20130308

ಅವಳಿಲ್ಲದ ನಾನು ೮


ಪೋಲೋವಾಲ್ಟ್ ಗೊತ್ತಲ್ಲ..ಹಾಗೇ ಪ್ರೀತಿ ಎಂದರೆ..
ಮುಂದೆ ಹೇಳು..ಅರ್ಥ ಮಾಡಿಕೊಳ್ಳುತ್ತೇನೆ ಎಂದೆ..
ಆಕೆ ನನ್ನ ಬಿಗಿಯಾಗಿ ತಬ್ಬಿಕೊಂಡಿದ್ದಳು.ನನ್ನ ದೊರಗು ಕೆನೆ ಮೇಲೆ ಅವಳ ಮುದ್ದು ಮುದ್ದು ಗಲ್ಲ ಸವರುತ್ತಿತ್ತು.ಕಣ್ಣುಗಳನ್ನು ಕೂಡಿಸಿಕೊಳ್ಳುವ ಹಠಕ್ಕೆ ನಾವಿಬ್ಬರೂ ಬಿದ್ದ ಹಾಗಿತ್ತು.ಮೂರೇ ಮೂರು ಮೈಲಿ ಮುಂದೆ ಸಾಗಿದರೆ ಊರುಕೇರಿ..
ಇಲ್ಲಿ ಮಾತ್ರಾ ದಟ್ಟ ಕಾಡು..
ನೀನು ಹಿಡಿದ ಪೋಲ್..ಅದನ್ನು ಎತ್ತೆತ್ತಿ ಬರೋ ವೇಗ..ವೇಗದಲ್ಲಿನ ಧಾವಂತ..ಅದಕ್ಕೂ ಮಿಗಿಲಾದ ಬಯಕೆ..
ಏನು ಬಯಕೆ ಎಂದಿಯಾ??
ಗೆಲ್ಲಬೇಕು..ಗುರಿಯ ದಾಟಬೇಕು..
ಎದುರಿಗೆ ಆ ಅಡ್ಡ ಕೋಲು.ಅದೇ ನಿನ್ನ ಗಡಿ.ಅದರ ಎತ್ತರ ನಿನ್ನ ಸವಾಲು..ಅದನ್ನು ಮೀರಿ ಏರುವುದು ನಿನ್ನ ಸಾಹಸ.ಎಷ್ಟು ಎತ್ತರ ಮೀರಬಹುದು ಎಂದರೆ ನಿನಗೆ ಆಕಾಶವೇ ಮಿತಿ..ಅಡ್ಡ ಕೋಲಿನ ಏನಾದರೂ ಮುಟ್ಟಿದೆಯೋ  ನಿನ್ನ ಕಸರತ್ತುಗಳೆಲ್ಲಾ ಫೌಲ್..ಅದರ ಕೆಳಗೆ ನುಸುಳಿದರೆ ಥೂ ಶಿಟ್..
ಎಲ್ಲಿ ಕೋಲನ್ನು ಊರುತ್ತೀಯಾ ಎಂಬುದರ ಮೇಲೆ ನೀನು ಎಷ್ಟು ಎತ್ತರ ಹಾರುತ್ತೀಯಾ ಎಂಬ ಲೆಕ್ಕ ಅಡಗಿದೆ.
ಇದೇ ಪ್ರೀತಿಯ ಬೀಜಗಣಿತ.
ಅರ್ಥ ಮಾಡಿಕೊಂಡರೆ ಸಾರಾಸಗಟು ಸಲೀಸು.ಸುಖಾಸುಮ್ಮನೇ ಸುಲಲಿತ..
ಕೋಲನ್ನೂರಿ ಹಾರುವ ಧಾಷ್ಟ್ರ್ಯ ಬಹಳ ಮುಖ್ಯ.
ಏನೆಂದೆ??ಪ್ರೀತಿಯಲ್ಲಿ ಧಾಷ್ಟ್ರ್ಯವೆಂದರೆ??
ಹೂಂ...ಧಾಷ್ಟ್ರ್ಯ ಬೇಕು ಕಣೋ..ಒಂದು ಸೊಕ್ಕು.ನೂರು ಮೀಟರ್ ರೇಸ್‌ಗೆ ನಿಂತವನ ಬಳಿ ಅಪಾರ ಸೊಕ್ಕು ಇರಬೇಕು.ಯಕಶ್ಚಿತ್ ಇದೇನು  ಎಂಬ  ಒಂದು ನಿರ್ಲಕ್ಷ್ಯವೂ ಆ ಹೊತ್ತಾರೆ ಬಂದು ಬಿಡಬೇಕು.ನೂರು  ಮೀಟರ್..ಎಂಬ ಅಲ್ಪ ಹಾದಿ.ಬಿರುಸು ಮತ್ತು ಕಸುವು..ಇದ್ದರೆ ಮಾತ್ರಾ ಸಾಲದು.ಐದು ವರ್ಷ ತುಂಬಾ ಮಾಡಿಕೊಂಡ ಅಭ್ಯಾಸ ಠಣ್ಣನೆ ಬಿದ್ದ ಹೋಗಬಹುದು.ಏಕೆಂದರೆ ಪಕ್ಕದ ಟ್ರಾಕ್‌ನಲ್ಲಿ ನಿನ್ನ ಥರಾನೇ ನಿಂತವನಿರುತ್ತಾನಲ್ಲ...ಅವನ ಬಳಿ ನಿನ್ನಷ್ಟೇ ಕಸುವು,ಬಿರುಸು ಎಲ್ಲಾ ಇರಬಹುದು..ಆದರೆ ನಿನಗಿಂತ ಹೆಚ್ಚು ಸೊಕ್ಕು ಮತ್ತು ಅಷ್ಟೇ ನಿರ್ಲಕ್ಷ್ಯ ಅವನಿಗಿದ್ದರೆ ನೀನು ಅವನ ಕ್ರಮಿಸಲಾರೆ..
ಏನು ಹೇಳುತ್ತಿದ್ದೆ ನಾನು.
ಪೋಲೋವಾಲ್ಟ್..
ಹಾಂ..ಅದೇ ಆ ಕೋಲು..ಅದನ್ನು ಊರುವ ಬಿಂದು..ಆ ಬಿಂದಿನಿಂದ ಕಳಚಿಕೊಂಡು ಛಂಗನೇ ಜಿಗಿಯುವ ಛಲ..ಆ ಹೊತ್ತಿನಲ್ಲಿ ಬಾಗುವ ಕೋಲು ಮತ್ತು ನೀನು..ಅಡ್ಡ ಕೋಲನ್ನು ನಿರಾಕರಿಸುವ ನಿನ್ನ ಹಠ..
ಆಮೇಲೆ?
ಆಮೇಲೆ ನೀನು ಊರಿದ ಕೋಲೂ,ಅವರಿಟ್ಟ ಅಡ್ಡ ಕೋಲೂ ಎರಡೂ ನಥಿಂಗ್..ನಥಿಂಗ್..
ನಿನ್ನನ್ನು ಎತ್ತಿ ಹಾರಿಸಿದ ಆ ಕೋಲನ್ನು ನೀನು ಎಸೆದು ಬಿಟ್ಟಾಗಿದೆ.ಅಷ್ಟೂ ಕಾಲ ನಿನಗೆ ಆಧಾರವಾಗಿದ್ದ,ನಿನ್ನನ್ನು ಈ ಎತ್ತರಕ್ಕೆ ಎಸದು ತಂದ ಕೋಲು ಇನ್ನು ನಿನ್ನದಲ್ಲ.ಅರ್ಥವಾಯಿತೇ??
ಇದರೊಳಗೆ ಪ್ರೀತಿಯ ಹುಡುಕು..ಜಸ್ಟ್ ಕಂಪೇರ್..
ಪ್ರೀತಿಯೂ ಇಷ್ಟೇ..ಪೋಲೋವಾಲ್ಟ್ ನ ಹುಡುಗನ ಹಾಗೇ..
ಅವನೂರಿದ ಬಿಂದಿನ ಹಾಗೇ..ಅವನೆಸೆಯುವ ಕೋಲಿನ ಹಾಗೇ..ಅವನು ಕ್ರಮಿಸುವ ಎತ್ತರದ ಹಾಗೇ..
ಆಕಾಶವೇ ಮಿತಿ..
ಪ್ರೀತಿಗೆ..ಅದರ ರೀತಿಗೆ ಎಂದಳು..
ಹೋಗೇಹೋಗಿ..ಥೂ ನಿಮ್ಮ.. ಎಂದ ಹಾಗಾಯಿತು.
ಹಾಗೆಂದರಲ್ಲಾ ಯಾರದು ಎಂದೆ..
ಕಾಡಿನ ಹಕ್ಕಿಗಳು ಎಂದಳು ಅವಳು..ಆ ಪೊದರಿನಾಚೆಗೆ ಕಿಚಗುಟ್ಟಿದ್ದ ಹಕ್ಕಿಗಳ ಗುಂಪಿನತ್ತ ಬೊಟ್ಟು ಮಾಡುತ್ತಾ.
ಏಯ್..ಅವುಗಳ ಪ್ರೇಮದ ರಭಸದ ಎದುರು ನಾವು ಫೌಲ್..ನಮ್ಮ ಪ್ರೀತಿ ಅಯಾಚಿತವೇನಲ್ಲ.ಆದರೆ ಅಲ್ಲೊಂದು ಲೆಕ್ಕಾಚಾರ ಹುಟ್ಟೇ ಹುಟ್ಟುತ್ತದೆ..
ಆಮೇಲೆ ಎಲ್ಲಾ ಮುಗಿದ ಮೇಲೆ ಏನು ಎಂದು ಕೇಳುತ್ತದೆ..
ಬಂದಷ್ಟು ವೇಗದಲ್ಲಿ ಹೋಗಲಾರೆವು..ಆದರೆ ಒಂದಿನವಾದರೂ ಹೋಗಲೇಬೇಕು...
ಅದೇ ನಿ-ರ್ಗ-ಮ-ನ..
ಸಾಕು ಎಂದೆ.
ಅವಳು ಎರಡೂ ಕೈಗಳನ್ನು ಮುಚ್ಚಿ ಬಿಕ್ಕಿಬಿಕ್ಕಿ ಅಳತೊಡಗಿದಳು..     

20130306

ಅವಳಿಲ್ಲದ ನಾನು-೭


ಊಟದ ಹೊತ್ತಿನಲ್ಲಿ ಅನ್ನದ ಮೇಲೆ ಉಪ್ಪು ಹರಡಿಕೊಳ್ಳುತ್ತೇವಲ್ಲ..
ಹೂಂ
ಅಷ್ಟೇ ಅಷ್ಟು ಹಾದರ ಬೇಕು..
ಹಾಗಂತ ಹೇಳಿಬಿಟ್ಟ ಆ ಅವಧೂತ.
ಚಾರ್ಮಾಡಿಯ ಕಾಡೇ ಕೇಕೆ ಹಾಕಿದಂತೆ ಆ ಮಾತು ನನ್ನೊಳಗೆ ಅವತರಣಿಕೆಯಾಗುವುದನ್ನು ಕೂಡಲೇ ಗಮನಿಸಿದ ಅವಳು ನವಿರಾಗಿ ಚಿವುಟಿದಳು.
ಅವಳು ತೊಡೆ ಮೇಲೆ ಚಿವುಟಿದ ನೋವು ಯಾಕೋ ಮುದವಾಗಿದೆ ಎನಿಸಿತು.ಸಣ್ಣಗೇ ಕಣ್ಣುಹೊಡೆದೆ.
ಅವಧೂತ ಹೇಳುತ್ತಿದ್ದ
ನಾನು ದೇವರನ್ನು ನೋಡಿದ್ದೇನೆ,ದೇವರ ಜೊತೆ ನಾನು ಯಾವತ್ತೂ ಆಧ್ಯಾತ್ಮಿಕ ಮಾತನಾಡೇ ಇಲ್ಲ.ನಾನೂ ದೇವರೂ ಸದಾ ಮಾತನಾಡೋದು ಲೌಕಿಕ ವಿಚಾರಗಳನ್ನೇ. ಅದರಲ್ಲೂ ನಾವೆಲ್ಲಾ ಮುಚ್ಚಿಟ್ಟುಕೊಳ್ಳುವ ಹಲವು ಆಚಾರ ಚೌಕಟ್ಟಿನೊಳಗಿನ ತಟವಟಗಳನ್ನು..
ನಾನು ಕಣ್ಣು ಎವೆ ಬಿಡದೇ ಅವಧೂತನನ್ನು ನೋಡುತ್ತಿದ್ದೆ.
ಅವನು ನಕ್ಕ.
ನಗುವಿನಲ್ಲಿ ಸಣ್ಣ ತುಂಟತನ.
ಮನುಷ್ಯ ತುಂಬಾ ಆತ್ಮವಂಚಕ.ಯಾವತ್ತೂ ಯಾರೂ ಹೃದಯಕ್ಕೆ ನೇರವಾಗಿ ನಡೆಯುವುದು ಸಾಧ್ಯವೇ ಇಲ್ಲ.ದೇವರು ಕೂಡಾ ಇದನ್ನು ಖಚಿತಪಡಿಸುತ್ತಾನೆ.ಅವನಿಗೂ ಸಿಕ್ಕಾಪಟ್ಟೆ ಅಲೌಕಿಕರಾಗಿರೋರ ಬಗ್ಗೆ ಆಸಕ್ತಿಯೇ ಇಲ್ಲ.
ಹಾಗಾದರೆ ನಾವೆಲ್ಲಾ ಮಾಡುತ್ತಿರುವುದರಲ್ಲಿ ಸರಿ ತಪ್ಪು ಅಂತೆಲ್ಲಾ ಯಾಕೆ ಬರುತ್ತದೆ ಎಂದು ಆಕೆ ಕೇಳಿದಳು.
ನಾನು ಯಾಕಾದರೂ ಇದನ್ನು ಕೇಳುತ್ತಾಳೋ ಅಂದುಕೊಂಡೆ.
ಅವಧೂತ ಹೇಳಿದ,ನೀನು ಮಾಡಿದ್ದೆಲ್ಲಾ ಸರಿಯೇ.ದಾರಿಯಲ್ಲಿ ನಡೆದುಕೊಂಡು ಹೋಗುವುದರಿಂದ ತೊಡಗಿ ಸುಮ್ಮನೇ ಮಲಗಿಕೊಳ್ಳೋ ತನಕ..
ಮನುಷ್ಯ ಮಾತ್ರಾ ಇದು ಸರಿ ಇದು ತಪ್ಪು ಅಂತೆಲ್ಲಾ ತಾವೇ ರಚಿಸಿದ ಕಟ್ಟಲೆಗಳ ಕೋಟೆಯೊಳಗೆ ಥೇಟ್ ರೋಗ ಹಿಡಿದು ಸಾಯೋ ಸೈನಿಕನ ಥರ ಸಾಯುತ್ತಾನೆ .
ಆಹಾ ಎಷ್ಟೊಂದು ಚೆನ್ನಾಗಿ ಹೇಳುತ್ತಾ ಇದ್ದಾನೆ ಎನ್ನಿಸಿತು.ನಾನೂ ಮತ್ತೊಮ್ಮೆ ಅದೇ ಸಾಲುಗಳನ್ನು ಮನನ ಮಾಡಿದೆ..ರೋಗ ಹಿಡಿದು ಸಾಯೋ ಸೈನಿಕನ ಥರ...
ಇವಳಿದ್ದಾಳಲ್ಲ..ನಿನ್ನ ಪ್ರೇಯಸಿ..ಇವಳು ಮಾಡೋದೆಲ್ಲಾ ಸರೀನೇ..
ನಾಳೆ ನಿನ್ನ ಬಿಟ್ಟು ಇನ್ನೊಬ್ಬ ಇಷ್ಟವಾಗಬಹುದು ಎಂದು ಆಕೆ ಹೊರಡುತ್ತಾಳೆ..ಅದು ನಿನ್ನ ಭಾಗ್ಯ ಅಷ್ಟೇ..
ಅವಳು ವಂಚಿಸುತ್ತಾಳೆ ಎಂದು ನೀನು ಹತಾಶನಾಗಬಾರದು.ನಿನಗೆ ಇನ್ನೊಂದು ಜೀವ ಪ್ರೀತಿಸಲು ಸಿಗಲೇ ಬೇಕು ಎಂದೇನಿಲ್ಲ..ಅದು ನಿನ್ನ ಅದೃಷ್ಟ.ಅವಳಿಗೆ ಸಂತೋಷವಾಗಿರಲು ಇನ್ನೊಂದು ಆಸರೆ  ಒಪ್ಪಿಕೊಳ್ಳಬಹುದು.ಅವಳ ಕನಸಲ್ಲಿ ನೀನೇ ಇರಬೇಕು ಎಂದೇನೂ ಇಲ್ಲ..ನೀನೇ ಅವಳ ಸಾಮ್ರಾಜ್ಯದವನ್ನಾಳುವವನಾಗಬೇಕಿಲ್ಲ..ಪ್ರತಿಯೊಂದು ಹುಡುಗಿಯ ಮನಸೂ ಒಂದು ದೇಶ ಇದ್ದ ಹಾಗೇ..
ಅರಸೊತ್ತಿಗೆಯಲ್ಲಿ ಯುದ್ಧ ಗೆದ್ದವನು ಮಾತ್ರಾ ಉಳಿಯುತ್ತಾನೆ.ಪ್ರತಿಯೊಬ್ಬನಿಗೂ ದೇಶ ಗೆಲ್ಲುವ,ದೇಶ ಆಳುವ ಹಂಬಲವಿರುತ್ತದೆ..
ಅನ್ನದ ಮೇಲೆ ಉಪ್ಪಿನ ಥರ ಹಾದರ..ಎಂದು ಆತ ಮತ್ತೊಮ್ಮೆ ಹೇಳಿದ..
ನಾನು ಅವಳನ್ನು ಬಿಗಿಯಾಗಿ ಅಪ್ಪಿಕೊಂಡೆ..
ಅಗ ಅಲ್ಲಿ ಅವಧೂತನಿರಲಿಲ್ಲ.ಅವನು ಕಂಡ ದೇವರೂ ಜೋರಾಗಿ ನಕ್ಕ.
ನನ್ನ ಬಿಟ್ಟು ಹೋಗುತ್ತೀಯಾ ಎಂದೆ.ಅವಳ ಮುಖದಲ್ಲಿ ವಿಷಣ್ಣ ಭಾವ ಹಂದಾಡುತ್ತಿತ್ತು.
ಗೊತ್ತಿಲ್ಲ.ನಾನೇ ನಾನಾಗಿ ಹೋಗಲಾರೆ,ಆದರೆ ನಿರ್ಗಮನದ ಬಾಗಿಲಿಗೆ ಅಗುಳಿ ಹಾಕಲು ಯಾರಿಗೂ ಸಾಧ್ಯವಿಲ್ಲ.ಏಕೆಂದರೆ ಅದು ಇರೋದೇ ಹಾಗೇ.ಅಗುಳಿ ಇಲ್ಲದೇ ಚಿಲಕವಿಲ್ಲದೇ..
ತೆರೆದ ಬಾಗಿಲಾಚೆಗೆ ಹಾದಿಗಲೇ ಇರಲಾರದು ಎಂದೆ.
ಹೌದು..ನನಗೂ ಹಾಗೇ ಅನಿಸುತ್ತಿದೆ.ಇರಲಾರದು...ಆದರೂ ಹಾದಿಗಳನನು ಕಡಿದು ಮಾಡಬಹುದೇಓ..ನೀನೇ ಹೇಳಿದ್ದೆ ನೋಡು,ಈ ಘಾಟಿ ರಸ್ತೆಗೆ ಬ್ರಿಟಷರು ಬೆಟ್ಟ ಕಡಿದು ಹಾದಿ ಕಟ್ಟಿದರು ಅಂತ..
ಎದುರಿನ ಮರದ ಎಲೆಗಳ ಮೇಲೆ ದಿಟ್ಟಿ ನೆಟ್ಟೆ.ನೀನೂ ಯಾರ ಸೊತ್ತೂ ಅಲ್ಲ ಎಂದ ಹಾಗಾಯಿತು.ಈ ಮರಗಳ ಕೊಂಬೆ ರೆಂಬೆ ಎಲೆ ಚಿಗುರುಗಳನ್ನು ಅವುಗಳು ಕೇಳದೇ ಹೇಳದೇ ಸೃಷ್ಟಿ ಮಾಡಿಟ್ಟ ದೇವರ ಮೇಲೆ ಅಸಹನೆ ಮೂಡುತ್ತಿತ್ತು.ನಾನೂ ಈ ಮರದ ಹಾಗೇ..ಎಲೆಗಳನ್ನು ಪ್ರೀತಿಸಲಾರೆ..ಚಿಗುರುಗಳನ್ನು ಚಿವುಟಲಾರೆ..ಅಷ್ಟೇ ಏಕೆ ಈ ಮರದ ಗೆಲ್ಲುಗೆಲ್ಲುಗಳಲ್ಲಿ ಹೂವು ಕಾಯಿ ಹಣ್ಣು ಗಳು ನನ್ನ ಆಣತಿಯಲ್ಲ.
ಆ ಮರ ಆ ಹಣ್ಣನ್ನು ಎಂದಿಗೂ ಸವಿಯಲಾರದು ಕಣೋ..ಎಂದಳು.
ಆವಳೂ ನಾನು ನೋಡುತ್ತಿದ್ದ ಮರವನ್ನೇ  ನೋಡುತ್ತಿದ್ದಳು.
ನನಗೆ ಇವಳೂ ಅವುಧೂತೆಯೇನೋ ಎಂಬ ಸಂಶಯ ಮತ್ತು ಅಚ್ಚರಿ ಒಟ್ಟಾಗಿ ಮೂಡುತ್ತಿತ್ತು.
ಉಪ್ಪಿನ ರೀತಿ ಹಾದರ..ಎಂದೆ.
ನಾನು ನನ್ನ ಗಂಡನ ಜೊತೆ ಮಿಲನಮಹೋತ್ಸವ ಆಚರಿಸುತ್ತಿದ್ದರೆ ಮನಸ್ಸು ತುಂಬಾ ನೀನು ಬಂದರೆ ಹೇಗಿದ್ದೀತು ಹಾಗೇ ಎಂದಳು.
ಡೇರಿಂಗ್ ಡೇರಿಂಗ್ ಎಂದುಕೊಂಡೆ.

20130301

ಮುಕ್ತಿಗೆ ಕಾಯುತ್ತಿರುವ ನನ್ನ ಅಮ್ಮ

ಗೊತ್ತಿಲ್ಲ
ಹೀಗೆ ನಾನೂ ಬರೆಯಬಹುದೇ ಎಂದು
ಅದೂ ಅಮ್ಮನ ಕುರಿತಾಗಿ ಈ ಹೊತ್ತಿಗಿಂದು
ಅಮ್ಮ ನನ್ನನ್ನು ಗರ್ಭದಲ್ಲಿ ಮಡಗಿದ್ದಾಗ
ಇದು ಜೀವ ನಾನಲ್ಲ ಎಂದುಕೊಂಡಿದ್ದಳಂತೆ
ಹುಟ್ಟಿದ್ದು ನಾನು ಎಂದು ಗೊತ್ತಾದಾಗ
ದೇವರೇ ಬಂದನೆಂದು ವ್ಯಾಪ್ತೋಭವ ಎಂದಳಂತೆ
ಅಮ್ಮ ಕಡೆಯುವ ಕಲ್ಲಿನ ಮುಂದೆ ನಾನು ಕುಳಿತಿದ್ದೆ
ಹಣ್ಣಿನ ರಸಾಯನದ ಪಾಕ ಕದ್ದಿದ್ದೆ
ಮೊದಲ ಸಲ ಸ್ಖಲನವಾದಾಗ ಹೆದರಿ ಅವಳ ರಗ್ಗು ಸೇರಿದ್ದೆ
ಅಮ್ಮನ ಮಾತುಗಳಿಗೆ ಅರ್ಥ ಕಟ್ಟಲಿಲ್ಲ..ನನ್ನಂತೆ ಅವಳು ಅರ್ಥ ಹುಡುಕಲಿಲ್ಲ
ಅಮ್ಮನನ್ನು ಮುದಿತನ ಹುಡುಕಿಯೇನೂ ಬರಲಿಲ್ಲ
ಇದ್ದ ಯೌವನ ಅವಳಲ್ಲೂ ಉಳಿಯಲಿಲ್ಲ
ಮಾಗಿದ ಜೀವದಿಂದ ಮನಸ್ಸು ಮೂರಾಬಟ್ಟೆ
ಅವಳ ಜತನದಿಂದ ಅವಳೇ ಉರುಳಿ ಬೀಳುವಳು
ಆಯ ತಪ್ಪಿದ ದೇಹ,ಜೊತೆಗೆ ಮನಸ್ಸು
ಮಾತುಗಳೆಲ್ಲಾ ಕಾಗದದ ಚೂರುಗಳಾಗಿ ಹಾರುವವು
ನನ್ನಮ್ಮ ನನ್ನ ಜೊತೆ ಈಗ ಇಲ್ಲ
ಎಲ್ಲಿಗೋ ಹೋಗಿದ್ದಾಳೆ,ನನ್ನ ಗುರುತಿಲ್ಲ
ಅವಳಿಗೂ ಹಸಿವಿತ್ತು ಎಂಬುದು ಈಗ ತಿಳಿಯುತ್ತಿದೆ,
ನಾನಿತ್ತ ಬಟ್ಟಲಿನಲ್ಲಿ ಅವಳ ಅಡುಗೆ
ಅಮ್ಮ ನನ್ನ ಬಿಟ್ಟು ಹೋಗುವಳು
ನನಗೆ ಗೊತ್ತಾಗಿದೆ,ಅವಳಿಗಲ್ಲ