20101222

ನಾಲ್ಕು ಸಾಲು
೧.
ಸೂರ್ಯ ಎಂದೂ ಗೆರೆ ದಾಟುವುದಿಲ್ಲ
ಪ್ರೇಮಿಗಳಿಗೆ ಸೂರ್ಯ ಮಾದರಿಯಾಗಲಿ
ಚಂದಿರನ ಪಯಣದಲ್ಲಿ ಅಮಾವಾಸ್ಯೆ
ಹುಣ್ಣಿಮೆ ಅವರಿಗೆ ದಾರಿ ತೋರಲಿ
ಇದು ಕವಿಯ ಹಾರೈಕೆಯಲ್ಲ
ಸ್ಪಂದಿಸದ ಪ್ರೀತಿಯಿಂದ ನೊಂದ ವಿರಹಿಯ ಅನುಭವ

೨.
ವಿರಹಿ ಕಟ್ಟಿದ ಕೋಟೆಯ ಮೇಲೆ
ಕಾವಲುಗಾರನಿಲ್ಲ
ಏಕೆಂದರೆ
ಆವನ ಸಾಮ್ರಾಜ್ಯ ಬರಿದೋ ಬರಿದು.
ವಿರಹಿಯ ಅರಮನೆಯೊಳಗೆ ಸಿಂಹಾಸನ ಕಾಣೆ
ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ

೩.
ಪ್ರೇಮಿಯ ತೋಟದೊಳಗೆ
ಕೆಂಗುಲಾಬಿ.
ವಿರಹಿಯ ಉದ್ಯಾನದಲ್ಲಿ
ನಿತ್ಯಾರ್ಚನೆ

೪.
ಅವಳೆಂದಳು ಎಲ್ಲಾದರೂ
ಆಪ್ತತೆ ಹುಟ್ಟಿದರೆ ಎಂಬ ಭಯ ನನಗೆ
ಆಮೇಲೆ
ಅವನ ಕಣ್ಣೀರು
ಅವಳ ಮದುವೆಯ ಧಾರೆಯಾಯಿತು

20101220

ಆಪ್ತ ಲಹರಿ

ಮನಸೇ ನೀನೇಕೆ ಅಪರಿಚಿತವಾದೇ?
ಸಂಬಂಧವೇ ಸೀಮೆ ಕಟ್ಟಿಕೊಂಡ ಹಾಗೇ..
ಅದೃಶ್ಯವೇ ಏಕೆ ಅವಳನ್ನು ಕಾಣಿಸಿದೆ?
ಮೌನವೇ ಏಕೆ ಅವಳನ್ನು ನನಗೆ ಮಾತನಾಡಿಸಿದೆ
ಪ್ರೀತಿ ಕೆತ್ತಲಿಲ್ಲ ರೂಪವನ್ನು
ಸ್ಪಂದಿಸಲಿಲ್ಲ ಜೀವ ಈ ನಿರಾಕಾರವನ್ನು
ಕಳಚಿಬಿತ್ತು ಮುಂದಿನ ದೃಶ್ಯ
ಎಳೆಯಲಾಯಿತು ಬಣ್ಣದ ಪರದೆ
ನಾಟಕಕ್ಕೆ ಬರೆದ ಕತೆಯಲ್ಲಿ ಉದುರಿಹೋದವು ಪುಟಗಳು
ಆಹಾ ಕಳೆದುಕೊಳ್ಳುವುದರಲ್ಲೂ ಸುಖವಿದೆಯೇ?
ಆಪ್ತತೆಗೆ ಭಯದ ಬೇಲಿಯೇ?
ಕಾರಣಗಳ ತಡೆಗೋಡೆ ಮೇಲೆ ಬಾಟನಿಯ ಥಿಯರಿ
ಕಾಣದ ಜೀವದೊಳಗೆ ಯಾವುದೋ ಲಹರಿ
ಯಾಕೆ ಹೀಗೆ ಮಾಡಿದೆ ಗೆಳತಿ ನನ್ನ ಎದೆಯೊಳಗೆ
ಉರಿಯುವ ಮೊದಲೇ ಎಣ್ಣೆ ಮುಗಿದ ದೀಪಸಾಲಿನೊಳಗೆ
ಇದು ಜೀವಸಂಬಂಧ ನಿತ್ಯವೂ ಹೊಸತು
ನದಿಯಲ್ಲಿ ಕೊಚ್ಚಿಹೋಗುವ ಮರಕೊರಡು
ನಾಳೆಯೆಂಬುದು ಕಳೆದ ಜೀವ ನನ್ನದು
ಇಂದು ಮತ್ತೆ ಹುಟ್ಟಿದ ನವಭಾವ ನಿನ್ನದು
ಎಂದೂ ಸಿಗಲಾರೆ ನಿನಗೆ ನಾನು
ಏಕೆಂದರೆ ಒಡೆದ ಕೊಳಲು ನಾನು

20101218

ಆ ಬಾಲೆಯ ಹೆಸರು ಮರೆತೇ ಹೋಗಲಿ

ಆಗ ಭೂತ ಕೇಳಿತಂತೆ..ನರಬಲಿ ಬೇಕು ನರಬಲೀ..
ಹಾಗಂತ ಅಜ್ಜಿ ಕಥೆಯನ್ನು ಕ್ಲೈಮಾಕ್ಸ್‌ಗೆ ಎತ್ತಿಕೊಂಡು ಹೋಗುತ್ತಿದ್ದರೆ ನಾವೆಲ್ಲಾ ಆ ಚಿಮಿಣಿ ದೀಪದ ಸಣ್ಣ ಬೆಳಕಿನಲ್ಲಿ ನಮ್ಮನ್ನು ಆವರಿಸಿಕೊಂಡು ಸುತ್ತಲೂ ಹರಡಿದ್ದ ಕತ್ತಲೆಯಿಂದ ತಪ್ಪಿಸಿಕೊಳ್ಳುತ್ತಾ ಅಜ್ಜಿಯ ಸೆರಗಿನೊಳಗೆ ಭದ್ರವಾಗುತ್ತಿದ್ದೆವು.
ಆ ಮಳೆಗಾಲದ ರಭಸಕ್ಕೆ ನಮಗೆ ಯಾವ ಕಥೆ ಹೇಳಿದರೂ ಅಜ್ಜಿಯ ಕಥೆಯಲ್ಲಿ ಒಂದಾದರೂ ರಾಕ್ಷಸ ಬಂದೇ ಬರುತ್ತಾನೆ,ಅವನು ನರಬಲಿ ಕೇಳಿಯೇ ಕೇಳುತ್ತಾನೆ.ಆದರೆ ಒಂದು ಮಾತ್ರಾ ಸತ್ಯ,ಅಜ್ಜಿ ಕೊನೆಗೂ ಯಾವನೋ ಹೀರೋವನ್ನು ಆ ಕಥೆಗೆ ತಂದು ತುರುಕಿ,ನರಬಲಿ ಕೇಳುವ ರಾಕ್ಷಸನನ್ನು ಕೊಂದೇ ಹಾಕುತ್ತಿದ್ದಳು.
ಪ್ರತೀ ಬಾರಿಯೂ ನರರಾಕ್ಷಸ ಅಮಾಯಕ ಕೆಲವರನ್ನು ಮಾತ್ರಾ ತಿಂದೇ ತಿನ್ನುತ್ತಿದ್ದ.ಆದರೆ ಕಥೆಯಲ್ಲಿ ಅವರಿಗೆ ಬಲಿಯಾಗುವುದು ಮಾತ್ರಾ ಬಿಟ್ಟರೆ ಬೇರೇನೂ ಪಾತ್ರಗಳಿಲ್ಲದ ಕಾರಣ ನಮ್ಮ ಮಟ್ಟಿಗೆ ಆ ಬಲಿದಾನ ಎಫೆಕ್ಟ್ ಆಗುತ್ತಿರಲೂ ಇಲ್ಲ.ಯಾವಾಗ ಕಥೆಯ ಪಾತ್ರಗಳ ಮೇಲೆ ನರರಾಕ್ಷಸ ಕಣ್ಣು ಹಾಕಿದನೋ ನಮಗೆ ಭಯ ಶುರುವಾಗುತ್ತಿತ್ತು,ಆಗಲೇ ಆ ಪಾತ್ರಗಳು ನಾವೇ ಆಗುತ್ತಿರುವುದರಿಂದ ಈ ನರರಾಕ್ಷಸ ನರಬಲಿ ಕೇಳುತ್ತಾ ನಮ್ಮ ಬಳಿಯೇ ಬಂದ ಹಾಗಾಗುತ್ತಿತ್ತು.ಕಥೆಯ ಕೊನೆಯಲ್ಲಿ ನರಬಲಿ ಕೇಳಿದ ರಾಕ್ಷಸ ಸತ್ತೇ ಹೋಗುತ್ತಾನೆ ಎಂದು ಪ್ರತೀ ಬಾರಿಯೂ ನಮಗೆ ಗ್ಯಾರಂಟಿ ಇರುತ್ತಿರಲಿಲ್ಲ.ಆದರೆ ನಾವು ಅಜ್ಜಿಯ ಸೆರಗಿನೊಳಗೆ ನಿದ್ದೆಗೆ ಹೋಗುತ್ತಿದ್ದಂತೆ ಅಜ್ಜಿ ನರರಾಕ್ಷಸನನ್ನು ಸಾಯಿಸಿ ನಮ್ಮನ್ನು ಎಲ್ಲಾ ಭೀತಿಗಳಿಂದ ಮುಕ್ತಮಾಡಿ ಸಕ್ಕರೆಯ ನಿದ್ದೆಗೆ ಅಟ್ಟುತ್ತಿದ್ದಳು.
ಇದು ನಿತ್ಯ ಕಥೆ.
ಆಮೇಲೆ ನಾವು ಶಾಲೆಗೆ ಹೋಗಲು ಆರಂಭಿಸಿದರೆ ಮತ್ತೆ ನರಬಲಿ.!
ನಮ್ಮೂರಲ್ಲಿ ನೇತ್ರಾವತಿ ನದಿಗೆ ಸೇತುವೆ ಕಟ್ಟುತ್ತಿದ್ದರು.ಸೇತುವೆ ದೊಡ್ಡದು.ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿತ್ತು,ಸೇತುವೆ ಕೆಲಸ ಪೂರ್ಣವಾಗುವ ಹೊತ್ತಿಗೆ ಅದಕ್ಕೆ ನರಬಲಿ ಕೊಡುತ್ತಾರೆ ಎಂಬ ವ್ಯಾಪಕ ಸುದ್ದಿ ಹರಡಿತು.ಶಾಲೆಯ ಮಕ್ಕಳೇ ನರಬಲಿಗೆ ಬೇಕಂತೆ ಎಂದು ಯಾರು ಗಾಬು ಹಬ್ಬಿಸಿದರೋ ಏನೋ ನಮ್ಮ ಎಲಿಮೆಂಟರಿ ಶಾಲೆಯಲ್ಲಿ ಅರ್ಧಕ್ಕರ್ಧ ಮಕ್ಕಳು ಆಬ್ಸೆಂಟ್.ನಮ್ಮ ಸಂಕಪ್ಪಾ ಗದ್ದಪ್ಪಾ ಮೇಸ್ತರರಿಗೆ ಸಂಕಟ ಹುಟ್ಟಿಕೊಂಡಿತು.ಇದ್ದಕ್ಕಿದ್ದಂತೆ ಶಾಲೆಗೆ ಮಕ್ಕಳು ಬಂಕ್ ಮಾಡುತ್ತಿರುವುದರಿಂದ ತತ್ತರಿಸಿದ ಅವರು ಒಂದೊಂದೇ ಮನೆಗಳಿಗೆ ಹೋಗಿ ವಿಚಾರಿಸುತ್ತಾ ನರಬಲಿಯ ಅವತರಣಿಕೆಯನ್ನು ಕೇಳಿ ಕಂಗಾಲಾದರು.
ಬುದ್ಧಿವಂತರ ಜಿಲ್ಲೆಯಂತೆ ಬುದ್ಧಿವಂತರದ್ದು..ಹೀಗಾ ನಂಬೋದು ಎಂದು ಛೀಮಾರಿ ಹಾಕಿದರು.ಶಾಲೆಯ ಕ್ಯಾಂಪಸ್ಸಿನಲ್ಲಿ ಹೆತ್ತವರ ಮೀಟಿಂಗು ಕರೆದು ನರಬಲಿ ಕೊಡುತ್ತಾರೆ ಎಂಬ ಅಪಪ್ರಚಾರವನ್ನು ಹತ್ತಿಕ್ಕಲು ಮುಂದಾದರು.
ಆಗ ಒಬ್ಬ ಹಿರಿಯರು ಎದ್ದು ನಿಂತು,ಮಾಸ್ಟ್ರೇ..ನಿಮಗೆ ಗೊತ್ತಿಲ್ಲ.ನಾವು ಏನೇ ಹೇಳಿದರೂ ಅವರು ಸೇತುವೆಗೆ ನರಬಲಿ ಕೊಟ್ಟೇ ಕೊಡುತ್ತಾರೆ.ನರಬಲಿಯಾಗದೇ,ಮನುಷ್ಯರ ಬಿಂದು ರಕ್ತ ಬೀಳದೇ ಸೇತುವೆ ನದಿಯ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ ಎಂದುಬಿಟ್ಟರು.ಸಂಕಪ್ಪಾ ಗದ್ದಪ್ಪಾ ಮೇಸ್ಟ್ರಿಗೆ ಪೇಚಾಟವಿಟ್ಟುಕೊಂಡಿತು.ಅವರು ಸೀದಾ ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು.ಹೀಗೀಗೆ,ಅಪಪ್ರಚಾರ ಮಾಡುತ್ತಿದ್ದಾರೆ,ಇದರಿಂದಾಗಿ ಮಕ್ಕಳ ಕಲಿಯುವ ಹಕ್ಕುಗಳು ದಮನವಾಗುತ್ತವೆ ಎಂದು ಪೊಲೀಸರಿಗೂ ಅದರ ಕಾಪಿಯನ್ನು ಶಿಕ್ಷಣ ಇಲಾಖೆಗೂ ಹಾಕಿದರು.
ಆ ವರ್ಷ ಅದೊಂದು ದಿನ ಆ ಸೇತುವೆ ಉದ್ಘಾಟನೆಯಾಯಿತು.ಯಾವುದೋ ಮಂತ್ರಿಮಹಾಶಯ ಬಂದು ಸೇತುವೆಯ ಮೇಲೆ ಕಟ್ಟಿದ್ದ ಟೇಪು ಕತ್ತರಿಸಿದ.ಆ ಉದ್ಘಾಟನೆಯ ಹಿಂದಿನ ರಾತ್ರಿ ಪೇಟೆಯಲ್ಲಿ ಜನಸಂಚಾರವೇ ಇರಲಿಲ್ಲ.ಕಾರಣ ಆ ರಾತ್ರಿಯೇ ನರಬಲಿ ಆಗುತ್ತದೆ ಎಂದು ಎಲ್ಲೆಡೆ ಸುದ್ದಿ ಸುಡುಬಯಲ ಗಾಳಿಯಂತೆ ಹಬ್ಬಿತ್ತು.
ಯಾವಾಗ ಸೇತುವೆ ಉದ್ಘಾಟನೆ ಆಯಿತೋ ಮರುದಿನವೇ ಶಾಲೆಗೆ ಮಕ್ಕಳ ಫುಲ್ ಅಟೆಂಡೆನ್ಸ್.ಸಂಕಪ್ಪಾ ಗದ್ದಪ್ಪಾ ಮೇಸ್ಟ್ರು ಇನ್ನು ಈ ಊರಲ್ಲಿ ಇರಲಾರೆ ಎಂದು ಹೇಳಿ ಆ ವರ್ಷವೇ ಯಾರ್‍ಯಾರದ್ದೋ ಕೈ ಕಾಲು ಹಿಡಿದು ವರ್ಗಾವಣೆ ಮಾಡಿಸಿಕೊಂಡು ಹೋದರು.
ನಾವು ಹೈಸ್ಕೂಲು ಏರುತ್ತಿದ್ದಂತೆ ಯಾರೋ ಕಾರಲ್ಲಿ ಬಂದವರು ಶಾಲೆಗೆ ಹೋಗುತ್ತಿದ್ದ ಮಗುವೊಂದನ್ನು ಎತ್ತಿ ಹಾಕಿಕೊಂಡರಂತೆ ಎಂಬ ಸುದ್ದಿ ಹಬ್ಬಿತು.ಪುಟ್ಟ ಮಗು ಬೀದಿಯಲ್ಲಿ ಹೋಗುತ್ತಿದ್ದಾಗ ನಾಲ್ಕೈದು ಜನರಿದ್ದ ಕಾರು ಬಂದು ನಿಂತಿತಂತೆ.ಕಾರಲ್ಲಿದ್ದವರು ಮಗುವಿಗೆ ಚಾಕಲೇಟ್ ಕೊಟ್ಟರಂತೆ.ಮಗು ಬಾಯಿಗೆ ಹಾಕುತ್ತಿದ್ದಂತೆ ಅದು ಸ್ಮೃತಿ ತಪ್ಪಿ ಬಿದ್ದಿತಂತೆ.ಆ ಕ್ಷಣಕ್ಕೆ ಆ ಮಂದಿ ಮಗುವನ್ನು ಎತ್ತ ಕಾರಲ್ಲಿ ಹಾಕಿಕೊಂಡು ಹೋದರಂತೆ.ಅದೇ ಮಗುವನ್ನು ಕಾಸರಗೋಡಿನಲ್ಲಿ ಕಟ್ಟಲಾಗುತ್ತಿದ್ದ ಏಳು ಮಾಳಿಗೆ ಕಟ್ಟಡಕ್ಕೆ ಬಿಂದು ಕೊಟ್ಟರಂತೆ..
ಶಿವಶಿವಾ..ಎಂದು ಎಲ್ಲರೂ ಬಾಯಿಬಾಯಿ ಬಡಿದುಕೊಂಡರು.
ಆಮೇಲೆ ಮತ್ತೆ ಶಾಲೆಗಳಿಗೆ ಮಕ್ಕಳು ಬರೋದನ್ನೇ ನಿಲ್ಲಿಸಿದರು.ಹೆತ್ತವರೇ ಖುದ್ದಾಗಿ ಶಾಲೆಗೆ ಬಂದು ನಮ್ಮ ಮಕ್ಕಳಿಗೆ ರಕ್ಷಣೆ ಇಲ್ಲದ ಕಾರಣ ನವು ಅವುಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿಯೇ ಹೋದರು.
ನಾವು ದಸರಾ ರಜೆಯಲ್ಲಿ ಕಾಸರಗೋಡಿನ ನಮ್ಮ ಅಕ್ಕನ ಮನೆಗೆ ಹೋಗಿದ್ದಾಗ ಅಕ್ಕ ಒಂದು ಕಥೆ ಹೇಳಿದಳು.ಅದು ಅವರ ಊರಿನಲ್ಲಿ ಆದ ಘಟನೆ. ಅದೇ ಕಥೆ.ಶಾಲೆಗೆ ಹೋಗುತ್ತಿದ್ದ ಮಗು,ಕಾರು,ಚಾಕಲೇಟು,ನರಬಲಿ..ಲೊಕೇಶನ್ ಮಾತ್ರಾ ಛೇಂಜು ಅಷ್ಟೇ.
ಅಜ್ಜಿ ಹೇಳುತ್ತಿದ್ದ ನರರಾಕ್ಷಸ ಇದ್ದಾನೆ ಎಂದು ನನಗೆ ಈ ಶುಕ್ರವಾರದಿಂದ ಖಚಿತವಾಗಿದೆ.ಹಾಗೇ ನಮ್ಮೂರಿನ ನೇತ್ರಾವತಿ ಸೇತುವೆಗೆ ಆ ದಿನ ಖಂಡಿತಾ ನರಬಲಿ ಕೊಟ್ಟಿದ್ದಾರೆ ಎಂದು ನಂಬುತ್ತೇನೆ.ಕಾಸರಗೋಡಿನ ಏಳು ಮಾಳಿಗೆ ಕಟ್ಟಡಕ್ಕೆ ಆ ಪುಟ್ಟ ಮಗುವನ್ನು ಬಿಂದು ಕೊಟ್ಟಿದ್ದಾರೆ ಎಂದೂ ನನಗೆ ನಂಬಿಕೆ ಬಂದಿದೆ.
ಯೆಯ್ಯಾಡಿಯ ಆ ಬಾಲೆ ಎಲ್ಲವನ್ನೂ ಸತ್ಯ ಮಾಡಿದ್ದಾಳೆ.
ದೇವರೇ ಇನ್ನೂ ಈ ಲೋಕದಲ್ಲಿ ಈ ನರರಾಕ್ಷಸರನ್ನು ಉಳಿಸಿಕೊಳ್ಳುವಷ್ಟು ಕೆಟ್ಟವನಾ ನೀನು?
ನನಗೆ ಆ ಬಾಲೆಯ ಹೆಸರು ಬೇಗಬೇಗನೇ ಮರೆತುಹೋಗಲಿ.

20101213

ಯುನಿವರ್ಸಿಟಿ ಹುಡುಗಿಯ ಮನಸ್ಸು

ಯುನಿವರ್ಸಿಟಿ ಹುಡುಗಿ ಎಂದರೆ
ಅದು ವಯಸ್ಸು.
ನಿತ್ಯವೂ ಮುಂಜಾನೆಯಿಂದಲೇ ಏನೋ ಮನಸ್ಸು.
ಮೊನ್ನೆಯಷ್ಟೇ ಮುಗಿದ ಬ್ಯಾಚುಲರ್ರು ಕ್ಲಾಸು
ಮೈ ತುಂಬಾ ನಿಗಿನಿಗಿ
ಕೆಂಡದಂಥ ಕನಸು
ನಾಳೆ ಹುಟ್ಟುವ ಸೂರ್ಯನಿಗೆ
ಅವಳು ಇಂದೇ ಶರಣು
ಆ ಸೂರ್ಯನ ಬೆಳಕಲ್ಲಿ ಕಾಣುವನು ಅವನು
ದೇಹದಂಡನೆಗೆ ಬೇಕು ಯಾವುದೋ ಅಪ್ಪುಗೆ
ಮನಸ್ಸು ತುಂಬಾ ಆಗಷ್ಟೇ ಮುಗಿಸಿದ ಆನ್‌ಲೈನ್‌ಗಳ ಜಡಿಮಳೆ.
ಯುನಿವರ್ಸಿಟಿ ಹುಡುಗಿಗೆ ಬಾಟನಿ ಇಷ್ಟ.
ಮನಸ್ಸಿನ ಲ್ಯಾಬೋರೇಟರಿಯಲ್ಲಿ ಕೆಮೆಸ್ಟ್ರಿ ಸದಾ ಹೃಷ್ಟಪುಷ್ಟ.
ಅರ್ಥವಾಗುವುದಿಲ್ಲ ಇಲ್ಲಿ ಯಾರು ಸರಿ
ಮಾಡಿದ್ದೆಲ್ಲಾ ತಪ್ಪಾದರೆ ಏನು ಗತಿ?
ಯುನಿವರ್ಸಿಟಿ ಹುಡುಗಿಗೆ ಹುಡುಕುತ್ತಿದ್ದಾರೆ ಹುಡುಗನನ್ನು
ಆ ಕಾರಣಕ್ಕೇ ಸಾಕು ಈ ಚಾಟು ಆನ್ಲೈನು.
ಮನಸು ಕಟ್ಟಬೇಕು ಅವನಿಗಾಗಿ
ಇವನಿನ್ನು ಅಪರಿಚಿತ ಸಾಕು ಬರುವ ನಾಳೆಗಾಗಿ
ಹೊಸ ಹಾದಿಯಲ್ಲಿ ಕಾಣಿಸಿದ್ದು ಸ್ವಾತಿಯ ಮಳೆ
ಚಿಪ್ಪೊಳಗೆ ಬೀಳಲಿಲ್ಲ ಅದರ ಹನಿ ಮುತ್ತಾಗುವುದು ಹೇಗೆ?

20101203

ಝೀರೋ ಟ್ರಿಪ್-೭

ದಾಟುವುದು ಎಂದರೆ ಏನು?
ಹಾಗೆಂದು ಕೇಳುತ್ತಿದ್ದಾರೆ ತುಂಬಾ ಜನ.
ಝೀರೋ ಟ್ರಿಪ್ ಆರನೇ ಕಂತು ಓದಿಗೇ ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಹಲವಾರು ಮಂದಿ ಈ ಬಗ್ಗೆ ಇ-ಮೇಲ್ ಮೂಲಕ ನನ್ನ ಬಳಿ ಬಂದಿದ್ದಾರೆ.ಅವರಲ್ಲಿ ಬಹುತೇಕ ಮಂದಿ ಸಾಗರದಾಚೆಯ ದೇಶಗಳ ಜನ.ಆದರೆ ಅವರ ಬೇರು ಇಲ್ಲೇ ಇದೆ.ಅದೂ ಅವರ ಊರಲ್ಲಿ, ಆ ಊರು ಕಟ್ಟಿದ ಸಂಸ್ಕೃತಿಯಲ್ಲಿ.
ಮಂಗಳೂರಿನ ಹುಡುಗಿಯೊಬ್ಬಳು ಚೀನಾದ ಹುಡುಗನನನು ಮದುವೆ ಮಾಡಿಕೊಂಡಿದ್ದಾಳೆ.ಅವಳ ವಯಸ್ಸು ಮೂವತ್ತು ದಾಟಿದಂತಿದೆ.ಆಕೆ ಚೀನಾದ ಹುಡುಗನನ್ನು ವರಿಸಿ ಆರು ವರ್ಷಗಳಾದವಂತೆ.ಬ್ರಾಹ್ಮಣ ಹುಡುಗಿ.ಯಾರನ್ನೂ ಕೇಳಲಿಲ್ಲ.ನನಗೆ ಇಷ್ಟವಾಗಿದ್ದ,ಮದುವೆಯಾದೆ ಅಷ್ಟೇ ಎಂದಳು.ನನಗೆ ಇದು ಸಂಬಂಧಿಸಿದ ವಿಚಾರವೇ ಅಲ್ಲ.ಆದರೆ ಆ ಹುಡುಗಿ ಬಿಡಲ್ಲ.ಅವಳು ಹೇಳುತ್ತಾಳೆ,ಅವಳ ಅಪ್ಪನ ಕಥಾನಕ.
ನೀವೇ ಓದುವಿರಂತೆ.ಅವಳ ಮೇಲ್‌ನ್ನು ಕನ್ನಡಕ್ಕೆ ನನ್ನದೇ ಧಾಟಿಯಲ್ಲಿ ರೂಪಾಂತರಗೊಳಿಸಿದ್ದೇನೆ.ಅವಳು ಬ್ಲಾಗ್ ಪ್ರಿಯೆ.ಕನ್ನಡ ಬ್ಲಾಗ್ ಓದುವುದು ಅವಳ ಬಿಡುವಿನ ಕಾರ್ಯಕ್ರಮವಂತೆ.ನಾನು ಕನ್ನಡ ಓದುಗಳು.ಬರೆಯೋಳಲ್ಲ ಎಂದು ಹೇಳಿದ್ದಾಳೆ.
ಈಗ ಅವಳೇನೆಂದಳು ಎಂಬುದನ್ನು ನೀವೇ ಓದಿ-
"...ನನಗೆ ಅಪ್ಪ ಮುಂಜಾವದಲ್ಲಿ ಎದ್ದು ಹಾಸಿಗೆ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದುದು ನೆನಪಿದೆ.
ಏನು ಮಾಡುತ್ತಿದ್ದೀಯಾ ಅಪ್ಪಾ ಎಂದು ನಾನೆಂದೂ ಕೇಳಿರಲಿಲ್ಲ.ಅಪ್ಪನ ಇಷ್ಟ ಅದು ಎಂದು ಸುಮ್ಮನಿದ್ದೆ.
ಆಮೇಲೆ ಅಪ್ಪ ಒಂದು ಮುಂಜಾನೆಯಿಂದ ಎದ್ದು ಸೀದಾ ಸ್ನಾನಕ್ಕೆ ಹೋಗಲಾರಂಭಿಸಿದ.ನಡುಗುವ ಛಳಿಯಲ್ಲೂ ತಣ್ಣೀರೇ ಬೇಕು ಎಂದು ಸ್ನಾನ ಮಾಡುತ್ತಿದ್ದ.ಇದಾದ ಕೆಲವೇ ವಾರಗಳಲ್ಲಿ ಅಪ್ಪ ದೇವರ ಕೋಣೆಯಲ್ಲಿ ಕಾಣಿಸಲಾರಂಭಿಸಿದ.ವಾರಗಟ್ಟಲೆ ತಪಸ್ಸಿಗೆ ಕೂರುತ್ತಿದ್ದ.ಯಾವ ಯಾವದೋ ಹಬ್ಬದ ದಿನಗಳಲ್ಲಿ ಪರ್ವಕಾಲ ಎಂದು ಮೌನಕ್ಕೆ ಹೋಗುತ್ತಿದ್ದ,ಹಾಗೇ ಮೌನಿಯಾಗಿ ಕಣ್ಣುಮುಚ್ಚಿ ಕುಳಿತ ಎಂದರೆ ಮೂರು ದಿನ ಊಹೂಂ..
ನಾನೊಮ್ಮೆ ಮಾತ್ರಾ ಅಪ್ಪನಲ್ಲೇ ಕೇಳಿದ್ದೆ,ಇದರಿಂದ ಏನು ಸಿಗುತ್ತದೆ?
ಅಪ್ಪ ಹೇಳಿದ್ದ,ನಾನು ದಾಟಬೇಕು ಅಷ್ಟೇ..
ಆಮೇಲೆ ನಾನು ಏನೂ ಕೇಳಲಿಲ್ಲ.ಏಕೆಂದರೆ ನನಗೆ ಏನೂ ಅರ್ಥವಾಗಲಿಲ್ಲ.ನನ್ನ ಅಣ್ಣ ಹೇಳಿದ್ದ,ಅಪ್ಪನಿಗೆ ಹುಚ್ಚು ಶುರುವಾದ ಹಾಗಿದೆ ಎಂದು.ನಾವಿಬ್ಬರೂ ಹೊಟ್ಟೆ ಬಿರಿಯೇ ನಕ್ಕಿದ್ದೆವು.
ಇದೆಲ್ಲಾ ಹಲವು ವರ್ಷಗಳ ಹಿಂದಿನ ಮಾತು.ನನಗೆ ಗೊತ್ತಿದ್ದ ಹಾಗೇ ಅಪ್ಪ ಯಾರಿಗೂ ಮೋಸ ಮಾಡಿರಲಿಲ್ಲ.ತೀರಾ ಪ್ರಾಮಾಣಿಕ.ಸುಳ್ಳು ಹೇಳಿದ್ದು ಕೂಡಾ ನನಗೆ ಗೊತ್ತಿಲ್ಲ.ಎಲ್ಲರನ್ನೂ ಗೌರವಿಸಿಯೇ ಮಾತನಾಡುತ್ತಿದ್ದ.ತುಂಬಾ ಸುಮಧುರ ನಡವಳಿಕೆ.ನನಗೆ ಅನೇಕ ಬಾರಿ ಮುಜುಗರ ಎನಿಸುವಷ್ಟು ಸರಳಜೀವಿಯಾಗಿದ್ದ ನನ್ನಪ್ಪ.ಧ್ಯಾನದ ಖಯಾಲಿ ಬಿಟ್ಟರೆ ಅವನಿಗೆ ಗೊತ್ತಿದ್ದುದು ಕೇವಲ ದುಡಿಮೆ.ಅದೆಷ್ಟು ಭಯಂಕರವಾಗಿ ದುಡಿಯುತ್ತಿದ್ದ ಎಂದರೆ ಯಾಕೆ ದುಡಿಯಬೇಕು ಇನ್ನೂ ಎಂದು ಕೇಳಿದ್ದೆ,ಅದಕ್ಕೆ ಇದು ನನ್ನ ದೇಹದ ಕರ್ತವ್ಯ ಎಂದಷ್ಟೇ ಹೇಳಿದ್ದ.
ನಾನು ಊರು ಬಿಟ್ಟೆ.ದೇಶವೂ ಬಿಟ್ಟೆ.ಅಪ್ಪ ಒಂದು ದಿನ ಖಿನ್ನತೆಗೆ ಬಿದ್ದ ಎಂಬ ಸುದ್ದಿ ಸಿಕ್ಕಿತು.ಓಡೋಡಿ ಮನೆಗೆ ಬಂದಿದ್ದೆ.ಕುರ್ಚಿಯಲ್ಲಿ ಜೊಲ್ಲು ಸುರಿಸುತ್ತಾ ಕುಳಿತಿದ್ದ ಅಪ್ಪನನ್ನು ಕಂಡು ಭಯವಾಯಿತು.ನಾನು ಏನೇನೋ ಮಾತನಾಡಿಸಿದೆ,ಸಮಾಧಾನಿಸಿದೆ.ಕೌನ್ಸಿಲಿಂಗ್ ಮಾಡಿಸಿದೆ.ಕಾರಲ್ಲಿ ಕೂರಿಸಿ ಊರೂರು ಅಲೆದಾಡಿಸಿದೆ.ಅಪ್ಪ ಬದಲಾಗಲಿಲ್ಲ.
ನಾನು ವಾಪಾಸ್ಸು ಕೆಲಸಕ್ಕೆ ಹೋದೆ.ದೇಶ ಬಿಟ್ಟು ಬಂದೆ.ಮೂರನೇ ತಿಂಗಳಿಗೆ ಆ ಒಂದು ರಾತ್ರಿ ಅಣ್ಣನ ಕರೆ ಬಂತು,ಅಪ್ಪ ನೇಣು ಹಾಕಿಕೊಂಡ!
ನನ್ನ ಅಪ್ಪ ದಾಟಿದನೇ?"
ಹೀಗಂತ ಆ ಮಂಗಳೂರಿನ ಹುಡುಗಿ ಕೇಳಿದ್ದಾಳೆ.
ನಾನು ಏನು ಹೇಳಬೇಕು?

20101202

ಝೀರೋ ಟ್ರಿಪ್-೬

ಮನಸ್ಸು ಮತ್ತು ದೇಹವನ್ನು ತ್ಯಜಿಸಿ ಸಾಗುವ ಆ ಘಳಿಗೆ ಅಪೂರ್ವ.ಇದು ಸಂಭವಿಸಲೇಬೇಕು ಎಂದೇನಿಲ್ಲ.ಒಮ್ಮೊಮ್ಮೆ ಮನಸ್ಸು ಮರಳಿ ಬಂದೀತು.ಕೆಲವೊಮ್ಮೆ ದೇಹದ ಮಮಕಾರ ಉಂಟಾದೀತು.
ಆದರೆ ಎರಡನ್ನೂ ದಾಟುವುದು ಅಗತ್ಯ.
ಹಾಗೊಮ್ಮೆ ದಾಟಲಾಗದೇ ಇದ್ದರೆ?
ಝೀರೋಟ್ರಿಪ್ ವಿಫಲವಾಯಿತು ಎಂದರ್ಥ.
ಪ್ರತೀ ಬಾರಿ ರಾಕೆಟ್ ಉಡಾವಣೆ ಯಶಸ್ಸು ಆಗುವುದೇ?ಅನೇಕ ಬಾರಿ ಅದೂ ವಿಫಲವಾಗಿ ಎಲ್ಲಿ ಮುಟ್ಟಬೇಕೋ ಅಲ್ಲಿಗೆ ತಲುಪದೇ ಎಲ್ಲಿಗೋ ಹೋಗಿ ಬಿದ್ದು ಬೂದಿಯಾಗುವುದಿಲ್ಲವೇ?
ಹಾಗೇ,ಝೀರೋಟ್ರಿಪ್‌ನಲ್ಲಿ ಕೂಡಾ ಉಡಾವಣೆ ವಿಫಲವಾಗಬಹುದು.ರಾಕೆಟ್ ಲಾಂಚ್‌ಗೂ ಝೀರೋಟ್ರಿಪ್‌ಗೂ ಒಂದು ಅಸಾಮಾನ್ಯ ವ್ಯತ್ಯಾಸವಿದೆ.
ರಾಕೆಟ್ ಉಡ್ಡಯನಕ್ಕೆ ಒಂದು ಗುರಿ ಅಂತ ಇರುತ್ತದೆ.ಆದರೆ ಝೀರೋಟ್ರಿಪ್‌ಗೆ ಗುರಿಯೇ ಇಲ್ಲ.ಅದು ಇಂಥ ಕಡೆಗೆ ಅಂತ ತೀರ್ಮಾನಿಸಿದ ನಡೆಯಲ್ಲ.ಅದೊಂದು ಪಯಣ.ಯಾವುದೋ ಹಾದಿ,ಎಲ್ಲಿಗೋ ಪಯಣ.ಇಲ್ಲಿಂದ ಎಂಬುದಿಲ್ಲ ಇಂಥ ಕಡೆಗೆ ನಿಗದಿಯಿಲ್ಲ.ಎಲ್ಲಿಂದಲೂ ಹೊರಡಬಹುದು ಎಲ್ಲಿಗೂ ತಲುಪಬಹುದು.
ಇದು ವಿಚಿತ್ರ ಎಂದು ನೀವಂದರೆ ನಾನು ಏನೂ ಮಾಡುವ ಹಾಗಿಲ್ಲ.
ಧ್ಯಾನದಲ್ಲಿ ಹಾಗಿಲ್ಲ.ಅಲ್ಲಿ ಕನಿಷ್ಠ ಭಗವಂತನಾದರೂ ಇದ್ದಾನೆ.ಅವನೇ ಅಂತಿಮ ಗುರಿ.ಅವನನ್ನು ತಲುಪುವುದು ಧ್ಯಾನದ ಅಲಿಮೇಟಂ.
ಆದರೆ ಝೀರೋಟ್ರಿಪ್‌ನಲ್ಲಿ ಭಗವಂತ ಕೂಡಾ ಆಬ್ಸೆಂಟ್ ಎಂದಳು ಸ್ಯಾಂಡಿ.
ಇಲ್ಲಿ ದೇವರು ಕೂಡಾ ಇರುವುದಿಲ್ಲ.ದೇವರೆಂಬ ನಂಬಿಕೆ ಯಾವಾಗ ಬೇಕು ಎಂದರೆ ಯಾವುದೋ ಒಂದು ರೀಚ್‌ನ ಉದ್ದೇಶ ಇದ್ದರೆ ಮಾತ್ರಾ.ಆದರೆ ಝೀರೋಟ್ರಿಪ್‌ನಲ್ಲಿ ಎಲ್ಲಾ ಮುಕ್ತ ಮುಕ್ತ.ಇದು ನಿರಾಕಾರಣ ಮತ್ತು ನಿರಾಕರಣ.
ಕಾರಣವೇ ಇಲ್ಲದ ಮತ್ತು ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ.ಮನಸ್ಸೇ ಇಲ್ಲ,ದೇಹವೂ ಕಳಚಿಕೊಂಡಿದೆ ಎಂದರೆ ಮತ್ತೆಲ್ಲಿದೆ ಕಾರ್ಯಕಾರಣ?
ಏನ್ ಸ್ವಾಮೀ?ಥೇಟ್ ಸಾವಿನ ಬಗ್ಗೆ ಮಾತನಾಡುತ್ತಿದ್ದೀರಿ.. ಎಂದು ಬ್ಲಾಗ್ ಓದಿದ ಲಾಸ್‌ಏಂಜಲೀಸ್‌ನ ಗೆಳೆಯ ವಿಜ್ಞಾನಿ ರಾಜರಾಮ ಭಟ್ಟ ಮೇಲ್ ಹಾಕಿದ್ದಾರೆ.
ನಾನು ರಾಜಾರಾಮ್‌ಗೆ ಉತ್ತರಿಸಿಲ್ಲ.ಸ್ಯಾಂಡಿಯ ಮೇಲ್ ಐಡಿ ಕಳುಹಿಸಿದ್ದೇನೆ.ನನಗೆ ಇದು ಕೇವಲ ಅಚ್ಚರಿ ಮತ್ತು ವಿಚಿತ್ರ ತರ್ಕಗಳನ್ನು ಮಾತ್ರಾ ಹುಟ್ಟಿಸುತ್ತಿದೆ.ನಾನು ಈ ತನಕ ಏನು ಕೇಳಿದ್ದೇನೋ,ಏನನ್ನೂ ಬಯಸಿದ್ದೇನೋ ಅವುಗಳೆಲ್ಲಾ ಝೀರೋ ಟ್ರಿಪ್‌ನ ಈ ಕಥಾನಕವನ್ನು ತಿರುವುತ್ತಾ ತಿರುವುತ್ತಾ ಹೋದಂತೆ ಕಂಪನಗಳನ್ನು ಮೂಡಿಸಿದೆ.
ಸ್ಯಾಂಡಿ ಹೇಳುತ್ತಾಳೆ,ದಾಟಬೇಕು ಎಂಬುದು ಎಲ್ಲರಿಗೂ ಇದೆ.
ಆದರೆ ಪ್ರಶ್ನೆ ಎಂದರೆ ಯಾವಾಗ ದಾಟುವುದು ಮತ್ತು ಎಲ್ಲಿ ದಾಟುವುದು ಎಂಬುದು ಮಾತ್ರಾ.
ಅರ್ಥವಾಯಿತು ಎಂದೆ.
ಬಾಲ್ಯದಲ್ಲಿ ನೇತ್ರಾವತಿ ನದಿ ಎದುರು ನಿಂತು ಅಜ್ಜನ ಮನೆಗೆ ಹೋಗಲು ಕಾಯುತ್ತಿದ್ದ ಚಿತ್ರ ನೆನಪಾಗುತ್ತದೆ.ತುಂಬಿ ಹರಿಯುವ ಹೊಳೆ.ದಾಟಬೇಕೆಂಬ ಹಂಬಲ.ಆದರೆ ದಾಟಲಾರೆವು.ಒಂದೊಮ್ಮೆ ದಾಟಿದರೂ ಕೊಚ್ಚಿಹೋಗುತ್ತೇವೆ.ಅದೇ ನೇತ್ರಾವತಿ.ಅದೇ ಹರಿವು.ಸಾವಿರ ಸಾವಿರ ವರ್ಷಗಳಿಂದ ಆಹ್ವಾನಿಸುತ್ತಿದೆ.ಬಾ ಎನ್ನ ದಾಟು..
ನೇತ್ರಾವತಿ ಅದೇ ಅದಾಗಿ ರುದ್ರವಲ್ಲ.ಅದರಲ್ಲಿ ಸಂಭವಿಸುತ್ತಿರುವ ಹರಿವು ಮಾತ್ರಾ ಸವಾಲು.
ಈ ಸವಾಲಿಗೆ ಒಡ್ಡಿಕೊಳ್ಳಲಾರೆವು.ಏಕೆಂದರೆ ಕೊಚ್ಚಿಹೋಗುವ ಆತಂಕ.ಭಯ.ಹೆದರಿಕೆ.
ಹಾಗೆಂದರೆ ಏನು?
ಇಲ್ಲವಾಗುವ ಅಂಜಿಕೆ.
ಏಕೆ ಉಳಿಯಬೇಕು ಎಂದರೆ ನಾವು ಹೊರಟದ್ದು ನೇತ್ರಾವತಿಯ ಆ ದಂಡೆಯಲ್ಲಿರುವ ನಮ್ಮ ಅಜ್ಜನ ಮನೆಗೆ.ಅಲ್ಲಿ ಅಜ್ಜಿ ಈ ಧಾರಾಕಾರ ಮಳೆಗೆ ಸಿದ್ಧ ಮಾಡಿದ ಶ್ಯಾವಿಗೆ ಪಾಯಸ ಮತ್ತು ಗೆಣಸಲೆ ತಿನ್ನಲಿಕ್ಕೆ.
ದಾಟಲಾದ ನಮ್ಮನ್ನು ದಾಟಿಸಲು ಅಗೋ ಅಲ್ಲಿ ಬರುತ್ತಿರುವುದು ದೋಣಿ.ಕುಂಜೀರ ಅಂತ ಅದರ ನಾವಿಕ.ಅವನ ಸುಕ್ಕುಗಟ್ಟಿದ ಮೈ,ಎಂದೂ ಒಗೆಯದ ವಸ್ತ್ರ,ಕಮಟು ವಾಸನೆ.ದೋಣಿಯೊಳಗೆ ಕೊಳೆತ ಮೀನಿನ ವಾಸನೆ..ಎಲ್ಲವೂ ಮರೆತು ಸಾಗುತ್ತಿದ್ದೇವೆ,ಆ ದಡದಾಚೆಗೆ..
ಯಾವುದೇ ಕ್ಷಣಕ್ಕೆ ಈ ದೋಣಿ ಸುಳಿಗೆ ಸಿಕ್ಕಿ ಸೀದುಹೋಗಬಹುದು.ದೊಡ್ಡ ನೀರಿನ ಓಘ ಇಡೀ ದೋಣಿಯನ್ನು ಮೂರಾಬಟ್ಟೆ ಮಾಡಬಹುದು.ಆದರೆ ಅದು ಸಂಭವಿಸುವುದೇ ಇಲ್ಲ ಎಂದು ನಾವು ನಂಬಿದ್ದೇವೆ.ಅಥವಾ ಅಂಥಹುದನ್ನು ಮರೆತಿದ್ದೇವೆ.ಏಕೆಂದರೆ ನಮಗೆ ಅಜ್ಜಿ ಮಾಡಿಟ್ಟ ಶ್ಯಾವಿಗೆ ಪಾಯಸ ಮತ್ತು ಗೆಣಸಲೆಯ ನೆನಪು.ಅಥವಾ ಅಜ್ಜಿಯ ಪ್ರೀತಿ ಎಂಬ ಸಾನ್ನಿಧ್ಯದ ತವಕ.
ದಾಟುವ ಮತ್ತು ದಾಟಿಸುವ ಅಥವಾ ದಾಟಿದ್ದೇವೆ ಎಂದುಕೊಳ್ಳುವ ನಮಗೆ ಕುಂಜೀರನ ದೋಣಿ ಬಾರದೇ ಇದ್ದರೆ ಏನಾಗಬೇಕು?
ಝೀರೋಟ್ರಿಪ್ ಇಲ್ಲಿಂದಲೇ ಆರಂಭವಾಗಲಿ ಎಂದುಕೊಳ್ಳುತ್ತೇನೆ..
ಸ್ಯಾಂಡಿ ಬಿಜಿ ಇರಬೇಕು ಇಂದೂ ಮೇಲ್ ಬಂದಿಲ್ಲ.