20100227

ನಾಲ್ಕು ಸಾಲು
೧.
ನನ್ನೊಳಗೆ ಹುಟ್ಟಿದ ಆಕೆ
ನನಗೆ ಹೇಳದೇ
ಅವನ ಮನೆಯೊಳಗೆ ಹಾಡಾದಳು
ಅವನು ಮೀಟಿದ ತಂತಿ ಅವನದ್ದು
ಸ್ವರ ಲಯ ಭಾವ ಅವಳದ್ದು
ಹಾಡು ನಾನೇ ಬರೆದದ್ದು..

೨.
ಗೆಳತಿಯ ಜೊತೆ ಕಳೆದ
ಯೌವನ,
ಮಗುವಿನ ಜೊತೆ ಕಳೆದ
ಬಾಲ್ಯ,
ಅಪ್ಪನ ಜೊತೆ ಕಳೆದ
ವೃದ್ಧಾಪ್ಯ,
ಹೂವಿನ ಜೊತೆ ಕಳೆದ್ದದ್ದು
ಮಾತ್ರಾ ವಿರಹ..
೩.
ಆಕಾಶದಲ್ಲಿ ಕಂಡ
ಸಾವಿರ ಕೋಟಿ ಚುಕ್ಕಿಗಳಲ್ಲಿ
ನನ್ನದೂ ಅಂತ ಯಾವುದೂ ಇಲ್ಲ
ಅವಳು ಹೇಳಿದಳು
ಅದೆಲ್ಲಾ ನಮ್ಮದೇ
ಪ್ರೀತಿ ಮಿನುಗಿ ಮಾಸುವುದು ಇದಕ್ಕೇ..
೪.
ಒಂದೊಮ್ಮೆ ನಾನು ಕಾಡಿನ
ಮರವಾಗುತ್ತಿದ್ದರೆ,
ನನ್ನ ಹುಡುಗಿ ಇನ್ನೊಬ್ಬನ ತೆಕ್ಕೆಯಲ್ಲಿ
ತೇಲುವುದು ಕಾಣಬೇಕಿತ್ತು
ಎಂಥಾ ಅದೃಷ್ಟ ನನ್ನ ಹಿತ್ತಿಲ ಮರದ್ದು

20100210

ಅರಸರ ಕಂಡೀರಾ..?
ರಾಜಮಹಾರಾಜರ ಮರ್ಜಿ ಹೇಗಿರುತ್ತದೆ ಅಂತ ಈಗ ಕೇಳಿದರೆ ಆಗುತ್ತದಾ?
ನಮ್ಮೂರಿನ ಅರಸರ ಕಾಲದಲ್ಲಿ ಯಾರೂ ಮನೆಯಲ್ಲಿ ಹೆಸ್ರುಬೇಳೆ ಪಾಯಸ ಮಾಡಬಾರದು ಅಂತ ಕಾನೂನು ಇತ್ತಂತೆ.
ಹಾಗಂತ ನನ್ನ ಅಪ್ಪ ಸೊಗಸಾಗಿ ಕಥೆ ಹೇಳುತ್ತಿದ್ದರು.
ಅದೊಂದು ಪಾಳೇಗಾರರ ರಾಜ್ಯ.
ಯಾವುದೋ ದೊಡ್ಡರಸರ ದೊಡ್ಡರಸರ ಅಧೀನದಲ್ಲಿದ್ದ ಅರಸರ ಸಾಮಂತರ ಸಾಮಂತರಾಗಿದ್ದವರ ಕೈ ಕೆಳಗೆ ಇದ್ದವರು.ಈಗ ಈ ಸೋಕಾಲ್ಡ್ ಪ್ರಜಾಸತ್ತೆಯಲ್ಲಿ ಆ ದೊಡ್ಡರಸರು, ಸಾಮಂತರು,ಪಾಳೇಗಾರರನ್ನು ಡಿಫೈನ್ ಮಾಡೋದು ಕಷ್ಟವೇ.
ಚಂದಮಾಮದ ಕಥೆಗಳನ್ನು ಮತ್ತೆ ಓದಬೇಕು ಅಥವಾ ರಾಜ್‌ಕುಮಾರ್ ಸಿನಿಮಾಗಳನ್ನು ಮತ್ತೆ ಹುಡುಕಿ ನೋಡಬೇಕು.
ನಮ್ಮೂರ ರಾಜ ಅಂದರೆ ಹೇಗಿರುತ್ತಿದ್ದ ಅಂತ ಅಪ್ಪನಿಗೆ ಕೇಳಿದರೆ ಅಪ್ಪ ನಾನು ನೋಡುವಾಗ ನಮ್ಮ ಹಾಗೇ ಇದ್ದಎಂದು ಹೇಳಿ ನಮ್ಮ ಕುತೂಹಲಕ್ಕೆ ತಣ್ಣೀರು ಹಾಕುತ್ತಿದ್ದ.
ಅಪ್ಪ ಹೇಳುತ್ತಿದ್ದ ಪ್ರಕಾರ ನಮ್ಮೂರ ಅರಸರು ಅಪ್ಪನ ಕಾಲಕ್ಕೆ ಒಂಥರಾ ಜಮೀನ್ದಾರರು ಅಷ್ಟೇ.ಕಾಲ ಕಳೆದು ಹೋದ ಹಾಗೇ ಅವರೆಲ್ಲಾ ಕಾಲದ ವರಸೆಯಲ್ಲಿ ಸಿಕ್ಕು ಸೀದು ಹೋದರು.
ಯಾರನ್ನು ಬಿಡುತ್ತದೆ ಕಾಲ?ಕಾಲಪುರುಷಂಗೆ ಗುಣಮಣಮಿಲ್ಲಂಗಡಾ ಎಂದಿದ್ದ ಮುದ್ದಣ.
ಜೈಹೋ..
ನಮ್ಮೂರ ಅರಸರು ಬಹು ಕಾಲದ ಹಿಂದೆ ದೊಡ್ಡ ಪಾಳೇಗಾರರೇ ಆಗಿದ್ದಾಗ ಅವರ ಖದರ್ ಬೇರೆಯೇ ಇತ್ತಂತೆ.ಅವರು ಯಾರನ್ನು ಯಾರಿಗಾಗಿ ಏನೂಂತ ಆಳಿದರು ಅಂತ ಕೇಳಬಾರದು.ಅವರು ಇದ್ದರು ಅರಸರಾಗಿ,ಉಳಿದವರಿದ್ದರು ಪ್ರಜೆಗಳಾಗಿ.
ಅರಸ ಮತ್ತು ಪ್ರಜೆ ಅಂದ ಮೇಲೆ ಹಾಗೇ ಇರುತ್ತದೆ ತಾನೇ.
ಕೋಟೆ,ಅರಮನೆ,ಕಾವಲುಗಾರರು,ಸೈನ್ಯ,ಅಂತಃಪುರ,ರಾಣಿಯರು,ಒಡ್ಡೋಲಗ,ಶಿಕ್ಷೆ,ಯುದ್ಧ,ಕುದುರೆಲಾಯ,..
ನಮ್ಮೂರ ಅರಸರಲ್ಲಿ ಅದೆಲ್ಲಾ ಇತ್ತು ಅಂತ ಎಲ್ಲ ಪ್ರಜೆಗಳಂತೆ ನಮ್ಮ ಅಪ್ಪ ಕೂಡಾ ಭಾವಿಸಿದ್ದರು.
ನೋಡಿದ್ದೀರಾ ಅಂತ ಕೇಳಿದರೆ ನಾನು ನೋಡುವಾಗ ಅವರ ಬಳಿ ಏನೂ ಇರಲಿಲ್ಲ ಅಂದಿದ್ದರು.
ಅಪ್ಪ ನಾನು ಕೇಳಿದ ಪ್ರಶ್ನೆಯನ್ನೇ ಅವರ ಅಪ್ಪನಿಗೆ ಕೇಳಿದ್ದರಂತೆ.ಅವರೂ ಅವರ ಅಪ್ಪನಿಗೆ ಅದೇ ಪ್ರಶ್ನೆ ಕೇಳಿದ್ದರಂತೆ.
ಆಗ ಆತ ಅಂದರೆ ನಮ್ಮ ಮುತ್ತಜ್ಜ,.."ಶ್ಯ್..ಅರಸರನ್ನು ನೋಡುವುದು ಅಂದರೆ ಹುಡುಕಾಟಿಕೆಯಾ?" ಅಂದಿದ್ದರಂತೆ.
ನನ್ನ ಮುತ್ತಜ್ಜನ ಅಜ್ಜ ಮಾತ್ರಾ ಒಮ್ಮೆ ಅರಸರನ್ನು ನೋಡಿದ್ದರಂತೆ.ದೊಡ್ಡ ಜೀವದ ದೊರೆ.ಅವನು ಕೆಂಪು ಕೆಂಪು ಇದ್ದನಂತೆ.ತಲೆಗೆ ಜರತಾರಿ ಪೇಟ ಮಡಗಿದ್ದನಂತೆ.ಮೇನೆಯಲ್ಲಿ ಹೋಗುತ್ತಿದ್ದಾಗ ಅಜ್ಜ ಕಂಡದ್ದು.ಅದೂ ಕಾಣುತ್ತಿರಲಿಲ್ಲ.ಅದೇನೋ ಅರಸನಿಗೆ ಕೆಮ್ಮು ಬಂತು.ಕಫ ಉಗುಳಬೇಕಿತ್ತು.ಮೇನೆಯ ಪರದೆ ಸರಿಸಿ ಉಗುಳಿದ.ಆ ಹೊತ್ತಿನಲ್ಲಿ ಆ ಜಾಗದಲ್ಲಿ ಅಜ್ಜ ನಿಂತಿದ್ದ.ಅದು ತೀರಾ ಆಕಸ್ಮಿಕ.ಆದರೆ ಅದು ನೋಡಿ ಅಜ್ಜನ ಅದೃಷ್ಟ!
ಏಕೆಂದರೆ ಅಜ್ಜ ಅರಸರನ್ನು ನೋಡಿಬಿಟ್ಟ.
ಮರುದಿನ ಅಜ್ಜನ ಕುಟುಂಬದ ಮನೆಯಲ್ಲಿ ದೊಡ್ಡ ಔತಣಕೂಟ.ಅಲ್ಲಿಗೆ ಅಜ್ಜ ಹೋದರೆ ಅಜ್ಜನೇ ಒಂದು ಅರಸನಾಗಿದ್ದ.ಎಲ್ಲರೂ ಕೇಳುವವರೇ..ಏನು ಅರಸರನ್ನು ನೋಡಿದೆಯಂತೆ..
ಅಜ್ಜ ಬಹಳ ಹೊತ್ತು ಬಹಳ ಜನರಿಗೆ ಅದನ್ನು ವಿವರಿಸಿ ವಿವರಿಸಿ ಸುಸ್ತಾಗಿದ್ದರಂತೆ.
ಉಳಿದವರೆಲ್ಲಾ ಅಜ್ಜನನ್ನು ಅಭಿನಂದಿಸಿದರಂತೆ,"ಆಗಲಿ ನಮ್ಮ ಕುಟುಂಬದಲ್ಲಿ ನೀನಾದರು ಒಬ್ಬ ಅರಸರನ್ನು ನೋಡಿದೆಯಲ್ಲಾ.."
"ನಿನಗೆ ರಾಜಯೋಗ ಇದೆ ಅಂತ ಜಾತಕದಲ್ಲಿ ಬರೆದದ್ದು ಕೊನೆಗೂ ಸುಳ್ಳಾಗಲಿಲ್ಲ ನೋಡು" ಎಂದು ಆ ಅಜ್ಜನ ಅಜ್ಜಿ ಹೇಳಿದ್ದಳಂತೆ..
ನಮ್ಮೂರ ಅರಸರಿಗೆ ಬೇರೆ ಬೇರೆ ಖಯಾಲಿ..
ಅವರಲ್ಲೊಬ್ಬನಿಗೆ ಹೆಸ್ರುಬೇಳೆ ಪಾಯಸ ಅಂದರೆ ಭಾಳಾ ಪ್ರೀತಿ.ತಾನಲ್ಲದೇ ಇನ್ಯಾರೂ ಅದನ್ನು ತಿನ್ನ ಬಾರದು ಎಂಬ ಉಢಾಳತನ.ಅದಕ್ಕೇ ಆತ ಒಂದು ಶಾಸನ ಮಾಡಿದ್ದನಂತೆ.
"ರಾಜ್ಯದಲ್ಲಿ ಯಾರೂ ಹೆಸ್ರುಬೇಳೆ ಪಾಯಸ ಮಾಡಿದರೆ ತಲೆ ಕತ್ತರಿಸಲಾಗುವುದು".
ಇತ್ತ ನಮ್ಮ ಮುತ್ತಜ್ಜರ ಸಾಲಿನ ಓರ್ವ ಆ ಕಾಲದಲ್ಲಿ ಇರಲೇಬೇಕು ತಾನೇ.ಅವನಿಗೂ ಹೆಸ್ರುಬೇಳೆ ಪಾಯಸ ಅಂದರೆ ಪಂಚಪ್ರಾಣ.
ಆದರೇನು ಮಾಡೋಣ..ಅರಸರನ ಶಾಸನ ಇದೆ.ಹೆಸ್ರುಬೇಳೆ ಪಾಯಸ ಮಾಡುವಂತಿಲ್ಲವಲ್ಲ.
ಈ ಘಾಟಿ ಅಜ್ಜ ಮಾತ್ರಾ ತನ್ನ ಹೊಲದಲ್ಲಿ ಕದ್ದು ಮುಚ್ಚಿ ಹೆಸ್ರು ಗಿಡ ಬೆಳೆದು,ಕಾಳು ಕೊಯ್ದು,ಒಣಗಿಸಿ,ಮನೆಯ ಅಟ್ಟದಲ್ಲಿ ಬೀಸುವ ಕಲ್ಲಿನಲ್ಲಿ ಗರಗರನೇ ತಿರುಗಿಸಿ ಬೇಳೆ ಮಾಡಿ ರಾತ್ರೋರಾತ್ರಿ ಇಡೀ ರಾಜ್ಯ ಹೊದ್ದು ಮಲಗಿ ಗೊರಕೆ ಹೊಡೆಯುತ್ತಿದ್ದಾಗ ಒಲೆ ಹತ್ತಿಸಿ,ಬೇಳೆ ಬೇಯಿಸಿ,ಬೆಲ್ಲ ಹಾಕಿ,ಕಾಯಿ ಹಾಲು ಸುರಿದು,ಕುದಿಸಿ ಬತ್ತಿಸಿ ಪಾಯಸ ಮಾಡಿ ಹೊಟ್ಟೆ ತುಂಬಾ ಉಣ್ಣುತ್ತಿದ್ದನಂತೆ.ಮನೆಯ ಮಕ್ಕಳನ್ನು ನಸುಕಿನ ಜಾವಕ್ಕೆ ಎಬ್ಬಿಸಿ ಅವರಿಗೆ ನಿದ್ದೆಗಣ್ಣಲ್ಲೇ ಪಾಯಸ ಉಣಿಸಿ ಮತ್ತೆ ಮಲಗಿಸುತ್ತಿದ್ದನಂತೆ.
ಹಾಗೇ ಪಾಯಸ ಸಿದ್ಧಮಾಡಿದಾಗ ಒಂದು ದೊನ್ನೆಯಲ್ಲಿ ಒಂದು ಪ್ರತಿ ತೆಗೆದಿಡುತ್ತಿದ್ದನಂತೆ,
ಅರಸನಿಗೆ..ಅಂತ.
ಕಾಲವೆಲ್ಲಾ ಕಳೆದು ಹೋಯಿತು.
ನಾನು ಅದೇ ಅರಮನೆಗೆ ಹೊಸತಾಗಿ ಪತ್ರಕರ್ತನಾದ ಹೊತ್ತಲ್ಲಿ ಹೋಗಿದ್ದೆ.
ತಡಮೆ ಮೇಲೆ ಒಬ್ಬ ಕುಳಿತು ಬೀಡಿ ಸೇದುತ್ತಿದ್ದ.
ನಾನು ಕೇಳಿದೆ,"ಅರಸರು ಬೇಕಿತ್ತು..ಎಲ್ಲಿದ್ದಾರೆ?"
ಆತ ಹೇಳಿದ,"ನಾನೇ ಅರಸ..ಏನಾಗಬೇಕಿತ್ತು?"
ಯಾಕೋ ಮನಸ್ಸು ಮುರುಟಿತು.
ಕೈ ಮುಗಿದುಹೋಯಿತು.
ಆಮೇಲೆ ಆತ ಹೇಳಿದ ಇತಿಹಾಸದಲ್ಲಿ ನನಗೆ ಯಾವ ಅರಸರು ಕಾಣಿಸಲೇ ಇಲ್ಲ.

20100205

ಕಾಲ -ಯಾಪನೆಕಳೆದು ಹೋದ ಕಾಲವನ್ನು ಮತ್ತೆ ಹುಡುಕಲು ಹೊರಟೆ
ಹಾದಿ ಮಧ್ಯೆ ಸಿಕ್ಕಿದ್ದು ಅದೇ ಕಾಲ.
ಎಲ್ಲಿಗೆ ಹೊರಟಿರೋ
ಪ್ರಶ್ನೆಗೆ ಉತ್ತರವಿಟ್ಟೆ
ಕಾಲ ಕಳೆದುಹೋಗಿದೆ,ಹುಡುಕುತ್ತಿದ್ದೇನೆ.
ಹಾಗೋ ಸಮಾಚಾರ,ಹುಡುಕಿ ಹುಡುಕಿ
ನಾನು ಬರಲೇ ಜೊತೆಗೆ?
ಈಗ ಬೇಡ ಅಂತ ಅನಿಸುತ್ತಿದೆ,
ಬೇಕಾದಾಗ ಕರೆಯುತ್ತೇನೆ ಎಂದೆ.
ಕಾಲ ಸರಿಯಿತು
ಅದೇ ಕಾಲಗರ್ಭಕ್ಕೆ.
ಕಾಲ ಕಳೆದು ಹೋದುದೆಲ್ಲಿ?
ನಾನು ಮರಳಿ ಮರಳಿ ಯೋಚಿಸಿದೆ,
ಎಲ್ಲಿ ಎಲ್ಲಿ?
ನನ್ನಲ್ಲಿ?
ಅಥವಾ
ನನ್ನ ಸನಿಹದಲ್ಲಿ?
ಎರಡೂ ಅಲ್ಲವೇನೋ ಅಂತನಿಸಿತು,
ಇರಲಿಕ್ಕಿಲ್ಲ,ನಾನು ಕಾಲವನ್ನು ಕಳೆದುಕೊಳ್ಳುವವನಲ್ಲ,
ಜೊತೆಗಿದ್ದ ಕಾಲವನ್ನು ಯಾರಾದರೂ ಬಿಡುವರೇ?
ನಾನಂತೂ ಬಿಡಲಾರೆ,
ಅಪ್ಪಿಕೊಂಡಿದ್ದೆ ಅದನು,ಗೆಳತಿಯ ತರಹ
ಮೊರೆಯಿಟ್ಟಿದ್ದೆ ಅದಕ್ಕೆ ಬಿಡಬೇಡ ಈ ಬಿಗುವ
ಕಾಲದ ತೆಕ್ಕೆಯಲ್ಲಿ ನಿತ್ಯವೂ ಹುಸಿಯಾಗುತ್ತಿದ್ದೆ,
ಸತ್ಯವನ್ನು ಕಳೆದುಕೊಂಡು ಸುಖಿಸುತ್ತಿದ್ದೆ.
ಏನೋ ಚೆನ್ನಾಗಿತ್ತು ಆ ಕಾಲದ ಜೊತೆಗೆ
ಗಾಡಿ ಚಕ್ರವ ಎಂಟಾಣೆ ಪಾವಲಿ ಹಾಕಿ
ಗರ್ರನೇ ತಿರುಗಿಸಿ ಅದು ನಿಲ್ಲಲು ಕಾತರಿಸುತ್ತಿದ್ದಂತೆ..
ಕೋಡುಬಳೆ,ಹಲ್ವಾಗೆ ಆಸೆ..
ಚಕ್ರ ತಿರುತಿರುಗಿ ಅಲ್ಲೇ ನಿಲ್ಲಲೆಂಬ ಹಾರೈಕೆ
ಒಮ್ಮೆಯಾದರೂ ನಿಲಲಿಲ್ಲ ನಾನು ಕೇಳಿದಲ್ಲಿ
ಆದರೆ ತಿರುಗಿದ ಚಕ್ರ ನಿಲ್ಲೇ ಬೇಕಲ್ಲ,
ನಿಂತಿತ್ತು.
ಸಿಕ್ಕಿದ್ದು ಮಾತ್ರಾ ಎಳ್ಳುಂಡೆ
ಕಾಲ ಸಾಗಲಿಲ್ಲ,ಕೈ ಕೂಡಲಿಲ್ಲ,ಕಾಲುಗಳು ಮುಂದೋಡಲಿಲ್ಲ
ಮಾತು ಬಿದ್ದಿತ್ತು
ಕಣ್ಣು ಮಂಜಾಗಿತ್ತು
ಪಾದದಡಿಯಲ್ಲಿ ಯಾವುದೋ ಜ್ವರ
ಮತ್ತೆ ಮರಳಲಾಗದೆ ನಿಂತರೆ ಮತ್ತೆ ಕಂಡದ್ದು ಅದೇ ಕಳೆದು ಹೋದ ಕಾಲ
ನಾನು ಬರಲೇ ಜೊತೆಗೆ ಕಾಲದ ಹುಡುಕಾಟಕ್ಕೆ?
ಬಾ ನನ್ನ ಜೊತೆ
ನಾನು ಮಾತ್ರಾ ಇಲ್ಲೇ ಸ್ಥಿರತೆ
ನೀನೇ ಹುಡುಕಿಕೊಡು ನಿನ್ನ
ಜೊತೆಗೆ ನನ್ನನ್ನ..
ಕಾಲ ಅಪ್ಪಿಕೊಳ್ಳಲಿಲ್ಲ,ಮೈ ದಡವಿ ಮುದ್ದಿಸಲಿಲ್ಲ
ತೆರೆದ ತುಟಿಗೆ ಚುಂಬಿಸಿದವರು ಯಾರು ನನಗೆ ಗೊತ್ತಾಗಲೇ ಇಲ್ಲ
ನಾನು ಆ ಮುಸುಕಿನಲ್ಲೂ ಹುಡುಕಿದೆ
ಕಾಲದ ಆ ಪುಟ್ಟ ಕಿರುಬೆರಳಿಗೆ
ಆ ಮಧುರ ಸ್ಪರ್ಶಕ್ಕೆ

20100204

ಸುಲಗ್ನೇ ಸಾವಧಾನೌ..

ಎನ್ಸು ಭಟ್ಟರ ಮಗಳು ಸುಲೋಚನೆ ಮತ್ತು ಮಗ ಶ್ಯಾಮ ಮದುವೆಯಾಗದೇ ಬಾಕಿಯಾಗಿರೋದು ಹಾಗೇನೂ ಹೊಸಾ ಸುದ್ದಿಯೇ ಅಲ್ಲ.
ಎನ್ಸು ಭಟ್ಟರಿಗೆ ಎಂಟು ಮಕ್ಕಳು.
ಮೊದಲನೆಯವಳು ಸುಲೋಚನೆ ಕೊನೆಯವನು ಶ್ಯಾಮ
ಅಕ್ಕ ಮತ್ತು ತಮ್ಮ.
ಸುಲೋಚನೆಗೆ ಈಗ ಭರ್ತಿ ಅರುವತ್ತು ವರ್ಷ ವಯಸ್ಸು.ಶ್ಯಾಮನಿಗೆ ಎಷ್ಟು ಅಂದರೆ ಆತ ಹೇಳುವುದಿಲ್ಲ.
ಎಷ್ಟೋ ಆಯಿತು ಅಂತಾನೆ.ಎನ್ಸು ಭಟ್ಟರಂತೂ ತನ್ನ ಮುದ್ದಿನ ಮಗನಿಗೆ ಮೂವತ್ತೆರಡು ವರ್ಷ ದಾಟಿಸೋದಿಲ್ಲ.
ಯಥಾರ್ಥಕ್ಕಾದರೂ ಶ್ಯಾಮನಿಗೆ ನಲುವತ್ತಾಗಿದೆ.ಸುಲೋಚನೆಗೆ ಎಷ್ಟೂಂತ ಹೇಳಿದರೂ ಆಗುತ್ತದೆ,ಏಕೆಂದರೆ ಅವಳೀಗ ಅಜ್ಜಿ.ಮದುವೆ ಆಗಿಲ್ಲ ಎಂದರೆ ಮಾಡಿಲ್ಲ ಅಂತ ಅರ್ಥ.
ಶ್ಯಾಮ ಈಗ ಮದುವೆಯಾಗಲೇಬೇಕು ಅಂತ ನಿರ್ಧರಿಸಿದ್ದಾನೆ.
ಎನ್ಸು ಭಟ್ಟರೂ ಅದೇ ಮಾತು ಹೇಳುತ್ತಿದ್ದಾರೆ.ಮದುವೆ ಅಂತ ಗಂಡಸು ಆಗದಿದ್ದರೆ ಹೇಗೆ?ಈಗ ತೊಂಡಂತಟಪಟ ಅಂತ ನಾನಿದ್ದೇನೆ,ಆದರೆ ಎಷ್ಟು ದಿನ ಅಂತ ನಾನಿರಬಹುದು..
ನನ್ನ ದಿನ ಅಂತ ಕಳೆಯುತ್ತದೆ,ಆಮೇಲೆ ಅವನೂ ಮುದುಕನಾಗುತ್ತಾನೆ,ಆಮೇಲೆ ಕೈ ಕಾಲು ಬಿದ್ದ ಮೇಲೆ ನಮ್ಮ ಶ್ಯಾಮನಿಗೆ ಗತಿ ಯಾರು?
ಹಾಗಾಗಿ ಅವನಿಗೆ ಮದುವೆ ಮಾಡುವುದೇ ಅಂತ ಅವರು ನಿರ್ಧಾರ ಮಾಡಿಬಿಟ್ಟಿದ್ದಾರೆ.
ಕಳೆದ ತಿಂಗಳು ನಮ್ಮ ಸಂಗಮಕ್ಷೇತ್ರದಲ್ಲಿ ರಮೇಶನ ಮದುವೆ ಆಗಿತ್ತಲ್ಲ,ಅದೇ ಕಲ್ಯಾಣಮಂಟಪದಲ್ಲಿ ಅವರು ಹಲವಾರು ಮಂದಿ ಜೊತೆ ಮಾತ್ನಾಡಿದ್ದು ಇದೇ ಸಮಾಚಾರ.
ಶ್ಯಾಮನಿಗೆ ಏನಾಗಿದೆ?
ಸುಂದರ ಹುಡುಗ.ಒಮ್ಮೆ ತಲೆ ಎತ್ತಿ ಕುಡುಗಿದ ಅಂದರೆ ಕ್ರಾಪು ನೀಟಾಗಿ ಮೋರೆ ತನಕ ಹಾದು ಕೂರುತ್ತಿತ್ತು.ಈಗ ಆ ಬಿರುಸು ಇಲ್ಲ.ಮೊನ್ನೆ ಮೊನ್ನೆ ಅವನು ಹೇರ್‌ಕಟ್ಟ್ ಮಾಡಿಸಲು ಕೂತಾಗ ರೂಬಿ ಸೆಲೂನಿನನ ಹಿಂದೀ ಭಾಯಿ ಹುಡುಗ ಅವನಿನ ಕಟ್ಟಿಂಗು ಮಾಡಿ ಒಂದು ದೊಡ್ಡ ಕನ್ನಡಿ ಹಿಡಿದಿದ್ದ.ಅದರಲ್ಲಿ ಪ್ರತಿಫಲನ ನೋಡಿದಾಗಲೇ ಶ್ಯಾಮನಿಗೆ ತನ್ನ ತಲೆ ಹಿಂದುಗಡೆಯಿಂದ ಮಾಸುತ್ತಿರುವುದು ಗೊತ್ತಾಗಿತ್ತು.
ಅದೇ ದಿನ ಸಂಜೆ ಅವನು ಕಪ್ಪರ ಗುಡ್ಡೆಯಲ್ಲಿ ಗರಗನ ಹುಲ್ಲು ಹುಡುಕಿ ತಂದು ಕಡೆದು ತೆಂಗಿನೆಣ್ಣೆ ಕಲಸಿ ಕುದಿಸಿ ತೈಲ ಕಾಸಿ ತಲೆಗೆ ಸವರುತ್ತಿದ್ದಾನೆ.
ಆದರೆ ಪ್ರಯೋಜನ ಅಂತ ಆಗಿಲ್ಲ,ತಲೆ ಮತ್ತಷ್ಟು ಬೋಳಾಗುವ ಇಂಗಿತ ವ್ಯಕ್ತಪಡಿಸಿದೆ.
ಶ್ಯಾಮನಿಗೆ ಯಾವಾಗ ತನ್ನ ತಲೆ ಬೀಳುತ್ತದೋ ಎಂಬ ಭಯ.ಆದ್ದರಿಂದ ಶ್ಯಾಮ ಇಷ್ಟು ಕಾಲ ತಾನೊಬ್ಬ ಸುಂದರಪುರುಷ ಅಂತ ನಂಬಿದ್ದಕ್ಕೆ ತಾನೇ ತಿಥಿ ಮಾಡುತ್ತಿದ್ದಾನೆ.
ಏನಾದರೇನು..ಶ್ಯಾಮನಿಗೆ ಮದುವೆ ಇನ್ನಿಲ್ಲ ಅಂತ ಅವನ ಗೆಳೆಯರು ಕೂಡಾ ರಾತ್ರಿ ತಂತಮ್ಮ ಹೆಂಡಿರ ಜೊತೆ ಹಾಸಿಗೆಯಲ್ಲಿ ಅಡ್ಡಡ್ಡ ಪವಡಿಸಿ ಮಾತನಾಡುತ್ತಿದ್ದರು.ಶ್ಯಾಮನ ಚೆಲುವನ್ನು ಅಂದೆಂದೋ ಕಂಡ ಹೆಂಗಳೆಯರು ಆ ರಾತ್ರಿ ಅದೇನೋ ಹುಕ್ಕಿ ಬಂದಂತಾಗಿ ತಂತಮ್ಮ ಗಂಡರ ಜೊತೆ ಬೀಸುಬೀಸಾಗಿ ಸರಸ ಆಡುತ್ತಿದ್ದರು.
ಅಷ್ಟರ ಮಟ್ಟಿಗೆ ಶ್ಯಾಮ ಬರೋಬ್ಬರಿಯಾಗಿದ್ದ.
ಶ್ಯಾಮನಿಗೆ ಮದುವೆಯಾಗಬೇಕು ಅಂತ ಅನಿಸಿರಲೇ ಇಲ್ಲ ಅಂತೇನಲ್ಲ.ಅವನು ಅಕ್ಕನನ್ನು ಮದುವೆ ಮಾಡಿ ಕೊಡದೇ ಮದುವೆಯಾಗುವಂತಿರಲಿಲ್ಲ.ಆದ್ದರಿಂದ ಅವನು ಕಾಯುತ್ತಿದ್ದ.
ಮೊದಮೊದಲಲ್ಲಿ ಅವನ ಅಪ್ಪ ಎನ್ಸು ಭಟ್ಟರು ಸುಲೋಚನೆಯ ಮದುವೆಗೆ ಸ್ವಲ್ಪ ಉದಾಸೀನ ಮಾಡಿದರು ಎನ್ನುತ್ತಾರೆ ಸಂಗಮಕ್ಷೇತ್ರದ ಪುಣ್ಯಪುರುಷರು.ಸುಲೋಚನೆಯನ್ನು ಕೇಳಿಕೊಂಡೇ ಬಂದ ಹುಡುಗರಿದ್ದರಂತೆ.ಅವರಲ್ಲಿ ಒಬ್ಬರು ಸಿರ್ಸಿ ಕಡೆಯವರಂತೆ.ಪೂಜೆ ಹೋಮ ಅಂತ ಮಾಡಿಕೊಂಡಿದ್ದ ವೈದಿಕರು.ಸುಲೋಚನೆಗೆ ಹೇಳಿ ಮಾಡಿಸಿದಂಥಾ ಮಾಣಿ.ಆದರೆ ಅವನು ಎರಡೂವರೆ ಸಾವಿರ ರೂಪಾಯಿ ವರದಕ್ಷಿಣೆ ಕೇಳಿದನಂತೆ.ಎನ್ಸು ಭಟ್ಟರು ಬಿಲ್‌ಕುಲ್ ಆಗದು ಎಂದು ಬಿಟ್ಟರು.ಆ ಹೊತ್ತಿಗೇ ಅವರು ಕೊಟ್ಟುಬಿಡುತ್ತಿದ್ದರೆ ಈಗ ಸುಲೋಚನೆಯ ಮೊಮ್ಮಗನ ಉಪನಯನ ಆಗಿ ಹೋಗೋದು.
ದೇವರ ತಲೆಗೆ ನೀರು ಹಾಕುವವನಿಗೆ ಎರಡೂವರೆ ಸಾವಿರ ರೂಪಾಯಿ ಎಂಥದ್ದು ಎಂದು ಕೇಳಿಬಿಟ್ಟರು ಎನ್ಸು ಭಟ್ಟರು.ಅವನೆಂಥಾ ವಿಲೇಜು ಅಕೌಂಟೆಂಟಾ ಅಂತಾನೂ ಝಾಡಿಸಿದರು.ಸಂಬಂಧ ಕುದುರಿಸಲು ಬಂದ ಬಿಳಿ ಜೋಯಿಸರು ದಂಗಾದರು.ಬಾರೀ ಇನ್ಸಲ್ಟ್ ಆದವರಂತೆ ಅವರು ಹೋದರು.
ಈಗ ಬಿಳಿ ಜೋಯಿಸರೂ ಇಲ್ಲ,ಸಿರ್ಸಿ ಕಡೆಯ ಸಂಬಂಧವೂ ಇಲ್ಲ.
ಆ ಸಿರ್ಸಿ ಮಾಣಿ ಅದೇ ಊರಲ್ಲಿ ಮದುವೆಯಾದನೆಂದೂ ಮದುವೆಯಾದ ಮೂರೇ ತಿಂಗಳಿಗೆ ಅವನು ನೀರಿಗೆ ಬಿದ್ದು ಸತ್ತಿದ್ದಾನೆಂದೂ ಎನ್ಸು ಭಟ್ಟರು ಬಹಳ ಕಾಲ ಹೇಳುತ್ತಿದ್ದರು.
ಬಹುಶಃ ಅವರ ಮಗಳು ಬೇಸರ ಮಾಡಿಕೊಳ್ಳಬಾರದೆಂದೂ ಮತ್ತು ಆ ಕತೆ ಕೇಳಿ ಅವಳು ತಾನೊಂದು ಗಂಡಾಂತರದಿಂದ ಪಾರಾಗಿದ್ದೇನೆಂದು ಭಾವಿಸಬೇಕು ಎಂದೂ ಎನ್ಸು ಭಟ್ಟರು ಕಟ್ಟಿದ ದಿವ್ಯನಾದ ಕತೆ ಅದಾಗಿತ್ತು.
ಆದರೆ ಸುಲೋಚನೆ ಆ ಕಾಲದಲ್ಲೇ ಜಾಣೆ.ಆ ಸುದ್ದಿ ಎಷ್ಟು ಸಾಚಾ ಅಂತ ಆಕೆ ದೇವಿಮನೆಯಲ್ಲಿರುವ ತನ್ನ ಸಂಬಂಧಿಕರ ಮನೆಯ ಶ್ರೀಲಕ್ಷ್ಮೀಗೆ ಕಾಗದ ಬರೆದು ಹಾಗೆಲ್ಲಾ ಏನೂ ಆಗಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಳು.ಆದರೆ ಅದನ್ನು ಯಾರಿಗೂ ಹೇಳದೇ ತನ್ನ ಪಾಡಿಗೇ ತಾನೇ ಬಚ್ಚಿಟ್ಟುಕೊಂಡಿದ್ದಳು.
ಈಗ ಎಲ್ಲವೂ ಬದಲಾಗಿದೆ,ಸುಲೋಚನೆ ಬಳಿ ಆ ಕಾಗದ ಬಿಡಿ ಆ ನೆನಪು ಕೂಡಾ ಇರಲು ಸಾಧ್ಯವೇ ಇಲ್ಲ.
ಅಂತೂ ಶ್ಯಾಮನಿಗೆ ಮದುವೆ ಮಾಡಿಸುವುದು ಅಂತ ಎನ್ಸು ಭಟ್ಟರು ತೀರ್ಮಾನಕ್ಕೆ ಬರುವಾಗ ಕಾಲ ಬಹಳ ಬದಲಾಗಿತ್ತು.ಸುಲೋಚನೆ ಕಾಲದಲ್ಲಿ ಹುಡುಗಿಗೆ ಹೇಗೆ ಹುಡುಗ ಸಿಗುವುದಿಲ್ಲವೋ ಈ ಕಾಲದಲ್ಲಿ ಬಂದಿಳಿದಾಗ ಹುಡುಗನಿಗೆ ಹುಡುಗಿ ಇಲ್ಲ ಎಂಬುದಾಗಿತ್ತು.ಸುಲೋಚನೆ ಕಾಲದಲ್ಲಿ ರೇಡಿಯೋ ಟೇಪ್‌ರೆಕಾರ್ಡರ್ ದೊಡ್ಡ ಸಂಗತಿ.ಸ್ಕೂಟರ್ ಇದ್ದ ಹುಡುಗ ಭಯಂಕರ ಫೇಮಸ್ಸು.ಮನೆಗೆ ಕರೆಂಟು ಹಾಕಿದ್ದಾರೆ,ಊಟಕ್ಕೆ ಟೇಬಲ್ಲು ಇದೆ ಎಂದಾದರೆ ಭಾರೀ ಶ್ರೀಮಂತರು.ಇಡೀ ಮನೆಗೆ ಸಿಮೆಂಟು ಸಾರಣೆ ಮಾಡಿಸಿದ್ದಾರೆ,ಮನೆಯ ಕೋಣೆಕೋಣೆಗೆ ಮುಚ್ಚಿಗೆ ಹಾಕಿದ್ದಾರೆ ಎಂದರೆ ಸಿಕ್ಕಾಪಟ್ಟೆ ಫೇಮಸ್ಸು.
ಈಗ ಕಾಲ ಹೇಗೆ ಬದಲಾಗಿದೆ ಎಂದರೆ ಮನೆಯಲ್ಲಿ ಡ್ರಾಯಿಂಗ್ ರೂಮು ಇಲ್ಲಾ,ಬೆಡ್‌ರೂಂ ಅಂತ ಇಟ್ಟಿಲ್ಲ ಅನ್ನೋರು.ಸುಲೋಚನೆ ಕಾಲದ ಹುಡುಗಿಯರೆಲ್ಲಾ ಈಗ ಹೆಂಗಸರಾಗಿದ್ದಾರೆ.ಆ ಕಾಲಕ್ಕೆ ಕನಸುಗಳನ್ನೆಲ್ಲಾ ಕಟ್ಟಿ ಅಪ್ಪನ ಮನೆಯ ಅಟ್ಟದಲ್ಲಿಟ್ಟು ಹೇಳಿದವನನ್ನು ಮದುವೆಯಾದ ತಪ್ಪಿಗೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಸುಲೋಚನೆಯ ಮಗಳು ಸುಲೋಚನೆಯೂ ಅಲ್ಲ,ಅವಳ ಕಾಲವೂ ಅಲ್ಲ ಅವಳ ರೂಪಾಂತರವೂ ಅಲ್ಲ.
ಅವಳು ಮೊಳಕೆಯೊಡೆದು ಗಿಡವಾದ ಮೇಲೆ ಗಿಡ ತಳಿರರಳಿದ ಮೇಲೆ ತಳಿರು ತುದಿಯಲ್ಲಿ ಮೊಗ್ಗು ಕಾಣಿಸಿದ ಮೇಲೆ ಆದದ್ದೇ ಬೇರೆ..
ಬೇರೆಯೇ ನೆಲ,ಬೇರೆಯೇ ಆಗಸ,ಇನ್ನೊಂದೇ ಗಾಳಿ,ಇನ್ನೊಂದೇ ನೀರು..
ಕಾಲ ಬದಲಾಗಿಹೋಗಿದೆ.
ಟೀವಿ ಬಂದಿದೆ ಎಂದರೆ ಥತ್ ಅಂದಾರು.ನ್ಯಾನೋ ಅಂದರೆ ಆಮೇಲೆ ಅಂತ ಕೇಳ್ತಾರೆ,ರಿಯಾಲಿಟಿ ಶೋ ಅಂದರೆ ಎಲ್ಲಿದ್ದೀ ಅಂತ ಹಂಗಿಸುತ್ತಾರೆ.
ಎನ್ಸು ಭಟ್ಟರು ಮಾತ್ರಾ ಈಗಲೂ ಅದೇ ಶಾಲಿಗ್ರಾಮ ಹೊರಗೆ ತಂದು ತೋರಿಸುತ್ತಾರೆ,ಇದರ ಮೇಲೆ ಗರುಕೆ ಹುಲ್ಲು ಇಟ್ಟರೆ ಅದು ಗರಗರ ತಿರುಗುತ್ತದೆ ಎಂದು ಹೇಳುತ್ತಾರೆ.ಪೇಟೆ ಮನೆಗಳಲ್ಲಿ ಮುಟ್ಟಾದರೆ ಹೊರಗೆ ಕೂರುವುದು ಕಷ್ಟ,ಹಾಗಂತ ಹಳ್ಳಿಗಳಲ್ಲಿ ದೂರ ನಿಲ್ಲದಿದ್ದರೆ ಲೋಕ ಉಳಿದೀತಾ ಅಂತ ಕೇಳುತ್ತಾರೆ.
ಶ್ಯಾಮನಿಗೆ ಇದು ಯಾವುದೂ ಗೊತ್ತೇ ಇಲ್ಲ ಅಂತಲ್ಲ.ಅವನು ಹತ್ತಡಿ ವ್ಯಾಸದ ಡಿಶ್ ಹಾಕಿ ಟೀವಿ ಸಿಕ್ಕಿಸಿ ಹತ್ತು ವರ್ಷ ಕಳೆದಿದೆ.ಸಂಗಮಕ್ಷೇತ್ರದ ಸೈಬರ್ ಕೆಫೆಗೆ ಹೋಗಿ ಹೊರಗೆ ರಿಸೆಪ್ಶನ್ ಕೌಂಟರ್‌ನಲ್ಲಿ ಕುಳಿತು ತನ್ನ ಡಿಶ್‌ನ ವಿವಿಧ ಸ್ಯಾಟಲೈಟ್‌ಗಳಲ್ಲಿ ಹೊಸತಾಗಿ ಸೇರಿಕೊಂಡ ಚಾನಲ್ಲುಗಳ ಫ್ರೀಕ್ವೆನ್ಸಿ ನಂಬರು ಪ್ರಿಂಟು ಹಾಕಿ ತರುತ್ತಾನೆ.ಸಂಜೆಯಾಗುತ್ತಲೇ ಡಿಶ್ ತಿರುಗಿಸಿ ಆ ಚಾನಲ್ಲುಗಳನ್ನು ಹುಡುಕುತ್ತಾನೆ.ಒಂದಲ್ಲ ಒಂದು ದಿನ ಕಂಪ್ಲೀಟ್ ಬ್ಲೂ ಫಿಲಂ ತೋರುವ ಪಶ್ಚಿಮದ ಚಾನಲ್ಲುಗಳು ತನಗೂ ಕಾಣುತ್ತದೆ ಎಂದು ನಂಬಿದ ಇಸ್ಮಾಯಿಲ್ ಬ್ಯಾರಿಯ ಮಗನ ಹಾಗೇ.
ಶ್ಯಾಮನಿಗೆ ಆಯಸ್ಸು ಮುಗಿಯುತ್ತಿರುವುದು ಗೊತ್ತಾದ ದಿನವೇ ಅವನು ಜೋಕ್ ಮಾಡಿದ್ದ.ಮೂರೂವರೆ ಲೋಕ ತಿರುಗಿಯೂ ತನಗೆ ಅಂತ ಒಂದು ಹೆಣ್ಣುಜೀವ ದಕ್ಕಲಿಲ್ಲ ಎಂದಾದ ಮೇಲೆ ಎಲ್ಲಾ ಹುಡುಗಿಯರೂ ಸಾಫ್ಟ್‌ವೇರ್-ಹಾರ್ಡ್‌ವೇರ್ ಅಂತಾರೆ,ನನಗೆ ಅಂಡರ್‌ವೇರ್ ಮಾತ್ರವೇ ಗತಿ ಅಂತ ಕಾಣ್ತದೆ ಎಂದಿದ್ದ.
ಎನ್ಸು ಭಟ್ಟರು ಮಾತ್ರಾ ನೋ ಕೇರ್.ಈಗೀಗ ಅವರೂ ಆಶ್ರಮದ ಹುಡುಗಿಯಾದರೂ ಏನಂತೆ ಅಂತ ಕೇಳಿದ್ದಾರೆ.ಶ್ಯಾಮ ಬಳ್ಳಾರಿಗೆ ಹೋಗಿ ಬಂದಿದ್ದ.ಆಶ್ರಮದ ಹುಡುಗಿ ಜೊತೆ ಮಾತನಾಡಿದ.ಬೇರೆ ಮನೆ ಮಾಡುವೆಯಾದರೆ ಸಂಸಾರ ಮಾಡಿಯೇನು ಎಂದು ಅವಳು ಕಳುಹಿಸಿಕೊಟ್ಟಿದ್ದಾಳೆ.ಮೈಸೂರಿನ ಆಶ್ರಮದಲ್ಲಿ ಹುಡುಗಿಯರೇ ಇಲ್ಲ ಎಂದು ದಲ್ಲಾಲಿ ಅಪ್ಪಣ್ಣ ಹೇಳಿದ್ದಾನೆ.
ಎನ್ಸು ಭಟ್ಟರು ಆ ರಾತ್ರಿ ಹಾಸಿಗೆ ಬಿಡಿಸಿ ಇನ್ನೇನು ಕಾಲು ನೀಡಬೇಕು,ಸುಲೋಚನೆ ಹತ್ತಿರ ಬಂದು ಕುಳಿತಳು.ಹಾಗೆಲ್ಲಾ ಬಂದವಳಲ್ಲ ಅವಳು.
ಅಪ್ಪಾ ಎಂದಳು.
ಎನ್ಸು ಭಟ್ಟರು ದಂಗಾಗಿದ್ದರು.
ಶ್ಯಾಮ ಪಯ್ಯನ್ನೂರಿನ ಕಡೆ ಹುಡುಗಿ ನೋಡಲು ಹೋಗಿದ್ದವನು ನಾಳೆ ಬರುವುದಾಗಿ ಫೋನು ಮಾಡಿದ್ದ.
ಸುಲೋಚನೆ ಕೇಳಿದಳು,
ಅಪ್ಪಾ ನಾನು ಒಂಟಿಯಾಗಲಾರೆ..ಹಾಗಂತ ನನಗೆ ಮದುವೆ ಮಾಡಿಸು ಅಂತ ಕೇಳುವುದಿಲ್ಲ,ಶ್ಯಾಮನ ಮದುವೆ ಮಾತ್ರಾ ತುಂಬಾ ಪ್ರೀತಿಯಿಂದ ಮಾಡಬೇಕು.
ಎನ್ಸು ಭಟ್ಟರು ಏನಾಗಿದೆ ಇವಳಿಗೆ ಎಂದು ಅವಳ ಮುಖವನ್ನೇ ನೋಡಿದರು.ಅದು ಗೊತ್ತಾಗಿ ಆಕೆ ಲೈಟು ನಂದಿಸಿದಳು.ಆಮೇಲೆ ಅಲ್ಲಿ ಕತ್ತಲೋ ಕತ್ತಲು.
ಅ ಕತ್ತಲಲ್ಲಿ ಸುಲೋಚನೆ ಹೇಳಿದಳು ಮನೆ ಹಿಂದ ಇರುವ ತೆಂಗಿನ ಮರ ಕುಂಬಾದ ಹಾಗಿದೆ,ಯಾವತ್ತಾದರೂ ಬೀಳಬಹುದು ಒಂದು ಬಳ್ಳಿ ಹಾಕಿ ಪಕ್ಕದ ಮಾವಿನ ಮರಕ್ಕೆ ಕಟ್ಟಸಬೇಕು..
ಎನ್ಸು ಭಟ್ಟರಿಗೆ ಎಲ್ಲವೂ ಅರ್ಥವಾಯಿತು.
ಅವರು ಆ ಕತ್ತಲಲ್ಲಿ ಬಿಕ್ಕಿ ಬಿಕ್ಕಿ ಅತ್ತರು.
ಅವರಿಗೆ ಆಗ ವಯಸ್ಸು ಎಂಭತ್ತಮೂರು.॒!