20151129

ಅಸಹಿಷ್ಣುತೆ ಮತ್ತು ಮಸಾಲೆ ದೋಸೆಅಸಹಿಷ್ಣುತೆ ಎಂದರೆ ಏನು?
ದೇಶದಲ್ಲಿ ಅದು ಇದೆ ಎಂದು ಎಂದು ಹೇಳುವವರು ಅದು ತನಗೆ ಮಾಡಿದ ಅನುಭವವೇನು ಎಂಬುದನ್ನೂ ಹೇಳಬೇಕು.
ಹಾದಿಬೀದಿಯಲ್ಲಿ ಹೋಗುವವರು ಮಾತನಾಡಿದರೆ ಅದಕ್ಕೆ ಉತ್ತರದಾಯಿತ್ವ ಬೇಕಿಲ್ಲ.ಆದರೆ ಅಮೀರ್ ಖಾನ್ ,ಶಾರೂಖ್ ಖಾನ್,ಎ.ಆರ್.ರೆಹಮಾನ್ ನಂಥವರು ಮಾತನಾಡಿದರೆ ಕೇಳಿ ಸುಮ್ಮನಿರಲಾಗುವುದಿಲ್ಲ.
ಏಕೆಂದರೆ ಇವರೆಲ್ಲಾ ಜನಸಮೂಹದಿಂದ ವಸ್ತುಶಃ ಆರಾಧಿಸಲಪಡುತ್ತಿರುವವರು.ತಮಗೆ ಅಸಹಿಷ್ಣುತೆ ಯ ಅನುಭವವಾಗಿದೆ ಎಂದು ಹೇಳುವ ಇವರೆಲ್ಲಾ ಏನಾಯಿತು,ಯಾವಾಗ ಆಯಿತು,ಹೇಗಾಯಿತು,ಯಾರಿಂದಲಾಯಿತು ಎಂಬುದನ್ನೂ ಹೇಳಬೇಕು.ದೊಡ್ಡವರ ಮಾತು ಎಂದರೆ ಅದೇನು ಜಗಲಿಕಟ್ಟೆ ಪಂಚಾಯಿತಿಕೆಯಾ?ಪ್ರತೀ ಮಾತಿಗೂ ಅವರು ದಾಯಿತ್ವವೇನೆಂಬುದನ್ನು ಹೇಳಲೇಬೇಕಾಗುತ್ತದೆ.
ಆದರೆ ಇವರು ಯಾರೂ ಅದನ್ನು ಹೇಳುತ್ತಿಲ್ಲ.ಈ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ಸುದ್ದಿ ಮಾಡುತ್ತಾರೆ.
ಇವರು ಹೇಳುವ ಅಸಹಿಷ್ಣುತೆ ಎಂದರೆ ಏನದು?ಅದನ್ನಾದರೂ ಹೇಳಬಹುದಲ್ಲ.ಗಲಭೆಯಾ?ಕೊಲೆ ಸುಲಿಗೆಯಾ?ಅತ್ಯಾಚಾರವಾ?ಯುದ್ಧವಾ?ಭ್ರಷ್ಠಾಚಾರವಾ?ಮುರಿಯುವ ಮದುವೆಗಳಾ?ಅನೈತಿಕ ಸಂಬಂಧಗಳಾ?ಒಬ್ಬನ ಹೆಂಡತಿಯನ್ನು   ಇನ್ನೊಬ್ಬ ಹಾರಿಸುವುದಾ?ಟೆರರಿಸ್ಟ್ ಗಳ ಕಾಟವಾ?ಅಕಾಲಿಕ ಮಳೆಯಾ?ಬರಗಾಲವಾ?ಸಿನಿಮಾಕ್ಕೆ ಜನ ಬಾರದಿರುವುದಾ?ರಸ್ತೆ ಅಪಘಾತಗಳಾಗುದಾ?ಅಥವಾ ಕಿಡ್ನಿ ಸ್ಟೋನ್ ನಿಂದ ಹೊಟ್ಟೆ ತೊಳಸುವುದಾ?
ಯಾವುದು?
ಅಮೀರ್ ಖಾನ್ ನ ಹೆಂಡತಿಗೆ ಭಾರತವನ್ನೇ ಬಿಟ್ಟು ಹೋಗುವಾ ಅಂತ ಆದದ್ದು ಏನು?
ಇದನ್ನು ಹೇಳಬೇಕಲ್ಲ.
ಪ್ರತಿಯೊಂದು ಮಾತಿಗೂ ಒಂದು ಕಾರ್ಯಕಾರಣ ಸಂಬಂಧ ಅಂತ ಇರುತ್ತದೆ.ಬುದ್ಧಿಸ್ಥಿಮಿತ ಉಳ್ಳ ಎಲ್ಲರೂ ಆಡುವ ಪ್ರತೀ ನುಡಿಗೂ ಮೌಲ್ಯ ಕಟ್ಟೇ ಕಟ್ಟುತ್ತಾರೆ.ಮಾತು ಬಿದ್ದರೆ ಹೋಯಿತು ಎಂಬುದು ಇದಕ್ಕೆ.ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದನ್ನು ಮುಕ್ತ ಮಾತಿಗೆ ಅವಕಾಸವೇ ಇಲ್ಲದ ಕಾಲದ ಅರಸೊತ್ತಿಗೆಯಲ್ಲಿ ವಚನಕಾರರು ಹೇಳಿಹೋಗಿದ್ದಾರೆ.
ಇಗ ಪ್ರಜಾಸತ್ತೆಯ ಕಾಲ.ಯಾರು ಬೇಕಾದರೂ ಮಾತನಾಡಬಹುದು.ಏನು ಬೇಕಾದರೂ ಮಾತನಾಡಬಹುದು.ಹಾಗಂತ ವರು ಮಾತನಾಡುತ್ತಿದ್ದಾರೆಯೇ?ಗೊತ್ತಿಲ್ಲ
ಇಷ್ಟಕ್ಕೂ ನಿಮಗೆ ಅಸಹಿಷ್ಣುತೆಯ ಏನು ಅನುಭವವಾಗಿದೆ ಎಂದು ಯಾರೂ ಯಾಕೆ ಕೇಳುತ್ತಿಲ್ಲ ಎಂಬುದೇ ಈ ಭಾರತದ ಜನರ ಸಹಿಷ್ಣುತೆಗೆ ಸಾಕ್ಷಿಯೋ ಅಥವಾ ಪೆದ್ದುತನದ ಪರಮಾವಧಿಯೋ?
ಇಷ್ಟಕ್ಕೂ ಈ ಅಸಹಿಷ್ಣುತೆ ಕುರಿತು ಈಗ ಬಾಯಿ ಬಾಯಿ ಬಡಿದುಕೊಳ್ಳುತ್ತಿರುವುವರೆಲ್ಲಾ ದೇಶದಲ್ಲಿ ಸಹಿಷ್ಣತೆಗಾಗಿ ಏನು ಕೊಡುಗೆ ನೀಡಿದ್ದಾರೆ?ಅದನ್ನು ಈಗ  ಜನತೆ ಪರಿಶೀಲಿಸಲು ಸೂಕ್ತ ಕಾಲ.ಇವರು ತಮ್ಮ ಅರಮನೆ ಪಕ್ಕದ ಗಲ್ಲಿಯೊಂದರಲ್ಲಿ ರೇಶನ್ ಕಾರ್ಡು ಪಡೆಯಲಾರದೇ ಒದ್ದಾಡುತ್ತಿರುವ ಬಡ ಕೂಲಿಕಾರ್ಮಿಕನನ್ನು ಕರೆದುಕೊಂಡು ತಾಲೂಕು ಕಚೇರಿಗೆ ಹೋಗಿ ರೇಶನ್ನು ಕಾರ್ಡು ತೆಗೆಸಿಕೊಟ್ಟ ಒಂದು ಉದಾಹರಣೆ ಸಿಕ್ಕರೆ ಸಾಕು.ಇಂಥ ಹಿರಿಯ ತಾರಾ ಮೌಲ್ಯವುಳ್ಳ ಮಂದಿ ತಾಲೂಕು ಕಚೇರಿಗೆ ಹೋಗಲೇ ಬೇಕಿಲ್ಲ.ತಮ್ಮ ಗುಮಾಸ್ತನನ್ನು ಕಳುಹಿಸಿಕೊಟ್ಟರೂ ರೇಶನ್ ಕಾರ್ಡು ಬಡವನಿಗೆ ಒಡನೇ ಸಿಗುವುದು ಖಚಿತವೇ.
ಇವರು ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಯಾವುದೋ ಅಪಘಾತ ಕಂಡಾಗ ಓಡಿ ಹೋಗಿ ಗಾಯಾಳುಗಳನ್ನೆತ್ತಿ ಆಸ್ಪತ್ರೆಗೆ ಇವರ ಕಾರಲ್ಲೇ ಬೇಕಾಗಿಲ್ಲ,ಇನ್ಯಾವುದೋ ವಾಹನದಲ್ಲಿ ಆದರೂ ಸಾಗಿಸಿದ ಉದಾಹರಣೆ ಇದ್ದರೆ ಬೇಕಾಗಿತ್ತು.
ಇವರ ಗುರುತು ಪರಿಚಯದ ಅಮಾಯಕ ಬಡವನೊಬ್ಬನನ್ನು ಯಾವುದೋ ಪ್ರಕರಣದಲ್ಲಿ ಪೊಲೀಸರು ಸಿಲುಕಿಸಿ ಠಾಣೆಯ ಸೆಲ್ ನಲ್ಲಿ ಕೂಡಿಹಾಕಿದಾಗ,ಇಲ್ಲ,ಇಲ್ಲ,ಆತ ತಪ್ಪು ಮಾಡಿಲ್ಲ ಎಂದು ಪೊಲೀಸರಿಗೆ ಸಮಜಾಯಿಸಿ ನೀಡಿ ಆ ಬಡ ಅಮಾಯಕನನ್ನು ಇವರು ಬಿಡಿಸಿ ತಂದ ಮಾಹಿತಿ ಎಲ್ಲಾದರೂ ಇದೆಯಾ?
ಇವರು ಮಾಡಿದ ಮಹಾಸಂಪಾದನೆಯಲ್ಲಿ  ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸಿದ್ದಾರೋ?ಎಷ್ಟು ಬಡಮಕ್ಕಳು ಇವರ ಸಂಪಾದನೆಯ ಭಾಗದಲ್ಲಿ ಒಂದು ಮೊತ್ತ ಪಡೆದು ಓದಿ ವಿದ್ಯಾವಂತರಾಗಿದ್ದಾರೋ?ಎಷ್ಟು ಬರಗಾಲ ಪೀಡಿತ ಪ್ರದೇಶಗಳಲ್ಲಿ ಇವರ ಸಂಪಾದನೆಯಿಂದಲೇ ಜನ ಜೀವಿಸುತ್ತಿದ್ದಾರೋ?ನೆರೆ ಪೀಡಿತ ಎಷ್ಟು ಊರುಗಳಲ್ಲಿ ಇವರು ಕಟ್ಟಿಸಿಕೊಟ್ಟ ಮನೆಗಳಿವೆಯೋ?
ಹೋಗಲಿ,ಇವರ ಮನೆಗೆ ಬರುವ ದಾರಿಯಲ್ಲಿ ಒಂದಾದರೂ ರಸ್ತೆ ಹೊಂಡವನ್ನು ಇವರು ಮುಚ್ಚಿಸಿದ ದಾಖಲೆ ಸಿಗಬಹುದೇ?
ಅದೆಷ್ಟು ಊರುಗಳಲ್ಲಿ ಜನ ಬಡಿದಾಡಿಕೊಂಡು ಊರಿಗೇ ಊರು ಬೆಂಕಿ ಹತ್ತಿಸಿಕೊಂಡು ಉರಿಯುತ್ತಿದ್ದಾಗ ಇವರು ಯಾರಾದರೂ ಅಲ್ಲಿಗೆ ಬಂದಿಳಿದು ಸಹಿಷ್ಣುಗಳಾಗಿ ಎಂದು ಜನರನ್ನು ಸಮಾಧಾನಿಸಿದ ರಿಯಲ್ ಸ್ಟೋರಿ ಸಿಗಬಹುದೋ?
ರಾಶಿ ರಾಶಿ ಪುಸ್ತಕ ಬರೆದು ಸಾಹಿತಿಯಾಗುವುದು,ಬೇರೆ ಬೇರೆ ಬಣ್ಣ ಹಾಕಿ ಸಿನಿಮಾ ಮಾಡುವುದೇ  ನಾಯಕತ್ವದ ಲಕ್ಷಣವಲ್ಲ.ಮಾರ್ಕೆಟಿಂಗ್ ಗೊತ್ತಿದ್ದರೆ ಮೈದಾ ಹುಡಿಗೆ ಸಕ್ಕರೆ ಬೆರೆಸಿ ಇಟ್ಟರೂ ಅದು ಮಾರಾಟವಾಗುತ್ತದೆ.ಆದರೆ ಮನುಷ್ಯನಾಗುವುದು ಇದೆಯಲ್ಲಾ ಅದಕ್ಕೆ ತುಂಬಾ ಶ್ರಮ ಬೇಕು.
ಇಷ್ಟೊಂದು ಸುಂದರ ದೇಶದಲ್ಲಿ ನಿರುಮ್ಮಳವಾಗಿ ಬದುಕುವುದನ್ನು ತಾನೂ ಕಲಿತು,ಇತರರಿಗೂ ಕಲಿಸುತ್ತಾ,ದೇಶವನ್ನು ನಡೆಸುತ್ತಾ ಸಾಗುವುದು ಇವರಿಗೂ ಕರ್ತವ್ಯ ಆಗಲೊಲ್ಲದೇ?
ಅಲ್ಲೊಂದು ಅಸಹಿಷ್ಣುತೆಯ ಕಂಡೆ ಮತ್ತು ಅದನ್ನು ನಾನೇ ನಂದಿಸಿ ಬಂದೆ ಎಂದು ಹೇಳುವ ಸಾಹಿತಿ,ಸಿನಿಮಾನಟ ಈ ಕಾಲಕ್ಕೆ ನಿಜಕ್ಕೂ ಆದರ್ಶ.
ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವನ್ನು ಗುಂಡೂರಾಯರ ಸರಕಾರ ನಡೆಸಲು ಮುಂದಾದಾಗ ಅದನ್ನು ನಡೆಸಬಾರದು.ಏಕೆಂದರೆ ಬರಗಾಲವಿದೆ ಎಂದು ಅಸಹಿಷ್ಣುತೆಯ ಬೊಬ್ಬೆ ಎಂಭತ್ತರ ದಶಕದಲ್ಲಿ ಕೇಳಿತ್ತು.ಕೊನೆಗೂ ಸಮ್ಮೇಳನ ನಡೆದೇ ನಡೆಯಿತು. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪು ಈ ಸಮ್ಮೇಳನವನ್ನು ಉದ್ಘಾಟಿಸಿದರು. ಶಿವರಾಮ ಕಾರಂತರು ಅಧ್ಯಕ್ಷ ಭಾಷಣದಲ್ಲಿ ಆ ಕಾಲದ ಅಸಹಿಷ್ಣುಗಳಿಗೆ ಕೇಳಿದ ಮಾತು ,”ಬರಗಾಲವಿದೆ,ವಿಶ್ವ ಕನ್ನಡ ಸಮ್ಮೇಳನ ಮಾಡಬೇಡಿ ಅಂತ ಕೂಗುವವರು ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೋ?”

20150916

ನೆಲಬಿಟ್ಟ ನರ ಮತ್ತು ಮರ ಬಿಟ್ಟ ವಾನರ
ನೆಲ ಬಿಟ್ಟ ಮನುಷ್ಯ ಮತ್ತು ಮರ ಬಿಟ್ಟ ಮಂಗ ಎರಡೂ ಒಂದೇ ಎಂದರು ಅವರು.
ನಾನು ಕ್ಷಣ ಕಾಲ ಅವರ ಆ ಒಂದೇ ಸಾಲಿನ ಮಾತಿನ ಹಿಂದೆ ಇರಬಹುದಾದ ಹಲವು ಗ್ರಹಿಕೆಗಳನ್ನು ಊಹಿಸತೊಡಗಿದೆ.
ಬೆಚ್ಚಿಬಿದ್ದ ಹಾಗಾಯಿತು.
ನನಗೆ ಆಸ್ತಿ ಬೇಡ ಅಂತಲ್ಲ.ನನ್ನ ಮಕ್ಕಳಿಗೆ ಬೇಡವಂತೆ.ಮೈಯಲ್ಲಿ ಕಸುವಿದ್ದಾಗ ತುಂಡುಬಟ್ಟೆ ಉಟ್ಟು ದುಡಿದಿದ್ದೇನೆ.ಈಗ  ಈ ತೋಟ ಹೊಲ ನನ್ನ ಕಣ್ಣೆದುರೇ ಅಧೋಗತಿಗೆ ತಲುಪುವುದನ್ನು ನೋಡಲಾರೆ.ಅದಕ್ಕಾಗಿ ಆಸ್ತಿ ಮಾರಿ ಇಲ್ಲಿ ಬಂದು ಮಗನ ಜೊತೆ ಅಪಾರ್ಟ್ಮೆಂಟಲ್ಲಿ ಇದ್ದೇನೆ ಎಂದು ಕಾರ್ಯವಾಸೀ ಕಥೆಗಟ್ಟುವ ಹಿರಿಯ ಜೀವಗಳನ್ನು ನಾನು ಈಗೀಗ ನೋಡುತ್ತಿರುವುದು ಒಂದಲ್ಲ,ಹತ್ತಲ್ಲ,ನೂರಲ್ಲ..
ಮಂಗನಿಂದಲೇ ಆರಂಭಿಸಿಕೊಂಡಾಗ ನನಗೆ ಅಪ್ಪ ಹೇಳುತ್ತಿದ್ದ ಬೇಟೆಯ ಕಥೆಗಳು ನೆನಪಾಗತೊಡಗಿದವು.ಆಗ ನಮ್ಮ ಸಂಗಮಕ್ಷೇತ್ರ ಎಂಬ ಊರು ಊರೇ ಆಗಿರಲಿಲ್ಲವಂತೆ.ನೇತ್ರಾವತಿಗೆ ಸೇತುವೆಯೇ ಇರದ ಕಾಲವದು.ಕುಮಾರಧಾರೆಗೆ ಆಗಷ್ಟೇ ಬ್ರಿಟಿಷರು ಸೇತುವೆಯನ್ನು ಕಟ್ಟಿದ್ದರು.ಸೇತುವೆ ಕಟ್ಟಿದ ಕಾರಣದಿಂದಲೇ  ನೆತ್ತರಮುಜಲಿ ಎಂಬ ಭಯಾನಕ ವಿಷದ ಹಾವು ಮೂಡ್ಲಾಗಿ ಬರಲು ಆದದ್ದಂತೆ.ಇಲ್ಲವಾಗಿದ್ದರೆ ನೆತ್ತರಮುಜಲಿ ಪಡ್ಲಾಗಿಯೇ ಮಾತ್ರಾ ಇರುತ್ತಿದ್ದ ವಿಷಜಂತುವಾಗಿತ್ತು.
ಕುಮಾರಧಾರೆ ಸೇತುವೆಗೆ ಒಬ್ಬ ಮುದುಕನನ್ನು ಬಿಂದು ಕೊಟ್ಟಿದ್ದರು ಎಂಬುದು ಸಂಗಮಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಪ್ರಚಲಿತದಲ್ಲಿತ್ತು.ಸೇತುವೆಯ ಐದನೇ ಪಿಲ್ಲರ್ ಒಳಗೆ ಆ ಮುದುಕನನ್ನು  ಜೀವಂತ ಹುಗಿಯಲಾಯಿತು ಎಂದು ಹೇಳಲಾಗಿದ್ದ ಕಥೆಯನ್ನು ಕೇಳಿ ನಾವು ಎಲಿಮೆಂಟರಿ ಶಾಲೆಯಲ್ಲಿ ಮಧ್ಯಾಹ್ನದ ಊಟ ಮುಗಿಸಿ ಕುಮಾರಧಾರೆಗೆ ಇಳಿದು ಐದನೇ ಕಂಬವನ್ನು ಹುಡುಕುತ್ತಿದ್ದೆವು.ಆದರೆ ಯಾವ ಬದಿಯಿಂದ ಐದನೇ ಕಂಬ ಎಂದು ಗೊತ್ತಾಗದೇ ವಾಪಾಸ್ಸಾಗುತ್ತಿದ್ದೆವು.
ಆ ದಿನಗಳಲ್ಲಿ ಸಂಗಮಕ್ಷೇತ್ರದ ಹೊರಗೆಲ್ಲಾ ದಟ್ಟ ಕಾಡೇ ಕಾಡು ಇದ್ದವು.ಕಾಡಿನೊಳಗೆ ಮಂಗಗಳ ಠಿಕಾಣಿ.ಬೇಕಾದಷ್ಟು ಹಣ್ಣು,ಚಿಗುರು,ಕಾಯಿ ಇರುತ್ತಿದ್ದರಿಂದ ಮಂಗಗಳಿಗೆ ಕಾಡನ್ನು ದಾಟಿ ಊರಿನತ್ತ ಬರಬೇಕಾದ ಧಾವಂತವಂತೂ ಇರಲೇ ಇಲ್ಲ.ಹಗಲು ಹೊತ್ತು ಕಾಡಿನೊಳಗೆ ಬೇಕಾದಂತೆ ಬೇಕಾಬಿಟ್ಟಿ ಅಡ್ಡಾಡುವ ಮಂಗಗಳು ರಾತ್ರಿ ಹೊತ್ತು ಮರದ ಕೊಂಬೆಗಳಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು.ಆದರೆ ವರ್ಷದಲ್ಲಿ ಐವತ್ತು ಬಾರಿಯಾದರೂ ಮಂಗಗಳು ರಾತ್ರಿ ಕಿರಿಚಾಡುವುದು ಸಾಮಾನ್ಯವಾಗಿತ್ತು.
ಮಂಗಗಳು ರಾತ್ರಿ ಕಿರಿಚಾಡಲಿದವು ಎಂದರೆ ಚಿರತೆ ಬೇಟೆ ಹಿಡಿದಿದೆ ಎಂದೇ ಅರ್ಥ.ರಾತ್ರಿ ವೇಳೆ ಮಂಗಗಳ ವಿಶ್ರಾಂತಿ ಧಾಮಕ್ಕೆ ಎಗ್ಗಿಲ್ಲದೇ ನುಗ್ಗು ವ ಚಿರತೆ ತನಗೆ ಬೇಕಾದ ಫುಡ್ಡನ್ನು ಗುಳುಂಕಾಯಸ್ವಾಹಾ ಮಾಡಿಕೊಳ್ಳುತ್ತಿತ್ತು.
ಆದರೆ ಹುಲಿ ಮಾತ್ರಾ ಹೀಗಲ್ಲ.ಅದು ಹಗಲು ಹೊತ್ತೇ ತನ್ನ ಬೇಟೆಯನ್ನು ಪಡೆದುಕೊಳ್ಳುತ್ತದೆ.ಮರದಲ್ಲಿ ಅಡ್ಡಾಡುತ್ತಿರುವ ಮಂಗನನ್ನು ಹುಲಿ ಬಾಯಗಲಿಸಿ ಕಣ್ಣರಳಿಸಿ ಕ್ರೂರವಾಗಿ ನೋಡುತ್ತಾ ಹೂಂಕರಿಸುತ್ತದೆ.ಒಂದೇ ಒಂದು ಸಾರೆ ಹುಲಿಯ  ಬಿರುನೋಟಕ್ಕೆ ಸಿಲುಕಿದ ಮಂಗ ಅದ್ಯಾವ ರೀತಿ ನಲುಗುತ್ತದೆ ಎಂದರೆ ಹುಲಿಯ ಕ್ರೂರ ಕಣ್ಣಿನ ಹೊಡೆತಕ್ಕೆ ಗಡಗಡ ನಡುಗತೊಡಗುತ್ತದೆ.ಸರೀ ಸುಮಾರು ಐವತ್ತಡಿಗಿಂತ ಮೇಲೆ ಮರದ ಮೇಲೆ ನಿಂತ ಮಂಗನಿಗೆ ಹುಲಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ!ಬೆವರಿ ಬೆಂಡಾಗಿ,ಹೆದರಿ ಹೈರಾಣವಾದ ಮಂಗ ಮರದ ಕೊಂಬೆಯ ಮೇಲೆ ತನ್ನ ಕಪಿಮುಷ್ಠಿಯನ್ನೇ ಕಳೆದುಕೊಳ್ಳತೊಡಗುತ್ತದೆ.ನೋಡ ನೋಡುತ್ತಾ ಅದರ ಹಿಡಿತ ಸಡಿಲವಾಗುತ್ತದೆ.ಯಾವಾಗ ಮುಷ್ಠಿ ಸಡಿಲವಾಯಿತೋ,ಮಂಗನ ದೇಹ ಥೇಟ್ ತೊಪ್ಪೆಯೇ ಆಗಿ ಬಿಡುತ್ತದೆ.ಮುಂದಿನದ್ದು ಪತನ.ವತ್ತಡಿ ಮಿಗಿಲಿದ ಎತ್ತರದಿಂದ ಮಂಗ ಧೊಪ್ಪನೇ ಬೀಳುತ್ತದೆ.ಹುಲಿಗೆ ಫುಲ್ ಮೀಲ್ಸ್.
ಅಪ್ಪ ಹೇಳುತ್ತಿದ್ದ  ಈ ಹುಲಿ ಕಥೆಯಲ್ಲಿ ಮಂಗನ ಪಾತ್ರ ನನಗೆ ಈ ಕಾಲಘಟ್ಟದಲ್ಲಿ ಬಹಳ ಸಮೀಪದ್ದಾಗಿ ಕಾಣಿಸತೊಡಗಿತು.ಈಗ ಕುಮಾರಧಾರೆಗೆ ಎರಡೆರಡು ಸೇತುವೆ ಬಂದಿದೆ.ನೇತ್ರಾವತಿ ಸೇತುವೆ ಶಿಥಿಲವಾಗಿದ್ದು ಹೊಸ ಸೇತುವೆ ಕಟ್ಟುವ ಕೆಲಸ ಶುರುವಾಗಲಿದೆ.ಸಂಗಮಕ್ಷೇತ್ರದಲ್ಲಿ ದಿನದ ಒಂದು ಹಗಲಲ್ಲಿ ಒಂದೂ ಮುಕ್ಕಾಲು ಲಕ್ಷ ಜನ ಬಂದು ಹೋಗುತ್ತಿದ್ದಾರೆ.ಸುತ್ತಲಿನ ಹನ್ನೆರಡು ಮಾಗಣೆ ಸೀಮೆಗಳೆಲ್ಲಾ ಪಟ್ಟಣದ ಥಳುಕಿಗೆ ಸಿಲುಕಿ ಸೀದು ಹೋಗುತ್ತಿವೆ.ಜೋಡು ನದಿಗಳ ಪೇಟೆಯಲ್ಲಿ ಅಪಾರ್ಟ್ಮಮೆಂಟು ಕಟ್ಟಲು ಸ್ಥಳವಿಲ್ಲದೇ ಸುತ್ತಲಿನ ಗದ್ದೆಗಳೆಲ್ಲಾ ನೇತ್ರಾವತಿಯ ಚಾಚಿನ ಆಚೆಯ ಬೆಟ್ಟದ ಮಣ್ಣನ್ನು ಮೈಮೇಲೆ ಸುರಿದುಕೊಂಡಿವೆ.
ನಾವು ಶಾಲೆಯಿಂದ ಖಾಕಿ ಚೀಲ ಹೆಗಲಿಗೆ ಹಾಕಿಕೊಂಡು ಸಂಜೆ ಬಿಸಿಲಿಗೆ ಬೆನ್ನು ಹಾಕಿ ನಮ್ಮದೇ ನೆರಳಿನ ಜೊತೆ ಸ್ಫರ್ಧೆಗೆ ಇಳಿದಂತೆ ಓಡೋಡಿ ಮನೆಗೆ ವಾಪಾಸ್ಸಾಗುತ್ತಿದ್ದಾಗ ರಸ್ತೆಯಲ್ಲಿ ಆಗೊಮ್ಮೆ ಈಗೊಮ್ಮೆ ಸಾಗುವ ಕಾರು,ಲಾರಿ,ಬಸ್ಸುಗಳ ನಂಬರ್ ಪ್ಲೇಟ್ ಗಳ ನಂಬರ್ ಗೇಮ್ ಆಟವಾಡುತ್ತಾ ಬರುತ್ತಿದ್ದೆವು.ಈಗ ಅದೇ ನಂಬರ್ ಗೇಮ್ ಆಟ ಆಡಲು ನಮ್ಮ ಮೆಮೊರಿ ಸಾಲದು.ಏಕೆಂದರೆ ಹತ್ತನ್ನು ದಾಟದಿದ್ದ ವಾಹನಗಳು ಈಗ ಸಾವಿರ ದಾಟುತ್ತಿವೆ.
ಮೊನ್ನೆ ಅಂಥದ್ದೇ ಒಂದು ಸಂಜೆಯಲ್ಲಿ ಅದೇ ನೆರಳಿನ ಜೊತೆ ನಡೆದಾಡುತ್ತಾ ಬರುತ್ತಿದ್ದಾಗ ಈ ಮಂಗನ ಕತೆ ನೆನಪಾಯಿತು.
ಮರ ಬಿಟ್ಟ ಮಂಗನ ಕಥೆ ಕೇಳಿದ ಮೇಲೆ ನೆಲ ಬಿಟ್ಟ ಮನುಷ್ಯನ ಕಥೆಯನ್ನು ಮತ್ತೆ ಹೇಳುವುದು ಶಕ್ಯವೇ ಅಲ್ಲ.ನಮ್ಮ ನೆಲ,ನಮ್ಮ ಬಿಗಿ ಹಿಡಿತ, ಆ ಹುಲಿ,ಕುಮಾರಧಾರೆಯ ಸೇತುವೆಯ ಐದನೇ ಪಿಲ್ಲರ್ ಗೆ ಆಹುತಿಯಾದ ಮುದುಕ …ನೆರಳಿನ ಜೊತೆ ಓಡುತ್ತಿರುವ ನಾನು ಮತ್ತೆ ಮತ್ತೆ ಮೊದಲ ಪುಟಕ್ಕೆ!