20121231

ಹೆಸರಿಲ್ಲ ಅವಳಿಗೆ


ಅವಳಿಗೆ ಹೆಸರಿಲ್ಲ
ಸಾವಿಗೂ ಹೆಸರಿಲ್ಲ
ಅವಳು ಹರಿದ ಯೋನಿಯ ನೆತ್ತರಲ್ಲಿ
ಹೆಸರು ಮುಚ್ಚುವಳು
ಎದೆಯ ಮೇಲೆ ಮತ್ತೊಂದು ಬದುಕಿನ ಗೂಡು ಕಟ್ಟಿ ಹಾರುವಳು
ಅವರು ಹೊರಬರುವ ಹಾದಿಯಲ್ಲಿ ಜನ ಮರೆತು ಮೆರೆಯುವರು
ಅದೇ ಬೆಳಗು ಮತ್ತೊಬ್ಬಳ ಹೆದರಿಸುವುದು
ಹೊಸ ವರುಷಕ್ಕೂ ಯಾಕೋ ಅಂಜಿಕೆ...
ಕಳೆದುಹೋದ ವರುಷದಲ್ಲಿ ಕೋಟೆ ಜರಿದು ಕಂಡ ಮಹಾರಾಜ ಬೆತ್ತಲೆ

20120919

ಅವಳಿಲ್ಲದ ನಾನು ೬


ಕಡಿದಾದ ಆ ಘಾಟ್ ರಸ್ತೆಯ ಹನ್ನೊಂದನೇ ತಿರುವಿನಲ್ಲಿ ಸ್ವಲ್ಪ ಮೊದಲು ಎಡ ಭಾಗಕ್ಕೆ ಒಂದು ಹಳೆಯ ಕಟ್ಟಡವಿದೆ.ಕೇಳಿದರೆ ಇದು ಬ್ರಿಟಿಷರು ಕಟ್ಟಿಸಿದ್ದು ಎನ್ನುತ್ತಾರೆ.ನಿಜವೇ ಇರಬಹುದೇನೋ.
ಈ ಘಾಟಿಯಲ್ಲಿ ಮೊದಲು ರಸ್ತೆಯೇ ಇರಲಿಲ್ಲ.ಘಟ್ಟದ ಮೇಲಿನ ಜನರೆಲ್ಲಾ ಈ ಕಡೆಗೆ ಬರುವುದಾದರೆ ಘಾಟಿಯ ದಟ್ಟ ಕಾಡಿನೊಳಗೆ ಎಲ್ಲೆಲ್ಲೋ ಹತ್ತಿ ಇಳಿದು ಬರಬೇಕಿತ್ತಂತೆ.ಆದರೆ ಈ ದಟ್ಟ ಕಾಡಿನೊಳಗೆ ಇದ್ದ ಆದಿವಾಸಿಗಳಿಗೆ ಮಾತ್ರಾ ಕಾಡಿನ ಹಾದಿಯ ಖಚಿತ ಪರಿಚಯವಿತ್ತಂತೆ..
ನಾನು ಹೀಗೆ ಹೇಳುತ್ತಿದ್ದರೆ ಅವಳ ಕಣ್ಣಲ್ಲಿ ತುಂಟ ನಗು.
ಭಳಿರೇ..ಶಹಬ್ಬಾಸ್..ಸಾಗಲಿ ಹಾಯಿ ಇಲ್ಲದ ದೋಣಿ,ಹೊಗೆ ಇಲ್ಲದ ರೈಲು..ಎಂದಳು.
ಕಿವಿ ಹಿಂಡಿದೆ.
ಸೀರಿಯೆಸ್ಸಾಗಿ ಕೇಳಬೇಕು ಎಂದೆ.
ಕೇಳೋಣ..ನಿನ್ನ ಈ ಕಥಾನಕವನ್ನು ಕೇಳಲು ನನ್ನ ಕರ್ಣಗಳು ತೆರೆದು ಕಾಯುತ್ತಿವೆ ಎಂದು ಕಿಂಡಲ್ ಮಾಡಿದಳು.
ಆಮೇಲೆ ಎಂದಳು.
ನಂಗೊತ್ತಿಲ್ಲ.ನನ್ ಅಜ್ಜ ಹೇಳುತ್ತಿದ್ದ ಕಥೆಯನ್ನಷ್ಟೇ ಹೇಳುತ್ತೇನೆ ಎಂದೆ.
ನನ್ನ ಉತ್ಸಾಹ ನೋಡಿ ಅವಳಿಗೂ ಉತ್ಸಾಹ ಬಂತು.ಹೇಳೋ ಹೇಳು ಎಂದಳು.
ಆ ಬ್ರಿಟಿಷ್ ದೊರೆಗಳು ಸಮುದ್ರದ ಊರಿಗೆ ಬರಲು ಈ ಘಾಟಿಯಲ್ಲಿ ಹಾದಿ ಮಾಡಲು ಬೇಕಿತ್ತಂತೆ.ಆಗ ಒಬ್ಬ ಆದಿವಾಸಿ ಯುವಕ ತಾನು ಸರಿಯಾದ ಹಾದಿ ತೋರಿಸುವುದಾಗಿ ಹೇಳಿದನಂತೆ.ಅವನು ತೋರಿಸಿದ ಹಾದಿಯನ್ನೇ ಬ್ರಿಟಿಷ್‌ರು ರಸ್ತೆ ಮಾಡಿದರಂತೆ.ಆಮೇಲೆ ಅವನನ್ನು ಕೊಂದು ಹಾಕಿದರಂತೆ.ಯಾಕೆಂದರೆ ಬುದ್ಧಿವಂತ ಭಾರತೀಯ ಇರಲೇ ಬಾರದು ಎಂಬುದು ಅವರ ತೀರ್ಮಾನವಾಗಿತ್ತಂತೆ.
ಭಾರತ್ ಮಾತಾ ಕೀ ಜೈ..ಎಂದಳು.
ಆ ಕಾಲದ ಬ್ರಿಟಿಷ್ ಅಧಿಕಾರಿಗಳಿಗೆ ಹಾದಿ ಮಧ್ಯೆ ವಿಶ್ರಾಂತಿಗೆ ಅಂತ ಕಟ್ಟಿಸಲಾದ ಕಟ್ಟಡವಿದಂತೆ ..
ಅದೇ ಕಟ್ಟಡದ ಹಿಂಭಾಗದಲ್ಲಿ ನಾವು ನಡೆದು ಕೊಂಡೇ ಹೋಗಬೇಕಾದ ಹಾದಿ ಇತ್ತು.ಕಟ್ಟಡ ಮುಂಭಾಗದಲ್ಲಿ ಕಾಣಿಸುತ್ತಿತ್ತು ನಿಜ.ಆದರೆ ಹಿಂಭಾಗದಲ್ಲಿ ಪೂರ್ತಿ ಕುಸಿದು ಬಿದ್ದಿತ್ತು.
ಅದನ್ನು ನೋಡುತ್ತಾ ನಾವು ಕಾಡಿನೊಳಗೆ ಇಳಿಯಬೇಕು.
ನಾಲ್ಕು ಫರ್ಲಾಂಗು ಹೋದರೆ ಸಾಕು ಆತ ಸಿಗುವನು ಎನ್ನುತ್ತಿತ್ತು ನನ್ನ ಮನಸ್ಸು.
ನಂಗೂ ಹಾಗೇ ಅನಿಸುತ್ತಿದೆ ಎಂದಳು.
ಅವನು ಸಿಕ್ಕ.
ಒಂದು ಮರದ ಕತ್ತರಿಸಿದ ಬೊಡ್ಡೆಯ ಮೇಲೆ ಕುಳಿತಿದ್ದ.ನೋಡಿದರೆ ಥೇಟ್ ಅವಧೂತನ ಥರ ಇದ್ದ.
ನನ್ನ ಕನಸಲ್ಲಿ ಕಾಣಿಸಿದವನು ಇವನೇ..ಹೀಗೇ ಇದ್ದ.ಇದೇ ಥರ ಮರದ ಬೊಡ್ಡೆ..ಇದೇ ನಿಲುವಂಗಿ.ಇದೇ ಕೆದರಿದ ತಲೆಗೂದಲು,ಇದೇ ದಪ್ಪ ಮೀಸೆ,ಕುರುಚಲು ಗಡ್ಡ.ಬಾಯಿಯಲ್ಲಿ ಹುಕ್ಕಾ..
ಅವಳೆಂದಳು..ನನ್ನ ಜೊತೆ ಕನಸಲ್ಲಿ ಮಾತನಾಡಿದವನೂ ನಿಜಕ್ಕೂ ಇವನೇ..
ದೇವರನ್ನು ಕಂಡವನು ನಾನು ಎಂದ.
ದೇವರು ನಿಮ್ಮ ಬಗ್ಗೆ ಏನನ್ನೋ ಹೇಳಿ ಕಳುಹಿಸಿದ್ದಾನೆ.ಅದನ್ನು ಖುದ್ದಾಗಿ ನಿಮ್ಮ ಜೊತೆ ಹೇಳಿಬಿಡಬೇಕು ಅಂದಿದ್ದಾನೆ.ಅದಕ್ಕೇ ನೀವಿಬ್ಬರೂ ಬರಬೇಕು ಎಂದು ಇಬ್ಬರ ಕನಸಲ್ಲೂ ಬಂದು ಹೇಳಿದ್ದೇನೆ ಎಂದ ಅವಧೂತ.
ಅವಳು ಬೆರಗು ಕಣ್ಣುಗಳಿಂದ ನೋಡುತ್ತಿದ್ದಳು.ನಾನು ಅಷ್ಟೇನೂ ಗಂಭೀರವಾಗಿ ಇರಬಾರದು ಎಂದು ಮೊದಲೇ ತೀರ್ಮಾನಿಸಿದಂತೆ ಸಿದ್ಧನಾಗಿ ನಿಂತಿದ್ದೆ.
ಅವನೆಂದ,ನೀವು ಪ್ರೇಮಿಗಳೇ ಅಲ್ಲ.
ಹಾಗಾದರೆ ಏನು ಎಂದೆ..
ನೀವು ಪ್ರೀತಿಸಲು ಶುರು ಮಾಡಿಲ್ಲ..ಆದ್ದರಿಂದ ಪ್ರೇಮಿಗಳಲ್ಲ.
ನಾವು ಪರಸ್ಪರ ನೋಡಿಕೊಂಡೆವು.ಅಷ್ಟೂ ಹೊತ್ತು ಅಲ್ಲಿ ಮೌನ ಇತ್ತು.
ಅವನ ಮುಖ ಅವಳು.ಅವಳ ಮುಖ ನಾನು.ನನ್ನ ಮುಖ ಅವನು.
ಹಾಗಾದರೆ ಏನು ಅಂತ ನೀವು ಮನಸ್ಸಲ್ಲೇ ಕೇಳುತ್ತಿರುವ ಪ್ರಶ್ನೆಗೆ ನನ್ನಲ್ಲಿ ಉತ್ತರ ಇದೆ ಎಂದ ಅವಧೂತ.
ಹೇಳಿದರೆ ಚೆನ್ನಾಗಿತ್ತು ಎಂದೆ.
ಈಗ ಹೊರಡಿ..ದಾರಿ ಮಧ್ಯೆ ಉತ್ತರ ಸಿಗುತ್ತದೆ ಎಂದ.
ಅಷ್ಟು ಹೇಳಿ ಛಂಗನೇ ಕಾಡಿನ ಕೆಳ ಭಾಗದ ಪ್ರಪಾತದತ್ತ ಜಿಗಿದ.
ಏನು ಮಾಡಬೇಕು ಎಂದು ತಿಳಿಯದೇ ನಾನು ಅವಳನ್ನು ಬಲವಾಗಿ ತಬ್ಬಿಕೊಂಡೆ.ಆ ಅಪ್ಪುಗೆಯಲ್ಲಿ ಅವಳು ನನ್ನ ಕತ್ತಿನ ಸುತ್ತ ಚೆಲ್ಲಿದ ಬಿಸಿಯುಸಿರು ಸುರುಳಿಸುರುಳಿಯಾಗಿ ನನ್ನ ಆವರಿಸಿತು.
ಮತ್ತೆ ನಾವು ಕಾರಿನ ಬಳಿ ಬಂದಾಗ ಜೋರಾಗಿ ಮಂಜು ಬೀಳುತ್ತಿತ್ತು.ಕಾರೆಲ್ಲಿದೆ,ದಾರಿಯೆಲ್ಲಿದೆ,ಕಾಡೆಲ್ಲಿದೆ,ಹಾದಿಯೆಲ್ಲಿದೆ ಎಂಬುದು ಒಂದೂ ಗೊತ್ತಾಗದಂತೆ ದಟ್ಟ ಮಂಜು ಸುತ್ತುಬಳಸಿತ್ತು.
ಅವಳೆಂದಳು ನನ್ನ ಕೈ ಹಿಡಿದುಕೋ..
ನಾನು ಬಹಳ ಹೊತ್ತು ಯೋಚಿಸುತ್ತಾ ನಿಂತೆ..ಹಿಡಿಯಲೇ ಬೇಡವೇ..
ಕೈಹಿಡಿಯಲಿಲ್ಲ.ಬಾಚಿ ಅವಳನ್ನು ಎತ್ತಿಕೊಂಡೆ.
ಈಗ ಗೊತ್ತಾಯಿತು ಎಂದಳು ಅವಳು...

20120906

ಅವಳಿಲ್ಲದ ನಾನು ೫


ಒಂಭತ್ತನೇ ತಿರುವು.
ಇಲ್ಲೇ ಇಳಿದುಬಿಡೋಣ ಅಂದಳು.
ಇಳಿದೆವು.
ರೆಂಜೆ ಮರದ ಕೆಳಗೆ ರಾಶಿ ಬಿದ್ದ ಪುಟ್ಟ ಪುಟ್ಟ ಹೂಗಳು.ಅವಳೊಂದೆತ್ತಿದಳು,ನಾನೊಂದ ಎತ್ತಿದೆ.ಅವಳೊಂದೆತ್ತಿದಳು,ನಾನೊಂದ ಎತ್ತಿದೆ..ಕೈ ತುಂಬಾ ಪುಟ್ಟ ಪುಟ್ಟ ರೆಂಜೆ ಹೂವು.ಅವಳ ಅಂಗೈ ಮುಚ್ಚಿದೆ.ಎದೆಗವಚಿ ಹಿಡಿದಳು.ಅವಳು ಅಂಗೈ ಅರಳಿಸಿ ಆಸ್ವಾದಿಸಬಹುದೆಂದುಕೊಂಡಿದ್ದೆ.ಹೋ ಎಂದು ಹೂವ ನನ್ನ ಮೈಮೇಲೆ ಸುರಿದಳು.ಆಮೇಲೆ ಅಂಗೈಗಳನ್ನ ಎತ್ತಿ ಮುಖಕ್ಕೆ ಮುಚ್ಚಿಕೊಂಡಳು.
ನನಗೆ ರಂಜೆ ಹೂವು ಸಂತೈಸುತ್ತಿದೆ.ಮುಂದಿನ ಜನ್ಮದಲ್ಲಿ ಬಂದು ನಿನ್ನ ಜೊತೆ ಸೇರಿ ರೆಂಜೆ ಹೂವಿನ ಮಾಲೆ ಪೋಣಿಸುತ್ತೇನೆ ಎನ್ನುತ್ತಾಳೆ.
ನಾನು ನೂಲನ್ನು ಹಿಡಿದು ಕಾಯುತ್ತಿದ್ದೇನೆ.ಅವಳು ಬರುತ್ತಾಳೆ,ಹೂವ ಪೋಣಿಸುತ್ತಾಳೆ ಎಂದುಕೊಳ್ಳುತ್ತಾ..
ಕನಸೂ ಅಲ್ಲ,ನನಸಂತೂ ಆಲ್ಲವೇ ಅಲ್ಲ.ಹಾಗಾದರೆ ಇದೇನಿದು?ಅವ್ವಲ್ ಭ್ರಮೆ.
ಇರಲಿ,ಅದೂ ಇರಬೇಕು.
ಆಕಾಶಕ್ಕೆ ಏಣಿ ಹಾಕುತ್ತಿದೆ ಆ ಉದ್ದನೆಯ ನೂಲು.ಅದರಲ್ಲಿ ಅವಳು ಪೋಣಿಸಿದ್ದರೆ ಆ ರೆಂಜೆ ಹೂವಿನ ಸಾಲು!
ನನಗೆ ಹೂವಿನ ಏಣಿಯಲ್ಲಿ ಅಷ್ಟೆತ್ತರಕ್ಕೆ ಏರಿ ಆಕಾಶವನ್ನೇ ತಬ್ಬಿ ಮೋಡಗಳ ಮರೆಯಲ್ಲಿ ಬಿಕ್ಕಿಬಿಕ್ಕಿ ಅಳಬಹುದಿತ್ತು.
ಧಿಕ್ಕರಿಸಿ ನಡೆಯವ ಹಾದಿ ಇಲ್ಲೇ ಹತ್ತನೇ ತಿರುವಿನಲ್ಲಿ ಎಂದಳು.ಕೈ ಹಿಡಿದುಕೊಂಡಳು.ಬಾ ಅಲ್ಲೇ ಹೋಗಿ ಬಿಡೋಣ.ನಾನು ಒಲ್ಲೆ ಎಂಬ ಹಾಗೇ ನಿಂತೆ.ಅವಳು ಶಕ್ತಿ ಮೀರಿ ಎಳೆದ ಭರಕ್ಕೆ ಮತ್ತಷ್ಟು ಗಟ್ಟಿ ಕಂಬವಾದೆ.
ಈಗ ಅನಿಸುತಿದೆ..ಹೊರಟೇ ಬಿಡಬಹುದಿತ್ತೇನೋ..ಹಾಗಂತ ಅವಳೂ ಹೇಳುತ್ತಿದ್ದಾಳೆ.
ಮತ್ತೊಮ್ಮೆ ಆ ಹಾದಿ ತೆರೆದಿರುವುದಿಲ್ಲ.ಏಕೆಂದರೆ ಭಾರೀ ಬಂಡೆಯೊಂದು ಉರುಳಿ ಬಿದ್ದು ಹತ್ತನೇ ತಿರುವು ಮುಚ್ಚಿ ಹೋಗಿದೆ.
ಮನೆಯ ಹಾದಿಯಲ್ಲಿ ಬೇಲಿಯಾಚೆಗೆ ಅಪ್ಪ ಇರಲಿ ಅಂತ ಕಡಿಯದೇ ಬಿಟ್ಟ ರೆಂಜೆ ಮರವಿದೆ.ಅದರಲ್ಲಿ ಹೂ ಬಿಡುವ ಹೊತ್ತಿಗೆ ಕಾಯುತ್ತಿದ್ದೇನೆ.ಅವಳು ಸರಸರನೇ ಬಂದು ಹೂವ ಹೆಕ್ಕಿ ರಾಶಿ ಹಾಕಿದಾಗ ಈ ನೂಲನ್ನು ಕೊಡುವೆ.ಅವಳು ನಿಧಾನವಾಗಿ ನೆಲದ ಮೇಲೆ ಚೆಲಕ್ಲಿದ ರೆಂಜೆ ಹೂವುಗಳನ್ನು ಎತ್ತಿಎತ್ತಿ ಪೋಣಿಸುತ್ತಿದ್ದರೆ ನಾನು ಆಕಾಶಕ್ಕೆ ಏಣಿ ಇಟ್ಟ ನೂಲನ್ನು ಇಳಿಯಬಿಡುವೆ.ಅವಳು ಮಾಲೆ ಮಾಡುತ್ತಾ ಮಾಡುತ್ತಾ ಅವಳನ್ನೂ ನನ್ನನ್ನೂ ಮಾಲೆ ಸುತ್ತಿಕೊಳ್ಳುವುದು..
ಗೊತ್ತಿಲ್ಲ.ಅವಳಿಲ್ಲದ ನನ್ನ ರೆಂಜೆ ಮರ ಹೂವು ಕೊಡಲಾರೆ ಎಂದು ರಾತ್ರಿ ಕನಸಲ್ಲಿ ಬಂದು ಹೇಳಿ ಹೋಗಿದೆ.
ಇಬ್ಬನಿಯ ಮಬ್ಬಿನಲ್ಲಿ ನಾನು ರೆಂಜೆ ಮರದ ಬಳಿ ಹೋಗಿ ಹೇಳಿದೆ,"ಹಾಗೇನಾದರೂ ಮಾಡಿದರೆ ಜೋಕೆ"
ಮರದ ತುಂಬಾ ರೆಂಜೆ ಹಣ್ಣುಗಳೇ ಇದ್ದವು.
ಮುದ್ದು ಮುದ್ದು ರೆಂಜೆ ಹೂವೆಲ್ಲಿ?ಹೂವೆಲ್ಲಿ??

20120822

ಅವಳಿಲ್ಲದ ನಾನು ೪


ನಿನ್ನ ಸುಳಿಯಿಂದ ಹೊರಬರಬೇಕು..ಹಾಗಂತ ಕಠಿಣವಾಗಿ ನಿರ್ಧಾರ ಮಾಡಿದ್ದೇನೆ.ಅದರಿಂದ ನಿನಗೆ ಸಂಕಟವಾಗುತ್ತದೆ ಎಂದು ನನಗೂ ಗೊತ್ತು.ಬೇರೆ ದಾರಿಯಿಲ್ಲ..
ಅಂತೂ ಅವಳು ಹೊರಟಳು ಎಂದಾಯಿತು.
ನಾನು ಹೊರಟಿಲ್ಲ.ಹ್ಹೆ ಹ್ಹೆ..ಹೊರಟು ಹೋಗುವುದಾದರೂ ಎಲ್ಲಿಗೆ?
ನಿನ್ನ ಹಿತವಾದ ಕಾವಿನಲ್ಲಿ ಒಡೆದು ಬಂದರೆ ನನಗೆ ಕಾಣುವ ಲೋಕ ಬೇಕಾಗಿಲ್ಲ.ಇದರೊಳಗೆ ಹೀಗೆ ಇದ್ದು ಬಿಡುತ್ತೇನೆ..ಲೋಳೆಯಾಗಿ..
ಬೀಜ ಕಟ್ಟಲಾರೆ,ಬಲಿತುಕೊಳ್ಳಲಾರೆ,ಅಂಡದ ಆವರಣದಿಂದ ಸೀಳಿ ಬರುವುದು ಕಲಿಯಲಾರೆ..
ಇಲ್ಲೇ ಜೀವವಾಗಿ ಉಳಿಯುತ್ತೇನೆ..ಅಷ್ಟೂ ಕಾಲ..ನಿನ್ನ ಗೂಡಿನೊಳಗೆ ಕಾವು ತಣಿಯುವಷ್ಟೂ ಕಾಲ..
ಹಾರಿ ಹೋದರೆ ಹಕ್ಕಿ ಎಂದು ಕೇಳಿದೆ..
ಪೆಚ್ಚು ಪೆಚ್ಚು ಮೋರೆ ಹಾಕಿದಳು..ಆಮೇಲೆ ನಾನು ಕೊಳೆತ ಮೊಟ್ಟೆ ಅಷ್ಟೇ ಎಂದಳು.
ತಣುಪು ಏರುವ ಹೊತ್ತಿಗೆ ನಾವಿಬ್ಬರೂ ಹೊರಟಾಗಿತ್ತು.ಮೂರೇ ಮೂರು ಹೆಜ್ಜೆ ಹಾಕುವ ಹೊತ್ತಿಗೆ ಅವನು ಕರೆದು ಕೊಟ್ಟದ್ದು ಅವಳ ಕರ್ಚೀಫು.
ಆಗಲೇ ಅದನ್ನು ಕದ್ದು ತಂದಿಟ್ಟುಕೊಂಡಿದ್ದೆ.ಮೊನ್ನೆಮೊನ್ನೆ ಅವಳಿಲ್ಲದ ನಾನಾಗುವ ಹೊತ್ತಿನಲ್ಲೇ  ಆ ಕರ್ಚೀಫಲ್ಲೇ ಕಣ್ಣೊರೆಸಿಕೊಂಡ ನೆನಪು.
ಸುಳಿಯಿಂದ ಹೊರಬರದಂತೆ ನಾನು ತಡೆಯಲಿಲ್ಲ.ಏಕೆಂದರೆ ನನ್ನ ಪ್ರೀತಿಗೆ ಅಷ್ಟೊಂದು ಗಾಢವಾದ ಆಳವೂ ಇರಲಿಲ್ಲ.ಹೆಚ್ಚೆಚ್ಚು ಆಳ ಇದ್ದಂತೆ ಹೆಚ್ಚೆಚ್ಚು ಸುಳಿ ಎಂದಿದ್ದ ಆ ಮೀನುಗಾರ.ಅವನು ಅದೇ ಬಂಡೆಯ ಮೇಲೆ ದಿನವೂ ಕುಳಿತು ಗಾಳ ಸುಳಿಯಲ್ಲಿ ಬಿಟ್ಟು ಧೇನಿಸುತ್ತಿದ್ದ.
ಏನಾಗುತ್ತಿದೆ ಎಂದು ಕೇಳಿದೆ.
ಮೀನುಗಳೆಲ್ಲಾ ಹರಿವಲ್ಲಿ ಕೆಳಗೆ ಸಾಗಿದಂತಿವೆ.ಇನ್ನು ಬಹಳ ಹೊತ್ತು ಕಾಯಬೇಕು.ಮತ್ತೆ ವಾಪಸ್ಸು ಬಂದು ಈ ಕಯದಲ್ಲಿ ಸುಳಿಸುಳಿಯಾಗಿ ಸುತ್ತುತ್ತಾ ಏರಿ ಮುಳುಗಿ ಇಳಿದು ಮತ್ತೆ ಹತ್ತಿ ಬರುತ್ತವೆ.ಅಷ್ಟರಲ್ಲಿ ನನ್ನ ಗಾಳದ ಅದೃಷ್ಟ ಇದ್ದರೆ ಕ್ಯಾಚ್ ಎಂದ.
ನೇತ್ರಾವತಿಯ ಕಯದಲ್ಲಿ ನೀರು ನಿರ್ಮಲವಾಗಿ ನಿಂತಿತ್ತು.ನಿಂತೇ ಇದ್ದ ನೀರಿನೊಳಗೆ ಅವನ ಗಾಳದ ಬಳ್ಳಿ ಮಾತ್ರಾ ಇಳಿದುಕೊಂಡಿತ್ತು.ಸಲಿಲದ ಕನ್ನಡಿಯಲ್ಲಿ ಮುಖ ನೋಡಿಕೊಂಡೆ.ಆಳ ಕಾಣಿಸುವುದಿಲ್ಲ.
ನೋಡಲೇಬೇಡಿ..ಇದರ ಆಳ ಕಂಡವರಿಲ್ಲ ಎಂದ ಅವನು.
ನಾನು ನಕ್ಕೆ.
ನಾನು ನನ್ನ ಮುಖ ಮಾತ್ರಾ ನೋಡಿಕೊಂಡದ್ದು ಅಷ್ಟೇ ಎಂದೆ.
ಮುಖವನ್ನೂ ಮರೆತು ಒಳಗೆ ನೋಡಿ..ಎಂದ.
ಝುಂ ಎಂದಿತು.
ಅಲ್ಲಿಯೂ ಅವಳಿಲ್ಲ.ಬರೀ ಕೊಳ.
ಖಾಲಿ ಕೊಳದಲ್ಲಿ ಅವಳು ಸುಳಿದಾಡುವುದಿಲ್ಲ ಅಥವಾ ಅವಳು ಸುಳಿದಾಡದ ಕೊಳ ಖಾಲಿಯಾಗಿದೆಯೇ?
ಗೊತ್ತಿಲ್ಲ.
ಹುರ್ರೇ ಮೀನು ಸಿಕ್ತು ಎಂದ ಮೀನುಗಾರ.
ಕೊಳ ಕದಡಿತು.
ಅವನು ಬರಬರನೇ ಗಾಳ ಎಳೆಯುತ್ತಿದ್ದ.
ಕಯದಲ್ಲಿ ನದಿಯ ನೀರಿನ ಸುಳಿಗಳು ಒಂದಾದ ಮೇಲೊಂದು ಸುತ್ತು ಹಾಕುತ್ತಿದ್ದವು.
ಅವಳು ಕೇಳಿದಳು..ಪ್ಲೀಸ್ ನಂಗೂ ಆ ಕಯ ತೋರಿಸು..

20120821

ಅವಳಿಲ್ಲದ ನಾನು ೩


ಇನ್ನೊಂದು ಸಾರೆ ಹೋಗೋಣ ಬಾರೋ ಅಂದ ಅವಳ ಮಾತಿನಲ್ಲಿ ಎಷ್ಟೊಂದು ಘಮವಿತ್ತು ಎಂದು ಈಗ ಊಹಿಸಿದರೆ ಸಂಕಟವಾಗುತ್ತದೆ.
ಅರ್ಥವಾಗಿರಲಿಲ್ಲ ಕಣೇ ಸ್ಸಾರಿ ಅಂದೆ
ಫೆಬ್ರವರಿ ೨೨ ಅಂದಳು.
ಏನೂ ಹೇಳಬೇಡ..ಮತ್ತೆ ಅದನ್ನೆಲ್ಲಾ ರಾಶಿ ಕಟ್ಟಿ ಗುಪ್ಪೆ ಮಾಡಿ ಅದರ ಮೇಲೊಂದು ವಿಷ್ಣುಕ್ರಾಂತಿ ಹುಲ್ಲಿನ ಕಣೆ ನೆಟ್ಟು ಬಿಡುವೆ ಎಂದಳು.
ನಾನು ಅವಳ ಕಣ್ಣುಗಳಲ್ಲಿ ಇಣುಕಿ ನೋಡಿದೆ.
ಥೇಟ್ ಕೃಷ್ಣನ ರಾಧೆಯಂತೆ ಕಾಣಿಸಿದಳು.
ಅವಳು ನೆಟ್ಟ ವಿಷ್ಣುಕ್ರಾಂತಿ ಹುಲ್ಲಿನ ಕಣೆ ನನಗೆ ಕೃಷ್ಣನ ನವಿಲಗರಿಯಂತೆ ಕಾಣಿಸಿತು.
ಒಡೆದ ಕೊಳಲು ನಾನು ಎಂದೆ.ಬಾಯಿಗಡ್ಡ ಮುಷ್ಟಿ ಇಟ್ಟಳು.ಮಾತು ಕಂದಿತು.ಮುಖ ಮುಚ್ಚಿಕೊಂಡೆ.
ಕಾಡಿನ ಹಾದಿ ತುಂಬಾ ಬಿರುಸಾಗಿತ್ತು.ಅವಳ ಮುಖದಲ್ಲಿ ಅದೇ ಸಂಕ್ರಾತಿಯ ಹಬ್ಬ.ಮೆತ್ತಗೆ ಕರೆದರೆ ಅವಳು ಬೆಂಕಿಯ ನಿಗಿ ಮೇಲೆ ಹಾರಿ ದಾಟುವ ಕುದುರೆ ಅಲ್ಲ  ಹೋರಿ
ಓಡಿ ಬಂದು ಗುದ್ದಿದಳು.ಹೊಟ್ಟೆ ಸೀಳಿಕೊಂಡ ಹಾಗಾಗಿ ದೊಪ್ಪನೆ ಬಿದ್ದೆ.
ನನ್ನ ಭ್ರಾಂತಿಗಳಲ್ಲಿ ನೀನೂ ಒಬ್ಬ ಕಣೋ ಎಂದವಳು ಹೇಳಿದಾಗ ಸರಿ ರಾತ್ರಿಯಲ್ಲಿ ಎದ್ದು ಅಮ್ಮನ ಕೂಗುವ ಮುದ್ದುಕಂದನ ಭಾವ ನನ್ನಲ್ಲಿ.
ಯಾಕೋ ಎಂದೆ.
ಅದು ಯಾವ ಮಾಯಕದಲ್ಲಿ ಬಂದೆಯೋ..ನಾನು ನಿಲ್ಲುವಳಲ್ಲ ಎಂದು ತಿಳಿದೂ ಮುತ್ತಿಕ್ಕುವೆ..
ಸಕ್ಕರೆಯ ಹರಳು ನಾನು ಕಣೋ..
ನನಗೆ ಬೇಕಾಗಿದ್ದ ಒಂದೇ ಒಂದು ಸೆಕ್ಯೂರ್‌ನ್ನು ನೀನು ಮಹಾವ್ಯಕ್ತಿ ದಯಪಾಲಿಸಿದೆ..
ಆದರೂ ಅದು ನಿನ್ನಲ್ಲಿ ಮಾತ್ರಾ ಇರಬೇಕಾದ್ದೇನೂ ಅಲ್ಲವಲ್ಲ.ಎಲ್ಲಿಯೂ ನಾನು ಹುಡುಕಿ ಪಡೆಯಬಹುದಿತ್ತೇನೋ..ಆದರೆ ಹಾಗೇ ಹುಡುಕುತ್ತಾ ಎಲ್ಲಿ ಹರಳುಗಟ್ಟಿಬಿಡುವೆನೇನೋ ಎಂದು ಭಯವಾಗಿತ್ತು.ನಿಜವಾಗಿಯೂ ಕಣೋ ಭಯವಾಗಿತ್ತು.
ಇಷ್ಟಕ್ಕೂ ನಾನು ಹುಡುಕುವ ಅಗತ್ಯವೂ ಇರಲಿಲ್ಲ.ಏಕೆಂದರೆ ನೀನೇ ಅದನ್ನು ಮೊಗೆದು ಕೊಟ್ಟಿದ್ದೆ.
ಈಗ ಎಲ್ಲವೂ ಮೌನ.
ಅವಳು ನೆಟ್ಟ ವಿಷ್ಣುಕ್ರಾಂತಿ ಹುಲ್ಲಿನ ಕಣೆ ಎಷ್ಟು ನೋಡಿದರೂ ಕೃಷ್ಣನ ನವಿಲಗರಿ ಥರ ಕಾಣಿಸುವುದೇ ಇಲ್ಲ.ದೇವರಕೋಣೆಯಲ್ಲಿ ಅಪ್ಪ ಮಾಡುತ್ತಿದ್ದ ದೇವರ ಪೂಜೆಯ ಘಂಟಾಮಣಿಯ ಏಕನಾದ ಝುಮ್ಮೆನಿಸುತ್ತಿದೆ.ಅವಳ ಧ್ವನಿಯೇ ಅದು ಎಂದು ಕೊಳ್ಳುತ್ತೇನೆ.ಛಾರ್ಜ್‌ಗಿಟ್ಟ ಮೊಬೈಲ್ ಎತ್ತಿ ಮೆಸೇಜ್ ಟೈಪ್ ಮಾಡುತ್ತೇನೆ.ಸೆಂಡ್ ಒತ್ತಿದರೆ ಗಿರ್ರನೇ ಗಿರಿಗುಟ್ಟುತ್ತಾ ಮೆಸೇಜು ಮತ್ತೆ ಮೊಬೈಲ್‌ನಲ್ಲೇ ಠಿಕಾಣಿ.
ಯಾಕೋ ಬೇಕು ಎನಿಸುತ್ತದೆ.ಅವಳ ಒಂದು ಸಾಲಿನ ಫೂತ್ಕಾರ...ಅದು ಬ್ಯಾಡ್ ಬಾಯ್
ಬೆರಳು ಅವಳ ಹೆಸರಿನ ಮೇಲೆ ಹರಿದಾಡುತ್ತದೆ.ಮೊದಲ ಸ್ಪರ್ಶದ ಖದರಿನಲ್ಲಿ ಅದೇ ಜಾಡು ಇತ್ತು ಎಂಬಂತೆ ನೆನಪು ದಟ್ಟೈಸುತ್ತದೆ.ಅವಳು ಹಲೋ ಅಂದರೆ ಅದು ಫಾರ್ಮಲ್,ಹಾಯ್ಯಾ ಅಂದರೆ ಗಾಟ್ ಇಟ್..
ಒಂದೇ ಒಂದು ಬಾರಿ ಕರೆಗಂಟೆಯ ಚಿತ್ರದ ಮೇಲೆ ಹೆಬ್ಬೆರಳ ಸ್ಪರ್ಶ..
ಸಾಗುತ್ತಾ ಸಾಗುತ್ತಾ ಸಾಗುತ್ತಾ ಹೋದ ನನ್ನ ಒಡಲ ಝಾಗಟೆಯ ಧ್ವನಿ ಎಲ್ಲೋ ಕಣ್ಮರೆ.
ಅವಳಿಂದು ಹೀಗೆಯೇ..ತತ್ಕಾಲದ ಮೋಕ್ಷಕ್ಕೆ ಸಂಕಲ್ಪ ಮಾಡಿದ್ದಾಳೆ.
ಅಪ್ಪ ತೀರ್ಥ ಸೇವನೆಗೆ ಗಿಂಡಿ ಹತ್ತಿರ ಎಳೆದುಕೊಂಡಿರಬೇಕು..
ಶರೀರೇ ಝರ್ಝರೇ ಘೋರೇ ವ್ಯಾಧಿಗ್ರಸ್ತೇ ಕಲೇವರೇ......


ಅವಳಿಲ್ಲದ ನಾನು ೨


ನದಿಗೂ ಯಾವುದೋ ವಿರಹ.ತೀರಾ ನೊಂದವಳ ಹಾಗೇ ಹರಿಯುತ್ತಿದೆ.ಹಿಂದಿನ ಉಲ್ಭಣವಿಲ್ಲ,ಅವಸರದ ವೇಗವಿಲ್ಲ.ಸಾಕು, ಎಷ್ಟಾದರೂ ಸೇರುವುದು ಆ ಸಾಗರದ ಒಳಗೆ ತಾನೇ ಎಂಬ ನೀರವ ನೇವರಿಕೆ ನದಿಗೆ ಅವಳ ತೊಡೆಯ ಮೇಲೆ ನಾನು ತಲೆ ಮಡಗಿ ಬಿಕ್ಕಳಿಸುತ್ತಿದ್ದಾಗ..
ಎಷ್ಟೊಂದು ನದಿಗಳನ್ನು ತನ್ನೊಳಗೆ ಸೇರಿಸಿಕೊಂಡ ಸಾಗರ ಥೇಟ್ ಫ್ಲರ್ಟ್.ಸಾಗರಕ್ಕೆ ಭಾವನೆಗಳೇ ಇಲ್ಲ.ಆ ಬೆಟ್ಟದ ಕಿಬ್ಬಿನಿಂದ ಛಿಲ್ಲೆಂದು ಒಡೆದು ಕಿಳಿಕಿಳಿ ಸದಸು ಮಾಡುತ್ತಾ ಸುರಿದು ಸುಪ್ಪತ್ತಿಗೆಯನ್ನೂ ಮುಕ್ಕಳಿಸಿ ಬರುವ ತೊರೆ ಅವರಿವರ ಗೆಳೆತನವ ಕಟ್ಟಿಕೊಂಡು ಧುಮ್ಮಿಕ್ಕಿ ತೊನೆದಾಡಿ ಹರಹಿ ಹಗುರವಾಗಿ ಕಿಲಕಿಲನೆ ನಕ್ಕ ಹರೆಯದ ಹುಡುಗಿಯ ಹಾಗೇ ಕನಸುಗಳನ್ನೇ ಕಾತರಿಕೆಗೆ ಎಡೆ ಇಟ್ಟ ಹಾಗೇ ಸಾಗುತ್ತಿದ್ದರೆ ಆ ನದಿಯ ಒಳಗೂ ಇರುವ ಸಣ್ಣ ಸಂತೋಷ ಆ ಸಾಗರ ನನ್ನ ಅಪ್ಪಿ ಮುದ್ದಾಡಿ ರಮಿಸಿ ಕೂಡಿ ಸುಖಿಸಿ ಸಂತೈಸಿ ಅವನೊಳಗೆ ನಾನಿಲ್ಲದ ಹಾಗೇ ಮಾಡುತ್ತದೆ ಎಂಬ ಸಂಭ್ರಮ.
ಆದರೆ ಸಾಗರಕ್ಕೆ ಈ ನದಿ ಎಷ್ಟನೆಯ ತೊತ್ತು!
ಅಬ್ಬಾ ತೊತ್ತು..ರಮೆಯಲ್ಲ,ಜವನೆಯಲ್ಲ,ಮನದನ್ನೆಯಲ್ಲ,ಅರಸಿ ಬಂದರೂ ಅವನ ಅರಸಿಯಲ್ಲ!
ಆದರೂ ಸಾಗರದೊಳಗೆ ಲೀನವಾಗುವುದೇ ನದಿಯ ಧರ್ಮ.
ಇದನ್ನೂ ಪ್ರೀತಿ ಎನ್ನುತ್ತಾರಾ ಎಂದು ಕೇಳಿದೆ.
ಮಾತನಾಡಲಿಲ್ಲ.
ಹಮ್ ಅಂದಳು.
ನನಗೆ ಎಸ್ಸೆಮ್ಮೆಸ್ ಭಾಷೆ ಬೇಡ ಕಣೇ... ಭಾವನೆ ಬೇಕು..ಎದೆಯ ಬಾಗಿಲಿಗೆ  ಅಗುಳಿ ಹಾಕಿದಂಥ ಭದ್ರತೆ ಬೇಕು,ತೀವ್ರತೆ ಬೇಕು ಎಂದೆ.
ನಕ್ಕಳು..
ಕಳ್ಳರು ಬರಲಾರರು ಎಂದುಕೊಂಡಿರುವೆ ಎಂದಳು.
ಖಜಾನೆಯಲ್ಲಿ ಎಲ್ಲಾ ಖಾಲಿ ಖಾಲಿ..ಇನ್ನೂ ಈ ಕೋಶ ತುಂಬಿದೆ ಎಂದುಕೊಂಡ ಭ್ರಮೆ ಮಾತ್ರಾ ನನ್ನಲ್ಲಿ ಉಳಿದಿದೆ.ಇದರೊಳಗೆ ಇರೋದು ಖಾಲೀ ಥೈಲಿ..ಕುಟ್ಟಿ ಕುಡುಗಿದರೆ ಏನೂ ಸಿಗದು..ಬರೀ ಠುಸ್ಸೆಂಬ ಗಾಳಿ ಮಾತ್ರಾ..
ನಿನ್ನ ಹೃದಯಪುಟದಿಂದ ಸೈನ್‌ಔಟ್ ಆಗಿದ್ದೇನೆ ಎಂಬ ಸಂದೇಶ ಬಿಟ್ಟು ಹೊರಟಳು.
ನಾನು ಜಾಲಾಡಿದರೆ ಅಲ್ಲಿ ಮತ್ತೆ ಲಾಗ್ ಆನ್ ಆಗಿ ಎಂಬ ಸೂಚನೆ ಇತ್ತು.
ಈ ಬಾರಿ ಕಂಚುಕಲ್ಲು ಮುಳುಗುವುದಿಲ್ಲ ಎಂದುಕೊಂಡೆ.ಏಕೆಂದರೆ ಮಳೆ ಕಂತುಕಂತಾಗಿ ಹೊರಟು ಹೋಗಿತ್ತು.ಬೆಟ್ಟದಲ್ಲಿ ಮಳೆ ಜಡಿದು ಬಂದರೆ ನದಿ ತುಂಬುತ್ತಾಳೆ.ಮದುವೆ ಮಂಟಪದಲ್ಲಿ ತೆರೆಸೀರೆಯ ಆಚೆಗೆ ನಿಂತ ಅವಳ ಹಾಗೇ.
ನಕ್ಕಳು.
ಆ ನಸುನಗುವಿನಲ್ಲಿ ಅವಳನ್ನು ಹಿಡಿಯಲು ಕೆಮೆರಾಗಳು ಒದ್ದಾಡುತ್ತಿದ್ದವು.ವೀಡಿಯೋ ಎತ್ತಿ ಓಡಾಡುತ್ತಿದ್ದ ಆ ದಢೂತಿ ಕೆಮೆರಾವಾಲಾ ನನ್ನನ್ನು ನೂಕಿ ನಿಂತ.ಅವನಿಗೆ ಬೇಕಾಗಿದ್ದುದು ಅವಳ ಆ ನಗು.ಅದು ಅವನಿಗಲ್ಲ,ಅವನ ಕೆಮೆರಾಕ್ಕೆ ಮಾತ್ರಾ ಎಂದು ಸಮಾಧಾನಪಟ್ಟೆ.
ಆ ರಾತ್ರಿ ಅವಳ ಎಸ್ಸೆಂಎಸ್ ಬಂದಿತ್ತು.ಓದಿರಲಿಲ್ಲ.ಗಾಢ ನಿದ್ದೆಯಲ್ಲಿದ್ದೆ.ಹೊತ್ತಾರೆ ಎದ್ದು ಓದಿದೆ. "ಸಂಗಮ ಆಗಲಿಲ್ಲ.ಕಂಚುಕಲ್ಲು ಮುಳುಗಿಸು"
ಕಂಚುಕಲ್ಲು ಮುಳುಗದೇ ಸಂಗಮ ಆಗುವುದಿಲ್ಲ.ಕಂಚುಕಲ್ಲು ಮುಳುಗಿಲ್ಲ ಏಕೆಂದರೆ ಬೆಟ್ಟದ ಮೇಲೆ ಮಳೆ ಬೀಳುತ್ತಿಲ್ಲ.ಕಂಚುಕಲ್ಲಿನ ಮೇಲೆ ಮಳೆ ಬಿದ್ದರೂ ಅದು ಮುಳುಗುವುದಿಲ್ಲ.ಏಕೆಂದರೆ ಅದರ ಮುಳುಗುವಿಕೆಗೆ ಹೊರ ತೊರೆಯೇ ಬರಬೇಕು.ದೂರದಿಂದ ನದಿ ತುಂಬಿ ಬರಬೇಕು.
ನಾನು ಬೆಟ್ಟದ ಮೇಲೆ ಏರಿ ಮೋಡಗಳನ್ನು ಹಿಂಡಿ ಹಿಪ್ಪೆ ಮಾಡಿ ಮಳೆ ಸುರಿಸಿ ನದಿಯ ತುಂಬಿ ಹರಿಸಿ ಕಂಚುಕಲ್ಲನ್ನು ಮುಳುಗಿಸಿ ಸಂಗಮಕ್ಕೆ ಸನ್ನದ್ಧಮಾಡುವೆ.
ನೇತ್ರಾವತಿಯ ಜೊತೆಗೂಡಿ ಸಂಗಮಿಸಲು ಕುಮಾರಧಾರೆ ಹರಿದು ಬರುತ್ತಿದ್ದಾನೆ ಎಂದು ನನಗೂ ಗೊತ್ತಿದೆ.

20120820

ಅವಳಿಲ್ಲದ ನಾನು


ದಟ್ಟ ಮುಗಿಲು.ಇನ್ನು ಕೆಲವೇ ಕ್ಷಣದಲ್ಲಿ ಎದೆಯನ್ನು ಅಮುಕಿ ಬರುತ್ತದೆ ಆ ನೆನಪು ಎಂದು ಖಚಿತವಾಗುತ್ತಿದೆ.
ಅವಳ ನೆನಪಿನ ದಟ್ಟಣೆ ಮೈ ಸವರಿಕೊಂಡ ಹಾಗೇ.
ಪ್ರೀತಿಗೆ ಬಿದ್ದರೆ ಆಯಿತು,ಬ್ರೈನ್ ಸ್ಟಾಪು ಎಂದು ಹೇಳಿದ್ದ ಗೆಳೆಯ ಬೆಂಗಳೂರಿನಿಂದ ಕಳುಹಿಸಿದ ಸಂದೇಶ ಓದಲಾರದೇ ಒದ್ದಾಡುತ್ತಿದ್ದೇನೆ
ನೆನಪಿನ ತುಂಬಾ ಅವಳು.
ಕಾರಿನ ಬಾಗಿಲು ಅರ್ಧ ತೆರೆದಿದ್ದಾಳೆ.ಮಳೆಯ ಹನಿ ರಭಸದಿಂದ ಬೀಳುತ್ತಿದೆ.ಅದೇ ಬಾಗಿಲ ಸಂದಿನಿಂದ ಮುಖವನ್ನು ಹೊರ ಹಾಕಿ ನಗುತ್ತಾಳೆ.ಮೈ ಮೇಲೆ ಬೀಳುವ ಹನಿಗಳನ್ನು ತಾನೇ ತಾನಾಗಿ ಧರಿಸುತ್ತಾಳೆ.
ಅವಳ ಹೂನಗೆಯಲ್ಲಿ ನಾನು ಅರಳುತ್ತೇನೆ.
ದಟ್ಟ ಕಾಡಿನ ತುಂಬಾ ಇರಿಂಟಿಯ ಲಯ.ಮನಸ್ಸು ಹಬೆಯಾಡುತ್ತಿದೆ.ಬಾಲ್ಯ ದೂರ ಕುಳಿತಿದೆ,ಮೊದಲಾಗಿ ಮೈನೆರೆದ ಹುಡುಗಿಯ ಹಾಗೇ ಸಂಕೋಚದಿಂದ,ಆತಂಕದಿಂದ.
ಅರ್ಥವಾಗುತ್ತಿಲ್ಲ.ಯಾವ ಕಾತರವಿದು ಎಂದುಕೊಳ್ಳುತ್ತೇನೆ.ಹುಡುಕಾಟಕ್ಕೆ ಇದೇ ಒಂದು ದಾರಿ ಮಾತ್ರಾ ಇತ್ತಾ?
ನಡು-ನಡುವೆ ಅವಳು ಬಳಸಿಕೊಳ್ಳುತ್ತಾಳೆ.ಆಮೇಲೆ ಹಾವಿನ ಹಾಗೇ ಸುತ್ತಿಕೊಳ್ಳುತ್ತಾಳೆ.
ಭುಸ್ ಎಂದದ್ದು ಏನು?ಯಾವುದು ಅದು?ಹುತ್ತದೊಳಗೆ ಹುದುಗಿದ್ದ ಆ ರೋಷ ಉಕ್ಕೇರಿ ಸುರಿದದ್ದು ಅವಳ ಮೈಮೇಲೆ!
ಕಣ್ಣುಮುಚ್ಚಿ ಕುಳಿತರೆ ಅವಳ ಅಳು.
ಇಷ್ಟೇನಾ ಪ್ರೀತಿ ಅಂದರೆ..
ನಾಳೆ ಸಿಗಲಾರದ ನಿನಗೆ ನನ್ನ ಕನಸುಗಳ ಕೋಟೆಯಲ್ಲೇನು ಕೆಲಸ?
ಯುದ್ಧಕ್ಕೆ ಬಂದ ಯೋಧ ಕಣೇ ನಾನು..
ಯುದ್ಧ ಗೆಲ್ಲಲಿಲ್ಲ..ಸೋತು ಹೋದೆ.ಇಷ್ಟಕ್ಕೂ ನಿನ್ನ ಜೊತೆ ಅದೇನು ಯುದ್ಧ??
ಕೆರೆಯ ನಡುವೆ ಅರಳಿದ ತಾವರೆ ನೀನು..ಈಜಲಾರೆ,ಇಳಿಯಲಾರೆ,ಹಿಡಿಯಲಾರೆ..
ಮನಸ್ಸು ಮುದುಡುತ್ತದೆ.ಸಂಜೆಯಾಯಿತು ಎನ್ನುತ್ತಾಳೆ ಅವಳು..ರಾತ್ರಿ ಹೊರಳಿ ಮತ್ತೆ ಬೆಳಗು ಬರಲಿ,ಕಾಯುತ್ತೇನೆ ಎಂದು ಬೀಳ್ಕೊಟ್ಟರೆ ಅವಳ ಧಡಸಿತನದಲ್ಲೂ ನನಗೆ ಕಾಣಿಸಿದ್ದು ಅವಳ ಪುಟ್ಟ ಪುಟ್ಟ ಪಾದಗಳು ಒತ್ತಿ ಮಡಗಿ ಹೋದ ಹೆಜ್ಜೆ ಸಾಲು..
ಅವಳ ಹಗಲು ಆ ಭೂಮಿಯಾಚೆ ಇದೆ ಎಂದು ಗೊತ್ತಿದೆ.ಭೂಮಿಯನ್ನು ಕೊರೆಯುತ್ತೇನೆ,ಎಷ್ಟು ಬೇಗ ಕೊರೆದು ಮುಗಿಸುವೆನೋ ಅಷ್ಟೂ ಬೇಗ ಅವಳು ಸಿಗುತ್ತಾಳೆ ಎಂಬ ಧಾವಂತ.
ಆದರೆ ನಾನು ಕೊರೆದ ಭೂಮಿಯ ಕೊಳವೆಯಲ್ಲಿ ಸಾಗಿ ಹೋದಾಗ ಅಲ್ಲಿ ಇರುಳಾಗಿತ್ತು.ಅವಳು ಅವನ ಕೈ ಎಳೆದುಕೊಂಡು ದಿಂಬು ಮಾಡಿ ನಿದ್ದೆ ಹೋಗಿದ್ದಾಳೆ.ಅವಳ ಹಗಲಿಗೆ ಕಾಯಲಾರದೇ ಅದೇ ಕೊರೆದ ಭೂಮಿಯ ಕೊಳವೆಯಲ್ಲಿ ಮರಳಿದರೆ ಇಲ್ಲೂ ಇರುಳು!