20090301

ಮಾಧ್ಯಮ ಅಥವಾ ಸಂಸ್ಕೃತಿ


ಸಂವಹನ ಮಾನವ ಸಹಜ ಪ್ರವೃತ್ತಿ ನಿಜ ಆದರೆ ಅದು ಅವನೊಬ್ಬನದ್ದೇ ಅಲ್ಲ.
ಇಲಿಗೂ, ಜಿರಲೆಗೂ, ದುಂಬಿಗೂ ಸಂವಹನ ಇದೆ.ಮಾನವನಿಗಿಂತ ಚೆನ್ನಾಗಿ ಮತ್ತು ತೀವ್ರವಾಗಿ ಅವುಗಳು ಸಂವಹನ ಪ್ರಕ್ರಿಯೆ ಮಾಡಬಲ್ಲವು.ಇಲಿಯೊಂದನ್ನು ಬೋನಲ್ಲಿ ಸಿಲುಕಿಸಿ,ಮುಂದೆ ಆ ಬೋನಿಗೆ ಹಾಗೇ ಮತ್ತೊಂದು ಇಲಿ ಬಿದ್ದರೆ ಮತ್ತೆ ಹೇಳಿ..
ಸಾವಿನ ಮನೆಗೆ ಹೊಕ್ಕ ಇಲಿ ತಾನು ಬಲಿಯಾಗಿಬಿಟ್ಟೆ ಎಂಬುದನ್ನು ಮತ್ತೊಂದು ಇಲಿಗೆ ಅದರ ಶರೀರದ ದ್ರವ ಸುರಿಸಿ ಸಾರುತ್ತದೆ.
ಮಾನವನಲ್ಲಿ ಸಂವಹನ ಅವನ ಎಲ್ಲಾ ಚೇಷ್ಟೆ ಕುಚೇಷ್ಟೆಗಳಿಗನುಗುಣವಾಗಿದೆ,ಅಂದರೆ ನಾವು ಹೇಳೋದು ತೀವ್ರವಾಗಿದೆ.
ಎಲ್ಲರಿಗೂ ಇನ್ನೊಬ್ಬರ ವಿಚಾರದಲ್ಲಿ ಆಸಕ್ತಿ
ಇದು ಸಂವಹನ ಯುಗ
ಇದು ಸಮೂಹ ಸಂವಹನ ಯುಗ
೧೭ನೇ ಶತಮಾನದಲ್ಲಿ ಹುಟ್ಟಿತು ಪತ್ರಿಕೆ.
ಸಿನಿಮಾ ೧೯ನೇ ಶತಮಾನದಲ್ಲಿ ಬಂತು.
ಟೀವಿ, ಇಂಟರ್‌ನೆಟ್ ಬಂದದ್ದು ೨೦ನೇ ಶತಮಾನದಲ್ಲಿ.
ಎಲ್ಲವೂ ಬೆಳೆದದ್ದು ೨೦ನೇ ಶತಮಾನದಲ್ಲೇ.
ಜನರು ಮಾಧ್ಯಮಗಳನ್ನು ಹೂಗುಚ್ಛ ನೀಡಿ ಸ್ವಾಗತಿಸಲಿಲ್ಲ
ಮಾಧ್ಯಮಗಳನ್ನೆಲ್ಲಾ ಒಪ್ಪಲಿಲ್ಲ
ಪತ್ರಿಕೆಗಳನ್ನು ನಿಷೇಧಿಸಿದ ಸರಕಾರಗಳಿದ್ದವು (೧೯೦೮-ಮೈಸೂರು ಸರಕಾರ)
ಸಿನಿಮಾ ಪ್ರದರ್ಶನವನ್ನು ಖಂಡಿಸಿದ ಸಮಾಜವಿತ್ತು. ಈಗಲೂ ಸಿನಿಮಾ ನೋಡುವುದು ಇಸ್ಲಾಂ ವಿರೋಧಿ.
ಟೀವಿ ನೋಡಿದರೆ ಮಕ್ಕಳು ಹಾಳಾಗುತ್ತಾರೆ ಎಂಬ ನಂಬಿಕೆ ಇದೆ.
ಇಂಟರ್‌ನೆಟ್ ತುಂಬಾ ಸೆಕ್ಸ್ ಸೈಟ್‌ಗಳಿಗೆ ಜನ ಮುಗಿದು ಬೀಳುತ್ತಾರೆ
ರೇಡಿಯೋ ಕೇಳಿದರೆ ಭೂತ ಕೋಪಿಸಿಕೊಳ್ಳುತ್ತದೆ ಎಂದು ನಂಬುವ ಮನೆಗಳು ತುಳುನಾಡಿನಲ್ಲಿವೆ.
ಸಂಜೆ ಪತ್ರಿಕೆಗಳು ಪ್ರಜ್ಞಾವಂತರಿಗಲ್ಲ ಎನ್ನುತ್ತಾರೆ
ಟ್ಯಾಬ್ಲಾಡ್ ಖರೀದಿಸುವುದು ಏಕಂಕಿ ಲಾಟರಿ ಖರೀದಿಸಿದಷ್ಟೇ ಮುಜುಗರ ತರುತ್ತದೆ ಹಲವರಿಗೆ.
ಮಾಧ್ಯಮಗಳ ಬಗ್ಗೆ ಪ್ರೀತಿ, ಆಸಕ್ತಿ, ದ್ವೇಷ ಅನಾದರ ಸರಿಸಮವಾಗಿದೆ.

ಮಾಧ್ಯಮಗಳು ಏನನ್ನು ಕೊಡುತ್ತಿವೆ ?
ಜನ ಕೇಳಿದ್ದನ್ನು ಮಾಧ್ಯಮ ಕೊಡುತ್ತದೆ.
ಜನ ಬಯಸಿದ್ದನ್ನು ಕರುಣಿಸುತ್ತಿವೆ.
ವಿವಾಹೇತರ ಸಂಬಂಧ, ಕೌಟುಂಬಿಕ ವಿಘಟನೆಗಳು, ಕಾರ್ಪೋರೇಟ್ ಕುಟುಂಬದ ಒಳ ತಲ್ಲಣಗಳು, ಕಾಫಿಡೇ ಕ್ಲಬ್ ಕಲ್ಚರ್‌ಗಳು ಧಾರಾವಾಹಿಗಳಾಗ ಜನಪ್ರಿಯವಾಗೋದು, ಆ ಚಾನೆಲ್‌ಗೆ ರೇಟಿಂಗ್ ಏರೋದು, ಜಾಹೀರಾತಿನಲ್ಲಿ ದುಡ್ಡು ಬೀಳೋದು ಟೀವಿ ಚಾನೆಲ್‌ನ ಬುದ್ಧಿವಂತಿಕೆ ಏನಲ್ಲ.
ಜಾಗತೀಕರಣದ ಮೂಲಕ ನಮ್ಮ ಮನೆ, ಮನಸ್ಸು ಕೂಡಾ ವಿಪ್ಲವಗೊಂಡಿರುವುದರಿಂದ ನಮಗೆ ಅಂಥ ಕತೆ ಕಣ್ಮುಂದೆ ಬರಬೇಕು. ಆ ಮೂಲಕ ನಮಗೆ ಮನರಂಜನೆ ದಕ್ಕಬೇಕು. ಅದೇ ಕುಟುಂಬ, ಅದೇ ಪಾತ್ರ ನಾವಾಗುತ್ತಾ ನಮ್ಮನ್ನು ನಾವು `ತಣಿಸಿಕೊಳ್ಳುತ್ತೇವೆ' ಅಷ್ಟೇ.

ಮಾಧ್ಯಮಗಳು ಯಾರವು ?
ಸಮೂಹ ಮಾಧ್ಯಮಗಳು ಯಾವುದೂ ನಮ್ಮದಲ್ಲ. ಅಂದರೆ ಭಾರತೀಯ ಮೂಲದ್ದಲ್ಲ.
ಸೊನ್ನೆ ನಮ್ಮದು, ಬಾಸ್ಮತಿ ಅಕ್ಕಿ ನಮ್ಮದು.ಜಗತ್ತಿಗೆ ಶಾಂತಿ ಎಂಬುದನ್ನು ಹೇಳಿದ್ದು ನಾವು..
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಸು ಕದಾಚನ ನಮ್ಮದು.
ಖುಷ್ ರಹೋ-ಖುಷ್ ರಖೋ ನಮ್ಮದು
ಆದರೆ ಯಂತ್ರ-ತಂತ್ರ ಜಗತ್ತು ನಮ್ಮದಲ್ಲ.ಇಂದು ನಾವು ಕಾಣುವ,ಅನುಭವಿಸುವ,ಆನಂದಿಸುವ ಯಾವ ಯಂತ್ರ ತಂತ್ರಾದಿಗಳು ನಮ್ಮದಲ್ಲ,ಅಂದರೆ ಈ ಲೌಕಿಕ ಭೋಗಗಳ ಶೋಧನೆ ಭಾರತೀಯರದ್ದಲ್ಲ.
ನಮಗೆ ಲೌಕಿಕ ಆವಿಷ್ಕಾರಗಳ ಅಗತ್ಯವಿಲ್ಲ.
ಐದು ಸಾವಿರ ವರ್ಷಗಳಿಂದ ವಿದ್ಯುತ್ ಇಲ್ಲದೇ ಬದುಕಿ ಬಾಳಿದ ಸಂಸ್ಕೃತಿ ನಮ್ಮದು.
ಅಮೇರಿಕಾದ ಯಾವುದೇ ಊರಲ್ಲಿ ಮೂರು ಗಂಟೆ ಪವರ್ ಕಟ್ ಆದರೆ ಬದುಕೋದು ಸಾಧ್ಯವಿಲ್ಲ.
ನಮಗೆ ಮೂರು ವರ್ಷ ಕರೆಂಟೇ ಇಲ್ಲದಿದ್ದರೂ ಏನೂ ಆಗಲ್ಲ.
ನಾವು ಪ್ರಕೃತಿ ಜತೆ ಅನುಸಂಧಾನಕಾರರು.
ನಾವು ಕೊಡೋದು ತೆಗೆದುಕೊಳ್ಳೋದು ಎಲ್ಲಾ ಪ್ರಕೃತಿಯಿಂದಲೇ.
ನಮಗೆ ಆವಿಷ್ಕಾರಗಳೆಲ್ಲಾ ವಿಕೃತಿ. ಅದು ನಮಗೆ ಎಂದೂ ಅನಿವಾರ್ಯವೇನಲ್ಲ.
ಬಸ್ಸು ಬಾರದಿದ್ದರೆ ನಾವು ನಡೆದುಕೊಂಡು ಹೋಗುವೆವು. ವಿಮಾನದಲ್ಲಿ ಒಂದು ಶೇಕಡಾ ಜನರೂ ಪಯಣಿಸಿಲ್ಲ.ಸಿಗದಿದ್ದರೆ ಎತ್ತಿನ ಗಾಡಿಯಲ್ಲೂ,ಸಿಕ್ಕರೆ ರೋಲ್ಸ್‌ರಾಯ್‌ನಲ್ಲೂ ನಮ್ಮ ಪಯಣ. 
ಟೀವಿ ಇಲ್ಲದಿದ್ದರೆ ನಾವು ಏನನ್ನೂ ಕಳೆದುಕೊಳ್ಳೆವು.
ರೇಡಿಯೋ ಹಾಳಾಗಿ ಹೋಗಲಿ.
ಇಂಟರ್‌ನೆಟ್‌ನಲ್ಲಿ ನಾವು ಟಿಕೇಟು ಬುಕ್ಕಿಂಗು ಮಾಡಲ್ಲ, ರ್‍ವೆಲ್ವೇ ನಿಲ್ದಾಣದಲ್ಲಿ ಕ್ಯೂ ನಿಲ್ಲುವ ಆನಂದ ನಮಗೆ.ಕ್ರೆಡಿಟ್ ಕಾರ್ಡಲ್ಲಿ ಕರೆಂಟು ಬಿಲ್ಲು ಕಟ್ಟುವ ಹಠ ನಮಗಿಲ್ಲ.ಯಂತ್ರ ತಂತ್ರಗಳಲ್ಲಿ ನಮ್ಮ ಬದುಕು ಒಂಥರಾ ಇಲ್ಲದ ಇರುವಿಕೆ.
ಅಂತೆಯೇ ನಮಗೆ ಮಾಧ್ಯಮಗಳು.ಇಂದಿಗೂ ನೂರಕ್ಕೆ ಮೂರೇ ಜನ ದುಡ್ಡು ಕೊಟ್ಟು ಪೇಪರು ತಗೋತಾರೆ ಅಂತ ಹೇಳ್ತದೆ ಮಾರುಕಟ್ಟೆ.ಅಂದರೆ ಪತ್ರಿಕೆ ಇನ್ನೂ ನಮ್ಮ ಜನರ ಅಗತ್ಯ ಆಗಿಲ್ಲ.ಸುದ್ದಿ ನಮ್ಮ ಜನರಿಗೆ ಅನಿವಾರ್ಯ ಏನಲ್ಲ.
ಮಾಧ್ಯಮಗಳು ನಮಗೆ ಬೇಕೋ ಬೇಕು, ಬೇಡವೋ ಬೇಡ.
ಇಂದಿಗೂ ಶೇಕಡಾ ೬೦ ರಷ್ಟು ಮನೆಗಳಲ್ಲಿ  ಟೀವಿ ಕಾಣಿಸೋದಿಲ್ಲ, ರೇಡಿಯೋ ಕೇಳೋದಿಲ್ಲ. ಅವರು ಯಾವ ಪತ್ರಿಕೆಯನ್ನೂ ಓದೋದೂ ಇಲ್ಲ.
ಮಾಧ್ಯಮಗಳಿಲ್ಲದೆ ನಮ್ಮ ಜನ ಸುಖವಾಗಿದ್ದಾರೆ.

ಮಾಧ್ಯಮಗಳು ಎಲ್ಲಾ ಹುಟ್ಟಿದ್ದು ಪಾಶ್ಚಿಮಾತ್ಯ ದೇಶಗಳಲ್ಲಿ.ಅದೇ ದೇಶಗಳಲ್ಲಿ ಉಂಟಾದ ವಸಾಹತುಶಾಹೀ ಕೈಗಾರೀಕರಣಗಳ ಪಿಂಡಗಳು ಹಲವಾರು. ಅವುಗಳಲ್ಲಿ ಮಾಧ್ಯಮಗಳೂ ಕೂಡಾ.ಅಂಥದ್ದರಲ್ಲಿ ಮೊದಲನೆಯದ್ದು ಮುದ್ರಣ ಮಾಧ್ಯಮ. ಆ ಮುದ್ರಣ ತಂತ್ರಜ್ಞಾನ ಭಾರತೀಯ ಭಾಷೆಗೆ ಬರಲು ಶತಮಾನಗಳೇ ಬೇಕಾಗಿದ್ದವು.
ಸಿನಿಮಾ ಬರಲು ದಶಕಗಳು ಸಂದವು.ರೇಡಿಯೋ ನಮ್ಮ ದೇಶದಲ್ಲಿ ಪ್ರಚಲಿತವಾದಾಗ ಅದು ಹುಟ್ಟಿ ನೂರು ವರ್ಷಕ್ಕೆ ಹತ್ತು ಕಮ್ಮಿ ಇತ್ತು.ಟೀವಿ ಹಬ್ಬಲು ೪೦ ವರ್ಷ ಬೇಕಾಯಿತು.ಮಾಧ್ಯಮಗಳು ನಮಗೆ ಅನಪೇಕ್ಷಿತ ಅತಿಥಿಗಳಾಗಿದ್ದವು ಎಂಬುದಕ್ಕೆ ಇದು ಉದಾಹರಣೆ.

ಮುದ್ರಣ ಮಾಧ್ಯಮ
೧೪೪೦ ರಲ್ಲಿ ಅಂದರೆ ಭಾರತಕ್ಕೆ ವಾಸ್ಕೋಡಗಾಮ ಬರುವುದಕ್ಕೂ ಮೊದಲು ಜರ್ಮನಿಯಲ್ಲಿ ಗುರ್ಟನ್‌ಬರ್ಗ್ ಮುದ್ರಣ ಯಂತ್ರ ಕಂಡು ಹಿಡಿದ.
ಜಗತ್ತಿನ ಸಂಸ್ಕೃತಿಯನ್ನೇ ಬದಲಾಯಿಸಿದ ಕ್ರಾಂತಿಕಾರಿ ಆವಿಷ್ಕಾರ ಅದು.
ವಿಮಾನ, ಕಂಪ್ಯೂಟರ್, ವಿದ್ಯುತ್, ಬಾಂಬು ಯಾವುದೂ ಇದರ ಮುಂದಿಲ್ಲ.
ಇಲ್ಲಿಂದ ಆರಂಭವಾಯಿತು ಸಮಾಜದ ಸಂಘಟನೆ ಜತೆಗೆ ವಿಘಟನೆ.
ಮುದ್ರಣ ಮಾಧ್ಯಮದಿಂದ ಬದಲಾವಣೆಗಳು ಆರಂಭವಾದವು. ಆರಂಭದಲ್ಲಿ ಅದು ಧರ್ಮ ಪ್ರಚಾರಕ್ಕೆ ಅದು ಬಹು ಬಳಕೆಯಾಯಿತು.
ಭಾರತಕ್ಕೆ ಪ್ರಿಂಟಿಂಗ್ ಪ್ರೆಸ್‌ನ್ನು ಕ್ರೈಸ್ತರು ತಂದದ್ದೇ ಕ್ರೈಸ್ತ ಧರ್ಮ ಪ್ರಚಾರಕ್ಕೆ ಪುಸ್ತಿಕೆಗಳನ್ನು ಮುದ್ರಿಸಲು.
ಆರಂಭದಲ್ಲಿ ಮುದ್ರಣ ಮಾಧ್ಯಮ ಧರ್ಮಪ್ರಚಾರಕ್ಕೆ, ನಂತರ ಸಾಹಿತ್ಯ ಕೃತಿಗಳಿಗೆ ಮತ್ತೆ ಸುದ್ದಿವಿಚಾರಗಳಿಗೆ ವಿಸ್ತರಣೆಗೊಂಡಿತು. 
ಅರಿವಿನ ಹುಡುಕಾಟದಲ್ಲಿ ಮುದ್ರಣ ಕ್ಷೇತ್ರದಲ್ಲಿ ಜನ ಮುಗಿ ಬಿದ್ದರು.
ಒಂದು ರಾಮಾಯಣ, ಒಂದು ಮಹಾಭಾರತ ಕತೆ ಯಾವ ಮುದ್ರಣಕ್ಕೂ ಸಿಗದೆ ಸಾವಿರಾರು ವರ್ಷಗಳಿಂದ ಭಾರತದಾದ್ಯಂತ ಬಗೆ ಬಗೆಯಾಗಿ ಜನಪದ ಆಗುವುದು ಸಾಧ್ಯವಿತ್ತು ಮತ್ತು ಆಗಿತ್ತು. ನಮ್ಮ ಮನೆ ಪಕ್ಕದ ಗುಡ್ಡದಲ್ಲಿ ಭೀಮನ ರುಬ್ಬು ಯಂತ್ರ, ತಮಿಳುನಾಡಿನ ಹಳ್ಳಿಯೊಂದರಲ್ಲಿ ದ್ರೌಪದಿಯ ಪಾದ, ನೇಪಾಳದ ಬೆಟ್ಟಗಳಲ್ಲಿ ರಾಮನ ಸಭಾ, ಮಧ್ಯಪ್ರದೇಶದ ಕಾಡುಗಳಲ್ಲಿ ಹನುಮಂತನ ಮನೆಗಳನ್ನು ನಾವು ಕಂಡಿದ್ದೇವೆ.
ಆದರೆ ಯಾವಾಗ ಮುದ್ರಣ ಮಾಧ್ಯಮ ಪ್ರವೇಶವಾಯಿತೋ ಒಂದೊಂದಾಗಿ ಈ ಸಂವೇದನೆಗಳು ಕಳಚಿಕೊಳ್ಳುತ್ತಾ ಹೋದವು.
ಅರಿವಿನ ಅಬ್ಬರದಲ್ಲಿ ಜ್ಞಾನದ ವಿಸ್ತಾರದಲ್ಲಿ ನಮ್ಮೊಳಗಿನ ಮೌಢ್ಯಗಳು ಹೇಗೆ ನಾಶವಾಗುತ್ತಿದ್ದವೋ, ಅದರ ಜತೆಜತೆಗೆ ನಮ್ಮ ನಿರುಪದ್ರವಿ ಮುಗ್ಧತೆಗಳು, ಅವುಗಳ ಸೊಗಡುಗಳು ಕೈಬಿಟ್ಟವು.
ಇನ್ನೊಂದು ಭಾಗದಲ್ಲಿ ಮತ್ತೊಂದೇ ನಡೆಯುತ್ತಿತ್ತು.ಅದು ಅರಿವು ಮತ್ತು ಅಕ್ಷರದ ವಿಚಾರ.ಅದು ಜ್ಞಾನದ ಹಂಚಿಕೆ.ಅದು ವಿಚಾರಗಳ ಪ್ರಸಾರ.
ಜ್ಞಾನ ಎಲ್ಲರದ್ದು ಆಗತೊಡಗಿತು.
ಅಕ್ಷರಗಳು ಆಕಾರ ಪಡೆಯುತ್ತಾ ಜನರ ಬಳಿ ಬಂದವು.
ಅನ್ನ ಮತ್ತು ಅಕ್ಷರಗಳಿಂದ ದೂರ ಸರಿಸಲ್ಪಟ್ಟವರಿಗೆಲ್ಲಾ ಅಕ್ಷರಗಳೇ ಆಹ್ವಾನ ನೀಡಿದವು.
ಜ್ಞಾನದ ಏಕಸ್ವಾಮ್ಯತೆ ಕಳಚತೊಡಗಿತು. 
ಅರಿವಿನ ಚಪ್ಪರ ಅಗಲವಾಯಿತು. ಪತ್ರಿಕೆಗಳು ಹುಟ್ಟಿದ್ದೇ ಈ ಹೊತ್ತಿನಲ್ಲಿ.

ಪತ್ರಿಕಾ ಮಾಧ್ಯಮ
ಪತ್ರಿಕೆಗಳು ಪ್ರಜಾಸತ್ತೆಯಲ್ಲಿ ಮಾತ್ರ ಬೆಳೆದಿವೆ. ಅಕ್ಷರ ಸ್ವಾತಂತ್ರ್ಯಕ್ಕೆ ಮುಕ್ತ ಜನ ವ್ಯವಸ್ಥೆಯೂ ಮುಖ್ಯ.
ಗೋಬೆಲ್ ಸಿದ್ಧಾಂತದ ಪ್ರಚಾರವೂ ಪತ್ರಿಕೆಗಳಿಂದ ಹೇಗೆ ಯಶಸ್ವಿಯಾಯಿತೋ, ಗಾಂಧೀ ತತ್ವವೂ ಅದೇ ಯಶಸ್ಸು ಪಡೆಯಿತು.
ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡಿದ್ದು ಪತ್ರಿಕೆಗಳಿಗೆ, ಒಂದು ಸತ್ಯವನ್ನೂ ಸಾವಿರ ಬಾರಿ ನಿರಾಕರಿಸಿ ಸುಳ್ಳು ಮಾಡುವ ಶಕ್ತಿಯೂ ಸಿದ್ಧಿಸಿದೆ.
ಗಾಂಧಿಯ ಅಹಿಂಸೆ-ಹಿಟ್ಲರನ ಹಿಂಸೆಗಳೆರಡೂ ಪತ್ರಿಕಾ ಮಾಧ್ಯಮಗಳಲ್ಲಿ ವಿಜೃಂಭಿವಿಸುತ್ತಿವೆ.
ಮಾಧ್ಯಮಗಳು ಈಗ ಹೇಗೆ ಬ್ರೇಕಿಂಗ್ ನ್ಯೂಸ್ ಮೂಲಕ ಜಾಗತಿಕ ನಂಬುಗೆಯ ಕಿಚ್ಚನ್ನು ಹಚ್ಚ ಬಲ್ಲವೋ, ಪತ್ರಿಕಾ ಮಾಧ್ಯಮ ಕೂಡಾ ಒಂದು ಸಿದ್ಧಾಂತವನ್ನು ಒಂದು ವಿಚಾರವನ್ನು. ಅಷ್ಟೇ ಏಕೆ ಒಂದು ಅಪ್ರಿಯ ಸತ್ಯವನ್ನು, ಪ್ರಿಯವಾದ ಸುಳ್ಳನ್ನು ಸಮಾಜದ ಮೇಲೆ ಕುಟ್ಟಿ ಕೂರಿಸಿವೆ.
ಇರಾಕ್ ಯುದ್ಧ ಎಲ್ಲಾ ಅಮೇರಿಕನ್ನದ ಆಶಯವಾಗಿದೆ ಎಂಬುದನ್ನು ಜಾಗತಿಕ ಪ್ರಬಲ ಪತ್ರಿಕೆಗಳು ಜಗತ್ತಿಗೆ ಸಾರಿದಂತೆ, ಕಾಶ್ಮೀರದಲ್ಲಿ ಸಮಸ್ಯೆ ಇದೆ ಎಂಬುದನ್ನು ಅವುಗಳು ಸೃಷ್ಟಿಸಿದಂತೆ, ಭಾರತದಲ್ಲಿ ಮುಸ್ಲಿಮರಿಗೆ ಅನ್ಯಾಯವಾಗುತ್ತಿದೆ ಎಂದು ಜಗತ್ತನ್ನು ನಂಬಿಸುವಂತೆ ಪತ್ರಿಕೆಗಳು ಮಾಡುತ್ತಿವೆ.
ಆ ಮೂಲಕ ಸಾಮೂಹಿಕ ಅಭಿಪ್ರಾಯವನ್ನು ಅವುಗಳನ್ನು ತಾವೇ ತಾವಾಗಿ ಪ್ರತಿಪಾದಿಸುತ್ತಿವೆ, ಪ್ರತಿನಿಧೀಕರಿಸುತ್ತಿವೆ.
ಭಾಷಾಶಾಸ್ತ್ರಜ್ಞ ನೋಮ್ ಚೋಂಸ್ಕಿ ಇದನ್ನು ಬಹಳ ಹಿಂದೆಯೇ ಗುರುತಿಸಿದ್ದ. ಮಾಧ್ಯಮಗಳು ವಿವಿಧ ಅಭಿಪ್ರಾಯಗಳನ್ನು ಕಿತ್ತು ಹಾಕಿ, ಏಕಾಭಿಪ್ರಾಯವನ್ನು ಸೃಷ್ಟಿಸುತ್ತಿರುವುದರ ಅಪಾಯಗಳನ್ನು ಆತ ಗುರುತಿಸಿದ್ದ.
ಜನರು ಎಂದೂ ಸಮಾನ ಅಭಿಪ್ರಾಯ ಹೊಂದಿರಲು ಸಾಧ್ಯವೇ ಇಲ್ಲ.
ಒಬ್ಬನಂತೆ ಹೇಗೆ ಇನ್ನೊಬ್ಬನಿಲ್ಲವೋ ಹಾಗೇ ಒಬ್ಬನ ಅಭಿಪ್ರಾಯ ಇನ್ನೊಬ್ಬನದ್ದಾಗಲಿಕ್ಕಿಲ್ಲ. ಅಭಿಪ್ರಾಯ ಭೇದ ಅನಿವಾರ್ಯ. ಅಂಗೈಯಲ್ಲಿ ಐದು ಬೆರಳುಗಳೂ ಒಟ್ಟಾಗಿ ಕೆಲಸ ಮಾಡುತ್ತವೆ. ಆದರೆ ಒಂದೇ ರೀತಿ ಇಲ್ಲ.
ಮನೆಯಲ್ಲಿ ಯಾವುದೋ ಗೋತ್ರದ ಗಂಡು, ಇನ್ಯಾವುದೋ ಊರಿನ, ಕುಟುಂಬದ ಹೆಣ್ಣು ಗಂಡ- ಹೆಂಡತಿಯಾಗಿ ಸಂಸಾರ ಮಾಡಬಹುದು. ಆದರೆ ಅಭಿಪ್ರಾಯ ಏಕತ್ರವಾಗಿರಲು ಸಾಧ್ಯವಿಲ್ಲ.ಆದರೆ ಸಾಧ್ಯ ಮಾಡಬೇಕು.ಅದು ಅನಿವಾರ್ಯ.
ಪ್ರಜಾ ಪ್ರಭುತ್ವದ ಸೋಲು ಕೂಡಾ ಇದೇ.
ಶೇಕಡಾ ಅರುವತ್ತರಷ್ಟು ಜನ ಹೋಗಿ ವೋಟ್ ಮಾಡುತ್ತಾರೆ. ಅವರಲ್ಲಿ ಶೇ.೫೧ ರಷ್ಟು ಜನ ಬಯಸಿದವರು ಸರಕಾರ ಮಾಡುತ್ತಾರೆ. ಅಂದರೆ ಆಳುವವರನ್ನು ಒಪ್ಪಿದವರು ಪ್ರಜಾಕೋಟಿಯಲ್ಲಿ ಶೇ.೩೫ ರಷ್ಟು ಇರುವುದಿಲ್ಲ. ಉಳಿದ ೬೫ ಶೇ. ಪ್ರಜೆಗಳ ನಿರಾಕರಣೆ ಅಥವಾ ಮೌನಕ್ಕೆ ವಿರುದ್ಧವಾಗಿ ಆಳ್ವಿಕೆ ನಡೆಯುತ್ತದೆ. ಅವರು ಒಪ್ಪದ, ಇಷ್ಟ ಪಡದ ಮಂದಿ ಅವರನ್ನು ಆಳುತ್ತಾರೆ.
ನಂಬರ್ ರಾಜಕಾರಣವನ್ನು ನಾವು ಪ್ರಜಾ ಪ್ರಭುತ್ವ ಎನ್ನುತ್ತೇವೆ.
ನಿಜವಾದ ಪ್ರಜಾಪ್ರಭುತ್ವ್ವದ ಸಂವಿಧಾನ ಇನ್ನೂ ರೂಪುಗೊಂಡಿಲ್ಲ
ಪ್ರಜಾಪ್ರಭುತ್ವದ ಈ ರೂಪದಲ್ಲಿ ನಾವು ಎಲ್ಲರ ಇಚ್ಛೆಯಂತೆ ಈ ಸರಕಾರ ಎಂದು ತೀರ್ಮಾನಿಸಲಾಗುತ್ತದೆ.
ಮಾಧ್ಯಮಗಳೂ ಇದೇ ಎಡವಟ್ಟು ಮಾಡುತ್ತಿವೆ.
ಒಂದು ಸಿದ್ಧಾಂತವಿರಲಿ, ಒಂದು ವಿಚಾರಧಾರೆಯಿರಲಿ, ಒಂದು ಅಭಿಪ್ರಾಯವಿರಲಿ ಅದನ್ನು ಸಾಮೂಹಿಕವಾಗಿ ಅದು ಹೇರುತ್ತವೆ.
ಅದರ ಇನ್ನೊಂದು ಮುಖವನ್ನು ಅವುಗಳು ಮುಟ್ಟುವುದಿಲ್ಲ.
ಹಳ್ಳಿಯೊಂದರಲ್ಲಿ ಹೆಂಡದಂಗಡಿ ಬೇಡ ಎಂದು ಜಗಳ ತೆಗೆದವರನ್ನು `ಚಿತ್ರೀಕರಿಸಿದ' ಮಾಧ್ಯಮ ಅದನ್ನೇ ಗಟ್ಟಿ ಮಾಡುತ್ತದೆ. ಮುಂದೆ ಅದೇ ನ್ಯಾಯವೂ ಆಗುತ್ತದೆ.
ಆ ಹಳ್ಳಿಯ ಕುಡುಕರು ಮತ್ತೊಂದು ಊರಿಗೆ ಹೋಗಿ ಕುಡಿಯುತ್ತಾರೆ. ಇದು ವ್ಯಂಗ್ಯ.
ಕರ್ನಾಟಕದಲ್ಲಿ ಸಾರಾಯಿ ಅಂಗಡಿ ಮುಚ್ಚಿದಾಗ ಹಳ್ಳಿಯ ಜನ ಪೇಟೆಗೆ ಸಂಜೆ ಗುಂಪುಗುಂಪಾಗಿ ಬಂದು ನಕಲಿ ವಿಸ್ಕಿ ಕುಡಿಯುತ್ತಾರೆ.ಅವರಿಗೆ ಕಿಕ್ ಬೇಕು.ಸಾರಾಯಿ ಕೀಳಬಹುದು ಕಿಕ್ ಕೀಳೋದು ಸಾಧ್ಯವಾ ?
ಹಳ್ಳಿಯ ಗುಡ್ಡಗಳಲ್ಲಿ ಈಗಲೂ ತೊಟ್ಟೆ ಸಾರಾಯಿ ದಂಧೆ ನಡೆಯುತ್ತಿದೆ.ಜನ ಕುಡೀತಾನೇ ಇದ್ದಾರೆ.
ಇದೊಂದು ಉದಾಹರಣೆ ಮಾತ್ರಾ. ಮಾಧ್ಯಮಗಳು ಕರ್ನಾಟಕದಲ್ಲಿ ಸಾರಾಯಿ ನಿಷೇಧ ಇದೆ ಎಂದು ಹೇಳುತ್ತವೆ.
ಹಿಂದೊಮ್ಮೆ ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಸಾಕ್ಷರ ಜಿಲ್ಲೆ ಅಂತ ಘೋಷಣೆ ಮಾಡಿದ್ದರು.ಮಾಧ್ಯಮಗಳೂ ಏಕಾಭಿಪ್ರಾಯಕ್ಕೆ ಕಟ್ಟುಬಿದ್ದವು.ಈಗಲೂ ಈ ಜಿಲ್ಲೆಯಲ್ಲಿ ಹೆಬ್ಬೆಟ್ಟು ಎಷ್ಟು ಬೇಕು..
ಮಂತ್ರಿಗಳು ಹೆಲಿಕಾಪ್ಟರ್‌ನಲ್ಲಿ ಇಳಿದಾಗ ಅಳಿಯ ಬಂದಾಗ ಮಾವ ಮಾಡುವಂತೆ ಮಾಧ್ಯಮಗಳು ಮಾಡುತ್ತಾವೆ.ನಮ್ಮ ಸುದ್ದಿಗಾರರಿಗೆ ಈ ಸಚಿವರು ಏನೋ ಪಾಲಿಸಿ ಮ್ಯಾಟರ್ ಹೇಳುತ್ತಾರೆ ಎಂಬ ಭ್ರಮೆ ಇನ್ನೂ ಇದೆ.ಇಂಥ ಹೇಳಿಕೆಗಳನ್ನು ಗಡದ್ದಾಗಿ ಬಿತ್ತರಿಸಿ ಮಂತ್ರಿಯ ಮಾತನ್ನೇ ಮುಂದಿಡುತ್ತಾರೆ.ಆದರೆ ಅದು ಸಮಾಜದ ಮಾತಲ್ಲ,ಕೆಲವೊಮ್ಮೆ ಅವನ ಸರಕಾರದ ಮಾತೂ ಅಲ್ಲ.ಇದೆಲ್ಲಾ  ಇಂಥ ಏಕಾಭಿಪ್ರಾಯ ರೂಪಿಸೋ ಆತುರದಿಂದ ಮತ್ತು ಅಂಥ ವೈಫಲ್ಯದಿಂದಲೇ.
ಇದರಲ್ಲಿ ಸಮಾಜ ಮತ್ತು ಮಾಧ್ಯಮಗಳೆರಡರ ಪಾಲಿದೆ, ಸೋಲಿದೆ.

ಮಾಧ್ಯಮಗಳ ವಿಸ್ತಾರ ಮತ್ತು ಬದಲಾವಣೆ
ಮಾಧ್ಯಮಗಳ ವಿಸ್ತಾರ ಹೆಚ್ಚಿದಂತೆ ಅವುಗಳ ತೆಕ್ಕೆಗೆ ಸಮಾಜ ಇಡಿಯಾಗಿ ಸೇರಿಕೊಂಡಿದೆ.
ಉಳ್ಳವರು-ಇಲ್ಲದವರು, ದೊಡ್ಡವರು-ಸಣ್ಣವರು, ಶ್ರೀಮಂತರು-ಬಡವರು, ಬುದ್ಧಿಗಳು-ಕುಬುದ್ಧಿಗಳನ್ನೆಲ್ಲಾ ಮಾಧ್ಯಮ ಆವರಿಸಿದೆ.
ಟೀವಿ ಧಾರಾವಾಹಿಯೊಂದು ಮನೆಯಾಳನ್ನು, ಯಜಮಾನನ್ನೂ ಏಕಕಾಲಕ್ಕೆ ತಲುಪುತ್ತದೆ.
ಬೇಡ್‌ರೂಮಿನ ದೃಶ್ಯವೊಂದನ್ನು ಅದೇ ಟೀವಿ ಎದುರು ತಾಯಿ-ಮಗಳು ಒಟ್ಟಾಗಿ ಕುಳಿತು ನೋಡುತ್ತಾರೆ.
ಪತ್ರಿಕೆಯ ಅರೆಬೆತ್ತಲೆ ಹುಡುಗಿಯ ಫೋಟೋವನ್ನು ಅಪ್ಪ-ಮಗ ಅದೇ ದಿನ ಅದೇ ಮನೆಯಲ್ಲಿ ನೋಡಿದ್ದಾರೆ.
ಸುದ್ದಿಯನ್ನಾಗಲಿ, ಸಾಹಿತ್ಯವನ್ನಾಗಲಿ, ಚಿತ್ರವನ್ನಾಗಲಿ, ದೃಶ್ಯವನ್ನಾಗಲಿ..... ಮಾಧ್ಯಮ ನಿರೂಪಿಸಿ ಬಿಡುತ್ತದೆ. ಅದರ ಕೆಲಸ ಮುಗಿಯುತ್ತದೆ.
ಹಾಗೇ ಮಾಡುವುದರ ಹಿಂದೆ ಅದಕ್ಕೆ ಬೇರೆ ಬೇರೆ ಲಾಭಗಳು, ಹಕೀಕತ್ತುಗಳಿರುತ್ತವೆ.
ಆದರೆ ಆ ಸುದ್ದಿ ಹೃದ್ಗತವಾಗುವ ಬಗೆಯಲ್ಲಿ ಭಿನ್ನ ಭಾವನೆಗಳಿವೆ, ನೆಲೆಗಟ್ಟುಗಳಿವೆ.
ಅಮ್ಮನಿಗೆ ಬೆಡ್‌ರೂಮ್ ದೃಶ್ಯ ಬೋರೆನಿಸಬಹುದು, ಮಗಳಿಗೆ ಕುತೂಹಲ ಮೂಡಿಸಬಹುದು. ಅಮ್ಮನಿಗೆ ಮುಜುಗರ, ಮಗಳಿಗೆ ಅಸೂಯೆ...
ಅಡಿಕೆ ರೇಟು ಏರಿದೆ ಎಂಬ ಸುದ್ದಿ ಯಜಮಾನನಿಗೆ ಸಂತಸ. ಆದರೆ ಎಲ್ಲಾದರೂ ಆಳುಕಾಳುಗಳಿಗೆ ಗೊತ್ತಾಗಿ ಸಂಬಳ ಹೆಚ್ಚು ಕೇಳುತ್ತಾರೆ ಎಂಬ ಆತಂಕ. ಕೆಲಸದಾಳುಗಳಿಗೆ ಹಾಗೇ ಕೇಳಲು ಸಾಧ್ಯವಾದುದಕ್ಕೆ ಅವಕಾಶ...
ಹೀಗೆ ಮಾಧ್ಯಮಗಳ ಸರ್ವವ್ಯಾಪಿ ನಮ್ಮನ್ನು ಆವರಿಸುತ್ತದೆ, ಬದಲಾಯಿಸುತ್ತದೆ.

ಇಂದು ಮಾಧ್ಯಮಗಳೇ ಸತ್ಯದ ವಕ್ತಾರರು ಎಂದೇನೂ ಜನ ನಂಬಿಲ್ಲ. ಮುಂಬೈಯಲ್ಲಿ ನಡೆದ ದಾಳಿಗಳನ್ನು ತಮ್ಮದೇ ನಿಕಷದಲ್ಲಿ  ಜನ ತಿಕ್ಕಿದ್ದಾರೆ. ಮಾಧ್ಯಮಗಳ ಅತಿಸಾರದಿಂದಲೇ ಬಗೆಬಗೆಯಾಗಿ ಕಾರ್ಯಾಚರಣೆಗೆ ಅಡ್ಡಿಯಾದದ್ದು, ಭಯೋತ್ಪಾದಕರ ಕವಲುಗಳು, ರೆಂಬೆಕೊಂಬೆಗಳನ್ನು ಹಿಡಿಯಲು ಸಾಧ್ಯವಾಗದೇ ಇದ್ದದ್ದು ಮಾಧ್ಯಮಗಳ ಅತಿಕ್ರಮಣದಿಂದಲೇ ಎಂದು ಜನರಿಗೆ ಗೊತ್ತಾಗಿದೆ.
ಸತ್ಯದ ಹುಡುಕಾಟಕ್ಕಿಂತಲೂ ಸುಳ್ಳಿನ ವಿಜೃಂಭಣೆ ಕೇವಲ ಜನಪ್ರಿಯತೆಗೆ, ದುಡ್ಡಿನಾಸೆಗೆ, ಸ್ಥಾನದ ಬಯಕೆಗೆ ಬಾಚಲು ಹೋಗಿ ಸ್ಥಾನ ಮಾನಗಳೆರಡನ್ನೂ ಕಳೆದುಕೊಂಡಂತಾಗಿದೆ.
ಮುಂಬೈ ದಾಳಿ ವೇಳೆ ಮಾಧ್ಯಮಗಳೇ ಇಲ್ಲದಿರುತ್ತಿದ್ದರೆ...
ಜನ ಸುದ್ದಿಯ ಬೆನ್ನು ಹತ್ತಿ ಪ್ರಯಾಸ ಪಡುತ್ತಿರಲಿಲ್ಲ. ದೇಶದಲ್ಲಿ ಆತಂಕ ಉಂಟಾಗುತ್ತಿರಲಿಲ್ಲ, ದುಷ್ಟರ ನಿಗ್ರಹಕ್ಕೆ ೬೦ ಗಂಟೆ ಬೇಕಾಗುತ್ತಿರಲಿಲ್ಲ...
ಹಿಂದೆಲ್ಲಾ ಹೀಗಾಗುತ್ತಿರಲಿಲ್ಲ. ಏಪ್ರಿಲ್ ಒಂದರಂದು ಬಿಬಿಸಿ ಏಪ್ರಿಲ್ ೨ ಎಂದೇ ಹೇಳಿ ಹೇಳಿ ಕೇಳುಗರಿಗೆಲ್ಲಾ ಬೇಸ್ತು ಬಿದ್ದು ಅದೇ ಏಪ್ರಿಲ್ ೧ ರಂದು ತಾವು ಪೂರ್ತಿ ನಿದ್ರಿಸಿದೆವೋ ಹೇಗೆ ಎಂದು ನಂಬಿ ಬಿಟ್ಟರಂತೆ.
ಇಂಥಾ ದಿನ ಇಂಥಾ ಹೊತ್ತಿಗೆ ಭೂಮಿಯಲ್ಲಿ ಗುರುತ್ವಾಕರ್ಷಣೆ ಇರುವುದಿಲ್ಲ ಎಂಬ ರೇಡಿಯೋ ಸುದ್ದಿ ಕೇಳಿದ ಜನ ಆ ದಿನ, ಆ ಕ್ಷಣ ಗಾಳಿಯಲ್ಲಿ ತೇಲುವ ಅನುಭವಕ್ಕಾಗಿ ಇದ್ದಲ್ಲೇ ಎದ್ದು ಹಾರಿದರಂತೆ.
ಅಂದು ಹಾಗಾಗಿದೆ, ಇಂದು ಹಾಗಾಗುವುದಿಲ್ಲ.
ಹಾಗೆಲ್ಲಾ ಹೇಳಿದರೆ ಯಾರೂ ನಂಬುವುದೂ ಇಲ್ಲ.
ಹತ್ತು ವರ್ಷ ಹಿಂದೆ ಗಣಪತಿ ಹಾಲು ಕುಡಿದ ಸುದ್ದಿ ಒಂದೇ ಹೊತ್ತಿನಲ್ಲಿ ಹೇಗೆ ಜನರನ್ನು ದಂಗುಬಡಿಸಿ ಬೆಪ್ಪು ತಕ್ಕಡಿ ಮಾಡಿತೋ ಅದು  ಇಂದು ಅದು ಸಾಧ್ಯವಿಲ್ಲ.
ಆದರೂ ಮಾಧ್ಯಮಗಳು ಸುಮ್ಮನಿಲ್ಲ.
ಪ್ರತ್ಯಕ್ಷ ಸುಳ್ಳುಗಾರಿಕೆಗಿಂತಲೂ ಪರೋಕ್ಷ ಮೋಸ ತಪ್ಪಿಲ್ಲ.
ಅರಿತೋ ಅರಿಯದೆಯೋ ಜನರನ್ನು ನಂಬಿಸಿ ಬಿಡುವ ನಿಸ್ಸೀಮತೆ, ಆ ಮೂಲಕ ಜನಾಭಿಪ್ರಾಯವನ್ನು ಸಿದ್ಧಿಗೊಳಿಸುವ, ಅದೇ ಜನಾಭಿಪ್ರಾಯವೇ ಸಿದ್ಧಾಂತವಾಗಿ ಸೃಷ್ಟಿಸುವ ಕಲೆಗಾರಿಕೆ ಈಗಲೂ ಬಹುಜನ ಪ್ರಸಾದಿತ ಸಮೂಹ ಮಾಧ್ಯಮಕ್ಕೆ ಮಾತ್ರಾ ಸಾಧ್ಯ.
ಒಂದು ಎಸ್‌ಎಂಎಸ್, ಒಂದು ಬ್ರೇಕಿಂಗ್ ನ್ಯೂಸ್ ಸ್ಕ್ರೋಲ್, ಒಂದು ಬಾಕ್ಸ್ ಐಟಂ, ಒಂದು ಇ-ಮೇಲ್... ಈ ದೇಶವನ್ನು ನ್ಯೂಟ್ರಾನ್ ಬಾಂಬಿಗಿಂತ ಮೊದಲೇ ಸ್ಫೋಟಿಸಿ ಉಡಾಯಿಸಿ  ಹಾಕಬಲ್ಲವು.

ಮಾಹಿತಿಯಲ್ಲಿ ಬಲವಿದೆ ಎನ್ನುವುದು ನಿಜ.
ಹೊಸ ವಿಷಯ, ವಿಚಾರಧಾರೆಗಳನ್ನು ಮಾಧ್ಯಮಗಳು ಒಪ್ಪಿಸಿವೆ ಎಂಬುದೂ ಸತ್ಯ.
ಆ ಮೂಲಕ ಜನರಲ್ಲಿ ಬಲ, ಜನಬಲವನ್ನು ತಂದುಕೊಟ್ಟಿರುವುದೂ ದಿಟ.
ಸಂವಹನ ಸಮಾಜವನ್ನು ಬದಲಾಯಿಸಿದೆ.
ಸಂವಹನ ಸಂಸ್ಕೃತಿಯನ್ನು ಬದಲಾಯಿಸಿದೆ.
ಸಂವಹನ ಅದನ್ನೊಪ್ಪಿದ ಎಲ್ಲರನ್ನೂ ಬದಲಾಯಿಸಿದೆ.
ವ್ಯಕ್ತಿ-ವ್ಯಕ್ತಿ ಸಂವಹನ, ಅಂತರ್‌ವ್ಯಕ್ತಿ ಸಂವಹನ, ಗುಂಪು ಸಂವಹನ, ಸಮೂಹ ಸಂವಹನ ಹೀಗೆ ಸಾಗುತ್ತದೆ ಸಂವಹನದ ನೆಲೆ.
ಸಮೂಹ ಸಂವಹನದ ಸಾಧ್ಯತೆಗಳಿರುವುದು ಸಮೂಹ ಮಾಧ್ಯಮಗಳ ಬಳಿ.
ಮಾಸ್, ಗ್ರೂಪ್, ಕಮ್ಯುನಿಟಿ, ಪಬ್ಲಿಕ್, ಮಾಬ್... ಮುಂತಾದ ಸಮೂಹಗಳನ್ನು ಮಾಧ್ಯಮಗಳು ತಟ್ಟಿವೆ, ಮುಟ್ಟಿವೆ, ಬದಲಾಯಿಸಿವೆ, ಹಿಂಸಿಸಿವೆ, ಪ್ರೀತಿಸಿವೆ, ಸಲಹಿವೆ, ಕೊಲೆ ಮಾಡಿವೆ, ಶಿಕ್ಷಿಸಿವೆ, ತಿಳಿಸಿವೆ, ಪ್ರೇರೇಪಿಸಿವೆ, ಮುದ್ದಾಡಿವೆ, ಮುದುಡಿಸಿವೆ.

ಮಾಧ್ಯಮಗಳಲ್ಲಿ ಸಂವಹನ ಮೂರು ಹಂತಗಳಲ್ಲಿ ಹರಿಯುತ್ತವೆ.
ಉಗಮ-ಸಂದೇಶ-ಗುರಿ.
ಉಗಮ
ಉಗಮ ಸ್ಥಾನದಲ್ಲಿ ಪತ್ರಕರ್ತರಿರುತ್ತಾರೆ, ಯಂತ್ರಗಳಿರುತ್ತವೆ, ತಂತ್ರಗಾರಿಕೆ ಇರುತ್ತದೆ, ಪರಿಣತರಿರುತ್ತಾರೆ, ಮಾನವ ಶಕ್ತಿ ಇರುತ್ತದೆ, ಕಿಡಿಗೇಡಿಗಳಿರುತ್ತಾರೆ, ಪ್ರಾಜ್ಞರಿರುತ್ತಾರೆ, ದುಷ್ಟರೂ ಇರುತ್ತಾರೆ, ಕಲಾಗಾರನಿರುತ್ತಾನೆ, ಸಾಹಿತಿ ಇರುತ್ತಾನೆ, ಅಲ್ಲಿ ದುಡ್ಡಿನ ಮೂಲಗಳಿರುತ್ತವೆ, ಅಲ್ಲಿ ಹಣ ಹೂಡುವವನಿದ್ದಾನೆ, ಅಲ್ಲಿ ಲಾಭ ನಷ್ಟದ ಲೆಕ್ಕಪತ್ರ ಹಿಡಿದು ನಿಂತವರಿರುತ್ತಾರೆ, ಅಲ್ಲಿ ಹಿತಾಸಕ್ತಿಯ ನೆಲೆಗಳಿರುತ್ತವೆ, ರಾಜಕೀಯ ಆಟೋಪಗಳಿರುತ್ತವೆ. ಇವರೆಲ್ಲಾ ಸೇರಿ ಒಂದು ಸುದ್ದಿಯನ್ನು ಸಿದ್ಧ ಮಾಡುತ್ತಾರೆ. ಇವರೆಲ್ಲಾ ಸೇರಿ ಒಂದು ಧಾರಾವಾಹಿ ರೂಪಿಸುತ್ತಾರೆ. ಇವರೆಲ್ಲಾ ಸೇರಿ ಗುರಿಯತ್ತ ಈಡು ಇಡುತ್ತಾರೆ.

ಸಂದೇಶ 
ಸಂದೇಶದಲ್ಲಿ ಕಂಪ್ಯೂಟರ್ ಇದೆ. ಅದ್ಭುತ ತಾಂತ್ರಿಕತೆ ಇದೆ. ಬಣ್ಣಗಳಿವೆ, ಚಿತ್ರಗಳಿವೆ, ದೃಶ್ಯಗಳಿವೆ, ಹಾಡು, ಸಂಗೀತ, ಧ್ವನಿ, ಬೆಳಕು ಎಲ್ಲಾ ಒಟ್ಟಾಗುತ್ತದೆ. ಅದಕ್ಕೆ ಮನೋವೇಗ. ಅದರದ್ದು ಮಿಂಚಿನೋಟ. ಅದರಲ್ಲಿ ಸಿಡಿಲಿನ ಅಬ್ಬರ, ಅದರಲ್ಲಿ ಥಳಕು, ಅದರಲ್ಲಿ ವೈಯಾರ... ಒಟ್ಟಾರೆಯಾಗಿ ಆಡಂಬರ.
ಅಲ್ಲಿ ವೈಭವವೊಂದೇ ವೈಭವೀಕರಿಸುತ್ತದೆ. ಗುರಿಯನ್ನು ನಾಟಿಕೊಳ್ಳುವ ಶರದ ಪಯಣ, ಕಾಲವನ್ನು ಹಿಂದಿಕ್ಕುವ ಧಾವಂತ, ಒಂದೇ ಏಟಿಗೆ ಸಹಸ್ರ ಹೋಳುಗಳನ್ನಾಗಿ ಮಾಡುವ ಹುಕ್ಕಿ. ಅದೊಂದು ಥರ ಯುದ್ಧದಂತೆ. ಯುದ್ಧಕ್ಕೆ ಇಳಿದ ಯೋಧನಂತೆ. ಯಾವ ಪರಿಣಾಮಗಳ ಲೆಕ್ಕಾಚಾರವಿಲ್ಲ. ಪ್ರತಿಫಲ ಎಂದರೆ ಕೆಲಸ ಮುಗಿಸುವುದು ಮಾತ್ರಾ.

ಗುರಿ  
ಕೆಲಸ ಮುಗಿದಿದೆ. ಮಾಸ್‌ನ್ನು ತಲುಪಿದೆ. ಜಂಗುಳಿಯನ್ನೂ ಮುಟ್ಟಿದೆ. ಪಬ್ಲಿಕ್‌ಗೆ ಅಪೀಲ್ ಆಗಿದೆ. ಗ್ರೂಪ್‌ಗೆ ಗೊತ್ತಾಗಿದೆ, ಕಮ್ಯುನಿಟಿಗೆ ರೀಚ್ ಆಗಿದೆ.
ಇನ್ನೇನು ಬಾಕಿ ಉಳಿದಿಲ್ಲ.
ಗುರಿಯಲ್ಲಿ ಮಕ್ಕಳೂ ಇದ್ದರು, ಮುದುಕರೂ ಇರುತ್ತಾರೆ, ಗುಲ್ಬರ್ಗದ ಕನ್ನಡಿಗರೂ, ಮುಂಬೈಯ ಕನ್ನಡಿಗರೂ ಇದ್ದಾರೆ. ಕರಾವಳಿಯ ಭಟ್ಟ, ಮೈಸೂರಿನ ಶ್ರೇಷ್ಠಿ, ಬೆಂಗಳೂರಿನ ಮಾರ್ವಾಡಿ ಇದ್ದಾರೆ. ಇವರೆಲ್ಲರೂ ಬೇರೆ ಬೇರೆಯಾಗಿದ್ದಾರೆ. ಅವನು ಮಲೆನಾಡಿನ ತೋಟದಲ್ಲಿದ್ದ, ಇವನು ಬಯಲು ಸೀಮೆಯ ಹೊಲದಲ್ಲಿದ್ದ, ಅವಳು ಮಲಗಿದ್ದಳು, ಇವಳು ಅಡುಗೆ ಮನೆಯಲ್ಲಿದ್ದಳು. ಆ ಮಕ್ಕಳು ತರಗತಿಯೊಳಗಿದ್ದರು, ಈ ಮಕ್ಕಳು ಭಿಕ್ಷೆ ಬೇಡುತ್ತಿದ್ದರು.
ಆದರೂ ಎಲ್ಲರನ್ನೂ ಆ ಸುದ್ದಿ ಗುರಿ ಮಾಡಿದೆ. ಗುರಿಯಾಗಿದೆ. ಮುಂದೇನು ?
ಒಂದು ಕತೆಯಾದರೆ ಏನಾಗುತ್ತದೆ, ಒಂದು ಕೊಲೆಯ ಸುದ್ದಿಯಾದರೆ ಏನಾಗುತ್ತದೆ, ಒಂದು ಹಾಡು ಆಗಿದ್ದರೆ ಏನಾಗುತ್ತದೆ ? ಒಂದು ಧಾರಾವಾಹಿಯಾದರೆ ಏನಾಗುತ್ತದೆ ?
ಕೋಟ್ಯಂತರ ಜನರ ಕೋಟಿ ಕೋಟಿ ಬಗೆಗಳನ್ನು, ವಿಭಿನ್ನ ಬದುಕು, ವಿಭಿನ್ನ ಸಂಸ್ಕೃತಿ, ವಿಭಿನ್ನ ಆಚಾರ ವಿಚಾರ, ವಿಭಿನ್ನ ನಿಲುವು, ವಿಭಿನ್ನ ನಂಬುಗೆಗಳೆಲ್ಲಾ ಈ ಸಂದೇಶ ಏನು ಮಾಡಬಹುದು ?
ಏನಾದರೂ ಆಗುತ್ತದೆ ?
ಒಂದು ಕುರುಕುರೆ ಪೊಟ್ಟಣ, ಒಂದು ಪಾನ್ ಪಕೀಟು ಇಂದು ಸಿಗದ ಊರುಗಳಿಲ್ಲ. ಕೇರಳದ ಚಂಬರವಟ್ಟಂ ಎಂಬ ಹಳ್ಳಿಯಲ್ಲಾಗಲಿ, ದಕ್ಷಿಣ ಕನ್ನಡದ ಪೆರಿಯಡ್ಕ ಎಂಬ ಕುಗ್ರಾಮದಲ್ಲಾಗಲಿ, ಮಂಗಳೂರಿನ ಮಾಲ್ ಬದುವಿನಲ್ಲಾಗಲಿ... ಕುರುಕುರೆ ಪೊಟ್ಟಣ ನೇತಾಡುತ್ತಿರುತ್ತದೆ.ಅದೇ ಪಾಕೀಟು,ಅದೇ ಜಾಹೀರಾತು..ಅದೇ ಟೇಸ್ಟು..ಅದೇ ಚಪಲ....  ಕುರುಕುರೆ ಮೂಡಿಸಿದ ಈ ಏಕತ್ರವನ್ನು ಸಮೂಹ ಮಾಧ್ಯಮ ರೂಪಿಸಲು ಸಾಧ್ಯವಾ  ?ಅಲ್ಲ ಎಂದರೆ ಹೇಗೆ ಮಾಧ್ಯಮಗಳೇ ಕುರುಕುರೆ ನೇತಡಿಸಿವೆ,ಮಾಧ್ಯಮಗಳೇ ಆ ಮಟ್ಟಿನ ಚಪಲ ಸೃಷ್ಟಿಸಿವೆ. ಆ ಮಟ್ಟಿಗೆ ಕುರುಕುರೆ ಸಂಸ್ಕೃತಿಯ ವಕ್ತಾರರು ಮಾಧ್ಯಮಗಳೇ.
ಸಾಮೂಹಿಕ ಧೋರಣೆ,ಸಾಮೂಹಿಕ ಆಸಕ್ತಿ,ಸಾಮೂಹಿಕ ಖಿನ್ನತೆ,ಸಾಮೂಹಿಕ ಧೋರಣೆಗಳನ್ನು ಸೃಷ್ಟಿಸುತ್ತಿರುವ ನಾಯಕ ಅಥವಾ ಖಳನಾಯಕ ಮಾಧ್ಯಮವೇ..ನೀವು ಇದನ್ನು ಒಪ್ಪಲೇಬೇಕು.
ಗೋಬಿ ಮಂಚೂರಿ ತಿನ್ನೋ ಖಯಾಲಿಯನ್ನು ಸಾಮೂಹಿಕವಾಗಿ ಕಾಫಿಡೇ ಸಂಸ್ಕೃತಿಯನ್ನು ಹಬ್ಬಿಸಿದ್ದು ಮಾಧ್ಯಮಗಳು.ಆ ಮಾಧ್ಯಮಗಳ ಹಿಂದಿರುವುದು ಆ ಕಂಪನಿಗಳ ಒಡೆಯರು.
ಇದೊಂದು ರಿಂಗ್‌ರೋಡ್ ಇದ್ದ ಹಾಗೇ.

 ಚೀನಾದಲ್ಲಿ ಇರುವ ಗಾದೆಯಂತೆ, ಸಾವಿರ ಐರಿಷ್ ಪ್ರಜೆಗಳ ಸಾವು ಒಬ್ಬ ಚೀನೀಯನ ಸಾವಿಗೆ ಸಮ ಎಂಬುದು ಈಗಲೂ ಶಾಶ್ವತವಾಗಿದೆ.
ವಿಶ್ವ ವ್ಯಾಪಿಯಾಗಿ ಸಂವಹನ ಬೆಳೆದಿರಬಹುದು. ಆದರೆ ವಿಶ್ವವ್ಯಾಪಿ ಚಿಂತನೆಯನ್ನು, ಸಾಮೂಹಿಕ ಪ್ರಜ್ಞೆಯನ್ನು ಅದಕ್ಕೆ ರೂಪಿಸಲು ಸಾಧ್ಯವಾಗಿಲ್ಲ. ಬಹುಶಃ ಎಂದೂ ಆಗೋದೂ ಇಲ್ಲ. ಏಕೆಂದರೆ ಮಾನವ ಮನಸ್ಸೇ ಅಂಥದ್ದು. ಅದು ಸ್ಥಳೀಯ, ಅದು ಏಕ, ಅದು ವೈಯಕ್ತಿಕ, ಅದು ಸ್ವ,ಅದು ಸ್ವಂತ...

ಪ್ರತಿಕ್ರಿಯೆ, ಫೀಡ್ ಬ್ಯಾಕ್ ಮತ್ತು ನಿಷ್ಟ್ರಿಯತೆ
ಕೌಚ್ ಪೊಟಾಟೋಸ್..ಎಂಬ ಮಾತಿದೆ ಸುಪ್ಪತ್ತಿಗೆಯ ಮೇಲಿನ ಆಲೂಗಡ್ಡೆ.
ಇದೊಂಥರಾ ನಮ್ಮ ಆಡು ಭಾಷೆಯಲ್ಲಿ ಬಡ್ಡು ಬಡ್ಡು ಅಂತಾರಲ್ಲ, ಅದು.
ಜಡಭರತ ಅನ್ತಾರಲ್ಲ ಅದು.
ಜಾಗತೀಕರಣದ ಬಳಿಕ ನಾವು ನಮ್ಮ ಒಳ ನೋಟಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಕೊಳ್ಳುತ್ತಾ, ಸಾಫ್ಟ್ ಡ್ರಿಂಕ್ಸ್ ಕುಡಿಯುತ್ತಾ, ಪಬ್ ಸಂಸ್ಕೃತಿ, ಡಿಸ್ಕೋತೆಕ್ ಸಾಹಿತ್ಯ, ಕಾಫಿಡೇ ಆಚಾರ, ಸ್ಟಾರ್ ಮೂವೀಸ್ ಸಂಸ್ಕಾರ, ಸಾಫ್ಟ್‌ವೇರ್ ಶ್ರೀಮಂತಿಕೆಯನ್ನು ಹಿಂಬಾಲಿಸುತ್ತಿದ್ದೇವೆ. ನಮಗೆ ಹಟ್ಟಿಯ ಹಸುಗಳು ಹೇಸಿಗೆ ಅನಿಸುತ್ತವೆ. ಗೊಬ್ಬರ ವಾಸನೆ ತರುತ್ತಿದೆ. ಹೊಲಗಳು ಬರೀ ಪೇಸ್ಟ್ ಲ್ಯಾಂಡ್ ಅಂತ ಕಾಣುತ್ತಿದೆ. ಗದ್ದೆಯ ದುಡಿಮೆ, ತೋಟದಲ್ಲಿ ಹಾಕೋ ಶ್ರಮ ಅಪರ ದಂಡ ಆಗಿ ಬಿಟ್ಟಿವೆ. 
ನಮ್ಮ ಕ್ರಿಯಾಶೀಲತೆ ಹದಗೆಟ್ಟಿದೆ. ಹಾಗೇ ಮಾಡೋದರಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದು.
ವೆನಿಲ್ಲಾದಲ್ಲಿ ದುಡ್ಡು ಬರತ್ತೆ, ಶೇರಿನಲ್ಲಿ ಲಕ್ಷ ಸಿಗುತ್ತೇ ಅಂತ ಬೋಧಿಸಿದ್ದು ಮಾಧ್ಯಮಗಳೇ.
ಟೀವಿ ಚಾನೆಲ್‌ನಲ್ಲಿ ತಸ್ಕ ಪುಸ್ಕ ಇಂಗ್ಲೀಷು ಮಾತನಾಡುವ ಚರ್ಚೆಗೋಷ್ಠಿ, ತಕತಕ ಕುಣಿಯುವ ರಿಯಾಲಿಟಿ ಶೋಗಳನ್ನು ನೋಡುತ್ತಾ ನೋಡುತ್ತಾ ನಮ್ಮ ಮನಸ್ಸು ಮೂಲ ನೆಲೆಯಿಂದ ಕಳಚುತ್ತದೆ.
ಒಮ್ಮೆ ಮಾನಸಿಕವಾಗಿ ಬೇರ್ಪಟ್ಟ ನಾವು ಮುಂದೆ ದೈಹಿಕವಾಗಿ ಕೀಳಲ್ಪಡುತ್ತೇವೆ.
ಕಿಣಿಯರ ಅಂಗಡಿಯಿಂದ ಬೆಲ್ಲ ತರೋದಕ್ಕಿಂತ ಮಾಲ್‌ಗಳಿಂದ ಸಕ್ಕರೆ ತರೋದು ಅಗ್ಗ ಆಗಿಬಿಡುತ್ತೆ. ಮೆಣಸು, ಕೊತ್ತಂಬರಿ, ಮೆಂತೆಗಳನ್ನು ಕಾಗದದ ತೊಟ್ಟೆಗಳಲ್ಲಿ ಕಟ್ಟಿ ತರೋದಕ್ಕಿಂತ ಮಾಲ್‌ಗಳಲ್ಲಿ ನೇತು ಹಾಕಿರುವ ಉಪ್ಪಿನಕಾ ಮಿಕ್ಸ್ ನಮಗೆ ಈಸಿ ಆಗಿಬಿಡುತ್ತದೆ.
ಇದನ್ನೆಲ್ಲಾ ಮಾಡಿದ್ದು ಮಾಧ್ಯಮ. ನಮ್ಮನ್ನು ಹೆಬ್ಬಾವಿನ ಥರ ಸೋಫಾ ಮೇಲೆ ಬಿದ್ದುಕೊಂಡು ಕ್ರಿಕೆಟ್ ಮ್ಯಾಚಿಗೆ ಫಿಕ್ಸ್ ಮಾಡಿಸಿದ್ದು ಮಾಧ್ಯಮ.
ಸೀರೆಯ ಮೇಲೆ ಬಾಜಿ ಕಟ್ಟೋದು, ಹಾಡು ಕೇಳಲು ಎಸ್‌ಎಂಎಸ್ ಮಾಡೋದು, ನಟನ ಜತೆ ಟಾಕಿಂಗು, ನಟಿಯ ಜತೆ ಡೈನಿಂಗು,... ಟಾಕ್‌ಶೋ, ವಾಕ್‌ಶೋ ಮುಂತಾಗಿ ಎಲ್ಲಾ ದುಡ್ಡಿನ ಆಟಗಳಲ್ಲಿ ನಾವು ಬರೀ ಮನೆಯೊಳಗಿನ ಹೆಬ್ಬಾವುಗಳು ಸುಪ್ಪತ್ತಿಗೆಯ ಮೇಲಿನ ಬಟಾಟೆಗಳು.

ನಿಜಕ್ಕೂ ಮಾಧ್ಯಮಗಳು ಏನು ಮಾಡಿವೆ, ಮಾಡಬೇಕು ?
(ಇಲ್ಲಿ ತೀರಾ ಪೊಸಿಟಿವ್ ನೋಟಗಳನ್ನು ಹುಡುಕೋಣ)
ನಾವು ಹಳಹಳಿಕೆಯಿಂದ ಹೊರ ಬರೋಣ
ಮಾಧ್ಯಮಗಳ ಇತಿ-ಮಿತಿ, ಕಪ್ಪು-ಬಿಳುಪುಗಳ ನಡುವೆ ಇತ್ಯಾತ್ಮಕವಾಗಿ ಮಾತಿಗಿಳಿಯೋಣ.
ಬ್ಲಾಕ್ ಎಂಡ್ ವೈಟ್ ಎಲ್ಲರಲ್ಲೂ ಇದೆ.
ನಾವು ವೈಟನ್ನು ಮಾತ್ರಾ ನೋಡೋಣ
ಮಾಧ್ಯಮಗಳ ಸರಿ, ತಪ್ಪು, ಪ್ಲಸ್, ಮೈನಸ್‌ಗಳ ನಡುವೆ ನಾವು ಶ್ರೇಯಸ್ಸನ್ನು ವಿಮರ್ಶೆಗಿಡೋಣ.
ನಮ್ಮ ಚಿಂತನೆ ಮಾಧ್ಯಮಗಳ ಕರ್ತವ್ಯಗಳಿಂದ ಆರಂಭವಾಗುತ್ತದೆ.
ಇದಕ್ಕೆ ಆರು ಆಯಾಮಗಳು : ವೀಕ್ಷಣೆ, ವಿಶ್ಲೇಷಣೆ, ಸಂಘಟನೆ, ಸಂಸ್ಕೃತಿ ಪ್ರಸಾರ, ರಂಜನೆ, ಮತ್ತು ಮಾರುಕಟ್ಟೆ.
ಮಾಧ್ಯಮ ಎಂದರೆ ಈ ಆರು ಆಯಾಮಗಳು ಇರಬೇಕು, ಇರುತ್ತವೆ.
ಟೀವಿ ಇರಲಿ, ಪೇಪರ್ ಇರಲಿ, ರೇಡಿಯೋ ಇರಲಿ
ಎಲ್ಲಿ ಏನಾಗುತ್ತಿದೆ ಅಂತ ನೋಡುತ್ತಿರಬೇಕು ಪತ್ರಿಕೆ. ಏಳು-ಬೀಳುಗಳನ್ನು ಗಮನಿಸಬೇಕು. ಊರಿಗೆ ಊರೇ ಜ್ವರ ಹಿಡಿದುಕೊಂಡಾಗ ಕಾವಲು ಕಾಯಬೇಕು. ನೆರೆ ಬಂದು ಮುಳುಗಿದಾಗ ತೆಪ್ಪದಲ್ಲಿ ಕುಳಿತು ಹುಟ್ಟು ಹಾಕಬೇಕು.
ಪಹರೆ ಕೆಲಸ ಅದು. ಊರಿಗೆ ಏನಾಯಿತು, ಏನಾಗುತ್ತಿದೆ, ಏನಾಗಬೇಕು ಎಂದು ನೋಡುತ್ತಾ, ಕಾಣುತ್ತಾ, ಬಯಸುತ್ತಾ ಇರಬೇಕು.
ಒಳಗಿನ ನೋಟಗಳು, ಹೊರಗಿನ ಅವಕಾಶಗಳು, ವರ್ತಮಾನದ ಇರುವುಗಳು, ಭವಿಷ್ಯದ ಅವಕಾಶಗಳು, ಕಳೆದು ಹೋದ ಕಾಲ, ಮುಂದೆ ನಿಂತಿರುವ ಹಾದಿ... ಎಲ್ಲವನ್ನೂ ಅದು ವೀಕ್ಷಿಸಬೇಕು  ಅದು ವೀಕ್ಷಣೆ.
ಮುಂದಿನದ್ದು ವಿಶ್ಲೇಷಣೆ.
ಕರಾವಳಿಯಲ್ಲಿ ಕಾಣಿಸಿಕೊಂಡ ಚಿಕೂನ್‌ಗುನ್ಯಾ ಯಾಕೆ ಬಂತು, ಎಲ್ಲಿಗೆ ಬಂತು, ಏನಾಯಿತು.
ಹೆದ್ದಾರಿ ಒಡೆದು ಜನ ನಡೆಯಲೂ ಆಗದೇ ಏಕಾಯಿತು ?
ಶಾಸಕನ ಅಯೋಗ್ಯತೆ, ಸಂಸದನ ಲೊಳಲೊಟ್ಟೆ, ಸಚಿವರ ಬೋಗಸ್, ಅಧಿಕಾರಿಯ ದರ್ಬಾರ್... ಎಲ್ಲದಕ್ಕೂ ಪಂಚಾಯ್ತಿ ಕಟ್ಟೆ  ಮಾಧ್ಯಮ. ಆ ಪಂಚಾತಿಕೆಯೇ ವಿಶ್ಲೇಷಣೆ.
ಯಾವಾಗ ಈ ರೀತಿ ವೀಕ್ಷಣೆ ಮತ್ತು ವಿಶ್ಲೇಷಣೆಗಳನ್ನು ಮಾಧ್ಯಮಗಳು ಸಮಾಜ ಮುಖಿಯಾಗಿ ನಿಂತು ಒಪ್ಪಿಸಿದವೋ, ಜನರು ತಾವೇ ತಾನಾಗಿ ಒಗ್ಗಟ್ಟಾಗುತ್ತಾರೆ.
ಮಾಧ್ಯಮದ ಗ್ರಹಿಕೆ, ಬಿತ್ತನೆಗಳ ಜತೆಗೇ ಜನಮಾನಸವೂ ಪರ್ಯಾಯ ಮಾಧ್ಯಮವಾಗಿ ಇದೇ ವೀಕ್ಷಣೆ, ವಿಶ್ಲೇಷಣೆ ನಡೆಸುತ್ತದೆ.
ಒಂದು ಸುದ್ದಿಯ ಹಿಂದೆ ಬಿದ್ದಿರುವ ಜನರು ತಮಗರಿವಿಲ್ಲದಂತೆ ಸಂಘಟಿತರಾಗುತ್ತಾರೆ.
ಕೆಟ್ಟ  ಸರಕಾರ, ದುಷ್ಟ ಸಚಿವ, ಕಳ್ಳ ಅಧಿಕಾರಿ, ಖದೀಮ ಪಂಡಿತನನ್ನು ಮುಗಿಬಿದ್ದು ಹಿಡಿದು ಓಡಿಸುತ್ತಾರೆ.
ಹುಲಿ ದನ ಹಿಡಿಯುತ್ತದೆ. ಅವನ ದನ, ಬಳಿಕ ಇವನ ದನ, ನಂತರ ಆ ಮನೆಯ ಹಸು, ಈ ಮನೆಯ ಕರು... ನೋಡ್ತಾ ನೋಡ್ತಾ ಹಳ್ಳಿ ಇದೇ ಹುಲಿಯ ವಿರುದ್ಧ ಒಂದಾಗುತ್ತದೆ. ಹೇಳಿ ಕೇಳಿ ಹುಲಿ. ಹುಲಿಯನ್ನೇ ಜನ ಶಿಕಾರಿ ಮಾಡುತ್ತಾರೆ.
ಮಾಧ್ಯಮ ಪ್ರಣೀತ ಸಂಘಟನೆ ಸಾಧ್ಯವಾಗುವುದು ಹೀಗೆಯೇ.
ಹೊಸ ವಿಚಾರ, ನವ ಸಿದ್ಧಾಂತ, ಒಂದು ಸಿನಿಮಾ, ಒಂದು ಕತೆ, ಮತ್ತೊಂದು ಹಾಡು ಜನಪರವಾಗೋದು ಹೀಗೆ, ನಾಯಕನೊಬ್ಬ ರೂಪುಗೊಳ್ಳೋದೂ ಇದೇ ಫಾರ್ಮುಲಾದಲ್ಲಿ ಇದನ್ನು ಸಂಘಟನೆ ಅಂತ ಕರೆಯದೇ ಇನ್ನೇನೆಂದು ಕರೆಯೋದು?

ಸಂಸ್ಕೃತಿಯ ಪ್ರತಿಪಾದನೆ ಮಾಧ್ಯಮಗಳಿಂದಲೇ ಆಗಬೇಕೆಂದೇನಿಲ್ಲ ಅಥವಾ ಮಾಧ್ಯಮಗಳು ಎಂದೂ ಸಂಸ್ಕೃತಿಯ ವಕ್ತಾರರಾಗಲು ಸಾಧ್ಯವೂ ಇಲ್ಲ.
ಸಂಸ್ಕೃತಿ ಎನ್ನೋದು ಕಾಲಾನುಭಾಗದ ಹರಿವು. ನದಿಯ ನೀರಿನ ಥರ. ಅನುಕ್ಷಣವೂ ಅದಕ್ಕೆ ಹೊಸ ನೀರು.
ಹರಿಯುವ ನೀರಿಗೆ ದೊಣ್ಣೆ ನಾಯಕನ ಹಂಗೇ ?
ಸಂಸ್ಕೃತಿಗೆ ಮಾಧ್ಯಮಗಳ ಗಂಜಿಯೇ?
ಹಾಗಿದ್ದರೂ ಸಂಸ್ಕೃತಿಯ ನವೋನ್ಮೇಷದಲ್ಲಿ ಮಾಧ್ಯಮಗಳು ಮುಂದೆ ಇವೆ.
ಐರಿಷ್ ಇಗರ್ಜಿಯ ಒಂದು ಮದುವೆ, ಆಫ್ರಿಕಾದ ಕಾಡಿನೊಳಗೆ ನಡೆವ ಒಂದು ಅಂತ್ಯ ಸಂಸ್ಕಾರ, ಹಿಮಾಲಯದ ಜನರ ರಹಸ್ಯಗಳು, ಬ್ರಿಗೇಡ್ ರಸ್ತೆಯ ಗೌಜಿ, ಹಂಪನಕಟ್ಟೆಯ ಗದ್ದಲ, ಉಪ್ಪಿನಂಗಡಿಯ ಮಖೆ ಜಾತ್ರೆ..... ಹೀಗೆ ವಿಭಿನ್ನ ಸಾಮಾಜಿಕ-ಸಂಸ್ಕೃತಿಯನ್ನು ಗೋಲದ ಸುತ್ತ ಪ್ರದರ್ಶಿಸುವುದು, ಪರಿಚಯಿಸುವುದು ಮಾಧ್ಯಮಕ್ಕೆ ಮಾತ್ರ ಸಾಧ್ಯ.
ಹುಟ್ಟಿದ ಮಗುವನ್ನು ಕುದಿಯುವ ಅನ್ನದ ಕೊಪ್ಪರಿಗೆಗೆ ಅದ್ದುವ ಹರಕೆ ಕೂಡಾ ಇದೆ ಅಂತ ನಮಗೆ ಪೇಪರ್ ನೋಡಿಯೇ ಗೊತ್ತಾಗುತ್ತದೆ.
ಸಂಸ್ಕೃತಿಯ ಪರಿಚಯವನ್ನು ಮಾಡುವ ಮಾಧ್ಯಮ ಪರ್ಯಾಯವಾಗಿ ಶಿಕ್ಷಣವನ್ನು ನೀಡುತ್ತದೆ.
ಕೋಣ ಬಲಿ ತಪ್ಪು, ಬೆತ್ತಲೆ ಸೇವೆ ಅಪರಾಧ ಅಂತ ಮಾಡಿದ್ದೇ ಮಾಧ್ಯಮ. ಆ ಮಟ್ಟಿಗೆ ಅದು ಶಿಕ್ಷಣ.
ಹುಡುಗಿಯೊಬ್ಬಳು ಅನ್ಯಮತೀಯ ಹುಡುಗನ ಜತೆ ಶರಬತ್ತು ಕುಡಿದರೆ ಅದು ಈಗ ಅಪರಾಧ. ಹಾಗಂತ ಅದನ್ನು ಬೋಧಿಸಿದ್ದೂ ಮಾಧ್ಯಮವೇ. ಅಗತ್ಯಕ್ಕಿಂತ ಹೆಚ್ಚು ಎಕ್ಸ್‌ಫೋಸ್ ನೀಡಿದಾಗ ಹೀಗಾಗಿದೆ ಅಷ್ಟೇ.
ಇಷ್ಟದ ಹುಡುಗನ ಜತೆ ಆ ಹುಡುಗಿ ಓಡಿ ಹೋದರೆ ಮನೆಯವರಿಗಿಂತ ಹೆಚ್ಚು ತಲೆನೋವು ಮಾಧ್ಯಮಗಳಿಗೆ. ಆ ರೀತಿಯಲ್ಲೂ ಮಾಧ್ಯಮಗಳು ಒಂದು ನವೋನವೀನ ಸಂಸ್ಕೃತಿಯ ವಕ್ತಾರರೇ.
ಅದಿರಲಿ, ನಾವು ಮಾಧ್ಯಮಗಳು ಸಂಸ್ಕೃತಿಯ ಪ್ರತಿಪಾದನೆಯಲ್ಲಿ ಪಾತ್ರ ವಹಿಸುತ್ತಿರುವುದನ್ನು ಕೊನೆಗೂ ನಿರಾಕರಿಸಲು ಸಾಧ್ಯವಿಲ್ಲ.
ಒಂದು ಪೀಳಿಗೆಯ ಧರ್ಮ, ಸಂಪ್ರದಾಯ, ಆಹಾರ, ವಿಹಾರ, ವಿಚಾರ, ವಿಮರ್ಶೆ, ಉಡುಪು, ನಡತೆಗಳ ಮನೆ ಪಾಠವನ್ನು ಹೇಳಿ ಕೊಡುವ ಮಟ್ಟಕ್ಕೆ ಮಾಧ್ಯಮಗಳು ಬಂದು ಬಿಟ್ಟಿವೆ.
ಟ್ರಾಲಿ ಮೇಲಿನ ಟೀವಿ, ಟೀಪಾಯ್ ಮೇಲಿನ ಡೈಲಿ, ತೊಡೆಯ ಮೇಲಿನ ಕಂಪ್ಯೂಟರ್ ನಮ್ಮ ನಡತೆಯನ್ನೇ ಬದ್ಲಾ ಮಾಡುವ ತಾಖತ್ತು ಹೊಂದಿವೆ.
ಅಮ್ಮನಿಂಗಿತಲೂ ಮೊದಲು ಟೀವಿ ಆಂಕರ್ ಪಾಠ ಹೇಳುತ್ತಾಳೆ. ಮೇಸ್ಟ್ರು ಹೇಳಿಕೊಟ್ಟದ್ದನ್ನು ಕಾಲಮ್ಮಿಸ್ಟು ತಿದ್ದುತ್ತಾನೆ, ಜಾಹೀರಾತಿನಲ್ಲಿ ಹುಡುಗೀನ ಎತ್ಹಾಕಿಕೊಂಡವನು ಹೀರೋ ಆಗ್ತಾನೆ.
ಮಾಧ್ಯಮಗಳು ನೀಡುವ ಶಿಕ್ಷಣ ಅರಿತೋ ಅರಿಯದೆಯೋ ನಮ್ಮ ಮಕ್ಕಳನ್ನು, ನಮ್ಮನ್ನು ಹಿಡಿದು ಹೌದಪ್ಪ ಮಾಡಿ ಬಿಡುತ್ತವೆ.
ಕೊಳ್ಳುಬಾಕ ಸಂಸ್ಕೃತಿ, ಕನ್ಸೂಮರಿಸಂ ಈ ಪಾಠದ ಪ್ರವರ್ತಕ. ಈ ಶಿಕ್ಷಣದ ನಿರೂಪಕ ಅದಕ್ಕೇ ಮಾಧ್ಯಮ ಸಂಸ್ಕೃತಿಯ ಪ್ರಸಾರಕ

ಮನರಂಜನೆ ಆರಂಭದಿಂದಲೂ ಮಾಧ್ಯಮಗಳ ಅಂಗವಾಗಿತ್ತು. ಆದಿತ್ಯವಾರದ ಪುರವಣಿಗಳು, ಸ್ಟೇಸ್ ಫಿಲ್ಲರ್ ಪದ್ಯಗಳು, ಮೊದ್ದುಮಣಿ, ಮಿಕ್ಕಿಮೌಸ್ ರಾಮನ್, ಬ್ಲಾಂಡಿ, ರಾಮುಶಾಮು, ಟಾರ್ಜನ್‌ಗಳೆಲ್ಲಾ ನಮ್ಮನ್ನು ರಂಜಿಸಲೆಂದೇ ಬಂದ ಆದಿ ಮಾನವರು.
ಎಫ್‌ಎಂನ ಜಾಕಿಯ ಸಂಭಾಷಣೆ, ಅವಳ ಎಡತಾಕುವ ಖನ್ನಡ, ಕಂಗ್ಲೀಷು ಸಾಕಲ್ಲಾ, ಅದಕ್ಕಿಂತ ದೊಡ್ಡ ಮನರಂಜನೆ ಬೇರೇನು ?
ನಿಮ್ಮ ಮೆಚ್ಚಿನ ಚಿತ್ರಗೀತೆಗಳು, ಎದೆ ತುಂಬಿ ಹಾಡಿದೆನು, ಕಾಮಿಡಿ ಟೈಮು, ಮೂವೀ ಚಾನೆಲ್ಲುಗಳ ನಿರಂತರ ಸಿನಿಮಾ ಪತ್ರಿಕೆಗಳ ಸಪ್ಲಿಮೆಂಟು, ಸಂಡೇ ಸ್ಟೋರಿ... ಯಾವುದುಂಟು ಯಾವುದಿಲ್ಲ ಒಟ್ಟಾರೆಯಾಗಿ ಮಾಧ್ಯಮಗಳು ಈಗ ಇನ್‌ಫೋಟೈನ್‌ಮೆಂಟುಗಳಾಗಿವೆ. ಎಲ್ಲೂ ಸಿಗದ ಸುಖ ಮಾಧ್ಯಮಗಳೆದುರು ಮುಖಾಬಿಲ್ಲೆಯಾದಾಗ ಸಿಗುತ್ತದೆ.ಅದೇ ರಂಜನೆ.

ಮಾರುಕಟ್ಟೆ ಮಾಧ್ಯಮಗಳ ಪ್ರಾಣವಾಯು. ಕೊಳ್ಳುಬಾಕ ಸಂಸ್ಕೃತಿಯೊಂದನ್ನು ಮಾಧ್ಯಮಗಳು ಪ್ರೇರೇಪಿಸುತ್ತವೆ ಎಂದು ಆರೋಪಿಸುವವರು ನಿಜಕ್ಕೂ ಯೋಚಿಸಬೇಕಾದದ್ದು, ಕೊನೆಗೂ ಈ ಮಾಧ್ಯಮಗಳ ಹರಿಕಾರರೇ ಈ ಕೊಳ್ಳುಬಾಕ ಸಂಸ್ಕೃತಿ ಎನ್ನುವುದನ್ನು.
ಇದೊಂದು ಥರ ದಂಧೆ. ದುಡ್ಡು ಹಾಕಿ ದುಡ್ಡು ಕೀಳೋದು.
ಮಾಧ್ಯಮಗಳು ಅವತಾರವಲ್ಲ. ಅದಕ್ಕೂ ಒಂದು ಕುಟುಂಬ ಅಂತ ಇದೆ.
ಆ ಕುಟುಂಬದಲ್ಲಿ ನೂರು-ಸಾವಿರ-ಲಕ್ಷ ಸದಸ್ಯರಿರುತ್ತಾರೆ. ಅವರಿಗೆಲ್ಲಾ ಅದು ಹ್ಯಾಂಡು ಟು ಮೌಥ್ ಬಿಸಿನೆಸ್. ಪೇಟ್ ಭರ್‌ಕಾ ಪ್ರಶ್ನ್. ಊಟದ ಬಟ್ಟಲು. ಮಾರುಕಟ್ಟೆ ಸಂಸ್ಕೃತಿಯನ್ನು ಬೆಳೆಸಿದರೇನೇ ಮಾಧ್ಯಮಕ್ಕೆ ಉಳಿಗಾಲ. ಏಕೆಂದರೆ ಅದೂ ಆ ಮಾರುಕಟ್ಟೆಯ ಒಂದು ಸರಕು ಮಾತ್ರಾ.ಅಥವಾ ಒಮ್ಮೊಮ್ಮೆ ಮತ್ತು ಯಾವತ್ತೂ ಅದೇ ಒಂದು ಮಾರುಕಟ್ಟೆ.

ಪತ್ರಿಕೆ ಎಂಬ ಛೂಮಂತರ್
ಪೇಪರ್ ಎಂಬ ಮಾಯಾಲೋಕ
೧೭ನೇ ಶತಮಾನದಲ್ಲಿ ಪತ್ರಿಕೆಗಳು ಹುಟ್ಟಿದವು.
ಟೆಲಿಗ್ರಾಫ್, ಟೆಲಿಫೋನ್ ಪತ್ರಿಕೆಯ ಪರಿಣಾಮವನ್ನು ದಟ್ಟಗೊಳಿಸಿದವು.
ಫೋಟೋಗ್ರಫಿ ಆಕರ್ಷಣೆ ಹೆಚ್ಚಿಸಿತು.
ವಾಹನ ಆವಿಷ್ಕಾರ ವಿಸ್ತಾರವನ್ನು ನೀಡಿತು.
ಪ್ರಜಾಸತ್ತೆಯ ಉಗಮ ಪತ್ರಿಕೆಗೆ ಭದ್ರತೆ ನೆಲೆ ನೀಡಿತು.
ಊಳಿಗಮಾನ್ಯ ಪದ್ಧತಿಯ ಅಳಿವು, ಮಾನವತಾ ವಾದದ ಚಿಂತನೆ, ಸಮಾಜವಾದದ ಪ್ರೇರಣೆ, ಜತೆ ಜತೆಯಾಗಿ ಟಿಸಿಲೊಡೆಯುತ್ತಿದ್ದವು.
ಪತ್ರಿಕೆಯ ಹುಟ್ಟುವಳಿ ಚೆನ್ನಾಗಿತ್ತು. ಅದರ ಜಾತಕ ಬಲವಾಗಿತ್ತು, ಗ್ರಹಗತಿ ಸೊಗಸಾಗಿತ್ತು.
ಮುದ್ರಣ ಯಂತ್ರದ ಜತೆಗೆ ಜನ್ಮ ತಾಳಿದ ಪತ್ರಿಕೆ ಮೂರು ಶತಮಾನಗಳಲ್ಲಿ ಪರ್ಯಾಯ ಸಾಮ್ರಾಜ್ಯವಾಗಿ ರೂಪುಗೊಂಡಿದೆ. ಪತ್ರಿಕೆಯದ್ದೇ ಒಂದು ಲೋಕ. ಅದೇ ಒಂದು ದೇಶ. ಅದಕ್ಕೇ ಒಂದು ಆಡಳಿತ. ಅದರದ್ದೇ ಒಂದು ವಿಶಾಲ ಸಾಮ್ರಾಜ್ಯ.
ಇದು ನಿರ್ವಿಘ್ನವಾಗಿ ನಡೆದು ಬಂದಿದೆ.
ಎಲ್ಲಾ ನಿರ್ಬಂಧಗಳು, ಪ್ರತಿಯೊಂದು ಪ್ರತಿರೋಧಗಳೂ ಪತ್ರಿಕಾ ಸಾಮ್ರಾಜ್ಯಕ್ಕೆ ಹೊನ್ನ ಕಳಶವಾಗಿದೆ.
೧೭೮೦ ರಲ್ಲಿ ಭಾರತದಲಿ ಜೇಮ್ಸ್ ಆಗಸ್ಟನ್ ಹಿಕ್ಕಿ-ದಿ ಬೆಂಗಾಲ್ ಗಜೆಟ್ ತಂದ.
೧೮೪೩ ರಲ್ಲಿ ಮಂಗಳೂರ ಸಮಾಚಾರವನ್ನು ಹರ್ಮನ್ ಮೊಗ್ಲಿಂಗ್ ಕ್ರೈಸ್ತ ಧರ್ಮ ಪ್ರಚಾರಕ್ಕೆ ಆರಂಭಿಸಿದ.
ದಿನ ಪತ್ರಿಕೆಗಳೆಂಬ ಕಾನ್ಸೆಪ್ಟ್ ನಮ್ಮಲ್ಲಿ ಆರಂಭವಾದದ್ದು ೧೯ನೇ ಶತಮಾನದ ಉತ್ತರಾರ್ಧದಲ್ಲಿ.
ಮುಂದಿನದ್ದು ಭಾಷಾವಾರು ಪತ್ರಿಕೆಗಳ ಆರಂಭ.
ಭಾರತೀಯರದ್ದೇ ಅಂತ ಪತ್ರಿಕೆ ಆರಂಭವಾದದ್ದು ೧೮೧೮ ರಲ್ಲಿ. ಅದೂ ಬಂಗಾಳಿಯದ್ದು. ಗಂಗಾಧರ ಭಟ್ಟಾಚಾರ್ಯ ಎಂಬಾತನದ್ದು.
ಮುಂಬೈನಾ ಸಮಾಚಾರ್ ಎಂಬ ಗುಜರಾತಿ ಪತ್ರಿಕೆ ಏಷ್ಯಾದ ಹಿರಿಯ ಪತ್ರಿಕೆ ಈಗಲೂ ವಯಸ್ಸಲ್ಲಿ ನಮ್ಮ ಮುತ್ತಜ್ಜ.
ರಾಜಾರಾಂ ಮೋಹನ್ ರಾಯ್-ಗಾಂಧೀಜಿ ತನಕ ಭಾರತೀಯರೆಲ್ಲಾ ಪತ್ರಿಕೆ ಮಾಡಿದ್ದು ಸಮಾಜ ಸುಧಾರಣೆಗಾಗಿ, ಕಂದಾಚಾರಗಳ ವಿಮುಕ್ತಿಗಾಗಿ, ಜತೆಗೆ ಹಲವು ಪತ್ರಿಕೆಗಳಿಗೆ ಪಾಶ್ಚಾತ್ಯ ಸಮಾಜದ ಆಕರ್ಷಣೆ ಇತ್ತು. ಅದನ್ನು ಭಾರತೀಯರಿಗೆ ಟಂಕಿಸುವಲ್ಲಿ ಅವುಗಳು ಯಶಸ್ಸೂ ಆದವು.
ಬ್ರಿಟಿಷ್ ಆಡಳಿತದಲ್ಲಿ ಭಾರತದಲ್ಲಿ ಬೆಳೆದದ್ದು ಪ್ರಗತಿಶೀಲ ಮನೋಧರ್ಮ ರಾಜರಾಡಳಿತವಿದ್ದ ನೆಲೆಗಳಲ್ಲಿ ಸಾರ್ವತ್ರಿಕ ಶಿಕ್ಷಣ, ಆರೋಗ್ಯ, ಆಸ್ಪತ್ರೆ ಮುಂತಾದ ಕ್ಷೇತ್ರಗಳು ಹುಟ್ಟಿದವು. ವಿಶ್ವವಿದ್ಯಾಲಯಗಳು ಆರಂಭವಾದವು.
ಇದರೊಂದಿಗೆ ಭಾರತೀಯರಲ್ಲಿ ಆಡಳಿತ ವ್ಯವಸ್ಥೆ ವಿರುದ್ಧ ಸಿಟ್ಟು ಮೂಡಲಾರಂಭಿಸಿತು. ಸಮಗ್ರ ದೇಶದ ಕಲ್ಪನೆ ಗರಿ ಮೂಡಿತ್ತು. ಪ್ರಾತಿನಿಧ್ಯದ ಬೇಡಿಕೆ ರೂಪಾಂತರಗೊಂಡು ಪೂರ್ಣ ಸ್ವಾತಂತ್ರ್ಯದ ಹಕ್ಕೊತ್ತಾಯವಾಯಿತು.
ಆಗ ಹುಟ್ಟಿದ ಟೈಮ್ಸ್ ಆಫ್ ಇಂಡಿಯಾ (೧೮೩೮), ಪಯೋನಿರ್ (೧೮೬೫), ಮದ್ರಾಸ್ ಮೈಲ್ (೧೮೬೮), ಅಮೃತ್ ಬಜಾರ್ ಪತ್ರಿಕಾ (೧೮೬೮), ಸ್ಟೇಟ್‌ಮನ್ (೧೮೭೫), ಹಿಂದೂ (೧೮೭೬) ಯುರೋಪಿನಲ್ಲಿ ಬೆಳೆಯುತ್ತಿದ್ದ ಸ್ವಾತಂತ್ರ್ಯ, ಸಮಾನತೆ, ...... ಭ್ರಾತೃತ್ವಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದವು.
ಹಾಗೇ ಆಗುತ್ತಿರುವುದು ಸ್ವತಃ ಆ ಪತ್ರಿಕೆಗಳಿಗೇ ಅರಿವಿಗೆ ಬಂದಿರಲಿಲ್ಲ.
ತಿಲಕ, ಗೋಖಲೆ, ಗಾಂಧೀಜಿ ವಿಚಾರಧಾರೆಗಳು ಪತ್ರಿಕೆಗಳ ಮೂಲಕವೇ ಹರಿದು ಬಂದವು.
ಸ್ವಾತಂತ್ರ್ಯದ ಜನಾಭಿಪ್ರಾಯವನ್ನು ಸಂಘಟಿಸುವಲ್ಲಿ ಪತ್ರಿಕೆಗಳು ಮುಖ್ಯ ಪಾತ್ರ ವಹಿಸಿದ್ದವು.
ಬ್ರಿಟಿಷ್ ಆಡಳಿತ ವೈಖರಿಯ ವಿಮರ್ಶೆಗೆ ಪತ್ರಿಕೆಗಳು ಜಾಗ ಬಿಟ್ಟುಕೊಟ್ಟಿದ್ದವು.
ಕನ್ನಡದಲ್ಲೂ ಈ ಕೆಲಸ ನಡೆಯಿತು.
ಮಂಗಳೂರ ಸಮಾಚಾರ ಕನ್ನಡ ಕೆಲಸಕ್ಕಾಗಿ ಹೆಸರನ್ನೇ ಬದಲಾಯಿಸಿಕೊಂಡಿತು (ಕಂನಡ ಸಮಾಚಾರ) ಎಂಬುದನ್ನು ಒಂದು ಕಾಲ ಘಟ್ಟವೆಂದೇ ನಾವು ಪರಿಗಣಿಸಬೇಕು.
ಕ್ರೈಸ್ತ ಮಿಶನರಿಗಳ ಪ್ರಭಾವ ತಗ್ಗಿಸಿಕೊಳ್ಳಲು ಅದು ಬಳ್ಳಾರಿಗೆ ಸ್ಥಳಾಂತರಗೊಂಡದ್ದನ್ನು ನಾವು ಗಮನಿಸಬೇಕು.
ಕರ್ನಾಟಕದ ಹಲವು ಊರುಗಳಿಂದ ಪತ್ರಿಕೆಗಳು ಆರಂಭಗೊಂಡದ್ದು ಒಂದು ಸಂಸ್ಕೃತಿಯ ಸ್ಥಾಪನೆಗೆ ಕಾರಣವಾದುದನ್ನು ನಾವು ನಿರಾಕರಿಸುವಂತಿಲ್ಲ.
ಮೈಸೂರು ಸಂಸ್ಥಾನದ `ಮೈಸೂರು ವೃತ್ತಾಂತ ಬೋಧಿನಿ (೧೮೫೯), ಕರ್ನಾಟಕ ಪ್ರಕಾಶಿಕಾ (೧೮೬೮), ಧಾರವಾಡದ ಜ್ಞಾನಬೋಧಕ (೧೮೬೧) ಮಂಗಳೂರಿನ ವಿಚಿತ್ರ ವರ್ತಮಾನ ಸಂಗ್ರಹ (೧೮೬೨)
ಸುದ್ದಿ-ಮನೋರಂಜನೆಯಲ್ಲಿ ಕೈತೊಳೆದುಕೊಂಡಿರಲಿಲ್ಲ ಎಂಬುದನ್ನು ಅಧ್ಯಯನಕಾರರು ಗುರುತಿಸಿದ್ದಾರೆ.
ಶಿಕ್ಷಣ, ರಾಜಕೀಯ, ಧಾರ್ಮಿಕ ಮತ್ತು ಸಾಹಿತಿಕ ಕೆಲಸಗಳನ್ನು ಆ ಕಾಲದಲ್ಲಿ ಆ ಪತ್ರಿಕೆಗಳು ಆಗಿನ ಸಂಪ್ರದಾಯಕ್ಕನುಗುಣವಾಗಿ ಯಥೋಚಿತವಾಗಿ ಮಾಡಿದ್ದನ್ನು ಒಪ್ಪಲೇ ಬೇಕು.
ಮಹಾರಾಜರ ಆಡಳಿತವನ್ನೇ ಒರೆಗಿಡುವ ಮಟ್ಟಕ್ಕೆ ಪ್ರಜಾಪ್ರಭುತ್ವದ ಕಿಡಿ ಇಟ್ಟದ್ದು ಮೈಸೂರು ರಾಜ್ಯದ ಪತ್ರಿಕೆಗಳು. ಆ ಕಾರಣಕ್ಕಾಗಿ ಅವುಗಳು ನಿರ್ಬಂಧಕ್ಕೀಡಾಗಿದ್ದವು ಎಂದರೆ, ಕನ್ನಡ ಪತ್ರಿಕೆಗಳು ೨೦ನೇ ಶತಮಾನದ ಮುಂಜಾವಿನಲ್ಲಿ ಹೊಸತನದತ್ತ ಹೇಗೆ ಚಿಂತಿಸಿದವು ಎಂದು ಬಿಗುಮಾನ ಬಂದು ಬಿಡುತ್ತದೆ.
ಕನ್ನಡ ಪತ್ರಿಕೆಗಳ ಸಾಹಿತ್ಯ ಕಾವ್ಯಗಳ ಪುಟಗಳು ಡಿವಿಜಿ ಅವರ ಪ್ರವೇಶದಿಂದ ಆರಂಭವಾಯಿತೆನ್ನುತ್ತದೆ ಇತಿಹಾಸ.
೧೯೦೭ ರಲ್ಲಿ ಅವರು `ಸೂರ್ಯೋದಯ ಪ್ರಕಾಶಿತ'ದಲ್ಲಿ ಕೆಲಸ ಹಿಡಿದು ಮುಂದೆ ತಾವು ದುಡಿದ ಪತ್ರಿಕೆಗಳಲ್ಲೆಲ್ಲಾ ಜ್ಞಾನದ ಹಸಿವನ್ನು ತಾವೂ ಇಂಗಿಸಿಕೊಂಡರು, ಇತರರಿಗೂ ಉಣಿಸಿದರು.
ವೀರಕೇಸರಿಯಿಂದ ತೊಡಗಿ ತಾಯಿನಾಡು, ವಿಶ್ವ ಕರ್ನಾಟಕ, ದೇಶಬಂಧು ತನಕ ಅದೆಷ್ಟೋ ಉದಾಹರಣೆಗಳಲ್ಲಿ ಕನ್ನಡತನವನ್ನು ಸ್ವಾತಂತ್ರ್ಯ ಪೂರ್ವದಲ್ಲೇ ಸೃಷ್ಟಿಸಿದ್ದು ಸಣ್ಣದೇನಲ್ಲ.
ಭಾರತೀಯರು-ಕನ್ನಡಿಗರ ಮನಸ್ಸುಗಳು ಬಹುಪಾಲು ಸ್ವಾತಂತ್ರ್ಯ ಚಳವಳಿಯಲ್ಲಿ ಮುಳುಗಿದ್ದರಿಂದ ಈ ಪತ್ರಿಕೆಗಳಿಗೆಲ್ಲಾ ಅದರ ಹೊರತಾಗಿ ಇರಲು ಸಾಧ್ಯವೇ ಆಗಿರಲಿಲ್ಲ.

ಕನ್ನಡ ಕಲೆ-ಸಂಸ್ಕೃತಿ
ಪತ್ರಿಕೆಗಳು
ಮತ್ತು
ಅಪೂರ್ಣ ನಾವು.
೧೯ನೇ ಶತಮಾನದಲ್ಲಿ ಕಲೆಗೆ ಮೀಸಲಾಗಿದ್ದ ಯಾವ ಪತ್ರಿಕೆಗಳೂ ಇರಲಿಲ್ಲ.
ಕಲೆ, ಕಲಾಗಾರಿಕೆ, ಸಂಸ್ಕೃತಿ ಆಗ ಪತ್ರಿಕಾ ಭಾಷೆ'ಗೆ ಒಗ್ಗಿರಲಿಲ್ಲ ಅಥವಾ ಅವುಗಳು ಪತ್ರಿಕೆಗಳಲ್ಲಿ ಸ್ಥಾನ-ಮಾನ ಗಿಟ್ಟಿಸುವ ಆಸಕ್ತಿಯನ್ನು ಆ ಕ್ಷೇತ್ರದವರಾಗಲಿ, ಇತ್ತ ಮಾಧ್ಯಮದವರಾಗಲಿ ಹೊಂದಿರಲಿಲ್ಲ.
ಬಹುಶಃ ಹಾಗೊಂದು `ಪ್ರಚಾರ'ದ ತಂತ್ರ ಇದೆ ಎಂದೇ ಯಾರಿಗೂ ಗೊತ್ತಿರಲಿಲ್ಲ.
ಗೊತ್ತಿದ್ದರೂ ಸೀಮಿತ ಪ್ರಸಾರದ ಪ್ರಚಾರ ಅಗತ್ಯ ಎನಿಸಿರಲಿಲ್ಲ.
ಪತ್ರಿಕೆಗಳ ಪ್ರಚಾರದ ಕಾಲಘಟ್ಟವೂ ಅದಲ್ಲ.
ಕಲೆ-ಸಂಸ್ಕೃತಿ ಈ ಕಾಲ ಘಟ್ಟದಲ್ಲಿ ಬದಲಾವಣೆಯ ಹಾದಿ ತುಳಿದಿರಲಿಲ್ಲ. ಶತಮಾನದ ಪರಂಪರೆಯನ್ನು ಧಿಕ್ಕರಿಸಿರಲಿಲ್ಲ. ಹೊಸ ಬೇರು ಬಿಟ್ಟಿರಲಿಲ್ಲ, ಹೊಸ ಚಿಗುರು ಹುಟ್ಟಿರಲಿಲ್ಲ.
೨೦ನೇ ಶತಮಾನದಲ್ಲಿ ಸಾಹಿತ್ಯ-ಕಲೆ-ಸಂಸ್ಕೃತಿಗಳಿಗೆ ಪತ್ರಿಕೆಗಳು ಅಡ್ಡೆಯಾದವು. ಆ ಅಡ್ಡೆಗಳನ್ನು ಧಾರಾಳವಾಗಿ ಬಳಸಿಕೊಳ್ಳುವುದು ಶುರುವಾಯಿತು.
೧೯೨೦ ರ ವೇಳೆಗೆ ಕನ್ನಡದಲ್ಲಿ ೪೦ ಕ್ಕೂ ಅಧಿಕ ಪತ್ರಿಕೆಗಳು ಇದ್ದವು. ಅವುಗಳಲ್ಲಿ ಕಾವ್ಯ, ಕಥೆ, ಕಾದಂಬರಿಗಳಿಗೆಂದೇ ತಲಾ ಎರಡು ಪತ್ರಿಕೆಗಳು ಮೀಸಲಾಗಿದ್ದವು.
ಯಕ್ಷಗಾನ,ಗಾಯನ,ಸಂಗೀತ ರಂಗಭೂಮಿ,ವ್ಯಂಗಚಿತ್ರ,ಜಾನಪದ,ಭರತನಾಟ್ಯ,ಚಿತ್ರಕಲೆ ಸಿನಿಮಾಗಳಿಗೆ ಮೀಸಲಾಗಿ ಹಲವಾರು ಬಾರಿ ಹಲವಾರು ಪತ್ರಿಕೆಗಳು ಬಂದು ಹೋಗಿವೆ.
ಸಿನೆಮಾ ರಂಗದ ಕೆಲವೊಂದು ಪತ್ರಿಕೆಗಳು ಅದರ ಥಳಕಿಗಾಗಿಯೇ ಇರಬೇಕು,ಬದುಕಿಕೊಂಡದ್ದು ಬಿಟ್ಟರೆ ಯಾವ ರಂಗದ ಯಾವ ಪತ್ರಿಕೆಗಳು ಉಳಿಯಲಿಲ್ಲ.ಅವುಗಳು ರೋಗಗ್ರಸ್ತವಾಗುತ್ತಾ ಹಾಸಿಗೆ ಹಿಡಿದು ಕಾಲವಶವಾದ್ದು ಮಾತ್ರಾ ಸತ್ಯ.ಅಡಿಗರ ಸಾಕ್ಷಿ ಇದಕ್ಕೊಂದು ಉದಾಹರಣೆ.ಇಂದಿಗೂ ಅಂದಿಗೂ ಮೀಸಲು ಪತ್ರಿಕೆಗಳ ದೌರ್ಬಲ್ಯವೇ ಅದು.ಅಡಿಕೆಗೇ ಅಂತ ಪತ್ರಿಕೆ ಮಾಡಿದರೆ ಅಡಿಕೆ ಬೆಳೆಗಾರರಿಗೇ ಬೋರು ಬಂದುಬಿಡುತ್ತದೆ. ಕಥೆ,ವಿಮರ್ಶೆಗೇ ಅಂತ ಪೇಪರ್ ಮಾಡಿದಾಗ ಸಾಹಿತಿಗಳು ಮತ್ತೆ ಮತ್ತೆ ಪ್ರೋತ್ಸಾಹಿಸುವುದಿಲ್ಲ.ಅಕ್ಕಿ ಮಿಲ್ಲಿನ ಸಮಾಚಾರ ಅಂತ ಒಬ್ಬರು ಪತ್ರಿಕೆ ಮಾಡಿದರು.ಆಮೇಲೆ ಅವರು ಏನು ಮಾಡುತ್ತಿದ್ದಾರೆ ಎಂದು ಕೇಳಬೇಡಿ,ತೌಡು ಕುಟ್ಟುತ್ತಿದ್ದಾರೆ.
ಸಾಹಿತ್ಯಕ್ಕೆ ಎಂದು ಮೀಸಲಾಗಿರುವುದಕ್ಕಿಂತಲೂ ಸಾಹಿತ್ಯ ಅಂತ ಒಂದು ಪುಟ ಮಡಗಿದ ಪತ್ರಿಕೆಗಳು ಭರಪೂರ ಯಶಸ್ಸು ಕಂಡಿವೆ.ಇಂದಿಗೂ ಭಾನುವಾರದ ಕತೆಗಳಿಗೆ ,ದೀಪಾವಳಿಯ ವಿಶೇಷಾಂಕಗಳಿಗೆ ಕಾಯುವ ಓದುಗರಿದ್ದಾರೆ.
ಯಾರೋ ಹೇಳಿದ ನೆನಪು,ಸೆಕ್ಸ್ ಪುಸ್ತಕ ಕೂಡಾ ಬೋರ್ ಆಗುತ್ತಿದೆ ಎಂದು.ರತಿವಿಜ್ಞಾನ,ಸುರತಿಯಂಥ ಪಾಕ್ಷಿಕಗಳು ಮುಚ್ಚಿದ್ದು ಇದೇ ಕಾರಣಕ್ಕೇ ಇರಬೇಕು.
ಆದರೆ ಕಾಲದಿಂದ ಕಾಲಕ್ಕೆ ಬದಲಾಗಬೇಕು.ಕಾಲವೇ ಬದಲಾಗುವಾಗ ನಾವೇನು ಲೆಕ್ಕ.ಕಾಲದೊಂದಿಗೆ ಓಡದಿದ್ದರೆ ನಿಂತಲ್ಲೇ ಕುಸಿತ.ಆದರೆ ಮನೋಧರ್ಮ ಬದಲಾಗುವುದಿಲ್ಲ.ಮಾನವ ಸಹಜ ಕುತೂಹಲ,ಸ್ವೀಕಾರ,ರಸಗ್ರಹಣ ಮುಂತಾಗಿ ಯಾವ ಕ್ರಿಯೆಗಳಿಗೂ ಬದಲಾವಣೆಯಿಲ್ಲ.ಇನ್ನೊಂದು ಶಿಲಾಬಾಲಿಕೆ ಬಂದರೆ ಜನ ಈಗಲೂ ನೋಡುತ್ತಾರೆ.ಅಂಥ ಶಿಲಾಬಾಲಿಕೆಯನ್ನು ಕೆತ್ತುವ ಢಕಣಾಚಾರಿಗಳು ಈಗಲೂ ಇದ್ದಾರೆ.ಬೇಲೂರು ಕಟ್ಟುವ ವಿಷ್ಣುವರ್ಧನ ಬೇಕು ಅಷ್ಟೇ.
ಮನುಷ್ಯ ಪೂರ್ಣ ಏನಲ್ಲ.ಆತ ಎಂದೂ ಪೂರ್ಣತ್ವ ಪಡೆಯಲಾರ.ಅಪೂರ್ಣದತ್ತ ತೆರಳುವವನು ಬದುಕನ್ನು ಸ್ವೀಕರಿಸಿದಾತ.ಪೂರ್ಣದ ಹಂಬಲ,ಹಪಾಹಪಿ ಮತ್ತೊಮ್ಮೆ ಆತನನ್ನು ನಿರುಪಯುಕ್ತಗೊಳಿಸೀತು.ಸಾರ್ಥಕತೆ ಇರೋದು ಅಪೂರ್ಣನಾಗೋದರಲ್ಲೇ.ಓದುಗರೂ ಹಾಗೆಯೇ.ಅವರೇನು ಇನ್ನೊಂದು ಪ್ರಾಣಿವರ್ಗವಲ್ಲ.ಅವರ ಅತೃಪ್ತಿ ಸಹಜ.ಪೂರ್ಣತ್ವದ ತುಡಿತ,ಅಪೂರ್ಣತೆಯತ್ತ ದಾಪು.ಬರಹಗಾರರು ಬೇರೆಲ್ಲಿಂದಲೋ ಬಂದವರಲ್ಲ.ಓದುಗರ ನಡುವಿಂದ ಎದ್ದು ಬಂದವರು ಅವರು.ಬರೆದ ಬಳಿಕ ಎಲ್ಲಾ ಬರಹಗಾರರೂ ಓದುಗರೇ.
ಏಕೆ ಬರೆಯುತ್ತೀರಿ ಎಂದು ಕೇಳುತ್ತಾರೆ.ಓದುವುದಕ್ಕೆ ಎಂದರೆ ಅದು ತೀರಾ ಅಸಂಗತ ಉತ್ತರ ಎಂದು ಹೇಳುತ್ತಾರೆ.ಏಕೆ ಬರೆಯುತ್ತೇನೆ ಎಂದರೆ ಅದು ನನಗಿಷ್ಟ ಅದಕ್ಕೆ. ನನ್ನಿಷ್ಟವನ್ನು ನಿಮ್ಮದೂ ಮಾಡಬೇಕೆಂದು ತೋರಿಸಿದ್ದೇನೆ ಅಷ್ಟೇ. ನನ್ನ ಸಂತೋಷವನ್ನು ನನ್ನಂತೆ ನೀವೂ ಎಂದು ಭಾವಿಸಿ ಹಂಚಿಕೊಳ್ಳುತ್ತೇನೆ.ನಿಮಗಿಷ್ಟವಾದರೆ ನನಗೂ ಸಂತೋಷ..ಬರಹದ ಸಾರ್ಥಕತೆ ಬೇರೇನು?
ಈ ಭಾವನೆಗಳ ವಿನಿಮಯ,ಕೊಡುಕೊಳ್ಳುವಿಕೆ ಹಂಚೋಣ ಎಂಬಿತ್ಯಾದಿ ಪ್ರಕ್ರಿಯೆಗಳು ಒಂದು ಕಾಲಘಟ್ಟದಲ್ಲಿ,ಒಂದು ದೇಶಿಯ ನೆಲೆಯಲ್ಲಿ,ಒಂದು ಜನಮಾನಸದಲ್ಲಿ ನಡೆಯುತ್ತಾ ಇರುತ್ತದೆ.ಆಗ ಉಂಟಾಗುವ ಕರ್ಷಣಗಳು,ಲಹರಿಗಳು,ನಾವು ಪಡೆಯೋ ಸಂತೋಷಗಳು,ನಮಗೆ ಉಂಟಾಗುವ ಅರಿವುಗಳು ಒಟ್ಟಾಗಿ,ಒಟ್ಟಾರೆಯಾಗಿ ಒಂದು ಬಾಂಧವ್ಯವನ್ನು ಹೊಸೆಯುತ್ತವೆ.ಒಂದು ಲಯವನ್ನು,ಒಂದು ನಿನಾದವನ್ನು ಮೂಡಿಸುತ್ತವೆ.ಅದೇ ಬರಹದ ಸಾರ್ಥಕ್ಯ.ಅದುವೇ ಪತ್ರಿಕೆಯ ಧನ್ಯತೆ.ಅದೇ ಅಕ್ಷರಗಳೆಲ್ಲಾ ಗುಂಪುಗುಂಪಾಗಿ ಸೇರಿ ಕಟ್ಟುವ ಸಾಮ್ರಾಜ್ಯ,ಸಂಸ್ಕೃತಿ.
ಅದಕ್ಕೇ ನಾವು ಈಗಲೂ ದಾಸರಪದಗಳನ್ನು ಗುಣುಗುಣಿಸೋದು,ಶರೀಫರ ಹಾಡುಗಳನ್ನು ಹಾಡೋದು,ಯಕ್ಷಗಾನ ನೋಡೋದು,ಹರಿಕಥೆ ಆಲಿಸೋದು,ಬೇಂದ್ರೆ, ಅಡಿಗ,ನರಸಿಂಹಸ್ವಾಮಿ ನಮ್ಮ ಮನೆಯವರೇ ಅಂತ ಆಗಿಬಿಡೋದು..
ಮತ್ತು 
ಗೋಪಾಲಕೃಷ್ಣ ಕುಂಟಿನಿಯೂ ನಿಮಗೆ ಇಷ್ಟವಾಗೋದು..