20101222

ನಾಲ್ಕು ಸಾಲು
೧.
ಸೂರ್ಯ ಎಂದೂ ಗೆರೆ ದಾಟುವುದಿಲ್ಲ
ಪ್ರೇಮಿಗಳಿಗೆ ಸೂರ್ಯ ಮಾದರಿಯಾಗಲಿ
ಚಂದಿರನ ಪಯಣದಲ್ಲಿ ಅಮಾವಾಸ್ಯೆ
ಹುಣ್ಣಿಮೆ ಅವರಿಗೆ ದಾರಿ ತೋರಲಿ
ಇದು ಕವಿಯ ಹಾರೈಕೆಯಲ್ಲ
ಸ್ಪಂದಿಸದ ಪ್ರೀತಿಯಿಂದ ನೊಂದ ವಿರಹಿಯ ಅನುಭವ

೨.
ವಿರಹಿ ಕಟ್ಟಿದ ಕೋಟೆಯ ಮೇಲೆ
ಕಾವಲುಗಾರನಿಲ್ಲ
ಏಕೆಂದರೆ
ಆವನ ಸಾಮ್ರಾಜ್ಯ ಬರಿದೋ ಬರಿದು.
ವಿರಹಿಯ ಅರಮನೆಯೊಳಗೆ ಸಿಂಹಾಸನ ಕಾಣೆ
ಅವಳ ಅಂತರಂಗದಲ್ಲಿ ನಿತ್ಯವೂ ಪಟ್ಟಾಭಿಷೇಕ

೩.
ಪ್ರೇಮಿಯ ತೋಟದೊಳಗೆ
ಕೆಂಗುಲಾಬಿ.
ವಿರಹಿಯ ಉದ್ಯಾನದಲ್ಲಿ
ನಿತ್ಯಾರ್ಚನೆ

೪.
ಅವಳೆಂದಳು ಎಲ್ಲಾದರೂ
ಆಪ್ತತೆ ಹುಟ್ಟಿದರೆ ಎಂಬ ಭಯ ನನಗೆ
ಆಮೇಲೆ
ಅವನ ಕಣ್ಣೀರು
ಅವಳ ಮದುವೆಯ ಧಾರೆಯಾಯಿತು

20101220

ಆಪ್ತ ಲಹರಿ

ಮನಸೇ ನೀನೇಕೆ ಅಪರಿಚಿತವಾದೇ?
ಸಂಬಂಧವೇ ಸೀಮೆ ಕಟ್ಟಿಕೊಂಡ ಹಾಗೇ..
ಅದೃಶ್ಯವೇ ಏಕೆ ಅವಳನ್ನು ಕಾಣಿಸಿದೆ?
ಮೌನವೇ ಏಕೆ ಅವಳನ್ನು ನನಗೆ ಮಾತನಾಡಿಸಿದೆ
ಪ್ರೀತಿ ಕೆತ್ತಲಿಲ್ಲ ರೂಪವನ್ನು
ಸ್ಪಂದಿಸಲಿಲ್ಲ ಜೀವ ಈ ನಿರಾಕಾರವನ್ನು
ಕಳಚಿಬಿತ್ತು ಮುಂದಿನ ದೃಶ್ಯ
ಎಳೆಯಲಾಯಿತು ಬಣ್ಣದ ಪರದೆ
ನಾಟಕಕ್ಕೆ ಬರೆದ ಕತೆಯಲ್ಲಿ ಉದುರಿಹೋದವು ಪುಟಗಳು
ಆಹಾ ಕಳೆದುಕೊಳ್ಳುವುದರಲ್ಲೂ ಸುಖವಿದೆಯೇ?
ಆಪ್ತತೆಗೆ ಭಯದ ಬೇಲಿಯೇ?
ಕಾರಣಗಳ ತಡೆಗೋಡೆ ಮೇಲೆ ಬಾಟನಿಯ ಥಿಯರಿ
ಕಾಣದ ಜೀವದೊಳಗೆ ಯಾವುದೋ ಲಹರಿ
ಯಾಕೆ ಹೀಗೆ ಮಾಡಿದೆ ಗೆಳತಿ ನನ್ನ ಎದೆಯೊಳಗೆ
ಉರಿಯುವ ಮೊದಲೇ ಎಣ್ಣೆ ಮುಗಿದ ದೀಪಸಾಲಿನೊಳಗೆ
ಇದು ಜೀವಸಂಬಂಧ ನಿತ್ಯವೂ ಹೊಸತು
ನದಿಯಲ್ಲಿ ಕೊಚ್ಚಿಹೋಗುವ ಮರಕೊರಡು
ನಾಳೆಯೆಂಬುದು ಕಳೆದ ಜೀವ ನನ್ನದು
ಇಂದು ಮತ್ತೆ ಹುಟ್ಟಿದ ನವಭಾವ ನಿನ್ನದು
ಎಂದೂ ಸಿಗಲಾರೆ ನಿನಗೆ ನಾನು
ಏಕೆಂದರೆ ಒಡೆದ ಕೊಳಲು ನಾನು

20101218

ಆ ಬಾಲೆಯ ಹೆಸರು ಮರೆತೇ ಹೋಗಲಿ

ಆಗ ಭೂತ ಕೇಳಿತಂತೆ..ನರಬಲಿ ಬೇಕು ನರಬಲೀ..
ಹಾಗಂತ ಅಜ್ಜಿ ಕಥೆಯನ್ನು ಕ್ಲೈಮಾಕ್ಸ್‌ಗೆ ಎತ್ತಿಕೊಂಡು ಹೋಗುತ್ತಿದ್ದರೆ ನಾವೆಲ್ಲಾ ಆ ಚಿಮಿಣಿ ದೀಪದ ಸಣ್ಣ ಬೆಳಕಿನಲ್ಲಿ ನಮ್ಮನ್ನು ಆವರಿಸಿಕೊಂಡು ಸುತ್ತಲೂ ಹರಡಿದ್ದ ಕತ್ತಲೆಯಿಂದ ತಪ್ಪಿಸಿಕೊಳ್ಳುತ್ತಾ ಅಜ್ಜಿಯ ಸೆರಗಿನೊಳಗೆ ಭದ್ರವಾಗುತ್ತಿದ್ದೆವು.
ಆ ಮಳೆಗಾಲದ ರಭಸಕ್ಕೆ ನಮಗೆ ಯಾವ ಕಥೆ ಹೇಳಿದರೂ ಅಜ್ಜಿಯ ಕಥೆಯಲ್ಲಿ ಒಂದಾದರೂ ರಾಕ್ಷಸ ಬಂದೇ ಬರುತ್ತಾನೆ,ಅವನು ನರಬಲಿ ಕೇಳಿಯೇ ಕೇಳುತ್ತಾನೆ.ಆದರೆ ಒಂದು ಮಾತ್ರಾ ಸತ್ಯ,ಅಜ್ಜಿ ಕೊನೆಗೂ ಯಾವನೋ ಹೀರೋವನ್ನು ಆ ಕಥೆಗೆ ತಂದು ತುರುಕಿ,ನರಬಲಿ ಕೇಳುವ ರಾಕ್ಷಸನನ್ನು ಕೊಂದೇ ಹಾಕುತ್ತಿದ್ದಳು.
ಪ್ರತೀ ಬಾರಿಯೂ ನರರಾಕ್ಷಸ ಅಮಾಯಕ ಕೆಲವರನ್ನು ಮಾತ್ರಾ ತಿಂದೇ ತಿನ್ನುತ್ತಿದ್ದ.ಆದರೆ ಕಥೆಯಲ್ಲಿ ಅವರಿಗೆ ಬಲಿಯಾಗುವುದು ಮಾತ್ರಾ ಬಿಟ್ಟರೆ ಬೇರೇನೂ ಪಾತ್ರಗಳಿಲ್ಲದ ಕಾರಣ ನಮ್ಮ ಮಟ್ಟಿಗೆ ಆ ಬಲಿದಾನ ಎಫೆಕ್ಟ್ ಆಗುತ್ತಿರಲೂ ಇಲ್ಲ.ಯಾವಾಗ ಕಥೆಯ ಪಾತ್ರಗಳ ಮೇಲೆ ನರರಾಕ್ಷಸ ಕಣ್ಣು ಹಾಕಿದನೋ ನಮಗೆ ಭಯ ಶುರುವಾಗುತ್ತಿತ್ತು,ಆಗಲೇ ಆ ಪಾತ್ರಗಳು ನಾವೇ ಆಗುತ್ತಿರುವುದರಿಂದ ಈ ನರರಾಕ್ಷಸ ನರಬಲಿ ಕೇಳುತ್ತಾ ನಮ್ಮ ಬಳಿಯೇ ಬಂದ ಹಾಗಾಗುತ್ತಿತ್ತು.ಕಥೆಯ ಕೊನೆಯಲ್ಲಿ ನರಬಲಿ ಕೇಳಿದ ರಾಕ್ಷಸ ಸತ್ತೇ ಹೋಗುತ್ತಾನೆ ಎಂದು ಪ್ರತೀ ಬಾರಿಯೂ ನಮಗೆ ಗ್ಯಾರಂಟಿ ಇರುತ್ತಿರಲಿಲ್ಲ.ಆದರೆ ನಾವು ಅಜ್ಜಿಯ ಸೆರಗಿನೊಳಗೆ ನಿದ್ದೆಗೆ ಹೋಗುತ್ತಿದ್ದಂತೆ ಅಜ್ಜಿ ನರರಾಕ್ಷಸನನ್ನು ಸಾಯಿಸಿ ನಮ್ಮನ್ನು ಎಲ್ಲಾ ಭೀತಿಗಳಿಂದ ಮುಕ್ತಮಾಡಿ ಸಕ್ಕರೆಯ ನಿದ್ದೆಗೆ ಅಟ್ಟುತ್ತಿದ್ದಳು.
ಇದು ನಿತ್ಯ ಕಥೆ.
ಆಮೇಲೆ ನಾವು ಶಾಲೆಗೆ ಹೋಗಲು ಆರಂಭಿಸಿದರೆ ಮತ್ತೆ ನರಬಲಿ.!
ನಮ್ಮೂರಲ್ಲಿ ನೇತ್ರಾವತಿ ನದಿಗೆ ಸೇತುವೆ ಕಟ್ಟುತ್ತಿದ್ದರು.ಸೇತುವೆ ದೊಡ್ಡದು.ಹಲವು ವರ್ಷಗಳಿಂದ ಕಾಮಗಾರಿ ನಡೆಯುತ್ತಿತ್ತು,ಸೇತುವೆ ಕೆಲಸ ಪೂರ್ಣವಾಗುವ ಹೊತ್ತಿಗೆ ಅದಕ್ಕೆ ನರಬಲಿ ಕೊಡುತ್ತಾರೆ ಎಂಬ ವ್ಯಾಪಕ ಸುದ್ದಿ ಹರಡಿತು.ಶಾಲೆಯ ಮಕ್ಕಳೇ ನರಬಲಿಗೆ ಬೇಕಂತೆ ಎಂದು ಯಾರು ಗಾಬು ಹಬ್ಬಿಸಿದರೋ ಏನೋ ನಮ್ಮ ಎಲಿಮೆಂಟರಿ ಶಾಲೆಯಲ್ಲಿ ಅರ್ಧಕ್ಕರ್ಧ ಮಕ್ಕಳು ಆಬ್ಸೆಂಟ್.ನಮ್ಮ ಸಂಕಪ್ಪಾ ಗದ್ದಪ್ಪಾ ಮೇಸ್ತರರಿಗೆ ಸಂಕಟ ಹುಟ್ಟಿಕೊಂಡಿತು.ಇದ್ದಕ್ಕಿದ್ದಂತೆ ಶಾಲೆಗೆ ಮಕ್ಕಳು ಬಂಕ್ ಮಾಡುತ್ತಿರುವುದರಿಂದ ತತ್ತರಿಸಿದ ಅವರು ಒಂದೊಂದೇ ಮನೆಗಳಿಗೆ ಹೋಗಿ ವಿಚಾರಿಸುತ್ತಾ ನರಬಲಿಯ ಅವತರಣಿಕೆಯನ್ನು ಕೇಳಿ ಕಂಗಾಲಾದರು.
ಬುದ್ಧಿವಂತರ ಜಿಲ್ಲೆಯಂತೆ ಬುದ್ಧಿವಂತರದ್ದು..ಹೀಗಾ ನಂಬೋದು ಎಂದು ಛೀಮಾರಿ ಹಾಕಿದರು.ಶಾಲೆಯ ಕ್ಯಾಂಪಸ್ಸಿನಲ್ಲಿ ಹೆತ್ತವರ ಮೀಟಿಂಗು ಕರೆದು ನರಬಲಿ ಕೊಡುತ್ತಾರೆ ಎಂಬ ಅಪಪ್ರಚಾರವನ್ನು ಹತ್ತಿಕ್ಕಲು ಮುಂದಾದರು.
ಆಗ ಒಬ್ಬ ಹಿರಿಯರು ಎದ್ದು ನಿಂತು,ಮಾಸ್ಟ್ರೇ..ನಿಮಗೆ ಗೊತ್ತಿಲ್ಲ.ನಾವು ಏನೇ ಹೇಳಿದರೂ ಅವರು ಸೇತುವೆಗೆ ನರಬಲಿ ಕೊಟ್ಟೇ ಕೊಡುತ್ತಾರೆ.ನರಬಲಿಯಾಗದೇ,ಮನುಷ್ಯರ ಬಿಂದು ರಕ್ತ ಬೀಳದೇ ಸೇತುವೆ ನದಿಯ ಮೇಲೆ ನಿಲ್ಲಲು ಸಾಧ್ಯವೇ ಇಲ್ಲ ಎಂದುಬಿಟ್ಟರು.ಸಂಕಪ್ಪಾ ಗದ್ದಪ್ಪಾ ಮೇಸ್ಟ್ರಿಗೆ ಪೇಚಾಟವಿಟ್ಟುಕೊಂಡಿತು.ಅವರು ಸೀದಾ ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು.ಹೀಗೀಗೆ,ಅಪಪ್ರಚಾರ ಮಾಡುತ್ತಿದ್ದಾರೆ,ಇದರಿಂದಾಗಿ ಮಕ್ಕಳ ಕಲಿಯುವ ಹಕ್ಕುಗಳು ದಮನವಾಗುತ್ತವೆ ಎಂದು ಪೊಲೀಸರಿಗೂ ಅದರ ಕಾಪಿಯನ್ನು ಶಿಕ್ಷಣ ಇಲಾಖೆಗೂ ಹಾಕಿದರು.
ಆ ವರ್ಷ ಅದೊಂದು ದಿನ ಆ ಸೇತುವೆ ಉದ್ಘಾಟನೆಯಾಯಿತು.ಯಾವುದೋ ಮಂತ್ರಿಮಹಾಶಯ ಬಂದು ಸೇತುವೆಯ ಮೇಲೆ ಕಟ್ಟಿದ್ದ ಟೇಪು ಕತ್ತರಿಸಿದ.ಆ ಉದ್ಘಾಟನೆಯ ಹಿಂದಿನ ರಾತ್ರಿ ಪೇಟೆಯಲ್ಲಿ ಜನಸಂಚಾರವೇ ಇರಲಿಲ್ಲ.ಕಾರಣ ಆ ರಾತ್ರಿಯೇ ನರಬಲಿ ಆಗುತ್ತದೆ ಎಂದು ಎಲ್ಲೆಡೆ ಸುದ್ದಿ ಸುಡುಬಯಲ ಗಾಳಿಯಂತೆ ಹಬ್ಬಿತ್ತು.
ಯಾವಾಗ ಸೇತುವೆ ಉದ್ಘಾಟನೆ ಆಯಿತೋ ಮರುದಿನವೇ ಶಾಲೆಗೆ ಮಕ್ಕಳ ಫುಲ್ ಅಟೆಂಡೆನ್ಸ್.ಸಂಕಪ್ಪಾ ಗದ್ದಪ್ಪಾ ಮೇಸ್ಟ್ರು ಇನ್ನು ಈ ಊರಲ್ಲಿ ಇರಲಾರೆ ಎಂದು ಹೇಳಿ ಆ ವರ್ಷವೇ ಯಾರ್‍ಯಾರದ್ದೋ ಕೈ ಕಾಲು ಹಿಡಿದು ವರ್ಗಾವಣೆ ಮಾಡಿಸಿಕೊಂಡು ಹೋದರು.
ನಾವು ಹೈಸ್ಕೂಲು ಏರುತ್ತಿದ್ದಂತೆ ಯಾರೋ ಕಾರಲ್ಲಿ ಬಂದವರು ಶಾಲೆಗೆ ಹೋಗುತ್ತಿದ್ದ ಮಗುವೊಂದನ್ನು ಎತ್ತಿ ಹಾಕಿಕೊಂಡರಂತೆ ಎಂಬ ಸುದ್ದಿ ಹಬ್ಬಿತು.ಪುಟ್ಟ ಮಗು ಬೀದಿಯಲ್ಲಿ ಹೋಗುತ್ತಿದ್ದಾಗ ನಾಲ್ಕೈದು ಜನರಿದ್ದ ಕಾರು ಬಂದು ನಿಂತಿತಂತೆ.ಕಾರಲ್ಲಿದ್ದವರು ಮಗುವಿಗೆ ಚಾಕಲೇಟ್ ಕೊಟ್ಟರಂತೆ.ಮಗು ಬಾಯಿಗೆ ಹಾಕುತ್ತಿದ್ದಂತೆ ಅದು ಸ್ಮೃತಿ ತಪ್ಪಿ ಬಿದ್ದಿತಂತೆ.ಆ ಕ್ಷಣಕ್ಕೆ ಆ ಮಂದಿ ಮಗುವನ್ನು ಎತ್ತ ಕಾರಲ್ಲಿ ಹಾಕಿಕೊಂಡು ಹೋದರಂತೆ.ಅದೇ ಮಗುವನ್ನು ಕಾಸರಗೋಡಿನಲ್ಲಿ ಕಟ್ಟಲಾಗುತ್ತಿದ್ದ ಏಳು ಮಾಳಿಗೆ ಕಟ್ಟಡಕ್ಕೆ ಬಿಂದು ಕೊಟ್ಟರಂತೆ..
ಶಿವಶಿವಾ..ಎಂದು ಎಲ್ಲರೂ ಬಾಯಿಬಾಯಿ ಬಡಿದುಕೊಂಡರು.
ಆಮೇಲೆ ಮತ್ತೆ ಶಾಲೆಗಳಿಗೆ ಮಕ್ಕಳು ಬರೋದನ್ನೇ ನಿಲ್ಲಿಸಿದರು.ಹೆತ್ತವರೇ ಖುದ್ದಾಗಿ ಶಾಲೆಗೆ ಬಂದು ನಮ್ಮ ಮಕ್ಕಳಿಗೆ ರಕ್ಷಣೆ ಇಲ್ಲದ ಕಾರಣ ನವು ಅವುಗಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿಯೇ ಹೋದರು.
ನಾವು ದಸರಾ ರಜೆಯಲ್ಲಿ ಕಾಸರಗೋಡಿನ ನಮ್ಮ ಅಕ್ಕನ ಮನೆಗೆ ಹೋಗಿದ್ದಾಗ ಅಕ್ಕ ಒಂದು ಕಥೆ ಹೇಳಿದಳು.ಅದು ಅವರ ಊರಿನಲ್ಲಿ ಆದ ಘಟನೆ. ಅದೇ ಕಥೆ.ಶಾಲೆಗೆ ಹೋಗುತ್ತಿದ್ದ ಮಗು,ಕಾರು,ಚಾಕಲೇಟು,ನರಬಲಿ..ಲೊಕೇಶನ್ ಮಾತ್ರಾ ಛೇಂಜು ಅಷ್ಟೇ.
ಅಜ್ಜಿ ಹೇಳುತ್ತಿದ್ದ ನರರಾಕ್ಷಸ ಇದ್ದಾನೆ ಎಂದು ನನಗೆ ಈ ಶುಕ್ರವಾರದಿಂದ ಖಚಿತವಾಗಿದೆ.ಹಾಗೇ ನಮ್ಮೂರಿನ ನೇತ್ರಾವತಿ ಸೇತುವೆಗೆ ಆ ದಿನ ಖಂಡಿತಾ ನರಬಲಿ ಕೊಟ್ಟಿದ್ದಾರೆ ಎಂದು ನಂಬುತ್ತೇನೆ.ಕಾಸರಗೋಡಿನ ಏಳು ಮಾಳಿಗೆ ಕಟ್ಟಡಕ್ಕೆ ಆ ಪುಟ್ಟ ಮಗುವನ್ನು ಬಿಂದು ಕೊಟ್ಟಿದ್ದಾರೆ ಎಂದೂ ನನಗೆ ನಂಬಿಕೆ ಬಂದಿದೆ.
ಯೆಯ್ಯಾಡಿಯ ಆ ಬಾಲೆ ಎಲ್ಲವನ್ನೂ ಸತ್ಯ ಮಾಡಿದ್ದಾಳೆ.
ದೇವರೇ ಇನ್ನೂ ಈ ಲೋಕದಲ್ಲಿ ಈ ನರರಾಕ್ಷಸರನ್ನು ಉಳಿಸಿಕೊಳ್ಳುವಷ್ಟು ಕೆಟ್ಟವನಾ ನೀನು?
ನನಗೆ ಆ ಬಾಲೆಯ ಹೆಸರು ಬೇಗಬೇಗನೇ ಮರೆತುಹೋಗಲಿ.

20101213

ಯುನಿವರ್ಸಿಟಿ ಹುಡುಗಿಯ ಮನಸ್ಸು

ಯುನಿವರ್ಸಿಟಿ ಹುಡುಗಿ ಎಂದರೆ
ಅದು ವಯಸ್ಸು.
ನಿತ್ಯವೂ ಮುಂಜಾನೆಯಿಂದಲೇ ಏನೋ ಮನಸ್ಸು.
ಮೊನ್ನೆಯಷ್ಟೇ ಮುಗಿದ ಬ್ಯಾಚುಲರ್ರು ಕ್ಲಾಸು
ಮೈ ತುಂಬಾ ನಿಗಿನಿಗಿ
ಕೆಂಡದಂಥ ಕನಸು
ನಾಳೆ ಹುಟ್ಟುವ ಸೂರ್ಯನಿಗೆ
ಅವಳು ಇಂದೇ ಶರಣು
ಆ ಸೂರ್ಯನ ಬೆಳಕಲ್ಲಿ ಕಾಣುವನು ಅವನು
ದೇಹದಂಡನೆಗೆ ಬೇಕು ಯಾವುದೋ ಅಪ್ಪುಗೆ
ಮನಸ್ಸು ತುಂಬಾ ಆಗಷ್ಟೇ ಮುಗಿಸಿದ ಆನ್‌ಲೈನ್‌ಗಳ ಜಡಿಮಳೆ.
ಯುನಿವರ್ಸಿಟಿ ಹುಡುಗಿಗೆ ಬಾಟನಿ ಇಷ್ಟ.
ಮನಸ್ಸಿನ ಲ್ಯಾಬೋರೇಟರಿಯಲ್ಲಿ ಕೆಮೆಸ್ಟ್ರಿ ಸದಾ ಹೃಷ್ಟಪುಷ್ಟ.
ಅರ್ಥವಾಗುವುದಿಲ್ಲ ಇಲ್ಲಿ ಯಾರು ಸರಿ
ಮಾಡಿದ್ದೆಲ್ಲಾ ತಪ್ಪಾದರೆ ಏನು ಗತಿ?
ಯುನಿವರ್ಸಿಟಿ ಹುಡುಗಿಗೆ ಹುಡುಕುತ್ತಿದ್ದಾರೆ ಹುಡುಗನನ್ನು
ಆ ಕಾರಣಕ್ಕೇ ಸಾಕು ಈ ಚಾಟು ಆನ್ಲೈನು.
ಮನಸು ಕಟ್ಟಬೇಕು ಅವನಿಗಾಗಿ
ಇವನಿನ್ನು ಅಪರಿಚಿತ ಸಾಕು ಬರುವ ನಾಳೆಗಾಗಿ
ಹೊಸ ಹಾದಿಯಲ್ಲಿ ಕಾಣಿಸಿದ್ದು ಸ್ವಾತಿಯ ಮಳೆ
ಚಿಪ್ಪೊಳಗೆ ಬೀಳಲಿಲ್ಲ ಅದರ ಹನಿ ಮುತ್ತಾಗುವುದು ಹೇಗೆ?

20101203

ಝೀರೋ ಟ್ರಿಪ್-೭

ದಾಟುವುದು ಎಂದರೆ ಏನು?
ಹಾಗೆಂದು ಕೇಳುತ್ತಿದ್ದಾರೆ ತುಂಬಾ ಜನ.
ಝೀರೋ ಟ್ರಿಪ್ ಆರನೇ ಕಂತು ಓದಿಗೇ ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ. ಹಲವಾರು ಮಂದಿ ಈ ಬಗ್ಗೆ ಇ-ಮೇಲ್ ಮೂಲಕ ನನ್ನ ಬಳಿ ಬಂದಿದ್ದಾರೆ.ಅವರಲ್ಲಿ ಬಹುತೇಕ ಮಂದಿ ಸಾಗರದಾಚೆಯ ದೇಶಗಳ ಜನ.ಆದರೆ ಅವರ ಬೇರು ಇಲ್ಲೇ ಇದೆ.ಅದೂ ಅವರ ಊರಲ್ಲಿ, ಆ ಊರು ಕಟ್ಟಿದ ಸಂಸ್ಕೃತಿಯಲ್ಲಿ.
ಮಂಗಳೂರಿನ ಹುಡುಗಿಯೊಬ್ಬಳು ಚೀನಾದ ಹುಡುಗನನನು ಮದುವೆ ಮಾಡಿಕೊಂಡಿದ್ದಾಳೆ.ಅವಳ ವಯಸ್ಸು ಮೂವತ್ತು ದಾಟಿದಂತಿದೆ.ಆಕೆ ಚೀನಾದ ಹುಡುಗನನ್ನು ವರಿಸಿ ಆರು ವರ್ಷಗಳಾದವಂತೆ.ಬ್ರಾಹ್ಮಣ ಹುಡುಗಿ.ಯಾರನ್ನೂ ಕೇಳಲಿಲ್ಲ.ನನಗೆ ಇಷ್ಟವಾಗಿದ್ದ,ಮದುವೆಯಾದೆ ಅಷ್ಟೇ ಎಂದಳು.ನನಗೆ ಇದು ಸಂಬಂಧಿಸಿದ ವಿಚಾರವೇ ಅಲ್ಲ.ಆದರೆ ಆ ಹುಡುಗಿ ಬಿಡಲ್ಲ.ಅವಳು ಹೇಳುತ್ತಾಳೆ,ಅವಳ ಅಪ್ಪನ ಕಥಾನಕ.
ನೀವೇ ಓದುವಿರಂತೆ.ಅವಳ ಮೇಲ್‌ನ್ನು ಕನ್ನಡಕ್ಕೆ ನನ್ನದೇ ಧಾಟಿಯಲ್ಲಿ ರೂಪಾಂತರಗೊಳಿಸಿದ್ದೇನೆ.ಅವಳು ಬ್ಲಾಗ್ ಪ್ರಿಯೆ.ಕನ್ನಡ ಬ್ಲಾಗ್ ಓದುವುದು ಅವಳ ಬಿಡುವಿನ ಕಾರ್ಯಕ್ರಮವಂತೆ.ನಾನು ಕನ್ನಡ ಓದುಗಳು.ಬರೆಯೋಳಲ್ಲ ಎಂದು ಹೇಳಿದ್ದಾಳೆ.
ಈಗ ಅವಳೇನೆಂದಳು ಎಂಬುದನ್ನು ನೀವೇ ಓದಿ-
"...ನನಗೆ ಅಪ್ಪ ಮುಂಜಾವದಲ್ಲಿ ಎದ್ದು ಹಾಸಿಗೆ ಮೇಲೆ ಕುಳಿತು ಧ್ಯಾನ ಮಾಡುತ್ತಿದ್ದುದು ನೆನಪಿದೆ.
ಏನು ಮಾಡುತ್ತಿದ್ದೀಯಾ ಅಪ್ಪಾ ಎಂದು ನಾನೆಂದೂ ಕೇಳಿರಲಿಲ್ಲ.ಅಪ್ಪನ ಇಷ್ಟ ಅದು ಎಂದು ಸುಮ್ಮನಿದ್ದೆ.
ಆಮೇಲೆ ಅಪ್ಪ ಒಂದು ಮುಂಜಾನೆಯಿಂದ ಎದ್ದು ಸೀದಾ ಸ್ನಾನಕ್ಕೆ ಹೋಗಲಾರಂಭಿಸಿದ.ನಡುಗುವ ಛಳಿಯಲ್ಲೂ ತಣ್ಣೀರೇ ಬೇಕು ಎಂದು ಸ್ನಾನ ಮಾಡುತ್ತಿದ್ದ.ಇದಾದ ಕೆಲವೇ ವಾರಗಳಲ್ಲಿ ಅಪ್ಪ ದೇವರ ಕೋಣೆಯಲ್ಲಿ ಕಾಣಿಸಲಾರಂಭಿಸಿದ.ವಾರಗಟ್ಟಲೆ ತಪಸ್ಸಿಗೆ ಕೂರುತ್ತಿದ್ದ.ಯಾವ ಯಾವದೋ ಹಬ್ಬದ ದಿನಗಳಲ್ಲಿ ಪರ್ವಕಾಲ ಎಂದು ಮೌನಕ್ಕೆ ಹೋಗುತ್ತಿದ್ದ,ಹಾಗೇ ಮೌನಿಯಾಗಿ ಕಣ್ಣುಮುಚ್ಚಿ ಕುಳಿತ ಎಂದರೆ ಮೂರು ದಿನ ಊಹೂಂ..
ನಾನೊಮ್ಮೆ ಮಾತ್ರಾ ಅಪ್ಪನಲ್ಲೇ ಕೇಳಿದ್ದೆ,ಇದರಿಂದ ಏನು ಸಿಗುತ್ತದೆ?
ಅಪ್ಪ ಹೇಳಿದ್ದ,ನಾನು ದಾಟಬೇಕು ಅಷ್ಟೇ..
ಆಮೇಲೆ ನಾನು ಏನೂ ಕೇಳಲಿಲ್ಲ.ಏಕೆಂದರೆ ನನಗೆ ಏನೂ ಅರ್ಥವಾಗಲಿಲ್ಲ.ನನ್ನ ಅಣ್ಣ ಹೇಳಿದ್ದ,ಅಪ್ಪನಿಗೆ ಹುಚ್ಚು ಶುರುವಾದ ಹಾಗಿದೆ ಎಂದು.ನಾವಿಬ್ಬರೂ ಹೊಟ್ಟೆ ಬಿರಿಯೇ ನಕ್ಕಿದ್ದೆವು.
ಇದೆಲ್ಲಾ ಹಲವು ವರ್ಷಗಳ ಹಿಂದಿನ ಮಾತು.ನನಗೆ ಗೊತ್ತಿದ್ದ ಹಾಗೇ ಅಪ್ಪ ಯಾರಿಗೂ ಮೋಸ ಮಾಡಿರಲಿಲ್ಲ.ತೀರಾ ಪ್ರಾಮಾಣಿಕ.ಸುಳ್ಳು ಹೇಳಿದ್ದು ಕೂಡಾ ನನಗೆ ಗೊತ್ತಿಲ್ಲ.ಎಲ್ಲರನ್ನೂ ಗೌರವಿಸಿಯೇ ಮಾತನಾಡುತ್ತಿದ್ದ.ತುಂಬಾ ಸುಮಧುರ ನಡವಳಿಕೆ.ನನಗೆ ಅನೇಕ ಬಾರಿ ಮುಜುಗರ ಎನಿಸುವಷ್ಟು ಸರಳಜೀವಿಯಾಗಿದ್ದ ನನ್ನಪ್ಪ.ಧ್ಯಾನದ ಖಯಾಲಿ ಬಿಟ್ಟರೆ ಅವನಿಗೆ ಗೊತ್ತಿದ್ದುದು ಕೇವಲ ದುಡಿಮೆ.ಅದೆಷ್ಟು ಭಯಂಕರವಾಗಿ ದುಡಿಯುತ್ತಿದ್ದ ಎಂದರೆ ಯಾಕೆ ದುಡಿಯಬೇಕು ಇನ್ನೂ ಎಂದು ಕೇಳಿದ್ದೆ,ಅದಕ್ಕೆ ಇದು ನನ್ನ ದೇಹದ ಕರ್ತವ್ಯ ಎಂದಷ್ಟೇ ಹೇಳಿದ್ದ.
ನಾನು ಊರು ಬಿಟ್ಟೆ.ದೇಶವೂ ಬಿಟ್ಟೆ.ಅಪ್ಪ ಒಂದು ದಿನ ಖಿನ್ನತೆಗೆ ಬಿದ್ದ ಎಂಬ ಸುದ್ದಿ ಸಿಕ್ಕಿತು.ಓಡೋಡಿ ಮನೆಗೆ ಬಂದಿದ್ದೆ.ಕುರ್ಚಿಯಲ್ಲಿ ಜೊಲ್ಲು ಸುರಿಸುತ್ತಾ ಕುಳಿತಿದ್ದ ಅಪ್ಪನನ್ನು ಕಂಡು ಭಯವಾಯಿತು.ನಾನು ಏನೇನೋ ಮಾತನಾಡಿಸಿದೆ,ಸಮಾಧಾನಿಸಿದೆ.ಕೌನ್ಸಿಲಿಂಗ್ ಮಾಡಿಸಿದೆ.ಕಾರಲ್ಲಿ ಕೂರಿಸಿ ಊರೂರು ಅಲೆದಾಡಿಸಿದೆ.ಅಪ್ಪ ಬದಲಾಗಲಿಲ್ಲ.
ನಾನು ವಾಪಾಸ್ಸು ಕೆಲಸಕ್ಕೆ ಹೋದೆ.ದೇಶ ಬಿಟ್ಟು ಬಂದೆ.ಮೂರನೇ ತಿಂಗಳಿಗೆ ಆ ಒಂದು ರಾತ್ರಿ ಅಣ್ಣನ ಕರೆ ಬಂತು,ಅಪ್ಪ ನೇಣು ಹಾಕಿಕೊಂಡ!
ನನ್ನ ಅಪ್ಪ ದಾಟಿದನೇ?"
ಹೀಗಂತ ಆ ಮಂಗಳೂರಿನ ಹುಡುಗಿ ಕೇಳಿದ್ದಾಳೆ.
ನಾನು ಏನು ಹೇಳಬೇಕು?

20101202

ಝೀರೋ ಟ್ರಿಪ್-೬

ಮನಸ್ಸು ಮತ್ತು ದೇಹವನ್ನು ತ್ಯಜಿಸಿ ಸಾಗುವ ಆ ಘಳಿಗೆ ಅಪೂರ್ವ.ಇದು ಸಂಭವಿಸಲೇಬೇಕು ಎಂದೇನಿಲ್ಲ.ಒಮ್ಮೊಮ್ಮೆ ಮನಸ್ಸು ಮರಳಿ ಬಂದೀತು.ಕೆಲವೊಮ್ಮೆ ದೇಹದ ಮಮಕಾರ ಉಂಟಾದೀತು.
ಆದರೆ ಎರಡನ್ನೂ ದಾಟುವುದು ಅಗತ್ಯ.
ಹಾಗೊಮ್ಮೆ ದಾಟಲಾಗದೇ ಇದ್ದರೆ?
ಝೀರೋಟ್ರಿಪ್ ವಿಫಲವಾಯಿತು ಎಂದರ್ಥ.
ಪ್ರತೀ ಬಾರಿ ರಾಕೆಟ್ ಉಡಾವಣೆ ಯಶಸ್ಸು ಆಗುವುದೇ?ಅನೇಕ ಬಾರಿ ಅದೂ ವಿಫಲವಾಗಿ ಎಲ್ಲಿ ಮುಟ್ಟಬೇಕೋ ಅಲ್ಲಿಗೆ ತಲುಪದೇ ಎಲ್ಲಿಗೋ ಹೋಗಿ ಬಿದ್ದು ಬೂದಿಯಾಗುವುದಿಲ್ಲವೇ?
ಹಾಗೇ,ಝೀರೋಟ್ರಿಪ್‌ನಲ್ಲಿ ಕೂಡಾ ಉಡಾವಣೆ ವಿಫಲವಾಗಬಹುದು.ರಾಕೆಟ್ ಲಾಂಚ್‌ಗೂ ಝೀರೋಟ್ರಿಪ್‌ಗೂ ಒಂದು ಅಸಾಮಾನ್ಯ ವ್ಯತ್ಯಾಸವಿದೆ.
ರಾಕೆಟ್ ಉಡ್ಡಯನಕ್ಕೆ ಒಂದು ಗುರಿ ಅಂತ ಇರುತ್ತದೆ.ಆದರೆ ಝೀರೋಟ್ರಿಪ್‌ಗೆ ಗುರಿಯೇ ಇಲ್ಲ.ಅದು ಇಂಥ ಕಡೆಗೆ ಅಂತ ತೀರ್ಮಾನಿಸಿದ ನಡೆಯಲ್ಲ.ಅದೊಂದು ಪಯಣ.ಯಾವುದೋ ಹಾದಿ,ಎಲ್ಲಿಗೋ ಪಯಣ.ಇಲ್ಲಿಂದ ಎಂಬುದಿಲ್ಲ ಇಂಥ ಕಡೆಗೆ ನಿಗದಿಯಿಲ್ಲ.ಎಲ್ಲಿಂದಲೂ ಹೊರಡಬಹುದು ಎಲ್ಲಿಗೂ ತಲುಪಬಹುದು.
ಇದು ವಿಚಿತ್ರ ಎಂದು ನೀವಂದರೆ ನಾನು ಏನೂ ಮಾಡುವ ಹಾಗಿಲ್ಲ.
ಧ್ಯಾನದಲ್ಲಿ ಹಾಗಿಲ್ಲ.ಅಲ್ಲಿ ಕನಿಷ್ಠ ಭಗವಂತನಾದರೂ ಇದ್ದಾನೆ.ಅವನೇ ಅಂತಿಮ ಗುರಿ.ಅವನನ್ನು ತಲುಪುವುದು ಧ್ಯಾನದ ಅಲಿಮೇಟಂ.
ಆದರೆ ಝೀರೋಟ್ರಿಪ್‌ನಲ್ಲಿ ಭಗವಂತ ಕೂಡಾ ಆಬ್ಸೆಂಟ್ ಎಂದಳು ಸ್ಯಾಂಡಿ.
ಇಲ್ಲಿ ದೇವರು ಕೂಡಾ ಇರುವುದಿಲ್ಲ.ದೇವರೆಂಬ ನಂಬಿಕೆ ಯಾವಾಗ ಬೇಕು ಎಂದರೆ ಯಾವುದೋ ಒಂದು ರೀಚ್‌ನ ಉದ್ದೇಶ ಇದ್ದರೆ ಮಾತ್ರಾ.ಆದರೆ ಝೀರೋಟ್ರಿಪ್‌ನಲ್ಲಿ ಎಲ್ಲಾ ಮುಕ್ತ ಮುಕ್ತ.ಇದು ನಿರಾಕಾರಣ ಮತ್ತು ನಿರಾಕರಣ.
ಕಾರಣವೇ ಇಲ್ಲದ ಮತ್ತು ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿ.ಮನಸ್ಸೇ ಇಲ್ಲ,ದೇಹವೂ ಕಳಚಿಕೊಂಡಿದೆ ಎಂದರೆ ಮತ್ತೆಲ್ಲಿದೆ ಕಾರ್ಯಕಾರಣ?
ಏನ್ ಸ್ವಾಮೀ?ಥೇಟ್ ಸಾವಿನ ಬಗ್ಗೆ ಮಾತನಾಡುತ್ತಿದ್ದೀರಿ.. ಎಂದು ಬ್ಲಾಗ್ ಓದಿದ ಲಾಸ್‌ಏಂಜಲೀಸ್‌ನ ಗೆಳೆಯ ವಿಜ್ಞಾನಿ ರಾಜರಾಮ ಭಟ್ಟ ಮೇಲ್ ಹಾಕಿದ್ದಾರೆ.
ನಾನು ರಾಜಾರಾಮ್‌ಗೆ ಉತ್ತರಿಸಿಲ್ಲ.ಸ್ಯಾಂಡಿಯ ಮೇಲ್ ಐಡಿ ಕಳುಹಿಸಿದ್ದೇನೆ.ನನಗೆ ಇದು ಕೇವಲ ಅಚ್ಚರಿ ಮತ್ತು ವಿಚಿತ್ರ ತರ್ಕಗಳನ್ನು ಮಾತ್ರಾ ಹುಟ್ಟಿಸುತ್ತಿದೆ.ನಾನು ಈ ತನಕ ಏನು ಕೇಳಿದ್ದೇನೋ,ಏನನ್ನೂ ಬಯಸಿದ್ದೇನೋ ಅವುಗಳೆಲ್ಲಾ ಝೀರೋ ಟ್ರಿಪ್‌ನ ಈ ಕಥಾನಕವನ್ನು ತಿರುವುತ್ತಾ ತಿರುವುತ್ತಾ ಹೋದಂತೆ ಕಂಪನಗಳನ್ನು ಮೂಡಿಸಿದೆ.
ಸ್ಯಾಂಡಿ ಹೇಳುತ್ತಾಳೆ,ದಾಟಬೇಕು ಎಂಬುದು ಎಲ್ಲರಿಗೂ ಇದೆ.
ಆದರೆ ಪ್ರಶ್ನೆ ಎಂದರೆ ಯಾವಾಗ ದಾಟುವುದು ಮತ್ತು ಎಲ್ಲಿ ದಾಟುವುದು ಎಂಬುದು ಮಾತ್ರಾ.
ಅರ್ಥವಾಯಿತು ಎಂದೆ.
ಬಾಲ್ಯದಲ್ಲಿ ನೇತ್ರಾವತಿ ನದಿ ಎದುರು ನಿಂತು ಅಜ್ಜನ ಮನೆಗೆ ಹೋಗಲು ಕಾಯುತ್ತಿದ್ದ ಚಿತ್ರ ನೆನಪಾಗುತ್ತದೆ.ತುಂಬಿ ಹರಿಯುವ ಹೊಳೆ.ದಾಟಬೇಕೆಂಬ ಹಂಬಲ.ಆದರೆ ದಾಟಲಾರೆವು.ಒಂದೊಮ್ಮೆ ದಾಟಿದರೂ ಕೊಚ್ಚಿಹೋಗುತ್ತೇವೆ.ಅದೇ ನೇತ್ರಾವತಿ.ಅದೇ ಹರಿವು.ಸಾವಿರ ಸಾವಿರ ವರ್ಷಗಳಿಂದ ಆಹ್ವಾನಿಸುತ್ತಿದೆ.ಬಾ ಎನ್ನ ದಾಟು..
ನೇತ್ರಾವತಿ ಅದೇ ಅದಾಗಿ ರುದ್ರವಲ್ಲ.ಅದರಲ್ಲಿ ಸಂಭವಿಸುತ್ತಿರುವ ಹರಿವು ಮಾತ್ರಾ ಸವಾಲು.
ಈ ಸವಾಲಿಗೆ ಒಡ್ಡಿಕೊಳ್ಳಲಾರೆವು.ಏಕೆಂದರೆ ಕೊಚ್ಚಿಹೋಗುವ ಆತಂಕ.ಭಯ.ಹೆದರಿಕೆ.
ಹಾಗೆಂದರೆ ಏನು?
ಇಲ್ಲವಾಗುವ ಅಂಜಿಕೆ.
ಏಕೆ ಉಳಿಯಬೇಕು ಎಂದರೆ ನಾವು ಹೊರಟದ್ದು ನೇತ್ರಾವತಿಯ ಆ ದಂಡೆಯಲ್ಲಿರುವ ನಮ್ಮ ಅಜ್ಜನ ಮನೆಗೆ.ಅಲ್ಲಿ ಅಜ್ಜಿ ಈ ಧಾರಾಕಾರ ಮಳೆಗೆ ಸಿದ್ಧ ಮಾಡಿದ ಶ್ಯಾವಿಗೆ ಪಾಯಸ ಮತ್ತು ಗೆಣಸಲೆ ತಿನ್ನಲಿಕ್ಕೆ.
ದಾಟಲಾದ ನಮ್ಮನ್ನು ದಾಟಿಸಲು ಅಗೋ ಅಲ್ಲಿ ಬರುತ್ತಿರುವುದು ದೋಣಿ.ಕುಂಜೀರ ಅಂತ ಅದರ ನಾವಿಕ.ಅವನ ಸುಕ್ಕುಗಟ್ಟಿದ ಮೈ,ಎಂದೂ ಒಗೆಯದ ವಸ್ತ್ರ,ಕಮಟು ವಾಸನೆ.ದೋಣಿಯೊಳಗೆ ಕೊಳೆತ ಮೀನಿನ ವಾಸನೆ..ಎಲ್ಲವೂ ಮರೆತು ಸಾಗುತ್ತಿದ್ದೇವೆ,ಆ ದಡದಾಚೆಗೆ..
ಯಾವುದೇ ಕ್ಷಣಕ್ಕೆ ಈ ದೋಣಿ ಸುಳಿಗೆ ಸಿಕ್ಕಿ ಸೀದುಹೋಗಬಹುದು.ದೊಡ್ಡ ನೀರಿನ ಓಘ ಇಡೀ ದೋಣಿಯನ್ನು ಮೂರಾಬಟ್ಟೆ ಮಾಡಬಹುದು.ಆದರೆ ಅದು ಸಂಭವಿಸುವುದೇ ಇಲ್ಲ ಎಂದು ನಾವು ನಂಬಿದ್ದೇವೆ.ಅಥವಾ ಅಂಥಹುದನ್ನು ಮರೆತಿದ್ದೇವೆ.ಏಕೆಂದರೆ ನಮಗೆ ಅಜ್ಜಿ ಮಾಡಿಟ್ಟ ಶ್ಯಾವಿಗೆ ಪಾಯಸ ಮತ್ತು ಗೆಣಸಲೆಯ ನೆನಪು.ಅಥವಾ ಅಜ್ಜಿಯ ಪ್ರೀತಿ ಎಂಬ ಸಾನ್ನಿಧ್ಯದ ತವಕ.
ದಾಟುವ ಮತ್ತು ದಾಟಿಸುವ ಅಥವಾ ದಾಟಿದ್ದೇವೆ ಎಂದುಕೊಳ್ಳುವ ನಮಗೆ ಕುಂಜೀರನ ದೋಣಿ ಬಾರದೇ ಇದ್ದರೆ ಏನಾಗಬೇಕು?
ಝೀರೋಟ್ರಿಪ್ ಇಲ್ಲಿಂದಲೇ ಆರಂಭವಾಗಲಿ ಎಂದುಕೊಳ್ಳುತ್ತೇನೆ..
ಸ್ಯಾಂಡಿ ಬಿಜಿ ಇರಬೇಕು ಇಂದೂ ಮೇಲ್ ಬಂದಿಲ್ಲ.

20101128

ಝೀರೋಟ್ರಿಪ್-೫

ಸ್ಯಾಂಡಿ ಕೇಳುತ್ತಿದ್ದಾಳೆ ನಿನಗಿದು ಸಾಧ್ಯವೇ?
ಮರೆತೇ ಬಿಟ್ಟಿದ್ದೆ.
ನನ್ನ ಬ್ಲಾಗ್ ಲಿಂಕ್ ಅವಳ ಬಳಿ ಇದೆ.ಅದಕ್ಕೆ ಅವಳು ಅದನ್ನು ಮೊನ್ನೆ ಶುಕ್ರವಾರ ನೋಡಿದಳಂತೆ.ಒಂದು ಇಂಗ್ಲಿಷ್ ಪದವೂ ಇಲ್ಲ.ಏನೂಂತ ಓದಲಿ ಎಂದು ಗುರ್ರ್ ಎಂದಳು.ಝೀರೋಟ್ರಿಪ್ ಬಗ್ಗೆ ಅಷ್ಟೂ ಕಳುಹಿಸಿದ್ದೆ.ನೀನು ಪಾಪಿ ನಾಲ್ಕು ಕಂತು ಮಾತ್ರಾ ಬರೆದ ಹಾಗಿದೆ.ನಿನಗೆ ಅದನ್ನು ಓದುವ ಆಸಕ್ತಿ ಇಲ್ಲ.ಬಹುಶಃ ನೀನು ಭಾರತೀಯ,ನೀನು ಬ್ರಾಹ್ಮಣ.ನಿನ್ನ ಬುದ್ಧಿಯೇ ಅದು.ಮೊದಲಾಗಿ ಸಿಕ್ಕಾಪಟ್ಟೆ ಆಸಕ್ತಿ ತೋರುತ್ತೀರಿ.ಆಮೇಲೆ ಇದೋ ನಮ್ಮ ವೇದಪುರಾಣಗಳಲ್ಲಿ ಬೇಕಾದಷ್ಟಿದೆ ಎಂದು ಹೇಳುತ್ತೀರಿ.ನನಗೆ ಬೇಕಿತ್ತಾ ಎಂದು ಖತಿ ಮಾಡಿದ್ದಾಳೆ.
ಅರೆ,ಈ ಹುಡುಗಿಗೆ ಈ ಬಾಹ್ಮಣ ಎಂಬುದು ಎಲ್ಲಿ ಸಿಕ್ತು ಎಂದು ಅಚ್ಚರಿಯಾಯಿತು.ಜಿ-ಟಾಕ್‌ಲ್ಲಿ ನೇರವಾಗಿ ಕೇಳಿದ್ದೂ ಆಯಿತು.ಅವಳಿದ್ದ ಆ ಹೋಟೇಲ್‌ನಲ್ಲಿ ಸುಳ್ಯದ ಬ್ರಾಹ್ಮಣನೊಬ್ಬ ಕೆಲಸಕ್ಕಿದ್ದಾನೆ.ಹಾಗೊಬ್ಬ ಇದ್ದ ನೋಡ್ರೀ ಅಂತ ಎಸ್.ಎಂ.ಕೃಷ್ಣ ಅವರ ಆಪ್ತಕಾರ್ಯದರ್ಶಿ ರಾಘವೇಂದ್ರ ಶಾಸ್ತ್ರಿ ಮರಳಿ ನಾವು ಭಾರತಕ್ಕೆ ವಿಮಾನದಲ್ಲಿ ಹಾರಿ ಬರುತ್ತಿದ್ದಾಗ ಹೇಳಿದ್ದರು.ಅವರನ್ನು ನೀವೂ ಭೇಟಿಯಾಗಬಹುದಿತ್ತು.ಆದರೆ ನಿಮಗೆ ಅವರನ್ನು ಪರಿಚಯಿಸಲು ಆಗಲಿಲ್ಲ ನೋಡಿ ಎಂದಿದ್ದರು.
ಸ್ಯಾಂಡಿಗೆ ಭಾರತ ಗೊತ್ತು.ಬ್ರಾಹ್ಮಣರೂ ಗೊತ್ತು ಎಂದಾಯಿತು.
ನಾನು ಬರೆದ ಬ್ಲಾಗ್‌ನ್ನು ಈ ಸುಳ್ಯದ ಬ್ರಾಹ್ಮಣ ವಟುಗೆ ಈ ಸ್ಯಾಂಡಿ ತೋರಿಸಿದ್ದಾಳೆ.ಆ ಕಳ್ಳಭಟ್ಟ ನಾನು ಏನು ಬರೆದಿದ್ದೇನೆ ಮತ್ತು ಎಷ್ಟು ಬರೆದಿದ್ದೇನೆ ಎಂಬುದನ್ನು ಆಕೆಗೆ ಸವಿಸ್ತಾರವಾಗಿ ಹೇಳಿದ್ದಾನೆ.ಇದು ನನ್ನ ಊಹೆ ಮಾತ್ರಾ.
ಏನೇ ಆಗಲಿ ಸ್ಯಾಂಡಿಯನ್ನು ಸಮಾಧಾನ ಮಾಡಿದ್ದೇನೆ.ಕೆಲಸದ ಒತ್ತಡ ಇತ್ತು.ಊರಲ್ಲಿ ಬೇಕಬಿಟ್ಟಿ ಮಳೆ.ತೋಟ ಎಕ್ಕುಟ್ಟಿ ಹೋಗಿದೆ.ಬೆಳೆ ಬಿದ್ದಿದೆ.ನಷ್ಟದಲ್ಲಿ ಒದ್ದಾಡುತ್ತಿದ್ದೇನೆ ಎಂದೆ.
ಇದೇ ಸಮಯ ಎಂದಳು.
ಯಾವುದಕ್ಕೆ ಎಂದೆ,
ಝೀರೋಟ್ರಿಪ್ ಗೆ ..
ಮತ್ತೆ ನಿನ್ನ ಕಿತಾಬಿನಲ್ಲಿ ಮನಸ್ಸು ಮುದ್ದಾಂ ಪ್ರಸನ್ನ ವಾಗಿರಬೇಕು ಎಂಬ ಶರತ್ತಿದೆ ಎಂದೆ.
ಇಂಥ ಸಂಕಟದ ಸಮಯದಲ್ಲೇ ನಿನ್ನ ಮನಸ್ಸನ್ನು ಏನೂ ಆಗಿಲ್ಲ ಎಂಬ ಹಾಗೇ ಮಾಡಿಟ್ಟುಕೊಳ್ಳಬೇಕು ಬಾಯ್ ಎಂದಳು.
ಹಾಗೆಂದರೆ?
ಏನೇನೋ ಆಗಿಹೋಗುತ್ತದೆ..ಏನೂ ಆಗಿಲ್ಲ ಎಂಬಂತಿರಬೇಕು.
ತೀರಾ ಹತ್ತಿರದವರು ಕಂಡೂ ಕಾಣದಂತೆ ಮಾಡಿದಾಗ ನೋವಾಗುತ್ತದೆ.ಎಲ್ಲಿ ತಪ್ಪಿತು ಎಂದು ಮನಸ್ಸು ಹಿಂಬಾಲಿಸುತ್ತದೆ.ಆ ರಾತ್ರಿ ನಿದ್ದೆ ಕೂಡಾ ಪದೇ ಪದೇ ಕಟ್.ಮರುದಿನ ಎದ್ದು ಕುಳಿತರೆ ಅಯ್ಯೋ ಇನ್ನೂ ಒಂದಿನ ಬಂತೇ ಎನ್ನುತ್ತದೆ.ಈ ರೀತಿ ಬಗೆಬಗೆಯ ಕಾರಣಕ್ಕೆ ರಾತ್ರಿ ಸಂಕಟಪಡುತ್ತೇವೆ.
ಬ್ಯಾಂಕು ಸಾಲ,ಪಾತ್ರರ ಅಗಲಿಕೆ,ಅವಮಾನ,ಅಸಹಕಾರ,ನೋವು,ಒತ್ತಡ,ಟೆನ್ಶನ್ ಏನೇನೋ ಕಾರಣಕ್ಕೆ ನಮ್ಮ ಮನಸ್ಸು ಸುಲಭದಲ್ಲೇ ಸಿಕ್ಕಿಬೀಳುತ್ತದೆ.
ಹಾಗಾಗದಂತೆ ಮಾಡಲಾಗದೇ?
ಸುಲಭ.ನಿನ್ನ ಮನಸ್ಸನ್ನು ನೀನೇ ಆಳಬೇಕು.ಮನಸ್ಸು ನಿನ್ನನ್ನಲ್ಲ.
ಅದು ಹೇಗೆ?
ಹೇಗಂದರೆ ನೀನು ಬೇರೆ,ನಿನ್ನ ಮನಸ್ಸು ಬೇರೆ.ಅದು ಪರಕೀಯ.ಎಲ್ಲಿಂದಲೋ ಬಂದು ನಿನ್ನ ಜೊತೆ ಸೇರಿಕೊಂಡದ್ದು ಅದು.ಅದು ನೀನಲ್ಲ.ನೀನು ಅದಲ್ಲ.ಏಕೆಂದರೆ ನೀನು ಎಂಬ ನೀನು ನೀನೇ ಅಲ್ಲವಲ್ಲಾ?
ನೀನು ನೀನೇ ಅಲ್ಲದ ಮೇಲೆ ಮತ್ತೇನು?
ನಿನಗೆ ಸಂಬಂಧಿಸಿದ್ದು ಇಲ್ಲಿ ಯಾವುದೂ ಆಗುತ್ತಿಲ್ಲ.
ನಿನ್ನ ಗೆಳತಿ ಅಂತ ಇದ್ದವಳು ನಿನ್ನವಳಲ್ಲ.ಅವಳು ನಿನ್ನ ಮನಸ್ಸಿನ ಜೊತೆಗೆ ಬಂದವಳು.ಅವಳನ್ನು ಒಳಗಿಟ್ಟುಕೊಳ್ಳಬೇಡ.
ಇದು ತೀರಾ ಪಿರ್ಕಿ ಎಂದು ನನಗೆ ಅನಿಸಿ ಭಯವಾಯಿತು.ನಮ್ಮ ಕಡೆ ಹೇಳುತ್ತಾರಲ್ಲ,ತಲೆಬುಡ ಇಲ್ಲದ್ದು ಎಂದು,ಅದೇ ಇದು ಎಂದನಿಸಿತು.
ಆದರೆ ಸ್ಯಾಂಡಿಯ ಝೀರೋಟ್ರಿಪ್ ಹಾದಿ ತುಂಬಾ ಸುಂದರವಾಗಿದೆ.
ಯಾವಾಗ ನನಗೆ ಹಾಗನಿಸಿತೋ,ಮುಂದಿನ ಪುಟದಲ್ಲಿ ಅದೇ ಇದೆ.
ಬೇಸರ ಬಂತೇ?ಇದು ಆಗೋಹೋಗೋ ಸಂಗತಿಯಲ್ಲ ಎಂದನಿಸಿತೇ?ಹಾಗೇ ಆನಿಸುವುದೇ ಸರಿ.ಏಕೆಂದರೆ ನೀನು ಈ ತನಕ ಸಾಗಿ ಬಂದ ಹಾದಿಯೇ ಅದು.ನಾನು ನನ್ನ ದೇಹ,ನನ್ನ ಮನಸ್ಸು..ಮನಸ್ಸು ಮತ್ತು ದೇಹಗಳನ್ನು ಕಟ್ಟಿಕೊಂಡು,ಅವುಗಳೆಂದಂತೆ ಸಾಗುತ್ತಾ ಬಂದ ನೀನು ಈಗ ಅವುಗಳೆಂಬುದೇ ಇಲ್ಲ ಎಂದರೆ ಹೇಗೆ ನಂಬುವೆ?ನಿನ್ನ ಈ ಸುಂದರ ದೇಹದಲ್ಲಿ ಅದೆಷ್ಟು ಸುಖಾನುಭವಗಳು ಬಂದು ಬೀಳುತ್ತಿವೆ.ನಿನ್ನ ಆ ಮನಸ್ಸೆಂಬ ಮಯಾಜಾಲದಲ್ಲಿ ಅದೆಂಥಾ ಸುಖ ವೈವಿಧ್ಯಗಳು ಸುಳಿದಾಡುತ್ತಿವೆ.
ಅವಳ ಮೇಲು,ಅವನ ಮೆಸೇಜು,ಆಕೆಯ ಕುಡಿನೋಟ,ಆತನ ಸತ್ಕಾರ,ಆ ಪರಿಯ ಬಹುಮಾನ ಎಲ್ಲಾ ಸಿಕ್ಕಿ ಸಂಭ್ರಮಿಸುವ ನಿನಗೆ ಅದೆಲ್ಲಾ ದಾಟಿ ಹೋಗೋಣ ಎಂದರೆ ನಂಬಲಾಗುವುದೇ?ಪಥ್ಯ ಎನಿಸುವುದೇ?
ಕಷ್ಟವೂ ಇಲ್ಲ,ಸುಖವೂ ಇಲ್ಲದ ಪಯಣ ಇದು..ಇದರಲ್ಲಿ ಸ್ಫರ್ಧಿಸಬೇಕಾದರೆ ತುಂಬಾ ಕೆಲಸವಿದೆ.
ಯಾಕೋ ಶರೀಫರ ಮಾತು ನೆನಪಾಗುತ್ತಿದೆ,
ಇದ್ದು ಇಲ್ಲೇ ಭವಕೇ ಬೀಳೋ..

20101126

ಹೀಗಾಯ್ತು ಪ್ರೇಮ ಸಮಾಧಿ
ಅವನಿಗೆ ಗೊತ್ತಿಲ್ಲ ಹೊಸ ಹಾಡು.
ಅವಳ ಬಳಿ ಇರುವುದು ಹಳೇ ಜಾಡು.
ಅವನೆಂದ ಯಾವ ರಾಗ?
ಅವಳೆಂದಳು ಬರೆಯೋ ಬೇಗ..
ಹಾಗೇ ಅವನು ಕವಿಯಾದ
ಪದಗಳ ಮನೆಗೆ ಹೋದ
ಒಂದೊಂದು ಪದಗಳನ್ನು ಪರಿಪರಿಯಾಗಿ ಕಾಡಿದ
ಅವುಗಳ ಬಳಿ ಅವಳನ್ನು ತೋಡಿದ
ಪದಗಳೆಂದವು
ಹುಡುಗಾ,ನಾವು ಕಾಲಾನುಕಾಲದಲ್ಲಿ ಹೀಗೆ ಇದ್ದೇವೆ
ಅದೇ ರೂಪ.ಅದೇ ಜೀವ,ಅದೇ ಧ್ವನಿ, ಅದೇ ನಿನಾದ
ಕವಿಗಳೆಲ್ಲಾ ಬಂದು ನೋಡುತ್ತಾರೆ,
ಮುಟ್ಟಿ ತಡವುತ್ತಾರೆ,
ಎತ್ತಿ ಮುದ್ದಾಡುತ್ತಾರೆ
ಹಿತವಾಗಿ ಅಪ್ಪಿಕೊಂಡು ನರಳುತ್ತಾರೆ
ಆಮೇಲೆ ಅವರ ಜೊತೆ ನಮ್ಮ ಸರಸ
ಸುಖ ಮಿಲನ,ಶೃತಿ ಮೀರಿದ ಮೈಥುನ
ನೀನೂ ಅದೇ ಹುಡುಗಾ..
ಹುಡುಗನಿಗೆ ರೋಮಾಂಚನ
ಪದಗಳ ಮನೆಯಲ್ಲಿ ಭೂರಿಬೋಜನ
ಒಂದೊಂದು ಪದಗಳೂ ಅವನ ಮನದನ್ನೆಯರು,
ಕೃಷ್ಣ ಮತ್ತು ಹದಿನಾರು ಸಾವಿರ ನಾರಿಯರು.
ಹುಡುಗ ಪದಗಳ ಮನೆಯಿಂದ ಹೊರಟ
ಜಿಗಿದು ಕುಪ್ಪಳಿಸಿ ಕುಣಿದು ಚಿಮ್ಮಿದ.
ಆಮೇಲೆ ಅವನ ಹುಡುಗಿಗೆ ಕಾದ
ಮೈಯೆಲ್ಲಾ ಪದಗಳ ಚುಂಬನದಿಂದ ನಳನಳಿಸಿದ.
ಅವಳು ಬರಲಿಲ್ಲ.
ಅವನು ಬರೆಯಲಿಲ್ಲ.

20101120

ಬಾನು ಪ್ರೀತಿಸಿದ ಚಿಗುರು ಭೂಮಿಗೆ
ಎತ್ತರದ ಮರ.
ಕಣ್ಣುಹಾಯಿಸಿದಷ್ಟೂ ದೂರ.
ಅದರ ಮೇಲೊಂದು ಚಿಗುರು
ಅದು ತುಂಬಾ ಹಸುರು.
ಚಿಗುರಿಗೆ ಹತ್ತಿರ ಬಾನು
ಭೂಮಿ ತುಂಬಾ ದೂರ
ಚಿಗುರು ನೋಡಿದ ಬಾನಿಗೆ ಅದೊಂದು ದಿನ ಪ್ರೇಮ ಉಕ್ಕಿತು.
ಏಯ್..ನೀನ್ಯಾಕೋ ನಂಗಿಷ್ಟ ಕಣೇ ಎಂದಿತು.
ಚಿಗುರು ನಳನಳಿಸಿತು.ನಾಚಿ ಹಂದಾಡಿತು.
ಬಾನೆಂದಿತು ಎದ್ದು ಬಾ ನನ್ನ ಜೊತೆ,ಬೀಸುವ ಗಾಳಿಯ ಕಳುಹುವೆ ನಿನ್ನ ಕರೆದು ತರಲು
ಚಿಗುರು ಹೇಳಿತು,
ಹೇಗೆ ಬರಲಿ ಅಲ್ಲಿಗೆ,
ನನ್ನ ಹಾದಿ ಭೂಮಿಗೆ.
ನಿನ್ನ ಮುದ್ದಾಡುವೆ,ನಿನ್ನ ಕಾಪಾಡುವೆ,ನಿನ್ನ ಜೊತೆಗೂಡಿ ರಮಿಸುವೆ,ನನ್ನ ಜೊತೆಗೆ ನಿನ್ನ ಇಡುವೆ
ಎಂದು ಬಾನು ಚಿಗುರಿಗೆ ಕರೆಯಿತು.
ಚಿಗುರು ಕೇಳಿತು
ಬಾನೇ ಹೇಳು
ನಿನಗೆಲ್ಲಿದೆ ಮೈ?
ನಿನಗೆಲ್ಲಿದೆ ಆ ವಿಶಾಲ ಎದೆ?
ನಿನಗೆಲ್ಲಿದೆ ಆ ಕೋಮಲ ವಾಸನೆ ?
ನೀನು ಎಷ್ಟಿರುವೆ,ಎಲ್ಲಿರುವೆ ಹೇಳು?
ನಿನಗೆಲ್ಲಿದೆ ಅಂತ್ಯ?
ನಿನಗೆಲ್ಲಿದೆ ಆರಂಭ?
ಇಷ್ಟಕ್ಕೂ ನೀನೇ ಇಲ್ಲ..
ಭೂಮಿಯಲ್ಲಿದೆ ಈ ಎಲ್ಲಾ..
ಬಾನೇ ಕ್ಷಮಿಸು,ನಿನ್ನವಳಾಗಲು ನಾನು ಒಲ್ಲೆ
ನನ್ನಂಥ ಪುಟ್ಟ ಚಿಗುರು ಆಗಲಾರಳು ನಿನ್ನ ನಲ್ಲೆ
ಬಿಟ್ಟುಬಿಡು ನನ್ನ
ಬೀಸಿ ಕಳುಹಬೇಡ ಆ ಗಾಳಿಯನ್ನ
ಬಾನೇ ನೀನು ನೀಲಿ,ನಾನೋ ಹಸಿರು
ನಿನ್ನ ನಿಲುಕಿಗೆ ತಾರೆಗಳ ಕೇಳು
ಚುಕ್ಕಿಚಿತ್ತಾರಗಳ ಜೊತೆ ಬಾಳು
ಬಾನು ದುಃಖಿಸಿತು,
ಎಲೆ ಚಿಗುರೇ
ಚಂದಿರನ ದೂಡುವೆ,ನಕ್ಷತ್ರಗಳ ಉದುರಿಸುವೆ,ಸೂರ್ಯನನ್ನೇ ದಬ್ಬುವೆ,ಒಡೆದು ಚೂರಾಗಿ ಬೀಳುವೆ..
ನನಗೆ ನೀನು ಮಾತ್ರಾ ಬೇಕು
ಮಿಂಚಾಗಿ ಝಳಪುವೆ,ಗುಡುಗಾಗಿ ಕೂಗುವೆ,
ಮಳೆಯಾಗಿ ಅತ್ತುಬಿಡುವೆ,
ನನ್ನವಳಾಗು..
ಚಿಗುರು ಎಲೆಯಾಯಿತು,ಎಲೆಯ ಸೆರೆಯಲ್ಲಿ ಮೊಗ್ಗಾಯಿತು,ಮೊಗ್ಗೊಡೆದು ಹೂವರಳಿತು,ಹೂವಲ್ಲಿ ಹೀಚು
ಆಮೇಲೆ ಕಾಯಿ,ಹಣ್ಣು ತುಂಬಿ ಮಾಗಿತು.
ಆಮೇಲೆ ಆ ಒಂದಾನೊಂದು ಕಾಲದ ಚಿಗುರನ್ನು ಭೂಮಿ ಮೈದಡವಿ ತನ್ನೊಳಗೆ ಹೊದ್ದುಕೊಂಡಿತು.

20101117

ನಾಲ್ಕು ಸಾಲುಜೀವನದ ಗುಟ್ಟೇನು
ಎಂದು
ಭೂಮಿಯನ್ನು ಕೇಳಿದೆ
ನನ್ನ ವಾಸನೆ
ಎಂದಿತು.

ಜೀವನದ ಹುಡುಕಾಟವೇನು
ಎಂದು
ಗಾಳಿಯನ್ನು ಕೇಳಿದೆ
ನನ್ನ ಸ್ಪರ್ಶ
ಎಂದಿತು.

ಜೀವನದ ಸಂಭ್ರಮವೇನು
ಎಂದು
ನದಿಯನ್ನು ಕೇಳಿದೆ
ನನ್ನ ನಿನಾದವೆಂದಿತು

ಜೀವನದ ಕೊನೆಯೇನು
ಎಂದು
ಬೆಂಕಿಯನ್ನು ಕೇಳಿದೆ
ನನಗೆ ಗೊತ್ತಿಲ್ಲ
ಆದರೆ
ನೀನು ಭೂಮಿ,ಗಾಳಿ ಮತ್ತು ನೀರಿನಿಂದ ದಾಟಿ ಬರಬೇಕು
ಎಂದಿತು
ನಾನೀಗ ಅದೃಶ್ಯದಲ್ಲಿ ಲೀನ

20101106

ಝೀರೋ ಟ್ರಿಪ್-೪

ಸುಂದರ ಮನಸ್ಸು. ಸಂತುಷ್ಟ ಲಹರಿ.ಎಲ್ಲವನ್ನೂ ಕಟ್ಟಿಕೊಂಡು ಹೊರಟು ನಿಲ್ಲಬೇಕು.
ಈ ಕ್ಷಣಕ್ಕೆ ನೀವು ಯಾರೂ ಅಲ್ಲ.
ನೀವೊಬ್ಬರೇ ನೀವು.
ಹಾಗೂ ಅದು ನೀವೇ ಅಲ್ಲ.
ಒಳಗೆ ಇಳಿಯಿರಿ.ನಿಮ್ಮ ಬಗ್ಗೆ ನೀವೇ ಕೇಳಿಕೊಳ್ಳಿ.
ಯಾರು ನಾನು?
ನಾನೇಕೆ ಇಲ್ಲಿ ನಿಂತಿದ್ದೇನೆ.ಇದೇಕೆ ನಾನು ಹೀಗೆ ನಡೆಯುತ್ತಿದ್ದೇನೆ?
ನಿಮ್ಮ ಮೈ ಕೈ ನೋಡಿಕೊಳ್ಳಿ.ಇದು ಏನಿದು?
ನಿಮ್ಮ ಇಡೀ ದೇಹವನ್ನೊಮ್ಮೆ ಅವಲೋಕಿಸಿ.
ಇದೇನು ಶರೀರವಾ?ಇದು ನನ್ನದಾ?ನನ್ನದು ಎನ್ನಲು ನಾನು ಯಾರು?ನಾನು ಯಾರೆಂದು ಕೇಳಲು ನಾನು ಯಾರು?
ಯಾರು ನಾನು?
ಮತ್ತೆ ಮತ್ತೆ ಕೇಳುತ್ತಾ ಕೇಳುತ್ತಾ ನಿಮ್ಮನ್ನು ನೀವೇ ಕಳೆದುಕೊಳ್ಳಿರಿ.
ನಾನೇಕೆ ಹೀಗೆ ಕೇಳಿಕೊಳ್ಳುತ್ತಿದ್ದೇನೆ?
ಏನಾಗಿದೆ ನನಗೆ?
ನೀವು ನಿನ್ನೆ ಮಾಡಿದ ಲಂಚ್ ಅಥವಾ ಹೀರಿದ ಒಂದು ಕಪ್ಪು ಕಾಫಿ ಬಗ್ಗೆ ಕೇಳಿಕೊಳ್ಳಿ.
ನಾನೇಕೆ ಅದನ್ನು ತೆಗೆದುಕೊಂಡೆ?ಅದನ್ನೇ ಏಕೆ ತೆಗೆದುಕೊಂಡೆ?
ನನಗೆ ಹಸಿವೆ ಆಗಿತ್ತು.
ಹೌದಾ?ಹಸಿವು ಎಂದರೆ ಏನು?ಅದು ಏಕೆ ಆಗಬೇಕು?ಹಾಗೇ ಆದ ಅನುಭವ ನಿನ್ನದಲ್ಲ ತಾನೇ?ಅದು ನಿನ್ನ ಶರೀರದ್ದು.ಆ ಶರೀರವನ್ನೇ ಬಿಟ್ಟಾಕು.
ಆಗಲಿ ಒಂದೊಮ್ಮೆ ಹಸಿವೆಯೇ ಆತು,ಅದರಿಂದ ಶರೀರ ಬೀಳುತ್ತದೆ,ಬೀಳಬಾರದು ಎಂದೇ ನಿನಗಿದ್ದರೆ ನೀನೇಕೆ ಲಂಚ್ ಮಾಡಬೇಕು?
ಹುಲ್ಲು ತಿನ್ನಬಹುದಿತ್ತು ಅಲ್ಲವೇ?
ನಿನ್ನ ಶರೀರ ಏಕೆ ಹುಲ್ಲನ್ನು ತಿನ್ನಲ್ಲ?
ಗಟಾರದ ನೀರೂ ಕುಡಿಯಬಹುದಿತ್ತಲ್ಲ.
ಮಿನರಲ್ ವಾಟರ್‌ನ್ನೇ ಏಕೆ ಕುಡಿದೆ?
ಶರೀರಕ್ಕೆ ರೋಗ ಬರಬಹುದು ಎಂಬ ಹೆದರಿಕೆಯೇ?
ರೋಗ ಬರಲಿ ಏನಂತೆ?ಜ್ವರದಿಂದ ದೇಹ ಕುದಿಯಲಿ.ಅದು ಹಿಡಿತ ತಪ್ಪಿ ಅಡ್ಡಾದಿಡ್ಡಿ ಬೀಳಲಿ.ಏನಂತೆ.
ಶರೀರ ಇದು ಏಕೆ ಇದೆ?
ಇದನ್ನು ನಾನು ಧರಿಸಿದ್ದೇನೆಯೇ?
ಹೌದೂ ಎಂದಾದರೆ ನಾನು ಎಂಬ ಈ ಧರಿಸಿದ ಪಾತ್ರ ಅದೆಲ್ಲಿದೆ?
ಅದು ಇದೇ ಶರೀರದಲ್ಲಿ ಇರುವುದೇ ಆದರೆ ಅದಕ್ಕೆ ಆಕೃತಿಯಾದರೂ ಏಕೆ ಬೇಕು?
ಹಾಗೇ ಆಕೃತಿಯನ್ನು ಮಾಡಿಕೊಳ್ಳಲು ಆ ತಂತು ಏನದು?
ಅದೊಂದು ಬೆತ್ತಲೆಯಾದ ಸರ್ಗವೇ?ಅಥವಾ ಯಾವುದೋ ಆಸರೆ ಬಯಸುವ ಹಂದಾಟವೇ?
ಅದಕ್ಕೆ ಏಕೆ ಬೇಕು ಶರೀರವೆಂಬ ಆಸರೆ?
ಅದು ಹರಿಯುವ ನದಿಯನ್ನು ಆವರಿಸಿಕೊಳ್ಳಬಹುದಿತ್ತಲ್ಲಾ?ಅಥವಾ ಕಲ್ಲುಬಂಡೆಯನ್ನು ಅಪ್ಪಿಕೊಳ್ಳಬಹುದಿತ್ತಲ್ಲಾ?ಗಾಳಿಯಾಗಬಹುದಿತ್ತು,ಬೆಂಕಿಯಾಗಬಹುದಿತ್ತು.
ಇದೇ ಈ ಖಚಿತ ಶರೀರವೇ ಏಕೆ ಆಯಿತು?
ಇಷ್ಟಕ್ಕೂ ಶರೀರವನ್ನು ನಿರಾಕರಿಸಿದರೆ ನಾನು ಎಂಬ ಆ ನಾನು ಎಲ್ಲಿ ಉಳಿಯುತ್ತೇನೆ?
ಬಿಂದುವಿನಲ್ಲಿ?ಶೂನ್ಯದಲ್ಲಿ?
ಶೂನ್ಯದಲ್ಲಿ ಉಳಿಯುದೇ ಆದರೆ ಈ ಶರೀರವೆಂಬ ಸ್ಥಿತಿ ಏಕಾದರೂ ಬೇಕು?
ಇದನ್ನು ನಿರಾಕರಿಸಿ ಉಳಿಯಬಹುದಲ್ಲವೇ?
ಹಾಗೇ ಇರುವುದಾದರೆ ಈ ಶರೀರ ಸೇರಿ ಪಡೆಯುತ್ತಿರುವುದೆಲ್ಲಾ ಇರುವುದೇ?
ಸಶರೀರ- ಅಶರೀರ..
ಹೋ..
ಇದು ಈ ಎರಡರ ತಾಕಲಾಟ.
ಸಶರೀರಿಯಾಗಿ ಅಶರೀರವಾಗುವುದು.
ಝೀರೋ ಟ್ರಿಪ್ ಗೆ ಇದೇ ಮುನ್ನುಡಿ ಎಂದಳು ಸ್ಯಾಂಡಿ.ಶರೀರ ಧರ್ಮವಿಲ್ಲದೇ ಇರುವುದು ಎಂದು ಆಕೆ ಹೇಳಿದಾಗ ನಾನು ಎಲ್ಲಿದ್ದೇನೆ ಎಂದು ಗೊತ್ತಾಗಲಿಲ್ಲ.
ಝೀರೋ ಟ್ರಿಪ್‌ಗೆ ಹೊರಟ ಹಿಂದಿನ ರಾತ್ರಿ ನಿನ್ನ ಸಂಗಾತಿ ಜೊತೆ ಮಾಡಿದ ಮೈಥುನದ ಅನುಭವವನ್ನು ಅಶರೀರಿಯಾಗಿ ಝೀರೋ ಟ್ರಿಪ್‌ನಲ್ಲೂ ಅನುಭವಿಸಲು ಸಾಧ್ಯ ಎಂಬುದು ಸ್ಯಾಂಡಿಯ ಹೊಸ ಉನ್ಮಾದದ ಹೇಳಿಕೆ.
ಸ್ಯಾಂಡಿ ಎರಡನೇ ಪುಟ ಬಿಡಿಸಿದರೆ ಕೇಳುತ್ತಿದ್ದಾಳೆ,
ನೀನು ಹುಟ್ಟುವ ಮೊದಲು ಎಲ್ಲಿದ್ದೆ?
ಅಮ್ಮನ ಹೊಟ್ಟೆಯಲ್ಲಿ ಎಂದರೆ ನಗುತ್ತಾಳೆ.
ಅದಕ್ಕೂ ಮೊದಲು?
ಅಂದರೆ ನಿನ್ನ ಅಪ್ಪ ಅಮ್ಮ ಮಿಲನವಾಗುವುದಕ್ಕೂ ಮೊದಲು?
ಎಲ್ಲವೂ ಅಚ್ಚರಿ,ಎಲ್ಲವೂ ಅಯೋಮಯ.
ಇದು ತುಂಬಾ ದೊಡ್ಡ ಪುಸ್ತಕ.

20101102

ನನ್ನ ತಿಥಿ

ಯಾರೆಂದರು ನಾನು ನಾನು ಸಾಯುತ್ತೇನೆ ಎಂದು?
ಧಿಕ್ಕಾರವಿರಲಿ ಅವರಿಗೆ.
ನಾನು ಸಾಯುವುದಿಲ್ಲ
ಸಾವು ನನಗೆ ಬರುವುದೂ ಇಲ್ಲ.
ಕುಳಿತಲ್ಲೇ ತೂಕಡಿಸಿ ಒರಗಿದಲ್ಲಿಗೇ ಉಸಿರು ನಿಂತು
ಆಆಆ..ಎಂದಾಕಳಿಸಿದಲ್ಲಿಗೇ ದೇಹ ಬಿದ್ದು ನಿಶ್ಚಲ..
ಅವರಿವರು ಬಂದು ಮನೆಮಂದಿಗೆ ಸಮಾಧಾನ ಹೇಳಿ
ತಲೆಮೇಲೆ ಎರಡಾದ ತೆಂಗಿನಕಾಯಿ
ಒಳಗೆ ತುಪ್ಪದ ನೀಲಾಂಜನ
ಮಲ್ಲಿಗೆಯ ಹಾರ ಸೇವಂತಿಗೆಯ ಭಾರ
ಕೈಮುಗಿದು ನಿಂತ ಅಭಿಮಾನಿ
ನಿನ್ನೆಯಷ್ಟೇ ಮಾತನಾಡಿದ್ದೆ ಎಂದ ಗೆಳೆಯ
ಮುಂಜಾನೆ ಹಾಸಿಗೆಯಲ್ಲಿ ನಕ್ಕಿದ್ದರು ಎಂದ ಹೆಂಡತಿ
ಹೇಗೆ ಮರೆಯಲಿ ನಿನ್ನ ಎಂದ ಆ ದಿನಗಳ ಗೆಳತಿ
ಅಡಳಿತದ ಕೀಲಿಕೈಗೆ ಒಳಗೊಳಗೆ ಸುಖಿಸಿದ ಮಕ್ಕಳು
ಮುಂಜಾನೆ ಇನ್ನೂ ಉರಿಯುತ್ತಿರುವ ಕಾಷ್ಠ
ಬೂದಿಯ ರಾಶಿಯಲ್ಲಿ ಸಿಕ್ಕಿದ ಹೃದಯದ ಕವಚ
ಸೂತಕದ ಶಿಷ್ಟಾಚಾರದಲ್ಲಿ ಕುಟುಂಬಸ್ಥರು
ಒಂದೇ ಗಂಟಿಗೆ ಎಲ್ಲಾ ವಿಮೆ
ಲಕ್ಷಕ್ಕೆ ಸಂದ ಕಂಪನಿಯ ಗೊನೆ..
ಹನ್ನೊಂದನೇ ದಿನಕ್ಕೆ ಉರುಳುವ ಪಿಂಡ
ನಾನೆಂಬ ಪ್ರೇತಸ್ಯಕ್ಕೆ ಗರುಕೆ ತುಳಸೀ ಎಳ್ಳು..
ದಾನ ದಂಡ
ನನ್ನಿಷ್ಟದ ಹೋಳಿಗೆ ಮತ್ತು ಪಾಯಸ
ಅವಲಕ್ಕಿ ಮೇಲೆ ರಸಾಯನದ ಸ್ವಾದಿಷ್ಟ
ಮುಂದಿನ ವರ್ಷಕ್ಕೆ ಸಿಗುವುದಿಲ್ಲ ನನ್ನ ಹುಟ್ಟಿದ ತಾರೀಕು
ಏಕೆಂದರೆ ಉಳಿಯುವುದು ನನ್ನ ತಿಥಿ ವಾರ ನಕ್ಷತ್ರ.
ಇಷ್ಟೆಲ್ಲಾ ಲೆಕ್ಕಕ್ಕೆ ನಾನೇಕೆ ಸಿಗುವೆ?
ನಾನೆಂದೂ ಸಾಯುವುದಿಲ್ಲ
ಕಾರಣವೆಂದರೆ
ನಾನು ಹುಟ್ಟಿಯೇ ಇಲ್ಲ.

20101027

ಝೀರೋ ಟ್ರಿಪ್-೩

ಸುಮ್ಮನೆ ಇರಬೇಕು..ಎಂದಳು ಸ್ಯಾಂಡಿ.
ಅವಳ ಪಿಡಿಎಫ್ ಕಡತ ಓದುವುದೆಂದರೆ ಏಕೋ ಇದು ನನಗೆ ಬೇಡವಾಗಿತ್ತು ಎಂದನಿಸಿದೆ.
ನಿಮ್ಮ ಬಳಿ ಲ್ಯಾಪ್‌ಟಾಪ್ ಇದ್ದರೆ ಮಾತ್ರಾ ಈ ಕಡತ ಬಿಡಿಸಿ ಎಂದು ಅವಳ ತಾಕೀತು.ಏಕೆಂದರೆ ಝೀರೋ ಟ್ರಿಪ್ ಬಗ್ಗೆ ನೀವು ಓದಬೇಕಾದರೂ ಅದೇ ತರಹದ ಮನಸ್ಸು ಹುಟ್ಟಿರಬೇಕು.
ಹೊರಗೆ ವಾಹನದ ಓಟ,ಒಳಗೆ ಮಿಕ್ಸಿಯ ಕಾಟ,ಟೀವಿ ಮೇಲೆ ರಿಯಾಲಿಟಿ ಶೋ..ರಿಂಗಣಿಸಲು ಪುಕ್ಕ ಬಿಚ್ಚಿದ ಸೆಲ್‌ಫೋನ್..
ಇವ್ಯಾವುವೂ ಇರಲೇ ಬಾರದು.
ಸಹಜವಾದ ಒಂದು ಮನಸ್ಸು.
ಮತ್ತು
ಅಷ್ಟೇ ತೀವ್ರ ಮೌನ.
ಈಗ ಆರಂಭಿಸೋಣ ಝೀರೋಟ್ರಿಪ್ ಅಧ್ಯಯನ ಅಂತ ಬಿಡಿಸಿದರೆ ಸ್ಯಾಂಡಿ ಕೆಲವೊಂದು ಶರತ್ತುಗಳನ್ನು ಮುಂದಿಟ್ಟಿದ್ದಾಳೆ.
ನೀವು ಹಗುರವಾಗಿದ್ದೀರಾ?
ಅಂದರೆ?
ನೀವು ನಾಳೆ ಮಾಡಬೇಕಾದ ಕೆಲಸಗಳು,ಇಂದು ಪೂರೈಸಬೇಕಾದ ಕರ್ತವ್ಯಗಳನ್ನು ಮರೆತಿದ್ದೀರಿ ತಾನೇ?
ಹೇಗಮ್ಮಾ ಮರೆಯೋದು ಎಂದು ತಲೆ ತಟ್ಟಿಕೊಂಡಿರಾ?
ಹಾಗಾದರೆ ಬೆಟ್ಟರ್ ಯು ಪೋಸ್ಟ್‌ಪೋನ್ ದ ಟ್ರಿಪ್.
ಇಲ್ಲ ಎಲ್ಲಾ ಮರೆತೇ ಬಂದಿದ್ದೇನೆ.ನಾಳೆಯ ಚಿಂತೆ ನನಗಿಲ್ಲ,ಇಂದಿನ ಕೆಲಸ ಏನೂ ಉಳಿದಿಲ್ಲ.
ಅಯ್ಯಾಯ್ಯಾ..ಹಾಗಂದರೆ ಹೇಗೆ?
ನೀವು ಸೆಲ್‌ಫೋನ್‌ನಲ್ಲಿ ಯಾರದ್ದೋ ಮಿಸ್ಡ್‌ಕಾಲ್ ಇಟ್ಟಕೊಂಡೇ ಟ್ರಿಪ್‌ಗೆ ಹೊರಟಿದ್ದೀರಿ.
ನೋ..ಇಲ್ಲ.ನಾನು ಫೋನ್ ಸ್ವಿಚ್ ಆಫ್ ಮಾಡಿದ್ದೇನೆ ..
ಇಲ್ಲ ಇನ್ನೊಮ್ಮೆ ಯೋಚಿಸಿ..ನಿಮಗೆ ಆ ಒಂದು ನಂಬರ್ ಬಗ್ಗೆ ಮನಸ್ಸು ಉಳಿದಿದೆ.
ಅದು ನಿಮ್ಮ ಮಗಳದ್ದು,ನಿಮ್ಮ ಗೆಳತಿಯದ್ದು,ನಿಮ್ಮ ಗಂಡನದ್ದು,ನಿಮ್ಮ ಪ್ರೀತಿಯ ಜೀವದ್ದು..
ಹೋ ಅದನ್ನೂ..
ಹೌದು,ನೀವು ಅದನ್ನೂ ಮರೆಯಲೇಬೇಕು.
ಅದು ಹೇಗೆ ಸಾಧ್ಯ?ಅದೇನು ಡಿಲೀಟ್ ಮಾಡಿದರೆ ಮನಸ್ಸಿಂದ ಹೊರಟುಹೋಗುತ್ತಾ?
ನಂಬರ್ ಇರಲಿ,ಪೋನೂ ಇರಲಿ, ಆದರೆ ಯಾವ ಕಾಲ್‌ಗಳ ಬಗ್ಗೆ,ಯಾವ ಮೆಸೇಜುಗಳ ಬಗ್ಗೆ,ಇ-ಮೇಲ್‌ಗಳ ಬಗ್ಗೆ,ಫೇಸ್‌ಬುಕ್‌ನ ಚಾಟ್‌ಗಳ ಬಗ್ಗೆ ಯಾವ ನೆನಪೂ ಇರಬಾರದು.
ಇಲ್ಲ ಎಲ್ಲಾ ಮರೆತಿದ್ದೇನೆ.
ಸರಿ
ಹಾಗಾದರೆ ಒಂದು ಟೆಸ್ಟ್ ಮಾಡೋಣವೇ?
ಸರಿಯಮ್ಮಾ ಮಾಡು.
ಅದೇ ಆಕೆಯ/ಆತನ ಆ ಜೀವದ ಜೊತೆ ನೀವು ಹಂಚಿಕೊಂಡ ಆ ಕ್ಷಣವನ್ನು ನೆನಪುಮಾಡಿಕೊಳ್ಳಿ..
ಇಲ್ಲ ನೆನಪಾಗುತ್ತಿಲ್ಲ..
ಅದು ಮಾತು..ಈಗ ನೀವು ಹೊರಡಿ..
ಎಲ್ಲಿಗೆ?
ಝೀರೋಟ್ರಿಪ್‌ಗೆ.
ಎಲ್ಲಾ ಮರೆತಿರೋದು ಸಾಧ್ಯವೇ ಅಂತ ಕೇಳಿದರೆ..ಇದು ಎಲ್ಲವನ್ನೂ ಮರೆಯೋದಲ್ಲ.ಎಲ್ಲವನ್ನೂ ಮರೆತಿರಬೇಕು ಎಂದು ನೆನಪುಮಾಡಿಕೊಳ್ಳುತ್ತಾ ಮರೆಯೋದು..
ಬಾಲ್ಯ,ಬದುಕು,ಕಷ್ಟ,ಸುಖ,ಆತಂಕ,ಸ್ನೇಹ,ವೈರ..
ಬಂದುಹೋದವರು,ಇದ್ದು ಕುಳಿತವರು,ಹೆತ್ತ ಅಪ್ಪ ಅಮ್ಮ, ಹುಟ್ಟಿದ ಮಕ್ಕಳು.ಓಡಿಸುವ ಕಾರು ,ಕಟ್ಟಿಸಿದ ಮನೆ,ಬೆಳೆಸಿದ ತೋಟ,ಬಯಸಿದ ಭವಿಷ್ಯ..
ಎಲ್ಲದಕ್ಕೂ ಒಂದು ಸುತ್ತು ಬಂದು ಹೊರಡಬೇಕು..
ರಬ್ಬಿಶ್ ಎಂದು ಸರ್ರನೇ ಸ್ಕ್ರೋಲ್ ಮಾಡಿದೆ.
ಅಲ್ಲೇ ಒಂದು ಸಾಲು..
ನೀವು ಝೀರೋಟ್ರಿಪ್‌ಗೆ ನಿಮ್ಮವರನ್ನೂ ಕರೆದುಕೊಂಡು ಬರುವಂತಿದೆ.
ಇಲ್ಲ.ಹಾಗೇನಿಲ್ಲ.
ಅದಿಲ್ಲದಿದ್ದರೆ ನಿಮಗೇಕೆ ಈ ಬೇಗುದಿ?
ಯಾರು ಹೇಳಿದರು ಬೇಗುದಿ ಇದೆ ಎಂದು?
ನಿಮ್ಮ ಮನಸ್ಸು.
ನೆವರ್.ನಾನೇನೂ ಹಾಗೇ ಊಹಿಸಿಲ್ಲ.
ಸುಳ್ಳು
ನಿಮಗೆ ಬೋರಾಗಿದೆ.
ಬೋರ್‌ಡಂ ಸಿಂಡ್ರೋಂಗೆ ಝೀರೋಟ್ರಿಪ್ ಪರಿಹಾರವಲ್ಲ.
ಏನೋ ಮನಸ್ಸು ಬೇಜಾರಾಗಿದೆ ಎಂದು ರಿಲಾಕ್ಸ್ ಆಗಲು ಅದೆನೋ ನೂರಾರು ಕೋರ್ಸ್ ಥರ ಇದು ಎಂದುಕೊಂಡಿರಾ?ಇಲ್ಲ ಇಲ್ಲ.ನೀವು ಫ್ರೆಶ್ ಆಗಿದ್ದರೆ,ನೀವು ಫೈನ್ ಆಗಿದ್ದರೆ,ನೀವು ಫುಲ್‌ಖುಶ್ ಆಗಿದ್ದರೆ ಮಾತ್ರಾ ಈ ಟ್ರಿಪ್‌ಗೆ ಬನ್ನಿ.ಇಲ್ಲವಾದರೆ ಪ್ಲೀಸ್ ಗೆಟ್‌ಔಟ್.

20101017

ಝೀರೋ ಟ್ರಿಪ್-೨

ಸ್ಯಾಂಡಿ ಈಸ್ ಬ್ಯಾಕ್.
ಝೀರೋ ಟ್ರಿಪ್ ಬಗ್ಗೆ ಅವಳು ಮತ್ತಷ್ಟು ವಿವರಿಸಿದ್ದಾಳೆ.
ಇದರ ಕಷ್ಟದ ಬಗ್ಗೆ ಝೀರೋ ಟ್ರಿಪ್‌ನ ಮೂಲದಲ್ಲೇ ಉಲ್ಲೇಖಗಳಿವೆ.
ಮೊದಲಾಗಿ ಶೂನ್ಯಕ್ಕೆ ಸಾಗಲು ಬೇಕಾದ ಮನಸ್ಥಿತಿಯೇನು?
ಎಲ್ಲವೂ ಆರಾಮವಾಗಿವೆ.ಬದುಕು ಸುಖವಾಗಿದೆ.ನೆನೆದುದೆಲ್ಲಾ ಸಿಕ್ಕಿವೆ.ಯಾವ ಕಷ್ಟವೂ ಇಲ್ಲ.ಸುಖ ಕಿತ್ತು ತಿನ್ನುವಷ್ಟಿದೆ.ಯಾವ ಕಾರಣಕ್ಕೂ ಬೋರ್ ಹೊಡೆಯುತ್ತಿಲ್ಲ.
ಹಾಗಿದ್ದ ಮೇಲೆ ಇದು ಬೇಕಾ?
ಸುಖ ಪುರುಷರಿಗೆ ಈ ಝೀರೋ ಟ್ರಿಪ್‌ಗೆ ಹೊರಡಲು ಹೇಗಾದರೂ ಸಾಧ್ಯ?
ಇನ್ನು ಟೆನ್ಶ್‌ನ್,ಡಿಪ್ರೆಶನ್,ದೈಹಿಕ ಅನಾರೋಗ್ಯ,ದರಿದ್ರಾವಸ್ಥೆ,ಬಿಪಿ,ಶುಗರ್,ಏಕಾಂಗಿತನ...ಮುಂತಾಗಿ ಸದಾ ಕಷ್ಟವೇ ಮೈವೆತ್ತಮಂದಿಗೆ?
ಝೀರೋ ಟ್ರಿಪ್ ಈ ಇಬ್ಬರಿಗೂ ಅಲ್ಲ.
ಇದಕ್ಕೆ ದೇಹವೆಂಬುದಿಲ್ಲ,ವಯಸ್ಸೆಂಬುದಿಲ್ಲ.ಅಸ್ಥಿತ್ವವೆಂಬುದು ಇಲ್ಲಿ ಗೌಣ.ಸ್ಥಿತಿಯಿಂದ ದಾಟಿ ಹೋಗಲು ಬೇಕಾದುದು ಹದವಾಗಿ ಪಾಕವಿಕ್ಕಿದ್ದಂತಿರುವ ಒಂದು ಮನಸ್ಸು.ದೇಹದಿಂದ ಕಳಚಿಕೊಳ್ಳಬೇಕಾದ ಮನಸ್ಸು.ಈ ಮನಸ್ಸು ಮೆಮೊರಿಗಳನ್ನು ಡಿಲೀಟ್ ಮಾಡಬೇಕು.ತಪ್ಪು ಸರಿಗಳು,ಪಾಪಪುಣ್ಯಗಳು,ದೇವರು ದಿಂಡರು,ಹೆಂಡತಿ/ಗಂಡ ,ಮಕ್ಕಳು,ಆಫೀಸು.ಡ್ಯೂಟಿ..ಯಾವುದೂ ಇಲ್ಲದ ಹಾಗೇ ಮಾಡಿಕೊಳ್ಳಬೇಕು.ಆ ಮನಸ್ಸು ಹುಟ್ಟುವ ತನಕ ಕಾಯಬೇಕು.ಅಂದರೆ ಈಗ ನಿಮ್ಮಲ್ಲಿರುವ ಮನಸ್ಸು ಝೀರೋ ಟ್ರಿಪ್‌ಗೆ ಬರಬಾರದು.ಅದನ್ನು ತೊರೆದುಬಿಡಿ.
ಭಾಪ್ರೇ!ಇದೇನಿದು ಮನಸ್ಸು ತೊರೆಯುವುದು ಎಂದರೆ?ಇದು ಪಕ್ಕಾ ಮೆಂಟ್ಲು ಪಾರ್ಟಿ ಇರಬೇಕು ಎಂದು ಅನಿಸುತ್ತದೆ.ನಿಜ ಒಂಥರಾ ಹಾಗೇನೇ.ಕಳೆದುಕೊಳ್ಳುವುದು ಮತ್ತು ಕಳಚಿಕೊಳ್ಳುವುದು ಮೆಂಟ್ಲಿನ ವಿಚಾರವೇ.ಇದ್ದು ಇಲ್ಲೇ ಇರುವುದು ಸಹಜತೆ.ಇದು ಇಲ್ಲಿಂದ ಹೊರಟು ಹೋಗುವ ವಿಚಾರ.ಆದ್ದರಿಂದ ಇಲ್ಲಿರುವುದೆಲ್ಲಾ ಈ ಪಯಣಕ್ಕೆ ವರ್ಜ್ಯ.ನಾವೆಲ್ಲಾ ಸಹಜತೆಯನ್ನು ಒಪ್ಪಿಕೊಂಡವರು.ಅಸಹಜ ಎಂಬುದು ಅಸಹ್ಯ.ಸೀದಾ ಈಸ್ ರೈಟ್.
ಆದರೆ ಝೀರೋ ಟ್ರಿಪ್‌ಗೆ ರೈಟ್ ಆಗಿರುವುದೇ ರಾಂಗ್.
ಏನಪ್ಪಾ ಇದು?ಸಾಯುವುದು ಅಲ್ಲ ತಾನೇ?
ಇದು ಸುಸೈಡ್ ಮಾಡಲು ಹೋಗುವವರ ಹಾಗೇ ಕಾಣುತ್ತಿದೆ ಎಂದು ಕೇಳಿದರೆ ಆ ಪಾರ್ಟಿ ಈ ಪಯಣಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುತ್ತಾಳೆ ಸ್ಯಾಂಡಿ.
ಶುದ್ಧ ಮನಸ್ಸನ್ನು ಹೊಂದಿ ಅದರಿಂದ ಕಳಚಿಕೊಳ್ಳುವವರು ಮಾತ್ರಾ ಬನ್ನಿ ಎಂಬುದು ಝೀರೋ ಟ್ರಿಪ್ ಕರೆ.ಮನಸ್ಸನ್ನು ಕಳಚಿ ಇಡುವುದು ಎಂದರೆ ನೀವು ನಿಮ್ಮ ಇಷ್ಟದ ಡ್ರೆಸ್‌ನ್ನು ಜೋಪಾನವಾಗಿ ಜತನದಿಂದ ವಾರ್ಡ್‌ರೋಬ್‌ಲ್ಲಿ ಇಟ್ಟ ಹಾಗೇ.
ಸದ್ಯಕ್ಕೆ ಹೊಸ ಲೋಕದತ್ತ ಪಯಣ.ಅದಕ್ಕೆ ಹೊಸತಾದ ಒಂದು ಮನೋ ವೇದಿಕೆ ಬೇಕಪ್ಪಾ ಎನ್ನುತ್ತಾಳೆ ಸ್ಯಾಂಡಿ.
ಇಷ್ಟಕ್ಕೂ ಈ ಪಯಣಕ್ಕೆ ಹೊರಟು ವಾಪಾಸ್ಸು ಬರುವುದುಂಟೋ ಅಂತ ಅನುಮಾನಪಟ್ಟರೆ ನಕ್ಕಿದ್ದಳು ಅವಳು. .ಇದು ಟ್ರಿಪ್ ಕಣೋ.ಟ್ರಿಪ್ ಅಂದರೆ ಎ ಜರ್ನಿ ಆಫ್ ರಿಲೇಟಿವಿಲೀ ಶಾರ್ಟ್ ಡ್ಯುರೇಶನ್,ಎಸ್ಪೆಶಲೀ ಟು ಎ ಪ್ಲೇಸ್ ಆಂಡ್ ಬ್ಯಾಕ್ ಅಗೈನ್..ಎಂದು ಡಿಕ್ಷನರಿ ಅರ್ಥವನ್ನು ತೆಗೆದುತೋರಿಸಿದ್ದಳು.
ಟು॒ ಎ ಪ್ಲೇಸ್!!
ಓಹೋ..ಹಾಗಾದರೆ ಈ ಪಯಣ ಯಾವುದೋ ಒಂದು ಊರಿಗೆ!
ಎಲ್ಲಿದೆ ಆ ಊರು? ಏನಿದೆ ಅಲ್ಲಿ?ಹಾಗೊಂದು ಊರಲ್ಲಿ ಏನು ಸಿಗುತ್ತದೆ?ಯಾರ‍್ಯಾರು ಇದ್ದಾರೆ ಅಲ್ಲಿ? ಎಂದರೆ ಅದೇ ಒಂದು ವಿಸ್ಮಯ ಎಂದಿದ್ದಾಳೆ.
ಮಾತ್ರವಲ್ಲ ಬ್ಯಾಕ್ ಅಗೈನ್ ಅಂದರೆ ಮರಳಿ ಬರುವುದೂ ಖಚಿತವಿದೆ.
ಹಾಗಾದರೆ ಬಚಾವ್..ಮರಳಿ ಬರುವುದಾದರೆ ನಾನೂ ಹೊರಟೆ ಎಂದಿರಾ?
ನೋ.
ಆ ಆಸ್ಥೆ ನಿಮ್ಮಲ್ಲಿ ಇದೆ ಎಂದಾದರೆ ನೀವು ಹೊರಡಲು ಆಗುವುದೇ ಇಲ್ಲ.
ಏಕೆಂದರೆ ಈ ಪಯಣ ಇಲ್ಲಿಂದ ತೊರೆಯಲು ಸಾಧ್ಯವೇ ಇಲ್ಲ ಎಂಬ ಮನೋನಿಷ್ಠೆಗೆ ಸಿಗುವುದೇ ಇಲ್ಲ.
ಎಲ್ಲಾ ಒಕೆ.ಈ ಝೀರೋ ಟ್ರಿಪ್‌ಗೆ ಎಷ್ಟು ಸಮಯ ಬೇಕು?
ಒಂದು ಮಿನಿಟು,ಒಂದು ಗಂಟೆ,ಒಂದು ದಿನ,??
ಸ್ಯಾಂಡಿ ಹೇಳಿಲ್ಲ.

20101014

ಝೀರೋ ಟ್ರಿಪ್

ಏನೂ ಇಲ್ಲದ ಸ್ಥಿತಿ ತಲುಪಲು ನಿರ್ಧರಿಸಿದ್ದೇನೆ.
ವಾನ್ ಟು ಬಿಕಂ ಝೀರೋ..
ಶೂನ್ಯ ಎಂಬುದು ನಮ್ಮ ಎಲ್ಲ ಆರಂಭಗಳ ಅಂತ್ಯ,ಅಥವಾ ಎಲ್ಲಾ ಅಂತ್ಯಗಳ ಆರಂಭ ಎಂದೂ ಹೇಳಬಹುದು.
ಇದು ಅರ್ಥವಾಗಲಿಲ್ಲ ಎಂದುಕೊಂಡರೆ ವಿವರಿಸುತ್ತೇನೆ.
ಮೊದಲಾಗಿ ನಾನು ಎಲ್ಲಿದ್ದೆ?
ಹಾಗೆಂದು ಒಂದು ಏಕಾಂತದಲ್ಲಿ ಕೇಳಿನೋಡಿ.ನೆನಪಿರಲಿ ಆಗ ನೀವು ನಿಮ್ಮನ್ನು ಕಡಿದುಕೊಂಡಿರಬೇಕು.ಏಕಾಂತದಲ್ಲಿ ಹಕ್ಕಿಗಳು ಚಿಲಿಪಿಲಿಗುಟ್ಟಬಹುದು.ಗಾಳಿ ಬೀಸಬಹುದು.ನೀರಿನ ನಿನಾದ ಒಕೆ.ಆದರೆ ಯಾವುದೇ ಮಾನವ ನಿರ್ಮಿತ ಶಬ್ದಗಳು ಇರಬಾರದು.ಅಂಥ ಪ್ರದೇಶದಲ್ಲಿ ನೀವು ಇರಬೇಕು.
ಬಹಳ ಹೊತ್ತು ಸುಮ್ಮನೆ ಇರಿ.ಕಣ್ಣು ಮುಚ್ಚಿದರೆ ಇನ್ನೂ ಉತ್ತಮ.ಮೊದಲಾಗಿ ನಿಮ್ಮನ್ನು ನೀವು ಕಳೆದುಕೊಳ್ಳುತ್ತೀರಿ ಎಂಬುದನ್ನು ಖಚಿತ ಮಾಡಿಕೊಳ್ಳಿ
ಆಗ ಹುಟ್ಟುವ ಮೊದಲ ಪ್ರಶ್ನೆಯೇ ನಾನು ಎಲ್ಲಿದ್ದೆ.ಅದನ್ನು ನೀವು ಕೇಳಿಕೊಳ್ಳುವ ಅಗತ್ಯವೇ ಇಲ್ಲ.ಅದಾಗಿಯೇ ಹುಟ್ಟುತ್ತದೆ.
ಹಾಗೇ ಆ ಪ್ರಶ್ನೆ ಹುಟ್ಟುತ್ತಲೇ ನೀವು ಮೊದಲಾಗಿ ನೆನಪಿಸಿಕೊಳ್ಳಬೇಕಾದುದು ನೀವು ಪ್ರೀತಿಸಿದ ನಿಮ್ಮವಳು/ನು.
ನಿಮ್ಮ ಬದುಕಲ್ಲಿ ಅದೆಷ್ಟು ಮಂದಿಯನ್ನು ನೀವು ಪ್ರೀತಿಸಿದ್ದೀರಿ ಎಂದು ಕೇಳಿಕೊಳ್ಳಿ.
ಒಂದೊಂದಾಗಿ ಒಬ್ಬೊಬ್ಬರಿಂದಲೇ ಕಳೆದುಕೊಳ್ಳುತ್ತಾ ಬನ್ನಿ.ಆಮೇಲೆ ಅಂತಿಮವಾಗಿ ಒಂದು ಜೀವ ನಿಮ್ಮ ಬಳಿ ಉಳಿದೇ ಉಳಿಯುತ್ತದೆ.ಅದು ನೀವು ನಿಜವಾಗಿಯೂ ಪ್ರೀತಿಸಿದ ಜೀವ.
ಆ ಜೀವವನ್ನು ತೊರೆಯುವುದು ಕೊಂಚ ಕಷ್ಟ ಎನಿಸಿದರೆ ಜಸ್ಟ್ ವೈಂಡ್‌ಅಪ್.
ಇನ್ನೊಮ್ಮೆ ನೀವು ಅದೇ ದಿನ ಅಥವಾ ಅದೇ ಗಂಟೆಗೆ ಝೀರೋ ಆಗುವ ಪ್ರಯೋಗ ಆರಂಭಿಸಬಹುದು.ಅದೇ ಸ್ಥಳವೂ ಒಕೆ.
ಮತ್ತೆ ಅದೇ ಪ್ರಯೋಗ.ಈ ಬಾರಿ ನಿಮಗೆ ನಿಮ್ಮನ್ನು ಕಳೆದುಕೊಳ್ಳಲು ತುಂಬಾ ತ್ರಾಸವಾಗಬಹುದು.ಬಹುಶಃ ನೀವು ವಿಫಲರಾಗಿದ್ದೇ ಹೆಚ್ಚು.
ಒಂದೊಮ್ಮೆ ನೀವು ನಿಮ್ಮನ್ನು ಕಳೆದುಕೊಂಡರೆ ಮತ್ತೆ ಅದೇ ಸ್ಥಿತಿಯತ್ತ ಪಯಣಿಸಿ.ಈ ಬಾರಿ ನಿಮ್ಮ ಪ್ರೀತಿಯ ಜೀವ ತಾನೇ ತಾನಾಗಿ ಉದುರಿಹೋಗುತ್ತಿದೆ.
ಮನಸ್ಸು ಮುದುಡುತ್ತದೆ.ಎಲ್ಲೋ ಒಂದು ಆರ್ದ್ರತೆ ಆವರಿಸಿಬಿಡುತ್ತದೆ.
ಅಷ್ಟರಲ್ಲೇ ನೀವು ಬೆತ್ತಲಾಗಬೇಕು.ದೇಹದಿಂದಲ್ಲ,ಮನಸ್ಸಿನಿಂದ.ನೀವು ನಿರ್ವಾಣವಾಗುವುದನ್ನು ನಿಮ್ಮೊಳಗೆ ಆನಂದಿಸುತ್ತಾ ಹೋಗಬೇಕು.ಈ ಕೆಲಸ ಸುರಳೀತವಾಗಿ ಸಾಗುತ್ತದೆ.
ಯಾವಾಗ ನೀವು ಅಂತರ್ಯದಲ್ಲಿ ಬೆತ್ತಲಾದಿರೋ,ಆಗ ಶುರುವಾಗುತ್ತದೆ ನಿಮ್ಮ ದೇಹದ ಕಾರ್ಯಭಾರ.ಅದು ತಾನೇ ತಾನಾಗಿ ಬಿಗುವಾದಂತೆ,ಅಥವಾ ತೀರಾ ಹಗುರವಾದಂತೆ ಆಗಬಹುದು.
ನಿಮ್ಮ ಲೈಂಗಿಕ ವಿಭಾಗದಲ್ಲಿ ಅಚ್ಚರಿಗಳು ಹುಟ್ಟಬಹುದು.ಉದ್ರೇಕವಾಗಬಹುದು.ನೀವು ದ್ರವಿಸಬಹುದು.
ಎಲ್ಲವನ್ನೂ ಒಪ್ಪಿಕೊಳ್ಳಬೇಕು.ಏನೇ ಆದರೂ ವಿಚಲಿತರಾಗಬಾರದು.ಇದೇನಿದು ಹೀಗಾಗುತ್ತಿದೆ ಎಂದು ದುಃಖಿಸಬಾರದು.ಏನೋ ಮಾಡಲು ಹೋಗಿ ಏನೋ ಆಗಿಹೋಯಿತೇ ಎಂದುಕೊಳ್ಳಬಾರದು.
ಒಟ್ಟಾರೆಯಾಗಿ ಕೀಪ್ ಕ್ವೈಟ್.
ನಿಮ್ಮ ದೇಹ ಬಿಗುವಾಗುತ್ತಿದ್ದರೆ ನೀವು ಝೀರೋದತ್ತ ಪಯಣ ಆರಂಭಿಸಿದ್ದೀರಿ ಎಂದರ್ಥ.ಆದರೆ ನಿಮ್ಮ ದಾಟುವಿಕೆ ಮಾತ್ರಾ ಎಲ್ಲೋ ನಿಲ್ಲುತ್ತದೆ ಎಂಬುದು ಅದರ ಸೂಚನೆ.ನಿಮ್ಮ ದೇಹ ಹಗುರವಾಗುತ್ತಿದೆ ಎಂದಾದರೆ ನೀವು ಶೂನ್ಯದತ್ತ ಸುಲಭದಲ್ಲೇ ಸಾಗುತ್ತಿದ್ದೀರಿ ಎಂದರ್ಥ,ಆದರೆ ಯಾವುದೇ ಕ್ಷಣಕ್ಕೆ ನೀವು ಬ್ಯಾಕ್ ಟು ಪೆವಿಲಿಯನ್ ಆಗಬಹುದು.
ಏನೇ ಆಗಲಿ ನಿಮ್ಮ ಪಯಣ ಆರಂಭವಾಗಲಿ.ನೀವೀಗ ಬೆತ್ತಲಾಗಿದ್ದೀರಿ.ಒಮ್ಮೆ ನಿಮ್ಮ ಅಂಗಾಗಳನ್ನು ನೋಡಿಕೊಳ್ಳಿ.ನಿಮ್ಮ ಕಾಲಿನ ಕಿರುಬೆರಳನ್ನು ನೀವು ಯಾವತ್ತಾದರೂ ಪ್ರೀತಿಸಿದ್ದೀರಾ ಎಂದು ಪರೀಕ್ಷಿಸಿ.ನೀವದರ ಉಗುರು ಕೀಳುವಾಗ?ಬಣ್ಣ ಹಚ್ಚುವಾಗ?
ಹಾಗೇ ಒಂದೊಂದೇ ಅಂಗಾಗಳನ್ನು ಪರೀಕ್ಷಿಸುತ್ತಾ ಅದು ನಿಮ್ಮಲ್ಲಿ ಯಾವ್ಯಾವ ರೀತಿಯಲ್ಲಿ ಯಾವ್ಯಾವಾಗೆಲ್ಲಾ ಇದ್ದು ನಿಮ್ಮದಾಗಿತ್ತು ಎಂದು ಕೇಳಿಕೊಳ್ಳಿ.ನೀವೇ ಅದರ ಜೊತೆ ಮಾತನಾಡಿದರೂ ಆಗಬಹುದು.
ಈ ಪಯಣ ಒಂದು ಅನಿರ್ದಿಷ್ಟಾವಧಿಯ ಯಾನ.ಆದರೆ ಪಯಣದ ಹಾದಿಯಲ್ಲಿ ನಿಮ್ಮ ದೇಹ ವಿಚಲಿತವಾಗಿದೆ.ಸೊಳ್ಳೆ ಕಚ್ಚಿದೆ.ತೇಗು ಬರುತ್ತಿದೆ.ನೊಣ ಕುಯ್ ಅಂತ ಮೂಗಿನ ಮೇಲೆ ಠಳಾಯಿಸಿದೆ.ನಿಮ್ಮ ಹೊಟ್ಟೆ ಈಗ ಮುಂದಾಗಿ ಬಂದು ನಿಮ್ಮನ್ನು ವಿಚಾರಿಸುತ್ತಿದೆ,ಐ ಮೀನ್ ಹಸಿವು ಅಥವಾ ಬಾಯಾರಿಕೆ ಆಗುತ್ತಿದೆ.ನಿಮಗೆ ಮೂತ್ರ ಬರುತ್ತಿದೆ.
ಕಟ್
ನೀವು ವಾಪಾಸ್ಸು ಬಂದಾಯಿತು.
ಮತ್ತೆ ಹೊರಡಲು ನಿಮ್ಮ ಬಳಿ ಸಿದ್ಧತೆಗಳಿವೆಯೇ ಎಂದು ಪರೀಕ್ಷಿಸಿ.
ಯಾಕೋ ನಿಮಗೆ ಯಾರನ್ನೋ ನೆನಪಾಗುತ್ತಿದೆ.ನಿಮ್ಮ ಕೆಲಸಗಳು ಕಾಡುತ್ತಿವೆ.
ಅಷ್ಟರಲ್ಲೇ ನಿಮಗೆ ಈ ಝೀರೋ ಟ್ರಿಪ್ ಬೋರ್ ಅನಿಸುತ್ತಿದೆ.
ನೀವು ಈ ವಿಚಾರವನ್ನು ಕೈ ಬಿಡುತ್ತೀರಿ.
ಇದು ನಿಜ.ಇದ್ದಕ್ಕಿದ್ದಂತೆ ನಿಮ್ಮ ಪಯಣ ತುಂಡರಿಸಲ್ಪಡುತ್ತದೆ.
ಹಾಗಾದರೆ ಈ ಪಯಣವನ್ನು ಪೂರ್ತಿಗೊಳಿಸುವುದು ಹೇಗೆ?
ಹಾಗಂತ ಸ್ಯಾಂಡಿಗೆ ಮೇಲ್ ಹಾಕಿ ಕೇಳಿದ್ದೇನೆ,ಉತ್ತರ ಬಂದೊಡನೆ ತಿಳಿಸುತ್ತೇನೆ.

--ಇತ್ತೀಚೆಗೆ ಉಜ್ಬೆಕಿಸ್ತಾನಕ್ಕೆ ಹೋಗಿದ್ದಾಗ ಪರಿಚಯವಾದವಳು ಸ್ಯಾಂಡಿ.ನಾವಿದ್ದ ಹೋಟೇಲಿನಲ್ಲಿ ಈಕೆ ರಿಸೆಪ್ಶನಿಸ್ಟ್ ಆಗಿದ್ದಳು.ಇಂಗ್ಲೀಷ್ ಮಾತನಾಡಬಲ್ಲವಳು ಅವಳೊಬ್ಬಳೇ ಆಗಿದ್ದರಿಂದ ಅವಳ ಜೊತೆ ಗಂಟೆಗಟ್ಟಲೆ ಹರಟಿದ್ದೆ.ಆಕೆ ಒಂದು ನವ ಸಿದ್ಧಾಂತದ ಬಗ್ಗೆ ಆಗ ನನಗೆ ಹೇಳಿದ್ದಳು.ನನಗದು ತೀರಾ ಅರ್ಥವಾಗಿರಲಿಲ್ಲ.ಶೂನ್ಯಕ್ಕೆ ಸೇರುವುದು ಅದರ ಥೀಮ್.ನಮ್ಮ ವೇದ ಉಪನಿಷತ್ತುಗಳಲ್ಲಿ ಕೂಡಾ ಈ ವಿಚಾರ ಇರಲೂಬಹುದು,ನಾನು ಆ ಮಟ್ಟಿಗೆ ಅಜ್ಞಾನಿ.
ಆಮೇಲೆ ಸ್ಯಾಂಡಿ ನನ್ನ ಮಿಂಚಂಚೆಯ ಗೆಳತಿಯಾದಳು.ಅವಳ ಜೊತೆ ಆಗಾಗ ಚಾಟ್ ಕೂಡಾ ಮಾಡಲು ಅವಕಾಶ ಸಿಕ್ಕಿದರೆ ನಾನು ಅದೇ ಝೀರೋ ಟ್ರಿಪ್ ಬಗ್ಗೆ ಕೇಳುತ್ತಿದ್ದೆ.ಹಲವು ವಾರಗಳ ಬಳಿಕವಷ್ಟೇ ಆಕೆ ನಾನು ಈ ವಿಚಾರದಲ್ಲಿ ಗಂಭೀರವಾಗಿದ್ದೇನೆ ಎಂದು ಖಚಿತಮಾಡಿಕೊಂಡಳಂತೆ.ನಿನಗೆ ನಿಜಕ್ಕೂ ಆಸಕ್ತಿ ಇದ್ದರೆ ಝೀರೋ ಟ್ರಿಪ್ ಬಗ್ಗೆ ಹೇಳುತ್ತೇನೆ ಎಂದು ಭರವಸೆ ನೀಡಿದಾಕೆ ಮೂರು ತಿಂಗಳು ಕಾಲ ಕಾಯಿಸಿದಳು.ಮೊನ್ನೆ ಆಕೆಯ ಮೇಲ್.ಸುದೀರ್ಘವಾದ ಟಿಪ್ಪಣಿಗಳನ್ನು ಒಳಗೊಂಡ ಕಿತಾಬು ಅದು.ಒಂದೊಂದು ಪುಟಕ್ಕೂ ತತ್ವಾತತ್ವ ಸಂಬಂಧ ಇಲ್ಲ ಎಂಬ ಹಾಗೇ ಅದರಲ್ಲಿ ಉಲ್ಲೇಖಗಳು.
ಎಲ್ಲವೂ ಈ ಪಯಣದಲ್ಲಿ ಪಾಲ್ಗೊಳ್ಳುವವರಿಗೆ ಮಾತ್ರಾ ಎಂಬ ಷರಾ.
ಸ್ಯಾಂಡಿ ಬಳಿ ಕೇಳಿದ್ದೆ,ನಿನಗೆ ಇದನ್ನು ಹೇಳಿದ್ದು ಯಾರು?ಇದೊಂದು ಪಂಥವೇ?ಇದರ ಅಂತಿಮ ನಡೆ ಏನು?
ಸ್ಯಾಂಡಿ ಏನೂ ಹೇಳಿಲ್ಲ.
ಝೀರೋ ಟ್ರಿಪ್ ಮಾಡು ಅರ್ಥವಾಗುತ್ತದೆ ಎಂದಿದ್ದಳು.
ಸ್ಯಾಂಡಿಯ ಅನುಮತಿಯ ಮೇರೆಗೆ ನಿಮ್ಮ ಜೊತೆ ಹಂಚಿಕೊಳ್ಳುತಿದ್ದೇನೆ.
ಹಾಗೇ ನನ್ನ ಬ್ಲಾಗ್‌ನಲ್ಲಿ ಇದನ್ನು ಬರೆದುಬಿಡಲೇ ಎಂದು ಕೇಳಿದ್ದಕ್ಕೆ ಸ್ಯಾಂಡಿ ಏನು ಹೇಳಿದ್ದಳು ಗೊತ್ತೇ?
ಶೂನ್ಯದ ಸವಾರಿ ಯಾರ ಪೇಟೆಂಟೂ ಅಲ್ಲ.
ವೈಟಿಂಗ್ ಫಾರ್ ಹರ್ ಮೇಲ್.

20101011

ನೀವಿದನ್ನು ಓದುತ್ತೀರಾ?

ಕರ್ನಾಟಕದ ಶ್ರೇಷ್ಠ ನಾಯಕರೇ,
ನೀವು ಸರಕಾರ ಕಟ್ಟಿ ಅಥವಾ ಬೀಳಿಸಿ
ನಿಮ್ಮಜ್ಜಿ! ನೀವೇನು ಈ ಕರ್ನಾಟಕವನ್ನು ಕಡಿದು ಗುಡ್ಡೆ ಹಾಕುತ್ತೀರಿ ಎಂದೇನೂ ನಾವು ನಿಮಗೆ ಓಟು ಹಾಕಿದ್ದೇ ಅಲ್ಲ.ಬೇಲಿಗೊಂದು ಗೂಟ ಬೇಕಿತ್ತು,ಅದನ್ನು ಹಾಕಿದ್ದೇವೆ ಅಷ್ಟೇ.
ನಮಗೆ ಗೊತ್ತಿಲ್ಲ ಎಂದುಕೊಂಡಿರಾ?ನೀವು ಅಧಿಕರ ಸಿಕ್ಕ ಕೂಡಲೇ ನಮ್ಮನ್ನು ಕ್ಯಾರೇ ಮಾಡಲ್ಲ.ಈ ದೊಡ್ಡ ದೊಡ್ಡ ಅಂಗಡಿಗಳಲ್ಲಿ ಕಾರು ಅಥವಾ ಫ್ರಿಜ್ಜು ಮಾರಾಟ ಮಾಡುತ್ತಾರಲ್ಲಾ,ಅವರ ಬಳಿ ಹೋಗಿ ನಿಂತರೆ ಸಾಕು,ನಮ್ಮ ಕಾಲು ಕೋಲು ಎಲ್ಲಾ ಹೀಡೀತಾರೆ.ಆಮೇಲೆ ನಾವು ಯಾವಾಗ ಅಲ್ಲಿಂದ ಖರೀದಿ ಮಾಡಿ ಅವರು ಕೇಳಿದಷ್ಟು ದುಡ್ಡು ಕೊಟ್ಟು ಹೊರಗೆ ಬೀಳುತ್ತೇವೋ,ಆಮೇಲೆ ಅಂಬಿಗನ ಮಿಂಡ.
ನೀವೂ ಅದೇ ಜನ.
ನಿಮ್ಮ ಬಳಿ ಏನಾದರೂ ಒಂದು ಉಪಕಾರ ಆಗುತ್ತದೆ ಎಂದು ಯಾವನಾದರೂ ಮತದಾರ ನಂಬಿದ್ದಾನೆ ಎಂದು ನೀವು ಅಂದುಕೊಂಡರೆ ಅದು ನಿಮ್ಮ ಭ್ರಮೆ.ಯಾರೂ ನಿಮ್ಮನ್ನು ನಂಬಿ ಬದುಕುತ್ತಿಲ್ಲ.ಆ ಮಟ್ಟಿಗೆ ನೀವು ಧನ್ಯರು.
ನೀವು ಒಂಥರಾ ಕುಂಡೆ ತೂತು ಇದ್ದ ಹಾಗೇ.ಯಾವ ಎಕ್ಸೆಲ್ ಹಾಕಿ ತೊಳೆದರೂ ತೂತು ತೂತೇ.ಹೇಸಿಗೆಯ ವಾಸನೆಯೇ.
ಇರಲಿ,
ನೀವೀಗ ನಮಗೆ ಹೇಳಬೇಕು, ವಾರದಿಂದ ನೀವು ಹೀಗೆ ಹುಚ್ಚು ನಾಯಿ ಥರ ಓಡಾಡುತ್ತಿರಲ್ಲಾ,ಣಿವು ನಮ್ಮ ಅನುಮತಿ ಕೇಳಿದ್ದೀರಾ?ಒಂದು ದಿನ ಕೂಡಾ ನೀವು ಕಛೇರಿ ಕಲೆಸ ಅಂತ ಮಾಡಲಿಲ್ಲ ಅಲ್ವಾ? ಅದೇನು ರಜಾ ಹಾಕಿದ್ದೀರಾ?ಹಾಗೇ ರಜೆ ಹಾಕೋ ಅವಕಾಶ ನಿಮಗೆ ಉಂಟೋ? ಅದೆಲ್ಲಾ ಇಲ್ಲ ಎಂದರೆ ನೀವು ಈ ರೀತಿ ಕೆಲಸ ಮಾಡದೇ ಇರಲು ನಿಮಗೆ ಹೇಳಿದವರು ಯಾರು?
ಕಳೆದ ಒಂದು ವಾರದಿಂದ ನೀವು ಓಡಾಡಿದ ವಿಮಾನದ ಟಿಕೇಟು ದುಡ್ಡು ಎಷ್ಟು?
ನೀವು ವಾಸ ಮಾಡಿದ ಮೂರು ರಾಜ್ಯಗಳ ರೆಸಾರ್ಟ್ ಮತ್ತು ಹೋಟೇಲುಗಳ ಬಿಲ್ಲು ಎಷ್ಟು?
ನೀವು ತಿರುಗಾಡಿದ ಐಷಾರಾಮಿ ಕಾರುಗಳಿಗೆ ಬಾಡಿಗೆ ಕೊಟ್ಟಿದ್ದೀರಾ ಅಥವಾ ಇಂಧನ ತುಂಬಿಸಿದ್ದೀರಾ?ಇಲ್ಲವಾದರೆ ಅದನ್ನು ತುಂಬಿದವರು ಯಾರು?
ನಿಮಗೆ ಈ ದುಡ್ಡು ಕೊಟ್ಟವರು ಯಾರು?ಅದನ್ನು ಕೊಟ್ಟವರಿಗೂ ನಿಮಗೂ ಏನು ಸಂಬಂಧ?ಅವರಿಗೆ ಆ ದುಡ್ಡು ಎಲ್ಲಿಂದ ಬಂತು?
ನಾವು ಎಂದೂ ಲಕ್ಷ ರೂಪಾಯಿ ಕೂಡಾ ಲೆಕ್ಕ ಮಾಡಿಲ್ಲ.ಕೋಟಿ ರೂಪಾಯಿ ನೋಡಿದವರೇ ಅಲ್ಲ.ನಿಮಗೆ ಕೋಟಿ ಗಂಟೆ ಲೆಕ್ಕದಲ್ಲಿ ಇರಬಹುದು,ನಮಗೆ ಮೂರು ತಲೆಮಾರು ದಾಟಿದರೂ ಕಾಣಲೇ ಸಿಗುವುದಿಲ್ಲ.ನಿಮ್ಮ ಶರಟು,ನಿಮ್ಮ ಶೂ,ನಿಮ್ಮ ಕಾರು,ನಿಮ್ಮ ಬಂಗಲೆ,ನಿಮ್ಮ ತಿರುಗಾಟ ನಿಮ್ಮ ಸ್ವಂತದ್ದೇ ಅಲ್ಲ.
ಒಂದು ಲೋಟಾ ಹಾಲು ನಿಮ್ಮ ದುಡಿದ ದುಡ್ಡಿನದ್ದು ಅಂತ ನೀವು ತಂದು ಕುಡಿಯುವುದಿಲ್ಲ.ನಿಮ್ಮ ಮಗಳ ಮದುವೆ ಕೂಡಾ ನೀವು ಅರಮನೆ ಮೈದಾನದಲ್ಲಿ ಮಾಡಿದರೆ ಔತಣದ ಖರ್ಚು ಬಿಡಿ,ಲೈಟ್ ಮತ್ತು ಸೌಂಡ್ಸ್‌ನ ಬಿಲ್ಲು ಕೊಡುವುದು ಇನ್ಯಾರೋ.ದಿನಂಪ್ರತಿ ನಿಮ್ಮ ಮನೆ ಟೀಪಾಯಿ ಮೇಲೆ ಕೂತಿರುತ್ತದಲ್ಲಾ ಆ ದಿನಪತ್ರಿಕೆ,ಅದರ ಬಿಲ್ಲು ಕೊಡುತ್ತೀರಾ ನೀವು?ನೀವು ದಾಡಿ ಬೋಳಿಸಿಕೊಂಡಾಗಲೂ ಕೊಡುವ ಚಿಲ್ಲರೆ ಕಾಸು ನಿಮ್ಮದೇನು?ನೀವು ಹಾಕಿದ ಶರಟು ನಿಮ್ಮ ತಿಂಗಳ ಸಂಬಳದ್ದು ಅಂತ ನಿಮ್ಮ ಮಕ್ಕಳ ತಲೆ ಮೇಲೆ ಕೈ ಇಟ್ಟು ಹೇಳಿ ನೋಡೋಣ.
ಎಲ್ಲವೂ ಇನ್ನೊಬ್ಬರ ಕಿಸೆಯಿಂದ ಜಾರಿ ನಿಮ್ಮ ಕಿಸೆಗೆ ಜಮಾ ಆಗಿದೆ ಅಂತ ನಾವು ಹೇಳ್ತೇವೆ,ನೀವು ಇಲ್ಲ ಅಂತ ಹೇಳಿ ನೋಡೋಣ.
ನಿಮ್ಮದೂ ಅಂತ ನಿಮ್ಮ ಬಳಿ ಇರೋದು ನಿಮ್ಮ ಶರೀರ ಮಾತ್ರಾ.
ಅದರೊಳಗೆ ಇರಬಹುದು ಎಂದು ನಾವು ಇನ್ನೂ ನಂಬುತ್ತಿರುವ ಆ ನಿಮ್ಮ ಆತ್ಮಸಾಕ್ಷಿ ಕೂಡಾ ನಿಮ್ಮದಲ್ಲ.

20101006

ನಾಲ್ಕು ಸಾಲು
೧.
ರಾಜಕಾರಣದ ಕೊಡು ಕೊಳ್ಳುವಿಕೆಯಲ್ಲಿ
ಸರಕಾರಗಳು
ಬಂದು ಹೋಗುವವು.
ದೇವರಕೋಣೆಯಲ್ಲಿ ಸಂಜೆ ದೀಪ ಇಟ್ಟು
ತಾಯಿ ಮಗುವಿಗೆ
ಪ್ರಾರ್ಥನೆ ಕಲಿಸುವಳು,
ಆಯುಷ್ಯ ಕೊಡು,ಭವಿಷ್ಯ ಕೊಡು,ವಿದ್ಯೆ ಕೊಡು
ಬುದ್ಧಿ ಕೊಡು.

೨.
ರಾಜ್ಯದ ಕೋಟಿ ಜನರಿಗೆ
ರಾಜಕಾರಣ ಗೊತ್ತಿಲ್ಲ
ನೂರು ಜನ ಮಾತ್ರಾ
ಅದಕ್ಕೇ
ರಾಜರಾಗಿ ಮೆರೆಯುವರು
ಇದು ಪ್ರಜಾಸತ್ತೆಯ ಮರೆವು.

೩.
ಕೋಟಿ ರೂಪಾಯಿ ಕೂಡಾ
ಸಾವನ್ನು ಗೆದ್ದು ಬರುವುದಿಲ್ಲ
ಬದುಕನ್ನು
ಜೂಜಿಗಿಟ್ಟು ರಾಜಕಾರಣಿಗಳು
ಅಸ್ತಂಗತರಾಗುವರು
ಗುಡಿಸಲಿನಲ್ಲಿ ಪ್ರಜೆ ಕೂಡಿಟ್ಟ ನಾಣ್ಯ
ಕರಂಡಕದಲ್ಲಿ ಚಲಾವಣೆ ಇಲ್ಲದೇ
ಬಿದ್ದಿರುವುದು.

೪.
ಅವರಿಬ್ಬರ ಪ್ರೀತಿ
ರಾಜಕೀಯದಿಂದಾಗಿ ಹುಟ್ಟಿದರೆ
ಅವರು
ಪ್ರೇಮಿಗಳಲ್ಲ,
ಏಕೆಂದರೆ
ರಾಜಕೀಯ ಹುಟ್ಟುವುದೇ
ಪ್ರೀತಿಯ ನಾಶದಿಂದ.

20101005

ಕಾಗದದ ಹೂವು
ನನ್ನ ಮನೆ ಎದುರು ಕಾಣುವುದು
ಕಾಗದದ ಹೂವಿನ ಗಿಡ.
ಅಪ್ಪ ತಲೆ ಮೇಲೆ ಹೊತ್ತು ತಂದು ಊರಿದ್ದಾರೆ ಎಂದು ಅಮ್ಮ ಹೇಳಿದ ನೆನಪು.
ಎಂದಾದರೂ ಒಂದು ದಿನ ಈ ಗಿಡದಲ್ಲಿ ಹೂವು ಅರಳುತ್ತದೆ
ಎಂದು ಅಪ್ಪ ಕಾದು ಕಾದು ಸತ್ತುಹೋದ.
ನಿತ್ಯವೂ ಪೂಜೆಗೆ ಈ ಗಿಡದ ಹೂವನ್ನು ಹುಡುಕಿ ಹೋದ ಅಮ್ಮ ಮರಳಿ ಬರುವಾಗ ಗೊಣಗುತ್ತಿದ್ದಳು.
ಕಾಗದದ ಹೂವಿನ ಗಿಡದಲ್ಲಿ ಎಲೆಗಳೇ ಹೂವುಗಳು ಎಂದು ಬಾಟನಿ ಕಲಿತ ನನ್ನಕ್ಕ ಹೇಳುತ್ತಿದ್ದುದು
ನನಗೆ ಅರ್ಥವೇ ಆಗಿರಲಿಲ್ಲ.
ಎಲೆ ಹೂವಾಗುವುದು ಹೇಗೆ ಎಂದು ನಾನು ಕೇಳಿದಾಗಲೆಲ್ಲಾ ಅಕ್ಕ
ಚಿವುಟುತ್ತಿದ್ದಳು,ಪೆದ್ದು ಪೆದ್ದು ಎಂದು ಹುಸಿಹುಸಿಯಾಗಿ ಬೈಯುತ್ತಿದ್ದಳು.
ಕಾಗದದ ಹೂವಿನ ಗಿಡ ನಿತ್ಯವೂ ಬಣ್ಣ ಬಣ್ಣ.
ದುಂಬಿಯೇ ಬಂದೆರಗುತ್ತಿರಲಿಲ್ಲ.
ಹೂವಾಗದೇ ಕಾಯಿ ಕಟ್ಟವುದಿಲ್ಲ ಎಂದು ನನಗೆ ಸಂಗಪ್ಪಗದ್ದಪ್ಪ ಮೇಸ್ತರರು ಹೇಳಿಕೊಟ್ಟಿದ್ದರು.
ನಾನು ಅದನ್ನೊಪ್ಪಲೇ ಬೇಕಿತ್ತು.
ಕಾಗದದ ಹೂವಿನ ಗಿಡದಲ್ಲಿ ಮುಳ್ಳುಗಳೂ ಇದ್ದವು.
ಒಂದೊಂದೂ ಮುಳ್ಳು ಮಹಾ ನಂಜು ಎಂದು ನಮ್ಮ ಕೆಲಸದಾಳು ಪದೇ ಪದೇ ಹೇಳುತ್ತಿದ್ದ.
ಆಮೇಲೆ ಒಂದು ದಿನ ರಾತ್ರಿ ನಮ್ಮ ಮನೆಯ ಎದುರಿನ ಧರೆ ಕುಸಿದು ಬಿತ್ತು.
ಕಾಗದದ ಹೂವಿನ ಗಿಡ ಅದರೊಳಗೆ ಹುದುಗಿಹೋಯ್ತು.
ನನಗೆ ಇನ್ನೂ ಉಳಿದಿರುವ ಪ್ರಶ್ನೆ,
ಕಾಗದದ ಹೂವಿನ ಗಿಡವೇಕೆ ಹೂವು ಅರಳಿಸಲಿಲ್ಲ,
ಅಪ್ಪನ ತಾಳ್ಮೆ,ಅಮ್ಮನ ಸಹನೆ,ಅಕ್ಕನ ಲೆಕ್ಕ,ಕೆಲಸದಾಳಿನ ಭಯ
ನನ್ನ ಪ್ರಶ್ನೆಗೆ ಉತ್ತರವಲ್ಲ.

20101003

COMMON-WEALTHಒಬ್ಬ ಜಮೀನ್ದಾರನಿದ್ದ.ಅವನ ಮಗಳ ಮದುವೆ ನಿರ್ಧಾರವಾಗಿತ್ತು.ಮನೆ ಎದುರು ದೊಡ್ಡದಾದ ಚಪ್ಪ ಹಾಕಿಸಿದ.ಕೊಂಬು ವಾಲಗ ತರಿಸಿದ.ಭೂರಿಬೋಜನಕ್ಕೆ ಸರ್ವ ಸಿದ್ಧತೆಯಾಯಿತು.ದಿಬ್ಬಣವೂ ಬಂತು.
ಅಷ್ಟರಲ್ಲಿ ಯಾರೋ ಹೇಳಿದರು,ಮಜ್ಜಿಗೆ ಇಲ್ಲ.ಜಮೀನ್ದಾರನಿಗೆ ಅದರ ನೆನಪಾದುದೇ ಆಗ.ಏನು ಮಾಡೋಣ ಂದು ಗೊತ್ತಾಗಲಿಲ್ಲ.ಪಕ್ಕದೂರಲ್ಲಿ ಅವನ ಗೆಳೆಯರ ಹತಾರು ಮನೆಗಳಿದ್ದವು.ಅವರ ಬಳಿ ಮಜ್ಜಿಗೆ ಇತ್ತು.ಜಮೀನ್ದಾರ ತನ್ನ ಕೆಲಸದಾಳನ್ನು ಅಲ್ಲಿಗೆ ಅಟ್ಟಿದ.ಗಡಿಗೆ ತುಂಬಾ ಮಜಜಿಗೆ ತರುವಂತೆ ಆಜ್ಞಾಪಿಸಿದ.
ಕೆಲಸದಾಳು ಹಾಗೇ ಮಾಡಿದ.ಮಜ್ಜಿಗೆ ಗಡಿಗೆ ತಲೆ ಮೇಲೆ ಹೊತ್ತು ತಂದೇ ತಂದ.ಚಪ್ಪರದ ಬಳಿ ಬರುತ್ತಲೇ ಆಯ ತಪ್ಪಿ ಬಿದ್ದ.ಮಜ್ಜಿಗೆ ಗಡಿಗೆ ಒಡೆದು ಚೂರಾಯಿತು.
ಜಮೀನ್ದಾರ ಚೀ ಥೂ ಎಂದು ಕೆಲಸದಾಳನ್ನು ವಾಚಾಮಗೋಚರ ಬೈಯಲಾರಂಭಿಸಿದ.
ಕೆಲಸದಾಳು ಇದರಿಂದ ಬೇಸರಗೊಂದು ಯಜಮಾನನಿಗೆ ಆವಾಜ್ ಹಾಕಿದ,ಏನು ಸ್ವಾಮಿ,ನಾನು ಇಷ್ಟು ಕಷ್ಟಪಟ್ಟು ಆ ಊರಿಗೆ ಹೋಗಿ,ಮನೆಮನೆ ತಿರುಗಿ, ಮಜ್ಜಿಗೆ ಹೊತ್ತು ತಂದಿದ್ದೇನೆ,ಅದಕ್ಕೆ ಬೆಲೆಯೇ ಇಲ್ಲವಾ? ಎಂದ.
ಜಮೀನ್ದಾರ ಸುಸ್ತೋ ಸುಸ್ತು.
ಅಣ್ಣಾ ನೀನು ಶ್ರಮಪಟ್ಟು ಮಜ್ಜಿಗೆ ತಂದೆ ನಿಜ,ಆದರೆ ಪ್ರಯೋಜನಕ್ಕೆ ಬಂತಾ?ಎಂದು ಜಮೀನ್ದಾರ ಪ್ರತ್ಯೇಕ ಕೇಳಲಿಲ್ಲ.
ಕಾಮನ್‌ವೆಲ್ತ್‌ಗೇಮ್ಸ್ ಎಂಬ ಈ ಮಹಾ ಆಟೋಟದ ಅಖಾಡದೊಳಗೆ ಭಾರತ ನುಸುಳುವ ಹೊತ್ತಿಗೆ ಈ ಕಥೆ ಏಕೋ ತುಂಬಾ ಸೂಟ್ ಆಗಬಹುದು.
ಇದು ಬೇಕಿತ್ತಾ?
ಹಾಗಂತ ಕೇಳುತ್ತಿದೆ ದೇಶ.
ಕಾಮನ್‌ವೆಲ್ತ್ ಗೇಮ್ಸ್‌ಗೆ ಹೋಸ್ಟ್ ಮಾಡಲು ಹೊರಟು ನಮ್ಮ ದೇಶ ತಾನೇ ಟ್ರಾಕ್‌ನಲ್ಲಿ ಪಲ್ಟಿ ಹೊಡೆದು ಹೊರಬಿದ್ದ ಲಾಸ್ಟ್‌ಮ್ಯಾನ್ ಥರಾ ಆಗಿದೆ.
ಇಷ್ಟಕ್ಕೂ ಇದು ನಮ್ಮ ಸ್ಟೈಲ್‌ಗೆ ಹೇಳಿಸಿದ್ದಾ ಎಂದು ಕೇಳಿದರೆ ನಿಜಕ್ಕೂ ಅಲ್ಲ.ಆದರೆ ಏನು ಮಾಡೋಣ ನಮ್ಮ ಗೆಟ್‌ಅಪ್ ಏನು ಎಂದು ನಾವು ತೋರಿಸಬೇಕಿತ್ತು,ತೋರಿಸುತ್ತಿದ್ದೇವೆ..
ಈಗ್ಗೆ ಏಳು ವರ್ಷಗಳ ಹಿಂದೆ ಬಿಡ್ ಹಾಕಿ ನಾವು ಈ ಗೇಮ್ಸ್ ಪಡೆದುಕೊಂಡಾಗಲೇ ಇದು ನಮ್ಮ ತಾಖತ್ತಿಗೆ ಮೀರಿದ್ದು ಎಂದು ಯಾರಿಗೂ ಅರ್ಥವಾಗಲೇ ಇಲ್ಲ.ಮಾಧ್ಯಮಗಳಿಗೂ ಕೂಡಾ.
ಹೋಗಲಿ ಬಿಡಿ,ಈ ಗೇಮ್ಸ್‌ಗೆ ನಾವು ಅದು ಹೇಗೆ ನಾವು ಸಿದ್ಧರಾಗುತ್ತಿದ್ದೇವೆ ಎಂದು ಅದೇ ದೆಹಲಿಯಲ್ಲಿ ಖಾಯಂ ಬಿಡಾರ ಹೂಡಿದ ಪವರ್‌ಸೆಂಟರ್ ಕೂಡಾ ಕೇಳಲಿಲ್ಲ.
ನಮ್ಮಲ್ಲಿ ಎಷ್ಟೊಂದು ಸಚಿವರಿದ್ದಾರೆ.ಕಾಮನ್‌ವೆಲ್ತ್‌ಗೇಮ್ಸ್ ವಿಚಾರದಲ್ಲಿ ಆಗಬೇಕಾಗಿರುವ ಕೆಲಸ ಪ್ರತಿ ಒಬ್ಬ ಸಚಿವನ ವ್ಯಾಪ್ತಿಯಲ್ಲೂ ಇರುತ್ತದೆ.ರಸ್ತೆ,ವಿದ್ಯುತ್,ಕ್ರೀಡಾ ಸಿದ್ಧತೆ,ಕಟ್ಟಡ,ನೈರ್ಮಲ್ಯ,ಆರೋಗ್ಯ,ಆತಿಥ್ಯ,ಸಾರಿಗೆ,ಸಂಪರ್ಕ,ಭದ್ರತೆ,ಲಾನ್ ಲೇನ್.. ಇತ್ಯಾದಿ ಇತ್ಯಾದಿ..
ಅದರೆ ಏನಾದರೂ ಮಾಡಿದರೇ?ಇಲ್ಲ.ಸ್ವತಃ ಪ್ರಧಾನಿ ಕೂಡಾ ಇಷ್ಟು ವರ್ಷಗಳಲ್ಲಿ ಈ ವಿಚಾರದಲ್ಲಿ ಮುಖವೇ ಹಾಕಲಿಲ್ಲ.ಅದೇ ದೆಹಲಿಯಲ್ಲೇ ಇದ್ದೂ ಕೂಡಾ.
ಇದರ ಒಟ್ಟು ತಾತ್ಪರ್ಯವೇ ಈಗ ಆಗಿರುವುದು.
ಮುರಿಯುವ ಸಲಾಕೆಗಳು,ನುಗ್ಗುವ ಹಾವುಗಳು,ಮೂತ್ರಿಸುವ ನಾಯಿಗಳು,ಚಿಗುರದ ಗಿಡಗಳು,ಧೂಳೆಬ್ಬಿಸುವ ರಸ್ತೆಗಳು,ಕೆಸರೆರೆಚುವ ಹೊಂಡಗಳು..ವಾಂತಿ ಮಾಡಿಸುವ ಕಕ್ಕಸುಗಳು,ವಾಸನೆ ಬೀರುವ ಕೊಠಡಿಗಳು..
ನಮ್ಮ ವರ್ಚಸ್ಸಿಗೆ ಆದ ಡ್ಯಾಮೇಜ್ ಇದೆಯಲ್ಲಾ ಅದನ್ನು ತುಂಬಿಕೊಡುವವರು ಯಾರು..ಮನಮೋಹನ್ ಸಿಂಗಾ?ಕಲ್ಮಾಡಿನಾ?ಶೀಲಾ ದೀಕ್ಷಿತ್ತಾ?
ಆಸ್ಟ್ರೇಲಿಯಾದ ಸೆಕ್ಯೂರಿಟಿ ಟೀಮ್ ಬಂದು ಏನು ಸಮಾಚಾರ ನಿಮ್ಮದು ಅಂತ ಕೇಳುತ್ತದೆ.ಬ್ರಿಟನ್ನಿನ ರಾಣಿಗೆ ನಮ್ಮ ರಾಷ್ಟ್ರಪತಿಯೇ ಹೋಗಿ ಆಮಂತ್ರಣ ಕೊಟ್ಟರೂ ನಾನು ಬರಲ್ಲ ಅಂತಾಳೆ..ಯುರೋಪಿನ ಕ್ರೀಡಾಪಟುವೋರ್ವ ನನಗೆ ದೆಹಲಿಯ ಟ್ರಾಕ್‌ನಲ್ಲಿ ಓಡುವುದಕ್ಕೂ ಮುಖ್ಯವಾದುದು ನನ್ನ ಹೆಂಡತಿ ಮಕ್ಕಳಿಗೆ ನಾನು ಉಳಿಯುವುದು ಎನ್ನುತ್ತಾನೆ..
ನಾವು ಮಾತ್ರಾ ಎಲ್ಲಾ ಸರಿ ಮಾಡಿದ್ದೇವೆ ಎಂದು ಹೇಳಹೊರಡುತ್ತೇವೆ,,ಅವರು ನಮ್ಮ ಗ್ರಾಚಾರ ಬಿಡಿಸುವವರಂತೆ ಉಗಿಯುತ್ತಿದ್ದಾರೆ.
ನಮಗೆ ಬೇಕಿತ್ತಾ?
ತುಳುವಿನಲ್ಲೊಂದು ಜನಪದ ಮಾತು ಇದೆ,ಮೂಲೆಯಲ್ಲಿದ್ದ ಕೊಡಲಿಯನ್ನು ಎಳೆದು ಕಾಲಿಗೆ ಹಾಕಿಸಿಕೊಂಡ..
ಈ ಕಾಮನ್‌ವೆಲ್ತ್ ಗೇಮ್ಸ್‌ಗೆ ನಾವು ವ್ಯಯಿಸುತ್ತಿರುವ ದುಡ್ಡು ಎಷ್ಟು ಗೊತ್ತೇ?೩೦ ಸಾವಿರ ಕೋಟಿ ರೂಪಾಯಿ ಅಂತೆ.
ಇದು ಹೇಗೆ ಹೇಳಿದರೂ ಐದಾರು ರಾಜ್ಯಗಳ ವಾರ್ಷಿಕ ಬಜ್ಜೆಟ್ಟು..
ಭಾರತದಂಥ ದೇಶಕ್ಕೆ ಈ ಪಾಟಿ ದುಡ್ಡು ಸುರಿಯಲು ತಾಖತ್ತು ಇದೆ ಎಂದರೆ ಯಾರೂ ಅಚ್ಚರಿಪಡಬಹುದು.ಸ್ವತಃ ನಮಗೇ ಗೊತ್ತಿದೆ ಎಂದೂ ಇದು ನಮ್ಮ ಸಾಮರ್ಥ್ಯ ಅಲ್ಲ ಎಂದು.ಆದರೆ ಜಾಗತಿಕ ಮಟ್ಟದಲ್ಲಿ ನಾವು ಹಲವಾರು ಬಾರಿ ನಮ್ಮದಲ್ಲದ ನಮ್ಮ ವೈಭವವನ್ನು ತೋರಿಸಿಕೊಟ್ಟವರು.ಇನ್ನು ಇದನ್ನು ಬಿಡುತ್ತೇವಾ?
ನಮ್ಮವರೇನು ಸುಮ್ಮನಿರುತ್ತಾರೆಯೇ?ಗ್ರಾಮದೊಳಗೆ ಒಂದು ಮೋರಿ ಕಟ್ಟಿದರೂ ಪರ್ಸಂಟೇಜು ಹೊಡೆಯುವವರು ನಾವು..ಮೂವತ್ತು ಸಾವಿರ ಕೋಟಿ ರೂಪಾಯಿಯಲ್ಲಿ ತಪಸ್ಸಿಗೆ ಕೂರುತ್ತೇವಾ?ಹತ್ತು ಪರ್ಸೆಂಟು ಅಂತ ಕೈ ಮಡಗಿದರೂ ಅನಾಮತ್ತು ಮೂರು ಸಾವಿರ ಕೋಟಿ ರೂಪಾಯಿ ಕಿಸೆಗೆ ಸುರಿದೆವು ಎಂದೇ ಅರ್ಥ.ಯಾರೆಲ್ಲಾ ಬಟ್ಟಲಿಗೆ ಕೈ ಇಟ್ಟಿದ್ದಾರೆ ಎಂದು ಈಗಲೇ ಪಟ್ಟಿ ಬರುತ್ತಿದೆ.
ಮುಂದಿನ ಕಾಮನ್‌ವೆಲ್ತ್ ಗೇಮ್ಸ್ ಸ್ಕಾಟ್‌ಲ್ಯಾಂಡ್‌ನಲ್ಲಿ.೨೦೧೪ ಆಗಸ್ಟ್.ಈಗಲೇ ಗ್ಲಾಸ್ಕೋದಲ್ಲಿ ಕ್ರೀಡಾಗ್ರಾಮ ಸಿದ್ಧವಾಗಿದೆಯಂತೆ.ಟ್ರಾಕ್ ಎಳೆಯುವುದು ಮಾತ್ರಾ ಬಾಕಿ.
ಅವರು ಅನ್ಯತ್ರ ಅಲಭ್ಯ ಎಂಬ ಹಾಗೇ ಸಿದ್ಧತೆ ಮಾಡಿಕೊಂಡಿದ್ದಾರೆ.ಅಲ್ಲಿನ ಸರಕಾರ ಇದನ್ನು ಮಾಡುವುದಕ್ಕಾಗಿಯೇ ಒಂದು ಇಲಾಖೆಯನ್ನೇ ಸಿದ್ಧಮಾಡಿ ಮೂರು ವರ್ಷಗಳೇ ಆಗಿವೆ.
ಇಷ್ಟೆಲ್ಲಾ ಆದ ಮೇಲೂ ನಮ್ಮ ಜನ ಈ ಎಲ್ಲರನ್ನೂ ಕ್ಷಮಿಸಿದ್ದಾರೆ.ಮುಂದಿನ ವಾರದ ಗೇಮ್ಸ್ ನೋಡಲು ಹೆಮ್ಮೆಯಿಂದ ನಿಂತಿದ್ದಾರೆ.ಏಕೆಂದರೆ ನಮ್ಮ ಜನ ಸಾಮಾನ್ಯರು ಯಾವತ್ತೂ ದೇಶಭಕ್ತರು.ಅವರಲ್ಲಿ ಅಗಾಧವಾದ ನೆಲದ ವ್ಯಾಮೋಹ ಇದೆ.ಯಾರೇ ಏನೇ ಮಾಡಿದರೂ ದೇಶದ ಪ್ರೀತಿಗಾಗಿ ಜನ ಅವರನ್ನು ಮನ್ನಿಸುತ್ತಾರೆ.
ಅವರ ಬಳಿ ಇರುವುದು ಮುರಿದ ಮೋರಿಗಳು,ಕುಸಿದ ಕಾಲ್ಸಂಕಗಳು,ದೂಳೆಬ್ಬಿಸುವ ರಸ್ತೆಗಳು,ಒಣಗಿದ ಬಾವಿಗಳು, ಕೊಳೆದ ಪೈರುಗಳು,ಜ್ವರ ಹಿಡಿದ ಮಕ್ಕಳು,ಮುರುಕಲು ಚಾಪೆಗಳು,ಖಾಲೀ ಬಿದ್ದ ಥೈಲಿಗಳು..
ಆಟ ಆಡಿಸುವ ಆಡಳಿತಾರೂಢರಲ್ಲಿ ಮಾತ್ರಾ ಇದು ಯಾವುದೂ ಇಲ್ಲ.ಅವರಿಗೆ ಜನರ ಈ ಗುಣ ಗೊತ್ತೇ ಇದೆ.ಏನೇ ಮಾಡಿದರೂ ನಮ್ಮ ಜನ ಕ್ಷಮಿಸುತ್ತಾರೆ ಅಥವಾ ಮರೆಯುತ್ತಾರೆ ಅಥವಾ ಮನ್ನಿಸುತ್ತಾರೆ ಎಂದೇ ನಮ್ಮವರು ಇಂಥಾ ಗೇಮ್ ಮಾಡಲು ಹೋಗುತ್ತಾರೆ.

20100930

ಉಳಿದದ್ದು ಏನಿಲ್ಲ
ಮಕ್ಕಳು ಮರಳಿನ ಮೇಲೆ
ಊರು ಕಟ್ಟಿದ್ದರು.
ಪಕ್ಕದಲ್ಲಿ ಹರಿಯುತ್ತಿದೆ ನದಿ.
ನದಿಯ ಹರಿವಿಗೆ ಶಾಸನವಿಲ್ಲ
ಅದು ಇತಿಹಾಸದ ಯಾವ ಸಾಕ್ಷ್ಯಗಳನ್ನೂ ಕಟ್ಟಿಕೊಂಡಿರಲಿಲ್ಲ.
ಮಕ್ಕಳು ಕೇಳಿದರು,
ನದಿಯೇ ನೀನು ಎಂದಿನಿಂದ ಹೀಗಿರುವೆ?
ನದಿ ನಕ್ಕಳು,
ನನಗೆ ಗೊತ್ತಿಲ್ಲ.
ಏಕೆಂದರೆ ಪ್ರತೀ ಕ್ಷಣವೂ ಇಲ್ಲಿ ಹರಿಯುವುದು ನಾನಲ್ಲ.
ಮಕ್ಕಳು ಕೇಳಿದರು,
ಹೋ ಹಾಗಾದರೆ ನಿನಗೇನು ಜಾಗ ಇಲ್ಲಿ?
ನೀನೇ ಇಲ್ಲದ ಮೇಲೆ ನೀನು ಇರುವುದು ಎಲ್ಲಿ?
ನದಿ ನಕ್ಕಳು,
ಇದರಲ್ಲಿ ನನ್ನದೇನಿಲ್ಲ.ನಾನು ಪಾತ್ರ ಮಾತ್ರ.
ನೀವು ನೀರನ್ನು ಕೇಳಿನೋಡಿ..
ಮಕ್ಕಳು ನೀರನ್ನು ಹಿಡಿದರು.
ನೀರೇ ನಿನ್ನದೇನು?
ನೀರು ಮಕ್ಕಳ ಬೊಗಸೆಯಲ್ಲಿ ಸೋರುತ್ತಾ ಹೇಳಿತು,
ಮಕ್ಕಳೇ ನನ್ನದಾಯಿತು,ನಾನಿನ್ನು ಹಳಬ.ಹೊಸ ನೀರ ಕೇಳಿ..
ಮಕ್ಕಳು ಹೊಸನೀರು ಎಲ್ಲೆಂದು ಹುಡುಕಿದರು.
ಪ್ರತಿ ಹನಿಯೂ ಹೇಳುತ್ತಿತ್ತು
ನಾನು ಹಳಬ..
ನದಿಯ ಪಾತ್ರದಲ್ಲಿ ನೀರಹನಿಗಳು ಘರ್ಜಿಸುತ್ತಿದ್ದವು.
ಮಕ್ಕಳು ಹೆದರಿ ಓಡಿದರು.
ಮರಳಿನ ಮೇಲೆ ಅವರು ಕಟ್ಟಿದ ಊರನ್ನೇ ತೊರೆದು..
ಆ ಊರಿನಲ್ಲಿ ಬೀದಿಗಳಿದ್ದವು,ತೋಪುಗಳಿದ್ದವು,ಜಾತ್ರೆ ಇತ್ತು,ಸಂತೆ ಬಂದಿತ್ತು
ಗುಡಿಯೊಳಗೆ ದೇವರಿದ್ದ,
ಪಕ್ಕದಲ್ಲಿ ಬೆಟ್ಟದ ಮೇಲೆ ಸೂರ್ಯ ಮುಳುಗುತ್ತಿದ್ದ.
ಮನೆಯ ಹೊರಗೆ ಜಗುಲಿಯಲ್ಲಿ ಅಮ್ಮನ ತೊಡೆ ಮೇಲೆ ಕಂದಮ್ಮ ಜೊಲ್ಲು ಸುರಿಸುತ್ತಾ ನಿದ್ದಿಸುತ್ತಿದ್ದ.
ಅವರ‍್ಯಾರೂ ಮಕ್ಕಳ ಜೊತೆ ಬರಲಿಲ್ಲ.

20100918

ನನ್ನ ಕಾಲ
ಹೇಳದೇ ಹೋದ ಕಾಲವನ್ನು
ನೆನೆಯುತ್ತಾ ಕುಳಿತೆ.
ಅಲ್ಲಿ ಒಂದಿಷ್ಟೂ ಕರುಣೆ ಕಾಣಿಸಲಿಲ್ಲ.
ನನ್ನ ಬಾಲ್ಯದ ದಿನಗಳಲ್ಲಿ
ತಣ್ಣಗೆ ಹರಿಯುತ್ತಿದ್ದ ನೀರಝರಿ
ಈಗ ಬತ್ತಿ,ಅಲ್ಲೇ ಒಣಗಿದ ಪಾಚಿ ಕಂಡೆ,
ಕಾಲವನ್ನು ಕಳುಹಿಸಿದ್ದು ಯಾರು..?
ನನ್ನ ಬಾಲ್ಯವೇ?

ಹೇಳದೇ ಹೋದ ಕಾಲವನ್ನು
ಶಪಿಸುತ್ತಾ ನಿಂತೆ.
ಅಲ್ಲಿದ್ದವಳು ನನ್ನ ಮೊದಲ ಗೆಳತಿ.
ಅವಳಿಗೊಂದು ಮಾತು ಹೇಳಿದ್ದರೆ ನಾನು
ಕಾಲ ನಮ್ಮ ಜೊತೆ ನಿಂತು
ಸಹಕರಿಸುತ್ತಿತ್ತು..?

ಹೇಳದೇ ಹೋದ ಕಾಲವನ್ನು
ದುರುಗುಟ್ಟುತ್ತಾ ನೋಡುತ್ತಿರುವೆ
ನನ್ನ ಶವವವನ್ನು ನೋಡಿ ಹೋಗುವ ನನ್ನ ಜನ
ಅವರಿಗೆ ಮರೆವು ನನ್ನ ನೆನಪಿನಷ್ಟೇ ಕ್ಷಣಿಕ

ಹೇಳದೇ ಹೋಗುವ ಕಾಲ
ನನ್ನ ಸಾವಿನೊಂದಿಗೆ ಮುಗಿಯುವುದೇ?
ಇಲ್ಲ,
ಅದು ಮತ್ತೊಮ್ಮೆ ನನ್ನನ್ನು ಹುಟ್ಟಿಸುವುದಾಗಿ
ಹೆದರಿಸುತ್ತಿದೆ..
ಹುಟ್ಟಲೇ?

20100908

ಬಚ್ಚಾಬಾಜೇ..


ಬಚ್ಚಾಬಾಜೇ..
ಇದು ಅಫಘಾನಿಸ್ತಾನದ ದುರಂತ.
ಅಫಘಾನಿಸ್ತಾನ ಎಂದರೆ ಬರೇ ಬೆಂಗಾಡು.ಆ ನೆಲ ರೂಪಿಸಿದ ಸಂಸ್ಕೃತಿ ತಾಲೀಬಾನ್.ಅಲ್ಲೊಬ್ಬ ಅಧ್ಯಕ್ಷನಿದ್ದ.ಆರೂವರೆ ಅಡಿ ಎತ್ತರದ ಅಸಾಮಿ.ಅವನನ್ನು ಎತ್ತಿಹಾಕಿಕೊಂಡ ತಾಲೀಬಾನಿಗಳು ಸಾರ್ವಜನಿಕವಾಗಿ ನೇತು ಹಾಕಿದ್ದರು.ಅವನ ದೇಹ ಮೂರೂವರೆ ದಿನ ರಸ್ತೆ ಎದುರು ಕಂಬದಲ್ಲಿ ನೇತಾಡುತ್ತಾ ಕೊಳೆದುಬಿತ್ತು.ಅದನ್ನು ನೋಡಿದವರು ಯಾರೂ ಮನುಷ್ಯ ಎಂಬ ಮಹಾಪಾಪಿಯನ್ನು ಒಪ್ಪಲು ಸಾಧವೇ ಇರಲಿಲ್ಲ.
ಆಮೇಲೆ ಹಾದರ ಮಾಡಿದ್ದಾಳೆ ಎಂದು ಮಹಿಳೆಯೊಬ್ಬಳನ್ನು ನಡು ರಸ್ತೆ ಮೇಲೆ ಕೆನ್ನೆಗೆ ಬಂದೂಕು ಮಡಗಿ ಉಡಾಯಿಸುವುದನ್ನೂ ಟೀವಿಯಲ್ಲಿ ನೋಡಿದ್ದಾಯಿತು.
ಇನ್ಯಾರೋ ಮೊಬೈಲ್‌ನಲ್ಲಿ ಅಪಹೃತ ಫಿಲಿಫೈನ್ಸಿಯೋರ್ವನನ್ನು ತಾಲೀಬಾನಿಗಳು ನೇರಾತಿನೇರ ಕತ್ತು ಕೊಯ್ದು ಸಾಯಿಸುವುದನ್ನೂ ತೋರಿಸಿದರು.ಇತ್ತೀಚೆಗೆ ಮನೆಯಿಂದ ಓಡಿದ ಕಾರಣಕ್ಕೆ ಜೈಲು ಸೇರಿದ ಬೀಬಿ ಆಯಿಶಾ ಎಂಬವಳು ಬಿಡುಗಡೆಯಾದ ಮೇಲೆ ತಾಲೀಬಾನಿ ಕೋರ್ಟು ತೀರ್ಪಿನ ಮೇರೆಗೆ ಮುಖ ಕಿವಿ ಕೊಯಿಸಿಕೊಂಡದ್ದನ್ನು ಓದಿದ್ದಾಯಿತು.
ಬುದ್ಧನ ದೊಡ್ಡ ವಿಗ್ರಹವನ್ನು ಬಾಂಬು ಹಾಕಿ ಪುಡಿಮಾಡಿದ ಅಫಘಾನಿಸ್ತಾನದ ಕಂದಹಾರ್‌ನಲ್ಲೇ ನಮ್ಮ ವಿಮಾನವೊಂದು ಒತ್ತೆಗೆ ಸಿಕ್ಕಿ ಫಜೀತಿಯಾಗಿತ್ತು.
ಕಾಡು ಬೆಟ್ಟ ಬೆಂಗಾಡಿನ ಅಫಾಘನಿಸ್ತಾನ ಹಿಂದೊಮ್ಮೆ ನಮ್ಮದೇ ನೆಲವಾಗಿತ್ತು ಎಂದಾಗ ಏಕೋ ಈಗ ನನಗೆ ತುಂಬಾ ಸೇಫ್ ಅನಿಸುತ್ತಿದೆ.ಭಾರೀ ಮಳೆಗೆ ಕೊಡೆಯೊಳಗೆ ಕುಳಿತ ಮಗುವಿನ ಹಾಗೇ.
ಅಫಘಾನಿಸ್ತಾನವನ್ನು ರಿಪೇರಿ ಮಾಡಲು ಹೋಗಿ ರಷ್ಯನ್ನರು ಸಾವಿರ ಸಾವಿರ ಸಂಖ್ಯೆಯಲ್ಲಿ ಸತ್ತರು.ಆಮೇಲೆ ಅವರು ಶಸ್ತ್ರ ಕೆಳಗಿಡಲೇ ಬೇಕಾಯಿತು.ಇದಾದ ಮೇಲೆ ಅಮೆರಿಕನ್ನರು ಬಂದರು.ಮೊನ್ನೆ ಮೊನ್ನೆ ಆಗಸ್ಟ್‌ನಲ್ಲಿ ೭೯ ಮಂದಿ ಸೈನಿಕರನ್ನು ಅಲ್ಲಿನ ತಾಲೀಬಾನಿಗಳು ಮುಕ್ಕಿ ತಿಂದರು ನೋಡಿ,ಅಲ್ಲಿಗೆ ೨೦೪೭ ಮಂದಿ ಅಮೇರಿಕಾ ನೇತೃತ್ವದ ಪಡೆಯ ಸೈನಿಕರು ಅಲ್ಲಿ ಸತ್ತಂತಾಯಿತು,ಸ್ಟಾರ್ಟಿಂಗ್ ಫ್ರಂ ೨೦೦೧ ಅಕ್ಟೋಬರ.ಏನಾದರೂ ಗುಡ್ಡೆ ಹಾಕಿತೇ ಅಮೇರಿಕಾ?ನೋ..ನೇವರ್.
ಬಿನ್‌ಲಾಡೆನ್ ಎಂಬುದು ಇಲ್ಲಿ ಸಂಕೇತ ಮಾತ್ರಾ. ಅಮೇರಿಕಾಗೆ ಇದು ಅರ್ಥವಾಗಿದೆ.ಆದರೆ ಈ ಯುದ್ಧದ ಹಿಂದೆಯೂ ಒಂದು ಮತ್ತು ಇನ್ನೊಂದು ಹಕೀಕತ್ತುಗಳಿವೆ.ಅದು ನಮ್ಮ ನಿಮ್ಮಂಥ ಪಾಪಪಾಂಡುಗಳಿಗೆ ಎಂದೂ ಅರ್ಥವಾಗದು.
ಈಗ ನಾನು ಮತ್ತೆ ಅದೇ ಅಫಘಾನಿಸ್ತಾನಕ್ಕೆ ಬಂದಿದ್ದೇನೆ.
ನಾನು ಹೇಳಬೇಕಾದದ್ದು ಈ ಮಾರಣಹೋಮಗಳ ಬಗ್ಗೆ ಅಲ್ಲ.ಇದು ಬಚ್ಚಾಬಾಜೇ ಬಗ್ಗೆ..
ನಜೀಬುಲ್ಲಾ ಖರೇಶಿ ಎಂಬಾತ ಡ್ಯಾನ್ಸಿಂಗ್ ಬಾಯ್ಸ್ ಆಫ್ ಅಫಘಾನಿಸ್ತಾನ್ ಎಂಬ ಸಾಕ್ಷ್ಯಚಿತ್ರ ನೋಡೊದವರು ಯಾರೂ ಆ ರಾತ್ರಿ ನಿದ್ದೆ ಮಾಡೋದು ಸಾಧ್ಯವಿಲ್ಲ.ಇದು ಒಂದು ಸಂಸ್ಕೃತಿಯ ವಿಕಾರ ಪ್ರದರ್ಶನ.ಇದು ಅಫಘಾನಿಸ್ತಾನದಂಥ ನೆಲದಲ್ಲಿ ನಿಜ.
ಇಲ್ಲಿ ಹುಡುಗಿಯರ ನೃತ್ಯಕ್ಕೆ ನಿಷೇಧವಿದೆ.ಇಸ್ಲಾಂ ಹುಡುಗಿಯರು ಕುಣಿಯುದನ್ನು ಒಪ್ಪಲ್ಲ.ಹಾಗಾದರೆ ಹುಡುಗರು ಕುಣಿಯಬಹುದೇ?
ಅದೇ ಬಚ್ಚಾಬಾಜೇ..
ಅಫಘಾನಿಸ್ತಾನದಲ್ಲಿ iದುವೆಗಳ ಸಂದರ್ಭದಲ್ಲಿ ಬಚ್ಚಾಬಾಜೇ ನಡೆಯುತ್ತದೆ.ಶ್ರೀಮಂತರು ಇದಕ್ಕಾಗಿಯೇ ಹದಿಹರೆಯದ ಹುಡುಗರನ್ನು ಸಾಕುತ್ತಾರೆ.ದೈನೇಸಿ ಕುಟುಂಬದ ಹುಡುಗರು ಸಿಗೋ ಎರಡು ಡಾಲರ್ ಆಸೆಗಾಗಿ ಬರುತ್ತಾರೆ.
ಮದುವೆ ಹಿಂದಿನ ರಾತ್ರಿಯಲ್ಲಿ ಈ ಹುಡುಗರು ಥೇಟ್ ಹುಡುಗಿಯರ ಥರ ಡ್ರೆಸ್ ಮಾಡಿಕೊಂಡು,ಮೊಲೆ ಕೂಡಾ ಕಟ್ಟಿಸಿಕೊಂಡು ಕುಣಿಯುತ್ತಾರೆ.ನಾಚ್ ನಾಚ್..
ತಡ ರಾತ್ರಿ ತನಕ ಸೇರಿದ ಜನ ಈ ಡ್ಯಾನ್ಸ್ ನೋಡಿ ಸುಖಪಡುತ್ತಾರೆ.ಆಮೇಲೆ ಡ್ಯಾನ್ಸ್ ಮುಗಿದು ಹುಡುಗ ಉಡುಗೆ ಕಳಚುವ ಮೊದಲೇ ವಿಕೃತಕಾಮಿಗಳ ಹಾಸಿಗೆ ಸೇರುತ್ತದೆ.ಅಲ್ಲಿ ಆಮೇಲೆ ನಡೆಯೋದು ಗೇ ಸೆಕ್ಸ್..
ಹುಡುಗರನ್ನು ಹೀಗೆ ಬಳಸಿಕೊಂಡು ಮದುವೆ ಹಬ್ಬ ನಡೆಯುತ್ತದೆ.
ಇದು ಅಫಘಾನಿಸ್ತಾನದ ಸಂಸ್ಕೃತಿ.
ಯಾವ ತಾಲೀಬಾನಿಗಳಿಗೂ ಮೀರಿದ್ದು.

20100730

ಗುಂಡ್ಯ ಗಂಡಾಂತರ
ಕಾಡು ಕಡಿಯುತ್ತಾರೆ,ಮಳೆ ಬರುವುದಿಲ್ಲ
ಅಣೆಕಟ್ಟು ಕಟ್ಟುತ್ತಾರೆ ನೀರು ಇರುವುದಿಲ್ಲ
ಒಕ್ಕಲೆಬ್ಬಿಸುತ್ತಾರೆ ಗೌರವ ಇರುವುದಿಲ್ಲ
ಆದರೂ ಯೋಜನೆ ಮಾಡಿಯೇ ಮಾಡುತ್ತಾರೆ.............!
ಜೈಹೋ..
ಹೀಗಂತ ಪಶ್ಚಿಮಘಟ್ಟದ ತಪ್ಪಲಿನಲ್ಲೂ, ಶಿಖರದಲ್ಲೂ ಜನ ಕೈ ಚೆಲ್ಲಿ ಕುಳಿತಿದ್ದಾರೆ.
ಏಕೆಂದರೆ ಗುಂಡ್ಯ ಯೋಜನೆ ಬಂದೇಬಂದಿದೆ.
ಮೊನ್ನೆ ಮೊನ್ನೆ ಕೇಂದ್ರ ಪರಿಸರ ಗುಣಗ್ರಹಣ ಸಮಿತಿ(ಇಎಸಿ)ಗುಂಡ್ಯದಲ್ಲಿ ಅಣೆಕಟ್ಟು ಕಟ್ಟಿ ವಿದ್ಯುತ್ ತರೋದಕ್ಕೆ ತನ್ನದೇನೂ ಅಡ್ಡಿಯಿಲ್ಲ ಎಂದು ಹೇಳಿತು.
ಈ ಬಗ್ಗೆ ಪಶ್ಚಿಮಘಟ್ಟ ತಜ್ಞರ ಪಾನೆಲ್‌ನ ಸಲಹೆ ಕೇಳಿ ಧಾರಾಳವಾಗಿ ಈ ಯೋಜನೆಯ ಬಗ್ಗೆ ಮುಂದುವರಿಯಬಹುದು ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಅದು ಸೂಚಿಸಿತು.
ಅದರೊಂದಿಗೆ ಈ ಯೋಜನೆಯ ವಿರುದ್ಧ ಹೋರಾಡುತ್ತಿದ್ದ ಮೈ ಮನಸ್ಸುಗಳು ಹತಾಶವಾದವು.
ಏಕೆಂದರೆ ಸರಕಾರ ಇನ್ನೇನಿದ್ದರೂ ಗುಂಡ್ಯಯೋಜನೆಗೆ ಗುದ್ದಲಿ ಗುದ್ದುವುದು ಖರೇ.
ಕರ್ನಾಟಕ ವಿದ್ಯುತ್ ನಿಗಮ ಅರ್ಥಾತ್ ರಾಜ್ಯ ಸರಕಾರ ಕೃಪಾಶ್ರಿತ ಸಂಸ್ಥೆ ಗುಂಡ್ಯ ಜಲ ವಿದ್ಯುತ್ ಯೋಜನೆಯ ಜನಕ.ಸರಕಾರಕ್ಕೆ ಈ ಯೋಜನೆ ಬಗ್ಗೆ ಅದೆಂಥ ಆಸಕ್ತಿ ಎಂದರೆ ಐದು ವರ್ಷಗಳ ಹಿಂದೆ ವಿಧಾನಸಭೆಯಲ್ಲಿ ಲಿಖಿತವಾಗಿನ ಸರಕಾರ ಪ್ರಕಟಣೆಯನ್ನೇ ಕೊಟ್ಟಿತ್ತು.
ಎರಡು ಅಣೆಕಟ್ಟುಗಳ ನಿರ್ಮಾಣ,ಮೂರು ಒಡ್ಡುಗಳ ಸ್ಥಾಪನೆ,೧೮ ಕಿಲೋಮೀಟರ್ ಉದ್ದದ ಸುರಂಗ,೩೦೦ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಎಂಬುದು ಆ ಪ್ರಕಟಣೆಯ ಸಾರಾಂಶ.
ಆಳುವವರು ಮುಂದಾಗಿ ಬಂದು ಪಶ್ಚಿಮ ಘಟ್ಟದ ನೆತ್ತಿಯ ಮೇಲೆ ಕೈ ಇಟ್ಟಿದ್ದಾರೆ ಎಂದ ಮೇಲೆ ಕೇಳಬೇಕೇ?
ಉಘೇಉಘೇ..
ಜಗತ್ತಿನ ೧೮ ಅತೀ ಸೂಕ್ಷ್ಮ ಪರಿಸರ ತಾಣಗಳಲ್ಲಿ ಒಂದೆಂದು ಗುರುತಿಸಲ್ಪಟ್ಟ ಪಶ್ಚಿಮ ಘಟ್ಟ ಪ್ರದೇಶವಿದು.ದೇಶದ ಎರಡನೇ ಹಾಟ್‌ಸ್ಪಾಟ್.ಎಲ್ಲೂ ಕಾಣದ ಸಿಂಹಬಾಲದ ಲಂಗೂರ ಇನ್ನು ಇಲ್ಲಿಂದ ನಿರ್ಗಮಿಸಲೇಬೇಕು.ಜಗತ್ತಿನ ಅಪರೂಪದ ಜೀವಸಂಕುಲಗಳು,ಪ್ರಾಣಿ ಇರಲಿ,ಪಕ್ಷಿ ಇರಲಿ,ಮರಗಿಡಗಳೇ ಇರಲಿ,ಎಲ್ಲದಕ್ಕೂ ವಿದಾಯದ ಹೊತ್ತು ಬರಲೇಬೇಕು.
ಸಿಂಗಳಿಕ,ನಾಗರಹಾವು,ಹಾರ್ನ್‌ಬಿಲ್,ಹುಲಿ,ಕಡವೆ,ಕಾಡುಕೋಣ,ಕತ್ತೆಕಿರುಬ,ಕಾಡುಕುರಿ,ಕಬ್ಬೆಕ್ಕುಗಳು ದಿಕ್ಕಾಪಾಲಾಗಲಿವೆ.ಮರಗಿಡ,ಅಪರೂಪದ ಸಸ್ಯಸಂಕುಲಗಳು ಮಕಾಡೆ ಮಲಗುವುದಂತೂ ಇದ್ದೇ ಇದೆ. ಪಶ್ಚಿಮ ಘಟ್ಟ ಹಿಂದೆ ಹೇಗಿತ್ತು ಈಗ ಹೇಗಾಗಿದೆ!
ಈ ಪಶ್ಚಿಮಘಟ್ಟ ಮೂಲರೂಪದಲ್ಲಿದ್ದುದು ೯೯೨೦೦ ಚದರ ಕಿಲೋಮೀಟರು!
ಈಗ ಉಳಿದಿರುವುದು ೮೦೦೦ ಸಾವಿರ ಚದರಕಿಲೋಮೀಟರು ಮಾತ್ರಾ!
ಮನುಷ್ಯ ಜೀವನಕ್ಕಾಗಿ ಅಷ್ಟೆಲ್ಲವನ್ನೂ ದೋಚಿದ್ದಾಗಿದೆ.ಇನ್ನು ಉಳಿದ ಕಿಂಚಿತ್ತನ್ನಾದರೂ ಸುಮ್ಮನಿಡಬಾರದೇ?
ಈ ಕಾಡುಗಳೊಳಗೆ ಇತ್ತೀಚೆಗೆ ಸಿಕ್ಕಿದ್ದು ಇಂಡಿರಾನಾ ಗುಂಡ್ಯಾ ಎಂಬ ದೊಡ್ಡ ಕಪ್ಪೆ.
ಇದು ಜುರಾಸಿಕ್ ಕಾಲದ್ದು ಎಂಬುದು ಉಲ್ಲೇಖನೀಯ.ಹಾಗೆಂದರೆ ಈ ಕಾಡು ಅದೆಷ್ಟು ಕಾಲಘಟ್ಟದ ವೈಭವ ಹೊಂದಿದೆ ಎಂಬುದು ಅರಿವಾದೀತು.
ಈ ಕಾಡಿನೊಳಗೆ ನೂರಾರು ತೊರೆಗಳು ಹರಿಯುತ್ತಿವೆ,ಅದೆಷ್ಟೋ ಜಲಪಾತಗಳಿವೆ.ಎಲ್ಲವೂ ಹೋಗಿ ಸೇರುವುದು ನೇತ್ರಾವತಿ ಮತ್ತು ಕುಮಾರಧಾರೆ ನದಿಗಳೊಳಗೆ.

ಅಂತೂ ಪಶ್ಚಿಮ ಘಟ್ಟದ ಹೊಟ್ಟೆ ಸೀಳುತ್ತಾರೆ. ಕ್ರಶರ್,ಬುಲ್ಡೋಜರ್,ಸಿಡಿಮದ್ದಿನ ದೀಪಾವಳಿ ನಿತ್ಯವೂ ನಡೆಯಲಿದೆ.ಕಗ್ಗತ್ತಲ ಕಾನನದೊಳಗೆ ಮರುಭೂಮಿಯ ನಿರ್ಮಾಣವಾಗುತ್ತದೆ.ಮೈಲಿಗಟ್ಟಲೆ ರಸ್ತೆಗಳು,ಅದರ ಮೇಲೆ ಅಗಾಧ ವಾಹನಗಳು,ಟೌನ್‌ಶಿಪ್ಪು,ಜನ ರ ಓಡಾಟ,ಯಂತ್ರಗಳ ಆರ್ಭಟ ನಿತ್ಯವಿಧಿಯಾಗಲಿದೆ.
ಮುನ್ನೂರಡಿ ನೆಲ ತೋಡಿ ೧೮ ಕಿಲೋಮೀಟರ್ ಸುರಂಗ ಮಾಡುತ್ತಾರೆ.ಅಷ್ಟೂ ಉದ್ದಗಲಕ್ಕೆ ಮೇಲೆ ಭೂಮಿಯಲ್ಲಿ ಏನಾದರೂ ಉಳಿಯುತ್ತದೆ?ಬಾಗೂರು ನವಿಲೆ ಉದಾಹರಣೆ ಪಕ್ಕದಲ್ಲೇ ಇದೆ.
ಅಗಾಧ ಮಣ್ಣು ನಿತ್ಯವೂ ಕೊಚ್ಚಿ ಎಲ್ಲಿಗೆ ಹೋಗಿ ಗುಡ್ಡೆ ಬೀಳುತ್ತದೆ?
ಇಷ್ಟಕ್ಕೂ ಈ ಎಲ್ಲಾ ನದಿ ತೊರೆಗಳನ್ನು ಕಟ್ಟಿ ಹಾಕುತ್ತರಲ್ಲಾ,ಇವೆಲ್ಲಾ ಕರಾವಳಿಗೆ ನೀರುಣಿಸುವ ಜೀವನದಿಗಳಾದ ನೇತ್ರಾವತಿ ಮತ್ತು ಕುಮಾರಧಾರೆಯ ನೀರೇ ಆಗಿವೆ. ಗುಂಡ್ಯ ಯೋಜನೆ ಎಂದರೆ ಎರಡು ಹಂತಗಳ ಯೋಜನೆ.
ಖರ್ಚು ಎರಡು ಹಂತಗಳೂ ಸೇರಿ ಸುಮಾರು ೧೫೦೦ ಕೋಟಿ ರೂಪಾಯಿಗಳು.
ಮೊದಲ ಹಂತದಲ್ಲಿ ೨೦೦ ಮತ್ತು ಎರಡನೇ ಹಂತದಲ್ಲಿ ೧೦೦ ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ.
ಸ್ಥಳ:ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು.
ಎರಡು ಅಣೆಕಟ್ಟುಗಳು ಮತ್ತು ಮೂರು ಒಡ್ಡುಗಳು.
ಎತ್ತಿನಹೊಳೆಗೆ ೧೫ ಮೀಟರ್ ಎತ್ತರದ ಒಡ್ಡು,ಕೇರಿಹೊಳೆಗೆ ೮ ಮೀಟರ್ ಎತ್ತರದ ಒಡ್ಡು ಹೊಂಗದಹಳ್ಳಕ್ಕೆ ೩೬ ಮೀಟರ್ ಎತ್ತರದ ಒಡ್ಡು ಹಾಕಲಾಗುವುದು.
ಬೆಟ್ಟಕುಂಬ್ರಿ ತೊರೆಗೆ ೬೨ ಮೀಟರ್ ಎತ್ತರದ ಅಣೆಕಟ್ಟು ಮತ್ತು ಹೊಂಗದಹಳ್ಳ ನದಿಗೆ ೯೦.೫ ಮೀಟರ್ ಎತ್ತರದ ಅಣೆಕಟ್ಟು ಕಟ್ಟಲಾಗುವುದು.ಹಾಗೇ ೧೩೨ ಮಿಲಿಯನ್ ಕ್ಯೂಬಿಕ್‌ಮೀಟರ್ ನೀರು ಸಂಗ್ರಹದ ಉದ್ದೇಶ.
ಈ ಒಡ್ಡು ಮತ್ತು ಅಣೆಕಟ್ಟುಗಳನ್ನು ಸುರಂಗಗಳ ಮೂಲಕ ಜೋಡಿಸಿ ನೀರನ್ನು ಬೆಟ್ಟಕುಂಬ್ರಿ ಮತ್ತು ಗುಂಡ್ಯಗಳಲ್ಲಿ ಸ್ಥಾಪಿಸಲಾಗುವ ಪವರ್‌ಹೌಸ್‌ಗಳಲ್ಲಿ ಧುಮುಕಿಸಿ ವಿದ್ಯುತ್ ತಯಾರಿಸಲಾಗುವುದು.
ಇದರ ನಿರ್ಮಾತೃ ಕೆಪಿಸಿಎಲ್.
ಪರಿಸರ ಗುಣಗ್ರಹಣ ಸಮಿತಿ ಕೊನೆಗೂ ಗುಂಡ್ಯ ಯೋಜನೆಗೆ ಯೆಸ್ ಎಂದಿದೆ.
ಆದರೆ ಅಲ್ಲಿಗೆ ಕೆಲವೊಂದು ಶರತ್ತುಗಳು ಇವೆ.
೨೦೦೮ ರಿಂದ ಮೂರು ಬಾರಿ ಈ ಯೋಜನೆ ಈ ಕಮಿಟಿಯ ಮುಂದೆ ಬಂದಿದೆ.ಎರಡು ಬಾರಿಯೂ ಕಮಿಟಿ ಇದಕ್ಕೆ ಸೈ ಎನ್ನಲಿಲ್ಲ.ಮೂರನೇ ಬಾರಿ ಕಮಿಟಿ ಈ ಯೋಜನೆಯ ಭೂಮಿ ವಿಚಾರದಲ್ಲಿ ತನ್ನ ಸಂಶಯಗಳನ್ನು ವ್ಯಕ್ತಪಡಿಸಿತು.ಕಳೆದ ಡಿಸೆಂಬರ ತಿಂಗಳಲ್ಲಿ ಈ ಕಮಿಟಿಯ ತಂಡವೊಂದು ಸೈಟ್‌ಗೆ ಭೇಟಿ ನೀಡಿತು.ಈ ಯೋಜನೆಯ ಭೂಮಿ ಪಡೆದುಕೊಳ್ಳುವ ವಿಚಾರದಲ್ಲಿ ಕೆಪಿಸಿಎಲ್ ನಿರ್ಧಾರ ಸರಿ ಇಲ್ಲ ಎಂದು ಕಮಿಟಿ ಸ್ಪಷ್ಟವಾಗಿ ಹೇಳಿತು.ಉದಾಹರಣೆಗೆ ಹೊಂಗದಹಳ್ಳ ಅಣೆಕಟ್ಟು ಭಾಗದಲ್ಲಿನ ಮುಳುಗಡೆಯೂ ಸೇರಿದಂತೆ ಅಗತ್ಯವಿರುವ ಭೂಮಿ ಕಂದಾಯ ಅಥವಾ ಖಾಸಗಿ ಜಮೀನು ಎಂದು ಕೆಪಿಸಿಎಲ್ ಹೇಳಿತ್ತು.ಆದರೆ ಅದು ಸುಳ್ಳು ಎಂದು ಕಮಿಟಿ ಹೇಳಿದೆ.ಆ ಭೂಪ್ರದೇಶ ಪಕ್ಕಾ ಅರಣ್ಯ ಎಂಬುದನ್ನು ಅದು ಕೆಪಿಸಿಎಲ್‌ಗೆ ತಿಳಿಸಿ ಹೇಳಿದೆ.
ಆಮೇಲೆ ಹೊಂಗದಹಳ್ಳ ಅಣೆಕಟ್ಟು ವಿಚಾರವನ್ನು ಯೋಜನೆಯಿಂದ ಕೈ ಬಿಟ್ಟು ಈ ಸಮಿತಿ ಯೋಜನೆಗೆ ಸೈ ಎಂದು ಹೇಳಿದೆ.ಹಾಗೇ ಮಾಡುವುದರಿಂದ ಗುಂಡ್ಯ ಯೋಜನೆಗೆ ಬೇಕಾದ ಭೂಮಿ ೧೦೪೧ ಹೆಕ್ಟೇರ್‌ನಿಂದ ೪೮೦ ಹೆಕ್ಟೇರ್‌ಗೆ ಇಳಿಯಿತು ಎಂದು ಅದು ಸಮಾಧಾನಪಟ್ಟಿದೆ.
ಮತ್ತು ಈ ವಿಚಾರದಲ್ಲಿ ಡಾ.ಮಾಧವ ಗಾಡ್ಗೀಲ್ ನೇತೃತ್ವದ ಪಶ್ಚಿಮಘಟ್ಟ ತಜ್ಞರ ಪಾನೆಲ್‌ನ ಅಭಿಪ್ರಾಯ ಪಡೆದು ಮುಂದುವರಿಯುವಂತೆ ಅದು ಸಲಹೆ ಮಾಡಿದೆ.

ಇದು ಹೇಗೆಂದರೆ ಮನೆ ನಿಮ್ಮದೇ,ಆದರೆ ಚಾಪೆ ಲೋಟಾ ಮುಟ್ಟಬಾರದು ಎಂದ ಹಾಗೇ.
ಹೊಂಗದಹಳ್ಳ ಜಲಾಶಯ ನಿರ್ಮಾಣವನ್ನು ಕೈಬಿಡಬೇಕು ಎಂದು ತಾಕೀತು ಮಾಡಿದೆ ಈ ಸಮಿತಿ.
ಆದರೆ ಹೊಂಗದಹಳ್ಳ,ಕೀರಿ ಮತ್ತು ಎತ್ತ್ತಿನಹಳ್ಳ ನದಿಗಳಿಗೆ ಒಡ್ಡುಗಳನ್ನು ಕಟ್ಟಿ,ಸುರಂಗದ ಮೂಲಕ ನೀರು ಸಾಗಿಸಿ,ಹೋರಿ ಬೆಟ್ಟದ ಬಳಿ ಪವರ್‌ಪ್ರಾಜೆಕ್ಟಿಗೆ ತಂದೊಡ್ಡುತ್ತಾರಲ್ಲಾ,ಆ ಬಗ್ಗೆ ಯಾರೂ ಚಕಾರವೆತ್ತಿಲ್ಲ.ಪ್ರಾಕೃತಿಕವಾಗಿ ಹರಿಯುವ ನೀರ ತೊರೆಗಳನ್ನು ಅಡ್ಡ ಮಾಡಿ ಎಲ್ಲಿಗೋ ತಮ್ಮ ಅಪ್ಪಣೆಯಂತೆ ಹರಿಸಿದರೆ,ಈ ನೀರನ್ನೇ ನಂಬಿದ ಜೀವ ಸಂಕುಲಕ್ಕೆ ಯಾರು ಎಲ್ಲಿಂದ ನೀರುಣಿಸಬೇಕು ಎಂಬ ಬಗ್ಗೆ ಕಮಿಟಿ ನೋ ಕಮೆಂಟ್ಸ್.
ಆಮೇಲೆ ಈ ಯೋಜನೆಗಾಗಿ ೪೮೦ ಹೆಕ್ಟೇರ್ ಮಳೆಗಾಡನ್ನು ಕಡಿದು ನಾಶ ಮಾಡುತ್ತೇವಲ್ಲಾ ಆ ಘೋರ ಪರಿಣಾಮವನ್ನು ತುಂಬುವುದು ಸಾಧ್ಯವೇ ಎಂದರೂ ಅದಕ್ಕೆ ಉತ್ತರವಿಲ್ಲ.
೧೮ ಹಳ್ಳಿಗಳು ಮುಳುಗಿಹೋಗುತ್ತವೆ,ಎಲ್ಲಾ ಸೇರಿದರೆ ಸಾವಿರ ಕುಟುಂಬಗಳು ಗುಳೇ ಹೋಗುತ್ತವೆ.ಅವರ ಗತಿ ಏನು ಎಂದರೆ ಮೌನ.
ಎಲ್ಲಾ ಕೆಲಸ ಮುಗಿದ ಮೇಲೆ ದಕ್ಷಿಣಕನ್ನಡಕ್ಕೆ ನೇತ್ರಾವತಿ ಮತ್ತು ಕುಮಾರಧಾರೆ ನೀರು ಹೊತ್ತು ತರುವ ಶಕ್ತಿಯನ್ನೇ ಕಳೆದುಕೊಂಡಿರುತ್ತವೆ.ಏಕೆಂದರೆ ಅದರ ಉಪನದಿಗಳೆಲ್ಲಾ ಮುಖ ತಿರುಗಿಸಿವೆ.
ಬ್ರಹ್ಮಗಿರಿ,ಪುಷ್ಪಗಿರಿ,ಬಿಸಿಲೆ ವನ್ಯಧಾಮಗಳು ಸೀಳಿಹೋಗಿ ಸಂಪರ್ಕವನ್ನೇ ಕಡಿದುಕೊಳ್ಳುತ್ತವೆ.
ಇಷ್ಟೆಲ್ಲಾ ಮಾಡಿದ ಮೇಲೆ ಕೊನೆಗೂ ವಿದ್ಯುತ್ ತಯಾರಿಸುವುದು ಮಳೆಗಾಲದಲ್ಲಿ ಮಾತ್ರಾ ಎನ್ನುತ್ತದೆ ಸರಕಾರ.
ಏಕೆಂದರೆ ಬೇಸಗೆಯಲ್ಲಿ ನೀರೇ ಇಲ್ಲವಲ್ಲ.
ಮಳೆಗಾಲದ ಮಟ್ಟಿಗೆ ಕರೆಂಟು ತರಲು ಈ ಪಾಟಿ ಅನ್ಯಾಯ ಮಾಡಬೇಕೇ ಎಂಬುದು ಪ್ರಶ್ನೆ.
ಇಷ್ಟಕ್ಕೂ ವಿದ್ಯುತ್‌ಬೇಡವೇ ಎಂದು ಕೇಳುವವರಿಗೆ ಪಶ್ಚಿಮಘಟ್ಟ ಬೇಡವೇ ಎಂದು ಕೇಳಿದರೆ ಉತ್ತರ ಸಿಗುವುದಿಲ್ಲ..!
ಮೂರು ಒಡ್ಡು,ಎರಡು ಅಣೆಕಟ್ಟು.ಒಟ್ಟಾಗಿ ಆಗುವುದು ಪರಿಸರಕ್ಕೆ ಡಿಸ್ಟರ್ಬು.
ಹರಿಯುವ ನೀರನ್ನು ಹಿಡಿದಿಟ್ಟು ವಿದ್ಯುತ್ ತಯಾರಿಸುತ್ತಾರೆ.ನಗರಗಳು ಝಗಮಗಿಸುತ್ತವೆ.
ಕಾಡಿನ ಬದುಕಿಗೆ ಮಾತ್ರಾ ನಿತ್ಯವೂ ಕತ್ತಲೆಯೇ.

20100710

ಕಣ್ಣು ಕಾಣುವ ಹಾಗೇಕಣ್ಣುಗಳೇ ನಿಮಗೆ ವಂದನೆ..
ಹುಟ್ಟಿದೊಡನೆ ಮುಚ್ಚಿಕೊಂಡು
ಅರೆ ಕಾಲ ಈ ಲೋಕದ ಸಸ್ಪೆನ್ಸ್ ಉಳಿಸಿಕೊಟ್ಟದ್ದಕ್ಕೆ.
ಹಾಗೆ ನೀವು ತೆರೆಯದೇ ಇದ್ದ ಕಾರಣಕ್ಕೆ ನನಗೆ ಮೊದಲು ಕಂಡದ್ದು ನನ್ನ ಅಮ್ಮ.
ಇಲ್ಲವಾದರೆ ನಾನು ಕಾಣಬೇಕಿತ್ತು ಆ ದಾದಿಯ ಮೊಮ್ಮ
ಅಥವಾ ಆ ಡಾಕ್ಟರನ ಕರ್ಮ.
ಕಣ್ಣುಗಳೇ ನನಗೆ ಅಕ್ಷರವ ಕಾಣಿಸಿದ್ದು ನೀವು.
ನೀವು ಅವುಗಳನ್ನು ಕಾಣಿಸಿದ್ದಕ್ಕೆ ತಾನೇ ನಾನು ಇಂದು ಕವಿಯಾಗಿರುವುದು
ಪಂಡಿತನಾಗಿರುವುದು
ಪಾರಂಗತನಾಗಿರುವುದು
ಇಷ್ಟೆಲ್ಲಾ ಜ್ಞಾನ ಎಂಬ ಲೊಳಲೊಟ್ಟೆಯನ್ನು ಕಟ್ಟಿಕೊಂಡಿರುವುದು
ಕಾಯಿಲೆಗಳಿಗೆ ಹೆದರುವುದು
ಅಮ್ಮನ್ನು ಗದರುವುದು
ಅಪ್ಪನಿಗೆ ಏನೇನೂ ನಾಲೇಜು ಇಲ್ಲ ಎಂದು ಬೈಯುವುದು
ಅಮೇರಿಕಾವೇ ಸ್ವರ್ಗ ಎಂದು ನಂಬಿರುವುದು.
ಕಣ್ಣುಗಳೇ ನೀವು ನನಗೆ ಕಾಡನ್ನು ತೋರಿಸಿದಿರಿ.
ಹಾಗಾಗಿ ನನಗೆ ಬೆಂಗಾಡು ಸುಡುಸುಡು ಎನಿಸುವುದು
ಹಕ್ಕಿಗಳ ಪುಕ್ಕದಲ್ಲಿ ಕೆತ್ತಿದ ಶಿಲ್ಪ ಕಾಣುವುದು
ಕಣ್ಣುಗಳೇ ನನಗೆ ಬಾನನ್ನು ಕಾಣಿಸಿದಿರಿ
ನಕ್ಷತ್ರಗಳನ್ನು ಹೆಕ್ಕಿ ತಾ ಎಂದು ದೃಷ್ಟಿಯ ಜೊತೆ ಸವಾಲನ್ನು ಹುಟ್ಟಿಸಿದಿರಿ
ಅದಕ್ಕೇ ತಾನೇ ನಾನು ಈಗಲೂ ರಾತ್ರಿ ಕತ್ತಲಿನ ಜೊತೆ ಪಲ್ಲಂಗ ಏರುವುದು
ಹಗಲಿನ ಸೂರ್ಯನ್ನು ಸಮುದ್ರಕ್ಕೆ ದೂಡುವುದು
ಕಣ್ಣುಗಳೇ ನನಗೆ ಹುಡುಗಿಯರ ಚೆಲುವನ್ನು ಕಲಿಸಿದಿರಿ
ಅದಕ್ಕಾಗಿಯೇ ನಾನು ಪ್ರೀತಿಯನ್ನು ಶೂನ್ಯದಿಂದ ಕದ್ದೆ
ಎದೆಯೊಳಗೆ ಗುಡಾರವನ್ನು ಇಟ್ಟೆ
ಚಪ್ಪರದ ಮಲ್ಲಿಗೆಯಲ್ಲಿ ಪರಿಮಳವನ್ನು ಮೆದ್ದೆ.
ಕಣ್ಣುಗಳೇ ದೇವರನ್ನು ನೀವು ಕಾಣಿಸುವಿರಾ?
ಮುಚ್ಚಿ ಕೂರುವೆನು ಅವನನ್ನು ಕರೆದು ತರುವಿರಾ?
ಕಣ್ಣುಗಳೇ ನೀವು ಇರದೇ ಹೋಗಿದ್ದರೆ
ನಾನು
ಕತ್ತಲಲ್ಲಿ ಸಿಗುವುದನ್ನು ಪಡೆಯಬಹುದಿತ್ತು.
ಬೆಳಕಿನ ಸುಳ್ಳನ್ನು ಕಳೆದುಕೊಳ್ಳಬಹುದಿತ್ತು.

20100629

ತಾಷ್ಕೆಂಟ್‌ನಲ್ಲಿ ಒಂದು ಸಂಜೆ‘ನಮಗಿಂತ ಇವರೇ ವಾಸಿ’ - ಹಾಗೆಂದರು ಪ್ರಣೋಯ್.
ಬಾಲ್ಡಿ ತಲೆಯ, ತೂಗಿದರೆ ನೂರಾಮೂವತ್ತು ಕಿಲೋ ಇರಬಹುದಾದ ಈ ಪ್ರಣೋಯ್ ಹೇಳಿದ ಮಾತು ತೀರಾ ನಿಜವೆನಿಸಿತು.
ಇವರು ಲಾಲಬಹಾದ್ದೂರ್ ಶಾಸ್ತ್ರಿ ನೆನಪಿಗೆ ಸುಂದರ ಸ್ಮಾರಕ ಕಟ್ಟಿದ್ದಾರೆ, ಬನ ನಿರ್ಮಿಸಿದ್ದಾರೆ, ಮ್ಯೂಸಿಯಂ ಮಾಡಿದ್ದಾರೆ, ಶಾಲೆ ತೆರೆದಿದ್ದಾರೆ, ರಸ್ತೆಗೂ ಹೆಸರು ಮಡಗಿದ್ದಾರೆ.
ಉಜ್ಬೇಕಿಗಳ ಔದಾರ್ಯವೇ ಅಂಥದ್ದು. ಅವರು ಒಂಥರಾ ಪೀಪಲ್ಸ್ ಫ್ರೆಂಡ್ಲೀ ಎಂದರು ಪ್ರಣೋಯ್. ಔಟ್‌ಲುಕ್ ಪತ್ರಿಕೆಯ ‘ವಿದೇಶಾಂಗ ವ್ಯವಹಾರ’ದ ಜವಾಬ್ದಾರಿ ಹೊತ್ತ ಪ್ರಣೋಯ್ ಸದಾ ಪರದೇಸಿ. ಜಗತ್ತಿಗೆ ಗಿರಕಿ ಹೊಡೆಯುತ್ತಲೇ ಇರುತ್ತಾರೆ. ಪ್ರತಿ ದೇಶದ ಜನ-ಮನಗಳನ್ನು ಅಳೆದು ತೂಗಿ, ತಮ್ಮ ತರ್ಕಕ್ಕೆ ಕಟ್ಟಿಕೊಡಬಲ್ಲ ಅನುಭವಸಾರ ಅವರಲ್ಲಿದೆ.
ಎಸ್.ಎಂ.ಕೃಷ್ಣ ತಮ್ಮ ಜತೆ ಪ್ರಣೋಯ್ ಅವರನ್ನು ಕೂರಿಸಿಕೊಂಡು ಮಾತಿಗಿಳಿದರು ಎಂದರೆ ಗಂಟೆಗಳ ಮೇಲೆ ಗಂಟೆ ಸಾಗುತ್ತದೆ.
ಹಾಗೇ ಮಾತನಾಡುತ್ತಾ, ಮಾತನಾಡುತ್ತಾ ನಾವು ಇಳಿದದ್ದು ತಾಷ್ಕೆಂಟ್ ಮಹಾನಗರದೊಳಗೆ.
ಅದು ಉಜ್ಬೇಕಿಸ್ತಾಸನದ ರಾಜಧಾನಿ. ಇಂದಿಗೂ ತಾಷ್ಕೆಂಟ್ ಎಂದರೆ ರಷ್ಯಾ ಎಂದೇ ಜಗತ್ತು ಕರೆಯುತ್ತದೆ. ರಷ್ಯಾದ ಜೀವ ಜಾಲದಲ್ಲಿ ತಾಷ್ಕೆಂಟ್ ಇಂದಿಗೂ ಉಳಿದೇ ಇದೆ. ಸೋವಿಯತ್ ಒಕ್ಕೂಟದಲ್ಲಿ ತಾಷ್ಕೆಂಟ್ ಎರಡನೇ ರಾಜಧಾನಿ.
ಉಜ್ಬೇಕಿಸ್ತಾನದ ರಾಜಧಾನಿಯಾದದ್ದು ಈ ತಾಷ್ಕೆಂಟ್ ೧೯೯೧ ರಲ್ಲಿ. ಸೋವಿಯತ್ ಗಣರಾಜ್ಯ ಸೀಳಿಕೊಂಡು ರೂಪುಗೊಂಡ ಉಜ್ಬೇಕಿಸ್ತಾನ್ ಸ್ವತಂತ್ರ ದೇಶವಾಗಿ ಇನ್ನೂ ಇಪ್ಪತ್ತು ವರ್ಷಗಳಾಗಿಲ್ಲ.
ಅಷ್ಟರಲ್ಲೇ ಈ ದೇಶವನ್ನು ಬಲವತ್ತರವಾಗಿ ಕಟ್ಟಲಾಗಿದೆ, ಯಾರ ಹಂಗೂ ಇಲ್ಲದೇ.
ಅದಕ್ಕೆ ಕಾರಣ ಬದಲಾದ ಕಾಲಘಟ್ಟ, ಹೊಸ ಚಿಂತನೆಗಳ ಯುವಜನಾಂಗ ಮತ್ತು ಇಸ್ಲಾಂ ಕರಿಮೋವ್ ಎಂಬ ಸರ್ವಾಕಾರಿ.
ಈ ಉಜ್ಬೇಕಿಸ್ತಾನ ಡಬ್ಬಲ್ ಲ್ಯಾಂಡ್ ಲಾಕ್ಡ್ ದೇಶ ಎಂದು ಕರೆಯುತ್ತಾರೆ. ಅಂದರೆ ಸಮುದ್ರದ ಬಳಿ ಹೋಗಲು ಎರಡು ದೇಶಗಳ ಗಡಿ ದಾಟಲೇ ಬೇಕು. ಇಂಥ ಸನ್ನಿವೇಶ ಅಪರೂಪ. ಕೈಗೆಟಕುವ ದೂರದಲ್ಲಿ ಕ್ಯಾಸ್ಪಿಯನ್ ಸಮುದ್ರವಿದ್ದರೂ, ಅಲ್ಲಿಗೆ ಉಜ್ಬೇಕಿಸ್ತಾನ್ ಪ್ರಜೆಗಳು ಒಂಥರಾ ಡಬ್ಲೀ ಲ್ಯಾಂಡ್ ಲಾಕ್ ಆದ ಹಾಗಿದ್ದಾರೆ. ವಿಸ್ತೀರ್ಣದಲ್ಲಿ ಜಗತ್ತಿಗೆ ೫೬ ನೇ ಸ್ಥಾನ, ಜನಸಂಖ್ಯೆಗೆ ೪೨ನೇ ಮಾನ. ಕಜಕ್‌ಸ್ತಾನ, ತುರ್ಕ್‌ಮೆನಿಸ್ತಾನ್, ಕಿರ್‌ಗಿಸ್ತಾನ್, ಅಪಘಾನಿಸ್ತಾನ್‌ಗಳೆಲ್ಲಾ ಸುತ್ತಲೂ ಸುತ್ತುವರಿದಿದೆ. ಕೃಷಿ ಪ್ರದೇಶ ಅಂತ ಇರೋದು ನೂರಕ್ಕೆ ಹತ್ತು ಪಾಲು. ಉಳಿದದ್ದು ಮರು‘ಮಿ, ಬೆಟ್ಟಗಾಡು. ವರ್ಷಕ್ಕೆ ಹತ್ತಿಂಚು ಮಳೆ ಬಿದ್ದರೆ ಅದೇ ದೊಡ್ಡದು. ಹೆಚ್ಚೂ ಕಡಿಮೆ ೪.೫೦ ಲಕ್ಷ ಚದರ ಕಿ.ಮೀ. ವಿಸ್ತಾರದ ಈ ದೇಶದಲ್ಲಿ ಮೂರು ಕೋಟಿ ಜನಸಂಖ್ಯೆ. ಹೆಚ್ಚಿನವರು ಅಂದರೆ ಶೇಕಡಾ ೯೦ ರಷ್ಟು ಮಂದಿ ಮುಸ್ಲಿಮರು. ಅವರೆಲ್ಲಾ ಉಜ್ಬೇಕಿಗಳು ಅಥವಾ ರಷ್ಯನ್ನರು.
ಸೋವಿಯತ್ ಗಣರಾಜ್ಯದ ಗ್ರಿಪ್ಪಿನಲ್ಲಿ ಶತ ಶತಮಾನಗಳ ಕಾಲ ಇದ್ದ ಕಾರಣವೇ ಇರಬೇಕು ಇಲ್ಲಿ ಬದುಕು ಮೊದಲು. ಉಳಿದದ್ದೆಲ್ಲಾ ನಂತರ. ಸುನ್ನಿ ಮುಸ್ಲಿಮರೇ ಬಹುಸಂಖ್ಯೆಯಲ್ಲಿದ್ದರೂ, ಕಟ್ಟರ್ ಇಸ್ಲಾಂ ಧರ್ಮದ ಯಾವ ಕುರುಹುಗಳೂ ಇಲ್ಲಿ ಕಾಣಿಸುವುದಿಲ್ಲ. ಅಲ್ಲಲ್ಲಿ ಒಂದೊಂದು ಮಸೀದಿಗಳಿವೆ. ಸರಕಾರವೇ ೧೯೯೧ ರ ಬಳಿಕ ಕಟ್ಟಿಸಿದ್ದು. ಅವುಗಳಿಗೆ ಮೌಲ್ಯಗಳನ್ನು ಸರಕಾರವೇ ನೇಮಕ ಮಾಡುತ್ತದೆ.
‘ನಾವು ಸ್ವತಂತ್ರರಾಗುವ ಮುನ್ನ ಮಸೀದಿ-ಮಿನಾರುಗಳೇ ಇರಲಿಲ್ಲವಂತೆ’ ಎಂದ ನಮ್ಮ ದುಭಾಷಿ ಮುಮೆನ್ ತೊರಾಯ್. ನಾವು ಹುಬ್ಬೇರಿಸಿದೆವು.
‘ಹೌದು, ಇರಲೇ ಇಲ್ಲ. ಇದ್ದ ಮಸೀದಿ, ಮದರಸಗಳೆಲ್ಲಾ ಗೋದಾಮುಗಳಾಗಿದ್ದವು. ಏಕೆಂದರೆ ೧೯೯೧ ರ ತನಕ ಇಲ್ಲಿ ‘ಧರ್ಮಾಚರಣೆ ನಿಷಿದ್ಧವಾಗಿತ್ತು. ಅದು ಶುರುವಾದದ್ದೇ ಆ ಮೇಲೆ, ಅಲ್ಪಸ್ವಲ್ಪ ಅಷ್ಟೇ’ ಎಂದ ಮುಮೆನ್.
‘ಇದೊಂದು ಪಕ್ಕಾ ಸೆಕ್ಯುಲರ್ ಕಂಟ್ರೀ ಕಣ್ರೀ. ಇಲ್ಲಿ ಧರ್ಮ ಎನ್ನೋದು ಖಾಸಗೀ. ಅದೇ ನಮ್ಮ ಅದೃಷ್ಟ’ ಎಂದ ಮುಮೆನ್ ಎರಡು ದಂ ಸಿಗರೇಟು ಹೊಗೆ ಬಿಟ್ಟ.
‘ನನ್ನ ಅಪ್ಪನ ಕಾಲದಲ್ಲಿ ರಮ್ಜಾನ್ ಉಪವಾಸ ಏನಾದರೂ ಮಾಡಿದ್ದು ಗೊತ್ತಾದರೇ ಅಷ್ಟೇ ಅಂತೆ. ಶಾಲೆ ಮಕ್ಕಳಿಗೆ ಆಗ ಸರಕಾರವೇ ಆ ದಿನಗಳಲ್ಲಿ ಬಲಾತ್ಕಾರ ಊಟ ಹಾಕುತ್ತಿತ್ತಂತೆ. ಉಪವಾಸ ಕುಳಿತ ಆಫೀಸರುಗಳು ಅಮಾನತಾಗುತ್ತಿದ್ದರಂತೆ...’ ಮುಮೆನ್ ಪ್ರವಚನ ನೀಡುವವನಂತೆ ನಮಗೆ ವಿವರಿಸುತ್ತಿದ್ದ.
ತಾಷ್ಕೆಂಟ್‌ನ ಬೀದಿಗಳೆಲ್ಲಾ ಅಡ್ಡಾಡಿ ಬಂದಾಗ ಮುಮೆನ್ ಹೇಳಿದ್ದಕ್ಕೆ ಆಧಾರಗಳು ಕಾಣಿಸುತ್ತಿದ್ದವು. ಇಲ್ಲಿ ಎಲ್ಲವೂ ಬಿಂದಾಸ್, ಬಿಂದಾಸ್. ಧರ್ಮ ಟ್ರೂಲೀ ಪರ್ಸನಲ್.
ಉಜ್ಬೇಕಿ ಹೆಣ್ಮಕ್ಕಳು ಪರ್ದಾ ಹಾಕುವುದಿಲ್ಲ. ಒಂದೇ ಒಂದು ಬುರ್ಖಾ ಕಾಣಿಸಲಿಲ್ಲ. ಬುರ್ಖಾ ಬಿಡಿ, ತಲೆ ಮೇಲೆ ಬಟ್ಟೆ ಹಾಕೋ ಪದ್ಧತಿಯೂ ಇಲ್ಲಿಲ್ಲ.
‘ಮಸೀದಿಗಳಲ್ಲಿ ಲೌಡ್ ಸ್ಪೀಕರ್ ನಿಷಿದ್ಧ’ ಎಂದ ಮುಮೆನ್. ಯಾಕೆ ಎಂದರೆ ಮತ್ತದೇ ಹೇಳಿದ,
‘ನಿಮ್ಮ ಪ್ರಾರ್ಥನೆ ನಿಮ್ಮದು ಮಾತ್ರಾ’
------------------------------------------------------------
ಉಜ್ಬೇಕಿ ಹುಡುಗಿಯರು ಬಲುಚೆಂದ. ಪುಟ್ಟ ಪುಟ್ಟ ಮಕ್ಕಳಿಂದ ತೊಡಗಿ ಮಧ ವಯಸ್ಕಮಹಿಳೆ ತನಕ ಒಬ್ಬೊಬ್ಬರದ್ದು ಒಂದೊಂದು ಚೆಂದ. ಅದನ್ನು ನೋಡುವುದೇ ಪರಮಾನಂದ. ಮಿಡಿ, ಫ್ರಾಕ್, ಜೀನ್ಸ್, ಟೀ ಶರ್ಟ್ ಸರ್ವತ್ರ ಸಾಧನಂ. ಸ್ಲೀವ್‌ಲೆಸ್ ಕಡ್ಡಾಯವೇನೋ ಎಂಬಷ್ಟು ವ್ಯಾಪಕ. ಯಾವ ಬಾರ್, ಹೋಟೇಲುಗಳಿಗೆ ಹೊಕ್ಕರೂ ಕಾಣಿಸೋದು ಓನ್ಲೀ ಗರ್ಲ್ಸ್. ಮಾಣಿಗಳ ಸ್ಥಾನದಲ್ಲಿ ಇರೋದು ಕೂಸುಗಳೇ. ರೂಂ ಬಾಯ್ಸ್ ಅಂತ ಒಬ್ಬರು ಸಿಗಲಾರರು ಮುಮೆನ್ ತೊರಾಯ್ ಉವಾಚ,
‘ನಮ್ಮದು ಆತಿಥ್ಯಕ್ಕೆ ಹೆಸರಾದ ದೇಶ. ಅದಕ್ಕೇ ಇಲ್ಲಿಗೆ ದಿನವೂ ಲಕ್ಷಾಂತರ ಪ್ರವಾಸಿಗಳು ಬರುತ್ತಾರೆ. ಟೂರಿಸಂ ನಮ್ಮ ಸಂಪತ್ತು. ನಿಮ್ಮ ಆತಿಥ್ಯಕ್ಕೆ ನಮ್ಮ ಹುಡುಗಿಯರು ಸದಾ ಮುಂದು’
ತಾಷ್ಕೆಂಟ್‌ನ ಪ್ರತಿ ಚಿನಾರಾ ಮರಗಳ ಕೆಳಗೆ ಪ್ರವಾಸಿಗರು, ರಸ್ತೆ ಮೇಲೆ ಓಡುವ ದೇವೂ ಮಾಟಿಜ್‌ಗಳಲ್ಲಿ ಯಾತ್ರಾರ್ಥಿಗಳು.. ಪಂಚತಾರಾ ಹೋಟೆಲುಗಳಲ್ಲಿ ೯೦ ಡಾಲರ್‌ಗೆ ಸರ್ವಾಂಗ ಸುಖ ಸಂಪನ್ನ ಕೊಠಡಿಗಳು ಲಭ್ಯ.ಊಟ, ವಸತಿ, ವಿಹಾರ ಎಲ್ಲವೂ ಡ್ಯಾಂ ಚೀಪ್.
ಇದರದ್ದೇ ಮುಂದುವರಿದ ಭಾಗ ಉಜ್ಬೇಕಿಸ್ತಾನದ ಕಪ್ಪುಚುಕ್ಕೆ. ಸಲಿಂಗ ಕಾಮಕ್ಕೆ ಪೂರ್ಣ ನಿಷೇಧ ಹೇರಿದ ಈ ದೇಶದಲ್ಲಿ ವೇಶ್ಯಾವಾಟಿಕೆ ಭರಪೂರ. ಹುಟ್ಟಿನಿಂದಲೇ ಸುರಸುಂದರಾಂಗಿಯರಾಗಿರುವ ಹುಡುಗಿಯರು ನೋಡ್ತಾ ನೋಡ್ತಾ ಸ್ಪಾಗಳಲ್ಲಿ, ಹೋಟೇಲುಗಳಲ್ಲಿ, ಬಾರ್‌ಗಳಲ್ಲಿ, ಟೂರಿಸಂ ವರ್ತುಲಗಳಲ್ಲಿ ಕಳೆದು ಹೋಗುತ್ತಿದ್ದಾರೆ. ಸರಕಾರಕ್ಕೆ ಇದೆಲ್ಲಾ ಗೊತ್ತಿದೆ. ಆದರೆ ಗೊತ್ತೇ ಇಲ್ಲದ ಹಾಗೆ ಕುಳಿತಿದೆ. ಅಧ್ಯಕ್ಷ ಕರಿಮೋವ್‌ನ ಮಗಳು ಗುಲ್ನಾರಾ ಗಲ್ ದೇಶಗಳಲ್ಲಿ ಸೆಕ್ಸ್ ಇಂಡಸ್ಟ್ರಿ ಬೇರೆ ನಡೆಸುತ್ತಿರುವ ಆರೋಪ ಎದುರಿಸುತ್ತಿದ್ದಾಳೆ. ಉಜ್ಬೇಕಿ ಹುಡುಗಿಯರೆಂದರೆ ಅಮೇರಿಕಾ, ಯುರೋಪ್, ಗಲ್‌ಗಳ ಕಾಮುಕರಿಗೆ ಫುಲ್ ಮೀಲ್ಸ್.
‘ಇದಕ್ಕೆ ಕಾರಣ ಬಡತನವೂ ಇರಬಹುದಾ?-ಎಂದು ಮುಮೆನ್ ತೊರಾಯ್‌ಗೆ ಕೇಳಿದೆ. ಆತ ಒಂದು ದಂ ಹಾರಿಸಿ ನಕ್ಕ. ‘ಬಡತನ ನಿರುದ್ಯೋಗ ಮುಂತಾಗಿ ನಮ್ಮಲ್ಲಿ ಇದೆ ನಿಜ. ಆದರೆ ಅದೇ ಅಲ್ಲ. ಯಾರು ಹೇಳಿದರೂ ನಮ್ಮದು ಬಡದೇಶ ಅಂತ’? ಎಂದ. ಅವನು ನಮ್ಮನ್ನು ಒಂದು ರೌಂಡ್ ಹಾಕಿಸಿ ಕರೆತಂದಾಗ ಕಂಡದ್ದು ಈ ಉಜ್ಬೇಕಿಸ್ತಾನದ ರಸ್ತೆಗಳಲ್ಲಿ ಬಿಎಂಡಬ್ಲ್ಯು, ಬೆಂಟ್ಲಿ, ಬೆನ್ಜ್ ಕಾರುಗಳು ಇರುವೆ ಥರ ತುಂಬಿಕೊಂಡಿವೆ. ಯಾವ ಹೊಸ ಉಪಕರಣ ಹುಟ್ಟಿ ಬರಲಿ, ತಿಂಗಳಿಗೆ ಮೊದಲೇ ಉಜ್ಬೇಕ್ ಮಾರುಕಟ್ಟೆಗೆ ಅದು ಹಾಜರಾಗುತ್ತದೆ.
ಇವರು ತಿನ್ನುವುದನ್ನು ನೋಡಿದರೆ ಸಾಕು. ಇವರದ್ದು ಮೂರು ಹೊತ್ತು ರಾಜ‘ಜನ. ಬೆಳಗ್ಗೆ ನಾಲ್ಕು ಗಂಟೆಗೆ ಮಾಂಸ ತುಂಡು ಬೆರೆಸಿದ ಪಿಲಾವ್ ತಿನ್ನಲು ಕೂತರೆ ರಾತ್ರಿ ವೋಡ್ಕಾ ಜತೆ ಸೋಮ್ಸ ಕಚ್ಚಿದಲ್ಲಿಗೆ ಮುಕ್ತಾಯ. ಕುರಿ, ದನ, ಕುದುರೆ ಮಾಂಸ ಇಲ್ಲದ ಊಟದ ಟೇಬಲೇ ಇಲ್ಲ. ತಂದೂರಿ ಓವೆನ್‌ಗಳಲ್ಲಿ ಚಪ್ಪಟೆ ಬ್ರೆಡ್ ಕಾಯಿಸಿ ತೆಗೆದದ್ದು ನೋನ್. ಹಾಲಿನಿಂದ ಮಾಡಿದ ಕತ್ಯಾಕ್, ಸುಜ್‌ಮಾ ಆಗಾಗ್ಗೇ ಗುಳುಂ. ಮುಳ್ಳುಸೌತೆ ಇಲ್ಲದೆ ಇವರ ಒಂದು ಊಟವೂ ಇಲ್ಲ. ಅಪಲ್, ಪಿಯರ‍್ಸ್, ಚೆರ್ರಿ, ಆಪ್ರಿಕೋಟ್ ಪ್ರತೀ ಹೊತ್ತು ಬೇಕು. ಚಹಕ್ಕೆ ರಾಜ ಮಾರ್ಯಾದೆ. ಚಾಯ್‌ಖಾನಾ ಎಂದರೆ ನಮ್ಮ ಟೀ ಶಾಪ್‌ಗಳು. ವೋಡ್ಕಾ, ವೈನ್, ಸ್ಕಾಚ್‌ನಲ್ಲಿ ಗಂಡು-ಹೆಣ್ಣೆಂಬ ಬೇ‘ವಿಲ್ಲದೆ ತೇಲಾಡುತ್ತಾರೆ. ಸರ್‌ಬಸ್ತ್ ಜನಪ್ರಿಯ ಬಿಯರ್. ಅದರದ್ದು ನಿತ್ಯ ಸ್ನಾನ.
--------------------------------------------------------------
ಇಸ್ಲಾಂ ಕರಿಮೋವ್ ಟೆರರಿಸ್ಟ್‌ಗಳ ಟೆರರಿಸ್ಟ್. ದೇಶಕ್ಕೆ ೧೫೦ ಕಿ.ಮೀ. ಉದ್ದದ ಅಫ್‌ಘಾನ್ ಬಾರ್ಡರ್ ಇದ್ದರೂ ಒಂದು ನರಪಿಳ್ಳೆ ಉಗ್ರಗಾಮಿ ಕೂಡಾ ಗಡಿ ದಾಟಲಾರ. ಐದು ವರ್ಷಗಳ ಹಿಂದೆ ಅಂದಿಜಾನ್ ನಗರದಲ್ಲಿ ಏನೋ ಕಿಚಾಯಿಸ್ತಾರೆ ಅಂತ ಡೌಟ್ ಬಂದು ೨೩ ಮಂದಿಯನ್ನು ಕರಿಮೋವ್ ಒಳಗಿಟ್ಟ. ಅವರು ಉಗ್ರಗಾಮಿಗಳು ಅಲ್ಲ ಅಂತ ಸಾವಿರಾರು ಮೂಲಭೂತವಾದಿಗಳು ರಸ್ತೆಗಿಳಿದರು. ಪ್ರತಿಭಟನೆ, ಹೋರಾಟ ಅಂತ ಶುರುವಾದದ್ದು ಯಾಕೋ ಇನ್ನೊಂದು ವಾಸನೆ ಹೊಡೀತಿದೆ ಅಂತ ಕರಿಮೋವ್‌ಗೆ ಗೊತ್ತಾಯಿತು. ಆಮೇಲೆ ಅಲ್ಲಿ ಹರಿದದ್ದು ಬರೇ ರಕ್ತ. ಮಿನಿಮಮ್ ಐನೂರು ಮಂದಿ ಮಟಾಷ್. ರಸ್ತೆ ಮೇಲೆ, ಆಸ್ಪತ್ರೆ ಒಳಗೆ ಬಿದ್ದ, ಇದ್ದ ಗಾಯಾಳುಗಳನ್ನೆಲ್ಲಾ ಮಿಲಿಟರಿ ಹುಡುಕಿ ಹುಡುಕಿ ಕೊಂದು ಹಾಕಿತು. ಹಾಗೇ ಮುಗಿಸಿದ ಮೇಲೆ ಮಿಲಿಟರಿಗೆ ಕರಿಮೋವ್ ವೋಡ್ಕಾ ಸಹಿತ ಬಾಡೂಟ ಹಾಕಿಸಿದ್ದನಂತೆ.
ಅಂದಿನಿಂದ ಇಂದಿನ ತನಕ ಒಂದು ಸಿಂಗಲ್ ಇನ್ಸಿಡೆಂಟ್ ಕೂಡಾ ಆಗಿಲ್ಲ ಎಂದ ಮುಮೆನ್, ಅಮೇರಿಕಾ ಎದ್ದು ನಿಂತು ಸ್ಯಾಂಕ್ಷನ್ ಹಾಕ್ತೇನೆ ಅಂತ ಆವಾಜ್ ಹಾಕಿದರೆ ಇಲ್ಲಿ ಕರಿಮೋವ್ ಅವರಿಗೆ ಕೊಟ್ಟಿದ್ದ ಮಿಲಿಟರಿ ನೆಲೆಯನ್ನು ಎಕ್ಕುಟ್ಟು ಎಬ್ಬಿಸಿದ. ವಿದೇಶಿ ಟಿವಿ ಬಂದ್ ಮಾಡಿಸಿದ. ಈಗಲೂ ಪತ್ರಿಕೆಗಳ ಮೇಲೆ ಭರ್ತಿ ಸೆನ್ಸಾರ್‌ಶಿಪ್ ಇದೆ ಹೂಂ ಎಂದ ಮುಮೆನ್.
--------------------------------------------------------
ಅದೆಲ್ಲಾ ನಿಮ್ಮ ಗ್ರಹಚಾರ, ನಮಗೆ ನಮ್ಮ ಶಾಸ್ತ್ರಿಯನ್ನು ತೋರಿಸು ಅಂತ ಅವನಿಗೆ ಹೇಳಿದೆವು. ಮುಮೆನ್ ತೊರಾಯ್ ನಮ್ಮನ್ನು ಕರೆದೋಯ್ದ.
ತಾಷ್ಕೆಂಟ್‌ನ ಬನವೊಂದರಲ್ಲಿ ಮುಗುಳು ಮುಖದ ಶಾಸ್ತ್ರಿ ಕಾಣಿಸಿದರು. ಸ್ವಲ್ಪ ದೂರದಲ್ಲಿ ಅವರ ಹೆಸರಿನ ಶಾಲೆ. ಶಾಲೆಯೊಳಗೆ ೧೫೦೦ ಮಕ್ಕಳು. ಅವರಲ್ಲಿ ೮೦೦ ಮಂದಿ ಹಿಂದೀ ಭಾಷೆ ಕಲಿಯುತ್ತಿದ್ದರು. ಏಕೆ ಕಲಿಯುತ್ತಿದ್ದೀರಿ ಎಂದು ಕೇಳಿದರೆ, ಭಾರತದ ಮೇಲಿನ ಪ್ರೀತಿಗೆ’ ಎಂದಳು ಸ್ಕೂಲ್ ಮೇಡಂ.
ಶಾಸ್ತ್ರಿ ಸಾಂಸ್ಕೃತಿಕ ಕೇಂದ್ರದೊಳಗೆ ಟಾಗೋರರ ಚಿತ್ರಗಳಿದ್ದವು. ಯೋಗ, ಕಥಕ್ಕಳಿ, ಹಿಂದಿ ಹಾಡುಗಳ ತರಗತಿಗಳಿದ್ದವು. ಒಂದು ಹದಿಹರೆಯದ ಹುಡುಗಿಗೆ ಕೇಳಿದೆ, ‘ಶಾಸ್ತ್ರಿ ಮೇಲೆ ನಿಮಗೇಕೆ ಈ ಪ್ರೀತಿ ?’
ಅವಳೆಂದಳು, ‘ಪ್ರೀತಿ ಮಾತ್ರ ಅಲ್ಲ, ಗೌರವ ಕೂಡಾ. ಏಕೆಂದರೆ ಅವರು ನಮ್ಮ ಮನೆಗೆ ಬಂದಾಗ ಸತ್ತು ಹೋದರಂತಲ್ಲಾ. ನಮ್ಮ ಅತಿಥಿಯನ್ನು ನಾವು ಹಾಗೇ ಕಳೆದುಕೊಳ್ಳಬಾರದಿತ್ತು. ಅದಕ್ಕೇ ನಾವು ಅತಿಥಿಯ ನೆನಪಿಗೆ ಅವರನ್ನು ಪ್ರೀತಿಸಲು ಶುರು ಮಾಡಿದೆವು....’
‘ಸತತ ನಲ್ವತ್ತನಾಲ್ಕು ವರ್ಷಗಳಿಂದ.... ಎಂದು ಮುಮೆನ್ ತೊರಾಯ್ ಮಾತು ಮುಗಿಸಿದ.

20100614

ಬಂದಾ ಬಂದಾ ಮಳೆಮಹಾರಾಜಈ ಬಿಸಿಲ ಸಾಮ್ರಾಜ್ಯದ ಪತನವಾಗಿದೆ.ಇಷ್ಟು ದಿನಗಳ ಕಾಲ ಇದರ ಸರ್ವಾಧಿಕಾರದಲ್ಲಿ ಬೆವರಿಳಿಸಿಕೊಂಡು ಕಾಲ ಕಳೆದದ್ದೇ ಒಂದು ಪವಾಡ.
ಹಬ್ಬಾ ಇದರ ಉರಿಯೇ!ಕಂಡಕಂಡಲ್ಲಿ ಹಿಡಿದು ಹಿಪ್ಪೆ ಮಾಡಿ ರಾತ್ರಿ ಹಗಲೂ ಬೇಯಿಸಿ ಪ್ರಜಾಕೋಟಿಯಾದ ನಮ್ಮನ್ನು ತಿಂದು ತೇಗಿದೆ.ಈ ಬಿಸಿಲ ಸಿಟ್ಟಿಗೆ ನದಿಗಳು ಹರಿಯದೇ ನಿಂತವು.ಕೆರೆಗಳು ಆರಿ ಹೋದವು.ಮರಗಿಡಗಳು ಒಣಗಿ ಕುಳಿತವು.ಗಾಳಿಕೂಡಾ ತಂಪನ್ನು ಕಳೆದುಕೊಂಡಿತು..!
ಅಂತೂ ಈ ಹೊತ್ತಿಗೆ ಬಿಸಿಲ ರಾಜನ ಪತನವಾಗಿದೆ.ಹೊಸ ರಾಜ್ಯಕಟ್ಟಲು ಬಂದವನು ಮಳೆಮಹರಾಯ..!
ಅವನಿಗೆ ನಮ್ಮ ಹೆಸರು ಮುಂಗಾರು.
ಇನ್ನು ನಾಲ್ಕು ತಿಂಗಳುಗಳ ಕಾಲ ಬರ್ಮಿನ ಆಡಳಿತ ಈ ಮುಂಗಾರು ಮಳೆರಾಯನದ್ದು.
ಕಾದ ಭೂಮಿಯನ್ನು ಅಪ್ಪಿ ತಬ್ಬಿಕೊಂಡ ಎಂದರೆ ಮೊದಲ ಸ್ಪರ್ಶಕ್ಕೇ ಆಕೆ ಬಸಿರು.
ನೆಲದ ಮೇಲೆಲ್ಲಾ ಹೊಸ ಸೃಷ್ಟಿ..ಊರಿದಲ್ಲೆಲಾ ಜೀವಜಾಲದ ಸಾಲುಗವಿತೆ..
ಈ ಮುಂಗಾರು ಮಳೆರಾಯನ ಆಡಳಿತದಲ್ಲಿ ಪ್ರಜಾಕೋಟಿ ಸರ್ವಸಂಪನ್ನ.ಪೃಥಿವೀ ಸಸ್ಯಶಾಲಿನೀ.
ಈ ಬಾರಿಯ ಇವನ ರಾಜ್ಯ ಭಾರದ ಆರಂಭಕ್ಕೆ ಈ ಟಿಪ್ಪಣಿಗಳು ಮಳೆಗಾಲದ ದಿನಗಳಿಗೆ ಕುರುಕುಲು ..

ಎಲ್ಲಿದ್ದೆ ಇಲ್ಲಿ ತನಕ ಎಲ್ಲಿಂದ ಬಂದೀ.ಯವ್ವಾ? ಅಂತ ಕೇಳಿದರೆ ಈ ಮುಂಗಾರು ಮಳೆ ಮಾರುತಕ್ಕೆ ಹಲವಾರು ವ್ಯಾಖ್ಯಾನಗಳು.
ಜಗತ್ತಿನ ಎಲ್ಲಾ ಮಳೆಗಳಿಗೆ ಮೂಲಾಧಾರ ಈ ಮುಂಗಾರು ಅರ್ಥಾತ್ ಮನ್ಸೂನ್..ಮೂಲಾರ್ಥದಲ್ಲಿ ಮನ್ಸೂನ್ ಎಂದರೆ ಮಳೆ ಹೊತ್ತ ಗಾಳಿ.ಭೂಮಿಯಿಂದ ಏಳೆಂಟು ಮೈಲಿಗಳೆತ್ತರಕ್ಕೆ ಮೋಡಗಳ ಮಹಾಯಾನವೇ ಈ ಮನ್ಸೂನ್. ಇದೇ ಈ ನೆಲದ ಆಷಾಢ - ಶ್ರಾವಣ,ಅಂದರೆ ಮಳೆಗಾಲ.ಇದು ಭಾರತವೆಂಬ ಉಪಖಂಡದ ಆಹಾರಾದಿ ಬೆಳೆಗಳನ್ನು ಬೆಳೆಸುವ,ಆ ಮೂಲಕ ನಮ್ಮ ಆರ್ಥಿಕತೆಯನ್ನು ಕಟ್ಟುವ,ನಮ್ಮ ಜೀವಜಾಲವನ್ನು ಸಂಪನ್ನಗೊಳಿಸುವ ಮಹಾಸೃಷ್ಟಿಕರ್ತ.ಭಾರತದ ನೈಋತ್ಯ ಭಾಗದಿಂದ ಬರೋ ಈ ಮಳೆರಾಯನ ಯಾತ್ರೆಗೆ ನೈರುತ್ಯ ಮನ್ಸೂನ್ ಎನ್ನುತ್ತಾರೆ.
ಜಗತ್ತಿನಲ್ಲಿ ಇರೋದು ಎರಡೇ ಎರಡು ಇಂಥ ಮುಂಗಾರು.
ಪಶ್ಚಿಮ ಆಫ್ರಿಕನ್ ಮತ್ತು ಏಷ್ಯಾ-ಆಸ್ಟ್ರೇಲಿಯನ್.
ಅಮೇರಿಕನ್ನರು ಮಾತ್ರಾ ಉತ್ತರ ಮತ್ತು ದಕ್ಷಿಣ ಮನ್ಸೂನ್ ಅಂತ ಇವೆ ಎಂದು ಹಠ ಹಿಡಿಯುತ್ತಿದ್ದಾರೆ.ಇರಲಿಬಿಡಿ.
ಈ ಜಗವನ್ನು ತೋಯಿಸುವ ಮಳೆಗಾಲಕ್ಕೆ ಮನ್ಸೂನ್ ಅಂತ ಹೆಸರಿಟ್ಟವರು ಇಂಗ್ಲೀಷರು.ಪೋರ್ಚುಗೀಸರ ಮೊನಕೋ,ಅರಬ್ಬಿಗಳ ಮೌಸಮ್ ಮನ್ಸೂನ್ ಆಗಿದೆ.
ಹಿಂದಿಯಲ್ಲಿ ಅಂತೂ ಮೌಸಮ್ ಎಷ್ಟು ವಿಶಾಲದಲ್ಲಿ ಇದೆ ಎಂದರೆ ಹವಾಗುಣಕ್ಕೆ ಮೌಸಮ್ ಎಂದೇ ಕರೆದುಬಿಟ್ಟಿದ್ದಾರೆ.
ಈ ಮುಂಗಾರು ಮಳೆ ಬರೋದು ಎಂದಿನಿಂದಲೋ ನಿಗದಿತ.ಭಾರತ ಭೂಮಿ ಕಾದು ಕೆಂಪಾದಾಗ ಅರೇಬಿಯನ್ ಸಮುದ್ರದಲ್ಲಿ ನೀರಕಣಗಳು ಒಟ್ಟಾಗಿ ಕಾದ ನೆಲದತ್ತ ಆಕರ್ಷಿತವಾಗುತ್ತವೆ.ಆ ಸೆಳೆತ ಅದೆಂಥ ವೇಗದಲ್ಲಿ ಇರುತ್ತದೆ ಎಂದರೆ ಭೂಮ್ಯಾಕಾಶ ಒಂದಾದಂತೆ ಮಳೆ ಬಂದೆರಗುತ್ತದೆ ಬರೋಬ್ಬರಿ ನಾಲ್ಕು ತಿಂಗಳುಗಳ ಕಾಲ!
ಭಾರತದ ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ಈ ಮುಂಗಾರೇ ಮೂಲಾಧಾರ.ಸಕ್ಕರೆ ಸೋಯಾಬೀನ್ ಭತ್ತ ಗೋಧಿ ಮುಂತಾಗಿ ಈ ನೆಲದಲ್ಲಿ ಬೆಳೆ ಹುಲುಸಾಗಬೇಕಾದರೆ ಯಾವ ಕಾಲುವೆ,ಇನ್ಯಾವ ಅಣೆಕಟ್ಟು ಸೆಕೆಂಡರಿ,ಈ ಮುಂಗಾರೇ ಪ್ರೈಮರಿ.
ಕಳೆದ ವರ್ಷ ಮುಂಗಾರು ಶೇಕಡಾ ೨೩ರಷ್ಟು ಕುಂಠಿತವಾಗಿಹೋಯಿತು.ಪರಿಣಾಮ ಅರ್ಧದಷ್ಟು ನೆಲ ಬೆಂಗಾಡಾಯಿತು.ಬರಪೀಡಿತ ದೇಶದಲ್ಲಿ ಕಾಳು ಕಡ್ಡಿ ಕಳೆದು ಹೋದವು.ಬೆಲೆ ಸೂಚ್ಯಂಕ ಇನ್ನಿಲ್ಲದಂತೆ ಏರಿ ನಿಂತು ಅಂತಿಮವಾಗಿ ಹಣದುಬ್ಬರದ ಅಬ್ಬರದಲ್ಲಿ ಶ್ರೀಸಾಮಾನ್ಯ ಕಳೆದು ಹೋದ.
ಮುಂಗಾರು ಮುನಿಸಿಕೊಂಡಾಗಲೆಲ್ಲಾ ಹೀಗೇ ಆಗುತ್ತದೆ.೭೦೦ ವರ್ಷಗಳ ಇತಿಹಾಸದಲ್ಲಿ ಹಲವಾರು ಬಾರಿ ಇಂಥ ಕಷ್ಟಗಳು ಬಂದುಹೋಗಿವೆ.ಏಳು ಶತಮಾನಗಳಲ್ಲಿ ನಾಲ್ಕು ಭಯಂಕರ ಕ್ಷಾಮ ದೇಶವನ್ನು ನಡುಗಿಸಿವೆ,ಒಮ್ಮೆಯಂತೂ ಸತತ ಆರು ವರ್ಷಗಳ ಕಾಲ ಮುಂಗಾರು ಸರಿಯಾಗಿ ಬಾರದೇ ಭರತ ಭೂಮಿಯನ್ನು ನಿರಂತರ ಬರಗಾಲದಲ್ಲಿ ಕೂಡಿಸಿಟ್ಟಿತ್ತು.
ಚೀನಾದಲ್ಲಿ ೧೬ ನೇಶತಮಾನದಲ್ಲಿ ಬಂದ ಬರಗಾಲ ಮಿಂಗ್ ರಾಜವಂಶವನ್ನು ಉರುಳಿಸಿತು.೧೭೮೦ರಲ್ಲಿ ಪೂರ್ವ ಭಾರತದಲ್ಲಿ ಕಂಡ ಸುದೀರ್ಘ ಕ್ಷಾಮ ಅಲ್ಲಿನ ಮೂಲ ನಿವಾಸಿಗಳ ಶಾಶ್ವತ ನಿರ್ಗಮನಕ್ಕೆ ಕಾರಣವಾಯಿತು.ಈ ಉಪಖಂಡದಲ್ಲಿ ಎಲ್ಲದಕ್ಕೂ ಕಾರಣ ಮುಂಗಾರು.ಅದರ ಸಂತೋಷ ಮತ್ತದರ ಮುನಿಸು.
ನಿಮಗೆ ಗೊತ್ತೇ?ಜಗತ್ತಿನ ಅರ್ಧದಷ್ಟು ಜನ ಅದರಲ್ಲೂ ರೈತರು ಜೀವಿಸುತ್ತಿರುವುದು ಈ ಮುಂಗಾರು ಮಾರುತ ಬೀಸುವ ಭಾಗದಲ್ಲೇ.ಮತ್ತು ನಮ್ಮ ದೇಶದ ಶೆಕಡಾ ೯೦ರಷ್ಟು ನೀರು ಸರಬರಾಜಾಗುವುದು ಈ ಮುಂಗಾರು ಮಳೆ ಬೀಳುವ ನೆಲದಿಂದಲೇ.ನಮ್ಮ ಒಟ್ಟು ಜಿಡಿಪಿಯ ಶೇಕಡಾ ೪೦ ಬರೋದು ಈ ಮುಂಗಾರಿನಿಂದಾಗಿಯೇ.ಶೇಕಡಾ ೬೦ರಷ್ಟು ಕೈಗಾರಿಕಾ ಉತ್ಪನ್ನಗಳು ಮಾರಾಟವಾಗುವುದು ಈ ಮಳೆಯನ್ನೇ ನಂಬಿ ಜೀವನ ಸಿದ್ಧಗೊಳಿಸುವ ಹಳ್ಳಿಗಳಲ್ಲೇ.ಭಾರತದ ಶೇಕಡಾ ೬೦ರಷ್ಟು ಹಳ್ಳಿಗಳಿಗೆ ಈ ಮುಂಗಾರು ಇಲ್ಲದಿದ್ದರೆ ಜೀವನವೇ ಇರುವುದಿಲ್ಲ.
ಆದ್ದರಿಂದ ಮುಂಗಾರು ಮಳೆಯ ಹನಿಹನಿಯೂ ಅಮೃತಧಾರೆ..
ಅಂಥ ಪವಾಡಪುರುಷನಿಗೆ ಇಗೋ ಇಂದು ಒಂದು ಅಕ್ಕರೆಯ ಸ್ವಾಗತ..!

20100601

ಪ್ರೀತಿ ಹೂವಲ್ಲ

ಪ್ರೀತಿ ಎಂದರೆ ಹೂವಿನ ಮಕರಂದ.ಆ ಕ್ಷಣಕ್ಕೆ ಅದು ಸತ್ಯ.ಇನ್ನೊಮ್ಮೆ ಅಂತ ಕಾದರೆ ಅದು ಆ ಹೂವಿನ ಒಳಗೆ ಬಾಡಿ ಬೀಳುತ್ತದೆ.ಸಂಜೆ ಸೂರ್ಯ ಮುಳುಗುವ ಹೊತ್ತಿಗೇ.ಪ್ರೀತಿಯ ಕಾಲ ಕ್ಷಣಿಕ
ಪ್ರೀತಿ ಸಿಹಿ..ಮಕರಂದದ ಹಾಗೇ.ಸವಿಯಲು ಬಹು ಕಡಿಮೆ.
ಸಿಕ್ಕಿದಷ್ಟೇ ಸವಿಯಬೇಕು.ಮತ್ತೆ ಹುಡುಕಿದರೆ ಅಲ್ಲಿ ಖಾಲಿ ಪಾತ್ರೆ..ಅದು ಆ ಕ್ಷಣದ ಅಕ್ಷಯ ಪಾತ್ರೆ.
ಪ್ರೀತಿ ಜಿಗುಟು.ಪ್ರೀತಿ ಅಂಟಂಟು.ಅದೇ ಮಕರಂದದ ಹಾಗೇ..ಬೆರಳಿನ ಸ್ಪರ್ಶಕ್ಕೆ ಮಧುರಾನೂಭೂತಿ..ಅದು ಒಂದೇ ಒಂದು ಬಿಂದು.
ಪ್ರೀತಿ ಸದಾ ಹೂವಿನ ಆಸ್ತಿ..ಹೂ ಎಂದರೆ ಹೆಣ್ಣು
ಗಂಡೆಂದರೆ ದುಂಬಿ.ಹೂವು ಕೊಡಬೇಕು,ದುಂಬಿ ಹೀರಬೇಕು..
ಹೂವರಳುವ ಮುನ್ನ ಮಕರಂದ ಎಲ್ಲಿತ್ತು?ಇನ್ನೂ ಅರಳದ ಮೊಗ್ಗಿನಲ್ಲಿ?
ಆ ಮೊಗ್ಗು ಹೊತ್ತ ಗಿಡದಲ್ಲಿ?ಆ ಗಿಡ ಬಂದ ಬೀಜದಲ್ಲಿ?
ಆ ಬೀಜ ಕಚ್ಚಿದ ನೆಲದಲ್ಲಿ?ಮಕರಂದ ಸಿಕ್ಕಿದ್ದು ಮಾತ್ರಾ ಹೂವಿನಲ್ಲೇ..
ಮಕರಂದ ಹೀರಲು ಹೂವಿನಪ್ಪಣೆಯೇ?ಹೂವರಳಿ ನಿಂತರೆ ಮಕರಂದ ಸಿಕ್ಕಂತೆಯೇ..??
ಪ್ರೀತಿ ಹೂವಲ್ಲ.ಹೂವಿನ ಹಂಗು ಮಾತ್ರಾ..ಆದ್ದರಿಂದ ದಯವಿಟ್ಟು ಪ್ರೀತಿ ಬೇಕಾದವರು ಹೂವಿನೊಳಗೆ ಇಣುಕಿ..

20100525

ದೇವರು ರಜೆ ಹಾಕಿದ

ನನಗೆ ಹೆಸರಿಲ್ಲ.ಆದರೆ ನನಗೆ ಶರೀರ ಇದೆ.ಭಾವನೆ ಇದೆ.ಮನಸ್ಸು ಇದೆ.
ನಾನು ಮಾತನಾಡುತ್ತೇನೆ,ಊಟ ಮಾಡುತ್ತೇನೆ,ತಿರುಗಾಡಲು ಕಾಲುಗಳಿವೆ,ನೋಡಲು ಕಣ್ಣುಗಳಿವೆ..
ನಾನು ವಿಮಾನ ನಿಲ್ದಾಣದ ಹೊರಗೆ ನಿಂತಿದ್ದೇನೆ.ಏಕೆಂದರೆ ನನ್ನ ಗೆಳೆಯ ವಿಮಾನದಲ್ಲಿ ಬರುತ್ತಿದ್ದಾನೆ.ರಾತ್ರಿ ಹನ್ನೆರಡು ಗಂಟೆಗೆ ನನ್ನನ್ನು ಆತ ಎಬ್ಬಿಸಿದ್ದ.
ಈಗಲಾದರೂ ಹೇಳು ಏನಿದೆ ಅದರೊಳಗೆ ಎಂದು ಕೇಳಿದೆ.
ಜೋರಾಗಿ ನಕ್ಕ.
ಅದೇ ಸೀಕ್ರೆಟ್ ಎಂದ.
ನೀನು ಹೇಳದೇ ಇದ್ದರೆ ನಾನು ನಿನ್ನನ್ನು ಕರೆದುಕೊಂಡು ಬರಲು ಬಾರೆ ಎಂದು ಹಠ ಮಾಡಿದೆ.
ಬರಬೇಡ ಎಂದ.
ನನಗೆ ತುಂಬಾ ಹೊತ್ತು ನಿದ್ದೆ ಬರಲಿಲ್ಲ.
ಅದೇ ಯೋಚನೆ,ಏನಿರಬಹುದು ಆ ಚೀಲದಲ್ಲಿ.
ನನ್ನ ಬಳಿ ಒಳ್ಳೊಳ್ಳೆಯ ಶರಟುಗಳಿವೆ,ಪೆನ್ನುಗಳಿವೆ,ಕೆಮೆರಾ ಇದೆ,ಲ್ಯಾಪ್‌ಟಾಪ್ ಇದೆ.
ಚೀಲವೊಂದರಲ್ಲಿ ತುಂಬುವಂಥದ್ದು ಎಲ್ಲಾ ನನ್ನ ಬಳಿ ಇದೆ.
ಹಾಗಾದರೆ ಆ ಚೀಲದಲ್ಲಿ ಏನಿದೆಯೋ?
ಆಮೇಲೆ ನನಗೆ ನಿದ್ದೆ ಬಂತು.ನಿದ್ದೆಯಲ್ಲಿ ಕನಸು ಬಿತ್ತು,ಕನಸಲ್ಲಿ ನನ್ನ ಗೆಳೆಯ ಬಂದಿದ್ದ.
ಅವನು ವಿಮಾನದಿಂದ ಇಳಿದು ಬರುತ್ತಿದ್ದ.ಆ ತಳ್ಳುಗಾಡಿಯನ್ನು ಮುಂದೆ ಮಾಡಿಕೊಂಡು ಬಂದ.ನಕ್ಕ.
ಬೇವಾರ್ಸಿ..ಎಂದೆ.
ಅಪ್ಪಿಕೊಳ್ಳಲು ಮುಂದಾದ.
ನಾನು ತಪ್ಪಿಸಿಕೊಂಡೆ.
ಇಷ್ಟು ವರ್ಷ ಇಲ್ಲದವನು ಈಗ ತುಂಬಿಕೊಳ್ಳುತ್ತಿದ್ದಾನೆ.
ಭಯವಾಯಿತು.
ಫಟಿಂಗ ಅಂತ ಬೈದೆ.
ಅಂದು ರಬ್ಬರ್ ಶೂ,ಕೆಂಪು ಗೀಟಿನ ಚೌಕುಳಿ ಅಂಗಿ,ಕಪ್ಪು ದೊಗಲೆ ಪ್ಯಾಂಟು ಹಾಕಿ,ಸಾವಿರದಾನೂರು ರೂಪಾಯಿಯ ಬ್ಯಾಗು ಹೊತ್ತುಕೊಂಡು ಒಳಗೆ ಹೋಗಿದ್ದ.ಮುಂಬೈ ತನಕ ಅವನ ಜೊತೆ ನಾನೂ ಬಸ್ಸಲ್ಲಿ ಹೋಗಿದ್ದೆ.
ಈಗ ಸೀದಾ ಮಂಗಳೂರಿಗೇ ಬರುತ್ತಿದ್ದಾನೆ.
ನಿನ್ನೆ ಸಂಜೆ ಯಾವ್ಯಾವ ಶರಟು,ಪ್ಯಾಂಟು ಹಾಕುವವನಿದ್ದೇನೆ ಮತ್ತು ಅವುಗಳ ಬೆಲೆ ಏನು, ಶೂ ಯಾವ ಕಂಪನಿಯದ್ದು ಎಂದು ಎಲ್ಲಾ ಹೇಳಿದ್ದ.
ವಿಮಾನ ಏರಿದವನೇ ಅವನ ಇಪ್ಪತ್ತೇಳು ಸಾವಿರ ರೂಪಾಯಿಯ ಮೊಬೈಲ್‌ನಿಂದ ಕಾಲ್ ಮಾಡಿ ತನ್ನ ಪಕ್ಕದಲ್ಲಿ ಓರ್ವ ಸುರಸುಂದರಾಂಗಿ ಕುಳಿತಿರುವುದಾಗಿಯೂ ಹೇಳಿದ.
ಸ್ವಲ್ಪ ಹೊತ್ತಲ್ಲಿ ಅವಳ ಚೆಲುವನ್ನು ವರ್ಣಿಸುವ ಮೆಸೇಜು ಬಂತು.
ನಾಟೀ ಒಂದೂ ಮಗ.
ಅವಳ ಫೋಟೋ ಕ್ಲಿಕ್ಕಿಸಿರುವುದಾಗಿ ಮತ್ತೊಂದು ಮೆಸೇಜು ಕಳುಹಿಸಿದ.
ವಿಮಾನದಿಂದ ಅವನು ಇಳಿದೊಡನೆ ಅವನ ಜೊತೆ ಯಾವ ಮಾತು ಮಾತಾಡಬೇಕು ಅಂತ ಯೋಚಿಸಿದೆ.
ಲವ್ ಯು ಅಂತ ಹೇಳಿದರೆ ಅಷ್ಟೇ ಸಾಕು.
ಆದರೆ ನನಗಿಂತ ಮೊದಲೇ ಅವನೇ ಹೇಳಿಬಿಟ್ಟರೆ..
ಮಂಗಾ..ಅಂತ ಬೈದು ಬಿಡುತ್ತೇನೆ..
ಸಾಧ್ಯವಾದರೆ ಚಿವುಟಲೇ ಬೇಕು..
ಈ ಬಾರಿ ಅವನೇ ಅವನ ಎಲ್ಲಾ ಲಗ್ಗೇಜುಗಳನ್ನು ಕಾರಿಗೆ ತುಂಬಬೇಕು.ನಾನು ಡ್ರೈವಿಂಗ್ ಸೀಟಲ್ಲಿ ಬೆಲ್ಟು ಹಾಕಿ ಕೂತೇ ಇರುತ್ತೇನೆ.ಅವನ ಎಲ್ಲಾ ಗಂಟುಮೂಟೆಗಳನ್ನು ಅವನು ತುಂಬುವಷ್ಟರಲ್ಲಿ ಅವನಿಗೆ ಈ ಮಂಗಳೂರ ಸೆಖೆಗೆ ಬೆವರುತ್ತದೆ..
ಬೆವರೊರಸಿಕೊಂಡು ಅವನು ಕಾರಲ್ಲಿ ಕೂರುವ ವೇಳೆಗೆ ಆ ಘಾಟು ಕಾರಿನ ಪರ್ಫ್ಯೂಮನ್ನು ಮೀರಿಸುವ ಹಾಗೇ ಹರಡುತ್ತದೆ.
ನನಗೆ ಬೇಕಾದದ್ದೂ ಅದೇ..
ಅವನಿಗಾಗಿ ಇಡ್ಲಿ ಹಿಟ್ಟು ರುಬ್ಬಿದ್ದೇನೆ.ರಾತ್ರಿಗೇ ಅದನ್ನು ದೊಡ್ಡ ದೊಡ್ಡ ಗಿಣ್ಣಾಲುಗಳಲ್ಲಿ ಸುರುವಿ ಬೇಯಿಸಿ ಇಟ್ಟಿದ್ದೇನೆ.ಶುಂಠಿ ಚಟ್ನಿ ಫ್ರಿಜ್‌ನಲ್ಲಿದೆ.
ಮೊದಲು ಇಡ್ಲಿ ತಿನ್ನೋಣ..ನೀನೇ ನನಗೆ ತಿನ್ನಿಸಬೇಕು ಎಂದು ಕೇಳಿಕೊಂಡಿದ್ದೇನೆ.ಒಪ್ಪಿದ್ದಾನೆ.
ಆ ದಿನ ಆ ಸಣ್ಣ ಹೋಟೇಲಿನಲ್ಲಿ ಮೂಸಂಬಿ ಜ್ಯೂಸ್ ಲೋಟಾವನ್ನು ಅರ್ಧರ್ಧ ಕಚ್ಚಿ ಕುಡಿದು ವೇಯ್ಟರ್‌ನ ಕಣ್ಣು ತಪ್ಪಿಸಿ ಅತ್ತಿತ್ತ ಬದಲಾಯಿಸಿಕೊಂಡದ್ದೇ ಕೊನೆ.
ಎಷ್ಟು ಸಮಯವಾಯಿತು ಈ ಪೋಲಿಯ ಎಂಜಲು ನೆಕ್ಕದೇ..
ರಾತ್ರಿ ಇಡೀ ತೊಡೆ ಸಂದುಗಳಲ್ಲಿ ಅದೇನು ಸೆಳೆತ?
ಛೀ..ಅದನ್ನೆಲ್ಲಾ ವಿವರಿಸಬಾರದು.
ಹಬ್ಬಾ..ಅಂತೂ ಬಂತು ವಿಮಾನ.
ಎಷ್ಟು ಹೊತ್ತು ಕಾಯೋದು..ಕಾರಲ್ಲೇ ಕುಳಿತು ಎಫ್‌ಎಂನ ಸುಪ್ರಭಾತ ಬದಲಿಸಿ ಬದಲಿಸಿ ಕೇಳಿದ್ದಾಯಿತು..ದಿನ ವಾರ ನಕ್ಷತ್ರಗಳ ಪರಿಚಯವಾಯಿತು.ಆರು ಗಂಟೆ ನ್ಯೂಸ್ ಬುಲ್ಲೆಟ್ಟಿನಲ್ಲಿ ಅದೇ ಗೊಗ್ಗರು..
ಕಾರಿನಿಂದ ಇಳಿದು ಆಕಾಶ ನೋಡಿದರೆ ಆಹಾ ವಿಮಾನ..
ಅದು ನೋಡುತ್ತಾ ನೋಡುತ್ತಾ ದೊಡ್ಡಾದಾಗುತ್ತಿದೆ.ಇನ್ನೂ ಹತ್ತಿರ ಬಂದರೆ ಅವನು ವಿಂಡೋ ಸೀಟಲ್ಲಿ ಕಂಡರೂ ಕಾಣಬಹುದು!
ಸುತ್ತಲೂ ಎಷ್ಟು ಜನರಿದ್ದಾರೆ!ಎಲ್ಲಾ ನನ್ನ ಹಾಗೇ. ಅವರ ಅವರನ್ನು ಕರೆದುಕೊಂಡು ಹೋಗಲು ಬಂದವರೇ.ಮಗಳು ಅಳಿಯ,ಮಗ ಮೊಮ್ಮಗ.ಭಾವ ಮೈದ,ಹೆಂಡತಿ ಗಂಡ,ಗೆಳೆಯ ಗೆಳತಿ..ಕಲೀಗ್, ಬಾಸ್..
ಎಲ್ಲರೂ ಆ ವಿಮಾನದೊಳಗೆ ಇರುವವರ ಜೊತೆ ಒಂದಲ್ಲ ಒಂದು ಸಂಬಂಧ ಹಾಕಿ ಕೊಂಡವರೇ..
ಹಾಗಾಗಿ ಆ ವಿಮಾನ ಸದ್ಯಕ್ಕೆ ಈ ಎಲ್ಲರ ನೆಂಟನು ಹೌದು ಇಷ್ಟನೂ ಹೌದು.
ಅದರೊಳಗೆ ನೂರಾರು ಮಂದಿ ಇದ್ದಾರೆ.ಈಗಾಗಲೇ ಅವರಲ್ಲಿ ಹತ್ತಾರು ಮಂದಿಯಾದರೂ ಪರಸ್ಪರ ಮಾತಾಡಿಕೊಂಡಿರಬಹುದು,ಅವರಲ್ಲಿ ಮತ್ತಷ್ಟು ಮಂದಿ ತಂತಮ್ಮ ಕುಲಗೋತ್ರ,ಉಭಯಕುಶಲೋಪರಿ ಸಾಂಪ್ರತ ಹೇಳಿಕೊಂಡಿರಬಹುದು.ಕೆಲವರಾದರೂ ಪರಸ್ಪರ ಇ-ಮೇಲ್ ಐಡಿಗಳನ್ನು ಹಂಚಿಕೊಂಡಿರಬಹುದು.ಒಬ್ಬನಾದರೂ ಮತ್ತೊಬ್ಬನನ್ನು ತನ್ನ ಮನೆಗೆ ಆಹ್ವಾನಿಸಿರಬಹುದು..
ಒಬ್ಬ ಹುಡುಗಿಗೆ ಆರನೇ ಸಾಲಿನಲ್ಲಿ ಕೂತ ಹುಡುಗ ಯಾಕೋ ಇಷ್ಟವಾಗಿಬಿಟ್ಟಿರಬಹುದು.ಆ ಹುಡುಗ ಈ ಹುಡುಗಿಯನ್ನು ಎವೆ ಹಾರಿಸಿ ನೋಡಿ ಮನಸಾ ಸಂತೋಷ ಪಟ್ಟಿರಬಹುದು..
ಆ ವಿಮಾನದಲ್ಲಿ ಒಬ್ಬಳು ತಾಯಿ ಇರಬಹುದು.ಆಕೆ ಕೈಲಿ ಮೂರು ತಿಂಗಳ ಪುಟ್ಟ ಶಿಶು.ಆ ಹಾಲುಗಲ್ಲಕ್ಕೆ ಹಸಿವು.ಈ ತಾಯಿಯ ಮೊಲೆಯಲ್ಲಿ ತುಂಬಿದ ಹಾಲು.
ಈಗ ಆ ವಿಮಾನ ಅದರೊಳಗೆ ಇರುವವರದ್ದು ಮಾತ್ರಾ ಅಲ್ಲವೇ ಅಲ್ಲ.ಇದು ಹೊರಗೆ ಕಾಯುತ್ತಿರುವ ನಮ್ಮದೂ ಹೌದು.ಅದು ನನ್ನ ವಿಮಾನ.ಏಕೆಂದರೆ ಅದರಲ್ಲಿ ನನ್ನವ ಇದ್ದಾನೆ.
ವಿಮಾನ ಬರುತ್ತಿದೆ.ಅದು ದೊಡ್ಡದಾಗುತ್ತಿದೆ.ಆ ಸುತ್ತಿನಲ್ಲಿ ಕಂಡದ್ದಕ್ಕಿಂತ ಈಗ ಮತ್ತಷ್ಟು ದೊಡ್ಡದಾಗಿ ಕಾಣುತ್ತಿದೆ.
ಅಯ್ಯೋ ಇದೇಕೆ ಇಷ್ಟು ದೊಡ್ಡದಾಗಿದೆ?
ಇದು ವಿಮಾನವಲ್ಲಇದು ವಿಮಾನವೇ ಅಲ್ಲ..
ಇದು ನನ್ನ ಇನಿಯನನ್ನು ಯಾಕೋ ನನಗೆ ತಂದು ಕೊಡುವುದಿಲ್ಲ ಎಂದು ನನಗೇಕೆ ಈಗ ಈ ಕ್ಷಣಕ್ಕೆ ಅನಿಸುತ್ತಿದೆ!?
ನನ್ನ ಗೆಳೆಯ ಈ ಹಕ್ಕಿಯ ಹೆಗಲೇರಿ ನನ್ನ ಬಳಿಗೆ ಬರುವುದಿಲ್ಲವೇ..
ಕ್ರಾಶ್ ಆಗಿದೆ ಎಂದ ಹತ್ತಿರದಲ್ಲಿದ್ದ ಹುಡುಗ.ಅವನ ಕೈಲಿದ್ದ ಮೊಬೈಲ್ ಠಪ್ಪನೇ ಕೆಳಗೆ ಬಿತ್ತು.ಅದನ್ನು ಅವನು ಹೆಕ್ಕಿಕೊಳ್ಳಲಿಲ್ಲ.ಅವನು ಕೆಟ್ಟದಾಗಿ ಕಿರುಚಾಡುತ್ತಿದ್ದ ಓಡತೊಡಗಿದ.
ನಾನು ತತ್ತರ ನಡುಗುತ್ತಿದ್ದೇನೆ.
ಎಲ್ಲೆಡೆ ಕತ್ತಲಾಗುತ್ತಿದೆ.ಕೆಟ್ಟದಾಗಿ ಯಾರೋ ಯಾರನ್ನು ಬೈಯುತ್ತಿದ್ದಾರೆ.
ದೇವರು ರಜೆ ಹಾಕಿದ್ದಾನಂತೆ..ರಜೆ.
ಅವನ ಹಾಜರು ಪುಸ್ತಕದಲ್ಲಿ ನೂರಾ ಐವತ್ತೆಂಟು ಮಂದಿಗೆ ಆಬ್ಸೆಂಟ್ ಮಾರ್ಕು.
ಅದರಲ್ಲಿ ನನ್ನ ಇನಿಯನೂ..
ನನಗೆ ಇನ್ನು ಹೆಸರಿಲ್ಲ..ಅವನು ತಂದ ಚೀಲದೊಳಗೆ ಏನಿದೆ ಅಂತ ನನಗೆ ಗೊತ್ತಾಗುವುದಿಲ್ಲ.ಅವನ ಪಕ್ಕ ಕುಳಿತ ಆ ಹುಡುಗಿ ನನಗಿಂತಲೂ ಚೆಲುವೆಯಾ?
ಹೌದೂ ಆ ಗಿಣ್ಣಾಲು ಇಡ್ಲಿಯನ್ನು ನಾನೊಬ್ಬ ತಿನ್ನುವುದಕ್ಕಾಗುತ್ತದಾ?
ತೊಡೆ ಸಂದುಗಳಲ್ಲಿದ್ದ ಸೆಳೆತ ಇನ್ನೆಂದೂ ಬರುವುದಿಲ್ಲ.ಏಕೆಂದರೆ ಅದನ್ನು ಹಿಪ್ಪೆ ಮಾಡಲು ನನ್ನ ಇನಿಯನಿಲ್ಲ.

20100514

ನಾನು ಕಾಣದ ಕನಸುಗಳು

ಬಾಲ್ಯದಲ್ಲಿ ನನ್ನ ಕನಸಲ್ಲಿ ಬರುತ್ತಿದ್ದುದು
ಏಣಿಯ ಅಡಿಯಲ್ಲಿ ಕಂಬಳಿಯೊಳಗೆ ಗೂಡು ಕಟ್ಟಿದ ಗುಬ್ಬಿ.
ಮನೆಗೆ ಬಂದ ನೆಂಟರಿಗಾಗಿ ಅಪ್ಪ
ಕಂಬಳಿ ಬಿಡಿಸಿದ್ದು
ಗುಬ್ಬಿಯ ಪುಟ್ಟ ಮರಿ ಹಾರುವ ಮೊದಲೇ
ಕೆಳಗೆ ಬಿದ್ದದ್ದು
ಮತ್ತೆ ನಾನು ಕಂಬಳಿಯನ್ನು ಸುತ್ತಿ ಎತ್ತಿ ಅಲ್ಲೇ ಇಟ್ಟು
ಬಿದ್ದ ಗುಬ್ಬಿ ಮರಿಯನ್ನು ಅದರೊಳಗೆ ತೂರಿಸಿದ್ದು..
ಆಮೇಲೆ ಆ ಮರಿ ಅಲ್ಲೇ ಕೊಳೆತು ನಾರಿದ್ದು..
ಯೌವನದಲ್ಲಿ ನನ್ನ ಕನಸಲ್ಲಿ ಬರುತ್ತಿದ್ದುದು
ಕುಮಾರಪರ್ವತದ ಬುಡದಲ್ಲಿ ಸೋಗೆ ಹಾಸಿನ ಮನೆಯಲ್ಲಿದ್ದ ಹುಡುಗಿ
ಅವಳಿಗಾಗಿ ನಾನು ಪರ್ವತ ಏರಲು ಹೊರಟದ್ದು
ಆಕಾಶಕ್ಕೆ ಏಣಿ ಇಟ್ಟ ಹಾಗಿದ್ದ ಬಂಡೆಯ ಅರ್ಧಕ್ಕೆ
ನಿಂತು ಥರ ಥರ ನಡುಗಿದ್ದು
ಏರಲಾಗದೇ ಇಳಿಯಲಾಗದೇ ಕನಲಿದ್ದು
ಆಮೇಲೆ ಆ ಚೆಲುವೆ ಇನ್ಯಾರನ್ನೋ ಮದುವೆಯಾದದ್ದು..
ಮಧ್ಯವಯಸ್ಸಿನಲ್ಲಿ ನನ್ನ ಕನಸಲ್ಲಿ ಬರುತ್ತಿದ್ದುದು
ದೇಹದೊಳಗೆ ಬಾಕಿಯಾಗಿದ್ದ ಕಸುವುಗಳು
ಸುಮ್ಮನೇ ಕುಳಿತಾಗಲೂ ಹೆದರಿಸುವ ಹಾಗೇ
ಹೆಸರೇ ಇಲ್ಲದ ರೋಗಗಳು
ರಾತ್ರಿ ಹೊತ್ತಿಗೇ ಕಾಯುತ್ತಿದ್ದ ಪೂರ್ತಿಯಾಗದ ಬಯಕೆಗಳು
ಮುಂಜಾನೆಗೂ ಮುನ್ನ ಬಿದ್ದು ಎಲೆಗಳ ಮೇಲಿಂದ ಜಾರುತ್ತಿದ್ದ ಹನಿಗಳು
ಆಮೇಲೆ ನನಗೆ ಉಳಿದದ್ದು ಕನಸೇ ಇಲ್ಲದ ರಾತ್ರಿಗಳು..

20100509

ಒಂದು ಬಣ್ಣದ ಚಿತ್ರ ಬಿಡಿಸದ ಪಂಚಾಯತ್

ಯಾರಿಗೆ ಬೇಕು ಈ ಪಂಚಾಯತ್?
ದಮ್ಮಿಲ್ಲ,ದಾಢಿ ಇಲ್ಲ,ಧಾರ್ಷ್ಟ್ರ್ಯವಂತೂ ಇಲ್ಲವೇ ಇಲ್ಲ..ಇದು ಇದ್ದೂ ಇಲ್ಲದಂತೆ..
ಆದ್ದರಿಂದ ಈ ಪಂಚಾಯತ್ ಚುನಾವಣೆಯಲ್ಲಿ ಮತದಾರನಿಗೆ ಬೇಕಾದ್ದು ಏನು?
ಈ ಪ್ರಶ್ನೆಗೆ ಸ್ವತಃ ಮತದಾರರ ಬಳಿಯೇ ಉತ್ತರವಿಲ್ಲ.
ತನ್ನ ಓರಗೆಯ ವ್ಯಕ್ತಿಯೋರ್ವ ಓಟಿಗೆ ನಿಂತಿದ್ದೇನೆ ಎಂದು ಕೈ ಮುಗಿಯುತ್ತಾನೆ.ಅವನು ತಾನು ಇಷ್ಟ ಪಟ್ಟ ಪಕ್ಷದವನೇ ಅಥವಾ ತನ್ನ ಗೆಳೆಯನೇ ಎಂದು ಮತದಾರ ನೋಡಿದರೆ ಸಾಕೇ?
ತನ್ನ ಬೀದಿಗೆ ದೀಪ,ಪಕ್ಕದ ತೋಡಿಗೆ ಸಂಕ,ತುಂಬಿದ ಚರಂಡಿಯ ಕ್ಲೀನಿಂಗು..ಇಷ್ಟೇನಾ ಈ ಪಂಚಾಯತ್‌ನ ವಿಲೇವಾರಿ?
ಬಹುತೇಕ ಮತದಾರರು ಇಷ್ಟೇ ಎನ್ನುತ್ತಿದ್ದಾರೆ.ಪಂಚಾಯತ್ ಮೆಂಬರುಗಳಿಗೆ ಇದಕ್ಕಿಂತ ಹೆಚ್ಚು ಪವರ್ರು ಎಲ್ಲಿದೆ ಎಂದು ಕೇಳುತ್ತಾರೆ.ನಿಜವೇ ಇರಬಹುದು..ಹೇಳಿಕೇಳಿ ಈ ಪುಟಾಣಿಗಳ ಬಳಿ ಉಳಿದುದನ್ನೆಲ್ಲಾ ಕೇಳಿ ಹೇಳಿ ಏನು ಪ್ರಯೋಜನ ಎಂದು ಮತದಾರರು ಕೇಳುತ್ತಾರೆ.
ಹಾಗಾದರೆ ಈ ಚುನಾವಣೆ ಯಾರಿಗೆ ಲಾಭ?
ತಳ ಮಟ್ಟದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ರಾಜಕೀಯ ಪಕ್ಷಗಳಿಗೆ?ಮೊದಲ ಹಂತದಲ್ಲಿ ತಮ್ಮನ್ನು ಬೆಳೆಸಿಕೊಳ್ಳಬೇಕೆಂಬ ಕಿರಿಯ ರಾಜಕಾರಣಿಗಳಿಗೆ?ಒಟ್ಟಾರೆಯಾಗಿ ಹಳ್ಳಿ ರಾಜಕೀಯಕ್ಕೆ?
ಗ್ರಾಮಸ್ವರಾಜ್ಯದ ಕಲ್ಪನೆ ಇಷ್ಟೇನಾ?
ವಿಶೇಷ ವಿತ್ತ ವಲಯ,ಎಕ್ಸ್‌ಪ್ರೆಸ್ ರಸ್ತೆ ಅಂತ ಹಳ್ಳಿಗೆ ಹಳ್ಳಿಯನ್ನೇ ಎತ್ತಿಕೊಂಡು ಹೋಗುತ್ತಾರಲ್ಲಾ ಆಗ ಅದನ್ನು ತಡೆಯೋದಕ್ಕೆ ಈ ಗ್ರಾಮಪಂಚಾಯತ್‌ಗಳಿಗೆ ಶಕ್ತಿಯೇ ಇಲ್ಲವಲ್ಲಾ..ಇದು ಗ್ರಾಮ ಸ್ವರಾಜ್ಯವೇ?
ಅಣೆಕಟ್ಟು,ವಿದ್ಯುತ್ ಯೋಜನೆ,ಆ ಸ್ಥಾವರ,ಈ ಕೈಗಾರಿಕೆ ಅಂತ ನಗರ ಶಕ್ತಿಗಳು ಬಂದು ಹಳ್ಳಿಯನ್ನು ಆಕ್ರಮಿಸಿ ಕೂರುತ್ತವಲ್ಲಾ ಆಗ ಈ ಪಂಚಾಯತ್‌ಗಳ ಒಪ್ಪಿಗೆ ಪಡೆಯಬೇಕು ಎಂಬುದು ಕೂಡಾ ಪಂಚಾಯತ್‌ನ ನಿರ್ಧಾರವೇ ಆಗಿರುವುದಿಲ್ಲವಲ್ಲಾ..
ಅದು ಆ ಪಂಚಾಯತ್‌ನ ಜನರ ಸಾಮೂಹಿಕ ನಿರ್ಣಯವೇ ಅಲ್ಲವಲ್ಲಾ..
ಹಾಗಾದರೆ ಯಾವ ಪುರುಷಾರ್ಥಕ್ಕೆ ಈ ಪಂಚಾಯತ್‌ಗಳು ಉಳಿದುಕೊಳ್ಳಬೇಕು?
ಕೇವಲ ರಾಜಕೀಯ ಪಕ್ಷಗಳ ಮೂಲಸ್ಥಾವರದ ನಿರ್ಮಾಣಕ್ಕೆ ಪಂಚಾಯತ್‌ಗಳು ಬೇಕೇ?
ಅಂಗಡಿ-ಮಂಗಟ್ಟುಗಳಿಂದ ತೆರಿಗೆ ವಸೂಲಿ ಮಾಡೋದು ಮಾತ್ರವೇ ಗ್ರಾಮಸ್ವರಾಜ್ಯವೇ? ತಮಗೆ ಬೇಕಾದವರಿಗೆ ಗೂಡಂಗಡಿ ಹಾಕಲು ಎರೇಂಜ್‌ಮೆಂಟ್ ಮಾಡೋದಕ್ಕೆ ಪ್ರತಿನಿಧಿಗಳು ಬೇಕೆ?
ಕಳೆದ ಅವಧಿಯ ಒಂದು ಅವಲೋಕನವನ್ನಷ್ಟೇ ನೋಡಿರಿ.ಐದು ವರ್ಷಗಳಲ್ಲಿ ಕಾಲ ಎಷ್ಟೊಂದು ಬದಲಾಗುತ್ತಿತ್ತು.ಹಳ್ಳಿಗಳು ಹೇಗೆ ತಮ್ಮ ನೆಲೆಗಟ್ಟುಗಳನ್ನು ಕಳೆದುಕೊಳ್ಳುತ್ತಾ ಹೋದವು..ಹೇಗೆ ನಗರೀಕರಣದ ಮಾಯೆ ಹಳ್ಳಿಗಳನ್ನು ಆವರಿಸುತ್ತಾ ಹೋದವು ಎಂಬುದನ್ನಷ್ಟೇ ನೋಡಿ..
ಆಗ ಈ ಪಂಚಾಯತ್‌ಗಳ ನೆಲೆ- ಬೆಲೆ ಗೊತ್ತಾಗುತ್ತದೆ.
ಗ್ರಾಮದ ಧ್ವನಿಗೆ ಕಂಠವಾಗಲಾರದೇ ಪಂಚಾಯತ್‌ಗಳು ನರಳಿದವು.ಎಲ್ಲೆಲ್ಲೂ ಅಸಹಾಯಕತೆ ಕಾಣುತ್ತಿದ್ದವು.
ಇದಕ್ಕೆ ಉದಾಹರಣೆಯಾಗಿ ಕೃಷ್ಯುತ್ಪನ್ನಗಳ ಬೆಲೆಯನ್ನೇ ತೆಗೆದುಕೊಳ್ಳೋಣ.ತಮ್ಮ ಗ್ರಾಮದ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಬಡತನ,ಸೋಲು,ಸಾಲ ಎಲ್ಲಾ ಗ್ರಾಮಗ್ರಾಮಗಳಲ್ಲಿ ಹರಿದಾಡಿದವು.ರೈತಾಪಿ ವರ್ಗದಲ್ಲಿ ಅದೆಂಥಾ ಡಿಪ್ರೆಶನ್ ಕಂಡು ಬಂತೆಂದರೆ ಒಬ್ಬನೇ ಒಬ್ಬ ಸಾಮಾನ್ಯ ರೈತ ಸಂತೋಷದಿಂದ ಒಂದು ತುತ್ತೂ ತಿನ್ನಲಾಗಲಿಲ್ಲ.ಬೆಳೆ ಇಲ್ಲ,ಬೆಲೆ ಇಲ್ಲ ಎಂಬ ಪರಿಸ್ಥಿತಿ ಎಲ್ಲೆಡೆ ಕಾಣುತ್ತಿತ್ತು.ದೇಶದ ಮೂಲ ನೆಲೆ ಗ್ರಾಮಗಳು,ಗ್ರಾಮದ ಮೂಲ ರೈತ.ಅಂಥಾ ತುತ್ತತುದಿಯೇ ಕರಟಿಹೋಗತೊಡಗಿತು.
ಪಂಚಾಯತ್‌ಗಳು ಏನಾದರೂ ಮಾಡಲಾಯಿತೇ?
ಇಲ್ಲ.
ಬಹುಶಃ ಒಂದೇ ಒಂದು ಗ್ರಾಮಪಂಚಾಯತ್ ಕೂಡಾ ರಾಜ್ಯ ಸರಕಾರಕ್ಕೆ ಒಂದಾದರೂ ಪತ್ರ ಬರೆದು ತಮ್ಮ ಜನರ ಕಷ್ಟದ ಬಗ್ಗೆ ತಿಳಿಹೇಳಲಿಲ್ಲ,ಒಂದೊಮ್ಮೆ ಹೇಳಿದರೂ ಒಂದೇ ಒಂದು ಸರಕಾರದ ಮಂತ್ರಿಯಾಗಲಿ,ಅಧಿಕಾರಿಯಾಗಲಿ ಆ ಬಗ್ಗೆ ಅಯ್ಯೋ ಎಂದ ಉದಾಹರಣೆ ಇಲ್ಲ..ಐದು ವರ್ಷಗಳಲ್ಲಿ ಮೂರು ಬಗೆಯ ಸರಕಾರಗಳು ಬಂದು ಹೋಗಿದ್ದವು.ಕಾಂಗ್ರೆಸ್,ಜೆಡಿಎಸ್,ಬಿಜೆಪಿ,ಆಡಳಿತ ಮಾಡಿದವು.ಧರ್ಮಸಿಂಗ್ ಕುಮಾರ ಸ್ವಾಮಿ.ಯಡಿಯೂರಪ್ಪ ಆಡಳಿತಕ್ಕೇರಿ ಕೂತು ತಾವೆಲ್ಲಾ ಹಳ್ಳಿಯ ಜನ ಎಂದು ಜೋಕ್ ಮಾಡಿದರು.ಮೂರೂ ಪಕ್ಷಗಳ ಹಣೆಬರಹ ಏನೆಂದು ನೋಡಿದ್ದಾಗಿದೆ.ಮೂವರು ಮುಖ್ಯಮಂತ್ರಿಗಳ ಜಾತಕ ಓದಿಯಾಗಿದೆ.ಪಂಚಾಯತ್‌ಗಳಿಗೆ ಇದಕ್ಕಿಂತ ದೊಡ್ಡ ಪಾಠ ಇನ್ನೊಂದಿರದು.
ತನ್ನ ಗ್ರಾಮದ ರೈತನಿಗೆ ಬಿತ್ತನೆ ಕಾಲಕ್ಕೆ ಬೀಜ,ಚಿಗುರುವ ಹಂತಕ್ಕೆ ಗೊಬ್ಬರ,ನೀರಾವರಿಗೆ ವಿದ್ಯುತ್,ಕೊಯ್ಲಿನ ನಂತರ ಮಾರುಕಟ್ಟೆ ಕೊಡಿಸಲು ಪಂಚಾಯತ್‌ಗಳಿಗೆ ಪವರ್ರಿಲ್ಲ ಎಂದರೆ ಇದು ತಳ ಹಂತದ ಅಧಿಕಾರ ಆಗೋದು ಹೇಗೆ/ವಿಕೇಂದ್ರೀಕೃತ ಅಧಿಕಾರ ವ್ಯವಸ್ಥೆ ಎಂದು ಕರೆಯೋದು ಹೇಗೆ?
ಸರಕಾರದ ಬಳಿ ನೂರಾರು ಯೋಜನೆಗಳಿವೆ.ಎಲ್ಲವೂ ಜನರಿಗಾಗಿಯೇ ಇವೆ.ಹಳ್ಳಿಗಳನ್ನು ಹಾದೇ ತಾನೇ ಯೋಜನೆಗಳು ಹೋಗಬೇಕು?ಅವುಗಳನ್ನೆಲ್ಲಾ ಗ್ರಾಮಗಳ ಸರ್ವಾಂಗೀಣ ಉದ್ಧಾರಕ್ಕಾಗಿಯೇ ರಚಿಸಲಾಗಿದೆ ಎಂದು ಹೇಳಿದರೆ ಈಗ ನಂಬುವ ಕಾಲ ಕಳೆದುಹೋಗಿದೆ.ಬೆಳೆಗಳಿಗೆ ಬೆಲೆ ಇಲ್ಲದ ಹೊತ್ತಿನಲ್ಲಿ ಉಚಿತ ವಿದ್ಯುತ್ ರೈತರ ಬಲಕ್ಕೆ ನಿಲ್ಲಲಾರದು.ದಾರಿದೀಪ,ಆರೋಗ್ಯ ವಿಮೆ,ಉದ್ಯೋಗ ಮೇಳಗಳು ಗ್ರಾಮೀಣ ಜನರ ಬದುಕಿಗೆ ಪಂಚಾಯತ್ ಕೊಡುಗೆ ಏನಲ್ಲ.
ಒಂದೇ ಒಂದು ಪಂಚಾಯತ್ ತನ್ನ ಜನರಿಗೆ ತಾನೇ ಕಟ್ಟಿಕೊಟ್ಟ ಬದುಕು ಯಾವುದಾದರೂ ಉಂಟೋ..
ಯಾವ ಪಂಚಾಯತ್ ರೈತರ ಟೊಮೆಟೋ ರಸ್ತೆಗೆ ಸುರಿಯದಂತೆ ಮಾಡಿದೆ?ಯಾವ ಪಂಚಾಯತ್ ನನ್ನ ಅಡಕೆ ಬೆಳೆಗಾರನಿಗೆ ಇಷ್ಟು ರೇಟು ಕೊಡದೇ ಇದ್ದರೆ ನನ್ನೂರಲ್ಲಿ ಅಂಗಡಿ ಮುಚ್ಚಿ ಹೋಗು ಎಂದು ವ್ಯಾಪಾರಿಗೆ ಹೇಳಿದೆ?ಯಾವ ಪಂಚಾಯತ್ ಆತ್ಮಹತ್ಯೆ ಮಾಡದಂತೆ ಒಬ್ಬ ಸೋತ ರೈತನಿಗೆ ಕೌನ್ಸಿಲಿಂಗ್ ಮಾಡಿದೆ?ಯಾವ ಪಂಚಾಯತ್ ತನ್ನೂರಿನಲ್ಲಿ ಸಾಮೂಹಿಕ ವಿವಾಹ ನಡೆಸಿದೆ?ಯಾವ ಪಂಚಾಯತ್ ತನ್ನೂರಿನ ಭ್ರಷ್ಠ ಅಧಿಕಾರಿಯನ್ನು ಹಿಡಿದು ಚಚ್ಚಿದೆ?
ತನ್ನ ಊರಲ್ಲಿ ಹಾದು ಹೋಗುವ ಪಿಡಬ್ಲ್ಯುಡಿ ರಸ್ತೆಯ ಹೊಂಡವನ್ನು ಯಾವುದಾದರೂ ಪಂಚಾಯತ್ ಮುಚ್ಚಿದ್ದು ಉಂಟೇ?ತನ್ನ ಗ್ರಾಮದ ಶಾಲೆಯ ಗೋಡೆಯಲ್ಲಿ ಒಂದು ಬಣ್ಣದ ಚಿತ್ರ ಬಿಡಿಸದ ಪಂಚಾಯತ್ ಇಡೀ ದೇಶದ ಭವಿಷ್ಯ ಬರೆಯುತ್ತದೆ ಎಂದರೆ ನಂಬುವುದಾದರೂ ಹೇಗೆ?

20100505

ಈ ಕವನ ಅವಳಿಗಲ್ಲ

ಒಂದು ರಾತ್ರಿ
ನನಗೆ ಕನಸು ಬಿತ್ತು.
ಅದರಲ್ಲಿ ಇಬ್ಬರು ಬಂದಿದ್ದರು.
ಒಬ್ಬರು ನಿಮ್ಮ ದೇವರು,ಒಬ್ಬಳು ನನ್ನ ಪ್ರೇಯಸಿ.
ಇಬ್ಬರೂ ಒಟ್ಟಿಗೇ ಬಂದರು.
ತಬ್ಬಿಕೋ ಎಂದರು.
ದೇವರು ಮಂದಸ್ಮಿತ,
ಪ್ರೇಯಸಿಯ ಸುಸ್ಮಿತಾ.
ದೇವರು ಬದಲಾಗಿರಲಿಲ್ಲ.
ಪ್ರೇಯಸಿ ಕೂಡಾ ಅಂದಿನವಳೇ.
ಎಲ್ಲಿಗೆ ಹೊರಟಿರೋ ಎಂದು ಕೇಳಿದೆ..
ದೇವರೆಂದರು ಕಾಲದ ಕೊನೆಗೆ,
ಪ್ರೇಯಸಿ ಎಂದಳು ಪ್ರೀತಿಯ ಶುರುವಿಗೆ.
ಕ್ಷಣ ಕಾಲ ಇಲ್ಲಿಗೆ ಇರಲು ಬಂದಿದ್ದೇವೆ,
ಮರಳಿ ಮತ್ತೊಮ್ಮೆ ಬರಲಾರೆವು..
ಈಗಲೇ ತಬ್ಬಿಕೋ,
ಮುತ್ತಿಕ್ಕಿ ಮದವೇರಿಸು,
ಅಪ್ಪುಗೆ,ಆಲಿಂಗನ,ಮೈ ತುಂಬ ಚುಂಬನ
ಸ್ಪರ್ಶಕ್ಕೆ ಆಗಲಿ ಮೋಕ್ಷ,
ಮತ್ತೊಮ್ಮೆ ಹುಟ್ಟದಿರಲಿ ಈ ಮಾಯೆ ಎಂಬ ಸತ್ಯ..
ನಾನು ಎಚ್ಚರವಾದಾಗ ಅಮ್ಮ ತೂಗುತ್ತಿದ್ದಳು..
ನಾನು ಈಗಲೂ ಬರೀ ಹಸುಳೆ.

20100421

ಇದು ಮಾಧ್ಯಮೋದ್ಯಮ..

ಗೆಳೆಯನೊಬ್ಬ ದೆಹಲಿಯಲ್ಲಿದ್ದಾನೆ.ಇನ್ನೂ ಮೂವತ್ತು ಆಗಿಲ್ಲ.ಆರಂಭದಿಂದಲೇ ನನಗೆ ಆತ ಇಷ್ಟವಾದ ಹುಡುಗ.ಒಂಥರಾ ನನ್ನ ತಮ್ಮನಿದ್ದ ಹಾಗೇ.
ಒಂದು ಕಾರಣಕ್ಕೆ ನಾನೂ ಆತನೂ ಸಮಾನಶೀಲರು.ಅದು ಭ್ರಷ್ಠಾಚಾರ.
ವ್ಯವಸ್ಥೆಯ ಭ್ರಷ್ಠತೆಗೆ ನಾವಿಬ್ಬರೂ ಸದಾ ಆಂಗ್ರೀಗಳೇ..
ಈ ಹುಡುಗ ರಾಜಧಾನಿಯಲ್ಲಿ ಮುಖ್ಯವರದಿಗಾರ.ಬೇಜಾನ್ ದುಡ್ಡು ಮಾಡುವ ಎಲ್ಲಾ ಅವಕಾಶಗಳು ಅಲ್ಲಿದ್ದವು.ಕನಾಟಕದವರೇ ಆದ ನಾಲ್ಕೈದು ಮಂತ್ರಿಗಳು ಬೇರೆ.ಒಬ್ಬೊಬ್ಬರೊಬ್ಬರ ಜೊತೆ ಡೀಲಿಂಗು ಇಟ್ಟುಕೊಂಡಿದ್ದರೆ ಉತ್ತರಕನ್ನಡದ ಅವನ ಹಳ್ಳಿಮನೆ ಮೇಲೆ ಹೆಲಿಕಾಪ್ಟರ್ ಇಳಿಸಬಹುದಿತ್ತು.
ಇಷ್ಟು ಸಾಕು.
ಅವನೇ ಇತ್ತೀಚೆಗೆ ನನಗೆ ಹೇಳಿದ ಒಂದು ಅನುಭವ ಇಲ್ಲಿದೆ.ಅವನ ಮಾತುಗಳಲ್ಲೇ ಕೇಳಿರಿ.
ಆ ಬೆಳಗ್ಗೆ ನಾನು ಯಾವುದೋ ಕರ್ನಾಟಕದ ಮ್ಯಾಟರು ಇದೆ ಅಂತ ಸುಪ್ರೀಂ ಕೋರ್ಟ್‌ಗೆ ಹೋಗಿದ್ದೆ.ಹಾದಿಯಲ್ಲಿ ಆ ರಾಷ್ಟ್ರೀಯ ಚ್ಯಾನಲ್ಲಿನ ರಿಪೋರ್ಟರ್ ಸಿಕ್ಕ.ಯುವಕ.ನನಗಿಂತ ಐದಾರು ವರ್ಷ ಹೆಚ್ಚಿಗೆ ಇರಬಹುದು.ಅನೇಕ ಬಾರಿ ನೋಡಿದ್ದೆ,ಮಾತನಾಡಿರಲಿಲ್ಲ.ಅವನು ಎದುರಾಬದುರಾ ನಿಂತ.ಸಣ್ಣಗೆ ನಕ್ಕ.ಅವನ ಲಹರಿ ನೋಡಿದರೆ ಯಾಕೋ ನನ್ನನ್ನೇ ಹುಡುಕಿಕೊಂಡು ಬಂದ ಹಾಗೇ ಇತ್ತು.
ಇರಲಿಕ್ಕಿಲ್ಲ ಎಂದುಕೊಂಡೆ.ಘನಂದಾರಿ ಚ್ಯಾನಲ್ಲಿನವನು.ದೊಡ್ಡ ಮನುಷ್ಯ.ಅವನಂತಹ ಪರದೇಸಿಗಳನ್ನು ಕಂಡರೆ ನಮ್ಮ ಕರ್ನಾಟಕದ ಮಂತ್ರಿಗಳೂ ಎದ್ದುಬಿದ್ದೂ ನಮಸ್ಕಾರ ಮಾಡುತ್ತಾರೆ.ಅವನಂಥವರು ಬಂದರೆಂದರೆ ನಮ್ಮಂಥ ಬಡ ಕನ್ನಡ ವರದಿಗಾರರನ್ನು ಮಾತನಾಡಿಸೋದು ಬಿಡಿ,ಒಂದು ಸಣ್ಣ ನಗೆ ಹಚ್ಚಲೂ ಅವರಿಗೆ ಬಿಡುವಾಗೋದಿಲ್ಲ.ಹೀಗಿರುತ್ತಾ ನನ್ನ ಬಳಿ ಈ ದೊಡ್ಡ ಮನುಷ್ಯನಿಗೇನು ಕೆಲಸ ಅಂದುಕೊಂಡೆ.
ಆದರೆ ನಾನು ಊಹಿಸಿದಂತೆ ಆಗಿತ್ತು.ಅವನು ನನ್ನನ್ನೇ ಹುಡುಕಿ ಬಂದಿದ್ದ.ಜೊತೆಗೆ ಒಬ್ಬ ಅಧಿಕಾರಿ ವರ್ಚಸ್ಸಿನ ವಯಸ್ಕ.
ಉಭಯಕುಶಲೋಪರಿ ಸಾಂಪ್ರತದ ಬಳಿಕ ಆತ ಹೇಳಿದ, ನೇರವಾಗಿ ವಿಷಯಕ್ಕೆ ಬರುತೇನೆ.
ಬನ್ನಿ ಎಂದೆ.
ಆತ ಹೇಳಿದ ಮಾತುಗಳನ್ನು ಆತನದ್ದೇ ವಾಕ್ಯಗಳಲ್ಲಿ ಕೇಳಿ.
ನೋಡ್ರೀ ಮಿಸ್ಟರ್.ಈ ವ್ಯಕ್ತಿ ರೈಲ್ವೇನಲ್ಲಿ ಓರ್ವ ದೊಡ್ಡ ಆಫೀಸರ್ರು.ಒಳ್ಳೆಯವ ಕಣ್ರೀ.ಆದರೆ ಏನು ಮಾಡೋಣ ಹೇಳಿ,ಇತ್ತೀಚೆಗೆ ಒಂದು ತಪ್ಪು ಸನ್ನಿವೇಶದಲ್ಲಿ ಈ ದೊಡ್ಡಮನುಷ್ಯ ಒಂದು ಕೇಸಲ್ಲಿ ಬಲಿಯಾಗಿದ್ದಾರೆ.ಸಸ್ಪೆಂಡ್ ಆಗಿದ್ದಾರೆ.
ನೋಡ್ರೀ ಮಿಸ್ಟರ್ ನೀವು ಒಂದು ಉಪಕಾರ ಮಾಡಬೇಕು.ನಿಮಗೂ ನಿಮ್ಮ ಕರ್ನಾಟಕದವರಾದ ರೈಲ್ವೇ ಅಸಿಸ್ಟೆಂಟ್ ಮಿನಿಸ್ಟ್ರಿಗೂ ತುಂಬಾ ಚೆನ್ನಾಗಿದೆ ಅಂತ ನನಗೆ ಗೊತ್ತಿದೆ.ಅವರಿಗೊಂದು ಮಾತು ಹೇಳಿ ಇವರ ಸಸ್ಪೆಂಡ್ ತೆಗೆಸಿಬಿಡಿ.ಅಷ್ಟು ಮಾಡಿ ಸಾಕು.ಆಮೇಲೆ ಡಿಪಾರ್ಟ್‌ಮೆಂಟು ಎನ್ಕ್ವೈರಿ ಎಲ್ಲಾ ಇವರೇ ನೋಡ್ಕೋತಾರೆ.ಯಾವುದಕ್ಕೂ ಸಸ್ಪೆಂಡ್ ರೆವೋಕ್ ಆಗಬೇಕು ಅಷ್ಟೇ..

ಈ ದೊಡ್ಡ ಚ್ಯಾನಲ್ಲಿನ ಮಹಾಶಯನ ಮಾತು ಕೇಳಿ ನಾನು ಬಿದ್ದೋದೆ.ಅಪರಾತಪರಾ ಆಗಿ ನಿಂತೆ.
ಅದನ್ನೇ ಕ್ಯಾಚ್ ಮಾಡಿದಂತವನಾಗಿ ಆತ ಹೇಳಿದ್ದು ಆಗ ಆ ಮಾತುಗಳು..
ಸಾರ್..
ಸಾರ್..ನೀವು ಒಂದು ಸಸ್ಪೆಂಡ್ ಕಿತ್ತು ಹಾಕಿಸಿ.ಅದಕ್ಕಾಗಿ ನಿಮಗೆ ಐದು ಲಕ್ಷ ಕೊಡಲಾಗುವುದು.ಈಗಾಗಲೇ ನಾನು ಇವರ ಜೊತೆ ಡೀಲ್ ಮಾಡಿದ್ದೇನೆ.ಟೆನ್ ಲಾಕ್..
ಟೆನ್ ಲಾಕ್..ಕಣ್ರೀ..ಫಿಫ್ಟೀ ಫಿಫ್ಟೀ..ಮಾಡ್ಕೊಳ್ಳೋಣ..ಪ್ಲೀಸ್..

ನಾನು ಮೂಕನಾಗಿದ್ದೆ.
ಇನ್ನು ನಿಂತರಾಗದು ಎಂದುಕೊಂಡೆ.
ಈ ಕೆಲಸ ನನ್ನ ಕೈಲಾಗದು ಎಂದೆ.ಆತ ರೆಚ್ಚೆ ಹಿಡಿದ.
ಆಮೇಲೆ ಹೇಳಿದೆ,ನಾಳೆ ಬೆಳಗ್ಗೆ ತಿಳಿಸ್ತೇನೆ.
ಆಮೇಲೆ ಅಲ್ಲಿಂದ ಓಡಿ ಹೋದೆ.
ಮರುದಿನ ಮುಂಜಾನೆ ಆತನಿಗೆ ಒಂದು ಎಸ್ಸೆಂಎಸ್ ಕಳುಹಿಸಿದೆ,
ಸ್ಸಾರಿ..
ಆತನ ಉತ್ತರ ಏನಿತ್ತು ಗೊತ್ತಾ,
ಬದುಕೋದಕ್ಕೆ ಕಲಿಯೋ..
ಆಮೇಲೆ ಅವನ ಇತಿವೃತ್ತಗಳನ್ನು ತಿಳಿದಾಗ ಗೊತ್ತಾದದ್ದು,
ಆತ ಈಗಾಗಲೇ ಕೋಟಿ ರೂಪಾಯಿ ನಗದು ಸಂಪಾದಿಸಿದ್ದಾನೆ,ಅರ್ಧ ಪ್ರಪಂಚ ಸುತ್ತಿ ಬಂದಿದ್ದಾನೆ,ಇಷ್ಟರಲ್ಲೇ ಆತ ಈ ಹುದ್ದೆ ಬಿಡುವವನಿದ್ದಾನೆ...
ಆತ ಏನಾಗಬಹುದೋ..

20100414

ಧರ್ಮಪ್ರಜಾ ಸಂಪತ್ ಸಿದ್ಧ್ಯರ್ಥಂ..
ಸಾನಿಯಾ ಮದುವೆ ಮಾಡಿಕೊಂಡಳು.
ಶುಭವಾಗಲಿ.
ಆಕೆಯ ಮದುವೆಯನ್ನು ಇಂಡೋ -ಪಾಕ್ ಸಂಬಂಧದ ಹೊಸ ಅಧ್ಯಾಯವೆಂದೂ,ಸಾನಿಯಾ ಶೋಯೆಬ್‌ನನ್ನು ಮದುವೆಯಾದರೆ ಏನು ತಪ್ಪು,ಸೋನಿಯಾ ರಾಜೀವ್‌ಗಾಂಧಿಯನ್ನು ಮದುವೆಯಾಗಲಿಲ್ಲವೇ ಎಂದು ಕೇಳಿದವರನ್ನೂ ಮನಸಾರೆ ವಂದಿಸೋಣ.
ಆದರೆ ಒಂದು ಮಾತು ಮರೆಯದಿರೋಣ..
ಭಾರತದಲ್ಲಿ ಯಾವುದೇ ಹೆಣ್ಣುಮಗಳು ಗಂಡನ ಮನೆಗೆ ಸಲ್ಲುತ್ತಾಳೆ.ಅವಳ ಕುಲಗೋತ್ರವೆಲ್ಲಾ ಕಡಿದು ಆಕೆ ಗಂಡನ ಮನೆಯ ಖಾಯಂ ಸದಸ್ಯೆಯಾಗುತ್ತಾಳೆ.
ಮುಂದೆ ಆಕೆಗೆ ಅವಳು ಹುಟ್ಟಿದ ಮನೆ ಮನೆತನ ಮುಗಿದ ಅಧ್ಯಾಯ.
ಆಕೆ ಕಾಲಿಟ್ಟ ಮನೆ ಅವಳ ಸ್ವಂತ ಮನೆ ಮನಸ್ಸು ಮನೆತನ.
ಪತಿಯೇ ಪರದೈವ.
ಗಂಡನ ಪಾದಾರವಿಂದವೇ ಅವಳಿಗೆ ಸರ್ವಸ್ವ.
ಎಂದೂ ಯಾವುದೇ ಭಾರತೀಯ ಹೆಣ್ಮಗಳು ಯಾವುದೇ ಹಂತದಲ್ಲೂ ಶ್ರೀಮತಿಯಾದ ಮೇಲೆ ಇದು ಅನಿವಾರ್ಯ.ಆಕೆ ಕಾರ್ಯೇಷು ದಾಸಿ ,ಕರಣೇಷು ಮಂತ್ರಿ,ಭೂತೇಷು ಲಕ್ಷ್ಮೀ.ಶಯನೇಷು ರಂಭಾಃ..
ಸಾನಿಯಾ ಕೂಡಾ ಇನ್ನು ಮುಂದೆ ಶೋಯಬ್‌ನ ದಾಸಿ,ಮಂತ್ರಿ,ಲಕ್ಷ್ಮೀ ಮತ್ತು ರಂಬಾ..
ಆಕೆ ಇನ್ನು ಮಿರ್ಜಾ ಅಲ್ಲ.
ಸಾನಿಯಾ ಶೋಯೆಬ್‌ನ ದೇಶ,ಕಾಲ,ಕುಲ,ಗೋತ್ರಗಳಿಗೆ ಸಲುತ್ತಾಳೆ.
ಇಷ್ಟಕ್ಕೂ ಮದುವೆ ಏಕೆ ಮಾಡಿಕೊಳ್ಳುತ್ತಾರೆ..?
ಧರ್ಮ ಪ್ರಜಾ ಸಂಪತ್ ಸಿದ್ಯರ್ಥಂ..ಎಂದು ಹೇಳುತ್ತದೆ ಭಾರತೀಯ ಸಂಹಿತೆಗಳು.
ದೇಶಕ್ಕೆ ಧರ್ಮಪ್ರಜೆಗಳನ್ನು ನೀಡುವುದಕ್ಕೋಸ್ಕರ ಮದುವೆ ಮಾಡಿಕೊಳ್ಳುವುದೇ ಆದರೆ ಸಾನಿಯಾ ಮುಂದೆ ನೀಡುವ ಮಗು ಯಾವ ದೇಶಕ್ಕೆ ಎಂದು ಕೇಳಬಹುದೇ?
ಶೋಯಬ್ ಪಾಕಿಸ್ತಾನಿ.
ಪಾಕಿಸ್ತಾನ ನಮ್ಮ ವೈರಿ ದೇಶ.
ವೈರಿ ಅಲ್ಲ ಎಂದು ನೀವು ವಾದಿಸಿದರೆ,ಮುಂಬೈ ದಾಳಿಯನ್ನು ನೀವು ಸಮರ್ಥಿಸಿದಿರಿ ಎಂದೇ ಅರ್ಥ.
ಸಾನಿಯಾ ಇನ್ನು ಪಾಕಿಸ್ತಾನದ ಮನೆಯವಳೂ,ಪಾಕಿಸ್ತಾನದ ಕುಲದವಳೂ,ಪಾಕಿಸ್ತಾನದ ಕಾಲದವಳೂ,ಪಾಕಿಸ್ತಾನದ ಗೋತ್ರದವಳೂ ಆಗಿದ್ದಾಳೆ.
ಆದ್ದರಿಂದ ಆಕೆ ಇನ್ನು ಮುಂದೆ ಆಡುವ ಆಟ ಎಲ್ಲಾ ಅವಳ ಮನೆ ಮನೆತನದ್ದೇ ಆಗಿರುತ್ತದೆ.
ಶೋಯಬ್ ಮಿರ್ಜಾ ಮನೆ ಅಳಿಯನಾಗಿ ಉಳಿದರೆ ಮೇಲೆ ಹೇಳಿದ ಎಲ್ಲಾ ವಿಚಾರಗಳನ್ನು ಹಿಂತೆಗದುಕೊಳ್ಳಲಾಗುವುದು.
ಸಂತಾಪ:ಸಾನಿಯಾ ಮಿರ್ಜಾಳ ಮೈ ಮಾಟ ನೋಡಿ ಅವಳನ್ನು ಈ ದೇಶದ ಮಹಾ ನಾಯಕಿ ಎಂಬಂತೆ ಕೊಂಡಾಡಿದ ಎಲ್ಲಾ ಮಾಧ್ಯಮ ಮಿತ್ರರಿಗೆ ನಮ್ಮ ಸಂತಾಪಗಳು.
ಸಾನಿಯಾ ಇನ್ನೂ ನಮ್ಮವಳೇ ಎಂದು ನಂಬಿದ ಎಲ್ಲಾ ಬುದ್ದುಗಳಿಗೆ ನಮ್ಮ ಸಂತಾಪಗಳು.
ಹಾಗೇ ಸಾನಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಹೊರಗೆ ಬಿದ್ದ,ಈಗ ಎಲ್ಲವನ್ನೂ ಟೀವಿ ಮೇಲೆ ನೋಡಿ ಮೌನವಾಗಿರುವ ಆ ಬಾಲ್ಯದ ಗೆಳೆಯಗೆ ನಮ್ಮ ಸಂತಾಪಗಳು.
ಹಾಗೇ ಶೋಯಬ್ ಜೊತೆ ಮೈ ಹಂಚಿಕೊಂಡ ಎಲ್ಲಾ ಯುವತಿಯರಿಗೂ ನಮ್ಮ ಸಂತಾಪಗಳು.

20100330

ನಾತಿಚರಾಮಿ...... ಎನ್ನುವೆಯಾ ಮಿಸ್ ಸಾನಿಯಾ.?ಓಕೆ..
ಸಾನಿಯಾ ಮತ್ತು ಶೋಯೆಬ್ ಮದುವೆಯಾಗಲಿ..
ಬೆಸ್ಟ್ ವಿಶ್ಶಸ್..
ಆದರೆ ಸಾನಿಯಾ ಈಗ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹೇಳಲೇ ಬೇಕು..
ಇಟ್ ಈಸ್ ಹರ್ ಡ್ಯೂಟಿ..
ನಾಳೆ ನಾಡಿದ್ದಲ್ಲಿ ಈ ಅರೋಗೆಂಟ್ ಶೋಯೆಬ್ ಮೇಲಿನ ಬ್ಯಾನು ಬಿದ್ದು ಹೋಗುತ್ತದೆ.ಆತ ಮತ್ತೆ ತೀಮ್ ಪಾಕ್‌ಗೆ ಬರುತ್ತಾನೆ.ಆಟಾನೂ ಆಡುತ್ತಾನೆ,ಚೆನ್ನಾಗೇ ಆಡುತ್ತಾನೆ..
ಕೀಪ್ ಇಟ್ ಅಪ್..
ಆದರೆ,
ಟೀಮ್ ಇಂಡಿಯಾ ಎದುರು ಶೋಯೆಬ್‌ನ ಪಾಕಿಸ್ತಾನ್ ತಂಡ ಆಟ ಆಡಲು ಬಂದಾಗ ಸಾನಿಯಾಮಿರ್ಜಾ ಅಲಿಯಾಸ್ ಸಾನಿಯಾ ಶೋಯೆಬ್..ಟೀಮ್ ಇಂಡಿಯಾ ಪರವೇ ಅಥವಾ ತನ್ನ ಗಂಡನ ತಂಡದ ಐ ಮೀನ್ ಅವನ ದೇಶದ ಪರವೇ?
ಮಾನಸಿಕವಾಗಿ ಆಕೆ ಎಲ್ಲಿರುತ್ತಾಳೆ?ಅದನ್ನು ಸಾನಿಯಾ ಈಗ ಸ್ಪಷ್ಟಪಡಿಸಲೇಬೇಕು..
ನೀವು ಕೇಳಬಹುದು ಎಂಥಾ ಪ್ರಶ್ನೆ ಅಂತ ಕೇಳ್ತೀರಿ..ಹಾಗೇನಾದರೂ ಕೇಳೋದು ಇದೆಯಾ?ಆಫ್ಟರ್‌ಆಲ್ ಪಾಪ ಹೆಣ್ಣುಮಗಳು..ಅವಳು ಯಾಕೆ ಅದನ್ನು ಹೇಳಬೇಕು?
ನಹಿ ಭಾಯಿ ನಹಿ..
ಸಾನಿಯಾ ಮಿರ್ಜಾ ಹೇಳಲೇಬೇಕು..ಏಕೆಂದರೆ ಈ ಇಂಡಿಯಾ ಅವಳನ್ನು ಎತ್ತಿ ಮುದ್ದಾಡಿದೆ.ಈ ಇಂಡಿಯಾ ಅವಳಿಗೆ ಸ್ಟಾರ್ ಪದವಿ ನೀಡಿದೆ.ಈ ಇಂಡಿಯಾ ಅವಳಿಗೆ ಉನ್ನತ ಪದವಿ,ಹುದ್ದೆ,ಪ್ರಶಸ್ತಿ ನೀಡಿದೆ.ಹಾಗೇ ಕೋಟಿ ಕೋಟಿ ಹಣದ ಗಂಟನ್ನೂ ನೀಡಿದ್ದು ಈ ಇಂಡಿಯಾವೇ..ಪಾಕಿಸ್ತಾನ ಅಲ್ಲ..
ಸಾನಿಯಾಳ ಮೂಗುಬೊಟ್ಟು ಥಳಥಳನೇ ಹೊಳೆಯುತ್ತಿದ್ದರೆ ಅದಕ್ಕೆ ಈ ಇಂಡಿಯಾ ಕಾರಣ.ಅವಳ ಹಣದ ಚೀಲ ತುಂಬಿ ತುಳುಕುತ್ತಿದ್ದರೆ ಅದಕ್ಕೆ ಈ ಇಂಡಿಯಾ ಕಾರಣ.ಅವಳು ನಮ್ಮ ಮನೆ ಮಗಳು.
ಅಂದ ಮೇಲೆ ಅವಳ ನಿಷ್ಠೆ ತವರಿಗೋ ಅಥವಾ ಗಂಡನ ಮನೆಗೋ..
ಇದು ಕ್ರಿಕೆಟ್ಟೇ ಆಗಬೇಕು ಎಂದೇನಿಲ್ಲ,
ಯಾರು ಸಾಧ್ಯವೇ ಇಲ್ಲ ಎಂದವರು?ಯಾವಾಗ ಏನು ಬೇಕಾದರೂ ಆಗಬಹುದು.ಈವನ್ ವಾರ್ ಬಿಟ್ವೀನ್ ಇಂಡಿಯಾ ಆಂಡ್ ಪಾಕ್..
ಆಗ..?
ಸಾನಿಯಾ ನಮ್ಮ ಭಾರತದ ಸೈನಿಕರಿಗೆ ಸ್ಫೂರ್ತಿ ತುಂಬಲು ಕಾರ್ಗಿಲ್ ಅಥವಾ ಇನ್ನೆಲ್ಲೋ ಒಂದು ಮಿಲಿಟರಿ ಕ್ಯಾಂಪಿಗೆ ಬರುವಳೇ?
ದೂರದರ್ಶನದಲ್ಲಿ ದೇಶಭಕ್ತಿಯನ್ನು ಉದ್ಘೋಷಿಸುವ ಪ್ರಕಟಣೆಗಳಲ್ಲಿ ಪಾಲ್ಗೊಳ್ಳುವಳೇ?
ಭಾರತದ ವೀರ ಯೋಧರೇ ಪಾಕಿಸ್ತಾನವನ್ನು ಸದೆಬಡಿಯಿರಿ..ಎಂದು ಕರೆಕೊಡುವಳೇ?
ಸಾನಿಯಾ ಎಂಬ ವಿಶ್ವದ ಸದ್ಯದ ಕಳಪೆ (೯೨ನೇ ರ‍್ಯಾಂಕಿಂಗ್)ಟೆನಿಸ್ ಆಟಗಾರ್ತಿ ಹಾಗೊಂದು ವಿಕ್ಷಿಪ್ತ ಆಗೇ ಬಿಟ್ಟರೆ ಎಲ್ಲಿ ನಿಲ್ಲುತ್ತಾಳೆ?
ನಾನು ದುಬೈನಲ್ಲಿ ಗಂಡನ ಮನೆಯಲ್ಲಿರುತ್ತೇನೆಂದೂ,ನನ್ನ ಗಂಡ ಆತನ ದೇಶದ ಪರವಾಗಿಯೂ ನಾನು ನನ್ನ ದೇಶದ ಪರವಾಗಿಯೂ ಆಡುತ್ತೇನೆಂದೂ ಹೇಳಿಕೆ ಹೊರಡಿಸಿ ತನ್ನ ಮದುವೆಗೆ ಪೀಪಿ ಊದಿದರೆ ಆಹಾ ಎಂಥಾ ಮಧುರ ಯಾತನೆ ಎಂದು ಅಕ್ಕಿಕಾಳು ಎಸೆಯಲು ಭಾರತೀಯರೇನು ದುಬೈ ಮಾಲ್‌ಗಳಲ್ಲಿ ಸೇಲ್ಸ್‌ಮ್ಯಾನುಗಳಾ?
ಸಾನಿಯಾ ಶೋಯೆಬ್‌ನನ್ನು ಪ್ರೀತಿಸಿರಬಹುದು.ಪ್ರೀತಿ ಅಂದೊಡನೆ ಮರದಿಂದ ಕೈ ಬಿಡೋದಕ್ಕಾಗುತ್ತದಾ?ಪ್ರೀತಿಗೂ ಒಂದು ಸಂಹಿತೆ ಅಂತ ಇರವುದಿಲ್ಲವೇ?ಪ್ರೀತಿ ಅಜರಾಮರ ಎಂದು ಯಾರಾದರೂ ೧೮ರ ತರುಣಿ ೮೧ರ ಮುದುಕನನ್ನಾಗಲಿ,ಅಥವಾ ೮೨ರ ಮುದುಕಿ ೨೮ರ ತರುಣನನ್ನಾಗಲಿ ಪ್ರೀತಿಸಿದ್ದಾಗಲಿ,ಮದುವೆಯಾಗಿದ್ದಾಗಲಿ ಇದೆಯಾ?
ಅಂದರೆ ಪ್ರೀತಿ ಕೂಡಾ ಬಿಗಿನ್ಸ್ ಫ್ರಂ ಫಿಸಿಕಲ್ ಅಟ್ರಾಕ್ಷನ್. ಅಟ್ರಾಕ್ಟಿವ್‌ನೆಸ್ ನಲ್ಲಿ ಮನಸ್ಸು ಸೆಕೆಂಡರಿ.ಸಾನಿಯಾಗೂ ಈ ಮಾತು ಅನ್ವಯ.
ಈ ನೆಲ ಈ ಜಲ ಈ ಜನರಿಗೆ ಸಾನಿಯಾ ಉತ್ತರದಾಯಿ.ಸುಮ್ಮನೇ ವೀಸಾ ಸಿಕ್ತು ಅಂತ ಪಾಕಿಸ್ತಾನಕ್ಕೆ ಹೋಗಿ ಶೋಯೆಬ್ ಜೊತೆ ಪಲ್ಲಂಗ ಏರೋದು ಎಂದರೆ ಅದು ಇಡೀ ಭಾರತೀಯರ ಹಾರೈಕೆಯೂ ಅಲ್ಲ,ಆಶಯವಂತೂ ಮೊದಲೇ ಅಲ್ಲ.
ನಾಲ್ಕು ಟೀವಿ ಚಾನಲ್ಲುಗಳು ಬಾಜಾಬಜಂತ್ರಿ ಭಾರಿಸಿದವು ಎಂದು ಹತ್ತು ಪತ್ರಿಕೆಗಳು ಕೊಂಡಾಡಿದವು ಎಂದರೆ ಅದು ಅವರ ಟಿಆರ್‌ಪಿ..
ಭಾರತೀಯರ ಆಶೀರ್ವಾದ ಅಲ್ಲ.
ಮದುವೆ ಅಂದರೆ ತೀರಾ ಖಾಸಗಿ ಅಂತ ನೀವು ವಾದಿಸಬಹುದು.ನಾನೂ ಅದನ್ನೇ ಹೇಳುವುದು.ಅಂಥಾ ಖಾಸಗೀ ವಿಚಾರವೂ ದೇಶದ ಪ್ರಶ್ನೆ ಬಂದಾಗ ಪ್ರಶ್ನಿಸಲೇಬೇಕಾಗುತ್ತದೆ.
ಏಕೆಂದರೆ ಸಾನಿಯಾ ಮಿರ್ಜಾ ಮಾಡಿದ ಹೆಸರು,ಪಡೆದ ಕೀರ್ತಿ,ಸಂಪಾದಿಸಿದ ದುಡ್ಡು ಈ ದೇಶಕ್ಕೆ ಖಾಸಗಿ ಅಲ್ಲವಲ್ಲ..

20100329

ಬೂದಿ ಬೈರಾಗಿ ಅಥವಾ ಚಂದನ ಮಿಶ್ರಾ ಎಂಬ ನಿಗೂಢ ಕತೆ


ಚಂದನ ಮಿಶ್ರಾ ಅಂತ ಹೇಳಿದರೆ ಅನೇಕರು ಆತ ಉತ್ತರ ಭಾರತದವನೆಂದು ತಿಳಿದುಕೊಳ್ಳುವುದೇ ಹೆಚ್ಚು.
ಆದರೆ ಅದು ತಪ್ಪು.
ಚಂದನ ಮಿಶ್ರಾ ನಮ್ಮ ಸಂಗಮಕ್ಷೇತ್ರದವನೇ.
ಅವನ ಅಪ್ಪ ಬೀಡಾ ವ್ಯಾಪಾರಿ ಗೋಯಿಂದ.ಅವನಿಗೆ ಉತ್ತರ ಭಾರತದವರೇ ಹೆಚ್ಚು ಗಿರಾಕಿಗಳು.ಸಂಗಮಕ್ಷೇತ್ರದಲ್ಲಿ ದೇವರ ದರ್ಶನಕ್ಕೆ ಬರುವವರಲ್ಲಿ ಕಾನ್ಪುರ,ಕಟಕ್,ಸೂರತ್‌ನ ಜನರೆಲ್ಲಾ ಗೋಯಿಂದ ಪಾನ್ ಶಾಪ್‌ನಿಂದ ಜರ್ದಾ ಕಟ್ಟಿಸಿಕೊಳ್ಳದೇ ಹೊರಡುವವರಲ್ಲ.
ಬಹುಶಃ ಇದೇ ಇನ್ಫ್ಲುಯೆನ್ಸ್‌ಗೆ ಆತ ತನ್ನ ಏಕೈಕ ಮಗರಾಯನಿಗೆ ಚಂದನ ಮಿಶ್ರಾ ಅಂತ ಹೆಸರಿಟ್ಟಿರಬೇಕು.
ಚಂದನ ಮಿಶ್ರಾ ಕೂಡಾ ಶಾಲೆಯೊಳಗೆ ಪರಿಪರಿಯಾಗಿ ಢುಮ್ಕಿ ಹೊಡೆದ ಮೇಲೆ ಶುರು ಮಾಡಿದ್ದು ಪಾನ್‌ಬೀಡಾ ವ್ಯಾಪಾರವನ್ನೇ.ಆದರೆ ದೊಡ್ಡ ಪ್ರಮಾಣದಲ್ಲಿ.
ಅವನ್ ಅಂಗಡಿಯೊಳಗೆ ಸುವರ್ಣಭಸ್ಮ ಹಾಕಿದ ಬೀಡಾ ಸಿಗುತ್ತದೆ ಎಂದೂ ಅದಕ್ಕೆ ಬರೋಬ್ಬರಿ ಎಂಟುನೂರು ರೂಪಾಯಿ ಇದೆಯೆಂದೂ ಸಂಗಮಕ್ಷೇತ್ರದೊಳಗೆ ಆಗಾಗ್ಗೆ ಸುದ್ದಿ ಹಬ್ಬುವುದಿತ್ತು.
ಹಾಗಿರುತ್ತಾ ಒಮ್ಮೆ ಏನಾಯಿತು ಎಂದರೆ ಪೊಲೀಸರು ಚಂದನ ಮಿಶ್ರಾನ ಅಂಗಡಿಗೆ ನುಗ್ಗಿಯೇ ಬಿಟ್ಟರು.ಕಾರಣ ಆತ ಅಂಗಡಿಯಲ್ಲಿ ಗಾಂಜಾ ಮಾರುತ್ತಾನೆ ಎಂಬ ತಳ್ಳಿ ಅರ್ಜಿ.ಮೂರು ಗಂಟೆ ಕಾಲ ಜಾಲಾಡದರುಬಾಲ್ದಿ ಅಡಿಯನ್ನೂ ಎತ್ತಿ ನೋಡಿದರು.ಸಿಕ್ಕಿದ್ದು ಸೊನ್ನೆ.
ಆಮೇಲೆ ಪೊಲೀಸರು ಒಂದು ವಿಷಾದ ಕೂಡಾ ವ್ಯಕ್ತ ಪಡಿಸದೇ ಹೊರಟು ಹೋದರು
ಚಂದನ ಮಿಶ್ರಾನಿಗೆ ಈ ದಾಳಿಯಿಂದ ತುಂಬಾ ಆಘಾತವಾಗಿತ್ತು.ಯಾವಾಗ ತಾನು ಎಂದೂ ಮಾಡದ ತಪ್ಪಿಗೆ ತನಗೆ ಅವಮಾನವಾಯಿತೋ ಆತ ಮುಂದೆ ನಿರ್ಧಾರ ಮಾಡಿದ್ದು ತಪ್ಪು ಮಾಡುವುದೇ ಎಂದು.
ಆ ರಾತ್ರಿ ಆತ ನಿದ್ರಿಸಲಿಲ್ಲ.ಹೇಗಾದರೂ ಮಾಡಿ ಚರಸ್ ಮತ್ತು ಬ್ರೌನ್ ಶುಗರ್ ವ್ಯಾಪಾರ ಆರಂಭಿಸಲೇಬೇಕು ಎಂದು ಆತ ಗಟ್ಟಿಮಾಡಿಕೊಂಡ.ಅದಕ್ಕಾಗಿ ಆತ ಸ್ಕೆಚ್ ಹಾಕಿದ.
ಆದರೆ ಈ ಅಪಾಯಕಾರಿ ಆದರೆ ತುಂಬಾ ದುಬಾರಿಯಾದ ವ್ಯಾಪಾರವನ್ನು ಹೇಗೆ ಜೋಡಿಸುವುದು ಎಂದು ಆತನಿಗೆ ಹೊಳೆಯಲಿಲ್ಲ.
ಮೊದಲಾಗಿ ಈ ವಸ್ತುಗಳನ್ನು ಪೂರೈಸುವವರು ಯಾರು ಏನು ಎಲ್ಲಿದ್ದಾರೆ ಎಂದು ನೋಡಬೇಕು,ಆಮೇಲೆ ಆ ವಸ್ತುಗಳಿಗಾಗಿ ಗಿರಾಕಿಗಳನ್ನು ಹಿಡಿಯಬೇಕು..ಎಂಬ ಎರಡು ಸಂದಿಗ್ಧ ಸಂಗತಿಗಳ ಆತನಿಗೆ ಸವಾಲಾಗಿದ್ದವು.ಈ ತನಕ ಇದರ ಏಬಿಸಿಡಿ ತಿಳಿಯದ ಚಂದನ ಮಿಶ್ರಾ ಪೊಲೀಸರಿಗೆ ಒಂದು ಪ್ರತೀಕಾರ ತೆಗೆದುಕೊಂಡು ಆ ಮೂಲಕ ಸಮಾಜಕ್ಕೆ ಸವಾಲು ಹಾಕಬೇಕು ಎಂದು ನಿರ್ಧರಿಸಿದಂತಿತ್ತು.
ಆ ರಾತ್ರಿ ಆತ ನಿದ್ರಿಸಲೇ ಇಲ್ಲ.ಬೆಳಗ್ಗೆ ಎಂದಿನಂತೆ ಪೇಪರ್ ಮೋರೆ ಮೇಲೆ ಬಿದ್ದಾಗಲೇ ಎದ್ದು ಕುಳಿತ.ಪೇಪರ್ ಎತ್ತಿ ಓದಬೇಕು ಎಂದು ಬಿಡಿಸಿದರೆ ಅದರೊಳಗೆ ಒಂದು ಪಾಕೀಟು.ಪಾಕೀಟಿನ ಮೇಲೆ ಒಂದು ಉಲ್ಲೇಖ,ಈ ಕಟ್ಟು ಚಂದನ ಮಿಶ್ರಾ ಅವರಿಗೆ ಮಾತ್ರಾ..ಎಂಬ ಷರಾ.
ಚಂದನ ಮಿಶ್ರಾ ಇನ್ನೂ ಹಾಸಿಗೆ ಮೇಲಿಂದ ಎದ್ದಿರಲಿಲ್ಲ.ಬೆಚ್ಚಿ ಬಿದ್ದವನ ಹಾಗೇ ಅಪಾರ ಕುತೂಹಲ,ಅಷ್ಟೇ ತಳಮಳಗಳ ನಡುವೆ ಕಟ್ಟು ಬಿಡಿಸಿದ.ಅದರೊಳಗೆ ಮತ್ತೊಂದು ಸಣ್ಣ ಚೀಲ.ಅದನ್ನೂ ಬಿಡಿಸಿದ.ಮತ್ತೊಂದು ಸಣ್ಣ ಪಾಲಿಥೀನ್ ಕಿಟ್.ಅದನ್ನು ಎತ್ತಿ ಬಿಡಿಸಬೇಕು ಎಂಬ ಹೊತ್ತಿಗೆ ಪೇಪರ್‌ನಲ್ಲಿ ಒಂದು ದೊಡ್ಡ ಸುದ್ದಿ ಕಾಣುತ್ತಿತ್ತು.ಅಪರಿಚಿತ ಕಟ್ಟು ಬಿಡಿಸಲು ಹೋದ ಯುವಕನೊಬ್ಬ ಅದು ಸ್ಫೋಟಿಸಿ ಸಾವನ್ನಪ್ಪಿದ ಸುದ್ದಿ ಅದಾಗಿತ್ತು.ಚಂದನ ಮಿಶ್ರಾನಿಗೆ ಒಮ್ಮೆ ಆತಂಕ ಉಂಟಾಯಿತು.ಕಟ್ಟು ಬಿಡಿಸೋದೇ ಬೇಡವೇ ಎಂದು ಯೋಚಿಸಿದ.ಒಂದೊಮ್ಮೆ ಬಿಡಿಸಿದರೆ ಅದೇನಾದರೂ ಇಂಥಾ ಸ್ಫೋಟಕವೇ ಆಗಿದ್ದರೆ ಎಂಬ ಹೆದರಿಕೆ ಅವನಲ್ಲಿ ಹುಟ್ಟಿತು.ಇಷ್ಟಕ್ಕೂ ಈ ಕಟ್ಟು ಎತ್ತಿ ತಂದು ಹಾಕಿದವರು ಯಾರು ಎಂಬುದೂ ಗೊತ್ತಿರಲಿಲ್ಲ.
ಕಟ್ಟಿನ ಸಹವಾಸವೇ ಬೇಡ ಎಂದುಕೊಂಡ.
ಆದರೂ ಮನಸ್ಸು ಹುಚ್ಚಾಬಟ್ಟೆಯಾಗಿತ್ತು.ತನ್ನ ಹೆಸರಿಗೇ ಬಂದ ಕಟ್ಟು.ಅನೇಕ ಬಾರಿ ಈ ರೀತಿ ದಿನಪತ್ರಿಕೆಗಳ ಒಳಗೆ ಯಕ್ಷಗಾನದ ಕಾಗದ ಅಥವಾ ನಾಟಕ ಇಂದ್ರಜಾಲದ ಆಮಂತ್ರಣ ಪಾಂಪ್ಲೆಟ್ಟುಗಳನ್ನು ತಳ್ಳಿಟ್ಟು ಕಳುಹಿಸುವುದು ಸಂಗಮಕ್ಷೇತ್ರದಲಿ ರೂಢಿಯಲ್ಲಿತ್ತು.ಹಾಗೇ ಯಾರೋ ಏನೋ ಪಾರ್ಸೆಲ್ಲುಗಳನ್ನು ಇಟ್ಟಿರಬಾರದೇಕೆ ಎಂದುಕೊಂಡ.
ಏನೇ ಆಗಲಿ ಇದನ್ನು ಬಿಡಿಸುವುದೇ ಎಂದು ನಿರ್ಧರಿಸಿ ಈರುಳ್ಳಿ ಸುಲಿದಂತೆ ಸುಲಿದ..ಸುಲಿದ..
ಕೊನೆಯಲ್ಲಿ ಏನೂ ಉಳಿಯಲಿಲ್ಲ.
ಎಲ್ಲವೂ ಖಾಲಿಯಾಗಿತ್ತು.ಆ ದೊಡ್ಡ ಕಟ್ಟಿನಲ್ಲಿ ಅದೆಷ್ಟೋ ಚೀಲಗಳು ಇದ್ದವು.ಪ್ರತೀ ಚೀಲವೂ ಖಾಲಿ ಖಾಲಿ..
ಚಂದನ ಮಿಶ್ರಾ ದಿಕ್ಕೆಟ್ಟು ಹೋದ.
ಯಾರು ಏಕೆ ಹೀಗೆ ಮಾಡಿದ್ದಾರೆ ಎಂದು ಅವನು ಸ್ವಲ್ಪ ಹೊತ್ತು ಯೋಚಿಸಿದ.ಆಮೇಲೆ ಈ ರೀತಿ ಸುಲಿದು ಸುಲಿದು ಕೊನೆಯಲ್ಲಿ ಖಾಲಿ ಆಗಿ ಬಿಡುವ ಪೊಟ್ಟಣ ನೀಡಿದ ಸಂದೇಶ ಏನು ಎಂದು ಊಹಿಸಿದ.
ಚಂದನ ಮಿಶ್ರಾ ಅಲ್ಪಮತಿ.ಅವನಿಗೆ ಈ ಪೊಟ್ಟಣ ಏನಾದರೂ ಗೂಢಾರ್ಥ ಹಬ್ಬಿಸುತ್ತದೆ ಎಂದರೆ ಗೊತ್ತಾಗಲಿಕ್ಕಿಲ್ಲ.
ಆಮೇಲೆ ಎಲ್ಲವನ್ನೂ ಅದೇ ವೇಗದಲ್ಲಿ ತಳ್ಳಿ ಹಾಕಿದ ಚಂದನ ಮಿಶ್ರಾ ಸೀದಾ ಎದ್ದು ಕರಾಗ್ರೇ ವಸತೇ..ಎಂದು ಅಂಗೈಗಳನ್ನು ಎಂದಿನ ಮುಂಜಾವದಲ್ಲಿ ಮಾಡೋ ಹಾಗೇ ತಿಕ್ಕಿದ.
ಏನಾಶ್ಚರ್ಯವೋ ಏನೊ..ಅವನ ಅಂಗೈಗಳಿಂದ ಬಿಳಿ ಬೂದಿ ಉದುರತೊಡಗಿತು.
ಚಂದನ ಮಿಶ್ರಾ ಅವಾಕ್ಕಾದ.ಬಿಳಿ ಪೌಡರ್ ದರದರನೆ ಉದುರುತ್ತಿತ್ತು.
ಅವನ ಹಾಸಿಗೆ ಮೇಲೆ ಆತ ಕೈ ತಿಕ್ಕಿದಷ್ಟೂ ಬೂದಿರಾಶಿ ಏರುತ್ತಿತ್ತು.ನೋಡುತ್ತಾ ನೋಡುತ್ತಾ ಅದು ಎತ್ತರವಾಗತೊಡಗಿತು.ಚಂದನ ಮಿಶ್ರಾ ಗಾಬರಿಯಾದ.ಕೈ ತಿಕ್ಕುವುದನ್ನು ನಿಲ್ಲಿಸಿದ.
ಎದ್ದು ಹೊರಗೆ ಓಡಿದ.
ಮನೆ ಹೊರಗೆ ತುಂಬಾ ಜನ ನಿಂತಿದ್ದರು.ಅವರೆಲ್ಲಾ ತಮ್ಮ ಕೈಗಳನ್ನೆತ್ತಿ ಅವನಿಗೆ ನಮಸ್ಕರಿಸಿದರು.ಆಫ್ಟರ್‌ಆಲ್ ಬೀಡಾ ಗೋಯಿಂದನ ಮಗ,ನಾಲಾಯಕ್ಕು ಚಂದನ ಮಿಶ್ರಾ ಎಂಬ ಬೋದಾಳನಿಗೆ ಇವರೇಕೆ ಹೀಗೆ ನಮಸ್ಕಾರ ಮಾಡುತ್ತಾರೆ ಎಂದು ಅವನಿಗೆ ಅರ್ಥವೂ ಆಗಲಿಲ್ಲ,ಜೊತೆಗೆ ಭಯವೂ ಆಯಿತು.
ಒಬ್ಬ ಜೀನ್ಸ್ ಪ್ಯಾಂಟು ಹಾಕಿದ ಹುಡುಗಿ ಅವನ ಬಳಿ ಬಂದವಳೇ ನಿಡಿದಾಗಿ ಉದ್ದಂಡ ಬಿದ್ದಳು.ಅವಳು ಏನು ಹೇಳುತ್ತಿದ್ದಾಳೆ ಎಂದು ಗೊತ್ತಾಗದೇ ಒದ್ದಾಡಿದ.ಅವನಿಗೆ ವಿಲಕ್ಷಣ ನಾಚಿಕೆ ಆಗಿ ಹೋಗಿತ್ತು.
ಒಂದೇ ಒಂದು ಚಿಟಿಕೆ ಸಾಕು ಕೊಟ್ಟು ಹರಸಿ ಎಂದಳು ಆ ತರುಣಿ.
ಚಂದನ ಮಿಶ್ರಾ ಅವಾಕ್ಕಾದ.ತಾನು ಇದ್ದಕ್ಕಿದ್ದಂತೆ ಬೂದಿಬಾಬಾ ಅಥವಾ ಪವಾಡಪುರುಷ ಅಥವಾ ಸಂತನಾಗುತ್ತಿರುವುದಾಗಿ ಅವನಿಗೆ ಅನಿಸತೊಡಗಿತು.
ಯಾವುದೋ ಶಕ್ತಿಯೊಂದು ತನ್ನೊಳಗೆ ಪ್ರವೇಶಿಸುತ್ತಿರುವುದು ಅರಿವಾಗುತ್ತಿತ್ತು.
ತಾಯೇ..ನಿನಗೆ ಬ್ರೌನ್‌ಶುಗರ್ ಗೊತ್ತುಂಟೋ ಎಂದು ಕೇಳುತ್ತಾನೆ ಚಂದನಮಿಶ್ರಾ..
ಇಲ್ಲ ದೇವರೇ ಎಂದು ಆಕೆ..
ಇದೋ ತಗೋ..ಇದನ್ನು ಸೇವಿಸಬೇಡ..ಸುಮ್ಮನೇ ನೋಡುತ್ತಾ ಇರು..ಪ್ರತೀ ನಿತ್ಯ ಮೂರನೇ ಜಾವಕ್ಕೆ ಎದ್ದು ಮೊದಲಾಗಿ ಇದನ್ನು ನೋಡು..ಆಮೇಲೆ ಒಂದು ದಿನ ನಿನಗೆ ಇದು ಬೇಕು ಅನಿಸಿದಾಗ ಇದನ್ನು ಬಿಡಿಸು..ಶೂನ್ಯಕ್ಕೆ ಪ್ರಯಾಣ ತಂಗೀ ಶೂನ್ಯಕ್ಕೆ..ಶೂನ್ಯವನ್ನೂ ದಾಟಿ ಹೋಗು..ಆಗ ಏನು ಸಿಗುವುದೋ ಅದು ಇದುವೇ..ಎಂದ ಚಂದನ ಮಿಶ್ರಾ..
ಅದೇ ಅವನ ಮೊದಲ ಪ್ರವಚನವಾಗಿತ್ತು..
ಆಮೇಲೆ ಅಂಥ ನೂರಾರು ಪ್ರವಚನಗಳನ್ನು ಆತ ಮಾಡಿದ..
ಎಲ್ಲದರಲ್ಲೂ ಆತ ಹೇಳುತ್ತಿದ್ದುದು ಅದೇ ಶೂನ್ಯವನ್ನು ಬಿಡಿಸುತ್ತಾ ಹೋಗಿ..ಶೂನ್ಯದಲ್ಲೇ ಏನಾದರೂ ಹುಡುಕುತ್ತಿರಿ..ಆಗಲೇ ಏನಾದರೂ ಸಿಗುತ್ತದೆ..ಅದೇ ಇದುವೇ ಎಂದು ಪ್ರತೀ ಬಾರಿ ಹೇಳುತ್ತಲೇ ಇದ್ದ.
ಸಂಗಮಕ್ಷೇತ್ರದಲ್ಲಿ ಚಂದನಮಿಶ್ರಾ ಕೊನೆ ತನಕ ಲೂಸ್ ಮುಂಡೇದು ಅಂತಲೇ ಆಗಿಬಿಟ್ಟಿದ್ದ.ಆದರೆ ಉತ್ತರ ಹಿಂದೂಸ್ತಾನದಲ್ಲಿ ಮಾತ್ರಾ ಅವನಿಗೆ ತುಂಬಾ ಭಕ್ತರಿದ್ದರು.
ಪೊಲೀಸರು ಪ್ರತೀ ವಾರವೂ ಅವನ ಪಾನ್‌ಬೀಡಾ ಶಾಪಿಗೆ ನುಗ್ಗಿ ಅವನ ಇಡೀ ದೂಕಾನನ್ನು ಸರ್ಚ್ ಮಾಡುತ್ತಿದ್ದರು.ಆಗ ಅಲ್ಲಿ ನೂರಾರು ಪಾಕೀಟುಗಳು ಸಿಗುತ್ತಿದ್ದವು.ಅವುಗಳನ್ನು ಅವರು ಬಿಡಿಸುತ್ತಿದ್ದರು.ಒಂದಾದ ಮೇಲೆ ಒಂದು ಬಿಡಿಸುತ್ತಾ ಬಿಡಿಸುತ್ತಾ ಅವರು ಕೊನೆಯಲ್ಲಿ ಸುಸ್ತಾಗುತ್ತಿದ್ದರು.ಪ್ರತೀ ಪಾಕೀಟು ಪೊಟ್ಟಣವೂ ಕೊನೆಗೆ ಖಾಲಿಯಾಗಿಯೇ ಇರುತ್ತಿದ್ದವು..
ಇನ್ಸ್‌ಪೆಕ್ಟರ್ ರಘುರಾಮಚಂದ್ರ ಮಾತ್ರಾ ಒಂದಲ್ಲ ಒಂದು ದಿನ ಈ ಬೈರಾಗಿಯನ್ನು ಕೋಳ ಹಾಕಿ ಸಾಗಿಸುತ್ತೇನೆ ಎಂದು ತನ್ನ ಮಡದಿ ಸಂಧ್ಯಾಳಿಗೆ ಹೇಳುತ್ತಲೇ ಇದ್ದ..

20100319

ಇಂದಿರಾಗಾಂಧಿ ಟಾಯಿಲೆಟ್ಟು ಎಲ್ಲಿ ಎಂದು ಕೇಳಿದಳು..ಇದು ದೊಡ್ಡವರ ರಕ್ಷಣೆಗೆ ನಿಂತವರ ಕಥಾನಕ.
ಬಿಡುವಿದ್ದರೆ ಸುಮ್ಮನೇ ಓದಿ.
ನಾನು ಆಕಸ್ಮಿಕವಾಗಿ ಆ ಹಿರಿಯರನ್ನು ಭೇಟಿಯಾದೆ.ಅದೂ ಒಂದು ಸಭೆಯ ಚಪ್ಪರದಲ್ಲಿ.ಅವರಿಗೆ ನನ್ನನ್ನು ಯಾರೋ ಪರಿಚಯಿಸಿದರು.ಅವರು ತುಂಬಾ ಸಂತೋಷದಿಂದ ಪರಿಚಯವನ್ನು ಸ್ವೀಕರಿಸಿದರು.
ನನ್ನ ಗುಣವೇ ಅಂಥದ್ದು.ಯಾರಾದರೂ ಜೊತೆಯಾದರು ಎಂದರೆ ನಾನು ಸುಮ್ಮನೇ ಬಿಡುವವನಲ್ಲ.ಹಾಗೇ ನನ್ನ ಪರಿಚಯ ಮಾಡಿಕೊಂಡವರಿಗೂ ನನ್ನನ್ನು ಬಿಟ್ಟುಹೋಗಲು ಆಗುವುದೇ ಇಲ್ಲ.
ಭಾಳಾ ವಾಚಾಳಿ ಅಂತ ಗೆಳೆಯರು ಆಗಾಗ ನನ್ನ ಮೇಲೆ ಪೈಂಟ್ ಹೊಡೆಯುತ್ತಾರೆ.ಆದರೆ ನನ್ನ ಮಾತಿನ ಮೋಡಿಗೆ ಅವರೂ ಮರುಳಾಗುತ್ತಾರೆ.
ಮಾತು ಮಾತು ಮಥಿಸಿ..
ಆಮೇಲೆ ಹೊಮ್ಮುವ ಯಾವುದೋ ಒಂದು ನನ್ನಲ್ಲಿ ಉಳಿಯುತ್ತದೆ.ಒಂದು ಪರಿಚಯ,ಒಂದು ಭೇಟಿಯಲ್ಲಿ ನಾನು ನನ್ನದಾಗಿ ಮಾಡಿಕೊಳ್ಳುವುದು ಆ ಉಳಿಕೆಯನ್ನೇ.
ಆ ಹಿರಿಯರು ಇಂದಿರಾಗಾಂಧಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡಿದ ಪೊಲೀಸ್ ಅಧಿಕಾರಿ.ರಾಜ್ಯ ಸರಕಾರದಲ್ಲಿ ಸೇವೆಯಲ್ಲಿದ್ದವರು.ಅನೇಕ ಬಾರಿ ಇಂದಿರಾಗೆ ಭದ್ರತಾ ಅಧಿಕಾರಿಯಾಗಿ ಅವರು ಡೆಪ್ಯೂಟ್ ಆಗಿದ್ದರು.
ಅವರ ಜೊತೆ ಕುಳಿತರೆ ಬೇರೆ ಬೇಕೇ?
ಇಂದಿರಾ ಕಾಲದ ಅವರ ಕಥಾನಕಗಳು ನೂರಾರು ಬಿಚ್ಚಿಕೊಳ್ಳುತ್ತವೆ.ಅದನ್ನು ಕೂತು ಕೇಳೋದೇ ಒಂದು ಅನುಭವ.
ಇಂದಿರಾ ಎಂದರೆ ಇಂಡಿಯಾ ಅಂತ ಮಾಡಿದ ಗಂಡು ಆಕೆ.ಈಗ ಇರುತ್ತಿದ್ದರೆ ಆಕೆಯೇ ಪ್ರಧಾನಿ ಆಗಿ ಇರುತ್ತಿದ್ದಳೋ ಏನೋ?ರಾಜೀವ್ ಗಾಂಧಿ ಸಾಯುತ್ತಿರಲಿಲ್ಲ,ಸೋನಿಯಾ ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ.
ಭ್ರಷ್ಠಾಚಾರ ಸರ್ವೇಸಾಮಾನ್ಯ ಎಂದು ಅಪ್ಪಣೆ ಕೊಡಿಸಿದ ಇಂದಿರಾ ಎರಡನೇ ತಲೆಮಾರಿಗೆ ಅಪರಿಚಿತಳಾಗಿ ಉಳಿದಿರಬಹುದು.ಆಕೆ ಈಗ ನಾಮಫಲಕಗಳಿಗೆ ಮಾತ್ರಾ ಸೀಮಿತಳಾಗಿರುವುದು ಮಾತ್ರಾ ಕಾಲದ ವರಸೆ.
ಇಂದಿರಾ ಒಮ್ಮೆ ಲಕ್ಷದ್ವೀಪಕ್ಕೆ ಬರುತ್ತಾಳೆ.ಪ್ರಧಾನಿ ಬರುತ್ತಾಳೆ ಎಂದ ಮೇಲೆ ಎಲ್ಲವೂ ನಾಜೂಕಾಗಿಯೇ ಆಗಬೇಕು.ನಮ್ಮ ಹಿರಿಯ ಅಧಿಕಾರಿ ತಮ್ಮ ತಂಡದ ಜೊತೆಗೆ ದ್ವೀಪಕ್ಕೆ ವಾರ ಎರಡು ಮೊದಲೇ ಹೋಗಿದ್ದಾರೆ.ಸೆಕ್ಯೂರಿಟಿ ಎಂದರೆ ಈಗಿನಷ್ಟು ಅಲ್ಲದೇ ಇರಬಹುದು ಆದರೆ ಅಂದಿನ ಮಟ್ಟಿಗೆ ಅದು ಟೈಟೇ..
ಇಂದಿರಾ ಗಾಂಧಿ ಲಕ್ಷದ್ವೀಪದ ಸಮುದ್ರ ಕಂಡು ಮರುಳಾಗಿದ್ದಳು.ಒಂದು ಮುಂಜಾನೆ ಆಕೆ ತಾನೊಬ್ಬಳೇ ಸಮುದ್ರ ದಂಡೆಯ ಮೇಲೆ ಮನಸೋ ಇಚ್ಛೆ ಓಡಾಡುವ ಆಸೆ ಪಟ್ಟಳು.ಇಂದಿರಾಗೆ ಇಲ್ಲ ಎನ್ನುವವರು ಇಲ್ಲ.ಆಕೆ ಹೊರಟೇ ಬಿಟ್ಟಳು.ಯಾರೂ ತನ್ನ ಬಳಿ ಬರಬಾರದು ಎಂದು ಅಪ್ಪಣೆ ಮಾಡಿದ್ದಳು.
ಆದರೆ ಸೆಕ್ಯೂರಿಟಿ ಸುಮ್ಮನಿರುವುದೇ?ಹೇಳಿಕೇಳಿ ಪ್ರಧಾನಿ.ಆಕೆಯ ದೇಖ್‌ಬಾಲ್ ಕರ್ತವ್ಯ.ತಪ್ಪಿದರೆ ಅನಾಹುತ.ಇತ್ತ ಆಕೆಯದ್ದು ಬೇರೆ ಆದೇಶ.ನಮ್ಮ ಅಧಿಕಾರಿ ಆಕೆಗೆ ಅರಿವಿಲ್ಲದಂತೆ ಅವಳನ್ನು ಹಿಂಬಾಲಿಸುತ್ತಾರೆ. ಮರಳದಂಡೆಯಲ್ಲಿ ಇಂದಿರಾ ಸಮುದ್ರ ಕಲ್ಲುಗಳನ್ನು ಆಯುತ್ತಾ ಆಯುತ್ತಾ ತನ್ನ ಪುಟ್ಟ ಬ್ಯಾಗಿನಲ್ಲಿ ತುಂಬಿಕೊಳ್ಳುತ್ತಾ ಸಾಗುತ್ತಿದ್ದಾಳೆ.
ಅಷ್ಟರಲ್ಲಿ ಅಲ್ಲಿ ಒಂದು ಕಲ್ಲುಬಂಡೆ.ಅದರ ಹಿಂದೆ ಅಗಾಧ ತೆರೆಗಳ ಹೊಡೆತ.ಬಂಡೆಯ ಮೇಲೆ ತೆರೆಗಳ ಆಲಿಂಗನ.ಇಂದಿರಾ ಆ ಬಂಡೆಯ ಅಡಿಯಲ್ಲಿ ನಿಂತೇ ಬಿಟ್ಟಳು.ಇದನ್ನೇ ಕಾಯುತ್ತಿದ್ದ ಮಾಧ್ಯಮಗಳ ಛಾಯಾಗ್ರಾಹಕರು ಬಂಡೆಯ ಎದುರು ಜಮಾಯಿಸಿದರು.ಇಂದಿರಾ ಅವರಿಗೆಲ್ಲಾ ಫೋಸ್ ನೀಡಲಾರಂಭಿಸುತ್ತಾಳೆ.ಆ ವೇಳೆಗೆ ದೈತ್ಯ ತೆರೆಯೊಂದು ಬಂದು ಬಂಡೆಗೆ ಅಪ್ಪಳಿಸಿ ಧುಮುಕುತ್ತದೆ.ಅದರ ಸುಳಿಗೆ ಇಂದಿರಾ ಮೇಡಂ ಸಿಕ್ಕು ಗರ್ರನೇ ತಿರುಗುತ್ತಾಳೆ.ನಮ್ಮ ಭದ್ರತಾ ಅಧಿಕಾರಿ ಛಂಗನೆ ಹಾರಿ ಆಕೆಯನ್ನು ತನ್ನ ಕೈಗಳಲ್ಲಿ ಬಾಚಿ ಹಿಡಿಯುತ್ತಾರೆ.
ಪ್ರಿಯತಮೆಯನ್ನು ಸೊಂಟದಲ್ಲಿ ಎತ್ತಿ ಹಿಡಿದ ಪ್ರಿಯಕರನ ರೀತಿ.
ಕ್ಲಿಕ್ ಕ್ಲಿಕ್ ಕ್ಲಿಕ್
ಆ ಫೋಟೋ ಕ್ಲಿಕ್ ಆಗುತ್ತದೆ.
ಮರುದಿನ ಆ ದೊಡ್ಡ ಪತ್ರಿಕೆಯಲ್ಲಿ ಅದು ರಾರಾಜಿಸುತ್ತದೆ.
ಪ್ರೈಮ್‌ಮಿನಿಸ್ಟರ್ ಸೆಕ್ಯೂರಿಟಿ ಲಾಪ್ಸ್ ಆದುದಕ್ಕಾಗಿ ನಮ್ಮ ಭದ್ರತಾ ಅಧಿಕಾರಿಗೆ ಮೆಮೋ ಜ್ಯಾರಿ ಮಾಡುತ್ತಾರೆ ಅವರ ಸೀನಿಯರ‍್ಸ್..

ಇನ್ನೊಮ್ಮೆ ಇಂದಿರಾ ಮಂಗಳೂರಿಗೆ ಬರುತ್ತಾಳೆ.ಅದು ಚುನಾವಣಾ ಪ್ರಚಾರ ಭಾಷಣ.ತುಂಬಾ ತುರ್ತು.ವಿಮಾನ ನಿಲ್ದಾಣದಿಂದ ಆಕೆ ಸೀದಾ ಬಂದದ್ದು ನೆಹ್ರೂ ಮೈದಾನಕ್ಕೆ.ವೇದಿಕೆ ಏರುವ ಕ್ಷಣ.ಅವಳ ಜೊತೆಗೆ ಇದ್ದಾರೆ ನಮ್ಮ ಭದ್ರತಾ ಅಧಿಕಾರಿ.ಆತನ ಗುರುತು ಹಿಡಿದ ಇಂದಿರಾ ಒಂದು ಹೂ ನಗೆ ಚೆಲ್ಲುತ್ತಾಳೆ.
ಪ್ರಧಾನಮಂತ್ರಿಯ ಆ ಪ್ರೀತಿಗೆ ಈ ಅಧಿಕಾರಿ ಢಮಾರ್.
ಅಷ್ಟರಲ್ಲಿ ಆಕೆ ಕೇಳುತ್ತಾಳೆ,ಟಾಯಿಲೆಟ್ ಎಲ್ಲಿದೆ?
ಟಾಯಿಲೆಟ್..
ಅಧಿಕಾರಿ ಕಂಗಾಲು.ವೇದಿಕೆ ಕೆಳಗೆ ಇದೆ ನಿಜ.ಆದರೆ ಸೆಕ್ಯೂರಿಟಿ ಲಾಪ್ಸ್ ಆಗಿಬಿಡುತ್ತದೆ.ಹಾಗಂತ ಮೇಡಂಗೆ ತುರ್ತು ಬೇಕು.ಅಧಿಕಾರಿ ಮೇಡಂನ್ನು ಬನ್ನಿ ಎಂದು ಕರೆದುಕೊಂಡು ಹೋಗುತ್ತಾರೆ.ಇಂದಿರಾ ಟಾಯಿಲೆಟ್ ಒಳಗೆ ಹೋಗುತ್ತಾಳೆ.ಹೊರಗೆ ಅಧಿಕಾರಿ ಖುದ್ದು ಕಾಯುತ್ತಾರೆ.ಮೂರೇ ಮೂರು ಮಿನಿಟಿನ ವ್ಯವಹಾರ.
ವೇದಿಕೆ ಮೇಲೆ ಬರಬೇಕಾದ ಪ್ರಧಾನಿ ಎಲ್ಲಿ ಹೋದರು ಎಂದು ಅಲ್ಲಿ ಕ್ಷಣ ಕಾಲ ಎಲ್ಲರಲ್ಲೂ ಆತಂಕ.
ಮಾರನೇ ದಿನ ನಮ್ಮ ಅಧಿಕಾರಿಗೆ ಬಂತೇ ಬಂತು ಮೆಮೋ..
ಅದು ಸೆಕ್ಯೂರಿಟಿ ಲಾಪ್ಸ್..
ಇಂಥದ್ದು ನೂರಾರು ಅನುಭವಗಳಿವೆ ಅವರ ಬಳಿ.
ಅವರು ನುಳಿಯಾಲು ಜಗನ್ನಾಥ ರೈ..

20100315

ಮಳೆ ಹುಟ್ಟು
ಬಿಸಿಲಲ್ಲಿ ಕೇಳಿದೆ
ಮಳೆ ಎಲ್ಲಿದೆ?
ತಂಗಾಳಿ ಕರೆದುಕೊಂಡಿದೆ,ಸದ್ಯಕ್ಕೆ ನಾನೇ
ಎಂದಿತು ಬಿಸಿಲು.
ರಾತ್ರಿ ಬಂದ ಚಂದಿರ ಕೇಳಿದ
ಛೇ..ಬಿಸಿಲಿಗೆ ಬೇಸರವಾಗಿದೆ,ನೀನು ಕೇಳಿದ ಪ್ರಶ್ನೆಗೆ
ಸಂಜೆ ಹೊತ್ತಿಗೆ ಇಳಿಮೋರೆ ಹೊತ್ತು ಕಡಲಲ್ಲಿ ಇಳಿದಿದೆ.
ನಾನು ಕಡಲ ಬಳಿ ಹೋದೆ,
ಕೇಳಿದೆ,
ಚಂದಿರನ ಮಾತು ನಿಜವೇ?
ಕಡಲು ಉಕ್ಕುಕ್ಕಿ ಬಂದು ನನ್ನ ಪಾದ ಮುಟ್ಟಿ ಹೇಳಿತು,
ನಾನು - ಚಂದಿರ ಹೇಗೆ ಹೇಳಲಿ ನಮ್ಮ ಅಗತ್ಯ..
ನಾಳೆಯೇ ಹುಣ್ಣಿಮೆ ಅವನೇ ನನ್ನ ಇನಿಯ
ಸೊಕ್ಕಿ ಹರಿದು ಉಕ್ಕುಕ್ಕಿ ಅಬ್ಬರಿಸಲು
ಮತ್ತೊಮ್ಮೆ ತುಂಬಿ ದ್ರವಿಸಲು ಅವನು ಚೆಲ್ಲಬೇಡವೇ ನನಗೆ ಹಾಲು ಬೆಳದಿಂಗಳು,
ಕಾಯಲಾದಿತೇ ಇನ್ನೊಂದು ತಿಂಗಳು?
ಕಡಲು ಕಾಯುತ್ತಿತ್ತು,ನನಗದರ ವೇದನೆ ತಿಳಿಯುತ್ತಿತ್ತು
ಚಂದಿರನ ಬಳಿಗೆ ಏರಿ ಹೋದೆ
ಕೇಳಿದೆ ಕಡಲ ಸೊಕ್ಕು ಎತ್ತರಿಸುವವನೇ..
ಬಿಸಿಲ ಮರಳಿ ತಂದೊಪ್ಪಿಸು..
ಕಡಲಿಗೆ ಮಾತು ಕೇಳಿತು
ಅದು ಬಿಸಿಲ ಅಪ್ಪಿತು
ಆ ವೇಳೆಗೆ ಕಡಲೊಡಲಲ್ಲಿ ಕೇಕೆ
ಅಳು,ಆಟ,ಹೊತ್ತಾರೆ ಹೆಜ್ಜೆ..
ಮಳೆಯೇ ನೀನು ಎಲ್ಲಿದ್ದೆ?
ಯಾರು ಕೇಳಿದ್ದು ಈ ಭೂಮಿಯೇ?
ಕಡಲೇ?
ಚಂದಿರನೇ?
ಅಥವಾ
ಬಿಸಿಲೇ?
ನಾನೇ?