20160915

ಎಲ್ಲಿ ನೆಡಬೇಕು ನಾನೆಂಬ ಸ್ಥಿತಿಯಎಸ್.ಜಿ.ಮಾಸ್ಟ್ರನ್ನು ಕಂಡವರೆಲ್ಲಾ ಅವರು ಊರಿಗೇ ಮಾಸ್ಟ್ರು ಎಂದು ಲೇವಡಿ ಮಾಡುತ್ತಾರೆ.ಅದಕ್ಕೆ ಕಾರಣ ಅವರ ಘನಗಾಂಬೀರ್ಯ.
ಸ್ವಲ್ಪ ಮಟ್ಟಿಗೆ ಅವರು ತನ್ನಲ್ಲಿ ಗಾಂಭೀರ್ಯವನ್ನು ನಾಟಕೀಯವಾಗಿ ರೂಢಿಸಿಕೊಂಡಿದ್ದಾರೆ.ಶಾಲೆಯಲ್ಲಿ ಮಕ್ಕಳ ಮಟ್ಟಿಗೆ ಅಂತ ಅಭ್ಯಾಸ ಮಾಡಿದ್ದ ಗಾಂಭೀರ್ಯವನ್ನು ಅವರು ಊರಿನ ಮಟ್ಟಿಗೂ ವಿಸ್ತರಿಸಿದರು.ಮಾತಾಡಿದರೆ ಮಾತ್ರಾ ಮಾತನಾಡುವುದು.ಹಾಸ್ಯ,ಚಟಾಕಿಗಳಿಗೆ ನಗದೇ ಇರುವುದು,ಯಾರು ಏನೇ ಮಾತನಾಡಿದರೂ ಅದೆಲ್ಲಾ ಬಾಲಿಶ ಅಂತ ಅಂದುಕೊಳ್ಳುವುದು ಅವರ ಗಾಂಭೀರ್ಯದ ಲಕ್ಷಣಗಳಾಗಿದ್ದವು.ಎಸ್.ಜಿ,ಮಾಸ್ಟ್ರ್ರಿಗೆ ಈ ಗಾಂಭೀರ್ಯ ಆಮೇಲೆ ಬಿಡಲಾರದ ಪರಿಸ್ಥಿತಿ ತಂದೊಡ್ಡಿತು.ಅವರು ಸದಾ ಗಂಭೀರವಾಗಿ ಇರುವುದು,ಮಿತಭಾಷಿಯಾಗಿರುವ ಕಾರಣದಿಂದ ಊರವರೂ ಅವರನ್ನು ಮಹಾ ಪಂಡಿತರೆಂದೂ ವಿಚಾರವಾದಿಗಳೆಂದೂ ಜ್ಞಾನಭಂಡಾರವೇ ಎಂದೂ ಭಾವಿಸಿದ್ದರು.ಹಾಗಾಗಿ ಅನೇಕರು ಅನೇಕ ಸಮಸ್ಯೆಗಳ ಕುರಿತು ಅವರ ಬಳಿ ಪರಿಹಾರಕ್ಕೆ ಬರುತ್ತಿದ್ದರು.ಎಸ್.ಜಿ.ಮಾಸ್ಟ್ರು ಪರಿಹಾರ ಹೇಳುತ್ತಿರಲಿಲ್ಲ.ಆದರೆ ಕೆಲವೊಂದು ಪ್ರಶ್ನೆ ಕೇಳುತ್ತಿದ್ದರು.ಆ ಪ್ರಶ್ನೆಗಳಲ್ಲೇ ಉತ್ತರ ಇದೆ ಎಂದು ಹೇಳುತ್ತಿದ್ದರು.ಅನೇಕರಿಗೆ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ತಮ್ಮೊಳಗೆ ಹುಟ್ಟಿ ಅವರ ಮೂಲ ಸಮಸ್ಯೆಯೇ ಪರಿಹಾರವಾಗಿತ್ತು.ಆ ಮಟ್ಟಿಗೆ ಅವರೊಬ್ಬ ಸಾರ್ಥಕ ಕೌನ್ಸಿಲರ್ ಆಗಿದ್ದರು.
ಇಂಥ ಎಸ್.ಜಿ.ಮಾಸ್ಟ್ರು ಜೀವನದಲ್ಲಿ ಎಂದೂ ಎಡವಿದರವರಲ್ಲ ಅಂತ ಊರವರು ಭಾವಿಸಿದ್ದರು. ಅವರು ಅತ್ಯಂತ ಸಂಯಮಿ ಮತ್ತು ಶಿಸ್ತೇ ಮೂರ್ತಿವೆತ್ತ ಮೇಧಾವಿ ಎಂದುಕೊಂಡಿದ್ದರು.ಅದು ಸರಿಯೇ ಇತ್ತು.ಆದರೆ ಅನೇಕ ಬಾರಿ ಊರವರು ಭಾವಿಸಿಂತೆ ನಾನಿಲ್ಲ ಎಂದು ಎಸ್.ಜಿ.ಮಾಸ್ಟ್ರಿಗೆ ಅನಿಸಿ ಏನೋ ಕಳ್ಳಾಟವಾಗುತ್ತಿತ್ತು. ಬ್ರಹ್ಮಚರ್ಯದಲ್ಲಿ ಅವರು ಅದೆಷ್ಟು ಬಾರಿ ಖಡಕ್ ಆಗಿ ಬ್ರಹ್ಮಚಾರಿಯಾಗಿರಬೇಕು ಎಂದು ಯೋಚಿಸಿ ಸಂಕಲ್ಪಿಸಿ ಸೋತುಹೋದವರೇ.ಅವರ ಬ್ರಹ್ಮಚರ್ಯದಲ್ಲಿ ಅವರೂ ಎಂದೂ ಕಡ್ಡಾಯ ಬ್ರಹ್ಮಚಾರಿಯಾಗಿರಲಿಲ್ಲ. ಅವರಿಗೆ ಅಕ್ಕಿರಾಶಿಯ ಮೇಲೆ ಕೆಂಪುಗೂಡಿ ಹಾಕಿ ಜನಿವಾರ ತೊಡಿಸಿದ ಭಟ್ಟರು ಬ್ರಹ್ಮಚಾರಿ ಏನೆಲ್ಲಾ ಮಾಡಬಾರದು ಎಂಬುದನ್ನು ಉಪದೇಶಿಸಿ ಅವರಿಂದ ಬಾಡಂ ಹೇಳಿಸಿದ್ದರು.ಅದರಲ್ಲಿ ಮರದಲ್ಲಿ ತಲೆ ಕೆಳಗಾಗಿ ನೇತಾಡಬಾರದು, ಸ್ತ್ರೀಗೋಷ್ಠಿ ಮಾಡಬಾರದು,ದಂತಧಾವನ ಮಾಡಬಾರದು, ಉದ್ದಿನ ಪದಾರ್ಥ ತಿನ್ನಬಾರದು, ನೀರಾಟವಾಡಬಾರದು ಎಂದಿತ್ಯಾದಿ ಶರತ್ತುಗಳಿದ್ದವು. ಆಗ ಮೂರು ಬಾರಿ ಬಾಡಂ ಬಾಡಂ ಬಾಡಂ ಅಂತ ಹೇಳಿ ಒಪ್ಪಿದ್ದ ಅವರು ಯಾವಾಗ ತರುಣರಾದರೋ ಬಾಡಂ ಮರೆತೇ ಬಿಟ್ಟರು. ಬಾಡಂ ಮರೆತರೆ ತಪ್ಪೇ ಎಂದು ಅವರು ಒಮ್ಮೆ ಕಾಲೇಜಿನಿಂದ ಪುರೋಹಿತರ ಮನೆಗೇ ಹೋಗಿ ಕೇಳಿದ್ದರು.ಆಗ ಅವರ ಪುರೋಹಿತರು ತಪ್ಪೇನಿಲ್ಲ ಮಾಣೀ.ಉಪನಯನದ ದಿನ ನೀನು ಉದ್ದಿನ ಹಪ್ಪಳ ತಿನ್ನಲಿಲ್ಲವಾ ? ಆಗ ನನ್ನೊಟ್ಟಿಗೇ ಕೂತಿದ್ದೆ ಎಂದು ಲೇವಡಿ ಮಾಡಿದ್ದರು.
ಬ್ರಹ್ಮಚರ್ಯವನ್ನು ತುಂಡರಿಸಿ ಚೆಂಡಾಡಿದ ಬಗ್ಗೆ ಎಸ್.ಜಿ.ಮೇಸ್ಟ್ರಿಗೆ ಸ್ವಲ್ಪವೂ ವಿಷಾದವೇ ಇರಲಿಲ್ಲ. ಅವರ ಬೊಂಬಾಯಿ ಗೆಳೆಯ ಶ್ರೀನಿವಾಸ ವರೇಕರ್ ಜೊತೆಗೆ ಅವರು ಮೊದಲ ಬಾರಿಗೆ ಸ್ಕಾಚ್ ಹೊಯ್ಯಿಸಿಕೊಂಡಾಗ ಅವರು ಈ ವಿಚಾರದಲ್ಲಿ ನಮ್ಮ ಭಟ್ಟರು ನನ್ನಿಂದ ಬಾಡಂ ಹೇಳಿಸಿಕೊಳ್ಳಲಿಲ್ಲ ನೋಡು ಅಂತ ಪಕಪಕ ನಕ್ಕಿದ್ದರು. ಆ ನಗುವಿಗೆ ಐಸ್‌ಕ್ಯೂಬು ಗ್ಲಾಸಿನಿಂದ ಉದುರುವ ಹಾಗೇ ಗ್ಲಾಸೂ ಕುಲುಕಿತ್ತು.
ಎಸ್.ಜಿ.ಮೇಸ್ಟ್ರು ಪದವಿಪೂರ್ವ ಕಾಲೇಜಿಗೆ ರಜೆ ಹಾಕಿ ನೇತ್ರಾವತಿಯಲ್ಲಿ ಈಜುತ್ತಿದ್ದರು.ಅವರಿಗೆ ಅತ್ಯಂತ ಸುಖದ ಸಂಗತಿ ಅದಾಗಿತ್ತು.ಹಾಗೇ ಅವರು ಈಜುವ ವೇಳೆ ಹೊಳೆ ದಂಡೆಯಲ್ಲಿ ಅವರಿಗೆ ಬಟ್ಟೆ ಒಗೆಯುತ್ತಿದ್ದ ಕಲ್ಯಾಣಿಯ ಗೆಳೆತನವಾದುದು,ಆಮೇಲೆ ಹೊಳೆ ಪಕ್ಕದ ಕಾಡಿನಲ್ಲಿ ಅವಳೇ ಅವರ ಬ್ರಹ್ಮಚರ್ಯದ ಸೆರಗು ಬಿಡಿಸಿದ್ದು ಇತ್ಯಾದಿ ವಿಚಾರಗಳು  ಲಿಂಬೆ ಎಸರು ಹಿಂಡಿ ಮಾಡಿದ ಕಟ್ಟಂಚಾಯದ ಹಾಗಿದೆ.ಅವರೇನು ಬಿಡಿ ಅದನ್ನು ಅರಗಿಸಿಕೊಂಡಿದ್ದಾರೆ.ಕಲ್ಯಾಣಿ ಚೆನ್ನಾಗಿದ್ದಳು,ಅವಳಿಗೆ ಆ ಕ್ಷಣಕ್ಕೆ ಒಂದು ಸಾಂಗತ್ಯ ಬೇಕಿತ್ತು.ಅದನ್ನು ಅವಳು ಚೆನ್ನಾಗಿ ಬಳಸಿಕೊಂಡಿದ್ದಾಳೆ.ಸಾಂಗತ್ಯ ಬೇಕು ಅನಿಸುವ ವಯಸ್ಸು ಅವರದ್ದಾಗಿರಲಿಲ್ಲ ಆಗ.ಆದರೆ ಅವಳದ್ದಾಗಿತ್ತು.ಅವಳ ಸಾಂಗತ್ಯದಲ್ಲಿ ಅವರಿಗೆ ಸಾಂಗತ್ಯ ಎಂಬ ತಹತಹದ ಅನುಭವ ವೇದ್ಯವಾಗಿದ್ದು ಮಾತ್ರವಲ್ಲ ಅಂಟಿಕೊಂಡೂ ಬಿಟ್ಟಿತು.
ಇದೆಲ್ಲಾ ಪೂರ್ವಾಧ್ಯಾಯ.ಈಗ ನಾವು ಕಥೆ ಕಟ್ಟುತ್ತಿರುವುದು ಉತ್ತರಾಧ್ಯಾಯದಲ್ಲಿ.
ಇಲ್ಲಿ ಅದೇ ಪೂರ್ವಖಂಡದ ಎಸ್.ಜಿ.ಮಾಸ್ಟ್ರು ಇದ್ದಾರೆ.ಅವರಿಗೆ ವಯಸ್ಸಾಗಿದೆ.ಆದರೆ ಮನಸ್ಸು ಈಗಲೂ ಹದಿನೆಂಟರಲ್ಲೇ ಇದೆ.ಸಂಸಾರವಂದಿಗನಲ್ಲದ ಕಾರಣ ಅವರು ಒಂಥರಾ ಏಕಾಂಗಿ ಅಂತ ಊರವರಿಗೆ ಕಂಡರೂ ಅವರು ಮಾತ್ರಾ ಎಂದೂ ಹಾಗನಿಸಿಕೊಂಡಿಲ್ಲ.ಏಕೆಂದರೆ ಅವರಿಗೆ ಏಕಾಂಗಿ ಎನಿಸುವ ವಾತಾರಣವೇ ಇರುವುದಿಲ್ಲ.ಈಗ ಈ ಕಥೆಯ ಉತ್ತರಾಧ್ಯಾಯದಲ್ಲಿ ಒಬ್ಬಳು ಮಧ್ಯವಯಸ್ಕ ಗೃಹಿಣಿ ಮತ್ತು ಅವಳ ಮಗಳೂ ಬಂದು ನಿಂತಿದ್ದಾರೆ.ಅವರಿಗೆ ಎಸ್.ಜಿ.ಮಾಸ್ಟ್ರಲ್ಲಿ ಏನೂ ಹೇಳುವುದಕ್ಕೆ ಉಳಿದಿಲ್ಲ.ಆದರೆ ಅವರಿಗೆ ಒಂದು ಸಾಂಗತ್ಯದ ಇತ್ಯೋಪರಿಯ ನಿವೇದನೆ ಆಗಬೇಕಿದೆ ಅಷ್ಟೇ.ಅದನ್ನು ಈ ಕಥೆಗಾರ ನಿರೂಪಿಸುವ ಜವಾಬ್ದಾರಿ ಮಾತ್ರಾ ಹೊಂದಿದ್ದಾನೆ.
ಸಾಂಗತ್ಯದ ಬಗ್ಗೆ ಈಗ ಕೇಳಿದರೆ ಎಸ್.ಜಿ.ಮಾಸ್ಟ್ರು ಹೇಳುತ್ತಾರೆ,ಈಗಿನ ಕಾಲವೇ ಬೇರೆ ಅಂತ.ಈಗ ಮೊಬೈಲ್ ಫೋನ್ ಮತ್ತು ಒಂದು ಜಿಬಿ ನೆಟ್‌ಪ್ಯಾಕ್ ಇದ್ದರಾಯಿತು.ಸಾಂಗತ್ಯಕ್ಕೇನೂ ಕಷ್ಟವಿಲ್ಲ.
ಎಸ್.ಜಿ.ಮಾಸ್ಟ್ರ ಶಿಷ್ಯೆ ಸುಕನ್ಯಾ ಇದ್ದಳಲ್ಲ,ಅವಳ ಮಗಳದ್ದು ಅದೇ ಸಂಗತಿ.ಅದನ್ನು ಸಮಸ್ಯೆ ಅಂತ ಸುಕನ್ಯಾ ಹೇಳುತ್ತಿದ್ದಳು.ಆದರೆ ಎಸ್.ಜಿ.ಮಾಸ್ಟ್ರು ಅದಕ್ಕೆ ಅರ್ಥ ಪಡೆದುಕೊಂಡಿದ್ದರು.
ಸುಕನ್ಯಾಳ ಮಗಳು ಸುನೀತಾ ಚಂದದ ಹುಡುಗಿ.ಅವಳಿಗೆ ಬೇಗ ಮದುವೆ ಮಾಡಿ ಜವಾಬ್ದಾರಿ ಅಂತ ಇರುವುದನ್ನು ಕಳೆದುಕೊಳ್ಳಬೇಕು ಎಂದು ಸುಕನ್ಯಾ ಹೇಳುವವಳು.ಅವಳೋ ಸ್ವಲ್ಪವೂ ಅಪ್‌ಡೇಟ್ ಆದೋಳಲ್ಲ.ಆಗುವವಳೂ ಅಲ್ಲ.ಸನ್‌ಸಾವಿರದೊಂಭೈನ್ನೂರಾ ಎಪ್ಪತೈದರ ಮಾಡೆಲ್‌ನ ಹಾಗೇ ವರ್ತಿಸುತ್ತಾಳೆ. ಮಗಳಿಗೆ ಗಂಡಿನ ಆಸರೆ ಸಿಕ್ಕರೆ ಸಾಕು ಅಂತ ಒದ್ದಾಡುತ್ತಾಳೆ.ತವರು ಮನೆಗೆ ಹೋದರೆ ಪುಟ್ಟತ್ತೆ ಮತ್ತು ಸುಕನ್ಯಾ ಮಗಳ ಮದುವೆ ಆಗದೇ ನಿದ್ದೆಯೇ ಬರುವುದಿಲ್ಲ ಎಂದು ರಾತ್ರಿ ಇಡೀ ಮಾತನಾಡುತ್ತಾ ಕೂರುತ್ತಾರೆ. ಸುನೀತಾ ಏನೇ ಆದರೂ ಮದುವೆ ಒಲ್ಲೆ ಅನ್ನುವವಳು.ಯಾಕಮ್ಮಾ ಅಂತ ಕೇಳಿದರೆ,ಈಗಷ್ಟೇ ನಾನು ಓದುತ್ತಿದ್ದೇನೆ,ಓದು ಮುಗಿಯಲಿ ಆಮೇಲೆ ಮದುವೆ ಎಂದಳು. ಓದು ಮುಗಿದರೆ ಕಲಿಕೆ ಈಗ ತಾನೇ ಮುಗಿಸಿದ್ದೇನೆ,ನನ್ನ ಕಾಲಲ್ಲಿ ನಾನು ಮೊದಲು ನಿಲ್ಲುತ್ತೇನೆ ಅಂದಳು.ಕೆಲಸಕ್ಕೆ ಅಂತ ಬೆಂಗಳೂರಿಗೆ ಹೋದವಳು ವಯಸ್ಸು ಇಪ್ಪತ್ತನಾಲ್ಕು ಕಳೆದು ಇಪ್ಪತ್ತೈದು ಆಗಿ ಇಪ್ಪತ್ತಾರು ದಾಟಿ ಇಪ್ಪತ್ತೆಂಟು ಆದರೂ ಈಗ ಬೇಡ ಮದುವೆ ಈಗ ಬೇಡ ಮದುವೆ ಎಂದಳು.ಕೊನೆಗೂ ಅವಳು ಮದುವೆಗೆ ಒಪ್ಪಿದಾಗ ಮೂವತ್ತಕ್ಕೆ ಹತ್ತಿರ ಹತ್ತಿರ ಆಗಿತ್ತು.ಮದುವೆ ಆಗಿ ಒಂದೇ ವರ್ಷಕ್ಕೆ ಗಂಡ ಇವಳನ್ನು ಬಿಟ್ಟನೋ ಇವಳು ಗಂಡನನ್ನು ಬಿಟ್ಟಳೋ ಗೊತ್ತಿಲ್ಲ.
ಎಸ್.ಜಿ.ಮಾಸ್ಟ್ರ ಬಳಿಗೆ ಸುಕನ್ಯಾ ಗೋಳೋ ಅಂತ ಅಳುತ್ತಾ ಬಂದು ವಿಚಾರ ಮಂಡಿಸಿದಾಗಲೇ ಇದೆಲ್ಲಾ ಸಾಂಗತ್ಯದ ವಿಚಾರ ಅಂತ ಗೊತ್ತಾದದ್ದು.
ಯಾರಿಗಿಲ್ಲ ಸಾಂಗತ್ಯ ಎಂದು ಕೇಳಿದಳು ಸುನೀತಾ.ಯಾರ ಮನಸ್ಸೂ ಸಾಂಗತ್ಯವಿಲ್ಲದೇ ಉಳಿದೀತಾದರೂ ಹೇಗೆ? ಮೇಸ್ಟ್ರೇ ನಾನು ಓದಿದ ಅದೆಷ್ಟೋ ಇತಿಹಾಸದ ಕಿತಾಬುಗಳಲ್ಲಿ ಅಂಥ ಸಾಂಗತ್ಯ ಕಂಡಿದ್ದೇನೆ.ಸುಳ್ಳೇಕೆ ಹೇಳಲಿ ನಾನೂ  ನನ್ನ ಬದುಕಿನಲ್ಲಿ  ಒಬ್ಬ ಗೆಳೆಯನ ಸಾಂಗತ್ಯ ಪಡೆದಿದ್ದೆ,ಅದಕ್ಕೇ ಮದುವೆ ಬೇಡ ಅಂತ ಮುಂದೂಡುತ್ತಿದ್ದೆ. ಯಾಕೆಂದರೆ ಮದುವೆಯ ಕಡ್ಡಾಯ ಸಾಂಗತ್ಯಕ್ಕಿಂತ ಅದುವೇ ಮಿಗಿಲು ಅಂತ ಗೊತ್ತಿತ್ತು ನನಗೆ.ಅದಕ್ಕೇ ಅವನ ಜೊತೆ ಇಡೀ ಮನಸ್ಸನ್ನು ಶೇರ್ ಮಾಡುತ್ತೇನೆ,ಅವನು ನನ್ನ ಭಾವನೆಗಳನ್ನು ಬೆಳೆಸಿದ್ದಾನೆ.ಮನಸ್ಸನ್ನು ಅರಳಿಸಿದ್ದಾನೆ.ಲಾಂಗ್ ಡ್ರೈವ್ ಹೋಗಿದ್ದೇನೆ.ಕಾರಲ್ಲಿ ಅವನ ತೊಡೆ ಮೇಲೆ ತಲೆ ಇಟ್ಟು ಸಣ್ಣ ನ್ಯಾಪ್ ತೆಗೆದಿದ್ದೇನೆ.ಅದರಲ್ಲಿ ಏನು ತಪ್ಪಿದೆ ಎಂದು ನನಗಂತೂ ಗೊತ್ತಾಗುತ್ತಿಲ್ಲ ಮೇಸ್ಟ್ರೇ ಅಂದಳು ಸುನೀತಾ.
ಈ ಅಮ್ಮನ ನಂಬುಗೆಗೂ ನನ್ನ ನಂಬುಗೆಗೂ ಕೂಡಿ ಬರುವುದಿಲ್ಲ ಎಂದು ತಿಳಿದುಕೊಂಡಿದ್ದೆ ಮೇಸ್ಟ್ರೇ.ಈಗ ನೋಡಿದರೆ ನಾನು ಮಾಲೆ ಹಾಕಿದವನಿದ್ದಾನಲ್ಲ,ಅದೇ ನನ್ನ ಕತ್ತಿಗೆ ಕರಿಮಣಿಸರದಲ್ಲಿ ತಾಳಿ ಕಟ್ಟಿ ತಂದು ಕಟ್ಟಿದವನು ಅವನೂ ಅಷ್ಟೇ.ಅರ್ಥ ಮಾಡಿಕೋ ಎಂದು ಪರಿಪರಿಯಾಗಿ ಹೇಳಿದೆ.ನಿನಗೆ ಬೇಕಾದದ್ದು ನನ್ನ ಶರೀರ,ಮನಸ್ಸಲ್ಲ ಅಂತ ಕೊನೆಗೆ ಹೇಳಿದರೆ ಅವನು ಹೌದೂ ನನಗೆ ಬೇಕಾದದ್ದು ಶರೀರ ಅಂದು ಬಿಟ್ಟ .ಬೇಸರ ಎನಿಸಿತು.ಅವನಿಗೆ ವಾರಕ್ಕೊಮ್ಮೆ ಒಂದು ಸ್ಟೋರ್ ರೂಂ ಬೇಕು,ಅದು ನಾನು. ಉಫ್...ಆಗಲ್ಲ ಅಂದೆ ಅಂದಳು ಸುನೀತಾ.
ಎಸ್.ಜಿ.ಮಾಸ್ಟ್ರು ಅರ್ಥ ಮಾಡಿಕೊಳ್ಳುತ್ತಿದ್ದರು.
ಕಲ್ಯಾಣಿ ಜೊತೆ ನೇತ್ರಾವತಿ ದಂಡೆಯಲ್ಲಿ ಕುಳಿತು ಮಾತನಾಡುತ್ತಿದ್ದುದು.ಅವಳ ಕೈ ಹಿಡಿದು ಎಲ್ಲಿ ಅಂಗೈ ತೋರಿಸು,ನಾನು ಹಸ್ತಸಾಮುದ್ರಿಕ ಬಲ್ಲೆ,ನಿನ್ನ ಅಂಗೈ ಗೆರೆಗಳನ್ನು ಓದಿ ನೀನೇನಾಗುತ್ತೀಯಾ ಅಂತ ಹೇಳಬಲ್ಲೆ ಎಂದದ್ದು.ಅವಳು ಅಂಗೈ ಬಿಚ್ಚಿ ನನ್ನ ಅಂಗೈ ಮೇಲಿಟ್ಟು ಆಮೇಲೆ  ನನ್ನ  ಕಣ್ಣುಗಳಲ್ಲಿ ಅವಳು ನೆಟ್ಟ ನೋಟದಲ್ಲಿ ಕಾಣುತ್ತಿದ್ದ ದಾಹ,ಮುಖಕ್ಕೆ ರಾಚುತ್ತಿದ್ದ ಅವಳ ಏದುಸಿರಿನ ಶಾಖ.
ಅಮ್ಮನಿಗೊಂದು ಮೊಮ್ಮಗು ಬೇಕು.ನನ್ನ ಮಗಳು ಅಳಿಯ ಅಂತ ರಾಗ ಜೋಡಿಸುವುದಕ್ಕೊಂದು ಸಾಹಿತ್ಯ ಬೇಕು.ಅದು ನಾನೇ ಆಗಬೇಕಾ?ಅಮ್ಮನಿಗಾಗಿ ನಾನು ಇವನ ಕೂಡಿಕೆ ಮಾಡಿಕೊಳ್ಳುವುದೇ ಆದರೆ ನಾನು ಅಂತ ಇರುವ ಒಂದು ಸ್ಥಿತಿ ಇದೆಯಲ್ಲಾ ಅದನ್ನು ಎಲ್ಲಿ ನೆಡಬೇಕು ಮೇಸ್ಟ್ರೇ?
ನಂಗೊತ್ತು ನೀವೀಗ ಕೇಳುವುದಿಲ್ಲ,ಆದರೆ ಮನಸ್ಸಲ್ಲೇ ಪ್ರಶ್ನಿಸುತ್ತಿದ್ದೀರಿ,ನನ್ನ ಮನಸ್ಸನ್ನಾಳಿದವನಿದ್ದಾನಲ್ಲ ಅವನೇನಾದ ಅಂತ ತಾನೇ?
ಅವನು ಇನ್ಯಾವಳನ್ನೋ ಕೂಡಿಕೆ ಮಾಡಿಕೊಂಡ.ಅವಳೀಗ ಗರ್ಭಿಣಿ.ಅವಳೊಳಗೆ ಅವನು ನೆಟ್ಟ ಬೀಜ ಅದು ಅವನದ್ದೇ ಇರಬಹುದು ತಾತ್ವಿಕವಾಗಿ,ಆದರೆ ಭಾವನಾತ್ಮಕವಾಗಿ ಅದು ನನ್ನದೇ..
ಎಸ್.ಜಿ.ಮಾಸ್ಟ್ರು ಬವಳಿ ಬಂದವರ ಹಾಗೇ ಆ ಬೀಟಿ ಮರದ ಕುರ್ಚಿಯಲ್ಲಿ ಗರ್ಕರಾದರು.ಎರಡೂ ಕೈಗಳನ್ನು ಕುರ್ಚಿಯ ಹಿಡಿಯಲ್ಲಿ ಬಿಗಿ ಮಾಡಿದರು.
ಸುಕನ್ಯಾ ಮೇಸ್ಟ್ರ ಕಣ್ಣಾಲಿಗಳಲ್ಲಿ ಏನೆಲ್ಲಾ ಕಾಣಿಸಬಹುದು ಎಂದು ನೋಡುತ್ತಿದ್ದಳು.
ಮುಂದೇನೂ ಅಂತ ತಾನೇ ನಿಮ್ಮ ಕಣ್ಣು ಪ್ರಶ್ನಿಸುತ್ತಿರುವುದು ಮೇಸ್ಟ್ರೇ ಎಂದಳು ಸುನೀತಾ.
ಎಸ್.ಜಿ.ಮಾಸ್ಟ್ರು ವಿಷಾದದಿಂದ ಎಂಬ ಹಾಗೆಯೂ ನಸು ನಾಚಿಕೆ ಎಂಬ ಹಾಗೆಯೂ ನಕ್ಕರು.
ನಿಮ್ಮ ನಗುವಿನಲ್ಲಿ ನಾನು ಅರ್ಥ ಮಾಡಿಕೊಂಡಿದ್ದೇನೆ ಮೇಸ್ಟ್ರೇ.ಸಾಂಗತ್ಯದ ಪ್ರಶ್ನೆ ಬಂದಾಗಲೆಲ್ಲಾ ಹೆಣ್ಣು ದಯನೀಯವಾಗಿ ಸೋಲುತ್ತಾಳೆ.ಇಷ್ಟು ಕಾಲ ನಾನು ಅಂದುಕೊಂಡಿದ್ದೆ ಮನಸ್ಸನ್ನು ಮಹಾರಾಣಿಯಂತೆ ಆಳಬಲ್ಲೆ ಅಂತ.ಆದರೆ ಆಳಿಸಿಕೊಳ್ಳುತ್ತಾ ಇರುವಾಗ ಆಹಾ ಒಂದು ಸಾಮ್ರಾಜ್ಯದ ದೊರೆಸಾನಿ ಅಂತ ಸುಖಿಸುತ್ತೇವೆ.ಆದರೆ ನಮ್ಮ ಮನಸ್ಸನ್ನು ಆವರಿಸಿಕೊಂಡ ಆ ಸಾಮ್ರಾಜ್ಯದ ಸೀಮೆಯಾಚೆಗೆ ಯಾವಾಗ ದೊರೆಯ ಸೇನೆ ದಾಟಿತೋ ಅರಮನೆಯೇ ಕೆಡಹಿಬೀಳುತ್ತದೆ.
ಕಲ್ಯಾಣಿ ಆ ದಿನ ಆ ನೇತ್ರಾವತಿಯಲ್ಲಿ ಕೊಚ್ಚಿಹೋದಾಗ ಹೀಗೇ ಅಂದುಕೊಂಡಿದ್ದಾಳಾ? ಎಸ್.ಜಿ.ಮಾಸ್ಟ್ರು ಮೊದಲ ಬಾರಿಗೆ ತನ್ನೊಳಗೆ ಒಂದು ಕ್ವಶ್ಚನ್ ಮಾಡಿಕೊಂಡರು.
ಕಲ್ಯಾಣಿಗೂ ಒಂದು ಮನಸ್ಸೂ ಅಂತ ಇತ್ತಲ್ಲ.ಅದನ್ನು ನಾನು ಆಳಿದ್ದಿರಬಹುದಾ? ಅಥವಾ ಅವಳ ಅರಸೊತ್ತಿಗೆಯಲ್ಲಿ ನಾನೊಬ್ಬ ಸಾಮಂತ ಮಾತ್ರಾ ಆಗಿದ್ದಿರಬಹುದಾ?
ಹೆದರುವವಳಲ್ಲ ಮೇಸ್ಟ್ರೇ ಈ ಸುನೀತಾ.ಯಾವತ್ತಾದರೂ ನೇತ್ರಾವತಿಗೆ ಹಾರಿ ಸತ್ತೇನು ಅಂತ ಈ ಸುಕನ್ಯಾ ಅಂತ ನನ್ನ ಹೆತ್ತವಳಿದ್ದಾಳಲ್ಲ ಅವಳಿಗೆ ಭಯ ಮೇಸ್ಟ್ರೇ..ಥಾಕ್..ಈ ಸುನೀತಾಳ ಮನೋರಾಜ್ಯದಲ್ಲಿ ಯಾವತ್ತೂ ಸಾಮಂತರ ಆಳ್ವಿಕೆ ಇರುವುದೇ ಇಲ್ಲ..ಬಿಲೀವ್ ಮಿ..
ಏನಾದರೂ ಹೇಳಿ ಮೇಸ್ಟ್ರೇ..ಸುಕನ್ಯಾ ತನ್ನ ಅತ್ಯಂತ ಪ್ರೀತಿಯ ಮಾಸ್ಟ್ರ ಮುಂದೆ ಸೆರಗೊಡ್ಡಿ ಬೇಡಿಕೊಂಡಂತೆ ಕೇಳಿದಳು.
ಎಸ್.ಜಿ.ಮಾಸ್ಟ್ರು ಜೋರಾಗಿ ನಕ್ಕರು.ಸುಕನ್ಯಾ ನಿನ್ನ ಜೀವನದಲ್ಲಿ ನೀನು ಒಬ್ಬಳೇ ಇದ್ದದ್ದಾ?ಅಲ್ಲ ತಾನೇ.ಇರಲಿ ಬಿಡು ಹುಡುಗಿ ಅವಳಿಗೆ ಯಾವುದು ಇಷ್ಟ ಅದರಂತೆ ಬದುಕಲಿ ಅಂದರು.
ಆ ರಾತ್ರಿ ಸುಕನ್ಯಾಳಿಗೆ ಆ ವಯಸ್ಸಲ್ಲೂ ಎಸ್.ಜಿ.ಮಾಸ್ಟ್ರು ಕೇಳಿದ ಆ ಪ್ರಶ್ನೆಯಿಂದ ನಿದ್ದೆಯೇ ಬರಲಿಲ್ಲ.
ಅವಳೂ ದಡ್ಡಿಯೇ ಇರಬಹುದು ಆದರೆ ಎಸ್.ಜಿ.ಮಾಸ್ಟ್ರ ಪ್ರಶ್ನೆ ಅರ್ಥವಾಗದಷ್ಟು ದಡ್ಡಿಯೇನಲ್ಲ.


20160907

ಕೆಂಪುಬೊಟ್ಟಿನ ಮೀನುಉಜ್ಜಲ ದೇಶ ಸಂಪೂರ್ಣ ಸೀದು ಹೋಗಿತ್ತು. ದಂಡೆತ್ತಿ ಬಂದ ವೈರಿ ಸೇನೆ ಇಡೀ ರಾಜ್ಯವನ್ನು ತನ್ನ ವಶಕ್ಕೆ ಪಡೆದಿತ್ತು.ಯುದ್ಧ ಮತ್ತು ಪ್ರೇಮದಲ್ಲಿ ಏನೇ ಮಾಡಿದರೂ ಅದು ಸರಿಯೇ ಎಂಬ ಮಾತಿಲ್ಲವೇ? ಹಾಗೇ ಇಡೀ ಉಜ್ಜಲ ದೇಶವನ್ನು ಚೆಂಡಾಡಿದ ವೈರಿ ಸೇನೆ ಏನೆಲ್ಲಾ ಮಾಡದೇ ಉಳಿದಿತ್ತು ಎಂಬುದಷ್ಟೇ ಇತ್ತು.
ಕಥೆಗಾರ ಆರಂಭದಲ್ಲೇ ಪ್ರವೇಶಿಸಿದ್ದಾನೆ.ಉಜ್ಜಲ ದೇಶದ ಮಹತ್ವದ ಕಥೆಗಾರನಾತ.ಅವನಿಗೊಬ್ಬಳು ಪ್ರೇಯಸಿ.ಆಕೆ ಅವನ ಅಭಿಮಾನಿ.ಅವನೂ ಅವಳ ಆರಾಧಕ.ಅವಳಲ್ಲಿ ಆತ ಸದಾ ದೇವತೆಯನ್ನು ಕಾಣುತ್ತಿದ್ದ.ಅವಳು ಅವನಲ್ಲಿ ಪ್ರೀತಿಯ ಆರಾಧನೆಯನ್ನು ಬಯಸುತ್ತಿದ್ದಳು.
ಕಥೆಗಾರ ಮತ್ತವನ ಪ್ರೇಯಸಿ ಆ ಮಹಾಯುದ್ಧದಲ್ಲಿ ಕದಡಿಹೋಗಿದ್ದರು.
ಕಥೆಗಾರ ಉದ್ದೇಶಪೂರ್ವಕ ಈ ಕದಡಿಹೋಗಿದ್ದರು ಎಂಬ ಪದ ಬಳಸಿದ್ದಾನೆ.ಅದಕ್ಕೆ ಬೇರೆ ಬೇರೆ ಅರ್ಥಗಳನ್ನು ಓದುಗ ಬಂಧುಗಳು ಅರ್ಥೈಸಿಕೊಳ್ಳುವಂತೆ ವಿನಂತಿಸಿದ್ದಾನೆ.
ಕಥೆಗಾರನ ಪ್ರೇಯಸಿ ತನ್ನ ಮನೆ ಮಕ್ಕಳನ್ನು ತೊರೆದು ಕಾಡು ಸೇರಿದ್ದಾಳೆ.ಅವಳು ಕಥೆಗಾರನನ್ನು ಹುಡುಕುತ್ತಿದ್ದಾಳೆ.ಕಥೆಗಾರ ವಾಸಿಸುತ್ತಿರುವ ಬೀದಿಯನ್ನು ಸಂಪೂರ್ಣವಾಗಿ ವೈರಿಸೇನೆ ಸುಟ್ಟುಹಾಕಿದೆ.ಅದು ಆಸ್ಥಾನ ವಿದ್ವಾಂಸರಿದ್ದ ಬೀದಿ.ಆ ಬೀದಿಯಲ್ಲಿ ನಿತ್ಯವೂ ಕಾವ್ಯ,ಕಥೆ,ಗಮಕ,ಗಾಯನ,ಪುರಾಣ,ಇತಿಹಾಸ,ಅಲಂಕಾರ,ತರ್ಕ,ಮೀಮಾಂಸೆ,ಶಾಸ್ತ್ರಾರ್ಥಗಳ ಗೋಷ್ಠಿ ನಡೆಯುತ್ತಿರುತ್ತಿತ್ತು.ಬೀದಿಯ ಸ್ವಾಗತ ದ್ವಾರದಲ್ಲೇ ಇರುವುದು ಸಾಹಿತ್ಯ ಮಂಟಪ.ಆ ಮಂಟಟಪದಲ್ಲಿ ವರ್ಷಪೂರ್ತಿ ಸಾಹಿತ್ಯ ಸಮಾರಾಧನೆ ನಡೆಯುತ್ತಿರುತ್ತದೆ.ಅನೇಕ ಬಾರಿ ಉಜ್ಜಲದೇಶದ ರಾಜ ಮಾರುವೇಷದಲ್ಲಿ ಬಂದು ಆ ಸಾಹಿತ್ಯ ಸಮಾರಾಧನೆಯನ್ನು ಸ್ವೀಕರಿಸಿದ್ದಿದೆ.ಆಸ್ಥಾನದಲ್ಲಿ ನಡೆಯುವ ಚರ್ಚೆ,ಸಾಹಿತ್ಯ,ವಿಚಾರಗೋಷ್ಠಿಗಳೇನಿದ್ದರೂ ರಾಜನ ಸಮ್ಮುಖದಲ್ಲಿ ನಡೆಯುತ್ತದೆ.ಆಗ ಸಾಹಿತಿ,ಕವಿ,ಕಥೆಗಾರ,ಪಂಡಿತರೆಲ್ಲಾ ಮುಕ್ತವಾಗಿ ಮಾತನಾಡುವುದಿಲ್ಲ.ಎಲ್ಲೋ ಒಂದೆಡೆ ಏನನ್ನೋ ಅಡಗಿಸುತ್ತಾರೆ ಅಥವಾ ತನ್ನನ್ನು ಮೆಚ್ಚಿಸಲೆಂದಷ್ಟೇ ವರ್ತಿಸುತ್ತಾರೆ ಎಂಬುದು ರಾಜನಿಗೆ ಗೊತ್ತಿದೆ.ಅದಕ್ಕೆ ಅವನು ಆ ಮಂಟಪಕ್ಕೆ ಬರುತ್ತಾನೆ.ಜೊತೆಗೆ ರಾಣಿಯೂ.
ಈಗ ಇದಾವುದೂ ಉಳಿದಿಲ್ಲ.ವೈರಿಸೇನೆ ಬೀದಿಯ ಒಂದೇ ಒಂದು ಮನೆಯನ್ನು ಬಿಡದೇ ಸುಟ್ಟು ಹಾಕಿದೆ.ಸಾವಿರಾರು ಲಾಕ್ಷಣಿಕ ಗ್ರಂಥಗಳೂ ಸೇರಿ ಸರ್ವಸ್ವವೂ ನಾಶವಾಗಿವೆ.ಕಥೆಗಾರ ಅದೆಷ್ಟು ಸಾವಿರ ಕಥೆ ಬರೆದು ಪೇರಿಸಿಟ್ಟಿದ್ದನೋ ಅದೆಲ್ಲವೂ ಹೊತ್ತಿ ಭಸ್ಮವಾಗಿದೆ.
ಕತೆಗಾರನ ಪ್ರೇಯಸಿ ಆ ಬೀದಿಯಲ್ಲೆಲ್ಲಾ ಸುತ್ತಿದ್ದಾಳೆ.ಕಥೆಗಾರನ ಕುರುಹೇನಾದರೂ ಸಿಗುವುದೋ ಎಂದು ಹಂಬಲಿಸಿದ್ದಾಳೆ.ಆದರೆ ಏನೂ ಇಲ್ಲ.ಯಾವುದೂ ಇಲ್ಲ.ಆಕೆಗೆ ತನ್ನ ಗಂಡ,ಮಕ್ಕಳೇನಾದರೆಂಬುದು ಗೊತ್ತಿಲ್ಲ.ಅವರೆಲ್ಲಾ ಎಲ್ಲಾದರೂ ಹೋಗಿ ಸುಖವಾಗಿ ಇರಬಹುದು ಎಂಬ ಗಟ್ಟಿ ನಂಬುಗೆ ಅವಳಲ್ಲಿ ಇದೆ.ಆದರೆ ಕಥೆಗಾರ,ಅವಳ ಪ್ರಿಯಕರ ಮಾತ್ರಾ ಅವಳಿಗೆ ಈಗ ಎಲ್ಲಿದ್ದಾನೆ,ಹೇಗಿದ್ದಾನೆ ಎಂಬುದು ಬೇಕಾಗಿದೆ.ಅದಕ್ಕಾಗಿ ಅವಳು ಅವನನ್ನು ಹುಡುಕುತ್ತಿದ್ದಾಳೆ.
ಬೀದಿಯುದ್ದಕ್ಕೂ ಒಬ್ಬರೇ ಒಬ್ಬರು ಕಾಣಿಸುತ್ತಿಲ್ಲ.ಒಂದಾದರೂ ಜೀವ ಸಿಕ್ಕರೂ ಸಾಕು ಎಂದು ಆಕೆ ಹಂಬಲಿಸುತ್ತಿದ್ದಾಳೆ.ಅವಳ ಪ್ರೀತಿಯ ಕಥೆಗಾರ ಎಲ್ಲಿದ್ದಾನೆ ಎಂದು ತಿಳಿಸಲು ಒಂದು ನೀಲಿ ರೆಕ್ಕೆಯ ಹಳದಿ ಪುಚ್ಛದ ಹಕ್ಕಿ ಸಿಕ್ಕರೂ ಸಾಕು.ಆ ಹಕ್ಕಿಯ ಉಲಿಯನ್ನು ಆಕೆ ಅರ್ಥಮಾಡಿಕೊಂಡಾಳು.ಅವಳಿಗೆ ಆಮೇಲೆ ಕಥೆಗಾರ ಸಿಗುತ್ತಾನೆ.
ಆದರೆ ಎಲ್ಲಿದೆ ಹಕ್ಕಿ?
ಆ ಪ್ರಿಯತಮೆ ಬೀದಿಯ ಉದ್ದಕ್ಕೂ ಸಾಗುತ್ತಾಳೆ.ಎಲ್ಲವೂ ಸುಟ್ಟು ಭಸ್ಮವಾಗಿದೆ.ಕಥೆಗಾರನ ಮನೆ ಅಲ್ಲಿತ್ತು ಎಂಬ ಬಗ್ಗೆ ಯಾವ ಕುರುಹೂ ಇಲ್ಲದಂತಿದೆ.ಬೀದಿಯ ನೆತ್ತಿಯಲ್ಲಿ ಅರಮನೆಯ ವಿಮಾನಗೋಪುರ ಕಾಣುತ್ತಿದೆ.ಎರಡು ದಿನಗಳ ಹಿಂದೆ ಆಕೆಗೆ ಮೀನುಗಾರ ಹೇಳಿದ್ದ,ಅರಮನೆಯನ್ನು ವೈರಿಗಳು ಏನೂ ಮಾಡಿಲ್ಲ.ಅವರೆಲ್ಲಾ ಅದರೊಳಗಿನ ವೈಭೋಗವನ್ನು ಅನುಭವಿಸುತ್ತಿದ್ದಾರೆ ಎಂದು.
ಕಥೆಗಾರನ ಪ್ರಿಯತಮೆ ಅರಮನೆಯತ್ತ ಹೋಗೋಣವೇ ಎಂದು ಯೋಚಿಸುತ್ತಾಳೆ.ಆದರೆ ಅವಳಿಗೆ ಗೊತ್ತು,ಅಲ್ಲಿ ವೈರಿಸೇನೆ ತನ್ನ ಮೇಲೆ ಆಕ್ರಮಣ ಮಾಡುವುದು ಖಚಿತ.ಹಾಗಾಗಿ ಆಕೆ ಬೀದಿಯ ನೆತ್ತಿಯನ್ನು ದಾಟಿ ಸೀದಾ ನದಿಯತ್ತ ನಡೆಯುತ್ತಾಳೆ.ನದಿ ದಂಡೆಯಲ್ಲಿ ಅದೇ ಮೀನುಗಾರ.ಅವನು ಅದೇ ಭಂಗಿಯಲ್ಲಿ ಕುಳಿತಿದ್ದಾನೆ.ಈ ಬಾರಿ ಅವನ ಕೈಯಲ್ಲಿ ಬಲೆಯಿಲ್ಲ,ಗಾಳವಿಲ್ಲ.
ಮೀನುಗಾರ ಯಾವುದೋ ಹಾಡನ್ನು ಹಾಡುತ್ತಿದ್ದಾನೆ.ಕಥೆಗಾರನ ಪ್ರಿಯತಮೆ ಆ ಹಾಡಿಗೆ ಕಿವಿಯಾನಿಸುತ್ತಾಳೆ.ಅದು ಹಾಡಲ್ಲ,ಕಥೆ.ಕಥೆಯನ್ನು ಆ ಮೀನುಗಾರ ಹಾಡಿನ ರೀತಿ ಹೇಳುತ್ತಿದ್ದಾನೆ.
ಪ್ರಿಯತಮೆಗೆ ಅರ್ಥವಾಗುತ್ತದೆ,ಅದು ತನ್ನ ಪ್ರಿಯತಮನೇ ಬರೆದ ಕಥೆ.ಮೀನುಗಾರ ಅದನ್ನೇ ಹೇಳುತ್ತಿದ್ದಾನೆ.
ಆಕೆ ಆ ಮೀನುಗಾರನ ಬಳಿ ಹೋಗಿ ಕೂರುತ್ತಾಳೆ.ಆತ ಆಕೆಯನ್ನು ನೋಡಿ ನಸುನಗುತ್ತಾನೆ.ಅವನು ಮತ್ತೆ ಆ ಕಥಾನಕವನ್ನು ಹಾಡುತ್ತಾನೆ.ಮೀನುಗಾರನ ವಿಶಾಲ ಎದೆಯಲ್ಲಿ ತನ್ನ ದೇಹವನ್ನು ಆನಿಸಿಕೊಳ್ಳಬೇಕೆಂದು ಆ ಪ್ರಿಯತಮೆಗೆ ಒಮ್ಮಿಂದೊಮ್ಮೆಲೆ ದಟ್ಟವಾಗಿ ಅನಿಸುತ್ತದೆ.ಅವಳಿಗೆ ಆ ಕಥೆಯ ಮೂಲಕ ತನ್ನ ಪ್ರಿಯಕರ ಮೀನುಗಾರನಲ್ಲಿ ಕಾಣಿಸುತ್ತಾನೆ.
ಮೀನುಗಾರ ಹರಿವ ನೀರಿನಲ್ಲಿ ಪಾದಗಳನ್ನು ಇಳಿಬಿಟ್ಟಿದ್ದಾನೆ.ಅವನ ಮುದ್ದಾದ ಪಾದಗಳನು ನೋಡಿ ಆಕೆಗೆ ಉನ್ಮಾದವಾಗುತ್ತದೆ.ಅವಳೂ ತನ್ನ ಪಾದಗಳನ್ನು ನೀರಿಗೆ ನೀವುತ್ತಾಳೆ.ಮೀನುಗಳು ಬಂದು ಪಾದಗಳನ್ನು ಚುಂಬಿಸಿ ಸಾಗುತ್ತವೆ.ಒಂದಾದ ಮೇಲೊಂದು ಮೀನು ಬಂದೂ ಬಂದೂ ನೀಡುವ ಮುತ್ತಿನ ಮೋಹಕತೆಯನ್ನು ಅನುಭವಿಸುತ್ತಾ ಆ ಕಥೆಗಾರನ ಪ್ರಿಯತಮೆ ಆ ಮೀನುಗಾರನ ಪಾದದ ಕಿರುಬೆರಳನ್ನು ತನ್ನ ಪಾದದ ಕಿರುಬೆರಳಿನ ಜೊತೆ ಬಂಧಿಸುತ್ತಾಳೆ.
ನನಗೇನೂ ಗೊತ್ತಿಲ್ಲ.ಈ ರಾಜ್ಯ,ಈ ಕೋಶ,ರಾಜ,ಅಂತಃಪುರ,ರಾಣಿಯರು ಯಾರೂ ಎಲ್ಲಿದ್ದಾರೆಂದು ನಾನು ಹೇಳಲಾರೆ.ಆದರೆ ಕಥೆಗಾರ ಮಾತ್ರಾ ದಂಡೆಯಾಚೆ ಅಗೋ ಅಲ್ಲಿ ಇದ್ದಾನೆ ಎಂದು ಮೀನುಗಾರ ಅವಳಿಗೆ ಮಾತ್ರಾ ಕೇಳಿಸುವಂತೆ ಹೇಳುತ್ತಾನೆ.
ಅವಳಿಗೆ ಆ ಮಾತಿನ ಸ್ಪರ್ಶ ಮೀನುಗಾರನ ಕಿರುಬೆರಳ ಮೂಲಕವೇ ಹರಿದುಬಂದಂತಾಗಿ ಮೈ ಝುಂ ಎನ್ನುತ್ತದೆ.ಒಂದೇ ಒಂದು ಸಾರಿ ನನ್ನನ್ನು ಈ ನದಿಯ ದಡದಾಚೆ ಎತ್ತಿ ಹಾಕಿಬಿಡು,ಮುಂದೆಂದೂ ನಾನು ಈ ರಾಜ್ಯದತ್ತ ಮುಖ ಮಾಡಲಾರೆ,ನನಗೆ ನನ್ನ ಗಂಡ,ಮಕ್ಕಳು,ಮನೆ,ಅರ್ಥ,ಕಾಮ ಯಾವುದೂ ಬೇಕಾಗಿಲ್ಲ ಎಂದು ಆಕೆ ಆ ಮೀನುಗಾರನ ಬಳಿ ಮೊರೆಯಿಡುತ್ತಾಳೆ.ಆತ ತಾನು ಹಾಡುತ್ತಿದ್ದ ಕಥೆಯನ್ನು ನಿಲ್ಲಿಸುತ್ತಾನೆ.ಅವಳನ್ನು ಬಾಚಿ ತಬ್ಬಿಕೊಂಡು ತಲೆಯ ಮೇಲೆ ಹೊತ್ತು ನದಿಗೆ ಧುಮುಕುತ್ತಾನೆ.ಅವಳ ಮೈಮಾಟಕ್ಕೆ ಯಾವ ಖತಿಯೂ ಆಗದಂತೆ ನದಿಯ ಅಬ್ಬರವನ್ನು ಮಣಿಸುತ್ತಾ ಈಜುತ್ತಾನೆ.ನದಿಯ ಮಧ್ಯ ಭಾಗದಲ್ಲಿ  ಆ ಬಂಡೆಯ ಮೇಲೆ ಅವಳನ್ನು ಕೆಡಹುತ್ತಾನೆ.ಆಕೆ ಬಾಯ್ತುಂಬಾ ನಗುತ್ತಾಳೆ.ಅವಳ ನಗುವಿನ ರಭಸಕ್ಕೆ ಒಂದು ಕ್ಷಣ ಆ ನದಿಯ ನಿನಾದವೂ ನಾಚಿಕೊಳ್ಳುತ್ತದೆ.
ಓಹ್ ಎನ್ನುತ್ತಾಳೆ ಆಕೆ.
ಅವನು ಉಶ್ ಅನ್ನುತ್ತಾನೆ.
ಇಬ್ಬರೂ ಆ ಬಂಡೆಯ ಮೇಲೆ ಕೂರುತ್ತಾರೆ.ಅವಳು ಅತ್ಯಂತ ಪ್ರೀತಿಯಿಂದ ಅವನ ಒದ್ದೆ ಮೈಗೆ ಅಂಟಿದ್ದ ಆ ಒದ್ದೆ ಶಲ್ಯವನ್ನು ಬಿಡಿಸುತ್ತಾಳೆ.ಅವನು ಅವಳ ಕಣ್ಣುಗಳನ್ನು ನೋಡುತ್ತಾನೆ.ಅವಳು ಅವನ ಶಲ್ಯವನ್ನು ಬಿಚ್ಚಿ ಅದರಲ್ಲಿದ್ದ ನೀರನ್ನು ಹಿಂಡಿ ಸೀದುತ್ತಾಳೆ.ಆಮೇಲೆ ಅವನು ಶತಮಾನಗಳಿಂದ ಮೈಗೆ ಬಿಗಿದುಕಟ್ಟಿದಂತಿದ್ದ ಆ ಪಂಚೆಯನ್ನು ನಿಧಾನವಾಗಿ ಸಡಿಲಿಸುತ್ತಾಳೆ.ನೋಡುತ್ತಾ ನೋಡುತ್ತಾ ಮೀನುಗಾರ ಬೆತ್ತಲಾಗುತ್ತಾನೆ.
ಅವಳೂ ಅವನ ಕಣ್ಮುಂದೆಯೇ ಒಂದೊಂದೇ ಬಟ್ಟೆಗಳನ್ನು ಕಳಚುತ್ತಾಳೆ.ಹೂಬಿಸಿಲು ಬಂಡೆಯ ಮೇಲೆ ರಾಚುತ್ತಿದೆ.ನದಿ ಬಂಡೆಯನ್ನು ಸುತ್ತುಬಳಸಿ ತಬ್ಬಿ ಮುದ್ದಾಡಿ ಮುಂದೋಡುತ್ತಿದೆ.ಅದೆಷ್ಟು ಕಾಲದಿಂದ ಆ ತಬ್ಬುಗೆಯೋ ಏನೋ? ನದಿಯ ತಬ್ಬುಗೆಗೆ ಆ ಕೊರಲು ಬಂಡೆ ಅದೆಷ್ಟು ನುಣುಪಾಗಿದೆ ಆಹಾ!
ಇಡೀ ದೇಶ ನಾಶವಾಗಿದೆ,ನಾನು ನನ್ನ ಗಂಡ,ನನ್ನ ಮಕ್ಕಳು,ನನ್ನ ಮನೆ,ನನ್ನ ಉದ್ಯೋಗ,ನನ್ನ ಕೋಶ..ಎಲ್ಲವೂ ಅನ್ನುತ್ತಾಳೆ ಕಥೆಗಾರ ಪ್ರಿಯತಮೆ.
ಆದರೆ ಈ ನದಿ,ಈ ಹರಿವು,ಈ ಬಂಡೆ ಈ ಹೊಂಬೆಳಕು ಯಾವುದನ್ನೂ ಯುದ್ಧ,ಆಕ್ರಮಣ,ದಾಳಿ ಏನೂ ಮಾಡಲಾಗಿಲ್ಲ ಎಂದು ಮೀನುಗಾರ ಹೇಳುತ್ತಾನೆ.
ನನ್ನ ಬಲೆಗೆ ನಿನ್ನೆಯೂ ಆ ಕೆಂಪುಬೊಟ್ಟಿನ ಮೀನು ಬಂದಿತ್ತು.ನಾನು ಅದನ್ನು ಮತ್ತೆ ನೀರಿಗೆ ಕಳುಹಿಸಿಕೊಟ್ಟೆ ಎನ್ನುತ್ತಾನೆ.
ಅವನ ಜೊತೆ ರಮಿಸಬೇಕು ಎಂದು ಹವಣಿಸಿದ್ದ ಆ ಕಥೆಗಾರನ ಪ್ರಿಯತಮೆ ಮತ್ತೆ ತನ್ನ ಬಟ್ಟೆಗಳನ್ನು ಸುತ್ತಿಕೊಳ್ಳುತ್ತಾಳೆ.ಅವನಿಗೆ ಮತ್ತೆ ಬಿಚ್ಚಿದ ಪಂಚೆ ಉಡಿಸಿ ಅರೆಬಾಡಿದ ಶಲ್ಯವನ್ನು ಹೊದಿಸುತ್ತಾಳೆ.
ಇನ್ನರ್ಧ ದಾರಿ ದಯವಿಟ್ಟು ನನ್ನನ್ನು ಈ ನದಿಯಾಚೆಗೆ ದಾಟಿಸಿಕೊಡು.ಮತ್ತೆಂದೂ ನಾನು ನಿನ್ನ ಕಾಣಲಾರೆ ಎಂದು ಭರವಸೆ ನೀಡಿದಂತೆ ಬೇಡುತ್ತಾಳೆ.ಅವಳ ಧ್ವನಿಯಲ್ಲಿ ಆ ಆರ್ದ್ರತೆಯನ್ನು ಕಂಡ ಮೀನುಗಾರ ಅವಳ ಮುಖವನ್ನು ಬೊಗಸೆಯಲ್ಲಿ ಹಿಡಿದು ಅವಳ ನೆತ್ತಿಗೆ ಚುಂಬಿಸುತ್ತಾನೆ.
ಅರ್ಧ ಹಾದಿಯಲ್ಲಿ ನಿನ್ನನ್ನು ಬಿಡಲಾರೆ,ಹಾಗೆಯೇ ಆ ಕಥೆಯನ್ನೂ ಅರ್ಧಕ್ಕೆ ನಿಲ್ಲಿಸಲಾರೆ ಎನ್ನುತ್ತಾನೆ.
ಅದು ನನ್ನ ಪ್ರಿಯಕರನ ಕಥೆ,ಆ ಕಥೆಗೆ ಸಾವಿರಾರು ಓಟಗಳಿವೆ.ನನಗೆ ಆ ಕಥೆಯನ್ನು ಕೇಳಿಸು ಎಂದು ಆಕೆ ವಿನಂತಿಸುತ್ತಾಳೆ.
ಮೀನುಗಾರ ಕೇಳುತ್ತಾನೆ,ಆ ಕಥೆ ನನ್ನದು.
ಹಾಗಾದರೆ ನಾನು ಪ್ರೀತಿಸಿದ ಕಥೆಗಾರ ನೀನೇನು?
ನನಗೆ ಗೊತ್ತಿಲ್ಲ.ಅವನು ಯಾರೆಂದೂ ನನಗೆ ತಿಳಿದಿಲ್ಲ.ಪ್ರತೀ ನಿತ್ಯ ಸಂಜೆ ನನ್ನ ಬಳಿಗೆ ನದಿ ದಂಡೆಯಲ್ಲಿ ನಾನು ಕುಳಿತಿದ್ದಾಗ ಅವನು ಬರುತ್ತಿದ್ದ.ಆಸ್ಥಾನಕ್ಕೊಂದು ಕಥೆ ಬೇಕು ಹೇಳು ಎನ್ನುತ್ತಿದ್ದ.ನಾನು ಹೇಳುತ್ತಿದ್ದೆ.ಅವನು ಅದನ್ನು ಕಣ್ಮುಚ್ಚಿ ಕೇಳುತ್ತಿದ್ದ.ಒಂದಾದರೊಂದು  ದಿನ ನಾನು ಅವನಿಗೆ ಕಥೆಯನ್ನು ಏನು ಮಾಡಿದೆ ಎಂದು ಕೇಳುತ್ತಿರಲಿಲ್ಲ.ಅವನು ಆ ಕಥೆಯನ್ನು ಆಸ್ಥಾನದಲ್ಲಿ ಹೇಳಿದನೇ ನನಗೂ ಗೊತ್ತಿಲ್ಲ.ನನಗದರ ಅಗತ್ಯವೂ ಇಲ್ಲ .....
ಯುದ್ಧ ನಡೆದ ಮೇಲೆ ಅವನು ಬರಲಿಲ್ಲ.ಆಮೇಲೆ ಬಂದವಳು ನೀನು.
ಹಾಗಾದರೆ ನೀರಿನಲ್ಲಿ ಮುಳುಗಿದ್ದ ನಿನ್ನ ಪಾದಗಳನ್ನು ನೋಡಿ ನನ್ನಲ್ಲಿ ಉಕ್ಕಿದ್ದ ಆ ಲಹರಿಗೆ ಈಗ ಅರ್ಥ ಸಿಕ್ಕಿತು ಎಂದಳು ಅವಳು.
ಮತ್ತೆ ಅವನ ಶಲ್ಯವನ್ನು ಸೆಳೆದಳು.ಪಂಚೆಯನ್ನು ಕಿತ್ತಳು.ತನ್ನ ಮೈಮೇಲಿನ ಬಟ್ಟೆಗಳನ್ನು ನಿವಾಳಿಸಿದಂತೆ ಕಳಚಿದಳು.ಎಲ್ಲವನ್ನೂ ನದಿಗೆ ಎಸೆದು ಆ ಮೀನುಗಾರನನ್ನು ಬಿಗಿಯಾಗಿ ತಬ್ಬಿಕೊಂಡಳು.
ದಡದಾಚೆಗೆ ದೇಶಕ್ಕೆ ಮುಖಮಾಡಿ ಉಜ್ಜಲ ದೇಶದ ರಾಜ ಮತ್ತು ಅವನ ದಂಡು ನಿಂತಿತ್ತು.
ಮೀನುಗಾರ ಅವಳ ತೆಕ್ಕೆಯಲ್ಲಿ ಉಸುರಿದ, ಮತ್ತೆ ಯುದ್ಧ ನಡೆಯುತ್ತದೆ.ರಾಜ ಮರಳಿ ಬರುತ್ತಾನೆ.ಸೋತುಹೋದ ದೇಶವನ್ನು ರಾಜ ಮತ್ತೆ ಗೆಲ್ಲುತ್ತಾನೆ.ಆ ಬೀದಿ, ಆ ಮನೆಗಳು ಮತ್ತೆ ಬರುತ್ತವೆ.ಕಥೆಗಾರ ಮತ್ತೆ ನನ್ನ ಬಳಿಗೆ ಕಥೆ ಕೇಳಲು ಬರುತ್ತಾನೆ.ಅವನಿಗಾಗಿ ನಾನು ಕಥೆ ಹೇಳುತ್ತೇನೆ.ಅವನು ಅದನ್ನು ಆಸ್ಥಾನದಲ್ಲಿ ಮತ್ತೆ ಹೇಳುತ್ತಾನೆ
 ನಾನು  ರಾಣಿ, ಆ ಉಜ್ಜಲ ದೇಶದ ಅರಸಿ.ಈಗ ಈ ನದಿಯ ಅರ್ಧದಲ್ಲಿ ನಾನಿದ್ದೇನೆ.ನಾವಿಲ್ಲೇ ಇರೋಣ.ಇದು ಯಾವ ದೇಶವೂ ಅಲ್ಲ. ರಾಜ ಯುದ್ಧದಲ್ಲಿ ಸೋಲಲಿ, ದೇಶ ವೈರಿಗಳದ್ದಾಗಲಿ,ನನಗೆ ನೀನು ಸಾಕು. ಕಥೆ ಕಟ್ಟಿದ ನೀನೇ ನನ್ನ ಪ್ರಿಯಕರ.ನಮಗೆ ಯಾವ ಹಂಗೂ ಬೇಡ,ಯಾರ ಹಂಗೂ ಬೇಡ.ಅದಕ್ಕೇ ಬಟ್ಟೆಗಳನ್ನೆಲ್ಲಾ ನದಿಗೆ ಎಸೆದೆ ಎಂದು ಆ ಕಥೆಗಾರನ ಪ್ರಿಯತಮೆ  ಆ ಮೀನುಗಾರನನ್ನು ಮತ್ತಷ್ಟು ತಬ್ಬಿಕೊಂಡಳು.
ರಾಜ ಮತ್ತು ಅವನ ಸೇನೆ ನದಿ ದಾಟಿ ಉಜ್ಜಲದೇಶವನ್ನು ಮರಳಿ ಪಡೆಯಲು ಮುನ್ನುಗ್ಗಿತು.ಬಹುಶಃ ಆ ದೇಶವನ್ನು ಆತ ಮರಳಿ ಪಡೆಯಲೂ ಬಹುದು.