20111002

ನಾಲ್ಕು ಸಾಲು


೧.
ಗಾಂಧೀಜಿ
ಬಿಟ್ಟುಹೋದ
ರಾಜಕಾರಣದಲ್ಲಿ
ಚರಕ ಮತ್ತು ನೂಲು ಕೂಡಾ ಉಳಿದಿಲ್ಲ ಎಂಬುದು ಭಾರತದ ವಿಷಾದ

೨.
ಗಾಂಧೀಜಿ
ಕಂಡ ಸತ್ಯಗಳಲ್ಲಿ
ಈ ನೆಲ ಮತ್ತು ಆಕಾಶಗಳಿದ್ದವು
ಆದರೆ ಬೀಸುವ ಗಾಳಿ ಮತ್ತು ಹರಿಯುವ ನೀರು
ಮಿನುಗುವ ನಕ್ಷತ್ರ ಮತ್ತು ಹುಣ್ಣಿಮೆಯ ಚಂದಿರನನ್ನು
ನಾವು ಕಳೆದುಹಾಕಿದೆವು
೩.
ಗಾಂಧೀಜಿ
ಕಟ್ಟಿದ ಕೋಟೆ ಮೇಲೆ
ಈಗ ನಿಂತ ಸಿಪಾಯಿ ಕೈಯಲ್ಲಿ ಬಂದೂಕು!
೪.
ಗಾಂಧೀಜಿ
ಯಾರಿಗೂ ಆದರ್ಶವಲ್ಲ
ಎಂಬುದನ್ನು ಸಾಬೀತು ಮಾಡಿದ ರಾಜಕಾರಣಿಗಳು
ನನಗೆ
ಕಿಲುಬು ಹಿಡಿದ ಪಾತ್ರೆಯೊಳಗಿನ ತಣ್ಣೀರಿನಂತೆ ಕಾಣುವರು

20111001

ಸಾವೆಂದರೆ

ಬದುಕಿನ ಕಾರಣಕ್ಕೆ
ಯಾವುದು ಕಾರಣ?
ಹುಟ್ಟಿದ್ದೇ?
ಬದುಕುತ್ತಿರುವುದೇ
ಅಥವಾ
ಮುಂದಿನ ಕ್ಷಣಕ್ಕೆ ಕರೆದೊಯ್ಯುವ ಸಾವೇ?
ಗೊತ್ತಿಲ್ಲ.
ಗೊತ್ತಿಲ್ಲದಿರುವುದೇ ಒಂದು ಕಾರಣ ಎಂದರೆ ಹೇಗೆ?
ಹೇಳಬಾರದು ಇದನ್ನೆಲ್ಲಾ ಹುಡುಕಬಾರದು ಕಾರಣಗಳ
ಅವನದೊಂದು ಮಾತು
ಅವಳದೊಂದು ಪ್ರೀತಿ
ಹಾರುವ ಹಕ್ಕಿ
ಮುಗಿಲ ಸಾಲು
ಮರದ ಎತ್ತರ
ಗಾಳಿಯ ಕಚಗುಳಿ
ಎಲ್ಲವೂ ನನ್ನನ್ನು ಇದ್ದು ಇರು ಇನ್ನಷ್ಟು ದಿನ ಎನ್ನುತ್ತಿವೆ
ಇರಬೇಕಾದರೂ ಒಂದು ಕಾರಣ ಕೊಡು ಎಂದು ಕೇಳುತ್ತೇನೆ
ಸಂಜೆಗತ್ತಲು ಬಂದು ಎಲ್ಲವೂ ಮರೆಯಾಗುತ್ತವೆ
ಅವನ ಮಾತೂ ಅವಳ ಪ್ರೀತಿಯೂ
ಹಕ್ಕಿ ಹಾರಿ ಹೋಗಿದೆ
ಇನ್ನೆಲ್ಲೋ ಅದರ ಠಿಕಾಣಿ
ಮುಗಿಲ ಸಾಲು ಕಾಣಿಸುತ್ತಿಲ್ಲ,ಆದರೂ ಅದು ಬಾನಲ್ಲೇ ಇದೆ
ಮರದ ಎತ್ತರ ಹಾಗೇ ಇದೆ ಆದರೆ ನಾನು ಕಾಣೆ
ಗಾಳಿಯ ಕಚಗುಳಿ ನನ್ನ ಹೊದ್ದಿನೊಳಗೆ ಬರುತ್ತಿಲ್ಲ
ನಕ್ಷತ್ರಗಳು ಮಿನುಗುವ ಮುನ್ನ
ಚಂದಿರನು ನನ್ನ ದಾಟಿ ಹೋಗಿದ್ದಾನೆ
ನನಗೋ ಗಾಢ ನಿದ್ದೆ
ಸಾವೆಂದರೆ ಇದೇನಾ?