20080724

ನಾಲ್ಕು ಸಾಲು


೧.


ಚಂದಿರನಿಲ್ಲದ

ಹುಣ್ಣಿಮೆಯಲ್ಲಿ

ನಕ್ಷತ್ರಗಳಿಗೆ ನಿಮಿರು.

ಕತ್ತಲು ಅಮೃತಂಗಮಯ


೨.


ಅವನಿಲ್ಲದ

ಜಾತ್ರೆಯಲ್ಲಿ

ರಥದ ದೇವರು ಬಡವ,

ಮತಾಪುಗಳಲ್ಲಿ ಕಾಳ್ಗಿಚ್ಚು,

ಹೃದಯದಲ್ಲಿ ಖಾಲಿ ಸಂತೆ.


೩.


ಬಾರದ

ಮಳೆಗೆ

ಕಡು ಬೇಸಗೆಯಲ್ಲಿ

ಧ್ಯಾನಿಸುವವನು

ಬಹು ದೊಡ್ಡ ಪ್ರೇಮಿ


೪.


ಅವನ ನೆನಪು

ಅವಳ ಬೆನ್ನಟ್ಟಿ

ಅವಳು ಬೆತ್ತಲಾದಳು.

ಮೈಮೇಲೆ ಸುರುವಿದ

ನೀರನ್ನು ಚಾದರ ಮಾಡಿ ಹೊದ್ದಳು.

20080721

ಗುನ್ಯಾ ಬಂತು ಗುನ್ಯಾ ಹೋಯ್ತು ಡುಂ ಡುಂ ಡುಂ
ಅರುವತ್ತಾರು..!
ಅದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿಕೂನ್‌ಗುನ್ಯಾ ಎಂಬ ಕಂಡಿರದ, ಕೇಳಿರದ ಸಾಂಕ್ರಾಮಿಕ ತೆಗೆದು ಕೊಂಡ ಬಲಿ.
೩೬೯ ಗ್ರಾಮ. ಐದು ಲಕ್ಷ ಜನ.
ಅದು ಇದೇ ಮಾರಿಗೆ ಮಕಾಡೆ ಮಲಗಿದ ಮಂದಿ.
ಅವರು ಸತ್ತಿದ್ದಾರೆ, ಇವರು ಇದ್ದು ಸತ್ತಂತೆ ಆಗಿದ್ದಾರೆ.ಬೆಳಗಾದರೆ ಏಳಲಾರರು, ಎದ್ದರೆ ನಡೆಯಲಾರರು. ದುಡಿಯುವ ರೆಟ್ಟೆಗಳಿಗೆ ಬಲವಿಲ್ಲ, ಬೆವರುವ ಮೈಯಲ್ಲಿ ಶಕ್ತಿಯೇ ಇಲ್ಲ.ಕಳೆದ ಎರಡೂವರೆ ತಿಂಗಳುಗಳಿಂದ ಜಿಲ್ಲೆಯ ೩೬೯ ಗ್ರಾಮಗಳ ಮೂರೂವರೆ ಲಕ್ಷ ಮನೆಗಳಲ್ಲಿ ಒಂದಾದ ಮೇಲೊಂದರಂತೆ ,ಒಬ್ಬರ ನಂತರ ಇನ್ನೊಬ್ಬರಂತೆ ,ಹೆಚ್ಚೂಕಮ್ಮಿ ಒಬ್ಬನಿಗೂ ಒಂದೂ ವಿನಾಯಿತಿ ತೋರದೇ ಎಲ್ಲ ದೇವದುರ್ಲಭ ಪ್ರಜೆಗಳನ್ನೂ ದೇಹದುರ್ಬಲ ಮಾಡಿದ ಈ ಹೆಮ್ಮಾರಿ ಈಗ ಸಾಮ್ರಾಜ್ಯ ಗೆದ್ದ ಗೆಟ್ಟಪ್ಪಿನಲ್ಲಿ ನಿರ್ಗಮಿಸುತ್ತಿದೆ.
ಮುಂದಿನ ಪಯಣ ಎತ್ತಲೋ..
ಇನ್ನು ಇಲ್ಲಿ ಹೊಸತಾಗಿ ಗುನ್ಯಾ ಹಿಡಿಸಿಕೊಳ್ಳಲು ಯಾರೂ ಉಳಿದಿಲ್ಲ.
ಇದು ಕಟು ವಾಸ್ತವ.
ಆದರೆ ಅದನ್ನು ಮುಚ್ಚಲು ಸರಕಾರ, ಆಡಳಿತಶಾಹಿ ಬೇಕಾದುದನ್ನೆಲ್ಲಾ ಮಾಡುತ್ತಲೇ ಇವೆ.
ಈಗ ಉಳಿದಿರುವುದು ರಣರಂಗ.ಯುದ್ಧ ಮುಗಿದ ವಾರ್‌ಫೀಲ್ಡ್. ಇಲ್ಲಿ ಅಗೋಚರ ಶಕಿಗೆ ಅಪ್ರತಿಮ ಮಾನವ ಸೋತು ಶರಣಾಗಿದ್ದಾನೆ.ಕಣ್ಣಿಗೇ ಕಾಣದ ಮಿಸ್ಟರ್ ವೈರಸ್ ಇಡೀ ಈ ಜಿಲ್ಲೆಯ ಮಾನ್ಯ ಮಾನವರನ್ನು ಮಣಿಸಿದೆ.ಇದರ ಎದುರು ಎಲ್ಲಾ ವೈದ್ಯವಿಜ್ಞಾನ, ಬಯೋಟೆಕ್ನಾಲಜಿ, ಸಂಶೋಧನೆಗಳು, ಸಂಪರ್ಕಗಳು ಲೊಳಲೊಟ್ಟೆಯಾಗಿಬಿಟ್ಟಿವೆ.
ಇಲ್ಲಿ ಈಗ ಉಳಿದಿರುವುದು ಏನಿದ್ದರೂ ಆಕ್ರಂದನ ಮಾತ್ರಾ.
ಪರಶುರಾಮನ ಸೃಷ್ಟಿಯಲ್ಲಿ ಏನೂ ಆಗುವುದಿಲ್ಲ ಎಂದು ಹೇಳುತ್ತಿದ್ದರು ದಕ್ಷಿಣಕನ್ನಡದ ಸೋಕಾಲ್ಡ್ ಬುದ್ಧಿವಂತ ಜನ. ಆ ಹಮ್ಮು ಆ ಬಿಮ್ಮು ಗುನ್ಯಾ ಕಿತ್ತುಹಾಕಿದೆ.
ಇದರ ಈ ಪರಿಯ ಆಕ್ರಮಣದ ಎದುರು ಸೋತ ಸರಕಾರ ಗುನ್ಯಾವನ್ನು ಎಷ್ಟು ಮಾತ್ರಕ್ಕು ಮಣಿಸಲಾರದ ಸರಕಾರ ಅದರಿಂದ ಏನೂ ಆಗಿಲ್ಲ ಎಂದು ಹೇಳಲು ಸಿದ್ಧತೆಗಳನ್ನು ಆರಂಭಿಸಿದೆ.
ಮೊದಲಾಗಿ ಗುನ್ಯಾದಿಂದ ಅಷ್ಟೋ ಇಷ್ಟು ಮಂದಿ ಮಾತ್ರಾ ಪೀಡಿತರಾಗಿದ್ದಾರೆ ಎಂದು ಲೆಕ್ಕ ತಪ್ಪಿಸಿತು ಸರಕಾರ. ಆಮೇಲೆ ಯಾವಾಗ ಅಲ್ಲಲ್ಲಿ ಇಲ್ಲಿ ಜನ ಸಾಯೋದಕ್ಕೆ ಶುರುವಾಯಿತೋ ಆ ಸಾವನ್ನೇ ಹಾಗಲ್ಲ ಎಂದು ಹೇಳಲು ಆರಂಭಿಸಿತು. ಆರಂಭದಿಂದಲೂ ಚಿಕೂನ್‌ಗುನ್ಯಾದಿಂದ ಯಾರೂ ಸಾಯಲ್ಲ ಎಂದೇ ಗಿಳಿಪಾಠ ಹೇಳುತ್ತಾ, ಸತ್ತವರ ಸಂಖ್ಯೆ ಹೆಚ್ಚುತ್ತಲೇ ಇದ್ದಾಗ ತಾನು ಹೇಳಿದ್ದನ್ನು ಸಮರ್ಥಿಸಲು ಈಗ ಹೊರಟಿದೆ.ಅದಕ್ಕಾಗಿಯೇ ಒಂದು ಅಭಿಯಾನ ಮಾಡಿಸಿ ಒಂದು ವರದಿ ರೂಪಿಸುತ್ತಿದೆ.ಇಷ್ಟರಲ್ಲೇ ಸರಕಾರ ಜಿಲ್ಲೆಯಲ್ಲಿ ಚಿಕೂನ್‌ಗುನ್ಯಾದಿಂದ ಯಾರೂ ಸತ್ತಿಲ್ಲ ಎಂದು ಅಧಿಕೃತವಾಗಿ ಹೇಳಲಿದೆ.
ಸತ್ತವರ ಪಟ್ಟಿಯನ್ನೂ ,ಅವರ ಸಾವಿನ ಕಾರಣಗಳ ವರದಿಯನ್ನೂ ಮುಂದಿಟ್ಟು ಮಾಂಕು ಸತ್ತದ್ದು ಹೀಗೆ , ಯಶೊದಾ ಸತ್ತದ್ದು ಇದರಿಂದ, ಫಕೀರನಿಗೆ ಸಾಯಲು ಹೀಗಾದದ್ದದು ಕಾರಣ,ಕೊರಗುಗೆ ಇದು ಸಾವಿಗೆ ಕಾರಣವಾಯಿತು ಎಂದು ಸರಕಾರ ತನ್ನ ತಜ್ಞರು ನೀಡಿದ ವರದಿಯನ್ನು ಪ್ರಕಟಿಸಲಿದೆ.
ಆದರೆ ಇವರಿಗೆಲ್ಲಾ ಚಿಕೂನ್‌ಗುನ್ಯಾ ಬಂದಿತ್ತೇ ಇಲ್ಲವೇ ಎಂದು ಸರಕಾರ ಹೇಳುವುದಿಲ್ಲ. ಏಕೆಂದರೆ ಆ ಬಗ್ಗೆ ಅದರ ಬಳಿ ಬೇಕಾದ ದಾಖಲೆಗಳಿಲ್ಲ.
ಮುಂದೊಂದು ದಿನ ಈ ಸರಕಾರ ಜಿಲ್ಲೆಯಲ್ಲಿ ಜನಸಮೂಹವನ್ನು ಬಾಧಿಸಿದ್ದು ಚಿಕೂನ್‌ಗುನ್ಯಾ ಅಲ್ಲ ಎಂದು ಹೇಳಿದರೂ ಅಚ್ಚರಿಯಿಲ್ಲ.
ಆ ಮಟ್ಟಿಗೆ ಸರಕಾರ ಬಚಾವ್.
ಹೋಗಲಿಬಿಡಿ ಆ ಊರುಗಳಿಗೇ ಗುನ್ಯಾ ಬಂದಿರುವಾಗ ಇವರಿಗೆಲ್ಲಾ ಬರಲಿಲ್ಲ ಎಂದರೆ ಯಾರೂ ನಂಬಲಿಕ್ಕಿಲ್ಲ.ಒಂದೊಮ್ಮೆ ಇವರಿಗೆಲ್ಲಾ ಚಿಕೂನ್‌ಗುನ್ಯಾ ಬಾರದೇ ಇರುತ್ತಿದ್ದರೆ ಇವರೆಲ್ಲಾ ಇನ್ನಷ್ಟು ವರ್ಷಗಳ ಕಾಲ ಬಾಳಿ ಬದುಕುತ್ತಿದ್ದರು.. ಅದನ್ನು ನಿರಾಕರಿಸುವ ಭಂಢ ಧೈರ್ಯ ಯಾವ ತಜ್ಞರಿಗೂ ಇಲ್ಲ, ಯಾವ ಸರಕಾರಕ್ಕೂ ಇಲ್ಲ.

ಈ ತನಕ ಗುನ್ಯಾಕ್ಕೆ ಜಿಲ್ಲೆಯಲ್ಲಿ ಸತ್ತವರು ೬೬ ಮಂದಿ.ಇವರು ಗುನ್ಯಾದಿಂದ ಸಾಯಲಿಲ್ಲ ಎಂದು ಹೇಳುವುದು ಸುಲಭ, ಆದರೆ ಗುನ್ಯ ಇವರನ್ನು ಸಾಯಿಸಿತು ಎಂಬುದನ್ನು ನಂಬದಿರುವುದು ಹೇಗೆ ?ಚಿಕೂನ್‌ಗುನ್ಯಾದಿಂದಾಗಿಯೇ ಇವರೆಲ್ಲರ ಆರೋಗ್ಯ ಹದಗೆಟ್ಟಿತು. ದೇಹ ಶಿಥಿಲವಾಯಿತು. ದೇಹದೊಳಗಿದ್ದ ಸಣ್ಣಪುಟ್ಟ ಅನಾರೋಗ್ಯ ಅಬ್ಬರಿಸಿತು.ಕೊನೆಗೊಮ್ಮೆ ದೇಹವೇ ಸೋತು ನಿಷ್ಕ್ರಿಯವಾಯಿತು.
ಈ ಸತ್ಯವನ್ನು ನಿರಾಕರಿಸಲು ಸಾಧ್ಯವೇ ?
ಅಮೇರಿಕಾದಲ್ಲಿ ಅವಳಿ ಗೋಪುರ ಎಷೊಂದು ಗಟ್ಟಿಮುಟ್ಟಾಗಿತ್ತು. ಅದು ಅಮೇರಿಕಾದ ಗರ್ವದ ಸಂಕೇತವಾಗಿತ್ತು. ಆದರೆ ಮಹಾಮಾರಿ ವೈಮಾನಿಕ ದಾಳಿಗೆ ಅದು ನಲುಗಿ ಅದೇನು ನುಚ್ಚುನೂರಾಗಿ ಹೋಯಿತು..
ಇದೇ ರೂಪಕ ಈ ಗುನ್ಯಾ ಚಿತ್ರಕ್ಕೂ ಅನ್ವಯ.ಅದರ ದಾಳಿಗೆ ನಾಲ್ಕು ಲಕ್ಷ ಜನ ನಲುಗಿದರು, ೬೬ ಮಂದಿ ನಾಶವೇ ಅದರು.
ಗುನ್ಯಾದಿಂದ ಸತ್ತವರಲ್ಲಿ ೫೦ ವರ್ಷ ದಾಟಿದವರು ೨೫ ಮಂದಿ. ಅವರಲ್ಲಿ ೧೪ ಮಂದಿಗೆ ೬೦ ವರ್ಷ ಮೀರಿದ ಪ್ರಾಯ. ೪೦ ರಿಂದ ೫೦ ವರ್ಷ ವಯಸ್ಸಿನವರು ೧೦ ಮಂದಿ. ೩೦-೪೦ ರೊಳಗಿನವರು ೮ ಮಂದಿ, ೨೦-೩೦ ರ ಹರೆಯದವರು ಮೂವರು. ಅದಕ್ಕಿಂತ ಕೆಳಗಿನವರು ೧೬ ವರ್ಷದ ಒಬ್ಬ ಬಾಲಕ.
ಇದರರ್ಥ, ದೇಹ ಹಣ್ಣಾದಂತೆ ಗುನ್ಯಾ ಸಾವು ಹತ್ತಿರವಾಗಿದೆ.
ಸತ್ತವರಲ್ಲಿ ೧೬ ಮಂದಿ ಮಹಿಳೆಯರು. ೧೪ ಮಂದಿ ದಲಿತರು.
೪೭ ಕುಟುಂಬಗಳಲ್ಲಿ ೪೨ ಕುಟುಂಬಗಳು ಕಡುಬಡವರು.
ಗಮನಿಸಿ,ಸತ್ತವರೆಲ್ಲಾ ಹಳ್ಳಿ ಜನ.

ಸರಕಾರಕ್ಕೆ ಅದರ ಅಧಿಕಾರಿಗಳಿಗೆ ಬೇಕಾದಷ್ಟು ಮಾಡಿದ್ದೇವೆ ಎಂಬ ತೃಪ್ತಿ. ಆದರೆ ಇವರಾಗಿ ಗುನ್ಯಾವನ್ನು ಮಣಿಸಲು ಏನೂ ಮಾಡಲಿಲ್ಲ. ಅದು ಅದರಿಚ್ಛೆಯಂತೆ ಹೊರಡುತ್ತಿದೆ. ಏಕೆಂದರೆ ಅದಕ್ಕೆ ಸೋಲಿಸಲು ಇನ್ನು ಯಾರೂ ಉಳಿದಿಲ್ಲ. ಮುಂದಿನ ವರ್ಷ ಅದು ಮತ್ತೆ ಮರಳಬಹುದು. ಇಡೀ ರಾಜ್ಯವನ್ನೇ ಬಾಚಿಕೊಳ್ಳಬಹುದು. ಅದು ಬಾರದಂತೆ ಮಾಡಲೂ, ವಿಸ್ತರಿಸದಂತೆ ತಡೆಯಲೂ ಸರಕಾದ ಬಳಿ ಯಾವ ಹಥಿಯಾರುಗಳೂ ಇಲ್ಲ.
ಫಾಗಿಂಗ್ ಮಾಡುತ್ತೇವೆ ಎಂದರು. ಶೇ. ಐದರಷ್ಟು ಮಾಡಲಿಲ್ಲ. ಏಕೆಂದರೆ ಹಾಗೇ ಮಾಡಲು ಬೇಕಾದ ಯಂತ್ರಗಳಾಗಲಿ ತಂತ್ರಜ್ಞರಾಗಲಿ ಇವರಲ್ಲಿ ಇಲ್ಲ. ೨೪*೭ ಚಿಕಿತ್ಸಾ ಕೇಂದ್ರ ಎಂದರು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅಂಬುಲೆನ್ಸ್ ತಂದಿಡುತ್ತೇವೆ ಎಂದರು. ಹೊರಜಿಲ್ಲೆಗಳಿಂದ ವೈದ್ಯರನ್ನು ನಿಯೋಜಿಸುತ್ತೇವೆ ಎಂದರು. ಸರಕಾರವೇ ಕ್ಯಾಂಪುಗಳನ್ನು ಮಾಡುವುದು ಎಂದರು. ಪೂರ್ತಿ ಸೆನ್ಸಸ್ ಮಾಡಿ ದಾಖಲೆ ಸಂಗ್ರಹಿಸುತ್ತೇವೆ ಎಂದರು.
ಯಾವುದನ್ನೂ ಮಾಡಲಿಲ್ಲ.
ಹಾಗಿದ ಮೇಲೂ ಯಾರೂ ಸತ್ತಿಲ್ಲ ಎಂದು ಹೇಳೋ ಅವಸರ.ಐದು ಲಕ್ಷ ಮಂದಿ ಮಲಗಿದ್ದರೂ ೫೦ ಸಾವಿರ ಎಂದು ಕಿರಿದುಗೊಳಿಸುವ ದರ್ದು.
ಲೋಕದ ಸತ್ಯವನ್ನೇ ಹತ್ತಿಕ್ಕಿ ಇವರು ಮೆಚ್ಚಿಸುವುದು ಯಾರನ್ನು ? ರಕ್ಷಿಸುವುದು ಯಾರನ್ನು..?
ಜಗತ್ತನ್ನೇ, ಜನರನ್ನೇ ?
ಒಂದು ನುಸಿ ಎದುರು ನಾವು ಯಾರೂ ಲೆಕ್ಕಕ್ಕಿಲ್ಲ..ಅಂತ ಕೊನೆಗೂ ಆಯಿತು..


20080720

ಹೀಗೂ ಒಂದು ಹಾಡು
ಒಬ್ಬ ಹುಡುಗನಿಗೆ


ಒಂದೇ


ಹೃದಯ


ಅವಳಿಗೂ


ಒಂದೇ


ಮನಸು


ಪ್ರೀತಿಯಲ್ಲಿ ಎಷ್ಟು ಭಾಗಿಸಿದರೂ


ಶೇಷ


ಕಾಣದ ದೇವರಿಗೆ


ಕೈ ತುಂಬ ಆಮಿಷ


ನಿತ್ಯವೂ ನೈವೇದ್ಯ


ಜೀರ್ಣೋಭವ...


ಆಹಾ ! ಪ್ರೀತಿಯೇ...


ಕೊನೆಗೊಮ್ಮೆ


ಕಂಡದ್ದು


ಅವಳ ಸಂದುಗಳಲ್ಲಿ ಕಪ್ಪು ಕಲೆ
20080701

ಕವಿಯಾದರು ಜೋಗಿ


ಕತೆ ಕಾದಂಬರಿ ಸಿನಿಮಾ ಧಾರಾವಾಹಿ....

ಅದೆಲ್ಲದಕ್ಕಿಂತಲೂ ಮೊದಲಾಗಿ ತನ್ನ ನವಿರಾದ ಲೇಖನಗಳ ಮೂಲಕ...

ಆತ ಒಮ್ಮೆ ಹೇಳಿ ನಿಂತಾಗ, ಅರೆರೆ ಇದು ನನಗೂ ಹೊಳೆಯಬಹುದಿತ್ತಲ್ಲಾ ಆದರೆ ಹೊಳೆಯಲೇ ಇಲ್ಲವಲ್ಲಾ ಎಂಬ ಹಾಗೇ ಮಾಡುವ
ಮಾಡಿದ
ಮಾಡುತ್ತಿರುವ,

ಬರಹಗಳ ಮೂಲಕವೂ ಸಂಬಂಧಗಳ ಮೂಲಕವೂ ಗಾಢ ಎನಿಸುವ,

ಆಪ್ತ ಎನಿಸುವ

ಆತ್ಮೀಯ ಎನಿಸುವ

ಜೋಗಿ

ಇಗೋ ಈಗ ಕವಿ.

ಜೋಗಿ ಅವರ ಚೊಚ್ಚಲ ಕವನ ಸಂಕಲನ ಇಷ್ಟರಲ್ಲೇ ನಿಮ್ಮದೂ ಆಗಲಿದೆ.

ಇದು ನಿಮಗೂ ತಿಳಿದಿರಲಿ ಅಂತ ಈ ಕವರ್‌ಪೇಜ್ ತೋರಿಸುತ್ತಿದ್ದೇನೆ.

ಎಷ್ಟಾದರೂ ಈತ ನಿಮಗೆಲ್ಲರಿಗಿಂತಲೂ ನನಗೆ ಮೊದಲ ಗೆಳೆಯ.


.