20081031

ಹಾಡು-ಪಾಡುವಿರಹ
ಎಂದರೆ
ಹಾಯಿ ಇಲ್ಲದ
ಒಂಟಿ ದೋಣಿ

ವಿರಹ 
ಎಂದರೆ
ಒಂದೇ ದಡದ
ನದಿ

ವಿರಹ
ಎಂದರೆ
ನೀರು ಆರಿದ
ಮರಳು

ವಿರಹ
ಎಂದರೆ
ಯಾರೂ ಮೆಟ್ಟದ
ಸೇತು

ವಿರಹ
ಎಂದರೆ
ಬತ್ತದ ಹಳ್ಳ
ಹರಿಯದ ಹೊಳೆ
ಮೀನಿಲ್ಲಿದ ನದಿ
ಮತ್ತು
ಅವಳಿಲ್ಲದ ಅವನು


20081026

ಅಶಾಶ್ವತಪ್ರೀತಿಗಿಂತಲೂ
ವಿರಹ
ಆಪ್ತ
ಕಂಸನಿಗೆ 
ಕೃಷ್ಣನ ಕನಸಿನಂತೆ
ರಾಧೆಗೂ ಗಂಡನಿದ್ದ
ಕೃಷ್ಣನಲ್ಲಿ
ಅವಳಿಗೆ
ವಿರಹದ ಭಯವಿತ್ತಂತೆ
ಪ್ರೀತಿಸುವುದು
ಆಕಸ್ಮಿಕ
ವಿರಹ ಮಾತ್ರಾ ಅನಿವಾರ್ಯ
ಒಂದೇ ಕೊಡೆ
ಒಂದೇ ಬಿಸಿಲು
ನೆರಳು ಮಾತ್ರಾ ಎರಡು
ಒಂದೇ ಮನಸ್ಸು
ಒಂದು ಕ್ಷಣ
ಎರಡಾದಾಗ ಅದು ಜಗದ ನಿಯಮ
ದ್ವೈತ ಎಂದರೆ ಅವನೂ ಅವಳೂ
ಅದ್ವೈತ ಎಂದರೆ ಅಖಂಡ ಪ್ರೇಮ

20081024

ಣಮೋ ವೆಜ್ಜಿಸಂ

ಜನ ಮಾಂಸ ತಿನ್ನೋದನ್ನು ಬಿಡುತ್ತಿದಾರಂತೆ !
 ಗಡ್ಡೆಗೆಣಸಿನತ್ತ  ನೋಡಲಾರಂಭಿಸಿದ್ದಾರಂತೆ.
ಹುಲ್ಲು ತಿನ್ನೋ ದನಗಳಿಗೇ ಮಾಂಸ ತಿನ್ನಿಸಿ ದನಗಳಿಗೆ ಹುಚ್ಚು ಹಿಡಿಸಿ,ಮನುಷ್ಯರೂ ಹುಚ್ಚು ಹಿಡಿಸಿಕೊಂಡು ಸತ್ತದ್ದು ಹಳೆ ಕಥೆ.
ಈಗ ಎಲ್ಲೆಲ್ಲೂ ವೆಜ್ಜಿಸಂ.. ಹೆಲ್ತ್ ವೆಲ್ತ್ ಹೆಪ್ಪಿನೆಸ್..ಘೋಷಣೆ.
ವೆಜ್ಜಿಸಂ ಕ್ಲಬ್‌ಗೆ ಸೇರಿ ಅಂತ ಅಂತರ್‌ಜಾಲ ತುಂಬಾ ಆಹ್ವಾನ.
ಒಂದು ದಿಟ್ಟ ನಿರ್ಧಾರ ಮಾಡಿಬಿಡಿ,ಅಂದರೆ ಮಾಂಸ ಸಾಕು ಸಸ್ಯ ಬೇಕು ಅಂತ ಹೊರಟುಬಿಡಿ, ಆಮೇಲೆ ಯೂ ಆರ್ ಡಿಫೆರೆಂಟ್..ಅಂತ ಕರೆಗಳು.. 
ಒಂದು ಬಿಸ್ಕಿಟ್ ಪ್ಯಾಕೇಟಲ್ಲೂ ಚೌಕುಳಿಯ ನಡುವೆ ಹಸುರು ಬಿಂದು ಮುದ್ರೆ ಕಾಣಿಸುತ್ತಿರುವುದು ಈ ಜಾಗತಿಕ ನೋಟವಾದ ವೆಜ್ಜಿಸಂ ಕಾರಣಕ್ಕೇ.
ಮಾಂಸ ಏನು ಅಗ್ಗ ಅಲ್ಲವಂತೆ.
ಒಂದು ಕಿಲೋ ಚಿಕನ್ ನಿಮ್ಮ ಮನೆಗೆ ಬರಬೇಕಾದರೆ ಅದಕ್ಕೆ ಹತ್ತು ಕಿಲೋ ಧಾನ್ಯ ಖರ್ಚಾಗಿದೆ ಎಂದರ್ಥ. ಅದೇ ನಿಮ್ಮ ಬಾಡೂಟಕ್ಕೆ ಒಂದು ಕಿಲೋ ಮಟನ್ ತಂದರೆ, ಅಷ್ಟೂ ಮಟನ್ ನೂರು ಕಿಲೋ ಧಾನ್ಯ ಮುಕ್ಕಿ ತಯಾರಾಗಿರುತ್ತದೆ.
ಕೃಷಿ ಅಂಕಿ ಅಂಶ ಇಲಾಖಾ ವರದಿ ಪ್ರಕಾರ ಒಂದು ಹೆಕ್ಟೇರು ಪ್ರದೇಶದಲ್ಲಿ ಇಪ್ಪತ್ತು ಸಾವಿರ ಕಿಲೋ ಬಟಾಟೆ ಬೆಳೆಯಬಹುದು. ಅದೇ ಜಾಗದಲ್ಲಿ ಹುಲ್ಲು ಬೆಳೆಸಿ ಆಡು, ಕುರಿಗಳಿಗೆ ತಿನ್ನಿಸಿದರೆ ೫೦ ಕಿಲೋ ಮಾಂಸ ಸಿಗುತ್ತದೆ.
ಒಂದು ಸಾವಿರ ಹೆಕ್ಟೇರ್ ಸೋಯಾ ಬೆಳೆದರೆ ೧೧೨೪ ಕಿಲೋ ಪ್ರೋಟೀನ್ ಸಿಗುತ್ತದೆ. ಅದೇ ಭತ್ತ ಬೆಳೆದರೆ ೯೩೮ ಕಿಲೋ ಪ್ರೋಟೀನ್ ಉತ್ಪಾದನೆ ಆದಂತಾಯಿತು. ಜೋಳ ಹಾಕಿದರೆ ೧೦೪೩ ಕಿಲೋ ಪ್ರೋಟೀನ್ ಲಭ್ಯ.
ಇಷ್ಟನ್ನೆಲ್ಲಾ ಸೇರಿಸಿ ಕೋಣಗಳಿಗೆ ತಿನ್ನಿಸಿ ಆಮೇಲೆ ಆ ಕೋಣವನ್ನು ಸಿಗಿದರೆ ಸಿಗೋದು ೬೦ ಕಿಲೋ ಪ್ರೋಟೀನ್ ಮಾತ್ರ ಎನ್ನುತ್ತದೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ.
ಬ್ರಿಟನ್‌ನಿಂದ ಬಂದಿರೋ "ವೆಜ್ಜಿಸಂ' ವರದಿ ನೋಡಿ. ಅಲ್ಲಿ ಹೇಳಿಕೇಳಿ ೭೦-೮೦ ಮಿಲಿಯ ಜನ. ಅಲ್ಲಿ ಶೇ.೯೦ ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಹಾಕೋದು ಜಾನುವಾರುಗಳಿಗೆ. ಏಕೆಂದರೆ ಜಾನುವಾರು ಕೊಬ್ಬಿ ಮಾಂಸ ಉತ್ಪಾದನೆ ಮಾಡಬೇಕು. ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಜನ ತಿಂದರೆ ೨೫೦ ಮಿಲಿಯ ಜನರಿಗೆ ಬಿರಿಯುವಷ್ಟು ತಿಂದು ತೇಗಬಹುದು.
ಇನ್ನು ಅಮೆರಿಕಾದ ಕತೆ. ಅಲ್ಲಿ ಜೋಳ ಬೆಳೆದು, ತಿನ್ನೋದು ಜನರಲ್ಲ, ದನಗಳು. ಬೀಫ್ ಮಾರುಕಟ್ಟೆಗೆ ಅವರು ಕೊಡುವ ಜೋಳ ಜಾಗತಿಕ ಮಾರುಕಟ್ಟೆಗೆ ಬಂದರೆ ಜೋಳ ಧಾರಣೆ ಈಗಿರುವ ಅರ್ಧಕ್ಕೆ ಇಳಿಯಬಹುದು. ಇನ್ನು ದಕ್ಷಿಣ ಅಮೆರಿಕೆಯ ನಿತ್ಯ ಹರಿದ್ವರ್ಣ ಕಾಡುಗಳು ಬೀಫ್‌ಗಾಗಿ ಆಹಾರ ಬೆಳೆಸಲು ನಾಶವಾಗುತ್ತಿವೆ. ದಿನಾ ಮಾಂಸ ತಿನ್ನುವವರಿಂದಾಗಿ ಭಾರತದಲ್ಲಿ ಇಪ್ಪತ್ತು ಮಿಲಿಯ ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಧಾನ್ಯ ಪೋಲಾಗುತ್ತಿದೆ.
 ಈಗಿರುವ ಮಾಂಸ ಉತ್ಪಾದನೆಯಲ್ಲಿ ಶೇ.೧೦ರಷ್ಟು ಕುಸಿತವಾದರೆ ಸಾಕು, ೬೦ ಮಿಲಿಯ ಜನರಿಗೆ ಬೇಕಾದಷ್ಟು ಬೇಳೆ ಕಾಳು ತರಕಾರಿ ನೀಡಬಹುದು ಎನ್ನುತ್ತಾರೆ ವಿeನಿಗಳು.
ನಿಮಗೆ ಗೊತ್ತಾ? ಈ ಭಾರತದಲ್ಲಿ ಇಷ್ಟೊಂದು ಜನ ಇದ್ದರೂ ಹಸಿವಿನ ತಾಂಡವ ಏಕಿಲ್ಲ ಎಂದರೆ ಅದಕ್ಕೆ ಕಾರಣ ನಾವು ವೆಜ್‌ಗಳಾಗಿರೋದೇ. ಒಂದು ವೇಳೆ ಭಾರತೀಯರೆಲ್ಲಾ ಮಾಂಸ ಮುಕ್ಕಲು ಶುರು ಮಾಡಿದರೆ, ಈ ಭೂಗ್ರಹದಲ್ಲಿ ಬೆಳೆದದ್ದು ಏನೇನೂ ಸಾಲದು.
ಇಷ್ಟಕ್ಕೂ ಜೀವನದ ಯಶಸ್ಸಿನ ಗುಟ್ಟು ಇರೋದು ಸಸ್ಯಾಹಾರದಲ್ಲೇ. ಪ್ರಾಣಿಜನ್ಯ ಪ್ರೋಟೀನ್ ಸೇವಿಸುವವರಲ್ಲಿ ಐಕ್ಯೂ ಕೊರತೆ ಢಾಳಾಗಿ ಕಾಣುತ್ತದೆ ಎನ್ನುತ್ತದೆ ಮಾಂಸ ತಿಂದ ವಿeನಿಗಳೇ ಕೊಟ್ಟ ವರದಿ.
ಇಷ್ಟೆಲ್ಲಾ ಈಗ ಗೊತ್ತಾಗುತ್ತಿದೆ ಎಂದಲ್ಲ.ಎಂದೋ ಗೊತ್ತೇ ಇದೆ,
ಆದರೆ ತಿನ್ನುವಾಗ ಯಾವುದೂ ನೆನಪಾಗುವುದಿಲ್ಲ!

20081021

ಸಾಯಬಾರದು ಎಂದುಕೊಂಡ ರಾಜನ ಕತೆಒಬ್ಬ ರಾಜ. ಅವನ ಹೆಸರು ಏನೋ ಇದೆ.ಇಲ್ಲಿ ಅದರ ಅಗತ್ಯವಿಲ್ಲ. ಅವನಿಗೆ ಮಕ್ಕಳಿಲ್ಲ ಎಂಬ ಚಿಂತೆ ಇಲ್ಲ.ಏಕೆಂದರೆ ಅವನಿಗೆ ತುಂಬಾ ಮಕ್ಕಳಿದ್ದರು. ದೇಶ, ಕೋಶಗಳ ಬಗ್ಗೆ ಚಿಂತೆಯೂ ಇರಲಿಲ್ಲ. ಅವನೊಬ್ಬ ಅಜೇಯ.ಅವನು ಶಕ್ತಿಶಾಲಿ.
ಆದರೆ ಅವನಿಗೆ ಇದ್ದಕ್ಕಿದ್ದಂತೆ ಒಂದು ಭಯ ಆವರಿಸಿಬಿಟ್ಟಿತು. ನಮಗೂ ಆಗುವಂಥದ್ದೇ.ಅದೇನೆಂದರೆ ಸಾವು. ಸಾವಿನ ಭಯ.ಸಾಯುತ್ತೇನಲ್ಲಾ ಎಂಬ ಹೆದರಿಕೆ.ವಯಸ್ಸಾಗುತ್ತದಲ್ಲಾ ಎಂಬ ದುಃಖ.ದಿನೇ ದಿನೇ ವಯಸ್ಸಾಗುತ್ತದೆ. ಆಮೇಲೆ ಮುದುಕನಾಗುತ್ತೇನೆ ಆಮೇಲೆ ಕಾಯಿಲೆ ಬೀಳುತ್ತೇನೆ..ಕಾಯಿಲೆ ಬೀಳದಿದ್ದರೂ ಸಾಯುವುದಂತೂ ಖಂಡಿತ.
ರಾಜ ಆಸ್ಥಾನಪಂಡಿತರ ಸಭೆ ಕರೆದ.ದೀರ್ಘಕಾಲ ಎಂದರೆ ಎಷ್ಟು ವರ್ಷ ಬದುಕಬಹುದು ಎಂದ.ನೂರಾಇಪ್ಪತ್ತು ಎಂದರು ಪಂಡಿತರು.
ರಾಜ ತನ್ನ ವಯಸ್ಸು ಎಷ್ಟೆಂದು ಕೇಳಿದ.
ಐವತ್ತು ಎಂದರು ಮಂತ್ರಿಗಳು.
ಹಾಗಾದರೆ ತಾನು ಇನ್ನು ಅಬ್ಬಬ್ಬಾ ಎಂದರೂ ಎಪ್ಪತ್ತು ವರ್ಷ ಮಾತ್ರಾ ಬದುಕುವುದುಂಟು ಎಂದು ರಾಜ ಚಿಂತಾಕ್ರಾಂತನಾದ.
ಸಾವೇ ಬರಬಾರದು.. ಎಂದು ಹೇಳಿದ.
ಅಂಥದ್ದೊಂದು ಔಷಧ ಬೇಕು. ಇಡೀ ರಾಜ್ಯದಲ್ಲಿ ಡಂಗುರ ಸಾರಿರಿ. ರಾಜನಿಗೆ ಸಾವೇ ಇರದಂಥ ಔಷಧ ತಂದು ಕೊಟ್ಟವರಿಗೆ ಅರ್ಧರಾಜ್ಯ ಕೊಡಲಾಗುವುದು ಎಂದು ಹೇಳಿರಿ ಎಂದ.
ರಾಜಾಜ್ಞೆ. 
ಹಾಗೇ ಮಾಡಲಾಯಿತು.
ಎಂಥೆಂತ ವೈದ್ಯರು ಸಾಲುಗಟ್ಟಿ ಬಂದರು.ಔಷಧ ಇದೆ ಎಂದರು.ಅದನ್ನು ರಾಜ್ಯದ ಮೂಲೆಮೂಲೆಗಳಿಂದ ಹೊತ್ತು ತಂದ ಇನ್ನೇನು ಸಾಯುತ್ತಾರೆ ಎಂಬ ಹಾಗಿದ್ದ ಮುದುಕರು,ರೋಗಿಗಳಿಗೆ ನೀಡಿ ಪ್ರಯೋಗಿಸಲಾಯಿತು.
ಪ್ರಯೋಜನವಾಗಲಿಲ್ಲ.
ಸುಳ್ಳು ಔಷಧ ತಂದರೆ ತಲೆ ಕತ್ತರಿಸಲಾಗುವುದು ಎಂದು ರಾಜ ಘೋಷಿಸಿದ.
ಆಮೇಲೆ ಯಾರೂ ಔಷಧ ತರೋ ದುಸ್ಸಾಹಸ ಮಾಡಲಿಲ್ಲ.
ಹೀಗಿದ್ದಾಗ ಒಬ್ಬ ಪಂಡಿತ ಆಸ್ಥಾನ ಪ್ರವೇಶಿಸಿದ.
ಸಾವೇ ಬಾರದ ಔಷಧಿ ತನ್ನ ಬಳಿ ಇದೆ ಎಂದ.
ತಲೆದಂಡ ಗೊತ್ತಲ್ಲಾ ಎಂದ ರಾಜ
ಹೌದು ಮಹಾ ಪ್ರಭೂ..ಗೊತ್ತಿದೆ.ಎಂದ ಆ ಪಂಡಿತನ ಮಾತಿನಲ್ಲಿ ಅದ್ಯಾವುದೋ ಗತ್ತು ಘನಸ್ತಿಕೆಯನ್ನು ರಾಜಸಭೆಯೇ ಕಂಡಿತು.
ಎಲ್ಲಿದೆ ನಿನ್ನ ಔಷಧ ಎಂದು ಕೇಳಿದ ರಜ.
ಒಂದು ಪಾತ್ರೆಯನ್ನು ಜೋಳಿಗೆಯಿಂದ ಹೊರತೆಗೆದ ಪಂಡಿತ.
ಅದರಲ್ಲಿ ಇದದ್ದ್ದು ಎಣ್ಣೆ.
ಮಹಾರಾಜಾ ಈ ಎಣ್ಣೆಯನ್ನು ದಿನವೂ ರಾತ್ರಿ ಹಾಸಿಗೆಯಲ್ಲಿ ಮಲಗುವ ಮುನ್ನ ತಲೆಗೆ ಹಚ್ಚಿಕೊಳ್ಳಿ ಅಷ್ಟು ಸಾಕು.ಈ ಪಾತ್ರೆಯಲ್ಲಿ ಎಣ್ಣೆ ಮುಗಿದ ಮೇಲೆ ನಿಮಗೆ ಚಿರಂಜೀವಿತ್ವ ಖಚಿತ ಎಂದ ಪಂಡಿತ.
ರಾಜನಿಗೆ ಅಚ್ಚರಿ.
ಹೌದೇ.. ಎಂದಿತು ರಾಜಸಭೆ.
ಆದರೆ..ಎಂದ ಪಂಡಿತ,
ಆದರೆ? ಏನು ಆದರೆ..?ಇಡೀ ಸಭೆ ಕೇಳಿತು.
ಮಹಾರಾಜಾ ನಾನು ನೀಡಿರುವ ಈ ತೈಲವನ್ನು ತಾವು ತಲೆಗೆ ಹಚ್ಚಿಕೊಳ್ಳುವ ಹೊತ್ತಿನಲ್ಲಿ ತಮಗೆ ಕೋತಿಯ ನೆನಪಾಗಬಾರದು..ಕೋತಿಯ ನೆನಪು ಏನಾದರೂ ಬಂದರೆ ಈ ತೈಲ ಪ್ರಯೋಜನ ನೀಡಲಾರದು..ಎಂದ ಪಂಡಿತ.
ಅಷ್ಟೇ ತಾನೇ ..ಎಂದ ರಾಜ.
ಪಂಡಿತನನ್ನು ಅರಮನೆಯ ಅತಿಥಿಗೃಹದಲ್ಲಿ ರಾಜೋಪಚಾರಗಳೊಂದಿಗೆ ಉಪಚರಿಸುವಂತೆ ರಾಜ ಆದೇಶಿಸಿದ.
ರಾತ್ರಿಯಾಯಿತು.
ರಾಜ ಶಯ್ಯಾಗೃಹಕ್ಕೆ ಬಂದ.
ಎಣ್ಣೆ ಪಾತ್ರೆ ಎತ್ತಿಕೊಂಡ.
ಕೋತಿಯ ನೆನಪಾಗಬಾರದು ಎಂದು ಪಂಡಿತ ಹೇಳಿದ್ದು ನೆನಪಾಯಿತು.
ಝುಂ ಎಂದಿತು ಮನಸ್ಸು.
ಮರುದಿನವೂ ರಾತ್ರಿ ಹಾಸುಗೆಗೆ ಹೋಗಲು ಅನುವಾದಗಲೂ ಎಣ್ಣೆ ಕೈಗೆ ಹಾಕಿಕೊಳ್ಳಬೇಕೆಂಬಷ್ಟರಲ್ಲೇ ಮತ್ತೆ ಕೋತಿಯ ನೆನಪು..
ಮೂರನೇ ದಿನವೂ ಅದೇ ಕೋತಿಯ ನೆನಪು.
ಯಾವಾಗ ಎಣ್ಣೇ ತಲೆಗೆ ಹಚ್ಚಿಕೊಳ್ಳಬೇಕು ಎಂದು ಪಾತ್ರೆ ಎತ್ತಿದನೋ ಕೋತಿಯ ನೆನಪು ಬಂದೇಬರತೊಡಗಿತು.
ಆಮೇಲೆ ಆ ರಾಜ ಆ ದಿವ್ಯೌಷಧಿಯನ್ನು ಎಂದೂ ತಲೆಗೆ ಹಚ್ಚಿಕೊಳ್ಳಲು ಆಗಲೇ ಇಲ್ಲ.
ಪ್ರತೀ ಬಾರಿಯೂ ಆ ಕೋತಿಯ ನೆನಪು ಅವನನ್ನು ಬಿಡಲೇ ಇಲ್ಲ.

(ಈ ಕತೆ ನಾನು ಎಲ್ಲೋ ಕೇಳಿದ್ದು.ಯಾರೋ ಹೇಳಿದ್ದು.ಈ ವರ್ತಮಾನಕ್ಕೆ ಈ ಕತೆ ತುಂಬಾ ಹೊಂದಿಕೊಳ್ಳುತ್ತಿದೆ.ಅದಕ್ಕೆ ನಿಮಗೂ ಹೇಳಿದ್ದೇನೆ)


20081017

ಅಂತೆಕಂತೆಹಕ್ಕಿಯಷ್ಟು  ಎತ್ತರ 
ನಾನು 
ಎಂದೂ ಏರಿಲ್ಲ
ಅದಕ್ಕೆ ಭೂಮಿ ನನಗೆ ಈಗಲೂ ತುಂಬಾ ದೊಡ್ಡದು,
ಹಕ್ಕಿ ಚಿಕ್ಕದು.
ಚಿರತೆಯಷ್ಟು ವೇಗವಾಗಿ
ನಾನು
ಎಂದೂ ಓಡಿಲ್ಲ
ಅದಕ್ಕೆ ಸಾವು ನನಗೆ ಅಂಜಿಕೆ,
ಚಿರತೆ ಎಂದರೆ ಹೆದರಿಕೆ.
ಹೂವಿನಂತೆ 
ನಾನು 
ಎಂದೂ ಅರಳಿಲ್ಲ,
ನಿನ್ನೆ ಮೊಗ್ಗಾಗಿ
ಇಂದು ಹೂವಾಗಿ
ಅದಕ್ಕೆ ಹೂವು ನನಗೆ
ಅಚ್ಚರಿ
ಅವಳಂತೆ ನಾನು ಎಂದೂ 
ಈ ತನಕ 
ಪ್ರೀತಿಸಿಲ್ಲ
ಅದಕ್ಕೇ ಅವಳು
ನನಗೆ ಹಕ್ಕಿಯಂತೆ,ಚಿರತೆಯಂತೆ 
ಮತ್ತು 
ಹೂವಿನಂತೆ..

20081006

ಒಬ್ಬಳೇ...ಏಳು ಮಲ್ಲಿಗೆ ತೂಕದ 
ರಾಜಕುವರಿ..
ಏಳು ಕೋಟೆಯಾಚೆ
ಏಳು ನದಿಗಳಾಚೆ
ಏಳು ಬೆಟ್ಟಗಳಾಚೆ..
ಅವನಿಗೆ ಮಾತ್ರಾ ಗೊತ್ತಿದೆ
ಅವಳು ಏಳು ಮಲ್ಲಿಗೆಯ ಘಮ
ಅವಳು ಏಳು ಬೆಟ್ಟಗಳ ಪ್ರೀತಿ
ಅವಳು ಏಳು ನದಿಗಳ ಆತುರ
ಅವಳು ಏಳು ಕೋಟೆಗಳ ಬೆಚ್ಚನೆ
ನದಿಗಳು ಮಳೆಯನ್ನು ನುಂಗುವವು
ಬೆಟ್ಟಗಳು ಗಾಳಿಯನ್ನು ತಡೆಯುವವು
ಕೋಟೆಗಳು ಛಳಿಯನ್ನು ಕದಿಯುವವು
ಅವನು ಎಂದು ಬರುವನೋ
ಕಾಯಬೇಕು
ಅವಳು ಮತ್ತು
ನದಿ ಬೆಟ್ಟ ಕೋಟೆ ಎಲ್ಲವೂ 

20081003

ಮಿಸ್ಸಿಂಗ್ಅವನ ಮೇಲೆ
ಈ ಹೊತ್ತಿಗೇ 
ಅದೆಂತು
ಹೆಚ್ಚಿದೆ
ಈ ಪ್ರೇಮ%&&?
ಆಷಾಢದ ಮಳೆಯಂತೆ
ಮಾಗಿಯ ಚಳಿಯಂತೆ
ವೈಶಾಖದ ಹಗಲಿನಂತೆ..!
ಈ ಹೊತ್ತಿಗೆ 
ಅವನಿಗಾಗಿ ಹಂಬಲಿಸಬೇಕು
ಒಳಗೆ ಇದ್ದವನನ್ನು
ಕಳುಹಬೇಕು
ಆಕೆ?
ಒಲಿದ ಜೀವ
ಒಳಗಿನ ಜೀವ
ಎರಡಕ್ಕೂ 
ಮೀರಿದ ಆತ್ಮ
ನಿತ್ಯವೂ ಧ್ಯಾನ
ಪಕ್ಕದಲ್ಲಿ ಪುಟ್ಟ ಮಗುವಿನ
ಮಾತು
ಅರ್ಥವಾಗದಿದ್ದರೂ
ನೀಡುತ್ತಾಳೆ ಒಪ್ಪಿಗೆ
ನಗರದಲ್ಲೆಲ್ಲೋ
ಯಾರೋ ಇಟ್ಟ ಬಾಂಬು
ಕಳೆದು ಹೋಗಲಿರಲಿಕ್ಕಿಲ್ಲ
ಅವನು
ಸಂಜೆ ಹೊತ್ತಿಗೆ ಬರಬೇಕಾದ ಕರೆ
ಈ ಮಾರ್ಗ ತುಂಬಾ ಕಾರ್ಯನಿರತವಾಗಿವೆ
ಅವರು ಕರೆಯುತ್ತಿರುವ ಜೀವಗಳು
ಮಾರ್ಗ ಬಿಟ್ಟು ತೆರಳಿವೆ..