
ಇದೆಲ್ಲಾ ಆಗಿ ತುಂಬಾ ದಿನಗಳಾದವು.
ನಿಮಗೆಲ್ಲಾ ಇದನ್ನು ಹೇಳಲೇಬೇಕು ಎಂದು ಈ ನಿಮ್ಮ ಕತೆಗಾರ ಬಹಳವಾಗಿ ತವಕ ಪಟ್ಟಿದ್ದ. ಆದರೆ ಹೇಳುವುದಕ್ಕೂ ಅಂತ ಒಂದು ಕಾಲ ಇರುತ್ತದೆ ನೋಡಿ ಮತ್ತು ಅದು ಕೂಡಿ ಬರಲೂ ಬೇಕು ನೋಡಿ. ಹಾಗಾಗಿ ಈ ಕತೆಗಾರನಿಂದ ಇದನ್ನು ನೀವು ಕೇಳಿಸಿಕೊಳ್ಳಲೂ, ಕತೆಗಾರನಿಗೆ ಹೇಳಲೂ ಇಷ್ಟು ದಿನ ಹಿಡಿಯಿತು.
ಇಲ್ಲದಿದ್ದರೆ ಈ ಕತೆ ಅದೇನು ಅಷ್ಟೊಂದು ದಿನ ಹರಣ ಮಾಡುವಂಥದ್ದಾ?
ಎಷ್ಟೊಂದು ಸೊಗಸಾಗಿದೆ.
ಈ ಅದ್ಭುತ ರಮ್ಯ ಕತೆಗೆ ನಾವು ಇಷ್ಟು ದಿನಗಳ ಕಾಲ ಕಾಯಬೇಕಾಯಿತಾ ಎಂದು ನೀವೂ ಕೋಪ ಮಾಡಿಕೊಳ್ಳಬಹುದು.ಹಾಗಾಗಿ ಈಗಿಂದೀಗಲೇ ಕತೆ ಶುರು ಮಾಡಿಬಿಡೋಣ.ಇದು ನಿಮ್ಮೂರಲ್ಲೇ ಆಗಿದೆ ಎಂದು ನೀವು ಭಾವಿಸಿಕೊಳ್ಳಬಹುದು.
ಅಸಲಿಗೆ ಒಂದು ಕತೆ, ಕಥಾನಕ ನಮ್ಮನ್ನು ಪ್ರವೇಶಿಸುವುದೇ ನಮ್ಮೂರ ಮೂಲಕವೇ ತಾನೇ? ಯಾರೋ ಸ್ವೀಡಿಶ್ ಕತೆಗಾರನೋ ಅಥವಾ ಐರ್ಲೆಂಡ್‌ನ ಬರಹಗಾರನೋ ಬರೆದ ಕತೆಯನ್ನು ನಾವು ಓದುತ್ತಾ ಓದುತ್ತಾ ಅದರಲ್ಲಿನ ಪಾತ್ರಗಳು, ಊರು, ಕೇರಿ, ಬೀದಿ, ಮನೆ ಮಠ ಎಲ್ಲಾ ನಮ್ಮೂರಿಗೆ ತಂದುಕೊಳ್ಳುತ್ತೇವೆ. ಪೈನ್ ಮರ,ಐಸ್ ಫಾಲ್ಸ್ ಕೂಡಾ ನಮ್ಮೂರಲ್ಲೇ ಇದೆ ಎಂಬ ಹಾಗೇ ಸೇರಿಕೊಳ್ಳುತ್ತೇವೆ.ಹಾಗೇ ಈ ಕತೆಯಲ್ಲೂ ಎಲ್ಲರನ್ನೂ ಎಲ್ಲವನ್ನೂ ನೀವು ಓದುಗರು ನಿಮ್ಮೂರಿನ ಕತೆ ಎಂಬ ಹಾಗೇ ಓದಿದರೆ ಈ ಕತೆಗಾರ ಧನ್ಯನೋ ಧನ್ಯ.
ಕತೆ ಅಂಥ ಗಡಿಬಿಡಿಯದ್ದೇನಲ್ಲ.
ಆ ನಿಮ್ಮ ಊರಿನಲ್ಲಿ ಆ ಕೇರಿಯ ತುದಿಯಲ್ಲಿ ಆ ದೇವಸ್ಥಾನ ಇದೆಯಲ್ಲಾ ಅದರ ಹೊರಸುತ್ತಿನಲ್ಲಿರುವ ಆ ಅರಳಿಮರದ ಎದುರಿಗೆ ಒಂದು ಹಂಚಿನ ಮನೆಯಿದೆ ನೋಡಿ ಅಲ್ಲೊಬ್ಬಳು ಹುಡುಗಿ ಇದ್ದಾಳಲ್ಲಾ ಅವಳಿಂದಲೇ ಈ ಕತೆ ಆರಂಭ.ಅವಳನ್ನು ನೀವು ನೋಡಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ. ಅದರೆ ಅವಳು ತುಂಬಾ ಚೆಂದದ ಹುಡುಗಿ ಅಂತ ನನಗೆ ಮೊದಲಾಗಿ ಹೇಳಿದವನು ಸುನೀಲ.
ಸುನೀಲ ತುಂಬಾ ರಸಿಕ ಅಂತ ಏನೂ ಅಲ್ಲ. ಆದರೆ ಯಾವ ಯಾವ ಹುಡುಗಿಯರು ಹೇಗೇಗೆ ಎಂದು ಕರಾರುವಕ್ಕಾಗಿ ಹೇಳಬಲ್ಲವನು ಊರಲ್ಲಿ ಅವನೇ.ಈ ಸುನೀಲ ಯಾರು ಅಂತ ನೀವು ತಲೆಬಿಸಿ ಮಾಡಿಕೊಂಡಿರಾ? ನಿಮ್ಮ ಊರಿನ ಫ್ಯಾನ್ಸಿ ಸ್ಟೋರಿನ ಮಾಲಿಕ. ಹೇಗಿದ್ದಾನೆ ಎoದು ಇನ್ನು ಈ ಕತೆಗಾರ ಹೇಳಬೇಕಾಗಿಲ್ಲವಲ್ಲ.ಅದೇ ಚೆಲುವಾದ ಡ್ರೆಸ್ಸು, ಮೂರು ಬೆರಳಿಗೆ ಉಂಗುರ,ತೀಡಿ ಬಾಚಿದ ಕ್ರಾಪು..ಇತ್ಯಾದಿ ಇತ್ಯಾದಿ.ಹಾಗೇ ಇದ್ದರೆ ತಾನೇ ಸುನೀಲನಿಗೆ ವ್ಯಾಪಾರ. ಅವನ ಅಂಗಡಿಗೆ ಬರುವ ಗಿರಾಕಿಗಳೆಂದರೆ ಅದೇ ತರುಣಿಯರು. ಅವನ ತಂದೆಯ ಅಂಗಡಿ ಅದು. ಅವರ ಕಾಲದಲ್ಲಿ ಸ್ನೋ,ಪೌಡರು,ಟ್ಯೂಟೆಕ್ಸು,ಕುಪ್ಪಿ ಬಳೆ,ರಿಬ್ಬನು,ರಬ್ಬರು ಬೈಂಡು,ಕನ್ನಡಿ ಬಾಚಣಿಗೆ ಇತ್ಯಾದಿ ಇತ್ಯಾದಿ ವ್ಯಾಪಾರ ನಡೆಯುತ್ತಿತ್ತು. ಅವರು ನಿಧಾನಕ್ಕೆ ಸಿಮೂತ್ರ,ಬಿಪಿ ಅಂತ ಸೋತ ಮೇಲೆ ಬಿಬಿಎಂ ಓದಿ ಬಂದ ಸುನೀಲ ಅಂಗಡಿ ಉಸ್ತುವಾರಿ ಹಿಡಿದುಕೊಂಡ. ಫ್ಯಾನ್ಸಿ ಸ್ಟೋರನ್ನು ಕಂಪ್ಲೀಟ್ ಮಾಡರ್ನ್ ಮಾಡಬೇಕು ಎಂತಲೇ ತಾನು ಬಿಬಿಎಂ ಒದಿದ್ದು ಎಂದು ಅವನು ಅಂದಿನಿಂದಲೂ ಹೇಳುತ್ತಾ ಇದ್ದ. ಹಾಗೇ ಮಾಡಿದ ಕೂಡ.
ಜಂಟ್ಲುಮ್ಯಾನು.
ಈಗ ಅವನ ವ್ಯಾಪಾರ ಭಾರೀ ಇಂಪ್ರೂವ್ ಆಗಿದೆ. ರಬ್ಬರು ಬೈಂಡು,ಬಳೆ, ಕಾಜು, ಸ್ನೋ ಎಲ್ಲಾ ಈಗಿನ ಹುಡುಗಿಯರಿಗೆ ಎಂತಕೆ ಬೇಕು ಅಂತ ಅವನು ಅದೆನ್ನೆಲ್ಲಾ ತರಿಸುತ್ತಿಲ್ಲ. ಯಾವ ಯಾವ ಹೊಸ ಫ್ಯಾಶನ್ನು ಬಂತೋ ಅದನ್ನು ತಂದೇ ತರುತ್ತಾನೆ. ಒಂದರ್ಥದಲ್ಲಿ ಊರಿನ ಹುಡುಗಿಯರಿಗೆ ಫ್ಯಾಶನ್ನು ಕಲಿಸುವವನೇ ಅವನು.ಹಾಗಾಗಿ ಸುನೀಲ ಎಂದರೆ ಹುಡುಗಿಯರಿಗೂ ಪ್ರಾಣ. ಮಾತ್ರವಲ್ಲ ಅವನ ಫ್ಯಾನ್ಸಿ ಸ್ಟೋರಿನಲ್ಲಿ ರೇಟೂ ಕಮ್ಮಿ ಚರ್ಚೆಯೂ ಇದೆ,ತುಂಬಾ ವ್ಯಾಪಾರ ಮಾಡಿದರೆ ಗಿಫ್ಟೂ ಉಂಟು.
+++++++
ಕಲ್ಪನಾ ರಾತ್ರಿ ಹೊತ್ತಲ್ಲಿ ದೇವಸ್ಥಾನದ ರಥ ಬೀದಿಯಲ್ಲಿ ಬೆತ್ತಲೆ ಹೋಗುತ್ತಾಳೆ ಎಂಬ ಸುದ್ದಿ ಸುಡುಬಯಲ ಗಾಳಿಯಂತೆ ಊರಲ್ಲಿ ಹಬ್ಬಿತು.ಈ ಸುದ್ದಿಯನ್ನು ಮೊದಲಾಗಿ ಎತ್ತಿ ಹೇಳಿದವನು ಸುನೀಲ ಎಂದು ನೀವು ಊಹಿಸಿದ್ದರೆ ಅದು ತುಂಬಾ ತಪ್ಪು. ಕಾರಣ ಸುನೀಲ ಅಂಥ ಎಡವಟ್ಟು ಅಸಾಮಿಯಲ್ಲ. ಅವನದ್ದು ತುಂಬಾ ಡೀಸೆಂಟು ವ್ಯಾಪಾರ. ಮೇಲಾಗಿ ಹುಡುಗಿಯರೇ ಅವನ ಕಸ್ಟಮರ್‍ಸ್. ಹೀಗಿರುವಾಗ ಅವನೇಕೆ ಇದನ್ನೆಲ್ಲಾ ಹೇಳಹೋಗುತ್ತಾನೆ. ಇಷ್ಟಕ್ಕೂ ಕಲ್ಪನಾ ಅವನ ತುಂಬಾ ಇಂಪಾರ್ಟೆಂಟು ಕಸ್ಟಮರ್ರು ಬೇರೆ. ಅವಳು ವಾರಕ್ಕೆ ಮೂರು ಬಾರಿಯಾದರೂ ಅವನ ಅಂಗಡಿಗೆ ಬರುವಳು. ಮೊಬೈಲಿಗೆ ಟಾಪ್ ಅಪ್ ಹಾಕಿಸಿಕೊಳ್ಳಲು ಅವಳಿಗೆ ಸುನೀಲನೇ ಬೇಕು.
ಅದಿರಲಿ ಈ ಕಲ್ಪನಾ ಎಲ್ಲಿಯವಳು ಎಂದು ನೀವು ಕೇಳಲೇ ಇಲ್ಲ. ಈ ಕತೆಗಾರನಿಗೂ ಗೊತ್ತಿದ್ದರೆ ತಾನೇ ಹೇಳುವುದಕ್ಕೆ. ಆದರೂ ಒಬ್ಬಳಿಗೆ ಒಂದು ಊರು ಎಂದು ಬೇಕು ತಾನೇ? ಆದ್ದರಿಂದ ಕಲ್ಪನಾಗೂ ಒಂದು ಊರು ಎಂದು ಈ ಕತೆಗಾರ ನಿಮ್ಮ ಇಷ್ಟದ ಸಿಟಿಯನ್ನೇ ಆಯ್ಕೆ ಮಾಡುವಂತೆ ಸೂಚಿಸಬಯಸುತ್ತಾನೆ. ಕಲ್ಪನಾ ಅದೇ ಆ ಸಿಟಿಯ ಹುಡುಗಿ. ಆಮೇಲೆ ಅವಳೇಕೆ ಇಲ್ಲಿಗೆ ಬಂದಳು ಎಂದರೆ ಏನೋ ಕೆಲಸದ ನಿಮಿತ್ತ. ಯಾವುದೋ ಒಂದು ಸರಕಾರಿ ಉದ್ಯೋಗಿ ಎಂದು ಈ ಕತೆಗಾರನಿಗೆ ಅವಳ ಬಗ್ಗೆ ಗೊತ್ತು.
ಅವಳು ಹೇಗಿದ್ದಾಳೆ ಎಂದು ಈ ಕತೆಗಾರನೇ ಹೇಳುತ್ತಾನೆ ಕೇಳಿ.
ಐದಡಿ ಆರೂವರೆ ಇಂಚು. ಹಾಲಿನ ಬೆಳ್ಳಗೆ ಬಿಳುಪು. ಮೈಕಟ್ಟು ಸಖತ್ತಾಗಿದೆ ಎಂದು ಮಹಾ ರಸಿಕ ಸುನೀಲ ತೀರ್ಮಾನಿಸಿದ್ದಾನೆ. ಅವನು ಹೇಳಿದಲ್ಲಿಗೆ ಮುಗಿಯಿತು. ಕಾರಣ ಸುನೀಲನಿಗೆ ಒಂದು ಹುಡುಗಿ ಇಷ್ಟವಾಗುವುದು ಎಂದರೆ ಅದು ತುಂಬಾ ಕಷ್ಟ. ಆ ಹುಡುಗಿ ಹೇಗೆ ಎಂದು ಕೇಳಿದರೆ ಅವನು ಕೊಡುವ ಉಪಾಖ್ಯಾನಗಳೆ ಸೊಗಸಾಗಿರುತ್ತವೆ. ಅವಳು ಹೇಗಿದ್ದಾಳೆ ಎಂದರೆ ಮಕ್ಕಳು ಡ್ರಾಯಿಂಗಿನಲ್ಲಿ ಗುಡ್ಡದ ಚಿತ್ರ ಮಾಡುತ್ತಾರಲ್ಲ ಹಾಗೇ ಎಂದು ಅವನು ಹೇಳಿದರೆ ಥೇಟ್ ಹಾಗೇ ಇರುತ್ತಾಳೆ ಅವನು ಹೇಳಿದ ಹುಡುಗಿ.
ಒಮ್ಮೆ ಆ ಸ್ಕೂಲು ಟೀಚರನ್ನು ಅವನು ಶಾಲೆ ಮಕ್ಕಳ ಬಳಿ ಬಣ್ಣಿಸಿ ದೊಡ್ಡ ರಾದ್ಧಾಂತವಾಗಿತ್ತು. ನಿಮ್ಮ ಟೀಚರು ಮಕ್ಕಳು ಚಪಾತಿ ಲಟ್ಟಿಸಿದ ಹಾಗಿದ್ದಾಳೆ ಎಂದು ಒಡ್ಡೊಡ್ಡಾಗಿದ್ದ ಟೀಚರಮ್ಮನನ್ನು ಆತ ಬಣ್ಣಿಸಿದ್ದ. ಅದು ಶಾಲೆ ಮಕ್ಕಳ ಬಾಯಿಯಲ್ಲಿ ಉಳಿಯುತ್ತದಾ? ಅದು ಸ್ಟಾಪು ರೂಮಿಗೆ ಹೋಗಿ ಅಲ್ಲಿ ಚರ್ಚೆಯಾಗಿ ಕೊನೆಗೆ ಆ ಟೀಚರು ಅದೇ ಮಕ್ಕಳ ಜೊತೆ ಬಂದು ಇವನ ಅಂಗಡಿಯಲ್ಲಿ ರಂಪ ಮಾಡಿ ಕೊನೆಗೆ ಈ ಸುನೀಲ ಧರ್ಮಸ್ಥಳದ ಆಣೆ ಹಾಕಿ ಅದು ಹೇಗೋ ಬಚಾವಾಗಿದ್ದ.
ಸುನೀಲನ ಬಳಿ ಕಲ್ಪನಾ ಹೇಗಿದ್ದಾಳೆ ಎಂದರೆ ಆತ ಬ್ಯೂಟಿಫುಲ್ ಎಂದು ಹೇಳಿದ್ದಾನೆ. ಅಂಥ ಹುಡುಗಿ ಈ ಊರಿಗೆ ಬಂದದ್ದು ಭುವನ ಭಾಗ್ಯ ಎಂದು ವರ್ಣಿಸಿದ್ದಾನೆ. ಸ್ವಲ್ಪ ಹೆಚ್ಚೋ ಕಡಿಮೆಯೋ ಕಲ್ಪನಾ ಚೆಂದ ಇರುವುದಂತೂ ನಿಜ ಎಂದು ಎಲ್ಲರಿಗೂ ಅರ್ಥಮಾಡಿಸಿದ್ದಾನೆ.
ಅಂಥ ಕಲ್ಪನಾ ರಾತ್ರಿ ಹೊತ್ತಲ್ಲಿ ರಥಬೀದಿಯಲ್ಲಿ ಬೆತ್ತಲೆ ಹೋಗುತ್ತಾಳೆ ಎಂದರೆ ಯಾರಾದರೂ ನಂಬುವಂಥದ್ದಾ? ಥಕ್ ಯಾರೋ ಹಸೀ ಸುಳ್ಳು ಹಬ್ಬಿಸಿದ್ದಾರೆ ಆ ಹುಡುಗಿಯ ಮಾನ ಹರಾಜು ಮಾಡಲು ಎಂದು ಈ ಕತೆಗಾರ ಆರಂಭದಿಂದಲೇ ಅಭಿಪ್ರಾಯ ಪಟ್ಟಿದ್ದಾನೆ .
ಇಷ್ಟಕ್ಕೂ ಅವಳು ಹಾಗೇ ಹೋಗುತ್ತಾಳೆ ಎಂದು ಈ ರಥ ಬೀದಿಯಲ್ಲಿ ಯಾರಾದರೂ ನೋಡಿದ್ದಾರಾ? ನೋಡಿದವರು ಸುಮ್ಮನೆ ಇರುತ್ತಾರ? ಕೂಡಲೇ ಜನಸೇರಿಸಿ ವ್ಯವಸ್ಥೆ ಮಾಡುವುದಿಲ್ಲವಾ? ಅಥವಾ ಅವಳನ್ನು ತಕ್ಷಣ ಆಸ್ಪತ್ರೆಗೆ ಅಡ್ಮಿಟ್ಟು ಮಾಡುವುದಿಲ್ಲವಾ?ಏನಾದರೂ ಮಾಡಿಯಾರು...ಹೌದಲ್ಲ,ಇದು ಸುಳ್ಳು ಎಂದು ಹೇಳುತ್ತಾ ಹೋದರೆ ಅದೂ ಕೂಡಾ ಸುಳ್ಳಾಯಿತೇ?
+++++++++++++
ಏನು ಹೇಳಿದರೂ ಯಾರೂ ನಂಬುವುದಿಲ್ಲ ಎಂದು ಗೊತ್ತೇ ಇದ್ದ ನಮ್ಮ ನ್ಯೂಸ್ ಚಾನಲ್ಲೊಂದು ಮೊದಲಾಗಿ ಈ ಕುರಿತು ಸುದ್ದಿ ಹಬ್ಬಿಸಿತು. ಹಬ್ಬಿಸಿದ್ದೇನು ಸ್ವತಃ ವಿಡಿಯೋ ಕ್ಲಿಪ್ಪಿಂಗನ್ನೇ ಪ್ರಸಾರ ಮಾಡಿಯೇ ಬಿಟ್ಟಿತು. ಇದು ನಿಜಕ್ಕೂ ನಂಬುವುದಲ್ಲ. ಆದರೂ ನೀವು ನಂಬಲೇ ಬೇಕು,ಇಗೋ ಪ್ರತೀ ರಾತ್ರಿ ಈ ತರುಣಿ ಈ ಬೀದಿಯಲ್ಲಿ ಬೆತ್ತಲೆ ಹೋಗುತ್ತಾಳೆ, ಯಾಕೆ,ಯಾಕೆ ಯಾರಿಗೂ ಗೊತ್ತಿಲ್ಲ..ಎಂದಿತ್ಯಾದಿ ಸ್ಲೋಗನ್ನು ಹಾಕಿ ಹಗಲಿಡೀ ಆ ಚಾನಲ್ಲು ಸುದ್ದಿ ಹಾಕಿತು. ಮಾತ್ರವಲ್ಲ ಆ ರಾತ್ರಿ ಆ ಕುರಿತ ಸುದ್ದಿಯನ್ನು ಚಿತ್ರ ಸಮೇತ ಪ್ರಸಾರ ಮಾಡಿತು. ಆದರೆ ಆ ಚಿತ್ರಗಳಲ್ಲಿ ಆ ಹುಡುಗಿಯ ಬೆತ್ತಲೆ ನಡಿಗೆ ಮಾತ್ರಾ ಯಾರೂ ಕಾಣಲಿಲ್ಲ. ಚಾನಲ್ಲು ಸೆನ್ಸಾರ್ ಕಾರಣಕ್ಕೆ ಹಾಗೇ ಅದನ್ನು ತೋರಿಸಲಾಗುವುದಿಲ್ಲ ಎಂದು ಆರಂಭದಲ್ಲೇ ಹೇಳಿತ್ತು.ಆದ್ದರಿಂದ ಎಲ್ಲರೂ ಕಲ್ಪನಾ ಬೆತ್ತಲೆ ಹೋಗುವು ಸುದ್ದಿಯನ್ನು ನಂಬಿಯೇ ಬಿಟ್ಟರು.
ನಂಬದೇ ಇರುವುದಾದರೂ ಹೇಗೆ , ಈ ಕತೆಗಾರನೇ ನಂಬಿದ್ದಾನೆ.
ವಿಡಿಯೋ ಕ್ಲಿಪ್ಪಿಂಗಿನಲ್ಲಿ ಅದೆಂಥದ್ದೋ ಡಾಟು ಡಾಟು ಚುಕ್ಕಿ ಚಿತ್ರಗಳು ಅಸ್ಪಷ್ಟವಾಗಿ ತೋರುತ್ತಿದ್ದವು. ಅದನ್ನೇ ಕಲ್ಪನಾ ಎಂದು ನಂಬಲಾಯಿತು.
ಯಾವಾಗ ಹೀಗೆ ಹುಡುಗಿಯ ಬೆತ್ತಲೆ ಯಾತ್ರೆ ಪ್ರಸಾರವಾಯಿತೋ ಸಿಟಿಯ ಸಂಜೆ ಪತ್ರಿಕೆಗಳೆಲ್ಲಾ ಮೈ ಬಿಚ್ಚಿ ನಿಂತುಕೊಂಡವು. ವಾರದ ಟಾಬ್ಲೈಡ್‌ಗಳೆಲ್ಲಾ ಗರಿಕೆದರಿಕೊಂಡವು. ಖ್ಯಾತ ದಿನ ಪತ್ರಿಕೆಗೆಳ ವರದಿಗಾರರೂ ತಮ್ಮ ಸಂಪಾದಕರಿಗೆ ಈ ಕುರಿತು ಸ್ಟೋರಿ ಮಾಡಲೇ ಎಂದು ಅನುಮತಿ ಕೇಳಿದರು.ಅವರ ಸಂಪಾದಕರು ಅವರಿಗೆಲ್ಲಾ ಅನುಮತಿ ನೀಡಿದರೋ ಗೊತ್ತಿಲ್ಲ.
ಆದರೆ ಇದ್ದಕ್ಕಿದ್ದಂತೆ ಕಲ್ಪನಾ ಊರಲ್ಲಿ ಈಗ ಇಲ್ಲ ಎಂಬ ಸುದ್ದಿ ಪ್ರಚಾರವಾಯಿತು.
ಜೊತೆಗೆ ಸುನೀಲ ಕೂಡಾ ಕಾಣೆ.
ಇದು ಹೀಗಾಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಸುನೀಲ ಯಾವತ್ತೂ ಕಲ್ಪನಾಳನ್ನು ಕುರಿತಾಗಿ ಯಾರಲ್ಲೂ ಮಾತನಾಡಿರಲೂ ಇಲ್ಲ. ಅಥವಾ ಕಲ್ಪನಾ ಸುನೀಲ ಪ್ರೀತಿಸುತ್ತಾರೆ ಎಂಬ ಯಾವ ಕುರುಹೂ ಇರಲಿಲ್ಲ. ಅವರಿಬ್ಬರು ಪ್ರೀತಿಸಿತ್ತಾರೆ ಎಂದು ಹೇಳಬೇಕಾದರೆ ಅವರು ಆಗಾಗ ಒಟ್ಟಿಗೆ ಕಾಣಬೇಕು ಅಥವಾ ಎಲ್ಲೋ ತಿರುಗಾಡುತ್ತಿರಬೇಕು ಅಥವಾ ತುಂಬಾ ಆತ್ಮೀಯವಾಗಿ ಇದ್ದಾರೆ ಎಂಬಂತೆಯಾದರೂ ಕಾಣಬೇಕು. ಇದು ಯಾವುದೂ ಇಲ್ಲ. ಕಲ್ಪನಾ ಮತ್ತು ಸುನೀಲರನ್ನು ಒಟ್ಟಿಗೆ ನೋಡಿದವರೇ ಇಲ್ಲ. ಹಾಗೆಂದ ಮೇಲೆ ಇವರು ಪ್ರೀತಿಸುತ್ತಿದ್ದರು ಮತ್ತು ಹಾಗೇ ಓಡಿಹೋದರು ಎಂದು ನಂಬುವುದು ಅಷ್ಟು ಸುಲಭದಲ್ಲಿ ಹೇಗೆ ಸಾಧ್ಯ?ಆದರೂ ಊರ ಜನರಲ್ಲಿ ಮಾತ್ರಾ ಸುನೀಲ ಮತ್ತು ಕಲ್ಪನಾ ತುಂಬಾ ಪ್ರೀತಿಸುತ್ತಿದ್ದರೆಂದೂ ಅದನ್ನು ಊರವರು ತಪ್ಪಿಸುವ ಸಾಧ್ಯತೆಯಿದೆ ಎಂದೂ ಹೆದರಿ ಸುನಿಲನೇ ಕಲ್ಪನಾಳ ಬೆತ್ತಲೆ ನಡಿಗೆ ಎಂಬ ಕಥೆ ಸೃಷ್ಟಿಸಿದ್ದ ಎಂದು ಅಭಿಪ್ರಾಯ ಹರಡಿತು. ಆದರೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ತೀರ್ಮಾನಿಸಬೇಕು ಎಂದು ಯಾರೂ ಅಷ್ಟೊಂದು ಹಠಕ್ಕೆ ಬಿದ್ದಂತೆ ಕಾಣುತ್ತರಲಿಲ್ಲ.
ಆದ್ದರಿಂದ ಈ ಕತೆಗಾರನೇ ಈ ವಿಚಾರದ ಬೆನ್ನು ಹಿಡಿದು ಹೊರಟೇ ಬಿಟ್ಟ.
++++++++++++++++
ಸುನೀಲ ಅಥವಾ ಕಲ್ಪನಾ ಈ ವಿಚಾರದಲ್ಲಿ ಅಷ್ಟೊಂದು ಮುಖ್ಯ ಅಲ್ಲ ಎಂದು ಈ ಕತೆಗಾರನಿಗೆ ಅನಿಸಿತ್ತು. ಆದರೆ ಅವಳು ಬೆತ್ತಲೆ ನಡೆಯುತ್ತಿದ್ದಳು ಎಂದು ಸುದ್ದಿ ಹರಡಿತ್ತಲ್ಲ ಅದು ಯಾಕಾಯಿತು ಎಂದು ಈ ಕತೆಗಾರ ತುಂಬಾ ದಿನ ಯೋಚಿಸಿದ್ದಾನೆ. ಅವರಿಬ್ಬರು ಪ್ರೀತಿಸುವುದಕ್ಕೂ ಈ ರೀತಿ ಓಡಿ ಹೋಗುವುದಕ್ಕೂ ಈ ಬೆತ್ತಲೆ ಪಯಣಕ್ಕೂ ಏನು ಸಂಬಂಧ ಮತ್ತು ಇದನ್ನೆಲ್ಲಾ ಯಾರು ಏತಕ್ಕಾಗಿ ಸೃಷ್ಟಿಮಾಡಿದ್ದಾರೆ ಎಂದು ಕತೆಗಾರ ಮೊದಲಾಗಿ ಕೇಳಿದ್ದು ಅವನ ದೊಡ್ಡ ಅಭಿಮಾನಿಯೊಬ್ಬನಲ್ಲಿ. ಅವನೂ ಈ ಕತೆಗಾರನ ಅಥವಾ ನಿಮ್ಮ ಊರಿನವನೇ. ಈ ಕತೆಗಾರ ಬರೆದ ಎಲ್ಲಾ ಕತೆಗಳನ್ನೂ ಆದರದಿಂದ ಓದುವವನು. ಅನೇಕ ಬಾರಿ ಈ ಕತೆಗಾರನಿಗೆ ಸ್ಫೂರ್ತಿ ಬರುವಂಥ ರೀತಿಯಲ್ಲಿ ಕತೆಗಳನ್ನು ಹುಟ್ಟಿಸಿಕೊಡುವವನು.ಅವನು ಕತೆಗಾರನ ಎದುರಲ್ಲೇ ನಿಂತಿದ್ದ.
"ಕುಳಿತುಕೋ.." ಎಂದ ಕತೆಗಾರ."ನೀನು ಇದಕ್ಕೆ ನನಗೆ ಉತ್ತರ ಹೇಳಲೇಬೇಕು.."ಎಂದು ಒತ್ತಾಯಿಸಿದ.
"ಅದೆಷ್ಟು ಕತೆಗಳನ್ನು ನನ್ನಲ್ಲಿ ಹುಟ್ಟಿಸಿದವನು ನೀನು.ಈ ಹುಡುಗಿ ಯಾರು ಎಲ್ಲಿಯವಳು ಮತ್ತು ಇವಳು ಈ ಹುಡುಗನನ್ನು ಏಕೆ ಪ್ರೀತಿಸಿದಳು ಅವರು ಪ್ರೀತಿಸಿದ ನಂತರ ಏನು ಮಾಡಿದರು ಎಂದೆಲ್ಲಾ ನಾನು ಕೇಳುವುದಿಲ್ಲ. ಅಸಲಿಗೆ ಅದು ನನಗೆ ಅಗತ್ಯವೂ ಇಲ್ಲ" ಎಂದು ಕತೆಗಾರ ಹೇಳುತ್ತಿದ್ದರೆ ಅಭಿಮಾನಿ ಆಕಳಿಸುತ್ತಾ ಕುಳಿತ.
"ನಿಜಕ್ಕೂ ಹೇಳು.., ಈ ಹುಡುಗಿ ಬೆತ್ತಲೆ ನಡೆಯುತ್ತಿದ್ದಳೇ? ಅದು ನಿನಗೆ ಗೊತ್ತಾಗಿತ್ತಾ..ಅದನ್ನು ಕತೆಯಲ್ಲಿ ನಾನು ಹೇಗೆ ದಾಖಲಿಸುವುದು..?"
ಅಭಿಮಾನಿ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಅಲ್ಲೇ ನಿದ್ರಿಸುತ್ತಾ ಗೊರಕೆ ಶುರು ಮಾಡಿದ.
+++++++++++
ಅಂದು ರಾತ್ರಿ ಕತೆಗಾರನಿಗೆ ದೊಡ್ಡ ನಿದ್ದೆ ಬಿತ್ತು. ನಿದ್ದೆಯಲ್ಲಿ ಅವನು ಬೆತ್ತಲೆ ನಡೆಯುತ್ತಾ ಹೋದ. ದೊಡ್ಡ ನದಿಯೊಂದು ತುಂಬಿ ಹರಿಯುತ್ತಿತ್ತು. ಅಲ್ಲಿ ದೋಣಿಯೊಂದು ಗೂಟಕ್ಕೆ ಕಟ್ಟಿ ಹಾಕಲಾಗಿತ್ತು. ನದಿಯಾಚೆಗೆ ಶೇಂದಿ ಅಂಗಡಿಯಲ್ಲಿ ಚಕ್ಕುಲಿ ತಿನ್ನುತ್ತಾ ದೋಣಿಗಾರ ಕುಳಿತಿದ್ದ.ಕತೆಗಾರ ಅವನನ್ನು ಕೂಗಿದ.
" ನದಿ ದಾಟಿಸು "ಎಂದು ದೊಡ್ಡ ಸ್ವರದಲ್ಲಿ ಕರೆದ.
"ಹೇಗೆ ಬರುವುದು..ನದಿ ತುಂಬಿ ಹರಿಯುತ್ತಿದೆ "ಎಂದ ದೋಣಿಗಾರ.
ಕತೆಗಾರನಿಗೆ ಅಚ್ಚರಿಯಾಯಿತು."ನಾನು ನದಿ ದಾಟಲೇ ಬೇಕು..ಓಡಿ ಹೋದವರನ್ನು ಹುಡುಕಿ ಹಿಡಿಯಬೇಕು ಅವರ ಬಗ್ಗೆ ಕತೆ ಬರೆಯಬೇಕು..ಅದು ಬೆಳಗಾಗುವುದರೊಳಗೆ ಆಗಿ ಮುಗಿಯಬೇಕು.."ಎಂದು ಗೋಳಿಟ್ಟ.
"ನದಿ ತುಂಬಿ ಹರಿಯುತ್ತಿದೆ.ತುಂಬಾ ಸೆಳೆತವೂ ಇದೆ" ಎಂದ ದೋಣಿಗಾರ.
"ಹಾಗಾದರೆ ಆ ಹುಡುಗಿ ಎಲ್ಲಿದ್ದಾಳೆ ಗೊತ್ತುಮಾಡು" ಎಂದ ಕತೆಗಾರ. ಆದರೆ ಆಗ ದೊಡ್ಡ ದೊಡ್ಡ ಹನಿಗಳ ಶಬ್ದದಿಂದ ಆ ಮಾತು ನದಿ ದಾಟಲಿಲ್ಲ. ಅತ್ತ ಆ ದಡದಲ್ಲಿ ಆ ದೋಣಿಗಾರ ಮಳೆ ರಭಸಕ್ಕೆ ಶೇಂದಿ ಅಂಗಡಿ ಒಳಗೆ ಹೋದ.
ಕತೆಗಾರ ತುಂಬಾ ಅಸಹಾಯಕನಾಗಿ ನಿಂತಾಗ ಹಿಂದೆ ಯಾರೋ ಬಂದ ಹಾಗಾಗಿ ತಿರುಗಿದ.ಸುನೀಲ..!
"ನಾನು ನಿಮ್ಮ ಅಭಿಮಾನಿ.." ಎಂದ ಸುನೀಲ.
"ನೀವು ಸಂಜೆ ಅದೇನೋ ಕೇಳಿದರಲ್ಲ..ಆಗ ನನಗೆ ಜೋರಾಗಿ ನಿದ್ದೆ ಬಂದು ಬಿಟ್ಟಿತು.."ಎಂದ.
"ಅವಳೆಲ್ಲಿ..ಕಲ್ಪನಾ..?"ಎಂದು ಕತೆಗಾರ ಸುನೀಲನ ಭುಜ ಹಿಡಿದುಕೊಂಡ..
ಸುನೀಲ ನದಿಯಾಚೆಗೆ ಬೆರಳೆತ್ತಿದ.
ಆ ಕತ್ತಲಲ್ಲಿ ಯಾರೋ ಇತ್ತ ಕರೆಯುತ್ತಿದ್ದಂತೆ ಕಾಣುತ್ತಿತ್ತು.
"ದೋಣಿಗಾರ..ದೋಣಿಗಾರ" ಎಂದು ಕೂಗುತ್ತಿರುವುದು ಕಾಣಿಸಿತು.
"ಈ ದಡದ ಮೇಲೆ ದಿಬ್ಬದಲ್ಲಿ ಶೇಂದಿ ಅಂಗಡಿ ಇದೆ" ಎಂದ ಸುನೀಲ."ಅಲ್ಲಿ ದೋಣಿಗಾರ ಚಕ್ಕುಲಿ ತಿನ್ನುತ್ತಾ ಇದ್ದಾನೆ" ಎಂದ.
"ಸಾಧ್ಯವೇ ಇಲ್ಲ, ಅದು ಆ ದಡದಲ್ಲಿ.. "ಎಂದು ಕತೆಗಾರ ವಾದಿಸಿದ."ದೋಣಿ ಇಲ್ಲೇ ಇದೆ" ಎಂದ ಜೊತೆಜೊತೆಗೆ.
"ಕಲ್ಪನಾ ಈ ಕಡೆ ಬರಲಿ ಆಗ ಎಲ್ಲವೂ ಗೊತ್ತಾಗುತ್ತದೆ" ಎಂದು ಹೇಳಿದ ಸುನೀಲ ದೋಣಿಗಾರನನ್ನು ಕರೆದು ತರಬೇಕು ಎಂದು ದಿಬ್ಬ ಹತ್ತಿ ಹೋದ.
ಇಲ್ಲಿ ದೋಣಿ ಬಿಟ್ಟು ದೋಣಿಗಾರ ಅಲ್ಲಿಗೆ ಹೇಗೆ ಹೋದ ಎಂದು ಕತೆಗಾರ ದಿಬ್ಬದತ್ತೊಮ್ಮೆ ದಡದಾಚೆಗೊಮ್ಮೆ ಆಶ್ಚರ್ಯಚಕಿತನಾಗಿ ಇನ್ನಿಲ್ಲದಂತೆ ಹರಿಯುವ ನದಿಯ ದಢಸಿತನವನ್ನು ನೋಡುತ್ತಾ ನಿಂತ.
2 comments:
>>>>ಆದರೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ತೀರ್ಮಾನಿಸಬೇಕು ಎಂದು ಯಾರೂ ಅಷ್ಟೊಂದು ಹಠಕ್ಕೆ ಬಿದ್ದಂತೆ ಕಾಣುತ್ತರಲಿಲ್ಲ. >>>>
ತುಂಬಾ ಚೆನ್ನಾಗಿತ್ತು.
ಜೋಗಿ ಹೇಳುವ ಹಾಗೆ ನಮಗೆ ದಕ್ಕಿದಷ್ಟೇ ಕವಿತೆ ಎಂಬಂತೆ ಈ ಕಥೆಯೂ... ನನಗೆ ಈಗ ದಕ್ಕಿರುವಷ್ಟರ ಬಗ್ಗೆ ಸಂತೋಷವಿದೆ, ಇನ್ನೋ ಏನೋ ಇದೆ ಅದು ನನಗೆ ದಕ್ಕುತ್ತಿಲ್ಲ ಎನ್ನುವುದರ ಬಗ್ಗೆ ಅಸಮಾಧಾನವಿದೆ.
ಹೀಗೇ ಬರೆಯುತ್ತಿರಿ... ನಮ್ಮ ಓದುವ ಸಂತೋಷಕ್ಕೆ...
Post a Comment