20080628

ಟಿ- ಸಿರೀಸ್೩

ಒಬ್ಬನೇ ಇರೋದು
ಕಷ್ಟ
ಒಬ್ಬಳಾಗಿರೋದೂ
ಹಾಗೇ.
ಆದರೆ ಇಬ್ಬರಾಗುವುದು
ಒಂದಾದಾಗ
ಮಾತ್ರಾ
ಸುಖ.
ಕೊನೆಗೂ ಎರಡಿಲ್ಲ
ಒಂದೇ
ಅದ್ವೈತದೊಳಗೂ ಇದೆ ದ್ವೈತ..
ಬಳ್ಳಿ ಮತ್ತು ಮರ
ದಾರಿ ಮತ್ತು ಪಯಣಿಗ
ನೀರು ಮತ್ತು ನದಿ
ಒಂದರೊಳಗೊಂದು ಬಂಧಿಯಾಗಿ
ಅವಳಿಗೆ ಅವನ
ಕಟ್ಟಾ ನೆನಪು..
ಸೂರ್ಯ ಮತ್ತು ಚಂದಿರ
ಬೆಳಕು ಕೂಡುವುದಿಲ್ಲ..

20080627

ಟಿ-ಸೀರೀಸ್-೨

ಮಳೆಯಲ್ಲ ಅಡಗಿದ
ಛಳಿ
ಛಳಿಯಲ್ಲಿ ಮಾತ್ರಾ ಇಬ್ಬನಿ
ಮಳೆ
ಹುಡುಕಿ ಹೋದಾಗ
ಸಿಕ್ಕಿದ್ದು
ಬಟ್ಟ ಬಿಸಿಲು.
ಅವಳ ಜೊತೆ ಸಾಗಿದ
ಕಾಡು ಹಾದಿಯ ಗುರುತು
ಮಳೆಯ ಹನಿಗಳೆಲ್ಲಾ
ಅವಳ ಕೆನ್ನೆಯ ಕಚ್ಚಿ
ಅವನ ಒಡಲೊಳಗೆ ಬಿರುಬಿಸಿಲ ಸೃಷ್ಟಿಸಿದವು
ಅಡಗಿ ಕುಳಿತ ಇಬ್ಬನಿ ತೊಯ್ದು
ಛಳಿಯಲ್ಲಿ ನಡುಗಿದರೆ
ಮೈತುಂಬಾ ಹಠ ತೊಟ್ಟು
ಬೆಂಕಿ.
ಆಮೇಲೆ
ಅದೇ ಮಳೆಗಾಲ
ಅದರಲ್ಲಿ ಛಳಿಯಿಲ್ಲ.

20080626

ಟಿ-ಸೀರೀಸ್-೧ (ನೆನಪಿಡಿ,ಇವುಗಳು ಪದ್ಯಗಳಲ್ಲ)


ಮೊದಮೊದಲು ಗೊತ್ತಿರಲಿಲ್ಲ,
ಗಣಿತದಲ್ಲೂ
ಮಗ್ಗಿ
ಆಲ್‌ಜಿಬ್ರಾ
ಕಲಿಯೋ ವೇಳೆಗೆ
ಮಗ್ಗಿ ಮರೆತು ಹೋಯಿತು.
ಮೊದಲು ಗೊತ್ತಿರಲಲಿಲ್ಲ,
ಮೊಲೆಗಳಿಗೂ
ಇರುವುದು
ಗುರುತ್ವಾಕರ್ಷಣೆ
ನೋಡಿ ಕಲಿ,ಮಾಡಿ ತಿಳಿ
ಆಮೇಲೆ ಮರೆತು ಹೋಯಿತು
ಮೊಲೆಗಳ ಮಹಾತ್ಮೆ.
ಭಗ
ವಂತ ಸಿರಿವಂತ
ನಾವುಗಳು
ಭಗ ಭಾಗಿಗಳು
ಭಾಗ್ಯವಂತರು..
ಹೇ ಭಗ
ವಾನರು
ತಿಳಿಯವುದಿಲ್ಲ
ಜೊಮೆಟ್ರಿ
ಅದರಾಚೆಯ ಟ್ರಿಕ್ಕು
ಸಿಂಪಲ್
ಅರತ್‌ಮೆಟಿಕ್ಕು
ಎಷ್ಟಾದರೇನು ಕೊನೆಗೂ
ಒಂದು ಕೂಡಿಸು ಒಂದು
ಅಂದರೆ
ಎರಡು,
ಒಂದು ಒಂದ್ಲಿ
ಬರೀ ಒಂದು..

20080622

ನಾಲ್ಕು ಸಾಲು-೫೦


೧.

ಹರೆಯದ

ಸೋಜಿಗಗಳು

ಪ್ರಯೋಗಕ್ಕೆ ಆಹ್ವಾನಿಸುವವು,

ಚಪ್ಪರದ ಮಲ್ಲಿಗೆ

ಬಳ್ಳಿಯಲ್ಲಿ

ಸದಾ ಬಿಳಿಯ ಹೂಗಳ

ಹೂನಗೆ.೨.


ಅವಳ

ಸಾಮೀಪ್ಯದಲ್ಲಿ

ಅವನು

ರಸಋಷಿ

ಆಲಿಂಗನದಲ್ಲಿ

ಆತ್ಮಸಾಕ್ಷಾತ್ಕಾರ.


೩.


ಒಂದು ಹಾದಿಯ

ಹುಡುಕಿ

ಹೊರಟ ಪ್ರೇಮಿಗಳಿಗೆ

ದಾರಿ ಬದಿಯ

ಮರ ಸುತ್ತಿದ ಬಳ್ಳಿ

ಪ್ರೀತಿಯ

ಸ್ಥಾವರವನ್ನು ಕಾಣಿಸುವುದು.


೪.


ಸಂಧ್ಯಾ

ಕಾಲ

ಮೀರುವುದಿಲ್ಲ,

ತಪಸ್ಸುಗಳು

ಅವನ

ಎದೆಯೊಳಗೆ

ಸಂಧಿಸುವುದು

ಅವಳಿಗೆ ಕಾಣುವುದಿಲ್ಲ,

ಅಚ್ಚರಿಯಲ್ಲವೇ॥


(ಇಲ್ಲಿಗೆ ಈ ನಾಲ್ಕು ಸಾಲು ಎಂಬ ಪ್ರಕರಣವು ಮುಕ್ತಾಯವಾಗುವುದು,ವಂದನೆಗಳು)

ನಾಲ್ಕು ಸಾಲು_೪೯

೧.

ಮಗು
ಹೇಳುವ ಕಥೆಗಳಲ್ಲಿ
ಮಹಾಭಾರತ ಅಥವಾ ಶೇಕ್ಸ್‌ಪಿಯರ್
ಕೂಡಾ
ಅಸ್ಥಿತ್ವ
ಕಳೆದುಕೊಳ್ಳಲಿ.

೨.

ಕಳೆದ
ಬಾಲ್ಯದಲ್ಲಿ
ಯೌವನದ ಹೆಜ್ಜೆಗಳಿರಲಿಲ್ಲ,
ಆದರೆ
ವೃದ್ಧ್ಯಾಪ್ಯದಲ್ಲಿ
ಬಾಲ್ಯದ ಸುಳಿಗಳು,
ಯೌವನದ ಸಾಂಗತ್ಯಗಳು
ಹೆದ್ದಾರಿಗಳೇ ಆಗುವವು.

೩.

ಹುಡುಗಿಯ
ನಗುವಿಗೆ
ಅರ್ಥ ಹಚ್ಚುವ
ರಸಿಕ
ಅಳುವನ್ನು
ಒಪ್ಪಿಕೊಂಡರೆ
ಅದು ಸ್ನೇಹ.

೪.

ಕೊಳದ ನೀರಿನಲ್ಲಿ
ನದಿಗಳು
ಹರಿಯುವುದಿಲ್ಲ,
ಸಾಗರಕ್ಕೆ
ಎಂಥಾ ಸೊಕ್ಕು!

20080616

ನಾಲ್ಕು ಸಾಲು-೪೮
೧.


ಒಂಟಿಯಾಗಿರುವ

ಸುಖ

ಒಂಟಿಯಾಗಿರುವ

ತನಕ ಮಾತ್ರಾ

ಆಮೇಲೆ

ಮನಸು ದೇಹ

ಎರಡೂ

ಒಂಟಿಯಲ್ಲ.


೨.ದೇಹದ ಬಯಕೆಗೆ

ಮನಸ್ಸು

ಸದಾ

ಇನಿಯಮಾತ್ರಾ.


೩.ಅವಳು

ಕೂಡಾ

ಅವನ

ಹಂಗಿಲ್ಲದೇ

ಬದುಕಲು

ಇವನನ್ನು

ಬೇಡುವುದು

ಎಂಥ ವಿಪರ್ಯಾಸ.೪.ಅವನಿಲ್ಲದ

ಬಾನಿನಲ್ಲಿ

ಇವಳಜೊತೆಗೊಂದು

ಹೊಳೆಯುವ ಚುಕ್ಕಿ,

ಸೂರ್ಯನಿಗೂ ಪೂರ್ಣ ಗ್ರಹಣ.


ಇಲ್ಲೂ ಅದೇ ಕಥೇಯಾ..

ಇದು ಆಗುವಂಥದ್ದೇ.
ಪ್ರೀತಿ ಎಂಬ ಹಸಿವಿನ ಕೃತ್ಯ ಹೀಗೆ ಇರುತ್ತದೆ.
ಅದು ದೇಹದ್ದೂ ಆಗಬಹುದು ಮನಸ್ಸಿನದ್ದೂ ಆಗಬಹುದು.
ಏನು ಮಾಡೋಣ ಅದಕ್ಕೆ ವಯಸ್ಸಿನ ಮಿತಿಗಳಿಲ್ಲ.
ಅಂತಸ್ತಿನ ಹಂಗುಗಳಿಲ್ಲ.
ಬೇಸಿಕ್ ಇನ್ಸ್ಟಿಂಕ್ಟ್ ಅಲ್ವೇ.
ಬೆಳಗಾತ ಎದ್ದು ಏನಾದರೂ ಮಾಡಬಹುದು, ಆದರೆ ರಾತ್ರಿ ಕತ್ತಲಾಗುತ್ತಲೂ ಏನನ್ನೂ ಹಂಚಿಕೊಲ್ಳಲು ಅವನಿಲ್ಲ ಅಥವಾ ಅವಳಿಲ್ಲ ಎಂದರೆ ಏನು ಮಾಡುವುದು?
ಯಾರಲ್ಲಿ ಈ ದೇಹವನ್ನು ಹವಿಸ್ಸಾಗಿಸುವುದು? ಯಾವ ಜೀವದ ಜೊತೆ ಈ ಭಾವನೆಗಳನ್ನು ಅರಳಿಸುವುದು?
ಒಂದು ಜೀವಕ್ಕೋಂದು ಹೇಗೋ ಸೇರಿ ಹೊಂದಿಕೊಂಡು..
ಕಾಣದಂಥ ಕನಸ ಕಾಣಲಾಗದೇ ಇದ್ದಾಗ,
ಇದೇ ಆಗುತ್ತದೆ.
ಅದಕ್ಕೆ ಎಮ್ಮೆಲ್ಲೆ ಹೆಂಡತಿಯೇ ಆಗಬೇಕಾಗಿಲ್ಲ..
ಉದ್ಯಮಿಯ ಮಗಳೇ ಆಗಬೇಕಾಗಿಲ್ಲ.
ಅವನ ಮಡದಿ ಇವನ ಮಗಳು ಅದರ ತಾಯಿ ಇದರ ಸೊಸೆ..
ಎಲ್ಲಾ ಹೀಗೆ ಆಗುತ್ತದೆ.
ಯಾರನ್ನೋ ಮನಸು ಬೇಡುತ್ತದೆ,
ಯಾವುದೋ ಜೀವ ಹತ್ತಿರ ಬಂದಾಗ ಹತ್ತಿರ ಅನಿಸುತ್ತದೆ. ಆ ಜೀವದ ಮಾತು ನಗೆ ಸನಿಹ ನೋಡುತ್ತಾ ನೋಡುತ್ತಾ ಇಷ್ಟವಾಗುತ್ತದೆ.
ಆಮೇಲೆ ಆ ಜೀವವೇ ಬೇಕೆನಿಸುತ್ತದೆ. ಆ ಜೀವದ ಜೊತೆ ದೇಹದ ಸಾಮೀಪ್ಯ ಖರೇ ಆಗಿಬಿಡುತ್ತದೆ.
ಹತ್ತಿಯ ಮೈಗೆ ಬೆಂಕಿ ತಾಗುತ್ತದೆ.
ಬಿತ್ತನೆ ಕಾಲ ಬಂದೇ ಬಿಡುತ್ತದೆ.
ಇದು ದೆಹಲಿಗೆ ಏನು ಎಲ್ಲಿಗೂ ಕೊಂಡೊಯ್ದೀತು.ಗಡಿಯಾಚೆಗೆ,ಪಕ್ಕದ ದ್ವೀಪಕ್ಕೆ,ಇನ್ನೊಂದೇ ದೇಶಕ್ಕೆ,ಅಥವಾ ಕಂಪೌಂಡಿನಾಚೆಗೆ,ತೋಟದ ಮನೆಗೆ,ಇಲ್ಲವೇ ಮುಗಿಲೆತ್ತರಕ್ಕೆ, ನಭೋಮಂಡಲಕ್ಕೆ..
ಏಕೆಂದರೆ ಆ ಬೇಸಿಕ್ ಇನ್ಸ್ಟಿಂಕ್ಟ್‌ಗೆ ಯಾವ ಸೀಮೆಯ ಎಲ್ಲೆಗಳಿಲ್ಲ, ಯಾವ ಕಾಲದ ಹಂಗುಗಳಿಲ್ಲ,ಯಾವ ಜೀವದ ಅಡ್ಡಿಗಳಿಲ್ಲ, ಯಾವ ಕಟ್ಟುಪಾಡುಗಳ ಸಂಕಲೆಯಿಲ್ಲ, ಯಾವ ಶಾಸ್ತ್ರದ ಆವರಿಕೆಗಳಿಲ್ಲ..
ಅದು ಅತ್ಯತಿಷ್ಠದ್ದಶಾಂಗುಲಂ..
ಹೋಗಲಿ ಬಿಡಿ ನಮಗೇಕೆ ಇನ್ನೊಬ್ಬರ ಮನೆಯ ಅದರಲ್ಲೂ ಮನೆ ಹೆಣ್ಮಕ್ಕಳ ಉಸಾಬರಿ..,ನಾವು ಚಂದಮಾಮ ಓದೋಣ..
ಒಂದು ಊರಿನಲ್ಲಿ ಒಬ್ಬ ರಾಜನಿದ್ದನು. ಅವನಿಗೆ ಒಬ್ಬಳು ಮಗಳಿದ್ದಳು. ಅವಳನ್ನು ಒಬ್ಬ ರಾಕ್ಷಸ ಅಪಹರಿಸಿದ್ದನು. ಆತ ಆಕೆಯನ್ನು ಏಳು ಸಮುದ್ರ ಏಳು ಕೋಟೆ ಏಳು ನದಿ ಏಳು ಬೇಲಿ ಏಳು ದ್ವೀಪ ಏಳು ದೇಶಗಳಾಚೆ ..
ಅರೆರೆ ಇಲ್ಲೂ ಅದೇ ಕಥೆಯಾ..


20080614

ನಾಲ್ಕು ಸಾಲು-೪೭

೧.
ಜ್ಯೇಷ್ಠದ ಮಳೆಗೆ
ಹಣ್ಣುಗಳನ್ನೆಲ್ಲಾ ಕೆಳಗಿಳಿಸಿಕೊಂಡ
ಮಾವಿನ ಮರ
ವಸಂತದಲ್ಲಿ
ಹುಡುಗಿಯಾಗುವ
ಹೊತ್ತನ್ನು ನೆನೆದು
ಆಷಾಢದಲ್ಲಿ ತೊನೆದಾಡುವುದು.

೨.

ಅವನ
ತೋಳುಗಳಲ್ಲಿ
ಕರಗುವೆನೆಂದು ಹೊರಟ
ಹುಡುಗಿಗೆ
ತನ್ನ
ತೋಳುಗಳು
ಮಂಜುಗಡ್ಡೆ.
೩.
ಇನಿಯನ
ನೆನಪಲ್ಲಿ
ಛಳಿ ಹತ್ತಿಸಿಕೊಂಡ ಹುಡುಗಿ
ಮಿಲನದಲ್ಲಿ ಬೆಂಕಿಯಾಗುವುದು
ಎಂಥ ಅದ್ಭುತ !

೪.

ಕಾಲದ
ತರ್ಕಕ್ಕೆ ಮೀರಿದ
ಹುಟ್ಟು ಸಾವು
ಮತ್ತು
ಪ್ರೀತಿ
ಕಾಲಕೂಡಿಬರಲು ಕಾಯುವುದು
ನಮ್ಮ ವಿಪರ್ಯಾಸ.

20080613

ನಾಲ್ಕು ಸಾಲು_೪೬


೧.
ಕಳೆದು ಹೋಗುವ
ಯೌವನ
ಮತ್ತು
ಬರಲಿರುವ
ಮುಪ್ಪು
ಅರ್ಧ ತೆರೆದ ಬಾಗಿಲಲ್ಲಿ
ತೂರಿಹೋಗುವದೇಹ.
೨.
ಒಂದು
ಪಿಸುಮಾತು
ಅವಳ ಕಿವಿಯ ಹಾಳೆಗಳನ್ನು
ಸವರಿ
ಮನದ ದೇಹ
ಬೆತ್ತಲು.
೩.
ಮೊದಲ
ರಹಸ್ಯವನ್ನು
ಬಿಡಿಸಿದ
ಹುಡುಗನ
ಮರೆಯಲಾರದ
ಅವಳು
ಗಂಡನ ಜೊತೆ ಕಂಡದ್ದು
ಬಿದಿಗೆ ಚಂದಿರ.
೪.
ಜೀವೋನ್ಮಾದದಲ್ಲಿ
ಒಂದು
ಸ್ಪರ್ಶ
ಮತ್ತೆ ಕಳೆದಾಗ
ಉಳಿದದ್ದು
ಪ್ರೀತಿಯ ಆಕಸ್ಮಿಕ.


ನಾಲ್ಕು ಸಾಲು-೪೫

೧.
ಒಂದೇ ಒಂದು
ಹನಿ
ಬಿಂದು
ಕೋಟಿ ಜೀವಗಳಿದ್ದೂ
ಅವಳಲ್ಲಿ
ಯುದ್ಧೋತ್ತರ ರಣರಂಗ।
೨.
ಇನಿಯನ
ಅಪ್ಪುಗೆಯಲ್ಲಿ
ಅರ್ಧಸತ್ಯ
ಕಿಬ್ಬೊಟ್ಟೆಯ ಸೆಳೆತ।
೩.
ಗುಡಿಯ ಗಂಟೆ
ಒಳಗಿನ ಲಿಂಗ
ಅವಳಲ್ಲಿ
ಕಚಗುಳಿ ಮೂಡಿಸಿದರೆ
ಅದು
ಅದು ನಿಜವಾದ ಭಕ್ತಿ।
೪.
ದೇವರುಗಳ
ಮೈಥುನ
ಭಕ್ತರಿಗೆ ಅನುಗ್ರಹ
ಪ್ರಸಾದ
ಕಾಮ
ದೇವಾಂಶ ಸಂಭೂತ।


ನಾಲ್ಕು ಸಾಲು-೪೪

೧.
ಬಾಲ್ಯದ ಬೆರಗು
ಹರೆಯದಸೋಜಿಗ
ವೃದ್ಧಾಪ್ಯದ ಕನವರಿಕೆಗಳೆಲ್ಲಾ
ಕನವರಿಕೆಗಳೆಲ್ಲಾ
ಯೌವನದಲ್ಲಿ ಕಾಣುವುದು
ಪ್ರೇಮವಾಗಿ
ಎಂದರೆ
ಬದುಕು ನೀವಂದಂತೆ ಇದೆ ಎಂದು ತಿಳಿಯುವೆ।
೨.
ಅಸ್ಪಷ್ಟವಾಗಿದ್ದೇ
ಅವಳು
ಅವನ ಮನದಲ್ಲಿ
ಗಟ್ಟಿಯಾಗುವಳು
ಸ್ಪಷ್ಟವಾಗಿದ್ದಷ್ಟೂ
ಸ್ಥಾನ
ಇಕ್ಕಟ್ಟು।
೩.
ಕರ್ಮಗಳನ್ನು
ಮಾಡು
ಎಂದ
ಕೃಷ್ಣ
ಅರ್ಜುನನ
ಕ್ರಿಯಾಪದ।
೪.
ಮುಪ್ಪಾದ
ಹುಣಿಸೆ ಮರದಲ್ಲಿ
ಅರಳಿದ ಪುಟ್ಟ ಹೂಗಳು
ಮರಕ್ಕೆ
ಮಾಗಿಯ
ಕನಸುಗಳನ್ನು ಕಟ್ಟುವವು।

ನಾಲ್ಕು ಸಾಲು

೧.

ಮತ್ತೆ ಹುಟ್ಟುವ

ಖಚಿತವಿಲ್ಲದ

ಮನುಷ್ಯ

ಇದ್ದಾಗ ಇಷ್ಟೊಂದು ಪಾಡುಪಡುವನು।

೨.
ಘಾಟಿಯ ತಿರುವುಗಳಲ್ಲಿ

ಕಳೆದು ಹೋದ ಹುಡುಗಿಯ

ಪ್ರೀತಿ ಹಿಂಬಾಲಿಸಿ

ಗೃಹಸ್ಥಾಶ್ರಮದಲ್ಲಿ

ರಸ್ತೆ ಅಫಘಾತ!

೩.
ಪ್ರಾಣಿಗೂ ದಯೆ ಹುಟ್ಟಿದರೆ

ಹಸಿವಿಗೆ

ಎಲ್ಲಿ

ಅರ್ಥ ಉಳಿಯುವುದು

ಎಂದು ಸೋಜಿಗ ಪಡುವೆನು।

೪.
ಕಾಣದ ಜೀವಕ್ಕೆ

ಹಂಬಲಿಸುವ

ಹೆಣ್ಣು

ತಾಯಿ ಮತ್ತು ಪ್ರೇಮಿ