20080822

ಅವನಿಗಿಂತ ಮೊದಲೇ ನಾನೇ ಬರೆದ ಕತೆ.


ನರೇಶನ ಕಾಗದ ಬಂದಿತ್ತು.

ಅದರಲ್ಲಿ ನಾಟಕದ ಕಂಪನಿ ಬಿಟ್ಟ ಮೇಲೆ ರಾಜೇಶ್ವರಿ ತುಂಬಾ ಕಷ್ಟದಲ್ಲಿದ್ದಾಳೆಂದು ಗೊತ್ತಾಗಿ ತಾನು ಅವಳಿಗೆ ತನ್ನ ಕಂಪನಿಯಲ್ಲಿ ರೆಸ್ಪಶನಿಸ್ಟ್ ಜಾಬು ಕೊಡಿಸಿದ್ದಾಗಿ ಉಲ್ಲೇಖವಿತ್ತು.

ಅಷ್ಟು ಮಾತ್ರಾ ನರೇಶ ಬರೆದಿದ್ದ.

ಬರೆದದ್ದು ನೋಡಿದರೆ ತುಂಬಾ ಕ್ಯಾಶುವಲ್ ಆಗಿತ್ತು. ಆದ್ದರಿಂದ ಇದನ್ನು ಉದ್ದೇಶಪೂರ್ವಕವಾಗಿ ತನಗೆಂದು ಹೇಳಿಲ್ಲ ಎಂದು ಅಂದುಕೊಂಡೆ.

ಆ ಕ್ಷಣಕ್ಕೇ ರಾಜೇಶ್ವರಿಯನ್ನು ನೋಡಬೇಕೆಂಬ ಆತುರ ನನ್ನದಾಯಿತು. ಅದೇ ದಿನ ಮಧ್ಯಾಹ್ನದ ಬಸ್ಸಿಗೆ ನಾನು ಬೆಂಗಳೂರಿಗೆ ಹೊರಟೇ ಬಿಟ್ಟೆ.

ಸಂಜೆ ಆರೂವರೆ ಅಂದಾಜಿಗೆ ನಾನು ನರೇಶನ ಆಫೀಸಿನ ಎದುರು ಇದ್ದೆ.

ಈ ವೇಳೆಗೆ ಅಲ್ಲಿ ರಾಜೇಶ್ವರಿ ಕಾಣುತ್ತಾಳೆ ಆಗ ಏನೇನು ಮಾತನಾಡಬೇಕು ಎಂದು ಬಸ್ಸಿನಲ್ಲೇ ತಾಲೀಮು ಮಾಡಿದ್ದೆ.ಇಷ್ಟಕ್ಕೂ ಅವಳು ಅಲ್ಲಿ ಹಾಗೇ ಕೆಲಸಕ್ಕೆ ಸೇರಿದ್ದು ತನಗೆ ಗೊತ್ತಿಲ್ಲ ಎಂಬತಿರುವುದು ಮಾತ್ರವಲ್ಲ, ನರೇಶನ ಪತ್ರ್ತ ಬಂದದ್ದು ಕೂಡಾ ತನಗೆ ಗೊತ್ತಿರಬಾರದು ಎಂದು ನಿರ್ಧರಿಸಿದ್ದೆ.

ನಾನು ಆ ದೊಡ್ಡ ಕಚೇರಿ ಒಳಗೆ ಕಾಲಿಟ್ಟರೆ ಅಲ್ಲಿ ರಿಸೆಪ್ಶನಿಸ್ಟ್ ಇದ್ದವಳು ಇನ್ಯಾರೋ..

ನನ್ನ ಹೆಸರು ಜಾತಕ ಬರೆಸಿಕೊಂಡು ಒಳಗೆ ಹೋಗಲು ಅನುವು ಮಾಡಿದಳು.

ಒಳಗೆ ನರೇಶ.

ಅವನಿಗೆ ನಾನು ಬಂದದ್ದು ಅಚ್ಚರಿಯಾಗಬಹುದು ಎಂದುಕೊಂಡರೆ ಮನೆಗೆ ಹಾಲಿನವ ಬಂದ ಹಾಗೇ ಮಾಡಿದ.ಬಾ ಬಾ ಎಂದ ನಟ ಭಯಂಕರ.

ಆಗಲೇ ಕತ್ತಲಾಗುತ್ತಿತ್ತು.

ನಾನೂ ನರೇಶ ಅವನ ಬೈಕಿನಲ್ಲಿ ಬಸವನಗುಡಿಯ ಯಾವುದೋ ಕ್ರಾಸ್‌ನಲ್ಲಿರುವ ಅವನ ಮನೆಯತ್ತ ಹೊರಟೆವು. ದಾರಿ ಮಧ್ಯೆ ಮಾತಾಡಲು ಬಾಯಿ ತುಂಬಾ ಸರಕುಗಳೂ ಇದ್ದವು, ರಾಜೇಶ್ವರಿಯ ವಿಚಾರ ಹೊರತಾಗಿ. ಈ ನರೇಶನಲ್ಲಿ ಪತ್ರ ಬಂದಿರುವ ವಿಚಾರವನ್ನಾದರೂ ಹೇಳಿಲ್ಲ.ಹೇಳುವುದಾದರೂ ಹೇಗೆ..ಅವನಾದರೋ ಹೇಳುತ್ತಿಲ್ಲ. ಅವನಿಗೆ ಎಂಥದ್ದೋ ಹಠ.ಎಡವಟ್ಟಿಗೆ ನನಗೆ ನಾನೇ ಸಿಕ್ಕಿಹಾಕಿಕೊಂಡೆನೇ ಎಂದು ಹಲುಬಿದೆ.

ಸೀದಾ ನಿನ್ನ ಪತ್ರ ಓದಿ ರಾಜೇಶ್ವರಿಯನ್ನು ನೋಡಬೇಕೂಂತವೇ ಬಂದಿದ್ದೆ ಎಂದು ಹೇಳಿದ್ದರೆ ಈ ಕಷ್ಟ ಅವನದ್ದಾಗಿಬಿಡಬಹುದಿತ್ತು.

ಏನು ಮಾಡಲಾರದೇ ರಾಜೇಶ್ವರಿಯ ನೆನಪನ್ನು ಬಗೆಯತೊಡಗಿದೆ.


ನಾನು ನಾಟಕ ಕಲೀಬೇಕು ಎಂದು ಆ ಕ್ಯಾಂಪು ಸೇರಿದ್ದು, ಅಲ್ಲಿ ಒಂದು ಸಂಜೆ ಸೀನಿಯರ್ರುಗಳ ಶೋ ನಡೆಯುತ್ತಿದ್ದಾಗ ನಾನೂ ರಾಜೇಶ್ವರಿ ಹತ್ತಿರ ಕುಳಿತದ್ದು, ಅವಳು ಮೆಲ್ಲಮೆಲ್ಲಗೇ ತನ್ನ ಕಿರುಬೆರಳನ್ನು ನನ್ನ ಕಿರುಬೆರಳಿಗೆ ಮುಟ್ಟಿಸಿದ್ದು, ಅದೇ ಆ ಕಿರುಬೆರಳಲ್ಲಿ ಆಕೆ ನನ್ನ ಅಪ್ಪಿಕೊಂಡದ್ದು...

ಇದು ಹೇಗೆ ಈ ನರೇಶನಿಗೆ ಗೊತ್ತಾಯಿತು..

ರಾಜೇಶ್ವರಿ ಹಾಗೇ ಹೇಳುತ್ತಾಳಾ..ಥತ್ ಹಾಗೆ ಹೇಳಲಾರಳು...ಒಂದು ದಿನ ಒಂದು ಟಚ್..

ಬಹುಶಃ ಆಮೇಲೆಯೂ ನಾನು ಅವಳ ಜೊತೆ ಇರುತ್ತಿದ್ದರೆ ಇಷ್ಟೊಂದು ಆಗ್ರಹ ಹುಟ್ಟುತ್ತಿರಲಿಲ್ಲವೇನೋ..

ಒಂದು ಕಿರುಬೆರಳ ಸ್ಪರ್ಶಕ್ಕೆ ನಮ್ಮ ಅನುಬಂಧ ಹುಟ್ಟಿ ಹಾಡಾಗಿ ಹರಡಿ ಮುಗಿಯಿತು. ಅದು ಅವಳಿಗೂ ನನಗೂ ಮೊದಲ ಜೀವೋನ್ಮಾದ..

ಮರುದಿನವೇ ತಾನೇ ನಾನು ಕ್ಯಾಂಪಿನಿಂದ ಅಪ್ಪ ಸತ್ತ ಅಂತ ಹೊರಟು ಬಂದದ್ದು..

ಆಮೇಲೆ ಆ ರಾಜೇಶ್ವರಿಯನ್ನು ನಾನು ನೋಡಿದ್ದೇ ಇಲ್ಲ. ಆದರೆ ಈ ನರೇಶ ಇದ್ದಾನಲ್ಲ ಅವನಿಗೆ ಅವಳನ್ನು ಚೆನ್ನಾಗಿ ಗೊತ್ತಿದೆ.ಹಾಗಂತ ಒಮ್ಮೆ ನಾವಿಬ್ಬರೂ ಗಡಾಯಿ ಕಲ್ಲಿನಲ್ಲಿ ಕುಳಿತು ಗುಂಡು ಹಾಕುತ್ತಿದ್ದಾಗ ಈ ಅಸಾಮಿ, ನಿನ್ನ ಕಿರುಬೆರಳ ಹಾಡು ಹಾಡಲಾ ಎಂದ. ಹಾಡು ಎಂದೆ ಭರ್ತಿ ನಶೆಯಲ್ಲಿ.ಪುಣ್ಯಾತ್ಮ ಆ ಛಳಿಯಲ್ಲಿ ಎಲ್ಲಾ ಹೇಳಿ ಬೆವರಿಳಿಸಿದ್ದ.
"ರಾತ್ರಿ ಗುಂಡು ಹಾಕೋಣ..ಇಲ್ಲಿ ಒಂದು ರೂಪ್‌ಟಾಪ್ ಇದೆ.ಅಲ್ಲಿಗೆ ಹೋಗೋಣ. ಬರೀ ರಾತ್ರಿ ಲ್ಯಾಂಡ್ ಆಗೋ ಪ್ಲೈಟ್‌ಗಳ ಬೆಳಕು ಮಾತ್ರಾ ಆಗೊಮ್ಮೆ ಈಗೊಮ್ಮೆ ಅಪ್ಪಳಿಸಿ ಸಖತ್ ಮಜಾ ಬರುತ್ತದೆ" ಎಂದ ನರೇಶ.ಅಷ್ಟರಲ್ಲಿ ಅವನ ಮನೆ ಬಾಗಿಲಲ್ಲಿ ಬಂದು ನಿಂತಾಗಿತ್ತು.

ಬಾಗಿಲು ತೆರೆದವಳು..ರಾಜೇಶ್ವರಿ.

ಅವಳ ಕುತ್ತಿಗೆಯಲ್ಲಿ ಒಂದು ಕರಿಮಣಿ ತಾಳಿ..ಹಿಂದಿನಿಂದ ನರೇಶನ ಮಡದಿ .

"ರಾಜೇಶ್ವರಿ! ವಾಟ್ ಎ ಸಪ್ರೈಸ್" ಎಂದೆ.

"ರಾಜೇಶ್ವರಿ ನಾನು ಅಂತ ನಿಮಗೆ ಹ್ಯಾಗೆ ಗೊತ್ತಾಯ್ತು..? ಇಷ್ಟಕ್ಕೂ ನೀವೂ??"ಎಂದಿತು ಆ ಹೆಣ್ಣುಜೀವ.

ನರೇಶನ ಮಡದಿ ನಕ್ಕಳು.

"ಇವಳು ಗೊತ್ತಾ ಅಣ್ಣಂಗೆ" ಎಂದಳು.

ನರೇಶ ಬೈಕ್ ಸ್ಟಾರ್ಟ್ ಮಾಡಿದ.


ಆ ರಾತ್ರಿ ಅಲ್ಲಿಂದ ನಾನು ಬಹಳ ಸುಲಭದಲ್ಲಿ ಹೊರಟೇಬಿಟ್ಟೆ. ಊರಿನಲ್ಲಿ ಯಾರೋ ಫ್ರೆಂಡ್ ಆಕ್ಸಿಡೆಂಟ್ ಆಗಿ ಸತ್ತುಹೋದನಂತೆ ಎಂದು ಮನೆಗೆ ಫೋನು ಮಾಡಿದವನ ಹಾಗೇ ಮಾಡಿ ತುರ್ತಾಗಿ ಹೊರಡಬೇಕಾಗಿದೆ ಎಂದು ನರೇಶನಿಗೂ ಕಾಯದೇ ಹೊರಟೇಬಿಟ್ಟೆ.

ಮನೆಗೆ ಬಂದವನೇ ನರೇಶನಿಗೆ ಕಾಗದ ಬರೆದೆ...

"ಒಂದೇ ಪ್ರಶ್ನೆ..ರಾಜೇಶ್ವರಿ ಎಲ್ಲಿದ್ದಾಳೆ.."

ಅವನ ಉತ್ತರ ಫೋನ್‌ನಲ್ಲಿ ಸಿಕ್ಕಿತು."ಮನೆಯಲ್ಲಿದ್ದವಳು ರಾಜೇಶ್ವರಿಯೇ.. ಆದರೆ ನಿನ್ನ ಕಿರುಬೆರಳ ಹಾಡಿನವಳಲ್ಲ..ಈಕೆ ತಿಪಟೂರಿನವಳು. ನನ್ನ ಮಡದಿ ಜೊತೆ ಕ್ರಾಫ್ಟ್ ಕಲಿಯೋದಕ್ಕೆ ಬಂದಿದ್ದಳು. ಅವಳ ಹೆಸರು ರಾಜೇಶ್ವರಿ ಅಂತ ನಿನಗೆ ಹೇಗೆ ಗೊತ್ತಾಯ್ತು ಮಾರಾಯ.?.ಅವಳಿಗೆ ಇನ್ನೂ ಅದೇ ಶಾಕ್ ಆಗಿದೆ."

"ಹಾಗಾದರೆ ನನ್ನ ಕಿರುಬೆರಳ ಹಾಡಿನವಳು ??"...ನಾನು ಹಾಗೆ ಕೇಳಿದ್ದಕ್ಕೆ ಆತ ಉತ್ತರಿಸಲಿಲ್ಲ.

ಫೋನ್ ಕಟ್ ಮಾಡಿದ.

ಆಮೇಲೆ ಅವನ ಫೋನ್ ತುಂಬಾ ಹೊತ್ತು ಎಂಗೇಜ್ ಬರುತ್ತಾ ಇತ್ತು.

20080821

ವರ್ಗದಾರ ಗೇಣಿ ಒಕ್ಕಲಾದ ಒಂದು ಕತೆ
ಒಂದಾನೊಂದು ಕಾಲದಲ್ಲಿ ಆ ಊರು ತುಂಬಾ ಗೇಣಿದಾರರೇ ಇದ್ದರು. ಜಮೀನ್ದಾರರ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಎಲ್ಲರೂ ಕಾಲಾನುಕಾಲಕ್ಕೆ ಗೇಣಿ ನೀಡುತ್ತಾ ಸುಖವಾಗಿದ್ದರು.
ಅಂಥ ಊರಲ್ಲಿ ಒಬ್ಬ ವರ್ಗದಾರನಿದ್ದ. ಆತ ಶ್ರಮಿಕ. ಕಷ್ಟಪಟ್ಟು ದುಡಿಯುತ್ತಿದ್ದ. ಅವನಿಗೆ ಹೊಲ ಗದ್ದೆಗಳಿದ್ದವು.ಅವನಿಗೆ ನಾಲ್ಕು ಮಂದಿ ಯುವಕರಾದ ಮಕ್ಕಳಿದ್ದರು. ಅವರು ಅವನ ಜೊತೆಗೇ ದುಡಿಯುತ್ತಿದ್ದರು.ಅವನಿಗೆ ಯಾರ ಹಂಗೂ ಇಲ್ಲ. ವರ್ಷವರ್ಷವೂ ಸರಕಾರಕ್ಕೆ ಕಂದಾಯ ಪಾವತಿಸಿಕೊಂಡು ಅವನ ಸ್ವಂತ ಜಮೀನನ್ನು ಅವನು ತುಂಬಾ ಖುಷಿಯಿಂದ ಪಾಲನೆಮಾಡಿಕೊಂಡು ಕಾಲಕ್ಷೇಪ ಮಾಡುತ್ತಿದ್ದ.
ಹೀಗಿರುವಾಗ ಅವನ ಜಮೀನಿನ ಪಕ್ಕ ಒಬ್ಬ ಖದೀಮ ವಾಸವಾದ. ಆತ ಪಕ್ಕದ ಜಮೀನ್ದಾರನ ಕರಣಿಕ. ಅವನು ತುಂಬಾ ಠೇಂಕಾರಿ. ದಿನವೂ ಈ ವರ್ಗದಾರನನ್ನು ದಬಾಯಿಸುತ್ತಿದ್ದ. ತೋಟದಲ್ಲಿ ಒಂದು ಬಾಳೆಗೊನೆ ಬಲಿತರೆ ಸಾಕು, ಅದನ್ನು ತನ್ನ ಮನೆಗೆ ತಂದೊಪ್ಪಿಸುವಂತೆ ಆದೇಶಿಸುತ್ತಿದ್ದ. ಅಂಗಳದಲ್ಲಿ ಒಂದು ದೊಡ್ಡ ಕೋಳಿ ಕಂಡರೆ ಸಾಕು ಅದನ್ನು ಸುಲಿದು ತನ್ನ ಮನೆ ಅಡಗೆಗೆ ಕಳುಹಿಸುವಂತೆ ಗುರಾಯಿಸುತ್ತಿದ್ದ.
ಇದು ವಾರವಾರವೂ ನಡೆಯುತ್ತಿತ್ತು. ವರ್ಗದಾರನಿಗೆ ಸಾಕೋ ಸಾಕಾಯಿತು.
ಮಾತೆತ್ತಿದರೆ ತಾನು ಯಾರು ಗೊತ್ತಾ .. ಜಮೀನ್ದಾರನ ಕರಣಿಕ ಎಂಬ ಘರ್ಜನೆ ಬೇರೆ..
ಈ ಹಿಂಸೆಯಿಂದ ನೊಂದ ವರ್ಗದಾರ ತನ್ನ ಮಕ್ಕಳನ್ನು ಆ ರಾತ್ರಿ ಕೂರಿಸಿ ಒಂದು ಸಮಾಲೋಚನೆ ಮಾಡಿದ.
ಯಾವುದಕ್ಕೂ ನಾವು ಹೀಗೆ ವರ್ಗದಾರರಾಗಿರುವುದಕ್ಕೇ ಅಲ್ಲವೇ ಈ ಕರಣಿಕನ ಉಪಟಳ. ನಾವೂ ಕೂಡಾ ಆ ಜಮೀನ್ದರಾನ ಗೇಣಿಒಕ್ಕಲು ಆಗಿಬಿಟ್ಟರೆ ನಮಗೆ ಮತ್ತೆ ಇವನ ಹಾವಳಿ ಹೇಗೆ ಇರಲು ಸಾಧ್ಯ ಎಂದು ಆ ಸಭೆಯಲ್ಲಿ ಅವರೆಲ್ಲಾ ತೀರ್ಮಾನಿಸಿದರು.
ಮರುದಿನ ನಸುಕಿಗೇ ಜಮೀನ್ದಾರನ ಮನೆ ಅಂಗಳದಲ್ಲಿ ಅಪ್ಪ ಮಕ್ಕಳು ಹೋಗಿ ನಿಂತರು.
ತಮಗೆ ಈ ರೀತಿ ಆ ಕರಣಿಕ ಉಪಟಳ ನೀಡುತ್ತಿದ್ದಾನೆಂದೂ..,ಅದರಿಂದ ಪಾರಾಗಲು ತಾವು ನಮ್ಮನ್ನು ಗೇಣಿಒಕ್ಕಲು ಆಗಿ ಸ್ವೀಕರಿಸಬೇಕೆಂದೂ ಕೇಳಿಕೊಂಡರು.
ತಥಾಸ್ತು ಎಂದ ಜಮೀನ್ದಾರ.
ಅದೇ ದಿನ ಪೇಟೆಗೆ ಜಮೀನ್ದಾರನ ಎತ್ತಿನ ಗಾಡಿಯ ಹಿಂದೆ ನಡೆದುಕೊಂಡು ಹೋದ ವರ್ಗದಾರ ತನ್ನ ಜಮೀನನ್ನು ಅವನಿಗೆ ಬರೆದುಕೊಟ್ಟು ಅವನ ಊಳಿಗದವನಾಗಿಬಿಟ್ಟ.
ಈ ಎಲ್ಲಾ ಬೆಳವಣಿಗೆ ಈ ಕರಣಿಕನಿಗೆ ಗೊತ್ತೇ ಇರಲಿಲ್ಲ. ಮರುದಿನ ಯಥಾಪ್ರಕಾರ ಹಾದಿಯಲ್ಲಿ ಹೋಗುವವನು ಏಯ್.. ಆ ಎಳನೀರನ್ನು ಗೊಂಚಲು ಸಮೇತ ತಂದೊಪ್ಪಿಸು ಎಂದ.
ವರ್ಗದಾರ ಮತ್ತು ಅವನ ಮಕ್ಕಳು ಕ್ರುದ್ಧರಾದರು.
ಬೋಳಿಮಗನೇ ಏನು ಕೇಳಿದೆ ಎಳನೀರಾ.. ಹಾಗೆಲ್ಲಾ ದಬಾಯಿಸೋದು ಅಂದಾಯ್ತು..ನಾವು ವರ್ಗದಾರರು ಅಂತ ನಿನಗೆ ಬಾರೀ ತಿರಸ್ಕಾರ ಅಲ್ಲವಾ ? ನಾವು ಈಗ ಯಾರು ಗೊತ್ತಾ.. ಅದೇ ನಿನ್ನ ಜಮೀನ್ದಾರರ ಒಕ್ಕಲುಗಳು..ತಾಖತ್ತಿದ್ದರೆ ಈಗ ದಬಾಯಿಸು ನೋಡೋಣ..ಜಮೀನ್ದರಾರಿಗೆ ಹೇಳಿ ನಿನ್ನ ಪೊಡಸು ತೆಗೆಯಲಿಕ್ಕುಂಟು ಗೊತ್ತಾಯ್ತಾ ಎಂದು ಉಗಿದರು.
ಕರಣಿಕ ಹೆದರಿಕೆಯಿಂದಲೂ ಆಶ್ಚರ್ಯದಿಂದಲೂ ಪೆಚ್ಚುಪೆಚ್ಚಾಗಿಯೂ ಓಡಿದ.ಜಮೀನ್ದಾರನ ಬಳಿ ಹೀಗೀಗಾಯ್ತಾ ಎಂದು ಕೇಳಿದ.
ಜಮೀನ್ದಾರ ಹೌದೌದು.. ಅದು ಜಮೀನು ನಮ್ಮದಾಗಿದೆ. ಇನ್ನು ಅವರ ತಂಟೆಗೆ ಹೋಗಬೇಡ ಎಂದ.

ಸ್ಪೆಶಲ್ ರಿಕ್ವೆಸ್ಟ್ : ಈ ಕತೆಯಲ್ಲಿ ಜಾಗತೀಕರಣ,ಅಣುಬಂಧ, ಅಮೆರಿಕೀಕರಣ, ಪಾಶ್ಚಿಮಾತ್ಯಕೀಕರಣ..ಇಂತಿರ್ಪ ಸಂದರ್ಭ ಸಂಬಂಧ ಸಂಯೋಜನೆಯಂ ಕಾಣದಿರಿ ಅಕಟಕಟಾ...

20080820

ಆಕ್ಸಿಡೆಂಟ್
ಹೀಗೇಕೆ ಮಾಡಿದೆ ಎಂದು ಕೇಳಿದಳು ವೀಣಾ ಹೆಗಡೆ.
ಆ ಪ್ರಶ್ನೆಗೆ ಏನು ಹೇಳಬೇಕೆಂದು ಗೊತ್ತಾಗದೇ ಒದ್ದಾಡಿದ ಗೋಪಾಲ ಭಟ್ಟ.
ನೀನೂ ಸುಮ್ಮನಿದ್ದುದು ಯಾಕೆ.. ನಿನಗಾದರೂ ಮುಂದುವರಿಯಬಹುದಿತ್ತು ಅಲ್ಲವಾ ಎಂದು ತನ್ನೊಳಗೇ ಕೇಳಿದ.
ಅವಳು ಹೇಳಿದಳು.
ನೀನು ಬೆಂಗಳೂರಿಗೆ ಬರಬಾರದಿತ್ತು. ನಿನಗೆ ನಾನು ಪತ್ರ ಬರೆಯಬಾರದಿತ್ತು. ನನ್ನ ಪತ್ರಕ್ಕೆ ನೀನು ಉತ್ತರಿಸಬಾರದಿತ್ತು. ಉತ್ತರದಲ್ಲಿ ಅಷ್ಟೊಂದು ಪ್ರೀತಿ ಕಾಣಬಾರದಿತ್ತು. ಆ ಪತ್ರದಲ್ಲಿ ನನಗೆ ಅಕ್ಷರಗಳು ಮಾತ್ರಾ ಕಂಡರೆ ಸಾಕಿತ್ತು.
ಎಲ್ಲಾ ಹೋಯಿತು.
ಅಂದು ನೀನು ಬಂದಾಗ ನಾನೊಬ್ಬಳೇ ಇರಬಾರದಿತ್ತು. ಸಂಜೆ ಬರೋ ನನ್ನ ಅಕ್ಕ ಇದ್ದಿದ್ದರೆ ನಾವಿಬ್ಬರೂ ಅಷ್ಟೊಂದು ಹತ್ತಿರವಾಗುವುದು ಸಾಧ್ಯವೇ ಇರುತ್ತಿರಲಿಲ್ಲ.ಅಥವಾ ನಿನ್ನನ್ನು ಕರೆದುಕೊಂಡು ಬಂದನಲ್ಲಾ ಆ ನಿನ್ನ ಗೆಳೆಯ ಅವನಾದರೂ ಅಲ್ಲಿಂದ ಆ ಕ್ಷಣವೇ ನಾನು ಚಹ ಕೊಟ್ಟರೂ ಕುಡಿಯದೇ ಹೊರಟೇ ಹೋದನಲ್ಲ.. ಅವನು ನಿನ್ನ ಕೂಡ ಇರಬೇಕಿತ್ತು.
ನಾನು ಆ ಹೊತ್ತಿನಲ್ಲಿ ನೀನು ಹೊರಟು ನಿಂತಾಗ ನಿಲ್ಲೋ ಊಟ ಮಾಡಿ ಹೋಗು ಎನ್ನಬಾರದಿತ್ತು. ಊಟದ ಬಳಿಕ ನೀನು ಅಂಗೈ ಓದುತ್ತೇನೆ ಎಂದಾಗ ಕೈ ಚಾಚಬಾರದಿತ್ತು. ಕತ್ತಿನಲ್ಲಿದ್ದ ಸರ ಚೆನ್ನಾಗಿದೆ ಎಂದಾಗ ನಾನು ಅದನ್ನು ಬಿಚ್ಚಿ ನಿನಗೆ ಕೊಡಬಾರದಿತ್ತು.
ಎಲ್ಲಿಗೆ ಹೋದೆ ಆಮೇಲೆ ? ಯಾಕೆ ಸುಮ್ಮನಾದೆ ? ವೀಣಾ ಹೆಗಡೆ ಕೇಳುತ್ತಲೇ ಇದ್ದಳು.
ಗೋಪಾಲ ಭಟ್ಟ ಹೇಳಿದ..
ನೋಡು ವೀಣಾ ಇದೆಲ್ಲಾ ಆಕ್ಸಿಡೆಂಟ್ .. ಹ್ಹ.. ತೀರಾ ರೋಡ್ ಅಕ್ಸಿಡೆಂಟ್ ಇದ್ದ ಹಾಗೇ..
ಎರಡು ಕಾರುಗಳು ಢಮಾರ್ ಅಂತ ಗುದ್ದಿಕೊಳ್ಳುತ್ತವೆ. ಏನೇನೂ ಆಗಿ ಹೋಗುತ್ತೆ.ಡೆಂಟು, ಬ್ಲಡ್ಡು, ಡೆತ್ತು.. ಇತ್ಯಾದಿ ಇತ್ಯಾದಿ..
ಆಮೇಲೆ ಏನಾಗುತ್ತದೆ ..
ಆ ಎರಡೂ ವಾಹನಗಳು ಅದರ ಪಾಡಿಗೆ ಅದು ಅಂತ ಅದೇ ರಸ್ತೆ ಮೇಲೆ ಹೋಗುತ್ತವೆ. ಆಮೇಲೆ ಅವುಗಳು ಮತ್ತೊಮ್ಮೆ ಮಖಾಮುಖಿ ಆಗುತ್ತಾವಾ.. ಆದರೂ ಗುದ್ದಿಕೊಳ್ಳುತ್ತಾವಾ..
ದುಷ್ಟ ನೀನು ಎಂದಳು ವೀಣಾ ಹೆಗಡೆ ತೋಳು ಚಾಚುತ್ತಾ..ಗೋಪಾಲ ಭಟ್ಟ ಅವಳನ್ನು ತುಂಬಾ ಹೊತ್ತು ತಬ್ಬಿಕೊಂಡ.
ಅವರಿಬ್ಬರೂ ಮೊದಲು ಕಂಡ ಪ್ರೀತಿಯನ್ನು ಹುಡುಕಿದರು, ಸಿಗಲಿಲ್ಲ..

20080813

ನಾಲ್ಕು ಸಾಲು೧.
ಆಗಸವನ್ನು ಪ್ರೀತಿಸಿದ
ಕಡಲು
ಉಕ್ಕುಕ್ಕಿ
ನಿವೇದಿಸುವುದು
ಭುವಿಯೂ ಬೇಡುವುದು ಬಾನನ್ನು..
ಅದಕ್ಕೇ
ಪ್ರೀತಿ
ಆಕಾಶದೆತ್ತರ, ಭೂಮಿಯ ವಿಸ್ತಾರ, ಕಡಲಿನ ಆಳ.೨.


ಕಡಲನ್ನು
ಕೆತ್ತಲು
ಮಾನವನು ಹೊರಟಿಲ್ಲ
ಆದ್ದರಿಂದ
ತೇಲುತ್ತಿರುವ.೩.


ಭೂಮಿ ಮೇಲೆ
ನಿಂತವನಿಗೆ ಕಡಲು
ಕರೆಯುವುದು..
ನಾವಿಕನಿಗೆ
ನೆಲದ ಮಣ್ಣಿನ ಬಯಕೆ೪.


ಸಾಗರದ
ಅಗಾಧತೆ ಕೂಡಾ
ಭೂಮಿಯನ್ನು
ಕಾಣುವುದರೊಂದಿಗೆ ಅಂತ್ಯವಾಗುವುದು..

20080811

ಅಡ್ಡಬಿದ್ದೆ ಅಭಿನವಾ..


ಅಭಿನವ್ ಬಿಂದ್ರಾ..

ವಯಸ್ಸು ಇಪ್ಪತ್ತೈದು.

ಎಂಬಿಎ ಪದವೀಧರ.

ಈತ ಶ್ರೀಮಂತರ ಹುಡುಗ.

ಮನೆಯ ಹಿಂದೆ ಇವನಿಗಾಗಿಯೇ ಇವನಪ್ಪ ಒಂದು ಇಂಡೋರ್ ಸ್ಟೇಡಿಯಂ ಕಟ್ಟಿಸಿಕೊಟ್ಟಿದ್ದ.

ಈ ಶಾರ್ಪ್‌ಶೂಟರ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ೧೭ನೆಯವನು.

ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಈತ ರೈಫಲ್ ಹಿಡಿದು ನಿಂತಿದ್ದಾಗ ೨೨ ವರ್ಷ. ಅಲ್ಲಿ ಸೋತುಹೋದ. ಎಲ್ಲರಂತೆ.

ನಿನ್ನೆ ಮೊನ್ನೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಫೈನಲ್‌ಗೆ ಬಂದಾಗ ನಾಲ್ಕನೇ ಸ್ಥಾನದಲ್ಲಿದ್ದ.

ಆಗಸ್ಟ್ ೧೧ ೨೦೦೮..

ನಮ್ಮ ಗಂಟೆ ಹತ್ತೂ ಆಗಿಲ್ಲ

ಆ ಹೊತ್ತಿಗೆ ಈ ಹುಡುಗ ದೇಶಕ್ಕೆ ದೇಶವನ್ನೇ ಹೆಮ್ಮೆಯ ಕಡಲಲ್ಲಿ ಮುಳುಗೇಳಿಸಿದ..

ಹುಟ್ಟಿದ್ದು ೧೯೮೩ ಸೆಪ್ಟೆಂಬರ್ ೨೮ ಡೆಹ್ರಾಡೂನ್‌ನಲ್ಲಿ.

ಊರು ಚಂಡೀಗಢ.

ಓದಿದ್ದು ಡೂನ್‌ಸ್ಕೂಲ್‌ನಲ್ಲಿ.

ಐದಡಿ ಎಂಟಿಂಚು ಎತ್ತರ ,ಅರುತ್ತೈದೂವರೆ ಕಿಲೋ ತೂಕದ ಯುವಕ.

ಕಂಪ್ಯೂಟರ್ ಗೇಮ್ಸ್‌ನ ವಿತರಣೆಮಾಡುವ ಅಭಿನವ್ ಪ್ಯಿಚರಿಸ್ಟಿಕ್ಸ್ ಎಂಬ ತನ್ನದೇ ಕಂಪನಿಯ ಸಿಇಒ.

ಚಿನ್ನದ ಪದಕ ಗೆಲ್ಲೋದು ಈ ಹುಡುಗನಿಗೆ ಸಂಗತಿಯೇ ಅಲ್ಲ.

ಸಿಡ್ನಿ ಒಲಿಂಪಿಕ್ಸ್‌ಗೆ ಈತ ಭಾರತದ ತಂಡದಲ್ಲಿ ಹೊರಟಾಗ ಅತೀ ಕಿರಿಯ ಸ್ಫರ್ಧಾಳುವಾಗಿದ್ದ.

ಅದಕ್ಕೂ ಮುನ್ನ ಮ್ಯಾಂಚೆಸ್ಟರ್ ಕಾಮನ್‌ವೆಲ್ತ್ ಗೇಮ್ಸ್‌ಗೆ ಈತ ಕ್ರೀಡಾಮಗಣದಲ್ಲಿ ಕಂಡಾಗ ೧೫ರ ಪೋರ..

ಆಮೇಲೆ ಅದೆಷ್ಟು ಚಿನ್ನದ ಪದಕ ಎಲ್ಲೆಂದರಲ್ಲಿ ಗೆದ್ದು ತಂದ ಎಂದರೆ ಅದಕ್ಕೆ ಲೆಕ್ಕ ಮಡಗಿದವರೇ ಇಲ್ಲ.

ಆದರೆ ಈಗ ಈ ಯುವಕ ಭಾರತದ ಇತಿಹಾಸದಲ್ಲೇ ಮೊದಲಾಗಿ ಒಲಿಂಪಿಕ್ಸ್ ವೈಯುಕ್ತಿಕ ಚಿನ್ನ ಗೆದ್ದು ತಂದಿದ್ದಾನೆ ನೋಡಿ, ಕೊನೆಗೂ ಚಿನ್ನ ಗೆಲ್ಲೋದು ತನಗೆ ಲೆಕ್ಕವೇ ಅಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ.

೨೮ ವರ್ಷದ ಬಳಿಕ ಭಾರತದ ಗೋಲ್ಡು ಮೆಡಲ್ಲು ಸಂಪಾದಿಸಿಯೂ ಕೊಟ್ಟಿದ್ದಾನೆ.
ಆಗಸ್ಟ್ ಏಳರಂದು ಬೀಜಿಂಗ್‌ನಲ್ಲಿ ಉದ್ಘಾಟನೆಗೂ ಮುನ್ನ ಅಭಿನವ್ ಹೇಳಿದ್ದು ಹೀಗೆ,
"ನಾಳೆ ಸಾಧ್ಯವಾದರೆ ಸ್ವಲ್ಪ ಫ್ರೆಶ್ ಆಗಬೇಕು.ಈ ಬುಲ್ ಐಸ್‌ಗೆ ಶೂಟ್ ಮಾಡೋದು ಅಲ್ಲಿರಲಿ, ಈ ಬೀಜಿಂಗ್‌ನ ಚೆಂದದ ಹುಡುಗೀಯರನ್ನ ಕಣ್ತುಂಬಾ ನೋಡಬೇಕು.ಈ ರೈಫಲ್ ಆ ಶೂಟಿಂಗು ಎಲ್ಲಾ ಆಮೇಲೆ ಇದ್ದದ್ದೇ.."
ಬೇಕಯ್ಯಾ ಇಂಥ ತುಂಟ ಹುಡುಗರು...

ಈ ಕಳ್ಳ ಕೊರಮರ ,ದುಷ್ಟ ಅನಿಷ್ಟರ ಆಡುಂಬೊಲದಲ್ಲಿ..ಲೂಟಿಕೋರರ ಸ್ವರ್ಗದಲ್ಲಿ..ಹಣ ಲಂಚ ದಗಾ ಮೋಸ ಭ್ರಷ್ಟರೇ ಹಬ್ಬಿಹಾರಾಡುತ್ತಿರುವವರ ನೆಲದಲ್ಲಿ..ಒಬ್ಬ ಅಭಿನವ್ ನಮ್ಮನ್ನು ಎಷ್ಟೊಂದು ಖುಷಿಗೆ ಅಟ್ಟಿದ್ದಾನೆ..

ಸಾನಿಯಾ,ಧೋನಿ ಮುಂತಾದ ಪ್ರಚಾರಪಟುಗಳ ನಡುವೆ ಈ ಬಿಂದ್ರಾ ಟ್ವಿಂಕಲ್ ಟ್ವಿಂಕಲ್ ಗ್ರೇಟ್ ಸ್ಟಾರ್..

ಅವನನ್ನು ಎಲ್ಲಾ ಭಾರತೀಯರು ಅಪ್ಪಿಕೊಳ್ಳಲಿ...

20080809

ಅದಿರುಲಾರಿಗಳ ಅಭಿಮಾನಿಗಳಾದರೆ ಇದನ್ನು ಓದಬಹುದು..


ಗಣಿಗಾರಿಕೆ ಅಕ್ರಮವೋ ಸಕ್ರಮವೋ ಆ ಸರಕಾರಕ್ಕೂ ಅದನ್ನು ನಿಯಂತ್ರಿಸುತ್ತಿರವವರಿಗೂ ಬಿಟ್ಟ ವಿಚಾರ. ಆದರೆ ಅದಿರು ಸಾಗಾಟದಲ್ಲಿ ಮಾತ್ರಾ ನಡೆಯುತ್ತಿರುವುದು ಮಾತ್ರಾ ಧಾರಾಳ ಅಕ್ರಮಗಳೇ.
ಅಕ್ರಮದ ಪರಮಾವಧಿಗಳ ಸುತ್ತುನೋಟ ಹೀಗಿದೆ:
ಪ್ರೀತಿಯ ಕನ್ನಡಾಭಿಮಾನಿಗಳಿಗಾಗಿ ಹೆದ್ದಾರಿಯಲ್ಲಿ ನಾನು ಕಂಡ, ನೋಡಿದ ,ವೀಕ್ಷಿಸಿದ ಅದಿರು ಲಾರಿಗಳ ಒಂದು ಜನ್ಮ ಜಾತಕ ಬಿಡಿಸಿಡುವೆ, ನೀವೂ ಅದಿರುಲಾರಿಗಳ ಅಭಿಮಾನಿಗಳಾದರೆ ಇದನ್ನು ಓದಬಹುದು..
ಲೆಕ್ಕಇಲ್ಲದ ಅತಿಭಾರ
ರಾಷ್ಟ್ರೀಯ ಹೆದ್ದಾರಿ ೪೮ ರಲ್ಲಿ ಪ್ರತೀನಿತ್ಯ ಸರೀಸುಮಾರು ಮೂರೂವರೆ ಸಾವಿರ ಅದಿರು ತುಂಬಿದ ಲಾರಿಗಳು ಸಂಚರಿಸುತ್ತವೆ. ತುಮಕೂರು, ಚಿತ್ರದುರ್ಗ,ಬಳ್ಳಾರಿಗಳ ನೂರಾರು ಗಣಿಗಳಿಂದ ಬಗೆದ ಅದಿರು ಈ ದೈತ್ಯ ಲಾರಿಗಳಲ್ಲಿ ನಭೋಮಂಡಲೆತ್ತರಕ್ಕೆ ತುಂಬಲ್ಪಡುತ್ತವೆ.ಈ ಲಾರಿಗಳಿಗೆ ಭಾರದ ಮಿತಿಯಿಲ್ಲ. ಎಷ್ಟು ತುಂಬಿದರೂ ಇವುಗಳ ಹೊಟ್ಟೆ ತುಂಬುವುದಿಲ್ಲ. ಯಾವುದೇ ಲಾರಿ ಚಾಲಕ ನಿನ್ನ ಲಾರಿಯಲ್ಲಿ ಎಷ್ಟು ಟನ್ನು ಅದಿರು ಇದೆ ಎಂದರೆ ಅದು ಸಾವ್ಕಾರ್ರೀಗೆ ಗೊತ್ತೈತಿ ಎಂದಷ್ಟೇ ಹೇಳುತ್ತಾನೆ. ಹಾಗಂದರೆ ಹೇಗೆ ಎಷ್ಟು ಭಾರ ಇದೆ ಎಂದು ತೂಕ ಹಾಕಿಸಬೇಡವೇ ಎಂದರೆ, ನಮ್ ಸಾವ್ಕಾರ್ರೀಗೆ ಒಂದು ಮಿಸ್ಕಾಲ್ ಕೊಡ್ರೀ ಅವ್ರ್ರೇ ಮಾತಾಡತ್ತಾರೀ ಎಂದು ತಾನೊಬ್ಬ ನಿಮಿತ್ತ ಮಾತ್ರಾ ಎಂದು ಹೇಳಿ ಕೈಚೆಲ್ಲಿ ನಿಲ್ಲುತ್ತಾನೆ.
ಅಲ್ಲಿಗೆ ಭಾರದ ಅವತಾರ ಮುಗಿಯಿತು.
ಎಲ್ಲಾ ಓಪನ್
ಎಲ್ಲಾ ಲಾರಿಗಳೀಗೂ ಮುಚ್ಚುಗಡೆ ಕಡ್ಡಾಯ. ಯಾವುದೇ ಅದಿರು ಲಾರಿ ಟರ್ಪಾಲ್ ಮುಚ್ಚಿಗೆ ಇಲ್ಲದೇ ಸಂಚರಿಸುವುದು ಅಪರಾಧ. ಆದರೆ ಹೆದ್ದಾರಿಯಲ್ಲಿ ಸಂಚರಿಸುವ ಯಾವುದೇ ಅದಿರು ಲಾರಿಯೂ ಮುಚ್ಚಿಕೆ ಮಾಡಿಕೊಳ್ಳುವುದಿಲ್ಲ. ಯಾಕೆ ಟರ್ಪಾಲ್ ಹಾಕಿಲ್ಲ ಎಂದರೆ ಅದಕ್ಕೆ ಬಿಡುವಾಗಲಿಲ್ಲ ಎಂಬ ಉತ್ತರ.ಟರ್ಪಾಲ್ ಹೊದಿಸದೇ ಇದ್ದರೆ ಇತರ ವಾಹನಗಳಿಗೆ ಅದರ ಚಾಲಕರಿಗೆ ಪ್ರಯಾಣಿಕರಿಗೆ ದಾರಿಹೋಕರಿಗೆ ಅಪಾಯ. ಕಣ್ಣಿಗೆ ಅದಿರು ಚೂರು ಬೀಳಬಹುದು. ಇತ್ತ ಪರಿಸರಕ್ಕೂ ಅದಿರು ಸಿಂಚನ.
ಶರವೇಗದ ಸರದಾರ
ಅತಿವೇಗ ಈ ಲಾರಿಗಳ ಆದ್ಯ ಕರ್ತವ್ಯ. ಯಾರನ್ನೋ ಅಟ್ಟಾಡಿಸಿಕೊಂಡು ಹೋದಂತೆ ಈ ಲಾರಿಗಳು ಓಡುತ್ತವೆ. ಈ ಲಾರಿಗಳ ವೇಗಕ್ಕೆ ಹೆದ್ದಾರಿಯಲ್ಲಿ ಬಲಿಯಾದವರು ನೂರಾರು ಮಂದಿ. ಹೆದ್ದಾರಿಯ ಡಿವೈಡರ್ ಮಾರ್ಕ್ ಲೇನ್ ನಲ್ಲೇ ಓಡುವುದು ಎಂದರೆ ಈ ಲಾರಿಗಳಿಗೆ ಅತ್ಯಾನಂದ.ಈ ಲಾರಿಗಳ ಮುಸುಡಿಗೆ ಸಣ್ಣವಾಹನಗಳೇನಾದರೂ ಸಿಕ್ಕರೆ ಏನಾಗುತ್ತದೆ ಎಂದರೆ ಈ ತನಕ ಆಗಿಹೋದ ಹೆದ್ದಾರಿ ಅಫಘಾತಗಳೇ ನಿಚ್ಚಳ ಇತಿಹಾಸ ಒಪ್ಪಿಸುತ್ತವೆ.ಏಕೆ ಈ ರೀತಿ ಯಮದೂತನಂತೆ ಓಡುತ್ತೀರಿ ಎಂದರೆ ಕಾಂಪಿಟೀಶನ್ ಸಾರ್ ಎಷ್ಟು ಬೇಗ ಓಡಿ, ಬಂದರು ಸೇರಿ, ಅನ್‌ಲೋಡ್ ಆಯ್ತೋ ಅಷ್ಟು ಬೇಗ ವಾಪಾಸ್ಸು ಬಂದು ಮತ್ತೊಂದು ಲೋಡ್‌ಗೆ ರೆಡಿಯಾಗಬಹುದು ನೋಡಿ ಅನ್ತಾರೆ.
ಇದರಿಂದ ನಿನಗೇನು ಲಾಭ ಎಂದರೆ ವಾರಕ್ಕೆ ಎರಡಾವರ್ತಿ ಬದಲು ಮೂರಾವರ್ತಿ ಲೋಡ್ ಹೊಡೆದರೆ ಬಾಸು ಡಬ್ಬಲ್ ಭಕ್ಷೀಸು ಕೊಡ್ತಾನೆ ಎನ್ನುತ್ತಾರೆ.
ಯಾರಿಗುಂಟು ಯಾರಿಗಿಲ್ಲ.ಬಾಸ್ಸಿಗೂ ಲಾಭ, ಸೇವಕನಿಗೂ ಲಾಭ.ರೋಡಲ್ಲಿ ಯಾರಾದರೂ ಅಡಿಗೆ ಸಿಕ್ಕು ಢಮಾರ್ ಆದರೆ ಹೆಚ್ಚೆಂದರೆ ಒಂದು ಕೇಸು ಮಾತ್ರಾ.
ಟಪ್ಪಾಲು ಮೋಹ
ಪ್ರತೀ ಅದಿರು ಲಾರಿಗೂ ಒಂದು ಟಪ್ಪಾಲು ಎಂಬುದಿರುತ್ತದೆ. ಇದು ಸರಕಿನ ಒಡೆತನದ ಸಂಬಂಧದ ದಾಖಲೆ. ಈ ಟಪ್ಪಾಲು ಇಲ್ಲದಿದ್ದರೆ ಬಂದರದಲ್ಲಿ ಅದಿರು ಅನ್‌ಲೋಡ್ ಆಗುವುದಿಲ್ಲ.ಏಕೆಂದರೆ ಟಪ್ಪಾಲು ಇಲ್ಲದ ಅದಿರು ಅನಧಿಕೃತ. ಮೇಲಾಗಿ ಕಳ್ಳಮಾಲು ಎಂದೇ ಅರ್ಥ. ಆದ್ದರಿಂದ ಏನಾದರೂ ಇಲ್ಲದೇ ಈ ಲಾರಿಗಳು ಓಡಾಡಬಹುದು, ಟಪ್ಪಾಲು ಇಲ್ಲದೇ ಓಡಾಡವು.ಪೊಲೀಸರು ಈ ಲಾರಿಗಳನ್ನು ನಿಲ್ಲಿಸಿದ ಒಡನೇ ಟಪ್ಪಾಲನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಾರೆ. ಆಮೇಲೆಯೇ ಎಲ್ಲಾ ವಿಚಾರಣೆ.ಟಪ್ಪಾಲನ್ನು ಶತಾಯಗತಾಯ ಮರಳಿಪಡೆಯುವುದೇ ಲಾರಿ ಚಾಲಕರ ಏಕಮಾತ್ರಾ ಅಜೆಂಡಾ. ಲಾರಿ ಮಾಲೀಕ ಇದಕ್ಕಾಗಿ ಚಾಲಕರಿಗೆ ಕಟ್ಟಪ್ಪಣೆ ನೀಡಿರುತ್ತಾನೆ.ಟಪ್ಪಾಲು ಪಡೆದುಕೊಳ್ಳಲು ಈ ಚಾಲಕರು ತಕ್ಷಣವೇ ವಶೀಲಿಬಾಜಿ ಆರಂಭಿಸುತ್ತಾರೆ. ಅತ್ತು ಗೋಗರೆಯುತ್ತಾರೆ. ಏನನ್ನಾದರೂ ಕೊಂಡೋಗಿ, ಆದರೆ ಟಪ್ಪಾಲನ್ನು ಮಾತ್ರಾ ವಾಪಾಸು ಕೊಡಿ ಎಂದು ದಮ್ಮಯ್ಯಗುಡ್ಡ ಹಾಕುತ್ತಾರೆ.
ಓನರ್ ಕೈಲಿ ಡಿಎಲ್ಲು
ನೂರಕ್ಕೆ ತೊಂಬತ್ತೈದು ಲಾರಿಗಳಲ್ಲಿ ದಾಖಲೆ ಪತ್ರಗಳೇ ಇಲ್ಲ. ಇದ್ದರೂ ಅದು ಛಾಯಾಪ್ರತಿ.ಹೆಚ್ಚಿನ ಲಾರಿಗಳು ಯಾವುದೇ ದಾಖಲೆ ಇಲ್ಲದೇ ಓಡಾಡುತ್ತವೆ. ಡ್ರೈವಿಂಗ್ ಲೈಸನ್ಸ್ ಎಲ್ಲಿದೆ ಎಂದರೆ ಓನರ್ ಕೈಲಿ ಕೊಟ್ಟಿವ್ವನ್ರೀ ಅನ್ತಾನೆ. ಅರೆ ಯಾಕೋ ಎಂದರೆ ಇಲ್ಲಾಂದ್ರೆ ಗಾಡಿ ಕೊಡಲ್ಲ ಬಾಸೂ ಎಂಬ ಉತ್ತರ.ಡಿಎಲ್ದು ಜೆರಾಕ್ಸ್ ಕಾಪಿ ಇದೆ ಬೇಕಾದರೆ ಇಟ್ಟುಗೊಳ್ಳಿ ಎಂಬ ದಢಸಿ ಉತ್ತರ ಆಮೇಲೆ.
ಇನ್ನು ಆರ್‌ಸಿ,ಟ್ಯಾಕ್ಸ್ ಕಾರ್ಡ್ ಮೂಲಪ್ರತಿ ಯಾರ ಬಳಿಯೂ ಇರುವುದಿಲ್ಲ.ಛಾಯಾಪ್ರತಿಯೂ ಇಲ್ಲ. ಉತ್ತರ ಅದೇ ಬಾಸ್ ಇಟ್ಕೊಂಡಿದ್ದಾರೆ. ಮಿಸ್‌ಕಾಲ್ ಕೊಡಿ..॒
ಓರ್ವ ಚಾಲಕ ಪೊಲ್ಯೂಶನ್ ಸರ್ಟಿಫಿಕೇಟ್ ತೋರಿಸು ಎಂದರೆ ಅದೇನೆಂದು ಕೇಳಿದ.ಹೊಗೆ ತಪಾಸಣೆ ಮಾಡಿಸುವುದು ಎಂದರೆ ಆತನಿಗೆ ಗೊತ್ತೇ ಇಲ್ಲವಂತೆ!ಅಕಟಕಟಾ..
ಬಹುತೇಕ ಲಾರಿಗಳು ಎಫ್‌ಸಿಗೊಳಗಾಗಿರುವುದೇ ಇಲ್ಲ. ಕಾರ್ಯಾಚರಣೆಯಲ್ಲಿ ಟ್ಯಾಕ್ಸ್ ಪಾವತಿಸದೇ ಓಡಾಡುವ ಲಾರಿಗಳೂ ಸಿಕ್ಕಿಬಿದ್ದವು. ಚಾಲಕನಿಗೆ ಕೇಳಿದರೆ ನಾನು ಇದೇ ಫಸ್ಟು ಈ ಲಾರಿಗೆ ಚಾಲಕನಾಗಿ ಬಂದಿರುವೆ ಎಂಬ ಸ್ಪಷ್ಟೋಕ್ತಿ.
ನಂಬರ್‌ಪ್ಲೇಟಿಗೆ ದುರ್ಬೀನು ಬೇಕು
ಹೆದ್ದಾರಿಯಲ್ಲಿ ಸಂಚರಿಸುವ ಈ ಲಾರಿಗಳಿಗೆ ನಂಬರ್ ಪ್ಲೇಟ್ ದುರ್ಬೀನು ಹಿಡಿದರಷ್ಟೇ ಕಾಣಿಸುತ್ತವೆ. ಕಾನೂನುರೀತ್ಯಾ ಅದರ ಆಕಾರವೂ ಇಲ್ಲ, ಬರವಣಿಗೆಯೂ ಇಲ್ಲ. ಹಿಂಭಾಗದ ನಂಬರ್‌ಪ್ಲೇಟ್ ಸದಾ ಮಸುಕು ಮಸುಕು. ಕೇಳಿದರೆ ಅದಿರುಧೂಳು, ಕೆಸರು ಬಿದ್ದಿದೆ ಎಂಬ ಸಿದ್ಧ ಉತ್ತರ ಲಭ್ಯ. ಹಿಟ್ ಅಂಡ್ ರನ್ನಿಗೆ ಹೇಳಿಮಾಡಿಸಿದಂತಿದೆ ಈ ವ್ಯವಸ್ಥೆ. ಓಡಿದ ಲಾರಿ ಯಾವುದು ಎಂದು ಗುರುತು ಹಿಡಿಯಲು ನಂಬರ್ ಕಾಣಿಸುವುದೇ ಇಲ್ಲ..

ಚೌಕಾಸಿ ಚೌಕಾಸಿ
ಇಷ್ಟೆಲ್ಲಾ ಆದ ಮೇಲೆ ದಂಡ ತೆರುವ ಬಗ್ಗೆ ಈ ಲಾರಿಗಳ ಚಾಲಕರು ಚೌಕಾಸಿ ಆರಂಭಿಸುತ್ತಾರೆ. ಅಧಿಕಾರಿ ಕೈಲಿ ಪುಸ್ತಕ ಇಲ್ಲ ಎಂದಾದರೆ ನೇರವಾಗಿ ಐವತ್ತು ರೂಪಾಯಿ ನೋಟು ಒಡ್ಡುತ್ತಾರೆ. ಏನಿದೋ ಎಂದರೆ ಮೇಲೆಲ್ಲಾ ಇಷ್ಟೇ ಕೊಡೋದು ಎನ್ನುತ್ತಾರೆ. ಪುಸ್ತಕ ಎತ್ತಿಕೊಂಡೊಡನೇ ತಮ್ಮ ಮೊಬೈಲ್ ಕಿಸೆಯಿಂದ ತೆಗೆದು ಸಾವ್ಕಾರ್ರೀಗೆ ಮಾತನಾಡುತ್ತಾರೆ. ಹಾಗೇ ಮಾತನಾಡುತ್ತಾ ಅಧಿಕಾರಿ ಕೈಗೆ ಕೊಡುತ್ತಾರೆ. ಆಮೇಲೆ ಏನಿದ್ದರೂ ಮಾತುಕತೆ ಸಾವ್ಕಾರ್ ಜೊತೆ. ಆತನಿಂದ ವಿನಂತಿಗಳ ಸುರಿಮಳೆ.ಏನಾದರೂ ಮಾಡಿ ರಿಯಾಯಿತಿ ತೋರುವಂತೆ ಮನವಿ.
ಇದಾದಮೇಲೂ ಪ್ರಾಮಾಣಿಕ ಅಧಿಕಾರಿ ಜಗ್ಗದಿದ್ದರೆ ಚಾಲಕ ತನ್ನ ಪಾಕೀಟು ಬಿಚ್ಚುತ್ತಾನೆ.ಹೇಳಿದಷ್ಟು ದಂಡ ಕಕ್ಕುತ್ತಾನೆ. ಪಾಕೀಟು ತುಂಬಾ ನೋಟುಗಳೇ.ದಿನಕ್ಕೆ ಮುನ್ನೂರೈವತ್ತು ರೂಪಾಯಿ ಊಟಕ್ಕೆ ಅಂತ ಕೊಡುತ್ತಾರೆ ಎಂದ ಒಬ್ಬ ಚಾಲಕ. ಉಳಿದಂತೆ ಬಟವಾಡೆಗೆ ಅಂತ ದುಡ್ಡು.
ಯಾರಿಗೆ ಎಷ್ಟೆಷ್ಟು ಬಟವಾಡೆ ಎಂದರೆ ಕಾನ್‌ಸ್ಟೇಬಲ್ ಆದರೆ ಇಪ್ಪತ್ತು,ಎಸ್ಸೈ ಅಥವಾ ಸರ್ಕಲ್‌ಗೆ ಐವತ್ತು, ಆರ್‌ಟಿಒ ಜೀಪಿಗೆ ಹದಿನೈದು ಎಂದು ಲೆಕ್ಕ ಒಪ್ಪಿಸಿದ.ಆದೇನು ಅಷ್ಟೊಂದು ಚೀಪ್‌ರೇಟು ಎಂದು ಕೇಳಿದ್ದಕ್ಕೆ ಆತ ಹೇಳಿದ್ದು,
ಎಲ್ಲಿ ಕಡಿಮೆ ಸಾರ್.. ಒಬ್ಬ ಆರ್‍ಟಿವೋ ಒಂದು ಗೇಟ್‌ನಲ್ಲಿ ಒಂದು ರಾತ್ರಿ ನಿಂತರೆ ಒಂದ್ಸಾವಿರ ಲಾರಿಗೆ ದುಡೀತಾನೆ.ಹದ್ನೈದು ಸಾವಿರ ಚೀಲಕ್ಕೆ ಒಂದೇ ರಾತ್ರೀಲಿ ಬಿತ್ತಲ್ಲಾ ಸಾರ್ ..ಎಂದ..
ಇಲ್ಲಿಗೆ ಇಷ್ಟು ಸಾಕು..

20080808

ನಾಲ್ಕು ಸಾಲು೧.
ಚಿಟ್ಟೆ ಮತ್ತು ಹೂವಿನ
ಸಂಬಂಧ
ಮಧುರ
ಆದರೆ ಚಿಟ್ಟೆ ಹಾರಿದ ಮೇಲೆ
ಹೂವಿಗೆಲ್ಲಿಯ ಮಾಧುರ್ಯ?
೨.
ಗಾಳಿಯ ಜೊತೆ
ಮರದ ಸ್ನೇಹ
ಸೂರ್ಯನಿಗೂ ಮತ್ಸರ
ಮುಗಿಲು ತುಂಬಿದ ಬಾನಿನಲ್ಲಿ
ಸೂರ್ಯ ಮಾಯ
ಗಾಳಿ ಅಬ್ಬರಿಸಿ
ಮರಕ್ಕೆ
ನೆಲದ ಹಂಗು
೩.
ನಾಳೆ
ಏನು ಎತ್ತ
ನನಗೆ ಗೊತ್ತಿಲ್ಲ
ಇಂದು ರಾತ್ರಿಯ
ಕನಸು
ಕೂಡಾ
ಈಗ
ತಿಳಿದಿಲ್ಲ
ಎರಡೂ ಗೊತ್ತಾದರೆ
ನಾಳೆಗೆ ಹೊರಳುವ ಕ್ಷಣ
ಇಂದು ಬರುವ ಕತ್ತಲು
ಎರಡನ್ನೂ ಕಾಣಲಾರೆ.
೪.
ಬಿದಿರು
ಅವನ
ಕೈಯಲ್ಲಿ
ಕೊಳಲಾಯಿತು
ಅವಳ
ಧ್ಯಾನದಲ್ಲಿ
ಕಂಡದ್ದು
ವಂಶೋದ್ಧಾರ ಭೂಮಿ.