20161117

ಪುನರಾಗಮನಾಯಚ

“A great cup of coffee cannot reject us. A song from our favorite band does not leave us feeling useless. But when we choose to share our life with another person, we inevitably make a choice to become vulnerable.”


ಇದೆಲ್ಲಾ ಆಗಿ ಹತ್ತು ವರ್ಷಗಳೇ ಆಗಿವೆ.
ಪಕ್ಕದಲ್ಲಿ ಕುಳಿತ ಮಗಳು ಕಂಕುಳದ ಮಟ್ಟಕ್ಕೆ ಬಂದಿದ್ದಾಳೆ.ನಿನ್ನೆ ಅವಳು ಸ್ಕೂಟಿ ಮೇಲೆ ಸವಾರಿ ಮಾಡುತ್ತಾ ಬಂದಿಳಿದ ರಭಸವನ್ನು ಗಮನಿಸಿದಾಗ ಅದೆಲ್ಲೋ ಇದ್ದ ಅಮ್ಮ ಅರಳಿ ನಿಲ್ಲುತ್ತಿದ್ದಾಳೆ.ಪುಟ್ಟಪುಟ್ಟ ಮಕ್ಕಳಿಗೂ ಅನುಕೂಲವಾಗಲೆಂದು ಈ ಸಣ್ಣಸಣ್ಣ ಸ್ಕೂಟರ್ ಅನ್ವೇಷಣೆ ಮಾಡಿದ್ದಾರಾ ಎಂದು ಮಗಳು ಆಗಾಗ್ಗೆ ಕೇಳುತ್ತಿದ್ದಾಗ ನಗು ಒತ್ತರಿಸಿ ಬರುತ್ತದೆ.
ದೇವಸ್ಥಾನದ ಹಿಂಭಾಗದಲ್ಲಿ ಕಟ್ಟಿದ ದೊಡ್ಡ ಹಾಲ್.
ಆ ಹಾಲ್‌ನಲ್ಲಿ ನಡೆಯುತ್ತಿದ್ದ ಆ ಧ್ಯಾನಶಿಬಿರ.ಅಲ್ಲಿ ತರಬೇತಿ ನೀಡುತ್ತಿದ್ದ ರಾಜೇಶ.ಅವನ ಮುದ್ದು ಮುಖ,ಆ ನಗು,ಕುಡಿ ಮೀಸೆಯ ಮೋಹಕ ಛಾಪು.ವೈಯಾರಕ್ಕೆ ಏನೂ ಕಮ್ಮಿಯಿಲ್ಲದ ಶೈಲಿ.
ನನ್ನ ನಂಬರ್ ಬರಕೊಳ್ಳಿ.
ಧ್ಯಾನ ಶಿಬಿರದ ಕೊನೆಯ ದಿನ ಕೊನೆಯ ಹೊತ್ತಿಗೆ ರಾಜೇಶ ಇನ್ನೂ ಜಮಖಾನದಲ್ಲಿ ಕುಳಿತ ಶಿಬಿರಾರ್ಥಿಗಳಿಗೆ ಅಪ್ಪಣೆ ಕೊಡಿಸುತ್ತಾನೆ,
೯೮....ನಿಂದ ಶುರುವಾಗಿ ಮತ್ತೆಲ್ಲೋ ೮ಕ್ಕೇ ಆ ನಂಬರ್ ಕೊನೆಗೊಳ್ಳುತ್ತಿದ್ದ ನೆನಪು.
ಮೆಲ್ಲಗೇ ಅರ್ಧ ನಿಮೀಲನ ಮಾಡಿದ ಕಣ್ಣುಗಳನ್ನು ಸಾಧನಾ ಕದ್ದು ನೋಡುತ್ತಾಳೆ.ಮತ್ತೊಮ್ಮೆ ಸುತ್ತಮುತ್ತ ಜಮಖಾನದಲ್ಲಿ ಕುಳಿತಿದ್ದವರತ್ತ ಕಣ್ಣುಹಾಯಿಸುತ್ತಾಳೆ.ಎಲ್ಲರೂ ಆ ನೋಟ್ ಪ್ಯಾಡ್ ಮೇಲೆ ರಾಜೇಶನ ನಂಬರ್ ಬರೆದುಕೊಳ್ಳುವುದರಲ್ಲಿ ಫುಲ್ ಬಿಜಿ.
ಸಣ್ಣಗೆ ನಗು ಬರುತ್ತದೆ.
ಈ ನಂಬರ್ ಬರೆದಿಟ್ಟುಕೊಂಡು ಏನು ಮಾಡುತ್ತಾರೋ?
ಮತ್ತೊಮ್ಮೆ ರಾಜೇಶನನ್ನು ನೋಡುತ್ತಾಳೆ.ಮೈ ಪುಳಕಿತವಾಗುತ್ತದೆ.ರಾಜೇಶನೂ ಅವಳನ್ನೇ ನೋಡುತ್ತಿದ್ದಾನೆ.
ನಂಬರ್ ಬರೆದುಕೊಂಡಿಲ್ಲವಾ ಮಿಸ್ ನೀವು?
ಹಾಂ ಹಾ..ಹಾ..
ಪಕ್ಕದಲ್ಲಿದ್ದ ಬ್ಯಾಗ್‌ನೊಳಗೆ ಕೈ ತಳ್ಳಿ ಪೆನ್ನಿಗಾಗಿ ತಡಕಾಡುತ್ತಾಳೆ.
ರಾಜೇಶ ನಂಬರ್ ಮತ್ತೆ ಮತ್ತೆ ಉಸುರುತ್ತಿದ್ದಾನೆ.ಸಾಧನಾ ಅವನು ಹೇಳಿದಷ್ಟೂ ಸಾರಿ ಅದನ್ನು ಬರೆದುಕೊಂಡಿದ್ದಾಳೆ.
ಆ ರಾತ್ರಿ ಮಧುವಿನ ತೊಡೆ ಮೇಲೆ ಮಲಗಿಕೊಂಡ ಸಾಧನಾ ರಾಜೇಶನ ನಂಬರ್‌ಗೆ ಒಂದು ಮೆಸೇಜು ರವಾನಿಸುತ್ತಾಳೆ.
ಯೂ ಆರ್ ಸೋ ಕ್ಯೂಟ್.
ಮಧು ಬಿದ್ದು ಬಿದ್ದು ನಗುತ್ತಾಳೆ.
ಸಾಧನಾಳೂ.
ಏನ್ ಅಂದ್ಕೊಂಡಾರೋ ಏನೋ ಎಂದು ಮಧು ಪ್ರಶ್ನೆ.
ಏನ್ ಅಂದ್ಕೊಳ್ಳೋದು,ಹುಡುಗಿ ಮೆಸೇಜಿಗೆ ಅವನ ಧ್ಯಾನವೇ ಅಲ್ಲಾಡುತ್ತದೆ ನೋಡುತ್ತಾ ಇರು ಎಂದು ಸಾಧನಾ ಹೇಳಿದರೆ ಮಧು ಅವಳನ್ನು ತನ್ನ ತೊಡೆ ಮೇಲಿಂದ ಕೆಡಹಿ ನನ್ನವನ ಕಾಲ್ ಬಂತು ಎಂದು ಓಡುತ್ತಾಳೆ.
ಅವಳ ತೊಡೆಯಿಂದ ತಲೆ ಹಾಸಿಗೆ ಮೇಲೆ ಧೊಪ್ಪನೇ ಉರುಳಿದಾಗಲೇ ಮೊಬೈಲ್ ಮೇಲೆ ಮೆಸೇಜು ಬಂದು ಬಿದ್ದಿದೆ.
ಆಮೇಲಿನ ರಾಜೇಶನ ಯಾವ ಮೆಸೇಜೂ ಮಧು ಓದಿಲ್ಲ.
ಮೆಸೇಜುಗಳನ್ನು ಜತನದಿಂದ ತನ್ನ ಫೋಲ್ಡರ್‌ನಲ್ಲಿ ಸಾಧನಾ ಕಾಪಾಡಿಕೊಂಡಿಟ್ಟಿದ್ದಾಳೆ.ಆಗಾಗ್ಗೆ ಓದುತ್ತಿರುತ್ತಾಳೆ.ಪ್ರತಿಯೊಂದು ಬಾರಿ ಮೆಸೇಜು ಬಾಕ್ಸ್ ಓದಿ ಬಂದ ಮೇಲೆ ಮೈಯೆಲ್ಲಾ ನವಿರಾಗುತ್ತಿದೆ.
ಎರಡು ವರ್ಷಗಳಿಂದ ಅಟ್ಟಾಡಿಸುತ್ತಿದ್ದ ಸುಧಾಮನ ಮೆಸೇಜುಗಳೆಲ್ಲಾ ನಿರ್ವೀರ್ಯ ಎನಿಸಲು ತೊಡಗುತ್ತದೆ.
ಫ್ಲರ್ಟ್ ಮಾಡುತ್ತಿಲ್ಲ ತಾನೇ ನೀನು ಎಂದು ಸುಧಾಮ ಕೇಳಿದಾಗ ಸಾಧನಾಗೆ ಅಚ್ಚರಿ.
ಎಲಾ ಇವನಾ..ಇವನಿಗೆ ಹೇಗೆ ಗೊತ್ತಾಯಿತು?
ಒಂದು ಲೆವೆಲ್ ಮೈಂಟೇನ್ ಮಾಡಬೇಕು ಕಣೇ.ಎಲ್ಲಾ ಹುಡುಗರನ್ನೂ ಏಕಕಾಲಕ್ಕೇ ನಿಭಾಯಿಸಬೇಕು ಅಂತಾನೇ ಹುಡುಗೀರಿಗೆ ದೇವರು ಕೊಟ್ಟ ವರಗಳೇ ಇವೆ ಎಂದಿದ್ದಳು ಸೋಫಿಯಾ.
ಥೋ ಇವಳಾ..
ನಗಬಾರದು.ನಾನು ನಿಜ ಹೇಳ್ತಾ ಇರೋದು.ದ್ರೌಪದಿಗೆ ಏನು ಹೆಸರು ಪಾಂಚಾಲಿ.ಆಕೆ ಪಾಂಚ್ ಹಸ್ಬೆಂಡನ್ನು ನಿಭಾಯಿಸ್ತಾ ಇರಲಿಲ್ಲವಾ? ಯೂ ಅಗ್ರೀ?
ಸೋಫಿಯಾ ಪಕಪಕ ನಗುತ್ತಾಳೆ.
ಸುಧಾಮನ ಜೊತೆ ಮೊದಲಾಗಿ ತುಟಿತುಟಿಗೆ ಅಂಟಿಸಿದಾಗ ಇದೇ ಮೊದಲು ಇದೇ ಕೊನೆ ಎಂದೇನೇದಾರೂ ಅನ್ನಿಸಿತ್ತಾ?
ನೋ ವೇ.
ಈಗ ರಾಜೇಶನ ಬೈಕ್ ಹಿಂದೆ ಕುಳಿತು ಅವನನ್ನು ಅರ್ಧ ತಬ್ಬಿಕೊಂಡು ಹೋಗುತ್ತಿದ್ದಾಗ ಬೇಡಬೇಡವೆಂದರೂ ಅವಳೇಕೆ ನೆನಪಾಗುತ್ತಾಳೆ,ನೆನಪಾಗಿ ಅದೇನೋ ಭಯ ಅಡರುತ್ತದೆ..
ರಜ್ಜೂ ನಿನ್ನ ವೈಫ್ ಈ ಸಿಟಿಯಲ್ಲೆಲ್ಲಾದರೂ ಓಡಾಡುತ್ತಿಲ್ಲ ತಾನೇ?
ಸುಧಾಮನ ಹೆಸರನ್ನು ಇಷ್ಟು ಕಾಲ ಮುದ್ದು ಎಂದು ಇಟ್ಟುಕೊಂಡಿದ್ದಾಗಿತ್ತು.ಇನ್ನು ಅದನ್ನು ಪ್ರಾಫೆಸ್ಸೆರ್ ಎಂದು ಬದಲಾಯಿಸಬೇಕು.ರಜ್ಜೂ ಮತ್ತು ಮುದ್ದು ಏಕಕಾಲದಲ್ಲಿ ಮೊಬೈಲ್ ಕಾಂಟಾಕ್ಟ್‌ನಲ್ಲಿ ಇರಲೇಬಾರದು.
ಮನಸ್ಸಲ್ಲೂ..
ಸುಧಾಮ ಕಾಲ್॒
ಎಂಗೇಜ್ ಬರುತ್ತಿದೆ,ಏನ್ ಸಮಾಚಾರ?ಎಷ್ಟು ಹೊತ್ತಿನಿಂದ ನಿನಗೆ ಟ್ರೈ ಮಾಡುತ್ತಿದ್ದೆ,ಯೂ ಆರ್ ಫುಲ್ ಬಿಝಿ.
ದರಿದ್ರ ..
ಕಾಲ್ ಮಾಡಿ ಪ್ರಾಣ ತಿನ್ತಾನೆ.ಇವನನ್ನು ಹೇಗೆ ನಿಭಾಯಿಸೋದು?ಸ್ವಲ್ಪ ಬಿಝಿ ಇದ್ದೆ ಎಂದರೆ ಮತ್ತೆ ಮತ್ತೆ ಹಿಂಸೆ ಕೊಡುತ್ತಾನೆ,ಹೇಗಾದರೂ ಮಾಡಿ ಇವನನ್ನು ಮಟ್ಟಹಾಕಬೇಕು.
ಅಯ್ಯೋ ಮುದ್ದೂ ಬಿಲೀವ್ ಮಿ.
ಸುಧಾಮನನ್ನು ಕರಗಿಸಲು ಅಷ್ಟು ಸಾಕು.
ಮಗಳು ಸ್ಕೂಟಿಯನ್ನು ಹಜಾರದೊಳಗೆ ನೂಕಿ ಇಟ್ಟು ಗೇಟ್ ಎಳೆದುಕೊಂಡು ಹಾಲಿನ ಪಾಕೇಟು ಎತ್ತಿ ತರುತ್ತಿದ್ದ ಹೊತ್ತಿನಲ್ಲಿ ಈ ರಾಜೇಶ ಏಕೆ ಹುಟ್ಟಿಕೊಂಡ ಮತ್ತೆ ಮನಸ್ಸಿನೊಳಗೆ?
ಸುಧಾಮ ಇನ್ನೂ ಅದೇ ಪ್ರೀತಿ,ಅದೇ ಬದುಕಿನ ಭಾವತೀವ್ರತೆ ಎಂದೆಲ್ಲಾ ಆಗಾಗ್ಗೆ ಪಾಠ ಮಾಡುತ್ತಾ ತಮ್ಮೊಳಗೆ ಯಾವ ಅನುಬಂಧಗಳೂ ಇರಲೇ ಇಲ್ಲ ಎಂಬ ಹಾಗೇ ಮಾತನಾಡುತ್ತಾನೆ.ಅವನ ಭಾಷಣಗಳನ್ನು ಆಗಾಗ್ಗೆ ಫೋನ್ ಒಳಗೆ ಕೇಳಿ ಕೇಳಿ ಚಿಟ್ಟು ಹಿಡಿಯುತ್ತದೆ.ಯಾವುದನ್ನು ಮರೆಯಬೇಕು ಎಂದು ಲೆಕ್ಕಿಸುತ್ತೇನೋ ಅದು ಮರಳಿ ಅಟ್ಟಾಡಿಸುತ್ತದೆ ಎಂದು ಸೋಫಿಯಾ ಹೇಳುತ್ತಿದ್ದಳು.ಈ ಸುಧಾಮನೂ ಹಾಗೇ.ಯಾವ ಘಳಿಗೆಯಲ್ಲಿ ಪ್ರೀತಿ,ಲಹರಿ ಅಂತ ಅಂಟಿಕೊಂಡನೋ?
ಈಗಂತೂ ನಾಸ್ಟಾಲ್ಜೀಯಾದ ಮದಕರಿ.ಆ ದಿನ ಆ ಕ್ಷಣ ಎಂದು ಸಾಯಿಸುತ್ತಾನೆ.ಎಷ್ಟು ಬಾರಿ ಹೇಳಿದ್ದೆ,ನನಗೆ ನನ್ನ ಮಗಳು,ಗಂಡ ಎಲ್ಲಾ ಮುಖ್ಯ.ನನ್ನ ಪ್ರೈಂಟೈಂ ಅವರಿಗೇ ಮೀಸಲು ಅಂತ.ಆಗೆಲ್ಲಾ ಗೋಣಾಡಿಸುತ್ತಾನೆ,ಮತ್ತೆ ಮತ್ತೆ ಬಂದುಹೋಗುತ್ತಾನೆ.
ಡಿಸ್ಟರ್‍ಬ್ಡ್.
ಹೇಳೋದಕ್ಕೆ ಆಗುತ್ತಿಲ್ಲ.ಅದಕ್ಕೇ ಇಂವನಿಗೆ ಹೇಳಿದ್ದೆ,ನನ್ನ ಬೆಸ್ಟ್ ಕೋಚ್.ಇವರ ಜೊತೆ ಏನಾದರೂ ನಾನು ಫುಲ್ ಟೈಂ ಕೋಚ್ ತಗೊಳ್ತಾ ಇದ್ರೆ ಈಗ ನ್ಯಾಶನಲ್ ಪ್ಲೇಯರ್ ಆಗುತ್ತಿದ್ದೆ.
ಇಂವ ನಗುನಗುತ್ತಾ ಕೇಳಿಸಿಕೊಳ್ಳುತ್ತಾ ಇದ್ದರೆ,ಭಡವ ಸುಧಾಮ,ಈ ಸಾಧನಾ ಮೋಸ್ಟ್ ಟಾಲೆಂಟೆಡ್ ಗಾಲ್ ಈ ಹ್ಯಾವ್ ಏವರ್ ಕಂ ಎಕ್ರಾಸ್ ಎಂದೆಲ್ಲಾ ಬಡಬಡಿಸುತ್ತಿದ್ದ.
ಅಗತ್ಯವಿತ್ತಾ ಎಂದುಕೊಳ್ಳುತ್ತೇನೆ.
ಒಡೆದ ಕೊಳಲು ಕಣೇ ನಾನು,ನಾದ ಹೊರಡದು ನನ್ನಲ್ಲಿ ಎಂದಿದ್ದ.ಹೂಂ ಎಂದಿದ್ದೆ.ನೀನು ಒಡೆಯದ ಕೊಳಲೇ ಆಗಿದ್ದರೂ ನಾನೇಕೆ ನಿನ್ನಲ್ಲಿ ನಾದ ಹೊರಡಿಸಬೇಕು ಎಂದು ಕೇಳಬೇಕು ಎಂದುಕೊಂಡಿದ್ದ ಮಾತುಗಳನ್ನು ಕಡಿದು ಹಾಕಿದ್ದೆ.
ಮಗಳು ಅಮ್ಮಾ ಎನ್ನುತ್ತಿದ್ದ ಹಾಗೇ ಸಾಧನಾ ಮತ್ತೆ ಮರುಲೋಕ ಪ್ರವೇಶಿಸಿದಳು.ಸ್ವಿಮ್ಮಿಂಗ್ ಕ್ಲಾಸ್ ಎಂದದ್ದೂ ಕೇಳಿಸಿಕೊಂಡದ್ದಾಯಿತು.ಮಗಳು ಹಜಾರ ದಾಟಿ ಗೇಟನ್ನು ದೂಡಿ ಲಾಕ್ ಹಾಕಿಕೊಂಡ ಕಣಕ್ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಬಾಗಿಲು ದೂಡಿ ಕದವಿಕ್ಕಿಕೊಂಡಳು ಸಾಧನಾ,
ಎಲ್ಲಿತ್ತೋ ಏನೋ ಹುಕ್ಕಿ ಏನಾದರೂ ಮಾಡಿ ರಾಜೇಶನ ನಂಬರ್ ಹುಡುಕಬೇಕು ಎಂದು ಹಳೆಯ ಪುಸ್ತಕಗಳನ್ನೆಲ್ಲಾ ಹರಹಿ ಕುಳಿತಳು.
ಕನ್ನಡ ಇಂಗ್ಲೀಷು,ಹಿಂದಿ ಪುಸ್ತಕಗಳು.ಎಲ್ಲಾ ಈ ಪುಟ್ಟಿಯದ್ದು.ನನ್ನದೂ ಅಂತ ಒಂದಾದರೂ ಪುಸ್ತಕ ಬೇಕಿತ್ತು.ಇಷ್ಟೊಂದು ಪುಸ್ತಕದೊಳಗೆ ಇಂವನದ್ದು ಅಂತ ಒಂದಾದರೂ ಪುಸ್ತಕ ಇಲ್ಲ.
ಏಯ್ ನಾವೆಲ್ಲಾ ಓದೋ ಮಂದೀನೇ ಅಲ್ಲ.ಈ ಪುಸ್ತಕ ಓದೋದು ಪುಸ್ತಕ ಬರೆಯೋದು ಎಲ್ಲಾ ಮಸ್ತಕ ಸರಿ ಇಲ್ಲದವರೂ ಅಂತ ಪದ್ಯ ಓದಿದ ಹಾಗೇ ಹೇಳಿ ನಕ್ಕಿದ್ದ ಇಂವ.
ಓದೋ

All living beings deserve to be cherished because of the tremendous kindness they have shown us
ದನ್ನು ಕಲಿಸಿದ ರಾಜೇಶ ಧ್ಯಾನದ ಕುರಿತು ಕೊಟ್ಟ ಪುಸ್ತಕ ಹುಡುಕುತ್ತಾಳೆ ಸಾಧನಾ.

ಅಂತ ಶುರುವಿಟ್ಟುಕೊಂಡಿದ್ದ ಆ ಶಿಬಿರದ ಅವನ ಮಾತುಗಳು.
ಓಹ್ ರಾಜೇಶ..
ಅವನ ಮಧುರವಾದ ಧ್ವನಿಯಲ್ಲಿ ಅವನು ತನ್ನೊಬ್ಬಳ ಕಿವಿಗೇ ಎಂಬ ಹಾಗೇ ಉಸುರಿದ್ದನಾ?


Life is not in one's self, life is somewhere else..

ಅವನೇ ಕೊಟ್ಟ ಪುಸ್ತಕದಲ್ಲಿ ಅವನ ಸಹಿಗೂ ಮುನ್ನ ಅವನೇ ಬರೆದ ಸಾಲುಗಳಿವು.

Life is not in one's self, life is somewhere else..
ಹತ್ತು ಬಾರಿ ಓದುತ್ತಾಳೆ ಸಾಧನಾ.
ಅವನ ಕೊರಳ ಮೇಲೆ ಅಲ್ಲೆಲ್ಲೋ ಇದ್ದ ಆ ದದ್ದುವನ್ನು ಬೆರಳಲ್ಲಿ ಚಿವುಟಿದಾಗ ಆಯ್..ಅಂತ ಕಿರುಚಿದ್ದು,ಜೋರಾಗಿ ತಾನು ನಕ್ಕಿದ್ದು ಅದಕ್ಕೆ ಪ್ರತಿಯಾಗಿ ಅವನು ಬೆರಳುಗಳಲ್ಲಿ ಕಿಲಿಕಿಲಿ ಅಂತ ಗಿಗಲ್ ಮಾಡಿ ಸಾಕುಬೇಕು ಮಾಡಿ ನಗಿಸಿದ್ದು..
ರಾಜೇಶಾ..ಪ್ಲೀಸ್ ಎಲ್ಲಾದರೂ ಒಂದು ನಂಬರ್ ಬರೆದಿಟ್ಟಿರೋ ಎಂದು ಸಾಧನಾ ಮತ್ತೆ ಮತ್ತೆ ಪುಸ್ತಕ ತಡುವುತ್ತಾಳೆ,ಪುಟಗಳಿಂದ ಪುಟಗಳನ್ನು ತಿರುವುತ್ತಾಳೆ.


As our attachments start to weaken, we may experience a certain peace in our mind…
ಇದು ಬರೆದವರು ಯಾರು? ಸಾಧನಾ ಮತ್ತೆ ಮತ್ತೆ ಕಣ್ಣಿಟ್ಟು ಅದೇ ಅಕ್ಷರಗಳನ್ನು ನೋಡುತ್ತಾಳೆ.ಇಷ್ಟು ಕಾಲ ಈ ಸಾಲುಗಳನ್ನು ತಾನು ಓದೇ ಇಲ್ಲವಲ್ಲ..
ಲವ್ ಮತ್ತು ಕಂಪಾಶನ್ ನಮ್ಮದು ಅಂತ ನಮಗಾಗಬೇಕಾದರೆ ಅದು ಸಂಪೂರ್ಣವಾಗಿ ನಮ್ಮಲ್ಲಿ ಸಹಜವಾಗಿ ಹುಟ್ಟಿಕೊಂಡಿರಬೇಕು ಕಣೇ ಎಂದಿದ್ದ ರಾಜೇಶ.ಶುರುವಲ್ಲಿ ಇದೆಲ್ಲಾ ಒಂಥರಾ ಆರ್‍ಟಿಫಿಶಿಯಲ್ ಮತ್ತು ಫ್ಯಾಬ್ರಿಕೇಟೆಡ್ ಅಟಿಟ್ಯೂಡ್ ಆಗಿರುತ್ತದೆ.ಅಷ್ಟಕ್ಕೂ this love is partial because it is selective, and it comes from our attachment ಕಣೇ.ನಾನು ನನ್ನ ಹೆಂಡತಿಯ ಜೊತೆಗೂ ಇದನ್ನೇ ಹೇಳುತ್ತಿದ್ದೆ.ಆದರೆ ಅವಳು ಒಪ್ಪುತ್ತಾನೇ ಇರಲಿಲ್ಲ.ನಿನ್ನ  ಮೌನ ನೋಡಿದರೆ ನೀನು ಅರ್ಧ ಒಪ್ಪಿದ ಹಾಗೇ ಕಾಣಿಸುತ್ತಿದೆ ಅಲ್ಲವೇನೇ?

ರಾಜೇಶ ಮಾತನಾಡುತ್ತಿದ್ದರೆ ಅವನ ಕಣ್ಣುಗಳಲ್ಲೇ ಹುಗಿದುಹೋಗಿದ್ದೆ..ಹ್ಮ್..

ಸಾಧನಾ ಆ ಪುಸ್ತಕವನ್ನು ಅರಳಿಸುತ್ತಾಳೆ.
ನಡುನಡುವಿನ ಪುಟಗಳನ್ನು ಮೂಸುತ್ತಾಳೆ.ಅಲ್ಲಿ ಆ ಕಾಗದದ ಘಮ ಅವಳನ್ನು ಸರ್ರನೇ ಎಳೆದೊಯ್ಯುತ್ತಿದ್ದಂತೆ ಭಾಸವಾಗುತ್ತದೆ.
ಕೊನೆಗೂ ಈ ಪ್ರೀತಿ ಎನ್ನೋದು ನಮ್ಮನ್ನು ಎನ್‌ಲೈಟ್‌ನ್ಮೆಂಟ್‌ನತ್ತ ಒಪ್ಪಿಸಿಕೊಳ್ಳುತ್ತದೆ.ಅದು ನಮಗೆ ಅರ್ಥವಾಗಬೇಕು ಅಷ್ಟೇ.ಆದರೆ ದುರದೃಷ್ಟ ಎಂದರೆ ನಮಗೆ ಅರ್ಥವಾಗುವ ವೇಳೆಗೆ ಆ ಪ್ರೀತಿ ನಮ್ಮನ್ನು ಬಿಟ್ಟೇ ಹೋಗಿರುತ್ತದೆ.
ಸಾಧನಾ ಪುಸ್ತಕದೊಳಗೆ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಾಳೆ.
ಈ ವೇಳೆ ಈ ಪುಟ್ಟ ಮನೆಯಲ್ಲಿ ಒಂದೇ ಒಂದು ಸಾರೆ ನನ್ನ ಜೊತೆ ರಾಜೇಶ ಇರಬೇಕಿತ್ತು ಎಂದು ಸಾಧನಾಳಿಗೆ ಅನಿಸಿತು ಎಂದು ಕಥೆಗಾರ ಹೇಳುತ್ತಾ ಕಥೆ ಮುಗಿಸುತ್ತಾನೆ.ಅದಕ್ಕೂ ಮುನ್ನ ಕಥೆಗಾರನೇ ಸಾಧನಾಳಿಗೆ ಕಳುಹಿಸಬೇಕು ಎಂದಿದ್ದ ಸಂದೇಶ ಇಂತಿದೆ,
ನಿಜಕ್ಕೂ ಅದು ನಿನ್ನದೇ ಆಗಿರಬೇಕು ಅಂದರೆ ಅದನ್ನು ನೀನು ನಿನ್ನಲ್ಲೇ ಬಚ್ಚಿಟ್ಟುಕೊಳ್ಳಬೇಕು.ಇನ್ನೊಬ್ಬರಿಗೆ ಕೊಟ್ಟರೆ,ಅದು ಆಮೇಲೆ ನಿನ್ನದಾಗಿರುವುದಾದರೂ ಹೇಗೆ?

20161110

ಎಕ್ಸಿಟ್ಹಗ್ ಯೂ ಅಂದಳು.
ಆಮೇಲೆ ಎಕ್ಸಿಟ್.
ಶಿಬಿ ಮತ್ತೆ ಮತ್ತೆ ಕಾಯುತ್ತಾ ಕೂತಿದ್ದ.ಅವಳು ತೆರೆ ಮೇಲೆ ಬರುವ ಯಾವ ಸೂಚನೆಗಳೂ ಇರಲಿಲ್ಲ.ಹಗ್ ಯೂ ಅಂದರೆ ಅಷ್ಟೇನಾ? ಒಂದು ಸಾರಿ ಒಂದೇ ಸಾರಿ ಒಮ್ಮೆ ಒಮ್ಮೆ ಮಾತ್ರಾ ಕಿಸ್ ಯೂ ಅಂತಾನೂ ಹೇಳಬೇಕಿತ್ತು.
ಶಿಬಿಗೆ ಗೊತ್ತಿತ್ತು,ಈ ಸಂಬಂಧ ಒಂದು ತೆರೆಯ ಮೇಲೆ ಮಾತ್ರಾ ಬಂದು ಮರೆಯಾಗುವ ಪಾಲಿನದ್ದು.ಇದರಲ್ಲಿ ಇರುವುದು ಕಾಲ್ಪನಿಕ ಅನುಬಂಧ ಮಾತ್ರಾ.ಶರ್ಮಿಳೆ ಮತ್ತೆ ಬಂದರೂ ಹಗ್ ಮಾಡುವುದಾಗಲಿ,ಕಿಸ್ ಮಾಡುವುದಾಗಲಿ ಹಾಳಾಗಿ ಹೋಗಲಿ,ಆ ಮಾತುಗಳನ್ನಾದರೂ ತೊದಲಲು ತನ್ನಲ್ಲಿ ಯಾವ ಶಕ್ತಿಯೂ ಉಳಿದಿಲ್ಲ ಎಂಬುದು.
ಶರ್ಮಿಳೆ ಮತ್ತೆ ತೆರೆಯ ಮೇಲೆ ಬಂದಳು.ಅವಳಿಗಾಗಿಯೇ ಕಾಯುತಿದ್ದ ಶಿಬಿ ಹಾಯ್ ಎಂದರೆ ಅವಳಿಂದ ಉತ್ತರವೇ ಇಲ್ಲದೇ ಅವಳ ನಿರ್ಗಮನ.
ಶರ್ಮಿಳೆ ಅವನವಳಲ್ಲ.ಅವನೂ ಶರ್ಮಿಳೆಯವನಲ್ಲ.ಆದರೂ ಏನೋ ಒಂದು ಅವನೂ ಅವಳೂ ಅನಿಸುವ ಭಾವ.ಎಲ್ಲಿ ಹುಟ್ಟಿತು ಯಾಕೆ ಹುಟ್ಟಿತು ಇಬ್ಬರಿಗೂ ಗೊತ್ತಿಲ್ಲ.ಆದರೆ ಹುಟ್ಟಿದೆ.ಇದು ಜಾಗತೀಕರಣದ ಫಲವಾದ ಗರ್ಭ ಎಂದಿದ್ದ ಶಿಬಿ.ಶರ್ಮಿಳೆ ಅದಕ್ಕೆ ಬಿದ್ದೂ ಬಿದ್ದೂ ನಕ್ಕಿದ್ದಳು.ಹಾಗೊಂದು ಇರುತ್ತದಾ ಎಂದು ಕೇಳಿದರೆ ಶಿಬಿ ಹೇಗೆ ಜಾಗತೀಕರಣ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿ ಹಾಗೇ ಬೀರುವುದಕ್ಕೆ ಮಾಧ್ಯಮಗಳನ್ನು ಆವರಿಸಿಕೊಳ್ಳುತ್ತದೆ ಮತ್ತು ಆ ಮೂಲಕ ಹೇಗೆ ಸಂಬಂಧಗಳನ್ನು ಎಡತಾಕಿಸುತ್ತದೆ ಎಂದು ವಿವರಿಸಿದ್ದ.
ಈ ಹೊತ್ತಿನಲ್ಲಿ ಒಬ್ಬಳೇ ದಿವಾನ್‌ಮೇಲೆ ಮಕಾಡೆ ಮಲಗಿದ್ದ ಶರ್ಮಿಳೆಗೆ ಶಿಬಿಯ ಭಾಷಣ ಮತ್ತೆ ನೆನಪಾಗುತ್ತಿದೆ.
ಒಂದು ಗ್ಲೋಬಲೈಸೇಶನ್ ಹೀಗೂ ಒಂದು ಸಂಬಂಧಗಳನ್ನು ತಾಕಿಸಿ,ಸೋಕಿಸಿ ಇನ್ನೆಲ್ಲೋ ನಿಂತು ನೋಡುತ್ತದಾ ಎಂದು ಆಕೆಗೆ ಅಚ್ಚರಿಯಾಗುತ್ತದೆ.ಹಾಗಾದರೆ ಮೊನ್ನೆ ಮೊನ್ನೆ ಬಂದು ಕೂತ ಗ್ಲೋಬಲೈಸೇಶನ್‌ಗೂ ಮೊದಲು ಇದ್ದಿರಬಹುದಾದ ಇಂಥ ಅನೇಕ ಸಂಬಂಧಗಳಿಗೆ ಏನಂತ ಕರೀತಾರೆ ಎಂದು ಶಿಬಿಗೆ ವಾಟ್ಸ್‌ಪ್ ಮಾಡಿದರೆ ಆತ ಒಂದೇ ಶಬ್ದದ ಉತ್ತರ ಕಳುಹಿಸಿದ್ದ,ಹಾದರ.
ಥೋ ನಿನ್ನ.
ಏನು ಹೇಳಬೇಕಾಗಿದೆ ಈ ಅಂಡೆಪಿರ್ಕಿಗೆ?
ಶರ್ಮಿಳೆ ಅನಾಮತ್ತು ಅವನನ್ನು ತೆಕ್ಕೆಯೊಳಗೆ ಸೆಳೆದುಕೊಂಡು ಕೇಳಿದ್ದು ಅದನ್ನೇ.
ಏನೋ..ಈ ನಮ್ಮ ಸಂಬಂಧಕ್ಕೆ ಏನಂತ ಕರೀತಾರೋ?
ಪ್ರೀತಿ ಎಂದಿದ್ದ ಶಿಬಿ.ಅದೂ ಒಂದೇ ಶಬ್ದದ ಉತ್ತರ.
ಶರ್ಮಿಳೆ ನಡುಗುತ್ತಾಳೆ.ಅವಳ ಕಣ್ಣು ನೆಲಕ್ಕೆ ನೆಗೆಯುತ್ತಿವೆ.ಅವಳ ಬಿಳಿಯ ತೊಡೆಗಳ ಮೇಲೆ ಶಿಬಿಯ ಬೆರಳುಗಳು ಅಗತ್ಯಕ್ಕಿಂತ ಹೆಚ್ಚು ಒತ್ತುತ್ತಿವೆ.ಶಿಬಿ ತನ್ನ ತೊಡೆಗಳ ಮೇಲೆ ಬೆರಳಿನ ತುದಿಯಲ್ಲಿ ಗೀರುತಿದ್ದರೆ ರಕ್ತ ಕೆಂಪಾಗಿ ನರಗಳಲ್ಲಿ ಹರಿದಾಡಿ ತೊಡೆಗಳನ್ನು ಆಗೊಮ್ಮೆ ಕೆಂಪು ಕೆಂಪಾಗಿ ಮಾಡುತ್ತಿದೆ.
ಶರ್ಮಿಳೆ ಅತ್ತಿತ್ತ ನೋಡಿ ಶಾರ್‍ಟ್ಸ್ ಸರಿಸಿ ನೋಡುತ್ತಾಳೆ,ತೊಡೆಯಲ್ಲಿ ಅವನು ಮೂಡಿಸಿದ ಕಪ್ಪಚ್ಚು.
ಸರಕ್ಕೆಂದು ಒತ್ತಿ ಬಂದ ನಗು.
ಇಂವನ ಕರೆ,  ಸಂಜೆ ಬೇಗ ಬರಲಾಗುವುದಿಲ್ಲ.ಏನೋ ಬೇರೆ ಬೇರೆ ಕೆಲಸ.ಎಜಿಎಂ ಇನ್ನೂ ಠಿಕಾಣಿ ಹೂಡಿದೆ.ರಾತ್ರಿ ಫ್ಲೈಟ್‌ಗೆ ಏರ್‌ಪೋರ್ಟ್ ತನಕ ಅಟ್ಟಿಸಿ ಬರಬೇಕು
ಶರ್ಮಿಳೆ ಆಗಲೇ ಸಿದ್ಧಪಡಿಸುತ್ತಾಳೆ ಪ್ಲಾನ್,  ಮಗುವನ್ನು  ಪ್ಲೇಹೋಂನಲ್ಲಿ ಇಟ್ಟು ಬರುತ್ತೇನೆ,ಲಾಂಗ್ ಡ್ರೈವ್ ಹೋಗೋಣ.
ಉತ್ತರ ಬರುವುದಿಲ್ಲ.
ಟಿಪ್ಪಣಿ :ಶಿಬಿ ಮತ್ತು ಶರ್ಮಿಳೆ ಇಬ್ಬರೂ ಎಂದೆಂದೂ ಪರಿಚಿತರೇ ಅಲ್ಲ.ಅದು ಯಾವುದೋ ಒಂದು ಸಂದರ್ಭದಲ್ಲಿ ಅವರು ಭೇಟಿಯಾದರು,ಆ ಮೂಲಕ ಅವರಿಬ್ಬರೂ ಸ್ನೇಹಿತರಾದರು,ನಂತರ ಅವರಿಬ್ಬರೂ ಪ್ರೇಮಿಗಳಾದರು ಎಂದು ಕಥೆಗಾರ ಹೇಳಬಯಸಿದರೆ ಓದುಗಬಂಧು ಆಕಳಿಸಬಹುದು.ಹಾಗಾಗಿ ಅವರಿಬ್ಬರೂ ಹೇಗೆ ಪ್ರೇಮಿಗಳಾದರು ಎಂಬುದನ್ನು ಓದುಗನಿಗೇ ಒಪ್ಪಿಸಿ ಬಿಡಲೇ ಎಂದು ಕಥೆಗಾರನಿಗೆ ಅನೇಕ ಬಾರಿ ಅನಿಸಿದೆ.ಇದಕ್ಕೆ ಕಾರಣಗಳೂ ಇಲ್ಲದಿಲ್ಲ.ಏಕೆಂದರೆ ಕಥೆಗಾರನ ಕೆಲಸ ಕಥೆಕಟ್ಟುವುದು ಮಾತ್ರವೇ ಆಗಿರುವುದರಿಂದ ಆತ ಅದಕ್ಕಿಂತ ಹೆಚ್ಚಿನ ವಿವರಗಳನ್ನು ಕಥೆಯೊಳಗೆ ತಂದಿಟ್ಟರೆ ಓದುಗನಿಗೆ ಯಾವ ಕೆಲಸವೂ ಇರುವುದಿಲ್ಲ.ಕಥೆಗಾರನ ಜೊತೆ ಜೊತೆಗೆ ಓದುಗ ಕೂಡಾ ಬರಬೇಕು ಎಂಬುದು ಕಥೆಗಾರನ ಅಪೇಕ್ಷೆ.ಅದಕ್ಕಾಗಿ ಆತ ಶಿಬಿ ಅಥವಾ ಶರ್ಮಿಳೆಯನ್ನೂ ಓದುಗರ ಜೊತೆಗೇ ಕರೆಯುತ್ತಿದ್ದಾನೆ.

ಕಥೆಯ ಮುಂದುವರಿದ ಪ್ರಯೋಗ:
ಈ ಕ್ಷೇತ್ರದೊಳಗೆ ಬೀಜ ಸಿದ್ಧ ಮಾಡಲು ಕಾರಣವಾದದ್ದು ಅದೇ ಜಾಗತೀಕರಣವಾ ಅಂತ ಶಿಬಿಯನ್ನು ಇನ್ನೂ ಶರ್ಮಿಳೆ ಕೇಳಿಲ್ಲ.ಶಿಬಿ ಹೇಳಲೂ ಇಲ್ಲ.ಲಿವ್ ಇನ್ ರಿಲೇಶನ್‌ನಲ್ಲಿ ಆಯಿತೇನು ಈ ಘಟಕ? ಅಥವಾ ಇದಕ್ಕೂ ಪ್ರೇಮಫಲ ಎಂದು ಹೆಸರಿಡುವುದಾ?
ಅವಳ ಇಂವ ಈಗ ಈ ಹೊತ್ತಲ್ಲಿ ನೆನಪಿನ ಚಿಪ್ಪಿನಲ್ಲೂ ಇಲ್ಲ.
ಪ್ಲೇಹೋಂನಲ್ಲಿದ್ದ ಮಗು ಬರುವ ಮುನ್ನವೇ ಹೊರಟಿದ್ದಾಳೆ,ಎಲ್ಲವೂ ನೆನೆದಂತೆ ನಡೆಸಲೇಬೇಕಾಗಿದೆ.
ಮಗು ಬಂದಾಗ ಮನೆಯೊಳಗಿದ್ದ ಆಂಟಿ ಏನು ಹೇಳಿರಬಹುದು?
ಮಗುವಿನ ನೆನಪು ಶರ್ಮಿಳೆಗೆ ಕ್ಷಣಕಾಲ ಒತ್ತರಿಸಿ ಬರುತ್ತಿದೆ.ಇಷ್ಟಕ್ಕೂ ಮಗು ಏನು ತನ್ನದೇ  ಏನು ಅಲ್ಲವಲ್ಲ ಅಂದುಕೊಳ್ಳಲಾಗದೇ ಒದ್ದಾಡುತ್ತಾಳೆ.
ಇಂವ ಕೆಟ್ಟ ಮನುಷ್ಯನೇನಲ್ಲ.ಆದರೆ ಪ್ರೀತಿಸುವುದು ಮತ್ತು ಫಲಿಸುವುದು ಎಂದರೇನೆಂದು ಇಂವನಿಗೆ ಗೊತ್ತೇ ಇಲ್ಲ.
ಯಾರು ಹೇಳಿಕೊಡಬೇಕಿತ್ತು ಆ ಪಾಠವನ್ನು?
ಶರ್ಮಿಳೆ ತನ್ನೊಳಗೆ ಕೇಳಿಕೊಳ್ಳುತ್ತಾಳೆ.
ಪ್ರಕೃತಿಯೇ ತಾನೇ.ಹೌದಾದರೆ ತನಗೆ ಪ್ರೀತಿಸಲು,ಮಾಗಲು,ಫಲಿಸಲು ಹೇಳಿಕೊಟ್ಟ ಪ್ರಕೃತಿ ಇಂವನಿಗೇಕೆ ಆ ಪಾಠ ಕಲಿಸಲಿಲ್ಲ.ಅಥವಾ ಇಂವ ಕಲಿಯಲಿಲ್ಲವಾ?
ಶಿಬಿಯನ್ನು ಕೇಳಬೇಕು.ಹಾಗೇ ಕೇಳಿದರೆ ಶಿಬಿ ಮತ್ತೆ ಜಾಗತೀಕರಣ ಅಂತಾನೆ,ಆ ಕಾರಣಕ್ಕೆ ಕಲಿತ ಪಾಠವನ್ನೆಲ್ಲಾ ಮರೆಯುತ್ತೇವೆ,ಏಕೆಂದರೆ ಮರೆಯಲೇ ಬೇಕು ಎನ್ನುವಂತೆ ಅದು ಮಾಡುತ್ತದೆ ಎನ್ನಬಹುದು.ಫಟಿಂಗ.
ನಾನು ಒಪ್ಪಲ್ಲ.
ಹಳ್ಳಿಯಲ್ಲಿ ನೆರೆ ಮನೆಯ ಮಾಲಿಂಗ ಏನು ಸಖತ್ ಹಾಟ್ ಮಗಾ ಇದ್ದ.ಅವನು ಈಗಲೂ ರಸಿಕ ಶಿಖಾಮಣಿಯೇ.ಮಾಲಿಂಗ ಈಗ ಸ್ವೀಡನ್‌ನಲ್ಲಿದ್ದಾನೆ.ವಯಸ್ಸು ಏನಿಲ್ಲ ಎಂದರೂ ಐವತ್ತಾದರೂ ಆದೀತು.ಆರು ಮಂದಿಯ ಜೊತೆ ಮಲಗಿದ್ದಾನೆ ಎಂದು ನೆರೆಯ ಹೆಣ್ಮಕ್ಕಳು ಆಗಾಗ್ಗೆ ಅಲ್ಲಲ್ಲಿ ಹೇಳುವುದನ್ನು ಬೇಕಾದಷ್ಟು ಬಾರಿ ಕೇಳಿಕೊಂಡಿಲ್ಲವಾ?ಅವನ ಸಂಸಾರ ಎಷ್ಟೊಂದು ಸುಖವಾಗಿದೆ.
ಉಫ್....
ಯಾರ್‍ಯಾರ ಜೊತೆ ಮಲಗಿದ ಎಂದರೆ ಅವನು ಸುಖವಾಗಿದ್ದಾನೆ ಎಂದು ಅರ್ಥವಾ ಎಂದು ಶಿಬಿ ಹಾಕಿದ ಪ್ರಶ್ನೆಗೆ ಶರ್ಮಿಳೆ ಎಕ್ಕುಟ್ಟಿ ಹೋದ ಹಾಗೇ ನಿಂತುಬಿಟ್ಟಳು.
ಏನಂದಿದ್ದ,ಇದನ್ನೇ ಸ್ತ್ರೀಲಿಂಗದಲ್ಲಿ ಬರೆದುಬಿಟ್ಟರೆ ನೇರವಾಗಿ ನನ್ನ ಬಳಿಗೂ ಬಂದು ನಿಲ್ಲುತ್ತಾ ಪ್ರಶ್ನೆ.
ಕೇಳಿದರೆ ನೀನು ನನ್ನ ಜೀವನಾಡಿ.ನಮ್ಮೊಳಗೆ ಎಲ್ಲಿ ಬಂತು ಅಂಥ ಹೇವರಿಕೆ ಎಂದುಬಿಟ್ಟ.
ಮೊದಲ ಬಾರಿ ಶಿಬಿ ಅಪ್ಪಿಕೊಂಡಾಗ ಅನಿಸಿದ್ದು ಓಹ್ ಹೊಸಬ ಅಂತ.
ಹೇಗಿದ್ದೂ ಇಂವನ ಜೊತೆ ಆರಂಭದಲ್ಲಿ ಅಪ್ಪಿ ಮುದ್ದಾಡಿದ ವೈಖರಿಗೆ ಶಿಬಿ ಬರುತ್ತಿಲ್ಲ ಎಂದು ಆ ಕೆರಳಿದ ಕಾಮನೆಗಳ ದಟ್ಟ ಅನುಭವದ ನಡುವೆಯೂ ಹಾಗೊಂದು  ಫೀಲಿಂಗ್ ಬಂದು ಹೋಗಿತ್ತು.
ವರ್ಜಿನ್ ಹುಡುಗ.
ಇಂವನ ಜೊತೆ ಮೊದಲ ಸಲ ನಿಡಿದುಕೊಂಡಾಗ ನಾವಿಬ್ಬರೂ ವರ್ಜಿನ್‌ಗಳೇ ಆಗಿದ್ದೆವು.ಆದರೆ ಆ ಪಟ್ಟುಗಳ ಪಾಠ ಇಂವನಿಗೆ ಆಗೇ ಇರಲಿಲ್ಲ ಎಂದನಿಸಿತ್ತು.ಪ್ರಕೃತಿ ಕಲಿಸಬೇಕಿತ್ತು ತಾನೇ ಎಂದುಕೊಂಡಿದ್ದೆ.
ಮದುವೆ ಮರುವಾರಿ ಬಂದು ಹೋಗಿ ಆದಮೇಲೆ ಮಾವ ಅನ್ನೋ ಜೀವ ನನ್ನ ಮಗನಿಗೆ ಏನೇನೂ ಅನುಭವ ಇಲ್ಲಮ್ಮಾ,ಎಲ್ಲಾ ನಾನೇ ನಿಂತು ಹೇಳಿ ಮಾಡಿಸುವ ಕಾರಣ ಆಗಿ ಹೋಗುತ್ತೆ.ಅಮ್ಮನಿಲ್ಲದೇ ಬೆಳೆದವನು ನೋಡು,ಮುದ್ದಾಗಿ ನಾನೇ ಬೆಳೆಸಿ ನಿಲ್ಲಿಸಿದೆ ಎಂದು ಹೇಳಿದ್ದು ಬರೀ ವ್ಯವಹಾರದ ಮಾತಿಗೆ ಮಾತ್ರಾ ಆಗಿರಲಿಲ್ಲವೇನೋ ಎಂದು ಆಮೇಲೆ ಅನಿಸಿತ್ತು.
ಶರ್ಮಿಳೆ ನಕ್ಕಳು.
ಹಾಗಲ್ಲಪ್ಪಾ ನಾನು ಹೇಳುತ್ತಿರುವುದು ನಿನಗೆ ಅರ್ಥವಾಗುತ್ತಿಲ್ಲ.ನೀನು ಎಷ್ಟಾದರೂ ಅಪ್ಪಟ ಅಪರಂಜಿ.ನಾನೇ ತಾನೇ ನಿನ್ನ ಸೆರೆ ಬಿಡಿಸಿದವಳು ಎಂದು ಕಿಂಡಲ್ ಮಾಡತೊಡಗಿದರೆ ಶಿಬಿ ನೋ ವೇ... ಬಿಟ್ಟಾಕು ಎಂದು ಕಣ್ಮರೆಯಾಗುತ್ತಿದ್ದ.
ಶಿಬಿಗೆ ಯಾವತ್ತಾದರೂ ಅನಿಸಲೂಬಹುದಾ ಈ ಶರ್ಮಿಳೆ ತನ್ನನ್ನೂ ಬಿಟ್ಟು ಹೋಗಬಹುದು.ಏನಿತ್ತು ಅಂತ ಬಂದಳು?ಇಷ್ಟಕ್ಕೂ ಅವಳ ಇಂವನಿಗೆ ತಾನು ಮೋಸ ಮಾಡಿದಂತಾಗಿ ಹೋಯಿತಾ?
ಹೇಳೋ ಎಂದು ಕುಲುಕಿದಳು, ಮುದ್ದಾಗಿ ಅಪ್ಪಿಕೊಂಡ.ಒಂದು ಬಾರಿಯೂ ಇಂವ ಈ ರೀತಿ ಅಪ್ಪಿಕೊಂಡವನಲ್ಲ.ತಿಂಗಳ ಮಧ್ಯದಲ್ಲಿ ಅದೇನೋ ಓವಿಲೇಶನ್ ಪ್ರಕ್ರಿಯೆಯಲ್ಲಿ ಕಿಬ್ಬೊಟ್ಟೆ ಕುಸುಗುಟ್ಟಿ ಇಡೀ ತೊಡೆಸಂದಿನಿಂದ ಕಾಲುಗಳ ತನಕ ಹಠಾತ್ತನೇ ಅಪ್ಪಳಿಸುತ್ತಿದ್ದ ಸೆಳವಿಗೆ ಬೋರಲಾಗಿ ಬಿದ್ದು ಕುಯ್ಯಗುಡುತ್ತಿದ್ದರೆ ಒಂದೇ ಒಂದು ಬಾರಿ ಬಂದು ಕೇಳಿದ್ದನಾ ಇಂವ.
ಶಿಬಿ ನಾಳೆ ಎಷ್ಟೊತ್ತಿಗೆ ಸಿಡಿತ ಬರಬಹುದು ಎಂದು ಕೇಳಿ ವಕ್ರ ನಗೆ ಮೂಡಿಸುತ್ತಿದ್ದ.ಅವನ ದೊರಗು ಕೈಗಳಿಂದ ಉಜ್ಜಿ ಉಜ್ಜಿ ನೀವಾಳಿಸಿಬಿಡುತ್ತಿದ್ದ.
ಆಹಾ ಆಪ್ತತೆ ಇಲ್ಲೇ ಹುಟ್ಟಿ ಬರುತ್ತಿದೆ.
ಶರ್ಮಿಳೆ ಲಾಗ್‌ಔಟ್ ಆಗುತ್ತಾಳೆ.ಶಿಬಿ ಹಾಸಿಗೆಗೆ ಜಾರುತ್ತಾನೆ.
ನಾಳೆ ಮಂಗಳೂರಿನ ಟೇಬಲ್‌ಟಾಪ್ ಏರ್‌ಪೋರ್ಟ್‌ನಲ್ಲಿ ಇಳಿದು ಬಂದು ನಿಲ್ಲುವ ಶಿಬಿಯನ್ನು ಕಚ್ಚಿಯೇ ಕೇಳುತ್ತೇನೆ,ಸಾಕು ಇಷ್ಟು,ನನ್ನನ್ನು ಬೀಳ್ಕೊಡು.

ಶರ್ಮಿಳೆ ಹೇಳುತ್ತಿದ್ದಳು,  ಬೇಜಾರು ಮಾಡ್ಕೋಬಾರದು ನೀನು. ಎಷ್ಟೊಂದು ರೀತಿಯಲ್ಲಿ ಹೀಗೆ ಮಾಡಲೇ ಬೇಡವೇ ಅಂತ ಯೋಚಿಸಿದ್ದೆ.ಕೊನೆಗೂ ಬೀಳ್ಕೊಳ್ಳುತ್ತಿದ್ದೇನೆ,ಪ್ರೀತಿಯಿಂದ ಕಳುಹಿಸಿಕೊಡೋ..
ಎಲ್ಲಿಂದ ಹೊರಡುವುದು ಮಾತು? ಅದೇ ಗಂಟಲಿನಿಂದ ಭಾವನೆಗಳನ್ನು ಕಟ್ಟಿಕೊಂಡು ಮಾತು ನಾಲಗೆ ಮೇಲೆ ಹೊರಳಬೇಕಾಗಿದೆ ತಾನೇ..ಸಾಧ್ಯವೇ ಇಲ್ಲ. ಗಂಟಲು ತುಂಬಿಕೊಂಡಿದೆ. ಭಾವನೆ ಆಳದಲ್ಲಿ ಹೂತುಹೋಗಿದೆ. ಹೃದಯವೇ ಕರಗಿ ಹಾದಿ ಮುಚ್ಚಿದಂತಿದೆ.ನಾಲಗೆ ಕಟ್ಟಿಕೊಂಡಿದೆ.
ಉಬ್ಬಸದ ಅನುಭವ.
ನಿನ್ನನ್ನು ಪ್ರೀತಿಸಿಬಿಟ್ಟೆ.. ಏನು ಮಾಡುತ್ತಿಯೋ ನನಗೆ ಗೊತ್ತಿಲ್ಲ.ಸಾಕು ಈ ಸಂಬಂಧ ಅಂತನಿಸುತ್ತಿದೆ,ಬರುವ ಬೆಳಗಿನ ನಿರೀಕ್ಷೆಯಲ್ಲಿ ಕಳೆದುಹೋಗುತ್ತೇನೆ.
ಆ ಬೆಳಗು ಜೀವನದಲ್ಲಿ ಹೀಗೊಂದು ಸೃಷ್ಟಿಯನ್ನು ತಂದೊಪ್ಪಿಸೀತು ಎಂದು ಎಂದೂ ಎಂದೆಂದೂ ನೆನೆಸಿರಲಿಲ್ಲ ನಾನು.
ನಾವು ತಪ್ಪು ಮಾಡಿದ್ದೇವೆ ಅಂತ ನನಗೆ ಈಗಲೂ ಅನಿಸುತ್ತಿಲ್ಲ..
ನಮ್ಮ ಮನಸ್ಸಿಗೆ ಹಿತ ಅಂತ ಆಗದಿದ್ದರೆ ಅದು ತಪ್ಪು ಅಂತ ಆಗಿಬಿಡುತ್ತದೆ.
ನನಗೆ ಈ ಕ್ಷಣವೂ ಮಾಡಿದ್ದೆಲ್ಲಾ ಹಿತವಾಗಿಯೇ ಇದೆ.
ಮುಠ್ಠಾಳ..ಈಗ ಹಾಯೆನಿಸುತ್ತದೆ.ಹಗ್..ಬರೀ ಹಗ್..ಮತ್ತು ಅದೇ ಹಗ್..
ಅದರಲ್ಲಿ ಅಷ್ಟೊಂದು ಆಪ್ತ ಎನಿಸಿಬಿಟ್ಟೆ.ಅಷ್ಟು ಸಾಕು.
ನಾನು ಹೊರಟೆ.
ಶಿಬಿಗೆ ಕತ್ತನ್ನು ಹಿಡಿದು ಯಾರೋ ಬರಸೆಳೆದಂತೆ ಅನಿಸುತ್ತಿತ್ತು. ಒಂದೇ ಒಂದು ಬಾರಿ ಹಗ್ ಮಾಡು..ಎಂದ ಶಿಬಿ.
ಯಾರನ್ನು ಹಗ್ ಮಾಡಲಿ,ನೀನೇ ಇಲ್ಲದ ಮೇಲೆ..ಎಂದರೆ,
ಶರ್ಮಿಳೇ ನೀನು ನನಗೆ ಕಾಣಿಸ್ತಾನೇ ಇಲ್ಲ..ಎನ್ನುತ್ತಿದ್ದಂತೆ ಕಣ್ಣು ತೋಯ್ದಿತ್ತು..
ಅವನಿಗೆ ಅವಳು ಕಾಣಿಸುತ್ತಿರಲಿಲ್ಲ...
ಆದರೆ ಅಷ್ಟರಲ್ಲೇ ಅದರ ವೇಗ ಹೆಚ್ಚತೊಡಗಿತು.ಇದು ಬರಸೆಳೆಯುವುದಲ್ಲ ಎಂಬುದು ಶಿಬಿಗೆ ಗೊತ್ತಾಗುತ್ತಲೇ ಶರ್ಮಿಳೆ ಮಾತು ನಿಲ್ಲಿಸಿದಳು.
ಪಾಪ ಜಾಗತೀಕರಣಕ್ಕೆ ಬಲಿಕೊಟ್ಟೆ ಎಂದು ಹೇಳಿದವಳೇ ಕಾರಿನಿಂದ ಇಳಿದು ಅಟೋ ಎಂದಳು.
ಶರ್ಮಿಳೆ ಅಟೋ ಹತ್ತಿ ಕಣ್ಮರೆಯಾಗುತ್ತಿದ್ದಂತೆ ಶಿಬಿಯ ನಿಶ್ಚಲ ದೇಹದಲ್ಲಿ ನೇತಾಡುತ್ತಿದ್ದ ಚಿನ್ನದ ಸರ ಹಾಗೂ  ಜೊತೆಗೆ ತೂಗುತ್ತಿದ್ದ ಲಾಕೆಟ್ಟನ್ನೂ ಸೇರಿಸಿದರೆ ಆಜೂಬಾಜು ಆರೂವರೆ ಪವನ್ ಆಗುತ್ತದೆ ಎಂದು  ಅವರಿಬ್ಬರೂ ಪಿಸಪಿಸ ಮಾತನಾಡಿಕೊಂಡರು.
ಅವರಲ್ಲೊಬ್ಬ ಹೇಳಿದ ಕ್ಯಾ ಬುರೀ ಲಡ್ಕೀ ರೇ..
ಗರ್ಭವತಿ..ಪಾಗ್ಲಿ ಅಂದ ಮತ್ತೊಬ್ಬ.