20091229

ಈ ಸ್ವರ ಇನ್ನೆಲ್ಲಿ ಸಿಕ್ಕೀತು

ಹೊರಟೇ ಬಿಟ್ಟರಾ?
ನೀವು ಹೋಗೋ ವಯಸ್ಸೇನ್ರೀ ಇದು..
ಥತ್ ನಿಮ್ಮ.
ಇನ್ನು ನಾವೇನು ಮಾಡೋಣ?ನಮ್ಮ ಮನೆಯೊಳಗೆ ಮನದೊಳಗೆ ಅಂತರಂಗದೊಳಗೆ ಹಾಡಿನ ಮನೆಯನ್ನು ಕಟ್ಟಿಕೊಟ್ಟು ನಿತ್ಯವೂ ಅದಕೆ ಸಿಂಗಾರ ಮಾಡಿ, ಸುಣ್ಣಬಣ್ಣ ಬಳಿದು ಲಕಲಕ ಹೊಳೆಯುವಂತೆ ಮಾಡಿಟ್ಟು, ಅಲ್ಲಿ ಅನುದಿನವೂ ಪೂಜೆ,ಪುಷ್ಪಾಲಂಕಾರ ಮಾಡಿ ನಾವು ಹೂಗಂಧಾಕ್ಷತೆ ನೈವೇದ್ಯ ಆರತಿ ಮಂತ್ರಪುಷ್ಪ ಉದ್ದಂಡ ನಮಸ್ಕಾರ..
ಹೋಗೇ ಬಿಟ್ಟಿರಾ?
ನಿಮ್ಮದೇ ಒಂದು ಸ್ವರ ಅಂತ ಇಲ್ಲಿಟ್ಟಿದ್ದೀರಲ್ಲಾ ಅದನ್ನೂ ಎತ್ತಿಕೊಂಡೇ ಹೋದಿರಾ..
ಯಾರಿಗೂ ಸಿಗದ ಆ ಸ್ವರ,ಆ ಮಾಧುರ್ಯ ಆ ಮತ್ತನ್ನು ನೀವು ನಿಮ್ಮ ಜೊತೆ ಸಾಗಿಸಿದಿರಲ್ಲಾ ಎಂಥಾ ಜಿಪುಣ ನೀವು..
ತರವಲ್ಲ ತರವಲ್ಲ..
ಇನ್ನೊಂದು ಅಂಥ ಸ್ವರ ಹುಟ್ಟಲು ನಾವು ಕಾಯುವಂತಾಯಿತಲ್ಲಾ.ಆಥವಾ ಕಾದರೆ ಅದು ಹುಟ್ಟುತ್ತದೆ ಎಂದು ಖಾತ್ರಿಯೂ ಇಲ್ಲವಲ್ಲಾ..
ನೀವು ಅದೆಷ್ಟು ಆಪ್ಯಾಯಮಾನವಾಗಿದ್ದೀರಿ..ಎಷ್ಟೊಂದು ಸರಳವಾಗಿದ್ದೀರಿ..ಎಷ್ಟೊಂದು ಸಿಟ್ಟುಮಾಡಿಕೊಳ್ತಾ ಇದ್ದೀರಿ..ಹಾಗೇ ಎಷ್ಟೊಂದು ಅದ್ಭುತವಾಗಿ ಇದ್ದೀರಿ..
ಹಾಗಿದ್ದವರು ಹೀಗೆ ಕ್ಯಾರೇ ಎನ್ನದೇ ಹೋಗೋದಾ?
ನಮಗೆ ಇನ್ನು ಆ ಪ್ರೀತಿ,ಸರಳತೆ,ಸಿಟ್ಟು ಮತ್ತು ಅದ್ಭುತ ಎಲ್ಲಿ ಬಿಟ್ಟುಹೋಗಿದ್ದೀರಿ ಅಂತಾನಾದರೂ ಹೇಳಿ..
ಮಧ್ಯರಾತ್ರಿ ನೀವು ಆಗಷ್ಟೇ ಕಂಠಪೂರ್ತಿ ಹಾಡಿ ಮಲಗಿದ್ದಾರೆ ನಾವು ಸಾರ್ ಅಂತ ಕರೆದು ಎಬ್ಬಿಸುತ್ತಿದ್ದೆವಲ್ಲಾ..
ಏನಪ್ಪಾ ಅಂತ ನೀವು,
ನಾವು ಏನ್ ಸಾರ್ ನೀವು ಅದ್ಭುತ ಹಾಡುಗಾರ ಸಾರ್..ನಿಮ್ಮ ಕಂಠಮಾಧುರ್ಯ ಅಸಾಧಾರಣ ಸಾರ್ ನಾವು ನಿಮ್ಮ ಫ್ಯಾನೂ ಸಾರ್ ನಿಮ್ಮ ಹಾಡು ಈಗಷ್ಟೇ ಕೇಳ್ತಾ ಇದ್ದೀವೀ ಸಾರ್ ಅಂತೆಲ್ಲಾ ರೇಗಿಸಿದ್ದರೆ,
ನೀವು
ತಮ್ಮಾ ನಿಜಕ್ಕೂ ನಾನು ನಿಂಗೆ ಸಂತೋಷ ಕೊಟ್ಟೆನಾ..ಅಂತ ಕೇಳ್ತೀರಿ..
ಥೇಟ್ ಮಗುವೇ ನೀವು..
ಈ ಮಗುವಿನ ಬಗೆಯ ನೀವು ಈಗ ನಮ್ಮನ್ನು ಮರೆತೇ ಬಿಟ್ಟ ಹಾಗೇ ಹೋಗೋದಾ ..
ಹೋಗಿ ಪ್ಲೀಸ್ ಹೋಗಿ..ನೀವು ಇಲ್ಲದಿದ್ದರೂ ಇಲ್ಲಿ ಏನೂ ಆಗಲ್ಲ,
ಏನೂ ಆಗಲ್ಲಾ
ಏನೂ ಆಗಲ್ಲಾ
ಏನೂ ಆಗಲ್ಲಾ ಸಾರ್ ಏನೂ ಆಗಲ್ಲಾ
ಅಶ್ವಥ್ ಚಿಕ್ಕಪ್ಪಾ ನೀವು ಇಲ್ಲದೇ ಹಕ್ಕಿಯೂ ಹಾಡಲ್ಲ..
ನಿಮಗಿದು ತಿಳಿದಿರಲಿ..

20091228

ಹಾಯಿ ಸಂಜೆಯ ಕಡೆಗೆ..
ರವಿ ಬೆಳಗೆರೆ ಅವರ ಆಫೀಸ್.
ಸಂಜೆಗತ್ತಲಿಗೇ ನಾವೆಲ್ಲಾ ಕಾಯುತ್ತಿದ್ದೆವು.
ವಿಶ್ವೇಶ್ವರ ಭಟ್,ಜೋಗಿ,ಮತ್ತು ನಾನು.
ರವಿ ಫುಲ್ ಖುಷ್ ಆದಂತಿದ್ದರು.ಅವರೊಳಗಿನ ಆ ಪ್ರೇಮಿ ಎದ್ದು ಕುಳಿತಿದ್ದ.ಆಹಾ ಪ್ರೀತಿ,ವಾತ್ಯಲ್ಯ..ಸುಮ್ಮನೇ ಆ ಗೆಳೆಯ..
ಜೊತೆಗೆ ನಾನು ತುಂಬಾ ಇಷ್ಟಪಡೋ ಪ್ರಕಾಶ್ ರೈ.
ಕಿಟ್ಟಿ ಮತ್ತು ಭಾವನಾ ಬಂದದ್ದಾಯಿತು.
ಪ್ರಕಾಶ್ ರೈ ಹೇಳಿದ್ದ,ಸೌಂಡ್ ಸಿಸ್ಟಂ ಬೇಕು ಅಂತ.ಅದಕ್ಕಾಗಿ ಉಮೇಶ್ ಹೆಗಡೆ ಆಗಲೇ ಅದನ್ನು ಒಪ್ಪ ಮಾಡಿಟ್ಟಿದ್ದರು.
ನಮ್ಮ ಸ್ವಾಗತಕ್ಕೆ ಗ್ಲೆನ್‌ಫಿಡಿಕ್ ಕೂಡಾ ಬಂದಿದ್ದ.
ಕಾರ್ಯಕ್ರಮ ಆರಂಭವಾಯಿತು.
ಸಂಜೆ ರಾತ್ರಿ ತನಕ ಮಾತನಾಡಿದ್ದೇ ಮಾತನಾಡಿದ್ದು.
ಮೊದಲಾಗಿ ಪ್ರಕಾಶ್ ಆ ಹಾಡುಗಳನ್ನು ಕೇಳಿಸಿದ.
ಪುಟ್ಟಪುಟ್ಟ ಕೈ..ಪುಟ್ಟ ಪುಟ್ಟ ಬಾಯಿ..
ಆಹಾ..
ಎಂದೆವು..
ನಾನು ನನ್ನ ಕನಸೂ..
ಪಕ್ಕದಲ್ಲಿ ಭಾವನಾ ಇನ್ನೆರಡು ತಿಂಗಳಲ್ಲಿ ಬರೋ ಕಂದಮ್ಮನಿಗಾಗಿ ಕಾಯುತ್ತಿದ್ದರೆ..ಪುಟ್ಟ ಮಗಳನ್ನು ನೋಡುತ್ತಾ ಹಾಡು ಕೇಳಿದ ರವಿ..
ರವಿ ಅತ್ತೇ ಬಿಟ್ಟರು..
ನಾನು ಪ್ರಕಾಶ್‌ನನ್ನು ಸುಮ್ಮನೇ ನೋಡುತ್ತಾ ನಿಂತೆ.ದಿನಕ್ಕೆ ಇಪ್ಪತ್ತೊಂದು ಲಕ್ಷ ರೂಪಾಯಿ ಕಮಾಯಿ ಮಾಡುತ್ತಿರುವ ನಟ.ಬರೀ ನಟ ಎಂದರೆ ಸಾಕೇನ್ರೀ..ಪ್ರತಿಭಾವಂತ ನಟ.ಪ್ರಕಾಶ್ ನಮ್ಮ ತುಳುನಾಡಿನವನು.ಹಾಗಂತ ಹೇಳಿದರೆ ರವಿ ಹೇಳಿದರು.ಅದೂ ನಿಜ ಮತ್ತು ಅವನು ಎಲ್ಲರವನು..
ಪ್ರಕಾಶ್ ಹೇಳಿದ, ನಾನೊಂಥರಾ ಕಲ್ಚರಲ್ ಬಾಸ್ಟರ್ಡ್..ಇದ್ದ ಹಾಗೇ..
ತುಳುವ ತಮಿಳು ತೆಲುಗಿನ ವೀರ..ಪ್ರಕಾಶ್ ಬಳಿ ಅದ್ಭುತ ಲಹರಿಗಳಿದ್ದವು.ಆತ ಕೀರಂ ಜೋಗಿ ಬುಕ್ಕು ರಿಲೀಸ್ ಮಾಡಿ ಹೇಗೆ ಮಾತನಾಡಬಲ್ಲರು ಎಂಬುದನ್ನು ಅಲ್ಲಿ ಮಂಡಿಸಿದರು..
ಜೋಗಿ ಅವರು ಎಲ್ಲೋ ಒಂದು ಕಡೆ ಸಾಹಿತ್ಯದ ಪ್ರಭಾವಲಯದಿಂದ ತಮ್ಮನ್ನು ತಪ್ಪಿಸಿಕೊಳ್ಳುತ್ತಾ ತಾವೇ ತಾವಾಗಿ ಬೆಳೆಯುತ್ತಾ ಸಂಕೀರ್ಣತೆಗಳನ್ನು ಸೃಷ್ಟಿಸಿಕೊಳ್ಳುತ್ತಾ ನಗ್ನರಾಗುತ್ತಾ ನಗ್ನರಾಗುತ್ತಾ ನಗ್ನರಾಗುತ್ತಾ..ಮತ್ತೆ ಹೊಸ ಉಡುಗೆಗಳೊಂದಿಗೆ ತಮ್ಮನ್ನು ಬೆಸೆದುಕೊಳ್ಳುತ್ತಾ ಮತ್ತೆ ರೂಪಕಗಳ ಪ್ರತಿನಿಧಿಯಾಗೋದು ಇದೆಯಲ್ಲಾ ಆ ಸನ್ನಿವೇಶಗಳನ್ನು ಒಬ್ಬ ಓದುಗ ಅಥವಾ ವಿಮರ್ಶಕ ಅದು ಹೇಗೆ ಸಾಧ್ಯಮಾಡಿಕೊಳ್ತಾನೆ ಅಂದರೆ..
ಪ್ರಕಾಶ್ ಅಭಿನಯ ಸಾಗುತ್ತಿತ್ತು..ಎಲ್ಲರೂ ಬಿದ್ದು ಬಿದ್ದೂ ನಕ್ಕರು.
ಆಮೇಲೆ ಅಲ್ಲಿ ಮೌನ.
ವಿಶ್ವೇಶ್ವರ ಭಟ್ ವಿಕ ಮೂಲಕ ರೇಣುಕಾಚಾರ್ಯ ಅವರ ವಿರುದ್ಧ ಹೂಡಿದ ಚಳವಳಿಯನ್ನು ಮಾತನಾಡಿದೆವು.ಕರ್ನಾಟಕದ ಜನರೆಲ್ಲಾ ಸುಮ್ಮನೇ ಕುಳಿತು ನೀಚತನವನ್ನು ಮೌನವಾಗಿ ಬೆಂಬಲಿಸುತ್ತಿದ್ದಾರೇನೋ ಅಂದುಕೊಂಡರೆ ಭಟ್ ಒಂದು ಯುದ್ಧವನ್ನೇ ಹೂಡಿದ್ದಾರೆ ಎಂದೆವು.
ಭಟ್ ನಕ್ಕರು.ರೇಣುಕಾಚಾರ್ಯ ಅಥವಾ ಅವನಂತಹ ಇನ್ನೊಬ್ಬ ಅದು ಹೇಗೆ ತಮ್ಮ ಕೃತ್ಯಗಳ ಮೂಲಕ ನಮ್ಮನ್ನು ನಮಗೆ ಗೊತ್ತೇ ಇಲ್ಲದಂತೆ ಆಳುವ ಮಟ್ಟಕ್ಕೆ ಬಂದುಬಿಡುತ್ತಾರೆ..ಪ್ರಜಾಸತ್ತೆಯ ಸೋಲು ಇದೇ ತಾನೇ ಎಂದು ನಾನು.
ಜೋಗಿ ಮಾತನಾಡಲಿಲ್ಲ.ಅವನಿಗೆ ಬೆಳಗಿನ ಹಬ್ಬದ ಗುಂಗು ಬಿಟ್ಟಂತೆ ಕಾಣಲಿಲ್ಲ.ಎಲ್ಲರಿಂದಲೂ ಸನ್ಮಾನಿತನಾಗಿದ್ದ ಆತ.ರವಿ ಅದನ್ನೇ ಹೇಳಿದರು..
ಯಾವನೋ ಒಬ್ಬ ಅಸಹ್ಯ ರಾಜಕಾರಣಿ ತಾನು ದುಂಬಾಲು ಬಿದ್ದ ಹೆಣ್ಣಿನ ಬ್ರಾ ಮತ್ತು ಕಾಚಾಗಳನ್ನು ಹಠ ಹಿಡಿದು ಎತ್ತಿಕೊಂಡು ತಂದಿಟ್ಟುಕೊಂಡ ಕತೆಯನ್ನು ವಿಶ್ವೇಶ್ವರ ಭಟ್ಟರು ಹೇಳುತ್ತಿದ್ದಾಗ ಎಲ್ಲರೂ ಈ ನಾಡಿಗೆ ಎಂದಾದರೂ ಭವಿಷ್ಯ ಇರಬಹುದೇ ಎಂದು ಕೇಳಿದರು..
ಯಾರ ಬಳಿಯೂ ಉತ್ತರವಿರಲಿಲ್ಲ.ನಿರಾಸೆ ಹಬ್ಬಿದಂತೆ ಮನಸ್ಸು ಆವರಿಸಿಕೊಂಡಿತು.
ಪ್ರಕಾಶ್ ಮಾತನಾಡುತ್ತಲೇ ಇದ್ದರು..ಅವರ ಸಿನಿಮಾ.ಹಾಡು,..
ಸಿಗರೇಟ್ ಹಚ್ಚಿದರೆ ಪಕ್ಕದಲ್ಲಿ ಭಾವನಾ..
ಸ್ಸಾರಿ ಎಂದರೆ..
ಆಕೆಯೇ ಹೊರನಡೆದು ನಮಗೆ ಸಿಗರೇಟ್ ಸೇದಲು ಅನುವು ಮಾಡಿದಳು.
ಜೋಗಿ ಹೇಳಿದ ನಾವು ಧೂಮಪಾನ ನಿಷೇಧ ಮಾಡ್ತಾ ಇದ್ದೇವೆ..
ಹೇಗೆ
ಸಿಗರೇಟು ಸುಟ್ಟು ಮುಗಿಸುವ ಮೂಲಕ..
ರವಿ ತಾನು ಬರೆಯುತ್ತಿರುವ ಹೊಸ ಕಾದಂಬರಿಯ ಸ್ಕ್ರಿಪ್ಟ್ ತೋರಿಸಿದರು.
ಅದರಲ್ಲಿ ನಮ್ಮ ಶೋಭಕ್ಕ ಕಂಡ ಹಾಗಾಯಿತು..