20140226

ಒಂದು ಮರದಂತೆ ಪ್ರೇಮಕಥೆಬಿಡುವೇ ಇಲ್ಲ ಅಂದುಬಿಟ್ಟಳು!
ಕಣ್ಣುಮಂಜಾಯಿತು.ಹಾಗಂದರೆ ಹೇಗೆ ಸ್ವಲ್ಪ ಹೊತ್ತಾದರೂ ಮಾತನಾಡು,ಮನಸ್ಸು ಭಾರವಾಗಿದೆ ಕಣೇ ಎಂದು ಗೋಗರೆದ.ಆಕೆ ಉತ್ತರಿಸಲಿಲ್ಲ.ಅರ್ಥವಾಯಿತು ಫೋನ್ ಕಟ್ ಮಾಡಿದ್ದಾಳೆ ಅಂತ.
ಅತ್ತಿತ್ತ ನೋಡಿದ.ಅದೇ ಹೆದ್ದಾರಿ.ಅದೇ ದೇವದಾರು ಮರ.
ಮರದ ಕೆಳಗೆ ಕೂತಿದ್ದ ಆ ದಢಿಯನ ಹೆಸರು ಜ್ಞಾಪಕಕ್ಕೆ ಬರಲಿಲ್ಲ.ಅವನು ನಕ್ಕ.ಇವನೂ ನಕ್ಕ.
ಆ ಫೋನ್,ಆಕೆಯ ಆ ಉತ್ತರ ಅಲ್ಲದೇ ಇರುತ್ತಿದ್ದರೆ ಕೇಳುತ್ತಿದ್ದನೋ ಏನೋ,ಏನಿದು ಯಾವತ್ತೂ ಇದೇ ಮರದಡಿ ಏನು ಮಾಡೋದು ನೀನು?
ಕೇಳಲಿಲ್ಲ.
ಕಿವಿ ಗುಯ್‌ಗುಟ್ಟುತ್ತಿತ್ತು.ನಾಳೆ ಡಾಕ್ಟರ್‌ನ ಭೇಟಿ ಮಾಡಬೇಕು.ಏನಿದು ತಮಟೆಯೊಳಗೆ ಡೋಲು ಬಾರಿಸಿದ ಹಾಗೇ ಶಬ್ದ ಕೇಳುತ್ತಿದೆ ಎಂದು ಕೇಳಬೇಕು.ಅವರು ನರದ ದೋಷ ಎಂದರೆ ಹೌದಾ ಸರಿ ಅಂತ ಬರಬೇಕು.ಔಷಧಿಯ ಚೀಟಿಯನ್ನು ಇದೇ ದೇವದಾರು ಮರದ ಕೆಳಗೆ ಹರಿದು ಹಾಕಬೇಕು.
ಯಾಕೋ ಅವಳ ನೆನಪಾಯಿತು.ಗೆಳೆಯನ ಗೆಳತಿ.ಅವಳ ಸಂಕಟಗಳನ್ನು ಕೇಳಲು ಅದೆಷ್ಟೋ ಬಾರಿ ನಾನೇ ಕಿವಿಯಾಗಿದ್ದೆ.ಅವಳು ಅದೊಮ್ಮೆ ಹೇಳಿದ್ದಳು,ಯಾಕೋ ನಾನು ಅತಿಯಾಗಿ ಯೋಚಿಸುತ್ತಿದ್ದೇನೇನೋ ಅಂತ ಅನಿಸುತ್ತಿದೆ.
ಆಗ ರಬ್ಬಿಶ್ ಅಂತ ಅನಿಸಿತ್ತು.ತಲೆ ತಿಂತಾಳೆ ಅಂತ ಸಿಟ್ಟು ಬರುತ್ತಿತ್ತು.ಇವರ ಲವ್,ಇವರ ಗ್ರಾಚಾರಕ್ಕೆಲ್ಲಾ ನಾನೇಕೆ ಕಿವಿಯಾಗಬೇಕು ಎಂದು ಕೋಪ ಬರುತ್ತಿತ್ತು.ಆದರೆ ಅವಳ ನೋವು ಸಂಕಟವೆಲ್ಲವೂ ನನ್ನದೇ ಆಗುವ ಘಳಿಗೆ ಬರುತ್ತದೆ ಎಂದುಕೊಂಡಿರಲಿಲ್ಲ.
ಮತ್ತೊಮ್ಮೆ ಫೋನ್ ಟಂಕಿಸಲೇ ಅಂದುಕೊಂಡ.ಬೇಡ.ಯಾವಾಗ ಅವಳು ತನಗೆ ಬಿಡುವೇ ಇಲ್ಲ ಅಂದಳೋ ಇನ್ನು ಮಾತೇ ಇಲ್ಲ ಅಂತ ಸುಮ್ಮನಾದ.
ಆದರೂ ಮನಸ್ಸು ಹಠ ಬಿಟ್ಟಿರಲಿಲ್ಲ.ಇನ್ನೊಮ್ಮೆ ಮಾತನಾಡೇ ಬಿಡೋಣ ಅಂತ ಫೋನ್ ಬಟನ್ ಮೇಲೆ ನಂಬರ್ ಛಾಪಿಸಿದ.ರಿಂಗ್ ಹೊಡೆಯತೊಡಗಿತು.ಶಾಲೆ ಗಂಟೆ ಬಾರಿಸಿದ ಹಾಗೇ.
ಆ ತುದಿಯಿಂದ ಉತ್ತರ ಬರಲಿಲ್ಲ.
ಮನಸ್ಸು ಭಾರವಾಯಿತು.ಕಿವಿ ತಮಟೆಯಲ್ಲಿ ಮತ್ತೆ ಡೋಲಿನ ಶಬ್ದ.
ಗಟ್ಟಿಯಾಗಿ ಅತ್ತು ಬಿಟ್ಟರೆ ಮನಸ್ಸು ಹಗುರವಾಗಿ ಎಲ್ಲವೂ ಮುಗಿದು ಹೋಗುತ್ತದೆ ಎಂಬ ನಂಬುಗೆಗೆ ಈಡಾಗಲೇ ಎಂದುಕೊಂಡ.
ಆಕೆ ಪ್ರತೀ ನಿತ್ಯವೂ ನನ್ನ ಜೊತೆ ಮಾತನಾಡಲೇಬೇಕು ಎಂಬ ಹಠ ಯಾವುದಕ್ಕೆ ಶುರುವಾಗಿದೆ ಎಂದು ತಲ್ಲಣಿಸಿದ.ಇಷ್ಟಕ್ಕೂ ಆಕೆ ಏಕಾದರೂ ಮಾತನಾಡಬೇಕು ಎಂದು ಮತ್ತೊಂದು ಮನಸ್ಸು ಕೇಳುತ್ತಿತ್ತು.ಉತ್ತರ ಅಲ್ಲೂ ಇಲ್ಲ ಇಲ್ಲೂ ಇಲ್ಲ.
ಅವಳು ದೂರವಾಗಿದ್ದಾಳೆ ಎಂಬುದು ಖಚಿತವಾಯಿತು.
ಇದು ಅನೇಕ ಬಾರಿ ಆಗಿದೆ.ಅವಳಿಗೆ ಮೊಬೈಲ್ ಫೋನ್ ತಾನೇ ಕೊಡಿಸಬೇಕು ಎಂದು ಆತ ಗುಟ್ಟಾಗಿ ಖರೀದಿಸಿ ತಂದಿಟ್ಟುಕೊಂಡಿದ್ದ ಮೊಬೈಲ್ ಫೋನ್‌ನನ್ನು ಇದೇ ದೇವದಾರು ಮರದ ಬೊಡ್ಡೆಯಲ್ಲಿ ಕುಳಿತು ನದಿಗೆ ಎಸೆದು ಎಷ್ಟು ವರ್ಷಗಳಾದವು ಎಂದು ಲೆಕ್ಕ ಹಾಕಿದ.
ಆಹಾ ಆ ದಿನ ಆಕೆ ನೋಡಿ ನನ್ನ ಮೊಬೈಲ್ ಅಂತ ತೋರಿಸಿದಾಗ ಅವಾಕ್ಕಾಗಿದ್ದ.
ಇದು ನಾನೇ ಖರೀದಿಸಿದೆ ಎಂದು ಆಕೆ ಸುಳ್ಳೇ ಹೇಳಿದ್ದಾಳೆ ಎಂಬುದು ಗೊತ್ತಾಗಲು ಆತನಿಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ.ಏಕೆಂದರೆ ಆಕೆ ಆ ಮೊಬೈಲ್‌ನಿಂದ ಮಾಡಿದ ಮೊದಲ ಕಾಲ್‌ನಲ್ಲಿ ಆತನ ಹೆಸರಿರಲಿಲ್ಲ.ಅದು ಇನ್ಯಾರದ್ದು ಎಂದು ಊಹಿಸುವುದಕ್ಕೂ ಆತನಿಗೆ ಹೆಚ್ಚು ಸಮಯ ಬೇಕಾಗಿ ಬರಲಿಲ್ಲ.
ಆಮೇಲೆ ಆತ ಆಕೆಯನ್ನು ಹೆಚ್ಚುಹೆಚ್ಚು ಪ್ರೀತಿಸತೊಡಗಿದ.ಆಕೆ ಎಲ್ಲಾದರೂ ತನ್ನಿಂದ ದೂರವಾಗಬಹುದು ಎಂಬ ಆತಂಕ ಆತನಿಗೆ ಅರಿವಿಲ್ಲದಂತೇ ಆಕೆಯ ಮೇಲಿನ ಹುಚ್ಚು ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿತು.ಹೇಗೂ ಮೊಬೈಲ್ ಫೋನ್ ನಲ್ಲಿ ಸಿಗುತ್ತಾಳೆ ಎಂದಾಗಿದೆ.ಆದರೆ ಅದೆಷ್ಟು ಬಾರಿ ಕರೆ ಮಾಡಿದಾಗಲೂ ಆಕೆ ಆಕೆಯೇ ಹೇಳುತ್ತಿದ್ದ ಆಕೆಯ ಅಣ್ಣನ ಜೊತೆಯೇ ಮಾತನಾಡುತ್ತಿದ್ದಳು.
ಅವನಿಗೆ ಖಚಿತವಾಗತೊಡಗಿತು.ಆಕೆ ಇನ್ನು ತನ್ನವಳಲ್ಲ ಎಂಬುದು.ಅದು ಗಟ್ಟಿಯಾಗುತ್ತಾ ಆಗುತ್ತಾ ಹೋದಂತೆ ಮತ್ತಷ್ಟು ಆಕೆಯನ್ನು ಪ್ರೀತಿಸುತ್ತಾ ಬಲವತ್ತರಗೊಂಡ.ಆಕೆಯ ಸಾನ್ನಿಧ್ಯದಿಂದ ಹೊರಗೆ ಬರಲೇಬಾರದು ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡ.ಅವಳು ಯಾರ ಜೊತೆ ಬೇಕಾದರೂ ಓಡಾಡಲಿ,ಮಾತನಾಡಲಿ,ಒಂದೊಮ್ಮೆ ಮದುವೆಯೇ ಆಗಲಿ,ಅವಳಿಗೆ ನನಗಿಂತ ಹೆಚ್ಚು ಪ್ರೀತಿಯನ್ನು ಇನ್ಯಾರೂ ಕೊಡಬಾರದು ಎಂದು ತರ್ಕಕ್ಕೆ ನಿಂತೇಬಿಟ್ಟ.
ಆಕೆಗೇ ಅಚ್ಚರಿ,ಆಘಾತವಾಗತೊಡಗಿತು.ಇವನ ಪ್ರೀತಿಯ ತೀವ್ರತೆಯಿಂದ ಆಕೆ ಪಾರಾಗಲು ಇನ್ಯಾವುದೋ ದಾರಿ ಹುಡುಕಲೇಬೇಕಿತ್ತು.ಅದಕ್ಕಾಗಿ ಆಕೆ ಒದ್ದಾಡತೊಡಗಿದಳು.ರಾತ್ರಿ ಹಗಲ್ಲೆನ್ನದೇ ಪ್ರೀತಿಸುವವನ ಅಕ್ಷರಶಃ ದಾಳಿಯಿಂದ ಪಾರಾಗಲೇಬೇಕು ಎಂದು ಆಕೆ ಆ ಯುವಕನಿಗೆ ಮಾರುಹೋದಳು.ಅವನ ಜೊತೆ ಎಲ್ಲೆಂದರಲ್ಲಿ ಓಡಾಡಿದಳು.ಇವನ ಸೆಳೆತದಿಂದ ಹೇಗಾದರೂ ಮಾಡಿ ದಡ ಸೇರಬೇಕು ಎಂದು ಹಠಕ್ಕೆ ಬಿದ್ದಳು.
ಆದರೆ ಹಾಗೇ ಆಯ್ಕೆ ಮಾಡಿಕೊಂಡ ನಾವೆ ಮೋಸ ಮಾಡುತ್ತಿದೆ ಎಂದು ಖಚಿತವಾಗಿ ಮತ್ತೆ ಇವನ ತೆಕ್ಕೆಗೆ ಬಂದು ಸೇರಿದಳು.
ಮತ್ತದೇ ಇವನ ಪ್ರೀತಿಯ ವರಸೆಯ ಬಂಧ ಉಸಿರುಗಟ್ಟಿಸುತ್ತಿದೆ ಎಂದು ಗೊತ್ತಾಗುತ್ತಲೇ ಇನ್ನೊಂದು ಜೀವದತ್ತ ಸಾಗಿದಳು.
ಇದು ಗೊತ್ತಾಗುತ್ತಲೇ ಮತ್ತೆ ಈತ ತನ್ನ ಗಾಢಪ್ರೇಮವನ್ನು ಮತ್ತೆ ಆಕೆಗೆ ಅಪ್ಪಳಿಸಿದ.ಮತ್ತಷ್ಟು ಅವಳ ತೆಕ್ಕೆಯನ್ನು ಸೆಳೆದುಕೊಂಡ.
ಕೊನೆಗೂ ಆಕೆ ಮದುವೆಯಾದಳು.
ಕೈಹಿಡಿದು ಬಂದವನು ಶಾಂತನಿದ್ದ.ಪ್ರಶಾಂತನಿದ್ದ.ಸಮಚಿತ್ತದ ಧೀರನಂತಿದ್ದ.
ಮದುವೆಗೆ ಅವನು ಬಂದಿರಲಿಲ್ಲ.ಆತನನ್ನು ಮಂಟಪದಲ್ಲಿ ಒಂದು ಕ್ಷಣ ಧೇನಿಸಿದಳು.ಅವನು ಇರಬೇಕಿತ್ತು ಎಂದುಕೊಂಡಳು.ಅವನ ಪ್ರೇಮದ ಒಡ್ಡಿಗೆ ತಾನಿಟ್ಟ ಸವಾಲನ್ನು ಈ ಹಾರ,ಮಾಂಗಲ್ಯ,ಅರಶಿನಕುಂಕುಮ,ಅಕ್ಷತೆ ಮೂಲಕ ತೋರಿಸಬೇಕಿತ್ತು ಎಂದುಕೊಂಡಳು.
ಅವನು ಬರಲೇ ಇಲ್ಲ.ಹಾಗೇ ಬಾರದೇ ಇರುವುದಕ್ಕೆ ಆತನಲ್ಲಿ ಕಾರಣವೂ ಇತ್ತು.
ಅದು ಆಕೆಗೆ ಅವನ  ಅನುಪಸ್ಥಿತಿ ಗಮನಕ್ಕೆ ಬರಬಾರದು ಎಂಬುದೇ ಆಗಿತ್ತು.
ಆಕೆಯ ಮದುವೆಯಾಯಿತು.ಮಕ್ಕಳಾದವು.ಕಾಲ ಸಾಗುತ್ತಲೇ ಇತ್ತು.ಅವನು ಮೌನಕ್ಕೆ ಬಿದ್ದು ವರ್ಷಗಳೇ ಆಗಿದ್ದವು.
ಒಂದಲ್ಲ ಒಂದು ದಿನ ಆಕೆ ತನ್ನನ್ನು ಹುಡುಕಿ ಬರುತ್ತಾಳೆ ಎಂದು ನಂಬಿಕೊಂಡಿದ್ದ ಆತ.
ಆದರೆ ಆ  ನಂಬುಗೆ ಕಾರ್ಯಗತವಾಗಲೇ ಇಲ್ಲ.ಏಕೆಂದರೆ ಆಕೆ ಆತನನ್ನು ಮರೆತು ಅದೆಷ್ಟೋ ಕಾಲವಾಗಿತ್ತು.ದಿನವೂ ಮೈ ಮನಸ್ಸನ್ನು ಹೂವರಳಿಸುತ್ತಿದ್ದ ಆತ ಆಕೆಯ ಸೌಂದರ್ಯದ ಗುಟ್ಟಾಗಿದ್ದ.ರೂಪರಾಶಿಯ ಶಕ್ತಿಯಾಗಿದ್ದ.ಆದರೆ ಈಗಲ್ಲ.
ಕೊನೆಗೊಮ್ಮೆ ಆತನೇ ಆಕೆಯನ್ನು ಮಾತನಾಡಿಸಲು ಮುಂದಡಿಯಿಟ್ಟ.ಫೋನ್ ರಿಂಗಣಿಸಿದ.ಆಕೆಗೋ ಆ ನಂಬರ್ ಮರೆತೇ ಹೋಗಿತ್ತು.ಫೋನ್ ಬಂದೊಡನೆ ಸಹಜವಾಗಿ ಎತ್ತಿಕೊಂಡಳು.ಸ್ವರಕ್ಕೂ ಮೊದಲು ಹೊಮ್ಮಿದ ಆತನ ಉಸಿರಿನ ಲಯ ಆಕೆಯನ್ನು ತಲುಪಿತ್ತು.ಇಲ್ಲ ನಾನು ಮಾತನಾಡಲಾರೆ,ನನಗೆ ಬಿಡುವೇ ಇಲ್ಲ ಎಂದು ಹೇಳಿ ಕಟ್ ಮಾಡಿದಳು.
ದೇವದಾರು ಮರದಡಿ ಕುಳಿತಿದ್ದ ಆ ದಢಿಯನ ಮುಂದೆ ಆ ಫೋನ್ ಮಡಗಿದ ಆತ ಹೇಳಿದ,ಯಾರಾದರೂ ಎಂದಾದರೂ ನನ್ನನ್ನು  ಕೇಳಿದರೆ ಹೇಳಿಬಿಡಿ,ಅವರಿಲ್ಲ ಅಂತ.
ಆ ದಢಿಯ ಆ ಫೋನ್‌ನಿಂದ ತನಗೇನು ಲಾಭ ಎಂದು  ಬಹಳ ಕಾಲ ಯೋಚಿಸಿದ.
ಕೊನೆಗೊಮ್ಮೆ ಆ ಫೋನ್ ರಿಂಗಣಿಸಿತು.
ದಢಿಯ ಆ ಫೋನ್‌ನನ್ನು ಎತ್ತಿ ನದಿಗೆ ಎಸೆದ.