20161006

ಮಿಸ್ಸಿಂಗ್ ಸ್ಟೋರಿಘಟ್ಟದ ಮೇಲೆ ಏಲಕ್ಕಿ ಮಲೆಗೆ ಹೋಗುವುದಾಗಿ ಹೇಳಿ ಹೋದ ಸಣ್ಣಜ್ಜ ಕಾಣೆಯಾಗಿ ಸರೀ ಐವತ್ತು ವರ್ಷ ಆಯಿತು.
ಗ್ರೀನ್ ಕೆಫೆಯಲ್ಲಿ ಹಂಡ್ರಡ್ ಪೈಪರ್‍ಸ್ ನ ಮೊದಲ ಕಂತು ಮುಗಿಸಿದ ಹೊತ್ತಿಗೇ ಸಣ್ಣಜ್ಜನ ನೆನಪಾದುದು ಶಂಭುವಿಗೆ ಅಚ್ಚರಿ ಹುಟ್ಟಿಸಿತ್ತು.
ಈ ಸಣ್ಣಜ್ಜ ಈಗ ಏಕೆ ನನ್ನೊಳಗೆ ಹುಟ್ಟುತ್ತಿದ್ದಾನೆ,ಇವನೇಕೆ ನನ್ನಲ್ಲೇ ಅವತರಿಸುತ್ತಿದ್ದಾನೆ?
ಶಂಭು ಹೀಗೆ ಅಚ್ಚರಿಪಡುತ್ತಾ ಸಿಗರೇಟ್ ಹಚ್ಚಿ ಒಂದು ಧಂ ಕೂಡಾ ಬಿಟ್ಟಿಲ್ಲ, ಬೇರರ್ ಬಂದು ಸ್ಸಾರಿ ಸರ್ ಸ್ಮೋಕಿಂಗ್ ಅಲ್ಲಿ ಎಂದು ಯಾವುದೋ ಹಡಬ್ಬೇ ಕ್ರಿಕೆಟ್ ಮ್ಯಾಚ್ ತೋರಿಸುತ್ತಿದ್ದ ಆ ಟೀವಿಯತ್ತ ಕೈಮಾಡುತ್ತಾನೆ.
ಶಂಭು ಜೋರಾಗಿ ನಗುತ್ತಾನೆ.
ಎಲ್ಲಪ್ಪಾ, ಆ ಮ್ಯಾಚ್ ನಡೆಯೋ ಪ್ಲೇಸಲ್ಲಾ? ಅಲ್ಲಿಗೆ ನಾನು ಈಗ ಹೊರಟರೂ ಅಲ್ಲಿಗೆ ತಲುಪೋ ತನಕ ಈ ಸಿಗರೇಟ್ ಉಳಿಯುತ್ತಾ?
ಹೆಹೆಹೆಹೆಹೆ
ಜೋಕ್ ಜೋಕ್
ಬೇರರ್ ನಗೋದಿಲ್ಲ.
ಅವನು ಹಾಗೇ ನಿಂತೇ ಇದ್ದಾನೆ.
ಪ್ಲೀಸ್ ಸರ್.
ಹೋಗಲ್ಲ ಕಣಯ್ಯಾ.ಏನೀವಾಗಾ? ಇಲ್ಲೇ ಸೇದ್ತೀನಿ..ಹೆಹೆಹೆಹೆಹೆ
ಸರ್ ಪ್ಲೀಸ್..
ನನಗೆ ಸಣ್ಣಜ್ಜ ಬೇಕು ಹುಡುಕಿ ಕೊಡ್ತೀಯಾ?
ಸರ್
ನನಗೆ ಸಣ್ಣಜ್ಜ ಬೇಕು ಕಣಯ್ಯಾ.. ಹುಡುಕಿ ಕೊಡುತ್ತೀಯಾ ಅಂತ ಕೇಳಿದ್ದು.
ಸರ್,ಸಾರಿ ಸರ್ ನನಗೆ ಅರ್ಥವಾಗುತ್ತಿಲ್ಲ..
ಶಂಭು ನಿಧಾನವಾಗಿ ಏಳುತ್ತಾನೆ,ಮೆಲ್ಲಗೇ ನಡೆಯುತ್ತಾನೆ,ಅದೇ ಹಡಬೇ ಮ್ಯಾಚು ತೋರಿಸುತ್ತಿದ್ದ ಟಿವಿ ಪರದೆ ಬಳಿ ಬರುತ್ತಾನೆ.
ಯಾರ್ರೀ ಅಲ್ಲಿ, ಸ್ಟಾಪ್ ದಿಸ್..ಐ ಹೇಟ್ ದಿಸ್ ಬ್ಲಡೀ ಮ್ಯಾಚ್... ಜೋರಾಗಿ ಕೂಗುತ್ತಾನೆ.
ಅದು ಬಾರ್,ಅಲ್ಲಿ ಅವನ ಯಾವ ಕೂಗಿಗೂ ಆ ಮಂದಬೆಳಕಿನ ಹ್ಯಾಂಗ್‌ಓವರ್‌ನಲ್ಲಿ ಯಾರೂ ಕಿಮ್ಮತ್ತು ಕಟ್ಟುವುದಿಲ್ಲ.
ಶಂಭು ರೆಸ್ಟ್‌ರೂಂನಲ್ಲಿ ನಿಂತು ಸಣ್ಣಜ್ಜ ಎಲ್ಲಿಗಾದರೂ ಹೋಗಿರಬಹುದು ಅಂದುಕೊಳ್ಳುತ್ತಾನೆ.ಈ ರಾತ್ರಿ ಸಣ್ಣಜ್ಜನನ್ನು ಹುಡುಕಿ ತರಲೇಬೇಕು ಎಂದು ತೂಕಡಿಸುತ್ತಾನೆ.

ಶಂಭು ಕುಳಿತಿದ್ದ ಪಕ್ಕದ ಟೇಬಲಲ್ಲಿ ಕುಳಿತ ನಾಲ್ಕು ಮಂದಿ ಪೈಕಿ ಒಬ್ಬ ಪೊಲೀಸ್ ಆಫೀಸರನೇ ಇರಬೇಕು. ಅವನ ಮಾತು ಆಗಿಂದ ಕೇಳುತ್ತಾ ಇದೆ. ಅದೇನೋ ಅವನ ರಣಹೇಡಿ ಸಾಹಸಗಳನ್ನು ಆತ ಉಳಿದವರಿಗೆ ಬಿತ್ತುತ್ತಿದ್ದಾನೆ.
ಅವನೇ ಬಿಲ್ಲು ಕೊಡುವವನಿರಬೇಕು,ಇಲ್ಲವಾದರೆ ಅಷ್ಟೊಂದು ಪ್ರೀತಿಯಿಂದ ಉಳಿದವರು ಅವನ ವರ್ಣಚರಿತ್ರೆಯನ್ನು ಕೇಳುತ್ತಿರಲಿಲ್ಲ.
ಸಣ್ಣಜ್ಜ ಎಲ್ಲಿ ಹೋದನೋ..
ಶಂಭು ತನ್ನೊಳಗೆ ತಾನೇ ತನಿಖೆ ಆರಂಭಿಸಿದ.
ಹುರ್ರೇ..ಅನದರ್ ಡೌನ್..ಎಂದು ಯಾರೋ ಯಾವುದೋ ಟೇಬಲ್ಲಿಂದ ಕೂಗಿದರು.
ಸಣ್ಣಜ್ಜ ಅಂಥಿಂಥ ಅಸಾಮಿಯಲ್ಲ.
ಬ್ಯಾರಿಮಾಸ್ಟ್ರ ಭೂಮಿಯನ್ನು ಒಂದೇ ಮಾತಿಗೆ ಕ್ರಯಚೀಟು ಮಾಡಿಕೊಂಡವನು.ಮಾಸ್ಟ್ರೇ ನಿಮಗೆ ಇನ್ನು ಆಗಬೇಕಾದ್ದಾದರೂ ಏನುಂಟು,ಮಕ್ಕಳಿಲ್ಲ,ಮದುವೆಯಿಲ್ಲ,ಕಾಡು ಹತ್ತಿರವಾಗಿದೆ,ಊರು ದೂರವಾಗಿದೆ. ಎಂದು ಕೊಂಡಾಟ ಮಾಡಿದಂತೆ ಮಾಡಿ ಹೆದರಿಸಿ..
ಸಣ್ಣಜ್ಜನ ಆರ್ಭಟಕ್ಕೆ ಹೆದರಿಯೇ ಬ್ಯಾರಿ ಮಾಸ್ಟ್ರು ಭೂಮಿ ಮಾರಿದ್ದರು ಎಂದು ಮಧುಸೂದನ್ ರಾವ್ ಎಂಎ ಬಿಎಡ್ ಹಲವಾರು ಬಾರಿ ಶಂಭುವಿನ ಬಳಿ ಹೇಳಿದ್ದರು.
ಬ್ಯಾರಿಮಾಸ್ಟ್ರು ಆಮೇಲೆ ಸೀದಾ ಹೋಗಿ ನಿಂತದ್ದು ಅದೇ ಮಧುಸೂದನ್ ರಾವ್ ಎಂಎ ಬಿಎಡ್ ಅವರ ಮನೆಯ ಮುಂದೆ.
ನನ್ನ ಜಾಗವನ್ನು ಅರ್ಧಕ್ರಯಕ್ಕೆ ಕ್ರಯಚೀಟು ಮಾಡಿಸಿಕೊಂಡನಲ್ಲಾ ಅವನು ಕೂಡಾ ನನ್ನ ಹಾಗೇ ಇದ್ದೂ ಇಲ್ಲದವನಾಗಲಿ..ಎಂದು ತುಳಸಿಕಟ್ಟೆ ಮುಂದೆ ಒದ್ದೆ ಬಟ್ಟೆಯಲ್ಲಿ ಕೈ ನೆಲಕ್ಕೆ ಬಡಿದಿದ್ದನಂತೆ.
ಬ್ಯಾರಿ ಮಾಸ್ಟ್ರ ಸಿಟ್ಟು ಅಷ್ಟಿತ್ತು.
ಆಗ ಆ ಕುರಿತು ಏನೂ ಮಾತನಾಡದ ಮಧುಸೂದನ್ ರಾವ್ ಎಂಎ ಬಿಎಡ್ ಆಮೇಲೆ ಶರ್ಮಿಳೆ ಕೇಳಿಕೊಂಡಳು ಅಂತ ತನಿಖೆಗೆ ಹೊರಡುವುದಾ?
ಸಣ್ಣಜ್ಜನೂ ಬರಲಿ,ಬ್ಯಾರಿಮಾಸ್ಟ್ರೂ ಬರಲಿ..ಎಂದು ಅವರು ಕೂಗಿದರು.
ಮಧುಸೂದನ್ ರಾವ್ ಎಂಎ ಬಿಎಡ್ ಅವರಿಗೆ ಈ ಬ್ಯಾರಿಮಾಸ್ಟ್ರು,ಈ ಸಣ್ಣಜ್ಜ ಎಂದರೆ ಯಾರು ಏನು ಎತ್ತ ಎಂದು ಗೊತ್ತಾಗುತ್ತದಾ..
ಬ್ಯಾರಿಮಾಸ್ಟ್ರೇ..ಎಂದರೆ ಅಲ್ಲಿ ಖಡಕ್ ಮೌನ.
ಸಣ್ಣಜ್ಜನೇ..ಎಂದರೆ ಯಾರೋ ಹೋಯ್ ಎಂದರಂತೆ..
ಎದುರು ಬನ್ನಿ ..
ಬಂದವನು ಗಿಳಿರಾಮಣ್ಣ.
ನೀನು ಸಣ್ಣಜ್ಜ ಅಲ್ಲ.. ಮಧುಸೂದನ್ ರಾವ್ ಎಂಎ ಬಿಎಡ್ ಉವಾಚ.
ಹೌದು,ನಾನು ಸಣ್ಣಜ್ಜ ಅಲ್ಲ..ಗಿಳಿರಾಮ.
ನನಗೆ ಅವನೇ ಬೇಕು.
ಗಿಳಿರಾಮನಿಗೆ ಕೋಪ ನೆತ್ತಗೇರಿ ಅನಾಹುತ ಆಗಿಬಿಡಬೇಕು..
ಹೌದೂ.. ನಾನೇನು ಮಾಡಬೇಕು ಸ್ವಾಮೀ? ಹುಡುಕಿಕೊಡಿ ನೀವೇ..ಎಲ್ಲಿ ಹೋದ ಅಂತ ಯಾರಿಗೆ ಗೊತ್ತು..
ಹೋ..ಹೋ..ಬ್ಯಾರಿಮಾಸ್ಟ್ರೂ ಇಲ್ಲಾ..ಸಣ್ಣಜ್ಜನೂ ಇಲ್ಲಾ..ಇಬ್ಬರೂ ಒಬ್ಬರನ್ನೊಬ್ಬರೂ ಬೆನ್ನು ಹಿಡಿದುಕೊಂಡು ಹೋಗಿದ್ದಾರೆ..
ಎಲ್ಲಿಗೆ..ಎಂದು ಕೇಳಿದರೆ ನನಗೇನು ಗೊತ್ತಿದೆ?
ಮಧುಸೂದನ್ ರಾವ್ ಎಂಎ ಬಿಎಡ್ ಅವರ  ಮಗ ಶಂಭು ಇದನ್ನೆಲ್ಲಾ ಮೊಗಸಾಲೆಯಲ್ಲಿ ನಿಂತು ಕೇಳುತ್ತಿದ್ದ.
ಅವನ ಅಜ್ಜಿ ಮನೆಯಲ್ಲಿ ಸಣ್ಣಜ್ಜ ಎಂಬ ಒಂದು ಪಾತ್ರ ಕಣ್ಮರೆಯಾಗಿರುವ ಕುರಿತು ಆಗಾಗ್ಗೆ ಕಥೆ ದಂತ ಕಥೆಗಳು ಅವನ ಹೈಸ್ಕೂಲು ಮುಗಿಯುವ ತನಕದ ದಸರೆಯ ರಜೆಗಳಲ್ಲಿ ಕೇಳಿ ಬರುತ್ತಿದ್ದವು.ಈಗ ಮಧುಸೂದನ್ ರಾವ್ ಅವರ ಮುಂದೆ ಶರ್ಮಿಳೆ ನಿಂತಾಗ ಈ ಕಥೆಗೆ ಮತ್ತೆ ರೆಕ್ಕೆ ಸಿಕ್ಕಿಸಲು ಸಾಧ್ಯವಾಗುವುದೇ?
ಶಂಭು ಮತ್ತೆ ರೆಕ್ಕೆ ಸಿಕ್ಕಿಸಲು ಮನಸೆಂಬ ಹಾರುವ ಯಂತ್ರವನ್ನು ಮುಂದಿಟ್ಟ.

ಸಣ್ಣಜ್ಜ ಎಲ್ಲಿ ಹೋಗಿರಬಹುದು..ಏಲಕ್ಕಿ ಮಲೆಯಲ್ಲಿ ತುಂಬಾ ಕೆಲಸ ಇದೆ ಎನ್ನೋದು ವಾಡಿಕೆ.ಕಳ್ಳ ರೈಟರ್‌ಗಳು ಮರಕಡಿದು ವಹಿವಾಟು ಮಾಡುತ್ತಾರೆ.ಹೇಳಿಕೇಳಿ ನಟ್ಟ ಬಿಸಿಲುಗಾಲ.ಏಲಕ್ಕಿ ಮಲೆಗೆ ಯಾವುದಾದರೂ ಟ್ರಾಕ್ಟರ್ ತರಿಸಿ,ಹಾಡಹಗಲೇ ಮರ ಸಾಗಿಸಿ ಕಿಸೆ ತುಂಬಿಸಿಕೊಳ್ತಾರಂತೆ.ಈ ಧಣಿಗಳಿಗೆ ಎಲ್ಲಿ ಮರವುಂಟು,ಎಲ್ಲಿ ಗಿಡವುಂಟು ಎಂದು ಗೊತ್ತಾಗುತ್ತದೆ?ಕೊಯಿಲಿನ ಟೈಮಿಗೆ ಒಮ್ಮೆ ಬಂದರೆ ಬಂದರು ಇಲ್ಲದಿದ್ದರೆ ಇಲ್ಲ.
ಧಣಿಗಳು ಮೂರು ಗುಡ್ಡ ಹತ್ತಿ ಮಲೆಗೆ ಬಂದರೆ ಆ ದಿನ ಅವರಿಗೆ ಬೇಕಾದ ಹಾಗೇ ಇದ್ದರಾಯಿತು.ರಾತ್ರಿ ಶೆಡ್‌ನಲ್ಲಿ ಚಿಮಿಣಿದೀಪದಲ್ಲಿ ಅಕೌಂಟು ಬುಕ್ಕು ಬಿಡಿಸುತ್ತಾರೆ..ಅದೇನು,ಇದೇನು ಅಂತ ಕೇಳ್ತಾರೆ..ಆಮೇಲೆ ಹೇಳಿದ್ದಕ್ಕೆಲ್ಲಾ ತಲೆಯಾಡಿಸ್ತಾರೆ..ಮಾತಾಡ್ತಾ ಮಾತಾಡ್ತಾ ಗೊರಕೆ ಹೊಡಿತಾರೆ..ಅವರ ಅಪ್ಪ ಈ ರೀತಿ ಒಂದೇ ದಿನ ಇಷ್ಟು ದೂರ ಕಾಡಲ್ಲಿ ಹತ್ತಿ ಇಳಿದು ಮಾಡಿದ್ದಾನಾ..
ಸಣ್ಣಜ್ಜ ಇದೇ ರೀತಿ ಶೆಡ್‌ನಲ್ಲಿ ಧಣಿಗೆ ಕಿತಾಬು ಬಿಡಿಸಿ ಲೆಕ್ಕ ಹೇಳಿದ್ದಾನೆ,ಧಣಿ ಅಲ್ಲೇ ಬೆತ್ತದ ಪಲ್ಲಂಗದಲ್ಲಿ ಕುಕ್ಕರಿಸಿದಾಗ ಕೆಲಸ ಮಾಡಿ ಮುಗಿಸಿದ್ದಾನೆ..
ಮತ್ತೆಂದೂ ಸಣ್ಣಜ್ಜನನ್ನು ಯಾರೂ ಕಂಡಿಲ್ಲ..
ಧಣಿಯ ಶವವನ್ನು ಬೋಪಯ್ಯನ ಟ್ರಾಕ್ಟರ್‌ನಲ್ಲಿ ಸಂಪಾಜೆಗೆ ತಂದು ಆಮೇಲೆ ಮೋರೀಸ್ ಕಾರಿನಲ್ಲಿ ಊರಿಗೆ ಸಾಗಿಸಲಾಗಿತ್ತು.
ಹೌದೂ ಸಣ್ಣಜ್ಜ ಏಕೆ ಹಾಗೇ ಮಾಡಿದ,ಅವನು ಹಾಗೇ ಮಾಡುವುದಕ್ಕೂ ಬ್ಯಾರಿಮಾಸ್ಟ್ರೂ ಕಾಣೆಯಾಗುವುದಕ್ಕೂ ಏನು ಸಂಬಂಧ..ಮೂಕಂಪಾರೆಯ ಭೂತ ಮೂಡಲಾಗಿ ಕೈ ಸನ್ನೆ ಮಾಡಿದ್ದು ಎಂದರೆ ಅದೇ ಏಲಕ್ಕಿ ಮಲೆಯಾಚೆಗೆ ಇರಬೇಕಾ..
ಶಂಭು ಎಲ್ಲವನ್ನೂ ಎರಡನೇ ಕಂತನ್ನು ಇಳಿಸೋ ಹೊತ್ತಿಗೆ ಚುಕ್ತಾ ಮಾಡುತ್ತಿದ್ದ.
ಆ ಪಕ್ಕದ ಟೇಬಲ್ಲಿನಲ್ಲಿ ಐಪಿಎಲ್ ಮ್ಯಾಚು ಆರಂಭವಾಗೋ ಹೊತ್ತಿಗೇ ಡಿಸ್ಕಶನ್‌ಗೆ ಕುಳಿತಿದ್ದ ಗೆಳೆಯರ ಪೈಕಿ ಪೊಲೀಸ್ ಆಫೀಸರ್ ಪಕ್ಕದವನ ಹತ್ತಿರ ಅಂಗಲಾಚುತ್ತಿದ್ದ,
ಸಾರ್ ನೀವು ಮನಸ್ಸು ಮಾಡಿದರೆ ಈ ಸ್ಟೋರಿಯನ್ನು ಫಿಲಂ ಮಾಡಬಹುದು ಸಾರ್ ..ಸ್ಟೋರಿ ವೆರಿ ಸಿಂಪಲ್ ಸಾರ್ ಮತ್ತು ಅಷ್ಟೇ ಕಾಂಪ್ಲೆಕ್ಸೂ ಇದೆ ಸಾರ್..ಒಬ್ಬ ಏಲಕ್ಕಿ ತೋಟದಲ್ಲಿ ರೈಟರ್ ಆಗಿರ್‍ತಾನೆ ಸಾರ್..ಅವನು ತೋಟಕ್ಕೆ ಬಂದ ಓನರ್‌ನ್ನು ಮರ್ಡರ್ ಮಾಡಿ ಬಿಡ್ತಾನೆ..ಸಾರ್..ಆಮೇಲೆ ಅವನು ಕಾಣೆಯಾಗುತ್ತಾನೆ ಸಾರ್..ಇಷ್ಟಕ್ಕೂ ಅವನೇ ಇವನನ್ನು ಮರ್ಡರ್ ಮಾಡಿದ ಅಂತ ಎಲ್ಲೂ ಹೇಳೋಕೇ ಆಗಲ್ಲ ಸಾರ್ ಅಂಥಾ ಸೀನ್ ಕ್ರಿಯೇಟ್ ಆಗಿಬಿಡುತ್ತೆ ಸಾರ್..ಕಥೆ ಸೊಗಸಾಗಿದೆ ಸಾರ್ ..ಡಿಟೈಲ್ಲಾಗಿ ಹೇಳ್ತೇನೆ ಸಾರ್..ಇಲ್ಲಲ್ಲ..ನಂದಿಹಿಲ್ಸ್‌ನಲ್ಲಿ..ಮುಂದಿನ ಭಾನುವಾರ..ಮೂರು ರೂಮ್ ಬುಕ್ ಮಾಡಿದೀನಿ ಸಾರ್,ಬನ್ನಿ ಕಥೆ ಹೇಳೋಣ ಸಾರ್.
ಶಂಭು ಕಥೆ ಕೇಳುತ್ತಿದ್ದ ಟೇಬಲ್ಲಿನತ್ತ ತಿರುಗಿದ..
ಕಥೆ ಹೇಳುತ್ತಿದ್ದ ಪೊಲೀಸ್ ಆಫೀಸರ ನಿಧಾನವಾಗಿ ಅಂಗಲಾಚುತ್ತಿದ್ದವನಂತೆ ಕಂಡ,ಅವನ ಜೊತೆಗಿದ್ದವರು ಎದ್ದುನಿಂತಿದ್ದರು.ಅವರು ಹೊರಡುವ ಧಾವಂತದಲ್ಲಿದ್ದರು.
ಶಂಭು ಮೂರನೇ ಕಂತನ್ನು ಇಳಿಸಿದ್ದರಿಂದ ತೀರಾ ಸುಸ್ಥಿತಿಯಲ್ಲಿ ಇರಲಿಲ್ಲ.ಆದರೆ ಈ ಪೊಲೀಸ್ ಆಫೀಸರ್ ಎಂಬವನು ಹೇಳುತ್ತಿದ್ದ ಸ್ಟೋರಿಗೆ ಅವನು ಲಿಂಕ್ ಬಿಗಿಯುತ್ತಿದ್ದ.ಆದರೆ ಬಿಗಿಯಲು ಸಾಧ್ಯವಾಗುತ್ತಿಲ್ಲ.
ಯಾರಿದು ಆಫೀಸರ್?ಇವನಿಗೆ ಸಣ್ಣಜ್ಜನ ಸ್ಟೋರಿ ಹೇಗೆ ಗೊತ್ತು?ಅದೂ ಐವತ್ತು ವರ್ಷಗಳ ಹಿಂದಿನದ್ದು.ಉಫ್..
ಶಂಭು ಬೇರರ್ ಅಂದ.ಬೇರರ್ ಬಂದ. ಫೋನ್ ಎತ್ತಿ ಅವನ ಕೈಗಿಟ್ಟ.ಸರಿ ರಾತ್ರಿಯಲ್ಲಿ ಕರೆ ಮಾಡಬಾರದು ಬಾಯ್,ಬಟ್ ಮಾಡಲೇಬೇಕಾಗಿದೆ.ನಾನು ಕನ್ನಡಕ ತಂದಿಲ್ಲ,ಸೋ,ಈ ಫೋನ್‌ನಲ್ಲಿ ಶರ್ಮಿಳೆ ಅಂತ ಒಂದು ಹೆಸರಿದೆ ನೋಡು, ಹುಡುಕು ಅಂದ
ಬೇರರ್ ಹುಡುಕಿ ಕೊಟ್ಟ.
ಈ ಶರ್ಮಿಳೆ ನಾನು ಹುಡುಕುತ್ತಿರುವ ಸಣ್ಣಜ್ಜನ ಕುಟುಂಬಸ್ಥಳು,ಐ ಮೀನ್ ಶೀ ಈಸ್ ಫ್ರಾಂ ಹಿಸ್ ಫ್ಯಾಮಿಲಿ.
ಡಯಲ್ ಮಾಡಿ ನನಗೆ ಕೊಡು.
ಬೇರರ್ ಡಯಲ್ ಮಾಡಿದ.
ಸರ್ ರಿಂಗಾಗುತ್ತಿದೆ ಎಂದ.
ರಿಂಗಾಗುತ್ತಿದೆ,ನೋಡ್ತಾ ಇರು ಇನ್ನು ರಂಗಾಗುತ್ತದೆ ಹೆಹೆಹೆಹೆಹೆಹೆ..ಶಂಭು ಅಮಲುಪೂರ್ತಿ ತನಗೊಬ್ಬನಿಗೇ ಎಂಬ ಹಾಗೇ ನಕ್ಕ.
ಹಲೋ ಅಂದಿತು ಹೆಣ್ಣುಧ್ವನಿ.
ಬೇರರ್ ಇನ್ನು ತನಗಿಲ್ಲ ಉಸಾಬರಿ ಎಂಬ ಹಾಗೇ ಫೋನ್ ಶಂಭುವಿನ ಕೈಗಿತ್ತ.ಅವನ ಕೈಯನ್ನು ಹಿಡಿದುಕೊಂಡ ಶಂಭು ಹಲೋ ಡಾರ್ಲಿಂಗ್..ಎಂದ
ಬೇರರ್ ಸುಮ್ಮನೇ ನಕ್ಕ.
ವಾನಾ ಮೀಟ್ ಯುವರ್ ಸಣ್ಣಜ್ಜಾ ಎಂದ.
ಫಕ್‌ಆಫ್ ಅಂತ ಗದರಿದ ಹೆಣ್ಣು ಧ್ವನಿ.
ಯೂಪ್ ಟು ನೈಟ್ ಐ ವಾನಾ ಫಕ್ ಯೂ...ಹೆಹೆಹೆಹೆಹೆ ಶಂಭು ಪೂರ್ತಿ ಬೋರಲಾಗಿದ್ದ.
ಫೋನ್ ಸ್ತಬ್ದವಾಗಿತ್ತು.
ನೆಕ್ಸ್ಟ್ ಸಂಡೇ ನಂದೀಹಿಲ್ಸ್‌ನಲ್ಲಿ ಇದೇ ಪೊಲೀಸ್ ಆಫೀಸರ್ ಮತ್ತೆ ಅವನ ಫ್ರೆಂಡ್ಸ್ ಸೇರಲಿದ್ದಾರೆ,ಅಲ್ಲಿ ತಾನೂ ಹೋಗಬೇಕು ಎಂದು ಬೇರರ್‌ಗೆ ಶಂಭು ಹೇಳುತ್ತಿದ್ದರೆ ಅದನ್ನು ಸ್ವತಃ ಬೇರರ್ ಗಂಭೀರವಾಗಿ ಪರಿಗಣಿಸಲೇ ಇಲ್ಲ.