20100730

ಗುಂಡ್ಯ ಗಂಡಾಂತರ
ಕಾಡು ಕಡಿಯುತ್ತಾರೆ,ಮಳೆ ಬರುವುದಿಲ್ಲ
ಅಣೆಕಟ್ಟು ಕಟ್ಟುತ್ತಾರೆ ನೀರು ಇರುವುದಿಲ್ಲ
ಒಕ್ಕಲೆಬ್ಬಿಸುತ್ತಾರೆ ಗೌರವ ಇರುವುದಿಲ್ಲ
ಆದರೂ ಯೋಜನೆ ಮಾಡಿಯೇ ಮಾಡುತ್ತಾರೆ.............!
ಜೈಹೋ..
ಹೀಗಂತ ಪಶ್ಚಿಮಘಟ್ಟದ ತಪ್ಪಲಿನಲ್ಲೂ, ಶಿಖರದಲ್ಲೂ ಜನ ಕೈ ಚೆಲ್ಲಿ ಕುಳಿತಿದ್ದಾರೆ.
ಏಕೆಂದರೆ ಗುಂಡ್ಯ ಯೋಜನೆ ಬಂದೇಬಂದಿದೆ.
ಮೊನ್ನೆ ಮೊನ್ನೆ ಕೇಂದ್ರ ಪರಿಸರ ಗುಣಗ್ರಹಣ ಸಮಿತಿ(ಇಎಸಿ)ಗುಂಡ್ಯದಲ್ಲಿ ಅಣೆಕಟ್ಟು ಕಟ್ಟಿ ವಿದ್ಯುತ್ ತರೋದಕ್ಕೆ ತನ್ನದೇನೂ ಅಡ್ಡಿಯಿಲ್ಲ ಎಂದು ಹೇಳಿತು.
ಈ ಬಗ್ಗೆ ಪಶ್ಚಿಮಘಟ್ಟ ತಜ್ಞರ ಪಾನೆಲ್‌ನ ಸಲಹೆ ಕೇಳಿ ಧಾರಾಳವಾಗಿ ಈ ಯೋಜನೆಯ ಬಗ್ಗೆ ಮುಂದುವರಿಯಬಹುದು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅದು ಸೂಚಿಸಿತು.
ಅದರೊಂದಿಗೆ ಈ ಯೋಜನೆಯ ವಿರುದ್ಧ ಹೋರಾಡುತ್ತಿದ್ದ ಮೈ ಮನಸ್ಸುಗಳು ಹತಾಶವಾದವು.
ಏಕೆಂದರೆ ಸರಕಾರ ಇನ್ನೇನಿದ್ದರೂ ಗುಂಡ್ಯಯೋಜನೆಗೆ ಗುದ್ದಲಿ ಗುದ್ದುವುದು ಖರೇ.
ಕರ್ನಾಟಕ ವಿದ್ಯುತ್ ನಿಗಮ ಅರ್ಥಾತ್ ರಾಜ್ಯ ಸರಕಾರ ಕೃಪಾಶ್ರಿತ ಸಂಸ್ಥೆ ಗುಂಡ್ಯ ಜಲ ವಿದ್ಯುತ್ ಯೋಜನೆಯ ಜನಕ.ಸರಕಾರಕ್ಕೆ ಈ ಯೋಜನೆ ಬಗ್ಗೆ ಅದೆಂಥ ಆಸಕ್ತಿ ಎಂದರೆ ಐದು ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ಲಿಖಿತವಾಗಿನ ಸರಕಾರ ಪ್ರಕಟಣೆಯನ್ನೇ ಕೊಟ್ಟಿತ್ತು.
ಎರಡು ಅಣೆಕಟ್ಟುಗಳ ನಿರ್ಮಾಣ,ಮೂರು ಒಡ್ಡುಗಳ ಸ್ಥಾಪನೆ,೧೮ ಕಿಲೋಮೀಟರ್ ಉದ್ದದ ಸುರಂಗ,೩೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಎಂಬುದು ಆ ಪ್ರಕಟಣೆಯ ಸಾರಾಂಶ.
ಆಳುವವರು ಮುಂದಾಗಿ ಬಂದು ಪಶ್ಚಿಮ ಘಟ್ಟದ ನೆತ್ತಿಯ ಮೇಲೆ ಕೈ ಇಟ್ಟಿದ್ದಾರೆ ಎಂದ ಮೇಲೆ ಕೇಳಬೇಕೇ?
ಉಘೇಉಘೇ..
ಜಗತ್ತಿನ ೧೮ ಅತೀ ಸೂಕ್ಷ್ಮ ಪರಿಸರ ತಾಣಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಪಶ್ಚಿಮ ಘಟ್ಟ ಪ್ರದೇಶವಿದು.ದೇಶದ ಎರಡನೇ ಹಾಟ್‌ಸ್ಪಾಟ್.ಎಲ್ಲೂ ಕಾಣದ ಸಿಂಹಬಾಲದ ಲಂಗೂರ ಇನ್ನು ಇಲ್ಲಿಂದ ನಿರ್ಗಮಿಸಲೇಬೇಕು.ಜಗತ್ತಿನ ಅಪರೂಪದ ಜೀವಸಂಕುಲಗಳು,ಪ್ರಾಣಿ ಇರಲಿ,ಪಕ್ಷಿ ಇರಲಿ,ಮರಗಿಡಗಳೇ ಇರಲಿ,ಎಲ್ಲದಕ್ಕೂ ವಿದಾಯದ ಹೊತ್ತು ಬರಲೇಬೇಕು.
ಸಿಂಗಳಿಕ,ನಾಗರಹಾವು,ಹಾರ್ನ್‌ಬಿಲ್,ಹುಲಿ,ಕಡವೆ,ಕಾಡುಕೋಣ,ಕತ್ತೆಕಿರುಬ,ಕಾಡುಕುರಿ,ಕಬ್ಬೆಕ್ಕುಗಳು ದಿಕ್ಕಾಪಾಲಾಗಲಿವೆ.ಮರಗಿಡ,ಅಪರೂಪದ ಸಸ್ಯಸಂಕುಲಗಳು ಮಕಾಡೆ ಮಲಗುವುದಂತೂ ಇದ್ದೇ ಇದೆ. ಪಶ್ಚಿಮ ಘಟ್ಟ ಹಿಂದೆ ಹೇಗಿತ್ತು ಈಗ ಹೇಗಾಗಿದೆ!
ಈ ಪಶ್ಚಿಮಘಟ್ಟ ಮೂಲರೂಪದಲ್ಲಿದ್ದುದು ೯೯೨೦೦ ಚದರ ಕಿಲೋಮೀಟರು!
ಈಗ ಉಳಿದಿರುವುದು ೮೦೦೦ ಸಾವಿರ ಚದರಕಿಲೋಮೀಟರು ಮಾತ್ರಾ!
ಮನುಷ್ಯ ಜೀವನಕ್ಕಾಗಿ ಅಷ್ಟೆಲ್ಲವನ್ನೂ ದೋಚಿದ್ದಾಗಿದೆ.ಇನ್ನು ಉಳಿದ ಕಿಂಚಿತ್ತನ್ನಾದರೂ ಸುಮ್ಮನಿಡಬಾರದೇ?
ಈ ಕಾಡುಗಳೊಳಗೆ ಇತ್ತೀಚೆಗೆ ಸಿಕ್ಕಿದ್ದು ಇಂಡಿರಾನಾ ಗುಂಡ್ಯಾ ಎಂಬ ದೊಡ್ಡ ಕಪ್ಪೆ.
ಇದು ಜುರಾಸಿಕ್ ಕಾಲದ್ದು ಎಂಬುದು ಉಲ್ಲೇಖನೀಯ.ಹಾಗೆಂದರೆ ಈ ಕಾಡು ಅದೆಷ್ಟು ಕಾಲಘಟ್ಟದ ವೈಭವ ಹೊಂದಿದೆ ಎಂಬುದು ಅರಿವಾದೀತು.
ಈ ಕಾಡಿನೊಳಗೆ ನೂರಾರು ತೊರೆಗಳು ಹರಿಯುತ್ತಿವೆ,ಅದೆಷ್ಟೋ ಜಲಪಾತಗಳಿವೆ.ಎಲ್ಲವೂ ಹೋಗಿ ಸೇರುವುದು ನೇತ್ರಾವತಿ ಮತ್ತು ಕುಮಾರಧಾರೆ ನದಿಗಳೊಳಗೆ.

ಅಂತೂ ಪಶ್ಚಿಮ ಘಟ್ಟದ ಹೊಟ್ಟೆ ಸೀಳುತ್ತಾರೆ. ಕ್ರಶರ್,ಬುಲ್ಡೋಜರ್,ಸಿಡಿಮದ್ದಿನ ದೀಪಾವಳಿ ನಿತ್ಯವೂ ನಡೆಯಲಿದೆ.ಕಗ್ಗತ್ತಲ ಕಾನನದೊಳಗೆ ಮರುಭೂಮಿಯ ನಿರ್ಮಾಣವಾಗುತ್ತದೆ.ಮೈಲಿಗಟ್ಟಲೆ ರಸ್ತೆಗಳು,ಅದರ ಮೇಲೆ ಅಗಾಧ ವಾಹನಗಳು,ಟೌನ್‌ಶಿಪ್ಪು,ಜನ ರ ಓಡಾಟ,ಯಂತ್ರಗಳ ಆರ್ಭಟ ನಿತ್ಯವಿಧಿಯಾಗಲಿದೆ.
ಮುನ್ನೂರಡಿ ನೆಲ ತೋಡಿ ೧೮ ಕಿಲೋಮೀಟರ್ ಸುರಂಗ ಮಾಡುತ್ತಾರೆ.ಅಷ್ಟೂ ಉದ್ದಗಲಕ್ಕೆ ಮೇಲೆ ಭೂಮಿಯಲ್ಲಿ ಏನಾದರೂ ಉಳಿಯುತ್ತದೆ?ಬಾಗೂರು ನವಿಲೆ ಉದಾಹರಣೆ ಪಕ್ಕದಲ್ಲೇ ಇದೆ.
ಅಗಾಧ ಮಣ್ಣು ನಿತ್ಯವೂ ಕೊಚ್ಚಿ ಎಲ್ಲಿಗೆ ಹೋಗಿ ಗುಡ್ಡೆ ಬೀಳುತ್ತದೆ?
ಇಷ್ಟಕ್ಕೂ ಈ ಎಲ್ಲಾ ನದಿ ತೊರೆಗಳನ್ನು ಕಟ್ಟಿ ಹಾಕುತ್ತರಲ್ಲಾ,ಇವೆಲ್ಲಾ ಕರಾವಳಿಗೆ ನೀರುಣಿಸುವ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರೆಯ ನೀರೇ ಆಗಿವೆ. ಗುಂಡ್ಯ ಯೋಜನೆ ಎಂದರೆ ಎರಡು ಹಂತಗಳ ಯೋಜನೆ.
ಖರ್ಚು ಎರಡು ಹಂತಗಳೂ ಸೇರಿ ಸುಮಾರು ೧೫೦೦ ಕೋಟಿ ರೂಪಾಯಿಗಳು.
ಮೊದಲ ಹಂತದಲ್ಲಿ ೨೦೦ ಮತ್ತು ಎರಡನೇ ಹಂತದಲ್ಲಿ ೧೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ.
ಸ್ಥಳ:ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು.
ಎರಡು ಅಣೆಕಟ್ಟುಗಳು ಮತ್ತು ಮೂರು ಒಡ್ಡುಗಳು.
ಎತ್ತಿನಹೊಳೆಗೆ ೧೫ ಮೀಟರ್ ಎತ್ತರದ ಒಡ್ಡು,ಕೇರಿಹೊಳೆಗೆ ೮ ಮೀಟರ್ ಎತ್ತರದ ಒಡ್ಡು ಹೊಂಗದಹಳ್ಳಕ್ಕೆ ೩೬ ಮೀಟರ್ ಎತ್ತರದ ಒಡ್ಡು ಹಾಕಲಾಗುವುದು.
ಬೆಟ್ಟಕುಂಬ್ರಿ ತೊರೆಗೆ ೬೨ ಮೀಟರ್ ಎತ್ತರದ ಅಣೆಕಟ್ಟು ಮತ್ತು ಹೊಂಗದಹಳ್ಳ ನದಿಗೆ ೯೦.೫ ಮೀಟರ್ ಎತ್ತರದ ಅಣೆಕಟ್ಟು ಕಟ್ಟಲಾಗುವುದು.ಹಾಗೇ ೧೩೨ ಮಿಲಿಯನ್ ಕ್ಯೂಬಿಕ್‌ಮೀಟರ್ ನೀರು ಸಂಗ್ರಹದ ಉದ್ದೇಶ.
ಈ ಒಡ್ಡು ಮತ್ತು ಅಣೆಕಟ್ಟುಗಳನ್ನು ಸುರಂಗಗಳ ಮೂಲಕ ಜೋಡಿಸಿ ನೀರನ್ನು ಬೆಟ್ಟಕುಂಬ್ರಿ ಮತ್ತು ಗುಂಡ್ಯಗಳಲ್ಲಿ ಸ್ಥಾಪಿಸಲಾಗುವ ಪವರ್‌ಹೌಸ್‌ಗಳಲ್ಲಿ ಧುಮುಕಿಸಿ ವಿದ್ಯುತ್ ತಯಾರಿಸಲಾಗುವುದು.
ಇದರ ನಿರ್ಮಾತೃ ಕೆಪಿಸಿಎಲ್.
ಪರಿಸರ ಗುಣಗ್ರಹಣ ಸಮಿತಿ ಕೊನೆಗೂ ಗುಂಡ್ಯ ಯೋಜನೆಗೆ ಯೆಸ್ ಎಂದಿದೆ.
ಆದರೆ ಅಲ್ಲಿಗೆ ಕೆಲವೊಂದು ಶರತ್ತುಗಳು ಇವೆ.
೨೦೦೮ ರಿಂದ ಮೂರು ಬಾರಿ ಈ ಯೋಜನೆ ಈ ಕಮಿಟಿಯ ಮುಂದೆ ಬಂದಿದೆ.ಎರಡು ಬಾರಿಯೂ ಕಮಿಟಿ ಇದಕ್ಕೆ ಸೈ ಎನ್ನಲಿಲ್ಲ.ಮೂರನೇ ಬಾರಿ ಕಮಿಟಿ ಈ ಯೋಜನೆಯ ಭೂಮಿ ವಿಚಾರದಲ್ಲಿ ತನ್ನ ಸಂಶಯಗಳನ್ನು ವ್ಯಕ್ತಪಡಿಸಿತು.ಕಳೆದ ಡಿಸೆಂಬರ ತಿಂಗಳಲ್ಲಿ ಈ ಕಮಿಟಿಯ ತಂಡವೊಂದು ಸೈಟ್‌ಗೆ ಭೇಟಿ ನೀಡಿತು.ಈ ಯೋಜನೆಯ ಭೂಮಿ ಪಡೆದುಕೊಳ್ಳುವ ವಿಚಾರದಲ್ಲಿ ಕೆಪಿಸಿಎಲ್ ನಿರ್ಧಾರ ಸರಿ ಇಲ್ಲ ಎಂದು ಕಮಿಟಿ ಸ್ಪಷ್ಟವಾಗಿ ಹೇಳಿತು.ಉದಾಹರಣೆಗೆ ಹೊಂಗದಹಳ್ಳ ಅಣೆಕಟ್ಟು ಭಾಗದಲ್ಲಿನ ಮುಳುಗಡೆಯೂ ಸೇರಿದಂತೆ ಅಗತ್ಯವಿರುವ ಭೂಮಿ ಕಂದಾಯ ಅಥವಾ ಖಾಸಗಿ ಜಮೀನು ಎಂದು ಕೆಪಿಸಿಎಲ್ ಹೇಳಿತ್ತು.ಆದರೆ ಅದು ಸುಳ್ಳು ಎಂದು ಕಮಿಟಿ ಹೇಳಿದೆ.ಆ ಭೂಪ್ರದೇಶ ಪಕ್ಕಾ ಅರಣ್ಯ ಎಂಬುದನ್ನು ಅದು ಕೆಪಿಸಿಎಲ್‌ಗೆ ತಿಳಿಸಿ ಹೇಳಿದೆ.
ಆಮೇಲೆ ಹೊಂಗದಹಳ್ಳ ಅಣೆಕಟ್ಟು ವಿಚಾರವನ್ನು ಯೋಜನೆಯಿಂದ ಕೈ ಬಿಟ್ಟು ಈ ಸಮಿತಿ ಯೋಜನೆಗೆ ಸೈ ಎಂದು ಹೇಳಿದೆ.ಹಾಗೇ ಮಾಡುವುದರಿಂದ ಗುಂಡ್ಯ ಯೋಜನೆಗೆ ಬೇಕಾದ ಭೂಮಿ ೧೦೪೧ ಹೆಕ್ಟೇರ್‌ನಿಂದ ೪೮೦ ಹೆಕ್ಟೇರ್‌ಗೆ ಇಳಿಯಿತು ಎಂದು ಅದು ಸಮಾಧಾನಪಟ್ಟಿದೆ.
ಮತ್ತು ಈ ವಿಚಾರದಲ್ಲಿ ಡಾ.ಮಾಧವ ಗಾಡ್ಗೀಲ್ ನೇತೃತ್ವದ ಪಶ್ಚಿಮಘಟ್ಟ ತಜ್ಞರ ಪಾನೆಲ್‌ನ ಅಭಿಪ್ರಾಯ ಪಡೆದು ಮುಂದುವರಿಯುವಂತೆ ಅದು ಸಲಹೆ ಮಾಡಿದೆ.

ಇದು ಹೇಗೆಂದರೆ ಮನೆ ನಿಮ್ಮದೇ,ಆದರೆ ಚಾಪೆ ಲೋಟಾ ಮುಟ್ಟಬಾರದು ಎಂದ ಹಾಗೇ.
ಹೊಂಗದಹಳ್ಳ ಜಲಾಶಯ ನಿರ್ಮಾಣವನ್ನು ಕೈಬಿಡಬೇಕು ಎಂದು ತಾಕೀತು ಮಾಡಿದೆ ಈ ಸಮಿತಿ.
ಆದರೆ ಹೊಂಗದಹಳ್ಳ,ಕೀರಿ ಮತ್ತು ಎತ್ತ್ತಿನಹಳ್ಳ ನದಿಗಳಿಗೆ ಒಡ್ಡುಗಳನ್ನು ಕಟ್ಟಿ,ಸುರಂಗದ ಮೂಲಕ ನೀರು ಸಾಗಿಸಿ,ಹೋರಿ ಬೆಟ್ಟದ ಬಳಿ ಪವರ್‌ಪ್ರಾಜೆಕ್ಟಿಗೆ ತಂದೊಡ್ಡುತ್ತಾರಲ್ಲಾ,ಆ ಬಗ್ಗೆ ಯಾರೂ ಚಕಾರವೆತ್ತಿಲ್ಲ.ಪ್ರಾಕೃತಿಕವಾಗಿ ಹರಿಯುವ ನೀರ ತೊರೆಗಳನ್ನು ಅಡ್ಡ ಮಾಡಿ ಎಲ್ಲಿಗೋ ತಮ್ಮ ಅಪ್ಪಣೆಯಂತೆ ಹರಿಸಿದರೆ,ಈ ನೀರನ್ನೇ ನಂಬಿದ ಜೀವ ಸಂಕುಲಕ್ಕೆ ಯಾರು ಎಲ್ಲಿಂದ ನೀರುಣಿಸಬೇಕು ಎಂಬ ಬಗ್ಗೆ ಕಮಿಟಿ ನೋ ಕಮೆಂಟ್ಸ್.
ಆಮೇಲೆ ಈ ಯೋಜನೆಗಾಗಿ ೪೮೦ ಹೆಕ್ಟೇರ್ ಮಳೆಗಾಡನ್ನು ಕಡಿದು ನಾಶ ಮಾಡುತ್ತೇವಲ್ಲಾ ಆ ಘೋರ ಪರಿಣಾಮವನ್ನು ತುಂಬುವುದು ಸಾಧ್ಯವೇ ಎಂದರೂ ಅದಕ್ಕೆ ಉತ್ತರವಿಲ್ಲ.
೧೮ ಹಳ್ಳಿಗಳು ಮುಳುಗಿಹೋಗುತ್ತವೆ,ಎಲ್ಲಾ ಸೇರಿದರೆ ಸಾವಿರ ಕುಟುಂಬಗಳು ಗುಳೇ ಹೋಗುತ್ತವೆ.ಅವರ ಗತಿ ಏನು ಎಂದರೆ ಮೌನ.
ಎಲ್ಲಾ ಕೆಲಸ ಮುಗಿದ ಮೇಲೆ ದಕ್ಷಿಣಕನ್ನಡಕ್ಕೆ ನೇತ್ರಾವತಿ ಮತ್ತು ಕುಮಾರಧಾರೆ ನೀರು ಹೊತ್ತು ತರುವ ಶಕ್ತಿಯನ್ನೇ ಕಳೆದುಕೊಂಡಿರುತ್ತವೆ.ಏಕೆಂದರೆ ಅದರ ಉಪನದಿಗಳೆಲ್ಲಾ ಮುಖ ತಿರುಗಿಸಿವೆ.
ಬ್ರಹ್ಮಗಿರಿ,ಪುಷ್ಪಗಿರಿ,ಬಿಸಿಲೆ ವನ್ಯಧಾಮಗಳು ಸೀಳಿಹೋಗಿ ಸಂಪರ್ಕವನ್ನೇ ಕಡಿದುಕೊಳ್ಳುತ್ತವೆ.
ಇಷ್ಟೆಲ್ಲಾ ಮಾಡಿದ ಮೇಲೆ ಕೊನೆಗೂ ವಿದ್ಯುತ್ ತಯಾರಿಸುವುದು ಮಳೆಗಾಲದಲ್ಲಿ ಮಾತ್ರಾ ಎನ್ನುತ್ತದೆ ಸರಕಾರ.
ಏಕೆಂದರೆ ಬೇಸಗೆಯಲ್ಲಿ ನೀರೇ ಇಲ್ಲವಲ್ಲ.
ಮಳೆಗಾಲದ ಮಟ್ಟಿಗೆ ಕರೆಂಟು ತರಲು ಈ ಪಾಟಿ ಅನ್ಯಾಯ ಮಾಡಬೇಕೇ ಎಂಬುದು ಪ್ರಶ್ನೆ.
ಇಷ್ಟಕ್ಕೂ ವಿದ್ಯುತ್‌ಬೇಡವೇ ಎಂದು ಕೇಳುವವರಿಗೆ ಪಶ್ಚಿಮಘಟ್ಟ ಬೇಡವೇ ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ..!
ಮೂರು ಒಡ್ಡು,ಎರಡು ಅಣೆಕಟ್ಟು.ಒಟ್ಟಾಗಿ ಆಗುವುದು ಪರಿಸರಕ್ಕೆ ಡಿಸ್ಟರ್ಬು.
ಹರಿಯುವ ನೀರನ್ನು ಹಿಡಿದಿಟ್ಟು ವಿದ್ಯುತ್ ತಯಾರಿಸುತ್ತಾರೆ.ನಗರಗಳು ಝಗಮಗಿಸುತ್ತವೆ.
ಕಾಡಿನ ಬದುಕಿಗೆ ಮಾತ್ರಾ ನಿತ್ಯವೂ ಕತ್ತಲೆಯೇ.

20100710

ಕಣ್ಣು ಕಾಣುವ ಹಾಗೇಕಣ್ಣುಗಳೇ ನಿಮಗೆ ವಂದನೆ..
ಹುಟ್ಟಿದೊಡನೆ ಮುಚ್ಚಿಕೊಂಡು
ಅರೆ ಕಾಲ ಈ ಲೋಕದ ಸಸ್ಪೆನ್ಸ್ ಉಳಿಸಿಕೊಟ್ಟದ್ದಕ್ಕೆ.
ಹಾಗೆ ನೀವು ತೆರೆಯದೇ ಇದ್ದ ಕಾರಣಕ್ಕೆ ನನಗೆ ಮೊದಲು ಕಂಡದ್ದು ನನ್ನ ಅಮ್ಮ.
ಇಲ್ಲವಾದರೆ ನಾನು ಕಾಣಬೇಕಿತ್ತು ಆ ದಾದಿಯ ಮೊಮ್ಮ
ಅಥವಾ ಆ ಡಾಕ್ಟರನ ಕರ್ಮ.
ಕಣ್ಣುಗಳೇ ನನಗೆ ಅಕ್ಷರವ ಕಾಣಿಸಿದ್ದು ನೀವು.
ನೀವು ಅವುಗಳನ್ನು ಕಾಣಿಸಿದ್ದಕ್ಕೆ ತಾನೇ ನಾನು ಇಂದು ಕವಿಯಾಗಿರುವುದು
ಪಂಡಿತನಾಗಿರುವುದು
ಪಾರಂಗತನಾಗಿರುವುದು
ಇಷ್ಟೆಲ್ಲಾ ಜ್ಞಾನ ಎಂಬ ಲೊಳಲೊಟ್ಟೆಯನ್ನು ಕಟ್ಟಿಕೊಂಡಿರುವುದು
ಕಾಯಿಲೆಗಳಿಗೆ ಹೆದರುವುದು
ಅಮ್ಮನ್ನು ಗದರುವುದು
ಅಪ್ಪನಿಗೆ ಏನೇನೂ ನಾಲೇಜು ಇಲ್ಲ ಎಂದು ಬೈಯುವುದು
ಅಮೇರಿಕಾವೇ ಸ್ವರ್ಗ ಎಂದು ನಂಬಿರುವುದು.
ಕಣ್ಣುಗಳೇ ನೀವು ನನಗೆ ಕಾಡನ್ನು ತೋರಿಸಿದಿರಿ.
ಹಾಗಾಗಿ ನನಗೆ ಬೆಂಗಾಡು ಸುಡುಸುಡು ಎನಿಸುವುದು
ಹಕ್ಕಿಗಳ ಪುಕ್ಕದಲ್ಲಿ ಕೆತ್ತಿದ ಶಿಲ್ಪ ಕಾಣುವುದು
ಕಣ್ಣುಗಳೇ ನನಗೆ ಬಾನನ್ನು ಕಾಣಿಸಿದಿರಿ
ನಕ್ಷತ್ರಗಳನ್ನು ಹೆಕ್ಕಿ ತಾ ಎಂದು ದೃಷ್ಟಿಯ ಜೊತೆ ಸವಾಲನ್ನು ಹುಟ್ಟಿಸಿದಿರಿ
ಅದಕ್ಕೇ ತಾನೇ ನಾನು ಈಗಲೂ ರಾತ್ರಿ ಕತ್ತಲಿನ ಜೊತೆ ಪಲ್ಲಂಗ ಏರುವುದು
ಹಗಲಿನ ಸೂರ್ಯನ್ನು ಸಮುದ್ರಕ್ಕೆ ದೂಡುವುದು
ಕಣ್ಣುಗಳೇ ನನಗೆ ಹುಡುಗಿಯರ ಚೆಲುವನ್ನು ಕಲಿಸಿದಿರಿ
ಅದಕ್ಕಾಗಿಯೇ ನಾನು ಪ್ರೀತಿಯನ್ನು ಶೂನ್ಯದಿಂದ ಕದ್ದೆ
ಎದೆಯೊಳಗೆ ಗುಡಾರವನ್ನು ಇಟ್ಟೆ
ಚಪ್ಪರದ ಮಲ್ಲಿಗೆಯಲ್ಲಿ ಪರಿಮಳವನ್ನು ಮೆದ್ದೆ.
ಕಣ್ಣುಗಳೇ ದೇವರನ್ನು ನೀವು ಕಾಣಿಸುವಿರಾ?
ಮುಚ್ಚಿ ಕೂರುವೆನು ಅವನನ್ನು ಕರೆದು ತರುವಿರಾ?
ಕಣ್ಣುಗಳೇ ನೀವು ಇರದೇ ಹೋಗಿದ್ದರೆ
ನಾನು
ಕತ್ತಲಲ್ಲಿ ಸಿಗುವುದನ್ನು ಪಡೆಯಬಹುದಿತ್ತು.
ಬೆಳಕಿನ ಸುಳ್ಳನ್ನು ಕಳೆದುಕೊಳ್ಳಬಹುದಿತ್ತು.