20101128

ಝೀರೋಟ್ರಿಪ್-೫

ಸ್ಯಾಂಡಿ ಕೇಳುತ್ತಿದ್ದಾಳೆ ನಿನಗಿದು ಸಾಧ್ಯವೇ?
ಮರೆತೇ ಬಿಟ್ಟಿದ್ದೆ.
ನನ್ನ ಬ್ಲಾಗ್ ಲಿಂಕ್ ಅವಳ ಬಳಿ ಇದೆ.ಅದಕ್ಕೆ ಅವಳು ಅದನ್ನು ಮೊನ್ನೆ ಶುಕ್ರವಾರ ನೋಡಿದಳಂತೆ.ಒಂದು ಇಂಗ್ಲಿಷ್ ಪದವೂ ಇಲ್ಲ.ಏನೂಂತ ಓದಲಿ ಎಂದು ಗುರ್ರ್ ಎಂದಳು.ಝೀರೋಟ್ರಿಪ್ ಬಗ್ಗೆ ಅಷ್ಟೂ ಕಳುಹಿಸಿದ್ದೆ.ನೀನು ಪಾಪಿ ನಾಲ್ಕು ಕಂತು ಮಾತ್ರಾ ಬರೆದ ಹಾಗಿದೆ.ನಿನಗೆ ಅದನ್ನು ಓದುವ ಆಸಕ್ತಿ ಇಲ್ಲ.ಬಹುಶಃ ನೀನು ಭಾರತೀಯ,ನೀನು ಬ್ರಾಹ್ಮಣ.ನಿನ್ನ ಬುದ್ಧಿಯೇ ಅದು.ಮೊದಲಾಗಿ ಸಿಕ್ಕಾಪಟ್ಟೆ ಆಸಕ್ತಿ ತೋರುತ್ತೀರಿ.ಆಮೇಲೆ ಇದೋ ನಮ್ಮ ವೇದಪುರಾಣಗಳಲ್ಲಿ ಬೇಕಾದಷ್ಟಿದೆ ಎಂದು ಹೇಳುತ್ತೀರಿ.ನನಗೆ ಬೇಕಿತ್ತಾ ಎಂದು ಖತಿ ಮಾಡಿದ್ದಾಳೆ.
ಅರೆ,ಈ ಹುಡುಗಿಗೆ ಈ ಬಾಹ್ಮಣ ಎಂಬುದು ಎಲ್ಲಿ ಸಿಕ್ತು ಎಂದು ಅಚ್ಚರಿಯಾಯಿತು.ಜಿ-ಟಾಕ್‌ಲ್ಲಿ ನೇರವಾಗಿ ಕೇಳಿದ್ದೂ ಆಯಿತು.ಅವಳಿದ್ದ ಆ ಹೋಟೇಲ್‌ನಲ್ಲಿ ಸುಳ್ಯದ ಬ್ರಾಹ್ಮಣನೊಬ್ಬ ಕೆಲಸಕ್ಕಿದ್ದಾನೆ.ಹಾಗೊಬ್ಬ ಇದ್ದ ನೋಡ್ರೀ ಅಂತ ಎಸ್.ಎಂ.ಕೃಷ್ಣ ಅವರ ಆಪ್ತಕಾರ್ಯದರ್ಶಿ ರಾಘವೇಂದ್ರ ಶಾಸ್ತ್ರಿ ಮರಳಿ ನಾವು ಭಾರತಕ್ಕೆ ವಿಮಾನದಲ್ಲಿ ಹಾರಿ ಬರುತ್ತಿದ್ದಾಗ ಹೇಳಿದ್ದರು.ಅವರನ್ನು ನೀವೂ ಭೇಟಿಯಾಗಬಹುದಿತ್ತು.ಆದರೆ ನಿಮಗೆ ಅವರನ್ನು ಪರಿಚಯಿಸಲು ಆಗಲಿಲ್ಲ ನೋಡಿ ಎಂದಿದ್ದರು.
ಸ್ಯಾಂಡಿಗೆ ಭಾರತ ಗೊತ್ತು.ಬ್ರಾಹ್ಮಣರೂ ಗೊತ್ತು ಎಂದಾಯಿತು.
ನಾನು ಬರೆದ ಬ್ಲಾಗ್‌ನ್ನು ಈ ಸುಳ್ಯದ ಬ್ರಾಹ್ಮಣ ವಟುಗೆ ಈ ಸ್ಯಾಂಡಿ ತೋರಿಸಿದ್ದಾಳೆ.ಆ ಕಳ್ಳಭಟ್ಟ ನಾನು ಏನು ಬರೆದಿದ್ದೇನೆ ಮತ್ತು ಎಷ್ಟು ಬರೆದಿದ್ದೇನೆ ಎಂಬುದನ್ನು ಆಕೆಗೆ ಸವಿಸ್ತಾರವಾಗಿ ಹೇಳಿದ್ದಾನೆ.ಇದು ನನ್ನ ಊಹೆ ಮಾತ್ರಾ.
ಏನೇ ಆಗಲಿ ಸ್ಯಾಂಡಿಯನ್ನು ಸಮಾಧಾನ ಮಾಡಿದ್ದೇನೆ.ಕೆಲಸದ ಒತ್ತಡ ಇತ್ತು.ಊರಲ್ಲಿ ಬೇಕಬಿಟ್ಟಿ ಮಳೆ.ತೋಟ ಎಕ್ಕುಟ್ಟಿ ಹೋಗಿದೆ.ಬೆಳೆ ಬಿದ್ದಿದೆ.ನಷ್ಟದಲ್ಲಿ ಒದ್ದಾಡುತ್ತಿದ್ದೇನೆ ಎಂದೆ.
ಇದೇ ಸಮಯ ಎಂದಳು.
ಯಾವುದಕ್ಕೆ ಎಂದೆ,
ಝೀರೋಟ್ರಿಪ್ ಗೆ ..
ಮತ್ತೆ ನಿನ್ನ ಕಿತಾಬಿನಲ್ಲಿ ಮನಸ್ಸು ಮುದ್ದಾಂ ಪ್ರಸನ್ನ ವಾಗಿರಬೇಕು ಎಂಬ ಶರತ್ತಿದೆ ಎಂದೆ.
ಇಂಥ ಸಂಕಟದ ಸಮಯದಲ್ಲೇ ನಿನ್ನ ಮನಸ್ಸನ್ನು ಏನೂ ಆಗಿಲ್ಲ ಎಂಬ ಹಾಗೇ ಮಾಡಿಟ್ಟುಕೊಳ್ಳಬೇಕು ಬಾಯ್ ಎಂದಳು.
ಹಾಗೆಂದರೆ?
ಏನೇನೋ ಆಗಿಹೋಗುತ್ತದೆ..ಏನೂ ಆಗಿಲ್ಲ ಎಂಬಂತಿರಬೇಕು.
ತೀರಾ ಹತ್ತಿರದವರು ಕಂಡೂ ಕಾಣದಂತೆ ಮಾಡಿದಾಗ ನೋವಾಗುತ್ತದೆ.ಎಲ್ಲಿ ತಪ್ಪಿತು ಎಂದು ಮನಸ್ಸು ಹಿಂಬಾಲಿಸುತ್ತದೆ.ಆ ರಾತ್ರಿ ನಿದ್ದೆ ಕೂಡಾ ಪದೇ ಪದೇ ಕಟ್.ಮರುದಿನ ಎದ್ದು ಕುಳಿತರೆ ಅಯ್ಯೋ ಇನ್ನೂ ಒಂದಿನ ಬಂತೇ ಎನ್ನುತ್ತದೆ.ಈ ರೀತಿ ಬಗೆಬಗೆಯ ಕಾರಣಕ್ಕೆ ರಾತ್ರಿ ಸಂಕಟಪಡುತ್ತೇವೆ.
ಬ್ಯಾಂಕು ಸಾಲ,ಪಾತ್ರರ ಅಗಲಿಕೆ,ಅವಮಾನ,ಅಸಹಕಾರ,ನೋವು,ಒತ್ತಡ,ಟೆನ್ಶನ್ ಏನೇನೋ ಕಾರಣಕ್ಕೆ ನಮ್ಮ ಮನಸ್ಸು ಸುಲಭದಲ್ಲೇ ಸಿಕ್ಕಿಬೀಳುತ್ತದೆ.
ಹಾಗಾಗದಂತೆ ಮಾಡಲಾಗದೇ?
ಸುಲಭ.ನಿನ್ನ ಮನಸ್ಸನ್ನು ನೀನೇ ಆಳಬೇಕು.ಮನಸ್ಸು ನಿನ್ನನ್ನಲ್ಲ.
ಅದು ಹೇಗೆ?
ಹೇಗಂದರೆ ನೀನು ಬೇರೆ,ನಿನ್ನ ಮನಸ್ಸು ಬೇರೆ.ಅದು ಪರಕೀಯ.ಎಲ್ಲಿಂದಲೋ ಬಂದು ನಿನ್ನ ಜೊತೆ ಸೇರಿಕೊಂಡದ್ದು ಅದು.ಅದು ನೀನಲ್ಲ.ನೀನು ಅದಲ್ಲ.ಏಕೆಂದರೆ ನೀನು ಎಂಬ ನೀನು ನೀನೇ ಅಲ್ಲವಲ್ಲಾ?
ನೀನು ನೀನೇ ಅಲ್ಲದ ಮೇಲೆ ಮತ್ತೇನು?
ನಿನಗೆ ಸಂಬಂಧಿಸಿದ್ದು ಇಲ್ಲಿ ಯಾವುದೂ ಆಗುತ್ತಿಲ್ಲ.
ನಿನ್ನ ಗೆಳತಿ ಅಂತ ಇದ್ದವಳು ನಿನ್ನವಳಲ್ಲ.ಅವಳು ನಿನ್ನ ಮನಸ್ಸಿನ ಜೊತೆಗೆ ಬಂದವಳು.ಅವಳನ್ನು ಒಳಗಿಟ್ಟುಕೊಳ್ಳಬೇಡ.
ಇದು ತೀರಾ ಪಿರ್ಕಿ ಎಂದು ನನಗೆ ಅನಿಸಿ ಭಯವಾಯಿತು.ನಮ್ಮ ಕಡೆ ಹೇಳುತ್ತಾರಲ್ಲ,ತಲೆಬುಡ ಇಲ್ಲದ್ದು ಎಂದು,ಅದೇ ಇದು ಎಂದನಿಸಿತು.
ಆದರೆ ಸ್ಯಾಂಡಿಯ ಝೀರೋಟ್ರಿಪ್ ಹಾದಿ ತುಂಬಾ ಸುಂದರವಾಗಿದೆ.
ಯಾವಾಗ ನನಗೆ ಹಾಗನಿಸಿತೋ,ಮುಂದಿನ ಪುಟದಲ್ಲಿ ಅದೇ ಇದೆ.
ಬೇಸರ ಬಂತೇ?ಇದು ಆಗೋಹೋಗೋ ಸಂಗತಿಯಲ್ಲ ಎಂದನಿಸಿತೇ?ಹಾಗೇ ಆನಿಸುವುದೇ ಸರಿ.ಏಕೆಂದರೆ ನೀನು ಈ ತನಕ ಸಾಗಿ ಬಂದ ಹಾದಿಯೇ ಅದು.ನಾನು ನನ್ನ ದೇಹ,ನನ್ನ ಮನಸ್ಸು..ಮನಸ್ಸು ಮತ್ತು ದೇಹಗಳನ್ನು ಕಟ್ಟಿಕೊಂಡು,ಅವುಗಳೆಂದಂತೆ ಸಾಗುತ್ತಾ ಬಂದ ನೀನು ಈಗ ಅವುಗಳೆಂಬುದೇ ಇಲ್ಲ ಎಂದರೆ ಹೇಗೆ ನಂಬುವೆ?ನಿನ್ನ ಈ ಸುಂದರ ದೇಹದಲ್ಲಿ ಅದೆಷ್ಟು ಸುಖಾನುಭವಗಳು ಬಂದು ಬೀಳುತ್ತಿವೆ.ನಿನ್ನ ಆ ಮನಸ್ಸೆಂಬ ಮಯಾಜಾಲದಲ್ಲಿ ಅದೆಂಥಾ ಸುಖ ವೈವಿಧ್ಯಗಳು ಸುಳಿದಾಡುತ್ತಿವೆ.
ಅವಳ ಮೇಲು,ಅವನ ಮೆಸೇಜು,ಆಕೆಯ ಕುಡಿನೋಟ,ಆತನ ಸತ್ಕಾರ,ಆ ಪರಿಯ ಬಹುಮಾನ ಎಲ್ಲಾ ಸಿಕ್ಕಿ ಸಂಭ್ರಮಿಸುವ ನಿನಗೆ ಅದೆಲ್ಲಾ ದಾಟಿ ಹೋಗೋಣ ಎಂದರೆ ನಂಬಲಾಗುವುದೇ?ಪಥ್ಯ ಎನಿಸುವುದೇ?
ಕಷ್ಟವೂ ಇಲ್ಲ,ಸುಖವೂ ಇಲ್ಲದ ಪಯಣ ಇದು..ಇದರಲ್ಲಿ ಸ್ಫರ್ಧಿಸಬೇಕಾದರೆ ತುಂಬಾ ಕೆಲಸವಿದೆ.
ಯಾಕೋ ಶರೀಫರ ಮಾತು ನೆನಪಾಗುತ್ತಿದೆ,
ಇದ್ದು ಇಲ್ಲೇ ಭವಕೇ ಬೀಳೋ..

20101126

ಹೀಗಾಯ್ತು ಪ್ರೇಮ ಸಮಾಧಿ
ಅವನಿಗೆ ಗೊತ್ತಿಲ್ಲ ಹೊಸ ಹಾಡು.
ಅವಳ ಬಳಿ ಇರುವುದು ಹಳೇ ಜಾಡು.
ಅವನೆಂದ ಯಾವ ರಾಗ?
ಅವಳೆಂದಳು ಬರೆಯೋ ಬೇಗ..
ಹಾಗೇ ಅವನು ಕವಿಯಾದ
ಪದಗಳ ಮನೆಗೆ ಹೋದ
ಒಂದೊಂದು ಪದಗಳನ್ನು ಪರಿಪರಿಯಾಗಿ ಕಾಡಿದ
ಅವುಗಳ ಬಳಿ ಅವಳನ್ನು ತೋಡಿದ
ಪದಗಳೆಂದವು
ಹುಡುಗಾ,ನಾವು ಕಾಲಾನುಕಾಲದಲ್ಲಿ ಹೀಗೆ ಇದ್ದೇವೆ
ಅದೇ ರೂಪ.ಅದೇ ಜೀವ,ಅದೇ ಧ್ವನಿ, ಅದೇ ನಿನಾದ
ಕವಿಗಳೆಲ್ಲಾ ಬಂದು ನೋಡುತ್ತಾರೆ,
ಮುಟ್ಟಿ ತಡವುತ್ತಾರೆ,
ಎತ್ತಿ ಮುದ್ದಾಡುತ್ತಾರೆ
ಹಿತವಾಗಿ ಅಪ್ಪಿಕೊಂಡು ನರಳುತ್ತಾರೆ
ಆಮೇಲೆ ಅವರ ಜೊತೆ ನಮ್ಮ ಸರಸ
ಸುಖ ಮಿಲನ,ಶೃತಿ ಮೀರಿದ ಮೈಥುನ
ನೀನೂ ಅದೇ ಹುಡುಗಾ..
ಹುಡುಗನಿಗೆ ರೋಮಾಂಚನ
ಪದಗಳ ಮನೆಯಲ್ಲಿ ಭೂರಿಬೋಜನ
ಒಂದೊಂದು ಪದಗಳೂ ಅವನ ಮನದನ್ನೆಯರು,
ಕೃಷ್ಣ ಮತ್ತು ಹದಿನಾರು ಸಾವಿರ ನಾರಿಯರು.
ಹುಡುಗ ಪದಗಳ ಮನೆಯಿಂದ ಹೊರಟ
ಜಿಗಿದು ಕುಪ್ಪಳಿಸಿ ಕುಣಿದು ಚಿಮ್ಮಿದ.
ಆಮೇಲೆ ಅವನ ಹುಡುಗಿಗೆ ಕಾದ
ಮೈಯೆಲ್ಲಾ ಪದಗಳ ಚುಂಬನದಿಂದ ನಳನಳಿಸಿದ.
ಅವಳು ಬರಲಿಲ್ಲ.
ಅವನು ಬರೆಯಲಿಲ್ಲ.

20101120

ಬಾನು ಪ್ರೀತಿಸಿದ ಚಿಗುರು ಭೂಮಿಗೆ
ಎತ್ತರದ ಮರ.
ಕಣ್ಣುಹಾಯಿಸಿದಷ್ಟೂ ದೂರ.
ಅದರ ಮೇಲೊಂದು ಚಿಗುರು
ಅದು ತುಂಬಾ ಹಸುರು.
ಚಿಗುರಿಗೆ ಹತ್ತಿರ ಬಾನು
ಭೂಮಿ ತುಂಬಾ ದೂರ
ಚಿಗುರು ನೋಡಿದ ಬಾನಿಗೆ ಅದೊಂದು ದಿನ ಪ್ರೇಮ ಉಕ್ಕಿತು.
ಏಯ್..ನೀನ್ಯಾಕೋ ನಂಗಿಷ್ಟ ಕಣೇ ಎಂದಿತು.
ಚಿಗುರು ನಳನಳಿಸಿತು.ನಾಚಿ ಹಂದಾಡಿತು.
ಬಾನೆಂದಿತು ಎದ್ದು ಬಾ ನನ್ನ ಜೊತೆ,ಬೀಸುವ ಗಾಳಿಯ ಕಳುಹುವೆ ನಿನ್ನ ಕರೆದು ತರಲು
ಚಿಗುರು ಹೇಳಿತು,
ಹೇಗೆ ಬರಲಿ ಅಲ್ಲಿಗೆ,
ನನ್ನ ಹಾದಿ ಭೂಮಿಗೆ.
ನಿನ್ನ ಮುದ್ದಾಡುವೆ,ನಿನ್ನ ಕಾಪಾಡುವೆ,ನಿನ್ನ ಜೊತೆಗೂಡಿ ರಮಿಸುವೆ,ನನ್ನ ಜೊತೆಗೆ ನಿನ್ನ ಇಡುವೆ
ಎಂದು ಬಾನು ಚಿಗುರಿಗೆ ಕರೆಯಿತು.
ಚಿಗುರು ಕೇಳಿತು
ಬಾನೇ ಹೇಳು
ನಿನಗೆಲ್ಲಿದೆ ಮೈ?
ನಿನಗೆಲ್ಲಿದೆ ಆ ವಿಶಾಲ ಎದೆ?
ನಿನಗೆಲ್ಲಿದೆ ಆ ಕೋಮಲ ವಾಸನೆ ?
ನೀನು ಎಷ್ಟಿರುವೆ,ಎಲ್ಲಿರುವೆ ಹೇಳು?
ನಿನಗೆಲ್ಲಿದೆ ಅಂತ್ಯ?
ನಿನಗೆಲ್ಲಿದೆ ಆರಂಭ?
ಇಷ್ಟಕ್ಕೂ ನೀನೇ ಇಲ್ಲ..
ಭೂಮಿಯಲ್ಲಿದೆ ಈ ಎಲ್ಲಾ..
ಬಾನೇ ಕ್ಷಮಿಸು,ನಿನ್ನವಳಾಗಲು ನಾನು ಒಲ್ಲೆ
ನನ್ನಂಥ ಪುಟ್ಟ ಚಿಗುರು ಆಗಲಾರಳು ನಿನ್ನ ನಲ್ಲೆ
ಬಿಟ್ಟುಬಿಡು ನನ್ನ
ಬೀಸಿ ಕಳುಹಬೇಡ ಆ ಗಾಳಿಯನ್ನ
ಬಾನೇ ನೀನು ನೀಲಿ,ನಾನೋ ಹಸಿರು
ನಿನ್ನ ನಿಲುಕಿಗೆ ತಾರೆಗಳ ಕೇಳು
ಚುಕ್ಕಿಚಿತ್ತಾರಗಳ ಜೊತೆ ಬಾಳು
ಬಾನು ದುಃಖಿಸಿತು,
ಎಲೆ ಚಿಗುರೇ
ಚಂದಿರನ ದೂಡುವೆ,ನಕ್ಷತ್ರಗಳ ಉದುರಿಸುವೆ,ಸೂರ್ಯನನ್ನೇ ದಬ್ಬುವೆ,ಒಡೆದು ಚೂರಾಗಿ ಬೀಳುವೆ..
ನನಗೆ ನೀನು ಮಾತ್ರಾ ಬೇಕು
ಮಿಂಚಾಗಿ ಝಳಪುವೆ,ಗುಡುಗಾಗಿ ಕೂಗುವೆ,
ಮಳೆಯಾಗಿ ಅತ್ತುಬಿಡುವೆ,
ನನ್ನವಳಾಗು..
ಚಿಗುರು ಎಲೆಯಾಯಿತು,ಎಲೆಯ ಸೆರೆಯಲ್ಲಿ ಮೊಗ್ಗಾಯಿತು,ಮೊಗ್ಗೊಡೆದು ಹೂವರಳಿತು,ಹೂವಲ್ಲಿ ಹೀಚು
ಆಮೇಲೆ ಕಾಯಿ,ಹಣ್ಣು ತುಂಬಿ ಮಾಗಿತು.
ಆಮೇಲೆ ಆ ಒಂದಾನೊಂದು ಕಾಲದ ಚಿಗುರನ್ನು ಭೂಮಿ ಮೈದಡವಿ ತನ್ನೊಳಗೆ ಹೊದ್ದುಕೊಂಡಿತು.

20101117

ನಾಲ್ಕು ಸಾಲುಜೀವನದ ಗುಟ್ಟೇನು
ಎಂದು
ಭೂಮಿಯನ್ನು ಕೇಳಿದೆ
ನನ್ನ ವಾಸನೆ
ಎಂದಿತು.

ಜೀವನದ ಹುಡುಕಾಟವೇನು
ಎಂದು
ಗಾಳಿಯನ್ನು ಕೇಳಿದೆ
ನನ್ನ ಸ್ಪರ್ಶ
ಎಂದಿತು.

ಜೀವನದ ಸಂಭ್ರಮವೇನು
ಎಂದು
ನದಿಯನ್ನು ಕೇಳಿದೆ
ನನ್ನ ನಿನಾದವೆಂದಿತು

ಜೀವನದ ಕೊನೆಯೇನು
ಎಂದು
ಬೆಂಕಿಯನ್ನು ಕೇಳಿದೆ
ನನಗೆ ಗೊತ್ತಿಲ್ಲ
ಆದರೆ
ನೀನು ಭೂಮಿ,ಗಾಳಿ ಮತ್ತು ನೀರಿನಿಂದ ದಾಟಿ ಬರಬೇಕು
ಎಂದಿತು
ನಾನೀಗ ಅದೃಶ್ಯದಲ್ಲಿ ಲೀನ

20101106

ಝೀರೋ ಟ್ರಿಪ್-೪

ಸುಂದರ ಮನಸ್ಸು. ಸಂತುಷ್ಟ ಲಹರಿ.ಎಲ್ಲವನ್ನೂ ಕಟ್ಟಿಕೊಂಡು ಹೊರಟು ನಿಲ್ಲಬೇಕು.
ಈ ಕ್ಷಣಕ್ಕೆ ನೀವು ಯಾರೂ ಅಲ್ಲ.
ನೀವೊಬ್ಬರೇ ನೀವು.
ಹಾಗೂ ಅದು ನೀವೇ ಅಲ್ಲ.
ಒಳಗೆ ಇಳಿಯಿರಿ.ನಿಮ್ಮ ಬಗ್ಗೆ ನೀವೇ ಕೇಳಿಕೊಳ್ಳಿ.
ಯಾರು ನಾನು?
ನಾನೇಕೆ ಇಲ್ಲಿ ನಿಂತಿದ್ದೇನೆ.ಇದೇಕೆ ನಾನು ಹೀಗೆ ನಡೆಯುತ್ತಿದ್ದೇನೆ?
ನಿಮ್ಮ ಮೈ ಕೈ ನೋಡಿಕೊಳ್ಳಿ.ಇದು ಏನಿದು?
ನಿಮ್ಮ ಇಡೀ ದೇಹವನ್ನೊಮ್ಮೆ ಅವಲೋಕಿಸಿ.
ಇದೇನು ಶರೀರವಾ?ಇದು ನನ್ನದಾ?ನನ್ನದು ಎನ್ನಲು ನಾನು ಯಾರು?ನಾನು ಯಾರೆಂದು ಕೇಳಲು ನಾನು ಯಾರು?
ಯಾರು ನಾನು?
ಮತ್ತೆ ಮತ್ತೆ ಕೇಳುತ್ತಾ ಕೇಳುತ್ತಾ ನಿಮ್ಮನ್ನು ನೀವೇ ಕಳೆದುಕೊಳ್ಳಿರಿ.
ನಾನೇಕೆ ಹೀಗೆ ಕೇಳಿಕೊಳ್ಳುತ್ತಿದ್ದೇನೆ?
ಏನಾಗಿದೆ ನನಗೆ?
ನೀವು ನಿನ್ನೆ ಮಾಡಿದ ಲಂಚ್ ಅಥವಾ ಹೀರಿದ ಒಂದು ಕಪ್ಪು ಕಾಫಿ ಬಗ್ಗೆ ಕೇಳಿಕೊಳ್ಳಿ.
ನಾನೇಕೆ ಅದನ್ನು ತೆಗೆದುಕೊಂಡೆ?ಅದನ್ನೇ ಏಕೆ ತೆಗೆದುಕೊಂಡೆ?
ನನಗೆ ಹಸಿವೆ ಆಗಿತ್ತು.
ಹೌದಾ?ಹಸಿವು ಎಂದರೆ ಏನು?ಅದು ಏಕೆ ಆಗಬೇಕು?ಹಾಗೇ ಆದ ಅನುಭವ ನಿನ್ನದಲ್ಲ ತಾನೇ?ಅದು ನಿನ್ನ ಶರೀರದ್ದು.ಆ ಶರೀರವನ್ನೇ ಬಿಟ್ಟಾಕು.
ಆಗಲಿ ಒಂದೊಮ್ಮೆ ಹಸಿವೆಯೇ ಆತು,ಅದರಿಂದ ಶರೀರ ಬೀಳುತ್ತದೆ,ಬೀಳಬಾರದು ಎಂದೇ ನಿನಗಿದ್ದರೆ ನೀನೇಕೆ ಲಂಚ್ ಮಾಡಬೇಕು?
ಹುಲ್ಲು ತಿನ್ನಬಹುದಿತ್ತು ಅಲ್ಲವೇ?
ನಿನ್ನ ಶರೀರ ಏಕೆ ಹುಲ್ಲನ್ನು ತಿನ್ನಲ್ಲ?
ಗಟಾರದ ನೀರೂ ಕುಡಿಯಬಹುದಿತ್ತಲ್ಲ.
ಮಿನರಲ್ ವಾಟರ್‌ನ್ನೇ ಏಕೆ ಕುಡಿದೆ?
ಶರೀರಕ್ಕೆ ರೋಗ ಬರಬಹುದು ಎಂಬ ಹೆದರಿಕೆಯೇ?
ರೋಗ ಬರಲಿ ಏನಂತೆ?ಜ್ವರದಿಂದ ದೇಹ ಕುದಿಯಲಿ.ಅದು ಹಿಡಿತ ತಪ್ಪಿ ಅಡ್ಡಾದಿಡ್ಡಿ ಬೀಳಲಿ.ಏನಂತೆ.
ಶರೀರ ಇದು ಏಕೆ ಇದೆ?
ಇದನ್ನು ನಾನು ಧರಿಸಿದ್ದೇನೆಯೇ?
ಹೌದೂ ಎಂದಾದರೆ ನಾನು ಎಂಬ ಈ ಧರಿಸಿದ ಪಾತ್ರ ಅದೆಲ್ಲಿದೆ?
ಅದು ಇದೇ ಶರೀರದಲ್ಲಿ ಇರುವುದೇ ಆದರೆ ಅದಕ್ಕೆ ಆಕೃತಿಯಾದರೂ ಏಕೆ ಬೇಕು?
ಹಾಗೇ ಆಕೃತಿಯನ್ನು ಮಾಡಿಕೊಳ್ಳಲು ಆ ತಂತು ಏನದು?
ಅದೊಂದು ಬೆತ್ತಲೆಯಾದ ಸರ್ಗವೇ?ಅಥವಾ ಯಾವುದೋ ಆಸರೆ ಬಯಸುವ ಹಂದಾಟವೇ?
ಅದಕ್ಕೆ ಏಕೆ ಬೇಕು ಶರೀರವೆಂಬ ಆಸರೆ?
ಅದು ಹರಿಯುವ ನದಿಯನ್ನು ಆವರಿಸಿಕೊಳ್ಳಬಹುದಿತ್ತಲ್ಲಾ?ಅಥವಾ ಕಲ್ಲುಬಂಡೆಯನ್ನು ಅಪ್ಪಿಕೊಳ್ಳಬಹುದಿತ್ತಲ್ಲಾ?ಗಾಳಿಯಾಗಬಹುದಿತ್ತು,ಬೆಂಕಿಯಾಗಬಹುದಿತ್ತು.
ಇದೇ ಈ ಖಚಿತ ಶರೀರವೇ ಏಕೆ ಆಯಿತು?
ಇಷ್ಟಕ್ಕೂ ಶರೀರವನ್ನು ನಿರಾಕರಿಸಿದರೆ ನಾನು ಎಂಬ ಆ ನಾನು ಎಲ್ಲಿ ಉಳಿಯುತ್ತೇನೆ?
ಬಿಂದುವಿನಲ್ಲಿ?ಶೂನ್ಯದಲ್ಲಿ?
ಶೂನ್ಯದಲ್ಲಿ ಉಳಿಯುದೇ ಆದರೆ ಈ ಶರೀರವೆಂಬ ಸ್ಥಿತಿ ಏಕಾದರೂ ಬೇಕು?
ಇದನ್ನು ನಿರಾಕರಿಸಿ ಉಳಿಯಬಹುದಲ್ಲವೇ?
ಹಾಗೇ ಇರುವುದಾದರೆ ಈ ಶರೀರ ಸೇರಿ ಪಡೆಯುತ್ತಿರುವುದೆಲ್ಲಾ ಇರುವುದೇ?
ಸಶರೀರ- ಅಶರೀರ..
ಹೋ..
ಇದು ಈ ಎರಡರ ತಾಕಲಾಟ.
ಸಶರೀರಿಯಾಗಿ ಅಶರೀರವಾಗುವುದು.
ಝೀರೋ ಟ್ರಿಪ್ ಗೆ ಇದೇ ಮುನ್ನುಡಿ ಎಂದಳು ಸ್ಯಾಂಡಿ.ಶರೀರ ಧರ್ಮವಿಲ್ಲದೇ ಇರುವುದು ಎಂದು ಆಕೆ ಹೇಳಿದಾಗ ನಾನು ಎಲ್ಲಿದ್ದೇನೆ ಎಂದು ಗೊತ್ತಾಗಲಿಲ್ಲ.
ಝೀರೋ ಟ್ರಿಪ್‌ಗೆ ಹೊರಟ ಹಿಂದಿನ ರಾತ್ರಿ ನಿನ್ನ ಸಂಗಾತಿ ಜೊತೆ ಮಾಡಿದ ಮೈಥುನದ ಅನುಭವವನ್ನು ಅಶರೀರಿಯಾಗಿ ಝೀರೋ ಟ್ರಿಪ್‌ನಲ್ಲೂ ಅನುಭವಿಸಲು ಸಾಧ್ಯ ಎಂಬುದು ಸ್ಯಾಂಡಿಯ ಹೊಸ ಉನ್ಮಾದದ ಹೇಳಿಕೆ.
ಸ್ಯಾಂಡಿ ಎರಡನೇ ಪುಟ ಬಿಡಿಸಿದರೆ ಕೇಳುತ್ತಿದ್ದಾಳೆ,
ನೀನು ಹುಟ್ಟುವ ಮೊದಲು ಎಲ್ಲಿದ್ದೆ?
ಅಮ್ಮನ ಹೊಟ್ಟೆಯಲ್ಲಿ ಎಂದರೆ ನಗುತ್ತಾಳೆ.
ಅದಕ್ಕೂ ಮೊದಲು?
ಅಂದರೆ ನಿನ್ನ ಅಪ್ಪ ಅಮ್ಮ ಮಿಲನವಾಗುವುದಕ್ಕೂ ಮೊದಲು?
ಎಲ್ಲವೂ ಅಚ್ಚರಿ,ಎಲ್ಲವೂ ಅಯೋಮಯ.
ಇದು ತುಂಬಾ ದೊಡ್ಡ ಪುಸ್ತಕ.

20101102

ನನ್ನ ತಿಥಿ

ಯಾರೆಂದರು ನಾನು ನಾನು ಸಾಯುತ್ತೇನೆ ಎಂದು?
ಧಿಕ್ಕಾರವಿರಲಿ ಅವರಿಗೆ.
ನಾನು ಸಾಯುವುದಿಲ್ಲ
ಸಾವು ನನಗೆ ಬರುವುದೂ ಇಲ್ಲ.
ಕುಳಿತಲ್ಲೇ ತೂಕಡಿಸಿ ಒರಗಿದಲ್ಲಿಗೇ ಉಸಿರು ನಿಂತು
ಆಆಆ..ಎಂದಾಕಳಿಸಿದಲ್ಲಿಗೇ ದೇಹ ಬಿದ್ದು ನಿಶ್ಚಲ..
ಅವರಿವರು ಬಂದು ಮನೆಮಂದಿಗೆ ಸಮಾಧಾನ ಹೇಳಿ
ತಲೆಮೇಲೆ ಎರಡಾದ ತೆಂಗಿನಕಾಯಿ
ಒಳಗೆ ತುಪ್ಪದ ನೀಲಾಂಜನ
ಮಲ್ಲಿಗೆಯ ಹಾರ ಸೇವಂತಿಗೆಯ ಭಾರ
ಕೈಮುಗಿದು ನಿಂತ ಅಭಿಮಾನಿ
ನಿನ್ನೆಯಷ್ಟೇ ಮಾತನಾಡಿದ್ದೆ ಎಂದ ಗೆಳೆಯ
ಮುಂಜಾನೆ ಹಾಸಿಗೆಯಲ್ಲಿ ನಕ್ಕಿದ್ದರು ಎಂದ ಹೆಂಡತಿ
ಹೇಗೆ ಮರೆಯಲಿ ನಿನ್ನ ಎಂದ ಆ ದಿನಗಳ ಗೆಳತಿ
ಅಡಳಿತದ ಕೀಲಿಕೈಗೆ ಒಳಗೊಳಗೆ ಸುಖಿಸಿದ ಮಕ್ಕಳು
ಮುಂಜಾನೆ ಇನ್ನೂ ಉರಿಯುತ್ತಿರುವ ಕಾಷ್ಠ
ಬೂದಿಯ ರಾಶಿಯಲ್ಲಿ ಸಿಕ್ಕಿದ ಹೃದಯದ ಕವಚ
ಸೂತಕದ ಶಿಷ್ಟಾಚಾರದಲ್ಲಿ ಕುಟುಂಬಸ್ಥರು
ಒಂದೇ ಗಂಟಿಗೆ ಎಲ್ಲಾ ವಿಮೆ
ಲಕ್ಷಕ್ಕೆ ಸಂದ ಕಂಪನಿಯ ಗೊನೆ..
ಹನ್ನೊಂದನೇ ದಿನಕ್ಕೆ ಉರುಳುವ ಪಿಂಡ
ನಾನೆಂಬ ಪ್ರೇತಸ್ಯಕ್ಕೆ ಗರುಕೆ ತುಳಸೀ ಎಳ್ಳು..
ದಾನ ದಂಡ
ನನ್ನಿಷ್ಟದ ಹೋಳಿಗೆ ಮತ್ತು ಪಾಯಸ
ಅವಲಕ್ಕಿ ಮೇಲೆ ರಸಾಯನದ ಸ್ವಾದಿಷ್ಟ
ಮುಂದಿನ ವರ್ಷಕ್ಕೆ ಸಿಗುವುದಿಲ್ಲ ನನ್ನ ಹುಟ್ಟಿದ ತಾರೀಕು
ಏಕೆಂದರೆ ಉಳಿಯುವುದು ನನ್ನ ತಿಥಿ ವಾರ ನಕ್ಷತ್ರ.
ಇಷ್ಟೆಲ್ಲಾ ಲೆಕ್ಕಕ್ಕೆ ನಾನೇಕೆ ಸಿಗುವೆ?
ನಾನೆಂದೂ ಸಾಯುವುದಿಲ್ಲ
ಕಾರಣವೆಂದರೆ
ನಾನು ಹುಟ್ಟಿಯೇ ಇಲ್ಲ.