20110226

ಸಾಯಲು ಕಲಿಯಿರಿ..

ಮೊನ್ನೆ ಮೊನ್ನೆ ಹಾಗಾಗಿ ಹೋಯಿತು.
ಏನು ಆಯಿತು ಎಂದು ಹೇಳುವುದಕ್ಕೂ ಮುನ್ನ ಆತ ಹೇಗಿದ್ದ ಎಂದು ಹೇಳಿಬಿಡುತ್ತೇನೆ.
ನೋಡುವುದಕ್ಕೆ ದೊಡ್ಡ ಜೀವ.ಕಟ್ಟುಮಸ್ತು ಆಳು ಅಂತಾರಲ್ಲ ಹಾಗೇ.ತುಂಬಾ ಮಾತನಾಡುತ್ತಿದ್ದ.ಎಲ್ಲರ ಜೊತೆಗಲ್ಲ.ಯಾರು ತನಗೆ ಬೇಕಾದವರು ಅವರ ಜೊತೆ ಮಾತ್ರಾ.ಹಾಗೇ ತನಗೆ ಬೇಕಾದವರು ಯಾರು ಎಂಬುದನ್ನು ಗುರುತಿಸುವ ಜಾಣತನ ಆತನಿಗೆ ಗೊತ್ತಿತ್ತು.ಆತ ತುಂಬಾ ದುಡ್ಡಿದ್ದ ಗಿರಾಕಿ.ತನ್ನ ತೋಟ ಹೊಲಗಳಲ್ಲಿ ಬೇಸಾಯ ಮಾಡಿ ತೀರಾ ದುಡ್ಡು ಮಾಡಿಕೊಂಡಿದ್ದ.ಆದರೆ ದುಡ್ಡನ್ನು ಅನುಭವಿಸುವ ಕಲೆ ಮಾತ್ರಾ ಆತನಿಗೆ ಗೊತ್ತೇ ಇರಲಿಲ್ಲ.ಎಲ್ಲಿ ಹೇಗೆ ದುಡ್ಡನ್ನು ಇಮ್ಮಡಿ ಮಾಡಬಹುದು ಎಂದೇ ಸದಾ ಲೆಕ್ಕ ಹಾಕುತ್ತಿದ್ದ.ಅನೇಕ ಫೈನಾನ್ಸ್ ಕುಳಗಳು ಅವನನ್ನು ಮುಂಡಾ ಮೋಚಿದ್ದವು.ಆಗೆಲ್ಲಾ ಆತ ಹುಂಬನ ತರಹ ಮಾತಾಡುತ್ತಿದ್ದ.ಹಣ ಕಳೆದುಕೊಳ್ಳುವುದೂ ಹಣ ಸಂಪಾದಿಸುವುದೂ ಅವನ ಜೀವನ ಕ್ರಮವೇ ಆಗಿತ್ತು.
ಅವನು ಮನೆಯಿಂದ ಬಹು ದೂರದ ತನಕ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದ.ಯಾರೂ ಯಾಕೆ ನಡೆದು ಹೋಗುತ್ತೀಯಾ ಎಂದು ಕೇಳಿದರೆ ನನಗೆ ಬೇಕಾದಷ್ಟು ಸಮಯ ಇದೆ ಎನ್ನುತ್ತಿದ್ದ.ಕಾರು ಖರೀದಿಸಬಾರದೇ ಎಂದು ಕೇಳಿದಾಗ ಸುಮ್ಮನೇ ಹಣ ಪೋಲು ಎನ್ನುತ್ತಿದ್ದ.ಯಾಕೆ ಕಾರು ಅಂತ ದುಡ್ಡು ಖರ್ಚು ಮಾಡಿಕೊಳ್ಳಬೇಕು?ಬೇಕಾದಾಗ ಯಾವುದಾದರೂ ಬಾಡಿಗೆ ಹಿಡಿದುಕೊಂಡು ಬೇಕಾದಲ್ಲಿಗೆ ಹೋಗಿ ಬಂದರಾಯಿತು ಎಂದು ಅವನು ವಾದಿಸುತ್ತಿದ್ದ.ಹಾಗೆಂದು ಆತ ಎಂದೂ ಕೆಂಪು ಬಸ್ಸು ಹೊರತು ಎಲ್ಲಿಗೂ ಹೋಗುತ್ತಿರಲಿಲ್ಲ.
ಪಟ್ಟಣದಿಂದ ತನ್ನ ಹಳ್ಳಿಗೆ ಬರಲು ಆತ ಸರಕಾರಿ ಬಸ್ಸಿನಲ್ಲಿ ಟಿಕೇಟು ಕೊಡದೇ ಅರ್ಧ ಕ್ರಯಕ್ಕೆ ಕರೆದು ತರುವ ನಿರ್ವಾಹಕರನ್ನು ತನ್ನ ಪರಿಚಯದ ವ್ಯಾಪ್ತಿಗೆ ತಂದಿಟ್ಟುಕೊಂಡಿದ್ದ.
ಆತನಿಗೆ ಹೊಸತೆಲ್ಲವೂ ವಿನಾಶಕಾರಿ ಎಂಬ ಹಾಗೇ ಕಾಣಿಸುತ್ತಿತ್ತು.ದಿನಾ ಹಿಂದೂ ಪೇಪರ್ ಓದುವುದು ಮಾತ್ರಾ ಅವನ ಗೌರವವಾಗಿತ್ತು.ಜಾತ್ರೆಗಳಿಗೆ ಹೋಗಿ ಮಂಡಕ್ಕಿ ಮಿಠಾಯಿ ತಿನ್ನುವುದು ಅವನ ಪಾಲಿಗೆ ಎಂದೂ ಒದಗಿಯೇ ಇರಲಿಲ್ಲ. ಹೆಂಡತಿ ಮಕ್ಕಳ ಜೊತೆ ಆತ ಐಸ್ಕ್ರೀಂ ತಿನ್ನುವುದನ್ನು ಆತ ಮುಂದೊಂದು ದಿನ ಹೀಗೇ ದುಡ್ಡು ಪೋಲಾಗಿ ಭಿಕಾರಿಯಾಗಲು ಇದು ಚಾಳಿ ಎಂದು ಹೇಳುತ್ತಾ ಸದಾ ವಿರೋಧಿಸುತ್ತಿದ್ದ.
ನೆರೆಹೊರೆಯಲ್ಲಿ ಯಾರೇ ಹುಟ್ಟಿದರೂ,ಯಾರೇ ಸತ್ತರೂ ಆತ ಹೋಗುತ್ತಿರಲಿಲ್ಲ.ತಾನಾಯಿತು ತನ್ನ ಕೆಲಸವಾಯಿತು ಎಂಬಂತಿದ್ದ.
ತಾನು ಸಬ್ ಇನ್ಸ್ಪೆಕ್ಟರ್ ಆಗಬೇಕೆಂಬ ಕನಸು ಹೊತ್ತಿದ್ದೆ.ಆದರೆ ಆಗಲೇ ಇಲ್ಲ ನೋಡಿ ಎಂದು ಆಗಾಗ ಹೇಳುತ್ತಿದ್ದ.ಒಮ್ಮೊಮ್ಮೆ ಅಂತರ್ಮುಖಿಯ ಹಾಗೇಯೂ ಇನ್ನೊಮ್ಮೆ ಮಹಾ ವಾಚಾಳಿಯ ಹಾಗೆಯೂ ಆತ ಕಾಣುತ್ತಿದ್ದ.
ಮೊನ್ನೆ ಒಂದು ಸಂಜೆ ಆತ ಆತ್ಮಹತ್ಯೆ ಮಾಡಿಕೊಂಡ.
ಮನುಷ್ಯನ ಸಾವು ಅವನ ಬದುಕಿನ ಮಾನದಂಡ ಎಂದು ಯಾರೋ ಹೇಳಿದ ನೆನಪು.ಯಾರು ಹೇಗೆ ಸಾಯುತ್ತಾರೆ ಎಂಬುದು ಅವರ ಬದುಕಿನ ವ್ಯಾಖ್ಯಾನವೂ ಆಗಬಹುದು.ಇಲ್ಲಿ ಇತರೆಲ್ಲಾ ತರ್ಕಗಳನ್ನು ಹಗುರವಾಗಿಟ್ಟೇ ನೋಡೋಣ.ಸಾವು ಎಂಬುದು ಯಾರಿಗೂ ಯಾವಗಳೂ ಬರಬಹುದು ಎಂಬುದರ ಜೊತೆಗೆ ಹೇಗೆಯೂ ಬರಬಹುದು ಎಂದು ತಿಳಿದುಕೊಳ್ಳಬೇಕು.ಸಾವನ್ನು ಕೂಡಾ ಬದುಕಿನ ಕ್ಷಣಗಳ ನಡುವೆಯೇ ಗೆಲ್ಲಬಹುದು ಎಂಬುದು ಬದುಕಿನ ತುಂಬಾ ಸುಂದರ ಜಗತ್ತನ್ನು ರೂಪಿಸಿಕೊಂಡವರಿಂದ ನೋಡುತ್ತೇವೆ.
ಯಕ್ಷಗಾನ ಕಲಾವಿದರೊಬ್ಬರು ಬಣ್ಣ ಹಾಕಿ ರಂಗಸ್ಥಳದಲ್ಲಿ ಕುಣಿದು ಚೌಕಿಗೆ ಬಂದು ಆಯಾಸವಾಗುತ್ತಿದೆ ಎಂದು ಹೇಳುತ್ತಲೇ ಕುಸಿದು ಸಾವನ್ನಪ್ಪುತ್ತಾರೆ.ಶರೀರದಲ್ಲಿ ಉಟ್ಟ ಬಣ್ಣ,ತೊಟ್ಟ ವೇಷ ಕಳಚದೇ ಉಳಿದಿರುತ್ತದೆ.ಇದು ಕಲಾವಿದನೊಬ್ಬ ಬಯಸುವ ಸಾವು.ಮತ್ತು ಆ ಸಾವು ಕೂಡಾ ಧನ್ಯತೆಯೇ ಆಗಿರಬಹುದು.
ರೈತನೊಬ್ಬ ಹೊಲದಲ್ಲಿ ಬಿದ್ದು ಸತ್ತರೆ ಅಲ್ಲಿ ಏನು ಧನ್ಯತೆಯೇ ಎಂದು ಕೇಳಿದರೆ ಅದು ಅವಾಚ್ಯ.ಏಕೆಂದರೆ ಸಾವು ಅಂತಿಮವಾಗಿ ಒಂದು ನಿಮೀಲನ ಅಷ್ಟೇ.
ಯಾವಜ್ಜೀವವೂ ಸಾವನ್ನು ಬಯಸುವುದಿಲ್ಲ.ಸಾವು ಮಾತ್ರಾ ಯಾರನ್ನೂ ಬಯಸದೇ ಇರುವುದೂ ಇಲ್ಲ,ಕಡವೆ ಕೂಡಾ ಕೊನೆ ತನಕ ಹೋರಾಟ ಮಾಡುತ್ತದೆ ಹುಲಿಯ ತೆಕ್ಕೆಯಲ್ಲಿ ಅದರ ಒದ್ದಾಟ ಬದುಕನ್ನು ಉಳಿಸಿಕೊಳ್ಳಬೇಕು ಎಂಬುದಕ್ಕೆ ಮಾತ್ರಾ ಸೀಮಿತ.ನಿರ್ಗಮನ ಅನಿವಾರ್ಯ ಎಂಬ ವೇದಾಂತ ಕಡವೆಗೆ ಗೊತ್ತಿರುತ್ತದಾ?ಇಲ್ಲ.ಬದುಕುವುದಾದರೂ ಏಕೆ ಎಂದು ಅದರ ಮನಸ್ಸು ಕೇಳುತ್ತದಾ?ಹುಲಿಯ ದವಡೆಯಿಂದ ಉಳುಚಿಕೊಳ್ಳಬೇಕು ಎಂಬ ಅದರ ಛಲ ಜೀವ ನಿಯಮಾವಳಿಯ ಒಂದು ವಾಕ್ಯವಷ್ಟೇ.
ಹತಭಾಗ್ಯ ಪ್ರೇಮಿಗಳು ಜೊತೆಯಾಗಿ ಕುಣಿಕೆ ಹಾಕಿಕೊಳ್ಳುತ್ತಾರೆ.ಪರಸ್ಪರ ಅಪ್ಪಿಕೊಂಡ ಸ್ಥಿತಿಯಲ್ಲಿ ಗಂಡ-ಹೆಂಡತಿ ಆತ್ಮಹತ್ಯೆ ಮಾಡಿಕೊಂಡ ವರದಿ ಇದೆ.ನೀನು ಸತ್ತರೆ ನಾನು ಮರುಕ್ಷಣಕ್ಕೆ ಇರುವುದಿಲ್ಲ ತಿಳಿದುಕೋ ಎಂದ ಹೆಂಡತಿ ವೈಕುಂಠಸಮಾರಾಧನೆ ಮರುದಿನ ಬ್ಯಾಂಕಿನಲ್ಲಿ ಗಂಡನ ಅಕೌಂಟ್ ಶೋಧನೆಯಲ್ಲಿ ತೊಡಗಿರುತ್ತಾಳೆ.ಬಹಳ ವರ್ಷಗಳ ಹಿಂದೆ ಹವ್ಯಕ ಬ್ರಾಹ್ಮಣರಲ್ಲಿ ಹೆಂಡತಿ ಸತ್ತು ಸೂತಕ ಮುಗಿಯುವ ಹನ್ನೆರಡನೇ ದಿನಕ್ಕೆ ಮರು ಮದುವೆಯನ್ನು ಮಾಡಿಸುವ ಸಂಪ್ರದಾಯವೇ ಇತ್ತು.ಸಪಿಂಡೀಕರಣದ ರಾತ್ರಿ ಡಿಬ್ಬಣ ಹೋಗಿ ಕನ್ಯೆಯನ್ನು ವಿಧುರ ವರಿಸುವ ಪರಿಪಾಠವಿತ್ತು.
ಅನೇಕ ಬಾರಿ ಬದುಕು ತಾನಾಗಿಯೇ ಸಾವನ್ನು ದಾಟಿ ಹೋಗಲು ಹೇಳಿಕೊಡುತ್ತದೆ.ಸಾವಿನ ಅನಿವಾರ್ಯತೆ ನಮಗೆ ಇಲ್ಲದಂತೆ ಮಾಡುವ ಅರಿವಳಿಕೆಯನ್ನು ಕೂಡಾ ಕೊಡುವುದು ಬದುಕೇ ಹೊರತು ಇನ್ಯಾವುದೂ ಅಲ್ಲ.ಎಲ್ಲೆಲ್ಲಿ ಗೆಲುವು ಇದೆಯೋ ಅಲ್ಲಲ್ಲಿ ನಾವು ಹೋಗುತ್ತೇವೆ.ಸೋಲು ಕೂಡಾ ನಮ್ಮ ಜೊತೆಗೆ ಧಾವಿಸಿ ಬರುತ್ತದೆ.ಸೋಲನ್ನು ಹಿಂಜಿ ಸಾಗುವ ಬದುಕಿನ ಛಲ ಮಾತ್ರಾ ನಮ್ಮನ್ನು ಕಾಪಾಡುತ್ತದೆ.
ಕ್ಯಾನ್ಸರ್ ಬಂದಿದೆ ನಿನಗೆ ಎಂದು ಆ ಹವಾನಿಯಂತ್ರಿತ ಕೊಠಡಿಯಲ್ಲಿ ಮೆತ್ತನೆಯ ದಿಬ್ಬದ ಛೇರ್ ಮೇಲೆ ಕುಳಿತ ವೈದ್ಯ ಹೇಳುವ ಘಳಿಗೆಗೆ ಆ ರೋಗಿ ಹೇಗೆ ಸ್ಪಂದಿಸುತ್ತಾನೆ? ಅದರ ಮೇಲೆ ಆತ ನಿಜಕ್ಕೂ ಬಂದೆರಗಿದ ಸಾವಿನಿಂದ ಗೆಲ್ಲುತ್ತಾನೆ.ಒಂದು ಹತಾಶ ನಗೆ ಅವನನ್ನು ಮತ್ತೆ ಹಲವು ಕಾಲ ಕಾಪಾಡಬಲ್ಲುದು.
ನಿಮಗೆ ಕೋಟಿ ರೂಪಾಯಿ ಲಾಟರಿ ಬಂದಿದೆ ಎಂದು ಕೇಳಿದ ಮರುಕ್ಷಣವೇ ಎದೆ ಒಡೆದು ಸತ್ತವನ ಕಥೆ ಇಲ್ಲಿ ಸೋದಾಹರಣವಾಗುವುದು.
ನದಿ ದಾಟುವವರು ಹೇಳುವಂತೆ ..ಹೊಳೆ ಅಲ್ಲಿದೆ ಎಂದು ಇಲ್ಲಿ ಈಗಲೇ ಏತಕ್ಕೆ ಚಪ್ಪಲಿ ಕಳಚಿ ಕೈಯಲ್ಲಿ ಎತ್ತಿಕೊಳ್ಳಬೇಕು?ನದಿಗೆ ಇಳಿಯುವಾಗ ಕಳಚಿದರಾಯಿತು..
ಇದಕ್ಕಿಂತ ಚೆನ್ನಾಗಿ ಬದುಕನ್ನು ಕಾಣಲು ಸಾಧ್ಯವೇ ಇಲ್ಲ.

20110225

ನಾಲ್ಕು ಸಾಲು

೧.
ಮಾತಿನಲ್ಲಿ ಆತ ಎಲ್ಲವನ್ನೂ ಕಳೆದುಕೊಂಡ
ಮೌನದಲ್ಲಿ ಕಳೆದುದ ಹುಡುಕಹೋದ
ಹಗಲಿನ ಸೂರ್ಯ ಮೋಡಕ್ಕೆ ಸರಿದು
ನಕ್ಷತ್ರಗಳು ಅವನಿಗಾಗಿ ಇಣುಕಿದವು

೨.
ಸಿರಿವಂತ ಭಾವನೆಗಳು ಕೂಡಾ
ನಿನ್ನದೇ ಸ್ವತ್ತು
ಹಂಚಿಕೊಳ್ಳಲು ಹೊರಟೆಯಾ ನೀನು ಭಿಕಾರಿ
ಎದೆ ಖಾಲಿ ತಟ್ಟೆ,ಮನಸ್ಸು ಬರಿದು ಲೋಟಾ..

೩.
ರಾಜನಾಗಲು ನೀನು
ನಿನ್ನಲ್ಲೇ ಅಡಗಿಕೋ
ಹೊದ್ದ ಮುಸುಕಿನೊಳಗೆ
ನಿನ್ನದೇ ಅರಮನೆ

೪.

ಬಯಲ ನೆಲದಲ್ಲಿ ನಿಂತವನು ಬೀಸು ಗಾಳಿಗೆ
ಪ್ರೀತಿಯನ್ನೊಪ್ಪಿಸಿದ
ಬೆಟ್ಟದ ನೆತ್ತಿಯಲ್ಲಿ
ಮಂಜು ಕಣ್ಣೀರು ಹಾಕಿತು

20110221

ನಾಲ್ಕು ಸಾಲು

.
ಹಾಡೊಂದನ್ನು ಹೆತ್ತುಕೊಡು
ಎಂದು
ಹೃದಯವನ್ನು ಕೇಳಿದೆ...
ಮನಸ್ಸನ್ನು ಕಳುಹಿಕೊಡು ಮೊದಲು
ಎಂದಿತು ಎದೆಯ ಒಲೆ.

.
ಅವಳ ಬಾಳಿನ ಪುಟಗಳಲ್ಲಿ
ದೊಡ್ಡ ಕಾವ್ಯ
ಶ್ರುತಿ,ಲಯ,ನಿನಾದಗಳಿಂದ
ತಲೆದೂಗಿ ನಿಂತವನು
ಕೇಳಿದ
ಇದ ಬರೆದ ಕವಿ ಯಾರು?
ಅವಳೆಂದಳು
ಅಕ್ಷರ ಮಾಲೆ ..

.
ಮುಪ್ಪು ಕೂಡಾ
ನಿನ್ನಲ್ಲಿ
ತುಂಟಾಟ ಆಡುವಂತಿದ್ದರೆ
ಬಾಲ್ಯವನ್ನು ಮತ್ತೊಮ್ಮೆ ಕರೆದು ನೋಡು
ಯೌವನಕ್ಕೆ ಅಸೂಯೆಯಾಗಲಿ

.
ಹೆಣ್ಣು ಜೀವ ಲಹರಿಯಾಗಿ
ನಿನ್ನೊಳಗೆ ಹರಿದಾಗ
ದೂರದ
ನದಿ ಕೂಡಾ ಸಾಗರವನ್ನು ರಮಿಸುವುದು ಕಾಣುವೆ

20110214

ಒಳ್ಳೇ ರಾವಣನಂತೆ,ಹಾಲಿನ ಹುಡುಗರಂತೆ..

ಈಗ್ಗೆ ಕೆಲವು ವರುಷಗಳ ಹಿಂದೆ ವಿಜಯಕರ್ನಾಟಕ ಪತ್ರಿಕೆಯ ಮಂಗಳೂರು ಆವೃತ್ತಿಯ ಆರಂಭೋತ್ಸವದಲ್ಲಿ ಪಾಲ್ಗೊಂಡಿದ್ದವರು ಯಕ್ಷಗಾನ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ಟರು.ಶೇಣಿ ಎಂದರೆ ಅಪಾರ ಪಂಡಿತ.ವಾಗ್ಮಿ.ಅವರು ಅರ್ಥಗಾರಿಕೆಯಲ್ಲಿ ಮೇರು.ಯಾವುದೇ ಪಾತ್ರವನ್ನೂ ಅವರು ನಿರ್ವಹಿಸುವ ರೀತಿ ವಿಶಿಷ್ಟ.ಪ್ರತೀ ಪಾತ್ರದಲ್ಲೂ ಒಂದು ಇನ್‌ಸೈಟ್‌ನ್ನು ಅವರು ಕಾಣಿಸುತ್ತಿದ್ದರು.
ಶೇಣಿ ಅಜ್ಜ ಪತ್ರಿಕೆಯೊಂದರ ಆರಂಭಕ್ಕೆ ಬಂದಿದ್ದಾರೆ ಎಂದರೆ ಏನಾದರೂ ಇನ್‌ಸೈಟ್ ಇರುತ್ತದೆ ಎಂದು ನಾನು ಖಂಡಿತಾ ನಂಬಿದ್ದೆ,ಸುಳ್ಳಾಗಲಿಲ್ಲ.ನಿಂತು ಮಾತನಾಡುವ ಶಕ್ತಿಯನ್ನು ಆಗಲೇ ಕಳೆದುಕೊಂಡಿದ್ದ ಶೇಣಿ ಅಜ್ಜ ಕುಳಿತೇ ಮಾತನಾಡಿದರು.
"..........ಏನು ಹೇಳೋಣ ಈ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ?ಪತ್ರಿಕೆ ಎಂದರೆ ಕೊನೆಗೂ ಏನು ಕೊಡುವವರು?ಒಳ್ಳೆಯದನ್ನೇ ಕೊಡುತ್ತಾರೆ ಎಂದು ನಂಬಲೇ?ಹಾಗೇ ನಂಬಿದಾವಾಗ ನಿರಾಶೆ ಆಗಲೇಬೇಕು.ಒಳ್ಳೆಯದನ್ನೇ ಕೊಟ್ಟರೆ ಅವರು ಮಾರುಕಟ್ಟೆಯಲ್ಲಿ ಈವಾಗಿನ ಕಾಲದಲ್ಲಿ ಉಳಿಯುವುದಾದರೂ ಹೇಗೆ?ಕೆಟ್ಟದ್ದೇ ಕೊಟ್ಟರೂ ಅಂತಾನೂ ತಿಳೀದುಕೊಳ್ಳೋಣ.ಕೆಟ್ಟದ್ದನ್ನೇ ಸಮಾಜ ಒಪ್ಪಿಕೊಳ್ಳುವುದಾದರೂ ಸರಿಯೇ?ಹಾಗಾದಾವಾಗ ಪತ್ರಿಕೆಯೊಂದು ಸಮಾಜದ ಕನ್ನಡಿ ಎಂದು ನಾವು ಭಾವಿಸಿಕೊಂಡು,ನಂಬಿಕೊಂಡು ಬಂದಿರುವುದು ತಪ್ಪಾಗುವುದಿಲ್ಲವೇ?ಹಾಗಂತ ಒಂದು ಪತ್ರಿಕೆ ಏನನ್ನು ಮಾಡಬೇಕು?ಎಷ್ಟು ಮಾಡಬೇಕು? ಎಂದೆಲ್ಲಾ ಪ್ರಶ್ನೆಗಳು ಕೇಳಲ್ಪಡುವುದು ಒಬ್ಬ ಸಾಮಾನ್ಯ ಓದುಗನಿಗೆ ಮಾತ್ರವೇ ಅಲ್ಲವಲ್ಲ,ಇಡೀ ಸಮಾಜಕ್ಕೇ ಆ ಪತ್ರಿಕೆ ಉತ್ತರಿಸುವ ಉತ್ತರದಾಯಿತ್ವವನ್ನೂ ಅದು ಹೊಂದಿರುವುದಲ್ಲಾ??
ಈಗ ಇರುವುದು ಪ್ರಶ್ನೆ ಅಲ್ಲಿಯೇ.ಈ ಉತ್ತರದಾಯಿತ್ವ ಎಂದರೆ ಏನು ಮತ್ತು ಎಷ್ಟು?ಅದನ್ನು ಪತ್ರಿಕೆ ಅಥವಾ ನಾವು ಲೋಕದ ಜನರು ಕರೆಯುವಂತೆ ಈ ಪೇಪರಿನವರು ಎಷ್ಟರ ಮಟ್ಟಿಗೆ ಹೊರಬೇಕು?
ಯಾರಾದರೂ ಉತ್ತರ ಕೊಡುತ್ತಾರಾ?ಸಾಧ್ಯವುಂಟಾ?ಇದು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲುವ ಮತ್ತು ಅದೇ ಸಮಾಜದ ರೂಪಗಳನ್ನು ಹೊತ್ತಿರುವ ಜವಾಬುದಾರಿಕೆಯ ಅಂಗೀಕಾರವೇ?
ಬಿಟ್ಟು ಬಿಡೋಣ..ನನ್ನನ್ನೇ ಕೇಳಿದರೆ ಅಥವಾ ನೀವು ಈಗಾಗಲೇ ಇಲ್ಲಿ ತಂದು ನನ್ನನ್ನೇ ಕೇಳಿದ್ದೂ ಆಗಿರುವಾಗ ನಾನು ಏನು ಹೇಳಬಹುದು?ಅಥವಾ ಏನು ಹೇಳಬೇಕು ಎಂಬುದೇ ನನಗೆ ಒಂದು ಸವಾಲಾಗಿದೆ.
ನಾವೆಲ್ಲಾ ಬಯಲಾಟವೋ ಟೆಂಟಿನ ಆಟವೋ ನೋಡಲು ಹೋಗುತ್ತೇವೆ.ನೋಡಿ ಬರುತ್ತೇವೆ.ಆಟ ಎಂದರೆ ನಮಗೆ ಗೊತ್ತಿಲ್ಲದ ಕಥೆ ಏನಲ್ಲ.ಉದಾಹರಣೆಗೆ ರಾಮಾಯಣವೋ,ಕಂಸ ವಧೆಯೋ,ವಾಲಿ-ಸುಗ್ರೀವರ ಕಾಳಗವೋ,ಹೀಗೆ ಹಲವಾರು ಪ್ರಸಂಗಗಳು.ನಮಗೆ ಯಾವ ಪ್ರಸಂಗವಾದರೂ ಸರಿ.ಏನೇ ಆದರೂ ನಮಗೆ ಆ ಪ್ರಸಂಗಗಳ ಪಾತ್ರಗಳು ಮಾತ್ರಾ ಮೆರೆಯಬೇಕು.ಆ ಪಾತ್ರಗಳ ವೈಭವವೇ ನಮ್ಮ ಉದ್ದೇಶ.ಯಾವುದೇ ಪಾತ್ರವಿರಲಿ,ಆ ಪಾತ್ರ ಆ ಸಂದರ್ಭದಲ್ಲಿ ನ್ಯಾಯ ಒದಗಿಸಿದೆಯೇ ಅಂತ ತಾನೇ ನಾವು ನೋಡುವುದು?ಉದಾಹರಣೆಗೆ ರಾವಣ.ಯಾವಜ್ಜೀವವೂ ರಾವಣನ್ನು ಒಪ್ಪಲು ಸಾಧ್ಯವಿಲ್ಲ.ರಾವಣನನ್ನು ಒಪ್ಪದೇ ಬಯಲಾಟದಲ್ಲಿ ರಾವಣ ಎಷ್ಟು ಚೆನ್ನಾಗಿ ಪಾತ್ರ ಮಾಡಿದ ಅಂತ ಪ್ರೇಕ್ಷಕರಾದ ನಾವುಗಳು ಕುಳಿತು ನೋಡುತ್ತೇವಲ್ಲಾ ಅದುವೇ ಇದು.
ಇದು ಎಂದರೆ ಪತ್ರಿಕೆ.ಬಯಲಾಟದಲ್ಲಿ ರಾವಣ ಇದ್ದ ಹಾಗೇ.
ಬಯಲಾಟ ಮುಗಿಸಿ ಮನೆಗೆ ಬರುತ್ತೇವೆ.ಹತ್ತಿರದವರು ಕೇಳುತ್ತಾರೆ,ಆಟಕ್ಕೆ ಹೋಗಿದ್ದರೋ.ಹೌದು ಎನ್ನುತ್ತೇವೆ.ಪ್ರಸಂಗ ಯಾವುದು ಎಂದು ಕೇಳುತ್ತಾರೆ.ರಾವಣ ವಧೆ ಎನ್ನುತ್ತೇವೆ.ಆವಾಗ ಅವರು ಕೇಳುವುದೇ ಒಂದು ಪ್ರಶ್ನೆ ರಾವಣ ಹೇಗೆ ಆಯಿತು?
ಎಲ್ಲರಿಗೂ ಇರುವುದೇ ರಾವಣ ಹೇಗೆ ಎಂಬ ಪ್ರಶ್ನೆ.ಏಕೆಂದರೆ ರಾಮಾಯಣದಲ್ಲಿ ರಾವಣನೇ ಅಲ್ಲವೇ ದೊಡ್ಡ ವೇಷ ಅದಕ್ಕೆ.
ಆಗ ನಮ್ಮ ಉತ್ತರ ಏನು?ಒಳ್ಳೇ ರಾವಣ!
ಒಳ್ಳೆಯ ರಾವಣ..
ಪತ್ರಿಕೆಗಳೂ ಹಾಗೆಯೇ ಸಮಾಜದಲ್ಲಿ ಒಳ್ಳೇ ರಾವಣ ಆಗಿರಬೇಕು!!!!!!!"
ಶೇಣಿ ಅಜ್ಜ ಮಾತು ಮುಗಿಸಿದರು.
ಹತ್ತರ ಮೇಲೆ ಒಂದು ವರ್ಷ ಕಳೆಯಿತು.ಶೇಣಿ ಅಜ್ಜ ಕೂಡಾ ಈಗಿಲ್ಲ.ಆಟದಲ್ಲಿ ಒಳ್ಳೇ ರಾವಣ ಎಂಬ ಅವರ ಮಾತಿನ ಮುಕ್ತಾಯ ಮಾತ್ರಾ ಇನ್ನೂ ನನಗೆ ಮರೆತಿಲ್ಲ.

ಮೊನ್ನೆ ಹಿರಿಯ ಗೆಳೆಯ ನಿತ್ಯಾನಂದ ಪಡ್ರೆ ಸಿಕ್ಕಿದ್ದರು.ಕಾಲೇಜು ಹುಡುಗ ಹುಡುಗಿಯರ ಒಂದು ಸೆಮಿನಾರ್‌ಗೆ ಅವರು ಅಧ್ಯಕ್ಷ.ಎಂದಿನಂತೆ ಪತ್ರಿಕಾರಂಗದ ಕುರಿತಾದ ಸೆಮಿನಾರ್ ಅದು.ನಿತ್ಯಾನಂದ ಪಡ್ರೆ ಹೇಳಿದ ಮಾತು ಛಲೋ ಆಗಿತ್ತು.ಪತ್ರಿಕೆಗಳು ಅಥವಾ ಮಾಧ್ಯಮ ಎಂದರೆ ಏನು ಎಂದು ಅವರು ತಮ್ಮದೇ ಶೈಲಿಯಲ್ಲಿ ಹೇಳಿದ್ದು ಹೀಗೆ-
"..........ಅವರು ಮುಂಜಾನೆಗೆ ನಮ್ಮ ಮನೆ ಬಾಗಿಲು ತೆರೆಯೋ ಮುನ್ನವೇ ಹೊಸಿಲಿನ ಬಳಿ ಬರೋ ಹಾಲಿನ ಹುಡುಗರ ಥರ.ಒಮ್ಮೊಮ್ಮೆ ಒಳ್ಳೇ ಹಾಲಿನ ಪೊಟ್ಟಣ ಹಾಕಿ ಹೋಗುತ್ತಾರೆ.ಕೆಲವೊಮ್ಮೆ ಒಡೆದ ಹಾಲಿನ ಪಾಕೀಟು ತಳ್ಳುತ್ತಾರೆ,ಹಲವು ಬಾರಿ ಹರಿದ ಹಾಲಿನ ಸ್ಯಾಶೆಯನ್ನು ಮೆಲ್ಲಗೇ ರವಾನಿಸುತ್ತಾರೆ.ನಮಗೆ ಗೊತ್ತೇ ಆಗುವುದಿಲ್ಲ.ಏಕೆಂದರೆ ನಾವು ಎದ್ದಿರುವುದೇ ಇಲ್ಲ.ನಮ್ಮ ಮನೆಯ ಬಾಗಿಲಾಚೆಗೇ ನಮಗಾಗಿ ಆ ಹಾಲನ್ನು ನಮಗೆ ಗೊತ್ತೇ ಇಲ್ಲದಂತೆ ಅವರು ಕೊಟ್ಟು ಹೋಗುತ್ತಾರೆ!"

20110213

ಅದೇನು ಅವಳದ್ದು ಚೆಂದ ಇದೆ ಅಂತಾನಾ..

ಈಗ್ಗೆ ಕೆಲವೇ ಕೆಲವು ವರ್ಷಗಳ ಹಿಂದೆ ನನ್ನ ಅಪ್ಪ ಬಾಜಿರಕಂಬಕ್ಕೆ ಕಾಲೂರಿ ಕೂತು "ಇನ್ನು ಹೆಚ್ಚು ವರ್ಷ ಇಲ್ಲ,ಅಕ್ಕಿಗೆ ಕೇಜಿಗೆ ಹತ್ತು ರೂಪಾಯಿ ಆಗೋ ಕಾಲ ಬಂದೇ ಬರುತ್ತದೆ ನೋಡಿ..ಅನ್ತಾ ಇದ್ದರು.
ಪದೇಪದೇ ಅವರು ಹಾಗೇ ಹೇಳುತ್ತಿರುವುದನ್ನು ನೋಡಿ ನನಗೂ ಒಮ್ಮೆ ಕೇಳಬೇಕು ಅನಿಸಿ,ಯಾವಾಗ ಹಾಗಾಗಬಹುದು ಎಂದು ಕೇಳಿದ್ದೆ.
ನಿನಗೆ ಮೊಮ್ಮಕಕ್ಳು ಹುಟ್ಟುವ ಕಾಲಕ್ಕೇ ಆಗುತ್ತದೆ ನೋಡ್ತಾ ಇರು ಎಂದಿದ್ದರು.
ಅಪ್ಪ ಸತ್ತು ಒಂಭತ್ತು ವರ್ಷಗಳಾದವು.ನನಗೆ ಮೊಮ್ಮಗು ಬರಬೇಕಾದರೆ ಇನ್ನೂ ಹದಿನೈದು ವರ್ಷ ಇದೆ.ಅಕ್ಕಿಗೆ ಕೇಜಿಗೆ ಇಪ್ಪತ್ತು ರೂಪಾಯಿ ದಾಟಿ ಹೋಗಿದೆ.
ಕಿರಾಣಿ ಅಂಗಡಿಗಳು ಇರೋ ತನಕ ನಮ್ಮ ಖರೀದಿ ನಮಗೆ ಬೇಕಾದಂತಿದ್ದವು.ಸಣ್ಣ ಸಣ್ಣ ಊರುಗಳಿಗೆ ಹೋಗಿ ನೋಡಿ.ಈಗಲೂ ಅಲ್ಲಿ ಎಷ್ಟೇ ದೊಡ್ಡ ಶ್ರೀಮಂತನಿರಲಿ,ಅವನೇ ಸೀದಾಸೀದಾ ಬಂದು ವ್ಯಾಪಾರ ಕುದುರಿಸುತ್ತಾನೆ.ಮಾತುಕತೆ ಇಲ್ಲದೇ ಯಾವುದನ್ನೂ ಕೊಳ್ಳುವುದಿಲ್ಲ.ಅಂಗಡಿಯೊಳಗೆ ಯಾವ ವಸ್ತುವನ್ನೂ ಗಿರಾಕಿ ಮುಟ್ಟುವ ಹಾಗೂ ಇರುವುದಿಲ್ಲ,ಇಡುವುದೂ ಇಲ್ಲ.
ತನಗೆ ಒಂದು ಬೆಂಕಿಪೊಟ್ಟಣ ಬೇಕಾದರೂ ಅದನ್ನು ಹಾಗೇ ಎಳೆದುಕೊಂಡು ತಗೋಳೋದಿಲ್ಲ.ಊದುಬತ್ತಿಗೂ ರೇಟು ಕೇಳಿಯೇ ಖರೀದಿ ಮಾಡುತ್ತಾನೆ.ಬೆಲ್ಲ ಎಷ್ಟಣ್ಣಾ ರೇಟು ಎಂದು ಕೇಳಿದ ಮೇಲೆಯೇ ತೂಕಕ್ಕೆ ಹಾಕುವ ಕೆಲಸ ನಡೆಯುತ್ತದೆ.ನಿತ್ಯವೂ ಅದೇ ಗಿರಾಕಿ,ಅದೇ ಮಾರಾಟಗಾರ.ಅದೇ ಮಾತುಕತೆ..
ಎಲ್ಲಾ ಸಹಜವಾಗಿ ಆಗುತ್ತದೆ.
ಏನ್ ಸ್ವಾಮೀ ಅಕ್ಕಿಗೆ ಹತ್ತು ಪೈಸೆ ಜಾಸ್ತಿ ಆಗಿದೆ ಎಂದು ಗಾಬರಿ ಬಿದ್ದವರಂತೆ ಕೊಳ್ಳುವವನು ಮೊದಲಾಗಿ ಕೇಳುವುದೂ,ಅಂಗಡಿಯವನು ವಿಯೆಟ್ಮಾಂನಲ್ಲಿ ಯುದ್ಧವಂತೆ ಎಂದು ಸಮಜಾಯಿಸಿ ಅಂತ ಏನೋ ಒಂದು ಹೇಳುವುದರಲ್ಲಿಗೆ ಅಕ್ಕಿ ವ್ಯಾಪಾರ ನಡಯುತ್ತದೆ.
ಎನೇ ಆದರೂ ವ್ಯಾಪಾರ ಮಾತ್ರಾ ಅದೇ ಅಂಗಡಿಯಲ್ಲಿ ನಡೆಯುತ್ತದೆ ತಲೆತಲಾಂತರದ ಸಂಬಂಧ ಎಂಬ ಹಾಗೇ.
ಇದು ಧರ್ಮ..
ಆಗಲೇ ವ್ಯಾಪಾರಂ ದ್ರೋಹ ಚಿಂತನಂ ಅಂತ ಉಕ್ತಿ ಇತ್ತು.
ಈಗ ಟಚ್ ಎಂಡ್ ಫೀಲ್ ಕಾಲ.
ಮಾಲ್‌ಗಳ ಒಳಗೆ ಹೊಕ್ಕು ಸೇರಿಕೊಂಡರೆ ಯಾರೂ ಯಾರಿಗೂ ಸಂಬಂಧವಿಲ್ಲ.ನಿನ್ನೆ ತರಕಾರಿ ಮಾರಾಟ ವಿಭಾಗದಲ್ಲಿ ಕೂತಿದ್ದ ಮಾರಾಟಗಾರ್ತಿ ಇಂದು ಐಸ್‌ಕ್ರೀಂ ಮಾರುತ್ತಿದ್ದಾಳೆ.ಇಂದು ಇದ್ದ ಉದ್ದಿನಬೇಳೆ ಧಾರಣೆ ನಾಳೆ ಇರೋದಿಲ್ಲ.ಮೊನ್ನೆ ಕಾಫಿಪುಡಿಗೆ ಸೋಪು ಉಚಿತ ಇತ್ತು.ನಾಳೆ ಅಕ್ಕಿ ಬ್ಯಾಗಿನ ಮೇಲೆ ಸಕ್ಕರೆ ಫ್ರೀ.
ಬೇಕಾದ್ದು ಬೇಡದ್ದು ಎಲ್ಲಾ ಖರೀದಿ ಮಾಡುತ್ತೇವೆ.
ಒಂದು ತೆಗೆದುಕೊಂಡರೆ ಮತ್ತೊಂದು ಫ್ರೀ ಎಂಬ ಆಮಿಷಕ್ಕೆ ಕೇಜಿ ತೂಕದ ಎರಡು ಪೇಸ್‌ಪೌಡರ್ ಖರೀದಿ ಮಾಡಿ ಅವೆರಡೂ ಮೂರು ವರ್ಷ ಕಳೆದರೂ ಮುಗಿಯದೇ ವಾರ್ಡ್‌ರೋಬ್‌ನೊಳಗೆ ಕುಂಬು ಬಿದ್ದುದ್ದು ನೆನಪಾಗುತ್ತಿದೆ.
ಮೊನ್ನೆ ಇಸಾಕ್‌ನ ಕಬ್ಬಿಣದ ಅಂಗಡಿಯಲ್ಲಿ ಕುಳಿತಿದ್ದೆ.ನಮ್ಮ ಪಂಚಾಯತ್‌ನ ಪ್ಲಂಬರ್ ಇಸ್ಮಾಲಿ ಇಸಾಕ್ ಬಳಿ ಬಂದ.ಏನೋ ಕಿವಿಯಲ್ಲಿ ಊದಿದ.ಇಸಾಕ್ ಹಾಗೇ ಬರಲಿ ಎಂದ.ಇಸಾಕ್ ಚಡಪಡಿಕೆ ನೋಡುತ್ತಿದ್ದ ನನಗೆ ಏನೋ ಒಂದು ವ್ಯಾಪಾರ ನಡೆಯಲಿದೆ ಎಂಬ ಸುಳಿವು ಸಿಕ್ಕಿತು.ಇಸಾಕ್ ವ್ಯಾಪಾರ ಶುರುಮಾಡುವುದೇ ಚಡಪಡಿಕೆಯಲ್ಲಿ.
ಮುದುಕ ದಂಪತಿಯೊಂದು ಎರಡು ಕೈಚೀಲ ಹಿಡಿದುಕೊಂಡು ಬಂದು ನಿಂತಿತು.ಚೀಲದೊಳಗಿಂದ ಎತ್ತಿದ್ದು ಜೋಡಿ ನಾಟಿ ಕೋಳಿಗಳು.ಇಸಾಕ್ ತನ್ನ ಸ್ಕೇಲ್‌ನಲ್ಲಿ ತೂಕ ಹಾಕಿದ.ಎರಡೂಮುಕ್ಕಾಲು ಕಿಲೋ ತೋಗುತ್ತಿದ್ದ ಕೋಳಿಗಳು.ಇಸಾಕ್ ಹೆಚ್ಚೇನೂ ಮಾತನಾಡಲಿಲ್ಲ.ಮುನ್ನೂರು ರೂಪಾಯಿ ಆ ದಂಪತಿ ಕೈಗೆ ಇಟ್ಟ.
ಅಣ್ಣಾ ನಿಮ್ಮ ಬಳಿ ನಮ್ಮ ಚರ್ಚೆ ಇಲ್ಲ.ನೀವು ಕೊಟ್ಟದ್ದು ನಮಗೆ ಸಂತೋಷ ಎಂದಿತು ಮುದುಕಿ.
ಕೋಳಿಗಳನ್ನು ಮನೆಗೆ ಕಳುಹಿಸಿದ ಇಸಾಕ್,ಹೆಂಡತಿಗೆ ಫೋನ್ ಇಟ್ಟ.ಹೀಗೀಗೆ ಎರಡು ನಾಟಿ ಕೋಳಿಗಳು ಬರುತ್ತಿವೆಯೆಂದೂ,ರಾತ್ರಿ ಅದೆಂಥಾ ರೆಸಿಪಿ ಮಾಡಬಹುದೆಂದೂ ಬಾಯಿ ಚಪ್ಪರಿಸಿದ.
ಆಮೇಲೆ ಇಸಾಕ್ ಹೇಳಿದ ಕೋಳಿ ವ್ಯಪಾರದ ಕಥೆಯ ಸಾರಾಂಶ ಇಷ್ಟು
ಈ ದಂಪತಿ ಹಳ್ಳಿಯ ಗೆಯ್ಮೆಯವರು.ಪಟ್ಟಣಕ್ಕೆ ಕೋಳಿ ತಂದಿದ್ದಾರೆ.ಸಹಜವಾಗಿಯೇ ಕೋಳಿ ಅಂಗಡಿಗೆ ಹೋಗಿ ವ್ಯಾಪಾರ ಕೇಳಿದ್ದಾರೆ.ಆತ ಕಿಲೋಗೆ ಅರುತ್ತೈದು ರೂಪಾಯಿ ಹೇಳಿದ್ದಾನೆ.ಇದನ್ನು ಕಂಡ ಪ್ಲಂಬರ್ ಇಸ್ಮಾಲಿ ಅವರನ್ನು ಸೀದಾ ಇಸಾಕ್‌ನ ಅಂಗಡಿಗೆ ಕರೆತಂದಿದ್ದಾನೆ.ಇಸಾಕ್‌ಗೆ ಅವ್ವಲ್ ನಾಟೀಕೋಳಿಯ ಖಯಾಲಿ.ಆದರೆ ಅದು ಸಿಗೋದೇ ಅಪರೂಪ.ಸಿಕ್ಕರೂ ಅದು ಅದೇ ಕೋಳಿ ಅಂಗಡಿಯಲ್ಲಿ.ಅದೂ ತಾಜಾ ಅಲ್ಲ.ಘಟ್ಟದ ಮೇಲಿನದು. ನಾಟಿ ಆದರೂ ಊರಿನ ಖದರು ಅದಕ್ಕೆ ಇರುವುದಿಲ್ಲ.
ರೇಟು ಮಾತ್ರಾ ಕಿಲೋಗೆ ಇನ್ನೂರು ರೂಪಾಯಿ.
ನಾನು ನೂರಾಏಳು ರೂಪಾಯಿಗೆ ತಾಜಾ ನಾಟಿ ಕೋಳಿ ಖರೀದಿ ಮಾಡಿದ ಹಾಗಾಯಿತು ಎಂದ ಇಸಾಕ್.
ನಮ್ಮೂರಲ್ಲಿ ಸರಕಾರದ ಮೀನು ನಿಗಮ ಹೊಸತಾಗಿ ಹವಾನಿಯಂತ್ರಿತ ಮೀನು ಅಂಗಡಿ ಹಾಕಿತು.ಗೆಳೆಯ ಐಕೆ ಮೀನು ಖರೀದಿಗೆ ಹೋಗಿದ್ದರಂತೆ.ತನಗೆ ಬೇಕಾದ ಮೀನು ಕೇಳಿದರು.ಇದೆ ಆದರೆ ಅದನ್ನು ಕಟ್ ಮಾಡಿಕೊಡಲು ಜನ ಇಲ್ಲ ಎಂಬ ಉತ್ತರ.ಆಮೇಲೆ ಅವರು ಮೊಯ್ದೀನ್ ಬ್ಯಾರಿ ಅಂಗಡಿಯಿಂದಲೇ ಮೀನು ಖರೀದಿಸಿದ್ದು.ಅಂಗಡಿ ಶುಚಿ ಇಲ್ಲದೇ ಇರಬಹುದು,ಮೀನಿನಂಗಡಿಯಲ್ಲವಾ?ಅದೇನು ಟೀವಿ ಅಂಗಡಿಯಾ? ಆದರೆ ರುಚಿಗೆ ಅಡ್ಡಿ ಇರಲಿಲ್ಲ ಎಂದರು ಐಕೆ.
ಮಂಗಳೂರಿನಲ್ಲಿ ಬುಟ್ಟಿಯಲ್ಲಿ ಮೀನು ತುಂಬಿ ಮರಕಾಳ್ತಿಗಳು ಸಾಲು ಸಾಲಾಗಿ ವ್ಯಾಪಾರ ನಡೆಸುತ್ತಾರೆ.ಒಬ್ಬಳಲ್ಲಿ ರೇಟು ಕೇಳಿ ಮತ್ತೊಬ್ಬಳ ಬಳಿ ಖರೀದಿ ಮಾಡಿದರೆ ಆ ಕ್ಷಣಕ್ಕೇ ದೊಡ್ಡ ಸ್ವರದಲ್ಲಿ ಮೊದಲನೆಯವಳು "ಅದೇನು ಅವಳದ್ದು ಚೆಂದ ಇದೆ ಅಂತ ತಗೊಂಡ್ಯಾ... ಬೇವಾರ್ಸಿದು ತಂದು " ಎಂದಿತ್ಯಾದಿ ಅಶ್ಲೀಲವಾಗಿ ಬೈದೇ ಬಿಡುತ್ತಾಳೆ.ನಾಳೆ ಮತ್ತೆ ಅವಳ ಬಳಿ ಹೋಗಿ ನಿಂತರೆ ಅಣ್ಣಾ ಅಪ್ಪಾ ಅಂತಾಳೆ.ನಿನ್ನೆ ನೀನು ಬೈದಿದ್ದೆ ಎಂದರೆ ಅದು ನಿನ್ನೆ ಅಲ್ಲವಾ ಅಣ್ಣಾ ..ಇಂದು ನಿಮಗೋಸ್ಕರ ಎಂಥಾ ಐನಾತಿ ಮೀನು ತಂದು ಮಡಗಿದ್ದೇನೆ ನೋಡಿ ಎಂದು ವ್ಯಾಪಾರ ಪೂರೈಸುತ್ತಾಳೆ..