20091119

ಪ್ರೀತಿಯ ಯಡಿಯೂರಪ್ಪನವರೇ.

ಸರೀ ಸುಮಾರು ಮೂರು ವಾರದಿಂದ ನೀವು ಪಡುತ್ತಿದ್ದ ಯಾತನೆಯನ್ನು ಒಬ್ಬ ಪ್ರಜೆಯಾಗಿ ನಾನು ಅರ್ಥ ಮಾಡಿಕೊಂಡಿದ್ದೇನೆ.
ಮುಖ್ಯಮಂತ್ರಿಯೊಬ್ಬರು ಇಷ್ಟೊಂದು ಕಷ್ಟ ಪಟ್ಟದ್ದು ಬಹುಶಃ ಬೇರೆಲ್ಲೂ ಕಾಣೆವು.ಆ ಮಟ್ಟಿಗೆ ನೀವು ಮುಗ್ಧರು ಎಂಬುದು ಎಂಥವನಿಗೂ ಅರ್ಥವಾಗುತ್ತದೆ.
ಯಡಿಯೂರಪ್ಪನವರೇ,ನೀವು ಹುಟ್ಟು ಹೋರಾಟಗಾರರು.ನಾನು ಬಾಲ್ಯದಿಂದಲೇ ಆಕಾಶವಾಣಿಯ ಪ್ರದೇಶಸಮಾಚಾರದಲ್ಲಿ,ವಿಧಾನಮಂಡಲದಲ್ಲಿ ಇಂದು ಕಾರ್ಯಕ್ರಮದಲ್ಲಿ ನಿಮ್ಮ ಹೋರಾಟಗಳು ಹೇಳಿಕೆಗಳ ಬಗ್ಗೆ ಕೇಳುತ್ತಿದ್ದೆ.ಪತ್ರಿಕೆಗಳಲ್ಲಿ ನೀವು ಆಗಾಗ್ಗೆ ಕಾಣಿಸಿಕೊಳ್ಳುವುದನ್ನು ನೋಡುತ್ತಿದ್ದೆ.ನಮ್ಮೂರಿಗೂ ನೀವೊಮ್ಮೆ ಬಂದಾಗ ನಿಮ್ಮನ್ನು ನೋಡಲೇಬೇಕು ಎಂದು ಕಲ್ಯಾಣಮಂಟಪದೊಳಗೆ ಬಂದಿದ್ದೆ.ನೀವು ಕನ್ನಡಿ ಎದುರು ನಿಂತು ತಲೆ ಬಾಚಿ,ಪೌಡರ್ ಹಾಕಿಕೊಳ್ಳುತ್ತಿದ್ದುದನ್ನು ನೋಡಿ,ವಾವ್ ಎಷ್ಟೊಂದು ಸೌಂದರ್ಯಪ್ರಜ್ಞೆ ಇದೆ ಎಂದುಕೊಂಡಿದ್ದೆ..
ಈಗಲೂ ನೀವು ಅದೇ ರೀತಿ ಇದ್ದೀರಿ..ಅದು ನನಗೆ ಸಂತೋಷವಾಗಿದೆ.
ಆದರೆ ಈಗ ನಿಮ್ಮೊಳಗಿನ ಸೌಂದರ್ಯ ಪ್ರಜ್ಞೆಗೇನಾಗಿ ಹೋಯಿತು?ಅದೇ ನನ್ನ ಪ್ರಶ್ನೆ.
ನೀವೇಕೆ ಇಷ್ಟೊಂದು ಯಮಯಾತನೆಗಳ ನಡುವೆಯೂ ಅಧಿಕಾರವನ್ನು ಟಂಕಿಸಿಕೊಂಡಿದ್ದೀರಿ?
ಅದನ್ನು ನೀವು ಹೇಳಬೇಕು..
ಅಂತರಂಗಪೂರ್ವಕ ನೀವು ಇದನ್ನೆಲ್ಲಾ ಒಪ್ಪಿಕೊಂಡು ಉಳಿದವರಲ್ಲ.ನಿಮ್ಮ ಅಂತರ್ಯದಲ್ಲಿ ಬೇಗುದಿ ಆರಿದೆ ಎಂದರೆ ಯಾರೂ ನಂಬಲಿಕ್ಕಿಲ್ಲ.ಹಾಗೆಂದ ಮೇಲೆ ಆತ್ಮವಂಚನೆ ಮಾಡಿಕೊಂಡು ನೀವು ಉಳಿದಿದ್ದೀರಾ?ನಿಮ್ಮ ಹೃದಯಕ್ಕೆ ನೇರವಾಗಿ ಉಳಿಯಲಾರದೇ ಅಧಿಕಾರದ ಗದ್ದುಗೆಯಲ್ಲಿದ್ದೀರಾ?ಅಥವಾ ಯಾವುದೋ ಪ್ರತೀಕಾರಕ್ಕೆ ವ್ಯೂಹ ರಚಿಸುತ್ತಿದ್ದೀರಾ?
ಯಡಿಯೂರಪ್ಪಾಜೀ,ನಿಮಗೂ ಮುಖ್ಯಮಂತ್ರಿ ಹುದ್ದೆಯ ಆಸೆಯೇ?
ಅದು ಯಾರಿಗೆ ತಾನೇ ಇರುವುದಿಲ್ಲ.ಆಡಳಿತ ಎಂದರೆ ಏನೆಂದು ಅರಿಯದವರೂ ಮುಖ್ಯಮಂತ್ರಿಯಾಗಲು ಹಪಿಹಪಿಸುತ್ತಾರೆ.ಗ್ರಾಮಪಂಚಾಯತ್‌ನ ಮೆಟ್ಟಿಲು ನೋಡದವರು,ಬಡವರಿಗೆ ಒಂದು ರೇಶನ್ ಕಾರ್ಡು ಕೊಡಿಸಲಾಗದವರೂ ಕನಸು ಕಾಣುವುದು ಮುಖ್ಯಮಂತ್ರಿ ಆಗಬೇಕು ಎಂದು.ಆದರೆ ನೀವು ಹಾಗಲ್ಲ.ನಿಮಗೆ ಅರ್ಹತೆ ಇದೆ,ಆದರೆ ಈ ಹೊತ್ತಿನಲಿ ಅಲ್ಲ.
ಈಗ್ಗೆ ನಾಲ್ಕು ವರ್ಷಗಳ ಹಿಂದೆ ಅಗೋಸ್ಟ್ ತಿಂಗಳಲ್ಲಿ ನೀವು ಮುಖ್ಯಮಂತ್ರಿಯಾಗೋ ಆಸೆಗಾಗಿ,ಕೇಂದ್ರ ನಾಯಕರು ನಿಮ್ಮನ್ನು ಉಪೇಕ್ಷೆ ಮಾಡಿದರು ಎಮದು ನೀವು ಬೆಂಗಳೂರಿಗೆ ಬಂದವರೇ ಕಾಣೆಯಾದಿರಿ,ಆಮೇಲೆ ಹುಡುಕಿದರೆ ನೀವು ಸಿಕ್ಕಿದ್ದು ಜೆಡಿಎಸ್ ಅಥವಾ ಕಾಂಗ್ರೆಸ್ ಪಾಳೆಯದಲ್ಲಿ.ಅಲ್ಲಿಂದ ನಿಮ್ಮನ್ನು ಎತ್ತಿ ತಂದ ಮಹಾನಾಯಕರು ಅದೆಂತೋ ನಿಮ್ಮ ಬ್ರೈನ್‌ವಾಶ್ ಮಾಡಿದರು.ರಾಜ್ಯದ ಪಟ್ಟ ಎಂದಾದರೂ ಸಿಕ್ಕಾಗ ಅದು ನಿಮ್ಮದೇ ಎಂದರು.ನೀವು ಅದಕ್ಕಾಗಿ ಕಾದಿರಿ.
ಅದೂ ಸಿಕ್ಕಿತು. ಹಾಗೇ ಸಿಗುವಂತೆ ಮಾಡಲು ಹಲವಾರು ತಂತ್ರಗಳನ್ನು ಹೆಣೆಯಲಾಯಿತು. ಆ ತಂತ್ರಿಗಳೇ ರೆಡ್ಡಿ ಸೋದರರು.
ಯಾವಾಗ ಅವರ ಜೊತೆ ನೀವು ಸಿಕ್ಕಿಕೊಂಡಿರೋ ಅಲ್ಲಿಗೆ ನಿಮ್ಮ ಒಳಗಿದ್ದ ಯಡಿಯೂರಪ್ಪ ಕಾಣೆಯಾಗಿದ್ದಾನೆ.
ಹೋರಾಟಗಾರ ಕಳೆದುಹೋಗಿದ್ದಾನೆ
ಮೂಲ ರಾಷ್ಟ್ರೀಯತೆಯ ನಿಮ್ಮ ಶರೀರ ಮತ್ತು ಹೋರಾಟದ ಕಿಚ್ಚಿನ ಮನಸ್ಸು ಬಿದ್ದು ಹೋಗಿದೆ.
ಹಾಗೆಂದು ಹೇಳಲು ಸಾಕಷ್ಟು ಉದಾಹರಣೆಗಳು ನಿಮ್ಮಲ್ಲೇ ಸಿಕ್ಕಿವೆ,ಸಿಗುತ್ತಿವೆ.
ಮುಖ್ಯಮಂತ್ರಿ ಎಂಬ ಪಟ್ಟ ನಿಮ್ಮ ಮಹದಾಸೆ.ಅದಕ್ಕಾಗಿ ನೀವು ರೆಡ್ಡಿಗಳ ಪಾಳೇಗಾರಿಕೆಗೆ ನಜರು ಒಪ್ಪಿಸಿದರಿ.ನೀವು ಕರ್ನಾಟಕದ ಮುಖ್ಯಮಂತ್ರಿಯಾಗಿರಬಹುದು ಆದರೆ ರೆಡ್ಡಿಗಳು ನಿಮ್ಮ ಮುಖ್ಯಮಂತ್ರಿಗಳು.
ನಿಜಾರ್ಥದಲ್ಲಿ ಈಗ ಕರ್ನಾಟಕದಲ್ಲಿ ಇರೋದು ರಾಜರ ಆಡಳಿತ.ಬಳ್ಳಾರಿಯ ಜನಾರ್ದನ ರೆಡ್ಡಿ ಈ ನಾಡಿನ ರಾಜ.ನೀವು ಆಸ್ಥಾನದ ಮುಖ್ಯಮಂತ್ರಿ..
ರಾಜ ಹೇಳಿದಂತೆ ನಡೆದುಕೊಳ್ಳುವುದು ಮುಖ್ಯಮಂತ್ರಿಯ ಕೆಲಸ.
ನೀವು ಈಗ ಅದನ್ನೇ ಮಾಡುತ್ತಿದ್ದೀರಿ.ದೆಹಲಿಗೆ ಹೋದ ಮೇಲೆ ಜನಾರ್ದನ ರೆಡ್ಡಿಯ ಪಟ್ಟಾಭಿಷೇಕವಾಯಿತು.ನೀವು ಮೌನವಾಗಿ ಅದನ್ನು ನೋಡಬೇಕಾಯಿತು.ಸುಬ್ರಹ್ಮಣ್ಯದ ಸುಬ್ಬಪ್ಪ,ವೈಷ್ಣೋದೇವಿಯ ದೇವಿ ಕೂಡಾ ಇಲ್ಲಿ ಅಸಹಾಯಕರು.
ಏಕೆಂದರೆ ನೀವು ಬೆನ್ನೆಲುಬನ್ನೇ ಕಳೆದುಕೊಂಡ ಬೊಂಬೆ.ಬರೀ ಲೆದರ್ ಪಪ್ಪೆಟ್.
ರೆಡ್ಡಿಗಳಿಗೆ ರಾಜ್ಯಾಭಿಷೇಕ ಮಾಡಿದ ನಿಮ್ಮನ್ನು ಮುಖ್ಯಮಂತ್ರಿ ಎಂದು ಸಂವಿಧಾನಿಕವಾಗಿ ಒಪ್ಪಬಹುದು ಅಷ್ಟೇ.ಗಾರ್ಡ್ ಆಫ್ ಹಾನರ್ ಅಥವಾ ಪುಕ್ಕಟೆ ಸಲ್ಯೂಟ್ ನಿಮಗೆ ಮುಫತ್ತಾಗಿ ಸಿಗಬಹುದು.ಕಡತಗಳಿಗೆ ನಿಮ್ಮ ಸಹಿ ಬೀಳಬಹುದು,ಆದೇಶಗಳನ್ನು ನೀವು ಚಲಾಯಿಸಬಹುದು..ಆದರೆ ಯಾವುದನ್ನೂ ನೀವು ನಿಮ್ಮ ಹೃದಯಕ್ಕೆ ನೇರವಾಗಿ ಮಾಡಲು ಶಕ್ತರಿಲ್ಲ.ಅದನ್ನು ಎಂದೋ ಕಳೆದುಕೊಂಡಿರಾ?
ರೆಡ್ಡಿಗಳು ನಿಮ್ಮ ಮುಖ ಕೂಡಾ ನೋಡಲ್ಲ ಎಂದರು.ನೀವು ಪಾಪದ ಕೊಡ ತುಂಬಿದ ಕಂಸ ಎಂದರು.(ಅದು ಶಿಶುಪಾಲ ಎಂದಾಗಬೇಕಿತ್ತು,ಏನು ಮಾಡೋಣ ಅವರ ಪೌರಾಣಿಕ ಜ್ಞಾನ ಅಷ್ಟೇ ಇತ್ತು..ಇರಲಿ)
ನೀವು ಆಕ್ಷಣಕ್ಕೆ ದೆಹಲಿ ಬಿಟ್ಟು ಬರುತ್ತೀರಿ ಎಂದುಕೊಂಡಿದ್ದೆ.ನೀವು ಬರಲಿಲ್ಲ.ಯಡಿಯೂರಪ್ಪ ತೊಲಗಬೇಕು ಎಂದವರು ಕಾಂಗ್ರೆಸ್ಸಿಗರೂ ಅಲ್ಲಾ ಜೆಡಿಎಸ್ಸೂ ಅಲ್ಲ.ನಿಮ್ಮವರೇ..ನೀವೇ ತಂದು ಎಮ್ಮೆಲ್ಲೆ ಮಾಡಿದವರೇ.ನೀವು ಮುಖ್ಯಮಂತ್ರಿಯಾಗ ಬೇಕಾದರೆ ದೊರೆಯಬೇಕಾಗಿದ್ದ ತಲೆಗಳೇ..
ನೀವು ಆದರೂ ಮುಖ್ಯಮಂತ್ರಿಯಾಗಿರಲೇಬೇಕು ಎಂದು ಉಳಿದುಕೊಂಡಿದ್ದೀರಲ್ಲಾ..ಇದೇ ನನಗೆ ಅಚ್ಚರಿ.ನಿಮ್ಮ ಖಾಸಾ ಗೆಳತಿ ಶೋಭಾ ಅವರನ್ನು ಹೊರಗೆಸೆದಾಗ ನನಗೆ ಮಂಗನನ್ನು ನೀರಿನ ತೊಟ್ಟಿಯಲ್ಲಿ ಹಾಕಿದ ಒಂದು ಕತೆ ನೆನಪಾಯಿತು.ತೊಟ್ಟಿಯೊಳಗೆ ಮಂಗನ ಸಂಸಾರವನ್ನು ಇಟ್ಟು ನೀರು ತುಂಬುತ್ತಾ ಹೋದಾಗ ಕಡೆಗಳಿಗೆಯವರೆಗೂ ತಾಯಿ ಮಂಗ ತನ್ನ ಮಗುವನ್ನು ಎತ್ತೆತ್ತಿ ಹಿಡಿಯಿತಂತೆ.ಕೊನೆಗೂ ನೀರು ಮೂಗಿನ ಮಟ್ಟಕ್ಕೆ ಬಂದಾಗ ಮಗುವನ್ನು ಕೆಳಗೆ ನೀರಲ್ಲಿ ಹಾಕಿ ತಾನು ಅದನ್ನು ಮೆಟ್ಟಿ ನಿಂತಿತಂತೆ.
ಕೊನೆಗೂ ಬದುಕುವ ಪ್ರಶ್ನೆ ಬಂದಾಗ ಎಲ್ಲರೂ ಹೀಗೆ ಎಂಬುದು ಕತೆಯ ಸಾರಾಂಶ.
ಯಡಿಯೂರಪ್ಪಾಜೀ ನಿಮಗೆ ಈ ಬದುಕು ಬೇಕಿತ್ತಾ?
ನೀವು ರಾಜೀನಾಮೆ ಕೊಡಬೇಕು ಎಂದು ನಾನು ಹೇಳಲಾರೆ,,ಆದರೆ ನೀವು ರಾಜರ ಆಡಳಿತದಲ್ಲಿ ಅದೆಂಥ ಮುಖ್ಯಮಂತ್ರಿಯಾಗಿ ಉಳಿಯಬಲ್ಲಿರಿ ಎಂಬುದಷ್ಟೇ ನನ್ನ ಜಿಜ್ಞಾಸೆ.
ನೀವು ಬೀರಬಲ್ಲ ಆಗಬಹುದು ಆದರೆ ರೆಡ್ಡಿಗಳು ಅಕ್ಬರ್ ಆಗಲಾರರು.ನೀವು ತಿಮ್ಮಣ್ಣರಸ ಆಗಬಹುದಾ ಎಂದರೆ ಬಳ್ಳಾರಿ ದೊರೆಗಳು ಕೃಷ್ಣದೇವರಾಯ ಆಗುವುದಾದರೂ ಹೇಗೆ?
ರಾಜಕೀಯ ಎಂದರೆ ಇದೇನಾ ಎಂದು ಕರ್ನಾಟಕದ ಜನ ಕೇಳುತ್ತಿದ್ದಾರೆ ಯಡಿಯೂರಪ್ಪನವರೇ..
ಬಡವರ ಸೇವೆ ಮಾಡಲು ಮುಖ್ಯಮಂತ್ರಿಯೇ ಆಗಿರಬೇಕೆಂದೇನೂ ಇಲ್ಲವಲ್ಲಾ..ಅಧಿಕಾರ ಬೇಕು ನಿಜ.ಆತ್ಮ ಸಾಕ್ಷಿ ಕಳೆದುಕೊಂಡು ಅಲ್ಲ..

20091116

ಮಹಾಪ್ರಳಯದ ಬಳಿಕ..

ಝಲಕ್-೧
ಉತ್ತರ ಕರ್ನಾಟಕದ ಮಹಾನೆರೆ ತುಂಬಿ ಹರಿದಾಗ ವಟಪತ್ರದ ಮೇಲೆ ಕುಳಿತು ದೇವರು ನಗುತ್ತಾ ತೇಲಿದ್ದಾನೆ ಎಂದು ಕರಾವಳಿಯ ಜನ ಬಾಯ್ತುಂಬ ಹೇಳುತ್ತಿದ್ದಾರೆ.
ಆ ಕಾರಣಕ್ಕೇ ರಾಜನಿಗೆ ಸಂಕಷ್ಟ ಬಂದಿದೆ.ಅವನ ಕಿರೀಟಕ್ಕೆ ಸಂಚಕಾರ ಬಂದಿದೆ.ರಾಜಾಡಳಿತ ಕೆಟ್ಟಾಗ ದೇವರು ಜಲಪ್ರಳಯ ಉಂಟುಮಾಡುತ್ತಾನಂತೆ.ಆಗ ಪ್ರಜೆಗಳು ಒಳ್ಳೆಯವರು ಕೆಟ್ಟವರು ಎಂಬ ಬೇಧಭಾವವಿಲ್ಲದೇ ಮುಳುಗಿ ಹೋಗುತ್ತಾರೆ ಎಂಬ ಪಾಡ್ದನ ಎಂಬ ತುಳು ಜಾನಪದ ಹಾಡುಗಳ ಉಲ್ಲೇಖವನ್ನೊಡ್ಡಿ ಪರಶುರಾಮ ಸೃಷ್ಟಿಯ ಈ ಮಂದಿ ಹೇಳುತ್ತಾರೆ.
ಯಡಿಯೂರಪ್ಪ ಅವರ ಸರಕಾರ ಕೊನೆಗೂ ಈ ಜಲಪ್ರಳಯವೇ ಕಾರಣವಾಗಿ ಹಂದಾಡುವುದನ್ನು ನೋಡಿದರೆ ಈ ಪಾಡ್ದನದ ಸಾಲುಗಳು ಸತ್ಯವೇ ಅನ್ನಿಸುತ್ತದೆ.

ಝಲಕ್-೨

ಪುತ್ತೂರಿನ ಬಸ್ಸು ನಿಲ್ದಾಣದಲ್ಲಿ ಕಂಡು ಬಂದ ಒಂದು ದೃಶ್ಯ...ಈ ಪಟ್ಟಣಕ್ಕೆ ಉತ್ತರ ಕರ್ನಾಟಕದ ಕೂಲಿಕಾರ್ಮಿಕರ ದಂಡು ಆಗಾಗ ಬರುತ್ತಾ ಹೋಗುತಾ ಇರೋದು ಸಾಮಾನ್ಯ.ಈ ಭಾಗದ ಅಡಕೆ ತೋಟಗಳಲ್ಲಿ ಹೆಚ್ಚಾಗಿ ಕೆಲಸ ಮಾಡೋ ಕಾರ್ಮಿಕರು ಉತ್ತರ ಕರ್ನಾಟಕದವರು.ಅವರು ಪ್ರತೀ ಸೋಮವಾರ ಹಿಂಡು ಹಿಂಡಾಗಿ ಈ ಪುತ್ತೂರು ಬಸ್ಸು ನಿಲ್ದಾಣದಲ್ಲಿ ಕಾಣಿಸುತ್ತಾರೆ.ಅಡಕೆ ತೋಟಗಾರ ಜೀಪು ಹಿಡಿದುಕೊಂಡು ಬಂದು ಕಾರ್ಮಿಕರನ್ನು ಗುತ್ತಿಗೆ ತೆಗೆದುಕೊಳ್ಳುತ್ತಾನೆ.ವಾರವೋ ತಿಂಗಳೋ ಕಳೆದ ಮೇಲೆ ಕಳುಹಿಸಿಕೊಡುತ್ತಾನೆ.ಪ್ರತೀ ಸೋಮವಾರ ಪುತ್ತೂರಿನ ವಾರದ ಸಂತೆ.ಆಂದು ಹತ್ತೂರಿನ ಈ ಕಾರ್ಮಿಕರು ಪಟ್ಟಣಕ್ಕೆ ಬಂದು ತಮ್ಮ ವಾರದ ಖರೀದಿ ಮಾಡುತ್ತಾರೆ.ಎಲ್ಲರೂ ಪರಸ್ಪರ ಭೇಟಿ ಯಾಗಿ ಸಾಂಪ್ರತ ವಿಚಾರಿಸಿಕೊಳ್ಳಲು ಈ ನಿಲ್ದಾಣ ಒಂದು ತಾಣ.
ಇಂಥ ನಿಲ್ದಾಣದಲ್ಲಿ ಅಂದು ಮುಂಜಾನೆ ಸುಮಾರು ಮೂವತ್ತು ವರುಷದ ಮಹಿಳೆಯೊಬ್ಬಳು ಬೆಳಗಾವಿಯ ಬಸ್ಸಿಗೆ ದೌಡಾಯಿಸಿ ಬಂದೇರಿದಳು.ಬಸ್ಸು ನಿಲ್ದಾಣದಿಂದ ಹೊರಟಾಗಿತ್ತು.ಒಂದೇ ಒಂದು ನಿಮಿಷ.. ತನ್ನ ಮಗ ಹಿಂದೆ ಓಡೋಡಿ ಬರುತ್ತಿದ್ದಾನೆ ಎಂದು ನಿರ್ವಾಹಕನಿಗೆ ಮನವಿ ಹಾಕಿತು.ಸರಿ,ಬಸ್ಸು ಕಾದಿತು.ಹೇಗೂ ಹುಬ್ಬಳ್ಳಿಗೆ ಎರಡು ಡೈರೆಕ್ಟು ಪ್ಯಾಸೆಂಜರು ತಾನೇ ಎಂದು ಡ್ರೈವರೂ ಕಾದ.ನಿಮಿಷ ಐದಾದರೂ ಮಗ ಬರಲಿಲ್ಲ.ಪ್ಯಾಸೆಂಜರುಗಳು ಸಿಟ್ಟು ಮಾಡಿಕೊಂಡು ಪಿರಿಪಿರಿ ಹೇಳಲಾರಂಭಿಸಿದಾಗ..ಮಹಿಳೆ ಬಸವರಾಜ ..ಬಾರೋ ಬಸ್ಸು ಹತ್ತೋ ಎಂದು ಬಸ್ಸೊಳಗಿಂದ ಕೂಗಿ ಕರೆಯಿತು..
ಬಸವರಾಜ ಬರಲಿಲ್ಲ.ಬಸ್ಸೊಳಗಿದ್ದವರೆಲ್ಲಾ ಇಣುಕಿದರೆ ನಿಲ್ದಾಣದ ಕಂಪೌಂಡ್‌ನಲ್ಲಿ ಹತ್ತು ವರುಷದ ಹುಡುಗನೊಬ್ಬ ಯವ್ವಾ ನಾನೊಲ್ಲೆ ಯವ್ವಾ ನಾನೊಲ್ಲೆ ಅಂತ ಹೇಳುತ್ತಿದ್ದ.ಕೈ ಚೀಲ ಹಿದುಕೊಂಡು ನಿಂತೇ ಇದ್ದ..
ಬಸ್ಸಿನೊಳಗಿಂದ ಬಸವರಾಜಾ ಬಾರೋಎ॒ಂದು ತಾಯಿ ಕೂಗುತ್ತಿತ್ತು..
ಕೊನೆಗೆ ನಿರ್ವಾಹಕ ಏನಮ್ಮಾ ನಿನ್ನದು..? ಬರುವುದಾರೆ ಬಾ..ಇಲ್ಲದಿದ್ದರೆ ಇಳಿದುಕೋ ಎಂದರೆ..
ಹೊರಗಿಂದ ಆ ಬಾಲಕ..ಮನೆ ಬಿದ್ದ ಮೇಲೆ ಅಲ್ಲಿ ಏನ್ ಉಳಿದೈತೀ ಯವ್ವಾ..ನಾನು ಒಲ್ಲೆ.. ನಾ ಬರೂಕಿಲ್ಲ..ಎಂದ.
ಸರೀ ಹಾಗಾದರೆ ಎಂದಿತು ತಾಯಿ.
ಬಸ್ಸಿನೊಳಗೆ ಸೀಟು ಗಟ್ಟಿ ಹಿಡಿದು ಕುಳಿತಿತು.ಹುಬ್ಳೀ ಒಂದು ಟಿಕೇಟು ಎಂದು ಕಾಸು ಎತ್ತಿತು.
ಬಸ್ಸು ಹೊರಟಿತು,ಜೊತೆಗೆ ಆ ತಾಯಿಯೂ..
ಬಿದ್ದು ಹೋದ ಮನೆ ಕಟ್ಟಲು ತಾಯಿ ಹೊರಟಳು..ಮಗ ಪರದೇಸಿಯಾಗಿ ಉಳಿದ..

ಝಲಕ್-೩

ಅದು ದಕ್ಷಿಣ ಕನ್ನಡದ ದೊಡ್ಡ ದೇವಾಲಯ.ದೇವಿಯ ಆಲಯ ಎಂದರೂ ಸರಿ.ಆ ಗುಡಿಯೊಳಗಿನ ಅಮ್ಮನಿಗೆ ಪ್ರತೀ ನಿತ್ಯ ನೂರಾರು ಸೀರೆ ಉಡುಗೊರೆಯಾಗಿ ಬರುತ್ತದೆ.ಭಕ್ತರು ತಮ್ಮ ಇಷ್ಟಾರ್ಥ ಪೂರೈಸಿದ ತಾಯಿಗೆ ಚೆಂದದ ಸೀರೆ ತಂದೊಪ್ಪಿಸುವರು.ಅರ್ಚಕರು ಅದನ್ನು ಆ ದೇವಿಯ ಮೂರ್ತಿಗೆ ತೊಡಿಸುವರು.ಹಾಗೇ ರಾಶಿ ಬಿದ್ದ ಪ್ರಸಾದ ರೂಪದ ಸಾವಿರಾರು ಸೀರೆಗಳನ್ನು ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಹಂಚಲು ದೇವಾಲಯ ಆಡಳಿತ ನಿರ್ಧರಿಸಿತು.ಕಳೆದ ವಾರ ಎಂಟು ಸಾವಿರ ಸೀರೆಗಳನ್ನು ಟೆಂಪೋದಲ್ಲಿ ತುಂಬಿ ಬಳ್ಳಾರಿಯತ್ತ ಸಾಗಿಸಿತು.ಸೀರೆ ಬಳ್ಳಾರಿ ತಲುಪಿದ ಮೇಲೆ ಯಾವುದೋ ಹಳ್ಳಿಗೆ ಹೋಗಿ ಹುಡುಕಿ ಹಂಚೋಣ ಎಂದುಕೊಂಡರೆ ಹಾಗೆಲ್ಲಾ ನೀವು ಹಂಚುವಂತಿಲ್ಲ..ಅದೇನಿದ್ದರೂ ನಾವೇ ಹಂಚೋದು ಎಂದಿತು ಒಂದು ದೊಡ್ಡ ರಾಜಕಾರಣಿ ಕುಳ.
ಹಾಗಾದರೆ ಏನು ಮಾಡೋಣ ಎಂದರೆ ಡೀಸಿ ಆಫೀಸಲ್ಲಿ ತಂದು ಹಾಕಿ ಅಂತ ಅಪ್ಪಣೆ ಬಂತು.ಛಮಕ್‌ಝಮಕ್ ಸೀರೆಗಳ ಮಾರಾಪನ್ನು ಅವರು ಕೊನೆಗೂ ಡೀಸಿ ಸಾಹೇಬರ ಕೈಗೇ ಕೊಟ್ಟು ಬರುವುದಾಯಿತು.

20091104

ಮನೆ ಕಟ್ಟಿ ನೋಡು ನೋಡೋಣ

ಮನೆ ಕಟ್ಟಿಸೋದು ಮಕ್ಕಳಾಟಿಕೆ ಅಲ್ಲ..ಆದ್ದರಿಂದ ಸರಕಾರ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಈಗಿಂದ್ದೀಗೆ ಮನೆ ಮಾಡಿ ಕೊಡುತ್ತೇವೆ ಎಂದು ಹೇಳಿದರೆ ಅದು ಜಸ್ಟ್ ಇಂಪಾಸಿಬಲ್.
ಮೊನ್ನೆ ಮೊನ್ನೆ ಬಂದ ಬಂದು ಹೋದ ಮಹಾ ಪ್ರಳಯಕ್ಕೆ ಉತ್ತರ ಕರ್ನಾಟಕದ ಬಳ್ಳಾರಿ,ಗುಲಬರ್ಗಾ,ಕೊಪ್ಪಳ,ರಾಯಚೂರು,ಬೆಳಗಾವಿ,ಗದಗ,ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಪುನರ್ವಸತಿಯ ಮಹಾ ಅಭಿಯಾನಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಜೊತೆಗೆ ಹಲವಾರು ಸಂಘ ಸಂಸ್ಥೆಗಳು,ದಾನಿಗಳು ತಯಾರಾಗಿದ್ದಾರೆ.
ಸರಕಾರವೇ ಹೇಳೋ ಪ್ರಕಾರ ಈಗ ತತ್‌ಕ್ಷಣಕ್ಕೆ ಎರಡು ಲಕ್ಷ ಮನೆ ತಯಾರಾಗಬೇಕು..ಅದಕ್ಕಾಗಿ ೧೨ ಸಾವಿರ ಎಕರೆ ಜಮೀನು ಬೇಕು.೨೫೦ ಚದರಡಿಯಯ ಮನೆಯೊಂದನ್ನು ಮನೆ ಕಳೆದುಕೊಂಡವರಿಗೆ ಸರಕಾರ ಕಟ್ಟಿಸಿಕೊಡುತ್ತದೆ.ಅದರಲ್ಲಿ ಒಂದು ಕೊಠಡಿ,ಒಂದು ಕಿಚನ್ ಒಂದು ಬಾತ್‌ರೂಮು ಮತ್ತು ಒಂದು ಶೌಚಾಲಯ ಇರುತ್ತದೆ.ಮನೆಗೆ ತಗಲುವ ಖರ್ಚಿನಲ್ಲಿ ಅರ್ಧದಷ್ಟು ಸರಕಾರ ಭರಿಸುತ್ತದೆ ಉಳಿದರ್ಧ ದಾನಿಗಳಿಂದ ಬರುತ್ತದೆ.
ಎಲ್ಲ ಚೆನ್ನಾಗಿದೆ. ದುಡ್ಡೂ ಇದೆ.ಆದರೆ ಎರಡು ಲಕ್ಷ ಮನೆ ಫಟಾಫಟ್ ಅಂತ ಕಟ್ಟೋದು ಇದು ಎಷ್ಟು ಸಾಧ್ಯ..?ಮತ್ತು ಇದು ಸಾಧುವೇ?
ಮನೆ ಕಟ್ಟಿಸುವುದು ಎಂದರೆ ತಮಾಶೆ ಏನಲ್ಲ..ಅದರಲ್ಲೂ ಸರ್ವಸ್ವವನ್ನೂ ಕಳೆದುಕೊಂಡವರಿಗೆ ದಿಢೀರ್ ಅಂತ ಮನೆ ಮಾಡಿ ಕೊಡಲು ಸಾಕ್ಷಾತ್ ಮಯನಿಗೂ ಸಾಧ್ಯವಿಲ್ಲ.
ಮೊದಲಾಗಿ ಕಟ್ಟಬೇಕಾಗಿರೋದು ಮನ,ಮನೆಯಲ್ಲ.ಆಯಿತು ಮನೆಯೇ ಕಟ್ಟುತ್ತಿರಿ ಎಂದುಕೊಳ್ಳಿ,
ಸರಕಾರವೇ ತಾನಾಗಿ ಕಟ್ಟಬಾರದು, ಕಳೆದುಕೊಂಡವರಿಂದಲೇ ಅವರಿಗೆ ಬೇಕಾದಂಥ ಮನೆ ಕಟ್ಟಿಸಬೇಕು.
ಅದರರ್ಥ ಇಷ್ಟೇ,ಎಲ್ಲವೂ ಒಂದೇ ಥರ ಮನೆ ಆಗೋದಿಲ್ಲ..ಯಾರಿಗೆ ಎಂಥ ಮನೆ ಎಂಬ ಕಲ್ಪನೆ ಮೊದಲಾಗಿ ಬೇಕು.ಅದಕ್ಕಾಗಿ ಮೊದಲು ದೊಡ್ಡ ಮಟ್ಟದಲ್ಲಿ ಸರ್ವೇಕಾರ್ಯ ನಡೆಯಬೇಕು.ಸುಮ್ಮನೇ ಸರ್ವೇ ಮಾಡಿದರೆ ಆಗೋದಿಲ್ಲ..ತಾಂತ್ರಿಕ ಗುಣಾಢ್ಯತೆಯ ಸರ್ವೇ ಆಗಬೇಕು..ಮನೆ ಬೇಕಾದವರ ಸಾಮಾನ್ಯ ಬೇಡಿಕೆ ಒಂದೇ ರೀತಿ ಇರಲಾರದು.ಮನೆ ಕಳೆದುಕೊಂಡವರೆಲ್ಲಾ ಒಂದೇ ವರ್ಗದವರಲ್ಲ,ಒಂದೇ ಕಸುಬಿನವರೂ ಅಲ್ಲ..ಅವರವರ ಜೀವನ ಶೈಲಿ,ಅವರವರ ಜೀವನ ಕ್ರಮ ಅಧ್ಯಯನ ಮಾಡಬೇಕು..
ದನ,ಕೋಳಿ ಆಡು ಸಾಕುವವರಿಗೂ ಗ್ರಾಮಪಂಚಾಯತ್‌ನ ದಿನಗೂಲಿ ಕಾರ್ಮಿಕನಿಗೂ,ದೇವಸ್ಥಾನದ ಅರ್ಚಕನಿಗೂ ಒಂದೇ ರೀತಿಯ ಮನೆ ಮಾಡಿಕೊಟ್ಟರೆ ಆಗುತ್ತದೆಯೇ?
ಹಾಗೆಂದು ತುಘಲಕ್ ಮಾಡಿದಂತೆ ಎಲ್ಲರನ್ನೂ ನದಿ ಪಾತ್ರದಿಂದ ಎತ್ತಿ ದೂರಕ್ಕೆ ಸಾಗಿಸಿದರೆ ಅದು ಸಾಧುವಲ್ಲ.ನೂರು ವರ್ಷಕ್ಕೊಮ್ಮೆ ಬರೋ ನೆರೆಗೆ ದೂರ ಓಡಿಹೋಗುವುದೂ ತರವಲ್ಲ.ಸುನಾಮಿ ಬರುತ್ತದೆ ಎಂದು ಸಮುದ್ರ ದಂಡೆಯ ಜನರನ್ನು ಬೆಟ್ಟದಲ್ಲಿ ಕೂರಿಸಿದರೆ ಆಗುತ್ತದಾ?ಅವರಿಗೆ ಸಮುದ್ರ ಬಿಟ್ಟು ಬದುಕುವುದಕ್ಕೆ ಗೊತ್ತಿಲ್ಲ.ಹಾಗೆಯೇ ಈ ತನಕ ಅವರು ಬದುಕುತ್ತಿದ್ದ್ದ ನೆಲದಿಂದ ಅವರನ್ನು ದೂರ ಮಾಡಿದರೆ ಅವರಿಗೆ ಮುಂದೆ ಬದುಕುವುದನ್ನು ಕಲಿಸುವುದು ಯಾರು?
ಒಂದು ಮನೆ ಕಟ್ಟಿಸಲು ಶೇಕಡಾ ೨೫ ರಷ್ಟು ಲೇಬರ್ ಬೇಕು.ಒಂದು ಸರಕಾರ ಕಟ್ಟಿಸೋ ಸಂತ್ರಸ್ತರ ಒಂದು ಮನೆಗೆ ನೂರು ಲೇಬರ್ ಬೇಕು.ಅಂದರೆ ಎರಡು ಲಕ್ಷ ಮನೆ ನಿರ್ಮಾಣಕ್ಕೆ ಎರಡು ಕೋಟಿ ಮಾನವ ದಿನಗಳು ಅಂದರೆ ಲೇಬರ್ ಬೇಕು.ಅಷ್ಟೊಂದು ಲೇಬರ್ ಶಕ್ತಿ ಸರಕಾರದ ಬಳಿ ಪೂರೈಸಲು ಆಗುತ್ತದೆಯೇ?
ಹಾಗೇ ಮಾಡಿದಾಗ ನಿರ್ಗತಿಕರಾದ ಅವರಿಗೆ ಕೆಲಸ ಸಿಗುತ್ತದೆ,ದುಡಿಯುವ ಸಂಸ್ಕೃತಿ ಹುಟ್ಟುತ್ತದೆ,ತನ್ನ ಮನೆಯನ್ನು ತಾನೇ ಕಟ್ಟಿಸಿದ ಮತ್ತು ತನಗೆ ಬೇಕಾದ ರೀತಿಯಲ್ಲಿ ಕಟ್ಟಿಸಿದ ತೃಪ್ತಿಯೂ ಬರುತ್ತದೆ.
ಮನೆ ಕಟ್ಟುವುದು ಎಂದರೆ ಅದು ಮನಸ್ಸನ್ನು ಕಟ್ಟುವುದೂ ಆಗಿದೆ.

ಒಮ್ಮಿಂದೊಮ್ಮೆಗೇ ಎರಡು ಲಕ್ಷ ಮನೆ ಕಟ್ಟಲು ಬೇಕಾದ ಮಾನಸಿಕತೆಯೇ ನಮ್ಮಲ್ಲಿ ಸಿದ್ಧವಾಗಿಲ್ಲ.ಮೆಟೀರಿಯಲ್ಲೂ ಇಲ್ಲ.ಇನ್ನೂರೈವತ್ತು ಚದರಡಿಯ ಮನೆ ನಿರ್ಮಾಣಕ್ಕೆ ಏನಿಲ್ಲಾ ಎಂದರೂ ಒಂದು ಸಾವಿರ ಇಟ್ಟಿಗೆ ಬೇಕು.ಎರಡು ಲಕ್ಷ ಮನೆಗಳಿಗೆ ೨೦ ಕೋಟಿ ಇಟ್ಟಿಗೆ ಬೇಕು.೨೦ ಕೋಟಿ ಎಲ್ಲಿ ಸಿಗುತ್ತದೆ?ಇಟ್ಟಿಗೆ ತಯಾರು ಮಾಡಲು ಎಷ್ಟು ಸಮಯ ಮತ್ತು ಶ್ರಮ ಇದೆ ಎಂದು ಲೆಕ್ಕಾಚಾರ ಮಾಡಬೇಕು.ದಿನಕ್ಕೆ ಹತ್ತು ಮಂದಿ ಸೇರಿದರೆ ಒಂದು ಸಣ್ಣ ಯುನಿಟ್‌ನಲ್ಲಿ ಸಾವಿರ ಇಟ್ಟಿಗೆ ಮಾಡಬಹುದು.೨೦ ಕೋಟಿ ಇಟ್ಟಿಗೆ ತಯಾರಿಸಲು ಬೇಕಾದ ಕಾರಖಾನೆ ಮತ್ತು ಕಚ್ಛಾವಸ್ತು ಮತ್ತು ಕಾರ್ಮಿಕರು ನಮ್ಮಲಿದ್ದಾರೆಯೇ? ೨೦ ಕೋಟಿ ಇಟ್ಟಿಗೆ ತಯಾರಿಸಲು ಎರಡು ಲಕ್ಷ ಕಾರ್ಮಿಕರು ಬೇಕು.ಅದನ್ನು ಪೂರೈಸುವವರು ಎಲ್ಲಿದ್ದಾರೆ.?

ಇದನ್ನು ಬಿಟ್ಟು ನೇರವಾಗಿ ಮನೆ ಕಟ್ಟಸುವುದಕ್ಕೇ ಬರೋಣ.ದಿನಕ್ಕೆ ಎಷ್ಟು ಅಂತ ಮನೆ ಕಟ್ಟಬಹುದು?ಒಂದು ಟಾರ್ಗೆಟ್ ಅಂತ ಬೇಡವೇ?
ವರ್ಷಕ್ಕೆ ಎರಡು ಲಕ್ಷ ಮನೆ ಅಂದರೆ.. ದಿನಕ್ಕೆ ಆರುನೂರು ಮನೆ..ಆಂದರೆ ಆರು ಲಕ್ಷ ಇಟ್ಟಿಗೆ,೨೪೦೦ ಕಿಟಕಿ ಮತ್ತು ಅಷ್ಟೇ ಬಾಗಿಲು,೧೨೦ ಲಕ್ಷ ಲೀಟರ್ ನೀರು ಬೇಕಾಗುತ್ತದೆ.ಅಷ್ಟನ್ನೂ ಪೂರೈಸಲು ಸಾಧ್ಯವೆಂದಾದರೆ ವರ್ಷಕ್ಕೆ ಲಕ್ಷ ಮನೆ ಮನೆ ಮಾಡಿಕೊಡಬಹುದು ಅಷ್ಟೇ.
.ಬದುಕುವ ಪಾಠ ಹೇಳಿಕ॒ಳೆದುಕೊಂಡದ್ದನ್ನು ಮರಳಿ ಪಡೆಯಲು ಬೇಕಾದ ನೈತಿಕ ಶಕ್ತಿ ತುಂಬಿ, ಮೊದಲು ಮನಸ್ಸು ಗಟ್ಟಿಯಾಗಲಿ,ಮನೆ ಆಮೇಲೆ ಕಟ್ಟಿಸೋಣ..