20080229

ಇದು ಜೀವ ವಿರೋಧಿ ಅಲ್ವಾ??


ಎಲ್ಲರನ್ನೂ ಪ್ರೀತಿಸಿದರೆ ಏನು ತಪ್ಪು?

ಅದು ಯಾಕೆ ಒಬ್ಬ ಇನ್ನೊಬ್ಬಳನ್ನು ಮಾತ್ರಾ ಅಥವಾ ಅವಳು ಅವನನ್ನು ಮಾತ್ರಾ ಪ್ರೀತಿಸಬೇಕು?ಅವಳಿಗಾಗಿ ಇವನು ಆ ಬೆಟ್ಟದಿಂದ ಆ ಕೆಂಪು ಹೂವು ತಂದೊಪ್ಪಿಸಬೇಕು? ಅವನಿಗಾಗಿ ಅವಳೇಕೆ ಅಷ್ಟೊಂದು ಕಾಯಬೇಕು?

ಒಬ್ಬನನ್ನೇ ಅಥವಾ ಒಬ್ಬಳನ್ನೇ ಪ್ರೀತಿಸುವುದು ಜೀವ ವಿರೋಧಿ ಅಲ್ಲವೇ?

ಇಡೀ ಜಗತ್ತನ್ನು ಪ್ರೀತಿಸು ಎಂದು ನಮ್ಮ ಎಲ್ಲಾ ಪ್ರವಾದಿಗಳೂ, ಶಾಸ್ತ್ರಗಳೂ, ಹಿಂದೆ ಆಗಿ ಹೋದವರು, ಬಂದು ಉಳಿದವರು, ಬರೆದವರು, ಕೊರೆದವರು.. ಎಲ್ಲರೂ ಹೇಳಿದ್ದಾರೆ.

ಅಂದ ಮೇಲೆ ಅದು ಯಾವುದೋ ಆ ಪ್ರೀತಿ ಪ್ರೇಮ ಎಂಬ ಹೆಸರು ಹಾಕಿ ನಾವು ಒಬ್ಬಳನ್ನೇ ಅಥವಾ ಒಬ್ಬನನ್ನೇ ಪ್ರೀತಿಸುವುದು ಸರಿ ಆಗುವುದು ಹೇಗೆ?

ಪ್ರೀತಿ ಎನ್ನುವುದು ನಮ್ಮ ಹೃದಯಕ್ಕೆ ಸಂಬಂಧಿಸಿದ್ದು. ಅದು ತೀರಾ ಖಾಸಗಿ. ಅದನ್ನು ಜಾಹೀರು ಮಾಡುವುದು ಸರಿಯಲ್ಲ. ಅದು ಇಂತಿಂಥವನಿಗೇ ಸಲ್ಲಬೇಕು ಎಂದು ತೀರ್ಮಾನಿಸುವುದು ಕೂಡಾ ನಮ್ಮ ಹೃದಯವೇ ಹೊರತು ಮನಸ್ಸಿಗೂ ಆ ನಿರ್ಧಾರದಲ್ಲಿ ತೀರಾ ಯಾವ ಅವಕಾಶವೂ ಇರುವುದಿಲ್ಲ.

ಅಂದ ಮೇಲೆ ಇನ್ಯಾರೋ ನೀನು ಹೀಗೀಗೆ ಪ್ರೀತಿಸಬೇಕು ಎಂದು ಹೇಳಲಿಕ್ಕಾಗುತ್ತದಾ?

ಅದುವೇ ಈಗಿನ ಸಮಸ್ಯೆ.

ಹುಡುಗಿ ಹೇಳುತ್ತಾಳೆ, ನೀನೇ ನನ್ನ ಜೀವ,ನಿನ್ನನ್ನು ಬಿಟ್ಟು ಇನ್ಯಾರನ್ನೂ ಊಹಿಸಲೂ ನನಗೆ ಸಾಧ್ಯವಿಲ್ಲ. ನೀನು ಇಲ್ಲದ ನನ್ನ ಎದೆ ಖಾಲಿ ಕೋಣೆ,ಮನಸು ಬಂಜರು ಭೂಮಿ..

ಕೇಳುವುದಕ್ಕೆ ಚೆನ್ನಾಗಿರುತ್ತದೆ.ಎಷ್ಟೊಂದು ಸಿನಿಮಾಗಳು ಬದುಕಿ ಉಳಿದ್ದೇ ಇಂಥಾ ಕತೆಗಳಿಂದ.

ಕಾದಂಬರಿ ಧಾರಾವಾಹಿ ಎಲ್ಲಾ ಇದುವೇ.

ತಪ್ಪಲ್ಲವೇ ?ಪ್ರೀತಿ ಎನ್ನವುದು ಅಷ್ಟೊಂದು ಸೀಮಿತ ವಿಚಾರವಾ?

ಅದು ಒಂದು ಜೀವದಿಂದ ಇನ್ನೊಂದು ಜೀವಕ್ಕೆ ಸೇತುವೆ ಹಾಕುವಲ್ಲಿಗೆ ಮುಗಿಯುವ ಸಂಗತಿಯಾ..?

ಅದು ಕೇವಲ ಒಂದು ನದಿಯೇ ಮಾತ್ರವಾ..?

ಅದೇಕೆ ಅಲ್ಲ ಒಂದು ಕಡಲು..?

ಎಲ್ಲರನ್ನೂ ತುಂಬಿಕೊಳ್ಳುವ ಸಾಗರ ಯಾಕಾಗದು ಅದು..?

ಗಂಡ ಎಂದರೆ ಹೆಂಡತಿಯನ್ನು ಪ್ರೀತಿಸುವವನು ಮತ್ತು ಅವಳ ಜೊತೆ ಪ್ರೀತಿಯ ಪ್ರೀತ್ಯರ್ಥವಾಗಿ ಕಾಮವನ್ನು ಹಂಚಿಕೊಳ್ಳುವವನು.

ಹೆಂಡತಿ ಎಂದರೆ ಗಂಡನವಳು.

ಅಲ್ಲಿಗೆ ಮುಗಿಯಿತಾ..?

ಜೀವಕ್ಕೆ ಮತ್ತೊಂದು ತುಡಿತ ಏಕೆ ತಪ್ಪು?

ಹೋಗಲಿ ಇದೆಲ್ಲಾ ಸಾಮಾಜಿಕ ಕಟ್ಟುಪಾಡುಗಳು. ಹೀಗೀಗೆ ಇರಬೇಕು ಎಂದು ನಿರ್ಧರಿಸಿದ್ದು. ಇದನ್ನು ಮೀರಲು ಹೊರಟರೆ ಆಮೇಲೆ ಯಾವುದೂ ಉಳಿಯುವುದಿಲ್ಲ, ಎಲ್ಲಾ ಕೆಟ್ಟುಹೋಗುತ್ತದೆ ಆದ್ದರಿಂದ ಇದನ್ನೆಲ್ಲಾ ಪ್ರಶ್ನಿಸಬಾರದು ಎಂದು ನೀವು ಹೇಳಿದರೆ ನಾನೂ ಅದನ್ನು ಒಪ್ಪುವುದೇ.

ಯಾರಿಗೆ ತಾನೇ ತನ್ನ ಹೆಂಡತಿ ಇನ್ನೊಬ್ಬನನ್ನು ಪ್ರೀತಿಸುತ್ತಾಳೆ ಎಂದರೆ ಸಹಿಸೋದಕ್ಕೆ ಆಗುತ್ತದೆ? ಯಾವ ಹೆಣ್ಣಿಗೆ ತಾನೇ ತನ್ನ ಗಂಡ ಇನ್ನೊಬ್ಬನಲ್ಲಿ ಅನುರಕ್ತಳಾಗಿದ್ದಾನೆ ಎಂದು ಭಾವಿಸುವುದಕ್ಕೆ ಆಗುತ್ತದೆ.

ನನ್ನವನು ನನ್ನವಳು...ಎಲ್ಲಾ ಸರಿ.

ಪ್ರೀತಿ ಎಂದರೆ ಹಾಗಾದರೆ ಎರಡು ಹೃದಯಗಳ ಅಥವಾ ಎರಡು ಜೀವಗಳ ಅಥವಾ ಎರಡು ದೇಹಗಳ ವಿಚಾರ..ಎಂದಾಯಿತು.

ಕೋಟಿ ಕೋಟಿ ಜನರ ನಡುವೆ ಒಂದು ಜೀವ ಇನ್ನೊಂದನ್ನು ಮಾತ್ರಾ ಪ್ರೀತಿಸಲು ಸಾಧ್ಯ..

ಮತ್ತೊಂದು ಜೀವದ ಬಳಿ ಸಾಗಲೂ ಸಾಧ್ಯವಿಲ್ಲ.

ಹಾಗೇ ಸಾಗಿದರೆ ಅದು ಪ್ರೀತಿಯಾಗುವುದಿಲ್ಲ...

ಇಷ್ಟೊಂದು ಸಣ್ಣ ಸರ್ಕಲ್‌ಗೇ ಸೀಮಿತವಾಗಿರುವ ಪ್ರೀತಿಗೆ ಅಷ್ಟೊಂದು ಮಂಡೆಬಿಸಿ ಮಾಡಬೇಕಾ?

ಒಂದು ಜೀವ ಇನ್ನೊಂದನ್ನು ಮಾತ್ರಾ ಪ್ರೀತಿಸಲು ಮನಸ್ಸು ಮತ್ತು ಭಾವನೆ ಅವಕಾಶ ನೀಡುತ್ತದೆ. ಇನ್ನೊಂದು ಪ್ರೀತಿ ಎಂಬುದೇ ಇಲ್ಲ ಎಂದಾದರೆ ಪ್ರೀತಿ ಅಷ್ಟೂ ಸಣ್ಣ ಸಂಗತಿಯಾ?

ಇದೆಲ್ಲಾ ನನಗೆ ಗೊತ್ತಿಲ್ಲ.ಹೀಗೆ ಕೇಳುತ್ತಿದ್ದೇನೆ ಎಂದು ನೀವು ಅನ್ಯಥಾ ಭಾವಿಸಿದರೆ ನಾನು ತುಂಬಾ ಹೆಲ್ಪ್‌ಲೆಸ್ಸ್..

20080228

ಸಮಾಗಮ


"ಇಷ್ಟೊಂದು ಸುಖ ಇದೆ ಎಂದು ಗೊತ್ತೇ ಇರಲಿಲ್ಲ.ತುಂಬಾ ಖುಷಿಯಾಯುತು ಕಣೋ.ಮೊದಲ ಬಾರಿಗೆ ನೀನು ನನ್ನೊಳಗೇ ಇದ್ದ ಸೆಕ್ಸ್ ಡ್ರೈವ್ ಅನ್ನು ಚಾಲೂ ಮಾಡಿಬಿಟ್ಟೆ..ಉಫ್! ಎಂದುಬಿಟ್ಟಳು ಕಲ್ಪನಾ

ಆಶಿ ಕಣ್ಣಲ್ಲೇ ಅವಳ ಥ್ಯಾಂಕ್ಸ್‌ನ್ನು ಸ್ವೀಕರಿಸಿದ.

ಅವನನ್ನು ಅವಳು ಮತ್ತೊಮ್ಮೆ ಇಡಿಯಾಗಿ ಅಪ್ಪಿಕೊಂಡಳು.ಅವನ ಮೂಗಿಗೆ ತನ್ನ ಮೂಗನ್ನು ಹಿತವಾಗಿ ಅಂಟಿಸಿ ಪಟಪಟ ಅಂತ ಉಜ್ಜಿದಳು.ಅವಳ ಕತ್ತನ್ನು ಬಾಯಲ್ಲಿ ತುಂಬಿಕೊಂಡ ಆಶಿ ಸುಮ್ಮನೆ ಕಚ್ಚಿದ.

ಲೋಕಕ್ಕೆ ಲೋಕವೇ ಬೆಚ್ಚಿಬೀಳುವಂತೆ ಅವರಿಬ್ಬರು ಆಮೇಲೆ ತುಂಬಾ ಹೊತ್ತು ಮಿಲನವಾದರು.

ಬೆಳಗಾಗುವ ಹೊತ್ತಿಗೆ ಕಲ್ಪನಾ ತೊಡೆಗಳ ನಡುವಿಂದ ಕೈಯನ್ನೆತ್ತಿ ಎಣಿಸಿದಳು.

ಆಶಿ "ಐದು "ಎಂದ.

ಭಾಪುರೇ ಎಂದು ನಾಲಗೆ ಕಚ್ಚಿದಳು ಕಲ್ಪನಾ.
ಇಬ್ಬರೂ ನಕ್ಕರು.

++++++++++++++++

ಆಶಿ ಮತ್ತು ಕಲ್ಪನಾ ಸಮಾಗಮ ಕುರಿತಾದ ಈ ವಿವರಗಳನ್ನು ಅದು ಯಾವುದೋ ಹಳೆಯ ಬುಕ್ಕಿನ ಮೂಲೆಗಳಲ್ಲಿ ಈ ರೀತಿ ಬರೆದಿಟ್ಟವಳು ಕಲ್ಪನಾ ಅಲ್ಲ ಎಂದು ಜನಾರ್ದನನಿಗೆ ಚೆನ್ನಾಗಿ ಗೊತ್ತಿತ್ತು.ಕಲ್ಪನಾ ಅಕ್ಷರಗಳೇ ಅಲ್ಲ ಅವುಗಳು ಆದರೆ ಯಾರದ್ದು ಎಂದು ಹೇಳಲಾರ.
ನೋಡಿದರೆ ಥೇಟ್ ಹುಡುಗಿಯ ಅಕ್ಷರಗಳೇ..ಎಂದು ಮೋನಪ್ಪ.

ಜನಾರ್ದನ "ಹೌದೂ ಸಾರ್" ಎಂದ.

ಮತ್ತೆ ನೀವು ನಿಮ್ಮ ಹೆಂಡತಿಯ ಅಕ್ಷರ ಅಲ್ಲ ಅಂತ ಆಗಿಂದ ವಾದ ಮಾಡ್ತಾ ಇದ್ದಿರಿ ಎಂದ,ಪಾಟೀ ಸವಾಲು ಹಾಕುವ ಹಾಗೇ.

ಕಣ್ಣು ತುಂಬಿ ಬಂತು ಜನಾರ್ದನನಿಗೆ.ಏನಾದರೂ ವಾದ ಮಾಡುವ ಹೊತ್ತಲ್ಲ ಇದು. ಮೈ ತುಂಬಾ ಅವಮಾನ ತುಂಬಿ ಹರಿಯುತ್ತಿದೆ. ಮನಸ್ಸು ಕಲ್ಲಾಗಲಿ ಎಂದು ದೇವರಲ್ಲಿ ಎಷ್ಟು ಹೊತ್ತಿನಿಂದ ಬೇಡಿಕೊಂಡಿದ್ದರೂ ಅವನೂ ಕ್ಯಾರೇ ಮಾಡಿಲ್ಲ.

ಮಾತೆತ್ತಿದರೆ ಹಿಂಸೆ. ಮೌನವಾಗಿದ್ದರೆ ನರಕ.

"ಅಲ್ಲಾ ಈ ರೀತಿ ಬರೆದು ಇಟ್ಟು ಎಂತಕೆ ಅಂತ.."ಎಂದ ಮೋನಪ್ಪ.

"ಗೊತ್ತಿಲ್ಲ" ಎಂದ ಜನಾರ್ದನ.

ಮೋನಪ್ಪ "ನೋಡಿ ನಾನು ಇನ್ನು ಸ್ವಲ್ಪ ಹೊತ್ತಿನಲ್ಲಿ ಡ್ಯೂಟಿ ಮುಗಿಸಿ ಹೊರಡುತ್ತೇನೆ.ನೀವು ಸಮಾಧಾನ ಮಾಡಿಕೊಳ್ಳಿ.ಇದು ನಿಮ್ಮ ಹೆಂಡತಿಯ ವಿಚಾರ.ಮತ್ತೆ ನಾನು ಹೇಳಿದೆನಲ್ಲ,ನನಗೆ ಇನ್ನು ಒಂದು ವಾರ ರಜೆ.ನೀವು ಕೇಸನ್ನು ಆ ಪಾಂಡುರಂಗನ ಮುಂದೆ ಇಡಬೇಕಾಗುತ್ತದೆ. ಅವನೋ ಮಹಾ ಕುಡುಕ. ಅಲ್ಲಿ ನಿಮಗೆ ಕಂಡಾಪಟ್ಟೆ ಪ್ರಾಬ್ಲೆಂ ಮಾಡುತ್ತಾನೆ ಗೊತ್ತಾಯ್ತಾ" ಎಂದು ಉಚಿತೋಚಿತವಾಗಿ ಸಲಹೆ ನೀಡಲಾರಂಭಿಸಿದ.

ಜನಾರ್ದನ ಆಮೇಲೆ ಮೋನಪ್ಪ ಎಂಬ ಸಂಗಮಕ್ಷೇತ್ರದ ಆ ಪೊಲೀಸು ಪೇದೆಗೆ ತನ್ನ ಸಂಸಾರದ ಆ ದುರಂತ ಕತೆಯನ್ನು ತನಗೆ ಗೊತ್ತಿದ್ದಷ್ಟು ವಿವರಿಸಿದ. ಸೂತ ಉವಾಚ ಎಂಬಂತೆ.


+++++++++++++++++++++++++++

ಜನಾರ್ದನ ಕುಂದಾಪುರದಿಂದ ಮುಂದೆ ಬೈಂದೂರಿನಿಂದ ಹಿಂದೆ ಅಂಥಾ ಒಂದು ಇಂಪಾರ್ಟೆಂಟು ಎಂದು ಹೇಳಲಾಗದ ಒಂದು ಊರಿನ ಪ್ರಜೆ.ಕಲ್ಪನಾ ಅವನ ಹೆಂಡತಿ. ಒಂದು ಮಗೂ ಕೂಡಾ ಇರುವಾಗ ಆ ಕಲ್ಪನಾ ಅದೇ ಊರಿನ ಸೈಬರ್‌ಕೆಫೆಯ ಹುಡುಗ ಆಶಿ ಜೊತೆ ಪರಾರಿಯಾದಳು.ಅವಳಿಗಿಂತ ಹತ್ತು ವರ್ಷ ಸಣ್ಣ ಪ್ರಾಯದವನ ಜೊತೆ.ಅದು ಜನಾರ್ದನನಿಗೆ ತುಂಬಾ ಬೇಜಾರಾಗಿತ್ತು ಎಂದೇನಲ್ಲ.ಏಕೆಂದರೆ ಜನಾರ್ದನ ಕೆಲಸ ಮಾಡುತ್ತಾ ಇದ್ದದ್ದು ಮುಂಬೈಯಲ್ಲಿ,ಅಲ್ಲಿಗೆ ಅವನು ಹೋದರೆ ತಿಂಗಳುಗಟ್ಟಲೆ ವಾಪಾಸು ಬರುತ್ತಿರಲಿಲ್ಲ. ಅಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗು ಎಂದು ಗೋಗರೆದರೆ ಕ್ಯಾರೂ ಮಾಡುತ್ತಲೂ ಇರಲಿಲ್ಲ.ಇದರಿಂದ ಅವರ ನಡುವೆ ಸುಮಾರು ಸಲ ಜಗಳ ಆಗುತ್ತಿತ್ತು. ಹಾಗೆ ಜಗಳ ಆಗೀ ಆಗೀ ಜನಾರ್ದನ ಮುಂಬೈಯಿಂದ ಊರಿಗೆ ಬಂದು ಹೋಗುವುದೂ ಕಮ್ಮಿ ಕಮ್ಮಿ ಆಗುತ್ತಾ ಹೋಯಿತು.ಜನಾರ್ದನ ಏನೂ ಬರೀ ಲಾಯಿಲೋಟು ಮನುಷ್ಯ ಅಲ್ಲ. ರಫ್ ಅಂಡ್ ಟಫ್ ಇದ್ದ. ಓಡಾಡುವುದಕ್ಕೆ ಅಲ್ಲೂ ಇಲ್ಲೂ ಅವನಿಗೆ ಎರಡು ಒಳ್ಳೇ ಕಾರುಗಳಿದ್ದವು. ಸ್ಯಾಂಡಿಯನ್ನು ಮುಂಬೈಗೆ ಕರೆದುಕೊಂಡುಹೋಗಿ ವಾಸಿಸುವದಕ್ಕೆ ಅನುಕೂಲತೆಗಳು ಇದ್ದವು. ಹಾಗಾದರೂ ಆ ಮನುಷ್ಯ ಹೆಂಡತಿಯ ರಿಕ್ವಸ್ಟಿಗೆ ಕಿವಿ ಕೊಡುತ್ತಲೇ ಇರಲಿಲ್ಲ.ಇದೆಲ್ಲಾ ತುಂಬಾ ಹಳೆಯ ಕತೆ.

ಇದನ್ನು ಕೇಳಿದ ಮೇಲೆ ಮೋನಪ್ಪ ಜನಾರ್ದನನಿಗೆ ಆಮೇಲೆ ಆದ ಘಟನೆಯನ್ನು ವಿವರಿಸಿದ,ಸಂಜಯ ಉವಾಚ ಎಂಬಂತೆ..


++++++++++++++++++++++++++

ಕಲ್ಪನಾ ಕತೆ ನಮಗೆ ಮತ್ತೆ ಗೊತ್ತಾಗುವುದು ಅವಳ ಡೆಡ್ ಬಾಡಿ ಸಂಗಮಕ್ಷೇತ್ರದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಬಲ್ಯ ಕ್ರಾಸಿನಲ್ಲಿ ಟ್ಯಾಂಕರ್ ಒಂದರ ಹಿಂದಿನ ಚಕ್ರದಲ್ಲಿ ಸಿಕ್ಕಿಕೊಂಡ ಬಳಿಕವೇ.
ಅದನ್ನು ನೋಡಿದವನು ಇದೇ ಪೊಲೀಸ್ ಮೋನಪ್ಪ.ಅವನು ಕೊಕ್ಕಡದ ಬೇಲಿ ಗಲಾಟೆಯೊಂದರ ಇತ್ಯರ್ಥಕ್ಕೆಂದು ತನ್ನ ಸಿಡಿ ಹಂಡ್ರೆಡ್ ಬೈಕಲ್ಲಿ ಹೋಗಿ ಬರುತ್ತಿದ್ದಾಗ ಒಂದು ಬೈಕು ರುಯ್ಯನೆ ಬರುತ್ತಿರುವುದನ್ನೂ ಮತ್ತು ಎದುರಿಂದ ಟ್ಯಾಂಕರ್ ಬರುತ್ತಿರುವುದನ್ನೂ ನೋಡಿದ್ದಾನೆ. ಆ ಹೊತ್ತಿಗೆ ಅದು ಎಂಥ ಶಬ್ದವೋ ಏನೋ..ಅವನ ಸರ್ವೀಸಿನಲ್ಲಿ ಕಂಡಿರಲಿಕ್ಕಿಲ್ಲ,ಢಭಾ ಅಂತ ಒಂದು ಡ್ಯಾಶನ್ನೂ ನೋಡಿದ್ದಾನ. ಅಷ್ಟಾಗುವಾಗ ಒಂದು ಜೀನ್ಸ್ ಹಾಕಿದ ಹುಡುಗಿ ಬೈಕಿಂದ ರಟ್ಟಿಯೂ ಆಗಿದೆ. ಬೈಕು ಪಟಪಟಪಟಪಟ ಅಂತ ಹೊರಳಿ ಬಿದ್ದೂ ಆಗಿದೆ. ಮೋನಪ್ಪ ಅದನ್ನೆಲ್ಲಾ ನೋಡಿ ಕಣ್ಣುಕತ್ತಲೆ ಬಂದ ಹಾಗಾಗಿ ಸಾವರಿಸಿಕೊಂಡು ಸ್ಥಳಕ್ಕೆ ಬಂದು ನಿಂತಾಗ ಟ್ಯಾಂಕರಿನ ಹಿಂದಿನ ಚಕ್ರದಿಂದ ರಕ್ತದ ಕೋಡಿ ಹರಿಯುತ್ತಿದೆ. ನೋಡುತ್ತಾನೆ ಆ ಹುಡುಗಿ ಬಾಡಿ ನೆಲ ಕಚ್ಚಿ ಬಿದ್ದಿದೆ. ಟ್ಯಾಂಕರಿನ ಡ್ರೈವರು ಓಡುವುದನ್ನೂ ಮೋನಪ್ಪ ನೋಡಿದ್ದಾನೆ. ಸೂಳೆಮಕ್ಕಳು ಹಾಗೇ ಓಡುವುದು ಕಾಮನ್ನು ಅಂತ ಅವನಿಗೂ ಗೊತ್ತಿದೆ.ಅತ್ತ ಇತ್ತ ನೋಡುತ್ತಿರುವಾಗ ಹತ್ತಿಪ್ಪತ್ತು ಜನ ಸೇರಿದ್ದಾರೆ. ಹೌದೂ ಆ ಬೈಕಲ್ಲಿ ಇನ್ಯಾರಾದರೂ ಇರಬೇಕಿತ್ತಲ್ಲಾ..ಅಂತ ಮೋನಪ್ಪನೇ ಕೇಳಿದ್ದಾನೆ.
ಆಗಲೇ ಅಲ್ಲಿ ಸೇರಿದ್ದವರಿಗೆ ಈ ಬೈಕು ಓಡಿಸುವ ವ್ಯಕ್ತಿ ಇನ್ನೊಬ್ಬ ಇದ್ದಿರಬೇಕಲ್ಲ ಎಂಬ ಪ್ರಶ್ನೆ ಹುಟ್ಟಿದ್ದು. ಆದರೆ ಅಲ್ಲಿ ಯಾರೂ ಕಾಣುತ್ತಿರಲಿಲ್ಲ. ಮೋನಪ್ಪ ಆಕ್ಸಿಡೆಂಟ್ ಸ್ಪಾಟ್‌ನಿಂದ ಇಬ್ಬರು ಓಡುವುದನ್ನು ನೋಡಿದ್ದಾನೆ. ಅವರು ಟ್ಯಾಂಕರಿನ ಡ್ರೈವರು ಮತ್ತು ಕ್ಲೀನರ್ ಇರಬೇಕು ಎಂದುಕೊಂಡಿದ್ದಾನೆ.ಮತ್ತೊಬ್ಬ ಬೈಕಿನವನೇ ಎಂದು ಅಲ್ಲಿ ಸೇರಿದ್ದ ಇತರ ಪ್ರತ್ಯಕ್ಷದರ್ಶಿಗಳು ಹೇಳಲಾರಂಭಿಸಿದ ಮೇಲಂತೂ ಮೋನಪ್ಪನಿಗೆ ಅವನ ಸರ್ವೀಸಿನಲ್ಲಿ ಕಂಡು ಕೇಳಲರಿಯದಷ್ಟು ಶಾಕ್ ಆಗಿದೆ. ಹೀಗೂ ಉಂಟಾ ಅಂತ ಅವನು ಸರ್ವೀಸಿನಿಂದ ರಿಟೈರ್ ಆಗಿ ಸಾಯುವ ತನಕ ಅನೇಕರಲ್ಲಿ ಈ ಕಥೆ ಹೇಳಿ ಹೇಳಿದ್ದಾನೆ.

ಪೊಲೀಸ್ ಮೋನಪ್ಪ ಮತ್ತು ಅಲ್ಲಿ ಸೇರಿದ್ದವರೆಲ್ಲಾ ಹಾಗೇ ಭಯಂಕರ ಗೊಂದಲದಲ್ಲಿ ಇರಬೇಕಾದರೆ ಅಲ್ಲಿದ್ದ ಕೊಚ್ಚಿ ಕ್ರಿಶ್ಚಿಯನ್ ತರಗನ್ "ಓಡಿದ ಇಬ್ಬರಲ್ಲಿ ಒಬ್ಬ ಬೈಕಿನವನೇ" ಎಂದು ಹೇಳಿದ.

"ಬೈಕಿನವನು ಓಡಿದನಾ ಎಲ್ಲಿಗೆ" ಎಂದು ಎಲ್ಲರೂ ಒಮ್ಮೆಗೇ ಕೇಳಲಾರಂಭಿಸಿದಾಗ ತರಗನ್ ತನ್ನ ಮಲೆಯಾಳೀ ಕನ್ನಡದಲ್ಲಿ,"ಎಂಥ ಬಯಂಗರ ಏಕ್ಸಿಡೆಂಡು ನ್ಞ್ಯಾನು ನೋಡಿಲ್ಲ ಗೊತ್ತಾಯ್ದಾ..ಈ ಹುಡುಗಿ ಉಂಟಲ್ಲ,ಲಟ್ಟಂದ ಚಕ್ರಕ್ಕೆ ಸಿಕ್ಕಿ ಸ್ಪೋಟಲ್ಲಿ ಚಪಾದಿ ಆಯಿತ್ತಲ್ಲ.ನ್ಞಾನು ನೋಡ್ದಾ ಉಂಟು.ಇವ ಇದ್ದಾನಲ್ಲ, ಬೈಕಿನವನು ಇವ ಈ ಕಡೆಗೆ ಮಡ್ಡು ರೋಡಿಗೆ ಪಲ್ಟಿ ಆದ. ಎಂತದ್ದೂ ಆಗಿರಲಿಲ್ಲ.ಎದ್ದ ಬಂದ.ಆಚೀಚೆ ನೋಡಿದ.ಬಯಂಗರ ಕೂಗಿದ.ಅಲ್ಲಿ ಆ ಕಡೆ ಬೈಕಿನ ಹದ್ದಿರ ಅವಳ ಚೂಡಿದಾರದ ವೇಲು ಬಿದ್ದದ್ದನ್ನು ತೆಗೆದುಕೊಂಡ.ಅದಕ್ಕೆ ಕಿಸ್ಸು ಕೊಡ್ತಾ ಇದ್ದ ಮಾರಾಯರೇ..ನಾನು ಹತ್ರ ಬರುವಾಗ ಅದನ್ನು ಹಿಡ್ಕೊಂಡು ಓಡಿದ..ಓ ಅತ್ಲಾಗೆ..."ತರಗನ್ನು ಕೈಯನ್ನು ಎತ್ತಿ ಎಡಭಾಗದ ಕಾಡಿನತ್ತ ಬೊಟ್ಟುಮಾಡಿದ.

ಅಷ್ಟನ್ನು ಕೇಳಿದ ಮೇಲೆ ಪೊಲೀಸು ಮೋನಪ್ಪ ಸುಮ್ಮನೇ ಇರಲಿಕ್ಕಾಗುತ್ತದಾ?

ಡೆಡ್ ಬಾಡಿಯನ್ನು ಆಸ್ಪತ್ರೆಗೆ ಸಾಗಿಸಿದ ಮೇಲೆ ಮೋನಪ್ಪನ ಕಾರ್ಯಾಚರಣೆ ಶುರುವಾಯಿತು.ನೋಡಿಯೇ ಬಿಡೋಣ ಅಂತ ಕಾಡಿನ ಕಡೆಗೆ ತಾನೂ ಸೇರಿದಂತೆ ಒಂದು ದೊಡ್ಡ ತಂಡ ಹಿಡಿದುಕೊಂಡು ನುಗ್ಗಿದ. ಡೆಡ್ ಬಾಡಿಯನ್ನು ಆಸ್ಪತ್ರೆಗೆ ಸಾಗಿಸಿದ ಮೇಲೆ ಮೋನಪ್ಪನ ಕಾರ್ಯಾಚರಣೆ ಶುರುವಾಯಿತು.ಎಷ್ಟೊಂದು ಹುಡುಕಿದರೂ ಏನೂ ಕಾಣಲಿಲ್ಲ. ತರಗನ್ನು ಎಣ್ಣೆ ಹಾಕಿ ಏನಾದರೂ ಹೇಳಿದನಾ ಎಂದು ಸಂಶಯವೂ ಬಂತು.ತರಗನ್ನು ಹೇಳಿದ್ದು ಸುಳ್ಳು ಅಂತ ಆ ದಿನದ ಮಟ್ಟಿಗೆ ಮೋನಪ್ಪನಿಗೆ ಖಚಿತವಾಯಿತು. ಇಡೀ ಸಂಜೆ ಕಳೆದು ರಾತ್ರಿಯಾಗುವ ತನಕ ಅಷ್ಟೂ ಜನ -ಹೆಚ್ಚೂ ಕಮ್ಮಿ ನೂರರಷ್ಟು ಜನ ಸೇರಿದ್ದರು ಕಾಡಿನ ತುಂಬಾ..

- ಇಡೀ ಕಾಡನ್ನು ಹುಡುಕಿದರೂ ಏನೂ ಕಾಣಲಿಲ್ಲ. ಎಲ್ಲರೂ ತರಗನ್ನನಿಗೆ ವಾಚಾಮಗೋಚರ ಬೈದದ್ದೇ ಬೈದದ್ದು.

ತರಗನ್ನು ಕೂಡ ರಾತ್ರಿ ಉದನೆಯ ವೈನು ಶಾಪಿನಲ್ಲಿ ಕಾಡಿನಲ್ಲಿ ತನಗೆ ಬೈದ ಸುಮಾರು ಜನರನ್ನು ಕರೆಸಿ ಕೂಡಿಸಿ ಗುಂಡು ಹಾಕಿಸಿ ತಾನು ನೋಡಿದ್ದು ನಿಜವೇ ನಿಜ ಎಂದು ಬಾಯಿ ಬಾಯಿ ಬಡಿದುಕೊಂಡ. ಆಮೇಲೆ ಆ ಮದ್ಯಸಾರದ ದಾಕ್ಷ್ಯಿಣ್ಯಕ್ಕೆ ಅವರೆಲ್ಲ ತರಗನನ್ನು ಹೇಳಿದ್ದು ಸತ್ಯವೇ ಇದೆ, ಆ ಪಾಪಿ ಹೆಣ್ಣು ಸತ್ತ ಅಂತ ಗೊತ್ತಾದ ಕೂಡಲೇ ಕಾಡಿನ ಮಾರ್ಗವಾಗಿ ಓಡಿ,ಶಿಶಿಲದ ಮೂಲಕ ಚಾರ್ಮಾಡಿ ಕಡೆ ಸಾಗಿರಬೇಕು,ನೆರಿಯ ಹೆಬ್ಬಾರರ ತೋಟದ ಬದಿಯಿಂದ ಸಾಗಿ ಕೊಟ್ಟಿಗೆಹಾರದ ಮಾರ್ಗದಲ್ಲಿ ರಟ್ಟಿರಬೇಕು ಎಂದು ತೀರ್ಮಾನಿಸಿದರು.ಮೋನಪ್ಪ ಕೂಡಾ ಪೊಲೀಸ್ ಮರ್ಜಿಗೆ ಇದನ್ನೆಲ್ಲಾ ನಂಬಲೇಬೇಕಾಯಿತು.

++++++++++++++++++++++

ಆದರೆ ಮರುದಿನವೇ ಮೋನಪ್ಪನಿಗೂ ತರಗನ್ನಿಗೂ ಆ ಊರಿನ ಎಲ್ಲರಿಗೂ ಹೊಸ ಸುದ್ದಿಯೊಂದು ಬಂದು ತಲುಪಿತು. ಅದೇನೆಂದರೆ ಬಲ್ಯ ಕ್ರಾಸಿನ ಬಳಿ ಒಂದು ದೊಡ್ಡ ಬಸರೀ ಮರದ ಕೊಂಬೆಯಲ್ಲಿ ಒಂದು ಯುವಕನ ಹೆಣ ನೇತಾಡುತ್ತಿದೆ ಎಂದು.ಪೊಲೀಸ್ ಮೋನಪ್ಪನೇ ತಾನೇ ಖುದ್ದು ಆಸಕ್ತಿ ವಹಿಸಿ ಸ್ಪಾಟ್ ಗೆ ಹೋದ. ತರಗನ್ನೂ ಬಂದಿದ್ದ. ಎಲ್ಲರೂ ಸೇರಿ ಹೆಣ ಇಳಿಸಿದ್ದಾಯಿತು. ಅದೇ ಚೂಡಿದಾರದ ವೇಲನ್ನು ಹಾಕಿಕೊಂಡು ಆ ಯುವಕ ಸತ್ತಿದ್ದ.ಸಂಶಯವೇ ಇಲ್ಲ, ಇದು ಅದೇ ಬೈಕಿನವ ಎಂದ ತರಗನ್ನು..ಶವದ ಹೆಗಲಲ್ಲಿ ಒಂದು ಚೀಲವಿತ್ತು.ಚೀಲವನ್ನು ಮುಟ್ಟುಗೋಲು ಹಾಕಿಕೊಂಡು ಮೋನಪ್ಪ ಠಾಣೆಗೆ ನಡೆದ. ಅಲ್ಲಿ ಹಿರಿಯ ಅಧಿಕಾರಿಗಳ ಎದುರು ಅದನ್ನು ಬಿಚ್ಚಿದರೆ ಅದರಲ್ಲಿ ಒಂದು ಹಳೆಯ ಬುಕ್ಕು ಮತ್ತು ಒಂದು ಹ್ಯಾಂಡಿ ಕ್ಯಾಮ್ ಸಿಕ್ಕಿತು.

ಎರಡನ್ನೂ ಆ ರಾತ್ರಿ ಇನ್ನೂ ದೊಡ್ಡ ಪೊಲೀಸ್ ಅಧಿಕಾರಿಗಳ ಎದುರು ಬಿಡಿಸಲಾಯಿತು.

ಮೊದಲಾಗಿ ಕೆಮೆರಾವನ್ನು ಚಾಲೂ ಮಾಡುವಂತೆ ತುಂಬಾ ದೊಡ್ಡ ಅಧಿಕಾರಿ ಹೇಳಿದ. ಪೊಲೀಸ್ ಮೋನಪ್ಪ ಅದರಲ್ಲಿ ಪರಿಣತನಾದ್ದರಿಂದ ಚಾಲೂ ಮಾಡಿದ.

ಭಾಪ್ರೇ!

ಆ ಕೆಮೆರಾ ತುಂಬಾ ಸೆಕ್ಸ್ ಸೀನುಗಳು.

ಆ ಇಬ್ಬರದ್ದೇ.
ಕಲ್ಪನಾ
ಮತ್ತು ಆಶಿಯದ್ದು.

ಮಿಲನ, ಮುತ್ತು, ಆಲಿಂಗನ, ಮೈಥುನ..ಧಾರಾಳ ಹೇರಳ ದೃಶ್ಯಗಳು.

ಆ ರಾತ್ರಿನ ಆ ಠಾಣೆಯಲ್ಲಿ ಸೀನಿಯರ್ ಅಧಿಕಾರಿಗಳು ಜೂನಿಯರ್ ಅಧಿಕಾರಿಗಳ ಎದುರೂ ಜೂನಿಯರ್ರುಗಳು ಸೀನಿಯರ್ರುಗಳ ಎದುರೂ ಭಾರೀ ಮುಜುಗರದಿಂದ ಆ ದೃಶ್ಯಾವಳಿಗಳನ್ನು ಪೊಗದಸ್ತಾಗಿ ನೋಡಿದರು.ಮೋನಪ್ಪ ಕೂಡಾ ಇದೆಲ್ಲಾ ತಾನೇ ಒಬ್ಬನೇ ಕುಳಿತು ನೋಡಬೇಕಿತ್ತು ಎಂದು ಹಳಹಳಿಸಿದ.ಅವನಂತೆ ಉಳಿದವರಿಗೂ ಆಗಿತ್ತು ಎಂದು ಪ್ರತ್ಯೇಕ ಹೇಳಬೇಕಿಲ್ಲ.

ಸೀನು ಇಬ್ಬರೂ ಎಲ್ಲಾ ಮುಗಿಸಿ, ಸ್ನಾನ ಮಾಡಿ, ಡ್ರೆಸ್ ಮಾಡಿ ಹೊರಡುವ ತನಕ ಸಾಗಿತು. ಅವರಿಬ್ಬರೂ ಬೈಕು ಏರಿ ಕುಳಿತುಕೊಳ್ಳುವ ದೃಶ್ಯವೂ ಅದರಲ್ಲಿತ್ತು.

"ಇದು ಯಾರು ಶೂಟಿಂಗು ಮಾಡಿದರು?" ಎಂದು ಮೊದಲು ಕೇಳಿದ್ದು ಮೋನಪ್ಪನೇ.ಅಲ್ಲಿದ್ದ ತುಂಬಾ ದೊಡ್ಡ ಅಧಿಕಾರಿಗೆ ಅದು ಹಿಡಿಸಲಿಲ್ಲ. ಈ ಪ್ರಶ್ನೆ ತಾನೇ ಕೇಳಬೇಕಿತ್ತು ಎಂದು ಹಿಸುಕಿಕೊಂಡ ಹಾಗಾಯಿತು.

"ಯಾರೋ ಲಾಡ್ಜ್‌ನ ಹುಡುಗರಿಂದ ಮಾಡಿಸಿರಬೇಕು. ನಾವು ಜೋಗದಲ್ಲಿ ಫಾಲ್ಸ್ ಎದುರು ನಿಂತು ಪಕ್ಕದವರಲ್ಲಿ ಶೂಟ್ ಮಾಡಾಕೆ ಹೇಳಲ್ವಾ" ಎಂದು ಆತ ಸಮಾಧನ ಹೇಳಿದ.

ಕೆಮೆರಾದಲ್ಲಿ ಸೀನು ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.ಆದರೆ ಅದರಲ್ಲಿ ತುಂಬಾ ಸೀನುಗಳು ಮತ್ತೂ ಇದ್ದವು.

ಬೈಕಿನಲ್ಲಿ ಅವರು ಸಾಗುತ್ತಿರುವುದು, ಎಲ್ಲೋ ಕಾಫಿ ಕುಡಿಯುತ್ತಿರುವುದು,ಆಮೇಲೆ ಆಮೇಲೆ ಆ ಟ್ಯಾಂಕರು ಬರುತ್ತಿರುವುದು,ಅದನ್ನು ತಪ್ಪಿಸಲು ಆತ ಹೆಣಗಾಡುತ್ತರುವುದು,ಆಮೇಲೆ ಆ ಬೈಕು ಟ್ಯಾಂಕರಿಗೆ ಅಪ್ಪಳಿಸುವುದು,ಆ ಹುಡುಗಿ ಆ ಚಕ್ರಕ್ಕೆ ಸಿಕ್ಕಿ ಸೀದುಹೋಗುವುದು!!

ಆ ಮೇಲೆ ಆತ ಆ ತರಗನ್ನು ಹೇಳಿದ ರೀತಿಯಲ್ಲೇ ಅಲ್ಲಿಂದ ಪರಾರಿಯಾಗುವುದು..

ಕಾಡಲ್ಲಿ ಆ ಮರ ಏರುವುದುಆ ಮರಕ್ಕೆ ಆ ವೇಲನ್ನು ಕಟ್ಟಿ ಕತ್ತಿಗೆ ಉರುಳು ಬಿಗಿಯುತ್ತಿರುವುದು..ಇದನ್ನೆಲ್ಲಾ ನೋಡಿದ ಆ ಠಾಣೆಯಲ್ಲಿ ಆ ರಾತ್ರಿ ಆ ಪೊಲೀಸರ ದಂಡು ಬಹುತೇಕ ಮರ್ಲು ಹಿಡಿಸಿಕೊಂಡವರ ಹಾಗೇ ಯದ್ವಾತದ್ವಾ ನರಳಿತು.

ಮೋನಪ್ಪ ಮಾತ್ರಾ ಇದೆಲ್ಲಾ ನಂಬುವ ಸ್ಥಿತಿಯಲ್ಲೇ ಇರಲಿಲ್ಲ.ಏಕೆಂದರೆ ಆ ದೃಶ್ಯಗಳ ಸರಮಾಲೆಯಲ್ಲಿ ಕೊನೆಘಳಿಗೆಯಲ್ಲಿ ಇನ್ನೇನು ಅಫಘಾತ ಆಗುತ್ತದೆ ಎಂಬ ಹೊತ್ತಿಗೆ ದೂರದಲ್ಲಿ ಒಂದು ಬೈಕು ಬರುತ್ತಿರುವುದು ಮತ್ತು ಆ ಬೈಕಿನವ ತಾನೇ ಆಗಿರುವುದು ಕಂಡು ಆತ ಕಂಗಾಲಾಗಿದ್ದ.

"ಸಾರು, ಇದೆಲ್ಲಾ ಯಾರು ಹೇಗ ಎಲ್ಲಿ ಶೂಟ್ ಮಾಡಿದರು?"ಎಂದು ವಿಲಕ್ಷಣವಾಗಿ ಆತ ಕೇಳುತ್ತಿದ್ದ.ಅದಕ್ಕೆ ಯಾರೂ ಉತ್ತರವನ್ನೇ ಕೊಡುವುದಿಲ್ಲ ಎಂದು ಅವನಿಗೆ ಗೊತ್ತಿತ್ತು.

ಅಲ್ಲಿದ್ದ ಪೊಲೀಸರ ದೊಡ್ಡ ಅಧಿಕಾರಿ ತಾನೇ ಮುಂದಾಗಿ ಆ ಕೆಮೆರಾವನ್ನು ಆಫ್ ಮಾಡಿದ."ಮೋನಪ್ಪಾ" ಎಂದ,"ಈ ಕೆಮೆರಾವನ್ನು ಈಗಲೇ ಅಗೋ ಅಲ್ಲಿ ಸಂಗಮಕ್ಕೆ ಎಸೆದು ಬಾ.ಯಾರೂ ನೋಡಬಾರದು ಹಾಗೇ" ಎಂದ.

ಮೋನಪ್ಪ "ಸರ್" ಎಂದ.

++++++++++++++++++++++

ಆಮೇಲೆ ಅಲ್ಲಿದ್ದ ಆ ಹಳೆ ಕಿತಾಬನ್ನೂ ಅವರು ಬಿಡಿಸಿದರು.ಅದರಲ್ಲಿ ಇದ್ದದು ಅಷ್ಟೇ...

"ಇಷ್ಟೊಂದು ಸುಖ ಇದೆ ಎಂದು ಗೊತ್ತೇ ಇರಲಿಲ್ಲ.ತುಂಬಾ ಖುಷಿಯಾಯುತು ಕಣೋ.ಮೊದಲ ಬಾರಿಗೆ ನೀನು ನನ್ನೊಳಗೇ ಇದ್ದ ಸೆಕ್ಸ್ ಡ್ರೈವ್ ಅನ್ನು ಚಾಲೂ ಮಾಡಿಬಿಟ್ಟೆ..ಉಫ್! ಎಂದುಬಿಟ್ಟಳು ಕಲ್ಪನಾ.ಆಶಿ ಕಣ್ಣಲ್ಲೇ ಅವಳ ಥ್ಯಾಂಕ್ಸ್‌ನ್ನು ಸ್ವೀಕರಿಸಿದ.ಅವನನ್ನು ಅವಳು ಮತ್ತೊಮ್ಮೆ ಇಡಿಯಾಗಿ ಅಪ್ಪಿಕೊಂಡಳು.ಅವನ ಮೂಗಿಗೆ ತನ್ನ ಮೂಗನ್ನು ಹಿತವಾಗಿ ಅಂಟಿಸಿ ಪಟಪಟ ಅಂತ ಉಜ್ಜಿದಳು.ಅವಳ ಕತ್ತನ್ನು ಬಾಯಲ್ಲಿ ತುಂಬಿಕೊಂಡ ಆಶಿ ಸುಮ್ಮನೆ ಕಚ್ಚಿದ.ಲೋಕಕ್ಕೆ ಲೋಕವೇ ಬೆಚ್ಚಿಬೀಳುವಂತೆ ಅವರಿಬ್ಬರು ಆಮೇಲೆ ತುಂಬಾ ಹೊತ್ತು ಮಿಲನವಾದರು.ಬೆಳಗಾಗುವ ಹೊತ್ತಿಗೆ ಕಲ್ಪನಾ ತೊಡೆಗಳ ನಡುವಿಂದ ಕೈಯನ್ನೆತ್ತಿ ಎಣಿಸಿದಳು.ಆಶಿ ಐದು ಎಂದ.ಭಾಪುರೇ ಎಂದು ನಾಲಗೆ ಕಚ್ಚಿದಳು ಕಲ್ಪನಾ.ಇಬ್ಬರೂ ನಕ್ಕರು."

ಆ ಕಿತಾಬಿನ ಬಗ್ಗೆ ಯಾರೂ ತನಿಖೆ ಮಾಡಬಾರದು ಎಂದು ಆ ರಾತ್ರಿ ಪೊಲೀಸರು ಅಲ್ಲಿ ತೀರ್ಮಾನಿಸಿದರು.

+++++++++++++++++++

ಆದರೆ ಜನಾರ್ದನ ಆ ಸಂಗಮಕ್ಷೇತ್ರದ ಆ ಠಾಣೆಗೆ ಬಂದು ತನಗೆ ಆ ಕಿತಾಬು ಮತ್ತು ಕೆಮೆರಾ ಬೇಕೇ ಬೇಕು ಎಂದು ಕೇಳಲು ಆರಂಭಿಸುವುದರೊಂದಿಗೆ ಅಲ್ಲಿ ಮತ್ತೆ ಆ ನಿಗೂಢ ವಿವರಗಳು ಮರಳಿ ಹುಟ್ಟಿದವು,ಆದರೆ ಅವುಗಳಿಗೆ ಉತ್ತರಗಳೇ ಇರಲಿಲ್ಲ.ಆಶಿ ಮತ್ತು ಕಲ್ಪನಾ ಇಲ್ಲದ ಮೇಲೆ ಯಾರ ಬಳಿ ಉತ್ತರ ಹುಡುಕುವುದು ಎಂದು ಎಲ್ಲರಿಗೂ ಎಲ್ಲರೂ ಕೇಳುತ್ತಲೇ ಇದ್ದರು.

20080224

ಏನ್ ಗಮ್ಮತ್ತು!


ಅದೊಂದು ಸಂಭ್ರಮ. ಚೆನ್ನಾಗಿತ್ತು. ಎಲ್ಲರೂ ಇಷ್ಟಪಡುವ ಹಾಗೇ ಆಗಬೇಕು ಎಂದುಕೊಂಡಿದ್ದೆ. ಹಾಗೇ ಆಗಿಯೇ ಹೋಯಿತು.
ಆಮೇಲೆ ಇವನು ಎಂಬ ಹೊಸ ಆಪತ್ತೊಂದು ಕನ್ನಡ ಸಾಹಿತ್ಯ ಲೋಕಕ್ಕೆ ಈ ದಿನ ಅಂಟಿಕೊಂಡಿತು.
ನನ್ನ ತುಂಬಾ ಪ್ರೀತಿಯ ಗೆಳೆಯ ಜೋಗಿ ಒಟ್ಟಾರೆ ಕಾರ್ಯಕ್ರಮದ ಹೀರೋ ಆಗಿಬಿಟ್ಟ. ಜೊತೆಗೆ ನಾಗತಿಹಳ್ಳಿ ಬಂದಿದ್ದರು.ಅವರನ್ನು ನೋಡೋದಕ್ಕೆ ಮಾತನಾಡಿಸೋದಕ್ಕೆ ಅಂತ ತುಂಬಾ ಜನ ಮುಗಿಬಿದ್ದರು.ಲಿಂಗದೇವರು ಕಾಡಿನ ಬೆಳದಿಂಗಳ ಥರ ಕಾಣುತ್ತಿದ್ದರು.
ಎಲ್ಲ ರೀತಿಯಲ್ಲೂ ತೀರಾ ಮನೆ ಕಾರ್ಯಕ್ರಮ ಎಂಬ ಹಾಗೇ ಈ ಕಾರ್ಯಕ್ರಮ ನಡೆದುಹೋಯಿತು.
ಒಳ್ಳೆಯ ಊಟ ಕೊಡಿಸಿದ್ದರು ನಮ್ಮ ಮೇಸ್ಟ್ರು ಪುರಂದರ ಭಟ್ಟರು. ಬಂದವರಲ್ಲಿ ಹುಡುಗಿಯರೇ ಹೆಚ್ಚು.
ಎಲ್ಲರೂ ಎಂಜಾಯ್ ಮಾಡಿದ್ದೇ ಮಾಡಿದ್ದು.
ಇನ್ನಷ್ಟು ಮಾಹಿತಿಗೆ ಈ ಬ್ಲಾಗ್ ನೋಡಿ- http://hejje.blogspot.com/

20080217

ನಾಲ್ಕು ಸಾಲು-೩೬೧.

ಎಲ್ಲರ
ನೆರಳುಗಳನ್ನು
ತೋರಿಸುವ
ಬೆಳಕಿಗೆ ನೆರಳೇ ಇಲ್ಲ.
೨.

ಉರಿಯುವುದು
ಆರುವುದು
ಎರಡೂ
ದೀಪಕ್ಕೆ ಸಾಧ್ಯವಿಲ್ಲ;
ಇನ್ಯಾರೋ ಮಾಡಬೇಕು.

ಕತ್ತಲನ್ನು
ಓಡಿಸುವ
ಬೆಳಕು
ಹುಟ್ಟಿದ್ದೂ ಕತ್ತಲಲ್ಲೇ.
೪.

ಪ್ರೀತಿ
ಮತ್ತು
ವಿರಹ
ಬೆಳಕು ಮತ್ತು ಕತ್ತಲು
ಎಂದು
ಹೇಳಿದರೆ
ವಿರಹಿಗೆ ಯಾವುದು,ಪ್ರೇಮಿಗೆ ಯಾವುದು

20080214

ಒಂದು ಲವ್‌ಸ್ಟೋರಿ ಮೀಮಾಂಸೆ.


ಎಂದಿನಿಂದ ಇದೆ ಈ ಪ್ರೀತಿ ?

ನಾವು ನಂಬುವುದು ಪ್ರೀತಿ ನಮ್ಮದು ಮಾತ್ರಾ.

ಆದರೆ ನಮ್ಮ ಮುತ್ತಜ್ಜ ಕೂಡಾ ಯಾರನ್ನೋ ಪ್ರೀತಿಸಿದ್ದ ಎಂದು ನಮಗೆ ಒಪ್ಪಿಕೊಳ್ಳಲು ಆಗುವುದೇ ಇಲ್ಲ.

ಅದು ಪ್ರೀತಿ.

ಹಾಗಿರುವುದೇ ಪ್ರೀತಿ.

ಅದು ತೀರಾ ಖಾಸಗಿ.

ಅದು ನಮ್ಮದು ಮಾತ್ರಾ.

ಅಪ್ಪ ಅಮ್ಮ ಪ್ರೀತಿಸಿದ್ದರು ಎಂದರೆ ನಮಗೆ ಅಚ್ಚರಿಯಾಗುತ್ತದೆ. ಹಾಗಗಿರಲಿಕ್ಕಿಲ್ಲ ಎಂದುಕೊಳ್ಳುತ್ತೇವೆ.

ಅಣ್ಣ ಯಾರನ್ನೋ ಪ್ರೀತಿಸಿ ಯಾರ ಜೊತೆಯೋ ಸರಸ ಮಾಡಿದ ಎಂದರೆ ನನಗೆ ಹಿತವಾಗುವುದಿಲ್ಲ.

ತಂಗಿ ಇನ್ನೊಬ್ಬನ ಜೊತೆ ಏನಾದರೂ ಪಾರ್ಕಿನಲ್ಲಿ ಕಂಡರೆ ಯಾವ ಅಣ್ಣ ತಾನೇ ಸಹಿಸಿಕೊಳ್ಳಬಲ್ಲ?

ಮಗಳು ಓಡಿಹೋದರೆ ಯಾವ ಅಪ್ಪ ಅಮ್ಮ ಸಂತೋಷಪಡುತ್ತಾರೆ? ಆಹಾ ಪ್ರೀತಿ ಎಂದು ಕೊಂಡಾಡುತ್ತಾರೆ.

ಆದರೂ ಪ್ರೀತಿ ನಮ್ಮದು.

ಅದು ಇಲ್ಲದೇ ನಾವು ಇರಲಾರೆವು.

ನಮಗೆ ವ್ಯಕ್ತಿಗತವಾದ ಪ್ರೀತಿ ಬೇಕು.

ಹುಡುಗಿ ಎಲ್ಲರನ್ನೂ ಪ್ರೀತಿಸುತ್ತಾಳೆ ಎಂದರೆ ನಮಗೆ ಆ ಹುಡುಗಿ ಫ್ಲರ್ಟ್.

ಅದೇ ಹುಡುಗಿ ನನ್ನನ್ನು ಮಾತ್ರಾ ಪ್ರೀತಿಸುತ್ತಾಳೆ ಎಂದರೆ ಅವಳು ಪ್ರೇಮ ದೇವತೆ.

ಅಥವಾ ನನಗೆ ಗೊತ್ತಿಲ್ಲದಂತೆ ಅವಳು ಇನ್ನೊಬ್ಬನನ್ನು ಪ್ರೀತಿಸಿದರೆಆ ಮಾತಿಗೆ ಉತ್ತರವಿಲ್ಲ.

ಪ್ರೀತಿ ಆವರಿಸುವ ರೀತಿಯೇ ಅಂಥದ್ದು.

ಅದು ನಮ್ಮ ಹೃದಯದ ವಿಷಯ.

ನಂಬಿಕೆಯ ಪ್ರಶ್ನೆ.

ಯಾಕಲ್ಲ ಇದು ಬರೀ ಮಾಯೆ.

ಆವರಿಸಿದ ಮೇಲೆ ಏನಾಗುತ್ತಿದೆ ಎಂದೇ ಗೊತ್ತಾಗುವುದಿಲ್ಲ.

ಇನ್ನೊಬ್ಬರಲ್ಲೂ ಅದೇ ಪ್ರೀತಿ ಇದೆ ಎಂದರೆ ಒಪ್ಪಿಕೊಳ್ಳಲಾಗುವುದಿಲ್ಲ.

ಎಲ್ಲರದ್ದೂ ಆಗುವ ಮುನ್ನವೇ ನನ್ನದಾಗಬೇಕು ಎಂಬ ದೊಡ್ಡ ಪ್ರಾರ್ಥನೆ ನಮ್ಮಲ್ಲಿ.ಅದರ ಮಟ್ಟಿಗೆ ನಾವು ಸದಾ ಸ್ವಾರ್ಥಿಗಳೇ.

ಏನು ಮಹಾ ಅವರಂತೇ ನಾನೂ ಪ್ರೀತಿಸುತ್ತಿದ್ದೇನೆ ಎಂದು ಯಾರಾದರೂ ಹೇಳುತ್ತಾರಾ?

ಎಷ್ಟೊಂದು ಜಿಪುಣ ಈ ಪ್ರೀತಿ ?

ಪ್ರೀತಿ ಖರ್ಚಾಗಲಾರದು.

ಅದನ್ನು ಮೊಗೆದಷ್ಟೂ ಮುಗಿಯದಂತೆ ನಾವು ಕಾಪಾಡುತ್ತೇವೆ.ಎಂದಾದರೂ ರವಷ್ಟು ಕಡಿಮೆ ಕಂಡ ದಿನ ಕಂಗಾಲಾಗುತ್ತೇವೆ.

ಯಾವತ್ತೂ ಅಕ್ಷಯ ಪಾತ್ರೆ ಆಗಿರುವುದು ನಮಗೆ ಬೇಕು.

ಸಾಕಪ್ಪಾ ಪ್ರೀತಿ ಎಂದು ಯಾರಾದರೂ ಹೇಳಿದ್ದರೆ ಅವರು ಪ್ರೇಮಿ ಪದವಿಯಿಂದ ನಿವೃತ್ತರಾಗಿದ್ದಾರೆ ಎಂದೇ ಅರ್ಥ.

ಪ್ರೀತಿ ಸಾಕೆನಿಸುವುದು ಪ್ರೇಮಿಗೆ ಅಂತೂ ಅಲ್ಲವೇ ಅಲ್ಲ.

ನಿಜವಾದ ಪ್ರೇಮಿ ಎಂದೂ ಪ್ರೇಮ ಗೀತೆ ಅಥವಾ ಕವಿತೆ ಬರೆಯಲಾರ.ಅವನಿಗೆ ಅವಳನ್ನು ಬಿಟ್ಟರೆ ಇನ್ನೆಲ್ಲಾ ಪ್ರೀತಿ ಪ್ರೇಮ ದಾಖಲಿಸುವುದು ಸಾಧ್ಯವೂ ಇಲ್ಲ.

ಪ್ರೀತಿ ಕೊನೆಯ ಉದ್ದೇಶ ಏನು?

ಕಾಮ.

ಎಲ್ಲಾ ಪ್ರೀತಿ ಅಥವಾ ಪ್ರೇಮ ಕಾಮದ ಅರುಣೋದಯ.

ಆ ಮಧ್ಯಾಹ್ನಕ್ಕೆ ಎಲ್ಲರ ಪಯಣ.

ಅವಕಾಶ ಸಿಕ್ಕ ಯಾವ ಪ್ರೇಮಿಗಳೂ ತಮ್ಮ ಪ್ರೀತಿಯನ್ನು ಬಚ್ಚಿಡಲು ಸಾಧ್ಯವಿಲ್ಲ.

ಪ್ರೀತಿ ಹೀಗೆ ಹೊಮ್ಮುತ್ತಾ ಮಿಲನ ಮಹೋತ್ಸವದಲ್ಲಿ ಶಿಖರವೇರುತ್ತದೆ.

ಅದು ಆಗಲೇ ಬೇಕು.

ಏಕೆಂದರೆ ಪ್ರೀತಿ ಮನಸಿನ ಮಾತೇ ಅಲ್ಲ.

ಅದರಲ್ಲಿ ಶೋಧನೆಯ ಹಪಹಪಿ ಇದೆ.

ಅದಿಲ್ಲದಿದ್ದರೆ ಯಾವ ಹುಡುಗಿಗೆ ಏನಕ್ಕೆ ಬೇಕು ಹೃದಯದ ವ್ಯಾಪಾರ?ಯಾವ ಹುಡುಗನಿಗೆ ಏತಕ್ಕೆ ಬೇಕು ಮನಸಿನ ಮಾತುಗಾರಿಕೆ?

ಕೊನೆಗೂ ಒಂದು ಹುಡುಕಾಟಕ್ಕಾಗಿಯೇ ತಾನೇ ಮನುಷ್ಯ ಹೊರಟಿರುವುದು?

ಅದನ್ನು ಅಲ್ಲ ಎಂದರೆ ಪ್ರಾಣಿಗಳೆಲ್ಲಾ ಕಂಡಾಪಟ್ಟೆ ಲವ್ ಮಾಡುತ್ತಾ ಡ್ಯುಯೆಟ್ ಹಾಡುತ್ತಾ ಡೀಪಾಗಿ ಲವ್ ಲೋಕದಲ್ಲಿ ಇರಬೇಕಿತ್ತಲ್ಲ.

ಹಕ್ಕಿಗಳೆಲ್ಲಾ ಪಕ್ಕಾ ಲವ್‌ಬರ್ಡ್‌ಗಳೇ ಆಗಿರುತ್ತಿದ್ದವಲ್ಲ.

20080213

ಆಮೇಲೆ ಇವನು


ಕೊನೆಗೂ ಪುಸ್ತಕ ಸಿದ್ಧವಾಗಿದೆ.


ತಪ್ಪೆಲ್ಲಾ ನನ್ನದೇ.


ತುಂಬಾ ಸಮಯದಿಂದ ಇಂಥ ಪುಸ್ತಕ ಮಾಡೋಣ ಹೇಳುತ್ತಾ ಇದ್ದವರು ನನ್ನ ಮೇಸ್ಟ್ರು ಪುರಂದರ ಭಟ್ಟರು.ಅವರು ಕಾರಂತರು ಕಟ್ಟಿದ ಕರ್ನಾಟಕ ಸಂಘದ ಅಧ್ವರ್ಯು.


ನಾನು ತುಂಬಾ ಶೈ.


ಕತೆ ಬರೆಯುವುದು ಗೊತ್ತು ಆದರೆ ಈ ಪುಸ್ತಕ ಮಾಡುವುದು ಅದನ್ನು ಹೊರತರುವುದು ಇತ್ಯಾದಿ ಎಲ್ಲಾ ನನಗೆ ಆಗುವ ಹೋಗುವ ಸಂಗತಿಯಲ್ಲ ಅಂತ ಸುಮ್ಮನಿದ್ದೆ.


ನನಗೆ ನನ್ನ ಕತೆಗಳ ಬಗೆಗೆ ಸದಾ ಅನುಮಾನ.


ಅಂತೂ ನಾನು ಸರಿ ಸಾರೂ ಎಂದೆ.


ಹಾಗೇ ಹೇಳಲು ನಾನು ತೆಗೆದುಕೊಂಡ ಅವಧಿ ಕೇವಲ ಎರಡೂವರೆ ವರ್ಷ.


ತಾರೀಕು ೨೪ ಇದೇ ತಿಂಗಳು ಈ ಕತೆ ಪುಸ್ತಕವನ್ನು ನಿಮ್ಮ ಕೈಗೆ ಒಪ್ಪಿಸುತ್ತಿದ್ದಾರೆ ಇದನ್ನು ಪ್ರೀತಿಯಿಂದ ರೂಪಿಸಿದ ಕರ್ನಾಟಕ ಸಂಘ.


ಪುಸ್ತಕವನ್ನು ಎತ್ತಿ ತೋರಿಸುವುದಕ್ಕೆ ಬರುವವನು ನನಗೆ ಅವನಲ್ಲದೇ ಇನ್ಯಾರೂ ಅಲ್ಲದ ನನ್ನ ಒಡನಾಡಿ ಗೆಳೆಯ ಜೋಗಿ.


ಅವರ ಜೊತೆ ಹಿರಿಯ ಸ್ನೇಹಿತ ನಾಗತಿಹಳ್ಳಿ ಚಂದ್ರಶೇಖರ್.


ನೀವೂ ಅಲ್ಲಿಗೆ ಬರಬೇಕು ಅಷ್ಟೇ..


ಬೇರೇನೂ ನನಗೆ ಗೊತ್ತಿಲ್ಲ.


ಏನೆಲ್ಲಾ ಇದೆ ಅಂತ ಅಲ್ಲಿಗೆ ಬನ್ನಿ ಗೊತ್ತಾಗುತ್ತದೆ.


ಎಲ್ಲಿಗೆ ಅಂದರೆ ಪುತ್ತೂರಿಗೆ.


ಅನುರಾಗ ವಠಾರಕ್ಕೆ.


ಬರ್ತೀರಲ್ಲ?

20080211

ಭೂಮಿ ಮುಟ್ಟಾದಳು!


+ಭೂಮಿ ಮುಟ್ಟಾದಳು!
ಹಾಗೆಂದರೆ ಯಾರಾದರೂ ಯಾಕೆ ನಂಬಬೇಕು ಮತ್ತು ಅದು ಹೇಗೆ ನಂಬುತ್ತಾ ಏನಂತ ಕೂರಬೇಕು? ಯಾರಾದರೂ ಇದನ್ನು ನಂಬುತ್ತಾ ನಂಬುತ್ತಾ ಆಚರಣೆಯೇ ಮಾಡಿಕೊಂಡು..ಆಚರಿಸಿಯೇ ಬಿಟ್ಟರೆ!
ಉಳಿದ ಯಾವುದಾದರೂ ದೇಶ,ಸಂಸ್ಕೃತಿ,ಸಮಾಜಗಳಲ್ಲಿ ಈ ಆಚಾರ ಉಂಟೋ ಅಥವಾ ಇಲ್ಲವೋ ನನಗೆ ಗೊತ್ತಿಲ್ಲ.ನಮ್ಮ ತುಳುನಾಡಿನಲ್ಲಿ ಇದಿದೆ.
ಭೂಮಿ ಮುಟ್ಟಾಗಿದ್ದಾಳೆ ಎಂದು ಈ ಜನ ಇಂದು ಆಚರಣೆಗೆ ಕುಳಿತಿದ್ದಾರೆ.ಮೂರು ದಿನ ಕಾಲ ನಮ್ಮ ಭುವಿ ಋತುಮತಿ ಎಂದು ಸಂಭ್ರಮ ಪಡುತ್ತಿದ್ದಾರೆ.ವಾರೆವ್ಹಾ!
ತುಳುವರಿಗೆ ಭೂಮಿ ಮುಟ್ಟಾಗೋದು ಒಂದು ಹಬ್ಬ.ಅದರ ಹೆಸರು ಕೆಡ್ಡಸ.ತಮ್ಮ ಕ್ಯಾಲೆಂಡರ್ ನಲ್ಲಿ ಪೊನ್ನಿ ತಿಂಗಳ ೨೭ನೇ ದಿನಕ್ಕೆ ಪಿರಿಯೆಡ್ ಆರಂಭವಾಗುತ್ತೆ.

ಇಂದು ಮುಟ್ಟಾದ ಭೂಮಿ ಸಂಕ್ರಮಣಕ್ಕೆ ಶುದ್ಧಳಾಗುತ್ತಾಳೆ.

ಮೂರು ದಿನ ಅವಳು ರಜಸ್ವಲೆ.
ಮುಟ್ಟಾದ ಭೂಮಿಯೆಂಬ ಈ ಜನರ ಗೆಳತಿಯನ್ನು ಅವರು ಈ ಮೂರೂ ದಿನಗಳ ಕಾಲ ನೋಯಿಸರು.ಅಗೆಯರು,ಕಡಿಯರು,ದುಡಿಯರು,ದುಡಿಸರು.
ಎಲ್ಲಾ ನಾಟಿ ಗೇಯ್ಮೆಗಳಿಗೆ ಮೂರೂ ದಿನ ಭರ್ತಿ ರಜೆ.
ಹಾಗಾದರೆ ಏನು ಮಾಡೋದು?
ಗಂಡಸರು ಕಾಡಲ್ಲಿ ಶಿಕಾರಿ ಹೋಗುವರು.ಮೊಲ ಮುಳ್ಳಂದಿ ಹಕ್ಕಿಗಳನ್ನು ಹೊಡೆಯುವರು.ಸುಲಿದು ಮಾಂಸ ತರುವರು.ಬೇಯಿಸಿ ಬಾಡೂಟ ಮಾಡುವರು.ಬ್ರಾಹ್ಮಣರು ಕೂಡಾ ಅಬ್ರಾಹಣ್ಯ ಎಂದು ಹೇಳಲಾಗುವ ನುಗ್ಗೆ ಬದನೆ ಕಾಯಿ ಅಡುಗೆ ಮಾಡಿ ತಿನ್ನುವರು.ಹೆಂಗಸರು ಮೂರನೇ ದಿನ ಅಂಗಳದಲ್ಲಿ ಕನ್ನಡಿ ಬಾಚಣಿಗೆ ಇಡುವರು,ಅರಿಶಿನ ಕುಂಕುಮ ಎಣ್ಣೆ ಯನ್ನು ನೆಲಕ್ಕೆ ಬೊಟ್ಟುಹಾಕುವರು.
ಭೂಮಿ ಫಲವಂತಿಕೆಗೆ ಸಿದ್ಧಳಾದಳು ಎಂದು ಈ ಜನ ಮುಂದಿನ ಕೃಷಿ ಕಾರ್ಯಕ್ಕೂ ಮುನ್ನ ಸಿಧ್ಧರಾಗುವ ರೀತಿ ಎಂಥಾ ಕಾಮವನ್ನೂ ನಾಚಿಸಬೇಕು.ಚಳಿಗಾಲ ಸರಿದು,ಇನ್ನೂ ಬೇಸಗೆಯ ಹೊತ್ತು ಏಳುವ ಮುನ್ನವೇ ಈ ಜನ ತಮ್ಮ ನೆಲವನ್ನು ಥೇಟ್ ಹುಡುಗಿ ಥರ ಅನುಭವಿಸುವುದು ಎಂಥ ಅನನ್ಯ!

20080208

ನಾಲ್ಕು ಸಾಲು-೩೫


೧.
ಅಕ್ಷರಗಳೆಲ್ಲಾ
ಒಗ್ಗಟ್ಟಾಗಿ
ಪಂಕ್ತಿ ಹಿಡಿದು ಕುಳಿತವು
ನಾವು
ಆಹಾ ಕಾವ್ಯವೇ ಎಂದೆವು.
೨.
ಅಕ್ಷರಗಳಿಗೆಲ್ಲಾ
ಮದ ಬಂದು
ಒಂದನ್ನೊಂದು ಉನ್ಮತ್ತದಿಂದ ಮಥಿಸಿದವು
ನಾವು ನಾವಾಗಿಯೇ ರಮಿಸಿದೆವು.
೩.
ಅಕ್ಷರಗಳೆಲ್ಲಾ
ಹೊಡೆದಾಡಿ
ಸೋತು ಮಲಗಿದವು.
ನಾವು ಆ ರಣರಮಗದಲ್ಲಿ
ಶಬ್ದಗಳನ್ನು ಬಿತ್ತಿದೆವು.
೪.
ಅಕ್ಷರಗಳೆಲ್ಲಾ
ಸಿಟ್ಟುಗೊಂಡು
ದೂರದೂರ ನಿಂತವು.
ನಾವು ಎತ್ತಿ ಮುದ್ದಾಡಿದೆವು
ಪ್ರೀತಿಯ ಹೊತ್ತಗೆ ಹುಟ್ಟಿತು.