20131011

ಉತ್ತರ ನೋಟ


ನಿಜವಾದ ಸುಖಿಗಳು ಇವರೇ..
ಕೇಳಿದೆ,ಎಷ್ಟು ವರ್ಷ ವಯಸ್ಸು ನಿಮಗೆ ಅಜ್ಜ..?
ಅವರು ಹೇಳಿದರು ಸುಮಾರು ಎಂಭತ್ತಮೂರು ಇರಬಹುದು.ಹೆಗಲ ಮೇಲೊಂದು ಸಣ್ಣ ಕೊಡಲಿ ಹಿಡಿದು ಕಚ್ಚೆ ಅಂಗಿ ಬಿಳಿ ಬಿಳಿ..ಸಣ್ಣ ಹುರಿಮೀಸೆ.
ಧರ್ಮಸ್ಥಳಕ್ಕೆ ಬಂದಿದ್ದೀರಾ ಎಂದೆ...
ಸಾಮಾನ್ಯವಾಗಿ ಧರ್ಮಸ್ಥಳ ಕುಕ್ಕೆ ನೋಡದ ಘಟ್ಟದವರಿಲ್ಲ ಎಂದುಕೊಂಡಿದ್ದೆ.
ಇಲ್ಲ ಅಂದರು.
ಬಸವಣ್ಯಜ್ಜ...
ಸಜ್ಜೆ ಬಿತ್ತಿದ್ದೆ.ಹಾಗೇ ಹೊಲದಲ್ಲಿ ಅದು ಏನಾಗಿದೆ ಎಂದು ನೋಡಿಕೊಂಡು ಬರೋಣ ಅಂತ ಹೊರಟಿದ್ದೆ ಎಂದರು.
ಅವರ ಭಾಷೆಯ ವಾಕ್ಯಗಳನ್ನು ಉದ್ದೇಶಪೂರ್ವಕ ಇಲ್ಲಿ ದಾಖಲಿಸಿಲ್ಲ.
ಮೂರು ಮೈಲಿ ಆಗಬಹುದೇನೋ ದೂರ..
ಕೊಡಲಿ ಏತಕ್ಕೋ..
ಅದೇ ಹೊಲದಲ್ಲಿ ಗಿಡಗಂಟಿ ಇದ್ದರೆ ಅದನ್ನ ಸಪಾಟು ಮಾಡುವುದಕ್ಕೆ...
ಮಳೆ ಬಂದಿಲ್ಲ..ಬರಬೇಕಿತ್ತು...ಬಾರದೇ ಇದ್ದರೆ ಈ ಬಾರಿಯ ಬೆಳೆ ಉಳಿಯೋದಿಲ್ಲ ಅಂತಲ್ಲ...ಹುಟ್ಟುವುದೇ ಇಲ್ಲ.ಹುಟ್ಟದೇ ಇದ್ದರೆ ಅದರ ಚಿಂತೆ ಬಸವಣ್ಣಯಜ್ಜನಿಗಿರಲಿಲ್ಲ..
ಮತ್ತೊಂದು ಹಂಗಾಮಿಗೆ ಕಾಯುವುದು....ಅಲ್ಲಿ ತನಕ...
ಸಮಾಧಾನವಾಗಿರೋದು...
ಇಂದು ನಿನ್ನೆ ಥರ ಮಾತಾಡಬೇಡಿ....ನಾನೇ ಎಪ್ಪತ್ತೆಂಟು ವರ್ಷಗಳಿಂದ ಬದುಕಿದ್ದೇನೆ...
ಯಾವ ಆತಂಕವೂ ಇಲ್ಲದೇ..
ಹುಟ್ಟಾ ನೆಮ್ಮದಿಯನ್ನು ಕಟ್ಟಿಕೊಂಡೇ ಹುಟ್ಟಿದವರ ಹಾಗೇ....
ಮನೆಯಲ್ಲಿ ಆರು ಮಂದಿ ಮಕ್ಕಳು..ಅವರಲ್ಲಿ ಒಬ್ಬ ಮಗ.ಒಕ್ಕಲುತನ ಒಲ್ಲೆ ಎಂದ.ಸೀದಾ ಹೋಗಿ ಪೊಲೀಸ ಆದ...ಅವನ ಹೆಂಡತಿ ಪಟ್ಟಣದಲ್ಲಿ ಇಸ್ಕೂಲು ಮಾಡ್ತಾಳೆ.
ಮೂರು ಮಗಳಂದಿರು ಮದುವೆ ಆಗಬೇಕು...ಕೊನೆಯವಳಿಗೆ ಮೂವತ್ತೆಂಟು ವರ್ಷ..
ಸಜ್ಜೆ ಬೆಳೆ ಭರಪೂರ ಬಂದು ಬಿಟ್ಟಾಗ ನೆನಪಾಗುತ್ತದೆ.ಯಾರಾದರೂ ಬಂದರೆ ಮಗಳಿಗೆ ಮದುವೆ ಮಾಡಿಸಬಹುದೇನೋ ಅಂತ.ಬೆಳೆ ಕೈಕೊಟ್ಟಾಗಲೆಲ್ಲಾ ಮಗಳಂದಿರು ಜೊತೆಗೆ ಇರುತ್ತಾರೆ..ಹಸಿವು ಹಂಚಿಕೊಳ್ಳುತ್ತೇವೆ..!!
ಮುಂದಿನ ಊರು ಗಜೇಂದ್ರಗಢ ಎಂದರು ಬಸವಣ್ಯಜ್ಜ.
ಇಂದು ಅಮಾವಾಸ್ಯೆ..ರೊಟ್ಟಿ ತಟ್ಟಲ್ಲ..
ಏಕೆಂದರೆ ರೊಟ್ಟಿ ತಟ್ಟಿದರೆ ಶಬ್ದ ಆಗುತ್ತದೆ..ಶಬ್ದ ಆದರೆ ಪಿತೃಗಳಿಗೆ ಆಗೋದಿಲ್ಲ.ಹಾಗಾಗಿ ಸುಮ್ಮನಿರಬೇಕು.ಶಬ್ದ ಮಾಡಬಾರದು..ಅದಕ್ಕೆ ಹೋಳಿಗಿ ಮಾಡುತ್ತೇವೆ..
ಐದಾರು ಹೋಳಿಗೆ ಕಟ್ಟಿಸಿಕೊಂಡಿದ್ದೆ.ತಲಾ ಇಪ್ಪತ್ತು ರೂಪಾಯಿ..ಒಂದನ್ನು ಬಸವಣ್ಯಜ್ಜನಿಗೆ ಕೊಟ್ಟೆ.ಮುರಿದು ಮುರಿದು ತಿಂದರು.
ಗಂಟಲು ಕಟ್ಟಿದ ಹಾಗಿತ್ತು.ನೀರು ಬೇಕಾ ಎಂದು ಬಾಟಲಿ ಕೊಟ್ಟೆ.ಮುಚ್ಚಳ ತೆರೆದರು.ಬಾಗಿ ಹಿಡಿದುಕೊಂಡು ಅಂಗೈಗೆ ಸುರಿವುಕೊಂಡು ಗಟಗಟನೆ ಕುಡಿದರು...
ಹೊಸದಾಗಿ ಪರಿಚಯವಾಗಿ ಆ ಹೊತ್ತಿಗೆ ಬಂಧುವೇ ಆಗಿಹೋದ ಸಂಗಮೇಶ ನನ್ನ ಮುಂದೆ ಕುಳಿತಿದ್ದರು.
ಕೂಡಲಸಂಗಮದಲ್ಲಿ ಆತ ಒಂದು ಸ್ಕೂಲ್ ಮಾಡಿದ್ದಾನೆ. ಸುತ್ತಲಿನ ಮೂವತ್ತಾರು ಹಳ್ಳಿಗಳ ಮಕ್ಕಳಿಗೆ ಕಂಪ್ಯೂಟರ್  ಕಲಿಸೋಬೇಕು ಅಂತ ಆತ ಅಖಂಡವಾಗಿ ನಿರ್ಧರಿಸಿದ್ದಾನೆ.
ಎಂಥಾ ಸೌಜನ್ಯ.ಕಿಂಚಿತ್ತೂ ಠಕಾರಿ ಇಲ್ಲ.
ಹೊಲದಲ್ಲಿ ಒಕ್ಕಲುತನ ಮಾಡುತ್ತೇವೆ ಎಂದರು.
ಒಕ್ಕಲುತನದ ಕುರಿತು ಸಂಗಮೇಶ ಅರ್ಧತಾಸು ವಿವರಿಸುತ್ತಿದ್ದರು.ಒಕ್ಕಲುತನದ ಅಪ್ರಮೇಯ ಸಾಧ್ಯತೆಗಳನ್ನು ಬಣ್ಣಸುತ್ತಿದ್ದರು.
ನಮ್ಮ ಹುಡುಗಿಯರನ್ನು ನಾವು ಬೇರೆಲ್ಲೂ ಕೊಡಲ್ಲ..ಒಕ್ಕಲುತನ ಮಾಡುವವರಿಗೇ ಕೊಡುತ್ತೇವೆ.ಆಕೆಗೆ ಹೊಲವೇ ಗಂಡ ಎಂದರು.
ಹೊಲವೇ ಗಂಡ!
ಹಿಂದಿನ ರಾತ್ರಿ ಕೂಡಲಸಂಗಮದ ಯಾತ್ರಿ ನಿವಾಸದಲ್ಲಿ ಯಾಕೋ ನಿದ್ದೆ ಬಿದ್ದಿರಲಿಲ್ಲ.ಯಾವುದೋ ಆತಂಕ ಕಾಡುತ್ತಿತ್ತು.ನಿರಾಳವಾಗಿರಲಾದೇ ತಡ ರಾತ್ರಿ ತನಕ ಬೇಗುದಿಯಲ್ಲಿದ್ದೆ.
ಹೊಲವೇ ಗಂಡ ಎಂದರು ಸಂಗಮೇಶ.
ನಾಳೆ ದಿನ ಆಕೆಯ ಗಂಡ ಸಾಯಬಹುದು..ಎರಡು ಮೂರು ಮಕ್ಕಳನ್ನು ಕೊಟ್ಟು ಓಡಿಹೋಗಬಹುದು..
ಹೆದರೋದಿಲ್ಲ ಆಕೆ,
ಆಕೆಗೆ ಆತ ಎಂದೂ ಗಂಡನೇ ಅಲ್ಲ.ಅವಳ ಗಂಡ ಹೊಲ.
ಹೊಲದ ಬದುಕು..ಅದೆಷ್ಟು ಕಾಲ ಆಕೆ ಬದುಕುತ್ತಾಳೆ...ಆಕೆಯ ಮಕ್ಕಳೂ ಬದುಕುತ್ತಾರೆ....ಆ ಮಕ್ಕಳಿಗೂ ಆ ಹೊಲವೇ ತಂದೆ..ಆಮೇಲೆ ಅವರೂ ಗಂಡನ ಹುಡುಕಿ ಹೋಗುತ್ತಾರೆ.ಆ ಆಸರೆಯಲ್ಲಿ ನೆಮ್ಮದಿಯಾಗಿರುತ್ತಾರೆ..ಅವರಿಗೂ ಮುಂದೆ ಹೊಲವೇ ಗಂಡ.
ಇವರು ಏನಾದರೂ ಹೊಲವೆಂಬ ಗಂಡನ ಬಿಟ್ಟು ಎದ್ದು ಹೋದರೆ ನಾವು ಮಣ್ಣು ಕೂಡಾ ತಿನ್ನಲಾರೆವು.
ಮಲ್ಲಿಗಿ ಹೋಟೇಲಿನ ಮುಂಜಾನೆಯ ಕಾಂಪ್ಲಿಮೆಂಟರಿ ಬ್ರೇಕ್‌ಫಾಸ್ಟ್‌ಗೆ ಕಲ್ಲು ಮರಳು ಅಥವ ಜರಡಿ ಹಿಡಿದ ಕಪ್ಪು ಮಣ್ಣನ್ನೇ ಇಟ್ಟುಬಿಡಬೇಕು.
ದಾರಿ ಮಧ್ಯೆ ಚೆಂಬು ಹಿಡಿದು ಕೂರುತ್ತಾರೆ...
ಥೂ ಇವರ..
ನಿಮಗೇನು ಕಷ್ಟ ಸ್ವಾಮೀ??ನೀವೇನು ಕಾರಿಂದ ಇಳಿದು ಕಾಲಿಗೆ ಮೆತ್ತಿಸಿಕೊಳ್ಳುತ್ತೀರಾ??
ಅವರ ಸುಖ ಕೇಳಲು ನೀವು ಯಾರು??ಅವರ ಕಷ್ಟಕ್ಕೆ ನೀವು ಇದ್ದೀರಾ??ಇರುವುದಾದರೆ ಮಾತನಾಡಿ...
ದುಡಿಯೋದಿಲ್ಲ...ಒಂದಾದರೂ ಗಿಡ ನೆಟ್ಟು ಒಂದು ಬಾಳೆಗೊನೆ ಕಡಿದವರಾ ನೀವು?ಒಂದು ತೆನೆ ಜೋಳ ನಿಮ್ಮದೇ ಅಂತ ಸಾಬೀತು ಮಾಡಿ...
ಹಣದ ಚೀಲ ಹಿಡಿದರೆ ನಿಮ್ಮದಾಗೋದು ಯಾರು ಸಾರಿದ ಶಾಸನ??
ಒಂದು ಮುಷ್ಟಿ ಅಕ್ಕಿ ನಿಮ್ಮ ಸೈಟಿನಲ್ಲಿ ಅರಳಿಸಿ ತೋರಿಸಿ ನೋಡೋಣ..
ಬಾದಾಮಿಗೆ ಇನ್ನೂ ಹದಿನೈದು ಕಿಮೀ ಇರಬೇಕು.ಅಮೀನಗಢದ ಕರದಂಟು ಇನ್ನೂ ಘಮ್ಮೆನುತ್ತಿದೆ.ಚೌಕಾಶಿ ಇಲ್ಲವೇ ಅಂದರೆ..ಕರದಂಟು ತೂಕಕ್ಕೆ ಹಾಕಿದವನು ಹೇಳಿದ...ನಿಮ್ ಕಡೆ ಗೋಡಂಬಿ ಕಿಲೋಗೆ ಆರುನೂರು ರೂಪಾಯಿ ಕಡಿಮೆ ಇಲ್ಲ..
ಮಾತನಾಡದೇ ಕಟ್ಟಿಕೊಂಡೆ.
ಇವರ ಬದುಕನ್ನಿ ಸೀರಿಯೆಲ್ ಅಥವಾ ಸಿನಿಮಾ ಅಥವಾ ಕಾದಂಬರಿ ಕತೆ ಅಂತೆಲ್ಲಾ ಮಾಡಿ ಯಾರೂ ಪಾಪ ಮಾಡಿಕೊಳ್ಳಬಾರದು.
ಪರಶುರಾಮ ಖಡ್ಗವನ್ನು ತೊಳೆದಾಗ ಅಯ್ಯಯ್ಯೋ ಹೊಳೆ ಕೆಂಪಾಯಿತು ಕೆಂಪಾಯಿತು...
ಹಾಗೇ ಆಗುವುದು.
ಈರುಳ್ಳಿ ರಾಶಿ ಮೇಲೆ ಕಳೆದ ನಾಲ್ಕು ದಿನಗಳಿಂದ ಮಲಗಿದ್ದ ಈರಪ್ಪ ಮತ್ತೆ ವರ್ಷ ಕಾಲ ಕಾಯಲೂ ಸಿದ್ಧ.ಹೈದರಾಬಾದದಿಂದ ಬರುವ ಲಾರಿಗೆ ಉಳ್ಳಾಗಡ್ಡಿ ತುಂಬಬೇಕು.ಅದಕ್ಕೂ ಮೊದಲು ಮಾಲಿಗೆ ಏನು ಎಷ್ಟು ಅಂತ ಪಕ್ಕಾ ಮಾಡಿಕೊಳ್ಳಬೇಕು.
ಈರುಳ್ಳಿಯಲ್ಲಿ ಮೂರು ನಮೂನೆ ಮಾಡುತ್ತಾರೆ.ದೊಡ್ಡ ಸೈಜಿಗೆ ನಾಲುವತ್ತು.ಮೀಡಿಯಂಗೆ ೩೦ ಮತ್ತು ಸಣ್ಣ ಸೈಜಿಗೆ ೧೮ ರೂಪಾಯಿ.
ನಿಮ್ಮೂರಲ್ಲಿ ಇದನ್ನ ಮಿಕ್ಸ್ ಮಾಡಿ ಐವತ್ತು ಕೊಡಿ ಅಂತಾರೆ ಹೌದಲ್ಲೋ..
ಯೆಸ್ ಮಿಸ್ಟರ್ ಉಳ್ಳಾಗಡ್ಡಿ...ಯೂ ಆರ್ ರೈಟ್.
ಕೆಲವೊಮ್ಮೆ ವಾರಗಟ್ಟಲೆ ಕಾಯಬೇಕು.ರಾತ್ರೀನೂ ಮಲ್ಕೊಬೇಕು.ಹೊಲದಿಂದ ಸೀದಾ ಮನೆಗೆ ಒಯ್ಯಲಾಗೋದಿಲ್ಲ.ರಸ್ತೆ ಬದಿ ರಾಶಿ ಹಾಕ್ಕೊಂಡು ಕೂರೋದು...
ಅಷ್ಟರಲ್ಲಿ ಈರಪ್ಪನ ಮಡದಿ ಬಟ್ಟೆಯಲ್ಲಿ ಸುತ್ತಿದ ರೊಟ್ಟಿ ತಂದಿದ್ದಳು.ಬಿಚ್ಚು ಎಂದರೆ ಒಲ್ಲೆ ಅಂದಳು.ಜೊತೆಗೆ ಮೆಣಶಿನ  ಚಟ್ನಿ.
ಬೆರಳ ತುದಿಯಲ್ಲಿ ಮುಟ್ಟಿ ಬಾಯಿಗೆ ಇಟ್ಟುಕೊಂಡರೆ ಸತ್ತೆನೋ ಎಂಬಷ್ಟು ಖಾರ.
ಹಾ ಅದಕ್ಕೇ ನಾವು ಭರ್ತಿ ಜನ ಅಂದಳು ಆಕೆ.
ನಮ್ಮದು ಶಕ್ತಿ..ಫುಲ್ ಜೋಶ್ ಅಂದ ಹಾಗೇ ಕೇಳಿಸಿತು ನನಗೆ.
ಪಕಪಕ ನಕ್ಕಳು.ಈರಪ್ಪನೂ ನಕ್ಕ.
ನೂರಾನಲುತ್ತೈದು ಕಿಲೋ ಜೋಳಾದ ಚೀಲಾನ ಹೊತ್ತು ನಡೀತಾರೆ ಇವರು ಎಂದಳು.
ಅದಪ್ಪಾ ಖದರ್ ಅಂದರೆ.
ಕೂಡಲಸಂಗಮದಲ್ಲಿ ಬಸವಣ್ಣ ಐಕ್ಯರಾದ ನೀರಿನ ನೆಲದಡಿ ಕಂಡವನ ಹೆಸರು ಗೊತ್ತಿಲ್ಲ.ಯಾವೂರು ಅಂದ.ಮಂಗಳೂರು ಅಂದೆ.ದೊಡ್ಡದಾ ಸಣ್ಣದಾ ಅಂದ.ದೊಡ್ಡದು ಅಂದೆ.
ಮೂವತ್ತು ಮೈಲಿ ದೂರದಿಂದ ನಡೆದುಕೊಂಡೇ ಬಂದಿದ್ದಾನೆ ಯುವಕ.ಅಣ್ಣನ ದರುಶನಕ್ಕೆ.ಯಾಕೆ ಅಂತ ಕೇಳಲಿಲ್ಲ.ಅವನ ಭಕ್ತಿ ಅವನಿಗೆ.
ನೀವೂ ಲಿಂಗವಂತರೇ ಅಲ್ವಾ ಅಂದೆ.
ಹೌದು ಆದರೆ ಲಿಂಗಧಾರಣೆ ಮಾಡಿಲ್ಲ.ಮಾಡಬೇಕು ಅಂತೇನಿಲ್ಲ.ಮಾಡಿದರೆ ಹಾಗೇ ಇರಬೇಕು ಎಂದು ಆತ ಕಣ್ಣರಳಿಸಿ ಹೇಳಿದ ಬಾಡಿ ಲಾಂಗ್ವೇಜಿನಲ್ಲಿ ನಾನೂ ಎಲ್ಲರ ಹಾಗೇ..ಬಸವಣ್ಣ ತಾನಲ್ಲ ಎಂಬ ಹಾಗಿತ್ತು.
ಮುಂಜಾನೆ ಎದ್ದು ಸಿವಾ ಅಂದರೆ ಆಯಿತು ನೋಡಿ..ಆಮೇಲೆ ನಮ್ಮ ಕೆಲಸ ನಮಗೆ....ದೇವರು ಬೇರೆ ಉದ್ಯೋಗದಲ್ಲಿ ಹೋಗಬಹುದು.
ಸಿವಾ ಅಂದರೆ ಸಾಕು..
ಆಹಾ ಎಂಥಾ ಅಚಲ ನಂಬಿಕೆ...ಇದಪ್ಪಾ ಬೇಕು...
ನನ್ನ ಕಾಲೇ ಕಂಬ ದೇಹವೇ ದೇಗುಲ..ಶಿರ ಹೊನ್ನ ಕಳಶವಯ್ಯಾ...
ವಿಜಾಪುರದ ಗಲ್ಲಿಯಲ್ಲಿ ಅನಫಿ ಸಾಹೇಬನ ಚಹದ ದೂಕಾನು.ಬೆಳ್ಳಂಬೆಳಗೆ ಓಪನ್ನು.ಸರಕಾರಿ ಗೋಡೆಗೇ ಶೀಟು ಹಾಯಿಸಿ ರಸ್ತೆ ಬದಿಯಲ್ಲಿ ಶುರುವಾದ ದೂಕಾನಿಗೆ ಈಗ ಭರ್ತಿ ಇಪ್ಪತ್ತು ವರ್ಷ.ಕರೆಂಟಿನ ಬೋರ್ಡುಗೆ ಅಂಟಿದ ಹಾಗೇ ನಿಂತ ಮಿಕ್ಸಿಯಲ್ಲಿ ಚಟ್ನಿ ಅರೆದ.ಅವಲಕ್ಕಿ ಗೆ ಪ್ಲೇಟಿಗೆ ಆರು ರೂಪಾಯಿ.ಚಹಕ್ಕೆ ಮೂರೇ ಮೂರು ರೂಪಾಯಿ.ಭರ್ತಿ ವ್ಯಾಪಾರ ಅಂದ.ಜನರಿಗೆ ಹೊಟ್ಟೆ ತುಂಬಿಸಬೇಕು...ಅವರೂ ಸಂತೋಷ ಮಾಡ್ಕೊಳ್ಳಬೇಕು..ನಾನೂ ಸಂತೋಷ ಪಡಬೇಕು.
ಅನ್ನದಾಸೋಹಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಸಿಗಲಿಲ್ಲ.
ನರಗುಂದದ ಮಧ್ಯವಯಸ್ಕ ಮಂಜುಳಾ ಒಡೆತನದ ಲಿಂಗಾಯತರ ಖಾನಾವಳಿ ಇರೋದು ನೆಲಮಾಳಿಗೆಯಲ್ಲಿ.ಒಳ್ಳೆ ಹಸಿವು ಹೊತ್ತು.ಇಳಿದರೆ ಯಾರೂ ಕಾಣಿಸೋದಿಲ್ಲ.ಮಂಜುಳಾ ಮೇಡಂ ಪ್ರತ್ಯಕ್ಷರಾಗಿ ಕರೆದು ಕೂರಿಸಿದಳು.ಕೈ ತೊಳೆಯ ಬೇಕು ಎಂದಾಗ ಬೋಗುಣಿ ತಂದಿಟ್ಟಳು.ಮಗ್‌ನಿಂದ ನೀರು ಸುರಿವುಕೊಂಡು ಕೈತೊಳೆದಾದ ಮೇಲೆ ರೊಟ್ಟಿ ಊಟ ಬಂತು.ಮುರಿದು ಮುರಿದು ಮುಕ್ಕಿದ್ದಾಯಿತು.ಕಾಳು ಪಲ್ಯ, ಎಣ್ಣೆಗಾಯಿ ಹೊಟ್ಟೆ ಬಿರಿಯೆ ತಿಂದು ಬಿಲ್ಲು ಅಂದರೆ ಅಷ್ಟೇ ನಲುವತ್ತೇ ರೂಪಾಯಿ.ಅಷ್ಟೊಂದು ರೊಟ್ಟಿ ತಿಂದೆವಲ್ಲಾ ಅಂದರೆ ನೀವು ಅನ್ನ ಬೇಡ ಅಂದ್ರಲ್ಲಾ ಅದಕ್ಕೆ..ಎಲ್ಲಾ ಸಾಕು ಬಿಡಿ ಅಂದಳು.
ಗೋಡೆಯಲ್ಲಿ ನೇತಾಡುತ್ತಿದ್ದವ ಗಂಡ.ಸತ್ತು ಮೂರು ವರ್ಷ ಆಗಿದೆ.ಬೈಕ್‌ಗೆ ಲಾರಿ ಜಪ್ಪಿ ಖತಂ.ಬಿಟ್ಟು ಹೋದದ್ದು ಒಂದು ಶುಂಠ ಮಗ ಮತ್ತು ಮಗಳನ್ನು.ಅವನೋ ಕೆಲಸ ಮಾಡು ಅಂದರೆ ಸೀದಾ ಎದ್ದು ಆಟದ ಮೈದಾನದಲ್ಲಿ ದೋಸ್ತಿಗಳ ಜತೆ ಆಟ ಆಡುತ್ತಿದ್ದಾನೆ.ಮಗಳು ಫೋಟೋ ತೆಗೀತಾರೆ ಅಂತ ಆಸೆಯಲ್ಲಿ ತಂದು ರೊಟ್ಟಿ ಬಡಿಸಿದ್ದಾಳೆ.
ರೊಟ್ಟಿ ತಟ್ಟುತ್ತಿದ್ದವಳು ಅಮ್ಮ.ಅವಳ ತಮ್ಮನಿಗೆ ಮಗಳನ್ನು ಕೊಟ್ಟಿದ್ದಳು.ತಮ್ಮ ಸತ್ತು ಮಗಳು ವಿಧವೆಯಾದಾಗ ಅವಳ ಸಂಗಾತಕ್ಕೆ ಅಂತ ಹಳ್ಳಿಯಿಂದ ಬಂದು ನಿಂತಿದ್ದಾಳೆ.
ಹಂಪಿಯಲ್ಲಿ ಆರು ಸಾವಿರ ಎಕರೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಇತ್ತು ಎಂದು ಗೈಡ್ ಹೇಳುತ್ತಿದ್ದ.ಬಳ್ಳಗಳಲ್ಲಿ ಮತ್ತು ರತ್ನ ಅಳೆದು ಅಳೆದು ಕೊಡುತ್ತಿದ್ದರು ಎಂದ.ಯಾರಿಗೆ ಕೊಡುತ್ತಿದ್ದರು?ಅವರು ಏನು ಕೊಟ್ಟು ಅದನ್ನು ಪಡೆದುಕೊಳ್ಳುತ್ತಿದ್ದರು?ಆ ,ಮುತ್ತು ರತ್ನಗಳು ಎಲ್ಲಿಂದ ಬಂದವು?ಎಂದೆಲ್ಲಾ ಕೇಳಿದರೆ ಗೊತ್ತಿಲ್ಲ ಸಾರ್ ಅಂದ.ಎರಡೂವರೆ ಸಾವಿರ ದೇವಾಲಯಗಳು ಈ ರಾಜಧಾನಿಯಲ್ಲಿ ಇದ್ದವಂತೆ.ಬಹಮನಿ ಶಾಹಿಗಳು ರಕ್ಕಸತಂಗಡಿಯಲ್ಲಿ ರಾಮರಾಯನ ತಲೆ ಕತ್ತರಿಸಿ ಇಡೀ ಸಾಮ್ರಾಜ್ಯವನ್ನು ಲೂಟಿ ಮಾಡಿ ಸುಟ್ಟು ಹಾಕುತ್ತಿದ್ದಾಗ ಎಲ್ಲಾ ದೇವರುಗಳೂ ರಜೆ ಹಾಕಿದ್ದರು!ಯಾರೂ ಅವರ್‍ಯಾರನ್ನೂ ಕಾಪಾಡಲೇ ಇಲ್ಲ!!
20130308

ಅವಳಿಲ್ಲದ ನಾನು ೮


ಪೋಲೋವಾಲ್ಟ್ ಗೊತ್ತಲ್ಲ..ಹಾಗೇ ಪ್ರೀತಿ ಎಂದರೆ..
ಮುಂದೆ ಹೇಳು..ಅರ್ಥ ಮಾಡಿಕೊಳ್ಳುತ್ತೇನೆ ಎಂದೆ..
ಆಕೆ ನನ್ನ ಬಿಗಿಯಾಗಿ ತಬ್ಬಿಕೊಂಡಿದ್ದಳು.ನನ್ನ ದೊರಗು ಕೆನೆ ಮೇಲೆ ಅವಳ ಮುದ್ದು ಮುದ್ದು ಗಲ್ಲ ಸವರುತ್ತಿತ್ತು.ಕಣ್ಣುಗಳನ್ನು ಕೂಡಿಸಿಕೊಳ್ಳುವ ಹಠಕ್ಕೆ ನಾವಿಬ್ಬರೂ ಬಿದ್ದ ಹಾಗಿತ್ತು.ಮೂರೇ ಮೂರು ಮೈಲಿ ಮುಂದೆ ಸಾಗಿದರೆ ಊರುಕೇರಿ..
ಇಲ್ಲಿ ಮಾತ್ರಾ ದಟ್ಟ ಕಾಡು..
ನೀನು ಹಿಡಿದ ಪೋಲ್..ಅದನ್ನು ಎತ್ತೆತ್ತಿ ಬರೋ ವೇಗ..ವೇಗದಲ್ಲಿನ ಧಾವಂತ..ಅದಕ್ಕೂ ಮಿಗಿಲಾದ ಬಯಕೆ..
ಏನು ಬಯಕೆ ಎಂದಿಯಾ??
ಗೆಲ್ಲಬೇಕು..ಗುರಿಯ ದಾಟಬೇಕು..
ಎದುರಿಗೆ ಆ ಅಡ್ಡ ಕೋಲು.ಅದೇ ನಿನ್ನ ಗಡಿ.ಅದರ ಎತ್ತರ ನಿನ್ನ ಸವಾಲು..ಅದನ್ನು ಮೀರಿ ಏರುವುದು ನಿನ್ನ ಸಾಹಸ.ಎಷ್ಟು ಎತ್ತರ ಮೀರಬಹುದು ಎಂದರೆ ನಿನಗೆ ಆಕಾಶವೇ ಮಿತಿ..ಅಡ್ಡ ಕೋಲಿನ ಏನಾದರೂ ಮುಟ್ಟಿದೆಯೋ  ನಿನ್ನ ಕಸರತ್ತುಗಳೆಲ್ಲಾ ಫೌಲ್..ಅದರ ಕೆಳಗೆ ನುಸುಳಿದರೆ ಥೂ ಶಿಟ್..
ಎಲ್ಲಿ ಕೋಲನ್ನು ಊರುತ್ತೀಯಾ ಎಂಬುದರ ಮೇಲೆ ನೀನು ಎಷ್ಟು ಎತ್ತರ ಹಾರುತ್ತೀಯಾ ಎಂಬ ಲೆಕ್ಕ ಅಡಗಿದೆ.
ಇದೇ ಪ್ರೀತಿಯ ಬೀಜಗಣಿತ.
ಅರ್ಥ ಮಾಡಿಕೊಂಡರೆ ಸಾರಾಸಗಟು ಸಲೀಸು.ಸುಖಾಸುಮ್ಮನೇ ಸುಲಲಿತ..
ಕೋಲನ್ನೂರಿ ಹಾರುವ ಧಾಷ್ಟ್ರ್ಯ ಬಹಳ ಮುಖ್ಯ.
ಏನೆಂದೆ??ಪ್ರೀತಿಯಲ್ಲಿ ಧಾಷ್ಟ್ರ್ಯವೆಂದರೆ??
ಹೂಂ...ಧಾಷ್ಟ್ರ್ಯ ಬೇಕು ಕಣೋ..ಒಂದು ಸೊಕ್ಕು.ನೂರು ಮೀಟರ್ ರೇಸ್‌ಗೆ ನಿಂತವನ ಬಳಿ ಅಪಾರ ಸೊಕ್ಕು ಇರಬೇಕು.ಯಕಶ್ಚಿತ್ ಇದೇನು  ಎಂಬ  ಒಂದು ನಿರ್ಲಕ್ಷ್ಯವೂ ಆ ಹೊತ್ತಾರೆ ಬಂದು ಬಿಡಬೇಕು.ನೂರು  ಮೀಟರ್..ಎಂಬ ಅಲ್ಪ ಹಾದಿ.ಬಿರುಸು ಮತ್ತು ಕಸುವು..ಇದ್ದರೆ ಮಾತ್ರಾ ಸಾಲದು.ಐದು ವರ್ಷ ತುಂಬಾ ಮಾಡಿಕೊಂಡ ಅಭ್ಯಾಸ ಠಣ್ಣನೆ ಬಿದ್ದ ಹೋಗಬಹುದು.ಏಕೆಂದರೆ ಪಕ್ಕದ ಟ್ರಾಕ್‌ನಲ್ಲಿ ನಿನ್ನ ಥರಾನೇ ನಿಂತವನಿರುತ್ತಾನಲ್ಲ...ಅವನ ಬಳಿ ನಿನ್ನಷ್ಟೇ ಕಸುವು,ಬಿರುಸು ಎಲ್ಲಾ ಇರಬಹುದು..ಆದರೆ ನಿನಗಿಂತ ಹೆಚ್ಚು ಸೊಕ್ಕು ಮತ್ತು ಅಷ್ಟೇ ನಿರ್ಲಕ್ಷ್ಯ ಅವನಿಗಿದ್ದರೆ ನೀನು ಅವನ ಕ್ರಮಿಸಲಾರೆ..
ಏನು ಹೇಳುತ್ತಿದ್ದೆ ನಾನು.
ಪೋಲೋವಾಲ್ಟ್..
ಹಾಂ..ಅದೇ ಆ ಕೋಲು..ಅದನ್ನು ಊರುವ ಬಿಂದು..ಆ ಬಿಂದಿನಿಂದ ಕಳಚಿಕೊಂಡು ಛಂಗನೇ ಜಿಗಿಯುವ ಛಲ..ಆ ಹೊತ್ತಿನಲ್ಲಿ ಬಾಗುವ ಕೋಲು ಮತ್ತು ನೀನು..ಅಡ್ಡ ಕೋಲನ್ನು ನಿರಾಕರಿಸುವ ನಿನ್ನ ಹಠ..
ಆಮೇಲೆ?
ಆಮೇಲೆ ನೀನು ಊರಿದ ಕೋಲೂ,ಅವರಿಟ್ಟ ಅಡ್ಡ ಕೋಲೂ ಎರಡೂ ನಥಿಂಗ್..ನಥಿಂಗ್..
ನಿನ್ನನ್ನು ಎತ್ತಿ ಹಾರಿಸಿದ ಆ ಕೋಲನ್ನು ನೀನು ಎಸೆದು ಬಿಟ್ಟಾಗಿದೆ.ಅಷ್ಟೂ ಕಾಲ ನಿನಗೆ ಆಧಾರವಾಗಿದ್ದ,ನಿನ್ನನ್ನು ಈ ಎತ್ತರಕ್ಕೆ ಎಸದು ತಂದ ಕೋಲು ಇನ್ನು ನಿನ್ನದಲ್ಲ.ಅರ್ಥವಾಯಿತೇ??
ಇದರೊಳಗೆ ಪ್ರೀತಿಯ ಹುಡುಕು..ಜಸ್ಟ್ ಕಂಪೇರ್..
ಪ್ರೀತಿಯೂ ಇಷ್ಟೇ..ಪೋಲೋವಾಲ್ಟ್ ನ ಹುಡುಗನ ಹಾಗೇ..
ಅವನೂರಿದ ಬಿಂದಿನ ಹಾಗೇ..ಅವನೆಸೆಯುವ ಕೋಲಿನ ಹಾಗೇ..ಅವನು ಕ್ರಮಿಸುವ ಎತ್ತರದ ಹಾಗೇ..
ಆಕಾಶವೇ ಮಿತಿ..
ಪ್ರೀತಿಗೆ..ಅದರ ರೀತಿಗೆ ಎಂದಳು..
ಹೋಗೇಹೋಗಿ..ಥೂ ನಿಮ್ಮ.. ಎಂದ ಹಾಗಾಯಿತು.
ಹಾಗೆಂದರಲ್ಲಾ ಯಾರದು ಎಂದೆ..
ಕಾಡಿನ ಹಕ್ಕಿಗಳು ಎಂದಳು ಅವಳು..ಆ ಪೊದರಿನಾಚೆಗೆ ಕಿಚಗುಟ್ಟಿದ್ದ ಹಕ್ಕಿಗಳ ಗುಂಪಿನತ್ತ ಬೊಟ್ಟು ಮಾಡುತ್ತಾ.
ಏಯ್..ಅವುಗಳ ಪ್ರೇಮದ ರಭಸದ ಎದುರು ನಾವು ಫೌಲ್..ನಮ್ಮ ಪ್ರೀತಿ ಅಯಾಚಿತವೇನಲ್ಲ.ಆದರೆ ಅಲ್ಲೊಂದು ಲೆಕ್ಕಾಚಾರ ಹುಟ್ಟೇ ಹುಟ್ಟುತ್ತದೆ..
ಆಮೇಲೆ ಎಲ್ಲಾ ಮುಗಿದ ಮೇಲೆ ಏನು ಎಂದು ಕೇಳುತ್ತದೆ..
ಬಂದಷ್ಟು ವೇಗದಲ್ಲಿ ಹೋಗಲಾರೆವು..ಆದರೆ ಒಂದಿನವಾದರೂ ಹೋಗಲೇಬೇಕು...
ಅದೇ ನಿ-ರ್ಗ-ಮ-ನ..
ಸಾಕು ಎಂದೆ.
ಅವಳು ಎರಡೂ ಕೈಗಳನ್ನು ಮುಚ್ಚಿ ಬಿಕ್ಕಿಬಿಕ್ಕಿ ಅಳತೊಡಗಿದಳು..     

20130306

ಅವಳಿಲ್ಲದ ನಾನು-೭


ಊಟದ ಹೊತ್ತಿನಲ್ಲಿ ಅನ್ನದ ಮೇಲೆ ಉಪ್ಪು ಹರಡಿಕೊಳ್ಳುತ್ತೇವಲ್ಲ..
ಹೂಂ
ಅಷ್ಟೇ ಅಷ್ಟು ಹಾದರ ಬೇಕು..
ಹಾಗಂತ ಹೇಳಿಬಿಟ್ಟ ಆ ಅವಧೂತ.
ಚಾರ್ಮಾಡಿಯ ಕಾಡೇ ಕೇಕೆ ಹಾಕಿದಂತೆ ಆ ಮಾತು ನನ್ನೊಳಗೆ ಅವತರಣಿಕೆಯಾಗುವುದನ್ನು ಕೂಡಲೇ ಗಮನಿಸಿದ ಅವಳು ನವಿರಾಗಿ ಚಿವುಟಿದಳು.
ಅವಳು ತೊಡೆ ಮೇಲೆ ಚಿವುಟಿದ ನೋವು ಯಾಕೋ ಮುದವಾಗಿದೆ ಎನಿಸಿತು.ಸಣ್ಣಗೇ ಕಣ್ಣುಹೊಡೆದೆ.
ಅವಧೂತ ಹೇಳುತ್ತಿದ್ದ
ನಾನು ದೇವರನ್ನು ನೋಡಿದ್ದೇನೆ,ದೇವರ ಜೊತೆ ನಾನು ಯಾವತ್ತೂ ಆಧ್ಯಾತ್ಮಿಕ ಮಾತನಾಡೇ ಇಲ್ಲ.ನಾನೂ ದೇವರೂ ಸದಾ ಮಾತನಾಡೋದು ಲೌಕಿಕ ವಿಚಾರಗಳನ್ನೇ. ಅದರಲ್ಲೂ ನಾವೆಲ್ಲಾ ಮುಚ್ಚಿಟ್ಟುಕೊಳ್ಳುವ ಹಲವು ಆಚಾರ ಚೌಕಟ್ಟಿನೊಳಗಿನ ತಟವಟಗಳನ್ನು..
ನಾನು ಕಣ್ಣು ಎವೆ ಬಿಡದೇ ಅವಧೂತನನ್ನು ನೋಡುತ್ತಿದ್ದೆ.
ಅವನು ನಕ್ಕ.
ನಗುವಿನಲ್ಲಿ ಸಣ್ಣ ತುಂಟತನ.
ಮನುಷ್ಯ ತುಂಬಾ ಆತ್ಮವಂಚಕ.ಯಾವತ್ತೂ ಯಾರೂ ಹೃದಯಕ್ಕೆ ನೇರವಾಗಿ ನಡೆಯುವುದು ಸಾಧ್ಯವೇ ಇಲ್ಲ.ದೇವರು ಕೂಡಾ ಇದನ್ನು ಖಚಿತಪಡಿಸುತ್ತಾನೆ.ಅವನಿಗೂ ಸಿಕ್ಕಾಪಟ್ಟೆ ಅಲೌಕಿಕರಾಗಿರೋರ ಬಗ್ಗೆ ಆಸಕ್ತಿಯೇ ಇಲ್ಲ.
ಹಾಗಾದರೆ ನಾವೆಲ್ಲಾ ಮಾಡುತ್ತಿರುವುದರಲ್ಲಿ ಸರಿ ತಪ್ಪು ಅಂತೆಲ್ಲಾ ಯಾಕೆ ಬರುತ್ತದೆ ಎಂದು ಆಕೆ ಕೇಳಿದಳು.
ನಾನು ಯಾಕಾದರೂ ಇದನ್ನು ಕೇಳುತ್ತಾಳೋ ಅಂದುಕೊಂಡೆ.
ಅವಧೂತ ಹೇಳಿದ,ನೀನು ಮಾಡಿದ್ದೆಲ್ಲಾ ಸರಿಯೇ.ದಾರಿಯಲ್ಲಿ ನಡೆದುಕೊಂಡು ಹೋಗುವುದರಿಂದ ತೊಡಗಿ ಸುಮ್ಮನೇ ಮಲಗಿಕೊಳ್ಳೋ ತನಕ..
ಮನುಷ್ಯ ಮಾತ್ರಾ ಇದು ಸರಿ ಇದು ತಪ್ಪು ಅಂತೆಲ್ಲಾ ತಾವೇ ರಚಿಸಿದ ಕಟ್ಟಲೆಗಳ ಕೋಟೆಯೊಳಗೆ ಥೇಟ್ ರೋಗ ಹಿಡಿದು ಸಾಯೋ ಸೈನಿಕನ ಥರ ಸಾಯುತ್ತಾನೆ .
ಆಹಾ ಎಷ್ಟೊಂದು ಚೆನ್ನಾಗಿ ಹೇಳುತ್ತಾ ಇದ್ದಾನೆ ಎನ್ನಿಸಿತು.ನಾನೂ ಮತ್ತೊಮ್ಮೆ ಅದೇ ಸಾಲುಗಳನ್ನು ಮನನ ಮಾಡಿದೆ..ರೋಗ ಹಿಡಿದು ಸಾಯೋ ಸೈನಿಕನ ಥರ...
ಇವಳಿದ್ದಾಳಲ್ಲ..ನಿನ್ನ ಪ್ರೇಯಸಿ..ಇವಳು ಮಾಡೋದೆಲ್ಲಾ ಸರೀನೇ..
ನಾಳೆ ನಿನ್ನ ಬಿಟ್ಟು ಇನ್ನೊಬ್ಬ ಇಷ್ಟವಾಗಬಹುದು ಎಂದು ಆಕೆ ಹೊರಡುತ್ತಾಳೆ..ಅದು ನಿನ್ನ ಭಾಗ್ಯ ಅಷ್ಟೇ..
ಅವಳು ವಂಚಿಸುತ್ತಾಳೆ ಎಂದು ನೀನು ಹತಾಶನಾಗಬಾರದು.ನಿನಗೆ ಇನ್ನೊಂದು ಜೀವ ಪ್ರೀತಿಸಲು ಸಿಗಲೇ ಬೇಕು ಎಂದೇನಿಲ್ಲ..ಅದು ನಿನ್ನ ಅದೃಷ್ಟ.ಅವಳಿಗೆ ಸಂತೋಷವಾಗಿರಲು ಇನ್ನೊಂದು ಆಸರೆ  ಒಪ್ಪಿಕೊಳ್ಳಬಹುದು.ಅವಳ ಕನಸಲ್ಲಿ ನೀನೇ ಇರಬೇಕು ಎಂದೇನೂ ಇಲ್ಲ..ನೀನೇ ಅವಳ ಸಾಮ್ರಾಜ್ಯದವನ್ನಾಳುವವನಾಗಬೇಕಿಲ್ಲ..ಪ್ರತಿಯೊಂದು ಹುಡುಗಿಯ ಮನಸೂ ಒಂದು ದೇಶ ಇದ್ದ ಹಾಗೇ..
ಅರಸೊತ್ತಿಗೆಯಲ್ಲಿ ಯುದ್ಧ ಗೆದ್ದವನು ಮಾತ್ರಾ ಉಳಿಯುತ್ತಾನೆ.ಪ್ರತಿಯೊಬ್ಬನಿಗೂ ದೇಶ ಗೆಲ್ಲುವ,ದೇಶ ಆಳುವ ಹಂಬಲವಿರುತ್ತದೆ..
ಅನ್ನದ ಮೇಲೆ ಉಪ್ಪಿನ ಥರ ಹಾದರ..ಎಂದು ಆತ ಮತ್ತೊಮ್ಮೆ ಹೇಳಿದ..
ನಾನು ಅವಳನ್ನು ಬಿಗಿಯಾಗಿ ಅಪ್ಪಿಕೊಂಡೆ..
ಅಗ ಅಲ್ಲಿ ಅವಧೂತನಿರಲಿಲ್ಲ.ಅವನು ಕಂಡ ದೇವರೂ ಜೋರಾಗಿ ನಕ್ಕ.
ನನ್ನ ಬಿಟ್ಟು ಹೋಗುತ್ತೀಯಾ ಎಂದೆ.ಅವಳ ಮುಖದಲ್ಲಿ ವಿಷಣ್ಣ ಭಾವ ಹಂದಾಡುತ್ತಿತ್ತು.
ಗೊತ್ತಿಲ್ಲ.ನಾನೇ ನಾನಾಗಿ ಹೋಗಲಾರೆ,ಆದರೆ ನಿರ್ಗಮನದ ಬಾಗಿಲಿಗೆ ಅಗುಳಿ ಹಾಕಲು ಯಾರಿಗೂ ಸಾಧ್ಯವಿಲ್ಲ.ಏಕೆಂದರೆ ಅದು ಇರೋದೇ ಹಾಗೇ.ಅಗುಳಿ ಇಲ್ಲದೇ ಚಿಲಕವಿಲ್ಲದೇ..
ತೆರೆದ ಬಾಗಿಲಾಚೆಗೆ ಹಾದಿಗಲೇ ಇರಲಾರದು ಎಂದೆ.
ಹೌದು..ನನಗೂ ಹಾಗೇ ಅನಿಸುತ್ತಿದೆ.ಇರಲಾರದು...ಆದರೂ ಹಾದಿಗಳನನು ಕಡಿದು ಮಾಡಬಹುದೇಓ..ನೀನೇ ಹೇಳಿದ್ದೆ ನೋಡು,ಈ ಘಾಟಿ ರಸ್ತೆಗೆ ಬ್ರಿಟಷರು ಬೆಟ್ಟ ಕಡಿದು ಹಾದಿ ಕಟ್ಟಿದರು ಅಂತ..
ಎದುರಿನ ಮರದ ಎಲೆಗಳ ಮೇಲೆ ದಿಟ್ಟಿ ನೆಟ್ಟೆ.ನೀನೂ ಯಾರ ಸೊತ್ತೂ ಅಲ್ಲ ಎಂದ ಹಾಗಾಯಿತು.ಈ ಮರಗಳ ಕೊಂಬೆ ರೆಂಬೆ ಎಲೆ ಚಿಗುರುಗಳನ್ನು ಅವುಗಳು ಕೇಳದೇ ಹೇಳದೇ ಸೃಷ್ಟಿ ಮಾಡಿಟ್ಟ ದೇವರ ಮೇಲೆ ಅಸಹನೆ ಮೂಡುತ್ತಿತ್ತು.ನಾನೂ ಈ ಮರದ ಹಾಗೇ..ಎಲೆಗಳನ್ನು ಪ್ರೀತಿಸಲಾರೆ..ಚಿಗುರುಗಳನ್ನು ಚಿವುಟಲಾರೆ..ಅಷ್ಟೇ ಏಕೆ ಈ ಮರದ ಗೆಲ್ಲುಗೆಲ್ಲುಗಳಲ್ಲಿ ಹೂವು ಕಾಯಿ ಹಣ್ಣು ಗಳು ನನ್ನ ಆಣತಿಯಲ್ಲ.
ಆ ಮರ ಆ ಹಣ್ಣನ್ನು ಎಂದಿಗೂ ಸವಿಯಲಾರದು ಕಣೋ..ಎಂದಳು.
ಆವಳೂ ನಾನು ನೋಡುತ್ತಿದ್ದ ಮರವನ್ನೇ  ನೋಡುತ್ತಿದ್ದಳು.
ನನಗೆ ಇವಳೂ ಅವುಧೂತೆಯೇನೋ ಎಂಬ ಸಂಶಯ ಮತ್ತು ಅಚ್ಚರಿ ಒಟ್ಟಾಗಿ ಮೂಡುತ್ತಿತ್ತು.
ಉಪ್ಪಿನ ರೀತಿ ಹಾದರ..ಎಂದೆ.
ನಾನು ನನ್ನ ಗಂಡನ ಜೊತೆ ಮಿಲನಮಹೋತ್ಸವ ಆಚರಿಸುತ್ತಿದ್ದರೆ ಮನಸ್ಸು ತುಂಬಾ ನೀನು ಬಂದರೆ ಹೇಗಿದ್ದೀತು ಹಾಗೇ ಎಂದಳು.
ಡೇರಿಂಗ್ ಡೇರಿಂಗ್ ಎಂದುಕೊಂಡೆ.

20130301

ಮುಕ್ತಿಗೆ ಕಾಯುತ್ತಿರುವ ನನ್ನ ಅಮ್ಮ

ಗೊತ್ತಿಲ್ಲ
ಹೀಗೆ ನಾನೂ ಬರೆಯಬಹುದೇ ಎಂದು
ಅದೂ ಅಮ್ಮನ ಕುರಿತಾಗಿ ಈ ಹೊತ್ತಿಗಿಂದು
ಅಮ್ಮ ನನ್ನನ್ನು ಗರ್ಭದಲ್ಲಿ ಮಡಗಿದ್ದಾಗ
ಇದು ಜೀವ ನಾನಲ್ಲ ಎಂದುಕೊಂಡಿದ್ದಳಂತೆ
ಹುಟ್ಟಿದ್ದು ನಾನು ಎಂದು ಗೊತ್ತಾದಾಗ
ದೇವರೇ ಬಂದನೆಂದು ವ್ಯಾಪ್ತೋಭವ ಎಂದಳಂತೆ
ಅಮ್ಮ ಕಡೆಯುವ ಕಲ್ಲಿನ ಮುಂದೆ ನಾನು ಕುಳಿತಿದ್ದೆ
ಹಣ್ಣಿನ ರಸಾಯನದ ಪಾಕ ಕದ್ದಿದ್ದೆ
ಮೊದಲ ಸಲ ಸ್ಖಲನವಾದಾಗ ಹೆದರಿ ಅವಳ ರಗ್ಗು ಸೇರಿದ್ದೆ
ಅಮ್ಮನ ಮಾತುಗಳಿಗೆ ಅರ್ಥ ಕಟ್ಟಲಿಲ್ಲ..ನನ್ನಂತೆ ಅವಳು ಅರ್ಥ ಹುಡುಕಲಿಲ್ಲ
ಅಮ್ಮನನ್ನು ಮುದಿತನ ಹುಡುಕಿಯೇನೂ ಬರಲಿಲ್ಲ
ಇದ್ದ ಯೌವನ ಅವಳಲ್ಲೂ ಉಳಿಯಲಿಲ್ಲ
ಮಾಗಿದ ಜೀವದಿಂದ ಮನಸ್ಸು ಮೂರಾಬಟ್ಟೆ
ಅವಳ ಜತನದಿಂದ ಅವಳೇ ಉರುಳಿ ಬೀಳುವಳು
ಆಯ ತಪ್ಪಿದ ದೇಹ,ಜೊತೆಗೆ ಮನಸ್ಸು
ಮಾತುಗಳೆಲ್ಲಾ ಕಾಗದದ ಚೂರುಗಳಾಗಿ ಹಾರುವವು
ನನ್ನಮ್ಮ ನನ್ನ ಜೊತೆ ಈಗ ಇಲ್ಲ
ಎಲ್ಲಿಗೋ ಹೋಗಿದ್ದಾಳೆ,ನನ್ನ ಗುರುತಿಲ್ಲ
ಅವಳಿಗೂ ಹಸಿವಿತ್ತು ಎಂಬುದು ಈಗ ತಿಳಿಯುತ್ತಿದೆ,
ನಾನಿತ್ತ ಬಟ್ಟಲಿನಲ್ಲಿ ಅವಳ ಅಡುಗೆ
ಅಮ್ಮ ನನ್ನ ಬಿಟ್ಟು ಹೋಗುವಳು
ನನಗೆ ಗೊತ್ತಾಗಿದೆ,ಅವಳಿಗಲ್ಲ


20130112

ಆ ಹೊತ್ತಿಗೆ ಆತ ಅವಳ ಮಗನೇ ಆಗಿದ್ದ..


ಈ ರಾಮಾಯಣವನ್ನು ಸುಮ್ಮನೇ ಸ್ವಲ್ಪ ಓದಿ..
ಇಟ್ ಈಸ್ ಇಂಟರೆಸ್ಟಿಂಗ್..
ಕಾಸರಗೋಡು ಅಂದರೆ ಹಾಲಿ ಕೇರಳದ ಮೂಲನಿವಾಸಿ ಜನಾಂಗವೊಂದರಲ್ಲಿ ಹಾಡು ಕಬ್ಬವಾಗಿ ಹರಡಿಕೊಂಡಿರುವ ರಾಮಾಯಣ ಇದು.
ಎಂದು ಯಾರು ಈ ಕಥೆ ಕಟ್ಟಿದರೋ ಏನೋ..ಇದರ ಹೆಸರು ಫಕ್ರು ರಾಮಾಯಣ.ಬಹುಶಃ ಫಕ್ರು ಎಂಬಾತ ಕಟ್ಟಿದ ಕಾವ್ಯ ಇರಬಹುದು ಎಂದುಕೊಳ್ಳೋಣ.
ಖಂಡಿತಾ ಇದು ಬರೆದು ತುಂಬಿಕೊಂಡ ಕಾವ್ಯವಲ್ಲ..ಆದರೆ ಬರೆಯದೇ ಇದ್ದ ಕಾರಣಕ್ಕೆ ಇದರ ಸೊಗಡು ಸೊಗಸು ಇದೆ.ಹಾಗೇ ಇದರ ಅಪ್ರತಿಮ ಚೆಲುವು ಕೂಡಾ.
ಕತೆ ಆರಂಭಿಸೋಣವೇ?
ಸಿಂಪಲ್ಲಾಗಿ ಸೀತೋಪಾಖ್ಯಾನದತ್ತ ನೋಟ ಹಾಯಿಸಿ.
ಎಲ್ಲಾ ರಾಮಾಯಣದಂತೆ ಇಲ್ಲೂ ಸೀತೆ ಜನಕನ ಮಗಳೇ.ಆದರೆ ಈ ಸೀತೆಗೆ ಯಜ್ಞ ಮಾಡೋ ಖಯಾಲಿ.ಪ್ರತಿ ನಿತ್ಯವೂ ಯಜ್ಞ ಮಾಡಬೇಕು.ಹೀಗೆ ಈ ಸೀತಮ್ಮ ಯಜ್ಞ ಮಾಡಲು ಹವಿಸ್ಸನ್ನು ತೆಗೆದಿಟ್ಟರೆ ಕಾಗೆಯೊಂದು ಹಾರಿ ಬಂದು ಅದನ್ನೆತ್ತಿಕೊಂಡು ಹೋಗುತ್ತದೆ.ಸೀತೆಗೋ ಭಾಳಾ ಬೇಜಾರಾಗುತ್ತದೆ.ಮಗಳ ಯಜ್ಞಕ್ಕೆ ಅನುದಿನವೂ ಧಕ್ಕೆ ಬರೋದು ಸ್ವತಃ ಜನಕಮಹಾರಾಜನಿಗೂ ದುಃಖ ತರುತ್ತದೆ.ಆದರೆ ಆ ಕಾಗೆಯನ್ನು ಕೊಲ್ಲಲು ಮಾತ್ರಾ ಯಾರಿಗೂ ಸಾಧ್ಯವಾಗೋದಿಲ್ಲ.ಅದೆಂಥಾ ಮಾಯಕದ ಕಾಗೆಯೋ..
ಕೊನೆಗೊಮ್ಮೆ ಜನಕ ರಾಜ ಡಂಗುರ ಹೊಡೆಸುತ್ತಾನೆ.ಕಾಗೆಯನ್ನು ಕೊಂದವರಿಗೆ ಮಗಳನ್ನು ಕೊಡುತ್ತೇನೆ ಎಂದು ಘೋಷಿಸುತ್ತಾನೆ.
ಸುದ್ದಿ ರಾಮನ ಕಿವಿಗೆ ಬೀಳುತ್ತದೆ.
ಹೇಳಿಕೇಳಿ ರಾಮ.ಅವನು ಯಕಶ್ಚಿತ್ ಕಾಗೆಯನ್ನು ಕೊಲ್ಲೋದೇ?
ಆತ ಲಕ್ಷ್ಮಣನನ್ನು ಕಾಗೆ ಸಂಹಾರಕ್ಕೆ ಕಳುಹಿಸುತ್ತಾನೆ.
ಲಕ್ಷ್ಮಣ ಕಾಗೆಯನ್ನು ಕೊಂದು ನಿಂತರೆ ಸೀತೆ ಹೂಮಾಲೆ ಹಿಡಿದು ಮುಂದೆ ಬರುತ್ತಾಳೆ.
ಲಕ್ಷ್ಮಣ ಒಪ್ಪುವುದಿಲ್ಲ.ಈ ಕೆಲಸ ಅಣ್ಣನ ಆಜ್ಞೆ.ಆದ್ದರಿಂದ ಈ ಬಹುಮಾನ ಅಣ್ಣನಿಗೇ ಸಲ್ಲಬೇಕು ಎನ್ನುತ್ತಾನೆ.
ಹಾಗೇ ಆಗುತ್ತದೆ.
ಇದು ಒಂದು ಎಪಿಸೋಡು.ಇನ್ನೊಂದು ಇದಕ್ಕಿಂತಲೂ ಚೆನ್ನಾಗಿದೆ,ಓದಿ.
ರಾಮ ಸೀತೆ ಲಕ್ಷ್ಮಣ ಕಾಡಿಗೆ ಹೋಗುತ್ತಾರೆ.ವಿಶ್ರಾಂತಿಗೆಂದು ಸೀತೆ ಅಂಗಾತ ಮಲಗಿದ್ದಾಳೆ.ಸೆರಗು ಜಾರಿದೆ.ಕಂಚುಕದ ಗುಂಡಿ ಕದಲಿದೆ.ಲಕ್ಷ್ಮಣ ಅದನ್ನು ನೋಡಿಬಿಟ್ಟ.ಸಂಕಷ್ಟಕ್ಕೆ ಬಿದ್ದ.ತರುಣಿಯ ಎದೆಯನ್ನು ಮುಟ್ಟುವ ಹಕ್ಕು ಅವಳ ಗಂಡ ಮತ್ತು ಮಗುವಿಗೆ ಮಾತ್ರಾ...
ಲಕ್ಷ್ಮಣ ಮೊಣಕಾಲೂರಿ ಬಾಗಿದ.ನಾಲಗೆ ಚಾಚಿದ.ನಾಲಗೆಯಲ್ಲೇ ಸೀತೆಯ ಕಂಚುಕದ ಗುಂಡಿಯನ್ನು ಹಾಕಿದ.
ಆ ಹೊತ್ತಿಗೆ ಆತ ಅವಳ ಮಗನೇ ಆಗಿದ್ದ!!20130102

ಹಾಡಲ್ಲ, ಹೀಗೀಗೆ

ಹೊಸ ವರುಷಕ್ಕೆ ಕಟ್ಟಿದ ಸಂಕಲ್ಪಗಳ
ಗೋಪುರ
ಹೇಮಂತದ ಛಳಿಗೆ ಒಡೆದು ಗೋರಿಯಾಗುವುದು
ನಾನು ಗೋಪುರದಲ್ಲೇ ಸಮಾಧಿ..
ಬೆಳಗಿನ ಹಕ್ಕಿಗಳ ಚಿಲಿಪಿಲಿಯಲ್ಲಿ
ಪ್ರತಿಜ್ಞೆಗಳೇ ಕಾಣದ ನಾನು
ಮುಂದಿನ ಹೊಸ ವರ್ಷಕ್ಕೆ ಕ್ಷಣಗಳನ್ನು ಎಣಿಸುವೆ..