20150916

ನೆಲಬಿಟ್ಟ ನರ ಮತ್ತು ಮರ ಬಿಟ್ಟ ವಾನರ
ನೆಲ ಬಿಟ್ಟ ಮನುಷ್ಯ ಮತ್ತು ಮರ ಬಿಟ್ಟ ಮಂಗ ಎರಡೂ ಒಂದೇ ಎಂದರು ಅವರು.
ನಾನು ಕ್ಷಣ ಕಾಲ ಅವರ ಆ ಒಂದೇ ಸಾಲಿನ ಮಾತಿನ ಹಿಂದೆ ಇರಬಹುದಾದ ಹಲವು ಗ್ರಹಿಕೆಗಳನ್ನು ಊಹಿಸತೊಡಗಿದೆ.
ಬೆಚ್ಚಿಬಿದ್ದ ಹಾಗಾಯಿತು.
ನನಗೆ ಆಸ್ತಿ ಬೇಡ ಅಂತಲ್ಲ.ನನ್ನ ಮಕ್ಕಳಿಗೆ ಬೇಡವಂತೆ.ಮೈಯಲ್ಲಿ ಕಸುವಿದ್ದಾಗ ತುಂಡುಬಟ್ಟೆ ಉಟ್ಟು ದುಡಿದಿದ್ದೇನೆ.ಈಗ  ಈ ತೋಟ ಹೊಲ ನನ್ನ ಕಣ್ಣೆದುರೇ ಅಧೋಗತಿಗೆ ತಲುಪುವುದನ್ನು ನೋಡಲಾರೆ.ಅದಕ್ಕಾಗಿ ಆಸ್ತಿ ಮಾರಿ ಇಲ್ಲಿ ಬಂದು ಮಗನ ಜೊತೆ ಅಪಾರ್ಟ್ಮೆಂಟಲ್ಲಿ ಇದ್ದೇನೆ ಎಂದು ಕಾರ್ಯವಾಸೀ ಕಥೆಗಟ್ಟುವ ಹಿರಿಯ ಜೀವಗಳನ್ನು ನಾನು ಈಗೀಗ ನೋಡುತ್ತಿರುವುದು ಒಂದಲ್ಲ,ಹತ್ತಲ್ಲ,ನೂರಲ್ಲ..
ಮಂಗನಿಂದಲೇ ಆರಂಭಿಸಿಕೊಂಡಾಗ ನನಗೆ ಅಪ್ಪ ಹೇಳುತ್ತಿದ್ದ ಬೇಟೆಯ ಕಥೆಗಳು ನೆನಪಾಗತೊಡಗಿದವು.ಆಗ ನಮ್ಮ ಸಂಗಮಕ್ಷೇತ್ರ ಎಂಬ ಊರು ಊರೇ ಆಗಿರಲಿಲ್ಲವಂತೆ.ನೇತ್ರಾವತಿಗೆ ಸೇತುವೆಯೇ ಇರದ ಕಾಲವದು.ಕುಮಾರಧಾರೆಗೆ ಆಗಷ್ಟೇ ಬ್ರಿಟಿಷರು ಸೇತುವೆಯನ್ನು ಕಟ್ಟಿದ್ದರು.ಸೇತುವೆ ಕಟ್ಟಿದ ಕಾರಣದಿಂದಲೇ  ನೆತ್ತರಮುಜಲಿ ಎಂಬ ಭಯಾನಕ ವಿಷದ ಹಾವು ಮೂಡ್ಲಾಗಿ ಬರಲು ಆದದ್ದಂತೆ.ಇಲ್ಲವಾಗಿದ್ದರೆ ನೆತ್ತರಮುಜಲಿ ಪಡ್ಲಾಗಿಯೇ ಮಾತ್ರಾ ಇರುತ್ತಿದ್ದ ವಿಷಜಂತುವಾಗಿತ್ತು.
ಕುಮಾರಧಾರೆ ಸೇತುವೆಗೆ ಒಬ್ಬ ಮುದುಕನನ್ನು ಬಿಂದು ಕೊಟ್ಟಿದ್ದರು ಎಂಬುದು ಸಂಗಮಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಪ್ರಚಲಿತದಲ್ಲಿತ್ತು.ಸೇತುವೆಯ ಐದನೇ ಪಿಲ್ಲರ್ ಒಳಗೆ ಆ ಮುದುಕನನ್ನು  ಜೀವಂತ ಹುಗಿಯಲಾಯಿತು ಎಂದು ಹೇಳಲಾಗಿದ್ದ ಕಥೆಯನ್ನು ಕೇಳಿ ನಾವು ಎಲಿಮೆಂಟರಿ ಶಾಲೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕುಮಾರಧಾರೆಗೆ ಇಳಿದು ಐದನೇ ಕಂಬವನ್ನು ಹುಡುಕುತ್ತಿದ್ದೆವು.ಆದರೆ ಯಾವ ಬದಿಯಿಂದ ಐದನೇ ಕಂಬ ಎಂದು ಗೊತ್ತಾಗದೇ ವಾಪಾಸ್ಸಾಗುತ್ತಿದ್ದೆವು.
ಆ ದಿನಗಳಲ್ಲಿ ಸಂಗಮಕ್ಷೇತ್ರದ ಹೊರಗೆಲ್ಲಾ ದಟ್ಟ ಕಾಡೇ ಕಾಡು ಇದ್ದವು.ಕಾಡಿನೊಳಗೆ ಮಂಗಗಳ ಠಿಕಾಣಿ.ಬೇಕಾದಷ್ಟು ಹಣ್ಣು,ಚಿಗುರು,ಕಾಯಿ ಇರುತ್ತಿದ್ದರಿಂದ ಮಂಗಗಳಿಗೆ ಕಾಡನ್ನು ದಾಟಿ ಊರಿನತ್ತ ಬರಬೇಕಾದ ಧಾವಂತವಂತೂ ಇರಲೇ ಇಲ್ಲ.ಹಗಲು ಹೊತ್ತು ಕಾಡಿನೊಳಗೆ ಬೇಕಾದಂತೆ ಬೇಕಾಬಿಟ್ಟಿ ಅಡ್ಡಾಡುವ ಮಂಗಗಳು ರಾತ್ರಿ ಹೊತ್ತು ಮರದ ಕೊಂಬೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.ಆದರೆ ವರ್ಷದಲ್ಲಿ ಐವತ್ತು ಬಾರಿಯಾದರೂ ಮಂಗಗಳು ರಾತ್ರಿ ಕಿರಿಚಾಡುವುದು ಸಾಮಾನ್ಯವಾಗಿತ್ತು.
ಮಂಗಗಳು ರಾತ್ರಿ ಕಿರಿಚಾಡಲಿದವು ಎಂದರೆ ಚಿರತೆ ಬೇಟೆ ಹಿಡಿದಿದೆ ಎಂದೇ ಅರ್ಥ.ರಾತ್ರಿ ವೇಳೆ ಮಂಗಗಳ ವಿಶ್ರಾಂತಿ ಧಾಮಕ್ಕೆ ಎಗ್ಗಿಲ್ಲದೇ ನುಗ್ಗು ವ ಚಿರತೆ ತನಗೆ ಬೇಕಾದ ಫುಡ್ಡನ್ನು ಗುಳುಂಕಾಯಸ್ವಾಹಾ ಮಾಡಿಕೊಳ್ಳುತ್ತಿತ್ತು.
ಆದರೆ ಹುಲಿ ಮಾತ್ರಾ ಹೀಗಲ್ಲ.ಅದು ಹಗಲು ಹೊತ್ತೇ ತನ್ನ ಬೇಟೆಯನ್ನು ಪಡೆದುಕೊಳ್ಳುತ್ತದೆ.ಮರದಲ್ಲಿ ಅಡ್ಡಾಡುತ್ತಿರುವ ಮಂಗನನ್ನು ಹುಲಿ ಬಾಯಗಲಿಸಿ ಕಣ್ಣರಳಿಸಿ ಕ್ರೂರವಾಗಿ ನೋಡುತ್ತಾ ಹೂಂಕರಿಸುತ್ತದೆ.ಒಂದೇ ಒಂದು ಸಾರೆ ಹುಲಿಯ  ಬಿರುನೋಟಕ್ಕೆ ಸಿಲುಕಿದ ಮಂಗ ಅದ್ಯಾವ ರೀತಿ ನಲುಗುತ್ತದೆ ಎಂದರೆ ಹುಲಿಯ ಕ್ರೂರ ಕಣ್ಣಿನ ಹೊಡೆತಕ್ಕೆ ಗಡಗಡ ನಡುಗತೊಡಗುತ್ತದೆ.ಸರೀ ಸುಮಾರು ಐವತ್ತಡಿಗಿಂತ ಮೇಲೆ ಮರದ ಮೇಲೆ ನಿಂತ ಮಂಗನಿಗೆ ಹುಲಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ!ಬೆವರಿ ಬೆಂಡಾಗಿ,ಹೆದರಿ ಹೈರಾಣವಾದ ಮಂಗ ಮರದ ಕೊಂಬೆಯ ಮೇಲೆ ತನ್ನ ಕಪಿಮುಷ್ಠಿಯನ್ನೇ ಕಳೆದುಕೊಳ್ಳತೊಡಗುತ್ತದೆ.ನೋಡ ನೋಡುತ್ತಾ ಅದರ ಹಿಡಿತ ಸಡಿಲವಾಗುತ್ತದೆ.ಯಾವಾಗ ಮುಷ್ಠಿ ಸಡಿಲವಾಯಿತೋ,ಮಂಗನ ದೇಹ ಥೇಟ್ ತೊಪ್ಪೆಯೇ ಆಗಿ ಬಿಡುತ್ತದೆ.ಮುಂದಿನದ್ದು ಪತನ.ವತ್ತಡಿ ಮಿಗಿಲಿದ ಎತ್ತರದಿಂದ ಮಂಗ ಧೊಪ್ಪನೇ ಬೀಳುತ್ತದೆ.ಹುಲಿಗೆ ಫುಲ್ ಮೀಲ್ಸ್.
ಅಪ್ಪ ಹೇಳುತ್ತಿದ್ದ  ಈ ಹುಲಿ ಕಥೆಯಲ್ಲಿ ಮಂಗನ ಪಾತ್ರ ನನಗೆ ಈ ಕಾಲಘಟ್ಟದಲ್ಲಿ ಬಹಳ ಸಮೀಪದ್ದಾಗಿ ಕಾಣಿಸತೊಡಗಿತು.ಈಗ ಕುಮಾರಧಾರೆಗೆ ಎರಡೆರಡು ಸೇತುವೆ ಬಂದಿದೆ.ನೇತ್ರಾವತಿ ಸೇತುವೆ ಶಿಥಿಲವಾಗಿದ್ದು ಹೊಸ ಸೇತುವೆ ಕಟ್ಟುವ ಕೆಲಸ ಶುರುವಾಗಲಿದೆ.ಸಂಗಮಕ್ಷೇತ್ರದಲ್ಲಿ ದಿನದ ಒಂದು ಹಗಲಲ್ಲಿ ಒಂದೂ ಮುಕ್ಕಾಲು ಲಕ್ಷ ಜನ ಬಂದು ಹೋಗುತ್ತಿದ್ದಾರೆ.ಸುತ್ತಲಿನ ಹನ್ನೆರಡು ಮಾಗಣೆ ಸೀಮೆಗಳೆಲ್ಲಾ ಪಟ್ಟಣದ ಥಳುಕಿಗೆ ಸಿಲುಕಿ ಸೀದು ಹೋಗುತ್ತಿವೆ.ಜೋಡು ನದಿಗಳ ಪೇಟೆಯಲ್ಲಿ ಅಪಾರ್ಟ್ಮಮೆಂಟು ಕಟ್ಟಲು ಸ್ಥಳವಿಲ್ಲದೇ ಸುತ್ತಲಿನ ಗದ್ದೆಗಳೆಲ್ಲಾ ನೇತ್ರಾವತಿಯ ಚಾಚಿನ ಆಚೆಯ ಬೆಟ್ಟದ ಮಣ್ಣನ್ನು ಮೈಮೇಲೆ ಸುರಿದುಕೊಂಡಿವೆ.
ನಾವು ಶಾಲೆಯಿಂದ ಖಾಕಿ ಚೀಲ ಹೆಗಲಿಗೆ ಹಾಕಿಕೊಂಡು ಸಂಜೆ ಬಿಸಿಲಿಗೆ ಬೆನ್ನು ಹಾಕಿ ನಮ್ಮದೇ ನೆರಳಿನ ಜೊತೆ ಸ್ಫರ್ಧೆಗೆ ಇಳಿದಂತೆ ಓಡೋಡಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಸಾಗುವ ಕಾರು,ಲಾರಿ,ಬಸ್ಸುಗಳ ನಂಬರ್ ಪ್ಲೇಟ್ ಗಳ ನಂಬರ್ ಗೇಮ್ ಆಟವಾಡುತ್ತಾ ಬರುತ್ತಿದ್ದೆವು.ಈಗ ಅದೇ ನಂಬರ್ ಗೇಮ್ ಆಟ ಆಡಲು ನಮ್ಮ ಮೆಮೊರಿ ಸಾಲದು.ಏಕೆಂದರೆ ಹತ್ತನ್ನು ದಾಟದಿದ್ದ ವಾಹನಗಳು ಈಗ ಸಾವಿರ ದಾಟುತ್ತಿವೆ.
ಮೊನ್ನೆ ಅಂಥದ್ದೇ ಒಂದು ಸಂಜೆಯಲ್ಲಿ ಅದೇ ನೆರಳಿನ ಜೊತೆ ನಡೆದಾಡುತ್ತಾ ಬರುತ್ತಿದ್ದಾಗ ಈ ಮಂಗನ ಕತೆ ನೆನಪಾಯಿತು.
ಮರ ಬಿಟ್ಟ ಮಂಗನ ಕಥೆ ಕೇಳಿದ ಮೇಲೆ ನೆಲ ಬಿಟ್ಟ ಮನುಷ್ಯನ ಕಥೆಯನ್ನು ಮತ್ತೆ ಹೇಳುವುದು ಶಕ್ಯವೇ ಅಲ್ಲ.ನಮ್ಮ ನೆಲ,ನಮ್ಮ ಬಿಗಿ ಹಿಡಿತ, ಆ ಹುಲಿ,ಕುಮಾರಧಾರೆಯ ಸೇತುವೆಯ ಐದನೇ ಪಿಲ್ಲರ್ ಗೆ ಆಹುತಿಯಾದ ಮುದುಕ …ನೆರಳಿನ ಜೊತೆ ಓಡುತ್ತಿರುವ ನಾನು ಮತ್ತೆ ಮತ್ತೆ ಮೊದಲ ಪುಟಕ್ಕೆ!