20110922

ನಾಲ್ಕು ಸಾಲು

೧.
ಹಾಡೊಂದು ಹಾಡಲಾರದೇ ನಾನು
ಕಾಡಿನೊಳಗೆ ಹೋಗುತ್ತೇನೆ
ಕಾಣೆಯಾದ ನನ್ನ
ಹಾಡನ್ನು
ನಗರದ ಶಬ್ದ ಕೇಳಿಸುವುದಿಲ್ಲ

೨.
ನಗರದ ಅತಿ ಶ್ರೀಮಂತಿಕೆ
ಹಳ್ಳಿಯ ಗದ್ದೆಯಲ್ಲರಳುವ
ಭತ್ತದ ತೆನೆಗಿಂತ
ಸದಾ ಬಡತನದ್ದು

೩.
ಮಾಲ್ ನ ಎಸ್ಕಲೇಟರ್ ನಲ್ಲಿ
ಚಿಗಿಯುತ್ತಿರುವ
ಸುಂದರಿಯ ಮೊಲೆಗಳ ಗಡಣ
ಹಳ್ಳಿಯ ಆಕಳಿನ ಕೆಚ್ಚಲಿನೆದುರು
ಸದಾ ಬತ್ತಿದ ಠೊಳ್ಳುಗಾಯಿ

೪.
ಗೊತ್ತಿದ್ದೂ
ನಗರ ಸೇರಿದ ಮಂದಿ
ಸೂಳೆಗಾರಿಕೆಗೆ
ಬಂದ ಕರೆವೆಣ್ಣುಗಳಂತೆ
ಹಳ್ಳಿಗರಿಗೆ ಕಾಣುವುದು ಎಂಥ ಕಟು ಸತ್ಯ

20110920

ಬೀಳ್ಕೊಡಿ

ನನಗೆ ಗೊತ್ತಿಲ್ಲದ ಹಾಗೇ
ಬಂದ
ವೃದ್ಧಾಪ್ಯ
ನನ್ನ ಮಾತಿನಲ್ಲಿ ಬಿಕ್ಕಳಿಸುತ್ತಿದೆ
ಮನಸ್ಸು ಹುಡುಕುತ್ತಿದ್ದ ಅವಳು
ಚಿರಯೌವನೆ
ದೇವರೂ ಕೂಡಾ ಹೇಳುವನು
ನಾನೂ ಮುದುಕನಾದೆ
ನಿನ್ನ ಧೂಪದೀಪ ನೈವೇದ್ಯದ ಘಾಟಿಗೆ ಕೆಮ್ಮು ಕಫ ಅಡರಿದೆ
ಅರ್ಚನೆಯ ಹೂವಿಗೂ ಏಕೋ ದೇವರ ತಲೆ ಮೇಲೆ ನಿಲ್ಲಲು ಬೋರು
ಆರತಿಯ ತಟ್ಟೆ ಮೇಲೆ ನೂರಾರು ಗೀರು ಮಾಸು ಕಲೆ
ಕಳೆದ ವರ್ಷದ ಗಾಳಿಮಳೆಗಿಂತ
ಈ ಬಾರಿಯ ಮುಂಗಾರಿನಲಿ ಛಳಿ ಜೋರು
ಜಡಿ ಮಳೆ ಕೂಡಾ ಮಂಕು ಬರಿಸಿದೆ ಎಂದು ಗೊಣಗುತ್ತಿದೆ ನದಿ ದಂಡೆ
ಬಾಲ್ಯದ ಬುಡ್ಡಿದೀಪದ ಮುಂದೆ ಕುಮಾರವ್ಯಾಸನ ಭಾರತ
ಮರೆತುಹೋಗಿದೆ ಯುಧಿಷ್ಠಿರ ಉವಾಚ.
ಕೃಷ್ಭ ಹೇಳಿದ್ದಾನಲ್ಲ ನಾನೇ ಹುಟ್ಟಿ ಬರುತ್ತೇನೆ ಎಂದು
ಕಾಯುತ್ತಿದ್ದೇನೆ ನನ್ನ ನಿರ್ಗಮನಕ್ಕೆ
ರಿಯಾಲಿಟಿ ಶೋನಲ್ಲಿ ರಾಮಾಯಣದ ಕಂತು ಕಾಣಿಸುತ್ತಿಲ್ಲ
ಇಲ್ಲಿಗೇ ಮುಗಿಯಿತಾ ಈ ಅಧ್ಯಾಯ?

20110916

ನಾನ್ ಸೆನ್ಸ್ ಪದ್ಯ

ಗೊತ್ತಿಲ್ಲ
ನಾಳೆ ನಾನು ಸಾಯಲೂ ಬಹುದು.
ಅದಕಾಗಿ ಇಂದೇ ಹುಟ್ಟಿ ಬರಬೇಕು.
ಯಾವ ದೇಹವ ತಾಳಲಿ?
ಅರಸುತ್ತಾ ಸಾಗಬೇಕು ಆಕಾಶದ ಹಾದಿಯಲ್ಲಿ
ಇಳಿಯುತ್ತಾ ಮುಳುಗಬೇಕು ಸಾಗರದ ತಳದಲ್ಲಿ
ಇಂದು ಹುಟ್ಟುವ ನನಗೆ ಗರ್ಭವೊಂದು ಬೇಕು
ಯಾವುದೋ ಎರಡು ಜೀವಗಳು ಮೈಥುನ ಮಾಡಬೇಕು.
ನಾನು ರೇತಸ್ಸಾಗಿ ಅವನೊಳಗೆ ಅವಿತಿರಬೇಕು
ಅವಳಿಗೆ ಮೈ ಮನಸ್ಸು ಬಿಸಿಯಾಗಿಸಬೇಕು
ಅವನಿಗೆ ಹಂಬಲದ ಹುಚ್ಚು ಹಿಡಿಸಬೇಕು
ಅವಳೊಳಗೆ ದ್ರವಿಸುತ್ತಾ ಸಾಗಬೇಕು
ಇಷ್ಟಾದ ಮೇಲೆ ನಾನು ಬೀಜವಾಗಬೇಕು..
ಬೀಜವಾಗಲು ನಾನು ಈಗ ಹೂವಾಗಬೇಕು,ಹೂವರಳಿ ಕಾಯಿಗಟ್ಟಿ ಹಣ್ಣಾಗಿ ಮಾಗಬೇಕು
ಹಣ್ಣೊಳಗೆ ಫಲವಂತಿಕೆಯ ಬೀಜ ನಾನಾಗಬೇಕು..
ಅಂದರೆ ನಾನು ಅದಕ್ಕೂ ಮೊದಲು ನಾಳೆ ಸಾಯಬೇಕು..
ಸಾವಿಗಿಂತಲೂ ಹುಟ್ಟುವುದು ಕಷ್ಟ!!!!!!!!