20100525

ದೇವರು ರಜೆ ಹಾಕಿದ

ನನಗೆ ಹೆಸರಿಲ್ಲ.ಆದರೆ ನನಗೆ ಶರೀರ ಇದೆ.ಭಾವನೆ ಇದೆ.ಮನಸ್ಸು ಇದೆ.
ನಾನು ಮಾತನಾಡುತ್ತೇನೆ,ಊಟ ಮಾಡುತ್ತೇನೆ,ತಿರುಗಾಡಲು ಕಾಲುಗಳಿವೆ,ನೋಡಲು ಕಣ್ಣುಗಳಿವೆ..
ನಾನು ವಿಮಾನ ನಿಲ್ದಾಣದ ಹೊರಗೆ ನಿಂತಿದ್ದೇನೆ.ಏಕೆಂದರೆ ನನ್ನ ಗೆಳೆಯ ವಿಮಾನದಲ್ಲಿ ಬರುತ್ತಿದ್ದಾನೆ.ರಾತ್ರಿ ಹನ್ನೆರಡು ಗಂಟೆಗೆ ನನ್ನನ್ನು ಆತ ಎಬ್ಬಿಸಿದ್ದ.
ಈಗಲಾದರೂ ಹೇಳು ಏನಿದೆ ಅದರೊಳಗೆ ಎಂದು ಕೇಳಿದೆ.
ಜೋರಾಗಿ ನಕ್ಕ.
ಅದೇ ಸೀಕ್ರೆಟ್ ಎಂದ.
ನೀನು ಹೇಳದೇ ಇದ್ದರೆ ನಾನು ನಿನ್ನನ್ನು ಕರೆದುಕೊಂಡು ಬರಲು ಬಾರೆ ಎಂದು ಹಠ ಮಾಡಿದೆ.
ಬರಬೇಡ ಎಂದ.
ನನಗೆ ತುಂಬಾ ಹೊತ್ತು ನಿದ್ದೆ ಬರಲಿಲ್ಲ.
ಅದೇ ಯೋಚನೆ,ಏನಿರಬಹುದು ಆ ಚೀಲದಲ್ಲಿ.
ನನ್ನ ಬಳಿ ಒಳ್ಳೊಳ್ಳೆಯ ಶರಟುಗಳಿವೆ,ಪೆನ್ನುಗಳಿವೆ,ಕೆಮೆರಾ ಇದೆ,ಲ್ಯಾಪ್‌ಟಾಪ್ ಇದೆ.
ಚೀಲವೊಂದರಲ್ಲಿ ತುಂಬುವಂಥದ್ದು ಎಲ್ಲಾ ನನ್ನ ಬಳಿ ಇದೆ.
ಹಾಗಾದರೆ ಆ ಚೀಲದಲ್ಲಿ ಏನಿದೆಯೋ?
ಆಮೇಲೆ ನನಗೆ ನಿದ್ದೆ ಬಂತು.ನಿದ್ದೆಯಲ್ಲಿ ಕನಸು ಬಿತ್ತು,ಕನಸಲ್ಲಿ ನನ್ನ ಗೆಳೆಯ ಬಂದಿದ್ದ.
ಅವನು ವಿಮಾನದಿಂದ ಇಳಿದು ಬರುತ್ತಿದ್ದ.ಆ ತಳ್ಳುಗಾಡಿಯನ್ನು ಮುಂದೆ ಮಾಡಿಕೊಂಡು ಬಂದ.ನಕ್ಕ.
ಬೇವಾರ್ಸಿ..ಎಂದೆ.
ಅಪ್ಪಿಕೊಳ್ಳಲು ಮುಂದಾದ.
ನಾನು ತಪ್ಪಿಸಿಕೊಂಡೆ.
ಇಷ್ಟು ವರ್ಷ ಇಲ್ಲದವನು ಈಗ ತುಂಬಿಕೊಳ್ಳುತ್ತಿದ್ದಾನೆ.
ಭಯವಾಯಿತು.
ಫಟಿಂಗ ಅಂತ ಬೈದೆ.
ಅಂದು ರಬ್ಬರ್ ಶೂ,ಕೆಂಪು ಗೀಟಿನ ಚೌಕುಳಿ ಅಂಗಿ,ಕಪ್ಪು ದೊಗಲೆ ಪ್ಯಾಂಟು ಹಾಕಿ,ಸಾವಿರದಾನೂರು ರೂಪಾಯಿಯ ಬ್ಯಾಗು ಹೊತ್ತುಕೊಂಡು ಒಳಗೆ ಹೋಗಿದ್ದ.ಮುಂಬೈ ತನಕ ಅವನ ಜೊತೆ ನಾನೂ ಬಸ್ಸಲ್ಲಿ ಹೋಗಿದ್ದೆ.
ಈಗ ಸೀದಾ ಮಂಗಳೂರಿಗೇ ಬರುತ್ತಿದ್ದಾನೆ.
ನಿನ್ನೆ ಸಂಜೆ ಯಾವ್ಯಾವ ಶರಟು,ಪ್ಯಾಂಟು ಹಾಕುವವನಿದ್ದೇನೆ ಮತ್ತು ಅವುಗಳ ಬೆಲೆ ಏನು, ಶೂ ಯಾವ ಕಂಪನಿಯದ್ದು ಎಂದು ಎಲ್ಲಾ ಹೇಳಿದ್ದ.
ವಿಮಾನ ಏರಿದವನೇ ಅವನ ಇಪ್ಪತ್ತೇಳು ಸಾವಿರ ರೂಪಾಯಿಯ ಮೊಬೈಲ್‌ನಿಂದ ಕಾಲ್ ಮಾಡಿ ತನ್ನ ಪಕ್ಕದಲ್ಲಿ ಓರ್ವ ಸುರಸುಂದರಾಂಗಿ ಕುಳಿತಿರುವುದಾಗಿಯೂ ಹೇಳಿದ.
ಸ್ವಲ್ಪ ಹೊತ್ತಲ್ಲಿ ಅವಳ ಚೆಲುವನ್ನು ವರ್ಣಿಸುವ ಮೆಸೇಜು ಬಂತು.
ನಾಟೀ ಒಂದೂ ಮಗ.
ಅವಳ ಫೋಟೋ ಕ್ಲಿಕ್ಕಿಸಿರುವುದಾಗಿ ಮತ್ತೊಂದು ಮೆಸೇಜು ಕಳುಹಿಸಿದ.
ವಿಮಾನದಿಂದ ಅವನು ಇಳಿದೊಡನೆ ಅವನ ಜೊತೆ ಯಾವ ಮಾತು ಮಾತಾಡಬೇಕು ಅಂತ ಯೋಚಿಸಿದೆ.
ಲವ್ ಯು ಅಂತ ಹೇಳಿದರೆ ಅಷ್ಟೇ ಸಾಕು.
ಆದರೆ ನನಗಿಂತ ಮೊದಲೇ ಅವನೇ ಹೇಳಿಬಿಟ್ಟರೆ..
ಮಂಗಾ..ಅಂತ ಬೈದು ಬಿಡುತ್ತೇನೆ..
ಸಾಧ್ಯವಾದರೆ ಚಿವುಟಲೇ ಬೇಕು..
ಈ ಬಾರಿ ಅವನೇ ಅವನ ಎಲ್ಲಾ ಲಗ್ಗೇಜುಗಳನ್ನು ಕಾರಿಗೆ ತುಂಬಬೇಕು.ನಾನು ಡ್ರೈವಿಂಗ್ ಸೀಟಲ್ಲಿ ಬೆಲ್ಟು ಹಾಕಿ ಕೂತೇ ಇರುತ್ತೇನೆ.ಅವನ ಎಲ್ಲಾ ಗಂಟುಮೂಟೆಗಳನ್ನು ಅವನು ತುಂಬುವಷ್ಟರಲ್ಲಿ ಅವನಿಗೆ ಈ ಮಂಗಳೂರ ಸೆಖೆಗೆ ಬೆವರುತ್ತದೆ..
ಬೆವರೊರಸಿಕೊಂಡು ಅವನು ಕಾರಲ್ಲಿ ಕೂರುವ ವೇಳೆಗೆ ಆ ಘಾಟು ಕಾರಿನ ಪರ್ಫ್ಯೂಮನ್ನು ಮೀರಿಸುವ ಹಾಗೇ ಹರಡುತ್ತದೆ.
ನನಗೆ ಬೇಕಾದದ್ದೂ ಅದೇ..
ಅವನಿಗಾಗಿ ಇಡ್ಲಿ ಹಿಟ್ಟು ರುಬ್ಬಿದ್ದೇನೆ.ರಾತ್ರಿಗೇ ಅದನ್ನು ದೊಡ್ಡ ದೊಡ್ಡ ಗಿಣ್ಣಾಲುಗಳಲ್ಲಿ ಸುರುವಿ ಬೇಯಿಸಿ ಇಟ್ಟಿದ್ದೇನೆ.ಶುಂಠಿ ಚಟ್ನಿ ಫ್ರಿಜ್‌ನಲ್ಲಿದೆ.
ಮೊದಲು ಇಡ್ಲಿ ತಿನ್ನೋಣ..ನೀನೇ ನನಗೆ ತಿನ್ನಿಸಬೇಕು ಎಂದು ಕೇಳಿಕೊಂಡಿದ್ದೇನೆ.ಒಪ್ಪಿದ್ದಾನೆ.
ಆ ದಿನ ಆ ಸಣ್ಣ ಹೋಟೇಲಿನಲ್ಲಿ ಮೂಸಂಬಿ ಜ್ಯೂಸ್ ಲೋಟಾವನ್ನು ಅರ್ಧರ್ಧ ಕಚ್ಚಿ ಕುಡಿದು ವೇಯ್ಟರ್‌ನ ಕಣ್ಣು ತಪ್ಪಿಸಿ ಅತ್ತಿತ್ತ ಬದಲಾಯಿಸಿಕೊಂಡದ್ದೇ ಕೊನೆ.
ಎಷ್ಟು ಸಮಯವಾಯಿತು ಈ ಪೋಲಿಯ ಎಂಜಲು ನೆಕ್ಕದೇ..
ರಾತ್ರಿ ಇಡೀ ತೊಡೆ ಸಂದುಗಳಲ್ಲಿ ಅದೇನು ಸೆಳೆತ?
ಛೀ..ಅದನ್ನೆಲ್ಲಾ ವಿವರಿಸಬಾರದು.
ಹಬ್ಬಾ..ಅಂತೂ ಬಂತು ವಿಮಾನ.
ಎಷ್ಟು ಹೊತ್ತು ಕಾಯೋದು..ಕಾರಲ್ಲೇ ಕುಳಿತು ಎಫ್‌ಎಂನ ಸುಪ್ರಭಾತ ಬದಲಿಸಿ ಬದಲಿಸಿ ಕೇಳಿದ್ದಾಯಿತು..ದಿನ ವಾರ ನಕ್ಷತ್ರಗಳ ಪರಿಚಯವಾಯಿತು.ಆರು ಗಂಟೆ ನ್ಯೂಸ್ ಬುಲ್ಲೆಟ್ಟಿನಲ್ಲಿ ಅದೇ ಗೊಗ್ಗರು..
ಕಾರಿನಿಂದ ಇಳಿದು ಆಕಾಶ ನೋಡಿದರೆ ಆಹಾ ವಿಮಾನ..
ಅದು ನೋಡುತ್ತಾ ನೋಡುತ್ತಾ ದೊಡ್ಡಾದಾಗುತ್ತಿದೆ.ಇನ್ನೂ ಹತ್ತಿರ ಬಂದರೆ ಅವನು ವಿಂಡೋ ಸೀಟಲ್ಲಿ ಕಂಡರೂ ಕಾಣಬಹುದು!
ಸುತ್ತಲೂ ಎಷ್ಟು ಜನರಿದ್ದಾರೆ!ಎಲ್ಲಾ ನನ್ನ ಹಾಗೇ. ಅವರ ಅವರನ್ನು ಕರೆದುಕೊಂಡು ಹೋಗಲು ಬಂದವರೇ.ಮಗಳು ಅಳಿಯ,ಮಗ ಮೊಮ್ಮಗ.ಭಾವ ಮೈದ,ಹೆಂಡತಿ ಗಂಡ,ಗೆಳೆಯ ಗೆಳತಿ..ಕಲೀಗ್, ಬಾಸ್..
ಎಲ್ಲರೂ ಆ ವಿಮಾನದೊಳಗೆ ಇರುವವರ ಜೊತೆ ಒಂದಲ್ಲ ಒಂದು ಸಂಬಂಧ ಹಾಕಿ ಕೊಂಡವರೇ..
ಹಾಗಾಗಿ ಆ ವಿಮಾನ ಸದ್ಯಕ್ಕೆ ಈ ಎಲ್ಲರ ನೆಂಟನು ಹೌದು ಇಷ್ಟನೂ ಹೌದು.
ಅದರೊಳಗೆ ನೂರಾರು ಮಂದಿ ಇದ್ದಾರೆ.ಈಗಾಗಲೇ ಅವರಲ್ಲಿ ಹತ್ತಾರು ಮಂದಿಯಾದರೂ ಪರಸ್ಪರ ಮಾತಾಡಿಕೊಂಡಿರಬಹುದು,ಅವರಲ್ಲಿ ಮತ್ತಷ್ಟು ಮಂದಿ ತಂತಮ್ಮ ಕುಲಗೋತ್ರ,ಉಭಯಕುಶಲೋಪರಿ ಸಾಂಪ್ರತ ಹೇಳಿಕೊಂಡಿರಬಹುದು.ಕೆಲವರಾದರೂ ಪರಸ್ಪರ ಇ-ಮೇಲ್ ಐಡಿಗಳನ್ನು ಹಂಚಿಕೊಂಡಿರಬಹುದು.ಒಬ್ಬನಾದರೂ ಮತ್ತೊಬ್ಬನನ್ನು ತನ್ನ ಮನೆಗೆ ಆಹ್ವಾನಿಸಿರಬಹುದು..
ಒಬ್ಬ ಹುಡುಗಿಗೆ ಆರನೇ ಸಾಲಿನಲ್ಲಿ ಕೂತ ಹುಡುಗ ಯಾಕೋ ಇಷ್ಟವಾಗಿಬಿಟ್ಟಿರಬಹುದು.ಆ ಹುಡುಗ ಈ ಹುಡುಗಿಯನ್ನು ಎವೆ ಹಾರಿಸಿ ನೋಡಿ ಮನಸಾ ಸಂತೋಷ ಪಟ್ಟಿರಬಹುದು..
ಆ ವಿಮಾನದಲ್ಲಿ ಒಬ್ಬಳು ತಾಯಿ ಇರಬಹುದು.ಆಕೆ ಕೈಲಿ ಮೂರು ತಿಂಗಳ ಪುಟ್ಟ ಶಿಶು.ಆ ಹಾಲುಗಲ್ಲಕ್ಕೆ ಹಸಿವು.ಈ ತಾಯಿಯ ಮೊಲೆಯಲ್ಲಿ ತುಂಬಿದ ಹಾಲು.
ಈಗ ಆ ವಿಮಾನ ಅದರೊಳಗೆ ಇರುವವರದ್ದು ಮಾತ್ರಾ ಅಲ್ಲವೇ ಅಲ್ಲ.ಇದು ಹೊರಗೆ ಕಾಯುತ್ತಿರುವ ನಮ್ಮದೂ ಹೌದು.ಅದು ನನ್ನ ವಿಮಾನ.ಏಕೆಂದರೆ ಅದರಲ್ಲಿ ನನ್ನವ ಇದ್ದಾನೆ.
ವಿಮಾನ ಬರುತ್ತಿದೆ.ಅದು ದೊಡ್ಡದಾಗುತ್ತಿದೆ.ಆ ಸುತ್ತಿನಲ್ಲಿ ಕಂಡದ್ದಕ್ಕಿಂತ ಈಗ ಮತ್ತಷ್ಟು ದೊಡ್ಡದಾಗಿ ಕಾಣುತ್ತಿದೆ.
ಅಯ್ಯೋ ಇದೇಕೆ ಇಷ್ಟು ದೊಡ್ಡದಾಗಿದೆ?
ಇದು ವಿಮಾನವಲ್ಲಇದು ವಿಮಾನವೇ ಅಲ್ಲ..
ಇದು ನನ್ನ ಇನಿಯನನ್ನು ಯಾಕೋ ನನಗೆ ತಂದು ಕೊಡುವುದಿಲ್ಲ ಎಂದು ನನಗೇಕೆ ಈಗ ಈ ಕ್ಷಣಕ್ಕೆ ಅನಿಸುತ್ತಿದೆ!?
ನನ್ನ ಗೆಳೆಯ ಈ ಹಕ್ಕಿಯ ಹೆಗಲೇರಿ ನನ್ನ ಬಳಿಗೆ ಬರುವುದಿಲ್ಲವೇ..
ಕ್ರಾಶ್ ಆಗಿದೆ ಎಂದ ಹತ್ತಿರದಲ್ಲಿದ್ದ ಹುಡುಗ.ಅವನ ಕೈಲಿದ್ದ ಮೊಬೈಲ್ ಠಪ್ಪನೇ ಕೆಳಗೆ ಬಿತ್ತು.ಅದನ್ನು ಅವನು ಹೆಕ್ಕಿಕೊಳ್ಳಲಿಲ್ಲ.ಅವನು ಕೆಟ್ಟದಾಗಿ ಕಿರುಚಾಡುತ್ತಿದ್ದ ಓಡತೊಡಗಿದ.
ನಾನು ತತ್ತರ ನಡುಗುತ್ತಿದ್ದೇನೆ.
ಎಲ್ಲೆಡೆ ಕತ್ತಲಾಗುತ್ತಿದೆ.ಕೆಟ್ಟದಾಗಿ ಯಾರೋ ಯಾರನ್ನು ಬೈಯುತ್ತಿದ್ದಾರೆ.
ದೇವರು ರಜೆ ಹಾಕಿದ್ದಾನಂತೆ..ರಜೆ.
ಅವನ ಹಾಜರು ಪುಸ್ತಕದಲ್ಲಿ ನೂರಾ ಐವತ್ತೆಂಟು ಮಂದಿಗೆ ಆಬ್ಸೆಂಟ್ ಮಾರ್ಕು.
ಅದರಲ್ಲಿ ನನ್ನ ಇನಿಯನೂ..
ನನಗೆ ಇನ್ನು ಹೆಸರಿಲ್ಲ..ಅವನು ತಂದ ಚೀಲದೊಳಗೆ ಏನಿದೆ ಅಂತ ನನಗೆ ಗೊತ್ತಾಗುವುದಿಲ್ಲ.ಅವನ ಪಕ್ಕ ಕುಳಿತ ಆ ಹುಡುಗಿ ನನಗಿಂತಲೂ ಚೆಲುವೆಯಾ?
ಹೌದೂ ಆ ಗಿಣ್ಣಾಲು ಇಡ್ಲಿಯನ್ನು ನಾನೊಬ್ಬ ತಿನ್ನುವುದಕ್ಕಾಗುತ್ತದಾ?
ತೊಡೆ ಸಂದುಗಳಲ್ಲಿದ್ದ ಸೆಳೆತ ಇನ್ನೆಂದೂ ಬರುವುದಿಲ್ಲ.ಏಕೆಂದರೆ ಅದನ್ನು ಹಿಪ್ಪೆ ಮಾಡಲು ನನ್ನ ಇನಿಯನಿಲ್ಲ.

20100514

ನಾನು ಕಾಣದ ಕನಸುಗಳು

ಬಾಲ್ಯದಲ್ಲಿ ನನ್ನ ಕನಸಲ್ಲಿ ಬರುತ್ತಿದ್ದುದು
ಏಣಿಯ ಅಡಿಯಲ್ಲಿ ಕಂಬಳಿಯೊಳಗೆ ಗೂಡು ಕಟ್ಟಿದ ಗುಬ್ಬಿ.
ಮನೆಗೆ ಬಂದ ನೆಂಟರಿಗಾಗಿ ಅಪ್ಪ
ಕಂಬಳಿ ಬಿಡಿಸಿದ್ದು
ಗುಬ್ಬಿಯ ಪುಟ್ಟ ಮರಿ ಹಾರುವ ಮೊದಲೇ
ಕೆಳಗೆ ಬಿದ್ದದ್ದು
ಮತ್ತೆ ನಾನು ಕಂಬಳಿಯನ್ನು ಸುತ್ತಿ ಎತ್ತಿ ಅಲ್ಲೇ ಇಟ್ಟು
ಬಿದ್ದ ಗುಬ್ಬಿ ಮರಿಯನ್ನು ಅದರೊಳಗೆ ತೂರಿಸಿದ್ದು..
ಆಮೇಲೆ ಆ ಮರಿ ಅಲ್ಲೇ ಕೊಳೆತು ನಾರಿದ್ದು..
ಯೌವನದಲ್ಲಿ ನನ್ನ ಕನಸಲ್ಲಿ ಬರುತ್ತಿದ್ದುದು
ಕುಮಾರಪರ್ವತದ ಬುಡದಲ್ಲಿ ಸೋಗೆ ಹಾಸಿನ ಮನೆಯಲ್ಲಿದ್ದ ಹುಡುಗಿ
ಅವಳಿಗಾಗಿ ನಾನು ಪರ್ವತ ಏರಲು ಹೊರಟದ್ದು
ಆಕಾಶಕ್ಕೆ ಏಣಿ ಇಟ್ಟ ಹಾಗಿದ್ದ ಬಂಡೆಯ ಅರ್ಧಕ್ಕೆ
ನಿಂತು ಥರ ಥರ ನಡುಗಿದ್ದು
ಏರಲಾಗದೇ ಇಳಿಯಲಾಗದೇ ಕನಲಿದ್ದು
ಆಮೇಲೆ ಆ ಚೆಲುವೆ ಇನ್ಯಾರನ್ನೋ ಮದುವೆಯಾದದ್ದು..
ಮಧ್ಯವಯಸ್ಸಿನಲ್ಲಿ ನನ್ನ ಕನಸಲ್ಲಿ ಬರುತ್ತಿದ್ದುದು
ದೇಹದೊಳಗೆ ಬಾಕಿಯಾಗಿದ್ದ ಕಸುವುಗಳು
ಸುಮ್ಮನೇ ಕುಳಿತಾಗಲೂ ಹೆದರಿಸುವ ಹಾಗೇ
ಹೆಸರೇ ಇಲ್ಲದ ರೋಗಗಳು
ರಾತ್ರಿ ಹೊತ್ತಿಗೇ ಕಾಯುತ್ತಿದ್ದ ಪೂರ್ತಿಯಾಗದ ಬಯಕೆಗಳು
ಮುಂಜಾನೆಗೂ ಮುನ್ನ ಬಿದ್ದು ಎಲೆಗಳ ಮೇಲಿಂದ ಜಾರುತ್ತಿದ್ದ ಹನಿಗಳು
ಆಮೇಲೆ ನನಗೆ ಉಳಿದದ್ದು ಕನಸೇ ಇಲ್ಲದ ರಾತ್ರಿಗಳು..

20100509

ಒಂದು ಬಣ್ಣದ ಚಿತ್ರ ಬಿಡಿಸದ ಪಂಚಾಯತ್

ಯಾರಿಗೆ ಬೇಕು ಈ ಪಂಚಾಯತ್?
ದಮ್ಮಿಲ್ಲ,ದಾಢಿ ಇಲ್ಲ,ಧಾರ್ಷ್ಟ್ರ್ಯವಂತೂ ಇಲ್ಲವೇ ಇಲ್ಲ..ಇದು ಇದ್ದೂ ಇಲ್ಲದಂತೆ..
ಆದ್ದರಿಂದ ಈ ಪಂಚಾಯತ್ ಚುನಾವಣೆಯಲ್ಲಿ ಮತದಾರನಿಗೆ ಬೇಕಾದ್ದು ಏನು?
ಈ ಪ್ರಶ್ನೆಗೆ ಸ್ವತಃ ಮತದಾರರ ಬಳಿಯೇ ಉತ್ತರವಿಲ್ಲ.
ತನ್ನ ಓರಗೆಯ ವ್ಯಕ್ತಿಯೋರ್ವ ಓಟಿಗೆ ನಿಂತಿದ್ದೇನೆ ಎಂದು ಕೈ ಮುಗಿಯುತ್ತಾನೆ.ಅವನು ತಾನು ಇಷ್ಟ ಪಟ್ಟ ಪಕ್ಷದವನೇ ಅಥವಾ ತನ್ನ ಗೆಳೆಯನೇ ಎಂದು ಮತದಾರ ನೋಡಿದರೆ ಸಾಕೇ?
ತನ್ನ ಬೀದಿಗೆ ದೀಪ,ಪಕ್ಕದ ತೋಡಿಗೆ ಸಂಕ,ತುಂಬಿದ ಚರಂಡಿಯ ಕ್ಲೀನಿಂಗು..ಇಷ್ಟೇನಾ ಈ ಪಂಚಾಯತ್‌ನ ವಿಲೇವಾರಿ?
ಬಹುತೇಕ ಮತದಾರರು ಇಷ್ಟೇ ಎನ್ನುತ್ತಿದ್ದಾರೆ.ಪಂಚಾಯತ್ ಮೆಂಬರುಗಳಿಗೆ ಇದಕ್ಕಿಂತ ಹೆಚ್ಚು ಪವರ್ರು ಎಲ್ಲಿದೆ ಎಂದು ಕೇಳುತ್ತಾರೆ.ನಿಜವೇ ಇರಬಹುದು..ಹೇಳಿಕೇಳಿ ಈ ಪುಟಾಣಿಗಳ ಬಳಿ ಉಳಿದುದನ್ನೆಲ್ಲಾ ಕೇಳಿ ಹೇಳಿ ಏನು ಪ್ರಯೋಜನ ಎಂದು ಮತದಾರರು ಕೇಳುತ್ತಾರೆ.
ಹಾಗಾದರೆ ಈ ಚುನಾವಣೆ ಯಾರಿಗೆ ಲಾಭ?
ತಳ ಮಟ್ಟದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ರಾಜಕೀಯ ಪಕ್ಷಗಳಿಗೆ?ಮೊದಲ ಹಂತದಲ್ಲಿ ತಮ್ಮನ್ನು ಬೆಳೆಸಿಕೊಳ್ಳಬೇಕೆಂಬ ಕಿರಿಯ ರಾಜಕಾರಣಿಗಳಿಗೆ?ಒಟ್ಟಾರೆಯಾಗಿ ಹಳ್ಳಿ ರಾಜಕೀಯಕ್ಕೆ?
ಗ್ರಾಮಸ್ವರಾಜ್ಯದ ಕಲ್ಪನೆ ಇಷ್ಟೇನಾ?
ವಿಶೇಷ ವಿತ್ತ ವಲಯ,ಎಕ್ಸ್‌ಪ್ರೆಸ್ ರಸ್ತೆ ಅಂತ ಹಳ್ಳಿಗೆ ಹಳ್ಳಿಯನ್ನೇ ಎತ್ತಿಕೊಂಡು ಹೋಗುತ್ತಾರಲ್ಲಾ ಆಗ ಅದನ್ನು ತಡೆಯೋದಕ್ಕೆ ಈ ಗ್ರಾಮಪಂಚಾಯತ್‌ಗಳಿಗೆ ಶಕ್ತಿಯೇ ಇಲ್ಲವಲ್ಲಾ..ಇದು ಗ್ರಾಮ ಸ್ವರಾಜ್ಯವೇ?
ಅಣೆಕಟ್ಟು,ವಿದ್ಯುತ್ ಯೋಜನೆ,ಆ ಸ್ಥಾವರ,ಈ ಕೈಗಾರಿಕೆ ಅಂತ ನಗರ ಶಕ್ತಿಗಳು ಬಂದು ಹಳ್ಳಿಯನ್ನು ಆಕ್ರಮಿಸಿ ಕೂರುತ್ತವಲ್ಲಾ ಆಗ ಈ ಪಂಚಾಯತ್‌ಗಳ ಒಪ್ಪಿಗೆ ಪಡೆಯಬೇಕು ಎಂಬುದು ಕೂಡಾ ಪಂಚಾಯತ್‌ನ ನಿರ್ಧಾರವೇ ಆಗಿರುವುದಿಲ್ಲವಲ್ಲಾ..
ಅದು ಆ ಪಂಚಾಯತ್‌ನ ಜನರ ಸಾಮೂಹಿಕ ನಿರ್ಣಯವೇ ಅಲ್ಲವಲ್ಲಾ..
ಹಾಗಾದರೆ ಯಾವ ಪುರುಷಾರ್ಥಕ್ಕೆ ಈ ಪಂಚಾಯತ್‌ಗಳು ಉಳಿದುಕೊಳ್ಳಬೇಕು?
ಕೇವಲ ರಾಜಕೀಯ ಪಕ್ಷಗಳ ಮೂಲಸ್ಥಾವರದ ನಿರ್ಮಾಣಕ್ಕೆ ಪಂಚಾಯತ್‌ಗಳು ಬೇಕೇ?
ಅಂಗಡಿ-ಮಂಗಟ್ಟುಗಳಿಂದ ತೆರಿಗೆ ವಸೂಲಿ ಮಾಡೋದು ಮಾತ್ರವೇ ಗ್ರಾಮಸ್ವರಾಜ್ಯವೇ? ತಮಗೆ ಬೇಕಾದವರಿಗೆ ಗೂಡಂಗಡಿ ಹಾಕಲು ಎರೇಂಜ್‌ಮೆಂಟ್ ಮಾಡೋದಕ್ಕೆ ಪ್ರತಿನಿಧಿಗಳು ಬೇಕೆ?
ಕಳೆದ ಅವಧಿಯ ಒಂದು ಅವಲೋಕನವನ್ನಷ್ಟೇ ನೋಡಿರಿ.ಐದು ವರ್ಷಗಳಲ್ಲಿ ಕಾಲ ಎಷ್ಟೊಂದು ಬದಲಾಗುತ್ತಿತ್ತು.ಹಳ್ಳಿಗಳು ಹೇಗೆ ತಮ್ಮ ನೆಲೆಗಟ್ಟುಗಳನ್ನು ಕಳೆದುಕೊಳ್ಳುತ್ತಾ ಹೋದವು..ಹೇಗೆ ನಗರೀಕರಣದ ಮಾಯೆ ಹಳ್ಳಿಗಳನ್ನು ಆವರಿಸುತ್ತಾ ಹೋದವು ಎಂಬುದನ್ನಷ್ಟೇ ನೋಡಿ..
ಆಗ ಈ ಪಂಚಾಯತ್‌ಗಳ ನೆಲೆ- ಬೆಲೆ ಗೊತ್ತಾಗುತ್ತದೆ.
ಗ್ರಾಮದ ಧ್ವನಿಗೆ ಕಂಠವಾಗಲಾರದೇ ಪಂಚಾಯತ್‌ಗಳು ನರಳಿದವು.ಎಲ್ಲೆಲ್ಲೂ ಅಸಹಾಯಕತೆ ಕಾಣುತ್ತಿದ್ದವು.
ಇದಕ್ಕೆ ಉದಾಹರಣೆಯಾಗಿ ಕೃಷ್ಯುತ್ಪನ್ನಗಳ ಬೆಲೆಯನ್ನೇ ತೆಗೆದುಕೊಳ್ಳೋಣ.ತಮ್ಮ ಗ್ರಾಮದ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಬಡತನ,ಸೋಲು,ಸಾಲ ಎಲ್ಲಾ ಗ್ರಾಮಗ್ರಾಮಗಳಲ್ಲಿ ಹರಿದಾಡಿದವು.ರೈತಾಪಿ ವರ್ಗದಲ್ಲಿ ಅದೆಂಥಾ ಡಿಪ್ರೆಶನ್ ಕಂಡು ಬಂತೆಂದರೆ ಒಬ್ಬನೇ ಒಬ್ಬ ಸಾಮಾನ್ಯ ರೈತ ಸಂತೋಷದಿಂದ ಒಂದು ತುತ್ತೂ ತಿನ್ನಲಾಗಲಿಲ್ಲ.ಬೆಳೆ ಇಲ್ಲ,ಬೆಲೆ ಇಲ್ಲ ಎಂಬ ಪರಿಸ್ಥಿತಿ ಎಲ್ಲೆಡೆ ಕಾಣುತ್ತಿತ್ತು.ದೇಶದ ಮೂಲ ನೆಲೆ ಗ್ರಾಮಗಳು,ಗ್ರಾಮದ ಮೂಲ ರೈತ.ಅಂಥಾ ತುತ್ತತುದಿಯೇ ಕರಟಿಹೋಗತೊಡಗಿತು.
ಪಂಚಾಯತ್‌ಗಳು ಏನಾದರೂ ಮಾಡಲಾಯಿತೇ?
ಇಲ್ಲ.
ಬಹುಶಃ ಒಂದೇ ಒಂದು ಗ್ರಾಮಪಂಚಾಯತ್ ಕೂಡಾ ರಾಜ್ಯ ಸರಕಾರಕ್ಕೆ ಒಂದಾದರೂ ಪತ್ರ ಬರೆದು ತಮ್ಮ ಜನರ ಕಷ್ಟದ ಬಗ್ಗೆ ತಿಳಿಹೇಳಲಿಲ್ಲ,ಒಂದೊಮ್ಮೆ ಹೇಳಿದರೂ ಒಂದೇ ಒಂದು ಸರಕಾರದ ಮಂತ್ರಿಯಾಗಲಿ,ಅಧಿಕಾರಿಯಾಗಲಿ ಆ ಬಗ್ಗೆ ಅಯ್ಯೋ ಎಂದ ಉದಾಹರಣೆ ಇಲ್ಲ..ಐದು ವರ್ಷಗಳಲ್ಲಿ ಮೂರು ಬಗೆಯ ಸರಕಾರಗಳು ಬಂದು ಹೋಗಿದ್ದವು.ಕಾಂಗ್ರೆಸ್,ಜೆಡಿಎಸ್,ಬಿಜೆಪಿ,ಆಡಳಿತ ಮಾಡಿದವು.ಧರ್ಮಸಿಂಗ್ ಕುಮಾರ ಸ್ವಾಮಿ.ಯಡಿಯೂರಪ್ಪ ಆಡಳಿತಕ್ಕೇರಿ ಕೂತು ತಾವೆಲ್ಲಾ ಹಳ್ಳಿಯ ಜನ ಎಂದು ಜೋಕ್ ಮಾಡಿದರು.ಮೂರೂ ಪಕ್ಷಗಳ ಹಣೆಬರಹ ಏನೆಂದು ನೋಡಿದ್ದಾಗಿದೆ.ಮೂವರು ಮುಖ್ಯಮಂತ್ರಿಗಳ ಜಾತಕ ಓದಿಯಾಗಿದೆ.ಪಂಚಾಯತ್‌ಗಳಿಗೆ ಇದಕ್ಕಿಂತ ದೊಡ್ಡ ಪಾಠ ಇನ್ನೊಂದಿರದು.
ತನ್ನ ಗ್ರಾಮದ ರೈತನಿಗೆ ಬಿತ್ತನೆ ಕಾಲಕ್ಕೆ ಬೀಜ,ಚಿಗುರುವ ಹಂತಕ್ಕೆ ಗೊಬ್ಬರ,ನೀರಾವರಿಗೆ ವಿದ್ಯುತ್,ಕೊಯ್ಲಿನ ನಂತರ ಮಾರುಕಟ್ಟೆ ಕೊಡಿಸಲು ಪಂಚಾಯತ್‌ಗಳಿಗೆ ಪವರ್ರಿಲ್ಲ ಎಂದರೆ ಇದು ತಳ ಹಂತದ ಅಧಿಕಾರ ಆಗೋದು ಹೇಗೆ/ವಿಕೇಂದ್ರೀಕೃತ ಅಧಿಕಾರ ವ್ಯವಸ್ಥೆ ಎಂದು ಕರೆಯೋದು ಹೇಗೆ?
ಸರಕಾರದ ಬಳಿ ನೂರಾರು ಯೋಜನೆಗಳಿವೆ.ಎಲ್ಲವೂ ಜನರಿಗಾಗಿಯೇ ಇವೆ.ಹಳ್ಳಿಗಳನ್ನು ಹಾದೇ ತಾನೇ ಯೋಜನೆಗಳು ಹೋಗಬೇಕು?ಅವುಗಳನ್ನೆಲ್ಲಾ ಗ್ರಾಮಗಳ ಸರ್ವಾಂಗೀಣ ಉದ್ಧಾರಕ್ಕಾಗಿಯೇ ರಚಿಸಲಾಗಿದೆ ಎಂದು ಹೇಳಿದರೆ ಈಗ ನಂಬುವ ಕಾಲ ಕಳೆದುಹೋಗಿದೆ.ಬೆಳೆಗಳಿಗೆ ಬೆಲೆ ಇಲ್ಲದ ಹೊತ್ತಿನಲ್ಲಿ ಉಚಿತ ವಿದ್ಯುತ್ ರೈತರ ಬಲಕ್ಕೆ ನಿಲ್ಲಲಾರದು.ದಾರಿದೀಪ,ಆರೋಗ್ಯ ವಿಮೆ,ಉದ್ಯೋಗ ಮೇಳಗಳು ಗ್ರಾಮೀಣ ಜನರ ಬದುಕಿಗೆ ಪಂಚಾಯತ್ ಕೊಡುಗೆ ಏನಲ್ಲ.
ಒಂದೇ ಒಂದು ಪಂಚಾಯತ್ ತನ್ನ ಜನರಿಗೆ ತಾನೇ ಕಟ್ಟಿಕೊಟ್ಟ ಬದುಕು ಯಾವುದಾದರೂ ಉಂಟೋ..
ಯಾವ ಪಂಚಾಯತ್ ರೈತರ ಟೊಮೆಟೋ ರಸ್ತೆಗೆ ಸುರಿಯದಂತೆ ಮಾಡಿದೆ?ಯಾವ ಪಂಚಾಯತ್ ನನ್ನ ಅಡಕೆ ಬೆಳೆಗಾರನಿಗೆ ಇಷ್ಟು ರೇಟು ಕೊಡದೇ ಇದ್ದರೆ ನನ್ನೂರಲ್ಲಿ ಅಂಗಡಿ ಮುಚ್ಚಿ ಹೋಗು ಎಂದು ವ್ಯಾಪಾರಿಗೆ ಹೇಳಿದೆ?ಯಾವ ಪಂಚಾಯತ್ ಆತ್ಮಹತ್ಯೆ ಮಾಡದಂತೆ ಒಬ್ಬ ಸೋತ ರೈತನಿಗೆ ಕೌನ್ಸಿಲಿಂಗ್ ಮಾಡಿದೆ?ಯಾವ ಪಂಚಾಯತ್ ತನ್ನೂರಿನಲ್ಲಿ ಸಾಮೂಹಿಕ ವಿವಾಹ ನಡೆಸಿದೆ?ಯಾವ ಪಂಚಾಯತ್ ತನ್ನೂರಿನ ಭ್ರಷ್ಠ ಅಧಿಕಾರಿಯನ್ನು ಹಿಡಿದು ಚಚ್ಚಿದೆ?
ತನ್ನ ಊರಲ್ಲಿ ಹಾದು ಹೋಗುವ ಪಿಡಬ್ಲ್ಯುಡಿ ರಸ್ತೆಯ ಹೊಂಡವನ್ನು ಯಾವುದಾದರೂ ಪಂಚಾಯತ್ ಮುಚ್ಚಿದ್ದು ಉಂಟೇ?ತನ್ನ ಗ್ರಾಮದ ಶಾಲೆಯ ಗೋಡೆಯಲ್ಲಿ ಒಂದು ಬಣ್ಣದ ಚಿತ್ರ ಬಿಡಿಸದ ಪಂಚಾಯತ್ ಇಡೀ ದೇಶದ ಭವಿಷ್ಯ ಬರೆಯುತ್ತದೆ ಎಂದರೆ ನಂಬುವುದಾದರೂ ಹೇಗೆ?

20100505

ಈ ಕವನ ಅವಳಿಗಲ್ಲ

ಒಂದು ರಾತ್ರಿ
ನನಗೆ ಕನಸು ಬಿತ್ತು.
ಅದರಲ್ಲಿ ಇಬ್ಬರು ಬಂದಿದ್ದರು.
ಒಬ್ಬರು ನಿಮ್ಮ ದೇವರು,ಒಬ್ಬಳು ನನ್ನ ಪ್ರೇಯಸಿ.
ಇಬ್ಬರೂ ಒಟ್ಟಿಗೇ ಬಂದರು.
ತಬ್ಬಿಕೋ ಎಂದರು.
ದೇವರು ಮಂದಸ್ಮಿತ,
ಪ್ರೇಯಸಿಯ ಸುಸ್ಮಿತಾ.
ದೇವರು ಬದಲಾಗಿರಲಿಲ್ಲ.
ಪ್ರೇಯಸಿ ಕೂಡಾ ಅಂದಿನವಳೇ.
ಎಲ್ಲಿಗೆ ಹೊರಟಿರೋ ಎಂದು ಕೇಳಿದೆ..
ದೇವರೆಂದರು ಕಾಲದ ಕೊನೆಗೆ,
ಪ್ರೇಯಸಿ ಎಂದಳು ಪ್ರೀತಿಯ ಶುರುವಿಗೆ.
ಕ್ಷಣ ಕಾಲ ಇಲ್ಲಿಗೆ ಇರಲು ಬಂದಿದ್ದೇವೆ,
ಮರಳಿ ಮತ್ತೊಮ್ಮೆ ಬರಲಾರೆವು..
ಈಗಲೇ ತಬ್ಬಿಕೋ,
ಮುತ್ತಿಕ್ಕಿ ಮದವೇರಿಸು,
ಅಪ್ಪುಗೆ,ಆಲಿಂಗನ,ಮೈ ತುಂಬ ಚುಂಬನ
ಸ್ಪರ್ಶಕ್ಕೆ ಆಗಲಿ ಮೋಕ್ಷ,
ಮತ್ತೊಮ್ಮೆ ಹುಟ್ಟದಿರಲಿ ಈ ಮಾಯೆ ಎಂಬ ಸತ್ಯ..
ನಾನು ಎಚ್ಚರವಾದಾಗ ಅಮ್ಮ ತೂಗುತ್ತಿದ್ದಳು..
ನಾನು ಈಗಲೂ ಬರೀ ಹಸುಳೆ.