆಲ್ಲೋ ಕಾರಣ ಕಟ್ಟಿಕೊಡದ ಬೇಗುದಿ.
ಮನಸ್ಸು ಭಾರವಾಗುತ್ತಿದೆ ಅನಿಸಿತು.ಏನಾದರೂ ಮಾತನಾಡಬೇಕು..ಎಲ್ಲಿಂದ ಶುರು ಮಾಡಲಿ ಎಂದು ಗೊತ್ತಾಗುತ್ತಿರಲಿಲ್ಲ.ಈ ನಿರ್ಜನ ರಾತ್ರಿಯಲ್ಲಿ ಈ ಹೆದ್ದಾರಿಯಲ್ಲಿ ಭಾರವಾದ ಟ್ರಕ್ಕುಗಳು,ಮಿಂಚಿನಸಂಚಾರದ ಕಾರುಗಳು,ಹೆದ್ದಾರಿಯಲ್ಲಿ ಆಗೊಮ್ಮೆ ಈಗೊಮ್ಮೆ ಕೆನೆಗಟ್ಟಿ ಕರಗುವ ಬೆಳಕುಗಳು...ಬೆಳಕಿನ ಜೊತೆಗೇ ಬಂದಿಳಿಯುವ ಕತ್ತಲುಗಳು..
ಆಮೇಲೆ ಅಲ್ಲಿ ಠಿಕಾಣಿಹೂಡುವ ಮೌನ.
ಶೋಭ ಕಣ್ಣುಗಳನ್ನು ತನ್ನೆರಡೂ ಕೈಗಳಲ್ಲಿ ಮುಚ್ಚಿಕೊಂಡಿದ್ದಳು.ಅವಳು ರೋದಿಸುತ್ತಿರಬಹುದು ಎಂದುಕೊಂಡೆ.ಅವಳನ್ನು ತಬ್ಬಿಕೊಡು ಸಾಂತ್ವನ ಹೇಳಲೇ ಎಂದು ಕ್ಷಣ ಕಾಲ ನ್ನೊಳಗೆ ಚಿಂತಿಸಿದೆ.ಮನಸು ಅಯೋಮಯ ಆಗುತ್ತಿತ್ತು.ಎಲ್ಲಿಂದ ಆರಂಭಿಸುವುದು ಮತ್ತು ಎಲ್ಲಿಂದ ಕೊನೆಗೊಳಿಸುವುದು ಇದರ ಮಧ್ಯ ಯಾವುದು? ಇದರ ಉಗಮ ಎಲ್ಲಿದೆ..ಎಲ್ಲಿಗೆ ನಾನು ಹೋಗುತ್ತಿದ್ದೇನೆ..ಯಾವಾಗ ಮರಳುತ್ತೇನೆ...
ಶೋಭ ತನ್ನ ಸೆಲೆಯೊಳಗೆ ನನ್ನನ್ನು ಒಯ್ಯುತ್ತಿದ್ದಾಳೆಯೇ?
ಆ ಸೆಲೆಯಲ್ಲಿ ಹೊಸತಾದ ಜಿನುಗು ಕಾಣುತ್ತಿದ್ದೇನಾ? ಆ ಜಿನುಗು ಮುಂದೊಮ್ಮೆ ಪ್ರವಾಹವಾಗುವುದೇ....ಪ್ರವಾಹದ ಸೇರುವ ಗಮ್ಯ ಯಾವುದು?ಸಾಗರವೇ? ಆ ಸಾಗರದಲ್ಲಿ ಅಲೆಗಳು ಈ ಪ್ರವಾಹವನ್ನು ಬಂಧಿಸಿಕೊಳ್ಳಬಲ್ಲವೇ?
ಆ ಸಾಗರಕ್ಕೆ ಅಲೆಗಳೇ ಇಲ್ಲದೇ ಹೋಗಬಹುದಾ?

ಶೋಭ ಅರ್ಧ ಗಂಟೆ ಕಾಲ ಆ ಮೋರಿಯ ಮೇಲೆ ಕುಳಿತೇ ಇದ್ದಳು.ಅವಳ ಕೈಗಳನ್ನು ಅವಳು ಅಷ್ಟೂ ಕಾಲ ತೆರೆಯಲೂ ಇಲ್ಲ.ನಾನು ನಿಮಿತ್ತ ಸಾಕ್ಷಿಯಾಗಿ ಅಲ್ಲಿ ಅವಳ ಬಳಿ ಕುಳಿತಿದ್ದೆ.
ಇನ್ನು ಕೆಲವೇ ಹೊತ್ತಿನಲ್ಲಿ ಬೆಳಕು ಹರಿಯುತ್ತದೆ.ಶೋಭಳ ಬಳಿ ಅವಳಿಗೆ ಆತುಕೊಂಡೇ ಅದೆಷ್ಟು ಹೊತ್ತಿನಿಂದ ಕುಳಿತೇ ಇದ್ದೇನೋ ನಾನು ಗಣನೆ ಮಾಡುವುದಿಲ್ಲ.ಶೋಭ ಕೈ ತೆರೆದಳು.ನಾನು ನೋಡುತ್ತಿದ್ದಂತೆ ಆ ಉದಯಕಾಲದ ನಕ್ಷತ್ರಗಳ ಬೆಳಕಿನಲ್ಲಿ ಅವಳ ಕಣ್ಣುಗಳು ಹೊಳೆಯುತ್ತಿದ್ದವು.ಸಣ್ಣಗೆ ನಕ್ಕಳು.ಬಾಚಿ ತಬ್ಬಿಕೊಂಡೆ.ಅವಳು ನನ್ನ ಎದೆಗೆ ವಾಲುತ್ತಿದ್ದಾಳೆ ಎನಿಸಿತು.ಬಿಗಿಯಾಗಿ ಅಪ್ಪಿದೆ.ಹಣೆಗೆ ಮುತ್ತಿಕ್ಕಿದೆ.ಶೋಭ ಹದಕ್ಕೆ ಬರುತ್ತಿದ್ದಳು.ಸೀದಾ ಸೀದಾ ಅವಳನ್ನು ತೋಳುಗಳಲ್ಲಿ ಎತ್ತಿಕೊಂಡೆ.ಕಾರಿನತ್ತ ಹಾಗೆಯೇ ಸಾಗಿಸಿದೆ.ಶೋಭ ಸ್ಪಂದಿಸುತ್ತಿರಲಿಲ್ಲ.ಆದರೆ ಅವಳಿಗೆ ಅಂಥದ್ದೊಂದು ಸೇಫ್ ಕಸ್ಟಡಿ ಬೇಕೇಬೇಕಾಗಿತ್ತು.ಅದು ನನ್ನ ತೋಳುಗಳಲ್ಲಿ ಅವಳಿಗೆ ಸಿಗುತ್ತಿತ್ತು.
ಕಾರಿನಲ್ಲಿ ಹಾಸಿಗೆ ಮಾದರಿಯಲ್ಲಿ ಬಿಡಿಸಿಟ್ಟಿದ್ದ ಸೀಟಿಗೆ ಅವಳನ್ನು ಕೆಡಹಿದೆ.ಶೋಭ ಕಣ್ಣು ಮುಚ್ಚಿಕೊಂಡಿದ್ದಳು.ಬಾಗಿಲು ಹಾಕಿ ಕಾರಿನ ಮಂಭಾಗದ ಹಾದಿಯಲ್ಲಿ ಸಾಗಿ ಚಾಲಕನ ಸೀಟಿನಲ್ಲಿ ಕುಕ್ಕರಿಸಿದೆ.ಅದೂ ಬಿಡಿಸಿಯೇ ಇತ್ತು.ನಾನೂ ಶೋಭ ಹಾಸಿಗೆಯಲ್ಲಿ ಮಲಗಿದಂತೆ ಮಲಗಿಕೊಂಡ ಸ್ಥಿತಿಯಲ್ಲಿದ್ದೆವು.ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಶೋಭ ನನ್ನತ್ತ ಹೊರಳಿಕೊಂಡಳು.
ನನ್ನ ಗಟ್ಟಿಯಾಗಿ ಅಪ್ಪು ಎಂದಳು.
ನಾನು ತಡಮಾಡಲಿಲ್ಲ.
ಆಮೇಲೆ ಆ ಹೆದ್ದಾರಿಯಲ್ಲಿ ಆ ಹೊತ್ತಿನಲ್ಲಿ ನಾವಿಬ್ಬರೂ ಹಾಡಿದ್ದು ಉದಯರಾಗ!
ಶೋಭ ನನ್ನ ತೆಕ್ಕೆಯನ್ನು ಸೇರಿಕೊಂಡಳು.ಕೈಬೆರಳುಗಳಿಂದ ಅವಳು ನನ್ನ ತುಟಿಗಳನ್ನು ಸೀಳುತ್ತಿದ್ದಳು.ನಾನು ಅವಳ ತುಟಿಗಳಿಗೆ ನನ್ನ ತುಟಿಗಳನ್ನು ಜೋಡಿಸಿದ್ದೆ.ನಾವಿಬ್ಬರೂ ಮಾದಕವಾಗಿ ಸ್ಮೂಚಿಂಗ್ ಮಾಡುತ್ತಿದ್ದೆವು.ಅವಳು ಆ ವೇಳೆಗೆ ನನ್ನನ್ನು ತನ್ನತ್ತ ಎಳೆದುಕೊಳ್ಳುತ್ತಿದ್ದಳು.ಬಿಸಿ ಉಸಿರು ಹಬೆಹಬೆಯಾಗಿ ಕಾರಿನ ಕನ್ನಡಿಗಳಲ್ಲಿ ರಾಚಿ ಕೂರುತ್ತಿತ್ತು.ಹಿಂದುಮುಂದು ವಾಹನಗಳು ಬೆಳಕು ರಾಚುತ್ತಾ ನಮ್ಮನ್ನು ದಾಟಿ ದಾಟಿ ಸಾಗುತ್ತಿದ್ದವು.ಆದರೆ ನಮ್ಮೊಳಗೆ ಐಹಿಕ ಮರೆಯಾಗಿತ್ತು.
ಇದ್ದಕ್ಕಿದ್ದಂತೆ ಶೋಭ,...ಪ್ಲೀಸ್ ಎಂದಳು.
ನಾನು ಹಿಂದೆ ಸರಿದೆ.ಅವಳಿಂದ ಸೀದುಕೊಂಡು ನನ್ನ ಸೀಟಿನಲ್ಲಿ ಕುಳಿತೆ.
ಮಳೆ ನಿಂತಿತು.
ಕನ್ನಡಿಯ ಹಬೆಯ ಮೇಲೆ ಶೋಭ ಬೆರಳಾಡಿಸಿದಳು.
ಆ ಮಂದಬೆಳಕಿನಲ್ಲಿ ನಾನು ಏನು ಬರೆಯುತ್ತಿದ್ದಾಳೆ ಎಂದು ನೋಡುತ್ತಿದ್ದೆ...
ಕಾಣಿಸಲಿಲ್ಲ.
ವಾಪಾಸ್ಸು ಹೋಗೋಣ ಎಂದಳು.
ನಾನು ಮತ್ತೆ ಬೆಳಗಾವಿಯ ಹಾದಿಯತ್ತ ಕಾರನ್ನು ಮುಖಮಾಡಿದೆ.
ನನ್ನ ಎಡಗಾಲ ಮೇಲೆ ಶೋಭ ತನ್ನ ಬಲಗಾಲನ್ನು ಲಾಕ್ ಮಾಡಿದಳು.
ಹೇಳು...ಎಲ್ಲಿ ಇದ್ದೆ ಇಷ್ಟು ವರ್ಷ ಕಾಲ .... ಎಂದು ಮಾದಕವಾಗಿ ಅವಳು ಕೇಳಿದಳು.ನಾನು ಉತ್ತರಿಸಲಿಲ್ಲ.
ಹೇಳೂ...... ಎಂದವಳೇ ನನ್ನ ಕಿವಿಯನ್ನು ನವಿರಾಗಿ ಕಚ್ಚಿದಳು.
ಈ ಹೊತ್ತಾರೆಯಲ್ಲಿ ಇದು ಸಂಭವಿಸುತ್ತದೆ ಎಂದು ನಾನು ಎಂದೆಂದೂ ಊಹಿಸಿರಲಿಲ್ಲ.
ಅವಳ ಮನೆಯ ಗೇಟು ತೆರೆಯುವಾಗ ಹಾಲಿನ ಹುಡುಗ ಅಲ್ಲಿದ್ದ.
ಅದೇ ಮಧ್ಯಾಹ್ನ ನಾನು ಹೊರಟು ನಿಂತೆ. ಶೋಭಳನ್ನು ಯಾವ ಸ್ಥಿತಿಯಲ್ಲಿ ಇಡಬಯಸುತ್ತೀಯೇ ಎಂದು ಕೇಳಿದ ನನ್ನ ಅಂತರಾತ್ಮಕ್ಕೆ ನಾನು ಕಾರ್ಯಕಾರಣದ ಉತ್ತರ ನೀಡುವಂತಿರಲಿಲ್ಲ. ನನ್ನ  ಕಟ್ಟುಪಾಡಿನ ಪುಸ್ತಕದಲ್ಲಿ ಅವಳಿಗೆಂದು ಒಂದು ಪುಟ ಮೀಸಲಿಟ್ಟಿದ್ದೆ.ಆದರೆ ಆ ಪುಟ ಹರಿದು ಹೋಗಿ ಅದೆಷ್ಟೋ ಕಾಲವಾಗಿತ್ತು.ಹರಿದ ಕಾಗದದ ತುಂಡನ್ನು ಇಂದು ನಾನು ಜೋಡಿಸಬಲ್ಲೆನೇ ನನಗೆ ಗೊತ್ತಿರಲಿಲ್ಲ. ಅಸಹ್ಯ ಎನಿಸುತ್ತಿದೆಯೋ, ಅಸಾಧ್ಯ ಎನಿಸುತ್ತಿದೆಯೋ ಗೊತ್ತಾಗಲೊಲ್ಲದು.ನಾನು  ಅದಕ್ಕೆ ಹೊಣೆಯಲ್ಲ.ನಾನವಳ  ಅಂತರಂಗ ಪ್ರವೇಶಿಸಿದೆನೇ.ಅಥವಾ ಅವಳು ಹಾಗೊಂದು ಕದ ತೆರೆಯುತ್ತಿದ್ದಾಳೆಯೇ? ಅಥವಾ ಇದೆಲ್ಲಾ ಒಂದು ರೀತಿಯ ಅತಿರೇಕದ ಪ್ರಕಟಣೆಗಳೇ?...
ಪ್ರಸಾದರಾಯರ ಮನೆಯೊಳಗೆ ಬಂದು ಕುಳಿತಾಗ, ಆಮೇಲೆ ಸ್ನಾನ ಮಾಡುತ್ತಿದ್ದಾಗ,  ಬೆಳಗಿನ ಉಪಾಹಾರ ಮುಗಿಸಿ ಎದ್ದಾಗ ಬ್ಯಾಗು ತುಂಬಿಸಿ ಹೊರಟು ನಿಂತಾಗ ನನ್ನನ್ನು ಕೊಲ್ಹಾಪುರದ ಹಾದಿಯ ಆ ಕತ್ತಲ ರಾತ್ರಿಯ ಪ್ರಕರಣಗಳು ಶೋಧಿಸುತ್ತಿದ್ದ ಬಗೆಗಳಾಗಿದ್ದವು ಹೀಗೆ.
ನಾನು ಹೊರಟುನಿಂತೆ. ಶೋಭಳೇ ಸ್ವತಃ ನನ್ನನ್ನು ಬಸ್‌ನಿಲ್ದಾಣಕ್ಕೆ ಕರೆದೊಯ್ಯುವವಳಿದ್ದಳು.
ಕಳೆದ ಸರಿರಾತ್ರಿಯಲ್ಲಿ ಅಂಥದ್ದೊಂದು ಸ್ಪರ್ಶ ಮತ್ತು ಅದನ್ನು ನೇವರಿಸಿದಂತಿದ್ದ ಬಂಧ ನನ್ನನ್ನು ಮತ್ತೆ ಮತ್ತೆ ಕೆಡಹುತ್ತಿತ್ತು.
ಇಷ್ಟು ವರ್ಷಗಳ ಕಾಲ ಒಂಟಿಯಾಗಿದ್ದ ನನ್ನ ಸ್ಥಿತಿಗೂ ಈ ಹೊತ್ತಿನಲ್ಲಿ ನಾನು ಹುಡುಕಿ ಬಂದ ಶೋಭ ನನ್ನ ಭವದಲ್ಲಿ ಜಾಗ ಹುಡುಕಿದ ರೀತಿಗೂ ಸರಿಗಟ್ಟುವಂತೆ ಮಾಡುತ್ತಿರುವುದಾದರೂ ಏನು?
ಉಫ್..
ನಾನು ಆದಷ್ಟು ಬೇಗ ಸ್ವಸ್ಥಾನ ಸೇರಿಕೊಳ್ಳಬೇಕು..ಇಲ್ಲಿಗೆ ಇದು ಸಾಕು...ಈ ವಯಸ್ಸಿನಲ್ಲಿ ಇದರ ಹದ ಮೀರಲೇಬೇಕು.
ನಾನು ಬ್ಯಾಗು ಎತ್ತಿಕೊಳ್ಳುತ್ತಿದ್ದಂತೆಯೇ ಒಳಗಿನಿಂದ ಒಂದು ಧ್ವನಿ ಕೇಳಿಸಿತು...
ಇನ್ನೊಂದು ದಿನ ಇದ್ದು ಬಿಡು...ನಾನಿನ್ನೂ ಬಿಡುಗಡೆಯಾಗಿಲ್ಲ...ಪ್ಲೀಸ್..
ಆ ಸ್ವರದಲ್ಲಿ ಇದ್ದದ್ದು ಪ್ರಾರ್ಥನೆ...
ಅದು ಯಾರ ಧ್ವನಿ?ಕ್ಷೇಮ ತರುವಾಯ ತಿಳಿಸುವುದೇನೆಂದರೆ..ಭಾಗ ೭


ಯಾರ ಧ್ವನಿ ಅದು ಎಂದು ಕೇಳಿದರೆ ಓದುಗಬಂಧುವೇ ನೀನು ಖಂಡಿತಕ್ಕೂ ಹೇಳುತ್ತೀಯಾ..ಶೋಭಳದ್ದೇ ಎಂದು.
ತಪ್ಪೇನಲ್ಲ,ಇಡೀ ಕಥೆಯಲ್ಲಿ ಇರುವುದೇ ನಾಲ್ಕು ಪಾತ್ರಗಳು,ಅದರಲ್ಲಿ ಇಬ್ಬರದ್ದು ಗೆಸ್ಟ್ ಅಪ್ಪಿಯರೆನ್ಸ್.ಆಮೇಲೆ ಉಳಿಯುವುದು ಕಥೆಗಾರ ಮತ್ತು ಅವನ ಹುಡುಗಿ.
ಇಷ್ಟೊಂದು ತಿರುಗಾಡಿದ ಕಥೆಯಲ್ಲಿ ಮತ್ತೊಂದು ಪಾತ್ರ ಈ ಕೊನೆಯ ಕೊನೆಯಾಯಿತು ಎಂಬ ಹೊತ್ತಿಗೆ ಯಾಕಾದರೂ ಬರುತ್ತದೆ ಅಲ್ಲವೇ?ಹಾಗೇ ಬರಲು ಅದೇನು ನಾವು ಹೇಳುತ್ತಿರುವುದು ಪತ್ತೇದಾರಿ ಕಥೆಯೇ?
ಹಾಗಂತ ಈ ಕಥೆಗಾರ ಹೇಳಿದರೆ, ನೀನು ನೀನು ಇದ್ದೀಯಲ್ಲ ಓದುಗ..ನೀನು ಯಾರೆಂದು ನನಗೇನೂ ಗೊತ್ತಿಲ್ಲ,ಹೆಣ್ಣೊ ಗಂಡೋ,ಬುದ್ದುವೋ ಬುದ್ಧಿವಂತನೋ,ಪ್ಯೂರೋ,ಇಮ್ಪ್ಯುರೋ..ಈ ಕಥೆಗಾರನಿಗೆ ಅದರದ್ದೇನು ಅಗತ್ಯ?
ಇರಲಿ,ನೀನು ಭಾರೀ ಪೂವರ್ ರೀಡರಂತೂ ನಿಜ ಬಿಡು.ಇಲ್ಲವಾದರೆ ಇನ್ನೊಂದು ಪಾತ್ರವೆಲ್ಲಿದೆ ಎಂದು ಕಥೆಗಾರ ಕೇಳಿದಾಗ ತಲೆಯಾಡಿಸುತ್ತೀಯಲ್ಲ..
ಇರಲಿ ಬಿಡು...
ನಾನು ಪ್ರಸಾದರಾಯರ ಮನೆಯಿಂದ ಆ ದಿನ ಹೊರಡಲೇ ಇಲ್ಲ.ಅಲ್ಲೇ ಠಿಕಾಣಿ ಹೂಡಿಬಿಟ್ಟೆ.
ಇನ್ನೊಂದು ದಿನ ಇದ್ದುಬಿಡು ಎಂದ ಆ ಪ್ರಾರ್ಥನೆಯಂಥ ಧ್ವನಿಗೆ ನಾನು ಶರಣಾದೆ.ಒಂದಲ್ಲ ಮತ್ತೂ ಹಲವು ದಿನ ಅಲ್ಲೇ ಇದ್ದೆ.
ಎಷ್ಟು ದಿನ ಎಂದು ಕೇಳಲೇ ಇಲ್ಲ ನೀನು...
ಬೆಚ್ಚಿಬೀಳಬೇಡ...
ಒಂಬತ್ತು ದಿನ ನಾನು ಅಲ್ಲೇ ಇದ್ದೆ.
ಪ್ರಸಾದರಾಯರು ತೀರಾ ಕೆಲಸ ಎಂದು ಹೇಳಿಕೊಂಡು ಗೋವಾಕ್ಕೆ ಹೋಗಿಬಿಟ್ಟರು.ಅಲ್ಲಿ ಆಮೇಲೆ ಉಳಿದದ್ದು ನಾನು ಮತ್ತು ಅವಳು.
ಅಂದರೆ ಶೋಭ.
ಒಂಬತ್ತು ದಿನಗಳ ಕಾಲ ಶೋಭಳ ಜೊತೆ ಇರುಳೂ ಹಗಲೂ ಇದ್ದು ಬಿಟ್ಟೆ.
ಅದೇ ಇಡೀ ಕಥಾನಕದ ಎಲ್ಲ ಹದವನ್ನು ಮೀರಿಸಿದಂತೆ ಸಾಗಿಬಿಟ್ಟಿತು.
ಹತ್ತನೇ ದಿನ ನಾನು ಇನ್ನೂ ಬೆಳಕಾಗುವ ಮುನ್ನವೇ  ಪ್ರಸಾದರಾಯರ ಮನೆ ತೊರೆದೆ.ನಾನು ಹೊರಬಂದಾಗ ಶೋಭ ಇನ್ನೂ ನಿದ್ದೆಯಲ್ಲೇ ಇದ್ದಳು ಅನಿಸುತ್ತದೆ.
ಶೋಭ ಕೊನೆಯ ರಾತ್ರಿ ಹೇಳಿದ ಕೊನೆಯ ಸಾಲುಗಳು ನನ್ನನ್ನು ವಿಚಿತ್ರವಾಗಿ ಹಿಂಡುತ್ತಿದ್ದವು.
ಕಥೆಗಾರನಾಗಿ ನಾನು ಶೋಭಳ ಜೊತೆ ಇದ್ದು ಬಿಟ್ಟೆನೇ ಅಥವಾ ಅವಳ ಜೀವದ ಒಂದು ಬಿಕ್ಕಳಿಕೆಯಾಗಿ ಇದ್ದು ಬಿಟ್ಟೆನೇ ಗೊತ್ತಾಗುತ್ತಿಲ್ಲ.ಈಗ ಈ ಹೊತ್ತಿನಲ್ಲಿ ಕಥೆಗಾರ ನಿನ್ನ ಜೊತೆ ಆ ಇರವುಗಳ ಒಟ್ಟಾರೆ ಸಾರಾಂಶವನ್ನು ಬಿತ್ತರಿಸಲು ನಿಂತಿರುವಾಗ ಕಾಲ ದೇಶ ಬದಲಾವಣೆಯಾಗಿದೆ.
ನಾನು ಸನ್ಯಾಸಿಬೆಟ್ಟದ ಅದೇ ಪಾಳು ಬಸದಿಯ ಹೊರಭಾಗದಲ್ಲಿದ್ದೇನೆ.ನಾನು ಶೋಭಳ ಜೊತೆಗಿದ್ದ ಕುರಿತು ಓದುಗ ದೊರೆಯೇ ನಿನಗೆ ಬಿಟ್ಟು ಇನ್ಯಾರಿಗೂ ಹೇಳಲೊಲ್ಲೆ.ಹಾಗೇ ಹೇಳುವುದಕ್ಕೆ ಎಂದು ನನ್ನದು ಎನ್ನುವ ಜೀವ ನೀನೊಬ್ಬನೇ ಎಂದಿದ್ದಳು ಶೋಭ.ನೋಡು ಇನ್ನು ಕೆಲವು ದಿನ ನಾನೂ ನೀನೂ ಈ ಮನೆಯಲ್ಲಿ ಇಬ್ಬರೇ ಇರುತ್ತೇವೆ.ಅಂದರೆ ಇಬ್ಬರು ಮಾತ್ರಾ.ಆದರೆ ನೀನು ನನಗೆ ನಿಮಿತ್ತ ಮಾತ್ರಾ ಆಗಿರುತ್ತಿಯಾ ಎಂದು ನಾನೆಂದೂ ಭಾವಿಸುವುದಿಲ್ಲ,ನಾನು ನಿನ್ನನ್ನು ಸಾಮಾನ್ಯ ಗೆಳೆಯ ಅಥವಾ ದೂರದ ಬಂಧು ಎಂದು ಭಾವಿಸಲಾರೆ.ಹಾಗೆಂದು ನಾವಿಬ್ಬರೂ ಮರೆತು ಬಿಟ್ಟು ಬಂದ ಕಾಲ ಮತ್ತು ದೇಶಕ್ಕೆ ಮತ್ತೆ ಮರಳಿಯೂ ಹೋಗಲಾರೆವು..ಒಂದೊಮ್ಮೆ ಹೋಗಬಹುದೇ ಎಂದು ನಿರುಕಿಸುವಷ್ಟು ಸತ್ವವಾಗಲಿ ಶಕ್ತಿಯಾಗಲಿ ನನ್ನಲ್ಲಿ ಇಲ್ಲ.
ನಾನು ಮೌನವೇ ನನಗೆ ಆಧಾರ ಎಂದುಕೊಂಡು ಲಾಗಾಯ್ತಿನಿಂದ ಕಾಪಾಡಿಕೊಂಡು ಬಂದ ಸಂಯಮವನ್ನು ಒತ್ತಿಟ್ಟುಕೊಂಡಿದ್ದೆ.
ಏನಾದರೂ ಹೇಳು ಎಂದಳು.
ನಾನು ದೇಶಾವರಿ ನಗೆ ಬೀರಿದೆ.
ಥೂ ನಿನ್ನ ..ಬೇವಾರ್ಸಿ ಥರ ನಗುತ್ತೀಯಾ...ನಾನು ಏನನ್ನು ಹೇಳಬೇಕೆಂದಿರುವೆಯೋ ಅದನ್ನೇ ನಿನ್ನ ನಿರ್ವೃತಿಯಲ್ಲಿ ಕಾಣಬಯಸುವೆ.ಆದರೆ ಫಟಿಂಗ ನೀನು...ಈ ಹೊತ್ತಿನಲ್ಲೇ ನೀನು ಬಂದಿರುವುದರ ಕಾರಣ ಅರ್ಥಮಾಡಿಕೊಳ್ಳಲು ಒದ್ದಾಡುತ್ತಿದ್ದೇನೆ...
ಹೇಗೆ ಕಾಣಿಸುತ್ತಿದ್ದೇನೆ ನಿನಗೆ ನಾನು? ಸೂಳೆ ಥರಾನಾ? ಹಪಾಹಪಿಯ ಹೆಣ್ಣು ಜೀವದಂತಾನಾ? ಅತೃಪ್ತ ಕಾಮಿಯ ಥರಾನಾ? ಭಾವವೇ ಮೈ ಸೆಟೆದುಕೊಂಡು ಮುರಕಲು ಬಿದ್ದ ಜೀವದಂತೆಯಾ?
ಕಳ್ಳಕೊರಮ ನೀನು...ನನ್ನನ್ನು ಈ ಹೊತ್ತಿನಲ್ಲಿ ಸೂಳೆ ಎಂದೇ ಭಾವಿಸಿ ನನ್ನ ಮೇಲೆ ಬಿದ್ದುಕೊಂಡಿದ್ದೀಯಾ..ಯಪ್ಪಾ ಅದೆಷ್ಟು ಶಕ್ತಿಯನ್ನು ಮಡುವಿಟ್ಟುಕೊಂಡಿದ್ದೀಯೋ...ಹಲ್ಕಾ ನೀನು....ನನ್ನನ್ನು ಈ ಪರಿಯಲ್ಲಿ ನೀವಾಳಿಸಿ ಎಸೆಯುತ್ತಿದ್ದೀಯಾ ಎಂದರೆ ನಿನ್ನನ್ನು ಕೊಂದೇ ಹಾಕಿದರೆ ಮಾತ್ರಾ ಸಮಾಧಾನ ಎನಿಸುತ್ತಿದೆ ಕಣೋ...
ಶೋಭ ನನ್ನ ಬೆನ್ನನ್ನು ನೇವರಿಸುತ್ತಾ ಪಿಸುಗುಟ್ಟುತ್ತಿದ್ದಳು.
ಇನ್ನು ಮೂರು ಗಂಟೆ ಕಾಲ ನೀನು ಚಿಗುರುವುದಿಲ್ಲ...ಖಂಡಿತಾ ನನಗೆ ಗೊತ್ತಾಗುತ್ತಿದೆ...ಶೋಭ ಭಯಂಕರವಾಗಿ ನಕ್ಕಳು.
ನಾನು ಒಂದು ಬಿಡುಗಡೆಯ ಅನುಭವದಿಂದ ಇನ್ನೂ ಚೇತರಿಸಿಕೊಳ್ಳಲು ಒದ್ದಾಡುತ್ತಿದ್ದರೆ ಅವಳು ನನ್ನನ್ನು ಮತ್ತೊಂದು ಯುದ್ಧಕ್ಕೆ ಅಣಿಗೊಳಿಸುತ್ತಿದ್ದಳು..
ಶೋಭ...ಅಂತ ದಿಂಬಿನಲ್ಲಿ ಅಮುಕಿಟ್ಟಂತೆ ಇದ್ದ ಬಾಯಿಯಿಂದ ಸ್ವರ ಹೊರಡಿಸಿದೆ.
ಶೋಭ ಮಾತನಾಡಲಿಲ್ಲ.ಅವಳ ಮೈಯ ರೇಶ್ಮೆಯ ನವಿರನ್ನು ಸ್ವೀಕರಿಸುತ್ತಾ ನಾನು ಕೇಳಿದ ಪ್ರಶ್ನೆಗೆ ಅವಳು ಧಿಗ್ಗನೇ ಎದ್ದು ಕುಳಿತಳು.
ಯಾಕೋ...ಮತ್ತೆ ಬಟ್ಟೆ ತೊಡು ಎನ್ನುತ್ತಿದ್ದೀಯಾ ಎಂದಳು.
ಹಾಗಲ್ಲ ಕಣೇ...
ಇನ್ನೇನು ಹಾಗಲ್ಲದೇ ಇದ್ದರೆ...
ಒಂದೇ ಮಾತು...ಈಗ ಎಲ್ಲವೂ ಕರಗಿಹೋಗಿ ಸ್ಮಶಾನವೈರಾಗ್ಯದ ಸೆಳವಿಗೆ ಸಿಕ್ಕಿಕೊಂಡಿದ್ದೇನೆ ಎಂದನಿಸುತ್ತಿದೆ ನನಗೆ ಎಂದೆ.
ನನಗೆ ಹಾಗನಿಸಬೇಕೆಂದೇನೂ ಇಲ್ಲ.ಹಾಗನಿಸಿದ್ದೇ ನಿನಗೆ ಖರೇ ಎಂದಾದರೆ ನಾನು ನಿನ್ನ ಪಾಲಿಗೆ ಕರೆವೆಣ್ಣಿಗಿಂತ ಬೇರೇನೂ ಅಲ್ಲ ಎನಿಸುತ್ತದೆ.ಹ್ಯಾಪಿ ಕಣೋ ನಾನು...ಹಾಗಾಗುವುದಾದರೂ ನನಗೆ ಇಷ್ಟವೇ...ಏಕೆ ಗೊತ್ತಾ...ನನ್ನ ಪಾಲಿಗೆ ಇಂವ ಇದ್ದಷ್ಟೂ ಕಾಲ ನಾನು  ನನ್ನವಳನ್ನು ನನ್ನೊಳಗೆ ಕಳೆದುಕೊಂಡಿದ್ದೆ.ಅವಳನ್ನು ಮರಳಿ ಪಡೆಯಬೇಕು ಎಂದುಕೊಂಡಿದ್ದೆ.ಅದಕ್ಕಾಗಿ ಹುಡುಕಾಡಿದೆ.ಹಾಗೇ ಹುಡುಕುತ್ತಾ ಅಷ್ಟೂ ವರ್ಷಗಳನ್ನು ನಷ್ಟ ಮಾಡಿಕೊಂಡೆ.ಒಂದು ಸಾರಿ ನಾನು ಇಂವ ಮೌನಕ್ಕೆ ಬಿದ್ದು ಗ್ರಸ್ತನಾಗಿದ್ದ ದಿನಗಳಲ್ಲೇ ಒಂದು ದಿನ...
ನನಗೆ ಚೆನ್ನಾಗಿ ನೆನಪಿದೆ...ಎಂದೆ
ಹೂಂ..
ಹೋಳಿ ದಿನ
ಹೂಂ..
ಅದೇ ಹೋಳಿಯ ದಿನ ರಾತ್ರಿ ನೀನು ನನಗೆ ಕರೆಮಾಡಿದ್ದೆ...ಬಂದು ಬಿಡು...ನನ್ನನ್ನು ಕರೆದುಕೊಂಡು ಹೋಗು ಎಂದೆ.
ಹೂಂ.ಸೂಳೇಮಗನೇ...ಆ ರಾತ್ರಿ ನೀನು ಕಮಕ್‌ಕಿಮಕ್ ಎನ್ನಲಿಲ್ಲ.ಗುರುತೇ ಇಲ್ಲದವನಂತೆ ಮಾತನಾಡಿದೆ.ನಾನು ದಿಕ್ಕಾಪಾಲಾಗಿದ್ದೆ.ಆ ಕಾಲ ಮತ್ತು ಆ ರಾತ್ರಿಯ ಆ ಕ್ಷಣಭಂಗುರತೆಯನ್ನು ನೀನು ನನಗೆ ತೋರಿಸಬೇಕಿತ್ತು.ತೋರಿಸಲಿಲ್ಲ.
ಸ್ಸಾರಿ..
ಈಗ ಏನು ಸ್ಸಾರಿ ಹೇಳುತ್ತೀಯಾ?? ಮೂರನೇ ರಾತ್ರಿ ನನ್ನನ್ನು ಭೋಗಿಸುತ್ತಿದ್ದೇನೆ ಎಂಬ ಅತಿಯಾದ ಗರ್ವದಲ್ಲಿ ಬಿದ್ದಿದ್ದೀಯಾ...ಮೂರೇ ಮಿನಿಟಿಗೆ ನಾಶವಾಗುವ ನಿನ್ನ ಪುರುಷತ್ವ... ಹೇಸಿಗೆ ಎನಿಸುತ್ತಿದೆ ಎಂದು ಇಂವನಿಗೆ ಹೇಳಿಬಿಟ್ಟಿದ್ದೆ.ಮಾತನಾಡಲಿಲ್ಲ ಇಂವ.ಏನು ಮಾತನಾಡುತ್ತಾನೆ?  ಎರಡನೇ ವರ್ಷವೂ ನಾನು ಹೋಳಿ ಕೈಬಿಟ್ಟಿದ್ದೆ.ಏಕೆಂದರೆ ಇಂವನಿನ್ನೂ ಚೇತರಿಸಿಕೊಳ್ಳುತ್ತಾನೆ ಎಂಬ ಯಾವ ಭರವಸೆಯೂ ನನ್ನಲ್ಲಿ ಇರಲಿಲ್ಲ.ಪುರುಷತ್ವ ಅಂತ ಎಲ್ಲಿ ಕೆಣಕಿದೆ ನೋಡು ಮೃಗವಾದ.ಹತ್ತಿರ ಬಂದರೆ ಖಂಡಿತಾ ಸಾಯಿಸುತ್ತೇನೆ ಎಂದು ತಳ್ಳಿದೆ.ಢಮಾರ್ ಅಂತ ಅಲ್ಲಿ ನೋಡು ಅದೇ ಟೀಪಾಯ್ ಮೇಲೆ ಬಿದ್ದುಬಿಟ್ಟ.ನಾನೇ ಎಳೆದು ನೀನೀಗ ಇದ್ದೀಯಲ್ಲಾ ಅಲ್ಲಿಗೇ ಕೆಡಹಿದೆ.ಬೆಳಗ್ಗೆ ಉಸಿರಾಡುತ್ತಿದೆಯೇ ಎಂದು ನೋಡಿದೆ.ಸರಾಗವಾಗಿದ್ದ.
ನನಗೆ ಬದುಕಿನ ಪಾಠಗಳು ಬೆಳಗಾವಿಗೆ ಬಂದಾಗಲೇ ಸಿಗಲಾರಂಭಿಸಿದವು.ಈ ಪ್ರಸಾದರಾಯರ ಪಿಂಡವೇ ಇದಲ್ಲ ಎಂದು ಗೊತ್ತಾಗಿ ಹೋಯಿತು....ಅಪ್ಪನಿಗೆ ನನ್ನ ಕುಜದೋಷದ ನಂಬಿಕೆ,ಆ ಕುಂಭವಿವಾಹ...ಹೇಗೆ ಎಲ್ಲಾ ಅನಿವಾರ್ಯ ನಂಬಿಕೆಯಾಗಿತ್ತೋ ಈ ಸತ್ಯವೂ ಗೊತ್ತೇ ಇತ್ತಂತೆ.
ಅದನ್ನು ಇಂವನೇ ಹೇಳಿದ್ದ.ನನ್ನ ಅಮ್ಮ ಹಾದರ ಮಾಡುತ್ತಿದ್ದಳಂತೆ ಎಂದು ಇಂವ ನನ್ನ ಮದುವೆಯಾದ ಮೂರನೇ ವರ್ಷದ ದಿನಾಚರಣೆ ನಿಮಿತ್ತ ನಾವಿಬ್ಬರೂ ಕಂಠಮಟ್ಟ ಕುಡಿದಾಗ ಹೇಳಿದ್ದ.ಒಪ್ಪಿಕೊಂಡೆ.ಇಂವನ ಸಂತೋಷಕ್ಕೆ ಏನು ಬೇಕಾದರೂ ಮಾಡಲು ಸಿದ್ಧಳಿದ್ದ ನನಗೆ ಇಂವ ಕಂಠಮಟ್ಟ ಕುಡಿಸಿ ಕರೆದು ಕಾರಿನೊಳಗೆ ಕೆಡಹಿದ್ದನ್ನೂ ಒಪ್ಪಿಕೊಂಡಿದ್ದೆ.ಇಂವನಿಗೆ ಬೇಕಾಗಿದ್ದುದು ನಾನಲ್ಲ...ನಾನೆಂಬ ಶೋಭ ಅಲ್ಲ...ಈಗ ಈ ಸರಿರಾತ್ರಿ ಈ ಮಂದಬೆಳಕಿನಲ್ಲಿ ನುಣುಪಾಗಿ ಅಪಾದಮಸ್ತಕ ನಗ್ನಳಾಗಿ ನಿನ್ನ ಮುಂದೆ ನಿಂತಿದ್ದಾಳಲ್ಲ...ಈ ಶೋಭ ಅಲ್ಲವೇ ಅಲ್ಲ...
ಹಾಸಿಗೆಯಿಂದ ಕೀ ಕೊಟ್ಟ ಬೊಂಬೆ ಥರ  ಎದ್ದೆ.ಅವಳ ಮೈಮೇಲೆ ಹಾರಿ ಕೆಡಹಿದೆ.ಬೆಕ್ಕು ಹಲ್ಲಿಯನ್ನು ಛಂಗನೇ ಬೇಟೆಯಾಡಿದಂತೆ.
ಶೋಭ ಕೊಸರಿಕೊಂಡಳು.
ನಾಳೆ ಮಧ್ಯಾಹ್ನ ಊಟಕ್ಕೆ ನಿನ್ನನ್ನು ಇಲ್ಲೇ ಇಪ್ಪತ್ತು ಮೈಲಿ ದೂರದಲ್ಲಿ ಒಂದು ಫೆಂಟಾಸ್ಟಿಕ್ ಖಾನಾವಳಿ ಇದೆ,ಅಲ್ಲಿಗೆ ಕರೆದೊಯ್ಯುತ್ತೇನೆ..ಚೆನ್ನಾಗಿ ರೊಟ್ಟಿ ಊಟ ಮಾಡೋಣವಂತೆ ಎಂದಳು..
ಓ ಓದುಗ ದೊರೆಯೇ...ನಾನು ಅದೇ ಆ ಬೆಳಗ್ಗೆ ಪ್ರಸಾದರಾಯರ ಮನೆಯಿಂದ ಹೊರಡಬೇಕು ಎಂದಾಗ ಇನ್ನೊಂದು ದಿನ ಇದ್ದು ಬಿಡು ಎಂದೇಕೆ ನೀನು ನನ್ನಲ್ಲಿ ಕೇಳಿಕೊಂಡೆ?..ಅದು ನಿನ್ನದೇ ಧ್ವನಿ ಎಂದು ಈಗ ಮತ್ತೆ ಖಚಿತಪಡಿಕೊಳ್ಳುತ್ತೀದ್ದಿಯಲ್ಲಾ???
ಹೌದು ಅದು ನಿನ್ನದೇ ಧ್ವನಿ ತಾನೇ??? ಅಲ್ಲ ಎಂದರೆ ನಾನೇಕೆ ಕಥೆಗಾರನಾಗಲಿ,ನೀನೇಕೆ ನನ್ನ ಓದುಗನಾಗಲಿ...??
ನಗಬೇಡ...ನಕ್ಕರೆ ಶೋಭ ನೊಂದುಕೊಳ್ಳುತ್ತಾಳೆ...


ಕ್ಷೇಮ ತರುವಾಯ ತಿಳಿಸುದೇನೆಂದರೆ..ಭಾಗ ೮

ಸನ್ಯಾಸಿಬೆಟ್ಟದ ಪಾಳು ಬಸದಿಯ ಕಲ್ಲುಚಪ್ಪಡಿಯ ಮೇಲೆ ಕುಳಿತೇ ಇದ್ದೆ.ಹೀಗೆ ಇಲ್ಲಿ ಕಲ್ಲಾಗಬೇಕು ಎಂಬ ಧಾವಂತ ಅಕಾರಣವಾಗಿ ಬಂದುಬಿಟ್ಟಿತು.ಶೋಭಳ ಜೊತೆ ಕೊನೆಯ ರಾತ್ರಿ ಕಳೆದ ಪರಿ ದಿಗ್ಭ್ರಮೆಗೊಳಿಸುತ್ತಿತ್ತು.ಅವಳನ್ನು ನಾನು ಭೇಟಿ ಮಾಡಲು ಹೊರಟ ಕಾರಣವಾದರೂ ಏನು? ಮತ್ತು ಆರಂಭದಲ್ಲಿ ಎಲ್ಲವೂ ಫಾರ್ಮಲ್ ಆಗಿದ್ದ ಸನ್ನಿವೇಶಗಳು ಬದಲಾಗುತ್ತಾ ಆಗುತ್ತಾ ಕೊನೆಯಲ್ಲಿ ಕಂಡ ಅಂತ್ಯವಾದರೂ ಏನು ಎಂಬುದು ನನ್ನನ್ನು ಭಯಗೊಳಿಸುತ್ತಿತ್ತು.ಹೇಳಿಕೇಳಿ ನಾನು ಒಂಟಿ.ನನ್ನದೇ ಅಂತ ಒಂದು ಮನೆ.ಆ ಮನೆಯಲ್ಲಿ ಇನ್ನೊಂದು ಜೀವ ಅಂತ ಇರುವುದು ನನ್ನ ಆತ್ಮ.ಅನೇಕ ಬಾರಿ ನಾನು ನನ್ನ ದೇಹದಿಂದ ಪ್ರತ್ಯೇಕಗೊಳ್ಳುತ್ತೇನೆ.ದೇಹದಿಂದ ಹೊರಗೆ ಬಂದು ನಿಂತಾಗ ನಾನು ಯಾರು,ಯಾರಿದು ನಾನು?? ಇದೇಕೆ ನಾನು ಇಲ್ಲಿದ್ದೇನೆ,ಏನಿದರ ಅರ್ಥ ಈ ಇರುವಿಕೆಯದ್ದು ಎಂದೆಲ್ಲಾ ಯೋಚಿಸುತ್ತೇನೆ,ಆಮೇಲೆ ಅಲ್ಲೇ ಕಳೆದುಹೋದಂತಾಗಿ ಬೆವರುತ್ತೇನೆ,ಮತ್ತೆ ದೇಹದೊಂದಿಗೆ ಸೇರಿಕೊಳ್ಳುತ್ತೇನೆ.
ಈ ಬಾರಿ ಈ ಸಂಜೆ ಈ ಕಲ್ಲಿನ ಚಪ್ಪಡಿಯ ಮೇಲೆ ಹಾಗೇ ದೇಹದಿಂದ ತೊರೆದು ಬರಲು ಒದ್ದಾಡುತ್ತಿದ್ದೇನೆ,ಅದು ವಿಫಲ ಯತ್ನ ಎಂದು ಸ್ಪಷ್ಟವಾಗುತ್ತಿದೆ.
ಶೋಭ ನಾಲ್ಕನೇ ದಿನ ಮಧ್ಯಾಹ್ನ ಆ ಖಾನಾವಳಿಯಲ್ಲಿ ರೊಟ್ಟಿ ಬಿಡಿಸಿಟ್ಟಾಗ ಹೇಳಿದ್ದು ಕಿವಿಗೆ ಈಗ ಸುರಿದಂತೆ ಆಗಿ ಭಯವಾಗುತ್ತಿದೆ.
ಶೋಭ ತನ್ನ ಗಂಡನನ್ನು ಆ ರಾತ್ರಿ  ಟೀಪಾಯ್‌ನಿಂದ ಎತ್ತಿ ಹಾಸಿಗೆ ಮೇಲೆ ಕೆಡಹಿದ ಮೇಲೆ ಆಗಿದ್ದೇ ಬೇರೆ.ನಂತರ ಆತ ತೀರಾ ಖತರ್‌ನಾಕ್ ಆಗತೊಡಗಿದ.ಕ್ರುದ್ಧನಾಗತೊಡಗಿದನಂತೆ.ಭಯಂಕರವಾಗಿ ಬಿಹೇವ್ ಮಾಡತೊಡಗಿದನಂತೆ.ಶೋಭಳನ್ನು ಕೊಲೆ ಮಾಡಲು ಬರುವವನಂತೆ ಕತ್ತಿ ಚಾಕು ಎತ್ತೆತ್ತಿ ಬೀಸತೊಡಗಿದನಂತೆ.ಪ್ರಸಾದರಾಯರನ್ನು ಒಮ್ಮೆ ಮನೆಯೊಳಗೆ ಅಟ್ಟಿಸಿ ಅಟ್ಟಿಸಿ ಹೊಡೆದನಂತೆ.
ಗಂಡನ ವರ್ತನೆ ಶೋಭಳನ್ನು ಕಂಗೆಡಿಸಿತಂತೆ.ಏನಾದರೂ ಮಾಡಿ ಅವನನ್ನು ದುರಸ್ತಿ ಮಾಡಬೇಕು ಎಂಬ ಅವಳ ಛಲಕ್ಕೆ ತಿಲಾಂಜಲಿ ಬಿದ್ದದ್ದೇ ಆ ದಿನವಾಗಿತ್ತಂತೆ.ಯಾವ ದಿನ ಅಂದರೆ ಅಂದು ಶೋಭ ಮೇಲೆ ಆತ ಪೆಟ್ರೋಲ್ ಸುರಿದೇ ಬಿಟ್ಟನಂತೆ.ಇನ್ನೇನು ಕಡ್ಡಿ ಗೀರುವುದು ಬಾಕಿ.ಶೋಭ ಮನೆ ಹೊರಗೆ ಓಡಿ ಬದುಕಿಕೊಳ್ಳುತ್ತಾಳೆ.ಆ ದಿನವೇ ಆಕೆ ನಿರ್ಧರಿಸಿದ್ದು ಅದೇ ಕಠಿಣ ನಿರ್ಧಾರ.ಆ ಮಧ್ಯಾಹ್ನವೇ ಆತನಿಗೆ ಸದಾ ಕೊಡಲಾಗುತ್ತಿದ್ದ ಸೆಡೇಶನ್ ಪ್ರಮಾಣವನ್ನು ಆರು ಪಟ್ಟು ಹೆಚ್ಚಿಸಿ ನಿದ್ದೆಗೆ ಬೀಳಿಸುತ್ತಾಳೆ.ಅಂದೇ ರಾತ್ರಿ ಅವನನ್ನು ತನ್ನದೇ ಕಾರಿನಲ್ಲಿ ಕೂರಿಸಿ ಮನೆಯಿಂದ ಹೊರಗೆ ತರುತ್ತಾಳೆ.ಕಾರನ್ನು ಚಲಾಯಿಸಿದ್ದು ಪ್ರಸಾದರಾಯರೇ.
ಮುಂದೆ?
ಶೋಭ ಆ ರೈಲು ನಿಲ್ದಾಣದಲ್ಲಿ ಅರೆಬೆಂದು ಬಾಡಿದಂತಿದ್ದ ಆ ಜೀವದ ಜೊತೆ ರೈಲನ್ನೇರುತ್ತಾಳೆ.
ಆಮೇಲೆ?
 ಅವಳೊಬ್ಬಳೇ ಇಳಿಯುತ್ತಾಳೆ.
ಆ ಮಧ್ಯರಾತ್ರಿಯಲ್ಲಿ ಆ ರೈಲು ಅಲ್ಲಿಂದ ಇನ್ನೆಲ್ಲಿಗೋ ಸಾಗುತ್ತದೆ.ಜೊತೆಗೆ ಅವಳ ಗಂಡನೂ....
ಆ ರೈಲು ಮರಳಿ ಅದೆಷ್ಟು ಬಾರಿ ಅಲ್ಲಿಗೆ ಬರುತ್ತದೆ.ಆದರೆ ಆತ ಮಾತ್ರಾ ಬರಲಾರ.
ಈಗ ಶೋಭ ಎಲ್ಲಿದ್ದಾಳೆ?
ನನ್ನ ಪಾಲಿಗೆ ಶೋಭ ಮುಗಿದ ಅಧ್ಯಾಯ.ಅವಳ ದೇಹದ ಕಣದಲ್ಲಿ ನನ್ನ ಹುಡುಕಾಟ ಮುಕ್ತಾಯ ಘೋಷಿಸಿದೆ.
ಒಂಭತ್ತನೇ ರಾತ್ರಿ ಅವಳು ಮಲಗಿ ನಿದ್ದೆಗೆ ಜಾರುವ ಮುನ್ನ ಅವಳನ್ನು ಚುಂಬಿಸಿದ್ದೆ.ಅವಳ ಅಂಗೋಪಾಂಗಗಳನ್ನು ಮುದ್ದಾಡಿದ್ದೆ.
ಇದೇ ಕೊನೆಯಾಗಲಿ ಎಂದಳು ಶೋಭ.
ಕೊನೆಯ ಬಾರಿಗೆ ಅವಳೊಳಗೆ ಆಳವಾಗಿ ಕರಗಿದಾಗ ಅವಳು ನನ್ನನ್ನು ಬಿಗಿಯಾಗಿ ಅಪ್ಪಿ ಇನ್ನೆಂದೂ ಇಲ್ಲ ಕಣೋ...ಇದೇ ಕೊನೆ ಎಂದಳು.
ಅದೇ ಕೊನೆಯಾಯಿತು.
ನನ್ನ ತಪಸ್ಸು ಈಡೇರಿತಾ ಅಥವಾ ಅವಳ ಯಾತನೆ ಬಿಡುಗಡೆಗೊಂಡಿತಾ?
ಓದುಗ ದೊರೆಯೇ ...
ಶೋಭ ಬೆಳಗಾವಿಯ ಮನೆಯಲ್ಲಿ ಇನ್ನೂ ಮಲಗೇ ಇದ್ದಾಳಾ ಅಥವಾ ಎದ್ದು ಬಂದಿರಬಹುದಾ?
ನನ್ನ ಪಾಲಿಗೆ ಅವಳಿರುತ್ತಾಳಾ? ಮತ್ತೆಂದಾದರೂ ಶೋಭ ಮತ್ತು ನಾನು ಭೇಟಿಯಾಗಬಹುದಾ?
ನನಗೆ ಇನ್ನೂ ನಿಖರತೆ ಇಲ್ಲ.
ಕಿಸೆಯಿಂದ ಬಣ್ಣದ ಚಾಕ್‌ಪೀಸ್ ತೆಗೆದು ಅದೇ ಬಸದಿಯ ಗೋಡೆಯಲ್ಲಿ ಬರೆಯುತ್ತಿದ್ದೇನೆ..
ಕ್ಷೇಮ, ತರುವಾಯ ತಿಳಿಸುವುದೇನೆಂದರೆ......
ಕಥೆಯನ್ನು ನೀನೇ ಮುಂದಾಗಿ ಬಂದು ಮುಗಿಸಿಕೊಡೋ ಓದುಗ ದೊರೆಯೇ...ದಯವಿಟ್ಟು....

No comments: