20160826

ಅವಳು ಅತ್ತಿಹೂವುಶರ್ಮಿಳೆ ಬರುತ್ತಿದ್ದಾಳೆ ಎಂದು ಶಿಬಿಗೆ ಗೊತ್ತಾಗೋ ಹೊತ್ತಿಗೆ ತೀರಾ ತಡವಾಗಿತ್ತು.ಶರ್ಮಿಳೆಯ ವಾಟ್ಸ್‌ಪ್ ಮೆಸೇಜ್ ಒಂದಲ್ಲ ಮೂರಲ್ಲ ಇಪ್ಪತ್ತಕ್ಕೂ ಹೆಚ್ಚು ಬಂದು ಶಿಬಿಯ ಸ್ಮಾರ್ಟ್‌ಫೋನ್ ಮೇಲೆ ಬಿದ್ದಿದ್ದವು.
ಶರ್ಮಿಳೆ ಸುಮ್ಮನೇ ಬರಲಿಕ್ಕಿಲ್ಲ.ಅಷ್ಟೊಂದು ದೂರದಿಂದ ಆಕೆ ಬರುತ್ತಾಳೆ ಎಂದರೆ ಏನೋ ಇರಲೇಬೇಕು.ಹಾಗೇ ನೋಡಿದರೆ ಶರ್ಮಿಳೆ ಅದೆಷ್ಟು ಸಾರಿ ಬಂದು ಹೋಗುತ್ತಾಳೋ ಏನೋ?ಅದನ್ನೆಲ್ಲಾ ಶಿಬಿಗೆ ಗಮನಿಸುವುದೂ ಇಲ್ಲ. ಈ ಬಾರಿ ಅವಳು ತಾನು ಬರುತ್ತಿರುವ ಕುರಿತು ಮೆಸೇಜ್ ಕಳುಹಿಸಿದ್ದಾಳೆ. ಆ ಮೆಸೇಜ್‌ನಲ್ಲಿ ಸ್ಪಷ್ಟವಾಗಿ ಶಿಬಿ ಏರ್‌ಪೋರ್ಟ್‌ಗೆ ಎಷ್ಟು ಹೊತ್ತಿಗೆ ಬರಬೇಕು ಎಂಬುದನ್ನು ಸೂಚಿಸಿದ್ದಾಳೆ. ಕಮ್ ಅಲೋನ್ ಅಂತ ಬೇರೆ ಆದೇಶ ಇದೆ. ಅಲೋನ್ ಅಂದರೆ ಡ್ರೈವರ್ ಇರಬಾರದು, ನೀನು ಮಾತ್ರಾ ಸಾಕು ಎಂಬುದು ನಿರ್ದೇಶನ
ಶಿಬಿಗೆ ಇರೋದು ಒಂದೇ ನಂಬರು.ಅವನು ಸ್ಮಾರ್ಟ್ ಫೋನ್‌ಗೆ ಅದನ್ನು ಲಿಂಕ್ ಮಾಡಿಟ್ಟಿದ್ದ.ಅವನ ಆರ್ಡಿನರಿ ಫೋನ್‌ನಲ್ಲಿ ಮೆಸೇಜು ಮತ್ತು ಕಾಲ್ ಬಿಟ್ಟರೆ ಇನ್ನೇನೂ ಸೌಲಭ್ಯ ಇಲ್ಲ.ಅದಕ್ಕೆ ಕಾರಣ ಅವನಿಗೆ ಈ ಫೋನ್ ಬಳಕೆಯ ಕುರಿತು ಅವನು ತಲುಪಿರುವ ಸಾಚುರೇಶನ್ ಪಾಯಿಂಟ್.
ಮೊಬೈಲ್  ಫೋನ್ ಅಂದರೆ ಅವನಿಗೆ ರೇಜಿಗೆ.ಹಾಗಂತ ಅವನು ಅದನ್ನು ಬಳಸದೇ ಇರುವುದಕ್ಕೂ ಆಗದ ಸ್ಥಿತಿ. ಯಾವೆಲ್ಲಾ ರೀತಿ ಅವಾಡ್ ಮಾಡಬಹುದೋ ಆ ರೀತಿಯೆಲ್ಲಾ ಅವನು ಅದನ್ನು ಅವಾಡ್ ಮಾಡಿಯೇ ಬದುಕುತ್ತಾನೆ.ಇದೂ ಒಂದು ಫೋಬಿಯಾಕ್ಕೆ ಸೇರಿದೆ ಎಂಬುದು ಅವನಿಗೆ ಗೊತ್ತಾಗಿದೆ.
ಹಾಗಾಗಿ ಶರ್ಮಿಳೆಯ ಸಂದೇಶ ನೋಡೋ ಹೊತ್ತಿಗೆ ತಡವಾಗಿತ್ತು.
ರೆಸೆಪ್ಶನಿಸ್ಟ್ ಸೀಮಾಗಂಗಾಧರ್ ಬಳಿಯೇ ಹೆಚ್ಚಾಗಿ ಅವನ ಫೋನ್ ಇರುತ್ತದೆ.ಅವಳ ಕೈಗಿಟ್ಟು ಕಚೇರಿ ಒಳಗೆ ಹೋದರೆ ಮತ್ತೆ ಅವನು ಅದನ್ನು ಸಂಜೆ ವೇಳೆಗೇ ತೆರೆಯೋದು.ಕಾರಲ್ಲಿ ಹೋಗುತ್ತಿದ್ದರೆ ಫೋನ್ ಚಾಲಕ ಜೈನುದ್ದೀನ್‌ಗೆ ಕೊಡುತ್ತಾನೆ.ಯಾರೇ ಕರೆ ಮಾಡಿದರೂ ಉತ್ತರಿಸುವುದೇ ಜೈನುದ್ದೀನ್.
ಹಾಗಾಗಿ ಅವನು ಎರಡನೇ ದಿನ ವಾಟ್ಸಪ್ ಚೆಕ್ ಮಾಡುವಾಗಲೇ ಶರ್ಮಿಳೆಯ ಸಂದೇಶ ಸಿಕ್ಕಿದ್ದು.

ಶಿಬಿ ತಾನೇ ಕಾರು ಚಲಾಯಿಸುತ್ತಾ ಹೋಗಿ ಏರ್‌ಪೋರ್ಟ್‌ನಿಂದ ಶರ್ಮಿಳೆಯನ್ನು ಬರಮಾಡಿಕೊಂಡ.ಅವಳ ಖದರು ಸ್ವಲ್ಪವೂ ಬದಲಾಗಲಿಲ್ಲ ಎಂಬುದನ್ನು ಅವಳು ಏರ್‌ಪೋರ್ಟ್ ಲಾಂಜ್‌ನಲ್ಲಿ ಕಪ್ಪುಚಾಳೀಸು ಹಾಕಿಕೊಂಡು ಧಿಮಾಕಿನಲ್ಲಿ ನಿಂತಾಗಲೇ ಗಮನಿಸಿದ್ದ.ಶರ್ಮಿಳೆಯ ಬಳಿಗೆ ಅವನೇ ಹೋಗಿದ್ದಾಯಿತು. ಮೊದಲ ನೋಟಕ್ಕಾದರೂ ಚಾಳೀಸು ಕೀಳುತ್ತಾಳೆ ಎಂದುಕೊಂಡರೆ ನೋ.ಅವಳು ಮುಚ್ಚಿದ ಕಣ್ಣೊಳಗೆ ನಕ್ಕಳೋ ಗೊತ್ತಾಗಲಿಲ್ಲ.ಯಾವ ನೋಟವನ್ನು ಬೀರಿರಬಹುದು.ಅದರಲ್ಲಿ ತುಂಟತನವಿತ್ತೇ, ಧಿಮಾಕಿನ ರಾಶಿಯಿತ್ತೇ,ಅವಳ ಎಂದಿನ ವರಸೆಯಾದ ಅಹಂಕಾರದ ಬೀರು ಇತ್ತೇ ಗೊತ್ತಾಗಲಿಲ್ಲ.ಶರ್ಮಿಳೆಯಲ್ಲಿ ಇವೆಲ್ಲವೂ ಅಲ್ಲದ ಒಂದು ಲಯ ಇದೆ,ಅದು ಅಪರಿಮಿತ ಪ್ರೀತಿ.ಅದನ್ನು ಕಣ್ಣ ನಗುವಿನಲ್ಲಿ ಅವಳು ಹಾಯಿಸಬಲ್ಲಳು ಎಂಬುದು ಶಿಬಿಗೆ ಗೊತ್ತಿತ್ತು,ಆದರೆ ಏರ್‌ಪೋರ್ಟ್‌ನ ಈ ಮುಖಾಮುಖಿಯಲ್ಲಿ ಅದು ನೆನಪಿಗೆ ಬರಲಿಲ್ಲ.
ಶಿಬಿ ಕಾರು ಓಡಿಸುತ್ತಿದ್ದರೆ ಹತ್ತಿರದಲ್ಲೇ ಕುಳಿತಿದ್ದ ಶರ್ಮಿಳೆ ಏಕಾಏಕಿ ವಿಂಡೋ ಬದಿಗೆ ಒತ್ತರಿಸಿದ್ದನ್ನು ಗಮನಿಸಿದ ಶಿಬಿ ಫಾರ್ಮಲ್ ಮಾತಿಗೆ ಶುರುವಿಟ್ಟುಕೊಂಡ.
ಅವನ ಮಾತಿಗೆ ಏಕಾಏಕಿ ಬ್ರೇಕ್ ಹಾಕಿದ ಶರ್ಮಿಳೆ ನನಗೆ ಅತ್ತಿಮರದ ನೀರು ಕುಡಿಯಬೇಕು.ಅದಕ್ಕಾಗಿಯೇ ನಾನು ಬಂದಿದ್ದು,ಅರೇಂಜ್ ಮಾಡು ಎಂದಳು.
ಅತ್ತಿಮರದ ನೀರಾ? ಎಂದ ಶಿಬಿ.
ಹೂಂ.ಅದೇ ಅತ್ತಿಮರದ ನೀರು. ಅದನ್ನೇ ಕುಡಿಯಬೇಕು
ಯಾವ ಡಾಕ್ಟರ್ ಹೇಳಿದ? ಯಾಕೆ ಹೇಳಿದ ಅಂತ ಕೇಳಬಹುದಾ?
ಯಾಕೋ ಡಾಕ್ಟರ್ ಹೇಳಿದರೆ ಮಾತ್ರಾ ಕುಡಿಯುವುದಾ ಅದನ್ನು?
ಶಿಬಿ ಮಾತನಾಡಲಿಲ್ಲ.ಇವತ್ತೇ ಹೋಗಬೇಕು.ನಾಳೆ ಬೆಳಗ್ಗೆ ನನಗೆ ಅತ್ತಿಮರದ ನೀರು ಬೇಕೇ ಬೇಕು.ಮತ್ತೆ ಶರ್ಮಿಳೆ ಹೇಳಿದಾಗ ಶಿಬಿ ಸೊಲ್ಲೆತ್ತಲಿಲ್ಲ.
ಆ ಅತ್ತಿಮರದ ಬಳಿಗೆ ಹೋಗಲು ಏನಿಲ್ಲಾ ಎಂದರೂ ಆರು ಗಂಟೆ ಬೇಕು.ಒಂದು ಸರಾಗ ಡ್ರೈವ್ ಮಾಡಿಕೊಂಡು ಹೋಗುವ ಹುಮ್ಮಸ್ಸೂ ಇದ್ದ ಹಾಗಿಲ್ಲ.ಆದರೆ ಶರ್ಮಿಳೆ ಯಾವ ಪ್ರಸ್ತಾಪಕ್ಕೂ ಒಪ್ಪುವ ಹಾಗೆ ಕಾಣುತ್ತಿಲ್ಲ.
ನೀನೇ ಬರುತ್ತಿಯಾ,ಅತ್ತಿ ಮರದ  ಬುಡಕ್ಕೆ ನಾನೊಬ್ಬಳೇ ಹೋಗುವುದಿಲ್ಲ ಶರ್ಮಿಳೆಯ ಮಾತಿನಲ್ಲಿ ರೆಚ್ಚೆ ಇತ್ತು.
ಯೆಸ್ ಅಂದ ಶಿಬಿ.ಕಣ್ಣು ರಸ್ತೆ ಮೇಲೆಯೇ ನೆಟ್ಟಿತ್ತು.
ಕಾರನ್ನು ಸೀದಾ ಹೊರಳಿಸಿಕೊಂಡ.

ಅತ್ತಿ ಮರ.
ಶಿಬಿಯ ಜೀವನದ ಭಾಗವೇ ಅದು. ಎಂದೂ ಹೂವು ಬಿಡದ ಅತ್ತಿಮರ. ಅಪ್ಪ ಹೇಳುತ್ತಿದ್ದ,ಅತ್ತಿ ಹೂವು ದೇವತೆಗಳಿಗೆ ಮಾತ್ರಾ ಕಾಣಸಿಗುತ್ತದೆ. ರಾತ್ರಿ ಆ ಹೂವು ಕೊಯ್ಯಲು ದೇವಗಂಧರ್ವ ಕಿನ್ನರಿ ಕಿಂಪುರುಷರು ಬಂದೇ ಬರುತ್ತಾರೆ. ಹೂವು ಮಾಯವಾಗಿ ಕಾಯಿ ಮಾತ್ರಾ ಆಮೇಲೆ ಕಾಣುತ್ತದೆ. ಹೂವನ್ನು ಮನುಷ್ಯ ಕಾಣಬೇಕಾದರೆ ಅವನೂ ಆ ದೈವತ್ವದ ಸ್ಥಿತಿಗೆ ತಲುಪಬೇಕು.
ಆ ಬಾಲ್ಯದಲ್ಲಿ ಆ ಕಥೆಗಳು ಶಿಬಿಯನ್ನು ಅತ್ತಿ ಮರದತ್ತ ಸೆಳೆದು ತಂದಿದ್ದವು. ಅತ್ತಿಹೂವು ಹುಡುಕಬೇಕು,ತಾನೂ ಕೊಯ್ಯಬೇಕು ಎಂದು ಅಮ್ಮನಿಗೆ ರೆಚ್ಚೆ ಹಿಡಿದಿದ್ದ. ಅದೇನು ಮಕ್ಕಳಾಟಿಕೆಯಾ? ಅತ್ತಿ ಹೂವುನ್ನು ಕಂಡವರು ಇದ್ದಾರಾ? ಅದನ್ನೇನಾದರೂ ಕೊಯ್ಯುವುದಕ್ಕೆ ಹೋದವರು ವಾಪಾಸ್ಸು ಬಂದಿದ್ದಾರಾ? ಏನು ಅಂತ ತಿಳಕೊಂಡಿದ್ದೀ ನೀನು ? ಎಂದು ಅಪ್ಪ ಗದರಿಸಿ ಹುಣಿಸೇಮರದ ಅಡರು ಮುರಿದು ತಂದು ಬೀಸಿದಲ್ಲಿಗೆ ಶಿಬಿಯ ಅತ್ತಿಹೂವಿನ ಆಸೆ ಮುರಿದುಕೊಂಡು ಮಣ್ಣು ತಿಂದಿತ್ತು.
ಆಮೇಲೆ ಎಂದೂ ಶಿಬಿ ಅತ್ತಿಹೂವಿನ ಆಸೆ ಮಾಡಲೇ ಇಲ್ಲ.
ಮನೆ ಮುಂದಿನ ತೋಟ    .ಕೆಳಗೆ ಇಳಿದು ಹೋಗಲು ಮೆಟ್ಟಿಲು.ಯಾವ ಕಾಲದಲ್ಲೋ ಕೆಂಪುಕಲ್ಲಿನಲ್ಲಿ ಅಚ್ಚುಕಟ್ಟಾಗಿ ಕಟ್ಟಿದ ಆ ಮೆಟ್ಟಿಲುಗಳ ಸಂದಿನಲ್ಲಿ ಪಾಚಿಗಿಡಗಳು.ಎಷ್ಟು ಬಾರಿ ಎಣಿಸಿದರೂ ತಪ್ಪುವ ಮೆಟ್ಟಿಲುಗಳ ಲೆಕ್ಕ.
ಶರ್ಮಿಳೆ ಮಾತ್ರಾ ಪ್ರತೀ ಬಾರಿ ಲೆಕ್ಕ ಒಪ್ಪಿಸುತ್ತಾಳೆ.ಶಿಬಿ ಮತ್ತು ಶಂಕರ ಅದು ತಪ್ಪು ಎಂದು ರೇಗಿಸುತ್ತಾರೆ.ಶರ್ಮಿಳೆಗೆ ಸಿಟ್ಟು ಬರುತ್ತದೆ.ಆಮೇಲೆ ಅಲ್ಲಿ ಮಹಾಯುದ್ಧ.ಶಿಬಿ ಮತ್ತು ಶಂಕರ ಕುರ್‍ಯೋ ಮುರ್‍ಯೋ ಎಂಬ ಹಾಗೇ ಅವರ ತಲೆಗೂದಲ ಮುಷ್ಠಿಯಲ್ಲಿ ಹಿಡಿದು ಬಗ್ಗಿಸಿ ಹೊಡೆಯುತ್ತಾಳೆ.ಆ ಹೊಡೆತ ತಿನ್ನುವ ಆ ಕುಶಿಗೆ  ಶಿಬಿ ಬೆನ್ನು ಒಡ್ಡಿಸಿ ಕೊಡುತ್ತಾನೆ. ಮೆಟ್ಟಿಲಿಳಿದರೆ ಬಾವಿ.ಕಳೆದ ವರ್ಷ ಆ ಬಾವಿಯನ್ನು ಅಪ್ಪ ಮುಚ್ಚಿಸಿದ.ಕೇಳಿದ್ದಕ್ಕೆ ಉತ್ತರ ಸರಿಯಾಗಿ ಕೊಡಲಿಲ್ಲ.ಊರೆಲ್ಲಾ ಬೋರ್‌ವೆಲ್ ತೆಗೆಸಿ ನೀರು ಹಿಂಡಿಹಿಂಡಿ ಎತ್ತಿದ್ದಾರೆ.ಇನ್ನು ಈ ಬಾವಿಯಲ್ಲಿ ಏನಿರುತ್ತದೆ ಮಣ್ಣಂಗಟ್ಟಿ.ಮಾಘಮಾಸಕ್ಕೇ ಬತ್ತಿ ಬರಡಾಗುತ್ತದೆ ಎಂದಿದ್ದ.
ನೆಲ್ಲಿಮರದ ಹಲಗೆ ಏನು ಮಾಡಿದೆ? ಎಂದು ಕೇಳುತ್ತಾನೆ ಶಿಬಿ.
ಅದನ್ನು ಎತ್ತಲಿಲ್ಲ.
ನೀನೇ ಹೇಳುತ್ತಿದ್ದೆ ನಿನ್ನ ಮುತ್ತಾತನ ಕಾಲದ್ದಂತೆ ಆ ನೆಲ್ಲಿಮರದ ಹಲಗೆಗಳು ಅಂತ. ಈಗ ಅದನ್ನು ಎತ್ತಿ ತೆಗೆದಿಟ್ಟಿದ್ದರೆ ಚೆನ್ನಾಗಿತ್ತು ಎಂದು ಶಿಬಿ ಸಲಹೆ ನೀಡಿದರೆ,
ಯಾಕೋ ಟೀವೀಯಲ್ಲಿ ಚಿದಂಬರ ರಹಸ್ಯ ಪ್ರೋಗ್ರಾಂ ಹಾಕಿಸೋ ಪ್ಲಾನ್ ಇತ್ತಾ ನಿಂದೂ ಆ ನೆಲ್ಲಿಹಲಗೆಗಳನ್ನು ಇಟ್ಟುಕೊಂಡು ಎಂದು ಅಪ್ಪ ರೇಗುತ್ತಾನೆ.
ಶಿಬಿ ಮಾತಾಡುವುದಿಲ್ಲ.
ಬಾವಿ ದಾಟಿ ಹತ್ತು ಮಾರು ಹೋದರೆ ಅಲ್ಲಿದೆ ಆ ಅತ್ತಿಮರ.ಅದರ ಬುಡದಲ್ಲಿ ಸಣ್ಣಗೆ ಜುಳುಜುಳು ಹರಿಯುವ ನೀರ ತೊರೆ.ನೀರಿನ ನೆನಕೆಗೆ ಸದಾ ಜಾರುವ ಕರ್ಗಲ್ಲುಗಳು.ಅದರ ಮೇಲೆ ಕೈ ಇಟ್ಟು ನೀರು ತಿರುಗೀ ತಿರುಗೀ ಕೈ ಮೇಲೆ ತಣ್ಣಗಿನ ನೀರು ಹಾಯುವ ಹೊತ್ತಿಗೆ ಕಾಯುತ್ತಿದ್ದ ಕ್ಷಣಗಳು.
ಶಾಲೆಯಲ್ಲಿ ಕೊನೆಯ ಪರೀಕ್ಷೆ ಯಾವತ್ತೂ ತೃತೀಯ ಭಾಷೆ ಹಿಂದಿಯದ್ದು.ಐವತ್ತು ಮಾರ್ಕಿನ ಆ ಪರೀಕ್ಷೆಗೆ ಬರೆಯಲು ಒಂದೂಕಾಲು ಗಂಟೆ.ಪರೀಕ್ಷೆ ಮುಗಿಸಿ ಹೋ ಎಂದು ಓಡುತ್ತಾ ಬಂದು ಜಗುಲಿ ಒಳಗೆ ಚೀಲ ಎಸೆದು ಬಚ್ಚಲಿನ ಒಳಗೆ ಶರಟು ಕಿತ್ತು ಹಾಕಿ ಅದೇ ಕೆಂಪುಕಲ್ಲಿನ ಮೆಟ್ಟಿಲು ಇಳಿಯುತ್ತಾ ಓಡೋಡಿ ಬಂದು ಬಾವಿ ಒಳಗೊಮ್ಮೆ ಇಣುಕಿ ರಾಟೆಗೆ ಜೋತುಬಿದ್ದಿದ್ದ ಹುರಿಹಗ್ಗದ ಬಳ್ಳಿಯನ್ನು ಒಮ್ಮೆ ಕಿರ್ರೆಂದು ಎಳೆದು ಬಿಟ್ಟು ಜಂಪ್ ಮಾಡಿ ನೀರಝರಿಯತ್ತ ಓಡಿ ಅದೇ ಅತ್ತಿಮರದ ಬುಡದಲ್ಲಿ ಕೂತರೆ ಅದೇ ಮೆದುವಾದ ಕಲ್ಲಿನ ಮೇಲೆ ಅಂಗೈ ಇಟ್ಟು ತಣ್ಣಗೆ ಮಾಡಿಕೊಂಡು..ಕೈಮೇಲೆ ಕೈ ಇಟ್ಟು ರಾಶಿರಾಶಿ ಕೈ ರಾಶಿ...
ಆ ದಿನ ಮಾತ್ರಾ ಶರ್ಮಿಳೆಯ ಆ ಅಂಗೈಯಲ್ಲಿ ಏನಿತ್ತು?
ಏನದು ಒಳಗೆ ಹರಿದ ಹೂರಣ?
ಅಂಗೈ ಅವುಕಿದಾಗ ಸಾಗಿದ ಸಂದೇಶ ಮಿದುಳೆಂಬ ಮಾಯಾಕೋಶದಲ್ಲಿ ಶಾಶ್ವತವಾಗಿ ನೆಟ್ಟದ್ದಕ್ಕೆ ಹೆಸರೇನು?
ಅತ್ತಿಮರದ ಬೇರುಗಳನ್ನು ಬಡ್ಡು ಚೂರಿಯಲ್ಲಿ ಕತ್ತರಿಸಿ ಜುಳುಜುಳನೇ ಇಳಿದು ಬರುವ ನೀರನ್ನು ಬಾಯಿಗಿಟ್ಟು ಕುಡಿದಾಗ ಇಡೀ ಮೈ ಸಪಾಟಾಗಿ ಮನಸ್ಸು ತುಂಬಾ ಗೆಜ್ಜೆಯ ನಾದ.
ಶರ್ಮಿಳೆ ಅತ್ತಿ ಮರದ ಬುಡಕ್ಕೆ ಬಗ್ಗಿ ನೀರೂರುತ್ತಿದ್ದಾಗ ಹಿಂದಿನಿಂದ ಬಾಗಿ ಅವಳನ್ನು ತಬ್ಬಿಕೊಂಡಾಗ ಅವಳು ಆ ಹಿಡಿತದಲ್ಲೇ ಶಾಖವೇರಿಸಿಕೊಂಡದ್ದು ..ಆ ಬಿಗುವಿನಲ್ಲಿ ಆ ಮೃದುವಾದ ಅವುಕಿನಲ್ಲಿ ಸಿಕ್ಕಿದ್ದು ಶಾಶ್ವತವಾಗಿತ್ತಾ?
-------------------------------------------
ಕಾರು ಬಂದು ನಿಂತಾಗ ಸರಿ ರಾತ್ರಿ ಕಳೆದಿತ್ತು.ಅಪ್ಪ ಎದ್ದು ಬರಲಿಲ್ಲ.ಅಮ್ಮ ಸಾವಧಾನವಾಗಿ ಬಾಗಿಲು ತೆರೆದಳು.
ಆಮ್ಮಾ ನಮ್ಮದು ಊಟ ಆಗಿದೆ ಎಂದ ಶಿಬಿ.
ಹೂಂ ಎಂದು ಹೇಳುತ್ತಾ ಅಮ್ಮ ಕೋಣೆ ಸೇರಿದಳು.ಜೊತೆಯಲ್ಲಿ ಲೈಟ್‌ನ್ನೂ ಆಫ್ ಮಾಡಿಕೊಳ್ಳುತ್ತಾ.ಎಡಭಾಗದ ಹಜಾರವನ್ನು ಸೇರಿದ ಶಿಬಿ ಈಸೀಚೇರ್ ಮೇಲೆ ಮೈ ಹಾಸಿದ.ಕಾಲು ಸಪಾಟಾಗಿ ಇಳಿಬಿಟ್ಟ.ಶರ್ಮಿಳೆ ಟೀಪಾಯ್ ಮೇಲಿನ ಪೇಪರ್ ಎತ್ತಿಕೊಂಡಳು.ಅವಳಿಗೆ ಓದುವುದಕ್ಕೆ ಏನೂ ಇಲ್ಲ ಎಂಬುದು ಶಿಬಿಗೆ ಗೊತ್ತಿತ್ತು.ಬಲಭಾಗದ ಕೋಣೆಗೆ ಶರ್ಮಿಳೆ ಇಣುಕಿದಳು.ಹಾಸಿಗೆ ಸುರುಟಿಯೇ ಇತ್ತು.ಗಿಳಿಬಾಗಿಲ ಸಂದಿಗೆ ಸಿಲುಕಿಸಿಟ್ಟಿದ್ದ ಬೆಡ್‌ಶೀಟ್ ಎಳೆದುಕೊಂಡಳು.ಶಿಬಿಯ ಕಣ್ಣಾಲಿಗಳು ಮುಚ್ಚಿಮುಚ್ಚಿ ಬಂದವು.
ಎಚ್ಚರವಾದಾಗ ಶರ್ಮಿಳೆ ಕಾಣಿಸಲಿಲ್ಲ.ಅವಳೆಲ್ಲಿ ಹೋಗಿರುತ್ತಾಳೆ,ಅಲ್ಲೇ ಅತ್ತಿಮರದ ಬುಡದಲ್ಲಿ ಇರುತ್ತಾಳೆ ಎಂದು ಶಿಬಿಗೆ ಗೊತ್ತೇ ಇತ್ತು.ಶಿಬಿ ಸಾವಧಾನವಾಗಿ ಎದ್ದು ಹೊರಟ.ಗೂಡಿನಲ್ಲಿದ್ದ ನಾಯಿಮರಿ ಹೊಸತಾ ಎಂದು ಮುತ್ತುಮಲ್ಲಿಗೆ ಕೊಯ್ಯುತ್ತಿದ್ದ ಅಮ್ಮನಿಗೆ ಕೇಳಿದ.ಹೂಂ ಎಂಬಷ್ಟೇ ಉತ್ತರ ಅಮ್ಮನದ್ದು.ಅಪ್ಪ ಕ್ಯಾಕರಿಸುತ್ತಿದ್ದ ಶಬ್ದ ಬಚ್ಚಲಿನ ಕಡೆಯಿಂದ ಕೇಳುತ್ತಿತ್ತು.
ಅಂಗಳದ ತುದಿಯಲ್ಲಿ ಕೆಂಪುಕಲ್ಲಿನ ಮೆಟ್ಟಿಲುಗಳು.ವೇಗವಾಗಿ ಇಳಿದ.ಮುಚ್ಚಿದ್ದ ಬಾವಿಯ ಕುರುಹು ಕಾಣಿಸಿತು. ತುಕ್ಕು ಹಿಡಿದ ರಾಟೆ ಪಕ್ಕದಲ್ಲಿ ಬಿದ್ದಿತ್ತು.ಇದೇಕೆ ಈ ರಾಟೆಯನ್ನು ಇಲ್ಲಿ ಹೀಗೆಯೇ ಬಿಟ್ಟಿದ್ದಾರೆ ಎಂದುಕೊಂಡ.ನೀರತೊರೆಯ ನೇವರಿಸುವಂತೆ ಅತ್ತಿ ಮರ ಹಾಗೇ ನಿಂತಿತ್ತು.ಅದರ ಬುಡದಲ್ಲಿ ಶರ್ಮಿಳೆ ಬೇರನ್ನು ಕತ್ತರಿಸಿ ಚಿಮ್ಮುವ ನೀರಿಗೆ ಬಾಯಿ ಇಟ್ಟಿದ್ದಳು.ಶಿಬಿ ಓಡೋಡಿ ಅತ್ತಿಮರದ ಬಳಿ ನಿಂತ.ಶರ್ಮಿಳೆಯ ಸೊಂಪಾದ ಕೂದಲು ಕೆನ್ನೆ ಕಿವಿ ದಾಟಿ ಕೊರಳ ಮೇಲಿಂದ ಇಳಿದು ನೀರತೊರೆಯತ್ತ ಧಾವಿಸುವಂತೆ ತೊನೆದಾಡುತ್ತಿದ್ದವು. ಶಿಬಿ ಏನಾಗುತ್ತಿದೆ ಎಂದುಕೊಳ್ಳುವ ಮೊದಲೇ ಅವಳನ್ನು ಹಿಂದಿನಿಂದ ಬಾಚಿ ತಬ್ಬಿಕೊಂಡ.ಕೈಗಳು ಅವಳ ಅದೇ ಹಿತವಾದ ಶರೀರದಲ್ಲಿ ರೋಮಿಂಗ್ ಆಗುತ್ತಿದ್ದವು.ಶರ್ಮಿಳೆ ಬಾಗಿದಲ್ಲಿಂದಲೇ ಅವನನ್ನು ಬಿಗಿ ಮಾಡಿಕೊಳ್ಳುತ್ತಿರುವುದು ಶಿಬಿಗೆ ಅರ್ಥವಾಗುತ್ತಿತ್ತು.ತೊರೆಯಲ್ಲಿ ಅದೆಂದಿನಿಂದಲೋ ನೆನೆಯುತ್ತಿದ್ದ ಕಲ್ಲುಹಾಸಿಗೆ ಪಾದವನ್ನೊತ್ತಿ ನೀರನ್ನು ಛಿಲ್ ಎಂದು ಹಾರಿಸಿದ.ಶರ್ಮಿಳೆ ಆ ನಸುಕಿನಲ್ಲಿ ಅವನತ್ತ ತಿರುಗಿಕೊಂಡಳು.ಒಂದು ಪ್ರಚಂಡ ಅಪ್ಪುಗೆಯಲ್ಲಿ ಶಿಬಿಯ ತುಟಿಯನ್ನು ಕಚ್ಚಿದಳು.
I am in therapy for all the feelings including guilt  ಎಂಬ ಅವಳ ಉದ್ಗಾರದಲ್ಲಿ ಈಗ ಅರ್ಥ ಸಿಗತೊಡಗಿತು.
ಇಲ್ಲೇ ಒಂದು ಹಟ್ ಕಟ್ಟು.ನಾವಿಬ್ಬರೂ ಇಲ್ಲೇ ಇದ್ದು ಬಿಡೋಣ.ರಾತ್ರಿಯಿಡೀ ಅತ್ತಿ ಹೂವು ಕೊಯ್ಯುತ್ತಾ,ಬೆಳಗಾತ ಅತ್ತಿ ನೀರು ಕುಡಿಯುತ್ತಾ ಎಂದು ಶರ್ಮಿಳೆ ಮುಲುಗುಟ್ಟಿದಳು.
ಅಪ್ಪ ದೇವರಕೋಣೆಯಲ್ಲಿ ಗಂಟಾಮಣಿ ಆಡಿಸುತ್ತಾ ದೊಡ್ಡ ಸ್ವರದಲ್ಲಿ ಮಂತ್ರ ಹೇಳುತ್ತಿದ್ದ, ಆಗಮಾರ್ಥಂತು ದೇವಾನಾಂ ಗಮನಾರ್ಥಂತು ರಕ್ಷಸಾಂ.......

20160820

ಆರ್‌ಐಪಿ ಅರ್ಥಾತ್ ರೆಸ್ಟ್ ಇನ್ ಪೀಸ್


ಒಂದೇ ಒಂದು ಸಾರಿ ಆ ಅನುಭವ ಪಡೆಯಲು ಯತ್ನಿಸಿದ್ದೆ ಎಂದು ಅಪ್ಪು ಹೇಳುತ್ತಿದ್ದರೆ ಅಂಗಡಿಯ ಜಗುಲಿಯಲ್ಲಿ ಕುಳಿತಿದ್ದ ಎಲ್ಲರೂ ಬಿದ್ದೂ ಬಿದ್ದೂ ನಕ್ಕರು.
ಇಕ್ಬಾಲ್‌ನ ಅಂಗಡಿ ಇರುವುದೇ ಹಾಗೇ.ಎಪ್ಪತ್ತರ ದಶಕದಲ್ಲಿ ವಿಮರ್ಶಿಸಿದರೆ ಅದೊಂದು ಥರಾ ಸಮಾಜವಾದಿ ಅಡ್ಡೆಯಂತೆ ತೊಂಬತ್ತರ ದಶಕಕ್ಕೆ ಬಂದರೆ ಅದನ್ನು ಅಭಿವೃದ್ಧಿಶೀಲ ಅಡ್ಡೆ ಎನ್ನಬಹುದು.ಇತ್ತೀಚೆಗಿನ ದಿನಗಳಲ್ಲಿ ಜಾತ್ಯಾತೀತ ನೆಲೆ ಅಂತಾನೂ ಹೇಳಬಹುದು.
ಈ ಅಂಗಡಿಯ ಜಗುಲಿಯಲ್ಲಿ ಯಾವ ರಾಜಕೀಯ,ಜಾತಿ,ಧರ್ಮಗಳ ಹಂಗಿಲ್ಲ.ಹತ್ತೂವರೆ ಗಂಟೆ ಅಂದಾಜಿಗೆ ಮೋಹನ್ ಕಾಮತ್ ಸೈಕಲ್ ಕಿಣಿಕಿಣಿ ಮಾಡುತ್ತಾ ಖಾಕೀ ಚೀಲ ನೇತುಹಾಕಿಕೊಂಡು ಬರುವ ಹೊತ್ತಿಗೇ ಎಲ್ಲರೂ ಕಾಯುತ್ತಾರೆ.ಆ ಚೀಲದೊಳಗಿಂದ ಅವನು ತೆಗೆಯುವ ಈಗಲ್ ಮಾರ್ಕಿನ ಪ್ಲಾಸ್ಕ್‌ನಲ್ಲಿ ಬೆಚ್ಚಗೆ ಕುಳಿತ ಕಟ್ಟಂಚಾಯ,ಅದನ್ನು ಬಸಿದುಕೊಳ್ಳಲು ಪೇಪರ್ ಗ್ಲಾಸ್,ಉದಯವಾಣಿ ಪೇಪರ್‌ನಲ್ಲಿ ಮಡಚಿ ಕಟ್ಟಲಾದ ಅಂಬೊಡೆ,ಗೋಳಿಬಜೆ,ಚಟ್ಟಂಬಡೆಗಳು.
ಇಕ್ಬಾಲ್‌ಗೆ ಖಾಲಿ ಚಹ.ಅದನ್ನು ಬಸಿದುಕೊಳ್ಳಲು ಅವನ ಬಳಿಯೇ ಒಂದು ಸ್ಟೀಲ್ ಲೋಟ ಇದೆ.ಅದನ್ನು ಅವನ ಅಂಗಡಿಯ ಸಹಾಯಕ ಮೂಸಾ ತೊಳೆದು ತಂದಿಡುತ್ತಾನೆ.ಇಕ್ಬಾಲ್‌ನ ಆ ಸ್ಟೀಲ್ ಲೋಟಾಕ್ಕೆ ಫ್ಲಾಸ್ಕ್‌ನಿಂದ ಕಟ್ಟಂಚಾಯ ಸುರಿಯುವಾಗ ಮೋಹನ್ ಕಾಮತ್ ವಹಿಸಿಕೊಳ್ಳುವ ಎಚ್ಚರ ಅಷ್ಟಿಷ್ಟಲ್ಲ.ಏಕೆಂದರೆ ಆ ಗ್ಲಾಸು ಫುಲ್ ಏನಾದರೂ ತುಂಬಿಸಿದರೆ ಅದು ಮೋಹನ್ ಕಾಮತ್‌ನ ಎರಡು ಗ್ಲಾಸ್ ಆಗುತ್ತದೆ.ಹಾಗಾಗಿ ಅಂದಾಜು ಮುಕ್ಕಾಲು ಭರ್ತಿಯಾಗುತ್ತಲೇ ಕಾಮತ್‌ನ ಈಗಲ್ ಮಾರ್ಕಿನ ಫ್ಲಾಸ್ಕು ಬಾಗಿದಲ್ಲಿಂದ ಎದ್ದು ನೇರ ಆಗುತ್ತದೆ.ಯೋಗಾಸನದ ಭಂಗಿ ಬದಲಿಸಿದಂತೆ.
ಆಮೇಲೆ ಅಲ್ಲಿದ್ದವರಿಗೆಲ್ಲಾ ಬೈಟೂ ಕಟ್ಟಂಚಾಯ ವಿತರಣೆಯಾಗುತ್ತದೆ.ಇಕ್ಬಾಲ್‌ನದ್ದೊಂದು ಧರ್ಮ ಅಂತ ಉಂಟು.ಅದು ಆ ಚಹಾ ವಿತರಣೆ ವೇಳೆಯದ್ದು.ಯಾರು ಯಾಕೆ ಏನು ಅಂತ ನೋಡುವುದಿಲ್ಲ.ಅಲ್ಲಿದ್ದವರಿಗೆಲ್ಲಾ ಕಟ್ಟಂಚಾಯ ಅರ್ಧದ್ದ ವಿತರಿಸಲೇಬೇಕು ಮೋಹನ್ ಕಾಮತ್.ತಿಂಡಿ ಇಲ್ಲ.ಆದರೆ ಇಕ್ಬಾಲ್‌ಗೆ,ಅವನ ಅಂಗಡಿ ಸಹಾಯಕ ಮೋನುಗೆ ಎಣ್ಣೆತಿಂಡಿ ನೀಡಲಾಗುತ್ತದೆ.
ಅಪ್ಪು ಬಂದರೆ ಫುಲ್ ಚಹ ಮತ್ತು ಅವನು ಇಷ್ಟಪಟ್ಟ ಎರಡು ಬಗೆಯ ತಿಂಡಿ ಕಡ್ಡಾಯವಾಗಿ ನೀಡಲಾಗುವುದು.ಏಕೆಂದರೆ ಅಪ್ಪುನಲ್ಲಿ ಅಷ್ಟೊಂದು ಖದರ್ ಇದೆ.
ಸರೀ ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಕಥೆಯೊಂದನ್ನು ಅಪ್ಪು ವಿವರಿಸತೊಡಗಿದ. ಅಪ್ಪು ಹೇಳಿಕೇಳಿ ಬ್ರಹ್ಮಚಾರಿ.ಅವನು ಒಂದು ನೀಲಿಚಿತ್ರ ವೀಕ್ಷಣೆ ಮಾಡಲೆಂದು ವಿಡಿಯೋ ಪಾರ್ಲರ್ ಒಂದಕ್ಕೆ ಹೋಗಿದ್ದ.ಅಲ್ಲಿ ಅವನು ಹೊಕ್ಕಾಗ ನಡೆಯುತ್ತಿದ್ದುದು ಉಲಗಂಸುಟ್ರಂವಾಲಿಬಾನ್ ಎಂಬ ತಮಿಳು ಸಿನಿಮಾ.ಅದು ಎಂಜಿಆರ್‌ನದ್ದು.ಅದನ್ನು ನೋಡುವುದಕ್ಕೆ ಅಷ್ಟೊಂದು ದೂರ ಬಸ್ಸಿನಲ್ಲಿ ಬಂದು ಕೂರಬೇಕಿತ್ತೇ ಎಂದು ಅವನಿಗೆ ವ್ಯಥೆಯಾಗಿತ್ತು.ಏನು ಮಾಡುವುದು ಎಂದು ಅವನು ಅವನಿಗೆ ಅಲ್ಲಿ ಆ ಥರ ಸಿನಿಮಾ ತೋರಿಸುತ್ತಾರೆ ಎಂದು ಸಲಹೆ ನೀಡಿ ಕಳುಹಿಸಿದ ಇಬ್ರಾಹಿಂ ಮೇಲೆ ಅಪಾರ ಕೋಪಗೊಂಡಿದ್ದ.ಏನೇ ಆಗಲಿ ಇನ್ನು ಸುಮ್ಮನಿರಬಾರದು ಎಂದು ಸೀದಾ ಪಾರ್ಲರ್ ಹೊರಗೆ ಬಂದು ಕುರ್ಚಿಯಲ್ಲಿ ಇಡೀ ಶರೀರವನ್ನು ಚಕ್ಕಳಬಕ್ಕಳ ಹಾಕಿ ಕುಳಿತಿದ್ದ ಗಡ್ಡದವನಲ್ಲಿ ತಾನು ಹೀಗೇಗೆ ಬಂದವನೆಂದೂ ತನಗೆ  ಬಹಳ ನಿರಾಶೆಯಾಗಿದೆಯೆಂದೂ ಬಿನ್ನವಿಸಿಕೊಂಡ.ಅಪ್ಪುವಿನ ದೈನೇಸಿ ಮುಖ ನೋಡಿದ ದಢೂತಿ ಆಯ್ತು ಬಿಡಪ್ಪಾ ಒಳಗೆ ಹೋಗು ಎಂದು ಹೇಳಿದ.ಅಪ್ಪು ಒಳಗೆ ಬಂದು ಮತ್ತೆ ಆಸೀನನಾದ.ಅಷ್ಟರಲ್ಲಿ ಅವನು ಎಣಿಸಿದ ಪವಾಡ ನಡೆಯಿತು.ಇದ್ದಕ್ಕಿದ್ದಂತೆ ಉಲಗಂಸುಟ್ರುಂವಾಲಿಬಾನ್ ಸಿನಿಮಾ ಮರೆಯಾಗಿ ಹೋಯಿತು.ಅಪ್ಪು ಹಾರೈಸಿದ ಸಿನಿಮಾ ರಜತಪರದೆಯ ಮೇಲೆ ರಾರಾಜಿಸಿತು.
ಪಾರ್ಲರ್ ಒಳಗೆ ಇದ್ದವರೆಲ್ಲಾ ಆನಂದತುಂದಲಿತರಾಗಿದ್ದರು ಎಂದು ತೋರುತ್ತದೆ.ಯಾರೊಬ್ಬರೂ ಕಮಕ್‌ಕಿಮಕ್ ಎನ್ನದೇ ಸಿನಿಮಾ ಆಸ್ವಾದಿಸುತ್ತಾ ಕೂತರು.ಆದರೆ ಅಷ್ಟರಲ್ಲಿ ಒಬ್ಬ ಏನ್ ಸ್ವಾಮೀ ಹುಡುಗರನ್ನು ಹಾಳು ಮಾಡುತ್ತೀರಾ ಎಂದು ದೊಡ್ಡ ಸ್ವರದಲ್ಲಿ ಅಬ್ಬರಿಸಿದ.ಮಕ್ಕಳೇ ಬೆಡೆಕ್ಕಾಕಾರ್ ಸಾಮೀ ಎಂದು ಅವನು ಪದೇ ಪದೇ ಹೇಳತೊಡಗಿದಾಗ ಅಪ್ಪುಗೆ ನಗು ತಡೆಯಲಾಗಲಿಲ್ಲ.ಆಚೀಚೆ ನೋಡಿದ.ಪಕ್ಕದ ಸೀಟಿನಲ್ಲಿ ಕುಳಿತಿದ್ದವನು ತನ್ನ ಅಂಗೈಯನ್ನು ಮುಖಕ್ಕೆ ಅಂಟಿಸಿ ಬೆರಳುಗಳ ಸೆರೆಯಿಂದ ಪರದೆ ನೋಡುತ್ತಿದ್ದ.ಅಪ್ಪುಗೆ ಅವನ ಮುಖ ಕಾಣುತ್ತಿರಲಿಲ್ಲ.ಆದರೆ ಅವನು ತನಗೆ ಪರಿಚಯದವನೇ ಆಗಿರಬೇಕು.ಅದಕ್ಕೇ ಮುಖ ಮುಚ್ಚಿಕೊಂಡಿದ್ದಾನೆ ಎಂದು ಅಪ್ಪುಗೆ ಅರ್ಥವಾಗಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ.ಅಂದರೆ ಅವನಿಗೆ ತಾನು ನೀಲಿಚಿತ್ರ ನೋಡಲು ಬಂದದ್ದು ಗೊತ್ತಾಗಿದೆ.ತನ್ನಂತೆ ಅವನೂ ಬಂದಿದ್ದಾನೆ ಆದರೆ ಅವನ್ಯಾರು ಎಂದು ಗೊತ್ತಾಗುತ್ತಿಲ್ಲ.
ಅಪ್ಪು ಕೊನೆಗೂ ಸಿನಿಮಾ ನೋಡಲೇ ಆಗಲಿಲ್ಲ.ಆಗಾಗ್ಗೆ ಅವನ ಮುಖ ಕಾಣುತ್ತದೆಯೋ ಎಂದು ಇಣುಕುವುದೇ ಆಗೊಹೋಯಿತು.
ಇಂದಿಗೂ ಗೊತ್ತಿಲ್ಲ.ಅವನು ಯಾರೆಂದು ಗೊತ್ತೇ ಇಲ್ಲ.ಆದರೆ ನಾನು ಒಂದಾನೊಂದು ಕಾಲದಲ್ಲಿ ನೀಲಿಚಿತ್ರ ನೋಡಲು ಹೋಗಿದ್ದು ಅವನಿಗೊಬ್ಬನಿಗೆ ಗೊತ್ತಾಗಿದೆ ಎಂದು ಅಪ್ಪು ಕಥೆ ಮುಗಿಸಿದಾಗ ಮತ್ತೊಮ್ಮೆ ಎಲ್ಲರೂ ಬಿದ್ದೂ ಬಿದ್ದೂ ನಕ್ಕರು.
ಆ ನಗು ಹಲವು ಕ್ಷಣಗಳ ಕಾಲ ತೇಲಾಡಿ ನಿಲುಗಡೆಯಾಗುತ್ತಿದ್ದಂತೆ ಓಯ್ ಅಂತ ಹೆದ್ದಾರಿಯನ್ನು ನೋಡುತ್ತಾ ಕಿರುಚಿದ ಇಕ್ಬಾಲ.ಧಡಕ್ಕನೆ ಕುರ್ಚಿಯಿಂದ ಎದ್ದು ಅಯ್ಯಯ್ಯೋ ಎಂದು ಬೊಬ್ಬೆಯನ್ನೂ ಹಾಕಿದ.ಕೆಲವೇ ಕ್ಷಣಗಳ ಹಿಂದೆ ಅಲ್ಲಿ ಹರಿದಾಡಿದ್ದ ಆ ನಗು ಮತ್ತು ಸಂತೋಷ ಢಿಮ್ಮನೇ ಕುಸಿಯಿತು.ಅದನ್ನು ಅಪ್ಪು ಸೂಕ್ಷ್ಮವಾಗಿ ಗಮನಿಸಿದ.ಎಲ್ಲರೂ ರಸ್ತೆ ಕಡೆಗೆ ಓಡಿದರು.ಸರಕಾರಿ ಕಾಲೇಜಿನ ಸಂಪರ್ಕ ರಸ್ತೆಯಿಂದಲೂ ಸಾಲುಸಾಲಾಗಿ ಕಾಲೇಜು ಮಕ್ಕಳು ಓಡೋಡಿ ಬಂದರು.ಎಲ್ಲರೂ ಒಟ್ಟಾಗಿ ಸೇರಿದ ಪರಿಣಾಮ ಅಲ್ಲಿ ಘಟನೆಯೊಂದರ ವರ್ತುಲದಲ್ಲಿ ಜನರೇ ಜನರಿದ್ದರು.ಹಾಗಾಗಿ ಘಟನೆಯೇನೆಂಬುದು ಆ ವರ್ತುಲದಿಂದ ಹೊರಬರಲು ಒದ್ದಾಡುತ್ತಿತ್ತು.
ಅಪ್ಪು ಎಂದಿನ ಶೈಲಿಯಲ್ಲಿ ಎದ್ದು ನಿಂತ.ಅವನ ಬಿಳಿಯ ಬಣ್ಣದ ಶರಟನ್ನೊಮ್ಮೆ ನಿಂತಲ್ಲೇ ಕುಡುಗಿದ.ನೀಲಿ ಮಾಸಲು ಬಣ್ಣದ ಟರ್ಕಿ ಟವಲ್‌ನ್ನು ಎಡ ಹೆಗಲಿಂದ ಬಲ ಹೆಗಲಿಗೆ ವರ್ಗಾಯಿಸಿದ.ಬೂದುಬಣ್ಣದ ಪ್ಯಾಂಟನ್ನು ಮೈಮೇಲೆ ಇಲ್ಲವೇ ಇಲ್ಲ ಎಂಬಂತೆ ನಿರ್ಲಕ್ಷಿಸಿ ಸೀದಾ ಮನೆಯತ್ತ ಹೆಜ್ಜೆ ಹಾಕಿದ.
ಹತ್ತು ಹೆಜ್ಜೆ ಹಾದು ಹೋದವನು ಮತ್ತೆ ತಿರುಗಿ ನಿಂತ.ರಸ್ತೆಗಡ್ಡಲಾಗಿ ತುಂಬಿದ್ದ ಗುಂಪಿನ ವರ್ತುಲ ಕರಗುತ್ತಿರುವ ಸೂಚನೆ ಕಂಡಬಂತು.ಕಾಲೇಜು ರಸ್ತೆ ಕಡೆಗೆ ಹುಡುಗರ ತಂಡ ಓಡುತ್ತಿತ್ತು.ಮಾರುತಿ ಓಮ್ನಿ ಕಾರೊಂದು ಗುಂಪಿನತ್ತ ನುಗ್ಗಿತು.ಸೇರಿದ್ದವರು ಅದಕ್ಕೆ ಹಾದಿ ಮಾಡಿಕೊಡುವುದು ಕಂಡುಬಂತು.
ಯಾರೋ ಏದುಸಿರು ಬಿಡುತ್ತಾ ಅಪ್ಪುವಿನ ಬಳಿ ಬಂದರು.
ಅಪ್ಪು ಕೇಳದೇ ಇದ್ದರೂ ಹುಡುಗಿ ಮೇಲಿಂದ ಕೆಳಗೆ ಬಿದ್ದದ್ದು ಎಂದರು.ಅಪ್ಪು ಸರಿ ಗೊತ್ತಾಯ್ತು ಎಂಬಂತೆ ತಲೆಯಾಡಿಸಿದ.ಅಪ್ಪುಗೆ ವರದಿ ನೀಡಿದವನು ಮತ್ತೆ ಗುಂಪಿನತ್ತ ಓಡಿದ.
ಅಪ್ಪು ಕಿಸೆಯಲ್ಲಿದ್ದ ಮೊಬೈಲ್‌ನ್ನು ಎತ್ತಿ ನೋಡಿದ.ಆಮೇಲೆ ಯಾರಿಗೋ ಕರೆ ಮಾಡಿ ಮಾತನಾಡುತ್ತಾ ಮನೆಯ ಹಾದಿಯಲ್ಲಿ ಕಣ್ಮರೆಯಾದ.
ಅಪ್ಪುಗೆ ಅಪಘಾತಗಳೆಂದರೆ ಭಯ.ಅದಕ್ಕೆ ಅವನು ಆ ಸಂದರ್ಭದಲ್ಲಿ ಹಾಗೇ ವರ್ತಿಸಿದ್ದ.ರಸ್ತೆ ಅಪಘಾತ ನಡೆದರೆ ಅವನಿಗೆ ತೀರಾ ಹಿಂಸೆಯಾಗುತ್ತದೆ.ಯಾರಾದರೂ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿದರೆ ಮನಸ್ಸು ಬಾಡುತ್ತದೆ.ಇರುವೆಯನ್ನು ಯಾರಾದರೂ ಹೊಸಕಿದರೂ ಅವನಿಗೆ ಹೃದಯ ಗದ್ಗತಿತವಾಗುತ್ತದೆ.ದೊಡ್ಡ ಮಟ್ಟಿಗೆ ಆತ ಸೆಂಟಿಮೆಂಟಲ್ ಫೂಲ್.
ಅಪ್ಪು ಕಾಲೇಜು ರಸ್ತೆಯ ಕೆಳಗೆ ಮುಖ್ಯ ರಸ್ತೆಯಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಉತ್ಸಾಹವಿಲ್ಲದೇ ಸೀದಾ ಮನೆಯತ್ತ ಹೊರಟ.ಅವಳು ಒಬ್ಬಳು ಹುಡುಗಿ ಎಂದು ಗೊತ್ತಾಗುತ್ತಿದ್ದಂತೆ ಅವನು ತೀರಾ ವಿಹ್ವಲನಾಗಿಬಿಟ್ಟಿದ್ದ.ಹುಡುಗಿಯರಿಗೆ ಏನೇ ಅನಾಹುತವಾದರೂ ಅವನು ತೀರಾ ನೋಯುತ್ತಾನೆ ಎಂಬುದನ್ನು ಅವನ ಅಮ್ಮ ಅವನ ಬಾಲ್ಯದಲ್ಲೇ ಹೇಳುತ್ತಿದ್ದಳು.ಒಮ್ಮೆ ಅವನ ಅಕ್ಕ ಶಾಲೆಯಲ್ಲಿ ಮೇಸ್ಟ್ರು ತನ್ನ ಕಿವಿ ಹಿಂಡಿದರು ಎಂದು ಕೆಂಪಾದ ಕಿವಿ ತೋರಿಸುತ್ತಾ ಅಳುತ್ತಾ ಮನೆಗೆ ಬಂದಾಗ ಅಕ್ಕನ ಜೊತೆ ಅಪ್ಪುವೂ ಗಂಟೆಗಟ್ಟಲೆ ಅತ್ತಿದ್ದನಂತೆ.ಕೊನೆಗೆ ಅಕ್ಕನೇ ಅವನನ್ನು ಸಮಾಧಾನ ಮಾಡಿಸಿ ತಾನೇ ಹಣ್ಣುಗಾಯಿಯಾಗಿದ್ದಳಂತೆ.ಆದರೆ ಅಳುವುದಕ್ಕಷ್ಟೇ ಅಪ್ಪು ಮುಕ್ತಾಯ ಮಾಡಿರಲಿಲ್ಲ.ಮರುದಿನ ಆ ಮೇಸ್ಟ್ರು ಸೈಕಲ್‌ನಲ್ಲಿ ಅದೇ ಅವನ ಮನೆ ಮುಂದೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಪ್ಪು  ಮೇಸ್ಟ್ರ ಸೈಕಲ್‌ಗೆ ಗುರಿ ಇಟ್ಟು ಕಲ್ಲೆಸೆದದ್ದು ,ಆ ಕಲ್ಲಿನ ಏಟಿಗೆ ಸೈಕಲ್ ಬ್ಯಾಲೆನ್ಸ್ ಕಳೆದುಕೊಂಡು ಉರುಳಿದ್ದು ಮೇಸ್ಟ್ರು ಬಿದ್ದು ಮೊಣಕೈ ತರಚಿಕೊಂಡದ್ದು,ಆಮೇಲೆ ಆ ಮೇಸ್ಟ್ರು ಕಲ್ಲು ಎಲ್ಲಿಂದ ಬಂತು ಎಂಬುದನ್ನು ಅತ್ತಿತ್ತ ಸುತ್ತುತ್ತಾ ತನಿಖೆ ಮಾಡಿದ್ದು,ಯಾವ ಸುಳಿವೂ ಸಿಗದೇ ಅಲ್ಲಿಂದ ಸೈಕಲ್ ನೂಕುತ್ತಾ ಹೋಗಿದ್ದು, ಆ ದಿನ ಸಂಜೆ ಮತ್ತೆ ಅದೇ ಜಾಗಕ್ಕೆ ಬಂದು ಮತ್ತೆ ಅರ್ಧ ಗಂಟೆ ಕಾಲ ತನಿಖೆ ಮಾಡಿ ಯಾವ ಸುಳಿವೂ ಸಿಗದೇ ವಾಪಾಸ್ಸು ಹೋದದ್ದು ಅಪ್ಪು ಕಿಟಕಿಯಲ್ಲಿ ಇದನ್ನೆಲ್ಲಾ ನೋಡುತ್ತಾ ಕೊನೆಗೆ ಕಲ್ಲೆಸೆದದ್ದು ತಾನೆಂದು ಗೊತ್ತಾಗದಿರಲಿ ಎಂದು ದೇವರಕೋಣೆಗೆ ಹೋಗಿ ಊದುಬತ್ತಿ ಹಚ್ಚಿ ಕೈಮುಗಿದು ಕುಳಿತದ್ದು ಅವನ ಅಮ್ಮನೇ ವಿವರಿಸಬೇಕು.
ಅಪ್ಪು ಇಕ್ಬಾಲ್‌ನ ಅಂಗಡಿಯಿಂದ ಮನೆಗೆ ಬಂದು ಈಸೀಚೇರ್ ಮೇಲೆ ಕಾಲು ನೀಡಿ ಕುಳಿತ.ತಲೆಯೆತ್ತಿ ಮುಖವನ್ನು ಸೂರಿಗೆ ಲಂಬ ಮಾಡಿದ.ಹತ್ತು ವರ್ಷಗಳ ಹಿಂದೆ ಆ ಹುಡುಗಿ ತನ್ನ ಬಳಿ ಬಂದು ನಿಂತ ದೃಶ್ಯ ಕಣ್ಮುಂದೆ ಬಂತು.ಅದನ್ನು ನೀವಾಳಿಸಬೇಕು ಎಂದು ಜೋರಾಗಿ ಉಸಿರುಬಿಟ್ಟ.ಕಪಾಲಬಾತಿ ಮಾಡುವನಂತೆ ಹತ್ತಾರು ಬಾರಿ ಮೂಗಿನ ಹೊಳ್ಳೆಗಳಿಂದ ಉಸಿರು ಎಸೆದ.ಬಿಲ್‌ಕುಲ್ ಆ ಹುಡುಗಿಯ ಚಿತ್ರ ಮರೆಯಾಗಲಿಲ್ಲ.ಇದೇ ಕೋಣೆ,ಇದೇ ಈಸೀಚೇರ್.ಮುಂದೆ ನಿಂತವಳು ಆ ಹುಡುಗಿ.
ಅವಳ ಕಣ್ಣಿನಲ್ಲಿ ದೈನೇಸಿ ಭಾವವೇ ಇರಲಿಲ್ಲ.ತಾನು ಬೇಡುತ್ತಿದ್ದೇನೆ ಎಂಬ ಸಂಕಟವೂ ಇರಲಿಲ್ಲ.ಅಪ್ಪು ಏನು ಉತ್ತರ ಹೇಳಬೇಕು ಎಂದು ಗೊತ್ತಾಗದೇ ಈಸೀಚೇರ್‌ನಿಂದ ಕಾಲುಗಳನ್ನೆತ್ತಿ ಆ ಪೊಸಿಶನ್‌ಗೆ ತನಗೆ ತಾನು ಭದ್ರನಾಗಲು ಸಿದ್ಧತೆ ಮಾಡುತ್ತಿದ್ದ.
ಗೊತ್ತಿಲ್ಲದವರಂತೆ ನಟಿಸಬೇಡ.ನಾನೇನು ಹೇಳಬೇಕೋ ಅದನ್ನು ಹೇಳಿದ್ದಾಗಿದೆ.ಇನ್ನು ಉತ್ತರ ಹೇಳಬೇಕಾದವನು ನೀನು ಎಂದು ಅವಡುಗಚ್ಚಿ ಧ್ವನಿ ಹೊರಡಿಸಿದ್ದಳು.ಅವಳ ಸಾಲುಗಳು ಒತ್ತೊತ್ತಾಗಿದ್ದವು.
ಅವಳ ಕಣ್ಣುಗಳಲ್ಲಿ ಕಣ್ಣು ಮಡಗಿ ಅಪ್ಪು ಕೆಲಕಾಲ ಸ್ಥಿತಪ್ರಜ್ಞನ ಶೈಲಿಯಲ್ಲಿ ಕುಳಿತೇ ಇದ್ದ.ಅವಳಿಗೂ ಅವನ ಕಣ್ ನೋಟ ಕೀಳಲಾಗದೇ ಒದ್ದಾಡುವುದನ್ನು ಅಪ್ಪು ಗಮನಿಸಿ ,ತನ್ನ ಖಾಸಾ ಗೆಳೆಯ ಗೋಪಾಲ ಹೇಳಿದ್ದು ನೆನಪಾಗಿ ಒಳಗೊಳಗೆ ಖುಶಿ ಎನಿಸಿತ್ತು.ಇಟ್ಟ ದೃಷ್ಟಿ ತೆಗೆಯಲೇಬಾರದು.ಎದುರಾಳಿ ಹೆಣ್ಣಿರಲಿ,ಗಂಡಿರಲಿ..ಅದು ಖತಂ ಎಂದು ಗೋಪಾಲ ಯಾವತ್ತೋ ಹೇಳಿದ್ದನ್ನು ಅವಳಿಗೆ ಪ್ರಯೋಗಿಸಿದ ಅಪ್ಪು ಹೋರಾಟದಲ್ಲಿ ಯಶಸ್ವಿಯಾಗುತ್ತಿರುವುದನ್ನು ಖಚಿತಪಡಿಸಿಕೊಂಡ.
ಇದೆಲ್ಲಾ ನನ್ನತ್ರ ಬೇಡ.ಗೊತ್ತಾಯಿತಾ.ಕಣ್‌ದೃಷ್ಟಿ ಕೀಳದೇ ಇದ್ದರೆ ಸೋಲುತ್ತೇನೆ ಎನ್ನಲು ಇದು ರಣರಂಗದ ಯುದ್ಧವಲ್ಲ.ಇದನ್ನು ಗೋಪಾಲ ನನಗೂ ಹೇಳಿದ್ದಾನೆ.ಈಗ ನಿನ್ನ ನಿರ್ಧಾರ ಹೇಳು ಎಂದು ಅವಳು ಆವಾಜ್ ಹಾಕಿದಳು.
ಅಪ್ಪು ದಂಗಾದ.ಯಲಾ ಗೋಪಾಲ,ಈ ಕಣ್‌ಯುದ್ಧವನ್ನು ಇವನು ಇವಳ ಜೊತೆಗೂ ಮಾಡಿದನಾ?ಫಟಿಂಗ ಎಂದು ಮನಸ್ಸಲ್ಲೇ ಬೈದ.
ಅವಳು ಕುಳಿತೇ ಇದ್ದಳು.ಅಪ್ಪು ಕುಳಿತೇ ಇದ್ದ.ಆಮೇಲೆ ಅಲ್ಲಿ ಹರಿದಾಡುತ್ತಿದ್ದುದು ಮೌನದ ಅಲೆಗಳು ಮಾತ್ರಾ,
ಅವಳು ಎಷ್ಟು ಹೊತ್ತಿಗೆ ಹೋಗಿದ್ದಾಳೋ ಗೊತ್ತಿಲ್ಲ.ಅಪ್ಪುಗೆ ಎಚ್ಚರವಾದಾಗ ಅವನು ಅದೇ ಈಸೀಚೇರ್‌ನಲ್ಲೇ ಅದೇ ಭಂಗಿಯಲ್ಲಿದ್ದ.ಏನಿಲ್ಲಾ ಎಂದರೂ ಒಂದು ಗಂಟೆ ಕಾಲ ಹೀಗೇ ತಾನಿದ್ದಿರಬೇಕು.ಅವಳು ಏನೂ ಹೇಳದೇ ಹೋಗಿದ್ದಾಳೆ.ಅಪ್ಪು ಎದ್ದು ವಾರ್ಡುರೋಬಿನಿಂದ ಶರಟು ಎಳೆದುಕೊಂಡ.
ಅಮ್ಮ ನಾನು ತಿಂಗಳ ಮಟ್ಟಿಗೆ ದೆಹಲಿಗೆ ಹೋಗುತ್ತೇನೆ ಎಂದು ಕೂಗಿದ.ಅಮ್ಮ ಯಾಕೋ ಎಂದಾದರೂ ಕೇಳುತ್ತಾಳೆ ಎಂದುಕೊಂಡಿದ್ದ.ಆದರೆ ಉತ್ತರ ಬರಲಿಲ್ಲ.ಜಾಗೃತೆ ಮಾರಾಯ ಎಂದಷ್ಟೇ ಅಮ್ಮ ಹೇಳಿದಳು.
ಸಂಜೆ ಮಂಗಳೂರು ವಿಮಾನನಿಲ್ದಾಣದಲ್ಲಿ ಅಪ್ಪು ಬೋರ್ಡಿಂಗ್ ಪಾಸ್ ಹಿಡಿದುಕೊಂಡು ಇದ್ದ.
ದೆಹಲಿಯ ಸೌತ್ ಅವೆನ್ಯೂ ೧೪೧/೨ ನಲ್ಲಿ ಅವನ ದೋಸ್ತಿ ಸಂಸದನ ಕೊಠಡಿಯಲ್ಲಿ ಅಪ್ಪು ಹೊಕ್ಕಾಗ ಸರಿ ರಾತ್ರಿಯಾಗಿತ್ತು.ಬೆಳಗ್ಗೆ ತಾನು  ನೀಲಿಚಿತ್ರ ನೋಡಿದ ಕಥೆ ಇಕ್ಬಾಲನ ಅಂಗಡಿಯಲ್ಲಿ ಹೇಳಿ ಎಲ್ಲರನ್ನೂ ನಗಿಸಿದ್ದು ನೆನಪಾಗಿ ನಗು ಒತ್ತರಿಸಿತು.ಆಮೇಲೆ ಆ ಹುಡುಗಿ ಕಾಲೇಜು ರಸ್ತೆಯಿಂದ ದೊಪ್ಪನೇ ಮುಖ್ಯ ರಸ್ತೆಗೆ ಬಿದ್ದ ಘಟನೆ ಕರುಳು ಹಿಂಡತೊಡಗಿತು.
ಸಂಸದನ ಅಡುಗೆ ಮಾಣಿ ನೇಪಾಳದ ಲುಂಬಿನಿಯ ಹರಿ ತನಗೆ ಅಪರಿಚಿತನೇನಲ್ಲ.ಸಾಬ್ ಬಾಹರ್ ಗಯೀ ಎಂದು ಅವನು ಹೇಳುವುದು ಅವಶ್ಯವೂ ಆಗಿರಲಿಲ್ಲ.ಫುಲ್ಕಾ ಬೇಯಿಸುತ್ತಿದ್ದ ಅವನನ್ನು ಗಟ್ಟಿಯಾಗಿ ತಬ್ಬಿಕೊಂಡ ಅಪ್ಪು.ಹರಿ ನಕ್ಕ.ತಟ್ಟೆಯಿಂದ ಒಂದು ಫುಲ್ಕಾ ಹರಿದು ಕಚ್ಚಿಕೊಂಡ.ಕೈಯಲ್ಲಿ ಉಳಿದ ಮತ್ತೊಂದು ತುಂಡನ್ನು ಸಬ್ಜಿಯ ಬಣಾಲೆಗೆ ಅದ್ದಿದ.
ಕಿಸೆಯಲ್ಲಿದ್ದ ಮೊಬೈಲ್ ಕಿರುಚುತ್ತಿತ್ತು.ಅಮ್ಮ ಕಾಲ್ ಮಾಡುತ್ತಿದ್ದಳು.
ಆ ಹುಡುಗಿ ಸತ್ತೇ ಹೋದಳಂತೆ ಕಣೋ ಎಂದು ಅಮ್ಮ ಹೇಳುತ್ತಿದ್ದಂತೆ ಅಪ್ಪು ಮೊಬೈಲ್ ಸ್ವಿಚ್ಡ್ ಆಫ್ ಮಾಡಿದ.ಹರಿ ಆಪಲ್ ತರಬೇಕು ಎಂದು ಹೇಳುತ್ತಾ೧೪೧/೨ ನಿಂದ  ಕೆಳಗೆ ಇಳಿದು ಹೋದ ಬೆನ್ನಲ್ಲೇ ಅಪ್ಪು ದಢದಢನೇ ರಾಷ್ಟ್ರಪತಿಭವನದ ಮೇಲೆ ರಾರಾಜಿಸುತ್ತಿದ್ದ ಬೆಳಕಿನ ಮಾಲೆಗಳನ್ನು ನೋಡುತ್ತಾ ರಿಕ್ಷಾವೊಂದನ್ನು ಹಿಡಿದುಕೊಂಡ.ರಿಕ್ಷಾವಾಲಾ ಮುಂತಲೆ ಬೋಳಿಸಿದ್ದ.ಹಿಂಬದಿ ಸಣ್ಣ ಜುಟ್ಟಿತ್ತು.ಕಶ್ಮೀರಿ ಪಂಡಿತ ಇವನು,ಪರದೇಸಿಯಾಗಿ ದೆಹಲಿಯಲ್ಲಿ ದುಡಿಯುತಿದ್ದಾನೆ ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆಯೇ ಅಪ್ಪುಗೆ ಇರಲಿಲ್ಲ.
ಯಾವುದಾದರೂ ಟ್ರಾವೆಲಿಂಗ್ ಏಜೆನ್ಸಿ ಆಫೀಸ್ ಮುಂದೆ ಕರೆದುಕೊಂಡು ಹೋಗು,ನಾನು ಎವರೆಸ್ಟ್ ನೆತ್ತಿಯಿಂದ ಹಾರಿ ಸಾಯಬೇಕು ಎಂದು ಅಪ್ಪು ಅಚ್ಚ ಕನ್ನಡದಲ್ಲಿ ಕೂಗಿದ.ಅಪ್ಪು ಹೇಳುತ್ತಿರುವುದು ಆ ಕಶ್ಮೀರಿ ರಿಕ್ಷಾವಾಲಾನಿಗೆ ಎಲ್ಲಿ ಅರ್ಥವಾಗುತ್ತದೆ? ಕ್ಯಾ ಕ್ಯಾ ಕ್ಯಾ ..ಅರೆ ಕ್ಯಾ .. ಎಂದಿತ್ಯಾದಿ ಅವನು ಹಿಂದಿ ಮತ್ತು ಕಶ್ಮೀರಿ ಭಾಷೆ ಬೆರೆಸಿ ಏನೇನೋ ಕೇಳುತ್ತಿದ್ದುದು ಅಪ್ಪುಗೂ ಅರ್ಥವಾಗುತ್ತಿರಲಿಲ್ಲ.

20160811

ಕಥೆಗಾರ ಹೇಳದ ಗುಟ್ಟಿನ ಕಥೆಯ ಮೊದಲಭಾಗ
ಎನ್‌ಎಸ್‌ಎಸ್ ಕ್ಯಾಂಪು ಮುಗಿಸಿ ಬಂದಿದ್ದ ಶಂಕರ ಮಾಸ್ಟ್ರು ಏನೇ ಆದರೂ ಈ ರಾತ್ರಿ ಫುಲ್ ಮಜಾ ತಗೊಳ್ಳಲೇಬೇಕು ಎಂದು ಖಡಕ್ ಆಗಿದ್ದರು.
ಕಳೆದ ಹತ್ತು ದಿನಗಳಿಂದ ಅವರು ಕ್ಯಾಂಪಿನಲ್ಲಿ ಬಿಝಿಯಾಗಿದ್ದರು ಮಾತ್ರವಲ್ಲ ಅಖಂಡ ಬ್ರಹ್ಮಚಾರಿಯಾಗಿಯೇ ಉಳಿದಿದ್ದರು!
ಹೆಂಡತಿಯ ನೆನಪು ಭಯಂಕರವಾಗಿ ಕಾಡುತ್ತಿತ್ತು.ರಾತ್ರಿ ತುಂಬಾ ಹೊತ್ತು ಆಕೆ ಜೊತೆ ವಾಟ್ಸಪ್ಪು, ಎಸ್ಸೆಮ್ಮೆಸ್  ಚಾಟ್ ಮಾಡುತ್ತಾ ಒಟ್ಟಾರೆ ಫಜೀತಿ ಮಾಡಿಕೊಳ್ಳುತ್ತಿದ್ದರು.
ಬೆಳಗಾದರೆ ಹುಡುಗಿಯರ ಸೇಲೆ ನೋಡಿ ಒಂದು ನಮೂನೆ ಆಗಿ ಬಿಡುತ್ತಿದ್ದರು.
ಇಷ್ಟಾದ ಮೇಲೂ ಅವರು ಒಂದು ಮಟ್ಟಿನ ಡಿಗ್ನಿಟಿ ಕಾಪಾಡಲೇಬೇಕಿತ್ತು.ಏಕೆಂದರೆ ಅವರೇ ತಾನೇ ಎನ್‌ಎಸ್‌ಎಸ್ ಕ್ಯಾಂಪು ಆಫೀಸರು.
ಶಂಕರ ಮಾಸ್ಟ್ರ ಮಟ್ಟಿಗೆ ಕಾಲೇಜಿನಲ್ಲಿ ಒಳ್ಳೆಯ ಹೆಸರುಂಟು.ಅವರು ಹುಡುಗಿಯರ ಜೊತೆ ಸೀರಿಯೆಸ್ಸಾಗಿ ವರ್ತನೆ ಮಾಡುತ್ತಾರೆ.ಆಗೊಮ್ಮೆ ಈಗೊಮ್ಮೆ ಕ್ಲಾಸಿನಲ್ಲಿ ಸಣ್ಣ ಮಟ್ಟಿನ ಅಡಾಲ್ಟ್ ಜೋಕ್ ಹಾರಿಸಿ ನಗಿಸುತ್ತಾರೆ.ಹಾಗಂತ ಎಂದೂ ಮಿಸ್‌ಬಿಹೇವ್ ಮಾಡೋರಲ್ಲ.
ಆದರೆ ಕೆಲವು ಮೇಸ್ಟ್ರುಗಳಿದ್ದಾರೆ.ಸುಮ್ಮನೇ ಹುಡುಗಿಯರಿಗೆ ಬೈಯುತ್ತಾರೆ.ಬೈಯೋದು ಎಂದರೆ ಎಷ್ಟು..ಅವರು ನಿಂತಲ್ಲೇ ಗೋಳೋ ಅಂತ ಅಳೋ ತನಕ. ಯಾವಾಗ ಹುಡುಗಿ ಅಳೋಕೆ ಶುರು ಮಾಡಿತೋ ಸೀದಾ ಹೋಗಿ ಆಕೆಯ ಬೆನ್ನು ತಡವುತ್ತಾರೆ.ಸಮಾಧಾನ ಮಾಡೋ ಹುಕ್ಕಿಯಲ್ಲಿ ತೆವಲು ತೀಟೆ ತೀರಿಸಿಕೊಳ್ಳುತ್ತಾರೆ ಎಂದು ಶಂಕರ ಮಾಸ್ಟ್ರ ಬಳಿ ಎನ್‌ಎಸ್‌ಎಸ್ ಕ್ಯಾಂಪಿನಲ್ಲಿ ಹುಡುಗರು ಹೇಳಿದ್ದಾರೆ.
ಯಾರೆಲ್ಲಾ ಹಾಗೇ ಮಾಡುತ್ತಾರೆ..ಟಚಿಂಗ್ ಮೇಸ್ಟ್ರುಗಳ ಹೆಸರು ಸಮೇತ ಶಂಕರ ಮಾಸ್ಟ್ರು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ..ಯಾವತ್ತಾದರೂ ಉಪಯೋಗಕ್ಕೆ ಬರುತ್ತದೆ ಎಂದು.
ಎಲ್ಲಾ ಕೆಲಸ ಮುಗಿಸಿ ಮನೆಗೆ ಬಂದ ಶಂಕರ ಮಾಸ್ಟ್ರಿಗೆ ಮೈ ಅಷ್ಟೊಂದು ಹುಶಾರಿದ್ದ  ಹಾಗಿರಲಿಲ್ಲ.ಮಕ್ಕಳಿಬ್ಬರೂ ಮೈಮೇಲೆ ಬಿದ್ದಾಗ ಅಲ್ಪಸ್ವಲ್ಪ ಕೋಪ ಬಂದರೂ ಅದನ್ನು ತಡೆದುಕೊಂಡು ಕೊಂಡಾಟ ಮಾಡದೇ ಉಳಿದಿರಲಿಲ್ಲ.ಹೆಂಡತಿ ಎಂದಿನ ಹಾಗೇ ಕಾಫಿ ಮಾಡಿಕೊಟ್ಟು ಅವಳ ಗಾರ್ಡನ್‌ತ್ತ ಸಾಗಿದ್ದಾಳೆ.ಹೆಂಡತಿ ಕ್ಯಾಂಪಿನ ರಸವತ್ತಾದ ಘಳಿಗೆಗಳ ಬಗ್ಗೆ ಕೇಳುತ್ತಾಳೆ ಎಂಬ ನಂಬುಗೆ ಶಂಕರ ಮಾಸ್ಟ್ರಿಗೆ ಮೊದಲೇ ಇರಲಿಲ್ಲ.ಹಾಗಾಗಿ ಅವರು ಲ್ಯಾಪ್‌ಟಾಪ್ ಬಿಡಿಸಿ ಯಾವುದೋ ಹಳೆಯ ನೋಟ್ಸ್‌ಗಳನ್ನು ಪರಿವೀಕ್ಷಿಸುತ್ತಾ ಕಾಲಹರಣ ಮಾಡುತ್ತಾ ಕುಳಿತು ತಡ ರಾತ್ರಿಗೆ ಕಾದಿದ್ದಾರೆ.
ಸಂಜೆ ಕಳೆಯಿತು.ಸ್ನಾನ ಆಯಿತು.ಸ್ನಾನದ ಮನೆಗೆ ಮಡದಿ ಬರಬಹುದು ಎಂಬ ಶಂಕರ ಮಾಸ್ಟ್ರ ಲೆಕ್ಕವೂ ಸುಳ್ಳಾಯಿತು.ಊಟದ ಟೇಬಲಿನಲ್ಲಿ ಮಕ್ಕಳಿಬ್ಬರೂ ಬಿಟ್ಟು ಹೋದ ಬಟ್ಟಲುಗಳನ್ನು ಸರಿಸಿ ಮಡದಿ ಅನ್ನ ಸಾಂಬಾರು ಜೊತೆಗೆ ಬಟಾಟೆ ಚಿಪ್ಸು ಬಡಿಸಿ ತಾನೂ ಊಟ ಮಾಡಿದಳು.
ಎಲಾ ಇವಳ! ಎಂದು ಶಂಕರ ಮಾಸ್ಟ್ರಿಗೆ ಅನಿಸದೇ ಇರಲಿಲ್ಲ.ಯಾಕೆ ಏನೋ ಒಂಥರಾ ದೌಲತ್ತು ಮಾಡುತ್ತಾಳೆ,ಏನಾದರೂ ತವರು ಮನೆ ಕಡೆ ಸಮಸ್ಯೆ ಆಗಿರಬಹುದೇ ಎಂದು ಶಂಕೆ ಹುಟ್ಟಿಕೊಂಡಿತ್ತು.ಯಾವುದಕ್ಕೂ ರಾತ್ರಿ ಹಾಸಿಗೆಯ ಮೇಲೆ ಹೊರಳಿಕೊಂಡಾಗ ಕೇಳಬೇಕು ಎಂದು ಲೋಕಾಭಿರಾಮದ ಮಾತುಗಳನ್ನು ಅವಳು ಕೇಳಿಸಿಕೊಳ್ಳುವ ಹುಕ್ಕಿಯಲ್ಲಿ ಇಲ್ಲ ಎಂದು ಗೊತ್ತಿದ್ದರೂ ಆಡುತ್ತಾ ಅಂತೂ ಸರೀಸುಮಾರು ಹನ್ನೊಂದೂಕಾಲು ಗಂಟೆಗೆ ಹಾಸಿಗೆ ಮೇಲೆ ಬಿದ್ದುಕೊಂಡರು.
ಹಾಸಿಗೆ ಶುಭ್ರವಾಗಿತ್ತು.ಹೊಸತಾದ ಗರಿಗರಿ ಎಂಬ ಹಾಗೇ ತೊಳೆದ ಬೆಡ್‌ಶೀಟುಗಳು ಬಿಸಿಲ ಘಮವನ್ನು ತಾವೂ ಹೊದ್ದುಕೊಂಡಿದ್ದವು.ಶಂಕರ ಮಾಸ್ಟ್ರಿಗೆ ಎರಡು ತಲೆದಿಂಬು ಬೇಕೇ ಬೇಕು.ಅದು ನೀಟಾಗಿ ಜೋಡಿಸಿಡಲಾಗಿತ್ತು.ಮಕ್ಕಳಿಬ್ಬರೂ ಟೆಡ್ಡಿಗಳನ್ನು ತಬ್ಬಿಕೊಂಡು ಗೊರಕೆ ಬಾರಿಸುತ್ತಿದ್ದವು.
ಶಂಕರ ಮಾಸ್ಟ್ರಿಗೆ ಆಹ್ಲಾದಕರ ವಾತಾವರಣದಲ್ಲಿ ಎಲ್ಲಾ ಮರೆತೇ ಹೋಯಿತೋ ಏನೋ ಮೈ ಚಾಚಿದಲ್ಲಿಗೆ ನಿದ್ದೆ ಹಾಸಿಕೊಂಡೇ ಬಿಟ್ಟತು.
ಎಷ್ಟು ಹೊತ್ತಿಗೆ ಮಡದಿ ಬಂದಳೋ ಏನೋ..ಗೊತ್ತೇ ಇಲ್ಲ.
******************

ಯಾಕೋ ಶಂಕರ ಮಾಸ್ಟ್ರು ಧಡಕ್ಕನೆ ಎದ್ದು ನಿಂತರು.ಹೊರಗೆ ಯಾವುದೋ ಕಾರು ಸುಯ್ಯನೇ ಹಾದು ಹೋದ ಶಬ್ದ.ದಾರಿದೀಪದ ಬೆಳಕು ಮನೆಯ ಸಿಟ್‌ಔಟ್ ಮೇಲೆ ಪರಿಸಿಂಚನ ಮಾಡಿದ ಹಾಗಿತ್ತು. ಅದೇ ಬೆಳಕಿನ ಎರಡು ಸಿಡಿ ಬೆಡ್‌ರೂಮಿನಲ್ಲೂ ಬಿದ್ದುಹೋಯ್ತು.
ಅದೇ ಬೆಳಕಲ್ಲಿ ಕಣ್ಣು ಅರಳಿಸಿ ನೋಡಿದ ಶಂಕರ  ಮಾಸ್ಟ್ರಿಗೆ ಕಂಡದ್ದು ಮಡದಿ ಹಾಸಿಗೆಯ ಕೆಳಗೆ ಇರುವ ದೃಶ್ಯ.ವಾರ್ಡುರೋಬಿನ  ಡ್ರೆಸ್ಸಿಂಗ್ ಕನ್ನಡಿಯ ಸೆರೆಯಲ್ಲಿ ಸಣ್ಣ ಚೇರ್ ತಳ್ಳುವ ಸಂದಿನಲ್ಲಿ ಮಡದಿ ಎರಡೂ ಕಾಲುಗಳನ್ನು ಚಾಚಿ ಕುಳಿತಿದ್ದಾಳೆ!
ಏನೇ ಏನೇ ಎಂದು ಶಂಕರ ಮಾಸ್ಟ್ರು ಕರೆಯುತ್ತಾ ಕೋಣೆಯ ಬೆಳಕು ಮಿಣ್ಕಿಸಿದರು.
ಆಕೆ ಮಾತಿಲ್ಲದ ಹಾಗೇ ಕುಳಿತಿದ್ದಾಳೆ.ಸರಿಯಾಗಿ ನೋಡಿದರೆ ಇಷ್ಟಗಲಕ್ಕೆ ಉಚ್ಚೆ ಹರಡಿದೆ!
ಏನಾಯಿತೇ ಎಂದು ಗಟ್ಟಿಯಾಗಿ ಆಕೆಯನ್ನು ತಬ್ಬಿಕೊಂಡು ಎತ್ತಿ ನಿಲ್ಲಿಸಿದರು ಶಂಕರ ಮಾಸ್ಟ್ರು.
ಆಕೆಯ ಮುಖದಲ್ಲಿ ಭಾವನೆಗಳೇ ಇರಲಿಲ್ಲ.ಏನೇ ಏನೇ ಎಂದು ಗಡಗಡ ಆಡಿಸಿ ಕೇಳಿದರು.ನೋ ರಿಪ್ಲೈ.
ಸೀದಾ ಸೀದಾ ಎತ್ತಿಕೊಂಡೇ ಬಚ್ಚಲಿಗೆ ಸಾಗಿದರು.ಮುಖಕ್ಕೆ ನೀರು ರಾಚಿಸಿದರು.ಶರ್ಮಿಳೇ ಶರ್ಮಿಳೇ ಎಂದು ಕೂಗಿದರು.
ಶರ್ಮಿಳೆ ಮಾತಾಡುತ್ತಿಲ್ಲ.
ಎತ್ತಿ ಹಾಸಿಗೆ ಮೇಲೆ ಹರಡಿದ ಹಾಗೇ ಮಲಗಿಸಿ ದೊಡ್ಡ ವೇಗದಲ್ಲಿ ಫ್ಯಾನು ಹಾಕಿದರು.
ಅಷ್ಟರಲ್ಲಾಗಲೇ ಶರ್ಮಿಳೆ ವಿಕಾರವಾಗಿ ಕಿರಿಚುತ್ತಾ ಬಾಯಿಯಿಂದ ನೊರೆ ಕಾರುತ್ತಾ ಮೂರ್ಛೆ ತಪ್ಪಿ ಬಿದ್ದೇ ಬಿದ್ದಳು.
ಬ್ರೈನ್ ಹ್ಯಾಮರೇಜ್ ಆಗುತ್ತಿದೆ ಎಂದು ಶಂಕರ ಮಾಸ್ಟ್ರಿಗೆ ಗೊತ್ತಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ.

ಶರ್ಮಿಳೆಗೆ ಬ್ರೈನ್ ಹ್ಯಾಮರೇಜ್ ಆಗಿ ಇಂದಿಗೆ ನಾಲ್ಕು ವರ್ಷಗಳಾದವು ಎಂಬುದನ್ನು ಲ್ಯಾಪ್‌ಟಾಪ್ ತೆರೆದಾಗಲೇ ಶಂಕರ ಮಾಸ್ಟ್ರು ತಿಳಿದುಕೊಂಡಿದ್ದು.ಈ ಮಧ್ಯೆ ಅವರು ಮೂರು ಸಾರಿ ಶರ್ಮಿಳೆಗೆ ಗ್ರಹಚಾರ ಕಷ್ಟ ನಿವಾರಣೆಗೆ ಅಂತ ಹೋಮ ಮಾಡಿಸಿದ್ದಾರೆ.ಮೊದಲು ಚೆರ್ವತ್ತೂರಿಗೆ ಹೋಗಿ ಉಣ್ಣಿಕೃಷ್ಣನ್ ಅವರ ಬಳಿ ಜಾತಕ ತೋರಿಸಿ ಸಂಧಿಕಟ್ಟು ನಿವಾರಣೆಗೆ ಹೋಮ ಮಾಡಿಸಿದ್ದರು.ಮನೆಯಲ್ಲಿ ಮಾಡಿದರೆ ಒಳ್ಳೆಯದು ಎಂದು ಉಣ್ಣಿಕೃಷ್ಣನ್ ಸಲಹೆ ನೀಡಿದ್ದರೂ ಮನೆ ಪೇಟೆಯಲ್ಲಿ ಇರುವ ಕಾರಣ ಕಾಂತಿಶೆಟ್ಟಿ ಸಭಾಂಗಣದ ಸಣ್ಣ ಛತ್ರದಲ್ಲಿ ಹೋಮ ಮಾಡಿಸಿದ್ದರು.ಸಂಧಿಶಾಂತಿ ಹೋಮಕ್ಕೆ ಹದಿನಾರು ಸಾವಿರ ರೂಪಾಯಿ ಖರ್ಚಾಗಿದೆ ಎಂದು ಅವರು ಲೆಕ್ಕ ಬರೆದೂ ಇಟ್ಟಿದ್ದರು.
ಆಮೇಲೆ ಅದು ಸರಿಯಾಗಲಿಲ್ಲ ಎಂದು ಅವರ ಭಾವ ನಾರಾಯಣ ತಿರುಪತಿಯ ದೈವಜ್ಞರಲ್ಲಿ ಹೋಗಿ ಕೇಳಿದಾಗ ಕಂಡುಬಂದಿದೆ ಎಂದು ಗೊತ್ತಾಗಿ ಊರಿನ ದೇವಸ್ಥಾನದಲ್ಲಿ ಮತ್ತೊಮ್ಮೆ ಹೋಮ ಮಾಡಿಸಿದ್ದರು.ಆಗ ಹೋಮಕ್ಕೆ ಅದೆಲ್ಲಿತ್ತೋ ಒಂದು ಹಲ್ಲಿ ಬಿದ್ದು ದೋಷ ಉಂಟಾಯಿತೆಂದು ಹೋಮದಲ್ಲಿ ಬ್ರಹ್ಮತ್ವ ಕುಳಿತ ಭಟ್ಟರು ಹೇಳಿದ ಮೇಲೆ ಮೂರನೇ ಬಾರಿ ಅದೇ ಜಾಗದಲ್ಲಿ ಅದೇ ರೀತಿ ಹೋಮ ಮಾಡಿಸಿದ್ದಾಯಿತು.ಹೋಮದ ಕೊನೆಯಲ್ಲಿ ಪೂರ್ಣಾಹುತಿ ವೇಳೆ ಭಟ್ಟರ ಕೈಯಲ್ಲಿದ್ದ ಹವಿಸ್ಸಿನ ಸಟ್ಟುಗ ಜಾರಿ ಬಿದ್ದ ಮೇಲಂತೂ ವಿಷಣ್ಣರಾದ ಶಂಕರ ಮಾಸ್ಟ್ರು ಕಂಗಾಲಾಗಿ ಇನ್ನು ಮುಂದೆ ಯಾವುದೇ ಹೋಮ ಮಾಡಿಸಲೇ ಬಾರದೆಂದೂ, ಇಂಥ ನಂಬಿಕೆಗಳನ್ನೇ ಕೈ ಬಿಡಬೇಕೆಂದು ಗಟ್ಟಿ ಮನಸ್ಸು ಮಾಡಿ ಬಂದರು.
ಮತ್ತೆ ಅವರೆಂದೂ ಯಾವ ಗ್ರಾಚಾರವನ್ನೂ ನಂಬಲಿಲ್ಲ.
ಶರ್ಮಿಳೆ ಮಾತ್ರಾ ಚೇತರಿಸಲೇ ಇಲ್ಲ.ಹಾಗಂತ ಆಕೆಯ ಆರೋಗ್ಯ ಕುಸಿಯಲೂ ಇಲ್ಲ.
ಎಂಥ ಸುಂದರಿ ಎಂದು ಕೊಂಡು ಒಂದು ಕ್ಷಣ ಕುಳಿತಲ್ಲೇ ಲ್ಯಾಪ್‌ಟಾಪ್ ಮೇಲೆ ಕಣ್ಣಹನಿ ಉದುರುವುದನ್ನೂ ತಡೆಯದೇ ಬಿಕ್ಕಳಿಸಿದರು ಶಂಕರ ಮಾಸ್ಟ್ರು.
ಅವರಾಗಿಯೇ ಇಷ್ಟಪಟ್ಟು ಆಕೆಯ ಕೈ ಹಿಡಿದಿದ್ದರು.ತೊಡಿಕಾನ ಸಮೀಪದ ಏಲಕ್ಕಿ ಮಲೆಯ ರೈಟರ್ ಶ್ಯಾಮಣ್ಣನ ಮಗಳು ಶರ್ಮಿಳೆಗೆ ಅಮ್ಮ ಎಳೆ ಪ್ರಾಯದಲ್ಲೇ ತೀರಿಕೊಂಡ ಮೇಲೆ ಆಕೆ ಮನೆಯಲ್ಲಿ ಮೂರು ಅಣ್ಣಂದಿರ ಒಬ್ಬಳೇ ತಂಗಿಯಾಗಿದ್ದಳು.ಅವಳ ಚೆಲುವಿನ ಬಗ್ಗೆ ಶಂಕರ ಮಾಸ್ಟ್ರಿಗೆ ಹೇಳಿದ್ದು ಗಣಪತಿ ಮಾಸ್ಟ್ರು. ಗಣಪತಿ ಡಿಪಾರ್ಟುಮೆಂಟಿನಲ್ಲಿ ಸುಮ್ಮನೇ ಹರಟುತ್ತಿದ್ದಾಗ "ಶಂಕರಾ  ಬಾರಾ..ಸ್ವಲ್ಪ ಮಾತಾನಾಡುವುದಿದೆ"ಎಂದು ಹೇಳಿ ಕ್ಯಾಂಟಿನಿಗೆ ಕರೆದುಕೊಂಡು ಹೋಗಿ ಬಿಸ್ಕುಟ್‌ರೊಟ್ಟಿ ಮತ್ತು ಬೈಟೂ ಕಾಫಿ ಕುಡಿಸಿ,ಏತನ್ಮಧ್ಯೆ ಶರ್ಮಿಳೆ ಕುರಿತಾಗಿ ಸವಿಸ್ತಾರವಾಗಿ ಹೇಳಿ ಕೊನೆಯಲ್ಲಿ ಆಕೆಯ ಸೋದರತ್ತೆಯೇ ನನ್ನ ಹೆಂಡತಿ ಎಂದು ಮಂಗಳ ಹಾಡಿದ ಮೇಲೆ ಮತ್ತೆ ಉಳಿದಿರಲೇ ಇಲ್ಲ ಶಂಕರ ಮಾಸ್ಟ್ರ ಮನೆಯವರಿಗೆ ಸಂಶಯ.
ಗಣಪತಿ ಮಾಸ್ಟ್ರು ಹೇಳಿದಲ್ಲಿಗೆ ವಾಲಗ ಊದುವುದೇ ಎಂದು ಶಂಕರ ಮಾಸ್ಟ್ರ ಸೋದರ ಮಾವ ಕಿಟ್ಟಣ್ಣ ಹೇಳಿದ್ದೇ ಅಂತಿಮವಾಗಿತ್ತು.
ಯಪ್ಪಾ ..ಈ ದೇವರಕೋಣೆಯಲ್ಲಿ ಸೋದರಮಾವನ ಫೋಟೋ ಇಡೋದೋ ಅಥವಾ ಗಣಪತಿ ಮಾಸ್ಟ್ರ ಫೋಟೋವೋ ಎಂದು ಅಂದು ಸಂಜೆ ದೇವರಿಗೆ ಊದುಬತ್ತಿ ಹಚ್ಚುತ್ತಾ ಶಂಕರ ಮಾಸ್ಟ್ರು ತನ್ನೊಳಗೆ ಹೇಳಿಕೊಂಡು ನಸುನಕ್ಕಿದ್ದರು.
ಅಂಥ ಚೆಲುವೆ ತನ್ನ ಮಡದಿಯಾಗುತ್ತಾಳೆ ಎಂದು ಒಂದು ಕ್ಷಣವೂ ನಂಬದಂತಾಗಿದ್ದರು ಅವರು.
ಇದೆಲ್ಲಾ ಏಳು ವರ್ಷದಾಚೆಗೆ ಆಗಿಹೋದ ಕಥೆ.
ಶರ್ಮಿಳೆಯನ್ನು ಕರೆದುಕೊಂಡು ಊಟಿಗೆ ಹೋದದ್ದು.ಅಲ್ಲಿ ಏಕಾಂತ ಸಿಗದೇ ಒದ್ದಾಡಿದ್ದು.ಕೊಡೈಕೆನಾಲ್‌ನಲ್ಲಿ ಪೋಲಿಗಳು ಶರ್ಮಿಳೆಯನ್ನು ಕಿಚಾಯಿಸಿದ್ದು..
ಮಧುಚಂದ್ರದಲ್ಲೇ ಶರ್ಮಿಳೆ ಬಸುರಿಯಾದಳೋ ಹೇಗೆ ಎಂದು ಸೀಮಂತದ ದಿನ ದಿನಗಳ ಲೆಕ್ಕ ಹಾಕಿ ಕಿಟ್ಟಣ್ಣ ಮಾವ ಕಿಂಡಲ್ ಮಾಡಿದ್ದು!
ಬಾಣಂತನ ಮುಗಿಸಿದ ಬೆನ್ನಿಗೇ ಶಂಕರ ಮಾಸ್ಟ್ರ ಉಪದ್ರಕ್ಕೆ ಶರ್ಮಿಳೆ ಮತ್ತಮ್ಮೆ ವಾಂತಿ ಮಾಡತೊಡಗಿದ್ದು..
ಶಿವಿ,ಶಾವಿ...ಮಗಳಂದಿರನ್ನು ಹಾಸಿಗೆಯ ನಡುವಲ್ಲಿ ಹಾಕಿ ಕೊಂಡು ಹ್ಯಾಂಡ್‌ಟಚ್‌ಗೂ ಸಿಗದ ಹಾಗೇ ಶರ್ಮಿಳೆ ಮಲಗಿ ನಿದ್ರಿಸುತ್ತಿದ್ದುದು..
ಶಾವಿಗೆ ಮೊಲೆಯೂಡಿಸುತ್ತೇನೆ ಎಂದು ನಿದ್ದೆಯ ಅಮಲಿನಲ್ಲೇ ನಂಬಿ ಶಿವಿಗೆ ಉಣಿಸುತ್ತಿದ್ದುದು..ಶಂಕರ ಮಾಸ್ಟ್ರು ನಿದ್ದೆಗೆಟ್ಟು ಮಕ್ಕಳನ್ನು ಸಂಭಾಳಿಸುತ್ತಿದ್ದುದು..
ಎಲ್ಲಾ ಶರ್ಮಿಳೆಯ ಕೊರಳಿನ ಆರು ಪವನು ತೂಕದ ಗುಂಡುಮಣಿ ಸರದ ಹಾಗೇ ಮಿರಿಮಿರಿ ಮಿನುಗುತ್ತಿದ್ದ ಸಂಸಾರದಲ್ಲಿ ಹೀಗೂ ಒಂದು ಆಗಿ ಹೋಯಿತಲ್ಲಾ..ಎಂದು ಶಂಕರ ಮಾಸ್ಟ್ರು ಹಳಹಳಿಸಿದರು.


ಶಿವಿ ಮತ್ತು ಶಾವಿಯರನ್ನು ಅತ್ತಿಗೆ ತನ್ನ ಸ್ವಂತ ಮಕ್ಕಳಂತೆ ಬೆಳೆಸುತ್ತಿದ್ದಾಳೆ ಎಂಬ ಬಗೆಗೆ ಎರಡನೇ ಮಾತೇ ಇಲ್ಲ.ಅಣ್ಣ ಗೋವಿಂದನಿಗೆ ಮಕ್ಕಳಿಲ್ಲ.ಅಣ್ಣ ಅತ್ತಿಗೆ ಊರಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಇಂಗ್ಲೀಷ್‌ಮೀಡಿಯಂ ಶಾಲೆಯಲ್ಲೇ ಓದಿಸುತ್ತಿರುವುದಾಗಿ ಊರಿಡೀ ಹೆಗ್ಗಳಿಕೆಯಿಂದ ಹೇಳಿಕೊಂಡು ತಿರುಗಾಡುತ್ತಾರೆ ಎಂಬುದನ್ನು ಶಾವಿ ಅಪ್ಪನಿಗೆ ಹೇಳಿ ನಕ್ಕಿದ್ದಳು.
ಆದರೆ ಶಂಕರಮಾಸ್ಟ್ರು ಮಾತ್ರಾ ಶರ್ಮಿಳೆಯನ್ನು ಕಳುಹಿಸಿಕೊಡಲು ಸುತಾರಾಂ ಒಪ್ಪುವುದಿಲ್ಲ.ಊರಿಗೆ ಕರೆದುಕೊಂಡು ಹೋಗಿ ಆಯಾಳನ್ನು ನೇಮಿಸಿಕೊಂಡು ಚಾಕರಿ ಮಾಡಿಸುತ್ತೇನೆ ಎಂದು ಅಣ್ಣ ಗೋವಿಂದ ಕಣ್ಣಾಲಿ ತುಂಬಿಕೊಂಡು ಪಸೆ ತುಂಬಿದ ಕಂಠದಲ್ಲಿ ಸಣ್ಣದಾಗಿ ವಿನಂತಿಸಿದ್ದ.ಶರ್ಮಿಳೆಯ ಅಣ್ಣಂದಿರೂ ಬಂದು ಕೇಳಿ ಕೈ ಮುಗಿದಿದ್ದರು.ಶಂಕರ ಮಾಸ್ಟ್ರು ಮಾತ್ರಾ ಸಾಧ್ಯವೇ ಇಲ್ಲ ಎಂದು ತರ್ಕ ಮಾಡಿದರು.
ಬೆಳಗಾತ ಎದ್ದು ಶರ್ಮಿಳೆಯ ಬೆಡ್‌ಗೆ ಹೋಗಿ ಮಲಗಿದಲ್ಲೇ ಇದ್ದ ಆ ಎಲ್ಲಾ ಪ್ಯಾಡ್ ತೆಗೆದು ಅವಳನ್ನು ಮೀಯಿಸಿ,ಕಾಫಿ ಕುಡಿಸಿ,ಪೌಡರ್ ಹಾರಿಸಿ,ಔಷಧಿ ಕೊಟ್ಟು,ತಿಂಡಿ ಮಾಡಿ ಅದನ್ನು ತಿನ್ನಿಸಿ,....
ಅಯ್ಯೋ ಅದೆಲ್ಲಾ ಹೇಳಿ ಏನು ಗುಣ??
ಶಂಕರ ಮಾಸ್ಟ್ರು ಲ್ಯಾಪ್‌ಟಾಪ್ ಮುಚ್ಚಿದರು.

*******************
ಆ ರಾತ್ರಿ ಅವರು ಎಂದಿನಂತೆ ಇಲ್ಲ ಎಂಬುದು ಅವರಿಗೂ ಗೋಚರಕ್ಕೆ ಬರತೊಡಗಿತ್ತು.
ಸಂಜೆಯ ಹೊತ್ತಿನಲ್ಲಿ ಅಣ್ಣ-ಅತ್ತಿಗೆಗೆ ತಾರಾಮಾರಾ ಬೈದುಬಿಟ್ಟಿದ್ದು ನೆನಪಾಯಿತು.ಹೀಗೇ ಇದ್ದರೆ ಹೇಗೋ...ಎಂದು ಅವರು ತೆಗೆದ ವರಸೆ ಶಂಕರಮಾಸ್ಟ್ರನ್ನು ಕೆರಳಿಸಿತ್ತು. ಅದೇ ಹಾವೇರಿಯ ಬ್ರೋಕರ್‌ಗೆ ಹೇಳಿದ್ದು ಅದೇನೋ ಸಂಬಂಧ ಉಂಟಂತೆ ಎಂಬ ವಾಕ್ಯ ಅತ್ತಲಾಗಿಂದ ಬರುತಿದ್ದಂತೆ ಅದೇನೋ ಮೊದಲಬಾರಿಗೆ ಅಳುವವರ ಹಾಗೇ ಅತ್ತು ಶರ್ಮಿಳೆಯೊಂದಿಗೆ ನಾನೂ ಸಾಯುತ್ತೇನೆ ಎಂದು ಹೇಳಿದ್ದು ಮಾತಿನ ಕೊನೆಗೆ.ಆಮೇಲೆ ಆ ಬದಿಯಿಂದಲೇ ಫೋನ್ ಕಟ್ ಆಗಿ ಕಣಕಣಕಣ..ಶಬ್ದ.
ಶಂಕರ ಮಾಸ್ಟ್ರು ಶರ್ಮಿಳೆಯ ಬೆಡ್‌ನತ್ತ ಬಂದರು.ಅದೇ ಪೀಚಲಾದ ದೇಹದಲ್ಲಿ ಪ್ರಕಾಶಯುತ ಕಣ್ಣುಗಳು..
ಈ ಬಾರಿ ಕಣ್ಣಿನಲ್ಲೇ ಏನೋ ಸನ್ನೆ ಮಾಡುತ್ತಿರುವ ಹಾಗೇ ಕಾಣಿಸಿತು.ಅವಳ ಮುಖದ ಮೇಲೆ ಕೆನ್ನೆ ಇಟ್ಟರು.ಶರ್ಮಿಳೆ ಚುಂಬಿಸುವುದಕ್ಕೆ ಯತ್ನಿಸುತ್ತಿದ್ದಾಳೆ ಎಂಬುದು ಅವರಿಗೆ ಗೊತ್ತಾಯಿತು.ತಾನೇ ಚುಂಬಿಸಿದರು.ಅವಳ ಕಣ್ಣುಗಳನ್ನು ಲೊಚಲೊಚನೇ ಮುದ್ದಿಸಿದರು.ಅಂಗಾತ ಮಲಗಿದ ಆರ್ತತ್ರಾಣೀ ದೇಹವನ್ನು ಅಪ್ಪಿಕೊಂಡು ಗೋಳೋ ಎಂದು ಅತ್ತರು.
ಶರ್ಮಿಳೆ ಅವರ ತಲೆಗೂದಲನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.
ನಿಧಾನವಾಗಿ ಆಕೆಯನ್ನು ಮತ್ತೆ ಮೆತ್ತಗೆ ಮಲಗಿಸಿ,ಫ್ಯಾನ್ ಹಾಕಿ ಮೇಲ್ಭಾಗದ ಕಿಟಕಿ ಬಾಗಿಲು ತೆರೆದರು.
ಹೊರಗೆ ಯಾವುದೋ ಪರಿಚಿತ ಮುಖ!
ಎಲ್ಲೋ ನೋಡಿದ ಹಾಗಾಗುತ್ತಿದೆ.ದೂಸರಾ ಮಾತೇ ಇಲ್ಲ.ಗುರುತಿನ ಮುಖವೇ.
ಬೀದಿದೀಪದ ಮಂದಬೆಳಕಿನ ಸೆಲೆಯಲ್ಲಿ ಕಿಟಕಿಯಲ್ಲಿ ಕಂಡ ಮುಖವನ್ನು ದಿಟ್ಟಿಸಿ ನೋಡುತ್ತಾ ಶಂಕರಮಾಸ್ಟ್ರು ಓಯೇ..ನೀನೂ ಬಂದೆಯಾ ಎಂದರು.
ಓಡೋಡಿ ಬಾಗಿಲ ಬಳಿ ಬಂದು ಚಿಲಕ ಜಾರಿಸಿ ಎರಡೂ ಕದಗಳನ್ನು ತನ್ನತ್ತ ಎಳೆದುಕೊಂಡರು.
ಮರುದಿನ ಸಂಜೆ ವೇಳೆಗೆ ಶಂಕರ ಮಾಸ್ಟ್ರ ಅಣ್ಣ ಗೋವಿಂದ ಹೆಂಡತಿಯನ್ನು ಕರೆದುಕೊಂಡೇ ಬಂದಿದ್ದ.ಜೊತೆಗೆ ಕಿಟ್ಟಣ್ಣ ಮಾವನೂ ಇದ್ದ.ಶಿವಿ ಶಾವಿಯರನ್ನು ಮನೆಯಲ್ಲಿ ಉದ್ದೇಶಪೂರ್ವಕವಾಗಿ ಬಿಡಲಾಗಿತು.ಮಾತ್ರವಲ್ಲ,ಸವರಿಗೆ ಈ ವಿಷಯ ಹೇಳಿರಲೂ ಇಲ್ಲ.
ಗೋವಿಂದ ಶರ್ಮಿಳೆಯ ಕಾಲಬುಡದಲ್ಲಿ ಕೂತಿದ್ದ ಆ ಹೆಣ್ಣು ಜೀವವನ್ನು ಯಾರೆಂದು ಕೇಳಲೂ ಇಲ್ಲ.ಶಂಕರ ಮಾಸ್ಟ್ರ ಹಂದಾಡದ ಶರೀರದ ಬಳಿ ಕುಸಿದುಕೂತಂತೆ ಕೂತ ಹೆಣ್ಣು ಮತ್ತು ಶರ್ಮಿಳೆ ಏನೋ ಹೇಳಬೇಕೆಂದು ಒದ್ದಾಡುತ್ತಿರುವುದು ಗೋವಿಂದನಿಗೂ,ಕಿಟ್ಟಣ್ಣನಿಗೂ ಗೊತ್ತಾಗುತ್ತಿರಲಿಲ್ಲ.ಪೊಲೀಸರು ಮಾತ್ರಾ ಇದರಲ್ಲಿ ಏನೋ ಇದೆ ಎಂದು ತಮ್ಮಷ್ಟಕ್ಕೆ ಮಾತನಾಡಿಕೊಳ್ಳುತ್ತಿದ್ದರು.
ಶಂಕರ ಮಾಸ್ಟ್ರ ಹಠಾತ್ ನಿಧನದ ನಿಮಿತ್ತ ಕಾಲೇಜಿನಲ್ಲಿ ರಜೆ ಸಾರಿ ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದು  ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಲೋಕಲ್ ಆವೃತ್ತಿಯ ಸುದ್ದಿ ಮಾತ್ರಾ ಆಗಿ ಪ್ರಕಟವಾಯಿತು.ಶಂಕರ ಮಾಸ್ಟ್ರ ನಿಗೂಢ ಸಾವು ಜೊತೆಗಿದ್ದ ಬಾಯಿ ಬಾರದ ಹೆಣ್ಣು ಯಾವುದು ಎಂಬ ಸ್ಕೂಪ್ ಮೈನ್‌ಪೇಜ್‌ಗಳಲ್ಲೇ ಬಂದಿತ್ತು!
ಸತ್ಯ ಶರ್ಮಿಳೆಗೇ ಗೊತ್ತು ಎಂಬಲ್ಲಿಗೆ ಕತೆಗಾರ ಎದ್ದು ಹೊರಟ,ಥೇಟ್ ಬುದ್ಧನಂತೆ..

20160802

ಬಾಹಿರ


ಜಲಪ್ರಳಯ ಆಗಲಿದೆ,
ಹತ್ತು ಬಾರಿ ಹೇಳಿದರು ಚಿಂತನ ಭಟ್ಟರು.
ಚಿಂತನ ಭಟ್ಟರು ಪ್ರವಚನ ಮಾಡುತ್ತಾರೆ ಎಂದರೆ ಅದೊಂದು ಅದ್ಭುತ ಸಿನಿಮಾದಂತೆಯೂ ಅಲ್ಲ,ಹರಿಕಥೆಯ ಹಾಗೂ ಅಲ್ಲ,ಬಯಲಾಟವೋ ಅದೂ ಅಲ್ಲ.ಆದರೆ ಅದೆಲ್ಲಾ ಸೇರಿಸಿದರೆ ಏನಾಗಬಹುದೋ ಅದು.
ಯಾವಾಗ ಜಲಪ್ರಳಯ ಆಗುತ್ತದೆ ಎಂಬುದನ್ನು ಚಿಂತನ ಭಟ್ಟರು ಯಾವಾಗ ಹೇಳಬಹುದು ಎಂದು ಶರ್ಮಿಳೆ ಕಾಯುತ್ತಿದ್ದಳು.
ಅವಳಿಗೆ ಜಲಪ್ರಳಯ ಆದಷ್ಟು ಬೇಗ ಆಗಬೇಕು ಎಂಬ ಹುಕ್ಕಿ ಇತ್ತು.ಏಕೆಂದರೆ ಅವಳು ಇಷ್ಟಪಟ್ಟ ಹುಡುಗನಿಗೆ ಅವಳ ಅಪ್ಪ ಅವಳನ್ನು ಮದುವೆ ಮಾಡಿಸಲಿಲ್ಲ.ಒಬ್ಬ ಜಗುಡ ಅಂತ ಅವಳೇ ಕರೆಯುವ ಭೂಪನ ಮುಂದೆ ನಿಲ್ಲಿಸಿ ಅವಳಿಗೆ ತಾಳಿ ಕಟ್ಟಿಸಿದ್ದ ಅವಳಪ್ಪ.
ಒಲ್ಲದ ಗಂಡನ ಜೊತೆ ಸಂಸಾರ ಎಂತ ಖರ್ಮದ್ದು ಮಾಡುವುದು ಎಂಬುದೇ ಅವಳಿಗೆ ಸವಾಲಾಗಿತ್ತು.ಆದರೆ ಮೊದಲ ರಾತ್ರಿಯೇ ಆ ಜಗುಡ ಅವಳ ಹೆಣ್ತವನ್ನು ಚೆನ್ನಾಗಿ ಅರಳಿಸಿ ಇಂವ ಭೇಷ್ ಇದಾನೆ ಪರವಾಗಿಲ್ಲ ಎಂಬಂತೆ ಮಾಡಿಸಿದ್ದ.ಜಗುಡನ ಪ್ರೀತಿಯ ವರಸೆಗೆ ಅವಳಿಗೆ ಅವಳ ಪ್ರಿಯಕರ ಮರೆತೇ ಹೋಗುವಂತಾಗಿತ್ತು. ಆದರೆ ಆ ಮೊದಲ ರಹಸ್ಯ ಬಿಡಿಸಿದವನಿದ್ದಾನಲ್ಲ ಅವನನ್ನು ಮರೆಯಲಾಗುತ್ತದಾ? ಸ್ವತಃ ಕುಂತಿಗೇ ಆಗಿರಲಿಲ್ಲವಂತೆ,ಹಾಗೇ ಶರ್ಮಿಳೆಗೂ ಆಗಿತ್ತು. ಆಗಿಂದಾಗ್ಗೆ ಅವನೊಬ್ಬ ಒತ್ತರಿಸಿ ಬರುತ್ತಿದ್ದ.
ತನಗೆ ಹೀಗೀಗೆ ಆಗುತ್ತಿದೆ ಎಂದು ಶರ್ಮಿಳೆ ತನ್ನ ಖಾಸಾ ಗೆಳತಿ ಸುಧಾ ಮುಂದೆ ಇದನ್ನು ವಾಟ್ಸಪ್ ಮಾಡಿ ಹಂಚಿಕೊಂಡಿದ್ದಳು.ಅಬುದಾಭಿಯಲ್ಲಿದ್ದ ಸುಧಾ ಶರ್ಮಿಳೆಯ ಪಿಜಿ ಮೇಟ್.ಏನಿಲ್ಲಾ ಅಂದರೂ ಆರು ವರ್ಷ ಅವರಿಬ್ಬರೂ ಒಂದೇ ಕೊಠಡಿಯಲ್ಲಿದ್ದರು.ಅವರಿಬ್ಬರೂ ಹಂಚಿಕೊಳ್ಳದ ಸಂಗತಿಗಳೇ ಇರಲಿಲ್ಲ.ದೇಹದ ಮತ್ತು ಮನಸ್ಸಿನ ಖಾಸಾ ಸಂಗತಿಗಳನ್ನು ಪರಸ್ಪರ ಬಿತ್ತರಿಸಿಕೊಂಡು ಅನೇಕ ಬಾರಿ ಹಗುರವಾಗಿದ್ದು,ನಕ್ಕದ್ದು,ಕುಪ್ಪಳಿಸಿದ್ದು,ಕುಣಿದಾಡಿದ್ದು... ಆ ಹರೆಯದಲ್ಲಿ ಅದೆಲ್ಲಾ ಹೇಗೇಗೆ ಆಗಬೇಕೋ ಹಾಗೇ ಮಾಡಿಕೊಂಡಿದ್ದರು.
ಸುಧಾಳಿಗೆ ಶರ್ಮಿಳೆಯ ಕಳವಳ ಹೊಸತೇನಲ್ಲ ಎಂಬ ಹಾಗಿತ್ತು.


As far as spicing things up with your husband, why not take some of the great things you did in bed with your ex and do them with your husband?

ಸುಧಾಳ ಉತ್ತರ ಶರ್ಮಿಳೆಯ ಖಾಸಗಿತನದೊಳಗೆ ಲಗ್ಗೆ ಇಟ್ಟಿತು.

He is a really bad flirt and very unreliable.He never wanted to commit to me and we  ...ಶರ್ಮಿಳೆಯ ಉತ್ತರ ಅರ್ಧಕ್ಕೆ ನಿಂತಿತು.
ಸುಧಾಳಿಂದ ಉತ್ತರ ಬರಲಿಲ್ಲ.
ಚಿಂತನಭಟ್ಟರ ಪ್ರವಚನ ಮುಂದುವರಿಯುತ್ತಿತ್ತು,
ನೀತಿಯೇ ಕರುಣಾಳು ಕಣ್ರೋ.ನೀತಿ ಅಂದರೆ ಸ್ಥಾಯೀ ಅಂತ ಹಲವರು ತಿಳಿದುಕೊಂಡಿದ್ದಾರೆ.ಅದು ತಪ್ಪು.ನೀತಿಗೂ ದೇಶ,ಕಾಲ,ಪರಿಸರ,ಸನ್ನಿವೇಶ ಅಂತ ಇದೆ.ಅದೇ ಅದರ ಧರೆ.ನಿನ್ನೆ ನನಗೆ ಅದು ನೀತಿ,ಇಂದು ಇದು ನೀತಿ.
ಅಚ್ಚರಿಯಾಯಿತಾ?
ನೀತಿ ಅನ್ನುವುದು ಆಗಾಗ್ಗೆ ಆಗಿಂದಾಗ್ಗೆ ರೂಪಿಸಿಕೊಂಡದ್ದು.
ನೀತಿಗೂ ಕಾಲ ಇರುತ್ತದೆ,ಹರೆಯ ಅಂತ ಇರುತ್ತದೆ.
ಚಿಂತನಭಟ್ಟರು ಈ ಕಾಲದ ಉದಾಹರಣೆಯನ್ನೇ ಹೇಳ್ತೇನೆ ತಗೊಳ್ಳಿ ಅಂದರು.
ಹಿರಿಯರ ಕಾಲದಲ್ಲಿ ಒಬ್ಬ ಹುಡುಗ ಒಬ್ಬ ಹುಡುಗಿ ರಸ್ತೆಯಲ್ಲಿ ನಿಂತು ಮಾತನಾಡಿದರೆ ಜನ ಕೆಕ್ಕರಿಸಿ ನೋಡುತ್ತಿದ್ದರು.ಈಗ ವಾಟ್ಸಪ್ ಮಾಡಿ ಏನೆಲ್ಲಾ ಮಾಡಿಕೊಳ್ಳುತ್ತಾರೆ.ಇತ್ತೀಚೆಗೆ ಒಬ್ಬಳು ನನ್ನ ಬಳಿ ಬಂದಿದ್ದಳು.ಅವಳಿಗೆ ಏನು ಸಮಸ್ಯೆ  ಅಂದರೆ ಗಂಡ ಹಿತವಾಗುವುದಿಲ್ಲ.ಹಾಗಾದರೆ ಅವಳನ್ನು ನೀತಿಗೆಟ್ಟವಳು ಅಂತ ಕರೆದರೆ ಅದು ತಪ್ಪು.ಈ ಕಾಲದಲ್ಲಿ ಈ ವಯಸ್ಸಲ್ಲಿ ಈ ಹೊತ್ತಿನಲ್ಲಿ ಅವಳಿಗೆ ಗಂಡನ ನಿಲುವುಗಳನ್ನು ಖಂಡಿಸಬೇಕೆನಿಸುತ್ತದೆ.ನೀತಿ ತಪ್ಪಿತು ಅಂತ ಭಾವಿಸಬಾರದು.ನಾನು ಹೇಳಿದೆ, ತಂಗೀ ಸರಿಯಾಗಿದೆ,ನೀನು ನೀತಿ ಬಾಹಿರಳಾಗುವುದಿಲ್ಲ.ಒಪ್ಪಿಕೊಳ್ಳಲಾಗದ್ದನ್ನು ಅಪ್ಪಿಕೊಂಡರೆ ಹೇಗೆ ಅನೀತಿಯೋ ಹಾಗೇ ಇದು ಅಂದೆ.ಪಾಪ ಆ ತಂಗಿ ಸಂತೋಷಪಟ್ಟು ಹೋದಳು.ನಾನು ಅದನ್ನೇ ಹೇಳುತ್ತಿರುವುದು ನೀತಿಗೆ ಕಾಲ,ದೇಶ,ವ್ಯಕ್ತಿ ಅಂತ ಇರುತ್ತದೆ.ನೀತಿಗೇ ಅಂತ ಒಂದು ಸಾರ್ವಕಾಲಿಕ ಸಂವಿಧಾನವನ್ನು ಒಂದು ದೇಶವ್ಯಾಪಿಯಾಗಿ ಬರೆಯಲಾಗುವುದಿಲ್ಲ.
ದುಷ್ಟರ ಸಂಹಾರ ಮಾಡಿದ ಪೌರಾಣಿಕ ಪಾತ್ರಗಳನ್ನು ನೋಡಿ.ಆ ದುಷ್ಟರು ಎಲ್ಲರಿಗೂ ದುಷ್ಟರಾಗಿದ್ದರಾ?ಹಾಗಾದ ಮೇಲೆ ಯಾರಿಗೋ ದುಷ್ಟರಾದರೆ ಅವರ ಸಂಹಾರ ಮಾಡುವುದು ನೀತಿಬಾಹಿರವಾಗುವುದಿಲ್ಲವಾ? ಆ ದುಷ್ಟರಿಂದ ಉಪಕಾರ ಪಡೆದವರಿಗೆ ಹಾಗನಿಸುವುದಿಲ್ಲವಾ? ನೀತಿ ಅಂದರೆ ಏನು ಹಾಗಾದರೆ?
ಚಿಂತನ ಭಟ್ಟರ ವ್ಯಾಖ್ಯಾನ ಕೇಳುತ್ತಾ ಈ ಕ್ಷಣಕ್ಕೇ ಜಲಪ್ರಳಯ ಆಗುತ್ತದೆ ಎಂದು ಶರ್ಮಿಳೆಗೆ ಒಳಗೊಳಗೇ ಅನಿಸಿ ಭಯವಾಯಿತು.


But he is very good looking and charming, really make me laugh and is great in bed. Basically, he give me butterflies.But the downside is, he is never going to commit to me in the way that I wanted and he is too much of a player.

ಶರ್ಮಿಳೆ ಸುಧಾಗೆ  ಮತ್ತೊಂದು ವಾಟ್ಸಪ್ ಎಸೆದಳು.
ಹತ್ತಿರದಲ್ಲಿ ಚಕ್ಕಳಬಕ್ಕಳ  ಹಾಕಿ ಕುಳಿತಿದ್ದ ಆಂಟೀ ಶರ್ಮಿಳೆಯ ಸ್ಮಾರ್ಟ್‌ಫೋನ್ ಮೇಲೆ ಕಣ್ ಹಾಯಿಸಿ ಶರ್ಮಿಳೆಯನ್ನೊಮ್ಮೆ ದುರುಗುಟ್ಟಿದಂತೆ ನೋಡಿ ಮತ್ತೆ ಚಿಂತನ ಭಟ್ಟರು ಕುಳಿತಿದ್ದ ಸ್ಟೇಜ್ ಮೇಲೆ ಕಣ್ ಹಾಕಿತು.ಶರ್ಮಿಳೆ ತಣ್ಣಗೆ  ಆಫ್ ಮಾಡಿದಳು.
ಚಿಂತನಭಟ್ಟರ ಪ್ರವಚನ ಮನುಷ್ಯ ಸಂಬಂಧಗಳತ್ತ ಸಾಗಿರುವುದು ಶರ್ಮಿಳೆ ಮತ್ತೆ ಗಮನವನ್ನು ತೆರದಾಗಲೇ ಗೊತ್ತಾಗಿದ್ದು.ಓಹ್ ಏನ್ ಹೇಳ್ತಾ ಇದ್ದಾರೆ ಈ ಭಟ್ಟರು,
ಮಹಿಳೆ ಮತ್ತು ಪುರುಷ ಸಂಬಂಧಗಳೇ ಹಾಗೇ,ನೀತಿ ಅನೀತಿಯ ಪರಿಧಿ ಆಯಾ ಮನಸ್ಸುಗಳ ಲಹರಿಯ ಮೇಲೆ ಸಾಗುತ್ತದೆ.
You share a part of your life with that someone , you cherish that part.Yes, each one of those magical moments are etched in your memory, quite vividly. 
ತಿಳಿದಿರಲಿ.ಇದು ಆಧುನಿಕ ಬದುಕು.ಈ ಧಾವಂತದ ಕಾಲದಲ್ಲಿ ಹೀಗೇ ಆಗೋದು.ಸಂಬಂಧಗಳ ಕಲ್ಪನೆಯೇ ವಿಚಿತ್ರ.ಅದನ್ನೇ ನಾನು ಆಗ ಹೇಳಿದ್ದು, ನೀತಿಯ ಪರಿಧಿ ಏನು ಅಂತ ಕೇಳಬೇಕಾಗುತ್ತದೆ.
ಕೆಲವರು ಕೇಳ್ತಾರೆ ಶುದ್ಧಪ್ರೀತಿ ಅಂದರೆ ಏನು ಅಂತ?
ಇತ್ತೀಚೆಗೆ ಆ ಹುಡುಗಿ ಬಂದಿದ್ದಳು.ಅವಳನ್ನು ಹುಡುಗಿ ಅಂತ ಕರೆಯೋದು ಬೇಡ.ಏಕೆಂದರೆ ಅವಳು ಮದುವೆಯಾದವಳು.ಹಾಗಂತ ಹುಡುಗಿ ಅಂದರೂ ತಪ್ಪಿಲ್ಲ.ಚಿಂತನಭಟ್ಟರು ನಕ್ಕರು.ಗೊರಗೊರನೆ ಗಂಟಲು ಕ್ಯಾಕರಿಸಿತು.ಪಕ್ಕದ ತಾಮ್ರದ ಬಿಂದಿಗೆ ಎತ್ತಿಕೊಂಡರು,ಮೂರುಮುಕ್ಕಳಿ ನೀರು ಕುಡಿದರು.ಶರ್ಮಿಳೆ ತನ್ನ ಆಸಕ್ತಿಯ ವಿಷಯ ಬರುತ್ತಿದೆ ಎಂದುಕೊಂಡು ಕತ್ತು ಆನಿಸಿದಳು.
ಏನು ಹೇಳುತ್ತಿದ್ದೆ ನಾನು?
ಹು?
ಹೌದು ಆ ಹೆಣ್ಮಗಳು.ಅವಳು ಕೇಳಿದಳು,ಯಾವುದು ಶುದ್ಧಪ್ರೀತಿ ಅಂತ?
True love is an all-encompassing emotion. It is beyond possession, enchantment, ownership, or any other feeling that gives you a sense of holding back a person from being in somebody else's life ಅಂತ ಹೇಳಿದೆ ನಾನು.ಒಪ್ಪಿಕೊಂಡಳು ನೋಡಿ.ಅದನ್ನೇ ನಾನು ಹೇಳಿದ್ದು ನೀತಿಗೆ ಅದರದ್ದೇ ಆದ ಧರೆ ಇದೆ ಅಂತ.ಬೇಕಾದರೆ ಪರೀಕ್ಷೆ ಮಾಡಿ ನೋಡಿ,ಶುದ್ಧ ಪ್ರೀತಿ ನಿಮಗೆ ದಕ್ಕಿದೆಯೋ ಅಂತ.ನಿಮಗೆ ಶುದ್ಧಪ್ರೀತಿ ದಕ್ಕಿದ್ದೇ ಆದರೆ ನಿಮ್ಮ ಸಂಗಾತಿಯ ವಿಚಾರದಲ್ಲಿ There is no need to say "I love you". You can just sense it. You don't need each other, but instead, want each other. And you stop looking for someone better.


ಶರ್ಮಿಳೆಗೆ ಅತ್ಯಂತ ಹುಕ್ಕಿ ಬಂತು.ಏನಾದರೂ ಮಾಡಿ ಈ ಪ್ರವಚನ ಮುಗಿದ ಮೇಲೆ ಈ ಭಟ್ಟರನ್ನು ಭೇಟಿ ಮಾಡಬೇಕು.ಸಾಧ್ಯವಾದರೆ ಇವರ ಶಿಷ್ಯತ್ವ ಪಡೆಯಲೇಬೇಕು ಎಂದು ಪಣ ತೊಟ್ಟಳು.
ತಲೆ ಬಗ್ಗಿಸಿ ಚಕ್ಕಳಬಕ್ಕಳ ಕುಳಿತ ಆಸನ ಬದಲಿಸಿದಳು.ತೊಡೆ ಮೇಲಿದ್ದ ಸ್ಮಾರ್ಟ್‌ಫೋನ್ ಜಮಖಾನದ ಮೇಲೆ ಬಿತ್ತು.ಎತ್ತಿಕೊಂಡು ವಾಟ್ಸ್‌ಪ್ ನೋಡಿದಳು.ಸುಧಾಳ ಮೆಸೇಜುಗಳಿದ್ದವು.ಕೆಲವೊಂದು ಚಿತ್ರಗಳೂ ಕಾಣಿಸಿದವು.ಪ್ರವಚನ ಎಲ್ಲಾ ಮುಗಿದ ಮೇಲೆ ನೋಡಿದರಾಯಿತು ಎಂದು ಸುಮ್ಮನಾದಳು.ಚಿಂತನ ಭಟ್ಟರ ಪ್ರವಚನ ಮುಕ್ತಾಯವಾಗುವ ಹಂತ ತಲುಪಿತ್ತು.
ಓಶೋ ರಜನೀಶ ಹೇಳುತ್ತಾರೆ,ಪ್ರೀತಿಯಲ್ಲಿ ಮುಳುಗಬೇಡಿ,ಪ್ರೀತಿಯಲ್ಲಿ ಮೂಡಿಬನ್ನಿ ಅಂತ.ಹಾಂ,ಅದೇ ಪ್ರೀತಿಯಲ್ಲಿ ಮುಳುಗಿದರೆ ಅದನ್ನೇ ನಾನು ಹೇಳಿದ್ದು ಜಲಪ್ರಳಯ ಆಗುತ್ತದೆ ಎಂದು ,ಅದರ ಬದಲಿಗೆ ಪ್ರೀತಿಯ ಧಾರೆಯಲ್ಲಿ ಮೀಯುತ್ತಿರಿ.ಆ ಜಲಬಿಂದುಮಾಲೆಗಳನ್ನು ಮೈ ತುಂಬ ತುಂಬಿಕೊಳ್ಳಿರಿ ಅಂತ. ರಾಜ  ಕೆಟ್ಟಾಗ ದೇವರು ಜಲಪ್ರಳಯ ಉಂಟುಮಾಡುತ್ತಾನೆ.ಆಗ ಪ್ರಜೆಗಳು ಒಳ್ಳೆಯವರು ಕೆಟ್ಟವರು ಎಂಬ ಬೇಧಭಾವವಿಲ್ಲದೇ ಮುಳುಗಿ ಹೋಗುತ್ತಾರೆ ಎಂದು ಜನಪದದಲ್ಲಿ ಹೇಳಿದ್ದಾರೆ.ಅಂದರೆಪ್ರತಿಯೊಬ್ಬನೂ ತಾನು ಕೆಡುತ್ತಾ ಹೋದಾಗ ಅವನಿಗೆ ಅರಿವಿಲ್ಲದಂತೆ ಅವನೊಳಗೆ ಜಲಪ್ರಳಯ ಆಗುತ್ತದೆ.ಹಾಗಾಗದೇ ಇರಬೇಕಾದರೆ ಕೆಡಬಾರದು.ಅದಕ್ಕೆ ಪ್ರೀತಿಯೊಂದೇ ಔಷಧ.
ಪ್ರವಚನ ಮುಗಿಯಿತು.ಯಾರೋ ಹಾರ ತುರಾಯಿ ಹಾಕಿದರು.ಇನ್ಯಾರೋ ಅಭಿನಂದನೆ ಮಾತನಾಡಿದರು.ಶರ್ಮಿಳೆ ಸ್ಟೇಜ್ ಬಳಿ ನಿಂತಿದ್ದಳು.ಚಿಂತನಭಟ್ಟರನ್ನು ಯಾರೋ ಮಾತನಾಡಿಸುತ್ತಾ ಅವರ ಹಿಂದೆ  ಮುಂದೆ ಠಳಾಯಿಸಿದ್ದರು.ಅವರ ಸರದಿ ಮುಗಿದ ಮೇಲೆ ತಾನೇ ಖುದ್ದಾಗಿ ಮಾತನಾಡಿಸಬೇಕು.ಬಿಡುವಾಗಿದೆ ಅಂತ ವಾಟ್ಸಪ್ ತೆರೆದಳು.ಅನ್‌ನೋನ್ ನಂಬರ್‌ನಿಂದ ಒಂದು ಸಂದೇಶವಿತ್ತು.
ಹೇಗಿತ್ತು ಪ್ರೀತಿಯ ಪ್ರವಚನ?
ಯಾರಿದು? ಶರ್ಮಿಳೆ
who u? ಅಂತ ಪ್ರಶ್ನೆ ಹಾಕಿದಳು.
ಲಾಸ್ಟ್‌ಸೀನ್ ಅರ್ಧಗಂಟೆ ಮುಂಚೆ ಅಂತ ಇತ್ತು.
ಚಿಂತನಭಟ್ಟರು ವೇದಿಕೆಯ ಮುಂಭಾಗದಲ್ಲಿ ಇಳಿಯಲಿಲ್ಲ.ಸೀದಾ ವೇದಿಕೆಯ ಹಿಂದೆ ಹೋಗಿ ಕಣ್ಮರೆಯಾದರು.
ಶರ್ಮಿಳೆಗೆ ಕ್ಷಣಕಾಲ ನಿರಾಸೆ ಆಯಿತು.ಸೀದಾ ಹಿಂಬಾಗಿಲಿನಲ್ಲಿ ಸವರಿಕೊಂಡು ಹೋದಳು.ಇನ್ನೋವಾದ ಮುಂದೆ ಚಿಂತನಭಟ್ಟರು ನಿಂತಿದ್ದರೆ ಅಲ್ಲಿ ಮತ್ತೆ ಜನ.ಇನ್ನಾಗದು ಎಂದುಕೊಂಡಳು.ಸಂಘಟಕರಲ್ಲಿ ಕೇಳಿ ಚಿಂತನಭಟ್ಟರ ನಂಬರ್ ಪಡೆದುಕೊಂಡರಾಯಿತು.ಆಮೇಲೆ ಅವರನ್ನು ಸಂಪರ್ಕಿಸಿದರಾಯಿತು ಎಂದು ಹೊರಟಳು.ಸ್ಕೂಟಿ ಏರಿ ಅರ್ಧದಾರಿ ತಲುಪಿಲ್ಲ ಫೋನ್ ರಾಗ ಹಾಡಿತು.ಎತ್ತಿಕೊಂಡರೆ ಏನೂ ಹೇಳೇ ಇಲ್ಲ,ಪ್ರವಚನ ಹೇಗಿತ್ತು ಅಂತ ಪ್ರಶ್ನಿಸುತ್ತಿರುವ ಸ್ವರ ಅವನದ್ದೇ.ಮಾತೇ ಇಲ್ಲ,ಅವನೇ.
ಏಯ್ ಅಂತ ಶರ್ಮಿಳೆ.
ಹೇಳಲೇ ಇಲ್ಲ ಅಂತ ಅವನು.
ಎಲ್ಲಿದ್ದೀಯಾ ನೀನು?
ಬ್ರಿಸ್ಬೇನ್
ಓಹ್
ಪ್ರವಚನ?
ಅದನ್ನೇ ಕೇಳಿದ್ದು ಹೇಗಿತ್ತು ಅಂತ
ನಿಂಗೆ ಹೇಗೆ ಗೊತ್ತಾಯಿತು ಅಂತ
ಅದೇ ನಾನು,..ಆಮೇಲೆ ಬಾಯ್ತುಂಬ ನಗು.
ಹೇಯ್
ಮಧ್ಯರಾತ್ರಿ ಸ್ಕೈಪೆ ಮೇಲೆ ಬಾ..
ನನ್ನ ನಂಬರ್ ಯಾರು ಕೊಟ್ಟರು ನಿನಗೆ?ನಾನು ಪ್ರವಚನದಲ್ಲಿದ್ದೇನೆ ಎಂದು ಯಾರು ಹೇಳಿದರು ನಿಂಗೆ?
ಎಲ್ಲಾ ಹೇಳ್ತೀನಿ ಮುದ್ದು,ಸ್ಕೈಪೇಲಿ ಮಾತನಾಡೋಣ.ಬೈ॒
ಮತ್ತೆ ಅವತರಿಸುತ್ತಿದ್ದಾನೆಯೇ? ಮತ್ತೆ ಸೃಷ್ಟಿಯಾಗುತ್ತಿದ್ದಾನೆಯೇ? ಮತ್ತೆ ಕದ ತಟ್ಟುತ್ತಿದ್ದಾನೆಯೇ?ಬಾಗಿಲು ಮುಚ್ಚಿ ಅಗುಳಿ ಜಡಿದು ಭದ್ರವಾಗಿ ಇದ್ದ ಈ ಹೊತ್ತಲ್ಲಿ ..
ಸ್ಕೂಟಿಲೇ ಇದ್ದವಳು ಸುಧಾಳ ಮೆಸೇಜ್ ನೋಡಿದಳು.ಫೋಟೋಗಳನ್ನು ತೆರೆದರೆ ಚಿಂತನಭಟ್ಟರು! ಸಭೆಯ ಫೋಟೋ,ಅದರಲ್ಲಿ ತಾನು ಚಕ್ಕಳಬಕ್ಕಳ ಕುಳಿತ ಫೋಕಸ್.ಅರೆ ಸುಧಾಗೆ ಯಾರು ಇದನ್ನ ಕಳುಹಿಸಿದ್ದಾರೆ?
ಸುಧಾ,ಎಲ್ಲಿ ಸಿಕ್ಕಿದವು ಈ ಫೋಟೋಗಳು?
ಹೆಹೆಹೆ ಅಂತ ಉತ್ತರ.
ಶರ್ಮಿಳೆ ಅಕ್ಷರಶಃ ಬೆವೆತಿದ್ದಳು.ಇದೆಲ್ಲಾ ಹೇಗಾಗುತ್ತಿದೆ?ನಾನು ಇಲ್ಲಿ ಪ್ರವಚನದಲ್ಲಿರುವುದನ್ನು ಬ್ರಿಸ್ಬೇನ್‌ನಲ್ಲಿರುವ ಅವನಿಗೆ ಹೇಳಿದವರು ಯಾರು?ಸುಧಾಗೆ ಫೋಟೋ ಕಳುಹಿಸಿದ್ದವರು ಯಾರು?
ಯಾವುದಕ್ಕೂ ಮನೆಗೆ ಹೋಗಿ ಮೊದಲು ಸುಧಾಳನ್ನು ಟ್ರಯಲ್ ಮಾಡಬೇಕು.ಸುಧಾ ಈ ಎಲ್ಲಾ ಹೂಟಗಳಲ್ಲಿ ಸಕ್ರಿಯಳಾಗಿದ್ದಾಳೆ.ಅವಳೇ ಈ ಸೂತ್ರಧಾರಳು ಎಂಬುದು ಪಕ್ಕಾ.ಯಾಕೋ ತುಂಟ ನಗುವೊಂದು ಅಟ್ಟಟ್ಟಿ ಬಂತು.
ಶರ್ಮಿಳೆ ಮನೆಗೆ ಬಂದಿಳಿದಳು.ಸ್ಕೂಟಿ ನಿಲ್ಲಿಸಿ ಬಾಗಿಲಿನ ಕೀಹೋಲ್‌ಗೆ ಕೀ ಇಕ್ಕುತ್ತಿದ್ದಂತೆ ತಲೆ ತಿರುಗುತ್ತಿರುವ ಅನುಭವ.ಏಕಾಏಕಿ ಯಾವುದೋ ಸಂಕಟ.ಮೈಯೆಲ್ಲಾ ಮುರಿದುಕೊಂಡ ಹಾಗೇ.ಹಜಾರದ ಲೈಟ್ ಆನ್ ಮಾಡಿ ಕದಗಳನ್ನು ದೂಡುತ್ತಾ ಬಾತ್‌ರೂಂನತ್ತ ನುಗ್ಗಿದಳು.ಶವರ್ ಬೋಲ್ಟ್ ಹಿಡಿದುಕೊಂಡು ಮೈ ಸಾವರಿಸಿಕೊಂಡಳು.ಚಿಂತನಭಟ್ಟರ ಪ್ರವಚನ ಬೆನ್ನು ಹತ್ತಿತ್ತು.ಜಲಪ್ರಳಯ ಆಗುತ್ತಿದೆ ಎಂಬುದು ಖಚಿತವಾಗುತ್ತಿತ್ತು.
ಅಬುದಾಭಿಯಲ್ಲಿ ಸುಧಾ,ಬ್ರಿಸ್ಬೇನ್‌ನಲ್ಲಿ ಅಂವ..ಇಲ್ಲಿ ತಾನು,ವೇದಿಕೆಯಲ್ಲಿ ಚಿಂತನಭಟ್ಟರು...ಶರ್ಮಿಳೆ ಸಾವರಿಸುತ್ತಿದ್ದೂ ತೊಪ್ಪನೆ ಬಿದ್ದಳು.ಮನೆಯ ಎಲ್ಲಾ ಬಾಗಿಲುಗಳೂ ತೆರೆದೇ ಇದ್ದವು.