20100124

ಆ ಕೆಲಸ ಅಷ್ಟೂ ಜಲ್ದೀನಾ?

ಕ್ಷಮಿಸಿ,ನಿಮ್ಮ ಬಳಿಗೆ ಯಾರಾದರೂ ಆ ವಿಚಾರ ಕೇಳಿ ಬಂದಿದ್ದಾರೋ..?
ನನ್ನ ಸ್ಟೈಲೇ ಬೇರೆ ಅಂತ ನೀವು ವಾದಿಸಿದರೆ ನಾನೇನೂ ಮಾಡುವ ಹಾಗಿಲ್ಲ.
ಆದರೆ ಇದು ನಮ್ಮ ಬುಡಕ್ಕೇ ಅವರು ಕೈ ಹಾಕಿದ ಸಮೀಕ್ಷೆ.ಯಾರು ಯಾವಾಗ ಮಾಡಿದರು ಅಂತ ಕೇಳಬೇಡಿ..ಒಂದು ಲೆಕ್ಕ ಅಂತ ಕೊಟ್ಟಿದ್ದಾರೆ,ಜಸ್ಟ್ ಎಂಜಾಯ್.
ಯಾರೋ ಕಾಂಡೋಮ್ ಕಂಪನಿಯವರಂತೆ ಈ ಸಮೀಕ್ಷೆ ಮಾಡಿದವರು.
ಬಾಪ್ರೇ..ಕಾಂಡೋಮ್ ಕಂಪನಿಯವರು ಆ ವಿಚಾರ ಅಲ್ಲದೇ ಬೇರೇನು ಸಮೀಕ್ಷೆ ಮಾಡಿಯಾರು?ಅವರೇನು ನೀವು ಎಷ್ಟು ಬಾರಿ ಸೂರ್ಯನಮಸ್ಕಾರ ಮಾಡ್ತೀರಿ ಅಂತ ಕೇಳ್ತಾರಾ?
ಹೌದು,
ಅವರು ನಿಮ್ಮ ಅಥವಾ ನಮ್ಮ ಆ ಕೆಲಸದ ಬಗ್ಗೆ ಒಂದು ಅಕೌಂಟ್ ಕೊಟ್ಟಿದ್ದಾರೆ..ಓದಿಕೊಳ್ಳಿ.
ಆವರೇಜು ಭಾರತೀಯರು ಸೆಕ್ಸ್ ಮಾಡೋದರಲ್ಲಿ ಭಾರೀ ಅರ್ಜೆಂಟಿನವರಂತೆ.ಆ ಕೆಲಸ ಮಾಡಿ ಮುಗಿಸಲು ಭಾರತೀಯರಿಗೆ ಬೇಕಾದದ್ದು ಸರಾಸರಿ ೧೩ ಮಿನಿಟಂತೆ.ಕಾರ್ಯಕ್ರಮ ಆರಂಭಿಸಿ ಮಂಗಳ ಹಾಡೋಕೆ ಬೇಕಾದ್ದು ಓನ್ಲೀ ೧೩ ಮಿನಿಟ್ಸ್.
ಆದರೆ ವರ್ಲ್ಡ್ ಆವರೇಜು ೧೮ ಮಿನಿಟು.
ಅಂದರೆ ನಾವು ಭಾರೀ ಫಾಸ್ಟು..
ನೈಜೀರಿಯಾದ ಠೊಣಪಗಳಿಗೆ ಆ ಕಲಸ ಮಾಡಲು ತುಂಬಾ ಸಮಯ ಬೇಕು.ಅವರು ಸ್ವೀಟಾಗಿ,ಸ್ಲೋ ಆಗಿ..ಕಾಫಿಡೇನಲ್ಲಿ ಕಾಫಿ ಕುಡಿದ್ಹಾಂಗೆ ಆ ಕಲಸ ಮಾಡೋರಂತೆ.
ಅವರಿಗೆ ೨೪ ಮಿನಿಟ್ಸ್ ಬೇಕಂತೆ.
ಅವರು ವರ್ಲ್ಡ್‌ನಲ್ಲಿ ಆ ವಿಚಾರದಲ್ಲಿ ಫಸ್ಟು.
ಆದ್ದರಿಂದಲೇ ಅವರು ಸದಾ ಸಂತೃಪ್ತರು.ಶೇಕಡಾ ೬೭ ಮಂದಿ ಫುಲ್ಲೀ ಸಾಟಿಸ್‌ಫೈಡ್ ಅಂತಾರಂತೆ.
ನಾವು ಇಂಡಿಯನ್ಸ್ ಥರ್ಡ್ ಪ್ಲೇಸ್.
ನೂರಕ್ಕೆ ೬೧ ಮಂದಿ ಮಾತ್ರಾ ಖುಶ್ ಹುವಾ ಅಂತಾರೆ ಅಂತ ಹೇಳ್ತಾರೆ ಈ ಕಾಂಡೋಮ್ ಕಂಪನಿಯ ಸಮೀಕ್ಷಕರು.
ಚಪ್ಪಟೆ ಮುಸುಡಿನ ಜಪಾನಿಯರು ಮಾತ್ರಾ ಆಲ್ವೇಸ್ ಅನ್‌ಸಾಟಿಸ್‌ಫೈಡ್.ಜಪಾನಿಯರು ಬೇರೆಲ್ಲಾ ಕೆಲಸದಲ್ಲಿ ಸದಾ ಮುಂದು ಆದರೆ ಆ ಕೆಲಸದಲ್ಲಿ ಅವರು ವೆರಿ ವೆರಿ ಬ್ಯಾಡ್..ನೂರಕ್ಕೆ ಹದಿನೈದು ಜಪಾನಿಯರು ಮಾತ್ರಾ ಆ ಕೆಲಸ ಮಾಡಿ ಮುಗಿಸಿ ಖುಷಿಯಾಯ್ತು ಕಣ್ರೀ..ಅಂತಾರಂತೆ.

ಆದರೆ ಅ ಕೆಲಸದಲ್ಲಿ ತೃಪ್ತಿ ಸಿಗಲಿ ಬಿಡಲಿ, ನಾವು ಭಾರತೀಯರು ಕರ್ಮ ಮಾಡೋದರಲ್ಲಿ ಮುಂದು.ಮಾ ಫಲೇಷು ಕದಾಚನ.. ಅಂತ ನಂಬಿದವರಲ್ಲವಾ? ವರ್ಷಕ್ಕೆ ಸರಾಸರಿ ಭಾರತೀಯ ಜೋಡಿ ೧೩೦ ಬಾರಿ ಮಿಲನಮಹೋತ್ಸವ ಆಚರಿಸುತ್ತಾರೆ.ಜಗತ್ತಿನ ಸರಾಸರಿ ಇದು ೧೦೩ ಬಾರಿ ಮಾತ್ರಾ.ಏನೇ ಆದರೂ ಮೂರು ದಿನಕ್ಕೊಮ್ಮೆ ಹಬ್ಬ ಮಾಡದಿದ್ದರೆ ನಮ್ಮವರಿಗೆ ಆಗೋದಿಲ್ಲ.ನಾವು ಎಷ್ಟಾದರೂ ಬಾ-ರತಿ ಯರು ತಾನೇ..
ಗ್ರೀಕರು ಆ ಕೆಲಸ ಮಾಡಿದಷ್ಟು ಯಾರೂ ಮಾಡಲ್ಲವಂತೆ.೧೬೪ ಟೈಮ್ಸ್ ಎವ್ರೀ ಇಯರ್.ಐ ಮೀನ್ ಎವ್ರೀ ಸೆಕೆಂಡ್ ಡೇ..ಐ ಮೀನ್ ನೈಟು?!
ಇನ್ನು ನಮ್ಮ ಮೇಲು ಸದಾ ಮೇಲು.ಶೇಕಡಾ ೫೫ ಜಂಟಲ್‌ಮೆನ್ನುಗಳು ಭರಪೂರವಾಯಿತು ಎನ್ನುತ್ತಾರಂತೆ.
ಫಿಮೇಲು?
ಶೇಕಡಾ ೨೬ ಮಾತ್ರಾ ಸಾಕಪ್ಪಾ ಸಾಕು ಎನ್ನುವವರಂತೆ..
ಶ್ರೀ ಪರಮೇಶ್ವರಃಪ್ರೀಯತಾಂ ಓಂ ತತ್ಸತ್..!!

20100122

ನಾಜಿಯ ಡೈರಿ..

ನಾಜಿ ಯೋಧನೊಬ್ಬನ ವರ್ಕ್‌ಡೈರಿ ನನ್ನ ಬಳಿ ಇದೆ.
ಇದನ್ನು ಓದಲು ನನಗೆ ಬರೋದಿಲ್ಲ.ಆದರೆ ಇದರ ಹಕೀಕತ್ತುಗಳನ್ನು ಅರ್ಥಮಾಡಿಕೊಳ್ಳಬಲ್ಲೆ.
ಈ ಡೈರಿಯನ್ನು ನನಗೆ ಒದಗಿಸಿದ್ದು ನನ್ನ ಯುವಮಿತ್ರ ಆದರ್ಶ.ಈ ಹುಡುಗನ ಬಗ್ಗೆ ಮತ್ತೊಮ್ಮೆ ಬರೆಯುವೆ.
ಈ ಯೋಧ ಹಿಟ್ಲರನ ಸೇನೆಯಲ್ಲಿ ಸೈನಿಕನಾಗಿ ಸೇರಿದಾಗ ಅವನ ವಯಸ್ಸು ಹದಿನಾಲ್ಕು.ಅಂದರೆ ಈಗಿನ ಒಂಭತ್ತನೇ ಕ್ಲಾಸಿನ ಹುಡುಗ.
ಮೂರೇ ವರ್ಷಕ್ಕೆ ಈತನ ಡೈರಿ ಮುಗಿದುಹೋಗಿದೆ.
ಅಂದರೆ ಈ ಹುಡುಗ ಆ ಹೊತ್ತಿಗೇ ಮಟಾಶ್ ಆದನೇ?
ಅಥವಾ
ಇವನನ್ನು ಸೇನೆಯಿಂದ ಕಳುಹಿಸಿಕೊಡಲಾಯಿತೇ..?
ಅಥವಾ
ಇವನು ಮಿತ್ರ ಪಕ್ಷದ ಜೊತೆ ಸೇರಿಕೊಂಡನೇ?
ಅಥವಾ
ಮಿತ್ರಪಕ್ಷದ ಜೈಲಿಲ್ಲಿ ಕೊಳೆತುಹೋದನೇ?
ಹೇಗೂ ಊಹಿಸಿಕೊಳ್ಳಬಹುದು..
ಹದಿನಾಲ್ಕು ವರ್ಷದ ಹುಡುಗ..ಅವನು ಇನ್ನೂ ಕಡ್ಲೆಕಾಯಿ ಸಿಪ್ಪೆ ಕೀಳುವಷ್ಟೂ ಬಲಿಯದವನು..ನಾಜಿ ಯೋಧನಾಗಬೇಕಾಗಿದ್ದರೆ..
ಅದಕ್ಕೆ ಹಿಟ್ಲರ್ ಕಾರಣವಾ..ಅವನ ಭಾಷಣ ಕಾರಣವಾ..ಇವನ ಬಡತನ ಕಾರಣವಾ..ಇವನ ಅಖಂಡ ದೇಶಪ್ರೇಮ ಕಾರಣವಾ..
ಬ್ರೈನ್‌ವಾಶ್..!
ಗನ್ನಿನಷ್ಟು ಎತ್ತರಕ್ಕಿಲ್ಲದವರು ಗನ್ನು ಹಿಡಿಯೋದು ಮುಸ್ಲಿಂ ಭಯೋತ್ಪಾದಕರು ಅಥವಾ ಎಲ್ಟಿಟಿಇಗಳಲ್ಲಿ ಸಾಮಾನ್ಯವಾಗಿದೆ.ಆದರೆ ಇದೂ ಹೊಸತೇನಲ್ಲ..ತೊಂಭತ್ತು ವರ್ಷಗಳ ಹಿಂದೆಯೂ ಇದೇ ಆಗುತಿತ್ತು.
ಈ ಯೋಧ ಈಗ ನಾನೇನಾದರೂ ಹುಡುಕಲು ಹೊರಟರೆ ಸಿಗಬಹುದಾ?ತೊಂಭತ್ತೆರಡು ವರ್ಷದ ಅಜ್ಜ ಸಿಕ್ಕರೆ ಏನೆಲ್ಲಾ ಮೊಗೆದು ತೆಗೆಯಬಹುದು..!
ಒಂದು ಹಾಲಿವುಡ್ ಸಿನಿಮಾ ಸರಕಿನಷ್ಟು..!
ಅಂದ ಹಾಗೇ ನಮ್ಮ ಆದರ್ಶ ಮತ್ತೆ ಜರ್ಮನ್ ಸೇರಿಕೊಂಡಿದ್ದಾನೆ.ಬೆಳಕನ್ನು ತಡೆಯುವ ಅವನ ಸಂಶೋಧನೆ ಪ್ರಗತಿಯಲ್ಲಿದೆ.ಇಪ್ಪತ್ತೆಂಟು ವರ್ಷದ ಈ ಹವ್ಯಕ ಹ್ಯಾಂಡ್ಸಮ್ ಹುಡುಗನಿಗೆ ಒಂದು ಚೆಂದದ ಹುಡುಗಿ ಬೇಕಂತೆ..ಮುಂದಿನ ಸಾರಿ ಬರುವಾಗ ರೆಡೀ ಮಾಡಿ ಇಡು ಅಂತ ಅಪ್ಪಣೆ ಕೊಡಿಸಿ ಹೋಗಿದ್ದಾನೆ..
ಹುಡುಗಿ ಹುಡುಕಬೇಕು ನಮ್ಮ ಆದರ್ಶನಿಗೆ..

20100116

ಆ ಹೊತ್ತಿಗೆ ಆತ ಅವಳ ಮಗನೇ ಆಗಿದ್ದ..


ಈ ರಾಮಾಯಣವನ್ನು ಸುಮ್ಮನೇ ಸ್ವಲ್ಪ ಓದಿ..

ಇಟ್ ಈಸ್ ಇಂಟರೆಸ್ಟಿಂಗ್..

ಕಾಸರಗೋಡು ಅಂದರೆ ಹಾಲಿ ಕೇರಳದ ಮೂಲನಿವಾಸಿ ಜನಾಂಗವೊಂದರಲ್ಲಿ ಹಾಡು ಕಬ್ಬವಾಗಿ ಹರಡಿಕೊಂಡಿರುವ ರಾಮಾಯಣ ಇದು.

ಎಂದು ಯಾರು ಈ ಕಥೆ ಕಟ್ಟಿದರೋ ಏನೋ..

ಇದರ ಹೆಸರು ಫಕ್ರು ರಾಮಾಯಣ.

ಬಹುಶಃ ಫಕ್ರು ಎಂಬಾತ ಕಟ್ಟಿದ ಕಾವ್ಯ ಇರಬಹುದು ಎಂದುಕೊಳ್ಳೋಣ.ಖಂಡಿತಾ ಇದು ಬರೆದು ತುಂಬಿಕೊಂಡ ಕಾವ್ಯವಲ್ಲ..

ಆದರೆ ಬರೆಯದೇ ಇದ್ದ ಕಾರಣಕ್ಕೆ ಇದರ ಸೊಗಡು ಸೊಗಸು ಇದೆ.ಹಾಗೇ ಇದರ ಅಪ್ರತಿಮ ಚೆಲುವು ಕೂಡಾ.

ಕತೆ ಆರಂಭಿಸೋಣವೇ?

ಸಿಂಪಲ್ಲಾಗಿ ಸೀತೋಪಾಖ್ಯಾನದತ್ತ ನೋಟ ಹಾಯಿಸಿ.

ಎಲ್ಲಾ ರಾಮಾಯಣದಂತೆ ಇಲ್ಲೂ ಸೀತೆ ಜನಕನ ಮಗಳೇ.ಆದರೆ ಈ ಸೀತೆಗೆ ಯಜ್ಞ ಮಾಡೋ ಖಯಾಲಿ.ಪ್ರತಿ ನಿತ್ಯವೂ ಯಜ್ಞ ಮಾಡಬೇಕು.ಹೀಗೆ ಈ ಸೀತಮ್ಮ ಯಜ್ಞ ಮಾಡಲು ಹವಿಸ್ಸನ್ನು ತೆಗೆದಿಟ್ಟರೆ ಕಾಗೆಯೊಂದು ಹಾರಿ ಬಂದು ಅದನ್ನೆತ್ತಿಕೊಂಡು ಹೋಗುತ್ತದೆ.ಸೀತೆಗೋ ಭಾಳಾ ಬೇಜಾರಾಗುತ್ತದೆ.ಮಗಳ ಯಜ್ಞಕ್ಕೆ ಅನುದಿನವೂ ಧಕ್ಕೆ ಬರೋದು ಸ್ವತಃ ಜನಕಮಹಾರಾಜನಿಗೂ ದುಃಖ ತರುತ್ತದೆ.ಆದರೆ ಆ ಕಾಗೆಯನ್ನು ಕೊಲ್ಲಲು ಮಾತ್ರಾ ಯಾರಿಗೂ ಸಾಧ್ಯವಾಗೋದಿಲ್ಲ.ಅದೆಂಥಾ ಮಾಯಕದ ಕಾಗೆಯೋ..ಕೊನೆಗೊಮ್ಮೆ ಜನಕ ರಾಜ ಡಂಗುರ ಹೊಡೆಸುತ್ತಾನೆ.ಕಾಗೆಯನ್ನು ಕೊಂದವರಿಗೆ ಮಗಳನ್ನು ಕೊಡುತ್ತೇನೆ ಎಂದು ಘೋಷಿಸುತ್ತಾನೆ.

ಸುದ್ದಿ ರಾಮನ ಕಿವಿಗೆ ಬೀಳುತ್ತದೆ.

ಹೇಳಿಕೇಳಿ ರಾಮ.ಅವನು ಯಕಶ್ಚಿತ್ ಕಾಗೆಯನ್ನು ಕೊಲ್ಲೋದೇ?

ಆತ ಲಕ್ಷ್ಮಣನನ್ನು ಕಾಗೆ ಸಂಹಾರಕ್ಕೆ ಕಳುಹಿಸುತ್ತಾನೆ.

ಲಕ್ಷ್ಮಣ ಕಾಗೆಯನ್ನು ಕೊಂದು ನಿಂತರೆ ಸೀತೆ ಹೂಮಾಲೆ ಹಿಡಿದು ಮುಂದೆ ಬರುತ್ತಾಳೆ.ಲಕ್ಷ್ಮಣ ಒಪ್ಪುವುದಿಲ್ಲ.ಈ ಕೆಲಸ ಅಣ್ಣನ ಆಜ್ಞೆ.ಆದ್ದರಿಂದ ಈ ಬಹುಮಾನ ಅಣ್ಣನಿಗೇ ಸಲ್ಲಬೇಕು ಎನ್ನುತ್ತಾನೆ.ಹಾಗೇ ಆಗುತ್ತದೆ.ಇದು ಒಂದು ಎಪಿಸೋಡು.

ಇನ್ನೊಂದು ಇದಕ್ಕಿಂತಲೂ ಚೆನ್ನಾಗಿದೆ,ಓದಿ.

ರಾಮ ಸೀತೆ ಲಕ್ಷ್ಮಣ ಕಾಡಿಗೆ ಹೋಗುತ್ತಾರೆ.ವಿಶ್ರಾಂತಿಗೆಂದು ಸೀತೆ ಅಂಗಾತ ಮಲಗಿದ್ದಾಳೆ.ಸೆರಗು ಜಾರಿದೆ.ಕಂಚುಕದ ಗುಂಡಿ ಕದಲಿದೆ.ಲಕ್ಷ್ಮಣ ಅದನ್ನು ನೋಡಿಬಿಟ್ಟ.

ಸಂಕಷ್ಟಕ್ಕೆ ಬಿದ್ದ.

ತರುಣಿಯ ಎದೆಯನ್ನು ಮುಟ್ಟುವ ಹಕ್ಕು ಅವಳ ಗಂಡ ಮತ್ತು ಮಗುವಿಗೆ ಮಾತ್ರಾ...

ಲಕ್ಷ್ಮಣ ಮೊಣಕಾಲೂರಿ ಬಾಗಿದ.ನಾಲಗೆ ಚಾಚಿದ.ನಾಲಗೆಯಲ್ಲೇ ಸೀತೆಯ ಕಂಚುಕದ ಗುಂಡಿಯನ್ನು ಹಾಕಿದ.

ಆ ಹೊತ್ತಿಗೆ ಆತ ಅವಳ ಮಗನೇ ಆಗಿದ್ದ!!


20100112

ಮತ್ತೆ ಮೊಗ್ಗಾಗಿ..ಕಲ್ಪೆಟ್ಟಾದಿಂದ ಕೋಝಿಕ್ಕೋಡ್‌ಗೆ ಹೋಗೋ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಪೆಟ್ಟಾ ಸಮೀಪ ಸಿಗೋದು ವೈತ್ರೀ ಘಾಟ್.
ಬುಧವಾರ ಸಂಜೆ ನಾವು ಆ ಘಾಟ್‌ನ ಎರಡನೇ ತಿರುವಿಗೆ ಬಂದು ನಿಂತಾಗ ಸಂಜೆಗತ್ತಲಾಗಿತ್ತು.ನಮ್ಮ ಸ್ಕಾರ್ಪಿಯೋ ಅಂಡೆಪಿರ್ಕಿ ಥರ ನಿಂತಿತ್ತು.
ಸ್ವಲ್ಪದೂರದಲ್ಲಿ ಶಬರಿಮಲೆ ಅಯ್ಯಪ್ಪ ಯಾತ್ರೆಗೆ ಹೊರಟ ಮೈಸೂರು ಕಡೆಯ ಮಂದಿ ಶರಣು ಕರೆಯಲು ಘಾಟಿಯ ತಡೆಗೋಡೆಯಲ್ಲಿ ಅಯ್ಯಪ್ಪನ ಫೋಟೋ ಇಟ್ಟು ಕರ್ಪೂರ ಉರಿಸಲು ಏರ್ಪಾಟು ಮಾಡುತ್ತಿದ್ದರು.
ಅವರ ಕಟ್ಟಂಚೀಲಕ್ಕೆ ಕಣ್ಣಿಟ್ಟ ಕೋತಿಗಳ ಗುಂಪೊಂದು ಯಾವುದೇ ಕ್ಷಣದಲ್ಲಿ ಮಾಡಬಹುದಾದ ಕಿತಾಪತಿಯತ್ತ ನಾನು ಕುತೂಹಲದಿಂದ ಕಾಯುತ್ತಿದ್ದೆ.
ಅಪ್ಪುಚ್ಚ ಸಣ್ಣಗೇ ನಕ್ಕ.
ಕತೆ ಎಲ್ಲಿಗೆ ಬಿಟ್ಟಿದ್ದೆ ಎಂದ.
ಅದೇ ಸ್ವಾತಿ ನಿನ್ನ ಬಿಟ್ಟು ವಯನಾಡಿಗೆ ಹೊರಟಳು..ನಾನು ಕತೆಯನ್ನು ಎತ್ತಿಕೊಟ್ಟೆ.
ಅಪ್ಪುಚ್ಚ ಹಾಂ ಹೌದು ಆದರೆ ಕತೆ ನಾನು ಮುಂದುವರಿಸಬೇಕೋ ಬೇಡವೋ ಅಂತ ಜಿಜ್ಞಾಸೆಯಲ್ಲಿದ್ದೇನೆ ಎಂದ.
ಯಾಕೋ..ಕತೆ ಹೇಳುತ್ತೇನೆ ಅಂತಲ್ಲವೇ ನೀನು ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದದ್ದು..ಕತೆ ಆರಂಭಿಸಿದ ಮೇಲೆ ಅದನ್ನು ಮುಗಿಸಬೇಕಲ್ಲಾ ಎಂದೆ.
ನನ್ನ ಕತೆಗೆ ಮುಕ್ತಾಯವಿಲ್ಲ..ಏನಿದ್ದರೂ ಅದು ಪ್ರತೀ ಬಾರಿ ಆರಂಭವೇ ಆಗೋದು ಎಂದ ಅಪ್ಪುಚ್ಚ.
ಸರಿಯಪ್ಪಾ ಆರಂಭವೇ ಆಗಲಿ..ಮುಕ್ತಾಯ ಬೇಡವೇ ಬೇಡ,ಕತೆ ಮಾತ್ರಾ ಹೇಳಿಮುಗಿಸು ಎಂದೆ.
ನಾನೊಪ್ಪಲಾರೆ..ಮುಕ್ತಾಯವೇ ಇಲ್ಲದ ಕತೆ ಕೇಳುವುದಕ್ಕೆ ಒಂದು ಹೃದಯಾ ಅಂತ ಇರಬೇಕು..ನಿನ್ನಲ್ಲಿ ಅದು ಇಲ್ಲವಲ್ಲಾ ಎಂದ ಅಪ್ಪುಚ್ಚ.
ಯಾಕಿಲ್ಲ..ನೋಡು ಆ ಸೂರ್ಯ ಮುಳುಗುತ್ತಿದ್ದಾನಲ್ಲಾ ಅದನ್ನು ನಿನಗಂತೂ ಡಿಫೈನ್ ಮಾಡಲಾಗುವುದಿಲ್ಲ,ನಾನು ಮಾಡಬಲ್ಲೆ ಎಂದೆ.
ಬೇವಾರ್ಸಿಗಳು ನೀವು ಪತ್ರಕರ್ತರು ನಿಮಗೆ ಹೃದಯ ಅಂತ ಇದ್ದರೆ ನಾನು ನಂಬಲಾರೆ ಎಂದ.
ನಾನು ನಕ್ಕೆ..
ಅಪ್ಪುಚ್ಚ ಮುಂದುವರಿಸಿದ.
ಸ್ವಾತಿ ಹೊರಟೇ ಹೋದಳು.ನಾನು ಅದೇ ಕ್ಷಣಕ್ಕೆ ನಿರ್ಧರಿಸಿದ್ದೆ,ಮದುವೆಯಾಗಬಾರದು ಅಂತ.
ಇವಳು ನನಗೆ ಸಿಗುವುದಿಲ್ಲ,ಇನ್ನೊಬ್ಬಳು ಇವಳಂತೆ ನನ್ನವಳಾಗುವುದಿಲ್ಲ..ಆದ್ದರಿಂದ ಯಾರೂ ಇರಲಾರದ ನನ್ನ ಹೃದಯದಲ್ಲಿ ಮತ್ತೆ ಬೇಸಾಯ ಮಾಡಬಾರದು..ಪಾಳುಭೂಮಿಯಾಗಲಿ ಈ ಎದೆ..
ಸ್ವಾತಿಯನ್ನು ಆ ಕ್ಷಣಕ್ಕೆ ನಾನು ನೋಡಿದಾಗ ಮಂಜು ದಟ್ಟವಾಗಿತ್ತು.
ಅದೇ ಹೇಳಿದೆನಲ್ಲಾ ನಮ್ಮ ಪುತ್ತೋಳಿಯ ಫೈನಾನ್ಸ್ ಓಪನಿಂಗ್‌ಗೆ ಮಡಿಕೇರಿಗೆ ನಾವು ಹೊರಟವರು ಅಂತ..
ಪುತ್ತೋಳಿ ಯಾರು ಅಂತ ನಿನಗೆ ಗೊತ್ತಿದೆ ತಾನೇ..
ಅದೇ ಪುತ್ತೋಳಿ..ಬೀನಾಳ ಪ್ರಿಯತಮ..
ಅವನ ಅಂತ್ಯ ಇನ್ನೂ ನಿಗೂಢ.ನಾವು ಹಲವು ವರ್ಷಗಳಿಂದ ಅವನು ಕೊಲೆಯಾಗಿದ್ದಾನೆ ಎಂದೇ ನಂಬಿದ್ದೇವೆ.ಅವನು ಕೊಲೆಯಾದ ಮತ್ತು ಆ ಕೊಲೆಯನ್ನು ಪೊಲೀಸರು ತನಿಖೆ ಮಾಡುತ್ತಿಲ್ಲ ಅಂತ ಸಂಗಮಕ್ಷೇತ್ರ ಬಂದ್ ಮಾಡಿ ನಾವು ಪ್ರತಿಭಟನೆ ಮಾಡಿದ್ದೆವು..ನೀನು ಆಗ ಅಮೇರಿಕಾದಲ್ಲಿದ್ದೆ..ನಿನಗೆ ನಾನು ಆ ರೋಸ್ ಕಲರ್‌ನ ಕಾಗದದಲ್ಲಿ ಎಲ್ಲಾ ಬರೆದು ತಿಳಿಸಿದ್ದೆ..
ನಿನಗೆ ಎಲ್ಲಿ ನೆನಪಿರುತ್ತದೆ,ಬೀನಾ ಆಮೇಲೆ ಆ ಕೇಸು ಬೀಳಿಸಿ ಅಂತ ನನ್ನ ಬಳಿ ಬಂದು ಗೋಗರೆದಳು..ನಾನು ಕೋರ್ಟಿನಲ್ಲಿ ಉಲ್ಟಾ ಸಾಕ್ಷಿ ಹೇಳಿದೆ..ಪುತ್ತೋಳಿ ಎಲ್ಲಾದರೂ ಇರಬಹುದು ಅಂತ ಆಮೇಲೆ ನಾನು ನಂಬಲು ಶುರು ಮಾಡಿದ್ದು..
ಅದು ಹಾಳಾಗಿ ಹೋಗಲಿ..ಕತೆ ನಾನು ಹೇಳುತ್ತೇನೆ ನೀನು ಅದನ್ನು ಥರ್ಡ್ ಪರ್ಸನ್‌ಗೆ ಟ್ರಾನ್ಸ್‌ಲೇಶನ್ ಮಾಡಿಕೋ..ಅಪ್ಪುಚ್ಚ ಹೇಳುತ್ತಲೇ ಇದ್ದ..
++++++++++++
ಪುತ್ತೋಳಿ ಕೊಲೆಯಾಗುವ ಮುನ್ನ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದವನು ಮಡಿಕೇರಿಯಲ್ಲಿ ಒಂದು ಬ್ರಾಂಚು ತೆರೆದ.ಅದರ ಉದ್ಘಾಟನೆ ನಿಮಿತ್ತ ಹೋದವರ ಗುಂಪಲ್ಲಿ ಅಪ್ಪುಚ್ಚನೂ ಇದ್ದ.ಬೆಳ್ಳಂಬೆಳಗ್ಗೆ ಎಂಟು ಜನರ ಗ್ಯಾಂಗು ಮಡಿಕೇರಿ ಘಾಟ್ ಹತ್ತುತ್ತಿತ್ತು.ಹಾದಿ ಮಧ್ಯೆ ದಟ್ಟ ಮಂಜು.ದೂರದಲ್ಲಿ ಇಬ್ಬರು ತರುಣಿಯರು ನಿಂತ ನೋಟ.ಹತ್ತಿರ ಹತ್ತಿರ ಹೋಗುತ್ತಿದ್ದ ಹಾಗೇ ಆ ನೋಟ ನಿಜವಾಯಿತು.ಅವಳಲ್ಲಿ ಒಬ್ಬಳು ಕೈ ಮುಂದೆ ಮಾಡಿದಳು.ಕಾರು ನಿಂತಿತು.ಏಕೆಂದರೆ ಕಾರು ಚಲಾಯಿಸುತ್ತಿದ್ದಾತ ಅಪ್ಪುಚ್ಚ.
ಅವನು ಹುಡುಗೀರ ಮಟ್ಟಿಗೆ ಸದಾ ಹದ.ಜೀವಮಾನದಲ್ಲಿ ಒಮ್ಮೆಯಾದರೂ ಹುಡುಗಿಯ ಪ್ರೀತಿ ದಕ್ಕುತ್ತದೆ ಎಂದು ಯಾವುದೋ ಕಿತಾಬಿನಲ್ಲಿ ಓದಿದ್ದ.ಅದಕ್ಕಾಗಿ ಅವನು ನಿತ್ಯವೂ ಕ್ಷಣಗಣನೆ ಮಾಡುತ್ತಿದ್ದ.ಪ್ರೀತಿ ತಾನೇ ತಾನಾಗಿ ಸಂಭವಿಸುತ್ತದೆ ಎಂದು ಗಟ್ಟಿಯಾಗಿ ನಂಬಿದ್ದ.ಆದ್ದರಿಂದ ಆತನಿಗೆ ಯಾವ ಹುಡುಗಿಯ ಬೆನ್ನ ಹತ್ತಬೇಕು ಎಂಬ ತೆವಲು ಇರಲೇ ಇಲ್ಲ.
ಅಪ್ಪುಚ್ಚನ ನಂಬುಗೆ ಕೂಡಿ ಬಂತು ಎಂದು ಅವನಿಗೇ ಅನ್ನಿಸಿತು.ಮಡಿಕೇರಿಗೆ ಇನ್ನು ಮೂರು ಮೈಲಿ ಮಾತ್ರಾ ಉಳಿದಿತ್ತು.ಹುಡುಗಿಯರು ನಸು ನಕ್ಕರು.ಕಾರಿಂದ ಢಮ್ಮನೇ ಇಳಿದು ಅವರ ಬಳಿ ಹೋಗಿ ನಿಂತವನೂ ಅವನೇ.
ನಾವು ಮಡಿಕೇರಿಗೆ ಹೊರಟವರು..ಡ್ರಾಪ್ ಕೊಟ್ಟರೆ ಚೆನ್ನಾಗಿತ್ತು ಎಂದರು.
ಅಪ್ಪುಚ್ಚ ಹೇಳಿದ,ನೋಡಿ ತಾಯಂದಿರೇ ನಾವು ತುಂಬಾ ಸಭ್ಯರು ಅಂತೇನಲ್ಲ. ಆದರೆ ನಿಮಗೆ ತೊಂದರೆ ಮಾಡುವಷ್ಟು ಕೆಟ್ಟವರೂ ಅಲ್ಲ..ನೀವು ಧಾರಾಳವಾಗಿ ನಮ್ಮ ಜೊತೆ ಬಂದುಬಿಡಿ.
ಹುಡುಗಿಯರು ನಕ್ಕರು.
ಇಬ್ಬರ ಬ್ಯಾಗುಗಳನ್ನು ಅಪ್ಪುಚ್ಚನೇ ಕಾರಿಗೆ ತುಂಬಿದ.ಚಾಲಕ ಸೀಟಿಂದ ಇಳಿದವನು ಮತ್ತೆ ಕೂರಲಿಲ್ಲ.ಅವನ ಬಳಗದ ಇನ್ಯಾರೋ ಡ್ರೈವರ್ ಆದರು.ಅಪ್ಪುಚ್ಚ ಹಿಂದಿನ ಸೀಟಿನಲ್ಲಿ ಅವರಿಬ್ಬರ ನಡುವೆಯೇ ಕುಳಿತ..
ಯಾಕೆಂದರೆ ಅವನಿಗೆ ಮೊದಲ ಬಾರಿಗೆ ಒಬ್ಬಳ ಸಾನ್ನಿಧ್ಯ ಸಿಕ್ಕಿತ್ತು.
ಅವಳೇ ಸ್ವಾತಿ..
+++++++++++++++++++++++++++
ಅವಳು ಮೊದಲ ಬಾರಿಗೆ ನನ್ನನ್ನು ನೋಡಿ ನಕ್ಕಳು.ಹಾಗೇ ನಗುವುದಕ್ಕೆ ಅಲ್ಲಿ ಯಾವ ಕಾರಣಗಳೂ ಇರಲಿಲ್ಲ.ನಾನೋ ಮ್ಯಾನರ್ಸು ಮ್ಯಾನೇಜು ಮಾಡುತ್ತಿದ್ದೆ.ಸ್ವಾತಿ ಆಗಲೇ ನಕ್ಕದ್ದು.ಎಂಥಾ ನಗು ಅಂತಿಯಾ..ಹುಡುಗಿಯ ಒಂದು ನಿಷ್ಕಲ್ಮಶ ನಗುವನ್ನು ಹಿಡಿದಿಡೋದು ಕಷ್ಟ.ಯಾವುದು ಅಸಲಿ ಯಾವುದು ನಕಲಿ ಅಂತ ಗೊತ್ತಾಗೋದಿಲ್ಲ.ಆದರೆ ಸ್ವಾತಿಯ ನಗು ಮಾತ್ರಾ ನನಗೆ ಸುಲಭವಾಗಿ ಅರ್ಥವಾಗಿತ್ತು.
ಕಾರು ಹೋಗುತ್ತಿತ್ತು.ಬರೀ ಮೂರು ಮೈಲು ಕಣೋ..
ಎಷ್ಟು?
ಮೂರು ಮೈಲು..!
ಆಮೇಲೆ ಅವಳು ಇಳಿಯುತ್ತಾಳೆ.
ನಾನು ಅಷ್ಟರಲ್ಲೇ ಅವಳನ್ನು ಪ್ರೀತಿಸಿಬಿಟ್ಟಿದ್ದೆ.
ನೀನು ನಗುತ್ತೀಯಾ..ಬೇವಾರ್ಸಿ..ನಗದೇ ಇನ್ನೇನು ಮಾಡುತ್ತೀಯಾ..ಶುದ್ಧ ಮರ್ಲು ಅಂತಾನೂ ಕರೀತೀಯಾ..ಯಾಕೆಂದರೆ ನಿನಗೆ ಒಂದು ಹೃದಯಾ ಅಂತ ಇದ್ದರೆ ತಾನೇ?
ಮೂರೇ ಮೂರು ಮೈಲು ಹೋಗಲು ನಮ್ಮ ಕಾರಿಗೆ ಎಷ್ಟು ಸಮಯ ಬೇಕು ಹೇಳು..
ಹತ್ತು ಮಿನಿಟು?
ಅಷ್ಟೇ ಕಣೋ..ನಾನು ಸ್ವಾತಿಯನ್ನು ಪ್ರೀತಿಸಿಬಿಟ್ಟಿದ್ದೆ.ಅವಳು ಯಾರು ಏನು ಎಲ್ಲಿಂದ ಹೊರಟಿದ್ದಾಳೆ..ಎಲ್ಲಿಗೆ ಹೋಗುತ್ತಾಳೆ..ಯಾವುದೂ ಗೊತ್ತಿಲ್ಲ..ಅವಳಿಗೆ ಮದುವೆಯೂ ಆಗಿರಬಹುದು..ಅದೂ ಗೊತ್ತಿಲ್ಲ..
ಅಪ್ಪುಚ್ಚ ಸ್ವಲ್ಪ ಹೊತ್ತು ಸುಮ್ಮನಾದ.
ಅದೇ ಧರೆಯ ಬದುವಿನಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರ ಶರಣು ಭರ್ಜರಿಯಾಗಿ ಸಾಗುತ್ತಿತ್ತು.ನಮ್ಮ ಸ್ಕಾಪಿಯೋ ಕತ್ತಲಿನಲ್ಲಿ ನಮ್ಮಿಂದ ದೂರ ಇರಬಯಸಿದಂತೆ ನಿಂತಿತ್ತು.
ಅಥವಾ ಅವಳು ಅವಳ ನಲ್ಲನನ್ನು ಸೇರಲು ಹೊರಟ ಪ್ರೇಮಿಯೂ ಆಗಿರಬಹುದು..
ಅಪ್ಪುಚ್ಚ ವಿಷಣ್ಣನಾಗಿದ್ದ.
ನಾನು ಎಲ್ಲವನ್ನೂ ಮೀರಿಬಿಟ್ಟಿದ್ದೆ,
ಅವಳನ್ನು ಪ್ರೀತಿಸಿದ್ದೆ.
ಅವಳು ಸ್ವಾತಿ..
ಅವಳ ಜೊತೆಗಿದ್ದವಳು?ನನಗೆ ಗೊತ್ತಿಲ್ಲ.ನಾನು ಆಕೆ ಯಾರೆಂದು ಕೇಳಲೂ ಇಲ್ಲ..
ಮಡಿಕೇರಿ ಬಂತು.ಬಸ್ ನಿಲ್ದಾಣದಲ್ಲಿ ಅವರಿಬ್ಬರೂ ಇಳಿದುಕೊಂಡರು.ನಾನೇ ಅವರ ಬ್ಯಾಗು ತೆಗೆದುಕೊಟ್ಟೆ.
ಗೋಣಿಕೊಪ್ಪ ಕ್ಕೆ ಹೋಗಬೇಕು ಎಂದಳು.
ಆಮೇಲೆ ಅವಳೇ ಹೇಳಿದ್ದು..ಅಲ್ಲಿಂದ ಮುಂದೆ ವಯನಾಡಿಗೆ ಪಯಣ..ಕಲ್ಪೆಟ್ಟಾಕ್ಕೆ ಎಂದು.
ನಾನು ಯಾಕೆ ಏನು ಮುಂತಾಗಿ ಕೇಳಲಿಲ್ಲ.ಹಾಗೇ ಕೇಳುವ ಧೈರ್ಯ ಇರಲಿಲ್ಲ ಅಂತಲ್ಲ.ಆ ಹಕ್ಕು ನನ್ನದಲ್ಲ ಅಷ್ಟೇ.ನಾನು ಪ್ರೀತಿಸಿದ ಹುಡುಗಿ ಅವಳು..
ತಪ್ಪು ಮಾಡಿದೆನೇನು ನಾನು?
ನೋ..ಯೂ ಆರ್ ಪರ್ಫೆಕ್ಟ್ಲೀ ರೈಟ್..ಎಂದೆ.
ಅಪ್ಪುಚ್ಚ ಕತೆ ಮುಂದುವರಿಸಿದ.
+++++++++++++++++
ಅವನ ಮುಂದಿನ ಪ್ರವರಗಳೆಲ್ಲಾ ಆಸಕ್ತಿದಾಯಕವಾಗಿದ್ದವು.ಏಕೆಂದರೆ ಹಾಗೇ ಕಾರಿನಿಂದ ಇಳಿದ ಆ ಹುಡುಗಿ ಅವನ ಕೈಗೊಂದು ಕಾಗದದ ತುಂಡು ನೀಡಿದ್ದಳು.ಆಕೆ ಹಾಗೇ ಅದನ್ನು ನೀಡುವುದು ಅವನ ಸಾಥ್‌ಗಳಿಗೇನಾದರೂ ಗೊತ್ತಾಗಿದ್ದರೆ ಅವನನ್ನು ಹಣ್ಣುಗಾಯಿ ಮಾಡುತ್ತಿದ್ದರೋ ಏನೋ.ಆಕೆ ಅದು ಯಾವ ಪರಿಯಲ್ಲಿ ಆ ಚೀಟಿ ಇತ್ತಳೆಂದರೆ ಅದರಲ್ಲಿ ನವಿರಾದ ಸಂಬಂಧದ ಸಣ್ಣ ಗೀತವೊಂದು ತೆಳುವಾಗಿ ಹಂದಾಡಿತ್ತು.
ಅಪ್ಪುಚ್ಚ ಆ ಕಾಗದವನ್ನು ಬಿಡಿಸಿದ್ದು ಮರುದಿನವೇ.ಅವನಿಗೆ ಅದನ್ನು ಅವನ ದೋಸ್ತಿಗಳೆದುರು ಬಿಡಿಸಿಟ್ಟು ಮೂರಾಬಟ್ಟೆಯಾಗೋದು ಬೇಕಿರಲಿಲ್ಲ.ಆ ಕಾಗದದ ತುಂಡು ಅದುಮಿಟ್ಟುಕೊಂಡ ವಾರ್ಮ್ತ್ ಅವನಿಗೆ ಬೇಕಿತ್ತು.
ಮರು ದಿನ ಸಂಜೆ ಮನೆಗೆ ಬಂದವನೇ ತನ್ನ ಕೋಣೆಯಲ್ಲಿ ಟೇಬಲ್ಲು ಲ್ಯಾಂಪನ್ನು ಹತ್ತಿಸಿ ಅದರ ಮಂದ ಬೆಳಕಲ್ಲಿ ಅಪ್ಪುಚ್ಚ ಕಾಗದ ಬಿಚ್ಚಿದ.
ಅದರಲ್ಲಿ ಬರೆದಿತ್ತು,
ಸ್ವಾತಿ.
ಅದು ಅವನು ಪ್ರೀತಿಸಿದ ಹುಡುಗಿಯ ಹೆಸರು.
ಆಗಲೇ ಅವನಿಗೆ ಅವಳ ಹೆಸರು ಗೊತ್ತಾದದ್ದು.
ಕೆಳಗೆ ಮೂರು ಸಾಲಿನಲ್ಲಿ ಅವಳ ದಕ್ಷಿಣ ಕೊಡಗಿನ ವಿಳಾಸ.
ಅಪ್ಪುಚ್ಚನಿಗೆ ಗಟ್ಟಿಯಾಗಿ ನಂಬುಗೆ ಬಂತು.ಇವಳೂ ನನ್ನನ್ನು ಪ್ರೀತಿಸುತ್ತಿದ್ದಾಳೆ.
ಅದೇ ರಾತ್ರಿ ಆ ವಿಳಾಸಕ್ಕೆ ಅವನೊಂದು ಬಿಳಿ ಹಾಳೆಯಲ್ಲಿ ಸೌಜನ್ಯಪೂರಿತವೂ ಗೌರವಾನ್ವಿತವೂ ಆದ ಪತ್ರ ಬರೆದಿಟ್ಟ.
++++++++++++++++++++++++
ಅವಳಿಂದ ಉತ್ತರ ಬಂದೇ ಬಂತು ಕಣೋ..ಏನು ಬರೆದಿದ್ದಳು ಗೊತ್ತಾ.?.ನೀನು ಈ ವೇಗದಲ್ಲಿ ಕಾಗದ ಬರೆದೇ ಬರೆಯುತ್ತೀಯಾ ಅಂತ ನನಗೆ ಖಚಿತವಾಗಿ ಆ ಕ್ಷಣಕ್ಕೇ ಗೊತ್ತಾಗಿತ್ತು.ಥ್ಯಾಂಕ್ಯೂ..ಅಷ್ಟೇ.
ಆಮೇಲೆ ನಮ್ಮಿಬ್ಬರ ನಡುವೆ ಹತ್ತಾರು ಕಾಗದಗಳು ಹರಿದಾಡಿದವು.ನನಗೋ ಅವಳ ಬಗ್ಗೆ ತಿಳಿದುಕೊಳ್ಳಬೇಕು ಎಂಬ ಆಸೆ.ಆದರೆ ಅದನ್ನೇನಾದರೂ ಕೇಳಿಬಿಟ್ಟರೆ ಅವಳೆಲ್ಲಿ ನನ್ನವಳಾಗಲಾರಳೋ ಎಂಬ ಭಯ.ಒಂದು ವೇಳೆ ನಾನು ಕೇಳಿದರೆ ಆಗ ಅವಳು ತನಗೆ ಮದುವೆ ನಿಶ್ಚಯವಾಗಿದೆ ಎಂದುಬಿಟ್ಟರೆ..
ಪ್ರತೀ ಬಾರಿ ಅವಳ ಕಾಗದ ಒಡೆಯುವಾಗ ಅವಳೆಲ್ಲಿ ತಾನು ಇನ್ಯಾರನ್ನೋ ಪ್ರೀತಿಸುತ್ತಿರುವುದಾಗಿ ಬರೆದಿದ್ದರೆ ಎಂಬ ಹೆದರಿಕೆಯಾಗುತ್ತಿತ್ತು.ಆದರೆ ಅವಳು ಹಾಗೇ ಬರೆಯಲಿಲ್ಲ.
ನೀನು ಆಗಲೇ ಕೇಳುತ್ತೀಯಾ ಅಂತ ಅಂದುಕೊಂಡಿದ್ದೆ.ನೀನು ಕೇಳಲಿಲ್ಲ.ನಾನೇ ಹೇಳುತ್ತೇನೆ,ನಾನು ಅವಳ ಮೊಬೈಲ್ ನಂಬರ್ ಕೇಳಬೇಕಿತ್ತು ಅಲ್ಲವಾ?ಅಥವಾ ನನ್ನ ಮೊಬೈಲ್ ನಂಬರು ಅವಳಿಗೆ ಕೊಟ್ಟುಬಿಡಬಹುದಿತ್ತು ಅಲ್ಲವಾ?
ಅದು ಬಿಟ್ಟು ನಾಪತ್ತೆಟ್ಟು ಮಾಡೆಲ್ಲುಗಳ ಹಾಗೇ ಇನ್ಲಾಂಡ್ ಲೆಟ್ಟರ್ ವ್ಯವಹಾರವಾ? ಥೂ..
ಕೇಳಿಯೇ ಬಿಟ್ಟೆ ಕಣೋ..
ಎರಡನೇ ಕಾಗದದಲ್ಲಿ ನನ್ನ ಮೊಬೈಲು ನಂಬರು ಬರೆದು ಕಳುಹಿಸಿದೆ.ಹಾಗೇ ಅವಳ ನಂಬರೂ ತಪ್ಪದೇ ಕೊಡು ಎಂದೆ.
ಕಾದೆ.
ಮೊಬೈಲ್‌ಗೆ ಅಪರಿಚಿತ ನಂಬರುಗಳ ಕರೆ ಬಂದಾಗಲೆಲ್ಲಾ ಇದು ಸ್ವಾತಿಯದೇ ಅಂತ ಎತ್ತಿಕೊಳುತ್ತಿದ್ದೆ.ಸ್ವಾತಿ ಮಾತ್ರಾ ಕಾಗದವನ್ನೇ ಬರೆದಳು.ಬಣ್ಣದ ಕಾಗದ.ನಾನು ಒಡೆದೆ.
ಮೊನ್ನೆ ಕಾರಲ್ಲಿ ನಿನ್ನ ಪಕ್ಕ ಕುಳಿತಿದ್ದೆ ನೋಡು,ಆಗ ನಿನ್ನ ಬಿಳಿ ಶರಟಿನ ಜೇಬಿನಲ್ಲಿ ಬಣ್ಣಧ ಮೊಬೈಲ್ ಬೆಳಕು ಸೂಸುತ್ತಿರುವುದು ನನಗೆ ಕಂಡಿತ್ತು.ನೀನು ನನ್ನ ಜೊತೆ ಇರೋ ಅಮೂಲ್ಯ ಅವಕಾಶ ಮಿಸ್ಸಾಗುತ್ತದೆ ಅಂತ ನೀನು ಅದನ್ನು ಎತ್ತಲಿಲ್ಲ.ನಿಜ ತಾನೇ?ಹಾಗೇ ನನ್ನ ಬ್ಯಾಗಿನೊಳಗೆ ನನ್ನ ಮೊಬೈಲ್ ಕೂಡಾ ವೈಬ್ರೇಟ್ ಅಗುತ್ತಿತ್ತು.ನಾನೂ ಅದನ್ನು ಎತ್ತಲಿಲ್ಲ.ಏಕೆಂದರೆ ನಿನ್ನ ಸನ್ನಿಧಾನದಿಂದ ತಪ್ಪಿಸಿಕೊಳ್ಳಲು ಮನಸ್ಸಾಗಲಿಲ್ಲ.ಈಗ ಮೊಬೈಲ್ ನಂಬರ್ ನಾನು ಕೊಡಲ್ಲ.ಅಷ್ಟೊಂದು ನಿಕಟವಾಗುವುದರಿಂದ ನನಗೆ ಕಾತರಗಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ..ದಯವಿಟ್ಟು ನಿನ್ನ ಸಿಮ್ಮ್ ಬದಲಾಯಿಸು.ನಿನ್ನ ನಂಬರ್ ನನ್ನ ಬಳಿ ಇರಲೇಬಾರದು ಪ್ಲೀಸ್..
ನಾನು ಹಾಗೇ ಮಾಡಿಬಿಟ್ಟೆ.
++++++++++++++++++++++++++++++++++++++
ಆಮೇಲೆ..??!!
ಮೂರು ವರುಷಗಳ ಬಳಿಕ ಅಪ್ಪುಚ್ಚ ಮತ್ತು ಸ್ವಾತಿ ಭೇಟಿಯಾಗಲು ನಿರ್ಧರಿಸಿದರು.ಸ್ಥಳ ಅದೇ ಮಡಿಕೇರಿ ಘಾಟ್ ಪ್ರದೇಶ.ಅಂದರೆ ಅದೇ ಮಡಿಕೇರಿಯಿಂದ ಮೂರು ಮೈಲು ದೂರದ ಬಸ್ಸು ನಿಲ್ದಾಣ.ಅಪ್ಪುಚ್ಚ ಒಂದು ಗಂಟೆ ಮೊದಲೇ ಬಂದು ನಿಂತಿದ್ದ.ಸ್ವಾತಿಗಾಗಿ ಕಾದ.ಅವಳು ಬರಲಿಲ್ಲ.
ಸಿನಿಮಾ ಕತೆಯ ಥರ ಆಯಿತಲ್ಲಾ ಅಂತ ಅಂದುಕೊಳ್ಳಬೇಡಿ..
ಅಪ್ಪುಚ್ಚನ ಮೊಬೈಲ್‌ಗೆ ಒಂದು ಮೆಸೇಜು ಬಂದು ಬಿತ್ತು.
ನಿನ್ನ ಪ್ರೀತಿ ಎಷ್ಟಿದೆ ಅಂತ ಚೆಕ್ ಮಾಡಿದೆ.ನಿನ್ನದು ಬೆಟ್ಟದಷ್ಟು ಪ್ರೀತಿ ಅಂತ ಋಜುವಾತಾಗಿದೆ.ನಾನು ನಿನ್ನೆದುರು ಬರೀ ಸಾಸಿವೆಕಾಳು.-ಸ್ವಾತಿ.
ಅಪ್ಪುಚ್ಚ ಕೊಂಚವೂ ವಿಷಣ್ಣನಾಗಲಿಲ್ಲ.ವಿಚಲಿತನೂ ಆಗಲಿಲ್ಲ.ಅವಳ ಮೆಸೇಜಿಗೆ ಉತ್ತರಿಸಲೂ ಇಲ್ಲ ಮೊಬೈಲ್ಲಿಗೆ ಕರೆಯೂ ಮಾಡಲಿಲ್ಲ,
ಆಮೇಲೆ ಅವಳಿಗೆ ಅವನು ಅದೆಷ್ಟೋ ಪತ್ರ ಬರೆದ.
ಯಾವುದಕ್ಕೂ ಉತ್ತರ ಬರಲಿಲ್ಲ.
ನಾವು ವೈತ್ರಿ ಘಾಟ್ ಬಿಟ್ಟು ಹೊರಟಾಗ ಅಪ್ಪುಚ್ಚ ಕೇಳಿದ,
ಸ್ವಾತಿಯನ್ನು ನಾನು ಮತ್ತೊಮ್ಮೆ ಪ್ರೀತಿಸಲಾ?
ನನ್ನ ಬಳಿ ಉತ್ತರ ಇರಲಿಲ್ಲ.
ನೀವಾದರೂ ಹೇಳುತ್ತೀರಾ?

20100110

ಪಾಸ್ಟ್ ಟೆನ್ಸ್..
ಆಗ ಅರ್ಥವಾಗಿರಲಿಲ್ಲ
ಗೆಳೆಯಾ
ನಾನು ನಿನ್ನವಳಾಗಲಾರೆ ಎಂದು.
ಆದರೂ
ಪ್ರೀತಿಸಿದೆ..
ನಿನ್ನಂತೆ ನಾನೂ..


ಹೋಗಲಿ ಬಿಡು ಗೆಳೆಯಾ
ನಾನೂ
ಬಯಸಿದ್ದೆ ನಿನ್ನನ್ನು ಗೊತ್ತಿಲ್ಲದೆಯೇ ನನಗೆ ಮತ್ತು ನಿನಗೆ
ಆದರೂ ಕಾಲ ನಿರ್ಣಯಿಸದೇ ಉಳಿಯಿತು.
ಇದು ಸಂಭವಿಸಲಾರದ ಕ್ಷಣ

ಹೇಗೆ ಉಳಿಯಲಿ ನಾನು
ನಿನ್ನನ್ನು ಬಿಟ್ಟು
ಎಂದರೆ ಭೂಮಿಗೆ ಅನುಕಂಪ
ಗಾಳಿಗೆ ಮತ್ಸರ
ನೀರಿಗೆ ಸೆಡವು
ಮೈಥುನಕ್ಕೆ ವಿರಾಮ
ಭಯವೂ ಮೌನ..

ಮನಸು ನಿನ್ನ ಕಳುಹಿಸಿಲ್ಲ,
ದೇಹ ನನ್ನ ಒಪ್ಪುತ್ತಿಲ್ಲ
ಮಾತು ಇವನದ್ದು,
ನೀನಿಟ್ಟು ಹೋದ ಸಂಕಟ ಹಚ್ಚ ಹಸಿರು..

ತಂದು ಕೊಡೋ ಆ ನಿನ್ನ ರಕ್ಕಸ ಪ್ರೀತಿಯ..
ಇವನ ನಗುವಿನಲ್ಲಿ
ಇವನ ತೋಳಿನಲ್ಲಿ
ಇವನ ಸಂದುಗಳಲ್ಲಿ..
ಎರವು ಕರುಣಿಸೋ..
ನನ್ನ ಚುಪ್ಪು..

20100109

ಚೆಲುವೆಯ ಅಂತಿಮ ಟಾರ್ಗೆಟ್ಟು

ರಂಭೆ..
ಊರ್ವಶಿ
ಮೇನಕೆ..
ಮಹಾಭಾರತ,ರಾಮಾಯಣ,ಪುರಾಣಗಳನ್ನೆಲ್ಲಾ ಓದಲೇ ಬೇಕು ಎಂದೇನಿಲ್ಲ,ಇವರು ಹಾಗೆಯೂ ನಮಗೆ ನಿತ್ಯ ಗೊತ್ತಿನವರೇ...
ಅಜ್ಜ ಹೇಳುತ್ತಿದ್ದ ಕತೆಗಳಲ್ಲಿ,ಚಂದಮಾಮದ ಸ್ಟೋರಿಗಳಲ್ಲಿ,ಬಾಲಮಿತ್ರದ ಗಾಥಾಗಳಲ್ಲಿ.. ಯಕ್ಷಗಾನದಲ್ಲಿ॒

ಇವರಲ್ಲಿ ಒಬ್ಬಳಾದರೂ ಜೀವನ ಎಂಬೋ ಥೇಟರ್‌ನೊಳಗೆ ಬಾರದೇ ಇದ್ದರೆ ಆಟ ತುಂಬಾ ಬೋರುಬೋರು.
ಈಗ್ಗೆ ಬಾಲಿವುಡ್ ಹಾಲಿವುಡ್ ಬರೋದಕ್ಕೂ ಮುಂಚೆ ಯಾವುದೇ ಬ್ಯೂಟಿಗಳನ್ನು ಕಂಪೇರು ಮಾಡುತ್ತಿದ್ದುದು ಈ ಅಪ್ಸರಸಿಗಳನ್ನು ಮಡಗಿಯೇ.

ಕಶ್ಯಪ ಪ್ಲಸ್ ಪ್ರಾಥೆ ಅಂದರೆ ರಂಭಾ.ದೇವಲೋಕದ ಮುಖ್ಯ ವಿಲಾಸಿನಿ ಇವಳೇ.ಅದಕ್ಕೆ ಇವಳ ಹೆಸರು ಟಾಪ್ ಟೆನ್‌ನಲ್ಲಿ ಫಸ್ಟು.ಹೇಳಿಕೇಳಿ ಓರ್ವ ಗಂಧರ್ವನನ್ನು ಗಂಡ ಮಾಡಿಕೊಂಡಿದ್ದಳು.ವಿಶ್ವಾಮಿತ್ರನ ತಪಸ್ಸು ಕೆಡಿಸಲು ಹೋದ ಟ್ರೂಪ್‌ನಲ್ಲಿ ಲೀಡರ್ ಅಗಿದ್ದಳು.ಬಾಸ್ ಇಂದ್ರ ಹೇಳಿದ ಅಂತ ರಾಕ್ ಮಾಡಲು ಹೋಗಿ ವಿಶ್ವಾಮಿತ್ರನಿಂದ ಕರ್ಸ್‌ಸಿಸಲ್ಪಟ್ಟು ಪಕ್ಕಾ ರಾಕ್ ಆಗಿದ್ದಳು.

ಊರ್ವಶಿ ಸ್ಟೋರಿ ಯಾರಿಗೆ ತಾನೇ ಗೊತ್ತಿಲ್ಲ.ಇಂದ್ರ ಎಂಬ ಕಿಲಾಡಿ ಗಾಡ್‌ಕಿಂಗು ಬದರಿಕಾಶ್ರಮದಲ್ಲಿ ತಪಸ್ಸು ಮಾಡುತ್ತಿದ್ದ ನರನಾರಾಯಣ ಎಂಬ ಋಷಿಗಳ ತಪಸ್ಸು ಹಾಳು ಮಾಡಲು ಗರ್ಲ್ಸ್ ಟ್ರೂಪ್ ಕಳುಹಿಸಿದ್ದ. ಆ ದೇವವಿಲಾಸಿನಿಯರ ಆಗಮನ ಕಂಡ ಋಷಿ ತೊಡೆ ಕೆರೆದುಕೊಂಡ,ಆಗ ಹುಟ್ಟಿದವಳು ಊರ್ವಶಿ..ಬಾರ್ನ್ ಫ್ರಂ ಊರು..ಐ ಮೀನ್ ತೊಡೆ,ಆದ್ದರಿಂದ ಊರ್ವಶಿ. ಈಕೆ ಲೋಕೋತ್ತರ ಬ್ಯೂಟಿ.ಊರ್ವಶಿ ಹುಟ್ಟಿದ್ದೇ ತರುಣಿಯಾಗಿ.ಅವಳೆಂಥ ನಾಟಿ ಬ್ಯೂಟಿ ಆಗಿದ್ದಳು ಎಂದರೆ ಅವಳನ್ನು ನೋಡಿದ್ದೇ ದೇವವಿಲಾಸಿನಿಯರು ಸೋ ಶೈ ಆಗಿ ಎಸ್ಕೇಪ್ ಆಗುತ್ತಾರೆ.ಅಂದರೆ ಬ್ಯೂಟಿ,ಬಾಡಿ ಎಲ್ಲಾ ಅವಳಿಗೆ ಬಾರ್ನ್ ಗಿಫ್ಟು ಅಂತ ಪನ್ ಮಾಡಬಹುದು.ಈ ಊರ್ವಶಿ ಮಹಾಭಾರತದಲ್ಲಿ ಮತ್ತೆ ಮತ್ತೆ ಕಾಣಸಿಗುತ್ತಾಳೆ.ಇವಳೂ ಕರ್ಸ್‌ಗೆ ಈಡಾಗುತ್ತಾಳೆ.ಹಾಗಾಗಿ ಅರ್ಥ್‌ಗೆ ಬರುತ್ತಾಳೆ,ಭುವನಭಾಗ್ಯ ಎಂಬಂತೆ..ವೈಫ್ ಆಫ್ ಪುರೂರವ ಆಗಿ ಮದರ್ ಆಫ್ ಸಿಕ್ಸ್ ಕಿಡ್ಸ್ ಆಗಿ ಫ್ಯಾಮಿಲಿ ಮಾಡಿಕೊಂಡಿದ್ದ ಊರ್ವಶಿಯ ಬ್ಯೂಟಿ ಎಂದೂ ಕುಂದುವುದಿಲ್ಲ.ಸ್ವರ್ಗದಲ್ಲಿ ಅರ್ಜುನನನ್ನು ಸೆಡ್ಯೂಸ್ ಮಾಡಲು ಹೋಗಿ ಫೇಲ್ ಆಗಿ ಅರ್ಜುನನಿಗೆ ಇಂಪೊಟೆಂಟ್ ಆಗು ಅಂತ ಶಾಪ ಹಾಕುತ್ತಾಳೆ ಈ ಚೆಲುವೆ.

ಮೇನಕೆ ಮತ್ತೊಬ್ಬಳು ಡ್ಯಾನ್ಸಿಂಗ್ ಬ್ಯೂಟಿ.ವಿಶ್ವಾಮಿತ್ರನನ್ನು ಮಣಿಸಿದ ಬ್ಯೂಟಿ ಈಕೆ.ಪಾಪ ತಪಸ್ಸಿಗೆ ಕೂತಿದ್ದ ಆ ಜಂಟಲ್‌ಮ್ಯಾನ್ ಋಷಿಪುತ್ರಿಯ ಕೌಮಾರ್ಯಕೆ ಭಂಗ ಕೊಡೋ ಕಾರ್ಯಕೆ ಆಕೆಯೊಡನೆ ಡ್ಯಾನ್ಸ್ ಮಾಡಿದ.ಮೀಟಿಂಗ್ ಬಲವಾಯಿತು.ಶಕುಂತಳೆಯ ಬರ್ತ್ ಆಯಿತು.

ಆದರೆ ಇವರೆಲ್ಲರಿಗಿಂತ ನಿಜವಾದ ಚೆಲುವೆ ಎಂದರೆ ತಿಲೋತ್ತಮೆ.ರಂಭೆ-ಊರ್ವಶಿ-ಮೇನಕೆ-ತಿಲೋತ್ತಮೆ ಅಂತ ಆರ್ಡರ್ ಪ್ರಕಾರವೇ ಹೆಸರು ಬರುತ್ತದೆ,ಹಾಗೇ ಅವರ ಚೆಲುವು ಕೂಡಾ.ಇವರಿಗೆಂತೆಲ್ಲಾ ತಿಲದಷ್ಟು ಹೆಚ್ಚು ಚೆಲುವೆ ಅಂದರೆ ಒಂದು ಎಳ್ಳು ಕಾಳಿನಷ್ಟು ಆದರೂ ಹೆಚ್ಚು ಬ್ಯೂಟಿ ತಿಲೋತ್ತಮೆ.ಈಕೆ ರಂಭೆಯ ಸಿಸ್ಟರ್ ಇರಬೇಕು.ಅದೇ ಕಶ್ಯಪ ಪ್ಲಸ್ ಪ್ರಾಥೆ ಇವಳ ಅಪ್ಪ ಅಮ್ಮ.ಸುಂದೋಪಸುಂದರೆಂಬ ಡೆವಿಲ್ ಬ್ರದರ‍್ಸ್ ಡೆತ್ತೇ ಇಲ್ಲ ಅಂತ ಟೆರರಿಸಂ ಮಾಡುತ್ತಿದ್ದಾಗ ಈಕೆ ಅವರ ಕಣ್ಣಿಗೆ ಬೀಳುತ್ತಾಳೆ.ಇವಳ ಅಗಾಧ ಚೆಲುವಿಗೆ ಕಾಮವಿವಶರಾದ ಆ ಡೆವಿಲ್ಸ್ ಈಕೆಯನ್ನು ಮ್ಯಾರೇಜು ಆಗಲು ಮುಂದಾಗುತ್ತಾರೆ.ಆಗ ಈಕೆ ಫಿಟ್ಟೆಸ್ಟ್ ವಿಲ್ ಸರ್ವೈವ್ ಅಂತ ಆಫರ್ ಮಾಡುತ್ತಾಳೆ.ಇಬ್ಬರೂ ಹೊಡೆದಾಡಿಕೊಂಡು ಸಾಯುತ್ತಾರೆ.ಈ ಕಿಲ್ಲರ್ ಬ್ಯೂಟಿ ಆಮೇಲೆ ಹಲವಾರು ಕಿತಾಪತಿ ಮಾಡಿದ್ದಾಳೆ.
ತಿಲೋತ್ತಮೆ ನೋಡಿದರೆ ಓನ್ಲೀ ಫಿಟ್ಟೆಸ್ಟ್ ವಿಲ್ ಸರ್ವೈವ್.
ಚೆಲುವೆಯ ಅಂತಿಮ ಟಾರ್ಗೆಟ್ಟು ಕೊನೆಗೂ ಅದೇ ತಾನೇ..

20100102

ಹೇಮಂತದ ಮಳೆ

ಈ ಮಾಯದಂಥ ಮಳೆಗೆ ವಿವರಣೆಗಳೇ ಇಲ್ಲ.
ಹೇಗೆನ್ನುವೆಯೋ ಹಾಗೇ ಈ ಮಳೆಯನ್ನು ಅರ್ಥೈಸಿಕೊಳ್ಳಬಹುದು.
ಪಂಚ‘ತಗಳು ಸದಾ ಪ್ರಶ್ನಾತೀತ.ಮತ್ತೆ ಮನುಷ್ಯ ಮಳೆಯನ್ನು ಮುಟ್ಟಲುಂಟಾ?
ಇದ್ದಕ್ಕಿದ್ದಂತೆ ಮಳೆಗಾಲ ಬಂದಿದೆ.ಕರಾವಳಿ ತೋಯ್ದಿದೆ.ಹೇಮಂತ ಋತುವಿನಲ್ಲಿ ಮಳೆಗಾಲ ಬಂದ ಉದಾಹರಣೆ ಬಹುಶಃ ಇಲ್ಲ.ಎಂದೋ ಇದ್ದರೆ ಅದಕ್ಕೆ ಸಾಕ್ಷಿ ಹೇಳುವವರು ಉಳಿದಿಲ್ಲ.
ಇದನ್ನು ಹಿಂಗಾರು ಮಳೆ ಎಂದು ಕರೆಯಲಾಗಿದೆ.ಅಂದರೆ ಮುಂಗಾರು ಮಳೆಯ ನಿರ್ಗಮನ ಇದು.ದೂರದ ಕಡಲಿನ ಒಡಲಿಂದ ಎದ್ದೆದ್ದು ಬಂದ ಮುಂಗಾರು ಮಳೆ ಮತ್ತೆ ನೆಲದಾಟ ಮುಗಿಸಿ ಮರಳಿ ಅದೇ ನೀರೊಡಲ ಸೇರುವ ಹಾದಿ ಇದು ಎನ್ನುತ್ತಾರೆ.
ಇರಬಹುದು ಆದರೆ ಹಾಗೇ ಮರಳಿ ಹೋಗೋ ಕಾಲ ಇದಾ?
ಮಳೆಗಾಲ ಎಂದೋ ಹೊರಟುಹೋಗಬೇಕಿತ್ತು.ಮಳೆರಾಯನ ಪರ್ವ ಮುಗಿದು ಛಳಿರಾಯನ ಪ್ರವೇಶ ಆಗಬೇಕಿತ್ತು.ಆದರೆ ಮಳೆರಾಯನ ಹುಮ್ಮಸ್ಸು ಮುಗಿಯುವ ಲಕ್ಷಣ ತೋರುವುದಿಲ್ಲ.ಛಳಿರಾಯ ಇನ್ನೂ ಗ್ರೀನ್‌ರೂಮಿನಲ್ಲಿ ಇದ್ದಾನೆ ಬಣ್ಣ ಬಳಿದು ಪೇಟ ಕಟ್ಟಿ ಗೆಜ್ಜೆ ಬಿಗಿದು..
ಅವನಿಗೆ ಸ್ಟೇಜು ತೆರೆದಿಲ್ಲ.ಏಕೆಂದರೆ ಈ ದೃಶ್ಯವೇ ಇನ್ನೂ ಮುಗಿದಿಲ್ಲ.
ಗ್ಲೋಬಲ್ ವಾರ್ಮಿಂಗು ಪರಿಣಾಮ ಇದು ಎನ್ನುತ್ತಾರೆ.
ಇದು ನಾವೇ ನಮಗಾಗಿ ಕೊಟ್ಟುಕೊಂಡ ಕೊಡುಗೆ.ನಮ್ಮ ಮನೆಯೊಳಗೆ ನಾವೇ ಕುಳಿತು ಬೆಂಕಿ ಹಚ್ಚಿಕೊಂಡ ಹಾಗೇ.ನೆಲದ ನೆಮ್ಮದಿಯನ್ನು ಕೆಡಿಸಿದ ನಾವು ಅದರ ಹದವನ್ನು ಮೀರಿದೆವು.ನಮ್ಮ ಆಯ ತಪ್ಪಿತು.ನೆಲದ ಹಮ್ಮು ಬಿರಿಯಿತು.
ಪೆಟ್ರೋಲು,ಗ್ಯಾಸು,ಕೆಮಿಕಲ್,ಹೊಗೆ,ಫ್ರಿಜ್ಜು,ಎಸಿ,ವಾಹನ,ಕಾರ್ಖಾನೆ..
ಕಡಿದು ಮುಗಿದ ಕಾಡು,ಅಗೆದು ಮುಗಿದ ಮಣ್ಣು,ತೋಡಿ ಮುಗಿದ ನೆಲ,ಮೊಗೆದು ಮುಗಿದ ನೀರು..
‘ಮಿ ಬಂಜರು,ನೆಲ ಬರಿದು,ಒಡಲು ಖಾಲಿ..ಬತ್ತಿದ ನದಿ,ಕಡಲಗೇ ಕುತ್ತು..
ಇನ್ನೂ ನಾವೆಂದಂತೆ ಮಳೆ ಬರಬೇಕು,ಬೆಳೆ ಬೆಳೆಯಬೇಕು ಎಂದರೆ ಹೇಗೆ?
ಕಾಲ ಬದಲಾಗಿದೆ,
ಮಳೆಗಾಲವೂ..
ಅದಕ್ಕೇ ಈ ಛಳಿಯ ಅವತರಣಿಕೆ ಹೊತ್ತಿನಲ್ಲಿ ಮಳೆಯ ಬಿರ್ಪು ಲೋಕಾರ್ಪಣೆಯಾಗುತ್ತಿದೆ..
ಒಪ್ಪಿಕೊಳ್ಳಲೇಬೇಕು ನಾವು..
ನೆಲದಲ್ಲಿ ಕೊಳೆದು ರಾಶಿ ಬಿದ್ದ ಫಸಲನ್ನು,ಹೂವನ್ನು ಹೊಮ್ಮಿಸದ ಮಾವಿನ ಮೆರವನ್ನು,ಕೊಳೆಯುತ್ತಿರುವ ಎಲೆಚಿಗುರನ್ನು,ಮುಕ್ಕಿ ತಿನ್ನಲು ಹುಟ್ಟಿ ಬರೋ ಕೀಟರಾಶಿಗಳನ್ನು,ಹೊಸ ಹೊಸ ವೈರಸ್‌ಗಳನ್ನು,ಕಾಯಿಲೆ ಕಸಾಯಿಗಳನ್ನು..
ಶತಶಮಾನದಲ್ಲಿ ಹೀಗೆ ಮಳೆ ಬರಲಿಲ್ಲ ..
ಶತಶತಮಾನದಲ್ಲಿ ನಾವು ಹೀಗೆ ಇರಲೂ ಇಲ್ಲ..

20100101

ಜೋಗಿ /ವಿಷ್ಣು /ವೈಎನ್‌ಕೆ

ನಮ್ಮೂರಿನ ಗಾಂಧಿಪಾರ್ಕು ಅಂತ ಹೆದ್ದಾರಿ ಒತ್ತಿನಲ್ಲಿ ಒಂದು ಬಡಾವಣೆ.ಅಲ್ಲಿ ಶಿವಕೀರ್ತಿ ಹೋಟೇಲು.ವಿಷ್ಣು ಆ ಹೋಟೇಲಿನೊಳಗೆ ಬಂದು ಕುಳಿತರು.ವಿಷ್ಣು ಬಂದ ಸುದ್ದಿಯನ್ನು ಶಾಲೆಗೆ ತಂದದ್ದು ಸದಾ ಶಾಲೆ ಎಂದರೆ ಅಷ್ಟಕ್ಕಷ್ಟೇ ಎಂದು ತೀರ್ಮಾನಿಸಿದ್ದ ಅಶ್ರಫ್ ಬಸ್ತಿಕ್ಕಾರ್.ಆತನ ಮನೆ ಶಿವಕೀರ್ತಿ ಹೋಟೇಲಿನ ಸಮೀಪಕ್ಕಿದೆ.

ವಿಷ್ಣು ಬಂದ ಸುದ್ದಿ ಕೇಳುತ್ತಲೇ ಶಾಲೆಯ ಸೀನಿಯರ್ ಮಕ್ಕಳಾದ ನಾವು ಪ್ರಿನ್ಸಿಪಾಲ್ ಬಳಿ ಹೋಗಿ ವಿಷ್ಣು ಅವರನ್ನು ಭೇಟಿ ಮಾಡಬೇಕು ಎಂದೆವು.ಅದೇನೋ ಮೂಡಲ್ಲಿದ್ದರೋ ಏನೋ ನಮ್ಮ ನಾಯಕ್ ಸರ್..ಹೋಗಿ ಹೋಗಿ ಆದರೆ ಒಂದು ಶರತ್ತು,ಅಟೋಗ್ರಾಪ್ ಹಾಕಿಸಿಕೊಂಡು ಬರಬೇಕು..ಮತ್ತು ಅದನ್ನು ನನಗೆ ತೋರಿಸಬೇಕು ಎಂದರು.ಅಟೋಗ್ರಾಫ್ ಹಾಕಿಸಿಕೊಳ್ಳದಿದ್ದವರಿಗೆ ಇಂಪೊಸಿಶನ್ ಕೊಡುತ್ತೇನೆ ಎಂದರು.ನಾವೆಲ್ಲಾ ಹೊಯ್ಯೋ ಅಂತ ಓಡಿದೆವು.ಶಿವಕೀರ್ತಿ ಹೋಟೇಲಿನ ಮೂಲೆಯ ಟೇಬಲ್ಲಿನಲ್ಲಿ ವಿಷ್ಣು ಕುಳಿತಿದ್ದರು.ಆಗಲೇ ಹೋಟೇಲಿನೊಳಗೆ ಜನರ ದಂಡು ಬಂದಿತ್ತು.ವಿಷ್ಣು ಎಲ್ಲರಿಗೂ ಕೈ ಬೀಸುತ್ತಿದ್ದರು.ಕೆಲವರು ಅವರ ಜೊತೆ ಮಾತನಾಡುತ್ತಿದ್ದರು.ಮತ್ತೂ ಕೆಲವರು ಅವರನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು.ವಿಷ್ಣು ಆ ಪ್ರೀತಿಯನ್ನೆಲ್ಲಾ ಆಪ್ತವಾಗಿ ಸಹಿಸಿಕೊಳ್ಳುತ್ತಿದ್ದರು.

ವಿಷ್ಣು ಹೊರಟರು.ನಾವೆಲ್ಲಾ ನಮ್ಮ ನೋಟ್ಸ್ ಬುಕ್ಕುಗಳನ್ನೇ ಅಟೋಗ್ರಾಫ್ ಮಾಡಿಕೊಂಡಿದ್ದೆವು.ಎಲ್ಲರೂ ಒಟ್ಟಾಗಿ ಅವರತ್ತ ಚಾಚಿದೆವು.ವಿಷ್ಣು ಹೇಳಿದರು,ಮಕ್ಕಳೇ ನನ್ನ ಬಳಿ ಪೆನ್ ಇಲ್ಲ..ಆಹಾ ಕಾಂಪಿಟೀಶನ್ ಶುರುವಾಯಿತು ನೋಡಿ,ಪೆನ್ ಕೊಡೋದಕ್ಕೆ.ವಿಷ್ಣು ನನ್ನ ಕೈಯಿಂದ ಪೆನ್ನು ತೆಗೆದುಕೊಂಡರು.ಒಂದು ಬುಕ್ಕಿಗೆ ಮಾತ್ರಾ ಬರೆದರು.ನಾವು ಸಾರ್ ಸಾರ್ ಅಂತ ಕಿರುಚಾಡಿದೆವು.ವಿಷ್ಣು ಸೀದಾ ಕಾರ್‌ನತ್ತ ಹೋಗೇ ಬಿಟ್ಟರು.ನಮ್ಮಲ್ಲಿ ಕೆಲವರ ಕಿವಿ ಹಿಂಡಿದರು.ಆಮೇಲೆ ಜಾದೂ ಮಾಡಿದಂತೆ ಒಂದು ಪೆನ್ನನ್ನು ಕಾರಿನೊಳಗಿದ್ದ ಬ್ಯಾಗ್‌ನಿಂದ ತೆಗೆದು ಎತ್ತಿ ತೋರಿಸಿದರು.ಅದನ್ನು ನಮಗೆ ಕೊಡುವಂತೆ ಮಾಡಿದರು.ನಾವು ಮುಗಿಬಿದ್ದೆವು.ವಿಷ್ಣು ನಕ್ಕರು.ಆಮೇಲೆ ಪೆನ್ನನ್ನು ಅವರು ಅಟೋಗ್ರಾಫ್ ತೆಗೆದುಕೊಂಡ ಹುಡುಗನ ಕೈಗೇ ಕೊಟ್ಟರು.ಆ ಹುಡುಗನಿಗೆ ಡಬ್ಬಲ್ ಧಮಾಕಾ..ಅಟೋಗ್ರಾಫ್ ಮತ್ತು ಪೆನ್ನು.ಆತ ಇನ್ಯಾರೂ ಅಲ್ಲ,ಜೋಗಿ.ಅಂದಿನಿಂದ ಆತ ವಿಷ್ಣು ಅಭಿಮಾನಿಯಾದ..ನಮ್ಮೂರಲ್ಲಿ ವಿಷ್ಣುವರ್ಧನ್ ಅಭಿಮಾನಿ ಸಂಘವನ್ನೂ ಕಟ್ಟಿದ.ಅದಕ್ಕೆ ಸುಬ್ರಾಯ ಎಂಬಾತ ಕಾರ್ಯದರ್ಶಿಯಾಗಿದ್ದ.ನಮ್ಮೂರಲ್ಲಿ ಒಂದು ಟೆಂಟು ಟಾಕೀಸು ಇತ್ತು.ಅದರಲ್ಲಿ ವಿಷ್ಣು ಸಿನಿಮಾ ಬಂದಾಗಲೆಲ್ಲಾ ಜೋಗಿ ಅಲ್ಲಿ ಅಭಿಮಾನಿ ಸಂಘದ ದ್ಯೋತಕವನ್ನು ಪ್ರದಶಿಸುತ್ತಿದ್ದ.ಬನ್ಣದ ಕಾಗದ ಬಂಟಿಂಕ್ಸ್ ಬ್ಯಾನರು ಹಾರಿಸುತ್ತಿದ್ದ.ಅವನಿಗೆ ಸಾಥ್ ನೀಡಲು ಊರಿನ ಹುಡುಗರು ಮುಂದೆ ಬರುತ್ತಿದ್ದರು.ಅವರಿಗೆಲ್ಲಾ ವಿಷ್ಣು ಮತ್ತು ಜೋಗಿ ಭಯಂಕರ ಸ್ನೇಹಿತರು ಎಂಬ ಅಖಂಡ ನಂಬುಗೆ ಇತ್ತು.ಒಂದಲ್ಲ ಒಂದು ದಿನ ವಿಷ್ಣು ಸಿನೆಮಾದಲ್ಲಿ ನಟಿಸಲು ತಮಗೆ ಕರೆ ಬರಬಹುದು ಎಂದು ಹಲವರು ನಂಬಿದ್ದರು.ಈ ಮಧ್ಯೆ ಜೋಗಿ ವಿಷ್ಣು ಥರಾನೇ ನಡೆಯುತ್ತಿದ್ದ,ಅವರ ಥರಾನೇ ಮಾತನಾಡುತ್ತಿದ್ದ.ಯಾವುದೋ ಆಂಗಲ್ಲಿನಲ್ಲಿ ಆತ ನಮಗೆಲ್ಲಾ ಥೇಟ್ ವಿಷ್ಣು ಥರಾನೇ ಕಾಣಿಸುತ್ತಿದ್ದ.ಇದು ನಾವು ಕಾಲೇಜು ಸೇರೋ ತನಕ ಮುಂದುವರಿದಿತ್ತು.ಇತ್ತ ನನ್ನ ಪೆನ್ನು ಎಲ್ಲಿಗೆ ಹೋಯಿತು ಅಂತ ನನಗೆ ಇನ್ನೂ ಗೊತ್ತಿಲ್ಲ.ಬಹಳ ಕಾಲ ನಾನು ಅದು ವಿಷ್ಣುವರ್ಧನ್ ಜೊತೆಗೆ ಇದೆ ಎಂದೇ ನಂಬಿದ್ದೆ..
=======================
ವಿಷ್ಣುವರ್ಧನ್ ಅವರ ಕುರಿತು ಆಗಾಗ ಗೇಲಿ ತಮಾಶೆ ಪ್ರೀತಿ ಹೆಗ್ಗಳಿಕೆ ಮಾತನಾಡುತ್ತಿದ್ದವರು ವೈಎನ್‌ಕೆ.ಒಂದರ್ಥದಲ್ಲಿ ವೈಎನ್‌ಕೆ ವಿಷ್ಣು ಅವರ ಒಂದು ಕಾಲದ ಗಾಡ್‌ಫಾದರ್ ಕೂಡಾ.ವೈಎನ್‌ಕೆ ವಿಷ್ಣು ಅವರು ನಾಗರಹಾವು ಮೂಲಕ ಸಿನಿಮಾಪ್ರಪಂಚಕ್ಕೆ ಬಂದಿಳಿದಾಗ ಈ ಹುಡುಗ ರಾಜ್‌ಕುಮಾರ್‌ಗೆ ಸನಿಹದಲ್ಲಿ ಬಂದು ನಿಲ್ಲುತ್ತಾನೆ ನೋಡುತ್ತಿರಿ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದರಂತೆ.ವೈಎನ್‌ಕೆ ಭವಿಷ್ಯ ಕೊನೆಗೂ ಸುಳ್ಳಾಗಲಿಲ್ಲ.ವಿಷ್ಣು ಆಗಾಗ ವೈಎನ್‌ಕೆ ಅವರ ರಾಧಿಕಾ ಮನೆಗೆ ಬರುತ್ತಿದ್ದರು.ತೀರ್ಥರೂಪರಿಗೆ ನಮಸ್ಕಾರ ಆ ಸಂಜೆಗಳಲ್ಲಿ ತಪ್ದೇ ನಡೆಯುತ್ತಿತ್ತು.ಹಾಗೊಮ್ಮೆ ವೈಎನ್‌ಕೆ ಸಿಕ್ಕಾಗ ವಿಷ್ಣು ಸಾರ್,ಸಂಜೆ ಇಂಥಾ ಕಡೆ ಮೀಟ್ ಮಾಡೋಣ,ಫಾರಿನ್ ಸ್ಕಾಚ್ ತಂದಿದ್ದೇನೆ..ನೀವು ಬರಲೇಬೇಕು ಎಂದು ಆಮಂತ್ರಿಸುತ್ತಾರೆ.ವೈಎನ್‌ಕೆ ಕಕ್ಕಾಬಿಕ್ಕಿ.ಸ್ಕಾಚ್ ಅಂದ್ರೆ ಫಾರಿನ್ ಅಂತ ಗೊತ್ತಿಲ್ಲವೇನೋ ಅಂತ ವಿಷ್ಣುವನ್ನು ಅವರೇನು ತರಾಟೆಗೆ ತೆಗೆದುಕೊಳ್ಳಲು ಶುರು ಮಾಡಿದರೋ ವಿಷ್ಣು ಕ್ಷಣಾರ್ಧದಲ್ಲಿ ಎಸ್ಕೇಪ್.