20161221

ಅಸ್ತಮಾನ ಹೂವಿನ ಮೂರನೇ ಎಸಳುಮೊದಲ ಎಸಳು:
ಕಥೆಗಾರ ಬೆಂಗಳೂರಿಗೆ ಬರುವ ಹೊತ್ತಿಗೆ ಇಡೀ ಮಹಾನಗರ ಮಲಗಿ ನಿದ್ರಿಸುತ್ತಿರಬೇಕು.ಇಲ್ಲವಾರದರೆ ಆತನ ಆಗಮನವನ್ನು ಅಲ್ಲಿ ಯಾರೂ ಗಮನಿಸದಂತೆ ಕಾಣುತ್ತಿರಲಿಲ್ಲ.ಅವನು ಅದು ಯಾವುದೋ ರಸ್ತೆಯ ಹೊದ್ದಿನಲ್ಲಿದ್ದ ಆ ಭವ್ಯ ಹೋಟೇಲಿನ ಏಳನೇ ಮಹಡಿಯಲ್ಲಿ ಒಂದು ಐಷಾರಾಮಿ ಕೊಠಡಿಯಲ್ಲಿ ಕುಳಿತಿದ್ದ.ಅವನ ಮುಂದೆ ಅವನಿಗೆ ಅವನು ಕೆಲಸ ಮಾಡುತ್ತಿದ್ದ ಕಂಪನಿ ನೀಡಿದ ಲ್ಯಾಪ್‌ಟಾಪ್ ತೆರೆದುಕುಳಿತು ಅವನ ಆಜ್ಞೆಗೆ ಕಾಯುತ್ತಿತ್ತು.
ಕಥೆಗಾರ ಏನು ಹೇಳುತ್ತಾನೆ ಅದನ್ನು ದಾಖಲಿಸುವುದಷ್ಟೇ ಆ ಲ್ಯಾಪ್‌ಟಾಪ್‌ನ ಕೆಲಸ.ಆ ಲ್ಯಾಪ್‌ಟಾಪ್  ಎಂಬ ಸೇವಕನಿಗೆ ಭಾವನೆಗಳೇ ಇಲ್ಲವೇ ಎಂದು ಕಥೆಗಾರ ದಟ್ಟವಾಗಿ ಯೋಚಿಸಿದ.
ಇಲ್ಲ ಎಂದಿತು ಲ್ಯಾಪ್‌ಟಾಪ್.
ನಾನು ಒಂಥರಾ ನಿನ್ನ ಗೆಳೆಯ ಅಥವಾ ಗೆಳತಿ ಅಂತ ನೀನು ಭಾವಿಸುವ ಎಲ್ಲರ ಹಾಗೇ.ನನಗೆ ನನ್ನದೇ ಆದ ಒಂದು ಬದುಕಿದೆ.ಅಲ್ಲಿ ನಾನು ಬೆಚ್ಚಗೆ ಇರುತ್ತೇನೆ.ಆ ಬೆಚ್ಚನೆಯಲ್ಲಿ ನಾನು ನನ್ನತನವನ್ನು ಉಳಿಸಿಕೊಳ್ಳಲು ಒದ್ದಾಡುತ್ತೇನೆ.ನನ್ನದೇ ಬದುಕು ನನ್ನದೇ ಜೀವಯಾನದಲ್ಲಿ ನಾನು ಸಾಗುತ್ತಿರುವಾಗ ನೀನು ಮಧ್ಯೆ ಮಧ್ಯೆ ಬಂದು ಅದೇನನ್ನೋ ಹೇಳುತ್ತೀಯಾ, ಆ ಕ್ಷಣಕ್ಕೆ ನಾನು ನಿನ್ನವಳಂತೆ ನಟಿಸುತ್ತೇನೆ,ನೀನು ಏನೆಲ್ಲಾ ಹೇಳುತ್ತೀ ಮತ್ತು ನೀನೇನು ಬಯಸುತ್ತೀ ಅದನ್ನು ನಿನಗೆ ಕೊಟ್ಟಂತೆ ನಟಿಸುತ್ತೇನೆ ಎಂದು ಹೇಳಿತು ಲ್ಯಾಪ್‌ಟಾಪ್.
ಕಥೆಗಾರ ನಕ್ಕ,ಜೋರಾಗಿ ನಕ್ಕ.ಗಂಟೆ ಎಷ್ಟು ಎಂದು ತನ್ನ ವಾಚಿನ ಮೇಲೆ ಕಣ್ಣು ಹಾಯಿಸಿದ.ಇನ್ನು ಕೆಲವು ಹೊತ್ತಿನಲ್ಲಿ ಬೆಳಗಾಗುತ್ತದೆ ಎಂದಿತು ಗಂಟೆ.
ನೀನು ಮಾತ್ರಾ ಸತ್ಯ ಹೇಳುತ್ತೀಯಾ,ಏಕೆಂದರೆ ನಿನಗೆ ಸತ್ಯವನ್ನು ಬಿಟ್ಟು ಬೇರೆ ಹಾದಿ ಗೊತ್ತಿಲ್ಲ ಎಂದು ಹೇಳಿದ ಕಥೆಗಾರ.
ಗಂಟೆ ಸತ್ತೇನೋ ಬಿದ್ದೆನೋ ಎಂದು ನಕ್ಕಿತು.
ನಾನೂ ಸತ್ಯವಂತನಲ್ಲ ಕಥೆಗಾರ.ಸುಮ್ಮನೇ ನಟಿಸುತ್ತೇನೆ ಅಷ್ಟೇ.ನನ್ನಲ್ಲೇ ಒಂದು ಲಹರಿ ಇದೆ.ಅದು ಇರುವ ತನಕ ನಾನು ಸತ್ಯ ಹೇಳುತ್ತೇನೆ,ಆಮೇಲೆ ಲಹರಿ ಕ್ಷೀಣಿಸಿದ ಹಾಗೇ ನಾನೂ ಸತ್ಯದ ಹಾದಿಯಿಂದ ದಾಟುತ್ತಾ ಹೊರ ಬರುತ್ತೇನೆ,ಕೊನೆಗೊಮ್ಮೆ ಸತ್ಯದ ನೆತ್ತಿಯನ್ನೇ ದಾಟಿ ಎಲ್ಲೋ ನಿಂತು ಬಿಡುತ್ತೇನೆ,ಅದು ಸುಳ್ಳೂ ಅಥವಾ ಸತ್ಯವೂ ಎರಡೂ ಆಗಬಹುದು ಎಂದಿತು ವಾಚು.
ಜಡತ್ವದ ಈ ಎರಡೂ ಸಾಥಿಗಳು ತನ್ನನ್ನು ಅಣಕಿಸುತ್ತಿವೆ ಎಂದು ಗೊತ್ತಾಗಲು ಕಥೆಗಾರನಿಗೆ ಬಹಳ ಸಮಯ ಬೇಕಾಗಲಿಲ್ಲ.
ಜಗವೇ ನಾಟಕ ರಂಗ ಎನ್ನುತ್ತಿದ್ದ ಅಪ್ಪ ನೆನಪಾದ.ಅಪ್ಪ ಇರುತ್ತಿದ್ದರೆ ಈಗ ತೊಂಭತ್ತು ಮೇಲೆ ಮತ್ತೇಳು ವರ್ಷ ಆಗುತ್ತಿತ್ತು.ಜೀವೇಮ ಶರದಶ್ಶತಂ, ಪಶ್ಯೇಮ ಶರದಶ್ಯತಂ ಎಂದು ಬಾಲಪಾಠ ಹೇಳಿಕೊಟ್ಟಿದ್ದ ಅಪ್ಪ ತಾನಂತೂ ಇರಲಾರೆ ಎಂದು  ಹೊರಟ.ಅಪ್ಪನ ಸಾವು ತನ್ನನ್ನು ಕೆಟ್ಟದಾಗಿ ಕಾಡುತ್ತಿತ್ತು.ಅಪ್ಪ ಎಲ್ಲೆಲ್ಲಿ ತನ್ನನ್ನು ತಿದ್ದಬಹುದೋ ಅಲ್ಲೆಲ್ಲೂ ತಿದ್ದಲಿಲ್ಲವೇ ಅಥವಾ ಅಪ್ಪ ತಿದ್ದಿದ ರೀತಿಯಲ್ಲಿ ತಾನು ಸಾಗಲೇ ಇಲ್ಲವೇ ಎಂದು ಕಥೆಗಾರನಿಗೆ ಆ ಮೂರನೇ ಜಾವದಲ್ಲಿ ಪ್ರಶ್ನೆ ಮೂಡಿತು.ಅಪ್ಪ ಕೆಟ್ಟವನಾಗಿರಲಲ್ಲ.ಅಪ್ಪ ಸತ್ಯವಂತನಾಗಿದ್ದ.ಅಪ್ಪನಿಗೆ ಯಾವ ಖಯಾಲಿಗಳೂ ಇರಲಿಲ್ಲ.ಅಪ್ಪನಲ್ಲಿ ಅಸಾಧ್ಯವಾದ ಛಲವಿತ್ತು.ಜೊತೆಗೆ ಸತ್ಯದ ಹಾದಿಯಲ್ಲಿ ಸಾಗಿ ಗುರಿಮುಟ್ಟಬೇಕು ಎಂಬ ಸ್ಥೈರ್ಯವಿತ್ತು.ಆದರೆ ಅಪ್ಪ ಒಂದು ರಾತ್ರಿ ಆ ಸ್ಥೈರ್ಯ ಕಳೆದುಕೊಂಡ.ಆಸ್ಪತ್ರೆಯಲ್ಲಿ ವೈದ್ಯರು ಇದನ್ನು  ಗುರುತಿಸಿರಬೇಕು.ತನ್ನನ್ನು ಹತ್ತಿರ ಕರೆದು ನಿಮ್ಮ ಡ್ಯಾಡಿಗೆ ಅಕ್ಯೂಟ್ ಡಿಪ್ರೆಶನ್ ಬಂದಿದೆ ಎಂದರು.ಆಮೇಲೆ ಅಪ್ಪ ತೊದಲುತ್ತಿದ್ದ.ತೂಕಡಿಸುತ್ತಿದ್ದ.ಅವನು ದೀನನಾಗಿ ನೋಡುತ್ತಿದ್ದ ಕಣ್ಣುಗಳು ಕಥೆಗಾರನನ್ನು ಬುಡ ಸಮೇತ ಅಲ್ಲಾಡಿಸಿದವು.ಅಪ್ಪನ ಶವದ ಮುಂದೆ ಒಂದು ಹನಿ ಕಣ್ಣೀರು ಬೀಳಲಿಲ್ಲ.ಅಪ್ಪ ಬೂದಿಯಾದ ಮರು ದಿನ ಸುಡುಕಳದಲ್ಲಿ ನಿಂತು ಕಥೆಗಾರ ಅದೆಷ್ಟೋ ಹೊತ್ತು ರೋದಿಸಿದ.ಅದೇ ದಿನ ಅವನಿಗೆ ಅದೊಂದು ಅರ್ಥವಾಗಿತ್ತು.ಏನು ಅರ್ಥವಾಯಿತು ಎಂಬುದನ್ನು ಕಥೆಗಾರ ತನ್ನದೇ ಬದುಕನ್ನು ಕೊನೆಗಾಣಿಸುವ ನಿರ್ಧಾರಕ್ಕೂ ಮುನ್ನ ಬರೆದಿಟ್ಟಿದ್ದ.
ಬೀಡುಬೀಸಾಗಿ ಸಂಜೆ ವೇಳೆ ಕಾರಲ್ಲಿ ಕುಳಿತು ಒಂದೇ ಉಸುರಿಗೆ ಹೊರಟು ಬರುತ್ತಾ ಸಕಲೇಶಪುರದಲ್ಲಿ ಮಂಜುನಾಥನ ಕ್ಯಾಂಟೀನ್‌ನಲ್ಲಿ ಅಕ್ಕಿ ರೊಟ್ಟಿ ತಿನುವ ಹೊತ್ತಿಗೆ ಅವಳು ನೆನಪಾಗಿದ್ದಳು.ಏಳು ಬಾರಿ ಕರೆ ಮಾಡಿದಳೂ ಆಕೆಯ ಉತ್ತರ ಇಲ್ಲ.ಬಹುಶಃ ಮಗನ ಜೊತೆ ಎಲ್ಲೋ ಪಾರ್ಕ್‌ನಲ್ಲಿ ಸುತ್ತಾಡುತ್ತಿರಬೇಕು.ಸಂಜೆ ವಾಟ್ಸಪ್‌ನಲ್ಲಿ ಸಿಕ್ಕಾಗಲೂ ಏನೋ ಹೇಳಬೇಕು ಎಂದುಕೊಂಡರೆ ಆಕೆ ಸುತಾರಾಂ ಕಥೆಗಾರನ ಪ್ರೊಫೈಲ್ ನೋಡಲೊಲ್ಲಳು.ಹಾಗಾದರೆ ತಾನು ಬೆಂಗಳೂರಿಗೆ ಬರುತ್ತಿದ್ದೇನೆ ಎಂಬುದನ್ನು ಅವಳಿಗೆ ಹೇಳುವುದಾದರೂ ಹೇಗೆ ಎಂದನಿಸಿತು.ಇಷ್ಟಕ್ಕೂ ಅದನ್ನೆಲ್ಲಾ ಅವಳಿಗೇಕೆ ಹೇಳಬೇಕು ಎಂಬ ಪ್ರಶ್ನೆ ಹುಟ್ಟಿ,ಆಮೇಲೆ ತಿಳಿಸಿದರಾಯಿತು ಎಂದಾಗಲೇ ವಾಸವಿ ಕಾಫಿ ಹೌಸ್ ಬಳಿ ಬರುತ್ತಿದ್ದಾಗ ಮತ್ತೆ ಫೋನ್ ಹಚ್ಚಿಕೊಂಡರೆ ಅವಳೇ ಹಲೋ ಎಂದಳು.ಇನ್ನು ಹತ್ತು ಮಾರು ಸಾಗಿದರೆ ಹೇಮಾವತಿ ನದಿ ದಾಟುವುದು.ಕಾರು ಪಕ್ಕಕ್ಕೆ ನಿಲ್ಲಿಸಿದ ಕಥೆಗಾರ ಅವಳ ಮಾತುಗಳಲ್ಲಿ ಅಪರಂಜಿ ಎಷ್ಟಿದೆ ಎಂದು ಅಳತೆಗೆ ಕುಳಿತ.ಅವಳ ಧ್ವನಿಯಲ್ಲಿ ಇರಬಹುದಾದ ಮಾರ್ದವವನ್ನು ಗುರುತಿಸಿದ.ತಾನು ಬರೆಯಬೇಕೆಂದಿದ್ದ ಕಥೆಯನ್ನು ಆಕೆಗೆ ಹೇಳಲೋ ಬೇಡವೋ ಎಂದು ಅರೆಕ್ಷಣ ಯೋಚಿಸಿ ಫೋನ್ ಕತ್ತರಿಸಿಕೊಂಡ.ಅವಳಿಗೆ ಹೇಳಬೇಕಾದ್ದು ಏನೂ ಇಲ್ಲ ಎಂದು ತನಗೆ ತಾನೇ ಖಚಿತ ಮಾಡಿಕೊಂಡು ಕಾರನ್ನು  ರಾಜಧಾನಿಯ ಹಾದಿಯತ್ತ ಅಟ್ಟಿದ.

ಎರಡನೇ ಎಸಳು:

ಕಥೆಗಾರ ಇಷ್ಟೆಲ್ಲಾ ಆದಮೇಲೆ ಬರೆದಿಟ್ಟ ಕಥೆಯೊಂದು ಇಲ್ಲಿದೆ,ಆ ಕಥೆಯಲ್ಲಿ ಅವನ ಅಂತ್ಯವಿದೆಯೇ ಗೊತ್ತಾಗುತ್ತಿಲ್ಲ.ಆದರೆ ಕಥೆಗಾರನ ಕೋಠಿಯಲ್ಲಿ ಈ ಕಥೆ ಅಡಗಿ ಕುಳಿತಿತ್ತು ಎಂಬುದಕ್ಕೆ ಅವನು ದಾಖಲಿಸಿದ ಟಿಪ್ಪಣಿಗಳೇ ಸಾಕ್ಷಿ ಎನಿಸುತ್ತಿದೆ.
 ಮೂರನೇ ಈ ಜಾವದಲ್ಲಿ ಬದುಕು ಭಾರ ಎನಿಸುತ್ತಿದೆ.ಹೊರಟು ಬಿಡೋಣ ಎಂದುಕೊಂಡರೆ ಯಾರೋ ಕಾಲು ಹಿಡಿದುಕೊಂಡ ಹಾಗೇ ಆಗುತ್ತಿದೆ.ಯಾರು ಎಂದು ನೋಡುತ್ತೇನೆ. ಅಸ್ತಮಾನ ಹೂವು.ಮನೆ ಹೊರಗೆ ಬಲಭಾಗದಲ್ಲಿ ಸಾಲುಸಾಲಾಗಿ ನಾನೇ ನೆಟ್ಟ ಗಿಡಗಳಲ್ಲಿ  ಸಂಜೆ ಅರಳುವ ಹೂವು ಈ ತನಕ ಅರ್ಥವಾಗಿಲ್ಲ.
 ಮೊನ್ನೆ ಒಂದು ಅಸ್ತಮಾನ ಹೂವು ಅರಳಿತ್ತು.ನಾಳೆ ಇನ್ನೊಂದು ಅರಳುತ್ತದೆ ಎಂದು ಈ ಹೂವನ್ನು ನೋಡಿ ವಾಪಾಸ್ಸಾಗಿದ್ದೆ.ಆದರೆ ಆ ಹೂವು ಅರಳಲಿಲ್ಲ.ನಿನ್ನೆಯ ಅಸ್ತಮಾನ ಹೂವಿನ ಜೊತೆ ಮಾತೇ ಆಡಲಿಲ್ಲ
ಅಸ್ತಮಾನ ಹೂವು ಇರುವ ತನಕ ಹೊರಡಲಾರೆ.ಒಂದಲ್ಲ ಒಂದು ದಿನ ಈ ಅಸ್ತಮಾನ ಹೂವು ನನ್ನನ್ನು ಪೂರ್ತಿ ಆವರಿಸಬೇಕು.ಅಷ್ಟರ ತನಕ ಕಾಯುತ್ತೇನೆ
ಅದೊಂದು ದೇಶ.ಆ ದೇಶಕ್ಕೊಬ್ಬ ರಾಜ.ರಾಜನ ಅರಮನೆಯಲ್ಲಿ ನೂರಾರು ಕೋಣೆಗಳು.ತುಂಬಿ ತುಳುಕುವ ಭಂಡಾರಗಳು.ಆದರೆ  ಅರಮನೆಯಲ್ಲಿ ಒಂದು ಕೊಠಡಿ ಮಾತ್ರಾ ಸದಾ ಖಾಲಿ.ಆ ಖಾಲಿ ಕೊಠಡಿಯ ಬಾಗಿಲು ಈ ತನಕ ಯಾರೂ ತೆರೆದಿಲ್ಲ.ಒಂದಲ್ಲ ಒಂದು ಒಂದು ದಿನ ಈ ಕೊಠಡಿ ತೆರೆಯಬೇಕು ಎಂದು ರಾಜನಿಗೆ ಛಲ.ಆದರೆ ರಾಜ ಯಾವತ್ತೂ ಏಕಾಂಗಿಯೇ ಅಲ್ಲ.ಅವನ ಸುತ್ತ ಅವನ ಪರಿವಾರ.ಕುಳಿತರೆ ನಿಂತರೆ ಆಳುಕಾಳುಗಳು,ಭಟರು,ಸಖಿಯರು,ಮಂತ್ರಿಮಾಗಧರು.ರಾಜ ಅಂತಃಪುರಕ್ಕೆ ಬಂದರೆ ಅಲ್ಲಿ ಅವನಿಗಾಗಿ ಕಾದು ಕುಳಿತ ಮಹಾರಾಣಿ.
ರಾಜ ಅದೆಷ್ಟೋ ಕಾಲ ತಾನು ಏಕಾಂಗಿಯಾಗಲು ಪ್ರಯಾಸಪಟ್ಟ.ಏಕಾಂಗಿಯಾಗಲು ಯತ್ನಿಸಿದಾಗಲೆಲ್ಲಾ ಅವನ ಅಂಗರಕ್ಷಕರು ಓಡೋಡಿ ಬಂದು ಅವನನ್ನು ಮುತ್ತಿಕೊಳ್ಳುತ್ತಿದ್ದರು.ಎಲ್ಲಿ ರಾಜ ಕಳೆದುಹೋಗುವನೋ ಎಂದು ಅವನ ಪ್ರಧಾನಮಂತ್ರಿ ರಾಜನಿಗೆ ಮತ್ತಷ್ಟು ಮತ್ತಷ್ಟು ಕಾವಲು ಪಡೆ ಕಟ್ಟಿದ್ದ.ರಾಜ ಪರಿಪರಿಯಾಗಿ ಹೇಳಿದರೂ ಪ್ರಧಾನಿ ಒಪ್ಪುತ್ತಿರಲಿಲ್ಲ.ಇದು ನಮ್ಮ ದೇಶದ ಭದ್ರತೆಯ ವಿಚಾರ,ರಾಜ ಸುರಕ್ಷಿತವಾಗಿರಬೇಕು ಎಂಬುದು ನಮ್ಮ ಸಂವಿಧಾನ ಎನ್ನುತ್ತಿದ್ದ. ರಾಜ ಪಟ್ಟದರಸಿಯ ಮುಂದೆ ಗೋಳೋ ಎಂದು ಅತ್ತ,ನನಗೂ ಒಂದು ಖಾಸಗಿ ಬದುಕು ಬೇಕು.ಒಂದು ಹನ್ನೆರಡು ಘಳಿಗೆಯಾದರೂ ಏಕಾಂತ ಕೊಡುವಂತೆ ಮಾಡು ಎಂದು ಬೇಡಿದ.ರಾಣಿಗೆ ಭಯವಾಯಿತು.ಇಲ್ಲ ಸಾಧ್ಯವೇ ಇಲ್ಲ ಎಂದಳು ರಾಣಿ.
ರಾಜನಿಗೆ ಆ ಖಾಲಿ ಕೊಠಡಿಯನ್ನು ತೆರೆಯುವ ಆಸೆ.ಅದರೊಳಗೆ ಏನಿದೆ ಎಂದು ಒಂದೇ ಒಂದು ಸಾರಿ ನೋಡಿಬಿಡಬೇಕು.ಆಮೇಲೆ ತಾನು ಇರುವಷ್ಟು ಕಾಲ ಇಡೀ ರಾಜ್ಯ ಹೇಳಿದಂತೆ ಕೇಳಿಕೊಂಡಿರುತ್ತೇನೆ ಎಂದುಕೊಳ್ಳುತ್ತಿದ್ದ.ಅವನು ಖಾಸಗಿಯಾಗಿ ಹೀಗೆ ಯೋಚಿಸುವಾಗಲೂ ಸುತ್ತಾ ಮುತ್ತಾ ಹತ್ತಾರು ಮಂದಿ ನಿಂತು ರಾಜನನ್ನು ಕಾಡುತ್ತಿದ್ದರು.
ಅಂತೂ ರಾಜನಿಗೂ ಒಂದು ದಿನ ಅವನದ್ದೇ ಆಗುವ ಕ್ಷಣ ಬಂದೇ ಬಂತು.ಬಹುಶಃ ಅರಮನೆಯಲ್ಲಿ ಯಾವುದೋ ಉತ್ಸವ ಶುರುವಾಗಿದ್ದಿರಬೇಕು.ಅಥವಾ ಇಡೀ ಅರಮನೆಗೆ ಜ್ವರ ಬಂದು ಮಲಗಿದ್ದಿರಬೇಕು.ಅಥವಾ ಅರಮನೆಯ ಪರಿವಾರಕ್ಕೆಲ್ಲಾ ಕ್ಷಣಕಾಲ ಮಂಕು ಆವರಿಸಿದ್ದಿರಬೇಕು.
ಏನೋ ಎತ್ತಲೋ ಅಂತೂ ಆ ಮೂರನೇ ಜಾವದಲ್ಲಿ ರಾಜ ಎದ್ದು ಕುಳಿತ.ಆತ ಒಂಟಿಯಾಗಿದ್ದ.ತಾನು ನಿಜಕ್ಕೂ ಒಂಟಿಯೇ ಎಂದು ಅವನಿಗೆ ಎಲ್ಲಿಲ್ಲದ ಸಂತೋಷ ಆವರಿಸಿತು.ಕುಣಿದು ಕುಪ್ಪಳಿಸಬೇಕು ಅನಿಸಿತು.ಸೀದಾ ಸೀದಾ ಅರಮನೆಯ ಆ ಖಾಲಿ ಕೊಠಡಿಯತ್ತ ಸಾಗಿದ.ಯಾರ ಕಾಲದಲ್ಲಿ ಹಾಕಿದ ಬಾಗಿಲು ಮತ್ತೆಂದೂ ತೆರೆದೇ ಇರದ ಬಾಗಿಲು.ದೂಡಿದರೆ ಇಡೀ ಅರಮನೆಯೇ ಬೆಚ್ಚಿ ಬೀಳುವಂಥ ಕೀರಲು ಸ್ವರ ಹೊರಡಬಹುದು.ಆದದ್ದಾಗಲಿ ಎಂದು ರಾಜ ಬಾಗಿಲು ದೂಡಿದ.ಯಾರೋ ಅಪ್ಪಿ ಬರಸೆಳೆದು ಒಳಗೆ ಎಳೆದುಕೊಂಡ ಹಾಗಾಯಿತು.

ಮೂರನೇ ಎಸಳು:

ಲ್ಯಾಪ್‌ಟಾಪ್ ಕೇಳಿತು,ಕಥೆಗಾರ ಇದನ್ನೆಲ್ಲಾ ಸೇವ್ ಮಾಡಿಕೊಳ್ಳಲಾ?
ಕಥೆಗಾರ ಕಂಟ್ರೋಲ್ ಎಸ್ ಕೊಡಲೇ ಬೇಡವೇ ? ನೀವೇ ಹೇಳಬೇಕು.ಎಷ್ಟಾದರೂ ನಿಮ್ಮ ಮುದ್ದಿನ ಕಥೆಗಾರನಲ್ಲವೇ?

20161117

ಪುನರಾಗಮನಾಯಚ

“A great cup of coffee cannot reject us. A song from our favorite band does not leave us feeling useless. But when we choose to share our life with another person, we inevitably make a choice to become vulnerable.”


ಇದೆಲ್ಲಾ ಆಗಿ ಹತ್ತು ವರ್ಷಗಳೇ ಆಗಿವೆ.
ಪಕ್ಕದಲ್ಲಿ ಕುಳಿತ ಮಗಳು ಕಂಕುಳದ ಮಟ್ಟಕ್ಕೆ ಬಂದಿದ್ದಾಳೆ.ನಿನ್ನೆ ಅವಳು ಸ್ಕೂಟಿ ಮೇಲೆ ಸವಾರಿ ಮಾಡುತ್ತಾ ಬಂದಿಳಿದ ರಭಸವನ್ನು ಗಮನಿಸಿದಾಗ ಅದೆಲ್ಲೋ ಇದ್ದ ಅಮ್ಮ ಅರಳಿ ನಿಲ್ಲುತ್ತಿದ್ದಾಳೆ.ಪುಟ್ಟಪುಟ್ಟ ಮಕ್ಕಳಿಗೂ ಅನುಕೂಲವಾಗಲೆಂದು ಈ ಸಣ್ಣಸಣ್ಣ ಸ್ಕೂಟರ್ ಅನ್ವೇಷಣೆ ಮಾಡಿದ್ದಾರಾ ಎಂದು ಮಗಳು ಆಗಾಗ್ಗೆ ಕೇಳುತ್ತಿದ್ದಾಗ ನಗು ಒತ್ತರಿಸಿ ಬರುತ್ತದೆ.
ದೇವಸ್ಥಾನದ ಹಿಂಭಾಗದಲ್ಲಿ ಕಟ್ಟಿದ ದೊಡ್ಡ ಹಾಲ್.
ಆ ಹಾಲ್‌ನಲ್ಲಿ ನಡೆಯುತ್ತಿದ್ದ ಆ ಧ್ಯಾನಶಿಬಿರ.ಅಲ್ಲಿ ತರಬೇತಿ ನೀಡುತ್ತಿದ್ದ ರಾಜೇಶ.ಅವನ ಮುದ್ದು ಮುಖ,ಆ ನಗು,ಕುಡಿ ಮೀಸೆಯ ಮೋಹಕ ಛಾಪು.ವೈಯಾರಕ್ಕೆ ಏನೂ ಕಮ್ಮಿಯಿಲ್ಲದ ಶೈಲಿ.
ನನ್ನ ನಂಬರ್ ಬರಕೊಳ್ಳಿ.
ಧ್ಯಾನ ಶಿಬಿರದ ಕೊನೆಯ ದಿನ ಕೊನೆಯ ಹೊತ್ತಿಗೆ ರಾಜೇಶ ಇನ್ನೂ ಜಮಖಾನದಲ್ಲಿ ಕುಳಿತ ಶಿಬಿರಾರ್ಥಿಗಳಿಗೆ ಅಪ್ಪಣೆ ಕೊಡಿಸುತ್ತಾನೆ,
೯೮....ನಿಂದ ಶುರುವಾಗಿ ಮತ್ತೆಲ್ಲೋ ೮ಕ್ಕೇ ಆ ನಂಬರ್ ಕೊನೆಗೊಳ್ಳುತ್ತಿದ್ದ ನೆನಪು.
ಮೆಲ್ಲಗೇ ಅರ್ಧ ನಿಮೀಲನ ಮಾಡಿದ ಕಣ್ಣುಗಳನ್ನು ಸಾಧನಾ ಕದ್ದು ನೋಡುತ್ತಾಳೆ.ಮತ್ತೊಮ್ಮೆ ಸುತ್ತಮುತ್ತ ಜಮಖಾನದಲ್ಲಿ ಕುಳಿತಿದ್ದವರತ್ತ ಕಣ್ಣುಹಾಯಿಸುತ್ತಾಳೆ.ಎಲ್ಲರೂ ಆ ನೋಟ್ ಪ್ಯಾಡ್ ಮೇಲೆ ರಾಜೇಶನ ನಂಬರ್ ಬರೆದುಕೊಳ್ಳುವುದರಲ್ಲಿ ಫುಲ್ ಬಿಜಿ.
ಸಣ್ಣಗೆ ನಗು ಬರುತ್ತದೆ.
ಈ ನಂಬರ್ ಬರೆದಿಟ್ಟುಕೊಂಡು ಏನು ಮಾಡುತ್ತಾರೋ?
ಮತ್ತೊಮ್ಮೆ ರಾಜೇಶನನ್ನು ನೋಡುತ್ತಾಳೆ.ಮೈ ಪುಳಕಿತವಾಗುತ್ತದೆ.ರಾಜೇಶನೂ ಅವಳನ್ನೇ ನೋಡುತ್ತಿದ್ದಾನೆ.
ನಂಬರ್ ಬರೆದುಕೊಂಡಿಲ್ಲವಾ ಮಿಸ್ ನೀವು?
ಹಾಂ ಹಾ..ಹಾ..
ಪಕ್ಕದಲ್ಲಿದ್ದ ಬ್ಯಾಗ್‌ನೊಳಗೆ ಕೈ ತಳ್ಳಿ ಪೆನ್ನಿಗಾಗಿ ತಡಕಾಡುತ್ತಾಳೆ.
ರಾಜೇಶ ನಂಬರ್ ಮತ್ತೆ ಮತ್ತೆ ಉಸುರುತ್ತಿದ್ದಾನೆ.ಸಾಧನಾ ಅವನು ಹೇಳಿದಷ್ಟೂ ಸಾರಿ ಅದನ್ನು ಬರೆದುಕೊಂಡಿದ್ದಾಳೆ.
ಆ ರಾತ್ರಿ ಮಧುವಿನ ತೊಡೆ ಮೇಲೆ ಮಲಗಿಕೊಂಡ ಸಾಧನಾ ರಾಜೇಶನ ನಂಬರ್‌ಗೆ ಒಂದು ಮೆಸೇಜು ರವಾನಿಸುತ್ತಾಳೆ.
ಯೂ ಆರ್ ಸೋ ಕ್ಯೂಟ್.
ಮಧು ಬಿದ್ದು ಬಿದ್ದು ನಗುತ್ತಾಳೆ.
ಸಾಧನಾಳೂ.
ಏನ್ ಅಂದ್ಕೊಂಡಾರೋ ಏನೋ ಎಂದು ಮಧು ಪ್ರಶ್ನೆ.
ಏನ್ ಅಂದ್ಕೊಳ್ಳೋದು,ಹುಡುಗಿ ಮೆಸೇಜಿಗೆ ಅವನ ಧ್ಯಾನವೇ ಅಲ್ಲಾಡುತ್ತದೆ ನೋಡುತ್ತಾ ಇರು ಎಂದು ಸಾಧನಾ ಹೇಳಿದರೆ ಮಧು ಅವಳನ್ನು ತನ್ನ ತೊಡೆ ಮೇಲಿಂದ ಕೆಡಹಿ ನನ್ನವನ ಕಾಲ್ ಬಂತು ಎಂದು ಓಡುತ್ತಾಳೆ.
ಅವಳ ತೊಡೆಯಿಂದ ತಲೆ ಹಾಸಿಗೆ ಮೇಲೆ ಧೊಪ್ಪನೇ ಉರುಳಿದಾಗಲೇ ಮೊಬೈಲ್ ಮೇಲೆ ಮೆಸೇಜು ಬಂದು ಬಿದ್ದಿದೆ.
ಆಮೇಲಿನ ರಾಜೇಶನ ಯಾವ ಮೆಸೇಜೂ ಮಧು ಓದಿಲ್ಲ.
ಮೆಸೇಜುಗಳನ್ನು ಜತನದಿಂದ ತನ್ನ ಫೋಲ್ಡರ್‌ನಲ್ಲಿ ಸಾಧನಾ ಕಾಪಾಡಿಕೊಂಡಿಟ್ಟಿದ್ದಾಳೆ.ಆಗಾಗ್ಗೆ ಓದುತ್ತಿರುತ್ತಾಳೆ.ಪ್ರತಿಯೊಂದು ಬಾರಿ ಮೆಸೇಜು ಬಾಕ್ಸ್ ಓದಿ ಬಂದ ಮೇಲೆ ಮೈಯೆಲ್ಲಾ ನವಿರಾಗುತ್ತಿದೆ.
ಎರಡು ವರ್ಷಗಳಿಂದ ಅಟ್ಟಾಡಿಸುತ್ತಿದ್ದ ಸುಧಾಮನ ಮೆಸೇಜುಗಳೆಲ್ಲಾ ನಿರ್ವೀರ್ಯ ಎನಿಸಲು ತೊಡಗುತ್ತದೆ.
ಫ್ಲರ್ಟ್ ಮಾಡುತ್ತಿಲ್ಲ ತಾನೇ ನೀನು ಎಂದು ಸುಧಾಮ ಕೇಳಿದಾಗ ಸಾಧನಾಗೆ ಅಚ್ಚರಿ.
ಎಲಾ ಇವನಾ..ಇವನಿಗೆ ಹೇಗೆ ಗೊತ್ತಾಯಿತು?
ಒಂದು ಲೆವೆಲ್ ಮೈಂಟೇನ್ ಮಾಡಬೇಕು ಕಣೇ.ಎಲ್ಲಾ ಹುಡುಗರನ್ನೂ ಏಕಕಾಲಕ್ಕೇ ನಿಭಾಯಿಸಬೇಕು ಅಂತಾನೇ ಹುಡುಗೀರಿಗೆ ದೇವರು ಕೊಟ್ಟ ವರಗಳೇ ಇವೆ ಎಂದಿದ್ದಳು ಸೋಫಿಯಾ.
ಥೋ ಇವಳಾ..
ನಗಬಾರದು.ನಾನು ನಿಜ ಹೇಳ್ತಾ ಇರೋದು.ದ್ರೌಪದಿಗೆ ಏನು ಹೆಸರು ಪಾಂಚಾಲಿ.ಆಕೆ ಪಾಂಚ್ ಹಸ್ಬೆಂಡನ್ನು ನಿಭಾಯಿಸ್ತಾ ಇರಲಿಲ್ಲವಾ? ಯೂ ಅಗ್ರೀ?
ಸೋಫಿಯಾ ಪಕಪಕ ನಗುತ್ತಾಳೆ.
ಸುಧಾಮನ ಜೊತೆ ಮೊದಲಾಗಿ ತುಟಿತುಟಿಗೆ ಅಂಟಿಸಿದಾಗ ಇದೇ ಮೊದಲು ಇದೇ ಕೊನೆ ಎಂದೇನೇದಾರೂ ಅನ್ನಿಸಿತ್ತಾ?
ನೋ ವೇ.
ಈಗ ರಾಜೇಶನ ಬೈಕ್ ಹಿಂದೆ ಕುಳಿತು ಅವನನ್ನು ಅರ್ಧ ತಬ್ಬಿಕೊಂಡು ಹೋಗುತ್ತಿದ್ದಾಗ ಬೇಡಬೇಡವೆಂದರೂ ಅವಳೇಕೆ ನೆನಪಾಗುತ್ತಾಳೆ,ನೆನಪಾಗಿ ಅದೇನೋ ಭಯ ಅಡರುತ್ತದೆ..
ರಜ್ಜೂ ನಿನ್ನ ವೈಫ್ ಈ ಸಿಟಿಯಲ್ಲೆಲ್ಲಾದರೂ ಓಡಾಡುತ್ತಿಲ್ಲ ತಾನೇ?
ಸುಧಾಮನ ಹೆಸರನ್ನು ಇಷ್ಟು ಕಾಲ ಮುದ್ದು ಎಂದು ಇಟ್ಟುಕೊಂಡಿದ್ದಾಗಿತ್ತು.ಇನ್ನು ಅದನ್ನು ಪ್ರಾಫೆಸ್ಸೆರ್ ಎಂದು ಬದಲಾಯಿಸಬೇಕು.ರಜ್ಜೂ ಮತ್ತು ಮುದ್ದು ಏಕಕಾಲದಲ್ಲಿ ಮೊಬೈಲ್ ಕಾಂಟಾಕ್ಟ್‌ನಲ್ಲಿ ಇರಲೇಬಾರದು.
ಮನಸ್ಸಲ್ಲೂ..
ಸುಧಾಮ ಕಾಲ್॒
ಎಂಗೇಜ್ ಬರುತ್ತಿದೆ,ಏನ್ ಸಮಾಚಾರ?ಎಷ್ಟು ಹೊತ್ತಿನಿಂದ ನಿನಗೆ ಟ್ರೈ ಮಾಡುತ್ತಿದ್ದೆ,ಯೂ ಆರ್ ಫುಲ್ ಬಿಝಿ.
ದರಿದ್ರ ..
ಕಾಲ್ ಮಾಡಿ ಪ್ರಾಣ ತಿನ್ತಾನೆ.ಇವನನ್ನು ಹೇಗೆ ನಿಭಾಯಿಸೋದು?ಸ್ವಲ್ಪ ಬಿಝಿ ಇದ್ದೆ ಎಂದರೆ ಮತ್ತೆ ಮತ್ತೆ ಹಿಂಸೆ ಕೊಡುತ್ತಾನೆ,ಹೇಗಾದರೂ ಮಾಡಿ ಇವನನ್ನು ಮಟ್ಟಹಾಕಬೇಕು.
ಅಯ್ಯೋ ಮುದ್ದೂ ಬಿಲೀವ್ ಮಿ.
ಸುಧಾಮನನ್ನು ಕರಗಿಸಲು ಅಷ್ಟು ಸಾಕು.
ಮಗಳು ಸ್ಕೂಟಿಯನ್ನು ಹಜಾರದೊಳಗೆ ನೂಕಿ ಇಟ್ಟು ಗೇಟ್ ಎಳೆದುಕೊಂಡು ಹಾಲಿನ ಪಾಕೇಟು ಎತ್ತಿ ತರುತ್ತಿದ್ದ ಹೊತ್ತಿನಲ್ಲಿ ಈ ರಾಜೇಶ ಏಕೆ ಹುಟ್ಟಿಕೊಂಡ ಮತ್ತೆ ಮನಸ್ಸಿನೊಳಗೆ?
ಸುಧಾಮ ಇನ್ನೂ ಅದೇ ಪ್ರೀತಿ,ಅದೇ ಬದುಕಿನ ಭಾವತೀವ್ರತೆ ಎಂದೆಲ್ಲಾ ಆಗಾಗ್ಗೆ ಪಾಠ ಮಾಡುತ್ತಾ ತಮ್ಮೊಳಗೆ ಯಾವ ಅನುಬಂಧಗಳೂ ಇರಲೇ ಇಲ್ಲ ಎಂಬ ಹಾಗೇ ಮಾತನಾಡುತ್ತಾನೆ.ಅವನ ಭಾಷಣಗಳನ್ನು ಆಗಾಗ್ಗೆ ಫೋನ್ ಒಳಗೆ ಕೇಳಿ ಕೇಳಿ ಚಿಟ್ಟು ಹಿಡಿಯುತ್ತದೆ.ಯಾವುದನ್ನು ಮರೆಯಬೇಕು ಎಂದು ಲೆಕ್ಕಿಸುತ್ತೇನೋ ಅದು ಮರಳಿ ಅಟ್ಟಾಡಿಸುತ್ತದೆ ಎಂದು ಸೋಫಿಯಾ ಹೇಳುತ್ತಿದ್ದಳು.ಈ ಸುಧಾಮನೂ ಹಾಗೇ.ಯಾವ ಘಳಿಗೆಯಲ್ಲಿ ಪ್ರೀತಿ,ಲಹರಿ ಅಂತ ಅಂಟಿಕೊಂಡನೋ?
ಈಗಂತೂ ನಾಸ್ಟಾಲ್ಜೀಯಾದ ಮದಕರಿ.ಆ ದಿನ ಆ ಕ್ಷಣ ಎಂದು ಸಾಯಿಸುತ್ತಾನೆ.ಎಷ್ಟು ಬಾರಿ ಹೇಳಿದ್ದೆ,ನನಗೆ ನನ್ನ ಮಗಳು,ಗಂಡ ಎಲ್ಲಾ ಮುಖ್ಯ.ನನ್ನ ಪ್ರೈಂಟೈಂ ಅವರಿಗೇ ಮೀಸಲು ಅಂತ.ಆಗೆಲ್ಲಾ ಗೋಣಾಡಿಸುತ್ತಾನೆ,ಮತ್ತೆ ಮತ್ತೆ ಬಂದುಹೋಗುತ್ತಾನೆ.
ಡಿಸ್ಟರ್‍ಬ್ಡ್.
ಹೇಳೋದಕ್ಕೆ ಆಗುತ್ತಿಲ್ಲ.ಅದಕ್ಕೇ ಇಂವನಿಗೆ ಹೇಳಿದ್ದೆ,ನನ್ನ ಬೆಸ್ಟ್ ಕೋಚ್.ಇವರ ಜೊತೆ ಏನಾದರೂ ನಾನು ಫುಲ್ ಟೈಂ ಕೋಚ್ ತಗೊಳ್ತಾ ಇದ್ರೆ ಈಗ ನ್ಯಾಶನಲ್ ಪ್ಲೇಯರ್ ಆಗುತ್ತಿದ್ದೆ.
ಇಂವ ನಗುನಗುತ್ತಾ ಕೇಳಿಸಿಕೊಳ್ಳುತ್ತಾ ಇದ್ದರೆ,ಭಡವ ಸುಧಾಮ,ಈ ಸಾಧನಾ ಮೋಸ್ಟ್ ಟಾಲೆಂಟೆಡ್ ಗಾಲ್ ಈ ಹ್ಯಾವ್ ಏವರ್ ಕಂ ಎಕ್ರಾಸ್ ಎಂದೆಲ್ಲಾ ಬಡಬಡಿಸುತ್ತಿದ್ದ.
ಅಗತ್ಯವಿತ್ತಾ ಎಂದುಕೊಳ್ಳುತ್ತೇನೆ.
ಒಡೆದ ಕೊಳಲು ಕಣೇ ನಾನು,ನಾದ ಹೊರಡದು ನನ್ನಲ್ಲಿ ಎಂದಿದ್ದ.ಹೂಂ ಎಂದಿದ್ದೆ.ನೀನು ಒಡೆಯದ ಕೊಳಲೇ ಆಗಿದ್ದರೂ ನಾನೇಕೆ ನಿನ್ನಲ್ಲಿ ನಾದ ಹೊರಡಿಸಬೇಕು ಎಂದು ಕೇಳಬೇಕು ಎಂದುಕೊಂಡಿದ್ದ ಮಾತುಗಳನ್ನು ಕಡಿದು ಹಾಕಿದ್ದೆ.
ಮಗಳು ಅಮ್ಮಾ ಎನ್ನುತ್ತಿದ್ದ ಹಾಗೇ ಸಾಧನಾ ಮತ್ತೆ ಮರುಲೋಕ ಪ್ರವೇಶಿಸಿದಳು.ಸ್ವಿಮ್ಮಿಂಗ್ ಕ್ಲಾಸ್ ಎಂದದ್ದೂ ಕೇಳಿಸಿಕೊಂಡದ್ದಾಯಿತು.ಮಗಳು ಹಜಾರ ದಾಟಿ ಗೇಟನ್ನು ದೂಡಿ ಲಾಕ್ ಹಾಕಿಕೊಂಡ ಕಣಕ್ ಶಬ್ದ ಕಿವಿಗೆ ಬೀಳುತ್ತಿದ್ದಂತೆ ಬಾಗಿಲು ದೂಡಿ ಕದವಿಕ್ಕಿಕೊಂಡಳು ಸಾಧನಾ,
ಎಲ್ಲಿತ್ತೋ ಏನೋ ಹುಕ್ಕಿ ಏನಾದರೂ ಮಾಡಿ ರಾಜೇಶನ ನಂಬರ್ ಹುಡುಕಬೇಕು ಎಂದು ಹಳೆಯ ಪುಸ್ತಕಗಳನ್ನೆಲ್ಲಾ ಹರಹಿ ಕುಳಿತಳು.
ಕನ್ನಡ ಇಂಗ್ಲೀಷು,ಹಿಂದಿ ಪುಸ್ತಕಗಳು.ಎಲ್ಲಾ ಈ ಪುಟ್ಟಿಯದ್ದು.ನನ್ನದೂ ಅಂತ ಒಂದಾದರೂ ಪುಸ್ತಕ ಬೇಕಿತ್ತು.ಇಷ್ಟೊಂದು ಪುಸ್ತಕದೊಳಗೆ ಇಂವನದ್ದು ಅಂತ ಒಂದಾದರೂ ಪುಸ್ತಕ ಇಲ್ಲ.
ಏಯ್ ನಾವೆಲ್ಲಾ ಓದೋ ಮಂದೀನೇ ಅಲ್ಲ.ಈ ಪುಸ್ತಕ ಓದೋದು ಪುಸ್ತಕ ಬರೆಯೋದು ಎಲ್ಲಾ ಮಸ್ತಕ ಸರಿ ಇಲ್ಲದವರೂ ಅಂತ ಪದ್ಯ ಓದಿದ ಹಾಗೇ ಹೇಳಿ ನಕ್ಕಿದ್ದ ಇಂವ.
ಓದೋ

All living beings deserve to be cherished because of the tremendous kindness they have shown us
ದನ್ನು ಕಲಿಸಿದ ರಾಜೇಶ ಧ್ಯಾನದ ಕುರಿತು ಕೊಟ್ಟ ಪುಸ್ತಕ ಹುಡುಕುತ್ತಾಳೆ ಸಾಧನಾ.

ಅಂತ ಶುರುವಿಟ್ಟುಕೊಂಡಿದ್ದ ಆ ಶಿಬಿರದ ಅವನ ಮಾತುಗಳು.
ಓಹ್ ರಾಜೇಶ..
ಅವನ ಮಧುರವಾದ ಧ್ವನಿಯಲ್ಲಿ ಅವನು ತನ್ನೊಬ್ಬಳ ಕಿವಿಗೇ ಎಂಬ ಹಾಗೇ ಉಸುರಿದ್ದನಾ?


Life is not in one's self, life is somewhere else..

ಅವನೇ ಕೊಟ್ಟ ಪುಸ್ತಕದಲ್ಲಿ ಅವನ ಸಹಿಗೂ ಮುನ್ನ ಅವನೇ ಬರೆದ ಸಾಲುಗಳಿವು.

Life is not in one's self, life is somewhere else..
ಹತ್ತು ಬಾರಿ ಓದುತ್ತಾಳೆ ಸಾಧನಾ.
ಅವನ ಕೊರಳ ಮೇಲೆ ಅಲ್ಲೆಲ್ಲೋ ಇದ್ದ ಆ ದದ್ದುವನ್ನು ಬೆರಳಲ್ಲಿ ಚಿವುಟಿದಾಗ ಆಯ್..ಅಂತ ಕಿರುಚಿದ್ದು,ಜೋರಾಗಿ ತಾನು ನಕ್ಕಿದ್ದು ಅದಕ್ಕೆ ಪ್ರತಿಯಾಗಿ ಅವನು ಬೆರಳುಗಳಲ್ಲಿ ಕಿಲಿಕಿಲಿ ಅಂತ ಗಿಗಲ್ ಮಾಡಿ ಸಾಕುಬೇಕು ಮಾಡಿ ನಗಿಸಿದ್ದು..
ರಾಜೇಶಾ..ಪ್ಲೀಸ್ ಎಲ್ಲಾದರೂ ಒಂದು ನಂಬರ್ ಬರೆದಿಟ್ಟಿರೋ ಎಂದು ಸಾಧನಾ ಮತ್ತೆ ಮತ್ತೆ ಪುಸ್ತಕ ತಡುವುತ್ತಾಳೆ,ಪುಟಗಳಿಂದ ಪುಟಗಳನ್ನು ತಿರುವುತ್ತಾಳೆ.


As our attachments start to weaken, we may experience a certain peace in our mind…
ಇದು ಬರೆದವರು ಯಾರು? ಸಾಧನಾ ಮತ್ತೆ ಮತ್ತೆ ಕಣ್ಣಿಟ್ಟು ಅದೇ ಅಕ್ಷರಗಳನ್ನು ನೋಡುತ್ತಾಳೆ.ಇಷ್ಟು ಕಾಲ ಈ ಸಾಲುಗಳನ್ನು ತಾನು ಓದೇ ಇಲ್ಲವಲ್ಲ..
ಲವ್ ಮತ್ತು ಕಂಪಾಶನ್ ನಮ್ಮದು ಅಂತ ನಮಗಾಗಬೇಕಾದರೆ ಅದು ಸಂಪೂರ್ಣವಾಗಿ ನಮ್ಮಲ್ಲಿ ಸಹಜವಾಗಿ ಹುಟ್ಟಿಕೊಂಡಿರಬೇಕು ಕಣೇ ಎಂದಿದ್ದ ರಾಜೇಶ.ಶುರುವಲ್ಲಿ ಇದೆಲ್ಲಾ ಒಂಥರಾ ಆರ್‍ಟಿಫಿಶಿಯಲ್ ಮತ್ತು ಫ್ಯಾಬ್ರಿಕೇಟೆಡ್ ಅಟಿಟ್ಯೂಡ್ ಆಗಿರುತ್ತದೆ.ಅಷ್ಟಕ್ಕೂ this love is partial because it is selective, and it comes from our attachment ಕಣೇ.ನಾನು ನನ್ನ ಹೆಂಡತಿಯ ಜೊತೆಗೂ ಇದನ್ನೇ ಹೇಳುತ್ತಿದ್ದೆ.ಆದರೆ ಅವಳು ಒಪ್ಪುತ್ತಾನೇ ಇರಲಿಲ್ಲ.ನಿನ್ನ  ಮೌನ ನೋಡಿದರೆ ನೀನು ಅರ್ಧ ಒಪ್ಪಿದ ಹಾಗೇ ಕಾಣಿಸುತ್ತಿದೆ ಅಲ್ಲವೇನೇ?

ರಾಜೇಶ ಮಾತನಾಡುತ್ತಿದ್ದರೆ ಅವನ ಕಣ್ಣುಗಳಲ್ಲೇ ಹುಗಿದುಹೋಗಿದ್ದೆ..ಹ್ಮ್..

ಸಾಧನಾ ಆ ಪುಸ್ತಕವನ್ನು ಅರಳಿಸುತ್ತಾಳೆ.
ನಡುನಡುವಿನ ಪುಟಗಳನ್ನು ಮೂಸುತ್ತಾಳೆ.ಅಲ್ಲಿ ಆ ಕಾಗದದ ಘಮ ಅವಳನ್ನು ಸರ್ರನೇ ಎಳೆದೊಯ್ಯುತ್ತಿದ್ದಂತೆ ಭಾಸವಾಗುತ್ತದೆ.
ಕೊನೆಗೂ ಈ ಪ್ರೀತಿ ಎನ್ನೋದು ನಮ್ಮನ್ನು ಎನ್‌ಲೈಟ್‌ನ್ಮೆಂಟ್‌ನತ್ತ ಒಪ್ಪಿಸಿಕೊಳ್ಳುತ್ತದೆ.ಅದು ನಮಗೆ ಅರ್ಥವಾಗಬೇಕು ಅಷ್ಟೇ.ಆದರೆ ದುರದೃಷ್ಟ ಎಂದರೆ ನಮಗೆ ಅರ್ಥವಾಗುವ ವೇಳೆಗೆ ಆ ಪ್ರೀತಿ ನಮ್ಮನ್ನು ಬಿಟ್ಟೇ ಹೋಗಿರುತ್ತದೆ.
ಸಾಧನಾ ಪುಸ್ತಕದೊಳಗೆ ಮುಖ ಹುದುಗಿಸಿ ಬಿಕ್ಕಿ ಬಿಕ್ಕಿ ಅಳುತ್ತಾಳೆ.
ಈ ವೇಳೆ ಈ ಪುಟ್ಟ ಮನೆಯಲ್ಲಿ ಒಂದೇ ಒಂದು ಸಾರೆ ನನ್ನ ಜೊತೆ ರಾಜೇಶ ಇರಬೇಕಿತ್ತು ಎಂದು ಸಾಧನಾಳಿಗೆ ಅನಿಸಿತು ಎಂದು ಕಥೆಗಾರ ಹೇಳುತ್ತಾ ಕಥೆ ಮುಗಿಸುತ್ತಾನೆ.ಅದಕ್ಕೂ ಮುನ್ನ ಕಥೆಗಾರನೇ ಸಾಧನಾಳಿಗೆ ಕಳುಹಿಸಬೇಕು ಎಂದಿದ್ದ ಸಂದೇಶ ಇಂತಿದೆ,
ನಿಜಕ್ಕೂ ಅದು ನಿನ್ನದೇ ಆಗಿರಬೇಕು ಅಂದರೆ ಅದನ್ನು ನೀನು ನಿನ್ನಲ್ಲೇ ಬಚ್ಚಿಟ್ಟುಕೊಳ್ಳಬೇಕು.ಇನ್ನೊಬ್ಬರಿಗೆ ಕೊಟ್ಟರೆ,ಅದು ಆಮೇಲೆ ನಿನ್ನದಾಗಿರುವುದಾದರೂ ಹೇಗೆ?