20080926

ಬಡಾ ಆದ್ಮಿ
ಮದುವೆಯಾಗುವಾಗ ಗಂಡೇ ಏಕೆ ದೊಡ್ಡವನಾಗಿರಬೇಕು? 
ಗೊತ್ತಿದ್ದರೆ ಯಾರಾದರೂ ಹೇಳುತ್ತೀರಾ?
ಯಾವ ದೇಶದಲ್ಲೂ ಇನ್ಯಾವುದೇ ಕೋಶದಲ್ಲೂ ಮತ್ಯಾವುದೇ ಕಾಲದಲ್ಲೂ ಎಲ್ಲಾ ಜನಾಂಗಗಳಲ್ಲೂ ಎಲ್ಲಾ ಬಗೆಯ ಮದುವೆಗಳಲ್ಲೂ ಗಂಡೇ ದೊಡ್ಡವನು.ಹೆಣ್ಣು ಅವನಿಗಿಂತ ಕಿರಿಯಳು
ಗಾತ್ರದಲ್ಲೂ ವಯಸ್ಸಲ್ಲೂ.
ಇದು ಎಂತಕೆ ಹೀಗಾಗುತ್ತದೆ?
ಹೋ ತೋ ಬಿಗ್ ಹೋ ಜಾಯೇ?!
ಹೀಗಿರಬಹುದೇ?
ಗಂಡು ಎಷ್ಟಾದರೂ ದುಡಿಯಬೇಕು. ದುಡಿದೂ ದುಡಿದೂ ಜೀವ ತೇಯಬೇಕು. ಪಾಪ ಸಾವಿರಾರು ವ್ಯವಹಾರ ಓಡಾಟ ತಲೆಹರಟೆಗಳ ನಡುವೆ ಅದು ಹೈರಾಣವಾಗಬೇಕು. ಇಷ್ಟೆಲ್ಲಾ ಆದಾಗ ಅದಕ್ಕೆ ಮುಪ್ಪು ಬೇಗನೇ ಅಡರುತ್ತದೆ. ವಯಸ್ಸಾದಾಗ ಮಕ್ಕಳು ನೋಡುತ್ತಾರೆ ಅಂತ ಏನು ಗ್ಯಾರಂಟಿ? 
ಹಾಗಿದ್ದಾಗ ಸ್ವಲ್ಪ ಎಳೆ ಪ್ರಾಯದ ಹೆಂಡತಿಯಾದರೆ ಆ ಕಷ್ಟದ ದಿನಗಳಲ್ಲಿ ಸಲಹಬಹುದು ಸೇವಾ ಮಾಡಬಹುದು. ಅವಳು ಗಟ್ಟಿಮುಟ್ಟಾಗಿರಬೇಕಾದರೆ ಗಂಡನ ಸೇವೆ ಮಾಡಬೇಕಾದರೆ ಆಕೆಗೆ ಅವನಿಗಿಂತ ಪ್ರಾಯ ಕಡಿಮೆ ಇರಬೇಕು ಮಿನಿಮಮ್ ಏಳು ವರ್ಷ?!
ಹೀಗಿರಬಹುದೇ?
ಹೆಣ್ಣು ಅಂದರೆ (ಹಿಂದೆಲ್ಲಾ) ನಾಚಿಕೆ ಸ್ವಭಾವ. ಮುಗುದೆ. ಪಾಪ ಏನೂ ಅರಿಯಳು. ಇಂಥ ಹುಡುಗಿಯನ್ನು ಅರಳಿಸಲು ಹೆಚ್ಚು ವಯಸ್ಸಿನ ಗಂಡೇ ಆಗಬೇಕು. ಆಗ ಮಾತ್ರಾ ಅತನಿಗೆ ಮುದ್ದಾಡುವ, ಗುದ್ದಾಡುವ ಪಾಠ ಹೇಳಿಕೊಡಲು ಗೊತ್ತು. ಶೃಂಗಾರಕಾವ್ಯ ಬರೆಯಲು ಗೊತ್ತು.ಸಂಸಾರ ಎಂದರೆ ಹಾಗೇ ತಾನೇ.ಕಲಿಸಬೇಕು ಕಲಿಯಬೇಕು?!
ಹೀಗಿರಬಹುದೇ?
ಮಿಲನಮಹೋತ್ಸವದಲ್ಲಿ ಗಂಡು ದೊಡ್ಡವನಾಗಿದ್ದರೆ ಹೆಣ್ಣಿಗೆ ಸುಖ.ಹೆಣ್ಣು ಚಿಕ್ಕವಳಾಗಿದ್ದರೆ ಗಂಡಿಗೆ ಹಿತ.ಎಷ್ಟಾದರೂ ಯುದ್ಧದಲ್ಲಿ ಸೋಲುವ ತವಕ ಹೆಣ್ಣಿನದ್ದು, ಯುದ್ಧ ಗೆದ್ದ ತೃಪ್ತಿ ಗಂಡಿನದ್ದೇ.ಮೇಲ್ ಯಾವತ್ತೂ ಮೇಲೆಯೇ.?!
 ಹೀಗಿರಬಹುದೇ?

ಹೆಣ್ಣು ಅಂದರೆ ಪಾಪಚ್ಚಿ. ಅವಳಿಗೆ ಭದ್ರತೆ ಬೇಕು. ಅದನ್ನು ಗಂಡಿನಿಂದ ಮಾತ್ರ ಆಕೆ ಪಡೆಯಬಹುದು. ಸ್ಟ್ರಾಂಗ್ ಹಸ್ಬೆಂಡ್ ಜೊತೆಗಿದ್ದರೆ ಸೇಫ್..
ಹೀಗಿರಬಹುದೇ?
ಮನೆ ಹೊಲ ಗದ್ದೆ ವ್ಯಾಪಾರ ವಹಿವಾಟು ಮುಂತಾಗಿ ಮಾಡಬೇಕಾದರೆ ಗಂಡು ದೊಡ್ಡವನಾಗಿದ್ದಾಗಲೇ ಸಾಧ್ಯ. ಈ ಹೆಣ್ಣು ಪಾಪ ತಿಂಗಳ ಕಷ್ಟ, ಬಸಿರು, ಬಾಣಂತನ ಮಕ್ಕಳ ಲಾಲನೆ ಪಾಲನೆ ಅಂತ ನಿತ್ಯವೂ ಪರದಾಟ.ಗಂಡೊಂದು ಬಲಿಷ್ಠವಾಗಿದ್ದರೆ ಸಂಸಾರ ಸುಸೂತ್ರ.
ಇದೆಲ್ಲಾ ಗತಕಾಲದ ರೂಲ್ಸ್. ಈಗ ಇದು ಯಾವುದೂ ನಾಟ್ ಅಪ್ಲಿಕೇಬಲ್.ಸ್ಟಿಲ್ ಈ ಗಂಡು ಮಸ್ಟ್ ಬಿ ಬಿಗ್ ಬೋತ್ ಇನ್ ಏಜ್ ಅಂಡ್ ಸೈಜ್. ಸ್ವಲ್ಪಾನೂ ಛೇಂಜೇ ಆಗಿಲ್ಲ.
ಸಂಪ್ರದಾಯದ ಮದುವೆ ಹಾಳಾಗಿ ಹೋಗಲಿ, ಈವನ್ ಲವ್ ಮ್ಯಾರೇಜುಗಳಲ್ಲೂ ಗಂಡ ಈಸ್ ಬಡಾ ಆದ್ಮಿ..!
ಯಲಾ ಇವನಾ!
ಈ ಬಿಗ್ ಬಾಯ್ ಕಾನ್ಸೆಪ್ಟ್ ವೇದಕಾಲದಲ್ಲಿ ಇರಲಿಲ್ಲ, ತಿಳಿದಿರಲಿ.
ರಾಮಾಯಣ ಕಾಲದಲ್ಲೂ ಯಾರೇ ಬಿಗ್ ಇರಬಹುದಿತ್ತು. ರಾಧೆ ಕನ್ನಯ್ಯನಿಗಿಂತ ಎಂಟು ವರ್ಷ ದೊಡ್ಡವಳಾಗಿದ್ದಳು.(ಆಕೆ ಹೆಂಡತಿಯಲ್ಲ, ಪ್ರೇಯಸಿ)
ಅದು ಯಾವಾಗ ಬಡಾ ಗಂಡ ಛೋಟಾ ಹೆಂಡತಿ ನಿಯಮ ಜ್ಯಾರಿಯಾಯಿತು ಗೊತ್ತಿದ್ದರೆ ತಿಳಿಸಿ.
ನನ್ನ ಪ್ರಕಾರ ಈ ನಿಯಮ ಮೊದಲು ಬಂದದ್ದು ಹಿಂದುಗಳಲ್ಲಿ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಹಿತ ಎಲ್ಲಾ ಕಮ್ಯೂನಿಟಿ ಅದನ್ನು ಫಾಲೋ ಮಾಡಿದೆ..
ಬಡೇ ಬಡೇ ವಿಚಾರ್..!20080924

ನದಿ ಮಾತನಾಡಲಿಲ್ಲ
ಕುಮಾರಧಾರೆಗೆ ಸೇತುವೆ ಇಲ್ಲ ಎಂಬ ವಿಚಾರ ಊರಿನ ಜನರಿಗೆ ಬೇಸರ ತರಿಸಿದ್ದು ಮೋನಪ್ಪನ ಭಾಷಣ ಕೇಳಿದಮೇಲೆಯೇ.
ಏನೇ ಹೇಳಿ ನಮ್ಮ ಊರಿಗೆ ಇನ್ನೂ ನಾವು ದೋಣಿ ಹಿಡಿದೇ ಬರುವುದು ಎಂದರೆ ಅದು ತುಂಬಾ ವಿಷಾದ ಸಂಗತಿ ಚಂದ್ರಲೋಕಕ್ಕೆ ಹೋಗುತ್ತಾರಂತೆ ಆದರೆ ನಮ್ಮೂರಿಗೆ ಒ0ದು ಸೇತುವೆ ಮಾಡಿಲ್ಲ ಎಂದು ಮೋನಪ್ಪ ಥೇಟ್ ಕಮ್ನಿಸ್ಟರ ಥರ ಹೇಳಿ ಊರವರನ್ನು ಬೆಚ್ಚಿಬೀಳಿಸಿದ ಮರುದಿನವೇ ಎಮ್ಮೆಲ್ಲೆ ಆಫೀಸಿಗೆ ಹತ್ತು ಸಮಸ್ತರು ಹೋಗಿ ಅರ್ಜಿ ಕೊಟ್ಟದ್ದು.
ನಮಗೆ ಸೇತುವೆ ಬೇಕು ಎಂದು ಅವರು ಅರ್ಜಿಯಲ್ಲಿ ಕೇಳಿಕೊಂಡಿದ್ದರು.
ಕೊಡೋಣ, ಏನಂತೆ ಈ ಸಾರೆ ಮಲ್ನಾಡು ಅಭಿವೃದ್ಧಿ ಯೋಜನೆಯಲ್ಲಿ ಅದನ್ನು ಹಾಕಿಸುತ್ತೇನೆ.
ಆದರೆ ಎಂಥಾ ಸೇತುವೆ ಹಾಕೋಣ?ತೂಗು ಸೇತುವೆಯಾ, ಸಿಂಗಲ್ ಸೇತುವೆಯಾ ಅಥವಾ ಲಾರಿ ಬಸ್ಸು ಬರುವಂಥದ್ದಾ ಎಂದು ಎಮ್ಮೆಲ್ಲೆ ಕೇಳಿದಾಗ ಹತ್ತುಸಮಸ್ತರು ಸ್ವಲ್ಪ ಮಟ್ಟಿಗೆ ಕನ್ಫ್ಯೂಸ್ ಆಗಿಹೋದರು.
ಅದನ್ನು ನಿಧಾನಕ್ಕೆ ಹೇಳುತ್ತೇವೆ ಸಾರ್.. ಆದರೆ ಸೇತುವೆಯಂತೂ ಬೇಕೇ ಬೇಕು. ತಾವು ಅದನ್ನು ಪಾಸ್ ಮಾಡಿಸಿ. ಆಮೇಲೆ ಕಟ್ಟುವ ಹೊತ್ತಿಗೆ ಯಾವ ಸೇತುವೆ ಅಂತ ವಿಚಾರ ಮಾಡೋಣ ಎಂದು ಹತ್ತು ಸಮಸ್ತರು ಅರಿಕೆ ಮಾಡಿಕೊಂಡಾಗ ಎಮ್ಮೆಲ್ಲೆ ಆಫೀಸಿನಲ್ಲಿ ಬಿಡಾರ ಹೂಡಿದ್ದ ಪೇಟೆ ಹುಡುಗರು ಈ ಹತ್ತು ಸಮಸ್ತರು ಬರೀ ಪೆಂಗಗಳೇ ಎಂದು ವಿಚಾರಮಾಡಿದರು.
ಆಮೇಲೆ ಊರಲ್ಲಿ ಹತ್ತುಸಮಸ್ತರು ಸೇತುವೆ ಸಂಬಂಧ ಒಂದು ಸಭೆ ಕರೆದರು.ತೂಗು ಸೇತುವೆ ಮಾಡಿದರೆ ವಾಹನಗಳು ಬರಲಿಕ್ಕಿಲ್ಲ.ವಾಹನಗಳು ಬಾರದಿದ್ದರೆ ಸೇತುವೆ ಮಾಡಿಯೂ ಪ್ರಯೋಜನವಿಲ್ಲ ಎಂದು ಯುವಕರು ಹೇಳಿದರು.
ಹೌದೌದು ಇಷ್ಟು ಕಾಲ ಸೇತುವೆ ಇಲ್ಲದೇ ನಾವು ಬದುಕಿಲ್ಲ. ತೂಗು ಸೇತುವೆ ಧಾರಾಳ ಸಾಕು.ಸುಮ್ಮನೇ ದೊಡ್ಡ ಸೇತುವೆ ಮಾಡಿದರೆ ಯುವಕರೇನು, ಮುದುಕರೂ ಹಾಳಾಗುವುದೇ ಎಂದು ಅರೆಮುದುಕರು ಹೇಳಿದರು.
ಸೇತುವೆಯಂತೆ ಸೇತುವೆ ಎಂಥಾ ಖರ್ಮಕ್ಕೆ ಸೇತುವೆ..ಕುಂಜೀರನ ದೋಣಿಯುಂಟು ಅವನೂ ಉಂಟು. ನಡುರಾತ್ರಿ ಕರೆದಾಗಲೂ ಆತ ಬರುವುದುಂಟು.ಬೇಕಾದ್ದು ಮಳೆಗಾಲ ನಾಲ್ಕು ತಿಂಗಳು.. ಆಮೇಲೆ ಹೊಳೆದಾಟುವುದಕ್ಕೆ ಏನಾಗುತ್ತದೆ ಎಂದರು ಮುದುಕರು.
ಇಷ್ಟರ ತನಕ ನಮ್ಮ ಹಳ್ಳಿಯಲ್ಲಿ ನಾವೇ ಇದ್ದದ್ದು.. ದೊಡ್ಡ ಸೇತುವೆ ಮಾಡಿದರೆ ಇನ್ನು ಯಾರ್‍ಯಾರೋ ಬರುತ್ತಾರೆ.. ಕಳ್ಳರೂ ಬಂದು ಸೇರಬಹುದು.. ಹೊಳೆ ಆಚೆಗೆ ನೆತ್ತರುಮುಜಲಿ ಉಂಟು. ಮಹಾ ವಿಷಕಾರಿ. ಸೇತುವೆ ಹಾಕಿದರೆ ಅದೂ ಇತ್ಲಾಗಿ ಬಂದು ಸೇರಿಕೊಂಡರೆ ಮತ್ತೆ ಅದರ ಸಂತಾನ ಅಳಿಸಲಿಕ್ಕೆ ಸಾಧ್ಯವಿಲ್ಲ ಎಂದು ಉಳಿದವರು ಹೇಳಿದರು.
ಆ ಸಭೆಯಲ್ಲಿ ಹೆಣ್ಮಕ್ಕಳು ಪಾಲ್ಗೊಂಡಿರಲಿಲ್ಲ. ಆದರೆ ಸೇತುವೆ ವಿಚಾರದಲ್ಲಿ ಅವರಿಗೆಲ್ಲಾ ಗಂಡಸರಿಗಿಂತ ಹೆಚ್ಚು ಆಸಕ್ತಿ ಇತ್ತು.
ಸೇತುವೆ ಆದರೆ ಬಸ್ಸು ಕಾರು ಬರುತ್ತವೆ. ಆಮೇಲೆ ಏನಾದರೂ ನೆಪ ಹಾಕಿ ಪೇಟೆಗೆ ಹೋಗಬಹುದು ಎಂದು ಹುಡುಗಿಯರು ಆಡಿಕೊಂಡರು.
ತಮ್ಮ ಹುಡುಗಿಯರು ಪೇಟೆ ಸಹವಾಸದಿಂದ ಹಾಳಾಗಬಹುದು ಎಂದು ಅಮ್ಮಂದಿರು ಹೆದರಿಕೊಂಡರು.
ದೊಡ್ಡ ಸೇತುವೆಯೇ ಮಾಡಿಸೋಣ. ಏಕೆಂದರೆ ಮುಂದೊಂದು ದಿನ ಅದು ಬೇಕು ಅಂತ ನಮಗಾಗಿಬಿಟ್ಟರೆ ಆಮೇಲೆ ಏನು ಮಾಡೋಣ ಆದ್ದರಿಂದ ದೊಡ್ಡ ಸೇತುವೆಯೇ ಮಾಡಿಸಿದರೆ ರಗಳೆಯೇ ಇಲ್ಲ ಎಂದು ಆ ಸಭೆಯಲ್ಲಿ ತೀರ್ಮಾನಕ್ಕೆ ಬಂದ ಊರಿನ ಹತ್ತು ಸಮಸ್ತರು ಆ ವಿಚಾರವನ್ನು ಅತಿ ಶೀಘ್ರದಲ್ಲೇ ಎಮ್ಮೆಲ್ಲೆಗೆ ತಿಳಿಸುವ ನಿಧಾರ ಕೈಗೊಂಡರು.
++++++++++
ಕುಮಾರಧಾರೆಗೆ ಸೇತುವೆ ಹಾಕುತ್ತಾರೆ ಎಂದು ಗೊತ್ತಾದ ಮೇಲೆ ಗೋಪಾಲ ತುಂಬಾ ದುಃಖಿತನಾಗಿಬಿಟ್ಟ. ಹೊಳೆ ಎಂದ ಮೇಲೆ ಅದಕ್ಕೆ ನಾವು ಒಪ್ಪಿಕೊಳ್ಳಬೇಕು. ಅಣೆಕಟ್ಟು ಸೇತುವೆ ಅಂತ ಮಾಡಿ ಹಾಕಿದರೆ ಹೊಳೆ ಎಂಬುದು ಯಾಕಿರಬೇಕು ಎಂದು ಗೋಪಾಲ ಆ ದಿನ ರಾತ್ರಿ ತನ್ನ ತೋಟದ ದಂಡೆಯಲ್ಲಿ ಕುಳಿತು ಚಿಂತಿಸಿದ. ಕೆಳಗೆ ಕುಮಾರಧಾರೆ ಇದು ಯಾವುದೂ ಗೊತ್ತಿಲ್ಲದಂತೆ ಹರಿಯುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅದರ ರೀತಿರಿವಾಜು ಏನೋ ಬೇರೆಯೇ ಇದ್ದಂತೆ ಗೋಪಾಲನಿಗೆ ಕಾಣಿಸಿತು.ಸೇತುವೆ ಮಾಡಿದರೆ ಆಮೇಲೆ ಕುಮಾರಧಾರೆಯ ಮೇಲೆ ಯಾರಿಗೂ ಅಕ್ಕರೆ ಉಳಿಯುವುದಿಲ್ಲ, ಭಯವೂ ಇರುವುದಿಲ್ಲ ಎಂದುಕೊಂಡ ಗೋಪಾಲ.
ಚಂದಿರನ ಮೇಲೆ ಎಷ್ಟೊಂದು ಪ್ರೀತಿ ಮಮತೆ ಇತ್ತು ಒಂದು ಕಾಲದಲ್ಲಿ ಭೂಲೋಕದ ಜನತೆಗೆ. ಯಾವಯಾವ ದೇಶಕೋಶಗಳಲ್ಲಿ ನೋಡಿದರೂ ಚಂದಿರನನ್ನು ಆರಾಧಿಸುವ ಪ್ರೀತಿಸುವ ಮೆಚ್ಚುವ ಕಲ್ಪನೆ ನಂಬಿಕೆಗಳಿದ್ದವು. ಚಂದಿರನ ಮೇಲೆ ಈ ತಗಡು ವಿಜ್ಞಾನಿಗಳು ಯಾವಾಗ ಮನುಷ್ಯರನ್ನು ಕಳುಹಿಸಿ ಯಂತ್ರಗಳನ್ನು ಹಾಕಿ ಬೇಡವಾದ ಸಂಶೋಧನೆಗಳನ್ನು ಮಾಡಿಟ್ಟರೋ, ಜನರಿಗೆ ಚಂದಿರನ ನೋಡುವಾಗಲೆಲ್ಲಾ ಯಾವುದೋ ಲ್ಯಾಬ್‌ನಲ್ಲಿ ರಸಾಯನಿಕ ವಸ್ತು ನೋಡಿದ ಹಾಗೇ ಆಗುತ್ತದೆ. ಆ ಪ್ರೀತಿ ಮರುಕಳಿಸಲಾಗದಂತಾಗಿ ತನ್ನಂಥ ಎಳೆಮನಸ್ಸಿನ ಮಂದಿ ಸಂಕಟ ಪಡುವಂತಾಗಿದೆ ಎಂದು ಗೋಪಾಲ ದುಃಖಿಸಿದ.
ಹಾಗೇ ಅಲ್ಲವೇ ಈ ಕುಮಾರಧಾರೆ ಕೂಡಾ. ಸಾವಿರಾರು ವರ್ಷಗಳಿಂದ ಕುಮಾರಧಾರೆಗೆ ಊರು ಮಣಿದಿದೆ. ನಾಳೆ ನದಿ ದಾಟಬೇಕು ಅಂದರೆ ಕುಮಾರಧಾರೆ ಒಪ್ಪಬೇಕು. ಕುಮಾರಧಾರೆ ತುಂಬಿ ಹರಿದಾಗ, ಸೊರಗಿ ಸಣಕಲಾದಾಗ, ಮಂದಗಾಮಿನಿಯಾಗಿ ಕುಣಿದಾಗ, ಸೊಕ್ಕೇ ಸುಪ್ಪತ್ತಿಗೆ ಎಂಬ ಹಾಗೇ ಭೋರ್ಗರೆದಾಗ ಊರೆಲ್ಲಾ ಕುಮಾರಧಾರೆಯನ್ನು ಎಷ್ಟೊಂದು ಗೌರವ, ಸಿಟ್ಟು ,ಪ್ರೀತಿ, ಮೋಹಗಳಿಂದ ನೋಡಿದೆ. ಇನ್ನು ಸೇತುವೆ ಹಾಕಿದರೆ ಮುಂದೆ ಕುಮಾರಧಾರೆಯನ್ನು ಯಾರಾದರೂ ಯಾಕೆ ಲೆಕ್ಕಕ್ಕೆ ಇಡುತ್ತಾರೆ ಎಂದು ಗೋಪಾಲ ಹಳಹಳಿಸಿದ.ಮಳೆಗಾಲದ ಪ್ರವಾಹ, ಬೇಸಗೆಯ ನೀರವತೆಯನ್ನು ಕೇಳುವವರೇ ಇರುವುದಿಲ್ಲ ಎಂದು ಗೋಪಾಲ ಅಪಾರವಾಗಿ ನೊಂದುಕೊಂಡ.

ಅಂತೂ ಕುಮಾರಧಾರೆಗೆ ದೊಡ್ಡ ಸೇತುವೆ ಮಂಜೂರಾಯಿತು. ಎಮ್ಮೆಲ್ಲೆ ತನ್ನ ಮಂತ್ರಿಯ ಜೊತೆಗೆ ಇಂಥಾ ದಿನ ಕೆಸರುಗಲ್ಲು ಹಾಕುವುದಾಗಿ ಊರಿನ ಹತ್ತು ಸಮಸ್ತರಿಗೆ ಹೇಳಿಕಳುಹಿಸಿದ್ದರು. ಊರು ತುಂಬಾ ಕಮಾನು ಕಟ್ಟಬೇಕು ,ಬಣ್ಣದ ಪತಾಕೆ ಹಾರಿಸಬೇಕು ಎಂದೂ ಎಮ್ಮಲ್ಲೆ ಕಡೆಯವರು ಹೇಳಿದ್ದರು. ಕೆಸರುಗಲ್ಲು ಹಾಕುವ ಹೊತ್ತಿಗೇ ಮಾಲೆಪಟಾಕಿ ಸಿಡಿಸಬೇಕು ಎಂದೂ ಹತ್ತು ಸಮಸ್ತರು ನಿರ್ಧರಿದರು.
++++++++++++
ಆ ರಾತ್ರಿಯೇ ಆದದ್ದು ಅನಾಹುತ. ಎಲ್ಲಿತ್ತೊ ಆ ಉಗ್ರ ಮಳೆ. ಘಟ್ಟದ ತಪ್ಪಲಿನಲ್ಲಿ ಆಕಾಶವೇ ತೂತಾಗಿ ಹೋದಂತೆ ಮಳೆ ಬಿದ್ದಿತ್ತಂತೆ. ಹಾಗಾಗಿ ಕುಮಾರಧಾರೆ ರೌದ್ರರೂಪ ತಾಳಿದಂತೆ ಸೊಕ್ಕಿನಿಂದಲೂ ಸೇಡಿನಿಂದಲೂ ಎಂಬಂತೆ ಹರಿಯಿತು. ಕೆಸರುಗಲ್ಲು ಹಾಕಲು ಎಮ್ಮೆಲ್ಲೆ ಮತ್ತು ಮಂತ್ರಿ ಬರುವುದಾದರೂ ಹೇಗೆ ಎಂದು ಹತ್ತುಸಮಸ್ತರು ಕೈಕೈಹಿಸುಕಿಕೊಂಡರು.
ಗೋಪಾಲ ಕುಮಾರಧಾರೆಯ ಅಸಮ್ಮತಿಯನ್ನು ಅರ್ಥಮಾಡಿಕೊಂಡವನಂತೆ ಹೊಳೆ ಬದಿ ಹೋಗಿ ನಿಂತು ವಿಚಿತ್ರವಾಗಿ ಸಂಕಟಪಟ್ಟ.
ಬೆಳಗಾದರೆ ಗೋಪಾಲನೇ ಊರಿಗೆ ಸುದ್ದಿ ತಂದದ್ದು. ಅದೇನೆಂದರೆ ಕುಮಾರಧಾರೆಯೇ ಕಾಣೆಯಾಗಿದೆ ಎಂಬುದು. ಇಷ್ಟು ವರ್ಷ ಇಲ್ಲೇ ಇದ್ದ ಹೊಳೆ ಎಲ್ಲಿ ಹೋಯಿತು ಎಂದು ಜನ ಕಂಗಾಲಾದರು. ಕುಮಾರಧಾರೆ ಮಾತ್ರಾ ಅಲ್ಲಿರಲಿಲ್ಲ.
ಆ ದಿನ ಪೂರ್ತಿ ಟಿವಿ, ರೇಡಿಯೋ, ಪೇಪರುಗಳಲ್ಲಿ ಕುಮಾರಧಾರೆ ತನ್ನ ಪಾತ್ರ ಬದಲಾಯಿಸಿದ ಸುದ್ದಿ ದೊಡ್ಡದಾಗಿತ್ತು.
20080921

ತೈಲಧಾರೆಯಂತೆ ಮನಸು ಕೊಡು.......ಇದು ಭಕ್ತಿಯೋ ಅಥವಾ ಪ್ರೀತಿಯೋ ಅಥವಾ ಭಕ್ತಿ ಪ್ರೀತಿ ಎರಡನ್ನೂ ಮೀರಿದ್ದೋ..
ನನಗೂ ಆಣೆ ರಂಗಾ ನಿನಗೂ ಆಣೆ
ನನಗೂ ನಿನಗೂ ಇಬ್ಬರಿಗೂ ಭಕ್ತರಾಣೆ
ಎನ್ನ ಬಿಟ್ಟು ಅನ್ಯರ ಸಲಹಿದರೆ ನಿನಗೆ ಆಣೆ ರಂಗಾ 
ನಿನ್ನ ಬಿಟ್ಟು ಅನ್ಯರ ಭಜಿಸಿದರೆ ಎನಗೆ ಆಣೆ

ಇದಿಷ್ಟೇ ಸಾಲು ಸಾಕು.
ಯಾರು ಹೇಳಿದ್ದು ಈ ಅನುಬಂಧವನ್ನು!
ದಾಸರೇ ಅಥವಾ ಭಕ್ತನೇ ಅಥವಾ ಆ ರಂಗನನ್ನು ಅದ್ಭುತವಾಗಿ ಪ್ರೀತಿಸುತ್ತಿರೋ ಆ ಹುಡುಗಿಯೇ..
ಯಾರು ಬೇಕಾದರೂ ಆಗಬಹುದು ಅಲ್ಲವಾ?
ಏಕೆಂದರೆ ಇದು ಆ ಅಸದಳವಾದ ಅನುಬಂಧದ, ಬಂಧುತ್ವದ, ಗೆಳೆತನದ, ಮೋಹದ, ಮರುಳು ಭಕ್ತಿಯ, ಬಿಡದ ನಂಟಿನ, ಬಿಟ್ಟಿರಲಾರದ ಪೊಸೆಸ್ಸಿವ್‌ನೆಸ್‌ನ ಲಹರಿ.
ಅಲ್ಲ ಎಂದರೆ ನಿಮ್ಮಾಣೆ.
ಎನ್ನ ಬಿಟ್ಟು ಇನ್ಯಾರನ್ನು ನೀನು ವಹಿಸಿಕೊಳ್ಳಬಾರದು ಎಂದು ತಾಕೀತು ಮಾಡಬೇಕಾದರೆ ಆ ಪ್ರೀತಿಯೋ ಭಕ್ತಿಯೋ ಅದೆಷ್ಟು ಪ್ರಬಲವಾದುದು ಇರಬೇಕು. ಅಬ್ಬಾ !
ಇದನ್ನು ಹೀಗೂ ಹೇಳಬಹುದು , ನೀವೇನಾದರೂ ಪ್ರೀತಿಯ ವರ್ತುಲದಲ್ಲಿ ಒಳಗೊಂಡಿದ್ದರೆ ಇದು ನಿಮಗೆ ಚೆನ್ನಾಗಿ ತಾನೇ ತಾನಾಗಿ ಅರ್ಥವಾದೀತು.ನಿಮ್ಮ ಹುಡುಗ ನಿಮ್ಮನ್ನು ಬಿಟ್ಟು ಇನ್ಯಾರನ್ನೋ ಹೆಸರೆತ್ತಿ ಮಾತನಾಡಲು ನೀವು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ನಿಮ್ಮ ಪ್ರೀತಿ ಕಠಿಣ.ನೀವು ಹುಡುಗನಾಗಿದ್ದರೆ ನಿಮ್ಮ ಹುಡುಗಿ ನಿಮ್ಮನ್ನು ಹೊರತುಪಡಿಸಿ ಇನ್ಯಾರನ್ನೋ ಗುರುತಿಸಲೂ ಆಗುವುದಿಲ್ಲ. ಏಕೆಂದರೆ ನಿಮ್ಮ ಅನುಬಂಧದಿಂದ ಆಕೆ ಎಂದಾದರೂ ಹೊರಗೆ ಬಾರದಂತೆ ನಿಮ್ಮ ಪ್ರೀತಿ ಮಾಡಿರುತ್ತದೆ.
ಪ್ರೇಮಿಗಳು ಗೋಳೋ ಅಂತ ಅಳುತ್ತಾರೆ. ಜಗಳ ಆಡುತ್ತಾರೆ. ಒಬ್ಬರಿಗೊಬ್ಬರು ವ್ಯಾಖ್ಯಾನ ಹೊರಡಿಸುತ್ತಾರೆ. ಅನೇಕ ಬಾರಿ ಫತ್ವಾ ಹೊರಡಿಸುವುದೂ ಇದೆ. 
ಆಮೇಲೆ ಒಂದಾಗುತ್ತಾರೆ. ಏಕೆಂದರೆ ಅವರಿಗೆ ಬಿಟ್ಟಿರಲು ಆಗುವುದೇ ಇಲ್ಲ. ಮನಸಾ ಬಿಟ್ಟಿರುವುದು ಸಾಧ್ಯವಾಗುವುದಾದರೆ ಅದು ಪ್ರೀತಿಯೇ ಅಲ್ಲ.
ಇಲ್ಲೂ ಅದೇ ಆಣೆಮಾತಿನ ಮಟ್ಟಿಗೆ ಹೋಗಿದೆ.ನಿನ್ನ ಬಿಟ್ಟಿರಲಾರೆ ನೀನೂ ಬಿಡಬಾರದು ಎಂದು ಹೇಳುವ ತುಡಿತ ನಾಲ್ಕೇ ನಾಲ್ಕು ಸಾಲಲ್ಲಿ ಇದಕ್ಕಿಂತ ಚೆಂದಕ್ಕೆ ಹೇಳುವುದು ಹೇಗೆ ?
ಇದು ಎಲ್ಲರಿಗೂ ಎಲ್ಲೆಡೆಯೂ ಎಲ್ಲಾ ಕಾಲದಲ್ಲೂ ಆಗುವಂಥದ್ದೇ ತಾನೇ ?
ಇದನ್ನೂ ಮೀರಿಸುವ ಇನ್ನೊಂದು ಸಾಲು ಇಲ್ಲಿ ಕೋಟ್ ಮಾಡಬಹುದು.
ಕೈಲಾಸವಾಸಾ ಗೌರೀಶ ಈಶಾ..
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ..
ಆಹಾ .. ತೈಲ ಧಾರೆಯಂಥ ಮನಸು ನೀಡಬೇಕಂತೆ. ಅಲ್ಲವೇ ಮತ್ತೆ..
ಅಂಥದ್ದೊಂದು ಮನಸು ಹಾಗೇ ಇರಬೇಕೇ ತಾನೇ?
ತೈಲಧಾರೆಯಂತೆ..
ಎಂದೂ ಎಲ್ಲೂ ಕಡಿದು ಹೋಗದಂತೆ.. ತೈಲ ಸುರುವುತ್ತಿದ್ದಂತೆ..ಅದರ ಜಿಡ್ಡಿನಂತೆ ಅದರ ಮೃದುಲದಂತೆ..ಅದರ ಉದ್ದೇಶದಂತೆ..
ನೀರನ್ನು ಬಿಟ್ಟು ತೈಲವೇ ಏಕೆ ಅಂತ ಕೇಳಬಹುದು..
ನೀರು ನಮ್ಮದಲ್ಲ, ತೈಲ ನಾವೇ ಮಾಡಿದ್ದು.
ನೀರು ಬತ್ತಲಾರದು. ತೈಲ ಎಂದಾದರೂ ಆರಬಹುದು ಬತ್ತಲೂ ಬಹುದು..
ಇದನ್ನು ಭಕ್ತಿಗೂ ಪ್ರೀತಿಗೂ ಎಲ್ಲಿಗೂ ಯಾರಿಗೂ ಅನ್ವಯಿಸಬಹುದು..ಹೇಗೇ ಮಾಡಿಕೊಂಡರೂ ಒಂದು ಮುಕ್ತಾಯವಿದೆ ಎಂಬುದನ್ನು ನಂಬಲೇಬೇಕು. ಅಲ್ಲಿಯ ತನಕ ಮನಸು ಕೊಡು...
 

20080919

ಇರುವುದೇನು ಗೊತ್ತು ಇರುವೆಗೆಸಕ್ಕರೆ ಇದ್ದಲ್ಲಿಗೆ ಇರುವೆ ಹೇಗೆ ಬರುತ್ತದೆ?
ನನಗೆ ಇನ್ನು ಈ ವಿಚಾರ ಅರ್ಥವಾಗಿಲ್ಲ. ಯಾರು ಹೇಳುತ್ತಾರೆ ಅದಕ್ಕೆ ಇಲ್ಲಿ ಸಕ್ಕರೆ ಇದೆ ಎಂದು?
ಸಕ್ಕರೆ ಸಿಹಿ ಎಂದು ಅದಕ್ಕೆ ಹೇಳಿದೋರು ಯಾರು?
ಸಕ್ಕರೆಯೇ ಆಗಬೇಕೆಂದಿಲ್ಲ. ಸಕ್ಕರೆ ಹಾಕಿದ ಯಾವುದೇ ವಸ್ತುವನ್ನೂ ಅದು ಮುತ್ತಿಕೊಳ್ಳುತ್ತದೆಯಲ್ಲಾ ಅದು ಹೇಗೆ?
ಹೋಳಿಗೆಯಲ್ಲಿ ಸಕ್ಕರೆ ಇದೆ ಎಂದು ಅದಕ್ಕೆ ಸೂಚಿಸಿದವರು ಯಾರು? 
ಇಂಥಾ ಸ್ಥಳದಲ್ಲಿ ಈ ಬಗೆಯ ಸಿಹಿತಿಂಡಿ ಇಂಥಿಂಥಾ ರೀತಿ ಮಾಡಿ ಮಡಗಲಾಗಿದೆ ಎಂದು ಅರುಹುವವರ್‍ಯಾರು?
ಇರುವೆ ಅದೇಕೆ ಸಕ್ಕರೆಯನ್ನೇ ಮುತ್ತುವುದು?ಸಕ್ಕರೆಯೇ ಅದಕ್ಕೆ ಏಕೆ ಅಷ್ಟೊಂದು ಇಷ್ಟವಾಗಬೇಕು?
ಸಕ್ಕರೆಯ ಅಥವಾ ಸಿಹಿಯನ್ನಲ್ಲದೇ ಇನ್ಯಾವುದನ್ನೇ ಇಟ್ಟರೂ ಇರುವೆಗೆ ಏಕೆ ಬೇಡ?

ಪ್ರೀತಿ ಎಲ್ಲಿದೆ ಎಂದು ಪ್ರೇಮಿಗೆ ಯಾರೂ ಹೇಳಬೇಕಿಲ್ಲ.ಪ್ರೀತಿ ಇದ್ದಲ್ಲಿ ಪ್ರೇಮಿಸುವ ಜೀವ ಹುಡುಕಿಕೊಂಡೇ ಬರುತ್ತದೆ.ಯಾರು ಹೇಳುತ್ತಾರೆ ಆ ಜೀವಕ್ಕೆ ಈ ಹೃದಯ ತುಂಬಾ ಪ್ರೀತಿ ಇದೆ ಎಂದು?
ಪ್ರೀತಿಯಲ್ಲದೇ ಮತ್ತೊಂದನ್ನು ಪ್ರೇಮಿ ಮುಟ್ಟುವನೇ?

ಸಕ್ಕರೆಯೇ ಒಂದೊಮ್ಮೆ ಇಲ್ಲ ಎಂದಾಗಿದ್ದರೆ ಇರುವೆಯ ಇರುವಿಕೆಗೆ ಅರ್ಥ ಉಳಿಯುತ್ತಿತ್ತಾ..?
ಪ್ರೀತಿಯೇ ಈ ಜಗದಲ್ಲಿ ಇಲ್ಲದಿದ್ದರೆ ಪ್ರೇಮ ಎಂಬೊಂದು ಸ್ವಲ್ಪ ಸಿಹಿ ಸ್ವಲ್ಪ ಕಹಿ ಇರುತ್ತಿತ್ತಾ?
ಪ್ರೇಮಿಗಳೇ ಇಲ್ಲದ ಕ್ಷಣಗಳು ಸಿಗಬಹುದಾ ?


20080916

ನಿರ್ವೃತಿ
ಪರಮಾನಂದರು ಎಂದಿನಂತಿರಲಿಲ್ಲ. ಅಂದು ಮುಂಜಾನೆ ಕೋಳಿ ಕೂಗುವ ಮೊದಲೇ ಎದ್ದು ಎಂದಿನಂತೆ ಅವರು ಸ್ನಾನಕರ್ಮಾದಿಗಳನ್ನು ಪೂರೈಸಿ ದೇವರಗುಡಿಯ ಹೊರಗೆ ಇರುವ ತೀರ್ಥಮಂಟಪದಲ್ಲಿ ಧ್ಯಾನಕ್ಕೆ ಕುಳಿತಿದ್ದವರು ಇದ್ದಕ್ಕಿದ್ದಂತೆ ಯಾವುದೋ ನಿರ್ಧಾರಕ್ಕೆ ಬಂದವರಾಗಿ ಎದ್ದು ನಿಂತರು.
ಹಾಗೊಂದು ನಿರ್ಧಾರ ಅವರಿಗೆ ಧ್ಯಾನಾಸಕ್ತನಾಗಿದ್ದಾಗಲೇ ಹೊಳೆದುಬಿಟ್ಟದ್ದು ಅನಿರ್ವಚನೀಯ ಆನಂದವನ್ನು ತಂದಿತ್ತು.
ಪರಮಾನಂದರು ಎದ್ದು ಬೇಗನೇ ಗುಡಿಯಿಂದ ಹೊರಡುವುದನ್ನು ನೋಡಿದ ಗುಡಿಯ ಕೈದೀವಿಗೆಯಾಳು ಸುರೇಶ ಈ ವಿಚಾರವನ್ನು ಯಾರ ಬಳಿ ಹೇಳಿದರೆ ಉತ್ತಮ ಎಂದು ತುಂಬಾ ಹೊತ್ತು ಯೋಚಿಸಿ ಆಮೇಲೆ ಯಾರಲ್ಲೂ ಹೇಳಬಾರದು ಎಂದು ನಿರ್ಧರಿಸಿದ.ಕಾರಣ ಪರಮಾನಂದರೇನಾದರೂ ತನಗೆ ಶಾಪ ಹಾಕುವರೆಂಬ ಹೆದರಿಕೆ ಅವನಿಗಾಗಿತ್ತು.
ಹಾಗೇ ಗುಡಿಯಿಂದ ಹೋದ ಪರಮಾನಂದರು ತನ್ನ ಆಶ್ರಮಕ್ಕೂ ಹೋಗದೇ ಕಾಣೆಯಾಗಿದ್ದಾರೆ ಎಂದು ಊರಲ್ಲಿ ಸುದ್ದಿ ಹಬ್ಬಿದ್ದು ಆ ದಿನ ಸಂಜೆಯೇ. ಆ ವೇಳೆಗೆ ಸುರೇಶ ಪಾನಕದಂಗಡಿಗೆ ಬಂದು ಮೊದಲ ಕಂತಿನ ಸೋಮರಸವನ್ನು ಸೇವಿಸಿಯಾಗಿತ್ತಾದ್ದರಿಂದ; ಮುಂಜಾವಿನಲ್ಲಿ ತಾನು ಕಂಡದ್ದನ್ನು ಯಾರಲ್ಲೇ ಹೇಳಿದರೂ ಯಾರೂ ನಂಬುವುದಿಲ್ಲ ಎಂದೂ ಅವನಿಗೆ ಆ ಮತ್ತಿನಲ್ಲೂ ಗೊತ್ತಾಗಿತ್ತು.
ಸುರೇಶ ಸೊಲ್ಲೆತ್ತಲಿಲ್ಲ.
ಪರಮಾನಂದರು ಎಲ್ಲಿ ಹೋದರು ಎಂದು ಅವರ ಪಾಠಶಾಲೆಯ ಶಿಷ್ಯರೆಲ್ಲಾ ಚಿಂತಾಕ್ರಾಂತರಾಗಿ ಕುಳಿತು ಮುಂದಿನ ವಿಚಾರವನ್ನು ಊರಿನ ಗಣ್ಯರೇ ನಿರ್ಧರಿಸುವರು ಎಂದು ಸುಮ್ಮನಿದ್ದರು. ಪರಮಾನಂದರ ಸಹವಾಸದಲ್ಲಿ ಆ  ಮಟ್ಟಿನ ಸ್ಥಿತಪ್ರಜ್ಞತೆ ಆ ಶಿಷ್ಯರಿಗೆ ಬಂದಿತ್ತು.
ಊರಿನ ಮಂದಿ ಆ ರಾತ್ರಿಯೇ ಊರಲ್ಲಿ ದೊಡ್ಡಮಟ್ಟಿನ ಸಭೆ ಕರೆದು ಪರಮಾನಂದರ ಕಣ್ಮರೆಯನ್ನು ಯಾರೂ ಪ್ರಚುರಪಡಿಸಬಾರದೆಂದೂ ಹಾಗೇ ಮಾಡಿದವರಿಗೆ ದಂಡ ಹಾಕಲಾಗುವುದೆಂದೂ ಅಪ್ಪಣೆ ಕೊಡಿಸಿದರು.
ಪರಮಾನಂದರು ಕಣ್ಮರೆಯಾಗಿದ್ದಾರೆಂದು ಊರಿನ ಯಾವತ್ತೂ ಪ್ರಜೆ ನಂಬಲಾರರು. ಏಕೆಂದರೆ ಪರಮಾನಂದರಿಗೆ ಅಂತರ್ಧಾನವಾಗುವ ಕಲೆ ಸಿದ್ಧಿಸಿತ್ತು ಎಂಬ ಮಾತೂ ಆ ಊರಲ್ಲಿ ಪ್ರಚಾರದಲ್ಲಿತ್ತು. ಹಾಗಿರುವುದರಿಂದ ಪರಮಾನಂದರು ಅಂತರ್ಧಾನರಾಗಿದ್ದು, ತಮ್ಮ ಕಾರ್ಯಪೂರೈಸಿದ ಮೇಲೆ ವಾಪಾಸ್ಸಾಗುತ್ತಾರೆಂದೂ ಆ ಬಳಿಕ ಊರಿಗೆ ಮಳೆ ಬೆಳೆ  ಸಿದ್ಧಿಸಿ, ಕಲ್ಯಾಣವಾಗುವುದೆಂದೂ ಗಣ್ಯರು ಹೇಳಿದ ಮಾತನ್ನು ಎಲ್ಲರೂ ಒಪ್ಪಿಕೊಂಡು ಆ ಸಭೆಯಿಂದ ನಿರ್ಗಮಿಸಿದರು.
ಕೈದೀವಿಗೆಯಾಳು ಸುರೇಶ ಮಾತ್ರಾ ಆ ಸಭೆ ಬರ್ಖಾಸ್ತಾದರೂ ತಾನು ಮಾತ್ರಾ ತಡ ರಾತ್ರಿ ವರೆಗೆ ಅಲ್ಲೇ ಕುಳಿತಿದ್ದ. ಪರಮಾನಂದರು ಯಾವುದೋ ಭಿನ್ನ ಶೈಲಿಯಲ್ಲಿ ಗುಡಿಯಿಂದ ಹೊರಗೆದ್ದು ಹೋದುದು ಅವನಿಗೆ ಅನುಮಾನಗಳನ್ನು ಹೆಚ್ಚಿಸುತ್ತಾ ಇತ್ತು.

ಇತ್ತ ಗುಡಿಯಿಂದ ಹೊರ ಬಂದ ಪರಮಾನಂದರು ಗುಡಿಯ ಹಿಂಭಾಗದಲ್ಲಿರುವ ಹೂಬೆಟ್ಟದತ್ತ ಸಾಗಿದರು. ದಟ್ಟ ಅರಣ್ಯದಲ್ಲಿ ಅವರು ವೇಗವಾಗಿ ನಡೆಯುತ್ತಾ ನಡೆಯುತ್ತಾ ಸೂರ್‍ಯ ದೇವರು ನಡುನೆತ್ತಿಗೆ ಬರುವ ಹೊತ್ತಿಗೆ ಆ ಹೂಬೆಟ್ಟದ ಸರ್ವಜ್ಞಮಂಟಪದಲ್ಲಿ ಬಂದು ಕುಳಿತರು. ಇದ್ದಕ್ಕಿದ್ದಂತೆ ಅವರು ಅದೇ ಮಂಟಪದಲ್ಲಿ ತಪಸ್ಸನ್ನು ಆರಂಭಿಸಿಯೇ ಬಿಟ್ಟರು.
ಪರಮಾನಂದರಿಗೆ ಅಂಥದ್ದೊಂದು ಶಕ್ತಿಯಿತ್ತು. ಅವರು ತಪೋಭೂಮಿಕೆಯಲ್ಲಿ ಕುಳಿತರು ಎಂದರೆ ಅವರಿಗೆ ಮುಂದೆ ಎಲ್ಲಾ ಕಾಲ ದೇಶಗಳು ಅತೀತವಾಗಿಬಿಡುವವು.ಸರ್ವಜ್ಞಮಂಟಪದಲ್ಲಿ ಕಣ್ಣುಮುಚ್ಚಿ ತಪಸ್ಸನ್ನು ಆರಂಭಿಸಿದ ಪರಮಾನಂದರು ಸರ್ವಶಕ್ತನಾದ ಪರಬ್ರಹ್ಮನು ಕಣ್ಣಮುಂದೆ ಕಾಣಿಸುವ ತನಕ ಆಹಾರ ನೀರು ವಿಷಯ ವಿಚಾರಗಳನ್ನು ತ್ಯಜಿಸುವ ಕಠೋರ ನಿರ್ಧಾರಬದ್ಧರಾಗಿಬಿಟ್ಟರು.
ಪರಮಾನಂದರು ಅದೆಷ್ಟು ಕಾಲ ಹಾಗೇ ಕುಳಿತಿದ್ದರೋ ಯಾರಿಗೂ ಗೊತ್ತಿರಲಿಲ್ಲ.ದೇವಾನುದೇವತೆಗಳೆಲ್ಲಾ ಕಂಪಿತರಾಗಿ ಪರಮಾನಂದರ ಈ ತಪಸ್ಸನ್ನು ಪರಬ್ರಹ್ಮನಿಗೆ ಅರಿಕೆ ಮಾಡಿದರು.
ಅಂತೂ ಆ ಬ್ರಹ್ಮದೇವ ಪರಮಾನಂದರ ತಪಸ್ಸನ್ನು ಮೆಚ್ಚಿ ಸರ್ವಜ್ಞಮಂಟಪಕ್ಕೆ ಬಂದು ನಿಂತ. ಪರಮಾನಂದರು ಕಣ್ಣು ತೆರೆದರು. 
ಮಗೂ ಎಂದ ಬ್ರಹ್ಮದೇವ.
ಪರಮಾನಂದರು ಕೈ ಎತ್ತಿ ಆ ದೇವರನ್ನು ವಿಧವಿಧವಾಗಿ ಭಜಿಸಿದರು. 
ಏನು ಬೇಕು ಕೇಳು ಎಂದ ಬ್ರಹ್ಮದೇವ.
ತಂದೇ ನನ್ನನ್ನು ನಾಸ್ತಿಕನ್ನಾಗಿ ಮಾಡು ಅಷ್ಟು ಸಾಕು ಎಂದರು ಪರಮಾನಂದರು.
ಇಷ್ಟು ಕಾಲ ನಿನ್ನನ್ನು ನಂಬಿದೆ. ನಿನಗಾಗಿ ಹಂಬಲಿಸಿದೆ.ನಿನ್ನನ್ನು ಪ್ರೀತಿಸಿದೆ, ಭಜಿಸಿದೆ.ಆರಾಧಿಸಿದೆ.ಈಗ ಎಲ್ಲವೂ ಸಾಕು ಎಂದು ಅನಿಸಿದೆ.ಇನ್ನೆಂದೂ ನಿನ್ನನ್ನು ನಾನು ನಂಬಬಾರದು, ನಿನಗಾಗಿ ಹಂಬಲಿಸಬಾರದು, ಪ್ರೀತಿಸಬಾರದು,ಭಜಿಸಬಾರದು..ನಾನು ನಾಸ್ತಿಕನಾಗುವೆ,ನನಗೆ ವಿಷಯಾಸಕ್ತಿಗಳನ್ನು ಕೊಡು,ವಿಷಯಲಂಪಟನಾಗುವಂತೆ ನನ್ನ ಮಾಡು,ಕಾಮಕ್ರೋಧಾದಿಗಳು ನನ್ನನ್ನು ಆವರಿಸಲಿ,ಲೋಕವ್ಯಾಪಾರಗಳು ನನ್ನನ್ನು ಮುತ್ತಿಕೊಳ್ಳಲಿ..ಎಂದು ಬಿನ್ನವಿಸಿಕೊಂಡರು.
ತಥಾಸ್ತು ಎಂದ ಆ ಬ್ರಹ್ಮದೇವ.ಪರಮಾನಂದರು ಕಣ್ಣುಮುಚ್ಚಿ ಅದನ್ನು ಸ್ವೀಕರಿಸಿದರು.ಬ್ರಹ್ಮದೇವ ಅಂತರ್ಧಾನನಾದ.ಪರಮಾನಂದರು ಸರ್ವಜ್ಞಮಂಟಪದಿಂದ ಇಳಿದು ಬೇಗಬೇಗನೇ ಹೂಬೆಟ್ಟವನ್ನು ಅವರೋಹಣಗೈಯುತ್ತಾ ಊರಿನ ಗುಡಿಯ ಬಳಿ ಬಂದರು.
ಏನಾಶ್ಚರ್ಯ!
ಅಲ್ಲಿ ಗುಡಿಯೇ ಇರಲಿಲ್ಲ. ಯಾವನೋ ಒಬ್ಬ ಅಲ್ಲಿ ನಡೆದುಹೋಗುತ್ತಿದ್ದ. ಪರಮಾನಂದರು ತಾನು ಪರಮಾನಂದ ಎಂದು ಹೇಳಿದರು. ಆತ ಯಾವ ಪರಮಾನಂದ ಎಲ್ಲಿಯ ಪರಮಾನಂದ ಎಂದು ತಿರುಗಿ ಕೇಳಿದ.ಈ ಗುಡಿ ಆ ಆಶ್ರಮ ಎಂದರು ಪರಮಾನಂದರು. ಆತ ಮತ್ತೆ ಯಾವ ಗುಡಿ, ಎಲ್ಲಿಯ ಆಶ್ರಮ ಎಂದು ಕೇಳಿ ಯಾವುದೋ ಜಂತುವನ್ನು ನೋಡುವಂತೆ ಪರಮಾನಂದರನ್ನು ನೋಡತೊಡಗಿದ.
ತಬ್ಬಿಬ್ಬಾದ ಪರಮಾನಂದರು ಅಲ್ಲಿಂದ ಓಡೋಡಿ ಊರ ಹೆಬ್ಬಾಗಿಲು ದಾಟಿ ಒಳ ಹೊಕ್ಕರು.ಊರಿಗೆ ಊರೇ ಕಾಣೆಯಾಗಿತ್ತು. ಬವಳಿ ಬಂದಂತಾಗಿ ಹೆಬ್ಬಾಗಿಲು ದಾಟಿ ಹೊರಗೆ ಬಂದರು. 
ಕೈದೀವಿಗೆಯಾಳು ಸುರೇಶ ಅಲ್ಲಿ ನಿಂತಿದ್ದ.
ಅವನು ತುಂಬಾ ಮುದುಕನಾಗಿದ್ದ.
ತನಗಾಗಿ ಆತ ಕಾಯುತ್ತಿದ್ದಾನೆ ಎಂದು ಪರಮಾನಂದರಿಗೆ ಗೊತ್ತಾಯಿತು.
ಸುರೇಶ, ಊರವರೆಲ್ಲಾ ಎಲ್ಲಿ ಹೋದರು ಎಂದು ದೀನನಾಗಿ ಕೇಳಿದರು.ಸುರೇಶ ಮಾತೆತ್ತಲಿಲ್ಲ. ಒಂದು ಸಾರೆ ಆತ ಕಣ್ಣುಮುಚ್ಚಿದ.
ಪರಮಾನಂದರು ಆತನ ಭುಜ ಹಿಡಿದು ಅಲ್ಲಾಡಿಸಿದರು.
ಆತ ದೊಪ್ಪನೇ ಬಿದ್ದ.
ಪರಮಾನಂದರು ಮತ್ತೆ ಹೂಬೆಟ್ಟದತ್ತ,ಸರ್ವಜ್ಞಪೀಠದತ್ತ ನಡಿಗೆ ಆರಂಭಿಸಿದರು.20080911

ನೋ ನೀಡ್

ಯಾರಿಗೂ ಯಾರೂ ಅನಿವಾರ್ಯವಲ್ಲ.
 ಹಾಗೆಂದರೆ ಯಾರೂ ನಂಬುವುದಿಲ್ಲ. ಇಲ್ಲಿಂದಲೇ ಶುರು ಆಧ್ಯಾತ್ಮ. ಈ ಮಾತೇ ಭವದ ವಿದಾಯಕ್ಕೆ ಮುನ್ನುಡಿ.
ಸುಮ್ಮನೇ ನಾವು ಅನೇಕ ಬಾರಿ ಆತ/ಆಕೆ ನನಗೆ ಅನಿವಾರ್ಯ ಅಂತ ಗಾಢವಾಗಿ ನಂಬುತ್ತೇವೆ.ನಂಬಿದ್ರೆ ಪರವಾಗಿಲ್ಲ. ಗಾಢವಾಗಿ ನಂಬೋದು ಅನಾಹುತ.ಗಾಂಧಿ ಇದ್ದಾಗ ಅನೇಕರು ಗಾಂಧಿ ಇಲ್ಲದ ಭಾರತವನ್ನು ಊಹಿಸಲೇ ಆಗದು ಎಂದುಕೊಂಡಿದ್ದರಂತೆ. ಆದರೇನಾಯಿತು, ಭಾರತ ಅಂತ ಒಂದು ಪೂರ್ತಿ ಆಗುವ ಮೊದಲೇ ಗಾಂಧಿ ಢಮಾರ್
ನೆಹರೂ ಹೇಳಿದ್ದ, ಆಫ್ಟರ್ ಮೆ ಡೆಲ್ಯೂಜ್ ಅಂತ. ಇಂದಿರಾ ಎಂದರೆ ಇಂಡಿಯಾ ಎಂದರು.ಮೊನ್ನೆ ಮೊನ್ನೆ ವಾಜಪೇಯಿ ಏನಾದರೂ ಹೆಚ್ಚುಕಮ್ಮಿ ಆಗಿಬಿಟ್ಟರೆ ನಮ್ಮ ದೇಶದ ಗತಿ ಏನಪ್ಪಾ ಅಂತ ಅನ್ತಾ ಇದ್ದರು. ಈಗ ವಾಜಪೇಯಿ ಪರ್ಮಿಟ್ ಸರಂಡರ್ ಆದ ಲಾರಿ ತರ ಆಗಿಬಿಟ್ಟಿದ್ದಾನೆ. ಕಲಾಂ ಬಿಟ್ಟರೆ ಈ ದೇಶಕ್ಕೆ ಪ್ರೆಸಿಡೆಂಟೇ? ಎಂದಿದ್ದರು ಹಲವರು. ಪ್ರತಿಭಾ ಎಂಬ ಮುದುಕಿ ಪ್ರೆಸಿಡೆಂಟೆಮ್ಮ ಆಗಿದ್ದಾಳೆ.. ಏನಾಗಿದೆ? ಎಲ್ಲಾ ಎಂದಿನಂತೇ ಇದೆ.
ಸುಮ್ಮನೇ ಹೆಂಡತಿ ಹೇಳ್ತಾ ಇರತಾಳೆ, ನೀವು ಇಲ್ದೇ ನಾನು ಇರಲಾರೆ ಅಂತ. ಗಂಡ ಗೊಟಕ್ ಆದಾಗ ಮೂರು ದಿನ ನೀರು ಮುಟ್ಟದೇ ಆಮೇಲೆ ಉಪಾಹಾರ ಆರಂಭಿಸಿ ಹನ್ನೊಂದನೇ ದಿನಕ್ಕೆ ಉತ್ತರಕ್ರಿಯೆಯಲ್ಲಿ ಪಾಯಸ ತಿನ್ತಾಳೆ, ಕಣ್ಣೀರು ಹಾಕುತ್ತಾ.. ಮುಂದಿನ ತಿಥಿ ಬರೋದರ ಒಳಗೆ ಗಂಡ ಅಷ್ಟೊಂದು ಅನಿವಾರ್ಯ ಆಗಿರಲಿಲ್ಲ ಎಂದು ಆಕೆಗೆ ಅರ್ಥವಾಗಿರುತ್ತದೆ.
ಚಿನ್ನಾ ನನ್ನ ಕೊನೆಯುಸಿರು ಇರೋವರೆಗೂ ನೀನು ನನಗೆ ಬೇಕು ಅನ್ತಾಳೆ ಹುಡುಗಿ, ಆಮೇಲೆ ಇನ್ನೊಬ್ಬನ ಜೊತೆ ಮದುವೆ ಆದರೆ  ಈ ಪಾರ್ಟ್‌ಟೈಂ ಪ್ರಿಯಕರ ಚಿನ್ನ ಹೋಗಿ ಬೆಟ್ಟೆ ಬಂಗಾರ ಆಗಿರುತ್ತಾನೆ.
ಯಾರಿಗೆ ಯಾರಾದರೂ ಏಕೆ ಅನಿವಾರ್ಯ ಆಗಿರಬೇಕು ಎಂಬುದೇ ಪ್ರಶ್ನೆ.
ಯಾರೂ ಇನ್ನೊಂದು ಜೀವದ ಆಗ್ರಹಕ್ಕಾಗಿ ಹುಟ್ಟಿಬರುವುದಿಲ್ಲ. ಯಾರೂ ಬೇಡಿ, ಬಯಸಿ ಹುಟ್ಟುವುದೂ ಇಲ್ಲ. ಸುಮ್ಮನೇ ಎಲ್ಲಾ ಹುಟ್ಟುಗಳೂ ಆಕಸ್ಮಿಕ.
ಹುಟ್ಟೇ ಅನಿವಾರ್ಯವಲ್ಲದ ಮೇಲೆ ಜೀವನ ಅನಿವಾರ್ಯ ಹೇಗಾಗುತ್ತದೆ ಮತ್ತು ಸಾವೂ ಕೂಡಾ ಹುಟ್ಟಿನ ಅಂತ್ಯವೇ ಹೊರತು ಅದು ಯಾವುದರಿಂದಲೋ ಕಳಚಿಕೊಳ್ಳೋದು ಅಂತ ಹೇಗಾಗುತ್ತದೆ ಅಥವಾ ಯಾರಿಗೋ ವಿದಾಯ ಏಕಾಗಬೇಕು? ಯಾರಿಗೂ ಯಾರೂ ಅನಿವಾರ್ಯವಲ್ಲದ ಮೇಲೆ ಎಲ್ಲರೂ ಹಾಗೇ ಎಂಬಂತೆ ಮಾಡುವುದು ಯಾರು ನಮ್ಮ ಮನಸ್ಸೇ ಅಥವಾ ವ್ಯವಸ್ಥೆಯೇ ?


20080909

ಅವಳ ಇವನ ಬಳಿಕ ಕತೆಗಾರ ಹೇಳುವ ಕತೆ

ಹುಡುಗಿ
ಈ ಸಂಬಂಧಗಳೆಲ್ಲಾ ಹೀಗೇಕಾಗಾತ್ತವೆ ಎನ್ನುವುದೇ ನನ್ನ ಸಮಸ್ಯೆ.

ನೋಡಿ ಇದರಲ್ಲಿ ನನ್ನ ತಪ್ಪೇನು ಇದೆ. ನಾನು ಪ್ರೀತಿಯನ್ನು ಅವನಲ್ಲಿ ಹುಡುಕಿದೆ. ಅಷ್ಟಕ್ಕೇ ಅವನು ನನ್ನನ್ನು ಹಾಗೊಂದು ರೀತಿಯಲ್ಲಿ ಆವರಿಸುವುದಾ?

ಏನು ಪ್ರೀತಿ ಅಂದರೆ? ಸಂಬಂಧಗಳು ಅಷ್ಟೆಯಾ ?

ಒಂದು ಹುಡುಗಿ ಮತ್ತೊಬ್ಬ ಹುಡುಗ ಮುಗಿಯಿತಾ?

ಅತ್ತು ಬಿಡೋಣ ಅನಿಸುತ್ತದೆ. ಅತ್ತೇ ಬಿಟ್ಟಿದ್ದೆ.

ಆರಂಭದಲ್ಲಿ ಅಮ್ಮ ನನಗಿಷ್ಟವಾದಳು. ಅದಕ್ಕೇ ಅಲ್ಲವೇ ನಾನು ಉಚ್ಚೆ ಕೂಡಾ ಅವಳ ಮಡಿಲ್ಲಲಿ ಮಾಡಿದ್ದು.ಅವಳು ಯಾವತ್ತಾದರೂ ಕೋಪ ಮಾಡಿದ್ದಳಾ? ನನ್ನ ಕುಂಡೆ ತೊಳೆಯುತ್ತಿದ್ದಳಲ್ಲಾ ಅವಳಿಂದ ತೊಳೆಯಿಸಿಕೊಳ್ಳೋದು ನನಗೆ ಇಷ್ಟವಾಗುತ್ತಿತ್ತು ಅಂತ ಈಗ ಅನಿಸುತ್ತಿದೆ. ಅಪ್ಪ ನನಗೆ ತುಂಬಾ ಇಷ್ಟವಾಗುತ್ತಿದ್ದ. ಅವನನ್ನು ತಬ್ಬಿಕೊಳ್ಳದೇ ನಿದ್ದೆಯೇ ಹತ್ತುತ್ತಿರಲಿಲ್ಲ. ಅಪ್ಪ ಮನೆಗೆ ಬರೋದಕ್ಕೇ ಮಧ್ಯರಾತ್ರಿಯ ತನಕವೂ ಕಾಯುತ್ತಿದ್ದೆ. ಯಾಕೋ? ಸುಮ್ಮನೇ ಬಿದ್ದುಕೊಳ್ಳುತ್ತಿದ್ದರೆ ನಿದ್ದೆ ಬರಲಾದೇ ಇತ್ತಾ?ಆದರೂ ಅಪ್ಪ ಬೇಕು ಅವನ ತೋಳು ಬೇಕು ಅವನ ಅಪ್ಪುಗೆ ಬೇಕು ಅಂತ ಆಗುತ್ತಿತ್ತಲ್ಲಾ ..

ಈಗ ಅಪ್ಪನ ನೆನಪಾಗುವಾಗಲೆಲ್ಲಾ ಅವನ ಬನಿಯನ್ನಿನ ಘಾಟು ನೆನಪಾಗುತ್ತದೆ. ಅಮ್ಮ ಯಂಗ್ ಆಗಿಲ್ಲಾ ಅಂತ ಬೇಜಾರಾಗುತ್ತದೆ.

ದೊಡ್ಡವಳಾದಾಗ ಯಾರ ಬಳಿ ಹೇಳಿದ್ದು? ಅಮ್ಮನಿಗಿಂತಲೂ ಮೊದಲಾಗಿ ಆ ಗೆಳತಿ ಬಳಿಯೇ..

ಅವಳು ಅದ್ಯಾಕೋ ಹತ್ತಿರ ಕುಳಿತಿದ್ದರೆ ಏನೇನೋ ಆಗುತ್ತಿತ್ತು. ಪುಸ್ತಕ ಬಿಡಿಸಿದರೆ ಹುಡುಗರ ಸುದ್ದಿ ಮಾತಾಡಲಿ ಅಂತ ಆಗುತ್ತಿತ್ತು. ಅವಳು ಬೆನ್ನಿಗೆ ಕೈ ಇಟ್ಟಾಗಲೆಲ್ಲಾ ಇಡಲೀ ಅಂತಾನೇ ಆಗುತ್ತಿತ್ತು.

ಹೈಸ್ಕೂಲಲ್ಲಿ ಆ ಟಾಲ್ ಆಂಡ್ ಫೇರ್ ಆಗಿದ್ದ ಆ ಮೇಸ್ಟ್ರು ಯಾಕೋ ಗಿಗಲ್ ಮಾಡಿದ ಹಾಗೇ ಮಾಡುತ್ತಿದ್ದ. ಆಮೇಲೆ ಅವನಿಗೆ ಮದುವೆಯಾಗಿದೆ ಮಗೂ ಇದೆ ಅಂತ ಗೊತ್ತಾದ್ದದೇ ಸಖತ್ ಇಷ್ಟ ಆಗಿಬಿಟ್ಟ. ಸುಮ್‌ಸುಮ್ನೇ ಅವನನ್ನು ಆರಾಧಿಸಿದೆನೋ ಇರಬೇಕು.

ಮೆಸ್ಟ್ರುಬೇಶನ್ ಮಾಡೋಣ ಅಂತ ಪ್ಲಾನ್ ಮಾಡಬೇಕು ಈಗ. ಹಿಂದೆಲ್ಲಾ ಆಗಿ ಹೋಗುತ್ತಿತ್ತು ಅದರ ಪಾಡಿಗೆ ಅದು.

ಎಲ್ಲಾ ಈ ಭೂಪನಿಂದಲೇ ಆದದ್ದು.

ಇವನಿಗಾಗಿ ಎಷ್ಟು ಸಲ ವ್ಯಾಕ್ಸ್ ಮಾಡಿಸಿಕೊಂಡಿದ್ದೆ. ಸಿಟಿಗೆ ಹೊರಟಾಗ ಸ್ಲೀವ್‌ಲೆಸ್ ಹಾಕ್ಕೊಳ್ಳುತ್ತಿದ್ದೆ.

ಜೋಕಾ ಅದು..ಥತ್..ಆದರೂ ಬಿದ್ದೂ ಬಿದ್ದು ನಗುತ್ತಿದ್ದೆನಲ್ಲಾ.. ಯಾಕೋ..ಇಷ್ಟವಾಗಿದ್ದ.. ಹಂಬಲಿಸಿದೆ. ..ಹತ್ತಿರವಾದಾಗ ಬೇಜಾರಾಗಿಬಿಟ್ಟ.

ಪ್ಲೀಸ್ ಅಂತ ಎಲ್ಲಾ ನಿವೇದಿಸಿದರೆ ನನ್ನನ್ನು ದೂರ ಮಾಡಿಬಿಟ್ಟೆಯಾ ಅಂತ ರೆಚ್ಚೆ ಹಿಡಿದ.ನಾನು ಎಲ್ಲಿ ತಪ್ಪು ಮಾಡಿದೆ? ನನಗನಿಸಿದಂತೆ ಹೇಳಿದರೆ ಅವನದ್ದು ಬೇರೆಯೇ ರಾಗ.ಹುಡುಗ
ಭಾವನೆಗಳೆಂದರೆ ಇಷ್ಟೆಯಾ ?
ಭಾವನೆ ಅನ್ನೋದು ಕೂಡಾ ಹೀಗೆ ಹುಟ್ಟು ಸಾವು ಹೊಂದಿರುತ್ತಾ ?ಅಥವಾ ಭಾವನೆ ಎನ್ನೋದೇ ಇಲ್ಲವಾ?ಅಥವಾ ಭಾವನೆ ಕೂಡಾ ಬೇರೆ ಬೇರೆ ರೀತಿಯದ್ದಾ ?ಅಮ್ಮನ ಜೊತೆ ಎಂಥಾ ಭಾವನೆ ಇತ್ತು ನನಗೆ. ಈಗ ಅಮ್ಮನನ್ನು ಜೊತೆಗೆ ತಂದು ಸಾಕುವೆ ಎಂಬ ಧೈರ್ಯವೇ ಇಲ್ಲ. ಅಕ್ಕ ಆತ್ಮೀಯಳು ಅಂತ ಅನಿಸೋದೇ ಇಲ್ಲ.

ಅಪ್ಪ ಸತ್ತು ಎಷ್ಟು ವರ್ಷ ಆಯಿತು, ಯಾವಾಗ ಸತ್ತ ಎಂಬುದೇ ಮರೆತಿದೆ.

ಹಳ್ಳಿಯಲ್ಲಿ ನಾನು ಶಾಲೆಗೆ ಹೋಗುತ್ತಿದ್ದಾಗ ಚಾಕಲೇಟ್ ಕೊಡ್ತಾ ಇದ್ದನಲ್ಲಾ ಆ ಗೂಡಂಗಡಿಯ ಗೋಪಾಲ. ಅವನನ್ನು ಇಷ್ಟು ಸಲ ಊರಿಗೆ ಹೋದಾಗ ಒಂದು ಸಾರೆಯಾದರೂ ನಾನು ಮಾತನಾಡಿಸಬೇಕು ಅಂತ ಯಾಕೆ ಕಾಣಲಿಲ್ಲ. ಎಲ್ಲಿಗೆ ಹೋಯಿತು ಆ ಪ್ರೀತಿ ?

ಅಪ್ಪನ ತಿಥಿ ಮಾಡುತ್ತಿದ್ದಾಗ ಮೂರು ತಲೆಮಾರಿಗೆ ಪಿಂಡ ಎಂದಿದ್ದ ಪುರೋಹಿತರು. ಆ ಮೇಲೆ ಎಂದು ಕೇಳಿದರೆ ಹಾಕೋಣ ಪಿಂಡ ಹಾಕೋಣ ಆದರೆ ನಿನಗೆ ಅವರ ಸಂಬಂಧ ಏನಿದೆ ಎಂದರು.

ಯಾಕೆ ಎಂದೆ.

ಹಾಗಾದರೆ ಹೇಳು ನೋಡೋಣ,ನಿನ್ನ ಮುತ್ತಜ್ಜನ ಅಪ್ಪನ ಅಥವಾ ಅವನ ಅಜ್ಜನ ಅಥವಾ ಅವನ ಭಾವಮೈದನ ಒಂದು ಹೆಸರು. ಹೋಗಲಿಬಿಡು ಅವರಲ್ಲಿ ಒಬ್ಬನ ಬದುಕಿನ ಬಗ್ಗೆ ಒಂದು ಪ್ರಸಂಗ ಹೇಳು ಎಂದು ಸವಾಲು ಹಾಕಿದ್ದರು.

ಅಷ್ಟೇ ಕಣಪ್ಪಾ ಸಂಬಂಧ..ಎಂದರು ಅವರು.

ನಿಜವೇ..

ಅಪ್ಪ ಸತ್ತ ಮರುದಿನ ಕಾಷ್ಠಕೂಡಲು ಹೋದವನು ಎಷ್ಟೊಂದು ಬಿಕ್ಕಿ ಬಿಕ್ಕಿ ಅತ್ತಿದ್ದೆ. ಎರಡನೇ ತಿಥಿಗೆ ಅಪ್ಪನ ನೆನಪೇ ಆಗಿರಲಿಲ್ಲ,ಏಕೆಂದರೆ ಮರುದಿನವೇ ನಾನು ಅಮೇರಿಕಾಗೆ ಹೋಗುವವನಿದ್ದೆ.

ಅದೆಲ್ಲಾ ಹಾಳಾಗಿ ಹೋಗಲಿ..

ಇವಳಿದ್ದಾಳಲ್ಲಾ.. ಅಬ್ಬಾ ಎಷ್ಟೊಂದು ಹಚ್ಚಿಕೊಂಡೆ. ಕೇಳಿದ್ದೆ.. ನಕ್ಕಿದ್ದಳು.ಒಂದು ರಾತ್ರಿ ಕೂಡಾ ಇವಳನ್ನು ಮಾತನಾಡಿಸದೇ ಮಲಗಿದ್ದೆನಾ? ಆರಂಭದಲ್ಲಿ ಇದ್ದ ಪ್ರೀತಿ ಕ್ರಮೇಣ ಏಕೆ ಏಕತಾನತೆ ಎಂದು ಅನಿಸಿಬಿಡುತ್ತದೋ?

ಇವಳು ನನ್ನ ಅಪ್ಪನ ಥರವಾ.. ಆಗೊಮ್ಮೆ ಈಗೊಮ್ಮೆ ಮನಸ್ಸಲ್ಲಿ ಬಂದು ಹೋಗಿ ಆಮೇಲೆ ಮರೆತೇ ಹೋಗುತ್ತಾಳಾ??

ನೆನಪಾದಾಗಲೆಲ್ಲ ರೋಮಾಂಚವಾಗುತ್ತಿದ್ದವಳು ಏಕೆ ಸಾಕು ನಿಲ್ಲಿಸು ಅಂತ ಹೇಳಿಬಿಟ್ಟಳು ?..

ನನ್ನಲ್ಲಿ ಅವಳಿಗೆ ಹುಡುಕುವುದಕ್ಕೆ ಏನೂ ಇಲ್ಲದಾಯಿತೇ ಅಥವಾ ಪ್ರೀತಿಯಲ್ಲಿ ಮಾಡಿದ್ದೆಲ್ಲವೂ ಮುಕ್ತಾಯಕ್ಕೆ ಮುನ್ನುಡಿಯೇ ?


ಕತೆಗಾರ
ಇದು ತುಂಬಾ ಸಿಲ್ಲಿ ಕಣ್ರೀ.. ನೀವು ಈ ಅಹವಾಲುಗಳನ್ನು ಕೇಳುತ್ತಿದ್ದಾಗ ನಾನು ಆಕಳಿಸಿದೆ.

ಇದೆಲ್ಲಾ ಆಗೋದೇ. ಹುಡುಗಿ ಪಾಪ ಈ ವಯಸ್ಸಲ್ಲಿ ಒಂದು ಭದ್ರತೆ ಬೇಕು ಅಂತ ಹುಡುಕಾಡಿದ್ದಾಳೆ.ಈ ಹುಡುಗನಿಗೆ ಅದು ಹೇಗೆ ಅರ್ಥವಾಗಬೇಕು.

ದುಷ್ಟ ..

ಅವನು ಹುಡುಕಿದ್ದು ಬಯಕೆಯನ್ನು.

ನನಗೆ ಗೊತ್ತಿತ್ತು ಹೀಗೇ ಆಗುತ್ತದೆ ಅಂತ. ಬರೀ ಸೆಕ್ಸ್ ಅಥವಾ ಪ್ರೀತಿಗೆ ಇವರು ಯಾರು ಯಾರನ್ನು ಬೇಕಾದರೂ ಹುಡುಕಬಹುದಿತ್ತು.

ಸೆಕ್ಸ್‌ಗೆ ಇವರಲ್ಲಿ ಇವರೇ ಇಲ್ಲವಾ..

ಬರೀ ಪ್ರೀತಿಗೆ ಮನಸ್ಸಲ್ಲೇ ಯಾರನ್ನಾದರೂ ಹುಟ್ಟಿಸಿಕೊಳ್ಳಲಾಗುವುದಿಲ್ಲವಾ..

ಪ್ರೀತಿ ಮಾತ್ರಾ ಅಂತ ಆಗಿದ್ದರೆ ಇವಳಿಗೆ ಯಾರನ್ನು ಪಡೆಯೋದು ಕಷ್ಟವಾ? ಅಥವಾ ಅವನಿಗೇನು ಕಮ್ಮಿಯಾ?

ನಾನು ನೋಡ್ತಾ ಇದ್ದೇನೆ..ಇಬ್ಬರಿಗೂ ಇನ್ನೇನೋ ಬೇಕಿತ್ತು. ಆ ಹುಡುಕಾಟ ಇಬ್ಬರದ್ದೂ ಒಂದೇ ಆಗಿರಲಿಲ್ಲ ಅಷ್ಟೇ.

ಅದು ಹಾಗೆಯೇ ಆಗುತ್ತದೆ. ಆರಂಭದಲ್ಲಿದ್ದ ಆ ತೀವ್ರತೆ ಆಮೇಲೆ ಕಡಿಮೆಯಾಗಲೇ ಬೇಕಲ್ಲ.. ಇಲ್ಲದಿದ್ದರೆ ಯಾವುದೂ ಎಂದೂ ಎಲ್ಲೂ ಚಲಿಸಲಾರದೇನೋ.

ಬೀಜಕ್ಕಿದ್ದ ತೀವ್ರತೆ ಮರವಾದಾಗಲೂ ಇರಲು ಹೇಗೆ ಸಾಧ್ಯ?

ಮೂರನೇ ರಾತ್ರಿ ಮಾಡಿದ ಸಂಭೋಗ ಮೂರು ವರ್ಷದ ಬಳಿಕ ಇರುವುದುಂಟಾ?

ಎಲ್ಲರೂ ತಮ್ಮ ಗಂಡನ ಜೊತೆ ಅಥವಾ ಹೆಂಡತಿ ಜೊತೆ ಸೆಕ್ಸ್ ಮಾಡುತ್ತಾರೆ ಅಂತ ಈ ಕತೆಗಾರ ನಂಬಲಾರ, ಐ ಮೀನ್ ಮೆಂಟಲೀ. ಫಿಸಿಕಲೀ ನಡೆಯುತ್ತದೆ. ಮನಸಲ್ಲಿ ಇನ್ಯಾರೋ ಇರುತ್ತಾರೆ. ಇಲ್ಲದಿದ್ದರೆ ಈ ಸೆಕ್ಸ್ ತೀವ್ರವಾಗಲಾರದು. ಆ ಗುಣವೇ ಸೆಕ್ಸ್‌ಗಿಲ್ಲ. ನಂಜಿಕೊಳ್ಳೊದಕ್ಕೆ ಅದಕ್ಕೆ ಏನಾದರೂ ಬೇಕೇ ಬೇಕು.ಅದರಲ್ಲಿ ಅದು ಸಿಗದು. ಅದು ಕಲರ್‌ಲೆಸ್. ನೀರಿನ ತರ. ಬಣ್ಣವಿಲ್ಲ, ವಾಸನೆಯಿಲ್ಲ, ರುಚಿಯಿಲ್ಲ..

ಎಲ್ಲಿದ್ದೆ? ಹಾಂ..ಅದೇ ಈ ಹುಡುಗು ಮುಂಡೇವುಗಳ ವೃತ್ತಾಂತ..

ಬೇಕುಅಂತ ಎಷ್ಟು ಆಗುತ್ತೋ ಬೇಡ ಅಂತ ಅದಕ್ಕೂ ಹೆಚ್ಚು ಆಗಲೇ ಬೇಕು.ಇಲ್ಲದಿದ್ದರೆ ಎಲ್ಲಾ ಬೇಕು ಅಂತ ಆಗಿಬಿಟ್ಟು ಏನೆಲ್ಲಾ ಆಗಬೇಕು..

ನೆನೆದರೆ ಝುಂ ಆನ್ನುತ್ತೆ ಮನಸ್ಸು.

ಸಿಂಹದ ಥರ ..ಹೊಟ್ಟೆ ತುಂಬಿದ ಮೇಲೆ ಜಿಂಕೆ ಮರಿ ಸಾಲು ಸಾಲು ಹೋದರೂ ಕುಳಿತಲ್ಲೇ ತೂಕಡಿಸಿ ಅರೆಗಣ್ಣುತೆರೆದು ಆಕಳಿಸುತ್ತದೆ ಸಿಂಹ.ಹಾಗೇ..

ಹೀಗೆ ಆಗಬೇಕು ಕಣ್ರೀ..

ಎಲ್ಲರಿಗೂ ಪ್ರೀತಿಸಿದವರೇ ಸಿಕ್ಕಿಬಿಟ್ಟರೆ, ಜಗತ್ತಲ್ಲಿ ಕಳೆದುಕೊಳ್ಳಲಿಕ್ಕೆ ಏನಿರುತ್ತೆ ಅಂದರೆ ತಲ್ಲಣಗಳು ಎಲ್ಲಿ ಉಳಿಯುತ್ತವೆ?

ಹುಡುಕಾಟವೇ ಇಲ್ಲದಿದ್ದರೆ ಎಲ್ಲಾ ನಿಂತೇಹೋಗುತ್ತದೆ.

ಎಲ್ಲವೂ ನಿಂತರೆ ಚಲನೆಗೇನು ಅರ್ಥ ಉಳಿಯುತ್ತದೆ ಹೇಳಿ.

ಈ ಗೂಬೆಗಳಿಗೆ ಇದೆಲ್ಲಾ ಗೊತ್ತಿದೆ ಆದರೂ ಗೊತ್ತಿಲ್ಲದ ಹಾಗೇ ನಟಿಸುತ್ತಿದ್ದಾರೆ..

ಬೈ..

20080902

ಜೋಗಿಯ ಜೋಳಿಗೆಯಿಂದ ಮತ್ತೆರಡು ಪುಸ್ತಕ


ಜೋಗಿ ಅವರ ಅಭಿಮಾನಿಗಳಿಗೊಂದು ಸಂತೋಷದ ಆಹ್ವಾನ.

ಜೋಗಿಯವರ ಕಾದಂಬರಿ ಯಾಮಿನೀ ಮತ್ತು ಕಥಾಸಂಕಲನ ಸೀಳುನಾಲಗೆ (ಎರಡನೇ ಆವೃತ್ತಿ) ಲೋಕಾರ್ಪಣೆಯಾಗುತ್ತಿವೆ.

ಭಾನುವಾರ ಏಳನೇ ಸೆಪ್ಟಂಬರ ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ

ಯು.ಆರ್.ಅನಂತ್ಮೂರ್ತಿ,ನಾಗೇಶ್ ಹೆಗಡೆ ,ಪವಿತ್ರಾಲೋಕೇಶ್ ಮುಂದಾಗಿ ಬಂದು ಬುಕ್ಕು ಬಿಡಿಸುತ್ತಾರೆ.

ಜೋಗಿ ಇನ್ನೂ ಯಾಮಿನೀ ಬರೀತಾ ಇದ್ದಾರೆ.

ಅಂಕಿತದ ಅರ್ಪಣೆ.

ಎಲ್ಲರೂ ಬನ್ನಿ..

ಗುರುತಿಸಲಾರೆವು ನಮ್ಮೊಳಗೇ..


ಈ ಕತೆ ಖಂಡಾಂತರದಲ್ಲೂ ಕಾಲಾಂತರದಲ್ಲೂ ಸದಾ ಸತ್ಯವೇ ಆಗಿರುವುದು...


ಸತ್ಯಾತ್ಮನೆಂಬ ಆ ಬ್ರಾಹ್ಮಣ ನಸುಕಿನಲ್ಲೇ ಜಪತಪಾದಿಗಳನ್ನು ಪೂರೈಸಿ ಮಡಿ ಬಟ್ಟೆಯನ್ನು ಉಟ್ಟು ಹೊಸಿಲು ದಾಟುತ್ತಿದ್ದಂತೆ ಮಗಳು ವ್ಯಾಲೀ.. ಅಪ್ಪಾ ತಪ್ಪದೇ ಬಳೆಗಳನ್ನು ತನ್ನಿರಿ. ನೀವು ಅದೆಷ್ಟು ವರ್ಷಗಳ ಬಳಿಕ ವಾಪಾಸ್ಸಾಗುವಿರೋ ನಾನರಿಯೆ, ಆದರೆ ನೀವು ನನ್ನ ಕೈಗೆ ತುಂಬಾ ತುಂಬುವಷ್ಟು ಬಳೆಗಳನ್ನು ತರುವಿರಿ ಎಂದು ನಾನು ಬೋಳು ಕೈಗಳಲ್ಲಿ ಕಾಯುತ್ತಿರುವೆನು ಎಂದಳು.

ಸತ್ಯಾತ್ಮ ನಕ್ಕರು.

ಮಗಳೇ ವ್ಯಾಲೀ ನಾನು ಖಂಡೋಪವನದಲ್ಲಿ ತಪಸ್ಸಿದ್ಧಿಗಾಗಿ ಹೋಗುವೆನು.. ಮರಳಿ ಬರುವೆನೆಂದು ಹೇಳಲಾರೆ. ಆದರೆ ಮಗಳೇ ವ್ಯಾಲೀ ನಿನ್ನ ಕೈ ತುಂಬಾ ಬಳೆಗಳು ತುಂಬಿಯೇ ತುಂಬುವವು.. ಎಂದು ಹೇಳಿ ಆ ಮಬ್ಬು ಬೆಳಕಲ್ಲಿ ಕರಗಿಹೋದರು.

ವರ್ಷಗಳು ಉರುಳಿದವು.

ಅದೊಂದು ದಿನ ಅಂಥದ್ದೇ ಮಬ್ಬು ಬೆಳಕಲ್ಲಿ ಸತ್ಯಾತ್ಮ ಎಂಬ ಆ ಬ್ರಾಹ್ಮಣ ಮರಳಿ ಆ ಹೊಸಿಲಲ್ಲಿ ಕಾಣಿಸಿದರು. ಆ ಹೊತ್ತಿಗೆ ಅವರು ಬಹು ತೇಜಸ್ಸುಪೂರಿತರಾಗಿಯೂ ಸಿದ್ಧಿಪುರುಷರಾಗಿಯೂ ಕತ್ತಲನ್ನು ಸೀಳುವ ಪ್ರಕಾಶಪುಂಜದಿಂದ ಶೋಭಿತರಾಗಿಯೂ ಕಾಣುತ್ತಿದ್ದರು.

ಮಗಳೇ ವ್ಯಾಲೀ.. ನಾನು ಸಿದ್ಧಿಯನ್ನು ಮಾಡಿ ಬಂದಿರುವೆ.. ಹಾಗೇ ನಿನಗಾಗಿ ಕೈ ತುಂಬಾ ಬಳೆಗಳನ್ನು ತಂದಿರುವೆ.. ಎಂದರು.

ವ್ಯಾಲೀ ಆನಂದಭರಿತಳಾಗಿ ಅಪ್ಪನ ಕಾಲಿಗೆರಗಿ ಆ ಬಳೆಗಳನ್ನು ಪಡೆದುಕೊಂಡಳು.

ಸತ್ಯಾತ್ಮ ಬ್ರಾಹ್ಮಣ ತನ್ನ ಮುಂಜಾವದ ನಿತ್ಯಕರ್ಮಾದಿಗಳನ್ನು ಪೂರೈಸಿ ಮಗಳು ವ್ಯಾಲೀ ಎದುರು ಬಂದು ನಿಂತರು.

ವ್ಯಾಲೀ ಅಪ್ಪ ಕೊಟ್ಟ ಬಳೆಗಳನ್ನು ಕೈ ತುಂಬಾ ತುಂಬಿ ಕೊಂಡು ಹರ್ಷೋತ್ಸಾಹಗಳನ್ನು ಪ್ರಕಟಿಸಿದಳು.

ಮಗಳೇ ವ್ಯಾಲೀ ಎಂದರು ಸತ್ಯಾತ್ಮ..

ಅಪ್ಪಾ ಎಂದಳು ವ್ಯಾಲೀ

ನಾನು ಮೂರು ಮಂತ್ರದುಂಡೆಗಳನ್ನು ಸುದೀರ್ಘ ತಪಸ್ಸಾಚರಣೆಯ ಬಳಿಕ ತಂದಿರುವೆ. ಖಂಡೋಪವನದಲ್ಲಿ ಆ ಮಹಾಪುರುಷನು ನನಗೆ ಇವುಗಳನ್ನು ದಯಪಾಲಿಸಿರುವನು. ನಾನು ಅದನ್ನು ಈಗ ಪ್ರಯೋಗಿಸಬೇಕೆಂದು ಬಯಸಿರುವೆನು ಎಂದರು.

ಹಾಗೇ ಆಗಲಿ ಅಪ್ಪಾ ಎಂದಳು ವ್ಯಾಲೀ ಮುಂದಿನ ವಿಚಾರಗಳೇನೆಂಬುದರನ್ನರಿಯದೇ.

ಮಗಳು ಅನುಮತಿ ನೀಡಿದಳು ಎಂದರಿತ ಸತ್ಯಾತ್ಮ ಮಾನವನನ್ನು ಅವನ ನಿಜಗುಣ ಸ್ವರೂಪಿಯನ್ನಾಗಿಸುವ ಮೊದಲ ಮಂತ್ರದುಂಡೆಯನ್ನು ಮಗಳ ಮೇಲೆ ಎಸೆದರು.

ವ್ಯಾಲೀ ಅರೆಕ್ಷಣದಲ್ಲೇ ಹೆಣ್ಣುಹುಲಿಯಾಗಿ ರೂಪಾಂತರಗೊಂಡು ಅಬ್ಬರಿಸುತ್ತಲೂ ಭಯಾನಕವಾಗಿಯೂ ಆಕ್ರಮಣಸ್ವರೂಪಿಯಾಗಿಯೂ ಹೊರಜಿಗಿದಳು.

ನೆಲವನ್ನು ಬಗೆಯುತ್ತಾ ಹೂಂಕರಿಸುತ್ತಾ ಅಟ್ಟಹಾಸದಿಂದ ಘರ್ಜಿಸುತ್ತಿದ್ದ ಆ ವ್ಯಾಘ್ರಿಣಿಯನ್ನು ಕಂಡ ಸತ್ಯಾತ್ಮ ಸ್ತಂಭೀಭೂತರಾಗಿ ಹಾ ಹಾ ಹಾ ಎನ್ನುತ್ತ ಕೈ ಚೆಲ್ಲಲು ಎರಡೂ ಮಂತ್ರದುಂಡೆಗಳು ನೆಲಕ್ಕೆ ಬಿದ್ದು ಪುಡಿಯಾದವು.

ಸತ್ಯಾತ್ಮ ಮೂರ್ಛೆ ಹೋಗಿ ಕುಸಿದು ಬಿದ್ದರು.

++++++++++++
ಹಲವು ವರ್ಷಗಳ ಬಳಿಕ ಸತ್ಯಾತ್ಮ ಮತ್ತೆ ಖಂಡೋಪವನದಲ್ಲಿ ಮಗಳನ್ನು ಮರಳಿ ಪಡೆಯುವ ಉದ್ದೇಶದಿಂದ ಆ ಮಹಾಪುರುಷನನ್ನು ಸ್ಮರಿಸುತ್ತ ತಪಸ್ಸಿಗೆ ಕುಳಿತಿದ್ದಾಗ ವ್ಯಾಘ್ರಿಣಿಯೊಂದು ಅವರ ತಪೋಭೂಮಿ ಎದುರು ಸಾಗುತ್ತಾ ಬಂತು.

ಸತ್ಯಾತ್ಮ ತನ್ನ ಕಣ್ಣುಗಳನ್ನು ತೆರೆದರು. ಗಿಜಿ ಗಿಜಿ ನಾದ ಅವರನ್ನು ಚಕಿತಗೊಳಿಸಿತು.

ನೋಡುತ್ತಾರೆ.. ವ್ಯಾಘ್ರಿಣಿ..

ಅದರ ಕೈಗಳಲ್ಲಿ ತುಂಬು ಬಳೆಗಳು..!

ಅಯ್ಯೋ ಮಗಳೇ.. ಎಂದರು ಸತ್ಯಾತ್ಮ..ಆಕ್ರಂದಿಸುತ್ತಾ..

ಆ ಹೆಣ್ಣು ಹುಲಿ ಸತ್ಯಾತ್ಮನೆಂಬ ಆ ಸಿದ್ಧಿಪರುಷನನ್ನು ಒಮ್ಮೆ ದಿಟ್ಟಿಸಿ ಆ ಬಳಿಕ ಆ ಅರಣ್ಯದಲ್ಲಿ ಕಣ್ಮರೆಯಾಯಿತು.

ಸತ್ಯಾತ್ಮ ಮತ್ತೆ ಕಣ್ಣು ಮುಚ್ಚಿದರು ಆ ಮಹಾಪುರುಷನಿಗಾಗಿ ಕಾಯುತ್ತಾ..

20080901

ದಾಟುತ್ತಾ ದಾಟುತ್ತಾ..ಶಾಲ್ಮಲೀ ಮಹಾಮುನಿ ಆಗಷ್ಟೇ ಮುಂಜಾನೆಯ ಧ್ಯಾನ ಮುಗಿಸಿ ಕೊಳದ ತಟದಿಂದ ಎದ್ದು ಬರುತ್ತಿದ್ದರು.
ಎದುರಿಗೆ ನಿಂತವಳು ವಟೀ..
ಶಾಲ್ಮಲೀ ಕ್ಷಣಕಾಲ ದಂಗಾದರು
ಹಾಗಾಬಾರದು ಎಂದೇ ತಾನೇ ಅವರು ಆ ಕುಟೀರದಲ್ಲಿ ತನ್ನ ಎಲ್ಲಾ ಪೂರ್ವಾಪರಗಳನ್ನು ಮರೆತು ಕುಳಿತದ್ದು
ವಟೀ ಎಂದರು ಶಾಲ್ಮಲೀ..
ನಾನು ನಿನ್ನನ್ನು ನೋಡಬಾರದು ಎಂದೇನಲ್ಲ.. ಆದರೆ ನಿನ್ನ ಈ ಸಾಕ್ಷಾತ್ಕಾರದ ಮೂಲಕ ನೀನು ಮತ್ತೆ ನನ್ನೊಳಗೆ ಧ್ಯಾನಸ್ಥವಾಗಿಬಿಡುವೆಯಲ್ಲಾ ಅದು ನನಗೆ ತುಂಬಾ ಕಷ್ಟವಾಗುವುದು ಎಂದರು.
ವಟೀ ಮಾತೆತ್ತಲಿಲ್ಲ. ಅತಿ ವಿನಯಾದರಗಳಿಂದ ಶಾಲ್ಮಲೀ ಎದುರು ಕೈ ಮುಗಿದು ನಿಂತಳು.
ಶಾಲ್ಮಲೀ ಮಾತಾಡಲಿಲ್ಲ. ಕುಟೀರಕ್ಕೆ ಬಾ ಎಂದು ಸಂಜ್ಞೆ ಮಾಡಿ ಸೀದಾ ಒಳಗೆ ನಡೆದರು.
ಅವರ ಓಘವನ್ನು ನಿಂತು ನೋಡುತ್ತಾ ನಿಂತ ವಟೀ ಆಹಾ..! ಎಂದು ಅಚ್ಚರಿಗೊಂಡಳು.
ಒಳಗೆ ಕುಟೀರದಲ್ಲಿ ವಟೀ ಪ್ರವೇಶಿಸಿದಾಗ ಶಾಲ್ಮಲೀ ಶೀರ್ಷಾಸನ ಮಾಡುತ್ತಿದ್ದರು.
ವಟೀ.. ಏಕೆ ನನ್ನೆದುರು ಹೀಗೆ ಬೆತ್ತಲಾಗಿ ಈ ಕ್ಷಣ ನಿಂತಿರುವೆ..? ಇದೇನಿದು ನನ್ನ ಮೇಲಿನ ಪ್ರಯೋಗವೇ ?ಪರೀಕ್ಷೆಯೇ..? ಎಂದು ಕೇಳಿದರು.
ವಟೀ ಸ್ತಂಭೀಭೂತಳಾದಳು.
ಮಹಾಮುನಿಗಳೇ,ತಾವೇನು ಹೇಳುತ್ತಿರುವಿರಿ.. ನಾನು.. ನಾನು ..ಬೆತ್ತಲಾಗಿಹೆನೇ.. ಏನಿದು ಮಾತು ಎಂದಳು.
ಶಾಲ್ಮಲೀ ಅಹುದು ವಟೀ.. ನೀನು ಪೂರ್ಣ ಬೆತ್ತಲಾಗಿರುವೆ.. ಬೇಕಾದರೆ ನಿನ್ನನ್ನು ನೀನೊಮ್ಮೆ ನೋಡಿಕೋ.. ಎಂದರು.
ಅವರು ಅದೆಷ್ಟು ಹೊತ್ತು ಹಾಗೇ ಶೀರ್ಷಾಸನ ಸ್ಥಿತಿಯಲ್ಲ್ಲಿರುವರೋ ಎಂದು ವಟೀ ಯೋಚಿಸುತ್ತಾ ಮಹಾಮುನಿಗಳು ಮತ್ತೆ ಪೂರ್ವ ಸ್ಥಿತಿಗೆ ಬರುವುದನ್ನೇ ಕಾಯುತ್ತಾ ಕುಳಿತಳು.
ಶಾಲ್ಮಲೀ ಮಹಾಮುನಿಗಳು ಕಣ್ಣು ಮುಚ್ಚಿದರು.
ವಟೀ.. ನಾನು ಅಂತರ್ಮುಖಿ ಧ್ಯಾನಕ್ಕೆ ತೆರಳುತ್ತಿರುವೆ.. ಸುದೀರ್ಘಕಾಲ ಈ ಸ್ಥಿತಿಯಲ್ಲಿ ನೀನು ನನ್ನನ್ನು ನೋಡಲಾರೆ. ಮರಳಿ ನಾನು ಪೂರ್ವಸ್ಥಿತಿಗೆ ತಲುಪುವುದು ಯಾವಾಗೆಂದು ಆ ಬ್ರಹ್ಮನಿಗೆ ಗೊತ್ತಾಗಲಾರದು. ಇದು ದ್ವೀತೀಯ ಪರಾರ್ಧ.. ಶ್ವೇತ ವರಾಹ ಕಲ್ಪ..ವೈವಸ್ವತ ಮನ್ವಂತರ ಪ್ರಥಮಪಾದ..
ಬ್ರಹ್ಮನಿಗೆ ಇನ್ನೊಂದು ಹಗಲಾಗಲಿ..ಎಂದರು ಮಹಾಮುನಿ ಶಾಲ್ಮಲೀ..
ವಟೀ..ಕಣ್ಣುಮುಚ್ಚಿದಳು..
ಅವಳ ಕಣ್ಣುಗಳಲ್ಲಿ ಸೂಸುತ್ತಿದ್ದ ಆ ಸಂದೇಶ ಶಾಲ್ಮಲೀ ಮುನಿಗಳಿಗೆ ಕಾಣಿಸಲಿಲ್ಲ.. ಏಕೆಂದರೆ ಅವರೂ ಕಣ್ಣುಮುಚ್ಚಿದ್ದರು.
ಅವರಿಬ್ಬರೂ ಹಾಗೇ ರಮಿಸುತ್ತಾ.. ಮನ್ವಂತರವನ್ನು ದಾಟಿಹೋದರು.