20160728

ಮೆಹಂದಿ ಬೇಡುವ ಕೈಗಳು


ನನ್ನ ಪ್ರೀತಿಗೆ ನೀನು ದಕ್ಕಲಿಲ್ಲ ಎಂದರೆ ಅದರರ್ಥ ನೀನು ಪ್ರೀತಿಗೆ ಅರ್ಹನೇ ಎಂದೇನಲ್ಲ.ನಾನು ಇರುವ ಪರಿಸ್ಥಿತಿಯಲ್ಲಿ ನಿನ್ನನ್ನು ಪ್ರೀತಿಸಿ ಬದುಕು ಕಟ್ಟುವುದು ನನ್ನಿಂದಾಗದು ಎಂದಳು ಶರ್ಮಿಳೆ.
ಸುಮಂತ ಮಾತೆತ್ತಲಿಲ್ಲ.
ಶರ್ಮಿಳೆ ಬಹಳ ಹೊತ್ತು ಮೌನವಾಗಿ ಅವನನ್ನೇ ನೋಡುತ್ತಿದ್ದಳು.ಅವನು ಅರ್ಧ ಕುಡಿದು ಬಿಟ್ಟಿದ್ದ ಲೀಚೀ ಮಿಲ್ಕ್‌ಶೇಕ್‌ನ ಸ್ಟ್ರಾ ಯಾವ ಬಣ್ಣದ್ದು ಎಂದು ದಿಟ್ಟಿಸಿದಳು.ನೇರಳೆ.
ತನ್ನ ಗ್ಲಾಸ್ ನೋಡಿದಳು.ಸ್ಟ್ರಾ ಪಿಂಕ್ ಬಣ್ಣದ್ದು.
ಉಫ್
ಈ ಬೇರರ್ ಬೇಕೆಂದೇ ಈ ರೀತಿ ಎರಡು ಬಗೆಯ ಬಣ್ಣಗಳ ಸ್ಟ್ರಾ ತುರುಕಿ ತಂದಿದ್ದಾನೆ.ಅದಲುಬದಲು ಮಾಡಿಕೊಳ್ಳುವ ಹುಕ್ಕಿ ತನಗೆ ಮಾತ್ರಾ ಅಲ್ಲ,ಈ ಫ್ರುಟ್‌ಹೌಸ್‌ನಲ್ಲಿ ಬರುವ ಇತರ ಪ್ರೇಮಿಗಳಿಗೂ ಇರಬೇಕು.ಆದದ್ದಾಗಲಿ ಎಂದವಳೇ ಅವನ ಗ್ಲಾಸ್ ಎಳೆದುಕೊಂಡಳು.ತಾನು ಮುಕ್ಕಾಲು ಹೀರಿ ಮುಗಿಸಿದ್ದ ಜ್ಯೂಸ್‌ನ್ನು ಅವನತ್ತ ತಳ್ಳಿದಳು.ಸುಮಂತನಿಗೆ ಏನಾದರೂ ಅನಿಸಲಿ,ಜ್ಯೂಸ್ ಪೂರ್ತಿ ಹೀರಿ ಮುಗಿಸಿದಳು.
ಸುಮಂತನಿಗೂ ಅವಳು ಹೇಳುತ್ತಿರುವ ವಾಕ್ಯಗಳು ಸರಿಯಾಗೇ ಇದೆ ಎನಿಸಿತು.ವಿಷಣ್ಣಛಾಯೆ ಮತ್ತೆ ಮತ್ತೆ ಅಡರತೊಡಗಿತು.
ಶರ್ಮಿಳೆಯನ್ನು ತಾನು ಪ್ರೀತಿಸಿದ್ದಾ ಅಥವಾ ಇದೂ ಒಂದು ಮೆಂಟಲ್ ಅಡಾಲ್ಟ್ರಿಯಾ?ಸುಮಂತ್ ಶರ್ಮಿಳೆ ತನ್ನ ಎಂಜಲಿನ ಜ್ಯೂಸ್‌ನ್ನು ಕಚ್ಚಿ ಹೀರುತ್ತಿರುವ ಪರಿಯನ್ನು ನೋಡುತ್ತಾ ತನ್ನೊಳಗೆ ಅವತರಿಸಿಕೊಳ್ಳತೊಡಗಿದ.ಎಲ್ಲಿದ್ದೆ ತಾನು ಎಲ್ಲಿಗೆ ತಲುಪಿದೆ ಎಂದು ತನಗೆ ತಾನೇ ಬಂದ ಹಾದಿಯ ನೋಡುತ್ತಿದ್ದ.
ಈ ಶರ್ಮಿಳೆ ತನಗೆ ದಕ್ಕುವುದಿಲ್ಲ ಎಂದು ಗೊತ್ತಿಲ್ಲ ಅಂತಾನಾ? ಮೊದಲಬಾರಿ ಅವಳನ್ನು ಕಂಡಾಗ ಬಿಲ್ಲಿನಿಂದ ಹೂಡಿದ ಬಾಣದ ಹಾಗೇ ಅವಳ ಮನಸ್ಸಿಗೆ ನೇರ ಗುರಿ ಇಟ್ಟು ಹೊಡೆದು ಕೂತದ್ದು ನಿಜ ತಾನೇ.ಅವಳು ಆ ವೇದನೆಯನ್ನು ಸುಖ ಎಂದು ಒಪ್ಪಿಕೊಂಡಳಲ್ಲಾ ಅದೇ ಪರಮಾಶ್ಚರ್ಯ.ಏನೆಂದಿದ್ದಳು ಅವಳು? ಅಬ್ಬಾ!
It is so tumultuous and passionate that it feels like a violent journey  ಕಣೋ ..
ನಿನಗೂ ಹೀಗೆ ಅನಿಸುತ್ತಿದೆಯಾ? ಅಂದಾಗ ಸೈಲೆಂಟ್ ಆಗಿದ್ದೆ.
ಆ ರಾತ್ರಿ ಅವಳ ಮೊದಲ ಚುಂಬನದ ಗಾಢ ಸವಿ ಕಾಡುತ್ತಿತ್ತು.ಅಂಗಾತ ಮಲಗಿ ಅದನ್ನು ಮತ್ತೆ ಮತ್ತೆ ಅನುಭವಿಸುತ್ತಿದ್ದೆ.ತೊಡೆಗಳು ಶಿಥಿಲವಾಗಿವೆ ಅಂತ ಮೆಸೇಜ್ ಅಟ್ಟಿದ್ದಳು. ನಕ್ಕಿದ್ದೆ, ಮುಗುಳಾಗಿ.
ಇದು ಪ್ರೇಮಜ್ವರಾನಾ ಅಂತ ಕೇಳಿದ್ದಳು ಶರ್ಮಿಳೆ.ಮೈ ಬಿಸಿ ಇನ್ನೂ ಆರಿಲ್ಲ ,ನಿಜಕ್ಕೂ ಯಾವುದೋ ವೈರಲ್ ಜ್ವರ ಬಂದ ಹಾಗಿದೆ ಎಂದಿದ್ದಳು.
It is a fever, and a burden, too ಎಂದು ಉತ್ತರ ಹಾಕಿದೆ.
I am glad it cannot happen twice, the fever of first love ಅಂತ ಉತ್ತರ ಬಂತು.
ಸುಮ್ಮನೇ ಅವಳ ಡಿಪಿ ಮೇಲೆ ಮುತ್ತು ಇಟ್ಟು ಬಲಬದಿಗೆ ಒರಗಿಕೊಂಡಿದ್ದೆ.
ಆ ದಿನ ಹೇಳಿದ್ದೆ ಎರಡೆರಡು ಸಲ ಇದಾಗಲ್ಲ ಅಂತ ಸುಮುಂತ ಕೆಣಕಿದ.ಹಾಗೇ ಕೆಣಕುವ ಅವನ ಧ್ವನಿಯಲ್ಲಿ ಎಂದಿನ ತುಂಟತನ ಇಲ್ಲ ಎಂಬುದನ್ನು ಶರ್ಮಿಳೆ ಜಾಣತನದಿಂದ ಗುರುತಿಸಿದ್ದಳು.ಆ ಪ್ರಶ್ನೆಯಲ್ಲಿ ಏನಿದೆ?ಆ ಧ್ವನಿಯಲ್ಲಿ ಯಾವ ನೋವಿನ ಸೆಲೆ ಇದೆ ಎಂದು ಹುಡುಕಿದಳು.ಕಣ್ಣುಮುಚ್ಚಿಕೊಂಡಳು.ಗಂಟಲು ಆರ್ದ್ರವಾಗುತ್ತಿತ್ತು.ಕಣ್ ತುಂಬಿಕೊಂಡಿದೆ ಎಂದು ಗೊತ್ತಾಯಿತು.ನಕ್ಕಳು.ಸೊರ್ ಅಂತ ಮೂಗು ಜೊತೆಗೆ ಶಬ್ದ ಮಾಡಿತು.ಕಣ್ಣಾಲಿಗಳು ಸುಳ್ಳು ಹೇಳುತ್ತಿರಲಿಲ್ಲ.
ಆ ದಿನ ನಿನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದೆ ನೋಡು,ನೀನೇನು ಓಡೋಗ್ತಿಯಾ ಅಂತಾನಾ?ಅಲ್ಲ.ನಿನ್ನ ಸಾಂಗತ್ಯ ಬಿಗಿಯಾಗಿ ಬೇಕಿತ್ತು ನನಗೆ ಅಷ್ಟೇ.ಆ ದಿನ ನಾನು ನೋಡಿದ ಪ್ರತಿಯೊಂದು ಹೂವು, ಕೇಳಿದ ಹಾಡು,ಆಕಾಶದ ಮುಗಿಲು,ಬಿದಿಗೆ ಚಂದಿರನ ಬೆಳಕೂ ನನ್ನನ್ನು ಉದ್ದೀಪಿಸುತ್ತಿತ್ತು  ಅಂತ ಶರ್ಮಿಳೆ ಹೇಳುತ್ತಲೇ ಇದ್ದರೆ, ತೀರಾ ಪೋಯೆಟಿಕ್ ಆಯಿತು ಎಂದ ಸುಮಂತ.
ಹೊರಗೆ ಮಳೆ ಹನಿಯುತ್ತಿತ್ತು.ಫ್ರುಟ್‌ಹೌಸ್‌ನಿಂದ ಇಬ್ಬರೂ ಹೊರಗೆ ಬಂದಾಗ ಇಲ್ಲಿಗೆ ಎಲ್ಲವೂ ಮುಗಿಯಿತು,ಇನ್ನೇನಿದ್ದರೂ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ ಎಂದು ಹೇಳಿದಂತೆ ಕೇಳಿಸಿತು.
ಅವಕ್ಕಾಗಿ ಏಕಕಾಲಕ್ಕೆ ಇಬ್ಬರೂ ತಿರುಗಿ ನೋಡಿದರು.ಯಾರೋ ಇಬ್ಬರು ಫ್ರುಟ್‌ಹೌಸ್ ವೆರಾಂಡದಲ್ಲಿ ನಿಂತು ಪರಸ್ಪರ ವ್ಯವಹಾರ ಮುಗಿಸಿಕೊಳ್ಳುತ್ತಿದ್ದರು.ಒಬ್ಬ ಇನ್ನೊಬ್ಬನತ್ತ ಹೇಳುತ್ತಿದ್ದ,ಹೌದೂ ನನ್ನ ದಾರಿ ನನಗೆ,ಹಾಗಂತ ಆಗ ಅದು ನಿನಗೆ ಗೊತ್ತಾಗಿರಲಿಲ್ಲವೋ?
ಆಗಿನದ್ದು ಈಗ ಬೇಡ.ಆಗ ಅದು ಸರಿ,ಈಗ ಇದು ಸರಿ ಎಂದು ಅವನ ಎದುರಿಗಿದ್ದವ.
ಎಲ್ಲಾ ಇಷ್ಟೇ.ಕಿಂಚಿತ್ತಾದರೂ ಮಾನವೀಯತೆ ಬೇಕಲ್ಲ,ಮನುಷ್ಯರಿಗೆ ಅಂತ ಈತ ಪ್ರತಿಮಾತು ಎಸೆದ.
ಅದಕ್ಕೆ ಎದುರಿಗಿದ್ದವನು ಉತ್ತರಿಸಲಿಲ್ಲ.
ಕಾರೊಳಗೆ ಕೂತಾಗ ಸುಮಂತ ಕೇಳಿದ,ನಿನ್ನಲ್ಲಿ ಉತ್ತರ ಇದೆಯೋ?
ಶರ್ಮಿಳೆ ಮಾತನಾಡಲಿಲ್ಲ.ಅವಳಿಗೆ ಸುಮಂತ ಸೇಡು ತೀರಿಸಿಕೊಳ್ಳಲು ಪಣ ತೊಟ್ಟನೇ ಎಂಬ ಅನುಮಾನ ಕಾಡತೊಡಗಿತು.ಇರಲಿಕ್ಕಿಲ್ಲ.ಯಾಕೆ ಸೇಡು?ಎಂದು ತನ್ನೊಳಗೆ ಅವಳು ಪದೇ ಪದೇ ಪತರಗುಟ್ಟಿದಳು.
ಶರ್ಮಿಳೆ ಮನೆ ಸೇರಿದಾಗ ಮನೆಯಲ್ಲಿ ಕಲ್ಪನಾ ಆಗಲೇ ಬಂದಿದ್ದಾಗಿತ್ತು.ಶರ್ಮಿಳೆಗೆ ಕಲ್ಪನಾ ಜೊತೆ ಎಲ್ಲಿಂದ ಮಾತು ಶುರು ಮಾಡುವುದು ಎಂದು ಗೊತ್ತಾಗಲಿಲ್ಲ.ಕಲ್ಪನಾ ಯಾವುದೋ ವಾಟ್ಸ್‌ಪ್ ಗ್ರೂಪ್ ಜೊತೆ ಅನುಸಂಧಾನದಲ್ಲಿ ಗರ್ಕಳಾಗಿದ್ದಳು.ಶರ್ಮಿಳೆಗೆ ಅದೇ ಲಹರಿ ಬೇಕಿತ್ತು.ಸೀದಾ ಸೀದಾ ಕೋಣೆಗೆ ಸೇರಿಕೊಂಡು ಅಗುಳಿ ಹಾಕಿಕೊಂಡಳು.ಎಲ್ಲಾ ಬಟ್ಟೆ ಬರೆ ಕಿತ್ತು ಹಾಕಿ ಹಾಸಿಗೆಯಲ್ಲಿ ಅಂಗಾತ ಬಿದ್ದುಕೊಂಡಳು.ಅತಿಯಾಯಿತು ಈ ವರ್ತನೆ ಎಂದುಕೊಂಡಳು.ಯಾವುದರಿಂದಲೋ ತಾನು ಕಳಚಿಕೊಳ್ಳಬೇಕಿದೆ ಎಂದು ತನ್ನಲ್ಲೇ ಬೊಟ್ಟುಮಾಡಹತ್ತಿದಳು.
ಸುಮಂತ ಕಾರಿನೊಳಗೆ ಸೇರಿಕೊಂಡೊಡನೆ ಹಾಗೇಕೆ ಕೇಳಿದ,ನಿನ್ನಲ್ಲಿ ಉತ್ತರ ಇದೆಯಾ ಅಂತ.ಯಾವುದಕ್ಕೆ ಅವನು ಉತ್ತರ ಬಯಸಿದ್ದ? ಮಾನವೀಯತೆಯವ ವಿಚಾರ ಆ ಇಬ್ಬರು ವಹಿವಾಟಿನವರು ಮಾತನಾಡಿದರಲ್ಲ,ಅದಕ್ಕೆ ಈ ಸಂಬಂಧವನ್ನು ತಳುಕು ಹಾಕಿದನಾ? ಶರ್ಮಿಳೆಗೆ ಬಾಯಿ ಪಸೆ ಆರಿಹೋಗಿತ್ತು.ಹಾಸಿಗೆ ಮೇಲೆ ಎಡಭಾಗಕ್ಕೆ ಹೊರಳಿ ಮಲಗಿದಲ್ಲೇ ನೀರೊನ ಹೂಜಿ ಎತ್ತಿಕೊಂಡು ಅನಾಮತ್ತಾಗಿ ಗಟಗಟ ನೀರುಕುಡಿದಳು.ಮತ್ತೆ ಹಾಸಿಗೆ ಮೇಲೆ ಬೋರಲು ಬಿದ್ದು ವಾಟ್ಸಪ್ ಎತ್ತಿ
 I want you to leave forever and never come back again ಅಂತ ಟೈಪ್ ಮಾಡಿದಳು.ಕಳುಹಿಸಲೋ ಬೇಡವೋ ಅಂತ ಕ್ಷಣಕಾಲ ಯೋಚಿಸಿ ಸೆಂಡ್ ಮಾಡಿದಳು.ಕಲ್ಪನಾ ಆ ಮೆಸೇಜ್ ನೋಡಿದ್ದಕ್ಕೆ ಸಾಕ್ಷಿಯಾಗಿ ನೀಲಿಗೆರೆ ಕಾಣಿಸಲಿಲ್ಲ.ಅದೇ ಮೆಸೇಜ್ ಮೇಲೆ ಬೆರಳು ಒತ್ತಿದಳು.ಅದು ಹಚ್ಚನೆ ಹರಸಿಕೊಂಡಿತು.ಮೇಲೆ ಬಾಣದ ಗುರುತಿಗೆ ಬೆರಳು ಇಟ್ಟಳು.
ಯಾರಿಗೆ ಕಳುಹಿಸಬೇಕು ಎಂದು ವಾಟ್ಸಪ್ ಕೇಳತೊಡಗಿತು.
ಸುಮಂತ್,ಅಜಿತ್,ಅಕ್ಷರಭಟ್,ಆಕಾಶ್,ವಿಷ್ಣು,ದಾಮು,ಸುಖ್ಪಾಲ್...
ಶರ್ಮಿಳೆ ಒಬ್ಬರಾದ ಮೇಲೊಬ್ಬರಿಗೆ ಅಂಟಿಸುತ್ತಾ ಹೋದಳು.
ಸುಮಂತನಿಗೆ ಮಾತ್ರಾ ಅವಳ ಸಂದೇಶ ರವಾನೆಯಾಗಲಿಲ್ಲ.ಬ್ಲಾಕ್ ಮಾಡಿದ್ದಾನೆ ಎಂಬುದು ಖಚಿತವಾಯಿತು.ಮಲಗಿದಲ್ಲೇ ಕರೆ ಮಾಡಿದಳು.
ಹಲೋ ಅಂದ,ಅದೇ ಗಡಸು ಧ್ವನಿಯಲ್ಲಿ ಮಾಧುರ್ಯ ಇರಲಿಲ್ಲ.
ಓಶನ್‌ಪರ್ಲ್ ಬುಕ್ ಮಾಡು.ಈ ರಾತ್ರಿ ನೀನು ನನಗೆ ಬೇಕು ಅಂತ ಗಟ್ಟಿಯಾಗಿ ಹೇಳಿಬಿಟ್ಟಳು.ಹಾಗೇ ಹೇಳುತ್ತಿದ್ದಾಗ ತನ್ನಲ್ಲಿ ಎಂದೂ ಇಲ್ಲದ ಬಿಗು ಮೂಡಿದ್ದು ಅವಳಿಗೆ ಅರ್ಥವಾಗಿತ್ತು.
What is this? ಅಂದ ಸುಮಂತ.

I  need you to  night, I  need you right now, It doesnt  matter if its  wrong or right ,
 
Open  up your heart to me ,Set me freeeeeeeeeeeeeeeeeeeeeeee ..  .. ಶರ್ಮಿಳೆಯ ಮಾತಿನಲ್ಲಿ ಗಾಢ ಹಂಬಲವಿರುವುದನ್ನು ಸುಮಂತ ಅತ್ತ ಕೇಳಿಸಿಕೊಳ್ಳುತ್ತಿದ್ದ.
ಶರ್ಮಿಳೆ ದಿಂಬಿಗೆ ತಲೆ ಇಟ್ಟು ಬಿಕ್ಕಿಬಿಕ್ಕಿ ಅತ್ತಳು.
ಕಲ್ಪನಾ ಮೆಸೇಜ್ ಹರಿದಾಡುತ್ತಿತ್ತು, ಎಂಗೇಜ್‌ಮೆಂಟ್ ಅಂತೀಯಾ,ಈಗಲೇ ಮೆಹಂದಿ ಹಾಕಬೇಕು.ಬೇಗ ಬಾ.ನಿನಗೆ ಇಷ್ಟವಾದ ಡಿಸೈನ್ ಕೂಡಾ ತೋರಿಸಿಲ್ಲ॒..
ಶರ್ಮಿಳೆ ಆ ಮೆಸೇಜ್ ಯಾವಾಗ ಓದುತ್ತಾಳೋ?
20160726

ಬುದ್ಧನೇನಲ್ಲ


ಬಹುತೇಕ ನೆಲ ಮುಟ್ಟುವಂತೆ ಬಗ್ಗಿದ್ದರು ಲಿಂಗಪ್ಪಯ್ಯ.ಅವರಿಗೆ ಕಣ್ಣು ಮಂಜಾಗುತ್ತಿರುವುದು ಅವರ ಕಣ್ಣು ಡಾಕುಟರಿಗಿಂತಲೂ ಖಚಿತವಾಗಿ ಅವರಿಗೆ ಗೊತ್ತಿತ್ತು.
ಲಿಂಗಪ್ಪಯ್ಯ ಸ್ವಭಾವತಃ ಯಾವುದನ್ನೂ ಅವರು ಇವರು ಹೇಳಿದರೆಂದು ಒಪ್ಪುವ ಪೈಕಿಯಲ್ಲ.ಒಂದು ವೇಳೆ ಡಾಕುಟರೇ ನಿಮ್ಮ ಕಣ್ಣು ಸರಿ ಇಲ್ಲ ಎಂದಿದ್ದರೆ ಸರಿ ಉಂಟು ಅಂತ ವಾದ ಮಾಡಿ ಅವನ ಬಾಯಿ ಮುಚ್ಚಿಸುತ್ತಿದ್ದರು.ಈಗ ಡಾಕುಟರು ಹೇಳುವ ಅಗತ್ಯ ಇರುವುದಿಲ್ಲ,ಅವರಿಗೇ ಗೊತ್ತಾಗಿದೆ.
ಅವರು ಮೈಸೂರಿನಲ್ಲಿರುವ ಅವರ ಏಕಮಾತ್ರ ಪುತ್ರಿಯಾದ ವಿನೀತಳ ಮನೆಗೆ ಹೊರಟು ನಿಂತಾಗ ನೋಡಬೇಕು ಅವರ ಸ್ಟೈಲು.ಅವರು ಹೊರಡುತ್ತಾರೆಂದು ಗೊತ್ತಾಗುವುದೇ ಆ ದಿನ ಬೆಳಗ್ಗೆ.ಹಟ್ಟಿಯಲ್ಲಿ ದನಗಳ ಬೆನ್ನುಜ್ಜುತ್ತಾ,ಇನ್ನು ಹತ್ತು ದಿನ ನಾನು ಇಲ್ಲ ಆಯಿತಾ.. ಎಂದು ದೊಡ್ಡದಾಗಿ ದನಗಳಿಗೆ ಎಂದು ಹೇಳಿದ್ದನ್ನು ಅವರ ಸೊಸೆ ಪ್ರಪುಲ್ಲ ಪಾತ್ರೆ ತೊಳೆಯುತ್ತಾ ಕೇಳಿಸಿಕೊಳ್ಳಬೇಕು.ಲುಗುಬಗೆಯಿಂದ ಓಡಿ ಬಂದ ಆಕೆ ಪಾತ್ರೆ ಪರಡಿ ದಡಬಡ ಹಾಕಿ ಮೂಪರು ಮೈಸೂರಿಗೆ ಹೊರಟ ಹಾಗುಂಟು'ಎಂದು ಗಂಡ ವಸಂತನ ಕಿವಿಯಲ್ಲಿ ಪಿಸಪಿಸ ಊದುವಳು.ಅವನೋ ಮಾತೆತ್ತದೇ ಚಪ್ಪೆ ನಗೆ ಬೀರುವನು.
ಲಿಂಗಪ್ಪಯ್ಯ ಆಗ ಸೀದಾ ಒಳಗೆ ಬಂದು ಪ್ರಫುಲ್ಲಾ ,ನಾಕು ಕಟ್ಟು ಹಪ್ಪಳ,ಬಾಳ್ಕು,ಆ ಏಲಕ್ಕಿ, ಎರಡು ಪಾಡ ಕದಳಿ ಬಾಳೆಹಣ್ಣು,ಒಂದು ಕುಪ್ಪಿ ಜೇನು ರೆಡಿ ಮಾಡಮ್ಮ,ಹನ್ನೊಂದು ಗಂಟೆ ಬಸ್ಸಿಗೆ ನಾವು ಮೈಸೂರಿಗೆ ಚಲೋ.. ಎಂದು ಡೈಲಾಗು ಬಿಡುವುದರಲ್ಲಿ ನೋಡಬೇಕು ಅವರ ಸಂಭ್ರಮ,ಸಡಗರ..ಛೇ..
ಪ್ರಫುಲ್ಲ ಈ ಮುದುಕನ ಹುಚ್ಚು ನೋಡಿ ಒಮ್ಮೆ ದಂಗಾಗುವಳು,ಇನ್ನೊಮ್ಮೆ ಬಚಾವ್ ಇನ್ನು ಹತ್ತು ದಿನ ಈ ಮುದುಕನ ಬಾಧೆ ಇಲ್ಲ ಅಂತ ನೆಮ್ಮದಿ ಪಡುವಳು.
ಆಗಾಗ ಟೂರು ಹೊಡೆಯುವ ಮುದುಕನ ಹಾಂಕಾರಕ್ಕೆ ಅವಳಿಗೆ ಅಸೂಯೆ ಆಗುವುದೂ ಉಂಟು.
ಒಮ್ಮೆ ವಸಂತ ಹೀಗೆ ಹೊರಡುವುದಕ್ಕೆ ರೇಗಿ ಎಂಥಾ ಖರ್ಮಕ್ಕೆ ಈಗ ಮೈಸೂರಿಗೆ ?ಭ್ರಾಂತು ನಿಮಗೆ  ಎಂದಷ್ಟೇ ಹೇಳಿದ್ದು, ಲಿಂಗಪ್ಪಯ್ಯ ಎಷ್ಟೊಂದು ಕೋಪದಲ್ಲಿ ಹಾರಿದರೆಂದರೆ ನಾಲ್ಕು ದಿನ ಊಟವೇ ಮಾಡದೆ ಹುಡಿ ಅವಲಕ್ಕಿ ತಿಂದು ಕೂತಿದ್ದರು.ಆ ನಂತರ ಅವರ ತಂಟೆಗೆ ಮಗನೂ ಬರಲಿಲ್ಲ,ಸೊಸೆಯೂ ಬರಲಿಲ್ಲ.
ಅಂತ ಲಿಂಗಪ್ಪಯ್ಯ ಈಗೀಗ ಮೈಸೂರಿಗೆ ಹೋಗುವ ಉಮೇದು ತಾನಾಗಿಯೇ ಕಡಿಮೆ ಮಾಡಿದ್ದಾರೆ.ಆಗುವುದಿಲ್ಲ ಅಂತ ಅವರಿಗೆ ಗೊತ್ತಾಗಿದೆ.ನೆಲಕ್ಕೆ ಬಗ್ಗಿದ್ದಾರೆ,ಎಲ್ಲಿಗೆ ಹೋಗುವುದು॒
<<<<<<<<<<<<<<<<<<<<<<<<<<<<<<<<<<<<<
ಏನೂ ಲಿಂಗಪ್ಪಯ್ಯನವರು ನೆಲದಲ್ಲಿ ಹುಡುಕುವುದು?..ಎಂದು ಹೇಳಿ ಡೋಂಗಿ ಮಾಡಿದವನು ನಾಚಪ್ಪ.
ಲಿಂಗಪ್ಪಯ್ಯ ಖಡಕ್ ಜನ.ಕಣ್ಣಿಗೆ ಕೈ ಹಾಕಿದ ಹಾಗೇ ಹೇಳುವ ಪೈಕಿ.
'ನಿನ್ನ ತರಡು ನೋಡುವುದು ಎಂದರು.
ನಾಚಪ್ಪ  ಛಿ..ಛಿ ಎಂದು ನಕ್ಕ.
ಲಿಂಗಪ್ಪಯ್ಯ ಅದನ್ನೇ ಕಾಪಿ ಮಾಡಿದರು.
ವ್ಯಗ್ರರಾಗಿದ್ದರು.
'ನಾಚಪ್ಪನ ಸವಾರಿ ಎತ್ಲಾಗಿಂದ.?'
'ಹೀಗೆ ಬಂದದ್ದು..'
'ಅದು ಗೊತ್ತಾಯ್ತು,ಎಲ್ಲಿಂದ ಮೇಳ ಹೊರಟದ್ದೂ ಅಂತ'
ರಾಯಣ್ಣನ ಮನೆಗೆ ಹೋಗಿದ್ದೆ..ಎಂದು ಪುಲಿಸ್ಟಾಪು ಇಟ್ಟ ನಾಚಪ್ಪ.
ಹೋಗು,ಕುಳಿತುಕೋ ಎಂದು ಲಿಂಗಪ್ಪಯ್ಯ ಹೇಳಲಿಲ್ಲ.ಹೇಳುವುದೂ ಇಲ್ಲ ಎಂದು ಅವನಿಗೂ ಗೊತ್ತಿತ್ತು.ಹೇಳಬೇಕಾದ ವ್ಯಕ್ತಿ ಅವನಲ್ಲ ಎಂದು ಲಿಂಗಪ್ಪಯ್ಯನವರಿಗೂ ಗೊತ್ತಿದ್ದುದರಿಂದ,ಬಂದವನಿಗೆ ಬಾಯಾರಿಕೆ ಬೇಕಾ ಅಂತಲೂ ಕೇಳದೇ,
'ನಾಚಪ್ಪನ ಕ್ಯಾಂಪು ಎಷ್ಟು ದಿನವೋಎಂದೇ ಉಪಚರಿಸಿದರು.

ಅಷ್ಟರಲ್ಲಿ ಪ್ರಫುಲ್ಲ ಹೊರಗೆ ಬಂದಳು.ನಾಚಪ್ಪ ಕ್ಕೆಕ್ಕೆಕ್ಕೆ ಎಂದು ನಕ್ಕ.ನೀರು ಬೇಕಿತ್ತು' ಎಂದ.ಹಾಗನ್ನುತ್ತಾ ಚಾವಡಿಯ  ಬಾಗಿಲ ಪಡಿಗೆ ಒರಗಿ ಕಾಲು ಚಾಚಿದ.
ಕೂಸೇ ನೀರಿನ ಜೊತೆಗೆ ಎರಡಚ್ಚು ಉಳ್ಳಾಲದ ಬೆಲ್ಲವೂ ಬರಲಿ ತಪ್ಪದೇ'
ಎಂದು ಕೂಗಿದ.ಹಾಗೇ ಉಳ್ಳಾಲದ ಬೆಲ್ಲಕ್ಕಾಗಿ ರಾವು ಬಿಡುವುದು ಅವನ ಚಾಳಿ.
ಲಿಂಗಪ್ಪಯ್ಯ ಕೈಯಲ್ಲಿ ಒಂದು ಹಣ್ಣಡಿಕೆ ಹಿಡಿದುಕೊಂಡು ಒಳಗೆ ಬಂದರು.
ನಾಚಪ್ಪನಿಗೆ ಬಚ್ಚಿರೆ ತಿನ್ನಬೇಡವಾ' ಎಂದರು.
ತಿನ್ನುವಾ' ಎಂದ ನಾಚಪ್ಪ,ತನ್ನ ಬಗಲಲ್ಲಿದ್ದ ಖಾಕೀ ಚೀಲ ಬಿಡಿಸುತ್ತಾ.
ಘಮ್ಮನೆ ನಾತ ಹೊರಬಿತ್ತು.ಅವನಖಾಕೀ ಚೀಲ ತೊಳೆಯದೇ ಅವನ ಕಾಲವೇ ಆಗಿರಬೇಕು.
'ರಾಯಣ್ಣನ ಮನೆಯಲ್ಲಿ ತಿಥಿ ಇತ್ತು' ಎಂದ,ಹುಳಿಹುಳಿ ನಗೆ ಯನ್ನು ಲಿಂಗಪ್ಪಯ್ಯನವರತ್ತ ಹಾಯಿಸುತ್ತಾ.
ಒಂದು ಮಿನಿಟು ಸುಮ್ಮನಾದರು ಲಿಂಗಪ್ಪಯ್ಯ.
ಆ ವಿಲಕ್ಷಣ ವಾಸನೆಗೆ ನಾಲ್ಕು ಪೊಡಸಲೇ ಎಂದು ಯೋಚಿಸಿದರು.ಯಾಕೋ ಬೇಡ ಎಂಬವರಾಗಿ ಎಂತದ್ದ ನಿನ್ನ  ಗಂಟುಮೂಟೆ ?ಎಂದರು.
'ತಿಥಿ ಶೇಷ' ಎನ್ನುತ್ತಾ ಚೀಲದಿಂದ ನಾಕೈದು ವಡೆ,ಸುಟ್ಟೋವು ಹೊರತೆಗೆದ.
ಈ ಬಾರಿ ಲಿಂಗಪ್ಪಯ್ಯ ಸುಮ್ಮನೇ ಕೂರಲಿಲ್ಲ.
'ಎಂಥಾ ಖರ್ಮಕ್ಕೆ  ತೆಗೆದೆ ಅದನ್ನು ?ರಾಯಣ್ಣನ ಪಿತೃಶೇಷ ತಿಂದು ನಮಗೇನಾಗಲಿಕ್ಕುಂಟು?' ಎಂದು ದೊಡ್ಡ ಸ್ವರದಲ್ಲೇ ಘರ್ಜಿಸಿದರು.
ನಾಚಪ್ಪ ಪೆಚ್ಚಾಗಿ 'ಆಯಿತು,ಆಯಿತು'ಎನ್ನುತ್ತಾ ಅದನ್ನೆಲ್ಲಾ ಚೀಲದೊಳಕ್ಕೆ ತೂರಿದ.
ಲಿಂಗಪ್ಪಯ್ಯ ಡ್ರಾವರಿನಿಂದ ತೋಟ್ರೆ ಪೀಶಕತ್ತಿ ತೆಗೆದು,ನವಿರಾಗಿ ಅದನ್ನು ಬಿಡಿಸಿ,ನಾಚಪ್ಪನಿಂದ ಹತ್ತು ಮಾರು ದೂರದಲ್ಲಿ ಕಾಲು ನೀಡಿ ಕುಳಿತು ಅಡಿಕೆ ಹೆರೆಸಲು ಶುರುಮಾಡಿದರು.
ಈ ಬಾರಿ ಅಕ್ಕಮ್ಮ  ಹೆಂಗ್ಸು ಹೇಗಿದ್ದಾಳೆಂದು ವಿಚಾರಿಸಬಾರದೇ ಬಾರದು ಎಂದು ನಿರ್ಧರಿಸಿದ್ದರು.
ನಾಚಪ್ಪ ಪ್ರಫುಲ್ಲ ತಂದಿಟ್ಟ ಎರಡಚ್ಚು ಉಳ್ಳಾಲ ಬೆಲ್ಲವನ್ನು ಗಟ್ಟಿಗೆ ಗಮಾಯಿಸಿದ.ಅರ್ಧ ತಪಲೆ ನೀರನ್ನೂ ಕುಡಿದ.ಆಮೇಲೆ ಗಂಟಲು ಕೆರೆಸಿಕೊಳ್ಳುತ್ತಾ  ಚಾವಡಿಯಲ್ಲಿ ತೆವಳುತ್ತಲೇ ಲಿಂಗಪ್ಪಯ್ಯನವರ ಬಳಿ ಬಂದ.
ತಿಥಿ  ಊಟ ಮಾಡಿದರೆ ಎಂಥಾ ಆಸರಿಕೆ' ಎಂದು ಲಿಂಗಪ್ಪಯ್ಯನವರಿಗೆ ಕೇಳುವಂತೆಯೂ, ತನ್ನಷ್ಟಕ್ಕೂ  ಹೇಳಿಕೊಂಡ.ಲಿಂಗಪ್ಪಯ್ಯ ಮಾತನಾಡಲಿಲ್ಲ.
ಆಮೇಲೆ ಅತ್ತಿತ್ತ ನೋಡಿ ,ಲಿಂಗಪ್ಪಯ್ಯನವರು ಎಲೆ ಅಡಿಕೆ ಸಾಹಿತ್ಯವನ್ನು ತಯಾರು ಮಾಡುವಲ್ಲಿಗೆ ಕೈ ಹಾಕಿದ.
ತಟ್ಟೆಯಿಂದ ಮೊದಲು ಎರಡುದ್ದ ಗೇಣಿನ ಹೊಗೆಸೊಪ್ಪಿನೆಸಳೆನ್ನೆತ್ತಿ ,ಮೂಸಿ,ಕುಣಿಯವಾ?' ಎಂದ.
ಲಿಂಗಪ್ಪಯ್ಯ ಅದೇನೋ ಲೋಕದಲ್ಲಿದ್ದರು. ಹೂಂ  ಎಂದರು.ನಾಚಪ್ಪ ಗಹಗಹಿಸಿ ನಕ್ಕು ಯೇ ಇದು ಕುಣಿಯ ಅಲ್ಲ,ಬೆಜವಾಡ' ಎಂದದ್ದು ಅವರನ್ನು ರೇಗಿಸಲಿಲ್ಲ.ಸಣ್ಣ ಸ್ವರದಲ್ಲಿ ಯಾವುದೊ ಒಂದು' ಎಂದರು.
ಎರಡು ಎಲೆ ತೆಗೆದು,ತುದಿ ಚಿವುಟಿ,ಕೆನ್ನೆಗ ಅಂಟಿಸಿಕೊಂಡ ಬಳಿಕ ನಾಚಪ್ಪ ಎಲೆಗಳನ್ನು ಮುಂಗೈನಲ್ಲಿ ಹಾಕಿ ಉಜ್ಜಿದ.ಎಲೆ ಉಜ್ಜುತ್ತಾ,ಸಣ್ಣ ಸ್ವರದಲ್ಲಿ, ಅಕ್ಕಮ್ಮ ಸತ್ತದ್ದು ಗೊತ್ತಾಗಿದಾ?'ಎಂದ.ಅದೂ ಕೂಡಾ ಅವರಿಗೆ ಮಾತ್ರ ಕೇಳಬೇಕು ಎಂಬಂತೆ.
ಅವನ ಪಿಸುಮಾತಿನಲ್ಲೇ ಈ ಸಮಾಚಾರ ತೀರಾ ಖಾಸಗಿ,ನಮ್ಮಿಬ್ಬರಿಗೆ ಮಾತ್ರಾ ಸಂಬಂಧಿಸಿದ್ದು ಎಂಬ ಧಾಟಿಯಾಗಿತ್ತು.
ಅಡಿಕೆ ಹೋಳನ್ನು ಎತ್ತಿ ಎತ್ತಿ ಬಾಯಿಗೆ ಹಾಕಿಕೊಳ್ಳುತಿದ್ದ  ಲಿಂಗಪ್ಪಯ್ಯ ಇದಕ್ಕೆ ಏನೆನ್ನಬೇಕೆಂದು ತಿಳಿಯದೇ ಒದ್ದಾಡಿ,ಹೌದಾ' ಎಂದರು.
ಅವಳು ಹೋದಳು,ಕೇನ್ಸರು ಆಗಿತ್ತಂತೆ.ಎಂದ ನಾಚಪ್ಪ ಯಾವುದೋ ಸೇಡು ತೀರಿಸಿದ ಸಂತೃಪ್ತಿಯಂತೆ.
ಲಿಂಗಪ್ಪಯ್ಯ ಕನಲಿದರು ಅಂತ ಪ್ರತ್ಯೇಕ ಹೇಳಬೇಕಾಗಿಲ್ಲ.ಅವರು ಕುದಿದರು,ನರಳಿದರು.ಮಾತು ಹೊರಳಿ ಇನ್ನೊಂದು ದಾರಿ ಹಿಡಿಯಬಾರದಾ ಎಂದು ವಿಹ್ವಲಿಸಿದರು.ನಾಚಪ್ಪ ತುಂಬಾ ಸಂತೋಷದಲ್ಲಿ ಎಂಬಂತೆ ಅಕ್ಕಮ್ಮ ಸತ್ತ ಕತೆಯನ್ನು ಸವಿಸ್ತಾರವಾಗಿ ಹೇಳುತ್ತಿದ್ದ.
ಎಲ್ಲೋ ಒಂದು ಕಡೆ ಲಿಂಗಪ್ಪಯ್ಯ ಆರ್ದ್ರವಾದರು.
<<<<<<<<<<<<<<<<<<<<<<<<<<<<<<<
ನಾಚಪ್ಪ ಇಂಥದ್ದೇ ಒಂದು ಸಂಜೆ ಬಂದಿದ್ದ.ಅವನು ಮೊದಲ ಬಾರಿಗೆ ಬಂದದ್ದು.ಗುರ್ತಾರ್ತವಿಲ್ಲ.ಈಗಿನಂತೆ ಹಲ್ಕಟ್ ಥರ ಇರಲಿಲ್ಲ.ನೀಟಾಗಿದ್ದ.
ಎತ್ತರಕ್ಕಿದ್ದ.ಬಗಲಿಗೆ ಖಾಕಿ ಚೀಲ ಮಾತ್ರಾ ಇತ್ತು,ಅವನ ಟ್ರೇಡು ಮಾರ್ಕುಅದು.
ಮರದ ಕಾಲಿನ ಉದ್ದ ಕೊಡೆ.ಅದನ್ನು ಗಿಳಿಬಾಗಿಲಿಗೆ ಸಿಕ್ಕಿಸಿ,ಚರ್ಮದ ಜೋಡನ್ನು ಎತ್ತಿ  ಚಿಟ್ಟೆಗೆ ಒರಗಿಸಿ ಇಟ್ಟು,ಸೊಂಟಕ್ಕೆ ಕೈ ಇಟ್ಟು ಉಶ್ ಎಂದು ನಿಂತದ್ದು ನೋಡಿದಾಗ ದಂಗಾದ್ದು,ಲಿಂಗಪ್ಪಯ್ಯನವರೇ.
ಬೆಂಡೆ ಸಾಲು ತೆಗೆಯುತಿದ್ದವರು ಕೊಟ್ಟನ್ನು ಅಲ್ಲೇ ಬಿಟ್ಟು  ಬಂದು ಏನೂ.. ನಮಸ್ಕಾರಾ..ಎನ್ನುತ್ತಿದ್ದಂತೆ,ಹೊಸ ಹೊಸ ಮದಿಮಾಳು ಅವರ ಮಡದಿ,ಗಂಗಾಳ ಚೆಂಬಿನಲ್ಲಿ ನೀರು ತಂದು ಬಾಗಿಲ ಬಳಿ ಇಟ್ಟು, ಕೈ ಕಾಲು ತೊಳೆದುಕೊಳ್ಳಿಎಂದು ಉಪಚರಿಸಿದಳು, ಬಂದವನು ಜಿಲ್ಲಾ ಕಲೆಕ್ಟ್ರನೇ ಇರಬೇಕೆಂಬ ಚರ್ಯೆಯಲ್ಲಿ.
ಮಡಲಿನ ಕಟ್ಟು  ಮತ್ತೆರಡು ಸೌದೆ ತುಂಡು ಹಿಡಕೊಂಡು ಅಡುಗೆ ಕೋಣೆಗೆ ಲಗುಬಗೆಯಿಂದ ಧಾವಿಸುತ್ತಿದ್ದ ಆಕೆ  ಯಾರು ನಿಮ್ಮ ಪೈಕಿಯಾ? ಎಂದರೆ ನಾನು ನಿನ್ನ ಪೈಕಿ ಎಂದು ಕೇಳಲೆಂದು ಒಳಗೆ ಬಂದೆ ಎಂದರು ಲಿಂಗಪ್ಪಯ್ಯ.
ಹೊರಗೆ ಬಂದರೆ ಅಸಾಮಿ ಬೀಟೆ ಮರದ ಬೆಂಚಿನ ಮೇಲೆ ಕಾಲ ಮೇಲೆ ಕಾಲು ಹಾಕಿ ಕುಳಿತು ,ಉಳ್ಳಾಲದ ಬೆಲ್ಲದ ಅಚ್ಚನ್ನು ಇಡೀ ಬಾಯಿಗೆ ಎಸೆದು,ಬುರೂ ಎಂದು ನೀರು ಉರ್ಪಿ ನನ್ನ ಗುರುತು ಇಲ್ಲಾ ಅಂತ ಕಾಣ್ತದೆ ಎಂದಿತು.
ಲಿಂಗಪ್ಪಯ್ಯ ತುಸು ಅನುಮಾನದಿಂದಲೂ,ಪ್ರೀತಿಯಿಮದಲೂ, 'ಎಲ್ಲೋ ನೋಡಿದ  ಹಾಗೇ ಉಂಟು' ಎಂದರೆ,
ಎಲ್ಲಿ ನೋಡ್ತೀರಿ? ಎಲ್ಲಿ ನೋಡಿರಲಿಕ್ಕೂ ಸಾಧ್ಯವಿಲ್ಲ,ನಾನು ಘಟ್ಟದ ಮೇಲಿನವನು,ಇತ್ಲಾಗಿ ಬಂದು ಒಂದು ತಿಂಗಳೂ ಆಗಿಲ್ಲ. ಎಂದವನು ತಾನೊಬ್ಬ ಘಟ್ಟಿಗ ಗಮಕಿಯೆಂದೂ,ಹರಿಕತೆ ಕೂಡಾ ಮಾಡುತ್ತೇನೆಂದೂ,ದೊಡ್ಡವರ ಜಂಬರಗಳಲ್ಲಿ ಖಾಯಂ ಕಾರ್ಯಕ್ರಮ ನೀಡುತ್ತಿರುವುದಾಗಿಯೂ,ಈಗ ಘಟ್ಟ ಇಳಿದು ವಲಸೆ ಬಂದಿದ್ದು ಇನ್ನು ಮುಂದೆ ಈ ಊರುಗಳಲ್ಲಿ ಖಾಯಂ ವಾಸಿಸುವುದಾಗಿಯೂ ಹೇಳಿದ.
ಹೆಸರೂ?' ಎಂದರು ಲಿಂಗಪ್ಪಯ್ಯ.
ನಾರಾಯಣ ಶಾಸ್ತ್ರಿ ಅಂತ..ನಾಚಪ್ಪ ಅಂತಲೂ ಹೇಳಬಹುದು..
ಏಕೋ ಸ್ವಲ್ಪ ಗತ್ತು ಹೆಚ್ಚಾಯಿತು ಅಂತ ಲಿಂಗಪ್ಪಯ್ಯನವರ ಹೆಂಡತಿಗೆ ಅನಿಸಿತು.
'ಓದಿದ್ದೆಲ್ಲಾ ಘಟ್ಟದಲ್ಲೇ' ಎಂದ ನಾಚಪ್ಪ,ಇವರು ಕೇಳುವ ಮೊದಲೇ.
ಅದೆನೋ ಹೆಸರು ಘಟ್ಟದಲ್ಲಿ ತನ್ನೂರು ಎಂದಿದ್ದ ಆತ,ಲಿಂಗಪ್ಪಯ್ಯನವರಿಗೆ ಅದು ನೆನಪಿಲ್ಲ.
ಒಳಗಿಂದ ಹೆಂಡತಿ 'ಓಯ್' ಎಂದಳು.ಇವರು ಹೋದರೆ ಪಾಯಸ ಮಾಡಬೇಕಾ?ಎಂದು ಕೇಳಿದಳು. ಊಹೂಂ..ಬೇಕೂಂತ ಇಲ್ಲಾ ಎಂದರು ಲಿಂಗಪ್ಪಯ್ಯ.ಆದರೆ ಅವಳು ಆ ರಾತ್ರಿ ಅಕ್ಕಿ ಪಾಯಸ ಮಾಡಿದಳು,ಕೈ ತೊಳೆಯುವಾಗ ಕೇಳಿದ್ದಕ್ಕೆ, ಎಷ್ಟಾದರೂ ಬ್ರಾಹ್ಮಣನಲ್ಲವಾ? ಎಂದಳು


ಏನು ಯೋಚನೆ ಮಾಡುತ್ತ ಇದ್ದೀರಿ? ಎಂದ ನಾಚಪ್ಪ.
ಹೌದಾ ನಾಚಪ್ಪಾ.ಈಗ ಸದ್ಯ ಎಲ್ಲಾದರೂ ಪ್ರೋಗ್ರಾಂಕೊಟ್ಟ್ಟದ್ದುಂಟೋ? ಎಂದರು ಲಿಂಗಪ್ಪಯ್ಯ
ಉಂಟಲ್ಲಾ..ಸೀತಾರಾಮನ ಮಗಳ ಮದುವೆಯಲ್ಲಿ ರಾತ್ರಿ ಚತುರ್ಥಿಗೆ ಪುರಾಣವಚನ ಮಾಡಿದ್ದೆ ಎಂದ ನಾಚಪ್ಪ.
ಹೌದೌದು,ಕೇಳಲಿಕ್ಕೆ ಎಷ್ಟು ಜನ ಇದ್ದರಂತೆ?
 ಹಂಗಿಸಿದರು ಲಿಂಗಪ್ಪಯ್ಯ.
ಯಾಕೆ ಇರುವುದಿಲ್ಲಚ॒ತುರ್ಥಿಗೆ ಬಂದವರೆಲ್ಲಾ ಇದ್ದರು.
ಹೌದು ಇದ್ದರು,ಎಲ್ಲಿ ಕೌಚಿ ಮಲಗಿದ್ದರೋ ಏನೋ? ನಿನ್ನ ಈ ಪೊಟ್ಟು ಕತೆ ಕೇಳ್ತಾರೆಲಾ॒ಟು ಬಿಡುವುದಕ್ಕೂ ಮಿತಿ ಬೇಕು..ಎಂದರು.
ನಾಚಪ್ಪ ಒಂದು ಮುಷ್ಟಿ ಗಂಜಿಗೆ ಬಂದು ನಿಂತವನು  ವಾದಮಾಡಲಿಲ್ಲ , ಆಯಿತು ಹಾಗಾದರೆ..ಎಂದ.
ಈ ತಿರುಗಾಡಿ ಪರ್ದೆಸಿ ಜೊತೆ ಎಂಥಾ ಕರ್ಮಕ್ಕೆ ಜಗಳ ಎಂದು ಲಿಂಗಪ್ಪಯ್ಯನವರಿಗೆ ಕಂಡುಹೋಯಿತು, ಆಯಿತು ಮಾರಾಯ..ಈಗ ಒಂದು ಗಾಯನ ಮಾಡು ನೋಡುವಾ..ಎಂದು ಗಾಳಿ ಹಾಕಿದರು॒
ಅದು ಟಾಂಟೂ ಅಂತ ಅವನಿಗೆ ಗೊತ್ತು, ಶುರು ಮಾಡಿದ॒
ಊರ್ವಶಿಯ ಪದ !!
ಬಂದಳೂವರ್ಶಿ..ಬಳ್ಳಿ ಮಿಂಚಿನ ಮ॒ಂದಿಯಲಿ ಮರಿ ಮುಗಿಲಿಳಿವಂದದಲಿ॒
ಆ ಪ್ರಾಯದಲ್ಲೂ ಮೈ ಝುಂ ಎಂದಿತು ಲಿಂಗಪ್ಪಯ್ಯನವರಿಗೆ.

ನಾಚಪ್ಪ..!
ಹಬ್ಬಾ ! ಅಂದು ಹೀಗೇ ಬಂದಿದ್ದ.ಇದೇ ರೀತಿ ಚಾವಡಿಯಲ್ಲಿ ಕುಣಿಯಾ ಹೊಗೆಸೊಪ್ಪಿನ ಎಸಳು ಮೂಸಿದ್ದ.ಆಗಲೇ ಅವನು ಹೇಳಿದ್ದು,ಅವಳ ಕುರಿತು,ಗುಟ್ಟಾಗಿ..
ಏಕೆ ಅಂದು ರಾತ್ರಿ ನಾನು ನಿದ್ದೆ ಸೋಕದ ಕಣ್ಣಿನಲ್ಲಿ ಆಕಾಶವನ್ನು ಗಿಳಿ ಬಾಗಿಲಿನಲ್ಲಿ ನೋಡಿದೆನೋ?ಆ ಕತ್ತಲಿನ ಬಾನಿನಿಂದ ಅಂತೊಬ್ಬಳು ಊರ್ವಶಿ ಇಳಿದು ಬರುತ್ತಾಳೆಂದು ಕಾದೇನೋ..
ಬಡ್ಡೀಮಗ.ದೇಹದ ನಿಟಿಕೆ ಮುರಿಯಲು ಏನು ಅಗತ್ಯವಿತ್ತು ಆಗ?ಏನದೆ ಅದರಲ್ಲಿ?ಅದೇ ದೇಹ, ಅದೇ ಬೆವರು,ಅದೇ ಘಾಟು,ಅದೇ ನರಳಾಟ..
ಹೀಗೆಲ್ಲಾ ಅನಿಸೋದು ಈಗ ಈ ವಯಸ್ಸಲ್ಲಿ..ಆಗ ಅದೇಕೆ ಬೇರೆಯೇ ಬೇಕೆಂದು ಅನಿಸಿತೋ?
ನಿದ್ದೆ ಹತ್ತಲಿಲ್ಲವಾ/ಎಂದು ಕೇಳಿದ್ದ ನಾಚಪ್ಪ .ಅದೆಷ್ಟು ವರ್ಷಗಳಾದವೋ?..

ಈಗ ಈ ನಾಚಪ್ಪ ರಾಯಣ್ಣನ ತಿಥಿಶೇಷ ಹೊತ್ತು ತಂದ ಆ ಕಮಟು ವಾಸನೆಯ ಚೀಲವನ್ನು ಕಂಡಾಗ ಲಿಂಗಪ್ಪಯ್ಯನವರಿಗೆ ಎಲ್ಲಾ ನೆನಪಾಗುತ್ತದೆ.ಆ ರಾತ್ರಿ ಕಾರ್ತಿಕ ಹುಣ್ಣಿಮೆಯ ಹಿಂದಿನ ದಿನ ಅಕ್ಕಮ್ಮ ಹೆಂಗ್ಸುವಿನ ಜೊತೆ ಇಡೀ ಮೈ ಮರ್ದನ ಮಾಡಿಸಿ ಹೊರಟಾಗ ನಾಚಪ್ಪನ ನೆನಪೇ ಆಗಿರಲಿಲ್ಲ.ಈಗ ಅವರಿಗೆ ಅದೆಲ್ಲಾ ಎಂದೋ ಗೊತ್ತಾಗಿದೆ,ಆ ಅಕ್ಕಮ್ಮ ಹೆಂಗ್ಸು ಈ ನಾಚಪ್ಪನ ಹೆಂಡತಿಯೇ ಎಂ
ಬುದು, ಆದರೆ ಅವರಿಗೆ ಇನ್ನೂ ಗೊತ್ತಾಗಲಿಲ್ಲ ಈ ನಾಚಪ್ಪ ಆ ಅಕ್ಕಮ್ಮನ ಬಳಿಗೆ ತನ್ನನ್ನು ಅದೇಕೆ ಬಿಟ್ಟುಬಂದನೆಂಬುದು .
ಇದನೆಲ್ಲಾ ಗೊತ್ತು ಮಾಡಿಕೊಂಡು ಅವರಿಗೆ ಈ ಕಾಲದಲ್ಲಿ ಇನ್ನೇನಾಗಬೇಕಿದೆ?ಮೈ ಕೈ ಎಲ್ಲಾ ಸೋತು ಹೋಗಿ ,ಮಂಕು ಮಂಕು ಅನಿಸುವ ಹೊತ್ತಿಗೆ ಬೇಕಾ?
ಕ್ಷೌರದಂಗಡಿಯಲ್ಲಿ ಕುಳಿತಿದ್ದಾಗ ,ಸೀತಾರಾಮ ರಾಯಣ್ಣನಿಗೂ ನಾಚಪ್ಪನ ಹೆಂಡತಿಗೂ ದೋಸ್ತಿ ಇದೆ ಎಂದು ಹೇಳಿದಾಗ ,ಲಿಂಗಪ್ಪಯ್ಯನವರಿಗೆ ದುಃಖವಾಗಲಿ, ಭಯವಾಗಲಿ ಆಗಲೇ ಇಲ್ಲ.ಅ ವೇಳೆಗೆ ಅವರು ಅಕ್ಕಮ್ಮನ್ನನ್ನು ಏನು,ಸ್ವತಃ ಹೆಂಡತಿಯನ್ನೇ ಮರೆತು ಅದೆಷ್ಟು ವರ್ಷಗಳಾಗಿದ್ದವೋ ಏನೋ.ನಾಚಪ್ಪನ ಬಗೆಗೆ ಲಿಂಗಪ್ಪಯ್ಯನವರಿಗೆ ಭಾವನೆಗಳೇ ಮುರಿದುಹೋಗಿವೆ.ಅದೆಷ್ಟೂ ಬಾರಿ ಅವನು ಬಂದಾಗಲೆಲ್ಲ ಕೋಪಿಸಿಕೊಳ್ಳಬೇಕೆಂದು ನೋಡಿದ್ದಾರೆ,ಸಾಧ್ಯವಾಗಿಲ್ಲ.
<<<<<<<<<<<<<<<<<<<<<<<<<<<<<<<<<<<<<<<<<<<

ಇದೆಲ್ಲಾ  ಈಗ ನೋಡಿದರೆ ಎಷ್ಟು ವರ್ಷಗಳ ಹಿಂದಿನ ಕತೆಯೋ ಏನೋ.ಈಗ ಲಿಂಗಪ್ಪಯ್ಯ ಮುದುಕ ಮುದುಕ ಆಗಿದ್ದಾರೆ.ಅವರ ಹೆಂಡತಿ ಒಂದು ಮಾತೂ ಆಡದೆ ಹೊರಟು ಹೋದಾಗ ವಸಂತನಿಗೆ ಎಷ್ಟು ಸುಮಾರು ಹತ್ತು ವರ್ಷ ಆಗಿರಬಹುದು.ಅದೆಲ್ಲಾ ಈಗ ಅವರಿಗೆ ನೆನಪು ಮಾಡಿದರೆ ನೆನಪಾಗುತ್ತದೆ ಅಷ್ಟೆ.ಆದರೆ ಅಕ್ಕಮ್ಮ ಸತ್ತಿದ್ದಾಳೆ ಎಂದು ಈ ನಾಚಪ್ಪ ಇಂದು ಇಲ್ಲಿ ಬಂದು ಆ ರಾಯಣ್ಣನ ತಿಥಿಶೇಷ ಹೊರತೆಗೆದು ಹೇಳಿದಾಗ ಮಾತ್ರಾ ಅವರಿಗೆ ಭಯಂಕರ ನೋವು ಶುರುವಾಗಿದೆ .
ಬೇಡಾಗಿತ್ತು ಈ ಪ್ರಾಯದಲ್ಲಿ ಈಗ ಇದು ನೆನಪಾಗೋದು ಎಂದು ಅವರಿಗೆ ಆ ರಾತ್ರಿ ತುಂಬಾಸಲ ಅನಿಸಿತ್ತು. ಮಾತಾಡದೇ  ಮುಚ್ಚಿ ಮಲಗಿದರೆ ಅಕ್ಕಮ್ಮ ಹೆಂಗಸು ಯಾರು ನಾಚಪ್ಪ ಯಾರು ಎಂದೇ ಅರ್ಥವಾಗುತ್ತಿಲ್ಲ. ಇನ್ನಷ್ಟು ಕಣ್ಣು ಮುಚ್ಚಿದರು. ಯಾಕೋ ಪಕ್ಕದಲ್ಲಿ ಸುಳಿದಂತಾಗಿ ಕಣ್ಣು ತೆರೆದರೆ ನಾಚಪ್ಪ.
ಏನು ನಿದ್ದೆ ಬರುತ್ತಿಲ್ಲವಾ?
ಲಿಂಗಪ್ಪಯ್ಯ ನಕ್ಕರು.
ಊರ್ವಶಿಯಂಥವಳು ಇದ್ದರೆ ಹೇಳುಎಂದರು.
ನಾಚಪ್ಪನು ನಕ್ಕ.ಸಣ್ಣಗೇ,ಮತ್ತೆ ಜೋರಾಗಿ.ಅವನು ಹೆಗಲಿಗೆ ಅವನ ಕಮಟು ವಾಸನೆಯ ಚೀಲ ಸಿಕ್ಕಿಸಿ ಎದ್ದು ನಿಂತ.ಲಿಂಗಪ್ಪಯ್ಯನವರೂ ಎದ್ದು ನಿಂತರು.ಅದೆಷ್ಟು ಬೀಸ ಬೀಸ !ಆ ಅಪರ ರಾತ್ರಿಯಲ್ಲಿ.
ಎಲ್ಲಿಗೆ ಎಂದು ಕೇಳಲು ಅಲ್ಲಿ ಯಾರೂ ಎಚ್ಚರ ಇರುತ್ತಾರೆ ?
ಮರುದಿನ ಬೆಳಗ್ಗೆ ಪ್ರಫುಲ್ಲ ಸ್ವಲ್ಪ ಬೇಗವೇ ಎದ್ದು  ಹೊರಗೆ ಬಂದು ನೋಡುತ್ತಾಳೆ,ತುಳಸಿ ಕಟ್ಟೆಯ ಬಳಿ ನಾಚಪ್ಪನ ಶವ !ಅವಳ  ಮೂಪರು ಎಂದರೆ ಲಿಂಗಪ್ಪಯ್ಯ ಮಾತ್ರಾ ಕಾಣೆಯಾಗಿದ್ದರು. ನಾಚಪ್ಪನ ಹಿಂದೆ ಅವರು ಹೊರಟಿದ್ದರು ಎಂಬುದು ಅಲ್ಲಿ ಯಾರಿಗೆ ಗೊತ್ತಿರುತ್ತದೆ?ಲಿಂಗಪ್ಪಯ್ಯನವರು ಹಾಗೇ ಕಾಣೆಯಾಗಿದ್ದು ಮಾತ್ರಾ ನಿಜ,ಜೊತೆಯಲ್ಲಿ ಅವರ ಏಕ ಮಾತ್ರಾ ಪುತ್ರಿ ವಿನೀತಳ ಜನ್ಮ ರಹಸ್ಯ ಕೂಡಾ.