20081021

ಸಾಯಬಾರದು ಎಂದುಕೊಂಡ ರಾಜನ ಕತೆ



ಒಬ್ಬ ರಾಜ. ಅವನ ಹೆಸರು ಏನೋ ಇದೆ.ಇಲ್ಲಿ ಅದರ ಅಗತ್ಯವಿಲ್ಲ. ಅವನಿಗೆ ಮಕ್ಕಳಿಲ್ಲ ಎಂಬ ಚಿಂತೆ ಇಲ್ಲ.ಏಕೆಂದರೆ ಅವನಿಗೆ ತುಂಬಾ ಮಕ್ಕಳಿದ್ದರು. ದೇಶ, ಕೋಶಗಳ ಬಗ್ಗೆ ಚಿಂತೆಯೂ ಇರಲಿಲ್ಲ. ಅವನೊಬ್ಬ ಅಜೇಯ.ಅವನು ಶಕ್ತಿಶಾಲಿ.
ಆದರೆ ಅವನಿಗೆ ಇದ್ದಕ್ಕಿದ್ದಂತೆ ಒಂದು ಭಯ ಆವರಿಸಿಬಿಟ್ಟಿತು. ನಮಗೂ ಆಗುವಂಥದ್ದೇ.ಅದೇನೆಂದರೆ ಸಾವು. ಸಾವಿನ ಭಯ.ಸಾಯುತ್ತೇನಲ್ಲಾ ಎಂಬ ಹೆದರಿಕೆ.ವಯಸ್ಸಾಗುತ್ತದಲ್ಲಾ ಎಂಬ ದುಃಖ.ದಿನೇ ದಿನೇ ವಯಸ್ಸಾಗುತ್ತದೆ. ಆಮೇಲೆ ಮುದುಕನಾಗುತ್ತೇನೆ ಆಮೇಲೆ ಕಾಯಿಲೆ ಬೀಳುತ್ತೇನೆ..ಕಾಯಿಲೆ ಬೀಳದಿದ್ದರೂ ಸಾಯುವುದಂತೂ ಖಂಡಿತ.
ರಾಜ ಆಸ್ಥಾನಪಂಡಿತರ ಸಭೆ ಕರೆದ.ದೀರ್ಘಕಾಲ ಎಂದರೆ ಎಷ್ಟು ವರ್ಷ ಬದುಕಬಹುದು ಎಂದ.ನೂರಾಇಪ್ಪತ್ತು ಎಂದರು ಪಂಡಿತರು.
ರಾಜ ತನ್ನ ವಯಸ್ಸು ಎಷ್ಟೆಂದು ಕೇಳಿದ.
ಐವತ್ತು ಎಂದರು ಮಂತ್ರಿಗಳು.
ಹಾಗಾದರೆ ತಾನು ಇನ್ನು ಅಬ್ಬಬ್ಬಾ ಎಂದರೂ ಎಪ್ಪತ್ತು ವರ್ಷ ಮಾತ್ರಾ ಬದುಕುವುದುಂಟು ಎಂದು ರಾಜ ಚಿಂತಾಕ್ರಾಂತನಾದ.
ಸಾವೇ ಬರಬಾರದು.. ಎಂದು ಹೇಳಿದ.
ಅಂಥದ್ದೊಂದು ಔಷಧ ಬೇಕು. ಇಡೀ ರಾಜ್ಯದಲ್ಲಿ ಡಂಗುರ ಸಾರಿರಿ. ರಾಜನಿಗೆ ಸಾವೇ ಇರದಂಥ ಔಷಧ ತಂದು ಕೊಟ್ಟವರಿಗೆ ಅರ್ಧರಾಜ್ಯ ಕೊಡಲಾಗುವುದು ಎಂದು ಹೇಳಿರಿ ಎಂದ.
ರಾಜಾಜ್ಞೆ. 
ಹಾಗೇ ಮಾಡಲಾಯಿತು.
ಎಂಥೆಂತ ವೈದ್ಯರು ಸಾಲುಗಟ್ಟಿ ಬಂದರು.ಔಷಧ ಇದೆ ಎಂದರು.ಅದನ್ನು ರಾಜ್ಯದ ಮೂಲೆಮೂಲೆಗಳಿಂದ ಹೊತ್ತು ತಂದ ಇನ್ನೇನು ಸಾಯುತ್ತಾರೆ ಎಂಬ ಹಾಗಿದ್ದ ಮುದುಕರು,ರೋಗಿಗಳಿಗೆ ನೀಡಿ ಪ್ರಯೋಗಿಸಲಾಯಿತು.
ಪ್ರಯೋಜನವಾಗಲಿಲ್ಲ.
ಸುಳ್ಳು ಔಷಧ ತಂದರೆ ತಲೆ ಕತ್ತರಿಸಲಾಗುವುದು ಎಂದು ರಾಜ ಘೋಷಿಸಿದ.
ಆಮೇಲೆ ಯಾರೂ ಔಷಧ ತರೋ ದುಸ್ಸಾಹಸ ಮಾಡಲಿಲ್ಲ.
ಹೀಗಿದ್ದಾಗ ಒಬ್ಬ ಪಂಡಿತ ಆಸ್ಥಾನ ಪ್ರವೇಶಿಸಿದ.
ಸಾವೇ ಬಾರದ ಔಷಧಿ ತನ್ನ ಬಳಿ ಇದೆ ಎಂದ.
ತಲೆದಂಡ ಗೊತ್ತಲ್ಲಾ ಎಂದ ರಾಜ
ಹೌದು ಮಹಾ ಪ್ರಭೂ..ಗೊತ್ತಿದೆ.ಎಂದ ಆ ಪಂಡಿತನ ಮಾತಿನಲ್ಲಿ ಅದ್ಯಾವುದೋ ಗತ್ತು ಘನಸ್ತಿಕೆಯನ್ನು ರಾಜಸಭೆಯೇ ಕಂಡಿತು.
ಎಲ್ಲಿದೆ ನಿನ್ನ ಔಷಧ ಎಂದು ಕೇಳಿದ ರಜ.
ಒಂದು ಪಾತ್ರೆಯನ್ನು ಜೋಳಿಗೆಯಿಂದ ಹೊರತೆಗೆದ ಪಂಡಿತ.
ಅದರಲ್ಲಿ ಇದದ್ದ್ದು ಎಣ್ಣೆ.
ಮಹಾರಾಜಾ ಈ ಎಣ್ಣೆಯನ್ನು ದಿನವೂ ರಾತ್ರಿ ಹಾಸಿಗೆಯಲ್ಲಿ ಮಲಗುವ ಮುನ್ನ ತಲೆಗೆ ಹಚ್ಚಿಕೊಳ್ಳಿ ಅಷ್ಟು ಸಾಕು.ಈ ಪಾತ್ರೆಯಲ್ಲಿ ಎಣ್ಣೆ ಮುಗಿದ ಮೇಲೆ ನಿಮಗೆ ಚಿರಂಜೀವಿತ್ವ ಖಚಿತ ಎಂದ ಪಂಡಿತ.
ರಾಜನಿಗೆ ಅಚ್ಚರಿ.
ಹೌದೇ.. ಎಂದಿತು ರಾಜಸಭೆ.
ಆದರೆ..ಎಂದ ಪಂಡಿತ,
ಆದರೆ? ಏನು ಆದರೆ..?ಇಡೀ ಸಭೆ ಕೇಳಿತು.
ಮಹಾರಾಜಾ ನಾನು ನೀಡಿರುವ ಈ ತೈಲವನ್ನು ತಾವು ತಲೆಗೆ ಹಚ್ಚಿಕೊಳ್ಳುವ ಹೊತ್ತಿನಲ್ಲಿ ತಮಗೆ ಕೋತಿಯ ನೆನಪಾಗಬಾರದು..ಕೋತಿಯ ನೆನಪು ಏನಾದರೂ ಬಂದರೆ ಈ ತೈಲ ಪ್ರಯೋಜನ ನೀಡಲಾರದು..ಎಂದ ಪಂಡಿತ.
ಅಷ್ಟೇ ತಾನೇ ..ಎಂದ ರಾಜ.
ಪಂಡಿತನನ್ನು ಅರಮನೆಯ ಅತಿಥಿಗೃಹದಲ್ಲಿ ರಾಜೋಪಚಾರಗಳೊಂದಿಗೆ ಉಪಚರಿಸುವಂತೆ ರಾಜ ಆದೇಶಿಸಿದ.
ರಾತ್ರಿಯಾಯಿತು.
ರಾಜ ಶಯ್ಯಾಗೃಹಕ್ಕೆ ಬಂದ.
ಎಣ್ಣೆ ಪಾತ್ರೆ ಎತ್ತಿಕೊಂಡ.
ಕೋತಿಯ ನೆನಪಾಗಬಾರದು ಎಂದು ಪಂಡಿತ ಹೇಳಿದ್ದು ನೆನಪಾಯಿತು.
ಝುಂ ಎಂದಿತು ಮನಸ್ಸು.
ಮರುದಿನವೂ ರಾತ್ರಿ ಹಾಸುಗೆಗೆ ಹೋಗಲು ಅನುವಾದಗಲೂ ಎಣ್ಣೆ ಕೈಗೆ ಹಾಕಿಕೊಳ್ಳಬೇಕೆಂಬಷ್ಟರಲ್ಲೇ ಮತ್ತೆ ಕೋತಿಯ ನೆನಪು..
ಮೂರನೇ ದಿನವೂ ಅದೇ ಕೋತಿಯ ನೆನಪು.
ಯಾವಾಗ ಎಣ್ಣೇ ತಲೆಗೆ ಹಚ್ಚಿಕೊಳ್ಳಬೇಕು ಎಂದು ಪಾತ್ರೆ ಎತ್ತಿದನೋ ಕೋತಿಯ ನೆನಪು ಬಂದೇಬರತೊಡಗಿತು.
ಆಮೇಲೆ ಆ ರಾಜ ಆ ದಿವ್ಯೌಷಧಿಯನ್ನು ಎಂದೂ ತಲೆಗೆ ಹಚ್ಚಿಕೊಳ್ಳಲು ಆಗಲೇ ಇಲ್ಲ.
ಪ್ರತೀ ಬಾರಿಯೂ ಆ ಕೋತಿಯ ನೆನಪು ಅವನನ್ನು ಬಿಡಲೇ ಇಲ್ಲ.

(ಈ ಕತೆ ನಾನು ಎಲ್ಲೋ ಕೇಳಿದ್ದು.ಯಾರೋ ಹೇಳಿದ್ದು.ಈ ವರ್ತಮಾನಕ್ಕೆ ಈ ಕತೆ ತುಂಬಾ ಹೊಂದಿಕೊಳ್ಳುತ್ತಿದೆ.ಅದಕ್ಕೆ ನಿಮಗೂ ಹೇಳಿದ್ದೇನೆ)


4 comments:

bejjangala said...

kathe bahaLa chenaagide. prasthuta prapamchakke bEkaada ondu oLLeya samdESha ide.

bejjangala said...

chennagide

mouvi said...

oLLeya kateyOmdannu kottiddeeri. naatakakke beekada vastuvide.

mruganayanee said...

ನಿಮ್ಮ ಕಥೆ ಓದುತ್ತಾ ಟೆನಿಸನ್ ನ ಥಿಥೊನಸ್ ಕಥೆ ನೆನಪಾಯಿತು..