20110129

ರಾಮನ ವನವಾಸ

ಕೈಕೇಯಿ ಹೇಳಿದ್ದು
ರಾಮ ಕಾಡಿಗೆ ಹೋಗಲಿ
ಆದರೂ ಜೊತೆಗೆ ಸೀತೆ.
ಏಕೆ?
ರಾಮನಿಗೆ ಗೊತ್ತಿತ್ತು
ಅಯೋಧ್ಯೆಯನ್ನು ಬಿಡಬೇಕು.ರಾಜ್ಯವನ್ನು ತೊರೆಯಬೇಕು,
ಜನರನ್ನು ಮರೆಯಬೇಕು.
ಅರಮನೆಯ ಸಾಲುಕಂಬಗಳೂ ಕನಸಲ್ಲೂ ಕಾಣಿಸಬಾರದು.
ಸಿಂಹಾಸನ ಮರೆಯಲೇಬೇಕು
ಆದರೆ ..
ಎಲ್ಲರನ್ನೂ ಮರೆತೇನು,ಎಲ್ಲವನ್ನೂ ತೊರೆದೇನು.
ಸೀತೆಯನ್ನು ನೆನಪಿಸಿದೇ ಇರುವುದಾದರೂ ಹೇಗೆ?
ಸೀತೆ ಎಂದರೆ ಮಡದಿ.
ಮಡದಿ ಎಂದರೆ ಅರ್ಧ.
ಸೀತೆಯನ್ನು ಬಿಟ್ಟುಹೋದ ರಾಮ
ಅರ್ಧ ಕಾಡಲ್ಲಿ ಉಳಿದರ್ಧ ನಾಡಲ್ಲಿ
ಎಷ್ಟಾದರೂ ರಾಮ
ಕೊಟ್ಟ ಮಾತು,ತೊಟ್ಟ ಬಾಣ ತಪ್ಪಬಾರದು
ಸೀತೆಯ ಮೂಲಕ ನೆನಪಾಗದೇ ಅಯೋಧ್ಯೆಯ ಅಂತಃಪುರ?
ರಾಜ್ಯದ ನೆನಪಿನ ಹಂಗು?
ಸೀತೆಯೇ ಜೊತೆಗಿದ್ದರೆ?
ಮರೆತುಹೋಗುವುದು ಅಯೋಧ್ಯೆ,ರಾಜ ವೈಭವ,ಪಟ್ಟದಾನೆ,ದೀವಟಿಗೆ..
ಪ್ರೇಮಿಗಳಿಗಿದು ಆದರವಾಗಲಿ..

20110123

ಗುಹಾಂತರ್ಗತ

ಈಗ ನಾನು ಬರೆಯುತ್ತಿರುವ ಕಾದಂಬರಿ ಎಂದು ನಾನು ಭಾವಿಸಿದ ಕಾದಂಬರಿ
ಒಂದು ಪುಟ ನಿಮಗಾಗಿ

ತೋರು ಬೆರಳಿನ ತುದಿಯನ್ನು ಹೆಬ್ಬೆರಳ ತುದಿಯ ಮೇಲೆ ಟಂಕಿಸಿದಳು ಸುಮಾ.
ಇದೇನಿದು ಎಂದು ಕೇಳಿದಳು.
ಮುದ್ರೆ ಎಂದ ಗೋಪಾಲ.
ಬರೀ ಮುದ್ರೆ ಅಲ್ಲ.ಇದು ಯೋನಿ ಮುದ್ರೆ..ಯೋನಿ ಅಂದರೆ ಗೊತ್ತಾಯಿತಲ್ಲ ಎಂದಳು.
ಗೋಪಾಲನಿಗೆ ಅರೇ ಇವಳು ಇದೇನು ಸೀದಾಸೀದಾ ಯೋನಿ ಮೇಲೆ ಉಪನ್ಯಾಸ ಶುರುಮಾಡಿದ್ದಾಳೆ ಅಂತ ಅನಿಸಿತು.
ಸುಮಾ ಹೇಳುತ್ತಿದ್ದಾಳೆ,
ಈ ಮುದ್ರೆ ಒಂದು.ಆದರೆ ಇಲ್ಲೇ ನೋಡು ನೀನು ಟೂಲ್ಸ್ ಹಿಡಿಯೋದು.
ಅರ್ಥವಾಗಲಿಲ್ಲ.
ಭಡವಾ ನೀನು
ಬಿಡಿಸಿ ಹೇಳೋ..
ಏನನ್ನಾ?
ಪೋಲಿ ಮಾತನಾಡಬೇಡ.
ಟೂಲ್ಸ್ ಹಿಡಿಯೋದು ಅಂದರೆ ಪೋಲಿ ಆಗುತ್ತದಾ?
ಹಾಗಲ್ಲ,ನನಗೆ ಇದೆಲ್ಲಾ ಅರ್ಥವಾಗಲಿಲ್ಲ ಅಂತ ಅಷ್ಟೇ.
ನಾನು ಅರ್ಥ ಮಾಡಿಸ್ತೇನೆ..ಟೂಲ್ ಹಿಡಿಯಬೇಕಾದರೆ ಈ ಮುದ್ರೆಯೇ ಬೇಕು..
ಈಗ ಅರ್ಥವಾಯಿತು.
ಸುಮಾ ಕಾರನ್ನು ಯಾಕೋ ಅಗತ್ಯಕ್ಕಿಂತ ಹೆಚ್ಚು ಫಾಸ್ಟಾಗಿ ಓಡಿಸುತ್ತಿದ್ದಳೆ ಎಂದು ಗೋಪಾಲನಿಗೆ ಆಗುತ್ತಿತ್ತು.
ಸುಮಾ ಕಾರು ಕೊಡು ಎಂದ.
ಜರ್ರನೇ ಬ್ರೇಕ್ ಹೊಡೆದಳು.ಕಾರು ನಿಂತಿತು.ಸುಮಾ ಛಂಗನೇ ಎಡಗಡೆ ಸೀಟಿಗೆ ಹಾರಿದಳು.ಗೋಪಾಲ ಅವಳನ್ನು ತನ್ನ ಮೇಲೆ ಅನಾಮತ್ತು ಸ್ವೀಕರಿಸಲೇಬೇಕಿತ್ತು.ಕಿಲಕಿಲ ನಕ್ಕಳು.ಕಚಗುಳಿ ಇಟ್ಟ ಹಾಗಾಗಿ ಗೋಪಾಲ ಹುಳಿ ನಗೆ ನಕ್ಕ.
ಸುಮಾ ಎಡಗಡೆಯಲ್ಲಿ ಎದೆ ಉಬ್ಬಿಸಿ ಕುಳಿತು ತನ್ನ ಕೇಶರಾಶಿಯನ್ನು ಬಿಚ್ಚಿ ನೀವುತ್ತಾ ಗೋಪಾಲನತ್ತ ಮುಖ ಮಾಡಿದಳು.ತೋರುಗನ್ನಡಿಯನ್ನು ತನ್ನತ್ತ ತಿರುಗಿಸಿ ಸಣ್ಣಗೇ ಕಣ್ಣು ಹೊಡೆದಳು.
ಗೋಪಾಲ ವೇಗವಾಗಿ ಕಾರನ್ನು ದಬ್ಬತೊಡಗಿದ,ವಿಪರೀತ ಹುಕ್ಕಿಯಿಂದ.
ಗೋಪಿ..ಎಂದಳು.
ಆಹಾ! ಹಾಗೊಂದು ಪ್ರೀತಿ ಸಿಗದೇ ಅದೆಷ್ಟು ಕಾಲವಾಯಿತೋ ಎಂದು ಗೋಪಾಲ ಕರಗಿದ.
ಗೋಪಿ ಇಂದು ನಾನು ಬೃಂದಾವನದಲ್ಲಿ ನಿನಗೆ ಏನೋ ಹೇಳಬೇಕು..ಕೇಳುತ್ತಿಯಲ್ಲಾ ಎಂದಳು.ಅವಳ ಧ್ವನಿಯಲ್ಲಿ ಯಾಚನೆ ಇತ್ತು.
ನಾನು ದಾಟಬೇಕು ಕಣೋ..ಎಂದಳು ಸುಮಾ!
ಗೋಪಾಲ ಗಡಕ್ಕನೆ ಕಾರನ್ನು ಅದುಮಿದ.ಅದೆಂಥಾ ವೇಗದಲ್ಲಿ ಅವನು ಹಿಡಿದಿಟ್ಟ ಎಂದರೆ ಸುಮಾ ಮುಂದೋಡಿ ಹಿಂದೆ ಉದುರಿ ಛಂಗನೇ ನೆಗೆದು ಅವನ ತೊದೆ ಮೇಲೆ ಅಪ್ಪಳಿಸಿ ಬಿದ್ದಳು.
ಹಾಗೇ ಬಿದ್ದವಳು ಮುಖ ಮೇಲತ್ತಿ ಅವನ ಕಣ್ಣುಗಳನ್ನು ಸೂರೆಗೈಯತೊಡಗಿದಳು.ಗೋಪಾಲ ಅವಳ ಮುಖವನ್ನು ತನ್ನ ಅಂಗೈಯಲ್ಲಿ ಅಲಂಗಿಸಿಕೊಂಡು ಒಂದೇ ಮಾತು ಕೇಳಿದ,
ಏನೆಂದೆ?
ದಾಟಬೇಕು ಅಂತಾನಾ?
ಹಾಂ.
ನೀನು ದಾಟಬೇಕು ಎಂದೆಯಾ?
ಸುಮಾ ಹೌದೆಂಬಂತೆ ತಲೆ ಆಡಿಸಿದಳು.
ಸುಮಾ..ಏನಾಗಿದೆ ನಿನಗೆ ಎಂದ ಗೋಪಾಲ,ಸ್ವಲ್ಪ ಹೆಚ್ಚೇ ಎಂಬ ಏರು ಧ್ವನಿಯಲ್ಲಿ.
ಸುಮಾ ಅವನ ತೊಡೆಯಲ್ಲಿ ತಲೆಯನ್ನು ಮತ್ತಷ್ಟು ಸಾವಕಾಶ ಮಾಡಿಕೊಂಡಳು.ಆಮೇಲೆ ಅವಳು ಬೀರಿದ ಹೂ ನಗೆಯಲ್ಲಿ ತುಂಟತನದ ಸೆಡವು ಇತ್ತು.
ಶ್.. ಎಂದಳು.ಮತ್ತೊಮ್ಮೆ ತೋರುಬೆರಳಿನ ತುದಿಯನ್ನು ಹೆಬ್ಬರಳ ತುದಿಗೆ ಮುಟ್ಟಿಸಿ ಅದೇ ಯೋನಿ ಮುದ್ರೆಯನ್ನು ಅವನ ಕಣ್ಣುಗಳ ಮುಂದೆ ಹಿಡಿದಳು.
ಗೋಪಾಲ ವಿಚಿತ್ರವಾಗಿ ನೋಡಿದ.
ಇದು ಧ್ಯಾನ ಮುದ್ರೆಯೂ ಹೌದು ಕಣಣೋ.ಎಂದಳು.
"............"
ಇಲ್ಲೇ ನೀನು ದಾಟೋದು..ಈ ಮುದ್ರೆಯ ಒಳಗೆ ಸೇರಿ...!!
ನೀನು ಬಿಡುಗಡೆಗೆ ಬಯಸುವ ಟೂಲ್ ಹಿಡಿದು ಇಲ್ಲಿಂದಲೇ ಸಾಗುತ್ತಾ ಹೋಗುತ್ತೀಯಾ?
ಒಂದು ಸ್ಟ್ರೂಡ್ರೈವರ್ ಅಂತ ಇಟ್ಟುಕೋ.ಯಾವುದನ್ನೋ ಬಿಡಿಸಬೇಕು.ಹಾಗೇ ಬಿಡಿಸುವುದರಿಂದ ನಿನಗೆ ಇನ್ನೊಂದು ಬಿಡುಗಡೆ ಆಗುತ್ತದೆ.,ಅಥವಾ ಮತ್ತೊಂದನ್ನು ರೂಪಿಸಲು ಆ ಸ್ಕ್ರೂ ಡ್ರೈವರ್ ಮೂಲಕ ನೀನು ಈ ಸ್ಕ್ರೂವನ್ನು ಬಿಡಿಸುತ್ತೀಯಾ..ಎಲ್ಲಾ ಮಾಡೋದು ಈ ಮುದ್ರೆಯ ಒಳಗೇ..
ಕಲಾವಿದ ನೀನು,ನಿನ್ನ ಕುಂಚವನ್ನು ಹಿಡಿದು ನನ್ನಲ್ಲಿ ಅರಳಿಸುವ ಚಿತ್ರ ಕೂಡಾ ಈ ಮುದ್ರೆಯ ಮೂಲಕವೇ ನೋಡು.
ನೀನು ಬರೆಯಲು ಕೂತರೆ ಪೆನ್ನು ಹಿಡಿದು ಅಕ್ಷರಗಳ ತೋರಣ ಕಟ್ಟಿ ಭಾವನೆಗಳ ಪ್ರವಾಹ ಎಬ್ಬಿಸುವುದು ಈ ಮುದ್ರೆಯೊಳಗಿಂದಲೇ..
ಚಿತ್ರಕಾರ,ಬರಹಗಾರ ಕೂಡಾ ದಾಟುವುದೇ ಅವರ ಉದ್ದೇಶವಲ್ಲವೇ ಗೋಪಿ?
ಧ್ಯಾನ ಮುದ್ರೆಯಾಗಲಿ,ಯೋನಿ ಮುದ್ರೆಯಾಗಲಿ ದಾಟುವುದಕ್ಕೆ ದಾರಿ ಮಾಡುತ್ತದೆ.ಇಲ್ಲಿಂದಲೇ ಕಣೋ ಪಯಣ!
ಸುಮಾ ಹಾಗೇ ಹೇಳುತ್ತಿದ್ದಂತೆ ಗೋಪಾಲ ಅವಳನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿಕೊಳ್ಳುತ್ತಾ ಹೋದ.
ದಾಟಿ ಬಿಡೋಣ ಬಾರೇ ಎಂದು ಅವನ ಒಳಗೊಂದು ಕರೆ ಕೂಗುತ್ತಿತ್ತು.
ಸುಮಾ ಹೇಳಿದಳು,
ನನಗೆ ಗೊತ್ತಿದೆ ನೀನು ಹಿಂದಿನ ಗೋಪಾಲ ಅಲ್ಲ.ಆಗೆಲ್ಲಾ ಅದೆಂಥ ಮಾತನಾಡುತ್ತಿದ್ದೀ ಮಾರಾಯಾ.ಈಗೀಗ ಮಾತೇ ಮುಚ್ಚಿಕೊಂಡ ಹಾಗಿದೆ.ಅದೇನು ಆಗಿದೆ ನಿನಗೆ?ಟೀವಿ ಕೆಲಸ ಬಿಟ್ಟೆ ಅಂತ ನನಗೆ ಒಂದು ಮಾತೂ ಹೇಳಲಿಲ್ಲ ನೀನು ಅಂದರೆ ನನಗೆ ಅರ್ಥವಾಗುತ್ತದೆ.
ಅರ್ಥ ಮಾಡ್ಕೋ..ನಾನು ಹೊಸ ಬದುಕಿಗೆ ಬಂದಿದ್ದೇನೆ.ನನಗೆ ಅದು ಅನಿವಾರ್ಯ ಅಲ್ಲವಾ?ಹಾಗಂತ ನಿನ್ನನ್ನು ಮರೆತೇ ಬಿಟ್ಟೆ ಅಂತ ತಿಳ್ಕೊಂಡೆಯಾ?ಇದೇ ಬೃಂದಾವನದ ಈ ಕಾಡಲ್ಲಿ ನಿನ್ನ ತೋಳುಗಳ ನಡುವೆ ಎಲ್ಲವನ್ನೂ ನಿನಗೆ ಒಪ್ಪಿಸಿ ಹಗುರವಾದವಳು ನಾನು. ನಿನ್ನ ಬಿಸಿಯನ್ನು ನನ್ನೊಳಗಿನ ಅಗ್ಗಿಷ್ಟಿಕೆಗೆ ಆಹುತಿ ಮಾಡಿದವನು ನೀನು.
ಚುಪ್ ಎಂದು ಗೋಪಾಲ ಆಕೆಯ ತುಟಿ ಮುಚ್ಚಿದ.
ಬೇಡ ಇನ್ನು ಅದನ್ನೆಲ್ಲಾ ಮಾತನಾಡಬೇಡ.
ಯಾಕೆ ಮಾತನಾಡಬಾರದು?ನಾವೇನು ತಪ್ಪು ಮಾಡಿದ್ದೇವಾ?ಇಬ್ಬರೂ ಒಂದಾಗಿಬಿಟ್ಟರೆ ಅದು ಹೇಗೆ ತಪ್ಪಾಗುತ್ತದೆ?
ಸುಮಾ ಪ್ಲೀಸ್ ಎಂದು ಗೋಪಾಲ ತನ್ನ ತುಟಿಗೆ ಬೆರಳಿಟ್ಟು ವಿನಂತಿಸಿದ.
ಸುಮಾ ಹುಕ್ಕಿ ಬಂದವಳ ಹಾಗೇ ಆಗಿದ್ದಿರಬೇಕು,
ಯಾಕೋ,ನಾನು ಏನನ್ನು ಹುಡುಕಾಡಿದೆವು ಆಗ ಹೇಳು ನೋಡೋಣ?ಬಿಡುಗಡೆ ಕಣೋ..ಬಿಡುಗಡೆ.ಅದೇ ದಾಟುವುದು.ದಾಟಿದೆವಲ್ಲಾ ಹಾಯಾಗಿ.ತತ್ತಿ ಒಡೆದು ಬಂದು ಗುಟುಕು ತಿಂದು ರೆಕ್ಕೆ ಕಟ್ಟಿಕೊಳ್ಳುತ್ತಿರುವ ಪುಟ್ಟ ಹಕ್ಕಿಗೆ ಬಾನು ಒಂದು ಸವಾಲಲ್ಲ,ಬರೀ ಕುತೂಹಲ.ರೆಕ್ಕೆ ಬೀಸಿದರೆ ಬಾನು ಅದರ ಸವಾಲು.ಆಮೇಲೆ ದಾಟುವುದೇ ಅದರ ಗುರಿ.ಆ ಗುರಿ ಕೂಡಾ ಅದೇ ಆ ಹಕ್ಕಿ ಹಾಕಿಕೊಂಡದ್ದಲ್ಲ.ಅದು ಅದರೊಳಗೆ ಬಂದದ್ದು..
ನಾವು ಹಾಗೇ ಮಾಡಿದೆವಲ್ಲಾ?ಇದೇ ಈ ಬೃಂದಾವನದಲ್ಲಿ.
ಆ ಸಂಜೆ ಆ ಮಳೆಗೆ ಆ ಮಂಜಿನ ಹೊದಿಕೆಯ ಒಳಗೆ ನಾನು ಮತ್ತು ನೀನು ಬಿಡುಗಡೆಗೊಂಡು..ಅರೆ ಕ್ಷಣ ಮಾತ್ರಾ ಹಳಹಳಿಸಿ ಆಮೇಲೆ ಮನಸಾರೆ ನಕ್ಕೂ ನಕ್ಕೂ..
ಸುಮಾ ಗೋಪಾಲನನ್ನು ಐದು ವರ್ಷಗಳ ಹಿಂದೆಗೆ ತಳ್ಳುತ್ತಿದ್ದಳು.
ಚಾರ್ಮಾಡಿಯ ಆ ಕಾಡಿನಲ್ಲಿ ಗೋಪಾಲ ಅವಳನ್ನು ಮತ್ತಷ್ಟು ತನ್ನ ತೆಕ್ಕೆಯಲ್ಲಿ ಬರಸೆಳೆದುಕೊಂಡ.
ಸುಮಾ ಅವನ ಎದೆಯ ಮೇಲೆ ಬೆರಳುಗಳಿಂದ ಮೀಟಿದಳು.ಕಿವಿಯನ್ನು ಎದೆಯ ಗೂಡಿಗೆ ಆನಿಸಿ ಸಪ್ತಸ್ವರಗಳನ್ನು ಆಲಿಸಿದಳು.
ಸುಮಾ ಯೂ ಆರ್ ಮ್ಯಾರೀಡ್ ಎಂದ ಗೋಪಾಲ.
ಸೋ.ವಾಟ್.ನಾನು ಅವನ ಹೆಂಡತಿ ನಿಜ.ಆದರೆ ನಿನ್ನ ಪ್ರಾಣ ಎಂಬುದೂ ಹೌದಲ್ಲ ಎಂದಳು.
ಗೋಪಾಲ ತುಂಟತನಕ್ಕೆ ಎಂಬಂತೆ ತನ್ನ ಬೆರಳುಗಳನ್ನು ಜೋಡಿಸಿ ಯೋನಿಮುದ್ರೆಯನ್ನು ಅವಳ ಮುಂದಿಟ್ಟ.
ಸುಮಾ ಮನಸಾರೆ ನಕ್ಕಳು.
ಆಮೇಲೆ ಸರಿ,ಹೊರಡು ಎಂದಳು.
ಗೋಪಾಲ ಕಾರ್ ಚಾಲೂ ಮಾಡಿದ.ನಿಧಾನಕ್ಕೆ ಎದ್ದು ಹೊರಟ ಕಾರು ಚಾರ್ಮಾಡಿಯ ಆರನೇ ತಿರುವಿನಲ್ಲಿ ದಾಟುತ್ತಿದ್ದಾಗ,ಸುಮಾ ಕೇಳಿದ ಒಂದು ಪ್ರಶ್ನೆ ಗೋಪಾಲನನ್ನು ನಿತ್ರಾಣಗೊಳಿಸಿತು.
"ರೂಪಿ ಜೀವಂತ ಇದ್ದಾಳಂತೆ ನಿಜವೇನೋ??"

20110120

ಪ್ರೀತಿ ಕುರಿತೊಂದು ವ್ಯಾಖ್ಯಾನವು..ಪ್ರೇಮಿಗಳಿಗೆ ಮಾತ್ರಾ ಇಷ್ಟವಾಗುವಂತೆ ಬರೆಯಲಾಗಿದೆ.
ಪ್ರೀತಿ ಹುಟ್ಟುವ ಹೊತ್ತು ಯಾವುದು?
ಮುಂಜಾನೆ,ಮುಸ್ಸಂಜೆ,ಸುಡುಸುಡು ಮಧ್ಯಾಹ್ನ??
ಜನವರಿಯ ಮೊದಲ ವಾರ?ಆಗಸ್ಟ್ ಹದಿನೈದು?ಅಕ್ಟೋಬರದ ಕೊನೆ ದಿನ?ಫೆಬ್ರವರಿ ೧೬?
ಮಳೆಯ ಏಕತಾನತೆ ನಡುವೆ?ಛಳಿಯ ಹೊದ್ದಿನ ಒಳಗೆ?ಬೇಗೆಯ ಬೆವರಿನ ಘಮದಲ್ಲಿ?
ಶ್ರಾವಣದ ಮೊದಲ ದಿನ?ಆಷಾಢದ ಕೊನೆಯ ದಿನ?ಹೇಮಂತದ ಋತುಗಾನದಂದು?...
ವಸಂತದ ಚಿಗುರಿನ ಸಂಭ್ರಮದಲ್ಲಿ?
ಯಾರಿಗೂ ಗೊತ್ತಿಲ್ಲ,ಪ್ರೀತಿ ಯಾವಾಗ ಹುಟ್ಟುತ್ತದೆ ಎಂದು.
ಏಕೆಂದರೆ ಪ್ರೀತಿ ಹುಟ್ಟುವುದೇ ಪ್ರೇಮಿಗಳಿಗೂ ತಿಳಿದಿಲ್ಲ.
ಪ್ರೀತಿ ಒಂದು ಅನುಭೂತಿ.ಒಮ್ಮೆ ಆವರಿಸಿಕೊಂಡಿತು ಎಂದರೆ ಮತ್ತೆಲ್ಲವೂ ಅಲ್ಲಿ ಶೂನ್ಯ.ದೇವರನ್ನೂ ಕೂಡಾ ದೂರ ತಳ್ಳುವ ಖದರ್ ಪ್ರೀತಿಗಲ್ಲದೇ ಇನ್ಯಾರಿಗೂ ಇಲ್ಲ.
ಪ್ರೀತಿ ಎಲ್ಲಿ ಹುಟ್ಟುತ್ತದೆ?
ಮುಖದಲ್ಲಿ?ಮನದಲ್ಲಿ?ಕಣ್ಣಿನಲ್ಲಿ?ಹೃದಯದಲ್ಲಿ?ಹೂವಿನ ತೋಟದಲ್ಲಿ?ಎಲೆಯ ಸಡಗರದಲ್ಲಿ?
ಮರದ ಕೆಳಗೆ ನೆರಳಿನಲ್ಲಿ?
ಎಫ್‌ಬಿಯಲ್ಲಿ? ಆರ್ಕುಟ್‌ನಲ್ಲಿ? ಎಸ್ಸೆಂಎಸ್‌ನಲ್ಲಿ?
ಅಥವಾ ಆ ಇನ್‌ಲ್ಯಾಂಡ್ ಲೆಟ್ಟರಿನ ನೀಲಿ ಶಾಯಿಯ ಅಕ್ಷರಗಳಲ್ಲಿ?
ಕೇಳಿ ನೋಡಿ ಪ್ರೇಮಿಗಳನ್ನು,ಅವರೆನ್ನುತ್ತಾರೆ ಇದೆಲ್ಲಾ ನಮಗೆ ಗೊತ್ತಿಲ್ಲ.
ಏಕೆ ಹುಟ್ಟುತ್ತದೆ ಪ್ರೀತಿ?
ಯಾವುದೋ ಹುಡುಕಾಟಕ್ಕೆ?ಇನ್ಯಾವುದೋ ಬೇಸರಕ್ಕೆ?ಮತ್ತೆಲ್ಲೋ ಬಯಸಿದಂತೆ ದೊರೆತ ಭಾಗ್ಯಕ್ಕೆ?
ಅವನ ಕರ್ಷಣೆಗೆ?ಅವಳ ಮೋಹಕತೆಗೆ?
ಜೀವಜಾಲದ ಕೆಮೆಸ್ಟ್ರಿಯ ರಸಾಯನ ಪಾಕಕ್ಕೆ?
ಧಡ್ ಎಂದ ಎದೆ ನವಿರಾಗಿ ಬೀಸು ಬಾರಿಸುತ್ತಾ ಆ ಜೀವದ ಲಹರಿಯನ್ನು ತನ್ನೊಳಗೆ ಇಳಿಯಬಿಡುತ್ತಾ ಮತ್ತಷ್ಟು ಒಳಗೆಲ್ಲೋ ಹೋವಿನ ತೋಟವನ್ನೇ ಕಟ್ಟುತ್ತಾ..
ಪ್ರೇಮಿಗಳು ಇದು ನಮಗೆ ಗೊತ್ತೇ ಇರಲಿಲ್ಲ ಎನ್ನದಿದ್ದರೆ ಹೇಳಿ ಮತ್ತೆ.
ಎಲ್ಲಿತ್ತು ಪ್ರೀತಿ ಆ ತನಕ?
ಅವನ ಹೃದಯದ ಕವಾಟದಲ್ಲಿ? ಅವಳ ಮನದ ಮೊಗ್ಗಿನೊಳಗೆ ಇನ್ನೂ ಹುಟ್ಟದ ಮಕರಂದದಲ್ಲಿ?
ಆ ಭಾವಯಾನದ ಅನಂತ ದೂರದ ಮಂಜು ಸಿಗಿದು ಬಂದ ಸೂರ್ಯನ ಬೆಳಕಿನ ಹಾದಿಯಲ್ಲಿ ಚಂದಿರನ ಅರಸುತ್ತಾ ಸಾಗುವ ಆ ಪ್ರೇಮಿಗಳಿಗೆ
ಪ್ರೀತಿ ಎಲ್ಲಿ ಹುಟ್ಟಿದರೇನು?ಯಾವ ಹೊತ್ತಿಗೆ ಅವತರಿಸಿದರೇನು?ಎಲ್ಲಿದ್ದರೇನು?
ಏಕೆಂದರೆ ಆ ಪ್ರೇಮಿಗಳಿಗೆ ಪ್ರೀತಿ ಅನುಗ್ರಹ.ಅದು ಅಚಾನಕ.ಅದು ಕಾಲಾಂತರದ ತಪಸ್ಸಿನ ಫಲ.ಅದು ಮನಸ್ಸಿನ ಮುಂಜಾವು.ಅದು ಸಂಜೆಯ ತಂಗಾಳಿ.
ಪ್ರೀತಿ ಅವರಿಗೆ ನಂದಾದೀಪ.
ಆ ನಿರಂತರ ಮಿನುಗುವ ದೀಪದ ಕೆಳಗಿನ ಕತ್ತಲೆ ಅವರಿಗೆ ಅಡಗುದಾಣ.
ಅಲ್ಲಿಯೇ ಅವರ ಮೈಥುನ.