20161221

ಅಸ್ತಮಾನ ಹೂವಿನ ಮೂರನೇ ಎಸಳುಮೊದಲ ಎಸಳು:
ಕಥೆಗಾರ ಬೆಂಗಳೂರಿಗೆ ಬರುವ ಹೊತ್ತಿಗೆ ಇಡೀ ಮಹಾನಗರ ಮಲಗಿ ನಿದ್ರಿಸುತ್ತಿರಬೇಕು.ಇಲ್ಲವಾರದರೆ ಆತನ ಆಗಮನವನ್ನು ಅಲ್ಲಿ ಯಾರೂ ಗಮನಿಸದಂತೆ ಕಾಣುತ್ತಿರಲಿಲ್ಲ.ಅವನು ಅದು ಯಾವುದೋ ರಸ್ತೆಯ ಹೊದ್ದಿನಲ್ಲಿದ್ದ ಆ ಭವ್ಯ ಹೋಟೇಲಿನ ಏಳನೇ ಮಹಡಿಯಲ್ಲಿ ಒಂದು ಐಷಾರಾಮಿ ಕೊಠಡಿಯಲ್ಲಿ ಕುಳಿತಿದ್ದ.ಅವನ ಮುಂದೆ ಅವನಿಗೆ ಅವನು ಕೆಲಸ ಮಾಡುತ್ತಿದ್ದ ಕಂಪನಿ ನೀಡಿದ ಲ್ಯಾಪ್‌ಟಾಪ್ ತೆರೆದುಕುಳಿತು ಅವನ ಆಜ್ಞೆಗೆ ಕಾಯುತ್ತಿತ್ತು.
ಕಥೆಗಾರ ಏನು ಹೇಳುತ್ತಾನೆ ಅದನ್ನು ದಾಖಲಿಸುವುದಷ್ಟೇ ಆ ಲ್ಯಾಪ್‌ಟಾಪ್‌ನ ಕೆಲಸ.ಆ ಲ್ಯಾಪ್‌ಟಾಪ್  ಎಂಬ ಸೇವಕನಿಗೆ ಭಾವನೆಗಳೇ ಇಲ್ಲವೇ ಎಂದು ಕಥೆಗಾರ ದಟ್ಟವಾಗಿ ಯೋಚಿಸಿದ.
ಇಲ್ಲ ಎಂದಿತು ಲ್ಯಾಪ್‌ಟಾಪ್.
ನಾನು ಒಂಥರಾ ನಿನ್ನ ಗೆಳೆಯ ಅಥವಾ ಗೆಳತಿ ಅಂತ ನೀನು ಭಾವಿಸುವ ಎಲ್ಲರ ಹಾಗೇ.ನನಗೆ ನನ್ನದೇ ಆದ ಒಂದು ಬದುಕಿದೆ.ಅಲ್ಲಿ ನಾನು ಬೆಚ್ಚಗೆ ಇರುತ್ತೇನೆ.ಆ ಬೆಚ್ಚನೆಯಲ್ಲಿ ನಾನು ನನ್ನತನವನ್ನು ಉಳಿಸಿಕೊಳ್ಳಲು ಒದ್ದಾಡುತ್ತೇನೆ.ನನ್ನದೇ ಬದುಕು ನನ್ನದೇ ಜೀವಯಾನದಲ್ಲಿ ನಾನು ಸಾಗುತ್ತಿರುವಾಗ ನೀನು ಮಧ್ಯೆ ಮಧ್ಯೆ ಬಂದು ಅದೇನನ್ನೋ ಹೇಳುತ್ತೀಯಾ, ಆ ಕ್ಷಣಕ್ಕೆ ನಾನು ನಿನ್ನವಳಂತೆ ನಟಿಸುತ್ತೇನೆ,ನೀನು ಏನೆಲ್ಲಾ ಹೇಳುತ್ತೀ ಮತ್ತು ನೀನೇನು ಬಯಸುತ್ತೀ ಅದನ್ನು ನಿನಗೆ ಕೊಟ್ಟಂತೆ ನಟಿಸುತ್ತೇನೆ ಎಂದು ಹೇಳಿತು ಲ್ಯಾಪ್‌ಟಾಪ್.
ಕಥೆಗಾರ ನಕ್ಕ,ಜೋರಾಗಿ ನಕ್ಕ.ಗಂಟೆ ಎಷ್ಟು ಎಂದು ತನ್ನ ವಾಚಿನ ಮೇಲೆ ಕಣ್ಣು ಹಾಯಿಸಿದ.ಇನ್ನು ಕೆಲವು ಹೊತ್ತಿನಲ್ಲಿ ಬೆಳಗಾಗುತ್ತದೆ ಎಂದಿತು ಗಂಟೆ.
ನೀನು ಮಾತ್ರಾ ಸತ್ಯ ಹೇಳುತ್ತೀಯಾ,ಏಕೆಂದರೆ ನಿನಗೆ ಸತ್ಯವನ್ನು ಬಿಟ್ಟು ಬೇರೆ ಹಾದಿ ಗೊತ್ತಿಲ್ಲ ಎಂದು ಹೇಳಿದ ಕಥೆಗಾರ.
ಗಂಟೆ ಸತ್ತೇನೋ ಬಿದ್ದೆನೋ ಎಂದು ನಕ್ಕಿತು.
ನಾನೂ ಸತ್ಯವಂತನಲ್ಲ ಕಥೆಗಾರ.ಸುಮ್ಮನೇ ನಟಿಸುತ್ತೇನೆ ಅಷ್ಟೇ.ನನ್ನಲ್ಲೇ ಒಂದು ಲಹರಿ ಇದೆ.ಅದು ಇರುವ ತನಕ ನಾನು ಸತ್ಯ ಹೇಳುತ್ತೇನೆ,ಆಮೇಲೆ ಲಹರಿ ಕ್ಷೀಣಿಸಿದ ಹಾಗೇ ನಾನೂ ಸತ್ಯದ ಹಾದಿಯಿಂದ ದಾಟುತ್ತಾ ಹೊರ ಬರುತ್ತೇನೆ,ಕೊನೆಗೊಮ್ಮೆ ಸತ್ಯದ ನೆತ್ತಿಯನ್ನೇ ದಾಟಿ ಎಲ್ಲೋ ನಿಂತು ಬಿಡುತ್ತೇನೆ,ಅದು ಸುಳ್ಳೂ ಅಥವಾ ಸತ್ಯವೂ ಎರಡೂ ಆಗಬಹುದು ಎಂದಿತು ವಾಚು.
ಜಡತ್ವದ ಈ ಎರಡೂ ಸಾಥಿಗಳು ತನ್ನನ್ನು ಅಣಕಿಸುತ್ತಿವೆ ಎಂದು ಗೊತ್ತಾಗಲು ಕಥೆಗಾರನಿಗೆ ಬಹಳ ಸಮಯ ಬೇಕಾಗಲಿಲ್ಲ.
ಜಗವೇ ನಾಟಕ ರಂಗ ಎನ್ನುತ್ತಿದ್ದ ಅಪ್ಪ ನೆನಪಾದ.ಅಪ್ಪ ಇರುತ್ತಿದ್ದರೆ ಈಗ ತೊಂಭತ್ತು ಮೇಲೆ ಮತ್ತೇಳು ವರ್ಷ ಆಗುತ್ತಿತ್ತು.ಜೀವೇಮ ಶರದಶ್ಶತಂ, ಪಶ್ಯೇಮ ಶರದಶ್ಯತಂ ಎಂದು ಬಾಲಪಾಠ ಹೇಳಿಕೊಟ್ಟಿದ್ದ ಅಪ್ಪ ತಾನಂತೂ ಇರಲಾರೆ ಎಂದು  ಹೊರಟ.ಅಪ್ಪನ ಸಾವು ತನ್ನನ್ನು ಕೆಟ್ಟದಾಗಿ ಕಾಡುತ್ತಿತ್ತು.ಅಪ್ಪ ಎಲ್ಲೆಲ್ಲಿ ತನ್ನನ್ನು ತಿದ್ದಬಹುದೋ ಅಲ್ಲೆಲ್ಲೂ ತಿದ್ದಲಿಲ್ಲವೇ ಅಥವಾ ಅಪ್ಪ ತಿದ್ದಿದ ರೀತಿಯಲ್ಲಿ ತಾನು ಸಾಗಲೇ ಇಲ್ಲವೇ ಎಂದು ಕಥೆಗಾರನಿಗೆ ಆ ಮೂರನೇ ಜಾವದಲ್ಲಿ ಪ್ರಶ್ನೆ ಮೂಡಿತು.ಅಪ್ಪ ಕೆಟ್ಟವನಾಗಿರಲಲ್ಲ.ಅಪ್ಪ ಸತ್ಯವಂತನಾಗಿದ್ದ.ಅಪ್ಪನಿಗೆ ಯಾವ ಖಯಾಲಿಗಳೂ ಇರಲಿಲ್ಲ.ಅಪ್ಪನಲ್ಲಿ ಅಸಾಧ್ಯವಾದ ಛಲವಿತ್ತು.ಜೊತೆಗೆ ಸತ್ಯದ ಹಾದಿಯಲ್ಲಿ ಸಾಗಿ ಗುರಿಮುಟ್ಟಬೇಕು ಎಂಬ ಸ್ಥೈರ್ಯವಿತ್ತು.ಆದರೆ ಅಪ್ಪ ಒಂದು ರಾತ್ರಿ ಆ ಸ್ಥೈರ್ಯ ಕಳೆದುಕೊಂಡ.ಆಸ್ಪತ್ರೆಯಲ್ಲಿ ವೈದ್ಯರು ಇದನ್ನು  ಗುರುತಿಸಿರಬೇಕು.ತನ್ನನ್ನು ಹತ್ತಿರ ಕರೆದು ನಿಮ್ಮ ಡ್ಯಾಡಿಗೆ ಅಕ್ಯೂಟ್ ಡಿಪ್ರೆಶನ್ ಬಂದಿದೆ ಎಂದರು.ಆಮೇಲೆ ಅಪ್ಪ ತೊದಲುತ್ತಿದ್ದ.ತೂಕಡಿಸುತ್ತಿದ್ದ.ಅವನು ದೀನನಾಗಿ ನೋಡುತ್ತಿದ್ದ ಕಣ್ಣುಗಳು ಕಥೆಗಾರನನ್ನು ಬುಡ ಸಮೇತ ಅಲ್ಲಾಡಿಸಿದವು.ಅಪ್ಪನ ಶವದ ಮುಂದೆ ಒಂದು ಹನಿ ಕಣ್ಣೀರು ಬೀಳಲಿಲ್ಲ.ಅಪ್ಪ ಬೂದಿಯಾದ ಮರು ದಿನ ಸುಡುಕಳದಲ್ಲಿ ನಿಂತು ಕಥೆಗಾರ ಅದೆಷ್ಟೋ ಹೊತ್ತು ರೋದಿಸಿದ.ಅದೇ ದಿನ ಅವನಿಗೆ ಅದೊಂದು ಅರ್ಥವಾಗಿತ್ತು.ಏನು ಅರ್ಥವಾಯಿತು ಎಂಬುದನ್ನು ಕಥೆಗಾರ ತನ್ನದೇ ಬದುಕನ್ನು ಕೊನೆಗಾಣಿಸುವ ನಿರ್ಧಾರಕ್ಕೂ ಮುನ್ನ ಬರೆದಿಟ್ಟಿದ್ದ.
ಬೀಡುಬೀಸಾಗಿ ಸಂಜೆ ವೇಳೆ ಕಾರಲ್ಲಿ ಕುಳಿತು ಒಂದೇ ಉಸುರಿಗೆ ಹೊರಟು ಬರುತ್ತಾ ಸಕಲೇಶಪುರದಲ್ಲಿ ಮಂಜುನಾಥನ ಕ್ಯಾಂಟೀನ್‌ನಲ್ಲಿ ಅಕ್ಕಿ ರೊಟ್ಟಿ ತಿನುವ ಹೊತ್ತಿಗೆ ಅವಳು ನೆನಪಾಗಿದ್ದಳು.ಏಳು ಬಾರಿ ಕರೆ ಮಾಡಿದಳೂ ಆಕೆಯ ಉತ್ತರ ಇಲ್ಲ.ಬಹುಶಃ ಮಗನ ಜೊತೆ ಎಲ್ಲೋ ಪಾರ್ಕ್‌ನಲ್ಲಿ ಸುತ್ತಾಡುತ್ತಿರಬೇಕು.ಸಂಜೆ ವಾಟ್ಸಪ್‌ನಲ್ಲಿ ಸಿಕ್ಕಾಗಲೂ ಏನೋ ಹೇಳಬೇಕು ಎಂದುಕೊಂಡರೆ ಆಕೆ ಸುತಾರಾಂ ಕಥೆಗಾರನ ಪ್ರೊಫೈಲ್ ನೋಡಲೊಲ್ಲಳು.ಹಾಗಾದರೆ ತಾನು ಬೆಂಗಳೂರಿಗೆ ಬರುತ್ತಿದ್ದೇನೆ ಎಂಬುದನ್ನು ಅವಳಿಗೆ ಹೇಳುವುದಾದರೂ ಹೇಗೆ ಎಂದನಿಸಿತು.ಇಷ್ಟಕ್ಕೂ ಅದನ್ನೆಲ್ಲಾ ಅವಳಿಗೇಕೆ ಹೇಳಬೇಕು ಎಂಬ ಪ್ರಶ್ನೆ ಹುಟ್ಟಿ,ಆಮೇಲೆ ತಿಳಿಸಿದರಾಯಿತು ಎಂದಾಗಲೇ ವಾಸವಿ ಕಾಫಿ ಹೌಸ್ ಬಳಿ ಬರುತ್ತಿದ್ದಾಗ ಮತ್ತೆ ಫೋನ್ ಹಚ್ಚಿಕೊಂಡರೆ ಅವಳೇ ಹಲೋ ಎಂದಳು.ಇನ್ನು ಹತ್ತು ಮಾರು ಸಾಗಿದರೆ ಹೇಮಾವತಿ ನದಿ ದಾಟುವುದು.ಕಾರು ಪಕ್ಕಕ್ಕೆ ನಿಲ್ಲಿಸಿದ ಕಥೆಗಾರ ಅವಳ ಮಾತುಗಳಲ್ಲಿ ಅಪರಂಜಿ ಎಷ್ಟಿದೆ ಎಂದು ಅಳತೆಗೆ ಕುಳಿತ.ಅವಳ ಧ್ವನಿಯಲ್ಲಿ ಇರಬಹುದಾದ ಮಾರ್ದವವನ್ನು ಗುರುತಿಸಿದ.ತಾನು ಬರೆಯಬೇಕೆಂದಿದ್ದ ಕಥೆಯನ್ನು ಆಕೆಗೆ ಹೇಳಲೋ ಬೇಡವೋ ಎಂದು ಅರೆಕ್ಷಣ ಯೋಚಿಸಿ ಫೋನ್ ಕತ್ತರಿಸಿಕೊಂಡ.ಅವಳಿಗೆ ಹೇಳಬೇಕಾದ್ದು ಏನೂ ಇಲ್ಲ ಎಂದು ತನಗೆ ತಾನೇ ಖಚಿತ ಮಾಡಿಕೊಂಡು ಕಾರನ್ನು  ರಾಜಧಾನಿಯ ಹಾದಿಯತ್ತ ಅಟ್ಟಿದ.

ಎರಡನೇ ಎಸಳು:

ಕಥೆಗಾರ ಇಷ್ಟೆಲ್ಲಾ ಆದಮೇಲೆ ಬರೆದಿಟ್ಟ ಕಥೆಯೊಂದು ಇಲ್ಲಿದೆ,ಆ ಕಥೆಯಲ್ಲಿ ಅವನ ಅಂತ್ಯವಿದೆಯೇ ಗೊತ್ತಾಗುತ್ತಿಲ್ಲ.ಆದರೆ ಕಥೆಗಾರನ ಕೋಠಿಯಲ್ಲಿ ಈ ಕಥೆ ಅಡಗಿ ಕುಳಿತಿತ್ತು ಎಂಬುದಕ್ಕೆ ಅವನು ದಾಖಲಿಸಿದ ಟಿಪ್ಪಣಿಗಳೇ ಸಾಕ್ಷಿ ಎನಿಸುತ್ತಿದೆ.
 ಮೂರನೇ ಈ ಜಾವದಲ್ಲಿ ಬದುಕು ಭಾರ ಎನಿಸುತ್ತಿದೆ.ಹೊರಟು ಬಿಡೋಣ ಎಂದುಕೊಂಡರೆ ಯಾರೋ ಕಾಲು ಹಿಡಿದುಕೊಂಡ ಹಾಗೇ ಆಗುತ್ತಿದೆ.ಯಾರು ಎಂದು ನೋಡುತ್ತೇನೆ. ಅಸ್ತಮಾನ ಹೂವು.ಮನೆ ಹೊರಗೆ ಬಲಭಾಗದಲ್ಲಿ ಸಾಲುಸಾಲಾಗಿ ನಾನೇ ನೆಟ್ಟ ಗಿಡಗಳಲ್ಲಿ  ಸಂಜೆ ಅರಳುವ ಹೂವು ಈ ತನಕ ಅರ್ಥವಾಗಿಲ್ಲ.
 ಮೊನ್ನೆ ಒಂದು ಅಸ್ತಮಾನ ಹೂವು ಅರಳಿತ್ತು.ನಾಳೆ ಇನ್ನೊಂದು ಅರಳುತ್ತದೆ ಎಂದು ಈ ಹೂವನ್ನು ನೋಡಿ ವಾಪಾಸ್ಸಾಗಿದ್ದೆ.ಆದರೆ ಆ ಹೂವು ಅರಳಲಿಲ್ಲ.ನಿನ್ನೆಯ ಅಸ್ತಮಾನ ಹೂವಿನ ಜೊತೆ ಮಾತೇ ಆಡಲಿಲ್ಲ
ಅಸ್ತಮಾನ ಹೂವು ಇರುವ ತನಕ ಹೊರಡಲಾರೆ.ಒಂದಲ್ಲ ಒಂದು ದಿನ ಈ ಅಸ್ತಮಾನ ಹೂವು ನನ್ನನ್ನು ಪೂರ್ತಿ ಆವರಿಸಬೇಕು.ಅಷ್ಟರ ತನಕ ಕಾಯುತ್ತೇನೆ
ಅದೊಂದು ದೇಶ.ಆ ದೇಶಕ್ಕೊಬ್ಬ ರಾಜ.ರಾಜನ ಅರಮನೆಯಲ್ಲಿ ನೂರಾರು ಕೋಣೆಗಳು.ತುಂಬಿ ತುಳುಕುವ ಭಂಡಾರಗಳು.ಆದರೆ  ಅರಮನೆಯಲ್ಲಿ ಒಂದು ಕೊಠಡಿ ಮಾತ್ರಾ ಸದಾ ಖಾಲಿ.ಆ ಖಾಲಿ ಕೊಠಡಿಯ ಬಾಗಿಲು ಈ ತನಕ ಯಾರೂ ತೆರೆದಿಲ್ಲ.ಒಂದಲ್ಲ ಒಂದು ಒಂದು ದಿನ ಈ ಕೊಠಡಿ ತೆರೆಯಬೇಕು ಎಂದು ರಾಜನಿಗೆ ಛಲ.ಆದರೆ ರಾಜ ಯಾವತ್ತೂ ಏಕಾಂಗಿಯೇ ಅಲ್ಲ.ಅವನ ಸುತ್ತ ಅವನ ಪರಿವಾರ.ಕುಳಿತರೆ ನಿಂತರೆ ಆಳುಕಾಳುಗಳು,ಭಟರು,ಸಖಿಯರು,ಮಂತ್ರಿಮಾಗಧರು.ರಾಜ ಅಂತಃಪುರಕ್ಕೆ ಬಂದರೆ ಅಲ್ಲಿ ಅವನಿಗಾಗಿ ಕಾದು ಕುಳಿತ ಮಹಾರಾಣಿ.
ರಾಜ ಅದೆಷ್ಟೋ ಕಾಲ ತಾನು ಏಕಾಂಗಿಯಾಗಲು ಪ್ರಯಾಸಪಟ್ಟ.ಏಕಾಂಗಿಯಾಗಲು ಯತ್ನಿಸಿದಾಗಲೆಲ್ಲಾ ಅವನ ಅಂಗರಕ್ಷಕರು ಓಡೋಡಿ ಬಂದು ಅವನನ್ನು ಮುತ್ತಿಕೊಳ್ಳುತ್ತಿದ್ದರು.ಎಲ್ಲಿ ರಾಜ ಕಳೆದುಹೋಗುವನೋ ಎಂದು ಅವನ ಪ್ರಧಾನಮಂತ್ರಿ ರಾಜನಿಗೆ ಮತ್ತಷ್ಟು ಮತ್ತಷ್ಟು ಕಾವಲು ಪಡೆ ಕಟ್ಟಿದ್ದ.ರಾಜ ಪರಿಪರಿಯಾಗಿ ಹೇಳಿದರೂ ಪ್ರಧಾನಿ ಒಪ್ಪುತ್ತಿರಲಿಲ್ಲ.ಇದು ನಮ್ಮ ದೇಶದ ಭದ್ರತೆಯ ವಿಚಾರ,ರಾಜ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಸಂವಿಧಾನ ಎನ್ನುತ್ತಿದ್ದ. ರಾಜ ಪಟ್ಟದರಸಿಯ ಮುಂದೆ ಗೋಳೋ ಎಂದು ಅತ್ತ,ನನಗೂ ಒಂದು ಖಾಸಗಿ ಬದುಕು ಬೇಕು.ಒಂದು ಹನ್ನೆರಡು ಘಳಿಗೆಯಾದರೂ ಏಕಾಂತ ಕೊಡುವಂತೆ ಮಾಡು ಎಂದು ಬೇಡಿದ.ರಾಣಿಗೆ ಭಯವಾಯಿತು.ಇಲ್ಲ ಸಾಧ್ಯವೇ ಇಲ್ಲ ಎಂದಳು ರಾಣಿ.
ರಾಜನಿಗೆ ಆ ಖಾಲಿ ಕೊಠಡಿಯನ್ನು ತೆರೆಯುವ ಆಸೆ.ಅದರೊಳಗೆ ಏನಿದೆ ಎಂದು ಒಂದೇ ಒಂದು ಸಾರಿ ನೋಡಿಬಿಡಬೇಕು.ಆಮೇಲೆ ತಾನು ಇರುವಷ್ಟು ಕಾಲ ಇಡೀ ರಾಜ್ಯ ಹೇಳಿದಂತೆ ಕೇಳಿಕೊಂಡಿರುತ್ತೇನೆ ಎಂದುಕೊಳ್ಳುತ್ತಿದ್ದ.ಅವನು ಖಾಸಗಿಯಾಗಿ ಹೀಗೆ ಯೋಚಿಸುವಾಗಲೂ ಸುತ್ತಾ ಮುತ್ತಾ ಹತ್ತಾರು ಮಂದಿ ನಿಂತು ರಾಜನನ್ನು ಕಾಡುತ್ತಿದ್ದರು.
ಅಂತೂ ರಾಜನಿಗೂ ಒಂದು ದಿನ ಅವನದ್ದೇ ಆಗುವ ಕ್ಷಣ ಬಂದೇ ಬಂತು.ಬಹುಶಃ ಅರಮನೆಯಲ್ಲಿ ಯಾವುದೋ ಉತ್ಸವ ಶುರುವಾಗಿದ್ದಿರಬೇಕು.ಅಥವಾ ಇಡೀ ಅರಮನೆಗೆ ಜ್ವರ ಬಂದು ಮಲಗಿದ್ದಿರಬೇಕು.ಅಥವಾ ಅರಮನೆಯ ಪರಿವಾರಕ್ಕೆಲ್ಲಾ ಕ್ಷಣಕಾಲ ಮಂಕು ಆವರಿಸಿದ್ದಿರಬೇಕು.
ಏನೋ ಎತ್ತಲೋ ಅಂತೂ ಆ ಮೂರನೇ ಜಾವದಲ್ಲಿ ರಾಜ ಎದ್ದು ಕುಳಿತ.ಆತ ಒಂಟಿಯಾಗಿದ್ದ.ತಾನು ನಿಜಕ್ಕೂ ಒಂಟಿಯೇ ಎಂದು ಅವನಿಗೆ ಎಲ್ಲಿಲ್ಲದ ಸಂತೋಷ ಆವರಿಸಿತು.ಕುಣಿದು ಕುಪ್ಪಳಿಸಬೇಕು ಅನಿಸಿತು.ಸೀದಾ ಸೀದಾ ಅರಮನೆಯ ಆ ಖಾಲಿ ಕೊಠಡಿಯತ್ತ ಸಾಗಿದ.ಯಾರ ಕಾಲದಲ್ಲಿ ಹಾಕಿದ ಬಾಗಿಲು ಮತ್ತೆಂದೂ ತೆರೆದೇ ಇರದ ಬಾಗಿಲು.ದೂಡಿದರೆ ಇಡೀ ಅರಮನೆಯೇ ಬೆಚ್ಚಿ ಬೀಳುವಂಥ ಕೀರಲು ಸ್ವರ ಹೊರಡಬಹುದು.ಆದದ್ದಾಗಲಿ ಎಂದು ರಾಜ ಬಾಗಿಲು ದೂಡಿದ.ಯಾರೋ ಅಪ್ಪಿ ಬರಸೆಳೆದು ಒಳಗೆ ಎಳೆದುಕೊಂಡ ಹಾಗಾಯಿತು.

ಮೂರನೇ ಎಸಳು:

ಲ್ಯಾಪ್‌ಟಾಪ್ ಕೇಳಿತು,ಕಥೆಗಾರ ಇದನ್ನೆಲ್ಲಾ ಸೇವ್ ಮಾಡಿಕೊಳ್ಳಲಾ?
ಕಥೆಗಾರ ಕಂಟ್ರೋಲ್ ಎಸ್ ಕೊಡಲೇ ಬೇಡವೇ ? ನೀವೇ ಹೇಳಬೇಕು.ಎಷ್ಟಾದರೂ ನಿಮ್ಮ ಮುದ್ದಿನ ಕಥೆಗಾರನಲ್ಲವೇ?