20080327

ಆ ದಡ.. ಈ ದಡ..


ಇದೆಲ್ಲಾ ಆಗಿ ತುಂಬಾ ದಿನಗಳಾದವು.


ನಿಮಗೆಲ್ಲಾ ಇದನ್ನು ಹೇಳಲೇಬೇಕು ಎಂದು ಈ ನಿಮ್ಮ ಕತೆಗಾರ ಬಹಳವಾಗಿ ತವಕ ಪಟ್ಟಿದ್ದ. ಆದರೆ ಹೇಳುವುದಕ್ಕೂ ಅಂತ ಒಂದು ಕಾಲ ಇರುತ್ತದೆ ನೋಡಿ ಮತ್ತು ಅದು ಕೂಡಿ ಬರಲೂ ಬೇಕು ನೋಡಿ. ಹಾಗಾಗಿ ಈ ಕತೆಗಾರನಿಂದ ಇದನ್ನು ನೀವು ಕೇಳಿಸಿಕೊಳ್ಳಲೂ, ಕತೆಗಾರನಿಗೆ ಹೇಳಲೂ ಇಷ್ಟು ದಿನ ಹಿಡಿಯಿತು.


ಇಲ್ಲದಿದ್ದರೆ ಈ ಕತೆ ಅದೇನು ಅಷ್ಟೊಂದು ದಿನ ಹರಣ ಮಾಡುವಂಥದ್ದಾ?


ಎಷ್ಟೊಂದು ಸೊಗಸಾಗಿದೆ.


ಈ ಅದ್ಭುತ ರಮ್ಯ ಕತೆಗೆ ನಾವು ಇಷ್ಟು ದಿನಗಳ ಕಾಲ ಕಾಯಬೇಕಾಯಿತಾ ಎಂದು ನೀವೂ ಕೋಪ ಮಾಡಿಕೊಳ್ಳಬಹುದು.ಹಾಗಾಗಿ ಈಗಿಂದೀಗಲೇ ಕತೆ ಶುರು ಮಾಡಿಬಿಡೋಣ.ಇದು ನಿಮ್ಮೂರಲ್ಲೇ ಆಗಿದೆ ಎಂದು ನೀವು ಭಾವಿಸಿಕೊಳ್ಳಬಹುದು.


ಅಸಲಿಗೆ ಒಂದು ಕತೆ, ಕಥಾನಕ ನಮ್ಮನ್ನು ಪ್ರವೇಶಿಸುವುದೇ ನಮ್ಮೂರ ಮೂಲಕವೇ ತಾನೇ? ಯಾರೋ ಸ್ವೀಡಿಶ್ ಕತೆಗಾರನೋ ಅಥವಾ ಐರ್ಲೆಂಡ್‌ನ ಬರಹಗಾರನೋ ಬರೆದ ಕತೆಯನ್ನು ನಾವು ಓದುತ್ತಾ ಓದುತ್ತಾ ಅದರಲ್ಲಿನ ಪಾತ್ರಗಳು, ಊರು, ಕೇರಿ, ಬೀದಿ, ಮನೆ ಮಠ ಎಲ್ಲಾ ನಮ್ಮೂರಿಗೆ ತಂದುಕೊಳ್ಳುತ್ತೇವೆ. ಪೈನ್ ಮರ,ಐಸ್ ಫಾಲ್ಸ್ ಕೂಡಾ ನಮ್ಮೂರಲ್ಲೇ ಇದೆ ಎಂಬ ಹಾಗೇ ಸೇರಿಕೊಳ್ಳುತ್ತೇವೆ.ಹಾಗೇ ಈ ಕತೆಯಲ್ಲೂ ಎಲ್ಲರನ್ನೂ ಎಲ್ಲವನ್ನೂ ನೀವು ಓದುಗರು ನಿಮ್ಮೂರಿನ ಕತೆ ಎಂಬ ಹಾಗೇ ಓದಿದರೆ ಈ ಕತೆಗಾರ ಧನ್ಯನೋ ಧನ್ಯ.


ಕತೆ ಅಂಥ ಗಡಿಬಿಡಿಯದ್ದೇನಲ್ಲ.


ಆ ನಿಮ್ಮ ಊರಿನಲ್ಲಿ ಆ ಕೇರಿಯ ತುದಿಯಲ್ಲಿ ಆ ದೇವಸ್ಥಾನ ಇದೆಯಲ್ಲಾ ಅದರ ಹೊರಸುತ್ತಿನಲ್ಲಿರುವ ಆ ಅರಳಿಮರದ ಎದುರಿಗೆ ಒಂದು ಹಂಚಿನ ಮನೆಯಿದೆ ನೋಡಿ ಅಲ್ಲೊಬ್ಬಳು ಹುಡುಗಿ ಇದ್ದಾಳಲ್ಲಾ ಅವಳಿಂದಲೇ ಈ ಕತೆ ಆರಂಭ.ಅವಳನ್ನು ನೀವು ನೋಡಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ. ಅದರೆ ಅವಳು ತುಂಬಾ ಚೆಂದದ ಹುಡುಗಿ ಅಂತ ನನಗೆ ಮೊದಲಾಗಿ ಹೇಳಿದವನು ಸುನೀಲ.


ಸುನೀಲ ತುಂಬಾ ರಸಿಕ ಅಂತ ಏನೂ ಅಲ್ಲ. ಆದರೆ ಯಾವ ಯಾವ ಹುಡುಗಿಯರು ಹೇಗೇಗೆ ಎಂದು ಕರಾರುವಕ್ಕಾಗಿ ಹೇಳಬಲ್ಲವನು ಊರಲ್ಲಿ ಅವನೇ.ಈ ಸುನೀಲ ಯಾರು ಅಂತ ನೀವು ತಲೆಬಿಸಿ ಮಾಡಿಕೊಂಡಿರಾ? ನಿಮ್ಮ ಊರಿನ ಫ್ಯಾನ್ಸಿ ಸ್ಟೋರಿನ ಮಾಲಿಕ. ಹೇಗಿದ್ದಾನೆ ಎoದು ಇನ್ನು ಈ ಕತೆಗಾರ ಹೇಳಬೇಕಾಗಿಲ್ಲವಲ್ಲ.ಅದೇ ಚೆಲುವಾದ ಡ್ರೆಸ್ಸು, ಮೂರು ಬೆರಳಿಗೆ ಉಂಗುರ,ತೀಡಿ ಬಾಚಿದ ಕ್ರಾಪು..ಇತ್ಯಾದಿ ಇತ್ಯಾದಿ.ಹಾಗೇ ಇದ್ದರೆ ತಾನೇ ಸುನೀಲನಿಗೆ ವ್ಯಾಪಾರ. ಅವನ ಅಂಗಡಿಗೆ ಬರುವ ಗಿರಾಕಿಗಳೆಂದರೆ ಅದೇ ತರುಣಿಯರು. ಅವನ ತಂದೆಯ ಅಂಗಡಿ ಅದು. ಅವರ ಕಾಲದಲ್ಲಿ ಸ್ನೋ,ಪೌಡರು,ಟ್ಯೂಟೆಕ್ಸು,ಕುಪ್ಪಿ ಬಳೆ,ರಿಬ್ಬನು,ರಬ್ಬರು ಬೈಂಡು,ಕನ್ನಡಿ ಬಾಚಣಿಗೆ ಇತ್ಯಾದಿ ಇತ್ಯಾದಿ ವ್ಯಾಪಾರ ನಡೆಯುತ್ತಿತ್ತು. ಅವರು ನಿಧಾನಕ್ಕೆ ಸಿಮೂತ್ರ,ಬಿಪಿ ಅಂತ ಸೋತ ಮೇಲೆ ಬಿಬಿಎಂ ಓದಿ ಬಂದ ಸುನೀಲ ಅಂಗಡಿ ಉಸ್ತುವಾರಿ ಹಿಡಿದುಕೊಂಡ. ಫ್ಯಾನ್ಸಿ ಸ್ಟೋರನ್ನು ಕಂಪ್ಲೀಟ್ ಮಾಡರ್ನ್ ಮಾಡಬೇಕು ಎಂತಲೇ ತಾನು ಬಿಬಿಎಂ ಒದಿದ್ದು ಎಂದು ಅವನು ಅಂದಿನಿಂದಲೂ ಹೇಳುತ್ತಾ ಇದ್ದ. ಹಾಗೇ ಮಾಡಿದ ಕೂಡ.


ಜಂಟ್ಲುಮ್ಯಾನು.


ಈಗ ಅವನ ವ್ಯಾಪಾರ ಭಾರೀ ಇಂಪ್ರೂವ್ ಆಗಿದೆ. ರಬ್ಬರು ಬೈಂಡು,ಬಳೆ, ಕಾಜು, ಸ್ನೋ ಎಲ್ಲಾ ಈಗಿನ ಹುಡುಗಿಯರಿಗೆ ಎಂತಕೆ ಬೇಕು ಅಂತ ಅವನು ಅದೆನ್ನೆಲ್ಲಾ ತರಿಸುತ್ತಿಲ್ಲ. ಯಾವ ಯಾವ ಹೊಸ ಫ್ಯಾಶನ್ನು ಬಂತೋ ಅದನ್ನು ತಂದೇ ತರುತ್ತಾನೆ. ಒಂದರ್ಥದಲ್ಲಿ ಊರಿನ ಹುಡುಗಿಯರಿಗೆ ಫ್ಯಾಶನ್ನು ಕಲಿಸುವವನೇ ಅವನು.ಹಾಗಾಗಿ ಸುನೀಲ ಎಂದರೆ ಹುಡುಗಿಯರಿಗೂ ಪ್ರಾಣ. ಮಾತ್ರವಲ್ಲ ಅವನ ಫ್ಯಾನ್ಸಿ ಸ್ಟೋರಿನಲ್ಲಿ ರೇಟೂ ಕಮ್ಮಿ ಚರ್ಚೆಯೂ ಇದೆ,ತುಂಬಾ ವ್ಯಾಪಾರ ಮಾಡಿದರೆ ಗಿಫ್ಟೂ ಉಂಟು.


+++++++


ಕಲ್ಪನಾ ರಾತ್ರಿ ಹೊತ್ತಲ್ಲಿ ದೇವಸ್ಥಾನದ ರಥ ಬೀದಿಯಲ್ಲಿ ಬೆತ್ತಲೆ ಹೋಗುತ್ತಾಳೆ ಎಂಬ ಸುದ್ದಿ ಸುಡುಬಯಲ ಗಾಳಿಯಂತೆ ಊರಲ್ಲಿ ಹಬ್ಬಿತು.ಈ ಸುದ್ದಿಯನ್ನು ಮೊದಲಾಗಿ ಎತ್ತಿ ಹೇಳಿದವನು ಸುನೀಲ ಎಂದು ನೀವು ಊಹಿಸಿದ್ದರೆ ಅದು ತುಂಬಾ ತಪ್ಪು. ಕಾರಣ ಸುನೀಲ ಅಂಥ ಎಡವಟ್ಟು ಅಸಾಮಿಯಲ್ಲ. ಅವನದ್ದು ತುಂಬಾ ಡೀಸೆಂಟು ವ್ಯಾಪಾರ. ಮೇಲಾಗಿ ಹುಡುಗಿಯರೇ ಅವನ ಕಸ್ಟಮರ್‍ಸ್. ಹೀಗಿರುವಾಗ ಅವನೇಕೆ ಇದನ್ನೆಲ್ಲಾ ಹೇಳಹೋಗುತ್ತಾನೆ. ಇಷ್ಟಕ್ಕೂ ಕಲ್ಪನಾ ಅವನ ತುಂಬಾ ಇಂಪಾರ್ಟೆಂಟು ಕಸ್ಟಮರ್ರು ಬೇರೆ. ಅವಳು ವಾರಕ್ಕೆ ಮೂರು ಬಾರಿಯಾದರೂ ಅವನ ಅಂಗಡಿಗೆ ಬರುವಳು. ಮೊಬೈಲಿಗೆ ಟಾಪ್ ಅಪ್ ಹಾಕಿಸಿಕೊಳ್ಳಲು ಅವಳಿಗೆ ಸುನೀಲನೇ ಬೇಕು.


ಅದಿರಲಿ ಈ ಕಲ್ಪನಾ ಎಲ್ಲಿಯವಳು ಎಂದು ನೀವು ಕೇಳಲೇ ಇಲ್ಲ. ಈ ಕತೆಗಾರನಿಗೂ ಗೊತ್ತಿದ್ದರೆ ತಾನೇ ಹೇಳುವುದಕ್ಕೆ. ಆದರೂ ಒಬ್ಬಳಿಗೆ ಒಂದು ಊರು ಎಂದು ಬೇಕು ತಾನೇ? ಆದ್ದರಿಂದ ಕಲ್ಪನಾಗೂ ಒಂದು ಊರು ಎಂದು ಈ ಕತೆಗಾರ ನಿಮ್ಮ ಇಷ್ಟದ ಸಿಟಿಯನ್ನೇ ಆಯ್ಕೆ ಮಾಡುವಂತೆ ಸೂಚಿಸಬಯಸುತ್ತಾನೆ. ಕಲ್ಪನಾ ಅದೇ ಆ ಸಿಟಿಯ ಹುಡುಗಿ. ಆಮೇಲೆ ಅವಳೇಕೆ ಇಲ್ಲಿಗೆ ಬಂದಳು ಎಂದರೆ ಏನೋ ಕೆಲಸದ ನಿಮಿತ್ತ. ಯಾವುದೋ ಒಂದು ಸರಕಾರಿ ಉದ್ಯೋಗಿ ಎಂದು ಈ ಕತೆಗಾರನಿಗೆ ಅವಳ ಬಗ್ಗೆ ಗೊತ್ತು.


ಅವಳು ಹೇಗಿದ್ದಾಳೆ ಎಂದು ಈ ಕತೆಗಾರನೇ ಹೇಳುತ್ತಾನೆ ಕೇಳಿ.


ಐದಡಿ ಆರೂವರೆ ಇಂಚು. ಹಾಲಿನ ಬೆಳ್ಳಗೆ ಬಿಳುಪು. ಮೈಕಟ್ಟು ಸಖತ್ತಾಗಿದೆ ಎಂದು ಮಹಾ ರಸಿಕ ಸುನೀಲ ತೀರ್ಮಾನಿಸಿದ್ದಾನೆ. ಅವನು ಹೇಳಿದಲ್ಲಿಗೆ ಮುಗಿಯಿತು. ಕಾರಣ ಸುನೀಲನಿಗೆ ಒಂದು ಹುಡುಗಿ ಇಷ್ಟವಾಗುವುದು ಎಂದರೆ ಅದು ತುಂಬಾ ಕಷ್ಟ. ಆ ಹುಡುಗಿ ಹೇಗೆ ಎಂದು ಕೇಳಿದರೆ ಅವನು ಕೊಡುವ ಉಪಾಖ್ಯಾನಗಳೆ ಸೊಗಸಾಗಿರುತ್ತವೆ. ಅವಳು ಹೇಗಿದ್ದಾಳೆ ಎಂದರೆ ಮಕ್ಕಳು ಡ್ರಾಯಿಂಗಿನಲ್ಲಿ ಗುಡ್ಡದ ಚಿತ್ರ ಮಾಡುತ್ತಾರಲ್ಲ ಹಾಗೇ ಎಂದು ಅವನು ಹೇಳಿದರೆ ಥೇಟ್ ಹಾಗೇ ಇರುತ್ತಾಳೆ ಅವನು ಹೇಳಿದ ಹುಡುಗಿ.


ಒಮ್ಮೆ ಆ ಸ್ಕೂಲು ಟೀಚರನ್ನು ಅವನು ಶಾಲೆ ಮಕ್ಕಳ ಬಳಿ ಬಣ್ಣಿಸಿ ದೊಡ್ಡ ರಾದ್ಧಾಂತವಾಗಿತ್ತು. ನಿಮ್ಮ ಟೀಚರು ಮಕ್ಕಳು ಚಪಾತಿ ಲಟ್ಟಿಸಿದ ಹಾಗಿದ್ದಾಳೆ ಎಂದು ಒಡ್ಡೊಡ್ಡಾಗಿದ್ದ ಟೀಚರಮ್ಮನನ್ನು ಆತ ಬಣ್ಣಿಸಿದ್ದ. ಅದು ಶಾಲೆ ಮಕ್ಕಳ ಬಾಯಿಯಲ್ಲಿ ಉಳಿಯುತ್ತದಾ? ಅದು ಸ್ಟಾಪು ರೂಮಿಗೆ ಹೋಗಿ ಅಲ್ಲಿ ಚರ್ಚೆಯಾಗಿ ಕೊನೆಗೆ ಆ ಟೀಚರು ಅದೇ ಮಕ್ಕಳ ಜೊತೆ ಬಂದು ಇವನ ಅಂಗಡಿಯಲ್ಲಿ ರಂಪ ಮಾಡಿ ಕೊನೆಗೆ ಈ ಸುನೀಲ ಧರ್ಮಸ್ಥಳದ ಆಣೆ ಹಾಕಿ ಅದು ಹೇಗೋ ಬಚಾವಾಗಿದ್ದ.


ಸುನೀಲನ ಬಳಿ ಕಲ್ಪನಾ ಹೇಗಿದ್ದಾಳೆ ಎಂದರೆ ಆತ ಬ್ಯೂಟಿಫುಲ್ ಎಂದು ಹೇಳಿದ್ದಾನೆ. ಅಂಥ ಹುಡುಗಿ ಈ ಊರಿಗೆ ಬಂದದ್ದು ಭುವನ ಭಾಗ್ಯ ಎಂದು ವರ್ಣಿಸಿದ್ದಾನೆ. ಸ್ವಲ್ಪ ಹೆಚ್ಚೋ ಕಡಿಮೆಯೋ ಕಲ್ಪನಾ ಚೆಂದ ಇರುವುದಂತೂ ನಿಜ ಎಂದು ಎಲ್ಲರಿಗೂ ಅರ್ಥಮಾಡಿಸಿದ್ದಾನೆ.


ಅಂಥ ಕಲ್ಪನಾ ರಾತ್ರಿ ಹೊತ್ತಲ್ಲಿ ರಥಬೀದಿಯಲ್ಲಿ ಬೆತ್ತಲೆ ಹೋಗುತ್ತಾಳೆ ಎಂದರೆ ಯಾರಾದರೂ ನಂಬುವಂಥದ್ದಾ? ಥಕ್ ಯಾರೋ ಹಸೀ ಸುಳ್ಳು ಹಬ್ಬಿಸಿದ್ದಾರೆ ಆ ಹುಡುಗಿಯ ಮಾನ ಹರಾಜು ಮಾಡಲು ಎಂದು ಈ ಕತೆಗಾರ ಆರಂಭದಿಂದಲೇ ಅಭಿಪ್ರಾಯ ಪಟ್ಟಿದ್ದಾನೆ .


ಇಷ್ಟಕ್ಕೂ ಅವಳು ಹಾಗೇ ಹೋಗುತ್ತಾಳೆ ಎಂದು ಈ ರಥ ಬೀದಿಯಲ್ಲಿ ಯಾರಾದರೂ ನೋಡಿದ್ದಾರಾ? ನೋಡಿದವರು ಸುಮ್ಮನೆ ಇರುತ್ತಾರ? ಕೂಡಲೇ ಜನಸೇರಿಸಿ ವ್ಯವಸ್ಥೆ ಮಾಡುವುದಿಲ್ಲವಾ? ಅಥವಾ ಅವಳನ್ನು ತಕ್ಷಣ ಆಸ್ಪತ್ರೆಗೆ ಅಡ್ಮಿಟ್ಟು ಮಾಡುವುದಿಲ್ಲವಾ?ಏನಾದರೂ ಮಾಡಿಯಾರು...ಹೌದಲ್ಲ,ಇದು ಸುಳ್ಳು ಎಂದು ಹೇಳುತ್ತಾ ಹೋದರೆ ಅದೂ ಕೂಡಾ ಸುಳ್ಳಾಯಿತೇ?
+++++++++++++
ಏನು ಹೇಳಿದರೂ ಯಾರೂ ನಂಬುವುದಿಲ್ಲ ಎಂದು ಗೊತ್ತೇ ಇದ್ದ ನಮ್ಮ ನ್ಯೂಸ್ ಚಾನಲ್ಲೊಂದು ಮೊದಲಾಗಿ ಈ ಕುರಿತು ಸುದ್ದಿ ಹಬ್ಬಿಸಿತು. ಹಬ್ಬಿಸಿದ್ದೇನು ಸ್ವತಃ ವಿಡಿಯೋ ಕ್ಲಿಪ್ಪಿಂಗನ್ನೇ ಪ್ರಸಾರ ಮಾಡಿಯೇ ಬಿಟ್ಟಿತು. ಇದು ನಿಜಕ್ಕೂ ನಂಬುವುದಲ್ಲ. ಆದರೂ ನೀವು ನಂಬಲೇ ಬೇಕು,ಇಗೋ ಪ್ರತೀ ರಾತ್ರಿ ಈ ತರುಣಿ ಈ ಬೀದಿಯಲ್ಲಿ ಬೆತ್ತಲೆ ಹೋಗುತ್ತಾಳೆ, ಯಾಕೆ,ಯಾಕೆ ಯಾರಿಗೂ ಗೊತ್ತಿಲ್ಲ..ಎಂದಿತ್ಯಾದಿ ಸ್ಲೋಗನ್ನು ಹಾಕಿ ಹಗಲಿಡೀ ಆ ಚಾನಲ್ಲು ಸುದ್ದಿ ಹಾಕಿತು. ಮಾತ್ರವಲ್ಲ ಆ ರಾತ್ರಿ ಆ ಕುರಿತ ಸುದ್ದಿಯನ್ನು ಚಿತ್ರ ಸಮೇತ ಪ್ರಸಾರ ಮಾಡಿತು. ಆದರೆ ಆ ಚಿತ್ರಗಳಲ್ಲಿ ಆ ಹುಡುಗಿಯ ಬೆತ್ತಲೆ ನಡಿಗೆ ಮಾತ್ರಾ ಯಾರೂ ಕಾಣಲಿಲ್ಲ. ಚಾನಲ್ಲು ಸೆನ್ಸಾರ್ ಕಾರಣಕ್ಕೆ ಹಾಗೇ ಅದನ್ನು ತೋರಿಸಲಾಗುವುದಿಲ್ಲ ಎಂದು ಆರಂಭದಲ್ಲೇ ಹೇಳಿತ್ತು.ಆದ್ದರಿಂದ ಎಲ್ಲರೂ ಕಲ್ಪನಾ ಬೆತ್ತಲೆ ಹೋಗುವು ಸುದ್ದಿಯನ್ನು ನಂಬಿಯೇ ಬಿಟ್ಟರು.


ನಂಬದೇ ಇರುವುದಾದರೂ ಹೇಗೆ , ಈ ಕತೆಗಾರನೇ ನಂಬಿದ್ದಾನೆ.


ವಿಡಿಯೋ ಕ್ಲಿಪ್ಪಿಂಗಿನಲ್ಲಿ ಅದೆಂಥದ್ದೋ ಡಾಟು ಡಾಟು ಚುಕ್ಕಿ ಚಿತ್ರಗಳು ಅಸ್ಪಷ್ಟವಾಗಿ ತೋರುತ್ತಿದ್ದವು. ಅದನ್ನೇ ಕಲ್ಪನಾ ಎಂದು ನಂಬಲಾಯಿತು.


ಯಾವಾಗ ಹೀಗೆ ಹುಡುಗಿಯ ಬೆತ್ತಲೆ ಯಾತ್ರೆ ಪ್ರಸಾರವಾಯಿತೋ ಸಿಟಿಯ ಸಂಜೆ ಪತ್ರಿಕೆಗಳೆಲ್ಲಾ ಮೈ ಬಿಚ್ಚಿ ನಿಂತುಕೊಂಡವು. ವಾರದ ಟಾಬ್ಲೈಡ್‌ಗಳೆಲ್ಲಾ ಗರಿಕೆದರಿಕೊಂಡವು. ಖ್ಯಾತ ದಿನ ಪತ್ರಿಕೆಗೆಳ ವರದಿಗಾರರೂ ತಮ್ಮ ಸಂಪಾದಕರಿಗೆ ಈ ಕುರಿತು ಸ್ಟೋರಿ ಮಾಡಲೇ ಎಂದು ಅನುಮತಿ ಕೇಳಿದರು.ಅವರ ಸಂಪಾದಕರು ಅವರಿಗೆಲ್ಲಾ ಅನುಮತಿ ನೀಡಿದರೋ ಗೊತ್ತಿಲ್ಲ.


ಆದರೆ ಇದ್ದಕ್ಕಿದ್ದಂತೆ ಕಲ್ಪನಾ ಊರಲ್ಲಿ ಈಗ ಇಲ್ಲ ಎಂಬ ಸುದ್ದಿ ಪ್ರಚಾರವಾಯಿತು.


ಜೊತೆಗೆ ಸುನೀಲ ಕೂಡಾ ಕಾಣೆ.


ಇದು ಹೀಗಾಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಸುನೀಲ ಯಾವತ್ತೂ ಕಲ್ಪನಾಳನ್ನು ಕುರಿತಾಗಿ ಯಾರಲ್ಲೂ ಮಾತನಾಡಿರಲೂ ಇಲ್ಲ. ಅಥವಾ ಕಲ್ಪನಾ ಸುನೀಲ ಪ್ರೀತಿಸುತ್ತಾರೆ ಎಂಬ ಯಾವ ಕುರುಹೂ ಇರಲಿಲ್ಲ. ಅವರಿಬ್ಬರು ಪ್ರೀತಿಸಿತ್ತಾರೆ ಎಂದು ಹೇಳಬೇಕಾದರೆ ಅವರು ಆಗಾಗ ಒಟ್ಟಿಗೆ ಕಾಣಬೇಕು ಅಥವಾ ಎಲ್ಲೋ ತಿರುಗಾಡುತ್ತಿರಬೇಕು ಅಥವಾ ತುಂಬಾ ಆತ್ಮೀಯವಾಗಿ ಇದ್ದಾರೆ ಎಂಬಂತೆಯಾದರೂ ಕಾಣಬೇಕು. ಇದು ಯಾವುದೂ ಇಲ್ಲ. ಕಲ್ಪನಾ ಮತ್ತು ಸುನೀಲರನ್ನು ಒಟ್ಟಿಗೆ ನೋಡಿದವರೇ ಇಲ್ಲ. ಹಾಗೆಂದ ಮೇಲೆ ಇವರು ಪ್ರೀತಿಸುತ್ತಿದ್ದರು ಮತ್ತು ಹಾಗೇ ಓಡಿಹೋದರು ಎಂದು ನಂಬುವುದು ಅಷ್ಟು ಸುಲಭದಲ್ಲಿ ಹೇಗೆ ಸಾಧ್ಯ?ಆದರೂ ಊರ ಜನರಲ್ಲಿ ಮಾತ್ರಾ ಸುನೀಲ ಮತ್ತು ಕಲ್ಪನಾ ತುಂಬಾ ಪ್ರೀತಿಸುತ್ತಿದ್ದರೆಂದೂ ಅದನ್ನು ಊರವರು ತಪ್ಪಿಸುವ ಸಾಧ್ಯತೆಯಿದೆ ಎಂದೂ ಹೆದರಿ ಸುನಿಲನೇ ಕಲ್ಪನಾಳ ಬೆತ್ತಲೆ ನಡಿಗೆ ಎಂಬ ಕಥೆ ಸೃಷ್ಟಿಸಿದ್ದ ಎಂದು ಅಭಿಪ್ರಾಯ ಹರಡಿತು. ಆದರೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ತೀರ್ಮಾನಿಸಬೇಕು ಎಂದು ಯಾರೂ ಅಷ್ಟೊಂದು ಹಠಕ್ಕೆ ಬಿದ್ದಂತೆ ಕಾಣುತ್ತರಲಿಲ್ಲ.


ಆದ್ದರಿಂದ ಈ ಕತೆಗಾರನೇ ಈ ವಿಚಾರದ ಬೆನ್ನು ಹಿಡಿದು ಹೊರಟೇ ಬಿಟ್ಟ.++++++++++++++++


ಸುನೀಲ ಅಥವಾ ಕಲ್ಪನಾ ಈ ವಿಚಾರದಲ್ಲಿ ಅಷ್ಟೊಂದು ಮುಖ್ಯ ಅಲ್ಲ ಎಂದು ಈ ಕತೆಗಾರನಿಗೆ ಅನಿಸಿತ್ತು. ಆದರೆ ಅವಳು ಬೆತ್ತಲೆ ನಡೆಯುತ್ತಿದ್ದಳು ಎಂದು ಸುದ್ದಿ ಹರಡಿತ್ತಲ್ಲ ಅದು ಯಾಕಾಯಿತು ಎಂದು ಈ ಕತೆಗಾರ ತುಂಬಾ ದಿನ ಯೋಚಿಸಿದ್ದಾನೆ. ಅವರಿಬ್ಬರು ಪ್ರೀತಿಸುವುದಕ್ಕೂ ಈ ರೀತಿ ಓಡಿ ಹೋಗುವುದಕ್ಕೂ ಈ ಬೆತ್ತಲೆ ಪಯಣಕ್ಕೂ ಏನು ಸಂಬಂಧ ಮತ್ತು ಇದನ್ನೆಲ್ಲಾ ಯಾರು ಏತಕ್ಕಾಗಿ ಸೃಷ್ಟಿಮಾಡಿದ್ದಾರೆ ಎಂದು ಕತೆಗಾರ ಮೊದಲಾಗಿ ಕೇಳಿದ್ದು ಅವನ ದೊಡ್ಡ ಅಭಿಮಾನಿಯೊಬ್ಬನಲ್ಲಿ. ಅವನೂ ಈ ಕತೆಗಾರನ ಅಥವಾ ನಿಮ್ಮ ಊರಿನವನೇ. ಈ ಕತೆಗಾರ ಬರೆದ ಎಲ್ಲಾ ಕತೆಗಳನ್ನೂ ಆದರದಿಂದ ಓದುವವನು. ಅನೇಕ ಬಾರಿ ಈ ಕತೆಗಾರನಿಗೆ ಸ್ಫೂರ್ತಿ ಬರುವಂಥ ರೀತಿಯಲ್ಲಿ ಕತೆಗಳನ್ನು ಹುಟ್ಟಿಸಿಕೊಡುವವನು.ಅವನು ಕತೆಗಾರನ ಎದುರಲ್ಲೇ ನಿಂತಿದ್ದ.


"ಕುಳಿತುಕೋ.." ಎಂದ ಕತೆಗಾರ."ನೀನು ಇದಕ್ಕೆ ನನಗೆ ಉತ್ತರ ಹೇಳಲೇಬೇಕು.."ಎಂದು ಒತ್ತಾಯಿಸಿದ.


"ಅದೆಷ್ಟು ಕತೆಗಳನ್ನು ನನ್ನಲ್ಲಿ ಹುಟ್ಟಿಸಿದವನು ನೀನು.ಈ ಹುಡುಗಿ ಯಾರು ಎಲ್ಲಿಯವಳು ಮತ್ತು ಇವಳು ಈ ಹುಡುಗನನ್ನು ಏಕೆ ಪ್ರೀತಿಸಿದಳು ಅವರು ಪ್ರೀತಿಸಿದ ನಂತರ ಏನು ಮಾಡಿದರು ಎಂದೆಲ್ಲಾ ನಾನು ಕೇಳುವುದಿಲ್ಲ. ಅಸಲಿಗೆ ಅದು ನನಗೆ ಅಗತ್ಯವೂ ಇಲ್ಲ" ಎಂದು ಕತೆಗಾರ ಹೇಳುತ್ತಿದ್ದರೆ ಅಭಿಮಾನಿ ಆಕಳಿಸುತ್ತಾ ಕುಳಿತ.


"ನಿಜಕ್ಕೂ ಹೇಳು.., ಈ ಹುಡುಗಿ ಬೆತ್ತಲೆ ನಡೆಯುತ್ತಿದ್ದಳೇ? ಅದು ನಿನಗೆ ಗೊತ್ತಾಗಿತ್ತಾ..ಅದನ್ನು ಕತೆಯಲ್ಲಿ ನಾನು ಹೇಗೆ ದಾಖಲಿಸುವುದು..?"


ಅಭಿಮಾನಿ ಮತ್ತೆ ಸ್ವಲ್ಪ ಹೊತ್ತಿನಲ್ಲಿ ಅಲ್ಲೇ ನಿದ್ರಿಸುತ್ತಾ ಗೊರಕೆ ಶುರು ಮಾಡಿದ.
+++++++++++


ಅಂದು ರಾತ್ರಿ ಕತೆಗಾರನಿಗೆ ದೊಡ್ಡ ನಿದ್ದೆ ಬಿತ್ತು. ನಿದ್ದೆಯಲ್ಲಿ ಅವನು ಬೆತ್ತಲೆ ನಡೆಯುತ್ತಾ ಹೋದ. ದೊಡ್ಡ ನದಿಯೊಂದು ತುಂಬಿ ಹರಿಯುತ್ತಿತ್ತು. ಅಲ್ಲಿ ದೋಣಿಯೊಂದು ಗೂಟಕ್ಕೆ ಕಟ್ಟಿ ಹಾಕಲಾಗಿತ್ತು. ನದಿಯಾಚೆಗೆ ಶೇಂದಿ ಅಂಗಡಿಯಲ್ಲಿ ಚಕ್ಕುಲಿ ತಿನ್ನುತ್ತಾ ದೋಣಿಗಾರ ಕುಳಿತಿದ್ದ.ಕತೆಗಾರ ಅವನನ್ನು ಕೂಗಿದ.


" ನದಿ ದಾಟಿಸು "ಎಂದು ದೊಡ್ಡ ಸ್ವರದಲ್ಲಿ ಕರೆದ.


"ಹೇಗೆ ಬರುವುದು..ನದಿ ತುಂಬಿ ಹರಿಯುತ್ತಿದೆ "ಎಂದ ದೋಣಿಗಾರ.


ಕತೆಗಾರನಿಗೆ ಅಚ್ಚರಿಯಾಯಿತು."ನಾನು ನದಿ ದಾಟಲೇ ಬೇಕು..ಓಡಿ ಹೋದವರನ್ನು ಹುಡುಕಿ ಹಿಡಿಯಬೇಕು ಅವರ ಬಗ್ಗೆ ಕತೆ ಬರೆಯಬೇಕು..ಅದು ಬೆಳಗಾಗುವುದರೊಳಗೆ ಆಗಿ ಮುಗಿಯಬೇಕು.."ಎಂದು ಗೋಳಿಟ್ಟ.


"ನದಿ ತುಂಬಿ ಹರಿಯುತ್ತಿದೆ.ತುಂಬಾ ಸೆಳೆತವೂ ಇದೆ" ಎಂದ ದೋಣಿಗಾರ.


"ಹಾಗಾದರೆ ಆ ಹುಡುಗಿ ಎಲ್ಲಿದ್ದಾಳೆ ಗೊತ್ತುಮಾಡು" ಎಂದ ಕತೆಗಾರ. ಆದರೆ ಆಗ ದೊಡ್ಡ ದೊಡ್ಡ ಹನಿಗಳ ಶಬ್ದದಿಂದ ಆ ಮಾತು ನದಿ ದಾಟಲಿಲ್ಲ. ಅತ್ತ ಆ ದಡದಲ್ಲಿ ಆ ದೋಣಿಗಾರ ಮಳೆ ರಭಸಕ್ಕೆ ಶೇಂದಿ ಅಂಗಡಿ ಒಳಗೆ ಹೋದ.


ಕತೆಗಾರ ತುಂಬಾ ಅಸಹಾಯಕನಾಗಿ ನಿಂತಾಗ ಹಿಂದೆ ಯಾರೋ ಬಂದ ಹಾಗಾಗಿ ತಿರುಗಿದ.ಸುನೀಲ..!


"ನಾನು ನಿಮ್ಮ ಅಭಿಮಾನಿ.." ಎಂದ ಸುನೀಲ.


"ನೀವು ಸಂಜೆ ಅದೇನೋ ಕೇಳಿದರಲ್ಲ..ಆಗ ನನಗೆ ಜೋರಾಗಿ ನಿದ್ದೆ ಬಂದು ಬಿಟ್ಟಿತು.."ಎಂದ.


"ಅವಳೆಲ್ಲಿ..ಕಲ್ಪನಾ..?"ಎಂದು ಕತೆಗಾರ ಸುನೀಲನ ಭುಜ ಹಿಡಿದುಕೊಂಡ..


ಸುನೀಲ ನದಿಯಾಚೆಗೆ ಬೆರಳೆತ್ತಿದ.


ಆ ಕತ್ತಲಲ್ಲಿ ಯಾರೋ ಇತ್ತ ಕರೆಯುತ್ತಿದ್ದಂತೆ ಕಾಣುತ್ತಿತ್ತು.


"ದೋಣಿಗಾರ..ದೋಣಿಗಾರ" ಎಂದು ಕೂಗುತ್ತಿರುವುದು ಕಾಣಿಸಿತು.


"ಈ ದಡದ ಮೇಲೆ ದಿಬ್ಬದಲ್ಲಿ ಶೇಂದಿ ಅಂಗಡಿ ಇದೆ" ಎಂದ ಸುನೀಲ."ಅಲ್ಲಿ ದೋಣಿಗಾರ ಚಕ್ಕುಲಿ ತಿನ್ನುತ್ತಾ ಇದ್ದಾನೆ" ಎಂದ.


"ಸಾಧ್ಯವೇ ಇಲ್ಲ, ಅದು ಆ ದಡದಲ್ಲಿ.. "ಎಂದು ಕತೆಗಾರ ವಾದಿಸಿದ."ದೋಣಿ ಇಲ್ಲೇ ಇದೆ" ಎಂದ ಜೊತೆಜೊತೆಗೆ.


"ಕಲ್ಪನಾ ಈ ಕಡೆ ಬರಲಿ ಆಗ ಎಲ್ಲವೂ ಗೊತ್ತಾಗುತ್ತದೆ" ಎಂದು ಹೇಳಿದ ಸುನೀಲ ದೋಣಿಗಾರನನ್ನು ಕರೆದು ತರಬೇಕು ಎಂದು ದಿಬ್ಬ ಹತ್ತಿ ಹೋದ.


ಇಲ್ಲಿ ದೋಣಿ ಬಿಟ್ಟು ದೋಣಿಗಾರ ಅಲ್ಲಿಗೆ ಹೇಗೆ ಹೋದ ಎಂದು ಕತೆಗಾರ ದಿಬ್ಬದತ್ತೊಮ್ಮೆ ದಡದಾಚೆಗೊಮ್ಮೆ ಆಶ್ಚರ್ಯಚಕಿತನಾಗಿ ಇನ್ನಿಲ್ಲದಂತೆ ಹರಿಯುವ ನದಿಯ ದಢಸಿತನವನ್ನು ನೋಡುತ್ತಾ ನಿಂತ.

20080325

ಯಾರು ಎಷ್ಟು ಕರಪ್ಟು
ಬೇಜಾರು ಮಾಡ್ಕೋಬೇಡಿ,ಭಾರತಕ್ಕಿಂತಲೂ ಕರಪ್ಟು ತುಂಬಾ ಇದ್ದಾವೆ.
ನಮ್ಮದು ೭೨ನೇ ನೇ ಕರಪ್ಟು ದೇಶ.
ಒಟ್ಟು ೧೯೩ ದೇಶಗಳ ಪೈಕಿ ೧೮೦ ದೇಶಗಳ ಲೀಸ್ಟೊಂದು ಹೊರಬಿದ್ದಿದೆ. ಮಾಡಿದೋರು ಬರ್ಲಿನ್‌ನ ಅಂತರರಾಷ್ಟ್ರೀಯ ಪಾರದರ್ಶಕ ಸಂಸ್ಥೆ. ಅದೆಂಥಾ ಸಂಸ್ಥೆಯೋ ಅದು ಈ ದೇಶಗಳನ್ನೆಲ್ಲಾ ಅದು ಎಂತು ಅಳೆದೂ ಸುರಿದೂ ತೂಗಿದೆಯೋ ಕೇಳಬೇಡಿ.
ಆ ಸಂಸ್ಥೆಗೆ ಇದೇ ಕೆಲಸ,ಯಾರು ಹೆಚ್ಚು ಭ್ರಷ್ಠರು ಯಾರು ಕಡಿಮೆ ಭ್ರಷ್ಠರು ಎಂದೆಲ್ಲಾ ಸರ್ವೇ ಮಾಡೋದು.ಯಾರು ಎಷ್ಟು ಅಂತ ಲೆಕ್ಕ ಹಾಕೋದು. ಹಾಗೇ ಮಾಡಿದ ಮೇಲೆ ಈಗ ಅದು ತನ್ನ ಲೀಸ್ಟು ಹೊರ ಮಡಗಿದೆ.
ಅದರಂತೆ ಅತ್ಯಂತ ಭ್ರಷ್ಠ ದೇಶ ಸೋಮಾಲಿಯಾ ಮತ್ತು ಮೈಮ್ನಾರ್.
ಮೊದಲನೆಯದ್ದು ಆಫ್ರಿಕಾದಲ್ಲಿದೆ ಮತ್ತೊಂದು ನಮ್ಮ ಪಕ್ಕದಲ್ಲಿದೆ.
ಇಷ್ಟೊಂದು ಭ್ರಷ್ಠ ಹೇಗಾದವು ಎಂದರೆ ಅದೇ ರಾಜಕೀಯ ಕಣಪ್ಪ ರಾಜಕೀಯ.ಕಾನೂನು ಇಲ್ಲ, ಕಾಯುವವರೂ ಇಲ್ಲ.
ಮೂರನೇ ಅತಿ ದೊಡ್ಡ ಭ್ರಷ್ಠ ದೇಶ ಅಂದರೆ ಇರಾಕು.ಯಾಕಂತ ಕೇಳಬಾರದು ಎಲ್ಲರಿಗೂ ಗೊತ್ತಿದೆ.
ಅದೇ ಬಾಂಗ್ಲಾ ಅದು ನಮಗಿಂತ ತೊಂಭತ್ತು ಪಾಯಿಂಟು ಮುಂದಿದೆ. ಭ್ರಷ್ಠತೆಯಲ್ಲಿ ಅದಕ್ಕೆ ೧೬೨ನೇ ದೇಶ.
ಹಾಗಾದರೆ ಪಾಕಿಸ್ತಾನ?
ಅದು ೧೩೮ನೇ ಸ್ಥಾನಿ.ಅಂದರೆ ನಮಗಿಂತ ಅಲಮೋಸ್ಟ್ ಡಬ್ಬಲು ಕರಪ್ಟು.
ಚೀನಾ ನಮ್ಮಂತೆ. ನಮ್ಮದೇ ಸೀಟು. ನಂಬರ್ ೭೨.
ದೊಡ್ಡಣ್ಣ ಅಮೇರಿಕಾ ೨೦ನೇ ಸ್ಥಾನದಲ್ಲಿದೆ. ಅಲ್ಲಿನ ಬಿಗಿಯಾದ ಕಾನೂನು ಒಳ್ಳೇ ಕೆಲಸಗಾರರು ಮತ್ತು ನಿರುದ್ಯೋಗ ಸಮಸ್ಯೆ ಮೇಲೆ ನಿಗಾ ಮುಂತಾದ ಕಾರಣದಿಂದ ಅವರಿಗೆ ಲಂಚ ನಮ್ಮಷ್ಟು ಅಗತ್ಯವಿಲ್ಲವಂತೆ.
ಡೆನ್ಮಾರ್ಕ್ ಮತ್ತು ಫಿನ್ಲಾಂಡ್ ಜಗತ್ತಿನ ಅತೀ ಕಡಿಮೆ ಭ್ರಷ್ಠ ದೇಶಗಳು. ಅಂದರೆ ಅವೆರಡಕ್ಕೂ ಸೀಟು ನಂಬರ್ ಒಂದು. ಅಲ್ಲಿ ಭ್ರಷ್ಠಾಚಾರ ಇಲ್ಲವೇ ಇಲ್ಲ ಎಂದಲ್ಲ. ಅತ್ಯಂತ ಕಡಿಮೆ ಇದೆ ಎಂದರ್ಥ. ಕಾರಣ ಅವರ ಎಕಾನಮಿ ಚೆನ್ನಾಗಿದೆ. ಬಜೆಟ್ಟು ಉಳಿಕೆಯದ್ದಾಗಿದೆ. ಗವರ್‍ಮೆಂಟು ಸುಪರ್ರಿದೆ.ನಿರುದ್ಯೋಗ ಭಾಳಾ ಕಡಿಮೆ. ಹಣದುಬ್ಬರ ಹಿಡಿತದಲ್ಲಿದೆ.
ನ್ಯೂಜಿಲ್ಯಾಂಡು ಎರಡನೇ ಸ್ಥಾನ ಪಡೆದಿದೆ.ಸಿಂಗಾಪುರಕ್ಕೆ ನಾಲ್ಕನೇ ಸ್ಥಾನ. ಏಷ್ಯಾದಲ್ಲಿ ಅದಕ್ಕೆ ಅತ್ಯಂತ ಕಡಿಮೆ ಭ್ರಷ್ಠ ದೇಶ ಎಂಬ ಹೆಗ್ಗಳಿಕೆ. ಹಾಂಕಾಂಗ್ ೧೪, ಜಪಾನು ೧೭.
ನಾವು ಭಾರತ ದೇಶದವರು ಕರಪ್ಟ್‌ನಲ್ಲಿ ೭೨ನೇ ಸ್ಥಾನ ಪಡೆದದ್ದು ಈ ವರ್ಷ. ಹತ್ತು ವರ್ಷದಲ್ಲಿ ನಮ್ಮ ಸೀಟು ಏರಿದೆ. ನಮ್ಮಲ್ಲಿ ಭ್ರಷ್ಠಾಚಾರ ಇಳಿಮುಖವಾಗಿದೆ. ಕಾರಣ ಮಾಹಿತಿ ಹಕ್ಕು ಕಾಯಿದೆ.
ಇದನ್ನೆಲ್ಲಾ ಆ ಸಂಸ್ಥೆ ಹೇಳಿದೆ.
ಏನೇ ಆಗಲಿ ನಮಗಿಂತ ನೂರೆಂಟು ದೇಶಗಳು ಇನ್ನೂ ಭ್ರಷ್ಠವಾಗಿವೆಯಲ್ಲ, ನಾವು ಬಚಾವು.

ಹೆಚ್ಚಿನ ವಿವರಗಳಿಗೆ ನೋಡಿ..www.soxfirst.com

20080324

ಮಿಂಚಂತೆ ನೀರು ಬರಲು..ಮಾರ್ಚಲ್ಲೇ ಮಳೆಗಾಲ..
ಇದೇನಿದು ಮಾಯದಂಥ ಮಳೆ! ಎಲ್ಲ ಲೆಕ್ಕಾಚಾರಗಳನ್ನು ಮೀರಿಸಿ ಇದು ಈ ರೀತಿ ಬಿಸಿಲಿನ ಸಾಮ್ರಾಜ್ಯಕ್ಕೆ ಈ ರೀತಿ ಲಗ್ಗೆ ಇಟ್ಟಿದೆ !
ನೂರಾರು ವರ್ಷಗಳ ಬಳಿಕ ಇಂಥದ್ದೊಂದು ಪ್ರಾಕೃತಿಕ ವಿಸ್ಮಯ ನಡೆದೇಬಿಟ್ಟಿದೆ.
ಮಳೆ ಮಾತ್ರಾ ಬಂತು ಎಂದು ಭಾವಿಸಿದ್ದ ಎಲ್ಲರಿಗೂ ಮಳೆಗಾಲವೂ ಜೊತೆಗೇ ಬಂದಿದೆ ಎಂದಾಗ ಅಚ್ಚರಿ ಆಶ್ಚರ್ಯ. ಹಿರಿಯರ ಮುಂದೆ ನಿಂತು ಈ ರೀತಿ ಈ ಕಾಲದ;ಲ್ಲಿ ಮಳೆಗಾಲ ಬಂದದ್ದು ನೆನಪಿದೆಯೋ ಎಂದು ಕೇಳಿ ನೋಡಿ, ನನಗೇನು, ನನ್ನ ಅಪ್ಪ ಕೂಡಾ ಹೇಳಿದ್ದು ನೆನಪಿಲ್ಲ ಎಂದು ಆ ಅಜ್ಜ ಹೇಳುತ್ತಾರೆ ತಾನೂ ಸಹಾ ಈ ಮಳೆಯ ಮಾಯಕ ಸ್ಪರ್ಶಕ್ಕೆ ಸಖೇದಾಶ್ಚರ್ಯ ಪಡುತ್ತಾ.
ಈ ಬಾರಿ ಮಳೆ ಆರಂಭವಾಗಿ ಭರ್ತಿ ಹತ್ತು ದಿನಗಳಾದವು. ಮಳೆಗಾಲ ಶುರುವಾಗಿ ಮೂರು ದಿನಗಳಾದವು. ಮೀನ ಮಾಸದಲ್ಲಿ ಮಳೆ ಬಂದರೆ ಮೀನಿಗೂ ನೀರು ಸಿಗದು ಎಂಬುವುದು ನಮ್ಮ ಜನಪದರ ಹಾಡು. ಮೀನ ತಿಂಗಳು ಎಂದರೆ ಅವ್ವಲ್ ಬಿರು ಬಿಸಿಲು ಭೂಮಿಯನ್ನು ಬಿಡದೇ ಕಾಡಬೇಕು. ಬಿಸಿಲಿನ ತಾಪಕ್ಕೆ ಭುವಿ ಕಾದು ಕೆಂಪಾಗಬೇಕು. ಎಲ್ಲ ದಿಕ್ಕುಗಳೂ ಕಿಚ್ಚು ಹತ್ತಿಸಿಕೊಂಡಂತೆ ಸುಡಬೇಕು. ಆಗಲೇ ಮುಂದಿನ ಮಳೆಯ ಸ್ಪರ್ಶಕ್ಕೆ ಈ ನೆಲ ಮಾಗುತ್ತದೆ.ಕಾದ ಮಣ್ಣಿನ ಮೇಲೆ ಮಳೆಯ ಅಪ್ಪುಗೆ ಜೀವ ಸಂಕುಲವನ್ನು ಸೃಷ್ಟಿಸುತ್ತದೆ ಎಂದು ಜನಪದರ ಉಲ್ಲೇಖ.
ಒಂದೊಮ್ಮೆ ಮೀನ ತಿಂಗಳಲ್ಲೇ ಮಳೆ ಬಂದರೆ ಈ ಹದವಿಕ್ಕುವ ಕ್ರಿಯೆಯೇ ಇಲ್ಲ.ಎಂಬುದು ಜನಪದದ ಉಲ್ಲೇಖ.
ಆದರೆ ಆಧುನಿಕ ಲೋಕದ ವ್ಯವಹಾರಗಳು ಏನು ಆಗಬಾರದೋ ಅದನ್ನು ಆಗಿಸುವಂತೆ ಈಗ ಮಳೆಗಾಲವನ್ನೂ ಬರಮಾಡಿಕೊಂಡಿದೆ. ಜಾಗತಿಕ ತಾಪಮಾನದ ಪರಿಣಾಮ ಈ ನೆಲ ಲೆಕ್ಕಕ್ಕಿಂತಲೂ ಹೆಚ್ಚು ಕಾದು ಕೊತಕೊತನೆ ಕುದಿಯುತ್ತಿದ್ದರೆ, ಅಲ್ಲೆಲ್ಲೋ ಸಮುದ್ರದಾಚೆ ಇನ್ನೆಲ್ಲಿಗೋ ಎದ್ದು ಹೊರಟ ಮಳೇ ಮಾರುತ ಇಲ್ಲಿ ಬಂದು ಸುರುವಿದೆ. ಕಷ್ಟದಲ್ಲಿದ್ದ ಗೆಳತಿಯ ಬಳಿ ಸಾಂತ್ವನ ಹೇಳಲು ಗೆಳೆಯ ಬಂದಿಳಿದ ಹಾಗೇ.
ವಿಜ್ಞಾನ ಇದೆಲ್ಲಾ ವಾಯುಭಾರ ಕುಸಿತದ ಪರಿಣಾಮ ಎಂದು ಹೇಳುತ್ತದೆ. ಆದರೆ ಇಂಥದ್ದೊಂದು ಭಾರದ ಕುಸಿತ ಅದು ಏಕೆ ಈ ನೂರಾರು ವರ್ಷಗಳಲ್ಲಿ ಈ ಕಾಲದಲ್ಲಿ ಆಗಿಲ್ಲ, ಅದು ಏಕೆ ಈಗ ಹೀಗಾಗಿದೆ ಎಂದು ಕೇಳಿದರೆ ವಿಜ್ಞಾನಿಯ ಬಳಿಯೂ ಉತ್ತರವಿಲ್ಲ.
ಪಂಚಾಂಗ ಶಾಸ್ತ್ರಗಳ ಪ್ರಕಾರ ಇದು ಶುಕ್ರನ ಕೆಲಸ. ಶುಕ್ರ ಈ ಬಾರಿ ಮಳೆಯ ಕ್ಯಾಬಿನೆಟ್ಟು ವಹಿಸಿಕೊಂಡಿದ್ದಾನೆ. ಅತಿ ಸುಭಿಕ್ಷದ ಆವನ ಆತುರಕ್ಕೆ ಮಳೆಯ ಕೊಡುಗೆ ನಿರೀಕ್ಷೆಗೂ ಮೊದಲೇ ಕೊಡಲ್ಪಟ್ಟಿದೆ.ಈ ಶುಕ್ರ ಮೋಡಗಳಿಗೂ ಈ ಬಾರಿ ಅಧಿಪತಿಯಂತೆ. ಮೋಡ ಮಳೆ ಎರಡರಲ್ಲೂ ಅವನ ಹಿಡಿತ. ಮಾತ್ರವಲ್ಲ, ನೀಲವೆಂಬ ಮೋಡ ಈ ಬಾರಿ ಈ ಭೂಮಿಗೆ ಮೂರು ಕೊಳಗ ನೀರನ್ನು ಹರಿಸುವುದು ಇದೆಯಂತೆ. ಆದ್ದರಿಂದ ಈ ನೀಲ ಮೋಡದ ಅಧಿಕಾರಾವಧಿ ಹಾಗೂ ಈ ಶುಕ್ರನ ಆಡಳಿತ ಕೊನೆಯಾಗುತ್ತಿರುವ ಈ ಘಳಿಗೆಯಲ್ಲಿ ಇಂಥಾ ಮಳೆ ಬಂದಿದೆಯಂತೆ ಎಂದು ಪಂಚಾಂಗದ ಉಲ್ಲೇಖ.

ಅಕಾಲಿಕವಾಗಿ ಸುರಿಯುತ್ತಿರುವ ಈ ಮಳೆಗಾಲದಿಂದ ಯಾರಿಗೆ ಹಾನಿ ಮತ್ತು ಯಾವುದಕ್ಕೆ ಹಾನಿ ಎಂದು ಯಾರೂ ಹೇಳಲಾರರು. ಏಕೆಂದರೆ ಇಂಥಾ ಮಳೆಗಾಲ ಯಾರಿಗೂ ಗೊತ್ತಿಲ್ಲ. ಏನಿದ್ದರೂ ಈ ಮಳೆಗಾಲದ ಗುಣಾವಗುಣಗಳು ಇನ್ನಷ್ಟೇ ವ್ಯಕ್ತವಾಗಬೇಕು.
ಮಳೆಯೇ ನೀನು ಅದು ಏಕೆ ಈ ಹೊತ್ತಲ್ಲದ ಹೊತ್ತಲ್ಲಿ ಬರುತ್ತಿರುವೆ? ಬಿಸಿಲನ್ನು ಈ ರೀತಿ ನೋಯಿಸುತ್ತಿರುವೇ? ನಿನ್ನನ್ನು ಭುವಿ ಕರೆದಿಲ್ಲ. ಈಗ ಅವಳ ಕೂಟ ಬಿಸಿಲೆಂಬ ಮೋಡಿಗಾರನ ಜೊತೆಗೆ. ಕರೆಯದೇ ಬರಬಾರದು ಚಿನ್ನಾ...

20080321

ನಾಲ್ಕು ಸಾಲು-೪೦


೧.


ಬೆಟ್ಟದಿಂದ
ಇಳಿದು ಬಂದ ಪ್ರೇಮಿಗಳು
ಬೆಟ್ಟದಷ್ಟೆತ್ತರ ನಮ್ಮ ಪ್ರೀತಿ
ಎಂದು ನಲಿದರು
ಆಕಾಶದ ಆಹ್ವಾನಕ್ಕೆ ವಿರಹ ಕಾದಿತ್ತು.೨.


ಕಾಡುಗಳ
ನಡುವೆ ಅವನಪ್ಪುಗೆಯಲ್ಲಿ
ಹೂವಾದ ಹುಡುಗಿ
ಬಿಸಿಯುಸಿರ ಬಿಟ್ಟು ಹಗುರವಾದಳು
ಮರಗಳೆಲ್ಲಾ ಅದನ್ನು ಆಹಾರ ಮಾಡಿಕೊಂಡವು.೩.


ಕಣಿವೆಯ
ತುಂಬೆಲ್ಲಾ ಆ ಪ್ರೇಮಿಗಳ
ಕಾತರ ಹರಿದಿತ್ತು
ನಾಳೆಗೆ ಕಾದದ್ದು
ಹರಿವ ತೊರೆ.೪.


ಹುಲ್ಲು ಹಾಸಿನ
ಮೇಲೆ
ಅವರಿಬ್ಬರು
ಕುಳಿತು ಮಾತಾಡಿದರು
ಅದನ್ನು ನೋಡಿದ ಒಂಟಿ ಹಕ್ಕಿ
ಎಲೆಗಳ ಮೇಲೆ
ಎಗರಾಡಿತು.

20080319

ನಾವಿಕನಿಗೂ ನಕ್ಷತ್ರಗಳ ಚೆಲುವೇ???ಋಷಿ ಮುನಿಗಳೆಲ್ಲಾ ವರ್ಷಗಟ್ಟಲೆ ತಪಸ್ಸಿಗೆ ಕುಳಿತು ಹುತ್ತಕಟ್ಟಸಿಕೊಂಡು ಪುರುಷೋತ್ತಮನ ಆ ಅಂಥ ರೂಪು ರೇಖೆಗಳನ್ನು ಕೆತ್ತಿಸಿಕೊಂಡಾಗ ಅವರಿಗೆ ಒಂದು ಅರೆ ಕ್ಷಣವೂ ಎಂಥಾ ಬೋರು ಇದು ಎಂದು ಅನಿಸಿಯೇ ಇರಲಿಲ್ಲವೇ?
ಏನು ತಪಸ್ಸು ಇದು ಬರೀ ರುಟೀನು ಎಂದು ಏಕೆ ಆ ನಿರ್ಮಾನುಷ ಜಗತ್ತಿನಿಂದ ಎದ್ದು ಬರಲಿಲ್ಲ?
ಎರೋಪ್ಲೇನು ಹಾರಿಸುತ್ತಾ ಆಲ್ಫಾಸ್ ಪರ್ವತ ಶ್ರೇಣಿಗಳ ಮೇಲೆ ಅದೇ ಹತ್ತಿಯಂಥ ಥಳುಕನ್ನು ನೋಡುತ್ತಾ ಗರ್ಕನಾಗುವ ಪೈಲಟ್ಟನಿಗೆ ಏನು ಈ ಹಾರಾಟ ಬರೀ ರುಟೀನು ಏನಾದರೂ ಛೇಂಜು ಬೇಕು ಎಂದು ಅನಿಸಲ್ವಾ?
ಬೆಳಗಾತ ಎದ್ದು ಹಾಲಿನ ಪಕೀಟುಗಳನ್ನು ಗುಪ್ಪೆ ಹಾಕಿಕೊಂಡು ಸೈಕಲ್ ಹತ್ತಿ ಮನೆ ಮನೆಗಳ ಕದ ತಟ್ಟಿ ಸ್ಯಾಚೆಟ್ಟುಗಳನ್ನು ಎಸೆದು ಹೋಗುವ ಹುಡುಗನಿಗೆ ಎಷ್ಟೂಂತ ಈ ಜನ್ಮ ಎಂದು ಮನಸಿಗೆ ಆಗಿ ಬಿಟ್ಟು ರುಟೀನು ಅಂತನಿಸುತ್ತದಾ?
ಪ್ರತೀ ನಿತ್ಯ ಅಷ್ಟೊಂದು ವ್ಯವಹಾರ ವಹಿವಾಟು ಮಾಡಿ ಹಣ ತುಂಬಿಸಿಕೊಂಡ ಮೇಲೆ ಅದೊಂದು ದಿನ ಆ ಶ್ರೀಮಂತನಿಗೆ ಏಕಿದು ಈ ಉಸಾಬರಿ ಸಾಕು ಏನಾದರೂ ಬೇರೆ ಬೇಕು ಅಂತಾಗಿಬಿಡಲ್ವಾ?
ಆರಂಭದಲ್ಲಿ ಹುಟ್ಟಿಕೊಳ್ಳುವ ಆ ಹುಕ್ಕಿ ಆ ಚೈತನ್ಯ ಆ ಉತ್ಸಾಹ ಆಮೇಲೆ ಅದು ಎಲ್ಲಿಗೆ ಕರಗಿ ಹೋಗುತ್ತದೆ? ಅದೇಕೆ ಹೊರಟುಹೋಗುತ್ತದೆ?
ಮಳೆ ನಿಂತ ಅಂಗಳದ ಹಾಗೇ?
ರುಟೀನು ಅಥವಾ ಬೇಜಾರು ಅಥವಾ ಮಾಮೂಲಿ ಅಥವಾ ಬೋರು ಎಂದೆಲ್ಲಾ ಅನಿಸುವುದು ಮಾನವ ಧರ್ಮವೋ ಅಥವಾ ಮನಸ್ಥಿತಿಯೋ?
ದೇವಸ್ಥಾನಕ್ಕೆ ಮೊದಲ ಬಾರಿಗೆ ಹೋದಾಗ ನಮಗೆ ಅದೇನು ದೇವರ ಮೇಲೆ ಪ್ರೀತಿ,ಅದೇನು ವಿಶ್ವಾಸ. ಆದರೆ ಹತ್ತನೇ ಬಾರಿಗೆ ಹೋದಾಗ ಆ ದೇವರ ಮೇಲೆ ಕೂಡಾ ಯಾಕೋ ಬೇಜಾರು ಬಂದು ಬಿಡದಿದ್ದರೆ ದೇವರಾಣೆ.
ನಮ್ಮದೇ ಹೀಗಾದರೆ ಇನ್ನು ದೇವರ ಪೂಜಾರಿಗೆ? ಅವನಿಗೆ ಪೂಜೆ ಎಂದೋ ಸಂಬಳದ ಕೆಲಸವಷ್ಟೇ.ದೇವರೂ ದೇವಾಲಯವೂ ಅವನಿಗೆ ಯಾವತ್ತೋ ರುಟೀನು ಆಗಿವೆ. ಅದೇ ಗಂಟೆ ಅದೇ ಆರತಿ ಅದೇ ಪೂಜೆ ಅದೇ ಮೂರ್ತಿ..
ಪ್ರೀತಿ ಕೂಡಾ ಹೀಗೆ ಮಾಮೂಲಿಯಾಗಿಬಿಡಬಹುದಾ?
ಯಾಕಿಲ್ಲ?
ಅಮರ ಪ್ರೇಮಿಗಳು ಎಂದು ಯಾರೂ ಇಲ್ಲ. ಇದ್ದರೆ ಅದು ಕಥೆಗಳಲ್ಲಿ ಮಾತ್ರಾ. ಪ್ರೀತಿಯಲ್ಲಿ ಎಲ್ಲಾ ಸಿಕ್ಕುವ ತನಕ ಮಾತ್ರಾ ಅದರ ಅದ್ಭುತ ಶೋಧ ನಡೆಯುತ್ತದೆ. ಎಲ್ಲವೂ ದಕ್ಕಿದ ಮೇಲೆ ಪ್ರೇಮಿಗಳಿಬ್ಬರಿಗೂ ಇದೂ ಕೂಡಾ ಮಾಮೂಲಿ ಅಂತಾಗಿಬಿಡುತ್ತದೆ. ಮೊದಲ ಟಚ್‌ನ ಅದಮ್ಯ ಲಹರಿ ಎರಡನೆಯದರಲ್ಲಿ ಇರಲು ಎಂದಾರೂ ಸಾಧ್ಯವೇ?ಮೊದಲ ಕುಡಿನೋಟ ಮುಂದೆಂದೂ ಸಿಗಲು ಸಾಧ್ಯವೇ?
ಇದು ಕತೆಗಾರನ ಅಥವಾ ಕವಿಯ ಕಷ್ಟವೂ ಹೌದು.ಒಂದು ಸ್ಥಿತಿ ಎಂಬುದನ್ನು ದಾಟಿದ ಮೇಲೆ ಅಲ್ಟಿಮೇಟಲ್ಲಿ ಏನು ಉಳಿಯಿತು ಎಂದು ಆಗಿಬಿಡುತ್ತದೆ.
ರಣರಂಗದ ಯೋಧನಿಗೂ ಇದುವೇ ಆಗುವುದು.ಯಾರಿಗೆ ಈ ಯುದ್ದ ಎಂದು ಕೇಳಿದವನು ಅರ್ಜುನ.
ಕಲಾವಿದರ ಸಂಕಷ್ಟವೂ ಹೀಗೆಯೇ. ನಟಿಯೊಬ್ಬಳಿಗೆ ಈ ನಟನೆ ಈ ಹಾಡು ಈ ಕುಣಿತ ಈ ಗ್ಲಾಮರ್ರು ಎಲ್ಲಾ ಬೇಜಾರು ಬರಿಸಲೇಬೇಕು ಒಂದು ದಿನ ಅಥವಾ ಒಂದು ಕ್ಷಣವಾದರೂ..
ಈ ರೂಟೀನನ್ನು ಈ ಮಾಮೂಲಿತನವನ್ನು ಈ ಬೇಜಾರನ್ನು ದೂಡಿ ಪಾರಾಗುವುದು ಇದೆಯಲ್ಲಾ ಅದು ಅದು ಮುಖ್ಯ.ಅದೇ ಸಂಜೆ ಅದೇಕಾಂತವನ್ನು ದಾಟುವುದು ಅಗತ್ಯ.
ಸುಖೀ ಸಂಸಾರಿಗೆ ಅವನ ಹೆಂಡತಿ ಮಕ್ಕಳು ರೂಟೀನ್ ಆಗಲೇಬೇಕು. ಇಲ್ಲದಿದ್ದರೆ ಅವನು ಸಂಸಾರಿಯಲ್ಲ.ಸಂಸಾರದಲ್ಲಿ ನಿಸ್ಸಾರವನ್ನು ಕಾಣದಿದ್ದವನು ವ್ಯಾಮೋಹಿ.
ಮೋಹ ಮತ್ತು ಮಾಯೆಗಳಿಂದ ಪಾರಾಗಲು ಇಂಥದ್ದೊಂದು ಜಾಡ್ಯ ಅಗತ್ಯ. ಹಾಗೊಂದು ಜಾಡ್ಯ ಬಾರದೇ ಇದ್ದರೆ ಕೆಲಸಗಾರ ತನ್ನ ಕಂಪನಿಗೆ ಅತ್ಯಂತ ಅಪಾಯಕಾರಿಯಾಗಬಲ್ಲ. ಕಥೆಗಾರ ಸೃಜನಶೀಲವಾದುದನ್ನು ಹುಟ್ಟಿಸಲಾರ.
ಹಿಮಾಲಯದ ಪ್ರದೇಶಗಳಲ್ಲಿ ಓಡಾಡಿದ ಗೆಳೆಯ ವಿನಾಯಕ ನಾಯಕ್ ಹೇಳುತ್ತಿದ್ದ. ನಮಗೆ ಹಿಮಾಲಯ ಎಷ್ಟೊಂದು ಬೆರಗು ಮೂಡಿಸುತ್ತದೆ..ಅಬ್ಬಾ ಅನಿಸುತ್ತದೆ. ನಮ್ಮನ್ನು ಆ ಗಿರಿಕಂದರಗಳಲ್ಲಿ ಕರೆದೊಯ್ಯುವ ಬಸ್ಸಿನ ಡ್ರೈವರು ನಾವೆಲ್ಲಾ ಕಣಿವೆಯ ಕೆಳಗೆ ಕಣ್ಣಾಯಿಸಿ ಉಚ್ಚೆಬಂದವರಂತೆ ಆಗಿಬಿಟ್ಟಿದ್ದರೆ ಆತ ಬೀಡಿ ಸೇದುತ್ತಾ ಗಡ್ಡ ಕೆರೆದುಕೊಳ್ತಾನೆ.ಟ್ರೆಕ್ಕಿಂಗು ದಾರಿಯಲ್ಲಿ ನೀರ್ಗಲ್ಲು ಬಿದ್ದು ಪ್ರಪಾತದಲ್ಲಿ ಹಳ್ಳಿಯ ಹತ್ತು ಮಂದಿ ಸತ್ತಿದ್ದರು ಅಂತ ಗೊತ್ತಾಗಿ ಸಾಂತ್ವನ ಹೇಳು ಹೊರಟರೆ ಛೋಡ್ದೋ ಅಂತ ಆ ಮುದುಕ ಪೈಪ್ ಸೇದುತ್ತಾ ಕುಳಿತ್ತಿದ್ದ,ಸಾವನ್ನು ತೊಡೆತಟ್ಟಿ ಕರೆಯುತ್ತಿದ್ದ ಹಾಗೇ. ದಟ್ಟ ಅಡವಿಯ ಸೌಂದರ್ಯ ಕಾಡಿನ ಮಂದಿಗೆ ನೋ ಯೂಸ್. ಅವರಿಗೆ ಅವರ ಮುತ್ತಾತನ ಕಾಲದಿಂದಲೇ ಅದು ಮಾಮೂಲಾಗಿಬಿಟ್ಟಿದೆ. ಸಮುದ್ರ ಕಿನಾರೆಯ ಗುಡಿಸಲಿನಲ್ಲಿರುವ ಮಗುವಿಗೆ ಸಮುದ್ರ ಎಂದೂ ಸೋಜಿಗ ಮೂಡಿಸುವುದಿಲ್ಲ.
ನಾವಿಕನಿಗೆ ನಕ್ಷತ್ರಗಳ ಚೆಲುವು ಅಗತ್ಯವಿಲ್ಲ.
ಜಂಜಡ, ಬೋರುಡಮ್ಮು, ಕೊನೆಗೂ ನಮ್ಮನ್ನು ನಾವು ದಾಟುವ ಸ್ಥಿತಿ.ಅದೇ ಹತ್ತಿ ಅದೇ ಹಾಡು ನಮ್ಮ ಎಲ್ಲಾ ನಿರ್ಮೋಹತೆಗೆ ನಾಂದಿ.
ಹೊರಳಿಕೊಂಡರೆ ಪ್ರಪಾತ.

20080316

ನಾಲ್ಕು ಸಾಲು-೩೯


೧.
ನಿತ್ಯ ಮುಂಜಾನೆ
ಹಕ್ಕಿಯ ಕಲರವದಲ್ಲಿ
ನಿನ್ನ
ಸಂತೋಷಕ್ಕಿಂತ
ಅದರ
ಪಾಡಿದೆ.
೨.
ಹಕ್ಕಿ
ಬಿಟ್ಟುಹೋದ
ಗೂಡಿನಲ್ಲಿ
ಒಂದು ಚಿಟಿಕೆ ಪ್ರೀತಿ
ಸಿಕ್ಕರೆ ನೀನು
ಸುಖಿ ಸಂಸಾರಿ.
೩.
ಹಕ್ಕಿಯ
ಕಾವಲು
ಮತ್ತು
ಮರಿಗಳ ಕಾತರಗಳ
ನಡುವೆ
ಕಾಲ ದೇಶಗಳೆಲ್ಲಾ
ನಿಂತು ಚಲಿಸುವುದು.
೪.
ಹೆತ್ತು ಸಲಹುವುದಕ್ಕೆ
ಮಾತ್ರಾ
ಮನೆ ಕಟ್ಟುವ
ಹಕ್ಕಿ
ಮನುಷ್ಯನ
ವಾಸ್ತವ್ಯವನ್ನು ಅಣಕಿಸುವುದು.

20080307

ನಾಲ್ಕು ಸಾಲು-೩೮


೧.
ಅವಳ ಪ್ರೀತಿಗೆ ಅವನು
ಹೂವು ಕಿತ್ತು ಕೊಟ್ಟ.
ಗಿಡ ಹೇಳಿತು,
ನನ್ನ ಪ್ರೀತಿ
ಕೇಳಿದೆಯಾ?
ಅದು ಅವರಿಬ್ಬರಿಗೂ ಕೇಳಲಿಲ್ಲ.
೨.
ಕಳೆದ ರಾತ್ರಿಯಲ್ಲೂ
ಆ ನಕ್ಷತ್ರಗಳೆಲ್ಲಾ
ಹೀಗೆಯೇ
ಬಾನು ತುಂಬಾ ಮಿನುಗಿದ್ದವು
ಆದರೆ
ಇಂದು ರಾತ್ರಿ ಮಾತ್ರಾ
ನಿನಗೆ ಅವುಗಳು ಕಂಡಿವೆ ಎಂದರೆ
ನಾಳೆಯನ್ನು ನೀನು ಕಳೆದುಕೊಂಡಿರುವೆ.
೩.
ಹುಣ್ಣಿಮೆಯ ಚಂದಿರ
ತನ್ನ
ತುಂಬು ಚೆಲವು ತೋರುತ್ತಾ
ಎಂದಿಗಿಂತಲೂ
ಹೆಚ್ಚು
ಬಾನಲ್ಲಿ ಸಾಗುವನು.
೪.
ನದಿಗಳೆಲ್ಲಾ
ಕಡಲನ್ನೇಕೆ ಸೇರುತ್ತವೆ
ಎಂದರೆ
ಹೃದಯದಲ್ಲಿ
ಪ್ರೀತಿ ಮತ್ತು ವಿರಹ
ಸೇರಿಕೊಂಡ ಪ್ರೇಮಿ
ಉತ್ತರಿಸಲಾರ.

20080305

ನಾಲ್ಕು ಸಾಲು-೩೭


೧.


ಅವನ ಸಾನ್ನಿಧ್ಯ

ಬಯಸುವ

ಹುಡುಗಿಗೆ

ಸಂಜೆ ಸೂರ್ಯ ಕೂಡಾ

ದಿಗಿಲು ಹುಟ್ಟಿಸುವನು

೨.


ಕೇಳದೇ ಇದ್ದ

ಹಾಡಿನಲ್ಲಿ

ಎಲ್ಲ ಲಯ ತಾಳ ಸಾಹಿತ್ಯಗಳನ್ನು

ಮರೆತು

ತನ್ನನ್ನು ಹುಡುಕುವವಳು

ನಿಜವಾಗಿಯೂ ಪ್ರೀತಿಯ ಅರಸಿ.


೩.


ಚಂದಿರನ ಸುತ್ತೆಲ್ಲಾ

ನಕ್ಷತ್ರಗಳನ್ನು ಕಂಡ

ಹುಡುಗಿ

ಅಲ್ಲೊಂದು ಮನೆಯ

ಕಾಣುವೆನೆಂದರೆ

ಅವಳು ನಿನ್ನ ಪ್ರೀತಿಸಿದಳೆಂದು

ತಿಳಿದುಕೋ


೪.


ಎಷ್ಟೊಂದು ಹುಡುಗಿಯರು

ಪ್ರತಿ ನಿತ್ಯವೂ

ಪ್ರೀತಿಯ ಹುಡುಕಾಟಕ್ಕೆ

ಸಿದ್ಧರಾಗುವರು

ಎಂದು ಲೆಕ್ಕಿಸಿ ಅಚ್ಚರಿಗೊಂಡವನು

ದೊಡ್ಡ ಪ್ರೇಮಿ.