20160628

ನೋ ಮಾನ್ಸ್ ಲ್ಯಾಂಡ್


ಮೂವತ್ತು ವರ್ಷಗಳ ಬಳಿಕ ಕೆ.ಪುರುಷ ಹೊರಟು ನಿಂತಿದ್ದರು.ಅವರು ಹೋಗಬೇಕಾಗಿದ್ದುದು ಅರಬ್ಬಿ ಸಮುದ್ರದಲ್ಲಿ ಮಂಗಳೂರಿನಿಂದ ಸರೀ ಸುಮಾರು ಹದಿನಾರು ಮೈಲು ದೂರದಲ್ಲಿರುವ ದ್ವೀಪಕ್ಕೆ.
ಆ ದ್ವೀಪ ಅವರೇ ಪತ್ತೆ ಮಾಡಿದ್ದು.
ಸುಮಾರು ಮೂವತ್ತು ವರ್ಷಗಳ ಹಿಂದೆ ಅವರು ತನ್ನ ವಿದ್ಯಾರ್ಥಿಗಳನ್ನು ಕಡಲುಜೀವಿಗಳ ಅಧ್ಯಯನಕ್ಕೋಸ್ಕರ ಕರೆದುಕೊಂಡು ಹೋಗುತ್ತಿದ್ದಾಗ ಆ ದ್ವೀಪವನ್ನು ನೋಡಿದ್ದರು.ತಾವು ಪಯಣಿಸುತ್ತಿದ್ದ ಹಾಯಿ ದೋಣಿಯನ್ನು ಆ ದ್ವೀಪದ ಕಡೆ ಸಾಗುವಂತೆ ಸೂಚಿಸಿ,ಅಲ್ಲಿ ಇಳಿದಿದ್ದರು.
ಮೊದಲಾಗಿ ಇಳಿದವರೇ ಕೆ.ಪುರುಷರು.
ಹಾಗಾಗಿ ಅವರ ವಿದ್ಯಾರ್ಥಿಗಳೆಲ್ಲಾ ಆ ದ್ವೀಪಕ್ಕೆ ಪುರುಷಾಸ್ ಐಲ್ಯಾಂಡ್ ಅಂತ ನಾಮಕರಣ ಮಾಡಿ, ಹುರ್ರೇ ಎಂದಿದ್ದರು.
ಕೆ.ಪುರುಷರು ಯಾವಾಗ ದೀಪದ ಮೇಲೆ ಕಾಲಿಟ್ಟಿದ್ದರೋ ಅವರಿಗೆ ತನ್ನೊಳಗೆ ಒಂದು ಶಕ್ತಿಯ ಸಂಚಲನವಾಗುತ್ತಿದೆ ಎಂಬುದರ ಅರಿವಾಗತೊಡಗಿತ್ತು.ಏನಿದೇನಿದು ಎಂದು ಅವರು ತನ್ನೊಳಗೆ ಧೇನಿಸತೊಡಗಿದ್ದರು.
ಅವರ ವಿದ್ಯಾರ್ಥಿಗಳೆಲ್ಲಾ ಆ ದ್ವೀಪದ ಬೀಚ್ ಮೇಲೆ ಹೊರಳಾಡುತ್ತಿದ್ದರೆ ಕೆ.ಪುರುಷರು ಮಾತ್ರಾ ಸೀದಾ ಸೀದಾ ದ್ವೀಪದ ಒಳಗೇ ನುಗಿದ್ದರು.ಒಂಟಿಯಾಗಿ ನೂರು ಹೆಜ್ಜೆ ಹಾಕಿದರು.ಇದು ದೊಡ್ಡ ದ್ವೀಪವಲ್ಲ,ತುಂಬಾ ಸಣ್ಣದು ಎನಿಸಿತು.ಹಾಗಂತ ಇದು ಬರೀ ನಡುಗಡ್ಡೆ ಎಂದೂ ಹೇಳಲಾಗದು ಎಂಬ ಹಾಗಿದೆ ಎಂದುಕೊಂಡರು.
ದ್ವೀಪದಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಸುತ್ತಾಡಿದರು.ಈ ಹಿಂದೆ ಇಲ್ಲೊಮ್ಮೆ ಕೇವಲ ಒಂದೇ ಒಂದು ಸಾರೆಯಾದರೂ ಮನುಷ್ಯ ಬಂದು ಸುತ್ತಾಡಿದ ಬಗ್ಗೆ ಯಾವ ಕುರುಹೂ ಅವರಿಗೆ ಸಿಗಲಿಲ್ಲ.ಮನುಷ್ಯ ವಸತಿ ಈ ದ್ವೀಪದಲ್ಲಿ ಇರಲೇ ಇಲ್ಲ ಎಂದು ಖಚಿತವಾಗುತ್ತಿದ್ದಂತೆ ಸುತ್ತಲೂ ಇನ್ಯಾವುದಾದರೂ ಪ್ರಾಣಿಜೀವಿಗಳಾದರೂ ಇರಬಹುದೇ ಎಂದು ಹುಡುಕಿದರು.ಅಂಥ ಸುಳಿವೂ ಅವರಿಗೆ ಸಿಗಲಿಲ್ಲ.
ಕೆ.ಪುರುಷರು ತನ್ನ ಕಣ್ಣಾಂದಿಜಿಗೆ ಆ ದ್ವೀಪದ ಅಳತೆ ಮಾಡಿದರು.ಏನಿಲ್ಲಾ ಎಂದರೂ ಒಂದೂವರೆ ಮೈಲಿ ಉದ್ದವೂ ಮುಕ್ಕಾಲಿಗಿಂತ ಸ್ವಲ್ಪ ಹೆಚ್ಚು ಅಗಲವೂ ಇರಬಹುದು ಎಂಬುದು ಅವರ ಭೂಮಾಪನ ಮನಸ್ಸಿಗೆ ಹೊಳೆಯಿತು.ಈ ತನಕ ಯಾರೂ ಈ ದ್ವೀಪವನ್ನು ನೋಡದೇ ಇರಬುದೇನೋ ಎಂದುಕೊಂಡರು.ತನ್ನ ವಿದ್ಯಾರ್ಥಿಗಳು ದ್ವೀಪದ ಮೇಲೆ ಇಳಿಯುತ್ತಿದ್ದಂತೆ ಕಿಚಾಯಿಸಿದ್ದು ನೆನೆಸಿ ನಗುಬಂತು ಅವರಿಗೆ.ಅವರೆಲ್ಲಾ ಘೋಷಿಸಿದಂತೆ ಈ ದ್ವೀಪವನ್ನು ಪತ್ತೆ ಮಾಡಿದ ಕೀರ್ತಿ ತನ್ನದೇ ಆಗುತ್ತಿದೆಯೇನೋ ಎಂದು ಮನಸ್ಸಲ್ಲೇ ಮತ್ತೊಮ್ಮೆ ನಕ್ಕರು.
ಕೆ.ಪುರುಷರು ಸುತ್ತಾಟ ಮುಗಿಸಿ ವಿದ್ಯಾರ್ಥಿಗಳ ಬಳಿ ಬರುತ್ತಿದ್ದಂತೆ ಈ ದ್ವೀಪ ತನ್ನ ಮುಂದಿನ ಜೀವನಕಥೆ ಬರೆಯಲಿದೆ ಎಂದುಕೊಂಡರು.
ವಿದ್ಯಾರ್ಥಿಗಳೆಲ್ಲಾ ದ್ವೀಪದೊಳಗೆ ಹೋಗಿಬಂದ ಕೆ.ಪುರುಷರಲ್ಲಿ ಏನೆಲ್ಲಾ ನೋಡಿದಿರಿ ಸಾರ್ ಎಂದು ಬಗೆಬಗೆಯಾಗಿ ಕಿಚಾಯಿಸಿದರು.ಕೆ.ಪುರುಷರು ನಕ್ಕು ಸುಮ್ಮನಾದರು.ವಿದ್ಯಾರ್ಥಿಗಳ ತಂಡದಲ್ಲಿದ್ದ ಸುಧಾಮ ಮಾತ್ರಾ ಕೆ.ಪುರುಷರನ್ನು ಆಳೆತ್ತರಕ್ಕೆ ಮತ್ತೊಮ್ಮೆ ಕಣ್ಣಲ್ಲೇ ನೋಡಿ ದೊಡ್ಡ ಸ್ವರದಲ್ಲಿ , ಏಯ್ ಎಲ್ಲಾ ನೋಡ್ರೋ,ಕೆ.ಪುರುಷ ಸಾರ್ ಅವರ ಹಣೆಯಲ್ಲಿ ಮೀನಿನ ಹಚ್ಚೆ ಇದೆ ಎಂದು ಹೇಳಿದ.
ವಿದ್ಯಾರ್ಥಿಗಳೆಲ್ಲಾ ಅವಾಕ್ಕಾದರು.ಪುರುಷರು ತನ್ನ ಹಣೆಯನ್ನು ಕೈಯಲ್ಲಿ ಒರೆಸಿಕೊಂಡರು.
ಹೌದೂ ಸಾರ್ ನಿಮ್ಮ ಹಣೆಯಲ್ಲಿ ಮೀನಿನ ಹಚ್ಚೆ ಇದೆ ಎಂದು ಅವರ ಪ್ರೀತಿಯ ವಿದ್ಯಾರ್ಥಿನಿ ಸುಧಾ ಹೇಳಿದಳು.
ಕೆ.ಪುರುಷರ ಮುಖಕ್ಕೆ ಅವಳೇ ತನ್ನ ಜಂಭದ ಚೀಲದಲ್ಲಿದ್ದ ಕನ್ನಡಿ ತೆಗೆದು ಹಿಡಿದಳು.
ಕೆ.ಪುರುಷರು ಕನ್ನಡಿಗೆ ಮುಖ ನೀಡಿದರು.ನೇರಳೆ ಬಣ್ಣದ ಮೀನಿನ ಚಿತ್ರವೊಂದು ಅವರಿಗೆ ಕಂಡಿತು.
ಆಮೇಲೆ ಏನಾಯಿತೋ ಅವರಿಗೇ ಗೊತ್ತಾಗಲಿಲ್ಲ.ಎಚ್ಚರವಾದಾಗ ಹಾಯಿ ದೋಣಿ ಅರಬ್ಬಿ ಸಮುದ್ರದಲ್ಲಿ ತೆರೆಯ ಏರಿಳಿತಕ್ಕೆ ತೂಗುತ್ತಿತ್ತು.ವಿದ್ಯಾರ್ಥಿಗಳೆಲ್ಲಾ ಅವರ ಸುತ್ತಲೂ ಭಯ ಆತಂಕಗಳಿಂದ ನಿಂತಿದ್ದರು.ಸುಧಾಳ ತೊಡೆ ಮೇಲೆ ತಲೆ ಇಟ್ಟು ಅವರು ಮಲಗಿದ್ದರು.ಸುಧಾಮ ಅವರಿಗೆ ಗಾಳಿ ಬೀಸುತ್ತಿದ್ದ.ಉಳಿದವರೆಲ್ಲಾ ಕಾಲು ಕೈ ತೀಡುತ್ತಿದ್ದರು.ಕೆ.ಪುರುಷರು ವಿದ್ಯಾರ್ಥಿಗಳನ್ನು ತಾನೇ ಸಮಾಧಾನಿಸಿದರು.ಏನಿಲ್ಲಾ ಬಿಡಿ,ಸ್ವಲ್ಪ ವೀಕ್‌ನೆಸ್ ಬಂತು ಅಷ್ಟೇ ಎಂದರು.ಆಮೇಲೆ ಹಣೆಯನ್ನು ಸುಧಾಳ ಕನ್ನಡಿಯಲ್ಲಿ ನೋಡಿದರು.
ಮೀನಿನ ಹಚ್ಚೆ ಇರಲಿಲ್ಲ.
ಇದೆಲ್ಲಾ ಆಗಿ ಈಗ ಮೂವತ್ತು ವರ್ಷಗಳೇ ಕಳೆದಿವೆ. ಆ ದಿನ ಮತ್ತೆ ಎಲ್ಲಾ ಅಧ್ಯಯನಗಳನ್ನು ಕೈಬಿಟ್ಟು ವಿದ್ಯಾರ್ಥಿಗಳ ಜೊತೆ ಕೆ.ಪುರುಷರು ವಾಪಾಸ್ಸು ಮನೆಗೆ ವಾಪಾಸ್ಸಾಗಿದ್ದರು.ತನ್ನ ಹಣೆ ಮೇಲೆ ಮೀನಿನ ಮಚ್ಚೆ ಕಾಣಿಸಿದ ಕುರಿತು ಅವರು ಜ್ಯೋತಿಷ್ಯ ಕೇಳಿದ್ದೂ ಆಗಿತ್ತು.ಆ ಕಾಲದ ಆ ಪ್ರಸಿದ್ಧ ಜ್ಯೋತಿಷಿ ಅವರ ಪ್ರಶ್ನೆಯನ್ನು ಯಾವ ಸಂಕೋಚವೂ ಇಲ್ಲದಂತೆ ಅಂಥದ್ದೇನೂ ಆಗಿಲ್ಲ.ಅದು ನಿಮ್ಮ ಭ್ರಮೆಯಷ್ಟೇ ಎಂದಿದ್ದರು.ಇದರಲ್ಲಿ ಯಾವುದೇ ಅನ್ಯ ವಿಚಾರಗಳನ್ನು ತಲೆಗೆ ಸೇರಿಸಕೊಳ್ಳಬೇಡಿ,ಒಮ್ಮೊಮ್ಮೆ ನಮ್ಮ ದೃಷ್ಟಿಯಲ್ಲಿ ಹಾಗೆಲ್ಲಾ ಆಗುತ್ತದೆ.ಯಾವುದೋ ಸೊಪ್ಪಿನ ರಸ ತಾಗಿ ಮೀನಿನ ಹಾಗೇ ಕಾಣಿಸಿರಬಹುದು,ಮರೆತುಬಿಡಿ ಅದನ್ನು ಎಂದು ಹೇಳಿ ಕಳುಹಿಸಿದ್ದರು.
ಕೆ.ಪುರುಷರಿಗೆ ಮಾತ್ರಾ ಆ ಮೇಲೆ ಆ ದ್ವೀಪದ ಮೇಲೆ ಒಂದು ರೀತಿಯ ಭಯವೂ ಜೊತೆಗೆ ಅಖಂಡ ಪ್ರೀತಿಯೂ ಹುಟ್ಟಿಕೊಂಡಿತು.ಆ ದ್ವೀಪಕ್ಕೆ ಇನ್ಯಾರಾದರೂ ಹೋಗಿರಬಹುದೇ ಅಥವಾ ಆ ದ್ವೀಪದ ಬಗೆಗೆ ಯಾರಿಗಾದರೂ ಗೊತ್ತಿರಬಹುದೇ ಎಂದು ತನ್ನೊಳಗೆ ಪ್ರತೀ ನಿತ್ಯ ಯೋಚಿಸುತ್ತಾ ಕುತೂಹಲಗೊಳ್ಳುತ್ತಿದ್ದರು.ಎರಡನೇ ತಿಂಗಳಿಗೆ ಮತ್ತೆ ದ್ವೀಪಕ್ಕೆ ಪ್ರಯಾಣ ಬೆಳೆಸಬೇಕು ಎಂದು ನಿರ್ಧರಿಸಿ ಒಬ್ಬನೇ ಹೊರಟೇ ಬಿಟ್ಟರು.ಹಾಗೇ ಹೊರಟವರು ಮೂರು ದಿನಗಳಿಗೆ ಬೇಕಾದಷ್ಟು ಸಿದ್ಧಾಹಾರವನ್ನು ಬುತ್ತಿಕಟ್ಟಿಕೊಂಡರು.
ಡಕ್ಕೆಗೆ ಬಂದು ದೋಣಿಯೊಂದನ್ನು ಗೊತ್ತುಮಾಡಿದರು.ಮೆರೈನ್ ಶಾಸ್ತ್ರದಲ್ಲಿ ಅವರು ಉನ್ನತ ವ್ಯಾಸಂಗ ಮಾಡಿದ್ದರಿಂದ ಅವರಿಗೆ ಕಡಲಿನ ಹಾದಿಯ ಕುರಿತು ಖಚಿತತೆಗಳಿದ್ದವು.ದೋಣಿಯನ್ನು ಗೊತ್ತು ಮಾಡಿ ಅದರಲ್ಲಿ ಕುಳಿತು ಸಮುದ್ರಯಾನ ಆರಂಭಿಸಿಯೇ ಬಿಟ್ಟರು. ಆ ದೋಣಿಯಲ್ಲಿ ನಾವಿಕನ ಜೊತೆಗೆ ಮತ್ತೊಬ್ಬನಿದ್ದ.ನಾವಿಕ ಮತ್ತು ಆ ಇನ್ನೊಬ್ಬನ ಮಧ್ಯೆ ಕುಳಿತು ಮಾತಿಗೆ ಆರಂಭಿಸಿದ ಕೆ,ಪುರುಷರು ಎರಡು ತಿಂಗಳ ಹಿಂದೆ ತಾವು ಮಾಡಿದ ಪ್ರಯಾಣ ಮತ್ತು ಆಗ ಆದ ಅನುಭವಗಳನ್ನು ವಿವರಿಸಿದರು.ಆದರೆ ಆ ಇಬ್ಬರೂ ಕಂಠಮಟ್ಟ ಕುಡಿದಿದ್ದ ಕಾರಣಕ್ಕೋ ಏನೋ ಅವರೇನೂ ಕುತೂಹಲದ ಪ್ರತಿಕ್ರಿಯೆ ತೋರಲೇ ಇಲ್ಲ.ಬದಲಿಗೆ ಅವರು ಇತ್ತೀಚೆಗೆ ಮದ್ಯದ ಬೆಲೆ ಹೆಚ್ಚುತ್ತಿರುವ ಮತ್ತು ಅದರ ಸೊಗಡು ಕುಸಿಯುತ್ತಿರುವ ಕುರಿತೇ ಮಾತನಾಡುತ್ತಿದ್ದರು.
ಕೆ,ಪುರುಷರ ನಿರ್ದೇಶನದಂತೆ ದೋಣಿ ಸಾಗುತ್ತಿತ್ತು.ಅವರು ಆಣತಿಯಂತೆ ಆ ದ್ವೀಪದ ಬಳಿಗೆ ಬಂದು ನಿಂತಿತು.
ಕೆ,ಪುರುಷರು ದೋಣಿಯಿಂದ ಇಳಿದರು,ಅದೇ ದ್ವೀಪದಲ್ಲಿ ಎರಡನೇ ಬಾರಿ ಹೆಜ್ಜೆ ಊರಿದರು.ಹಾಗೇ ಹೆಜ್ಜೆ ಹಾಕುತ್ತಾ ಹೋದರು.ಅವರು ಹೋಗುತ್ತಿದ್ದ ಹಾದಿಯಲ್ಲಿ ಅವರನ್ನು ಕಂಗೆಡಿಸುವಂತಹ ಒಂದು ಘಟನೆ ನಡೆಯಿತು.
ಕೆ.ಪುರುಷರಿಗಿಂತ ಮುಂಭಾಗದಲ್ಲಿ ಯಾರೋ ನಡೆದುಕೊಂಡು ಹೋಗುವ ಹೆಜ್ಜೆಸದ್ದು ಅವರ ಕಿವಿಗೆ ಜಪ್ಪಿತು.ಅಲ್ಲೇ ನಿಂತರು.ಒಮ್ಮೆ ಕಿವಿ ಆನಿಸಿದರು.ಶತಸತ್ಯ.ಯಾರದ್ದೋ ಹೆಜ್ಜೆ ಸಪ್ಪಳ.ಅನುಮಾನವೇ ಇಲ್ಲ.
ಕೆ.ಪುರುಷರು ಒಂದೇ ಕ್ಷಣಕ್ಕೆ ತಮ್ಮ ವೇಗ ಹೆಚ್ಚಿಸಿಕೊಂಡರು.ಓಡೋಡಿ ದೋಣಿ ಇರುವಲ್ಲಿಗೆ ಬಂದರು.ಅವರ ಏದುಸಿರು ನೋಡಿ ದೋಣಿಯಲ್ಲಿದ್ದ ಇಬ್ಬರೂ ಅರೆಕ್ಷಣ ಕುತೂಹಲಗೊಂಡರು.ಏನಾಯಿತು ಸಾರ್ ಎಂದ ಒಬ್ಬ,ಏನಿಲ್ಲಾ ಹೊರಡಿ ವಾಪಾಸ್ಸು ಹೋಗೋಣ ಎಂದರು ಕೆ. ಪುರುಷರು.
ದೋಣಿ ಹೊರಟಿತು.ಇನ್ನೇನು ದಂಡೆ ಬಿಟ್ಟು ಅಲೆಯ ಮೇಲೆ ದೋಣಿ ಸಿಕ್ಕಿಲ್ಲ ಎಂಬಷ್ಟರಲ್ಲಿ ಆ ದೋಣಿಯ ನಾವಿಕನ ಗೆಳೆಯ ಅರೇ ಸಾರ್ ನಿಮ್ಮ ಹಣೆಯಲ್ಲಿ ಮೀನಿನ ಹಚ್ಚೆ ಇದೆ ಎಂದು ಕಿರುಚಿದ.
ಕೆ.ಪುರುಷರು ಆ ಮಾತನ್ನು ಕೇಳುತ್ತಲೇ ಕುಸಿದು ಬಿದ್ದರು.
ಅವರಿಗೆ ಎಚ್ಚರವಾದಾಗ ದೋಣಿ ಕಡಲಿನ ಅಲೆಯಲ್ಲಿ ಸಾಂಗವಾಗಿ ಸಾಗುತ್ತಿತ್ತು.ನಾವಿಕ ಮತ್ತು ಅವನ ಗೆಳೆಯ ಢಕ್ಕೆಯಲ್ಲಿ ಈ ಹಿಂದೆ ತಮಗೆ ಚಿಟ್‌ಫಂಡ್ ವ್ಯವಹಾರದಲ್ಲಿ ಮೋಸಮಾಡಿದವನನ್ನು ಕುರಿತು ಮಾತನಾಡುತ್ತಿದ್ದರು.ತನ್ನ ಬಗ್ಗೆ ಅವರೇನೂ ಅನಿಸಿಕೊಂಡಂತೆ ಕೆ.ಪುರುಷರಿಗೆ ಕಾಣಲಿಲ್ಲ.ಆದರೂ ಅವರನ್ನು ಉದ್ದೇಶಿಸಿ,ತನಗೇನಾಯಿತು,ತಾನು ಎಚ್ಚರ ತಪ್ಪಿ ಎಷ್ಟು ಹೊತ್ತಾಯಿತು,ಹಣೆಯಲ್ಲಿ ಆ ಹಚ್ಚೆ ಇದೆಯೇ ಎಂದೆಲ್ಲಾ ಕೇಳಿದರು.
ಆದರೆ ಅವರು ಆ ಬಗ್ಗೆ ಏನೂ ಹೇಳಲೇ ಇಲ್ಲ.
ಏನೂ ಆಗಿಲ್ಲ.ನಿಮಗೆ ಸ್ವಲ್ಪ ವೀಕ್‌ನೆಸ್ ಬಂದು ಹಾಗೇ ಆಗಿದೆ.ಬೆಳಗ್ಗೆ ಏನು ತಿಂಡಿ ಮಾಡಿದಿರಿ ಎಂದೆಲ್ಲಾ ಅವರು ಹಗುರವಾಗಿ ಮಾತನಾಡಿದರು.

ದೋಣಿ ಮತ್ತೆ ದ್ವೀಪದತ್ತ ತಿರುಗಲಿ ಎಂದು ದೊಡ್ಡ ಸ್ವರದಲ್ಲಿ ಕೆಪುರುಷರು ಆಜ್ಞೆ ಮಾಡಿದರು. ಹೋಗುವುದಕ್ಕೆ ಅಡ್ಡಿ ಏನಿಲ್ಲ.ನಮ್ಮ ಕಿಮ್ಮತ್ತು ಹೆಚ್ಚಾಗುತ್ತದೆ ಎಂದು ನಾವಿಕ ಹೇಳಿದ.ಎಷ್ಟೇ ಆದರೂ ನಾನಿದ್ದೇನೆ ಎಂದರು ಕೆ.ಪುರುಷರು.ದೋಣಿ ಮತ್ತೆ ದ್ವೀಪದತ್ತ ಸಾಗಿತು.
ದ್ವೀಪದ ಬಳಿ ಬಂದಾಗ ಸಂಜೆಯಾಗಿತ್ತು.ಕೆ.ಪುರುಷರು ತಮ್ಮ ವಾಚ್ ನೋಡಿ ಗಂಟೆ ಎಷ್ಟು ಎಂಬುದನ್ನು ತಿಳಿದುಕೊಂಡರು.ದೋಣಿಯಿಂದ ಇಳಿದವರೇ ಓಡೋಡುತ್ತಾ ಆ ದ್ವೀಪದಲ್ಲಿ ತಾನು ಹೆಜ್ಜೆ ಶಬ್ದ ಕೇಳಿದ ಸ್ಥಳಕ್ಕೆ ಬಂದು ನಿಂತರು.ಕಿವಿಯಾನಿಸಿದರೆ ಅದೇ ಹೆಜ್ಜೆ ಸಪ್ಪಳ.ಕೆ,ಪುರುಷರು ದೊಡ್ಡ ಸ್ವರದಲ್ಲಿ ಯಾರದು ಎಂದರು.ಉತ್ತರ ಬರಲಿಲ್ಲ.ಅಲ್ಲಲ್ಲಿ ಇದ್ದ ಬಂಡೆ ಸಂದುಗಳಲ್ಲಿ ಹುಡುಕಾಡಿದರು.ಅಷ್ಟರಲ್ಲಿ ಅವರ ಮನಸ್ಸು ಹಲವಾರು ಪ್ರಶ್ನೆಗಳನ್ನು  ಅವರಿಗೇ ಕೇಳತೊಡಗಿತು.ಯಾರಿಗೆ ಹುಡುಕುತ್ತೀಯಾ?ಯಾರನ್ನು ಹುಡುಕುತ್ತೀಯಾ?ಏಕೆ ಹುಡುಕುತ್ತೀಯಾ?ಯಾವ ಪುರುಷಾರ್ಥಕ್ಕೆ ಹುಡುಕುತ್ತೀಯಾ?
ಕೆ.ಪುರುಷರು ಹುಡುಕಾಟ ನಿಲ್ಲಿಸಿದರು.
ಈ ದ್ವೀಪ ನಿನ್ನದೇ?ಅಲ್ಲ ತಾನೇ?ಹಾಗೆಂದ ಮೇಲೆ ಇಲ್ಲಿ ಯಾರಿದ್ದರೆ ನಿನಗೇನು?
ಹಾಗಲ್ಲ.ಎಲ್ಲೂ ದೋಣಿಗಳಿಲ್ಲ.ಯಾರೂ ಬಂದ ಬಗ್ಗೆ ಕುರುಹೇ ಇಲ್ಲ.ಯಾರಾದರೂ ಬಂದಿದ್ದರೆ ಇಲ್ಲಿಗೆ ಅಲ್ಲಿ ದಂಡೆಯಲ್ಲಿ ಎಲ್ಲಾದರೂ ದೋಣಿ ಇರಬೇಕಿತ್ತಲ್ಲ.ಇಲ್ಲ ಅಂದರೆ ಇಲ್ಲಿ ಯಾರಾದರೂ ಇರುವುದಾದರೂ ಹೇಗೆ? ಹಾಗೇ ಇರುವ ಅವರು ಯಾರು?ಅವರೆಲ್ಲಿಂದ ಬಂದರು?ಯಾಕೆ ಬಂದರು?ಹೇಗೆ ಬಂದರು?
ಕೆ.ಪುರುಷರಿಗೆ ಎರಡು ತಿಂಗಳ ಹಿಂದೆ ಇದೇ ದ್ವೀಪಕ್ಕೆ ವಿದ್ಯಾರ್ಥಿಗಳ ಜೊತೆ ಬಂದಿಳಿದ ಕ್ಷಣದಲ್ಲಿ ಉಂಟಾಗಿದ್ದ ಅನುಭೂತಿ ಪುನರಾನುಭವವಾಯಿತು.ಸೀದಾ ವೇಗದ ಹೆಜ್ಜೆಗಳನ್ನು ಹಾಕುತ್ತಾ ದಂಡೆ ಬಳಿ ಬಂದರು.ದೋಣಿಯ ನಾವಿಕನನ್ನು ಕರೆದು ಬ್ಯಾಗ್‌ನಿಂದ ಹಣದ ಕಟ್ಟುಗಳನ್ನು ತೆಗೆದುಕೊಟ್ಟರು.
ನೀವು ವಾಪಾಸು ಹೋಗಿ.ನಿಮಗೆ ಮತ್ತೆ ನನ್ನ ನೆನಪಾದಾಗ ಬಂದರೆ ಸಾಕು ಎಂದರು
ಈ ಮಾತು ಕೇಳಿ ಕುಡಿದ ಅಮಲಿನಲ್ಲಿ ತೂರಾಡುತ್ತಿದ್ದ ಅವರಿಬ್ಬರೂ ಭಯಗೊಂಡರು.ಹಾಗೆಲ್ಲಾ ಆಗುವುದಿಲ್ಲ.ನಾವು ಢಕ್ಕೆಯಿಂದ ಹೊರಡುವುದನ್ನು ಎಲ್ಲ ದೋಣಿಯವರೂ ನೋಡಿದ್ದಾರೆ.ನೀವು ನಮ್ಮೊಡನೇ ಬಾರದಿದ್ದರೆ ಪೊಲೀಸರು ನಮ್ಮ ಬೆಂಡು ತೆಗೆದಾರು ಎಂದರು.
ತಾನು ಕಾಗದಲ್ಲಿ ಒಪ್ಪಿಗೆ ಪತ್ರ ಬರೆದುಕೊಡುವುದಾಗಿ ಕೆ.ಪುರುಷರು ಪರಿಪರಿಯಾಗಿ ಹೇಳಿದರು.ಅದರೆ ಅವರು ಒಪ್ಪಲೇ ಇಲ್ಲ. ಬಾರದಿದ್ದರೆ ಎತ್ತಿ ಕೊಂಡೊಯ್ಯಬೇಕಾಗುತ್ತದೆ ಎಂದು ನಾವಿಕ ಎಚ್ಚರಿಕೆ ನೀಡಿದ.ಅಷ್ಟರಲ್ಲಿ ದಟ್ಟವಾಗಿ ಕತ್ತಲು ಆವರಿಸುತ್ತಿತ್ತು.ಕೆ.ಪುರುಷರು ಈಗ ಬಂದೆಎಂದು ಹೇಳಿದವರೇ ಆ ದ್ವೀಪದ ಬಂಡೆಯ ಸಂದುಗಳಲ್ಲಿ ಆ ಕರಿಗತ್ತಲಿನಲ್ಲಿ ಕಣ್ಮರೆಯಾದರು.ನಾವಿಕ ಮತ್ತು ಅವನ ಗೆಳೆಯ ತಮ್ಮ ಬಳಿ ಇದ್ದ ಸಣ್ಣ ಟಾರ್ಚ್‌ನ ಬೆಳಕು ಹಾಯಿಸುತ್ತಾ ದ್ವೀಪದಲ್ಲಿ ಕಣ್ಮರೆಯಾದ ಕೆ.ಪುರುಷರನ್ನು ಕೂಗಿ ಕರೆಯುತ್ತಾ ಹುಡುಕಿದರು.
ಕೆ.ಪುರುಷರ ಸುಳಿವೇ ಸಿಗಲಿಲ್ಲ.ಫಜೀತಿಯಾಯಿತಲ್ಲ ಎಂದು ಅವರಿಬ್ಬರೂ ಬೆಳಗಾಗುವ ತನಕ ಅಲ್ಲೇ ದ್ವೀಪದಲ್ಲೇ ಕುಳಿತರು.
ಮರುದಿನ ಬೆಳಗಾದರೆ ಆ ದಂಡೆಯಲ್ಲಿ ದೋಣಿಯೇ ನಾಪತ್ತೆ.ನಾವಿಕ ಮತ್ತು ಅವನ ಗೆಳೆಯನನ್ನು ದ್ವೀಪದಲ್ಲಿ ಬಿಟ್ಟು ಬಂದು ದೋಣಿಯನ್ನು ಚಲಾಯಿಸುತ್ತಾ ಢಕ್ಕೆಯಲ್ಲಿ ಏನೂ ಅರಿಯದವರಂತೆ ಬಿಟ್ಟು ಓಡೋಡಿಯೇ ಆ ಕತ್ತಲಲ್ಲಿ ಕೆ.ಪುರುಷರು ಬಂದಿದ್ದರು.
ಆಮೇಲೆ ಮೂವತ್ತು ವರ್ಷಗಳ ಬಳಿಕ ಈಗ ಕೆ.ಪುರುಷರು ಆ ದ್ವೀಪದತ್ತ ಹೊರಟಿದ್ದಾರೆ.ಅವರು ಯಾನ ಮಾಡಲು ಈ ಬಾರಿ ಯಂತ್ರ ಚಾಲಿತ ದೋಣಿ ಇದೆ.ಅದು ವೇಗವಾಗಿ ಹೋಗುತ್ತಿದೆ.ದೋಣಿಯಲ್ಲಿ ಇಬ್ಬರು ಮುದುಕರು ಇದ್ದಾರೆ.ಕೆ.ಪುರುಷರಿಗೂ ವಯಸ್ಸಾಗಿದೆ.ಹಾಗಾಗಿ ಅವರಿಗೆ ಆ ದ್ವೀಪದ ಹಾದಿ ಮಸುಕಾಗುತ್ತಿದೆ.ದೋಣಿಯ ನಾವಿಕ ಮುದುಕ.ಆತ ಕರೆಕ್ಟಾಗಿ ಹೇಳಿದರೆ ಮಾತ್ರಾ ಹೋಗಬಹುದು ಎಂದು ಕೆ.ಪುರುಷರಿಗೆ ಹೇಳಿರುವುದರಿಂದ ಅವರು ಹಾದಿಯ ಬಗ್ಗೆ ನಿಖರತೆ ಮಾಡಿಕೊಳ್ಳುತ್ತಿದ್ದಾರೆ.ನಾವಿಕನ ಜೊತೆಗಿದ್ದ ಮುದುಕ ಢಕ್ಕೆಯಲ್ಲಿ ಚಿಟ್‌ಫಂಡ್ ಮಾಡಿ ಮೋಸ ಮಾಡಿದವನನ್ನು ನಾವಿಕನಲ್ಲಿ  ಹೇಳಿ ಬೈಯುತ್ತಿದ್ದ.ಕೆ,ಪುರುಷರು ಅರಬ್ಬಿ ಸಮುದ್ರದ ಆಳ ಎಷ್ಟಿರಬಹುದು ಎಂದು ಸುಮ್ಮಸುಮ್ಮನೇ ಲೆಕ್ಕಾಚಾರ ಮಾಡುತ್ತಾ ಮೊಗೆದು ಎಂದೂ ಮುಗಿಸಲಾರದ ಕಡಲಿನ  ಬಗ್ಗೆ ಬೆರಗಾಗುತ್ತಿದ್ದಾರೆ.

20160626

ಅಂತಃಪುರದ ಅರಸನ ಕಥೆ


ಒಂದಾನೊಂದು ಕಾಲದಲ್ಲಿ ಒಬ್ಬ ಅರಸನಿದ್ದ.ಅವನಿಗೆ ಮೂವರು ಮಡದಿಯರು.ಎಲ್ಲರೂ ಬಹಳಷ್ಟು ಸುಂದರಿಯರು. ಅರಸನೋ ಮಹಾ ರಸಿಕ.ಅರಸನಿಗೆ ಯಾರ ಜೊತೆ ಯಾವಾಗ ರಮಿಸಬೇಕು ಎಂಬುದೇ ಗೊಂದಲ.ಯಾರನ್ನು ಬಿಡುವುದು,ಯಾರನ್ನು ತಬ್ಬಿಕೊಳ್ಳುವುದು ಎಂಬ ಹಪಾಹಪಿ,ಗೊಂದಲ.
ಸದಾ ಪಾನಾಮೃತನಾಗಿ,ಹಂಸತೂಲಿಕಾಕಲ್ಪದಲ್ಲಿ ಮನದನ್ನೆಯರ ಜೊತೆ ರಮಿಸುತ್ತಾ ಇದ್ದ ಅರಸ ರಾಜ್ಯಭಾರವನ್ನೇ ಮರೆತಿದ್ದ.ಆ ರಾಜ್ಯದ ಪ್ರಜೆಗಳ ಅದೃಷ್ಟ ಚೆನ್ನಾಗಿದ್ದ ಕಾರಣ ಅರಸನ ಆಸ್ಥಾನದಲ್ಲಿ ಅಪಾರ ಮಂದಿ ಧೀಮಂತ ಮಂತ್ರಿಗಳಿದ್ದರು ಮತ್ತು ಅವರು ರಾಜ್ಯಭಾರವನ್ನು ಚೆನ್ನಾಗಿ ಮಾಡುತ್ತಿದ್ದರು.
ಒಂದು ದಿನ ಪಕ್ಕದ ರಾಜ್ಯದ ದಂಡು ಈ ಅರಸನ ರಾಜ್ಯಕ್ಕೆ ಕಾಲಿಟ್ಟಿತು.ದಂಡು ಬರುತ್ತಿರುವ ಸುದ್ದಿ ಕೇಳಿ ಅರಸ ಭಯಭೀತನಾದ.ಮಂತ್ರಿಗಳು ಸೇನಾಧಿಪತಿಗಳನ್ನು ಕರೆಸಿದ.ಯುದ್ಧ ಹೇಗೆ ನಿಭಾಯಿಸಬೇಕು ಎಂದು ಸೂಚಿಸಿದ.ಮಂತ್ರಿ ಮಂಡಲದ ಎಲ್ಲರೂ ರಾಜ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದರು.ಸೇನಾಧಿಪತಿ ಸೇನೆಯನ್ನು ಸಜ್ಜುಮಾಡಿದ.ಅಷ್ಟರಲ್ಲಿ ಯುದ್ಧದ ಕಹಳೆ ಮೊಳಗಿತು.ಉಭಯ ರಾಜ್ಯಗಳ ಸೈನಿಕರು ರಣಾಂಗಣಕ್ಕೆ ಇಳಿದೂ ಆಯಿತು.
ಈ ನಡುವೆ ಅಂತಃಪುರದಲ್ಲಿ ಅರಸನಿಗೆ ಯಾಕೋ ತನ್ನ ಮೂವರೂ ರಾಣಿಯರ ಮೇಲೆ ಅಸಮಾಧಾನ ಶುರುವಾಯಿತು.ಈ ರಾಣಿಯರ ಲೋಲುಪತೆಯಿಂದಾಗಿ ತನಗೆ ರಾಜ್ಯಭಾರದ ಮೇಲೆ ಹಿಡಿತವೇ ಇಲ್ಲದಂತಾಗಿದೆ ಎಂದನಿಸಿತು.ಅರಸ ಕೂಡಲೇ ಮೂವರೂ ರಾಣಿಯರನ್ನು ಸೆರೆಮನೆಗೆ ತಳ್ಳುವಂತೆ ಆದೇಶಿಸಿದ.ಇಡೀ ಅರಮನೆ ಅರಸನ ಈ ಆದೇಶಕ್ಕೆ ಅವಾಕ್ಕಾಯಿತು.ಆದರೆ ವಿಧಿ ಇರಲಿಲ್ಲ.ರಾಜಭಟರು ರಾಣಿಯರನ್ನು ಸೆರೆಮನೆಗೆ ತಳ್ಳಿದರು.ಅರಸ ನಿರುಮ್ಮಳನಾದ.ಯುದ್ಧರಂಗಕ್ಕೆ ನೇರವಾಗಿ ಧುಮುಕಿದ.ರಣಾಂಗಣದಲ್ಲಿ ಯುದ್ಧದ ಕಾವು ಏರತೊಡಗಿತು.ಸ್ವತಃ ಅರಸನೇ ಕಾದಾಡುತ್ತಿರುವ ಸುದ್ದಿ ಪ್ರಜೆಗಳಿಗೆ ತಲುಪಿತು.ಎಲ್ಲರೂ ಆಶ್ಚರ್ಯಚಕಿತರಾದರು.
ಯುದ್ಧದಲ್ಲಿ ಕೊನೆಗೂ ಅರಸನಿಗೆ ಗೆಲುವಾಯಿತು.ವೈರಿರಾಜ್ಯದ ಸೇನೆ ನುಚ್ಚುನೂರಯಿತು.ಪಕ್ಕದ ರಾಜ್ಯ ಅರಸನ ಕೈವಶವಾಯಿತು.ಅಲ್ಲಿನ ರಾಜನನ್ನು ಬಂಧಿಸಿ ತರಲಾಯಿತು.ಆ ರಾಜನ ಏಕಮಾತ್ರ ಅರಸಿಯನ್ನು ವಶಕ್ಕೆ ತೆಗೆದುಕೊಂಡು ಅರಸನ ಮುಂದೆ ಹಾಜರುಪಡಿಸಲಾಯಿತು.
ಅರಸ ಆಕೆಯನ್ನು ತದೇಕಚಿತ್ತದಿಂದ ನೋಡಿದ.ವೈರಿ ರಾಜನ ಪತ್ನಿ ಅವಳಾಗಿದ್ದಳು.ಅರಸನ ಒಳಗಿನ ರಸಿಕತೆ ಮತ್ತೆ ಕಿಚ್ಚುಹತ್ತಿಕೊಂಡಿತು.ಆಕೆಯನ್ನು ರಮಿಸಬೇಕೆಂದು ಘೋಷಿಸಿ ಅಂತಃಪುರಕ್ಕೆ ಸೇರಿಸುವಂತೆ ಆದೇಶಿಸಿದ.
ಆ ರಾತ್ರಿ ಅರಸ ಅಂತಃಪುರಕ್ಕೆ ಹೋದ.ಅವನು ಗೆದ್ದ ರಾಜ್ಯದ ರಾಣಿ ಹಂಸತೂಲಿಕಾಕಲ್ಪದಲ್ಲಿ ತಲೆಬಾಗಿಸಿ ಕುಳಿತಿದ್ದಳು.ಅರಸ ಮೋಹಿತನಾಗಿ ಅವಳ ಬಳಿ ಹೋದ.
ಅಷ್ಟರಲ್ಲಿ ಆ ರಾಣಿ ಅರಸನಿಗೆ ಒಂದೇ ಒಂದು ಪ್ರಶ್ನೆ ಎಂದಳು
ಹೇಳು ಎಂದ ಅರಸ.
ನನ್ನ ರಾಜ್ಯ ಗೆದ್ದೆಯಲ್ಲಾ ನೀನು ,ಎಂದಾದರೂ ನನ್ನ ಪ್ರಜೆಗಳನ್ನು ಗೆದ್ದೆಯಾ ಎಂದು ಕೇಳಿದಳು.
ರಾಜ್ಯ ಗೆದ್ದರೆ ಪ್ರಜೆಗಳನ್ನೆಲ್ಲಾ ಗೆದ್ದ ಹಾಗೆಯೇ ಎಂದ ಅರಸ.
ಅವಳು ಜೋರಾಗಿ ನಕ್ಕಳು.
ನಾಳೆ ನನ್ನ ಜೊತೆ ಈಗ ನೀನು ಗೆದ್ದಿರುವ ನನ್ನ ರಾಜ್ಯಕ್ಕೆ ಬರುವೆಯಾ? ಎಂದಳು.
ಅರಸ ಒಪ್ಪಿದ.
ಹಾಗಾದರೆ ನಾಳೆ ರಾತ್ರಿಯಿಂದ ನಾನು ನಿನ್ನವಳು ಎಂದಳು.
ಮರುದಿನ ಮುಂಜಾವದಲ್ಲೇ ಅರಸ ಮತ್ತು ಆ ರಾಣಿ ಆ ರಾಜ್ಯಕ್ಕೆ ತೆರಳಿದರು.ರಾಣಿಯ ಪಕ್ಕದಲ್ಲಿ ರಥದಲ್ಲಿ ಕುಳಿತಿದ್ದ ಅರಸನ ಬಳಿ ಏನೊಂದೂ ಆಕೆ ಮಾತನಾಡಲಿಲ್ಲ.ರಾಜ್ಯದೊಳಗೆ ರಥ ವೇಗವಾಗಿ ಸಾಗುತ್ತಿತ್ತು.ರಥವನ್ನು ರಾಣಿ ತನ್ನ ಅರಮನೆಯ ಮುಂದೆ ನಿಲ್ಲಿಸುವಂತೆ ಸೂಚಿಸಿದಳು.ರಥ ನಿಂತಿತು.ಅಂತಃಪುರಕ್ಕೆ ಅರಸನನ್ನು ಕರೆದುಕೊಂಡು ಹೋದಳು.ಪರರಾಜ್ಯ ಪರಅಂತಃಪುರದ ಆ ವಾತಾವರಣದಲ್ಲಿ ಅರಸನಿಗೆ ಇರುಸುಮುರುಸಾಗುತ್ತಿತ್ತು.ಅರಮನೆಯಲ್ಲಿ ಯಾರೂ ಇರಲಿಲ್ಲ.ಎಲ್ಲರೂ ಯುದ್ಧಬಂಧಿಗಳಾಗಿ ಅರಸನ ಸೆರೆಮನೆಯಲ್ಲಿದ್ದರು.
ರಾಣಿ ಹೇಳಿದಳು,ಬಾ ಈಗಲೇ ನನ್ನನ್ನು ಇಲ್ಲೇ ರಮಿಸು.
ಅರಸ ಅವಕ್ಕಾದ.ಇಲ್ಲ,ನನ್ನ ಅರಮನೆಯ ಅಂತಃಪುರದಲ್ಲೇ ರಮಿಸುವೆ ಎಂದ.
ರಾಣಿ ಮತ್ತೊಮ್ಮೆ ನಕ್ಕಳು.ನಗುತ್ತಾ ಓಡೋಡಿ ಬಂದು ರಥ ಏರಿದಳು.
ಅರಸ ತಾನು ಗೆದ್ದ ರಾಜ್ಯದ ಅಂತಃಪುರದಲ್ಲಿ ಬಂಧಿಯಾದ.ಅವನ ರಾಜ್ಯದ ಸೆರೆಮನೆಯಲ್ಲಿ ಅವನ ಮೂವರೂ ರಾಣಿಯರನ್ನು ಸೆರೆಮನೆಯಲ್ಲಿ ಬಂಧಿತನಾಗಿದ್ದ ವೈರಿರಾಜ ವರಿಸಿದ.ರಥವೇರಿ ಹೋದ ರಾಣಿಯನ್ನು ಈ ತನಕ ಯಾರೂ ಕಂಡಿಲ್ಲ.