20090104

ಮೊಬೈಲ್ ಹರಡಿತು ಮಾಯಾಜಾಲ


ಗುಹಾಂತರ್ಗತ-೧೧

ಕಾರು ನಿಂತಿತು.ಮೊದಲಾಗಿ ಒಂದು ಕಪ್ ಚಹ ಕುಡಿಯೋಣ. ಆಮೇಲೆ ರೂಮಿಗೆ ಹೋಗಿ ಫ್ರಶ್ ಆಗೋಣ ಎಂದಿತ್ಯಾದಿ ಸಲಹೆ ನೀಡಿದವನು ಮಹೇಂದ್ರ.
ಅವನಿಗೆ ಸಂಗಮಕ್ಷೇತ್ರದಲ್ಲಿಯ ಹೆದ್ದಾರಿ ಪಕ್ಕದ ದೊಡ್ಡ ಹೋಟೇಲುಗಳೆರಡರಲ್ಲಿ ತಲಾ ಒಂದೊಂದು ರೂಮು ಖಾಯಾಮ್ಮು.
ರಾತ್ರಿ ಗುಂಡು ಹಾಕೋದಕ್ಕೆ ಅಂತಾನೇ ಅದನ್ನು ಇಟ್ಟುಕೊಂಡಿದ್ದಾನೆ ಆತ.
ಬೆಂಗಳೂರಿಂದಲೋ ಮುಂಬೈಯಿಂದಲೋ ಅನೇಕ ಬಾರಿ ಗಲ್ಫ್‌ನಿಂದಲೂ ಅವನ ಸ್ನೇಹಿತರು ಬಂದಾಗಲೆಲ್ಲಾ ಉಳಿದುಕೊಳ್ಳೋದು ಮಹೇಂದ್ರನ ಈ ರೂಮುಗಳಲ್ಲೇ.
ಅದೇನು ವ್ಯವಹಾರ ವಹಿವಾಟು ಮಾಡುತ್ತಾನೋ ಯಾರಿಗೂ ಗೊತ್ತಿಲ್ಲ. ಆದರೆ ಯಾವತ್ತೂ   ದುಷ್ಟನಲ್ಲ.ಸದಾ ನಗುನಗುತ್ತಾ ಇರುತ್ತಾನೆ. ಅವನದ್ದೂ ಅಂತ ಕಾರಿಲ್ಲ. ಆದರೆ ಕಾರು ಇಲ್ಲದೇ ಅವನಿರುವುದೇ ಇಲ್ಲ.
ಈ ಸರ್ತಿ ಯಾರ ಕಾರಿದು ಎಂದ ಗೋಪಾಲ.
ಅವನು ಆಗಲೇ ಕೇಳಿದ್ದ ಅಸ್ವಸ್ಥ ಅನಾಹುತಕಾರಿ ಪ್ರಶ್ನೆ ಮರೆಯಲೆಂಬಂತೆ.
ಸದ್ಯಕ್ಕೆ ನಮ್ಮದೇ ಎಂದ ಮಹೇಂದ್ರ ಅದರ ಗುಟ್ಟುಬಿಡಟ್ಟುಕೊಡದವನ ಹಾಗೇ.
ಆಮೇಲೆ ಆ ಮೂರು ಮಂದಿ ಚಹ ಕುಡಿದು ರೂಮಿನೊಳಗೆ ಸೇರಿಕೊಂಡರು.
ಗೋಪಾಲ ಹಾಸಿಗೆಯಲ್ಲಿ ಬೋರಲು ಬಿದ್ದುಕೊಂಡ.
ಅವನಿಗೆ ರೂಪಿಯ ಚಿತ್ರ ಕಣ್ಣಿಂದ ಮರೆಯಾಗಿರಲಿಲ್ಲ. ಮಹೇಂದ್ರ ಆ ಪ್ರಶ್ನೆಯನ್ನು ಈ ಹಗಲೂ ಅಲ್ಲದ ಇರುಳೂ ಅಲ್ಲದ ವೇಳೆ ಏಕೆ ಕೇಳಿದ್ದಾನೆ ಎಂಬ ದೊಡ್ಡ ಕುತೂಹಲ ಗೋಪಾಲನ ಮುಂದಿತ್ತು.
ಒಬ್ಬೊಬ್ಬರಾಗಿ ಸ್ನಾನ ವಗೈರೆ ಮುಗಿಸಿ, ಆಮೇಲೆ ನಾವು ಪೊಲೀಸ್ ಠಾಣೆಗೆ ಹೋಗಿ ವಿಚಾರಿಸಬೇಕು ಎಂದು ರಾಧಾಕೃಷ್ಣ ಸಲಹೆ ನೀಡಿದ.
ಠಾಣೆಗೆ ಏಕೆ ಎಂದು ಗೋಪಾಲ ಮತ್ತೊಮ್ಮೆ ಕೇಳಿದಾಗ ಮಹೇಂದ್ರ ನೋಡಿ ಸ್ವಾಮೀ ನೀವು ಪತ್ರಕರ್ತರಿದೀರಲ್ಲ, ನಿಮಗೆ ವ್ಯಾವಹಾರಿಕ ಜ್ಞಾನ ಎಂಬುದೇ ಇಲ್ಲ. ಸ್ಕೂಟರ್ ಬೆಂಕಿ ಹತ್ತಿಕೊಂಡಿದೆ ಎಂದರೆ ಅದು ಸಣ್ಣ ಸಂಗತಿಯಲ್ಲ,ನಾವಾಗಿಯೇ ಪೊಲೀಸರಿಗೆ ದೂರು ನೀಡಬೇಕು..ತಪ್ಪಿದರೆ ಮತ್ತೆ ಕಷ್ಟಪಡಬೇಕು ಎಂದು ಮುಂಜಾಗರೂಕತಾ ಸಲಹೆಗಳನ್ನು ಬಿತ್ತಿದ.
ಗೋಪಾಲ ಮತ್ತೆ ಮಾತನಾಡಲಿಲ್ಲ.
ಮಹೇಂದ್ರ ಸ್ನಾನಕ್ಕೆ ಒಳಗೆ ಹೋಗುತ್ತಾನೆ ಎಂದು ರಾಧಾಕೃಷ್ಣನೂ ಗೋಪಾಲನೂ ಕಾಯುತ್ತಿದ್ದರು.
ರಾತ್ರಿ ಇಡೀ ತಾನು ಅನುಭವಿಸಿದ್ದು ಗೋಪಾಲನಿಗೆ ಕಾಡುತ್ತಿದ್ದವು. ಅವುಗಳಿಂದೇನೂ ತಾನು ಹೆದರಿಕೊಂಡಿಲ್ಲ ಎಂದು ಅವನಿಗೆ ಗೊತ್ತಾಗಿತ್ತು. ಸ್ಕೂಟರ್‌ಗೆ ಬೆಂಕಿ ಬಿದ್ದುದಕ್ಕೆ ಯಾಕೆ ಪೊಲೀಸರಿಗೆ ಹೇಳಬೇಕು ಎಂದು ಆತ ಯೋಚಿಸುತ್ತಿದ್ದ. ಹೇಳದೇ ಇದ್ದರೆ ಏನಾಗುತ್ತದೆ ಎಂದು ತರ್ಕಿಸಿದ.
ಆ ಹೊತ್ತಿಗೇ ಮಹೇಂದ್ರ ಮತ್ತೆ ಅದೇ ಪ್ರಶ್ನೆ ಕೇಳಿದ.
ರೂಪಿ..ಸ್ಟೋರಿ ಏನಾಯಿತು ಎಂದು ಹೇಳಲೇ ಇಲ್ಲ..
ಆ ಹಾಸಿಗೆಗಳಲ್ಲಿ ಅವರೆಲ್ಲಾ ಅಸ್ತವ್ಯಸ್ತರಾಗಿ ಬಿದ್ದುಕೊಂಡಿದ್ದರು. ರಾಧಾಕೃಷ್ಣ ಸಿಗರೇಟು ಹಚ್ಚಿದ್ದ.ಅದರ ಘಾಟು ವಾಸನೆ ಗೋಪಾಲನ ಶರಟಿಗೆ ಅಂಟುತ್ತಿತ್ತು.ಮಹೇಂದ್ರನ ಮುಖದಲ್ಲಿ ಯಾವುದೋ ಕುಚೋದ್ಯ ಕಂಡಂತಾಯಿತು.
ಏನು ಹೇಳೋಣ ಎಂದು ಗೋಪಾಲ ನಿರ್ಧರಿಸುವ ಮೊದಲೇ ಮಹೇಂದ್ರನೇ..
ಅವಳು ಕಾಣೆಯಾಗಿದ್ದಾಳೆ ಅಲ್ಲಾ..ಎಂದ.
ತನಗೇನೂ ಗೊತ್ತಿಲ್ಲ ಎಂದುಬಿಟ್ಟರೆ ಹೇಗೆ ಎಂದು ಗೋಪಾಲ ಕ್ಷಣಕಾಲ ಯೋಚಿಸಿದ. ಹೇಗಿದ್ದರೂ ಗೊತ್ತಿರುವುದನ್ನಂತೂ ಹೇಳಲಾಗದು. 
ಆದ್ದರಿಂದ ''ಹಾಗಂತ ಹೇಳಲಾಗುತ್ತಿದೆ'' ಎಂದ ಗೋಪಾಲ.
ಹೌದಾ..ಹಾಗಾದರೆ ಅವಳು ಇಂಥಾ ಕಡೆ ಇದ್ದಾಳೆ ಅಂತ ನಾನು ಹೇಳುತ್ತೇನೆ..
ನೀವು ಅರಿಭಯಂಕರ ಚಾನಲ್ಲಿನವರು ದೊಡ್ಡ ಸುದ್ದಿ.ಏನದು.ಬ್ರೇಕಿಂಗು ಸುದ್ದಿ ಮಾಡುತ್ತೀರಾ..
ಮಹೇಂದ್ರ ಏನೋ ಛಾಲೆಂಜಿಂಗು ಎಂಬ ಹಾಗೇ ಮಾತಾಡುತ್ತಿದ್ದಾನೆ.
ಗೋಪಾಲ ಪೆಚ್ಚುಪೆಚ್ಚಾಗಿ ನಕ್ಕ.
ರಾಧಾಕೃಷ್ಣಾ..ಆ ಮೊಬೈಲ್ ಇತ್ತ ಕೊಡು ಎಂದ ಮಹೇಂದ್ರ.
ರಾಧಾಕೃಷ್ಣ ಮೊಬೈಲ್ಲನ್ನು ಎಸೆದ.ಕ್ಯಾಚ್ ಮಾಡಿದ ಮಹೇಂದ್ರ.ಅದನ್ನು ಬೆರಳುಗಳಲ್ಲಿ ಆಡಿಸಿ..ಒಂದು ಫೈಲ್ ಓಪನ್ ಮಾಡಿದ..
ಗೋಪಾಲ ಅವಕ್ಕಾದ..
ರಾಧಾಕೃಷ್ಣ ಏನನ್ನೋ ಹೇಳಲು ಹೊರಟ.ಮಹೇಂದ್ರ ನೋ..ಪ್ಲೀಸ್ ಮೊದಲು ಈ ಮೀಡಿಯಾ ಮಹಾಶಯ ಇದನ್ನು ನೋಡಲಿ ಎಂದ.
ಗೋಪಾಲನ ಎದುರು ಮಹೇಂದ್ರ ಆ ಮೊಬೈಲ್ಲನ್ನು ಇಟ್ಟು ಎದ್ದುಹೋದ. ರಾಧಾಕೃಷ್ಣ ಹಾಸಿಗೆಯಲ್ಲಿ ಹೊದ್ದುಕೊಂಡ.
ಗೋಪಾಲನಿಗೆ ತಾನೊಬ್ಬನೇ ಎಂಬ ಒಂಟಿತನ ಅನಿಸಿತು. ಭಯ ಹತ್ತಿತು.ಕಟಾರದ ಆ ಕಾಡಲ್ಲಿ ಆ ರಾತ್ರಿ ರೂಪಿಯ ಆ ಶವವನ್ನು ಎತ್ತಿದಾಗಲೂ ಯಾವ ರೀತಿಯೂ ಭಯ ಅವನನ್ನು ಕಾಡಿರಲಿಲ್ಲ. ಆದರೆ ಈ ಹಗಲು ಇದನ್ನು ನೋಡುತ್ತಿರುವಾಗ ಅವನು ಬೆಚ್ಚಿಬಿದ್ದಿದ್ದ.
ಆ ಪುಟ್ಟ ಮೊಬೈಲ್‌ನಲ್ಲಿ ದಾಖಲಾಗಿ ಪ್ರದರ್ಶಿತವಾಗುತ್ತಿರುವ ಚಿತ್ರ ರೂಪಿಯದ್ದೇ..
ಅನುಮಾನವೇ ಬೇಡ..ಅದು ರೂಪಿಯೇ..
ಕಟಾರದ ಕಾಡಲ್ಲಿ ಆ ಕುಮಾರಧಾರೆಯ ತಟದಲ್ಲಿ ಕಂಡಿದ್ದ ಅದೇ ರೂಪಿ.
ಅವಳು ಆಕಾಶನೀಲಿ ಬಣ್ಣದ ಸಲ್ವಾರ್ ಕಮೀಜ್ ತೊಟ್ಟಿದ್ದಳು..
ಇಲ್ಲೂ ಅದೇ..
ರೂಪಿ..ಎಂದ ಗೋಪಾಲ.
ಅವನು ಹಾಗೆನ್ನುವಾಗ ಅಲ್ಲಿ ಯಾರೂ ಇರಲಿಲ್ಲ.
ರೂಪಿ ವಿಶಾಲ ಕೋಣೆಯೊಂದರಲ್ಲಿ ಐಷಾರಾಮಿ ಫರ್ನಿಚರ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಳೆ..
ಅವಳು ಆಗಾಗ ನಗುತ್ತಿದ್ದಾಳೆ.
ಮಾತು ತುಂಬಾ ಆPಗೆ ಸಂಗಮಕ್ಷೇತ್ರದ ಅನುಭವಗಳಿವೆ..
ಅವಳ ಬಾಲ್ಯ, ಯೌವನ..
ಅದನ್ನು ಆಕೆ ವಿವರಿಸುತ್ತಿದ್ದಾಳೆ..ಚಿಣ್‌ಮಾಮರ ಕೋಲ್ಡ್‌ಹೌಸ್..ಗಾಂಧೀಪಾರ್ಕು,ಟಯರಿನಂಗಡಿ,ಸಿನಿಮಾಟಾಕೀಸು,ಬಾವುಸಾಹೀಬನ ಫ್ಯಾನ್ಸಿ ಸ್ಟೋರು..
ಆಮೇಲೆ ಸ್ವಲ್ಪ ಹೊತ್ತು..ಚಿತ್ರ ಯಾವುದೋ ಅಡುಗೆ ಕೋಣೆಯಲ್ಲಿ ಅವಳು ಏನನ್ನೋ ಬೇಯಿಸುತ್ತಿರುವುದನ್ನು ತೋರಿಸುತ್ತಿದೆ.
ಕಟ್
ಮತ್ತೆ ದೃಶ್ಯಾವಳಿ ಆರಂಭವಾಗುವುದು ರೂಪಿ ತಾನು ಸಂಗಮಕ್ಷೇತ್ರದ ಪೊಲೀಸ್‌ಠಾಣೆಯಿಂದ ಹೊರಟ ಬಳಿಕದ್ದು..
ಆಕೆಯೇ ಹೇಳುತ್ತಿದ್ದಾಳೆ..
ಆ ಫಟಿಂಗರು ನಮ್ಮ ಪ್ರೀತಿಗೆ ಹಾಗೇ ಅಡ್ಡಿಮಾಡಿ ಏನು ಗಿಟ್ಟಿಸಿಕೊಂಡರೋ ಗೊತ್ತಿಲ್ಲ..ಆದರೆ ನಾನು ಕೇಳುತ್ತಿದ್ಧೇನೆ ಈ ಪ್ರೀತಿ ಏನು ತಪ್ಪು ಅಂತ.
ಮಧ್ಯೆ ಮಧ್ಯೆ ಸ್ವರ ತುಂಡಾಗುತ್ತಿದೆ..
ನನಗೆ ಆದರ್ಶನಿಂದ ಪ್ರೀತಿ ಸಿಕ್ಕಿತು.ಅದನ್ನು ನಾನು ಪಡೆದುಕೊಂಡೆ..ಏನಾಯಿತು ಈಗ..
ನೀವು..ಅದು ಅನೈತಿಕ ಅಂತೀರಿ..ಅಲ್ಲಾ.
ಮತ್ತೆ ಕಟ್.
ಯಾವ ಗಂಡಸು ತಾನು ತನ್ನ ಹೆಂಡತಿ ಜೊತೆ ಮಾನಸಿಕವಾಗಿ ಮಲಗುತ್ತಾನೆ..ಯಾವ ಹೆಂಡತಿ ತನಗೆ ಈ ದೇಹಸುಖ ಸಿಗುತ್ತಿರುವುದು ತನ್ನ ಗಂಡನಿಂದ ಅಂತ ಆ ಉತ್ತುಂಗದಲ್ಲಿ ನಂಬುತ್ತಾಳೆ.
ಇದೆಲ್ಲಾ ಜಸ್ಟ್ ಬಫ್..
ಯಾವುದೋ ಸುಖವನ್ನು ಹುಡುಕಿ ನಾನು ಹೋಗಲಿಲ್ಲ..
ಕಟ್ 
ಕಟ್
ಆಮೇಲೆ ನನಗೆ ಹಿಂಸೆ ಅನಿಸಿತು. ಈ ಛಾನಲ್‌ನವರು ಬೇರೆ ಬೆನ್ನುಬಿದ್ದಿದ್ದಾರೆ..
ಹೇಗಾದರೂ ಪಾರಾಗಬೇಕು..
ಕಟ್
ಕಟ್
ಸುಹಾಸ್ ಕಾಯುತ್ತಿದ್ದ..
ಕಟ್
ಕಟ್
ಆದರ್ಶನಿಗೆ 
ಕಟ್
ರೂಪಿ ಮುಖ ಮುಚ್ಚಿಕೊಂಡಳು.
ಅವಳು ಅಳುತ್ತಿದ್ದಳು.
..ಆಫ್
ಗೋಪಾಲ ತಲೆ ಎತ್ತಿದ.
ಮಹೇಂದ್ರ ಎದುರಿಗೆ ನಿಂತಿದ್ದ.ಅವನು ಮೊಬೈಲ್ ಎತ್ತಿಕೊಂಡ..
ಹೇಗಿದೆ..?ಅಂದ.
ರಾಧಾಕೃಷ್ಣನೂ ಬಾಗಿಲು ಸರಿಸಿ ಬಂದು ನಿಂತ.
ಗೋಪಾಲ್ ಇಮ್ಮೀಡಿಯೆಟ್ ಈ ಸ್ಟೋರಿ ಪಿಕ್‌ಅಪ್ ಮಾಡ್ಕೋ..
ಸ್ಕೂಪ್ ಅಂದರೆ ಸ್ಕೂಪ್..
ಯಾರೋ ಹೇಳಿದ ಹಾಗಾಯಿತು..ಮಹೇಂದ್ರ ಮತ್ತೊಮ್ಮೆ ಹೇಳಿದ..
ಇದು ನೋಡಿ ಸ್ಟೋರಿ ಅಂದರೆ..ನೀವು ಟಿವಿಯವರು ಯಾವಾಗ ಮಾಡಲು ಸಾಧ್ಯ ಇದನ್ನು?
ನಾನು ನಾನು ಕೇವಲ ಲಾಯಿಲೋಟು ಮಹೇಂದ್ರ ಮಾಡಿ ತಂದಿದ್ದೇನೆ ನೋಡ್ರೀ..
ಗೋಪಾಲ ಕೆಟ್ಟದಾಗಿ ಕಿರಿಚಿದ್ದು ಆಗಲೇ..
ಬೋಳಿಮಕ್ಕಳೇ..ಕಾನ್ಸ್‌ಪಿರೆಸಿ ಮಾಡ್ತಾ ಇದ್ದೀರಾ..




20090102

ರೂಪಿ ಕಂಡಳು ರೂಪಿ ಕಂಡಳು


ಗುಹಾಂತರ್ಗತ-೧೦

ನ್ಯೂಸ್ ರೀಡರ್ ಲೈವ್ ಕೇಳುತ್ತಿದ್ದಾನೆ. ಗೋಪಾಲ ಫೋನ್ ಇನ್ ಮತ್ತು ಆಗೊಮ್ಮೆ ಈಗೊಮ್ಮೆ ಲೈವ್‌ನಲ್ಲಿದ್ದಾನೆ.
''ಅಲ್ಲಾ  ಗೋಪಾಲ್ ಈಯಮ್ಮ ಮೂರು ಮಕ್ಕಳ ತಾಯಿ,ಈಕೆಗೆ ಅಂಥ ಸುಂದರಾಂಗನೂ ಪರಿಪೂರ್ಣನೂ ಶ್ರೀಮಂತನೂ ಆದ ಗಂಡನಲ್ಲಿ ಈ ತನಕ ಸಿಕ್ಕದ್ದೇ ಇದ್ದು ಏನೂ ಆಂತ.''.
ಗೋಪಾಲ ಹೇಳಿದ..''ಅದೇನೂ ಅಂದರೆ ಸಾರ್ ಇಲ್ಲಿ ಏನು ಒಂದು ರೂಪಿ ಎಂಬ ಹೆಣ್ಣುಮಗಳಿದ್ದಾಳೆ ಮೂರು ಮಕ್ಕಳ ತಾಯಿ, ಕಾಮವಾಂಛೆಯಿಂದ ಆದರ್ಶ ಎಂಬ ಇನ್ನೂ ಮದುವೆಯಾಗದ ಹುಡುಗನನ್ನು ಸೆಡ್ಯೂಸ್ ಮಾಡಿ..''
''ಅಲ್ಲಾ ಗೋಪಾಲ್ ಈ ಬಗ್ಗೆ ರೂಪಿ ಏನು ಹೇಳ್ತಾರೆ'' ಅಂತ..
ರೂಪಿಯತ್ತ ಕೆಮೆರಾ ತಿರುಗಿತು.
ಆಕೆ ಮುಖ ಮುಚ್ಚಿಕೊಂಡಿದ್ದಳು..
''ಆದರ್ಶನಿಗೆ ಈ ಬಗ್ಗೆ ಏನಾದರೂ ಪಾಪಪ್ರಜ್ಞೆ ಹೊಂದಿರಬೇಕೂ ಅಂತ ಅನಿಸುತ್ತಿಲ್ಲವೇ..''
ಕೆಮೆರಾ ಆದರ್ಶನತ್ತ ತಿರುಗಿತು.ಆತ ಮುಖ ಮುಚ್ಚಲಿಲ್ಲ.ಅವನು ಸುಮ್ಮನೇ ನೋಡುತ್ತಿದ್ದ.ಗೋಪಾಲ ಕೇಳಿದ..''ಮಿಸ್ಟರ್ ಆದರ್ಶ್..ವೈ ವೈ ದಿಸ್ ಈಸ್ ಹ್ಯಾಪನ್ಡ್..''
ಆದರ್ಶ ಸೊಲ್ಲೆತ್ತಲಿಲ್ಲ.
ಸ್ಟುಡಿಯೋದಲ್ಲಿ ರಾಜಧಾನಿಯ ಖ್ಯಾತ ನಾಮ ಮಾನಸಿಕ ತಜ್ಞರೂ,ವಿಚಾರವಾದಿಗಳೂ,ಧಾರ್ಮಿಕ ಮುಖಂಡರೂ,ಫ್ಯಾಮಿಲಿ ಕೌನ್ಸಿಲ್ಲರೂ,ಮಹಿಳಾ ಹೋರಾಟಗಾರ್ತಿಯರೂ ಜೊತೆಜೊತೆಯಾಗಿ ಕುಳಿತು ಚರ್ಚೆ ಮಾಡುತ್ತಲೇ ಹೋದರು.
ಯಾಕೆ ಹೀಗಾಗುತ್ತದೆ ಏನಿದರ ಮರ್ಮ..ಎಲ್ಲಿಗೆ ಸಾಗುತ್ತಿದೆ ನಮ್ಮ ಸಮಾಜ..ಆಗರ್ಭ ಶ್ರೀಮಂತ ಕುಟುಂಬಗಳ ಹಕೀಕತ್ತುಗಳು,ಅವರ ಹೆಣ್ಣುಮಕ್ಕಳ ಕಾಮನೆಗಳು..ಎಲ್ಲಿ ಏನು ಕಡಿದು ಹೋಗುತ್ತಿದೆ..ಇತ್ಯಾದಿ ಇತ್ಯಾದಿ..
ಮೂರನೇ ದಿನಕ್ಕೆ ಚರ್ಚೆ ಮುಂದುವರಿಯುತ್ತಿದ್ದಾಗ ಸುಹಾಸ್‌ಶರ್ಮಾ ಕೊಡೆಯಾಲದ ಏರ್‌ಪೋರ್ಟ್‌ನಲ್ಲಿ ಬಂದಿಳಿದ.
ಗೋಪಾಲನಿಗೆ ಏರ್‌ಪೋರ್ಟ್ ಲಾಂಜ್‌ನಲ್ಲಿ ತಪ್ಪದೇ ಇರುವಂತೆ ಸೂಚಿಸಲಾಗಿತ್ತು.
ಸುಹಾಸ್‌ಶರ್ಮಾ ಕೆಮೆರಾದಲ್ಲಿ ಬಂಧಿಯಾದ.ಆತ ಕಾರಿಗೆ ಏರುತ್ತಿದ್ದಂತೆ ಗೋಪಾಲ ನುಗ್ಗಿದ.ಸುಹಾಸ್‌ಶರ್ಮಾ ಬಿಕ್ಕಿಬಿಕ್ಕಿ ಅಳುತ್ತಿರುವುದು ಸಂಗಮಕ್ಷೇತ್ರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗಾಗಿ ಸೇವಾಸಂಸ್ಥೆಯೊಂದು ಕೊಡಮಾಡಿದ ಟೀವಿ ಸೆಟ್‌ನಲ್ಲಿ ಕಾಣಿಸುತ್ತಿತ್ತು.
ರೂಪಿ ಕುಳಿತಲ್ಲೇ ಅದನ್ನು ನೋಡಿಬಿಟ್ಟಳು.
ಗೋಪಾಲ ಹೇಳುತ್ತಿದ್ದ,''ನೋಡಿ ಮೂನ್‌ಕೆಫೆಯ ಮಾಲೀಕ ಆಗರ್ಭ ಶ್ರೀಮಂತ ಸುಹಾಸ್‌ಶರ್ಮಾ ಮಗುವಿನ ಥರ ಅತ್ತುಬಿಟ್ಟರು.ಏನು ಅವರ ಮನಸ್ಸಿನಲ್ಲಿ ಒಂದು ಭಾವನೆ ಇದೆ ಅದಕ್ಕೆ ಅವರ ಮಡದಿ ಮಾಯವಾಗದಂತಹ ಗಾಯ ಮಾಡಿದಳು.ಮತ್ತು ಅದನ್ನು ಅಭಿವ್ಯಕ್ತಿಗೊಳಿಸಿದ ಬಗೆ ಇದು.ಅಷ್ಟೇ..ಈ ಮಧ್ಯೆ ಸುಹಾಸ್‌ಶರ್ಮಾ ತಾನು ಸಂಗಮಕ್ಷೇತ್ರಕ್ಕೆ ಹೋಗುವುದಿಲ್ಲ ಅಂತ ತಮ್ಮ ಇಂಗಿತವನ್ನು ಬೇರೆ ನೋಟದಲ್ಲೇ ವ್ಯಕ್ತ ಪಡಿಸಿದ್ದಾರೆ..ಅವರ ಆಪ್ತ ಕಾರ್ಯದರ್ಶಿ ಕೂಡಾ ಇದನ್ನು ದೃಢೀಕರಿಸಿದ್ದಾರೆ.ಒಟ್ಟಾರೆಯಾಗಿ ರೂಪಿ ಮತ್ತು ಆದರ್ಶ ಅವರ ಸಂಬಂಧ ಅವರ ಕಂಪನಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸೂಚನೆಗಳಿವೆ..''
ರೂಪಿ ಇದನ್ನೂ ವೀಕ್ಷಿಸುತ್ತಲೇ ಇದ್ದಳು..
ಜೊತೆಗೆ ಆದರ್ಶನೂ..
ಅವನಿಗೆ ಕನ್ನಡ ಅರ್ಥವಾಗುತ್ತಿರಲಿಲ್ಲ.ಚಿತ್ರಗಳು ಕಣ್ಣಮುಂದೆ ಹರಡಿಕೊಳ್ಳುತ್ತಿದ್ದವು.
''ಹಾಗಾದರೆ ರೂಪಿ ಮತ್ತು ಆದರ್ಶ ಎಂಬ ಈ ಅನೈತಿಕ ಜೋಡಿಯ ಗತಿ ಏನೂಂತ..''
ಸ್ಟುಡಿಯೋದಿಂದ ಸುದ್ದಿವಾಚಕ ಉವಾಚ..
ಗೋಪಾಲ ಇದಕ್ಕೆ ಇಂಥದ್ದೇ ರೀತಿಯಲ್ಲಿ ಹೇಳಬೇಕು ಎಂದು ಮೊದಲೇ ಸೂಚನೆಗಳಿದ್ದವು.
ಗೋಪಾಲ ಹಾಗೇ ಹೇಳಿಬಿಟ್ಟ.
''ಇವರಿಬ್ಬರೂ ಮತ್ತೆ ತಮ್ಮ ಕುಟುಂಬ ಸೇರೋದು ಕಷ್ಟ.ಸುಹಾಸ್‌ಶರ್ಮಾ ಬಹುಶಃ ಪ್ರತ್ಯೇಕವಾಗಿ ಬದುಕಲು ಮುಂದಾಗಬಹುದು.''.
''ಆದರೆ..ಮೂರು ಮಕ್ಕಳಿದ್ದಾರೆ ಅಂತೀರಿ ಗೋಪಾಲ್.ಸಣ್ಣ ಮಗು ಬೇರೆ ಇದೆ..ಅವರೇನು ಹೇಳ್ತಾರೆ ಅಂತ..''
ಕೂಡಲೇ ಪ್ರೀರೆಕಾರ್ಡೆಡ್ ಕ್ಲಿಪ್ಪುಗಳು ತೆರೆಯ ಮೇಲೆ ಹರಿದಾಡಲಾರಂಭಿಸಿದವು..ಮೂರೂ ಮಕ್ಕಳು ಅನಾಥರಾಗಿಬಿಟ್ಟಿದ್ದಾರೆ..ಅಮ್ಮಾ ಅಮ್ಮಾ ಅಂತ ಕನಲುತ್ತಿದ್ದಾರೆ..ಅಮ್ಮ ಇಂಥ ಅನೈತಿಕ ಕೆಲಸಕ್ಕಿಳಿಯುತ್ತಾರೆ ಎಂದು ಅವುಗಳಿಗೇನು ಗೊತ್ತು..ಮಾತ್ರವಲ್ಲ ಯಾವುದು ಅನೈತಿಕ ಯಾವುದು ನೈತಿಕ ಅಂದರೆ ಅವಕ್ಕೇನು ಅರ್ಥವಾಗುತ್ತದೆ..ಎಂದು ಸ್ಟುಡಿಯೋದಲ್ಲಿ ಸಿದ್ಧಪಡಿಸಲಾದ ಮಹಿಳಾವಾಣಿ ಧ್ವನಿತುಂಬುತ್ತಿತ್ತು.
ರೂಪಿ ಆ ಠಾಣೆಯಲ್ಲಿ ಆ ಬಣ್ಣದ ಟೀವಿಯಲ್ಲಿ ಮಕ್ಕಳನ್ನು ನೋಡಿದಳು.
ಅವಳಿಗೆ ಜೀವನದಲ್ಲಿ ಬಣ್ಣಗಳೇ ಉಳಿದಿಲ್ಲ ಎಂದು ಗೊತ್ತಾಗಿಹೋಯಿತು.
ಸುಹಾಸ್‌ಶರ್ಮಾ ಸಂಗಮಕ್ಷೇತ್ರದ ಠಾಣೆಗೆ ಬರಲೇ ಇಲ್ಲ. ಅದೇ ರಾತ್ರಿ ಅವರು ಮೂರೂ ಮಕ್ಕಳೊಂದಿಗೆ ಚೆನ್ನೈ ಮಾರ್ಗವಾಗಿ ಅಮೇರಿಕಾಗೆ ಹಾರಿ ಹೋಗಿದ್ದಾರೆ ಎಂದು ಗೋಪಾಲನೇ ವರದಿಮಾಡಿದ.ಜೊತೆಗೆ ರೂಪಿಯ ಸಂಸಾರ ವಿಮಾನನಿಲ್ದಾಣದ ಲಾಂಜ್‌ನತ್ತ ಸಾಗುತ್ತಿರುವ ಕ್ಲಿಪ್ಪುಗಳನ್ನೂ ಕಾಣಿಸಿದ. 
ರೂಪಿ ಇದನ್ನೆಲ್ಲಾ ನೋಡಲಿಲ್ಲ ಎಂದರೆ ಯಾರಾದರೂ ನಂಬುವರೇ..
ಅದೇ ರಾತ್ರಿ ರಾಜಧಾನಿಯ ಆ ಪ್ರತಿಷ್ಠಿತ ರಾಜಕಾರಣಿ ಜಿಲ್ಲಾ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ್ದ.ಅದಾದ ಸ್ವಲ್ಪ ಸಮಯದಲ್ಲೇ ಇಬ್ಬರನ್ನೂ ಸಂಗಮಕ್ಷೇತ್ರದ ಪೊಲೀಸರು ಠಾಣೆಯಿಂದ ಬೀಳ್ಕೊಟ್ಟರು.
ಗೋಪಾಲನಿಗೆ ಇದು ಗೊತ್ತಗೋ ಹೊತ್ತಿಗೆ ಮಧ್ಯರಾತ್ರಿಯಾಗಿತ್ತು.
ಸ್ಟುಡಿಯೋಕ್ಕೆ ಸೀದಾ ಯಾರೋ ಈ ಮಾಹಿತಿ ರವಾನಿಸಿದ್ದರು.ಕೊಡೆಯಾಲದ ತನ್ನ ವಸತಿಯಲ್ಲಿದ್ದ ಗೋಪಾಲ ಕಣ್ಣು ತಿಕ್ಕಿಕೊಂಡೆದ್ದ.
ಬೆಳ್ಳಂಬೆಳಗ್ಗೆ ಏಳು ಗಂಟೆ ಬುಲ್ಲೆಟ್ಟಿನ್‌ಗೆ ಈ ಸಮಾಚಾರ ಪ್ರೈಂ ಆಗಿರುತ್ತದೆ ಎಂಬ ಸಂದೇಶ ದೊಡ್ಡಾಫಿಸಿನಿಂದ ಬಂದಿತ್ತು.
ಕಛೇರಿ ಕಾರನ್ನು ಹತ್ತಿ ಸೀದಾ ಹೊರಟ ಗೋಪಾಲ ಆ ಕಾಳ ರಾತ್ರಿಯಲ್ಲಿ ಕಟಾರದ ಕಾಡನ್ನು ಹೊಕ್ಕುಬಿಟ್ಟ.
ಅವನಿಗೆ ಹಾಗೇ ಹೋಗು ಅಂತ ಹೇಳಿದ್ದು ಯಾರೂ ಇರಲಿಲ್ಲ. ಆದರೆ ಅವನಿಗೆ ಗೊತ್ತಿತ್ತು ಆ ಪ್ರೇಮಿಗಳಿಬ್ಬರೂ ಅಲ್ಲಿರದೇ ಇನ್ನೆಲ್ಲೂ ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು.
ಗೋಪಾಲ ಆ ರಾತ್ರಿಯೇ ಎಲ್ಲವೂ ಒಮ್ಮೆ ಮುಗಿದರೆ ಸಾಕು  ಎಂಬ ಪ್ರಾರ್ಥನೆ ಮಾಡುತ್ತಲೇ ಕುಮಾರಧಾರೆಯ ಆ ತಟದತ್ತ ಬಂದಿಳಿದಿದ್ದ.
ಎಲ್ಲವೂ ಮುಗಿದಿತ್ತು.
ರೂಪಿ ಎಲ್ಲಿ ಅವರಿಬ್ಬರೂ ಆ ರೀತಿ ಪ್ರೇಮಿಸಿದ್ದರೋ ಅದೇ ಸ್ಥಳದಲ್ಲಿ ಅಂಗಾತ ಮಲಗಿದ್ದಳು.
ಗೋಪಾಲನಿಗೆ ಆ ರಾತ್ರಿ ಆ  ಮಂದ ಬೆಳಕಿನ ಫ್ರೇಮಿನಲ್ಲಿ ಅದು ಕಾಣಿಸಿದಾಗ ಅವನ ಊಹೆ ನಿಜವಾಗಿತ್ತು.
ಆದರ್ಶ ಎಲ್ಲಿದ್ದಾನೆ ಎಂದು ಹುಡುಕಿದ ಗೋಪಾಲ.
ಸಿಗಲಿಲ್ಲ.
ಹುಚ್ಚನಂತೆ ಕಟಾರದ ಕಾಡಲ್ಲಿ ಅಲೆದ.ಕುಮಾರಧಾರೆಯ ನೀರಲ್ಲಿ ಕೈ ಅದ್ದಿದ.ತಣ್ಣಗೆ ಅನಿಸಿತು.
ಬೆಳಗಾದರೆ ರೂಪಿಯ ಸ್ಟೋರಿ ಮುಂದುವರಿಸಬೇಕು..
ಮತ್ತೊಮ್ಮೆ ಕಥೆ ಹೆಣೆಯುತ್ತಾ ಸಾಗಬೇಕು..
ರೂಪಿಯನ್ನು ಗೋಪಾಲ ಸ್ಪರ್ಶಿಸಿದ.
ಅವಳು ಅವನನ್ನು ಸ್ವೀಕರಿಸುವಂತೆ ಕಣ್ಣುಮುಚ್ಚಿ ಧೇನಿಸುತ್ತಿದ್ದಳು.
ರೂಪಿ..ನನ್ನನ್ನು ಕ್ಷಮಿಸು ಎಂದು ಕೈ ಮುಗಿದ.
ಹಂದಾಡದ ಎಂದೂ ಮರಳಲಾರದ ಆಕೆಯ ಹಣೆಗೆ ಒಂದು ಮುತ್ತಿಟ್ಟ.ಮೆಲ್ಲನೇ ಅವಳನ್ನೆತ್ತಿದ. ಒಂದೇ ಏಟಿಗೆ ಆ ಶವವನ್ನೆತ್ತಿ ಕುಮಾರಧಾರೆಗೆ ಎಸೆದೇಬಿಟ್ಟ.
''ಇನ್ನು ಸಾಕು ಅವಳಿಗೂ ನನಗೂ'' ಎಂದು ಗೋಪಾಲ ಹೇಳುತ್ತಿರುವುದನ್ನು ಕೇಳಿಕೊಂಡದ್ದು ಕುಮಾರಧಾರೆ ಮಾತ್ರಾ..
ರೂಪಿ ಮತ್ತು ಆದರ್ಶ ಕಾಣೆಯಾಗಿದ್ದಾರೆ ಎಂಬ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿ ಬೆಳಗ್ಗೆ ಹರಿದಾಡಿತು..