20101027

ಝೀರೋ ಟ್ರಿಪ್-೩

ಸುಮ್ಮನೆ ಇರಬೇಕು..ಎಂದಳು ಸ್ಯಾಂಡಿ.
ಅವಳ ಪಿಡಿಎಫ್ ಕಡತ ಓದುವುದೆಂದರೆ ಏಕೋ ಇದು ನನಗೆ ಬೇಡವಾಗಿತ್ತು ಎಂದನಿಸಿದೆ.
ನಿಮ್ಮ ಬಳಿ ಲ್ಯಾಪ್‌ಟಾಪ್ ಇದ್ದರೆ ಮಾತ್ರಾ ಈ ಕಡತ ಬಿಡಿಸಿ ಎಂದು ಅವಳ ತಾಕೀತು.ಏಕೆಂದರೆ ಝೀರೋ ಟ್ರಿಪ್ ಬಗ್ಗೆ ನೀವು ಓದಬೇಕಾದರೂ ಅದೇ ತರಹದ ಮನಸ್ಸು ಹುಟ್ಟಿರಬೇಕು.
ಹೊರಗೆ ವಾಹನದ ಓಟ,ಒಳಗೆ ಮಿಕ್ಸಿಯ ಕಾಟ,ಟೀವಿ ಮೇಲೆ ರಿಯಾಲಿಟಿ ಶೋ..ರಿಂಗಣಿಸಲು ಪುಕ್ಕ ಬಿಚ್ಚಿದ ಸೆಲ್‌ಫೋನ್..
ಇವ್ಯಾವುವೂ ಇರಲೇ ಬಾರದು.
ಸಹಜವಾದ ಒಂದು ಮನಸ್ಸು.
ಮತ್ತು
ಅಷ್ಟೇ ತೀವ್ರ ಮೌನ.
ಈಗ ಆರಂಭಿಸೋಣ ಝೀರೋಟ್ರಿಪ್ ಅಧ್ಯಯನ ಅಂತ ಬಿಡಿಸಿದರೆ ಸ್ಯಾಂಡಿ ಕೆಲವೊಂದು ಶರತ್ತುಗಳನ್ನು ಮುಂದಿಟ್ಟಿದ್ದಾಳೆ.
ನೀವು ಹಗುರವಾಗಿದ್ದೀರಾ?
ಅಂದರೆ?
ನೀವು ನಾಳೆ ಮಾಡಬೇಕಾದ ಕೆಲಸಗಳು,ಇಂದು ಪೂರೈಸಬೇಕಾದ ಕರ್ತವ್ಯಗಳನ್ನು ಮರೆತಿದ್ದೀರಿ ತಾನೇ?
ಹೇಗಮ್ಮಾ ಮರೆಯೋದು ಎಂದು ತಲೆ ತಟ್ಟಿಕೊಂಡಿರಾ?
ಹಾಗಾದರೆ ಬೆಟ್ಟರ್ ಯು ಪೋಸ್ಟ್‌ಪೋನ್ ದ ಟ್ರಿಪ್.
ಇಲ್ಲ ಎಲ್ಲಾ ಮರೆತೇ ಬಂದಿದ್ದೇನೆ.ನಾಳೆಯ ಚಿಂತೆ ನನಗಿಲ್ಲ,ಇಂದಿನ ಕೆಲಸ ಏನೂ ಉಳಿದಿಲ್ಲ.
ಅಯ್ಯಾಯ್ಯಾ..ಹಾಗಂದರೆ ಹೇಗೆ?
ನೀವು ಸೆಲ್‌ಫೋನ್‌ನಲ್ಲಿ ಯಾರದ್ದೋ ಮಿಸ್ಡ್‌ಕಾಲ್ ಇಟ್ಟಕೊಂಡೇ ಟ್ರಿಪ್‌ಗೆ ಹೊರಟಿದ್ದೀರಿ.
ನೋ..ಇಲ್ಲ.ನಾನು ಫೋನ್ ಸ್ವಿಚ್ ಆಫ್ ಮಾಡಿದ್ದೇನೆ ..
ಇಲ್ಲ ಇನ್ನೊಮ್ಮೆ ಯೋಚಿಸಿ..ನಿಮಗೆ ಆ ಒಂದು ನಂಬರ್ ಬಗ್ಗೆ ಮನಸ್ಸು ಉಳಿದಿದೆ.
ಅದು ನಿಮ್ಮ ಮಗಳದ್ದು,ನಿಮ್ಮ ಗೆಳತಿಯದ್ದು,ನಿಮ್ಮ ಗಂಡನದ್ದು,ನಿಮ್ಮ ಪ್ರೀತಿಯ ಜೀವದ್ದು..
ಹೋ ಅದನ್ನೂ..
ಹೌದು,ನೀವು ಅದನ್ನೂ ಮರೆಯಲೇಬೇಕು.
ಅದು ಹೇಗೆ ಸಾಧ್ಯ?ಅದೇನು ಡಿಲೀಟ್ ಮಾಡಿದರೆ ಮನಸ್ಸಿಂದ ಹೊರಟುಹೋಗುತ್ತಾ?
ನಂಬರ್ ಇರಲಿ,ಪೋನೂ ಇರಲಿ, ಆದರೆ ಯಾವ ಕಾಲ್‌ಗಳ ಬಗ್ಗೆ,ಯಾವ ಮೆಸೇಜುಗಳ ಬಗ್ಗೆ,ಇ-ಮೇಲ್‌ಗಳ ಬಗ್ಗೆ,ಫೇಸ್‌ಬುಕ್‌ನ ಚಾಟ್‌ಗಳ ಬಗ್ಗೆ ಯಾವ ನೆನಪೂ ಇರಬಾರದು.
ಇಲ್ಲ ಎಲ್ಲಾ ಮರೆತಿದ್ದೇನೆ.
ಸರಿ
ಹಾಗಾದರೆ ಒಂದು ಟೆಸ್ಟ್ ಮಾಡೋಣವೇ?
ಸರಿಯಮ್ಮಾ ಮಾಡು.
ಅದೇ ಆಕೆಯ/ಆತನ ಆ ಜೀವದ ಜೊತೆ ನೀವು ಹಂಚಿಕೊಂಡ ಆ ಕ್ಷಣವನ್ನು ನೆನಪುಮಾಡಿಕೊಳ್ಳಿ..
ಇಲ್ಲ ನೆನಪಾಗುತ್ತಿಲ್ಲ..
ಅದು ಮಾತು..ಈಗ ನೀವು ಹೊರಡಿ..
ಎಲ್ಲಿಗೆ?
ಝೀರೋಟ್ರಿಪ್‌ಗೆ.
ಎಲ್ಲಾ ಮರೆತಿರೋದು ಸಾಧ್ಯವೇ ಅಂತ ಕೇಳಿದರೆ..ಇದು ಎಲ್ಲವನ್ನೂ ಮರೆಯೋದಲ್ಲ.ಎಲ್ಲವನ್ನೂ ಮರೆತಿರಬೇಕು ಎಂದು ನೆನಪುಮಾಡಿಕೊಳ್ಳುತ್ತಾ ಮರೆಯೋದು..
ಬಾಲ್ಯ,ಬದುಕು,ಕಷ್ಟ,ಸುಖ,ಆತಂಕ,ಸ್ನೇಹ,ವೈರ..
ಬಂದುಹೋದವರು,ಇದ್ದು ಕುಳಿತವರು,ಹೆತ್ತ ಅಪ್ಪ ಅಮ್ಮ, ಹುಟ್ಟಿದ ಮಕ್ಕಳು.ಓಡಿಸುವ ಕಾರು ,ಕಟ್ಟಿಸಿದ ಮನೆ,ಬೆಳೆಸಿದ ತೋಟ,ಬಯಸಿದ ಭವಿಷ್ಯ..
ಎಲ್ಲದಕ್ಕೂ ಒಂದು ಸುತ್ತು ಬಂದು ಹೊರಡಬೇಕು..
ರಬ್ಬಿಶ್ ಎಂದು ಸರ್ರನೇ ಸ್ಕ್ರೋಲ್ ಮಾಡಿದೆ.
ಅಲ್ಲೇ ಒಂದು ಸಾಲು..
ನೀವು ಝೀರೋಟ್ರಿಪ್‌ಗೆ ನಿಮ್ಮವರನ್ನೂ ಕರೆದುಕೊಂಡು ಬರುವಂತಿದೆ.
ಇಲ್ಲ.ಹಾಗೇನಿಲ್ಲ.
ಅದಿಲ್ಲದಿದ್ದರೆ ನಿಮಗೇಕೆ ಈ ಬೇಗುದಿ?
ಯಾರು ಹೇಳಿದರು ಬೇಗುದಿ ಇದೆ ಎಂದು?
ನಿಮ್ಮ ಮನಸ್ಸು.
ನೆವರ್.ನಾನೇನೂ ಹಾಗೇ ಊಹಿಸಿಲ್ಲ.
ಸುಳ್ಳು
ನಿಮಗೆ ಬೋರಾಗಿದೆ.
ಬೋರ್‌ಡಂ ಸಿಂಡ್ರೋಂಗೆ ಝೀರೋಟ್ರಿಪ್ ಪರಿಹಾರವಲ್ಲ.
ಏನೋ ಮನಸ್ಸು ಬೇಜಾರಾಗಿದೆ ಎಂದು ರಿಲಾಕ್ಸ್ ಆಗಲು ಅದೆನೋ ನೂರಾರು ಕೋರ್ಸ್ ಥರ ಇದು ಎಂದುಕೊಂಡಿರಾ?ಇಲ್ಲ ಇಲ್ಲ.ನೀವು ಫ್ರೆಶ್ ಆಗಿದ್ದರೆ,ನೀವು ಫೈನ್ ಆಗಿದ್ದರೆ,ನೀವು ಫುಲ್‌ಖುಶ್ ಆಗಿದ್ದರೆ ಮಾತ್ರಾ ಈ ಟ್ರಿಪ್‌ಗೆ ಬನ್ನಿ.ಇಲ್ಲವಾದರೆ ಪ್ಲೀಸ್ ಗೆಟ್‌ಔಟ್.

20101017

ಝೀರೋ ಟ್ರಿಪ್-೨

ಸ್ಯಾಂಡಿ ಈಸ್ ಬ್ಯಾಕ್.
ಝೀರೋ ಟ್ರಿಪ್ ಬಗ್ಗೆ ಅವಳು ಮತ್ತಷ್ಟು ವಿವರಿಸಿದ್ದಾಳೆ.
ಇದರ ಕಷ್ಟದ ಬಗ್ಗೆ ಝೀರೋ ಟ್ರಿಪ್‌ನ ಮೂಲದಲ್ಲೇ ಉಲ್ಲೇಖಗಳಿವೆ.
ಮೊದಲಾಗಿ ಶೂನ್ಯಕ್ಕೆ ಸಾಗಲು ಬೇಕಾದ ಮನಸ್ಥಿತಿಯೇನು?
ಎಲ್ಲವೂ ಆರಾಮವಾಗಿವೆ.ಬದುಕು ಸುಖವಾಗಿದೆ.ನೆನೆದುದೆಲ್ಲಾ ಸಿಕ್ಕಿವೆ.ಯಾವ ಕಷ್ಟವೂ ಇಲ್ಲ.ಸುಖ ಕಿತ್ತು ತಿನ್ನುವಷ್ಟಿದೆ.ಯಾವ ಕಾರಣಕ್ಕೂ ಬೋರ್ ಹೊಡೆಯುತ್ತಿಲ್ಲ.
ಹಾಗಿದ್ದ ಮೇಲೆ ಇದು ಬೇಕಾ?
ಸುಖ ಪುರುಷರಿಗೆ ಈ ಝೀರೋ ಟ್ರಿಪ್‌ಗೆ ಹೊರಡಲು ಹೇಗಾದರೂ ಸಾಧ್ಯ?
ಇನ್ನು ಟೆನ್ಶ್‌ನ್,ಡಿಪ್ರೆಶನ್,ದೈಹಿಕ ಅನಾರೋಗ್ಯ,ದರಿದ್ರಾವಸ್ಥೆ,ಬಿಪಿ,ಶುಗರ್,ಏಕಾಂಗಿತನ...ಮುಂತಾಗಿ ಸದಾ ಕಷ್ಟವೇ ಮೈವೆತ್ತಮಂದಿಗೆ?
ಝೀರೋ ಟ್ರಿಪ್ ಈ ಇಬ್ಬರಿಗೂ ಅಲ್ಲ.
ಇದಕ್ಕೆ ದೇಹವೆಂಬುದಿಲ್ಲ,ವಯಸ್ಸೆಂಬುದಿಲ್ಲ.ಅಸ್ಥಿತ್ವವೆಂಬುದು ಇಲ್ಲಿ ಗೌಣ.ಸ್ಥಿತಿಯಿಂದ ದಾಟಿ ಹೋಗಲು ಬೇಕಾದುದು ಹದವಾಗಿ ಪಾಕವಿಕ್ಕಿದ್ದಂತಿರುವ ಒಂದು ಮನಸ್ಸು.ದೇಹದಿಂದ ಕಳಚಿಕೊಳ್ಳಬೇಕಾದ ಮನಸ್ಸು.ಈ ಮನಸ್ಸು ಮೆಮೊರಿಗಳನ್ನು ಡಿಲೀಟ್ ಮಾಡಬೇಕು.ತಪ್ಪು ಸರಿಗಳು,ಪಾಪಪುಣ್ಯಗಳು,ದೇವರು ದಿಂಡರು,ಹೆಂಡತಿ/ಗಂಡ ,ಮಕ್ಕಳು,ಆಫೀಸು.ಡ್ಯೂಟಿ..ಯಾವುದೂ ಇಲ್ಲದ ಹಾಗೇ ಮಾಡಿಕೊಳ್ಳಬೇಕು.ಆ ಮನಸ್ಸು ಹುಟ್ಟುವ ತನಕ ಕಾಯಬೇಕು.ಅಂದರೆ ಈಗ ನಿಮ್ಮಲ್ಲಿರುವ ಮನಸ್ಸು ಝೀರೋ ಟ್ರಿಪ್‌ಗೆ ಬರಬಾರದು.ಅದನ್ನು ತೊರೆದುಬಿಡಿ.
ಭಾಪ್ರೇ!ಇದೇನಿದು ಮನಸ್ಸು ತೊರೆಯುವುದು ಎಂದರೆ?ಇದು ಪಕ್ಕಾ ಮೆಂಟ್ಲು ಪಾರ್ಟಿ ಇರಬೇಕು ಎಂದು ಅನಿಸುತ್ತದೆ.ನಿಜ ಒಂಥರಾ ಹಾಗೇನೇ.ಕಳೆದುಕೊಳ್ಳುವುದು ಮತ್ತು ಕಳಚಿಕೊಳ್ಳುವುದು ಮೆಂಟ್ಲಿನ ವಿಚಾರವೇ.ಇದ್ದು ಇಲ್ಲೇ ಇರುವುದು ಸಹಜತೆ.ಇದು ಇಲ್ಲಿಂದ ಹೊರಟು ಹೋಗುವ ವಿಚಾರ.ಆದ್ದರಿಂದ ಇಲ್ಲಿರುವುದೆಲ್ಲಾ ಈ ಪಯಣಕ್ಕೆ ವರ್ಜ್ಯ.ನಾವೆಲ್ಲಾ ಸಹಜತೆಯನ್ನು ಒಪ್ಪಿಕೊಂಡವರು.ಅಸಹಜ ಎಂಬುದು ಅಸಹ್ಯ.ಸೀದಾ ಈಸ್ ರೈಟ್.
ಆದರೆ ಝೀರೋ ಟ್ರಿಪ್‌ಗೆ ರೈಟ್ ಆಗಿರುವುದೇ ರಾಂಗ್.
ಏನಪ್ಪಾ ಇದು?ಸಾಯುವುದು ಅಲ್ಲ ತಾನೇ?
ಇದು ಸುಸೈಡ್ ಮಾಡಲು ಹೋಗುವವರ ಹಾಗೇ ಕಾಣುತ್ತಿದೆ ಎಂದು ಕೇಳಿದರೆ ಆ ಪಾರ್ಟಿ ಈ ಪಯಣಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುತ್ತಾಳೆ ಸ್ಯಾಂಡಿ.
ಶುದ್ಧ ಮನಸ್ಸನ್ನು ಹೊಂದಿ ಅದರಿಂದ ಕಳಚಿಕೊಳ್ಳುವವರು ಮಾತ್ರಾ ಬನ್ನಿ ಎಂಬುದು ಝೀರೋ ಟ್ರಿಪ್ ಕರೆ.ಮನಸ್ಸನ್ನು ಕಳಚಿ ಇಡುವುದು ಎಂದರೆ ನೀವು ನಿಮ್ಮ ಇಷ್ಟದ ಡ್ರೆಸ್‌ನ್ನು ಜೋಪಾನವಾಗಿ ಜತನದಿಂದ ವಾರ್ಡ್‌ರೋಬ್‌ಲ್ಲಿ ಇಟ್ಟ ಹಾಗೇ.
ಸದ್ಯಕ್ಕೆ ಹೊಸ ಲೋಕದತ್ತ ಪಯಣ.ಅದಕ್ಕೆ ಹೊಸತಾದ ಒಂದು ಮನೋ ವೇದಿಕೆ ಬೇಕಪ್ಪಾ ಎನ್ನುತ್ತಾಳೆ ಸ್ಯಾಂಡಿ.
ಇಷ್ಟಕ್ಕೂ ಈ ಪಯಣಕ್ಕೆ ಹೊರಟು ವಾಪಾಸ್ಸು ಬರುವುದುಂಟೋ ಅಂತ ಅನುಮಾನಪಟ್ಟರೆ ನಕ್ಕಿದ್ದಳು ಅವಳು. .ಇದು ಟ್ರಿಪ್ ಕಣೋ.ಟ್ರಿಪ್ ಅಂದರೆ ಎ ಜರ್ನಿ ಆಫ್ ರಿಲೇಟಿವಿಲೀ ಶಾರ್ಟ್ ಡ್ಯುರೇಶನ್,ಎಸ್ಪೆಶಲೀ ಟು ಎ ಪ್ಲೇಸ್ ಆಂಡ್ ಬ್ಯಾಕ್ ಅಗೈನ್..ಎಂದು ಡಿಕ್ಷನರಿ ಅರ್ಥವನ್ನು ತೆಗೆದುತೋರಿಸಿದ್ದಳು.
ಟು॒ ಎ ಪ್ಲೇಸ್!!
ಓಹೋ..ಹಾಗಾದರೆ ಈ ಪಯಣ ಯಾವುದೋ ಒಂದು ಊರಿಗೆ!
ಎಲ್ಲಿದೆ ಆ ಊರು? ಏನಿದೆ ಅಲ್ಲಿ?ಹಾಗೊಂದು ಊರಲ್ಲಿ ಏನು ಸಿಗುತ್ತದೆ?ಯಾರ‍್ಯಾರು ಇದ್ದಾರೆ ಅಲ್ಲಿ? ಎಂದರೆ ಅದೇ ಒಂದು ವಿಸ್ಮಯ ಎಂದಿದ್ದಾಳೆ.
ಮಾತ್ರವಲ್ಲ ಬ್ಯಾಕ್ ಅಗೈನ್ ಅಂದರೆ ಮರಳಿ ಬರುವುದೂ ಖಚಿತವಿದೆ.
ಹಾಗಾದರೆ ಬಚಾವ್..ಮರಳಿ ಬರುವುದಾದರೆ ನಾನೂ ಹೊರಟೆ ಎಂದಿರಾ?
ನೋ.
ಆ ಆಸ್ಥೆ ನಿಮ್ಮಲ್ಲಿ ಇದೆ ಎಂದಾದರೆ ನೀವು ಹೊರಡಲು ಆಗುವುದೇ ಇಲ್ಲ.
ಏಕೆಂದರೆ ಈ ಪಯಣ ಇಲ್ಲಿಂದ ತೊರೆಯಲು ಸಾಧ್ಯವೇ ಇಲ್ಲ ಎಂಬ ಮನೋನಿಷ್ಠೆಗೆ ಸಿಗುವುದೇ ಇಲ್ಲ.
ಎಲ್ಲಾ ಒಕೆ.ಈ ಝೀರೋ ಟ್ರಿಪ್‌ಗೆ ಎಷ್ಟು ಸಮಯ ಬೇಕು?
ಒಂದು ಮಿನಿಟು,ಒಂದು ಗಂಟೆ,ಒಂದು ದಿನ,??
ಸ್ಯಾಂಡಿ ಹೇಳಿಲ್ಲ.

20101014

ಝೀರೋ ಟ್ರಿಪ್

ಏನೂ ಇಲ್ಲದ ಸ್ಥಿತಿ ತಲುಪಲು ನಿರ್ಧರಿಸಿದ್ದೇನೆ.
ವಾನ್ ಟು ಬಿಕಂ ಝೀರೋ..
ಶೂನ್ಯ ಎಂಬುದು ನಮ್ಮ ಎಲ್ಲ ಆರಂಭಗಳ ಅಂತ್ಯ,ಅಥವಾ ಎಲ್ಲಾ ಅಂತ್ಯಗಳ ಆರಂಭ ಎಂದೂ ಹೇಳಬಹುದು.
ಇದು ಅರ್ಥವಾಗಲಿಲ್ಲ ಎಂದುಕೊಂಡರೆ ವಿವರಿಸುತ್ತೇನೆ.
ಮೊದಲಾಗಿ ನಾನು ಎಲ್ಲಿದ್ದೆ?
ಹಾಗೆಂದು ಒಂದು ಏಕಾಂತದಲ್ಲಿ ಕೇಳಿನೋಡಿ.ನೆನಪಿರಲಿ ಆಗ ನೀವು ನಿಮ್ಮನ್ನು ಕಡಿದುಕೊಂಡಿರಬೇಕು.ಏಕಾಂತದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟಬಹುದು.ಗಾಳಿ ಬೀಸಬಹುದು.ನೀರಿನ ನಿನಾದ ಒಕೆ.ಆದರೆ ಯಾವುದೇ ಮಾನವ ನಿರ್ಮಿತ ಶಬ್ದಗಳು ಇರಬಾರದು.ಅಂಥ ಪ್ರದೇಶದಲ್ಲಿ ನೀವು ಇರಬೇಕು.
ಬಹಳ ಹೊತ್ತು ಸುಮ್ಮನೆ ಇರಿ.ಕಣ್ಣು ಮುಚ್ಚಿದರೆ ಇನ್ನೂ ಉತ್ತಮ.ಮೊದಲಾಗಿ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ ಎಂಬುದನ್ನು ಖಚಿತ ಮಾಡಿಕೊಳ್ಳಿ
ಆಗ ಹುಟ್ಟುವ ಮೊದಲ ಪ್ರಶ್ನೆಯೇ ನಾನು ಎಲ್ಲಿದ್ದೆ.ಅದನ್ನು ನೀವು ಕೇಳಿಕೊಳ್ಳುವ ಅಗತ್ಯವೇ ಇಲ್ಲ.ಅದಾಗಿಯೇ ಹುಟ್ಟುತ್ತದೆ.
ಹಾಗೇ ಆ ಪ್ರಶ್ನೆ ಹುಟ್ಟುತ್ತಲೇ ನೀವು ಮೊದಲಾಗಿ ನೆನಪಿಸಿಕೊಳ್ಳಬೇಕಾದುದು ನೀವು ಪ್ರೀತಿಸಿದ ನಿಮ್ಮವಳು/ನು.
ನಿಮ್ಮ ಬದುಕಲ್ಲಿ ಅದೆಷ್ಟು ಮಂದಿಯನ್ನು ನೀವು ಪ್ರೀತಿಸಿದ್ದೀರಿ ಎಂದು ಕೇಳಿಕೊಳ್ಳಿ.
ಒಂದೊಂದಾಗಿ ಒಬ್ಬೊಬ್ಬರಿಂದಲೇ ಕಳೆದುಕೊಳ್ಳುತ್ತಾ ಬನ್ನಿ.ಆಮೇಲೆ ಅಂತಿಮವಾಗಿ ಒಂದು ಜೀವ ನಿಮ್ಮ ಬಳಿ ಉಳಿದೇ ಉಳಿಯುತ್ತದೆ.ಅದು ನೀವು ನಿಜವಾಗಿಯೂ ಪ್ರೀತಿಸಿದ ಜೀವ.
ಆ ಜೀವವನ್ನು ತೊರೆಯುವುದು ಕೊಂಚ ಕಷ್ಟ ಎನಿಸಿದರೆ ಜಸ್ಟ್ ವೈಂಡ್‌ಅಪ್.
ಇನ್ನೊಮ್ಮೆ ನೀವು ಅದೇ ದಿನ ಅಥವಾ ಅದೇ ಗಂಟೆಗೆ ಝೀರೋ ಆಗುವ ಪ್ರಯೋಗ ಆರಂಭಿಸಬಹುದು.ಅದೇ ಸ್ಥಳವೂ ಒಕೆ.
ಮತ್ತೆ ಅದೇ ಪ್ರಯೋಗ.ಈ ಬಾರಿ ನಿಮಗೆ ನಿಮ್ಮನ್ನು ಕಳೆದುಕೊಳ್ಳಲು ತುಂಬಾ ತ್ರಾಸವಾಗಬಹುದು.ಬಹುಶಃ ನೀವು ವಿಫಲರಾಗಿದ್ದೇ ಹೆಚ್ಚು.
ಒಂದೊಮ್ಮೆ ನೀವು ನಿಮ್ಮನ್ನು ಕಳೆದುಕೊಂಡರೆ ಮತ್ತೆ ಅದೇ ಸ್ಥಿತಿಯತ್ತ ಪಯಣಿಸಿ.ಈ ಬಾರಿ ನಿಮ್ಮ ಪ್ರೀತಿಯ ಜೀವ ತಾನೇ ತಾನಾಗಿ ಉದುರಿಹೋಗುತ್ತಿದೆ.
ಮನಸ್ಸು ಮುದುಡುತ್ತದೆ.ಎಲ್ಲೋ ಒಂದು ಆರ್ದ್ರತೆ ಆವರಿಸಿಬಿಡುತ್ತದೆ.
ಅಷ್ಟರಲ್ಲೇ ನೀವು ಬೆತ್ತಲಾಗಬೇಕು.ದೇಹದಿಂದಲ್ಲ,ಮನಸ್ಸಿನಿಂದ.ನೀವು ನಿರ್ವಾಣವಾಗುವುದನ್ನು ನಿಮ್ಮೊಳಗೆ ಆನಂದಿಸುತ್ತಾ ಹೋಗಬೇಕು.ಈ ಕೆಲಸ ಸುರಳೀತವಾಗಿ ಸಾಗುತ್ತದೆ.
ಯಾವಾಗ ನೀವು ಅಂತರ್ಯದಲ್ಲಿ ಬೆತ್ತಲಾದಿರೋ,ಆಗ ಶುರುವಾಗುತ್ತದೆ ನಿಮ್ಮ ದೇಹದ ಕಾರ್ಯಭಾರ.ಅದು ತಾನೇ ತಾನಾಗಿ ಬಿಗುವಾದಂತೆ,ಅಥವಾ ತೀರಾ ಹಗುರವಾದಂತೆ ಆಗಬಹುದು.
ನಿಮ್ಮ ಲೈಂಗಿಕ ವಿಭಾಗದಲ್ಲಿ ಅಚ್ಚರಿಗಳು ಹುಟ್ಟಬಹುದು.ಉದ್ರೇಕವಾಗಬಹುದು.ನೀವು ದ್ರವಿಸಬಹುದು.
ಎಲ್ಲವನ್ನೂ ಒಪ್ಪಿಕೊಳ್ಳಬೇಕು.ಏನೇ ಆದರೂ ವಿಚಲಿತರಾಗಬಾರದು.ಇದೇನಿದು ಹೀಗಾಗುತ್ತಿದೆ ಎಂದು ದುಃಖಿಸಬಾರದು.ಏನೋ ಮಾಡಲು ಹೋಗಿ ಏನೋ ಆಗಿಹೋಯಿತೇ ಎಂದುಕೊಳ್ಳಬಾರದು.
ಒಟ್ಟಾರೆಯಾಗಿ ಕೀಪ್ ಕ್ವೈಟ್.
ನಿಮ್ಮ ದೇಹ ಬಿಗುವಾಗುತ್ತಿದ್ದರೆ ನೀವು ಝೀರೋದತ್ತ ಪಯಣ ಆರಂಭಿಸಿದ್ದೀರಿ ಎಂದರ್ಥ.ಆದರೆ ನಿಮ್ಮ ದಾಟುವಿಕೆ ಮಾತ್ರಾ ಎಲ್ಲೋ ನಿಲ್ಲುತ್ತದೆ ಎಂಬುದು ಅದರ ಸೂಚನೆ.ನಿಮ್ಮ ದೇಹ ಹಗುರವಾಗುತ್ತಿದೆ ಎಂದಾದರೆ ನೀವು ಶೂನ್ಯದತ್ತ ಸುಲಭದಲ್ಲೇ ಸಾಗುತ್ತಿದ್ದೀರಿ ಎಂದರ್ಥ,ಆದರೆ ಯಾವುದೇ ಕ್ಷಣಕ್ಕೆ ನೀವು ಬ್ಯಾಕ್ ಟು ಪೆವಿಲಿಯನ್ ಆಗಬಹುದು.
ಏನೇ ಆಗಲಿ ನಿಮ್ಮ ಪಯಣ ಆರಂಭವಾಗಲಿ.ನೀವೀಗ ಬೆತ್ತಲಾಗಿದ್ದೀರಿ.ಒಮ್ಮೆ ನಿಮ್ಮ ಅಂಗಾಗಳನ್ನು ನೋಡಿಕೊಳ್ಳಿ.ನಿಮ್ಮ ಕಾಲಿನ ಕಿರುಬೆರಳನ್ನು ನೀವು ಯಾವತ್ತಾದರೂ ಪ್ರೀತಿಸಿದ್ದೀರಾ ಎಂದು ಪರೀಕ್ಷಿಸಿ.ನೀವದರ ಉಗುರು ಕೀಳುವಾಗ?ಬಣ್ಣ ಹಚ್ಚುವಾಗ?
ಹಾಗೇ ಒಂದೊಂದೇ ಅಂಗಾಗಳನ್ನು ಪರೀಕ್ಷಿಸುತ್ತಾ ಅದು ನಿಮ್ಮಲ್ಲಿ ಯಾವ್ಯಾವ ರೀತಿಯಲ್ಲಿ ಯಾವ್ಯಾವಾಗೆಲ್ಲಾ ಇದ್ದು ನಿಮ್ಮದಾಗಿತ್ತು ಎಂದು ಕೇಳಿಕೊಳ್ಳಿ.ನೀವೇ ಅದರ ಜೊತೆ ಮಾತನಾಡಿದರೂ ಆಗಬಹುದು.
ಈ ಪಯಣ ಒಂದು ಅನಿರ್ದಿಷ್ಟಾವಧಿಯ ಯಾನ.ಆದರೆ ಪಯಣದ ಹಾದಿಯಲ್ಲಿ ನಿಮ್ಮ ದೇಹ ವಿಚಲಿತವಾಗಿದೆ.ಸೊಳ್ಳೆ ಕಚ್ಚಿದೆ.ತೇಗು ಬರುತ್ತಿದೆ.ನೊಣ ಕುಯ್ ಅಂತ ಮೂಗಿನ ಮೇಲೆ ಠಳಾಯಿಸಿದೆ.ನಿಮ್ಮ ಹೊಟ್ಟೆ ಈಗ ಮುಂದಾಗಿ ಬಂದು ನಿಮ್ಮನ್ನು ವಿಚಾರಿಸುತ್ತಿದೆ,ಐ ಮೀನ್ ಹಸಿವು ಅಥವಾ ಬಾಯಾರಿಕೆ ಆಗುತ್ತಿದೆ.ನಿಮಗೆ ಮೂತ್ರ ಬರುತ್ತಿದೆ.
ಕಟ್
ನೀವು ವಾಪಾಸ್ಸು ಬಂದಾಯಿತು.
ಮತ್ತೆ ಹೊರಡಲು ನಿಮ್ಮ ಬಳಿ ಸಿದ್ಧತೆಗಳಿವೆಯೇ ಎಂದು ಪರೀಕ್ಷಿಸಿ.
ಯಾಕೋ ನಿಮಗೆ ಯಾರನ್ನೋ ನೆನಪಾಗುತ್ತಿದೆ.ನಿಮ್ಮ ಕೆಲಸಗಳು ಕಾಡುತ್ತಿವೆ.
ಅಷ್ಟರಲ್ಲೇ ನಿಮಗೆ ಈ ಝೀರೋ ಟ್ರಿಪ್ ಬೋರ್ ಅನಿಸುತ್ತಿದೆ.
ನೀವು ಈ ವಿಚಾರವನ್ನು ಕೈ ಬಿಡುತ್ತೀರಿ.
ಇದು ನಿಜ.ಇದ್ದಕ್ಕಿದ್ದಂತೆ ನಿಮ್ಮ ಪಯಣ ತುಂಡರಿಸಲ್ಪಡುತ್ತದೆ.
ಹಾಗಾದರೆ ಈ ಪಯಣವನ್ನು ಪೂರ್ತಿಗೊಳಿಸುವುದು ಹೇಗೆ?
ಹಾಗಂತ ಸ್ಯಾಂಡಿಗೆ ಮೇಲ್ ಹಾಕಿ ಕೇಳಿದ್ದೇನೆ,ಉತ್ತರ ಬಂದೊಡನೆ ತಿಳಿಸುತ್ತೇನೆ.

--ಇತ್ತೀಚೆಗೆ ಉಜ್ಬೆಕಿಸ್ತಾನಕ್ಕೆ ಹೋಗಿದ್ದಾಗ ಪರಿಚಯವಾದವಳು ಸ್ಯಾಂಡಿ.ನಾವಿದ್ದ ಹೋಟೇಲಿನಲ್ಲಿ ಈಕೆ ರಿಸೆಪ್ಶನಿಸ್ಟ್ ಆಗಿದ್ದಳು.ಇಂಗ್ಲೀಷ್ ಮಾತನಾಡಬಲ್ಲವಳು ಅವಳೊಬ್ಬಳೇ ಆಗಿದ್ದರಿಂದ ಅವಳ ಜೊತೆ ಗಂಟೆಗಟ್ಟಲೆ ಹರಟಿದ್ದೆ.ಆಕೆ ಒಂದು ನವ ಸಿದ್ಧಾಂತದ ಬಗ್ಗೆ ಆಗ ನನಗೆ ಹೇಳಿದ್ದಳು.ನನಗದು ತೀರಾ ಅರ್ಥವಾಗಿರಲಿಲ್ಲ.ಶೂನ್ಯಕ್ಕೆ ಸೇರುವುದು ಅದರ ಥೀಮ್.ನಮ್ಮ ವೇದ ಉಪನಿಷತ್ತುಗಳಲ್ಲಿ ಕೂಡಾ ಈ ವಿಚಾರ ಇರಲೂಬಹುದು,ನಾನು ಆ ಮಟ್ಟಿಗೆ ಅಜ್ಞಾನಿ.
ಆಮೇಲೆ ಸ್ಯಾಂಡಿ ನನ್ನ ಮಿಂಚಂಚೆಯ ಗೆಳತಿಯಾದಳು.ಅವಳ ಜೊತೆ ಆಗಾಗ ಚಾಟ್ ಕೂಡಾ ಮಾಡಲು ಅವಕಾಶ ಸಿಕ್ಕಿದರೆ ನಾನು ಅದೇ ಝೀರೋ ಟ್ರಿಪ್ ಬಗ್ಗೆ ಕೇಳುತ್ತಿದ್ದೆ.ಹಲವು ವಾರಗಳ ಬಳಿಕವಷ್ಟೇ ಆಕೆ ನಾನು ಈ ವಿಚಾರದಲ್ಲಿ ಗಂಭೀರವಾಗಿದ್ದೇನೆ ಎಂದು ಖಚಿತಮಾಡಿಕೊಂಡಳಂತೆ.ನಿನಗೆ ನಿಜಕ್ಕೂ ಆಸಕ್ತಿ ಇದ್ದರೆ ಝೀರೋ ಟ್ರಿಪ್ ಬಗ್ಗೆ ಹೇಳುತ್ತೇನೆ ಎಂದು ಭರವಸೆ ನೀಡಿದಾಕೆ ಮೂರು ತಿಂಗಳು ಕಾಲ ಕಾಯಿಸಿದಳು.ಮೊನ್ನೆ ಆಕೆಯ ಮೇಲ್.ಸುದೀರ್ಘವಾದ ಟಿಪ್ಪಣಿಗಳನ್ನು ಒಳಗೊಂಡ ಕಿತಾಬು ಅದು.ಒಂದೊಂದು ಪುಟಕ್ಕೂ ತತ್ವಾತತ್ವ ಸಂಬಂಧ ಇಲ್ಲ ಎಂಬ ಹಾಗೇ ಅದರಲ್ಲಿ ಉಲ್ಲೇಖಗಳು.
ಎಲ್ಲವೂ ಈ ಪಯಣದಲ್ಲಿ ಪಾಲ್ಗೊಳ್ಳುವವರಿಗೆ ಮಾತ್ರಾ ಎಂಬ ಷರಾ.
ಸ್ಯಾಂಡಿ ಬಳಿ ಕೇಳಿದ್ದೆ,ನಿನಗೆ ಇದನ್ನು ಹೇಳಿದ್ದು ಯಾರು?ಇದೊಂದು ಪಂಥವೇ?ಇದರ ಅಂತಿಮ ನಡೆ ಏನು?
ಸ್ಯಾಂಡಿ ಏನೂ ಹೇಳಿಲ್ಲ.
ಝೀರೋ ಟ್ರಿಪ್ ಮಾಡು ಅರ್ಥವಾಗುತ್ತದೆ ಎಂದಿದ್ದಳು.
ಸ್ಯಾಂಡಿಯ ಅನುಮತಿಯ ಮೇರೆಗೆ ನಿಮ್ಮ ಜೊತೆ ಹಂಚಿಕೊಳ್ಳುತಿದ್ದೇನೆ.
ಹಾಗೇ ನನ್ನ ಬ್ಲಾಗ್‌ನಲ್ಲಿ ಇದನ್ನು ಬರೆದುಬಿಡಲೇ ಎಂದು ಕೇಳಿದ್ದಕ್ಕೆ ಸ್ಯಾಂಡಿ ಏನು ಹೇಳಿದ್ದಳು ಗೊತ್ತೇ?
ಶೂನ್ಯದ ಸವಾರಿ ಯಾರ ಪೇಟೆಂಟೂ ಅಲ್ಲ.
ವೈಟಿಂಗ್ ಫಾರ್ ಹರ್ ಮೇಲ್.

20101011

ನೀವಿದನ್ನು ಓದುತ್ತೀರಾ?

ಕರ್ನಾಟಕದ ಶ್ರೇಷ್ಠ ನಾಯಕರೇ,
ನೀವು ಸರಕಾರ ಕಟ್ಟಿ ಅಥವಾ ಬೀಳಿಸಿ
ನಿಮ್ಮಜ್ಜಿ! ನೀವೇನು ಈ ಕರ್ನಾಟಕವನ್ನು ಕಡಿದು ಗುಡ್ಡೆ ಹಾಕುತ್ತೀರಿ ಎಂದೇನೂ ನಾವು ನಿಮಗೆ ಓಟು ಹಾಕಿದ್ದೇ ಅಲ್ಲ.ಬೇಲಿಗೊಂದು ಗೂಟ ಬೇಕಿತ್ತು,ಅದನ್ನು ಹಾಕಿದ್ದೇವೆ ಅಷ್ಟೇ.
ನಮಗೆ ಗೊತ್ತಿಲ್ಲ ಎಂದುಕೊಂಡಿರಾ?ನೀವು ಅಧಿಕರ ಸಿಕ್ಕ ಕೂಡಲೇ ನಮ್ಮನ್ನು ಕ್ಯಾರೇ ಮಾಡಲ್ಲ.ಈ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಕಾರು ಅಥವಾ ಫ್ರಿಜ್ಜು ಮಾರಾಟ ಮಾಡುತ್ತಾರಲ್ಲಾ,ಅವರ ಬಳಿ ಹೋಗಿ ನಿಂತರೆ ಸಾಕು,ನಮ್ಮ ಕಾಲು ಕೋಲು ಎಲ್ಲಾ ಹೀಡೀತಾರೆ.ಆಮೇಲೆ ನಾವು ಯಾವಾಗ ಅಲ್ಲಿಂದ ಖರೀದಿ ಮಾಡಿ ಅವರು ಕೇಳಿದಷ್ಟು ದುಡ್ಡು ಕೊಟ್ಟು ಹೊರಗೆ ಬೀಳುತ್ತೇವೋ,ಆಮೇಲೆ ಅಂಬಿಗನ ಮಿಂಡ.
ನೀವೂ ಅದೇ ಜನ.
ನಿಮ್ಮ ಬಳಿ ಏನಾದರೂ ಒಂದು ಉಪಕಾರ ಆಗುತ್ತದೆ ಎಂದು ಯಾವನಾದರೂ ಮತದಾರ ನಂಬಿದ್ದಾನೆ ಎಂದು ನೀವು ಅಂದುಕೊಂಡರೆ ಅದು ನಿಮ್ಮ ಭ್ರಮೆ.ಯಾರೂ ನಿಮ್ಮನ್ನು ನಂಬಿ ಬದುಕುತ್ತಿಲ್ಲ.ಆ ಮಟ್ಟಿಗೆ ನೀವು ಧನ್ಯರು.
ನೀವು ಒಂಥರಾ ಕುಂಡೆ ತೂತು ಇದ್ದ ಹಾಗೇ.ಯಾವ ಎಕ್ಸೆಲ್ ಹಾಕಿ ತೊಳೆದರೂ ತೂತು ತೂತೇ.ಹೇಸಿಗೆಯ ವಾಸನೆಯೇ.
ಇರಲಿ,
ನೀವೀಗ ನಮಗೆ ಹೇಳಬೇಕು, ವಾರದಿಂದ ನೀವು ಹೀಗೆ ಹುಚ್ಚು ನಾಯಿ ಥರ ಓಡಾಡುತ್ತಿರಲ್ಲಾ,ಣಿವು ನಮ್ಮ ಅನುಮತಿ ಕೇಳಿದ್ದೀರಾ?ಒಂದು ದಿನ ಕೂಡಾ ನೀವು ಕಛೇರಿ ಕಲೆಸ ಅಂತ ಮಾಡಲಿಲ್ಲ ಅಲ್ವಾ? ಅದೇನು ರಜಾ ಹಾಕಿದ್ದೀರಾ?ಹಾಗೇ ರಜೆ ಹಾಕೋ ಅವಕಾಶ ನಿಮಗೆ ಉಂಟೋ? ಅದೆಲ್ಲಾ ಇಲ್ಲ ಎಂದರೆ ನೀವು ಈ ರೀತಿ ಕೆಲಸ ಮಾಡದೇ ಇರಲು ನಿಮಗೆ ಹೇಳಿದವರು ಯಾರು?
ಕಳೆದ ಒಂದು ವಾರದಿಂದ ನೀವು ಓಡಾಡಿದ ವಿಮಾನದ ಟಿಕೇಟು ದುಡ್ಡು ಎಷ್ಟು?
ನೀವು ವಾಸ ಮಾಡಿದ ಮೂರು ರಾಜ್ಯಗಳ ರೆಸಾರ್ಟ್ ಮತ್ತು ಹೋಟೇಲುಗಳ ಬಿಲ್ಲು ಎಷ್ಟು?
ನೀವು ತಿರುಗಾಡಿದ ಐಷಾರಾಮಿ ಕಾರುಗಳಿಗೆ ಬಾಡಿಗೆ ಕೊಟ್ಟಿದ್ದೀರಾ ಅಥವಾ ಇಂಧನ ತುಂಬಿಸಿದ್ದೀರಾ?ಇಲ್ಲವಾದರೆ ಅದನ್ನು ತುಂಬಿದವರು ಯಾರು?
ನಿಮಗೆ ಈ ದುಡ್ಡು ಕೊಟ್ಟವರು ಯಾರು?ಅದನ್ನು ಕೊಟ್ಟವರಿಗೂ ನಿಮಗೂ ಏನು ಸಂಬಂಧ?ಅವರಿಗೆ ಆ ದುಡ್ಡು ಎಲ್ಲಿಂದ ಬಂತು?
ನಾವು ಎಂದೂ ಲಕ್ಷ ರೂಪಾಯಿ ಕೂಡಾ ಲೆಕ್ಕ ಮಾಡಿಲ್ಲ.ಕೋಟಿ ರೂಪಾಯಿ ನೋಡಿದವರೇ ಅಲ್ಲ.ನಿಮಗೆ ಕೋಟಿ ಗಂಟೆ ಲೆಕ್ಕದಲ್ಲಿ ಇರಬಹುದು,ನಮಗೆ ಮೂರು ತಲೆಮಾರು ದಾಟಿದರೂ ಕಾಣಲೇ ಸಿಗುವುದಿಲ್ಲ.ನಿಮ್ಮ ಶರಟು,ನಿಮ್ಮ ಶೂ,ನಿಮ್ಮ ಕಾರು,ನಿಮ್ಮ ಬಂಗಲೆ,ನಿಮ್ಮ ತಿರುಗಾಟ ನಿಮ್ಮ ಸ್ವಂತದ್ದೇ ಅಲ್ಲ.
ಒಂದು ಲೋಟಾ ಹಾಲು ನಿಮ್ಮ ದುಡಿದ ದುಡ್ಡಿನದ್ದು ಅಂತ ನೀವು ತಂದು ಕುಡಿಯುವುದಿಲ್ಲ.ನಿಮ್ಮ ಮಗಳ ಮದುವೆ ಕೂಡಾ ನೀವು ಅರಮನೆ ಮೈದಾನದಲ್ಲಿ ಮಾಡಿದರೆ ಔತಣದ ಖರ್ಚು ಬಿಡಿ,ಲೈಟ್ ಮತ್ತು ಸೌಂಡ್ಸ್‌ನ ಬಿಲ್ಲು ಕೊಡುವುದು ಇನ್ಯಾರೋ.ದಿನಂಪ್ರತಿ ನಿಮ್ಮ ಮನೆ ಟೀಪಾಯಿ ಮೇಲೆ ಕೂತಿರುತ್ತದಲ್ಲಾ ಆ ದಿನಪತ್ರಿಕೆ,ಅದರ ಬಿಲ್ಲು ಕೊಡುತ್ತೀರಾ ನೀವು?ನೀವು ದಾಡಿ ಬೋಳಿಸಿಕೊಂಡಾಗಲೂ ಕೊಡುವ ಚಿಲ್ಲರೆ ಕಾಸು ನಿಮ್ಮದೇನು?ನೀವು ಹಾಕಿದ ಶರಟು ನಿಮ್ಮ ತಿಂಗಳ ಸಂಬಳದ್ದು ಅಂತ ನಿಮ್ಮ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳಿ ನೋಡೋಣ.
ಎಲ್ಲವೂ ಇನ್ನೊಬ್ಬರ ಕಿಸೆಯಿಂದ ಜಾರಿ ನಿಮ್ಮ ಕಿಸೆಗೆ ಜಮಾ ಆಗಿದೆ ಅಂತ ನಾವು ಹೇಳ್ತೇವೆ,ನೀವು ಇಲ್ಲ ಅಂತ ಹೇಳಿ ನೋಡೋಣ.
ನಿಮ್ಮದೂ ಅಂತ ನಿಮ್ಮ ಬಳಿ ಇರೋದು ನಿಮ್ಮ ಶರೀರ ಮಾತ್ರಾ.
ಅದರೊಳಗೆ ಇರಬಹುದು ಎಂದು ನಾವು ಇನ್ನೂ ನಂಬುತ್ತಿರುವ ಆ ನಿಮ್ಮ ಆತ್ಮಸಾಕ್ಷಿ ಕೂಡಾ ನಿಮ್ಮದಲ್ಲ.

20101006

ನಾಲ್ಕು ಸಾಲು
೧.
ರಾಜಕಾರಣದ ಕೊಡು ಕೊಳ್ಳುವಿಕೆಯಲ್ಲಿ
ಸರಕಾರಗಳು
ಬಂದು ಹೋಗುವವು.
ದೇವರಕೋಣೆಯಲ್ಲಿ ಸಂಜೆ ದೀಪ ಇಟ್ಟು
ತಾಯಿ ಮಗುವಿಗೆ
ಪ್ರಾರ್ಥನೆ ಕಲಿಸುವಳು,
ಆಯುಷ್ಯ ಕೊಡು,ಭವಿಷ್ಯ ಕೊಡು,ವಿದ್ಯೆ ಕೊಡು
ಬುದ್ಧಿ ಕೊಡು.

೨.
ರಾಜ್ಯದ ಕೋಟಿ ಜನರಿಗೆ
ರಾಜಕಾರಣ ಗೊತ್ತಿಲ್ಲ
ನೂರು ಜನ ಮಾತ್ರಾ
ಅದಕ್ಕೇ
ರಾಜರಾಗಿ ಮೆರೆಯುವರು
ಇದು ಪ್ರಜಾಸತ್ತೆಯ ಮರೆವು.

೩.
ಕೋಟಿ ರೂಪಾಯಿ ಕೂಡಾ
ಸಾವನ್ನು ಗೆದ್ದು ಬರುವುದಿಲ್ಲ
ಬದುಕನ್ನು
ಜೂಜಿಗಿಟ್ಟು ರಾಜಕಾರಣಿಗಳು
ಅಸ್ತಂಗತರಾಗುವರು
ಗುಡಿಸಲಿನಲ್ಲಿ ಪ್ರಜೆ ಕೂಡಿಟ್ಟ ನಾಣ್ಯ
ಕರಂಡಕದಲ್ಲಿ ಚಲಾವಣೆ ಇಲ್ಲದೇ
ಬಿದ್ದಿರುವುದು.

೪.
ಅವರಿಬ್ಬರ ಪ್ರೀತಿ
ರಾಜಕೀಯದಿಂದಾಗಿ ಹುಟ್ಟಿದರೆ
ಅವರು
ಪ್ರೇಮಿಗಳಲ್ಲ,
ಏಕೆಂದರೆ
ರಾಜಕೀಯ ಹುಟ್ಟುವುದೇ
ಪ್ರೀತಿಯ ನಾಶದಿಂದ.

20101005

ಕಾಗದದ ಹೂವು
ನನ್ನ ಮನೆ ಎದುರು ಕಾಣುವುದು
ಕಾಗದದ ಹೂವಿನ ಗಿಡ.
ಅಪ್ಪ ತಲೆ ಮೇಲೆ ಹೊತ್ತು ತಂದು ಊರಿದ್ದಾರೆ ಎಂದು ಅಮ್ಮ ಹೇಳಿದ ನೆನಪು.
ಎಂದಾದರೂ ಒಂದು ದಿನ ಈ ಗಿಡದಲ್ಲಿ ಹೂವು ಅರಳುತ್ತದೆ
ಎಂದು ಅಪ್ಪ ಕಾದು ಕಾದು ಸತ್ತುಹೋದ.
ನಿತ್ಯವೂ ಪೂಜೆಗೆ ಈ ಗಿಡದ ಹೂವನ್ನು ಹುಡುಕಿ ಹೋದ ಅಮ್ಮ ಮರಳಿ ಬರುವಾಗ ಗೊಣಗುತ್ತಿದ್ದಳು.
ಕಾಗದದ ಹೂವಿನ ಗಿಡದಲ್ಲಿ ಎಲೆಗಳೇ ಹೂವುಗಳು ಎಂದು ಬಾಟನಿ ಕಲಿತ ನನ್ನಕ್ಕ ಹೇಳುತ್ತಿದ್ದುದು
ನನಗೆ ಅರ್ಥವೇ ಆಗಿರಲಿಲ್ಲ.
ಎಲೆ ಹೂವಾಗುವುದು ಹೇಗೆ ಎಂದು ನಾನು ಕೇಳಿದಾಗಲೆಲ್ಲಾ ಅಕ್ಕ
ಚಿವುಟುತ್ತಿದ್ದಳು,ಪೆದ್ದು ಪೆದ್ದು ಎಂದು ಹುಸಿಹುಸಿಯಾಗಿ ಬೈಯುತ್ತಿದ್ದಳು.
ಕಾಗದದ ಹೂವಿನ ಗಿಡ ನಿತ್ಯವೂ ಬಣ್ಣ ಬಣ್ಣ.
ದುಂಬಿಯೇ ಬಂದೆರಗುತ್ತಿರಲಿಲ್ಲ.
ಹೂವಾಗದೇ ಕಾಯಿ ಕಟ್ಟವುದಿಲ್ಲ ಎಂದು ನನಗೆ ಸಂಗಪ್ಪಗದ್ದಪ್ಪ ಮೇಸ್ತರರು ಹೇಳಿಕೊಟ್ಟಿದ್ದರು.
ನಾನು ಅದನ್ನೊಪ್ಪಲೇ ಬೇಕಿತ್ತು.
ಕಾಗದದ ಹೂವಿನ ಗಿಡದಲ್ಲಿ ಮುಳ್ಳುಗಳೂ ಇದ್ದವು.
ಒಂದೊಂದೂ ಮುಳ್ಳು ಮಹಾ ನಂಜು ಎಂದು ನಮ್ಮ ಕೆಲಸದಾಳು ಪದೇ ಪದೇ ಹೇಳುತ್ತಿದ್ದ.
ಆಮೇಲೆ ಒಂದು ದಿನ ರಾತ್ರಿ ನಮ್ಮ ಮನೆಯ ಎದುರಿನ ಧರೆ ಕುಸಿದು ಬಿತ್ತು.
ಕಾಗದದ ಹೂವಿನ ಗಿಡ ಅದರೊಳಗೆ ಹುದುಗಿಹೋಯ್ತು.
ನನಗೆ ಇನ್ನೂ ಉಳಿದಿರುವ ಪ್ರಶ್ನೆ,
ಕಾಗದದ ಹೂವಿನ ಗಿಡವೇಕೆ ಹೂವು ಅರಳಿಸಲಿಲ್ಲ,
ಅಪ್ಪನ ತಾಳ್ಮೆ,ಅಮ್ಮನ ಸಹನೆ,ಅಕ್ಕನ ಲೆಕ್ಕ,ಕೆಲಸದಾಳಿನ ಭಯ
ನನ್ನ ಪ್ರಶ್ನೆಗೆ ಉತ್ತರವಲ್ಲ.

20101003

COMMON-WEALTHಒಬ್ಬ ಜಮೀನ್ದಾರನಿದ್ದ.ಅವನ ಮಗಳ ಮದುವೆ ನಿರ್ಧಾರವಾಗಿತ್ತು.ಮನೆ ಎದುರು ದೊಡ್ಡದಾದ ಚಪ್ಪ ಹಾಕಿಸಿದ.ಕೊಂಬು ವಾಲಗ ತರಿಸಿದ.ಭೂರಿಬೋಜನಕ್ಕೆ ಸರ್ವ ಸಿದ್ಧತೆಯಾಯಿತು.ದಿಬ್ಬಣವೂ ಬಂತು.
ಅಷ್ಟರಲ್ಲಿ ಯಾರೋ ಹೇಳಿದರು,ಮಜ್ಜಿಗೆ ಇಲ್ಲ.ಜಮೀನ್ದಾರನಿಗೆ ಅದರ ನೆನಪಾದುದೇ ಆಗ.ಏನು ಮಾಡೋಣ ಂದು ಗೊತ್ತಾಗಲಿಲ್ಲ.ಪಕ್ಕದೂರಲ್ಲಿ ಅವನ ಗೆಳೆಯರ ಹತಾರು ಮನೆಗಳಿದ್ದವು.ಅವರ ಬಳಿ ಮಜ್ಜಿಗೆ ಇತ್ತು.ಜಮೀನ್ದಾರ ತನ್ನ ಕೆಲಸದಾಳನ್ನು ಅಲ್ಲಿಗೆ ಅಟ್ಟಿದ.ಗಡಿಗೆ ತುಂಬಾ ಮಜಜಿಗೆ ತರುವಂತೆ ಆಜ್ಞಾಪಿಸಿದ.
ಕೆಲಸದಾಳು ಹಾಗೇ ಮಾಡಿದ.ಮಜ್ಜಿಗೆ ಗಡಿಗೆ ತಲೆ ಮೇಲೆ ಹೊತ್ತು ತಂದೇ ತಂದ.ಚಪ್ಪರದ ಬಳಿ ಬರುತ್ತಲೇ ಆಯ ತಪ್ಪಿ ಬಿದ್ದ.ಮಜ್ಜಿಗೆ ಗಡಿಗೆ ಒಡೆದು ಚೂರಾಯಿತು.
ಜಮೀನ್ದಾರ ಚೀ ಥೂ ಎಂದು ಕೆಲಸದಾಳನ್ನು ವಾಚಾಮಗೋಚರ ಬೈಯಲಾರಂಭಿಸಿದ.
ಕೆಲಸದಾಳು ಇದರಿಂದ ಬೇಸರಗೊಂದು ಯಜಮಾನನಿಗೆ ಆವಾಜ್ ಹಾಕಿದ,ಏನು ಸ್ವಾಮಿ,ನಾನು ಇಷ್ಟು ಕಷ್ಟಪಟ್ಟು ಆ ಊರಿಗೆ ಹೋಗಿ,ಮನೆಮನೆ ತಿರುಗಿ, ಮಜ್ಜಿಗೆ ಹೊತ್ತು ತಂದಿದ್ದೇನೆ,ಅದಕ್ಕೆ ಬೆಲೆಯೇ ಇಲ್ಲವಾ? ಎಂದ.
ಜಮೀನ್ದಾರ ಸುಸ್ತೋ ಸುಸ್ತು.
ಅಣ್ಣಾ ನೀನು ಶ್ರಮಪಟ್ಟು ಮಜ್ಜಿಗೆ ತಂದೆ ನಿಜ,ಆದರೆ ಪ್ರಯೋಜನಕ್ಕೆ ಬಂತಾ?ಎಂದು ಜಮೀನ್ದಾರ ಪ್ರತ್ಯೇಕ ಕೇಳಲಿಲ್ಲ.
ಕಾಮನ್‌ವೆಲ್ತ್‌ಗೇಮ್ಸ್ ಎಂಬ ಈ ಮಹಾ ಆಟೋಟದ ಅಖಾಡದೊಳಗೆ ಭಾರತ ನುಸುಳುವ ಹೊತ್ತಿಗೆ ಈ ಕಥೆ ಏಕೋ ತುಂಬಾ ಸೂಟ್ ಆಗಬಹುದು.
ಇದು ಬೇಕಿತ್ತಾ?
ಹಾಗಂತ ಕೇಳುತ್ತಿದೆ ದೇಶ.
ಕಾಮನ್‌ವೆಲ್ತ್ ಗೇಮ್ಸ್‌ಗೆ ಹೋಸ್ಟ್ ಮಾಡಲು ಹೊರಟು ನಮ್ಮ ದೇಶ ತಾನೇ ಟ್ರಾಕ್‌ನಲ್ಲಿ ಪಲ್ಟಿ ಹೊಡೆದು ಹೊರಬಿದ್ದ ಲಾಸ್ಟ್‌ಮ್ಯಾನ್ ಥರಾ ಆಗಿದೆ.
ಇಷ್ಟಕ್ಕೂ ಇದು ನಮ್ಮ ಸ್ಟೈಲ್‌ಗೆ ಹೇಳಿಸಿದ್ದಾ ಎಂದು ಕೇಳಿದರೆ ನಿಜಕ್ಕೂ ಅಲ್ಲ.ಆದರೆ ಏನು ಮಾಡೋಣ ನಮ್ಮ ಗೆಟ್‌ಅಪ್ ಏನು ಎಂದು ನಾವು ತೋರಿಸಬೇಕಿತ್ತು,ತೋರಿಸುತ್ತಿದ್ದೇವೆ..
ಈಗ್ಗೆ ಏಳು ವರ್ಷಗಳ ಹಿಂದೆ ಬಿಡ್ ಹಾಕಿ ನಾವು ಈ ಗೇಮ್ಸ್ ಪಡೆದುಕೊಂಡಾಗಲೇ ಇದು ನಮ್ಮ ತಾಖತ್ತಿಗೆ ಮೀರಿದ್ದು ಎಂದು ಯಾರಿಗೂ ಅರ್ಥವಾಗಲೇ ಇಲ್ಲ.ಮಾಧ್ಯಮಗಳಿಗೂ ಕೂಡಾ.
ಹೋಗಲಿ ಬಿಡಿ,ಈ ಗೇಮ್ಸ್‌ಗೆ ನಾವು ಅದು ಹೇಗೆ ನಾವು ಸಿದ್ಧರಾಗುತ್ತಿದ್ದೇವೆ ಎಂದು ಅದೇ ದೆಹಲಿಯಲ್ಲಿ ಖಾಯಂ ಬಿಡಾರ ಹೂಡಿದ ಪವರ್‌ಸೆಂಟರ್ ಕೂಡಾ ಕೇಳಲಿಲ್ಲ.
ನಮ್ಮಲ್ಲಿ ಎಷ್ಟೊಂದು ಸಚಿವರಿದ್ದಾರೆ.ಕಾಮನ್‌ವೆಲ್ತ್‌ಗೇಮ್ಸ್ ವಿಚಾರದಲ್ಲಿ ಆಗಬೇಕಾಗಿರುವ ಕೆಲಸ ಪ್ರತಿ ಒಬ್ಬ ಸಚಿವನ ವ್ಯಾಪ್ತಿಯಲ್ಲೂ ಇರುತ್ತದೆ.ರಸ್ತೆ,ವಿದ್ಯುತ್,ಕ್ರೀಡಾ ಸಿದ್ಧತೆ,ಕಟ್ಟಡ,ನೈರ್ಮಲ್ಯ,ಆರೋಗ್ಯ,ಆತಿಥ್ಯ,ಸಾರಿಗೆ,ಸಂಪರ್ಕ,ಭದ್ರತೆ,ಲಾನ್ ಲೇನ್.. ಇತ್ಯಾದಿ ಇತ್ಯಾದಿ..
ಅದರೆ ಏನಾದರೂ ಮಾಡಿದರೇ?ಇಲ್ಲ.ಸ್ವತಃ ಪ್ರಧಾನಿ ಕೂಡಾ ಇಷ್ಟು ವರ್ಷಗಳಲ್ಲಿ ಈ ವಿಚಾರದಲ್ಲಿ ಮುಖವೇ ಹಾಕಲಿಲ್ಲ.ಅದೇ ದೆಹಲಿಯಲ್ಲೇ ಇದ್ದೂ ಕೂಡಾ.
ಇದರ ಒಟ್ಟು ತಾತ್ಪರ್ಯವೇ ಈಗ ಆಗಿರುವುದು.
ಮುರಿಯುವ ಸಲಾಕೆಗಳು,ನುಗ್ಗುವ ಹಾವುಗಳು,ಮೂತ್ರಿಸುವ ನಾಯಿಗಳು,ಚಿಗುರದ ಗಿಡಗಳು,ಧೂಳೆಬ್ಬಿಸುವ ರಸ್ತೆಗಳು,ಕೆಸರೆರೆಚುವ ಹೊಂಡಗಳು..ವಾಂತಿ ಮಾಡಿಸುವ ಕಕ್ಕಸುಗಳು,ವಾಸನೆ ಬೀರುವ ಕೊಠಡಿಗಳು..
ನಮ್ಮ ವರ್ಚಸ್ಸಿಗೆ ಆದ ಡ್ಯಾಮೇಜ್ ಇದೆಯಲ್ಲಾ ಅದನ್ನು ತುಂಬಿಕೊಡುವವರು ಯಾರು..ಮನಮೋಹನ್ ಸಿಂಗಾ?ಕಲ್ಮಾಡಿನಾ?ಶೀಲಾ ದೀಕ್ಷಿತ್ತಾ?
ಆಸ್ಟ್ರೇಲಿಯಾದ ಸೆಕ್ಯೂರಿಟಿ ಟೀಮ್ ಬಂದು ಏನು ಸಮಾಚಾರ ನಿಮ್ಮದು ಅಂತ ಕೇಳುತ್ತದೆ.ಬ್ರಿಟನ್ನಿನ ರಾಣಿಗೆ ನಮ್ಮ ರಾಷ್ಟ್ರಪತಿಯೇ ಹೋಗಿ ಆಮಂತ್ರಣ ಕೊಟ್ಟರೂ ನಾನು ಬರಲ್ಲ ಅಂತಾಳೆ..ಯುರೋಪಿನ ಕ್ರೀಡಾಪಟುವೋರ್ವ ನನಗೆ ದೆಹಲಿಯ ಟ್ರಾಕ್‌ನಲ್ಲಿ ಓಡುವುದಕ್ಕೂ ಮುಖ್ಯವಾದುದು ನನ್ನ ಹೆಂಡತಿ ಮಕ್ಕಳಿಗೆ ನಾನು ಉಳಿಯುವುದು ಎನ್ನುತ್ತಾನೆ..
ನಾವು ಮಾತ್ರಾ ಎಲ್ಲಾ ಸರಿ ಮಾಡಿದ್ದೇವೆ ಎಂದು ಹೇಳಹೊರಡುತ್ತೇವೆ,,ಅವರು ನಮ್ಮ ಗ್ರಾಚಾರ ಬಿಡಿಸುವವರಂತೆ ಉಗಿಯುತ್ತಿದ್ದಾರೆ.
ನಮಗೆ ಬೇಕಿತ್ತಾ?
ತುಳುವಿನಲ್ಲೊಂದು ಜನಪದ ಮಾತು ಇದೆ,ಮೂಲೆಯಲ್ಲಿದ್ದ ಕೊಡಲಿಯನ್ನು ಎಳೆದು ಕಾಲಿಗೆ ಹಾಕಿಸಿಕೊಂಡ..
ಈ ಕಾಮನ್‌ವೆಲ್ತ್ ಗೇಮ್ಸ್‌ಗೆ ನಾವು ವ್ಯಯಿಸುತ್ತಿರುವ ದುಡ್ಡು ಎಷ್ಟು ಗೊತ್ತೇ?೩೦ ಸಾವಿರ ಕೋಟಿ ರೂಪಾಯಿ ಅಂತೆ.
ಇದು ಹೇಗೆ ಹೇಳಿದರೂ ಐದಾರು ರಾಜ್ಯಗಳ ವಾರ್ಷಿಕ ಬಜ್ಜೆಟ್ಟು..
ಭಾರತದಂಥ ದೇಶಕ್ಕೆ ಈ ಪಾಟಿ ದುಡ್ಡು ಸುರಿಯಲು ತಾಖತ್ತು ಇದೆ ಎಂದರೆ ಯಾರೂ ಅಚ್ಚರಿಪಡಬಹುದು.ಸ್ವತಃ ನಮಗೇ ಗೊತ್ತಿದೆ ಎಂದೂ ಇದು ನಮ್ಮ ಸಾಮರ್ಥ್ಯ ಅಲ್ಲ ಎಂದು.ಆದರೆ ಜಾಗತಿಕ ಮಟ್ಟದಲ್ಲಿ ನಾವು ಹಲವಾರು ಬಾರಿ ನಮ್ಮದಲ್ಲದ ನಮ್ಮ ವೈಭವವನ್ನು ತೋರಿಸಿಕೊಟ್ಟವರು.ಇನ್ನು ಇದನ್ನು ಬಿಡುತ್ತೇವಾ?
ನಮ್ಮವರೇನು ಸುಮ್ಮನಿರುತ್ತಾರೆಯೇ?ಗ್ರಾಮದೊಳಗೆ ಒಂದು ಮೋರಿ ಕಟ್ಟಿದರೂ ಪರ್ಸಂಟೇಜು ಹೊಡೆಯುವವರು ನಾವು..ಮೂವತ್ತು ಸಾವಿರ ಕೋಟಿ ರೂಪಾಯಿಯಲ್ಲಿ ತಪಸ್ಸಿಗೆ ಕೂರುತ್ತೇವಾ?ಹತ್ತು ಪರ್ಸೆಂಟು ಅಂತ ಕೈ ಮಡಗಿದರೂ ಅನಾಮತ್ತು ಮೂರು ಸಾವಿರ ಕೋಟಿ ರೂಪಾಯಿ ಕಿಸೆಗೆ ಸುರಿದೆವು ಎಂದೇ ಅರ್ಥ.ಯಾರೆಲ್ಲಾ ಬಟ್ಟಲಿಗೆ ಕೈ ಇಟ್ಟಿದ್ದಾರೆ ಎಂದು ಈಗಲೇ ಪಟ್ಟಿ ಬರುತ್ತಿದೆ.
ಮುಂದಿನ ಕಾಮನ್‌ವೆಲ್ತ್ ಗೇಮ್ಸ್ ಸ್ಕಾಟ್‌ಲ್ಯಾಂಡ್‌ನಲ್ಲಿ.೨೦೧೪ ಆಗಸ್ಟ್.ಈಗಲೇ ಗ್ಲಾಸ್ಕೋದಲ್ಲಿ ಕ್ರೀಡಾಗ್ರಾಮ ಸಿದ್ಧವಾಗಿದೆಯಂತೆ.ಟ್ರಾಕ್ ಎಳೆಯುವುದು ಮಾತ್ರಾ ಬಾಕಿ.
ಅವರು ಅನ್ಯತ್ರ ಅಲಭ್ಯ ಎಂಬ ಹಾಗೇ ಸಿದ್ಧತೆ ಮಾಡಿಕೊಂಡಿದ್ದಾರೆ.ಅಲ್ಲಿನ ಸರಕಾರ ಇದನ್ನು ಮಾಡುವುದಕ್ಕಾಗಿಯೇ ಒಂದು ಇಲಾಖೆಯನ್ನೇ ಸಿದ್ಧಮಾಡಿ ಮೂರು ವರ್ಷಗಳೇ ಆಗಿವೆ.
ಇಷ್ಟೆಲ್ಲಾ ಆದ ಮೇಲೂ ನಮ್ಮ ಜನ ಈ ಎಲ್ಲರನ್ನೂ ಕ್ಷಮಿಸಿದ್ದಾರೆ.ಮುಂದಿನ ವಾರದ ಗೇಮ್ಸ್ ನೋಡಲು ಹೆಮ್ಮೆಯಿಂದ ನಿಂತಿದ್ದಾರೆ.ಏಕೆಂದರೆ ನಮ್ಮ ಜನ ಸಾಮಾನ್ಯರು ಯಾವತ್ತೂ ದೇಶಭಕ್ತರು.ಅವರಲ್ಲಿ ಅಗಾಧವಾದ ನೆಲದ ವ್ಯಾಮೋಹ ಇದೆ.ಯಾರೇ ಏನೇ ಮಾಡಿದರೂ ದೇಶದ ಪ್ರೀತಿಗಾಗಿ ಜನ ಅವರನ್ನು ಮನ್ನಿಸುತ್ತಾರೆ.
ಅವರ ಬಳಿ ಇರುವುದು ಮುರಿದ ಮೋರಿಗಳು,ಕುಸಿದ ಕಾಲ್ಸಂಕಗಳು,ದೂಳೆಬ್ಬಿಸುವ ರಸ್ತೆಗಳು,ಒಣಗಿದ ಬಾವಿಗಳು, ಕೊಳೆದ ಪೈರುಗಳು,ಜ್ವರ ಹಿಡಿದ ಮಕ್ಕಳು,ಮುರುಕಲು ಚಾಪೆಗಳು,ಖಾಲೀ ಬಿದ್ದ ಥೈಲಿಗಳು..
ಆಟ ಆಡಿಸುವ ಆಡಳಿತಾರೂಢರಲ್ಲಿ ಮಾತ್ರಾ ಇದು ಯಾವುದೂ ಇಲ್ಲ.ಅವರಿಗೆ ಜನರ ಈ ಗುಣ ಗೊತ್ತೇ ಇದೆ.ಏನೇ ಮಾಡಿದರೂ ನಮ್ಮ ಜನ ಕ್ಷಮಿಸುತ್ತಾರೆ ಅಥವಾ ಮರೆಯುತ್ತಾರೆ ಅಥವಾ ಮನ್ನಿಸುತ್ತಾರೆ ಎಂದೇ ನಮ್ಮವರು ಇಂಥಾ ಗೇಮ್ ಮಾಡಲು ಹೋಗುತ್ತಾರೆ.