20131011

ಉತ್ತರ ನೋಟ


ನಿಜವಾದ ಸುಖಿಗಳು ಇವರೇ..
ಕೇಳಿದೆ,ಎಷ್ಟು ವರ್ಷ ವಯಸ್ಸು ನಿಮಗೆ ಅಜ್ಜ..?
ಅವರು ಹೇಳಿದರು ಸುಮಾರು ಎಂಭತ್ತಮೂರು ಇರಬಹುದು.ಹೆಗಲ ಮೇಲೊಂದು ಸಣ್ಣ ಕೊಡಲಿ ಹಿಡಿದು ಕಚ್ಚೆ ಅಂಗಿ ಬಿಳಿ ಬಿಳಿ..ಸಣ್ಣ ಹುರಿಮೀಸೆ.
ಧರ್ಮಸ್ಥಳಕ್ಕೆ ಬಂದಿದ್ದೀರಾ ಎಂದೆ...
ಸಾಮಾನ್ಯವಾಗಿ ಧರ್ಮಸ್ಥಳ ಕುಕ್ಕೆ ನೋಡದ ಘಟ್ಟದವರಿಲ್ಲ ಎಂದುಕೊಂಡಿದ್ದೆ.
ಇಲ್ಲ ಅಂದರು.
ಬಸವಣ್ಯಜ್ಜ...
ಸಜ್ಜೆ ಬಿತ್ತಿದ್ದೆ.ಹಾಗೇ ಹೊಲದಲ್ಲಿ ಅದು ಏನಾಗಿದೆ ಎಂದು ನೋಡಿಕೊಂಡು ಬರೋಣ ಅಂತ ಹೊರಟಿದ್ದೆ ಎಂದರು.
ಅವರ ಭಾಷೆಯ ವಾಕ್ಯಗಳನ್ನು ಉದ್ದೇಶಪೂರ್ವಕ ಇಲ್ಲಿ ದಾಖಲಿಸಿಲ್ಲ.
ಮೂರು ಮೈಲಿ ಆಗಬಹುದೇನೋ ದೂರ..
ಕೊಡಲಿ ಏತಕ್ಕೋ..
ಅದೇ ಹೊಲದಲ್ಲಿ ಗಿಡಗಂಟಿ ಇದ್ದರೆ ಅದನ್ನ ಸಪಾಟು ಮಾಡುವುದಕ್ಕೆ...
ಮಳೆ ಬಂದಿಲ್ಲ..ಬರಬೇಕಿತ್ತು...ಬಾರದೇ ಇದ್ದರೆ ಈ ಬಾರಿಯ ಬೆಳೆ ಉಳಿಯೋದಿಲ್ಲ ಅಂತಲ್ಲ...ಹುಟ್ಟುವುದೇ ಇಲ್ಲ.ಹುಟ್ಟದೇ ಇದ್ದರೆ ಅದರ ಚಿಂತೆ ಬಸವಣ್ಣಯಜ್ಜನಿಗಿರಲಿಲ್ಲ..
ಮತ್ತೊಂದು ಹಂಗಾಮಿಗೆ ಕಾಯುವುದು....ಅಲ್ಲಿ ತನಕ...
ಸಮಾಧಾನವಾಗಿರೋದು...
ಇಂದು ನಿನ್ನೆ ಥರ ಮಾತಾಡಬೇಡಿ....ನಾನೇ ಎಪ್ಪತ್ತೆಂಟು ವರ್ಷಗಳಿಂದ ಬದುಕಿದ್ದೇನೆ...
ಯಾವ ಆತಂಕವೂ ಇಲ್ಲದೇ..
ಹುಟ್ಟಾ ನೆಮ್ಮದಿಯನ್ನು ಕಟ್ಟಿಕೊಂಡೇ ಹುಟ್ಟಿದವರ ಹಾಗೇ....
ಮನೆಯಲ್ಲಿ ಆರು ಮಂದಿ ಮಕ್ಕಳು..ಅವರಲ್ಲಿ ಒಬ್ಬ ಮಗ.ಒಕ್ಕಲುತನ ಒಲ್ಲೆ ಎಂದ.ಸೀದಾ ಹೋಗಿ ಪೊಲೀಸ ಆದ...ಅವನ ಹೆಂಡತಿ ಪಟ್ಟಣದಲ್ಲಿ ಇಸ್ಕೂಲು ಮಾಡ್ತಾಳೆ.
ಮೂರು ಮಗಳಂದಿರು ಮದುವೆ ಆಗಬೇಕು...ಕೊನೆಯವಳಿಗೆ ಮೂವತ್ತೆಂಟು ವರ್ಷ..
ಸಜ್ಜೆ ಬೆಳೆ ಭರಪೂರ ಬಂದು ಬಿಟ್ಟಾಗ ನೆನಪಾಗುತ್ತದೆ.ಯಾರಾದರೂ ಬಂದರೆ ಮಗಳಿಗೆ ಮದುವೆ ಮಾಡಿಸಬಹುದೇನೋ ಅಂತ.ಬೆಳೆ ಕೈಕೊಟ್ಟಾಗಲೆಲ್ಲಾ ಮಗಳಂದಿರು ಜೊತೆಗೆ ಇರುತ್ತಾರೆ..ಹಸಿವು ಹಂಚಿಕೊಳ್ಳುತ್ತೇವೆ..!!
ಮುಂದಿನ ಊರು ಗಜೇಂದ್ರಗಢ ಎಂದರು ಬಸವಣ್ಯಜ್ಜ.
ಇಂದು ಅಮಾವಾಸ್ಯೆ..ರೊಟ್ಟಿ ತಟ್ಟಲ್ಲ..
ಏಕೆಂದರೆ ರೊಟ್ಟಿ ತಟ್ಟಿದರೆ ಶಬ್ದ ಆಗುತ್ತದೆ..ಶಬ್ದ ಆದರೆ ಪಿತೃಗಳಿಗೆ ಆಗೋದಿಲ್ಲ.ಹಾಗಾಗಿ ಸುಮ್ಮನಿರಬೇಕು.ಶಬ್ದ ಮಾಡಬಾರದು..ಅದಕ್ಕೆ ಹೋಳಿಗಿ ಮಾಡುತ್ತೇವೆ..
ಐದಾರು ಹೋಳಿಗೆ ಕಟ್ಟಿಸಿಕೊಂಡಿದ್ದೆ.ತಲಾ ಇಪ್ಪತ್ತು ರೂಪಾಯಿ..ಒಂದನ್ನು ಬಸವಣ್ಯಜ್ಜನಿಗೆ ಕೊಟ್ಟೆ.ಮುರಿದು ಮುರಿದು ತಿಂದರು.
ಗಂಟಲು ಕಟ್ಟಿದ ಹಾಗಿತ್ತು.ನೀರು ಬೇಕಾ ಎಂದು ಬಾಟಲಿ ಕೊಟ್ಟೆ.ಮುಚ್ಚಳ ತೆರೆದರು.ಬಾಗಿ ಹಿಡಿದುಕೊಂಡು ಅಂಗೈಗೆ ಸುರಿವುಕೊಂಡು ಗಟಗಟನೆ ಕುಡಿದರು...
ಹೊಸದಾಗಿ ಪರಿಚಯವಾಗಿ ಆ ಹೊತ್ತಿಗೆ ಬಂಧುವೇ ಆಗಿಹೋದ ಸಂಗಮೇಶ ನನ್ನ ಮುಂದೆ ಕುಳಿತಿದ್ದರು.
ಕೂಡಲಸಂಗಮದಲ್ಲಿ ಆತ ಒಂದು ಸ್ಕೂಲ್ ಮಾಡಿದ್ದಾನೆ. ಸುತ್ತಲಿನ ಮೂವತ್ತಾರು ಹಳ್ಳಿಗಳ ಮಕ್ಕಳಿಗೆ ಕಂಪ್ಯೂಟರ್  ಕಲಿಸೋಬೇಕು ಅಂತ ಆತ ಅಖಂಡವಾಗಿ ನಿರ್ಧರಿಸಿದ್ದಾನೆ.
ಎಂಥಾ ಸೌಜನ್ಯ.ಕಿಂಚಿತ್ತೂ ಠಕಾರಿ ಇಲ್ಲ.
ಹೊಲದಲ್ಲಿ ಒಕ್ಕಲುತನ ಮಾಡುತ್ತೇವೆ ಎಂದರು.
ಒಕ್ಕಲುತನದ ಕುರಿತು ಸಂಗಮೇಶ ಅರ್ಧತಾಸು ವಿವರಿಸುತ್ತಿದ್ದರು.ಒಕ್ಕಲುತನದ ಅಪ್ರಮೇಯ ಸಾಧ್ಯತೆಗಳನ್ನು ಬಣ್ಣಸುತ್ತಿದ್ದರು.
ನಮ್ಮ ಹುಡುಗಿಯರನ್ನು ನಾವು ಬೇರೆಲ್ಲೂ ಕೊಡಲ್ಲ..ಒಕ್ಕಲುತನ ಮಾಡುವವರಿಗೇ ಕೊಡುತ್ತೇವೆ.ಆಕೆಗೆ ಹೊಲವೇ ಗಂಡ ಎಂದರು.
ಹೊಲವೇ ಗಂಡ!
ಹಿಂದಿನ ರಾತ್ರಿ ಕೂಡಲಸಂಗಮದ ಯಾತ್ರಿ ನಿವಾಸದಲ್ಲಿ ಯಾಕೋ ನಿದ್ದೆ ಬಿದ್ದಿರಲಿಲ್ಲ.ಯಾವುದೋ ಆತಂಕ ಕಾಡುತ್ತಿತ್ತು.ನಿರಾಳವಾಗಿರಲಾದೇ ತಡ ರಾತ್ರಿ ತನಕ ಬೇಗುದಿಯಲ್ಲಿದ್ದೆ.
ಹೊಲವೇ ಗಂಡ ಎಂದರು ಸಂಗಮೇಶ.
ನಾಳೆ ದಿನ ಆಕೆಯ ಗಂಡ ಸಾಯಬಹುದು..ಎರಡು ಮೂರು ಮಕ್ಕಳನ್ನು ಕೊಟ್ಟು ಓಡಿಹೋಗಬಹುದು..
ಹೆದರೋದಿಲ್ಲ ಆಕೆ,
ಆಕೆಗೆ ಆತ ಎಂದೂ ಗಂಡನೇ ಅಲ್ಲ.ಅವಳ ಗಂಡ ಹೊಲ.
ಹೊಲದ ಬದುಕು..ಅದೆಷ್ಟು ಕಾಲ ಆಕೆ ಬದುಕುತ್ತಾಳೆ...ಆಕೆಯ ಮಕ್ಕಳೂ ಬದುಕುತ್ತಾರೆ....ಆ ಮಕ್ಕಳಿಗೂ ಆ ಹೊಲವೇ ತಂದೆ..ಆಮೇಲೆ ಅವರೂ ಗಂಡನ ಹುಡುಕಿ ಹೋಗುತ್ತಾರೆ.ಆ ಆಸರೆಯಲ್ಲಿ ನೆಮ್ಮದಿಯಾಗಿರುತ್ತಾರೆ..ಅವರಿಗೂ ಮುಂದೆ ಹೊಲವೇ ಗಂಡ.
ಇವರು ಏನಾದರೂ ಹೊಲವೆಂಬ ಗಂಡನ ಬಿಟ್ಟು ಎದ್ದು ಹೋದರೆ ನಾವು ಮಣ್ಣು ಕೂಡಾ ತಿನ್ನಲಾರೆವು.
ಮಲ್ಲಿಗಿ ಹೋಟೇಲಿನ ಮುಂಜಾನೆಯ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್‌ಗೆ ಕಲ್ಲು ಮರಳು ಅಥವ ಜರಡಿ ಹಿಡಿದ ಕಪ್ಪು ಮಣ್ಣನ್ನೇ ಇಟ್ಟುಬಿಡಬೇಕು.
ದಾರಿ ಮಧ್ಯೆ ಚೆಂಬು ಹಿಡಿದು ಕೂರುತ್ತಾರೆ...
ಥೂ ಇವರ..
ನಿಮಗೇನು ಕಷ್ಟ ಸ್ವಾಮೀ??ನೀವೇನು ಕಾರಿಂದ ಇಳಿದು ಕಾಲಿಗೆ ಮೆತ್ತಿಸಿಕೊಳ್ಳುತ್ತೀರಾ??
ಅವರ ಸುಖ ಕೇಳಲು ನೀವು ಯಾರು??ಅವರ ಕಷ್ಟಕ್ಕೆ ನೀವು ಇದ್ದೀರಾ??ಇರುವುದಾದರೆ ಮಾತನಾಡಿ...
ದುಡಿಯೋದಿಲ್ಲ...ಒಂದಾದರೂ ಗಿಡ ನೆಟ್ಟು ಒಂದು ಬಾಳೆಗೊನೆ ಕಡಿದವರಾ ನೀವು?ಒಂದು ತೆನೆ ಜೋಳ ನಿಮ್ಮದೇ ಅಂತ ಸಾಬೀತು ಮಾಡಿ...
ಹಣದ ಚೀಲ ಹಿಡಿದರೆ ನಿಮ್ಮದಾಗೋದು ಯಾರು ಸಾರಿದ ಶಾಸನ??
ಒಂದು ಮುಷ್ಟಿ ಅಕ್ಕಿ ನಿಮ್ಮ ಸೈಟಿನಲ್ಲಿ ಅರಳಿಸಿ ತೋರಿಸಿ ನೋಡೋಣ..
ಬಾದಾಮಿಗೆ ಇನ್ನೂ ಹದಿನೈದು ಕಿಮೀ ಇರಬೇಕು.ಅಮೀನಗಢದ ಕರದಂಟು ಇನ್ನೂ ಘಮ್ಮೆನುತ್ತಿದೆ.ಚೌಕಾಶಿ ಇಲ್ಲವೇ ಅಂದರೆ..ಕರದಂಟು ತೂಕಕ್ಕೆ ಹಾಕಿದವನು ಹೇಳಿದ...ನಿಮ್ ಕಡೆ ಗೋಡಂಬಿ ಕಿಲೋಗೆ ಆರುನೂರು ರೂಪಾಯಿ ಕಡಿಮೆ ಇಲ್ಲ..
ಮಾತನಾಡದೇ ಕಟ್ಟಿಕೊಂಡೆ.
ಇವರ ಬದುಕನ್ನಿ ಸೀರಿಯೆಲ್ ಅಥವಾ ಸಿನಿಮಾ ಅಥವಾ ಕಾದಂಬರಿ ಕತೆ ಅಂತೆಲ್ಲಾ ಮಾಡಿ ಯಾರೂ ಪಾಪ ಮಾಡಿಕೊಳ್ಳಬಾರದು.
ಪರಶುರಾಮ ಖಡ್ಗವನ್ನು ತೊಳೆದಾಗ ಅಯ್ಯಯ್ಯೋ ಹೊಳೆ ಕೆಂಪಾಯಿತು ಕೆಂಪಾಯಿತು...
ಹಾಗೇ ಆಗುವುದು.
ಈರುಳ್ಳಿ ರಾಶಿ ಮೇಲೆ ಕಳೆದ ನಾಲ್ಕು ದಿನಗಳಿಂದ ಮಲಗಿದ್ದ ಈರಪ್ಪ ಮತ್ತೆ ವರ್ಷ ಕಾಲ ಕಾಯಲೂ ಸಿದ್ಧ.ಹೈದರಾಬಾದದಿಂದ ಬರುವ ಲಾರಿಗೆ ಉಳ್ಳಾಗಡ್ಡಿ ತುಂಬಬೇಕು.ಅದಕ್ಕೂ ಮೊದಲು ಮಾಲಿಗೆ ಏನು ಎಷ್ಟು ಅಂತ ಪಕ್ಕಾ ಮಾಡಿಕೊಳ್ಳಬೇಕು.
ಈರುಳ್ಳಿಯಲ್ಲಿ ಮೂರು ನಮೂನೆ ಮಾಡುತ್ತಾರೆ.ದೊಡ್ಡ ಸೈಜಿಗೆ ನಾಲುವತ್ತು.ಮೀಡಿಯಂಗೆ ೩೦ ಮತ್ತು ಸಣ್ಣ ಸೈಜಿಗೆ ೧೮ ರೂಪಾಯಿ.
ನಿಮ್ಮೂರಲ್ಲಿ ಇದನ್ನ ಮಿಕ್ಸ್ ಮಾಡಿ ಐವತ್ತು ಕೊಡಿ ಅಂತಾರೆ ಹೌದಲ್ಲೋ..
ಯೆಸ್ ಮಿಸ್ಟರ್ ಉಳ್ಳಾಗಡ್ಡಿ...ಯೂ ಆರ್ ರೈಟ್.
ಕೆಲವೊಮ್ಮೆ ವಾರಗಟ್ಟಲೆ ಕಾಯಬೇಕು.ರಾತ್ರೀನೂ ಮಲ್ಕೊಬೇಕು.ಹೊಲದಿಂದ ಸೀದಾ ಮನೆಗೆ ಒಯ್ಯಲಾಗೋದಿಲ್ಲ.ರಸ್ತೆ ಬದಿ ರಾಶಿ ಹಾಕ್ಕೊಂಡು ಕೂರೋದು...
ಅಷ್ಟರಲ್ಲಿ ಈರಪ್ಪನ ಮಡದಿ ಬಟ್ಟೆಯಲ್ಲಿ ಸುತ್ತಿದ ರೊಟ್ಟಿ ತಂದಿದ್ದಳು.ಬಿಚ್ಚು ಎಂದರೆ ಒಲ್ಲೆ ಅಂದಳು.ಜೊತೆಗೆ ಮೆಣಶಿನ  ಚಟ್ನಿ.
ಬೆರಳ ತುದಿಯಲ್ಲಿ ಮುಟ್ಟಿ ಬಾಯಿಗೆ ಇಟ್ಟುಕೊಂಡರೆ ಸತ್ತೆನೋ ಎಂಬಷ್ಟು ಖಾರ.
ಹಾ ಅದಕ್ಕೇ ನಾವು ಭರ್ತಿ ಜನ ಅಂದಳು ಆಕೆ.
ನಮ್ಮದು ಶಕ್ತಿ..ಫುಲ್ ಜೋಶ್ ಅಂದ ಹಾಗೇ ಕೇಳಿಸಿತು ನನಗೆ.
ಪಕಪಕ ನಕ್ಕಳು.ಈರಪ್ಪನೂ ನಕ್ಕ.
ನೂರಾನಲುತ್ತೈದು ಕಿಲೋ ಜೋಳಾದ ಚೀಲಾನ ಹೊತ್ತು ನಡೀತಾರೆ ಇವರು ಎಂದಳು.
ಅದಪ್ಪಾ ಖದರ್ ಅಂದರೆ.
ಕೂಡಲಸಂಗಮದಲ್ಲಿ ಬಸವಣ್ಣ ಐಕ್ಯರಾದ ನೀರಿನ ನೆಲದಡಿ ಕಂಡವನ ಹೆಸರು ಗೊತ್ತಿಲ್ಲ.ಯಾವೂರು ಅಂದ.ಮಂಗಳೂರು ಅಂದೆ.ದೊಡ್ಡದಾ ಸಣ್ಣದಾ ಅಂದ.ದೊಡ್ಡದು ಅಂದೆ.
ಮೂವತ್ತು ಮೈಲಿ ದೂರದಿಂದ ನಡೆದುಕೊಂಡೇ ಬಂದಿದ್ದಾನೆ ಯುವಕ.ಅಣ್ಣನ ದರುಶನಕ್ಕೆ.ಯಾಕೆ ಅಂತ ಕೇಳಲಿಲ್ಲ.ಅವನ ಭಕ್ತಿ ಅವನಿಗೆ.
ನೀವೂ ಲಿಂಗವಂತರೇ ಅಲ್ವಾ ಅಂದೆ.
ಹೌದು ಆದರೆ ಲಿಂಗಧಾರಣೆ ಮಾಡಿಲ್ಲ.ಮಾಡಬೇಕು ಅಂತೇನಿಲ್ಲ.ಮಾಡಿದರೆ ಹಾಗೇ ಇರಬೇಕು ಎಂದು ಆತ ಕಣ್ಣರಳಿಸಿ ಹೇಳಿದ ಬಾಡಿ ಲಾಂಗ್ವೇಜಿನಲ್ಲಿ ನಾನೂ ಎಲ್ಲರ ಹಾಗೇ..ಬಸವಣ್ಣ ತಾನಲ್ಲ ಎಂಬ ಹಾಗಿತ್ತು.
ಮುಂಜಾನೆ ಎದ್ದು ಸಿವಾ ಅಂದರೆ ಆಯಿತು ನೋಡಿ..ಆಮೇಲೆ ನಮ್ಮ ಕೆಲಸ ನಮಗೆ....ದೇವರು ಬೇರೆ ಉದ್ಯೋಗದಲ್ಲಿ ಹೋಗಬಹುದು.
ಸಿವಾ ಅಂದರೆ ಸಾಕು..
ಆಹಾ ಎಂಥಾ ಅಚಲ ನಂಬಿಕೆ...ಇದಪ್ಪಾ ಬೇಕು...
ನನ್ನ ಕಾಲೇ ಕಂಬ ದೇಹವೇ ದೇಗುಲ..ಶಿರ ಹೊನ್ನ ಕಳಶವಯ್ಯಾ...
ವಿಜಾಪುರದ ಗಲ್ಲಿಯಲ್ಲಿ ಅನಫಿ ಸಾಹೇಬನ ಚಹದ ದೂಕಾನು.ಬೆಳ್ಳಂಬೆಳಗೆ ಓಪನ್ನು.ಸರಕಾರಿ ಗೋಡೆಗೇ ಶೀಟು ಹಾಯಿಸಿ ರಸ್ತೆ ಬದಿಯಲ್ಲಿ ಶುರುವಾದ ದೂಕಾನಿಗೆ ಈಗ ಭರ್ತಿ ಇಪ್ಪತ್ತು ವರ್ಷ.ಕರೆಂಟಿನ ಬೋರ್ಡುಗೆ ಅಂಟಿದ ಹಾಗೇ ನಿಂತ ಮಿಕ್ಸಿಯಲ್ಲಿ ಚಟ್ನಿ ಅರೆದ.ಅವಲಕ್ಕಿ ಗೆ ಪ್ಲೇಟಿಗೆ ಆರು ರೂಪಾಯಿ.ಚಹಕ್ಕೆ ಮೂರೇ ಮೂರು ರೂಪಾಯಿ.ಭರ್ತಿ ವ್ಯಾಪಾರ ಅಂದ.ಜನರಿಗೆ ಹೊಟ್ಟೆ ತುಂಬಿಸಬೇಕು...ಅವರೂ ಸಂತೋಷ ಮಾಡ್ಕೊಳ್ಳಬೇಕು..ನಾನೂ ಸಂತೋಷ ಪಡಬೇಕು.
ಅನ್ನದಾಸೋಹಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಸಿಗಲಿಲ್ಲ.
ನರಗುಂದದ ಮಧ್ಯವಯಸ್ಕ ಮಂಜುಳಾ ಒಡೆತನದ ಲಿಂಗಾಯತರ ಖಾನಾವಳಿ ಇರೋದು ನೆಲಮಾಳಿಗೆಯಲ್ಲಿ.ಒಳ್ಳೆ ಹಸಿವು ಹೊತ್ತು.ಇಳಿದರೆ ಯಾರೂ ಕಾಣಿಸೋದಿಲ್ಲ.ಮಂಜುಳಾ ಮೇಡಂ ಪ್ರತ್ಯಕ್ಷರಾಗಿ ಕರೆದು ಕೂರಿಸಿದಳು.ಕೈ ತೊಳೆಯ ಬೇಕು ಎಂದಾಗ ಬೋಗುಣಿ ತಂದಿಟ್ಟಳು.ಮಗ್‌ನಿಂದ ನೀರು ಸುರಿವುಕೊಂಡು ಕೈತೊಳೆದಾದ ಮೇಲೆ ರೊಟ್ಟಿ ಊಟ ಬಂತು.ಮುರಿದು ಮುರಿದು ಮುಕ್ಕಿದ್ದಾಯಿತು.ಕಾಳು ಪಲ್ಯ, ಎಣ್ಣೆಗಾಯಿ ಹೊಟ್ಟೆ ಬಿರಿಯೆ ತಿಂದು ಬಿಲ್ಲು ಅಂದರೆ ಅಷ್ಟೇ ನಲುವತ್ತೇ ರೂಪಾಯಿ.ಅಷ್ಟೊಂದು ರೊಟ್ಟಿ ತಿಂದೆವಲ್ಲಾ ಅಂದರೆ ನೀವು ಅನ್ನ ಬೇಡ ಅಂದ್ರಲ್ಲಾ ಅದಕ್ಕೆ..ಎಲ್ಲಾ ಸಾಕು ಬಿಡಿ ಅಂದಳು.
ಗೋಡೆಯಲ್ಲಿ ನೇತಾಡುತ್ತಿದ್ದವ ಗಂಡ.ಸತ್ತು ಮೂರು ವರ್ಷ ಆಗಿದೆ.ಬೈಕ್‌ಗೆ ಲಾರಿ ಜಪ್ಪಿ ಖತಂ.ಬಿಟ್ಟು ಹೋದದ್ದು ಒಂದು ಶುಂಠ ಮಗ ಮತ್ತು ಮಗಳನ್ನು.ಅವನೋ ಕೆಲಸ ಮಾಡು ಅಂದರೆ ಸೀದಾ ಎದ್ದು ಆಟದ ಮೈದಾನದಲ್ಲಿ ದೋಸ್ತಿಗಳ ಜತೆ ಆಟ ಆಡುತ್ತಿದ್ದಾನೆ.ಮಗಳು ಫೋಟೋ ತೆಗೀತಾರೆ ಅಂತ ಆಸೆಯಲ್ಲಿ ತಂದು ರೊಟ್ಟಿ ಬಡಿಸಿದ್ದಾಳೆ.
ರೊಟ್ಟಿ ತಟ್ಟುತ್ತಿದ್ದವಳು ಅಮ್ಮ.ಅವಳ ತಮ್ಮನಿಗೆ ಮಗಳನ್ನು ಕೊಟ್ಟಿದ್ದಳು.ತಮ್ಮ ಸತ್ತು ಮಗಳು ವಿಧವೆಯಾದಾಗ ಅವಳ ಸಂಗಾತಕ್ಕೆ ಅಂತ ಹಳ್ಳಿಯಿಂದ ಬಂದು ನಿಂತಿದ್ದಾಳೆ.
ಹಂಪಿಯಲ್ಲಿ ಆರು ಸಾವಿರ ಎಕರೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಇತ್ತು ಎಂದು ಗೈಡ್ ಹೇಳುತ್ತಿದ್ದ.ಬಳ್ಳಗಳಲ್ಲಿ ಮತ್ತು ರತ್ನ ಅಳೆದು ಅಳೆದು ಕೊಡುತ್ತಿದ್ದರು ಎಂದ.ಯಾರಿಗೆ ಕೊಡುತ್ತಿದ್ದರು?ಅವರು ಏನು ಕೊಟ್ಟು ಅದನ್ನು ಪಡೆದುಕೊಳ್ಳುತ್ತಿದ್ದರು?ಆ ,ಮುತ್ತು ರತ್ನಗಳು ಎಲ್ಲಿಂದ ಬಂದವು?ಎಂದೆಲ್ಲಾ ಕೇಳಿದರೆ ಗೊತ್ತಿಲ್ಲ ಸಾರ್ ಅಂದ.ಎರಡೂವರೆ ಸಾವಿರ ದೇವಾಲಯಗಳು ಈ ರಾಜಧಾನಿಯಲ್ಲಿ ಇದ್ದವಂತೆ.ಬಹಮನಿ ಶಾಹಿಗಳು ರಕ್ಕಸತಂಗಡಿಯಲ್ಲಿ ರಾಮರಾಯನ ತಲೆ ಕತ್ತರಿಸಿ ಇಡೀ ಸಾಮ್ರಾಜ್ಯವನ್ನು ಲೂಟಿ ಮಾಡಿ ಸುಟ್ಟು ಹಾಕುತ್ತಿದ್ದಾಗ ಎಲ್ಲಾ ದೇವರುಗಳೂ ರಜೆ ಹಾಕಿದ್ದರು!ಯಾರೂ ಅವರ್‍ಯಾರನ್ನೂ ಕಾಪಾಡಲೇ ಇಲ್ಲ!!