20140324

ಸೃಜನಶೀಲನಾಗುವುದು,ಪ್ರೀತಿಸುವುದು,ಮನುಷ್ಯನಾಗುವುದು
"" ....ನನ್ನ ಸೃಷ್ಟಿಕ್ರಿಯೆಯ ಜೀವಸೆಲೆಗಳಲ್ಲಿ,ನನ್ನ ಅನುಭವಿಸುವ ಕ್ರಮವನ್ನು ನಿರ್ಧರಿಸಿ,ನನ್ನ ಸಂವೇದನೆಯ ಮೇಲೆ "ನನ್ನತನ"ದ ಮುದ್ರೆಯೊತ್ತಿದ ಮೂಲಕಾರಣಗಳಲ್ಲಿ ಮೂರು ಮುಖ್ಯವಾಗಿವೆಯೆಂದು ನನಗೆ ತೋರಿದೆ.ಹನೇಹಳ್ಳಿ,ನನ್ನ-ಅಪ್ಪನ ಸಂಬಂಧ ಹಾಗೂ "ಮೃತ್ಯುಪ್ರಜ್ಞೆ".ನನ್ನ ಈ ವರೆಗಿನ ಸಾಹಿತ್ಯದ ಪ್ರಧಾನ ವಿಷಯಗಳಾದ "ನಿರಪರಾಧಿಯ ಯಾತನೆ" ಹಾಗೂ "ಸಾವು" ಇವುಗಳ ಹುಟ್ಟು ಕೂಡಾ ಈ ಮೂರರಲ್ಲಿದೆಯೆಂದು ನನಗನ್ನಿಸುತ್ತದೆ"---------ಯಶವಂತ ಚಿತ್ತಾಲ

ಚಿತ್ತಾಲರು ತೀರಿಕೋಡ ಸುದ್ದಿ ಸುದ್ದಿಯಾಗಲೇ ಇಲ್ಲ ಎಂದು ನನಗೆ ಅನಿಸುತ್ತಿದೆ.
ಚಿತ್ತಾಲರು ಸುದ್ದಿಯಾಗಲೇಬೇಕೆಂದು ಎಂದೂ ಹಠ ಮಾಡಿದವರೇ ಅಲ್ಲ.ಸಾವಿನಲ್ಲೂ ಅವರ ಇಚ್ಛೆಯಂತೆ ಆಗಿದೆ.
ಯಶವಂತ ಚಿತ್ತಾಲರು ಕನ್ನಡದ ಮಹಾನ್ ಕತೆಗಾರ.ಅವರ ಪಯಣ ಎಂಬ ಕತೆಯನ್ನು ಓದಿದವರು ಆ ಸಾಮ್ರಾಟನ ಮರೆಯುವುದು ಸಾಧ್ಯವೇ ಇಲ್ಲ.ಕನ್ನಡದ ಕತೆಗಾರರೆಲ್ಲಾ ಅಪರಾತಪರಾ ಆಗಿದ್ದಾಗ ಚಿತ್ತಾಲರು ದೃಢತೆಯಿಂದ ಬರೆದರು.ಅವರ ಕತೆಗಳ ಬಗ್ಗೆ ಹೇಳುವುದು ಸಾಧ್ಯವಾಗದ ಮಾತು ಅಥವಾ ಮುಕ್ತಾಯವಿಲ್ಲದ ಮಾತಾದೀತು.ಅವುಗಳನ್ನು ಓದಿಯೇ ಪಡೆದುಕೊಳ್ಳಬೇಕು.
ಚಿತ್ತಾಲರ ಹತ್ತಾರು ಕತೆಗಳನ್ನು ಮತ್ತು ಅವರ ಶಿಕಾರಿಯಂಥ ಕಾದಂಬರಿಯನ್ನು ಪುರುಷೋತ್ತಮ ಅಥವ ಛೇದವನ್ನು ಓದಿದ ಗಟ್ಟಿಗತನದಲ್ಲಿ ನಾನಿದನ್ನು ನಿರ್ಭಿಡೆಯಿಂದ ಹೇಳಬಲ್ಲೆ.
ಯಶವಂತ ಚಿತ್ತಾಲರ ಸಮಗ್ರ ಕಥಾ ಸಂಕಲನ ಬಂದಾಗ ನಾನು ಮತ್ತು ಜೋಗಿ ಅದನ್ನು ಅವರಿಂದ ಉಚಿತವಾಗಿ ತರಿಸಿಕೊಂಡಿದ್ದವು.ಆಗ ನಾವಿಬ್ಬರೂ ಶಾಲಾ ವಿದ್ಯಾರ್ಥಿಗಳು.ಎಲ್ಲೋ ಸಿಕ್ಕ ಆ ಕೃತಿಯನ್ನು ಓದಿದ ಮೇಲೆ ಅದನ್ನು ನಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕೆಂಬ ಅದಮ್ಯ ಆಸೆ ನಮಗಾಗಿತ್ತು.ಅದಕ್ಕಾಗಿ ನಾವಿಬ್ಬರೂ ಅವರಿಗೊಂದು ಪತ್ರ ಬರೆದೆವು.ವಾರದಲ್ಲೇ ಚಿತ್ತಾಲರ ಪತ್ರ.ಮತ್ತೆರಡು ದಿನಗಳಲ್ಲಿ ಇಬ್ಬರಿಗೂ ಪಾರ್ಸೆಲ್ ಮೂಲಕ ಎರಡು ಪುಸ್ತಕ!
ಚಿತ್ತಾಲರ ಶಿಕಾರಿ ನನ್ನನ್ನು  ಬಹಳ ಕಾಲ ಮತ್ತಷ್ಟು ಕಾಲ ಕಾಡಿದ ಕೃತಿ.ಈಗಲೂ ನನ್ನ ಮಕ್ಕಳ ಮುಂದೆ ಆ ಶಿಕಾರಿಯ ಸಾಲುಗಳನ್ನು ನಾನು ಕಂಠಪಾಠ ಒಪ್ಪಿಸುತ್ತಿದ್ದರೆ ಮಕ್ಕಳಿಬ್ಬರೂ ತದೇಕಚಿತ್ತರಾಗಿ ನೋಡುತ್ತಾರೆ.ಶಿಕಾರಿ ಬರೆದಾಗ ಚಿತ್ತಾಲರ ಮನಸ್ಸು ಅದೆಷ್ಟು ಅಂತರ್ಮುಖಿಯಾಗಿ ನಡೆಯುತ್ತಿತ್ತೋ ಗೊತ್ತಿಲ್ಲ.ಶಿಕಾರಿಯ ನಾಗಪ್ಪ ಮಾತ್ರಾ ಈ ಹೊತ್ತಾರೆಗೂ ನಮ್ಮೊಳಗೆ ಕಾಣಿಸುವ ಅಮೋಘ ವ್ಯಕ್ತಿ.ನಾಗಪ್ಪನ ಸುಟ್ಟ ಎದೆಯ ಮೂಲಕ ನಡೆಯುವ ಸಾಗುಹಾದಿಯಲ್ಲಿ ಬಂದೂಕವಾಲಾ ಶ್ರೀನಿವಾಸ ಮುಂತಾಗಿ ಎಲ್ಲರೂ ಈಗಲೂ ಇದ್ದಾರೆ ಇರಲೇಬೇಕು.
ಚಿತ್ತಾಲರು ಒಮ್ಮೆ ಪುತ್ತೂರಿಗೆ ಕಾರ್ಯಕ್ರಮವೊಂದಕ್ಕೆ ಬಂದಿದ್ದರು.ಅದು ನನ್ನ ಅಪ್ಪ ತೀರಿಕೊಂಡಿದ್ದ ಸಮಯ.ಆದರೂ ಚಿತ್ತಾಲರ ಭಾಷಣ ಕೇಳಬೇಕು ಎಂದು ನಾನು ಹೋದೆ.ಹಿಂದಿನ ಸಾಲಿನಲ್ಲಿ ಕುಳಿತು ಭಾಷಣ ಕೇಳಿ ಬಂದೆ.
ಇದಕ್ಕೂ ಕೆಲವು ಸಮಯದ ಹಿಂದೆ ನನ್ನ ಕತಾಸಂಕಲನಕ್ಕೆ ಮುನ್ನುಡಿ ಬರೆದುಕೊಡಿ ಎಂದು ಚಿತ್ತಾಲರನ್ನು ಕೇಳಿದ್ದೆ.ಆಗದು ಎಂದು ಅವರು ಹೇಳಿದರು.ಅದಕ್ಕೆ ಅವರು ತಮ್ಮ ಅನಾರೋಗ್ಯದ ಕಾರಣವನ್ನೂ ನೀಡಿದ್ದರು.
ಇದಾದ ಕೆಲವು ದಿನಗಳಲ್ಲಿ ಸುಬ್ರಾಯ ಚೊಕ್ಕಾಡಿಯವರು ಮುಂಬೈಗೆ ಹೋದವರು ಚಿತ್ತಾಲರನ್ನು ಭೇಟಿಯಾದರು.ಮಾತಿನ ಮಧ್ಯೆ ಪುತ್ತೂರಿನ ಕಾರ್ಯಕ್ರಮ ಬಂತು.ಸಭೆಗೆ ಕುಂಟಿನಿನೂ ಬಂದಿದ್ದ ಎಂದರು ಚೊಕ್ಕಾಡಿ.ಹೌದೇ ಎಂದರು ಚಿತ್ತಾಲರು.
ಆ ರಾತ್ರಿ ಚಿತ್ತಾಲರು ನಿದ್ದೆ ಮಾಡಲೇ ಇಲ್ಲ ಅಂತ ಅವರೇ ನಾನೊಮ್ಮೆ ಅವರನ್ನು ಮುಂಬೈನಲ್ಲಿ ಭೇಟಿಯಾದಾಗ ಹೇಳಿದ್ದರು.ಚೊಕ್ಕಾಡಿ ಅವರು ಹೋದ ರಾತ್ರಿ ನಿದ್ದೆ ಮಾಡದ ಚಿತ್ತಾಲರು ನಸುಕಿನಲ್ಲಿ ಎದ್ದು ಕುಳಿತು ನನಗೊಂದು ಪತ್ರ ಬರೆದರು.ಸುದೀರ್ಘವಾದ ಪತ್ರದಲ್ಲಿ ನಾನು ಅವರನ್ನು ಪುತ್ತೂರಿನಲ್ಲಿ ಭೇಟಿಯಾಗದೇ ಹೋದ ಕುರಿತು ವಿವರಣೆ ಬಯಸಿದ್ದರು.ಆ ಪತ್ರ ಚಿತ್ತಾಲರ ಕತೆಯಂತೆ ನನಗೆ ಭಾಸವಾಗಿತ್ತು.ಚಿತ್ತಾಲರ ಕಥೆಯಲ್ಲಿ ಬರುವ ಮನುಷ್ಯ ಸಂಬಂಧ ಆ ಪತ್ರದಲ್ಲಿ ದಾಖಲಾಗಿತ್ತು.ಮನುಷ್ಯ ಪ್ರೀತಿಗೆ ಒಂದು ಅನಂತ ದಾಖಲೆಯಾಗಿ ಆ ಪತ್ರ ನನ್ನನ್ನು ಬಹುಕಾಲ ಕಾಡಿತ್ತು.ನನಗೆ ಚಿತ್ತಾಲರನ್ನು ಭೇಟಿಯಾಗದೇ ಇರುವ ಖಂಡಿತ ಉದ್ದೇಶವಿರಲಿಲ್ಲ ಎಂದು ಹೇಳುವುದಕ್ಕೆ ನಾನು ಮುಂಬೈಗೆ ಹೋಗಬೇಕಾಯಿತು.ಅದೇ ಸಮಯದಲ್ಲಿ ನಾನು ಅಪ್ಪನನ್ನು ಕಳೆದುಕೊಂಡಿದ್ದು,ಆ ನೋವಿನ ದಿನಗಳಲ್ಲಿ ನನಗೆ ಚಿತ್ತಾಲರ ಜೊತೆ ಸಮಚಿತ್ತದಿಂದ ಮಾತನಾಡಲು ಸಾಧ್ಯವಾಗದು ಎಂಬ ಆತಂಕವೂ ಇದ್ದುದನ್ನು ಅವರಿಗೆ ವಿವರಿಸಿದೆ.
ಯಶವಂತ ಚಿತ್ತಾಲರು ಕೇವಲ ಕತೆಗಳ ಮೂಲಕ ನಮಗೆ ಅವರದ್ದೇ ಮಾತಿನಲ್ಲಿ ಹೇಳುವುದಾದರೆ ರೂಬುರೂಬು ಆದವರಲ್ಲ.ಅವರ ಕಥಾಸಂಕಲನ ಚಿತ್ತಾಲರ ಕತೆಗಳು ಎಂಬ ಪುಸ್ತಕದ ಮೊದಲ ಪುಟಗಳಲ್ಲಿ ಅವರು ಬರೆದ ಹೃದಯವುಳ್ಳ ಹಾದಿಯಲ್ಲಿ ಎಂಬ ೩೩ ಪುಟಗಳ ಮಹಾಪ್ರಬಂಧವೇ ಇದನ್ನು ಸಾಕ್ಷೀಕರಿಸುತ್ತದೆ.ನಾನು ಮಹಾಪ್ರಬಂಧ ಎಂದು ಉದ್ದೇಶಪೂರ್ವಕ ಇದನ್ನು ಕರೆದಿದ್ದೇನೆ.
ಹೃದಯವುಳ್ಳ ಹಾದಿಯಲ್ಲಿ ಅವರ ಮಾನವ ಅಂತಃಕರಣದ ಸಾಲುಗಳು.೧೯೪೯ ರಲ್ಲಿ ಅವರ ಬೊಮ್ಮಿಯ ಹುಲ್ಲು ಹೊರೆ ಎಂಬ ಮೊದಲ ಕಥೆಯ ಉಲ್ಲೇಖದಿಂದ ಆರಂಭವಾಗುವ ಆ ಹಾದಿಯಾಗಿದೆ.
ಚಿತ್ತಾಲರು ಹೇಳುತ್ತಾರೆ,ಕತೆಗಳ ಮಖಾಂತರ ಹೇಳಬಯಸಿದ್ದನ್ನು ಕತೆಗಳೇ ಹೇಳಬೇಕು.ಅವುಗಳ ಅರ್ಥಪ್ರಪಂಚದ ಹಲವು ಸಾಧ್ಯತೆಗಳು ಓದುಗರ ಸೃಜನಶೀಲ ಪ್ರಕ್ರಿಯೆಗಳಲ್ಲೇ ನಿಜಗೊಳ್ಳಬೇಕು ಎಂಬ ನಂಬಿಕೆ ನನ್ನದು..
ಸಾಹಿತ್ಯವೆಂಬುದು ಮಾನವೀಯ ಚಟುವಟಿಕೆ ಎಂದು ನಂಬಿ ಬರೆದವರು ಚಿತ್ತಾಲರು.
ಸಾಹಿತ್ಯ ಕೊನೆಗೂ ಒಂದು ಮಾಧ್ಯಮ.ಮನಸ್ಸು ತನ್ನ ಆವಿಷ್ಕಾರಕ್ಕಾಗಿ ತಾನೇ ನಿರ್ಮಿಸಿಕೊಂಡದ್ದು ಎಂದ ಚಿತ್ತಾಲರು ಅದಕ್ಕೆ ತನ್ನದೇ ಆದ ಆಯುಷ್ಯವಿದೆ ಎಂದದ್ದು ಎಷ್ಟೊಂದು ಕಟು ಸತ್ಯ!
ಸಾಹಿತ್ಯದ ಮುಖಾಂತರ ನಾವು ಮೊದಲಿನಿಂದಲೂ ತೊಡಗಿಸಿಕೊಂಡದ್ದು ಮನುಷ್ಯರಾಗಿ ಅರಳುವ ಪ್ರಕ್ರಿಯೆಯಲ್ಲಿ ಎಂದು ಅವರಾಡಿದ ಮಾತು.ಅದನ್ನೇ ಅವರು ಸೃಜನಶೀಲನಾಗುವುದು,ಪ್ರೀತಿಸುವುದು,ಮನುಷ್ಯನಾಗುವುದು ಸಮಾನಾರ್ಥವುಳ್ಳ ಪ್ರಕ್ರಿಯೆಗಳೆಂದು ಕರೆದರು!


20140304

ನಾಲ್ಕು ಸಾಲು


೧.
ಇನ್ನೂ ಮೂಡದ ಮುಂಜಾನೆಗೆ ಕಾಯುತ್ತಾ
ಮಲಗಿದ್ದ ಅವಳ ಮುಖದಲ್ಲಿ ರಾತ್ರಿಯ ಬೆರಗು ಆರಿರಲಿಲ್ಲ..
ಮನೆ ಹೊರಗಿನ ಕುಂಡದಲ್ಲಿ ಮೊಗ್ಗು ಕೂಡಾ ಮುಂಜಾನೆಗೆ ಕಾಯುವುದು
ಮುಂದಿನ ಸಂಜೆಯ ಸಾವನ್ನು ನೆನೆಯದೇ..
೨.
ಎಂಟೂ ದಿಕ್ಕುಗಳಲ್ಲಿ
ಅವಳಿಲ್ಲ
ಏಕೆಂದರೆ ಅವಳ ನೆನಪಿನ ಕೊಠಡಿಗೆ
ಅವನು ದಿಕ್ಕುಗಳನ್ನೇ ಮಡಗಿರಲಿಲ್ಲ
೩.
ಕಾಡುವ ನೆನಪುಗಳ ಬುತ್ತಿ ಕಟ್ಟಿದ ಅವನು
ಅವಳು ಹಸಿದು ಬರುವ ಘಳಿಗೆಗೆ ಕಾಯುವನು
ಅವಳಿಗೋ ಹಸಿವಿಲ್ಲ
ಅದಕ್ಕೇ ಅವಳೇ ಕಟ್ಟಿದ ಬುತ್ತಿಯೊಳಗೂ ಏನೂ ಇಲ್ಲ
೪.
ವೀಣೆಯ ತಂತಿಗಳಲ್ಲಿ ಹೊರಡುವ ನಾದಗಳಲ್ಲಿ
ಅವಳು ಅವನ ರಾಗವ ಪೋಣಿಸುವಳು
ಅವನೋ ಬತ್ತಿದ ಕಣ್ಣಾಲಿಗಳನ್ನು
ಮೀಟಿ ಹಾಡುವನು ಯಾವ ರಾಗದ ಹಂಗಿಲ್ಲದೇ

20140226

ಒಂದು ಮರದಂತೆ ಪ್ರೇಮಕಥೆಬಿಡುವೇ ಇಲ್ಲ ಅಂದುಬಿಟ್ಟಳು!
ಕಣ್ಣುಮಂಜಾಯಿತು.ಹಾಗಂದರೆ ಹೇಗೆ ಸ್ವಲ್ಪ ಹೊತ್ತಾದರೂ ಮಾತನಾಡು,ಮನಸ್ಸು ಭಾರವಾಗಿದೆ ಕಣೇ ಎಂದು ಗೋಗರೆದ.ಆಕೆ ಉತ್ತರಿಸಲಿಲ್ಲ.ಅರ್ಥವಾಯಿತು ಫೋನ್ ಕಟ್ ಮಾಡಿದ್ದಾಳೆ ಅಂತ.
ಅತ್ತಿತ್ತ ನೋಡಿದ.ಅದೇ ಹೆದ್ದಾರಿ.ಅದೇ ದೇವದಾರು ಮರ.
ಮರದ ಕೆಳಗೆ ಕೂತಿದ್ದ ಆ ದಢಿಯನ ಹೆಸರು ಜ್ಞಾಪಕಕ್ಕೆ ಬರಲಿಲ್ಲ.ಅವನು ನಕ್ಕ.ಇವನೂ ನಕ್ಕ.
ಆ ಫೋನ್,ಆಕೆಯ ಆ ಉತ್ತರ ಅಲ್ಲದೇ ಇರುತ್ತಿದ್ದರೆ ಕೇಳುತ್ತಿದ್ದನೋ ಏನೋ,ಏನಿದು ಯಾವತ್ತೂ ಇದೇ ಮರದಡಿ ಏನು ಮಾಡೋದು ನೀನು?
ಕೇಳಲಿಲ್ಲ.
ಕಿವಿ ಗುಯ್‌ಗುಟ್ಟುತ್ತಿತ್ತು.ನಾಳೆ ಡಾಕ್ಟರ್‌ನ ಭೇಟಿ ಮಾಡಬೇಕು.ಏನಿದು ತಮಟೆಯೊಳಗೆ ಡೋಲು ಬಾರಿಸಿದ ಹಾಗೇ ಶಬ್ದ ಕೇಳುತ್ತಿದೆ ಎಂದು ಕೇಳಬೇಕು.ಅವರು ನರದ ದೋಷ ಎಂದರೆ ಹೌದಾ ಸರಿ ಅಂತ ಬರಬೇಕು.ಔಷಧಿಯ ಚೀಟಿಯನ್ನು ಇದೇ ದೇವದಾರು ಮರದ ಕೆಳಗೆ ಹರಿದು ಹಾಕಬೇಕು.
ಯಾಕೋ ಅವಳ ನೆನಪಾಯಿತು.ಗೆಳೆಯನ ಗೆಳತಿ.ಅವಳ ಸಂಕಟಗಳನ್ನು ಕೇಳಲು ಅದೆಷ್ಟೋ ಬಾರಿ ನಾನೇ ಕಿವಿಯಾಗಿದ್ದೆ.ಅವಳು ಅದೊಮ್ಮೆ ಹೇಳಿದ್ದಳು,ಯಾಕೋ ನಾನು ಅತಿಯಾಗಿ ಯೋಚಿಸುತ್ತಿದ್ದೇನೇನೋ ಅಂತ ಅನಿಸುತ್ತಿದೆ.
ಆಗ ರಬ್ಬಿಶ್ ಅಂತ ಅನಿಸಿತ್ತು.ತಲೆ ತಿಂತಾಳೆ ಅಂತ ಸಿಟ್ಟು ಬರುತ್ತಿತ್ತು.ಇವರ ಲವ್,ಇವರ ಗ್ರಾಚಾರಕ್ಕೆಲ್ಲಾ ನಾನೇಕೆ ಕಿವಿಯಾಗಬೇಕು ಎಂದು ಕೋಪ ಬರುತ್ತಿತ್ತು.ಆದರೆ ಅವಳ ನೋವು ಸಂಕಟವೆಲ್ಲವೂ ನನ್ನದೇ ಆಗುವ ಘಳಿಗೆ ಬರುತ್ತದೆ ಎಂದುಕೊಂಡಿರಲಿಲ್ಲ.
ಮತ್ತೊಮ್ಮೆ ಫೋನ್ ಟಂಕಿಸಲೇ ಅಂದುಕೊಂಡ.ಬೇಡ.ಯಾವಾಗ ಅವಳು ತನಗೆ ಬಿಡುವೇ ಇಲ್ಲ ಅಂದಳೋ ಇನ್ನು ಮಾತೇ ಇಲ್ಲ ಅಂತ ಸುಮ್ಮನಾದ.
ಆದರೂ ಮನಸ್ಸು ಹಠ ಬಿಟ್ಟಿರಲಿಲ್ಲ.ಇನ್ನೊಮ್ಮೆ ಮಾತನಾಡೇ ಬಿಡೋಣ ಅಂತ ಫೋನ್ ಬಟನ್ ಮೇಲೆ ನಂಬರ್ ಛಾಪಿಸಿದ.ರಿಂಗ್ ಹೊಡೆಯತೊಡಗಿತು.ಶಾಲೆ ಗಂಟೆ ಬಾರಿಸಿದ ಹಾಗೇ.
ಆ ತುದಿಯಿಂದ ಉತ್ತರ ಬರಲಿಲ್ಲ.
ಮನಸ್ಸು ಭಾರವಾಯಿತು.ಕಿವಿ ತಮಟೆಯಲ್ಲಿ ಮತ್ತೆ ಡೋಲಿನ ಶಬ್ದ.
ಗಟ್ಟಿಯಾಗಿ ಅತ್ತು ಬಿಟ್ಟರೆ ಮನಸ್ಸು ಹಗುರವಾಗಿ ಎಲ್ಲವೂ ಮುಗಿದು ಹೋಗುತ್ತದೆ ಎಂಬ ನಂಬುಗೆಗೆ ಈಡಾಗಲೇ ಎಂದುಕೊಂಡ.
ಆಕೆ ಪ್ರತೀ ನಿತ್ಯವೂ ನನ್ನ ಜೊತೆ ಮಾತನಾಡಲೇಬೇಕು ಎಂಬ ಹಠ ಯಾವುದಕ್ಕೆ ಶುರುವಾಗಿದೆ ಎಂದು ತಲ್ಲಣಿಸಿದ.ಇಷ್ಟಕ್ಕೂ ಆಕೆ ಏಕಾದರೂ ಮಾತನಾಡಬೇಕು ಎಂದು ಮತ್ತೊಂದು ಮನಸ್ಸು ಕೇಳುತ್ತಿತ್ತು.ಉತ್ತರ ಅಲ್ಲೂ ಇಲ್ಲ ಇಲ್ಲೂ ಇಲ್ಲ.
ಅವಳು ದೂರವಾಗಿದ್ದಾಳೆ ಎಂಬುದು ಖಚಿತವಾಯಿತು.
ಇದು ಅನೇಕ ಬಾರಿ ಆಗಿದೆ.ಅವಳಿಗೆ ಮೊಬೈಲ್ ಫೋನ್ ತಾನೇ ಕೊಡಿಸಬೇಕು ಎಂದು ಆತ ಗುಟ್ಟಾಗಿ ಖರೀದಿಸಿ ತಂದಿಟ್ಟುಕೊಂಡಿದ್ದ ಮೊಬೈಲ್ ಫೋನ್‌ನನ್ನು ಇದೇ ದೇವದಾರು ಮರದ ಬೊಡ್ಡೆಯಲ್ಲಿ ಕುಳಿತು ನದಿಗೆ ಎಸೆದು ಎಷ್ಟು ವರ್ಷಗಳಾದವು ಎಂದು ಲೆಕ್ಕ ಹಾಕಿದ.
ಆಹಾ ಆ ದಿನ ಆಕೆ ನೋಡಿ ನನ್ನ ಮೊಬೈಲ್ ಅಂತ ತೋರಿಸಿದಾಗ ಅವಾಕ್ಕಾಗಿದ್ದ.
ಇದು ನಾನೇ ಖರೀದಿಸಿದೆ ಎಂದು ಆಕೆ ಸುಳ್ಳೇ ಹೇಳಿದ್ದಾಳೆ ಎಂಬುದು ಗೊತ್ತಾಗಲು ಆತನಿಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ.ಏಕೆಂದರೆ ಆಕೆ ಆ ಮೊಬೈಲ್‌ನಿಂದ ಮಾಡಿದ ಮೊದಲ ಕಾಲ್‌ನಲ್ಲಿ ಆತನ ಹೆಸರಿರಲಿಲ್ಲ.ಅದು ಇನ್ಯಾರದ್ದು ಎಂದು ಊಹಿಸುವುದಕ್ಕೂ ಆತನಿಗೆ ಹೆಚ್ಚು ಸಮಯ ಬೇಕಾಗಿ ಬರಲಿಲ್ಲ.
ಆಮೇಲೆ ಆತ ಆಕೆಯನ್ನು ಹೆಚ್ಚುಹೆಚ್ಚು ಪ್ರೀತಿಸತೊಡಗಿದ.ಆಕೆ ಎಲ್ಲಾದರೂ ತನ್ನಿಂದ ದೂರವಾಗಬಹುದು ಎಂಬ ಆತಂಕ ಆತನಿಗೆ ಅರಿವಿಲ್ಲದಂತೇ ಆಕೆಯ ಮೇಲಿನ ಹುಚ್ಚು ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿತು.ಹೇಗೂ ಮೊಬೈಲ್ ಫೋನ್ ನಲ್ಲಿ ಸಿಗುತ್ತಾಳೆ ಎಂದಾಗಿದೆ.ಆದರೆ ಅದೆಷ್ಟು ಬಾರಿ ಕರೆ ಮಾಡಿದಾಗಲೂ ಆಕೆ ಆಕೆಯೇ ಹೇಳುತ್ತಿದ್ದ ಆಕೆಯ ಅಣ್ಣನ ಜೊತೆಯೇ ಮಾತನಾಡುತ್ತಿದ್ದಳು.
ಅವನಿಗೆ ಖಚಿತವಾಗತೊಡಗಿತು.ಆಕೆ ಇನ್ನು ತನ್ನವಳಲ್ಲ ಎಂಬುದು.ಅದು ಗಟ್ಟಿಯಾಗುತ್ತಾ ಆಗುತ್ತಾ ಹೋದಂತೆ ಮತ್ತಷ್ಟು ಆಕೆಯನ್ನು ಪ್ರೀತಿಸುತ್ತಾ ಬಲವತ್ತರಗೊಂಡ.ಆಕೆಯ ಸಾನ್ನಿಧ್ಯದಿಂದ ಹೊರಗೆ ಬರಲೇಬಾರದು ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡ.ಅವಳು ಯಾರ ಜೊತೆ ಬೇಕಾದರೂ ಓಡಾಡಲಿ,ಮಾತನಾಡಲಿ,ಒಂದೊಮ್ಮೆ ಮದುವೆಯೇ ಆಗಲಿ,ಅವಳಿಗೆ ನನಗಿಂತ ಹೆಚ್ಚು ಪ್ರೀತಿಯನ್ನು ಇನ್ಯಾರೂ ಕೊಡಬಾರದು ಎಂದು ತರ್ಕಕ್ಕೆ ನಿಂತೇಬಿಟ್ಟ.
ಆಕೆಗೇ ಅಚ್ಚರಿ,ಆಘಾತವಾಗತೊಡಗಿತು.ಇವನ ಪ್ರೀತಿಯ ತೀವ್ರತೆಯಿಂದ ಆಕೆ ಪಾರಾಗಲು ಇನ್ಯಾವುದೋ ದಾರಿ ಹುಡುಕಲೇಬೇಕಿತ್ತು.ಅದಕ್ಕಾಗಿ ಆಕೆ ಒದ್ದಾಡತೊಡಗಿದಳು.ರಾತ್ರಿ ಹಗಲ್ಲೆನ್ನದೇ ಪ್ರೀತಿಸುವವನ ಅಕ್ಷರಶಃ ದಾಳಿಯಿಂದ ಪಾರಾಗಲೇಬೇಕು ಎಂದು ಆಕೆ ಆ ಯುವಕನಿಗೆ ಮಾರುಹೋದಳು.ಅವನ ಜೊತೆ ಎಲ್ಲೆಂದರಲ್ಲಿ ಓಡಾಡಿದಳು.ಇವನ ಸೆಳೆತದಿಂದ ಹೇಗಾದರೂ ಮಾಡಿ ದಡ ಸೇರಬೇಕು ಎಂದು ಹಠಕ್ಕೆ ಬಿದ್ದಳು.
ಆದರೆ ಹಾಗೇ ಆಯ್ಕೆ ಮಾಡಿಕೊಂಡ ನಾವೆ ಮೋಸ ಮಾಡುತ್ತಿದೆ ಎಂದು ಖಚಿತವಾಗಿ ಮತ್ತೆ ಇವನ ತೆಕ್ಕೆಗೆ ಬಂದು ಸೇರಿದಳು.
ಮತ್ತದೇ ಇವನ ಪ್ರೀತಿಯ ವರಸೆಯ ಬಂಧ ಉಸಿರುಗಟ್ಟಿಸುತ್ತಿದೆ ಎಂದು ಗೊತ್ತಾಗುತ್ತಲೇ ಇನ್ನೊಂದು ಜೀವದತ್ತ ಸಾಗಿದಳು.
ಇದು ಗೊತ್ತಾಗುತ್ತಲೇ ಮತ್ತೆ ಈತ ತನ್ನ ಗಾಢಪ್ರೇಮವನ್ನು ಮತ್ತೆ ಆಕೆಗೆ ಅಪ್ಪಳಿಸಿದ.ಮತ್ತಷ್ಟು ಅವಳ ತೆಕ್ಕೆಯನ್ನು ಸೆಳೆದುಕೊಂಡ.
ಕೊನೆಗೂ ಆಕೆ ಮದುವೆಯಾದಳು.
ಕೈಹಿಡಿದು ಬಂದವನು ಶಾಂತನಿದ್ದ.ಪ್ರಶಾಂತನಿದ್ದ.ಸಮಚಿತ್ತದ ಧೀರನಂತಿದ್ದ.
ಮದುವೆಗೆ ಅವನು ಬಂದಿರಲಿಲ್ಲ.ಆತನನ್ನು ಮಂಟಪದಲ್ಲಿ ಒಂದು ಕ್ಷಣ ಧೇನಿಸಿದಳು.ಅವನು ಇರಬೇಕಿತ್ತು ಎಂದುಕೊಂಡಳು.ಅವನ ಪ್ರೇಮದ ಒಡ್ಡಿಗೆ ತಾನಿಟ್ಟ ಸವಾಲನ್ನು ಈ ಹಾರ,ಮಾಂಗಲ್ಯ,ಅರಶಿನಕುಂಕುಮ,ಅಕ್ಷತೆ ಮೂಲಕ ತೋರಿಸಬೇಕಿತ್ತು ಎಂದುಕೊಂಡಳು.
ಅವನು ಬರಲೇ ಇಲ್ಲ.ಹಾಗೇ ಬಾರದೇ ಇರುವುದಕ್ಕೆ ಆತನಲ್ಲಿ ಕಾರಣವೂ ಇತ್ತು.
ಅದು ಆಕೆಗೆ ಅವನ  ಅನುಪಸ್ಥಿತಿ ಗಮನಕ್ಕೆ ಬರಬಾರದು ಎಂಬುದೇ ಆಗಿತ್ತು.
ಆಕೆಯ ಮದುವೆಯಾಯಿತು.ಮಕ್ಕಳಾದವು.ಕಾಲ ಸಾಗುತ್ತಲೇ ಇತ್ತು.ಅವನು ಮೌನಕ್ಕೆ ಬಿದ್ದು ವರ್ಷಗಳೇ ಆಗಿದ್ದವು.
ಒಂದಲ್ಲ ಒಂದು ದಿನ ಆಕೆ ತನ್ನನ್ನು ಹುಡುಕಿ ಬರುತ್ತಾಳೆ ಎಂದು ನಂಬಿಕೊಂಡಿದ್ದ ಆತ.
ಆದರೆ ಆ  ನಂಬುಗೆ ಕಾರ್ಯಗತವಾಗಲೇ ಇಲ್ಲ.ಏಕೆಂದರೆ ಆಕೆ ಆತನನ್ನು ಮರೆತು ಅದೆಷ್ಟೋ ಕಾಲವಾಗಿತ್ತು.ದಿನವೂ ಮೈ ಮನಸ್ಸನ್ನು ಹೂವರಳಿಸುತ್ತಿದ್ದ ಆತ ಆಕೆಯ ಸೌಂದರ್ಯದ ಗುಟ್ಟಾಗಿದ್ದ.ರೂಪರಾಶಿಯ ಶಕ್ತಿಯಾಗಿದ್ದ.ಆದರೆ ಈಗಲ್ಲ.
ಕೊನೆಗೊಮ್ಮೆ ಆತನೇ ಆಕೆಯನ್ನು ಮಾತನಾಡಿಸಲು ಮುಂದಡಿಯಿಟ್ಟ.ಫೋನ್ ರಿಂಗಣಿಸಿದ.ಆಕೆಗೋ ಆ ನಂಬರ್ ಮರೆತೇ ಹೋಗಿತ್ತು.ಫೋನ್ ಬಂದೊಡನೆ ಸಹಜವಾಗಿ ಎತ್ತಿಕೊಂಡಳು.ಸ್ವರಕ್ಕೂ ಮೊದಲು ಹೊಮ್ಮಿದ ಆತನ ಉಸಿರಿನ ಲಯ ಆಕೆಯನ್ನು ತಲುಪಿತ್ತು.ಇಲ್ಲ ನಾನು ಮಾತನಾಡಲಾರೆ,ನನಗೆ ಬಿಡುವೇ ಇಲ್ಲ ಎಂದು ಹೇಳಿ ಕಟ್ ಮಾಡಿದಳು.
ದೇವದಾರು ಮರದಡಿ ಕುಳಿತಿದ್ದ ಆ ದಢಿಯನ ಮುಂದೆ ಆ ಫೋನ್ ಮಡಗಿದ ಆತ ಹೇಳಿದ,ಯಾರಾದರೂ ಎಂದಾದರೂ ನನ್ನನ್ನು  ಕೇಳಿದರೆ ಹೇಳಿಬಿಡಿ,ಅವರಿಲ್ಲ ಅಂತ.
ಆ ದಢಿಯ ಆ ಫೋನ್‌ನಿಂದ ತನಗೇನು ಲಾಭ ಎಂದು  ಬಹಳ ಕಾಲ ಯೋಚಿಸಿದ.
ಕೊನೆಗೊಮ್ಮೆ ಆ ಫೋನ್ ರಿಂಗಣಿಸಿತು.
ದಢಿಯ ಆ ಫೋನ್‌ನನ್ನು ಎತ್ತಿ ನದಿಗೆ ಎಸೆದ.