20080130

ನಾಲ್ಕು ಸಾಲು-೩೪


೧.ದೇವರು

ಅಂತಿಮ.

ಅವನನ್ನು ಸೇರುವುದು ಅಂತಿಮ.

ದೇವರಾಚೆಗೆ ಏನಿದೆ ಎಂದರೆ

ಅದು

ಆರಂಭ

ಎಲ್ಲಾ ದೃಷ್ಟಾರರಿಗೂ.


೨.


ದೇವರೇ

ಎಲ್ಲರವನ್ನೂ ಸೃಷ್ಟಿಸಿದ

ಅಂದರೆ

ಸೃಷ್ಟಿ

ದೇವರಿಗಿಂತಲೂಅಚ್ಚರಿ.


೩.


ದೇವರಲ್ಲಿರುವ

ಚೆಲುವು

ಮತ್ತು

ಚೆಲುವಿನಲ್ಲಿರುವ

ದೇವರು

ಕಾಣುವುದು ಮೊದಲು ಚೆಲುವೇ

ಅಂದರೆ ದೇವರಿಗಿಂತಲೂ ಚೆಲುವು ದೊಡ್ಡದು.೪.


ದೇವರನ್ನು

ಅರಸಿಕೊಂಡು ಹೋದವನು

ಮರಳಿ

ಬಂದು

ದೇವರನ್ನು ನಿರಾಕರಿಸುವನು

ಅದುವೇ

ಪೂರ್ಣತ್ವ.

ಅದು ಆ ಸುಖದ ಕ್ರೀಡೆ.


ಕೃತಿಯೊಂದಕ್ಕೆ ಓದುಗ ತೆರೆದುಕೊಳ್ಳಬೇಕೆ ಅಥವಾ ಓದುಗನಿಗೆ ಕೃತಿ ತೆರೆದುಕೊಳ್ಳಬೇಕೇ ಎಂಬ ಪ್ರಶ್ನೆಗೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ.

ಒಂದು ವೇಳೆ ಕೃತಿಯೇ ತೆರೆದುಕೊಳ್ಳಬೇಕು ಎಂದಾದರೆ ಲೇಖಕನ ಜವಾಬ್ದಾರಿ ಏನು ಅಥವಾ ಅಂಥದ್ದೊಂದು ಜವಾಬ್ದಾರಿಯನ್ನು ಆತ ಹೊತ್ತುಕೊಳ್ಳುವ ಅಗತ್ಯ ಉಂಟೇ ಎಂದು ಕೇಳಬೇಕು.

ಹಾಳಾಗಿ ಹೋಗಲಿ ಲೇಖಕನಿಗೆ ಜವಾಬ್ದಾರಿಯೇ ಬೇಡ.ಅವನು ಅಥವಾ ಅವಳು ಅವರಿಷ್ಟಕ್ಕೆ ಅಂತ ಬರೆದಿದ್ದಾರೆ ಒಪ್ಪಿಕೊಳ್ಳುವಾ. ಹಾಗಾದರೆ ಆ ಕೃತಿಯ ಜವಾಬ್ದಾರಿ ಯಾರದ್ದು?ಆಗ ಓದುಗನ ಪಾತ್ರವೇನು ಮತ್ತು ಆ ಪಾತ್ರ ಅಥವಾ ಆ ಜವಾಬ್ದಾರಿಯನ್ನು ಅವನದ್ದು ಅಲ್ಲದ ಕಾರಣಕ್ಕೆ ಆತ ಏಕೆ ಒಪ್ಪಿಕೊಳ್ಳಬೇಕು ಎಂದು ನಾನು ಕೇಳಬಯಸುವೆ.

ಇಷ್ಟಾದ ಮೇಲೆ ಕೃತಿ ಅನಾಥವಾಗುವುದಿಲ್ಲವೇ?

ಯಾರೂ ಅದರ ಉತ್ತರದಾಯಿತ್ವ ಹೊಂದದೇ ಇರುವುದು ಎಷ್ಟು ಸರಿ ಮತ್ತು ಅದು ಈ ಸಾಮಾಜಿಕ ವ್ಯವಸ್ಥೆಯಲ್ಲಿ ಸಮರ್ಪಕವೇ?

ಇಲ್ಲಿ ತರ್ಕವೇ ಋಷಿ.

ಅನೇಕ ಬಾರಿ ಒಂದು ಸಣ್ಣ ಬರಹ ಕೂಡಾ ಹೀಗೇ ಆಗಿಬಿಡುತ್ತದೆ. ಒಂದು ಕಾದಂಬರಿ ಅಥವಾ ಒಂದು ದೊಡ್ಡ ಲೋಕೋತ್ತರ ಗ್ರಂಥ ಇಂತಿರ್ಪಎಂಬ ಆದ್ಯತೆಯನ್ನು ಹೊಂದಲಾರದೇ ಒದ್ದಾಡುತ್ತದೆ.ಒಂದು ಕಾವ್ಯ ಅಥವಾ ಒಂದು ಸುಂದರ ಚಿತ್ರಗಳೇ ತುಂಬಿರುವ ಪುಸ್ತಕ ನಿಮ್ಮ ಮುಂದೆ ಬಂದು ನಿಂತಿದೆ. ಅದನ್ನು ಬರೆದಾತನಿಗೆ ನೀವ್ಯಾರೋ ಗೊತ್ತಿರುವುದಿಲ್ಲ. ಇಷ್ಟಕ್ಕೂ ಆತ ಅದನ್ನು ನಿಮಗಾಗಿ ಬರೆದಿರುವುದೂ ಅಲ್ಲ.ಅವನು ನಿಮ್ಮ ವರ್ತಮಾನದಲ್ಲೇ ಇಲ್ಲ. ಹೀಗೇ ಎಷ್ಟೊಂದು ಭಾವಿಸೋಣ. ಹಾಗಿರುವಾಗ ನೀವು ಏತಕೆ ಅದನ್ನು ಓದಬೇಕು ಮತ್ತು ಅದನ್ನು ಓದಬೇಕು ಎಂದು ನಿಮಗೆ ಯಾಕೆ ಅನಿಸಬೇಕು.

ಏಕೆಂದರೆ ಅದರಲ್ಲಿ ಯಾವುದೋ ಬಂಧ ನಿಮ್ಮನ್ನು ನಿಮಗರಿವಿಲ್ಲದಂತೆ ಆವರಿಸಿದೆ.

ಹಾಗೇ ಓದಲು ಆ ಕೃತಿಕಾರ ಏನೂ ನಿಮಗೆ ಹೇಳದಿದ್ದರೂ ಓದುವಂತೆ ಕೊನೆಗೂ ಆ ಪುಸ್ತಕವೇ ಹೇಳಿದೆ.

ಆ ಮಟ್ಟಿಗೆ ಆ ಕ್ಷಣದಲ್ಲಿ ಲೇಖಕ ಆ ಕೃತಿಯ ಮೂಲಕ ನಿಮ್ಮ ಎದುರು ಮುಖಾಮುಖಿಯಾಗಿದ್ದಾನೆ.

ಇದನ್ನು ಪಂಪ,ಕುಮಾರವ್ಯಾಸನಿಂದ ತೊಡಗಿ ಚಿತ್ತಾಲರ ತನಕ ವಿಸ್ತರಿಸೋಣ. ಜೋಗಿ ಅವರ ಕತೆಗಳನ್ನು ಅವರು ಯಾವ ಕಾರ್ಯಕಾರಣಕ್ಕೇ ಬರೆದಿದ್ದಾರೋ ನಿಮ್ಮ ಜೊತೆ ಈ ಜೋಗಿ ಅಥವಾ ಆ ಬಸವಣ್ಣ ಆ ಕೃತಿಯ ಮೂಲಕ ಮುಖಾಮುಖಿಯಾಗುವುದನ್ನು ನೀವು ಓದುಗನಾಗಿಯೇ ಮೊದಲಾಗಿ ಅನುಭವಿಸುತ್ತೀರಿ. ಆದನ್ನು ನಿರಾಕರಿಸುವುದಾದರೂ ಹೇಗೆ.

ಈಗ ಮತ್ತದೇ ಮೂಲ ಪ್ರಶ್ನೆ,ಈ ಹಂತದಲ್ಲಿ ತೆರೆದುಕೊಂಡದ್ದು ಯಾರು ಓದುಗನಾದ ನೀವೋ ಅಥವಾ ಲೇಖಕ ಜೋಗಿಯೋ,ಬಸವಣ್ಣನೋ..?

ಯಾರಿಂದ ಆರಂಭ ಇದು?

ಒಂದು ಕೃತಿ ಮತ್ತು ಓದುಗ ನನ್ನ ಪ್ರಕಾರ ಮೈಥುನಕ್ಕೆ ಸಿದ್ಧಗೊಂಡ ಜೋಡಿಗಳ ಥರ.

ಇದು ತೀರಾ ಆಯಿತು ಎಂದು ನೀವು ಹೇಳಿದರೆ ನಾನು ಏನೂ ಮಾಡುವಂತಿಲ್ಲ.ಓದುಗ ಮತ್ತು ಕೃತಿ ಮಂಚವೇರುವ ಕ್ಷಣ ಅದು. ಇಬ್ಬರೂ ಉನ್ಮತ್ತರಾಗದ ಹೊರತು ಕೃತಿಯಾಗಲಿ ಓದುಗನಾಗಲಿ ಒಂದು ರಸಾನುಭವ ಪಡೆಯಲು ಸಾಧ್ಯವೇ ಇಲ್ಲ.

ಓದುವ ಕ್ರಿಯೆಯೇ ಮೈಥುನ.

ಅದು ಪರಿಪರಿಯ ಅನುಭೂತಿಗಳನ್ನು ಪಡೆಯುತ್ತದೆ ಮತ್ತು ಅಪಾರ ಸ್ತರಗಳನ್ನು ದಾಟುತ್ತದೆ. ಓದಿನಲ್ಲಿ ಕೃತಿಯ ಎಲ್ಲಾ ಮಗ್ಗುಲುಗಳನ್ನು ಓದುಗ ತಡವುತ್ತಾನೆ. ಕೃತಿಯೂ ಓದುಗನಿಗೆ ಎಲ್ಲವನ್ನೂ ಬಿಚ್ಚಿಕೊಡುತ್ತಾ ಹೋಗುತ್ತದೆ. ಹೀಗೆ ಹೇಳುವಾಗ ಕೃತಿ ಹೆಣ್ಣೆಂದೂ ಓದುಗ ಗಂಡೆಂದೂ ನೀವು ಭಾವಿಸಿದರೆ ಅದು ತಪ್ಪು. ಕೃತಿ ತಾನೇ ತಾನಾಗಿ ಗಂಡೂ ಆಗುವ ಕ್ಷಣಗಳಿವೆ.

ಅದು ಓದುಗನನ್ನೂ ತನ್ನ ಅಪ್ಪುಗೆಯಲ್ಲಿ ಕರಗಿಸಬಹುದು.

ಓದುಗ ಕೃತಿಯ ಮುದ್ದಾಟಕ್ಕೆ ಸಾಕ್ಷಾತ್ ಹೆಣ್ಣಿನ ಥರ ಮುಲುಗುಟ್ಟಬಹುದು.

ಕೊನೆಗೂ ಆಗಿರುವುದು ಅಪೂರ್ವ ಸಮಾಗಮ.

ಅಲ್ಲಿ ಉಳಿಯುವುದು ಒಂದು ಧನ್ಯತೆ.

ಅದು ಓದುಗನದ್ದೂ ಹೇಗೆಯೋ ಕೃತಿಯದ್ದೂ ಹೌದು.

ಈ ಮಿಲನಮಹೋತ್ಸವದಲ್ಲಿ ಯಾರಿಗೆ ಯಾರೂ ಜವಾಬ್ದಾರಿ ಹೊಂದಿರುವ ಅಗತ್ಯವೇನಿದೆ?

ಆ ಅನುಭವ ನಮ್ಮದಾಗುವುದಷ್ಟು ಇನ್ಯಾರದ್ದೂ ಆಗಲಾರದು.

20080127

ನಾಲ್ಕು ಸಾಲು-೩೩

೧.
ಆಕಾಶದಲ್ಲಿದ್ದ
ಮೋಡ
ಕೊನೆಗೂ ಮಳೆಯಾಗಲೇಬೇಕು
ಅಥವಾ
ಒಂದು ದಟ್ಟ ಇಬ್ಬನಿಯಾದರೂ..
ಗಿಡದ ಮೇಲಿನ ಎಲೆ
ಹೀಗೆ ಪ್ರೀತಿಸುವಂತಿದ್ದರೆ..
೨.
ಮುಗಿಲು ಸಾಗುವ
ಹಾಗೇ
ತಾನೂ ಮೆತ್ತಗೆ ಚಾಚಬೇಕು ಮುಗಿಲ ಜೊತೆಗೆ
ಒಂದು ಗಿಡ ಹೀಗೆ.. ಹಂಬಲಿಸುವಂತಿದ್ದರೆ...

೩.
ಹಗಲಲ್ಲೂ
ಬಂದು
ನನ್ನನ್ನು ಸಂತೋಷಗೊಳಿಸಿ
ಎಂದು ನಕ್ಷತ್ರಗಳಿಗೆ
ಯಾವ ಹುಡುಗಿಯೂ ಕರೆಯುವುದಿಲ್ಲ
ರಾತ್ರಿಗೇ ಕಾಯುತ್ತಾರೆ
ಏಕೋ..
೪.
ಚಂದಿರನ ಕಾಣುವ
ಆತುರದಲ್ಲಿ
ಹುಡುಗಿ
ಸೂರ್ಯ ಮುಳುಗುವುದನ್ನು
ನೋಡಲಿಲ್ಲ
ಸೂರ್ಯ ಕಡಲಲ್ಲಿ ಕಣ್ಣೀರು ಹಾಕಿದ.
ವ್ಯರ್ಥ !

20080122

ನಾಲ್ಕು ಸಾಲು-೩೨


೧.


ನಿತ್ಯವೂ

ಕಾಣುವ

ನಕ್ಷತ್ರವನ್ನು

ಎಂದೂ ಮುಟ್ಟಲಾರೆ ಎಂಬ ಸತ್ಯ

ಹತಾಶೆಯಲ್ಲ,

ಸ್ಫೂರ್ತಿಯ ಮಿನುಗು.


೨.


ಮನಸ್ಸನ್ನು

ನಿತ್ಯ ಯಾತ್ರೆಗೆ

ಕಳುಹಿಸಿದ

ದೇಹ

ಎಲ್ಲ ಸುಖ ತಲ್ಲಣಗಳನ್ನು

ತಾನೇ ಕೊಳ್ಳೆಹೊಡೆಯುವುದು

ಎಷ್ಟು ವಿಚಿತ್ರ.


೩.

ಕಳೆದ ಹೊತ್ತಿನ

ನೆನಪಿಲ್ಲದ

ಸೀಪಕ್ಕಿಗೆ

ಹೂವಿನ ಮಕರಂದ ನಾಳೆಗೆ ಇರದು

ಎಂದು ಗೊತ್ತಿರುವುದು

ಎಂಥಾ ಸೊಗಸು.


೪.


ನೆಲದಿಂದ

ಮೇಲೆ ಹೋಗಲಾರದ,

ಕೆಳಗೆ ಇಳಿಯಲಾರದ

ಮನುಷ್ಯ

ನಿಜಕ್ಕೂ ಸ್ಥಾವರ,

ಉಳಿದೆಲ್ಲವೂ ಜಂಗಮ

20080121

ನಾಲ್ಕು ಸಾಲು-೩೧


೧.


ಬಂಧಿಯಾದ

ರಾಜನಿಗೆ

ಕಳೆದುಕೊಂಡ ರಾಜ್ಯಕ್ಕಿಂತಲೂ

ಬರಬಹುದಾದ ಸಾವು

ದುಃಖ ಉಮ್ಮಳಿಸುವುದು.


೨.


ಅರಸನ ಕಿರೀಟ

ಮಹಾರಾಣಿಯ ಮೇನೆ

ಮಂತ್ರಿಯ ಪೇಟ

ಸೈನಿಕನ ಗುರಾಣಿ

ಸಜ್ಜನ ಪ್ರಜೆಗಳಲ್ಲಿ ದಂಗೆಯ ನವಿರೆಬ್ಬಿಸಿದರೆ

ಅದು ನಿಜವಾದ ಪ್ರಜಾಸತ್ತೆ.


೩.


ಬೆಳೆಯಲಾರದ

ಬಂಡೆಗಳ ಸೆಲೆಯೊಳಗೆ

ಮುಳ್ಳುಗಂಟಿ ಕೂಡಾ

ಹೂವರಳಿಸಿ,

ಸವಾಲಾಗುವುದು.


೪.


ಬೆಳದಿಂಗಳನ್ನು

ಯಾವ ನ್ಯಾನೋ ವಿಜ್ಞಾನವೂ

ಹಿಡಿದು ತುಂಬಿಟ್ಟುಕೊಳ್ಳದು

ಎಂಬಲ್ಲಿಗೆ

ಚಂದಿರನು ನನ್ನೊಳಗೆ ಬಂದಿಳಿಯುವನು.

ಲಿಫ್ಟು..ಲಿಫ್ಟು..


ಆದರೂ ನಾವು ಕಾಯುತ್ತಿರುತ್ತೇವೆ,

ಇನ್ನೊಂದು ಕ್ಷಣದಲ್ಲಿ ಅಥವಾ ಇನ್ನೊಂದು ದಿನದಲ್ಲಿ ಅಥವಾ ಇನ್ನೊಂದು ತಿಂಗಳಲ್ಲಿ ಅಥವಾ ಇನ್ನೊಂದು ಜನ್ಮದಲ್ಲಿ ಲಿಫ್ಟ್ ಆಗಿಯೇ ಬಿಡುತ್ತೇವೆ ಎಂದು.

ಆದರೂ ನಾವಾಗಿ ಎಂದೂ ಲಿಫ್ಟ್ ಆಗಲಾರೆವು.

ನಾವು ಯಾರಾದರೂ ಬಂದು ನಮ್ಮನ್ನು ಲಿಫ್ಟ್ ಮಾಡುತ್ತೇವೆ ಎಂದು ನಂಬುತ್ತೇವೆ ..

ಅಥವಾ ನಂಬುಗೆಯಿಂದ ನಾವು ಕಾಯುವುದರಲ್ಲಿ ಅದೇನೋ ಸುಖ ಕಾಣುತ್ತೇವೆ.

ನೀವು ಯಾವುದಾದರೂ ಒಂದು ಬಹುಮಹಡಿ ಕಟ್ಟಡದ ಬಾಗಿಲಲ್ಲಿ ನಿಂತು ನೋಡಿ. ಎರಡನೇ ಮಹಡಿಯಲ್ಲಿ ನೀವು ನೋಡಬೇಕಾದವರು ಇದ್ದಾರೆ. ಬಹುಶಃ ಅವರೇ ನಿಮ್ಮನ್ನು ಅಗೋ ಅಲ್ಲಿಂದ ನೋಡುತ್ತಾ ಇದ್ದಾರೆ. ಆದರೂ ನೀವು ಮಹಡಿಯ ಮೆಟ್ಟಿಲುಗಳ ಬಳಿ ಸಾಗುವುದಿಲ್ಲ . ನಿಮ್ಮ ಪಾದಗಳು ಆ ಲಿಫ್ಟ್‌ನ ಬಳಿ ಹೋಗಿ ನಿಲ್ಲುತ್ತವೆ.

ಪಟಪಟಾಂತ ನೂರು ಹೆಜ್ಜೆ ಹಾಕಲು ನಿಮ್ಮನ್ನು ಆ ಲಿಫ್ಟು ಏಕೆ ತಡೆಯಿತು?

ಅಥವಾ ಆ ಲಿಫ್ಟ್‌ನ ಆಹ್ವಾನ ಅದೇನು ನಿಮ್ಮನ್ನು ಆ ಪಾಟಿ ಕರೆಯಿತು?

ಕೊನೆಗೂ ನೀವು ಲಿಫ್ಟ್ ನ ಬಟನನ್ನು ಅದುಮಿದ್ದೀರಿ. ಆಗ ಅದು ತಾನು ತುತ್ತ ತುದಿಯಲ್ಲಿದ್ದೇನೆ ಎಂಬ ಸಂದೇಶ ಕಳುಹಿಸುತ್ತದೆ.ಅದು ಕೊನೆಗೂ ನಿಮ್ಮ ಬಳಿ ಬಂದು ನಿಲ್ಲುವುದನ್ನು ಕಾಯುತ್ತದೆ.ಒಳಗಿನ ಅಪರೇಟರ್ ಅವರಿವರನ್ನು ಏರಿಸಿ,ಇಳಿಸಿ,ಕರೆದು,ಬಿಟ್ಟು ನಿಮ್ಮ ಬಳಿಗೆ ಬಂದಾಗ ದಳಿ ಬಾಗಿಲು ತೆರೆದು ನೀವು ಒಳಗೆ ನಿಂತು ಅದೆಂಥದ್ದೋ ಪ್ರಪಂಚ ಪೌರುಷದಲ್ಲಿ ಎರಡನೇ ಮಹಡಿಗೆ ಸಾಗುತ್ತೀರಿ.

ಆ ವೇಳೆಗೆ ಇಡೀ ಭೂಮಿ ನಿಮ್ಮೊಡನೆ ಸಾಗುತ್ತಿರುವ ದಿವ್ಯಾನುಭೂತಿ ನಿಮ್ಮಲ್ಲಿ.

ನೆನೆದಲ್ಲಿಗೆ ಸಾಗುತ್ತೇನೆ ಎಂಬ ಭರವಸೆ ನಿಮ್ಮಲ್ಲಿರುತ್ತದೆ..

ಆ ವೇಳೆಗೆ ಅದರೊಳಗೆ ಮೊದಲ ಮಹಡಿಯಿಂದ ಬಂದ ಆ ವ್ಯಕ್ತಿ ಸೇರಿಕೊಳುತ್ತಾನೆ. ಆತನಿಗೋ ಮತ್ತೆ ನೆಲದೊಳಗಿನ ಅಂತಸ್ತು ತಲುಪಬೇಕು. ಆಪರೇಟರ್ ಲಿಫ್ಟನ್ನು ಮೈನಸ್ ಎರಡಕ್ಕೆ ರವಾನಿಸುತ್ತಾನೆ. ಮೇಲಿನ ಎರಡನೇ ಅಂತಸ್ತಿಗೆಂದು ಹೊರಟ ನೀವು ಯಾರದ್ದೋ ಕಾರಣಕ್ಕೆ ಕೆಳಗಿನ ಎರಡನೇ ಅಂತಸ್ತಿಗೆ ಬಂದು ನಿಲ್ಲುತ್ತೀರಿ.

ಶರೀಫರು "...ಕಾಲ ಕತ್ತಲೆಯೊಳಗೆ ನಾನು ಮೇಲಕೇರಿ ಹೋಗಲಾರೆ.." ಎನ್ನುತ್ತಾರೆ.

ಲಿಫ್ಟ್ ಅನ್ನೋದು ಇಲ್ಲಿ ಸಾಂಕೇತಿಕ ಮಾತ್ರಾ.

ಪ್ರತೀ ಬದುಕಿನಲ್ಲೂ ಪ್ರತೀ ಕ್ಷಣದಲ್ಲೂ ಇಂಥಾ ದಳಿಬಾಗಿಲುಗಳು ತೆರೆಯುತ್ತಿರುತ್ತವೆ.ಲಿಫ್ಟ್‌ಗಾಗಿ ನಾವು ಕಾಯುತ್ತಾ ಇರುತ್ತೇವೆ. ಲಿಫ್ಟ್ ಬರುತ್ತದೆ,ನಾವು ಹೋಗಬೇಕಾದ ಅಂತಸ್ತಿಗೆ ಹೊರಡುತ್ತೇವೆ,ಆದರೆ ಕೆಲವೊಮ್ಮೆ ಮೈನಸ್ ಗೆ ರವಾನೆಯಾಗುತ್ತೇವೆ.

ಕೆಲವೊಮ್ಮೆ ವಿದ್ಯುತ್ ಕೈಕೊಟ್ಟು ಕೈಕೊಟ್ಟು ಲಿಫ್ಟ್ ಮೇಲೆಯೂ ಕೆಳಗೂ ಇಲ್ಲದಂತೆ ನಿಂತರೂ ಆಯಿತು.

ಆಗ ನಾವು ಯಾರಿಗೆಲ್ಲಾ ಮೊರೆ ಇಡುತ್ತೇವೆ!

ರಸ್ತೆ ಪಕ್ಕ ನಿಂತವಳು, ಮೋರಿ ಮೇಲೆ ಕುಳಿತ ಬೀಡಾಡಿ ಹುಡುಗ, ಯಾರದ್ದೋ ಮೊಬೈಕ್, ಇನ್ಯಾರದ್ದೋ ಕಾರು, ಒಂದು ಲಿಫ್ಟ್ ಆಫರ್..

ನಾವು ಲಿಫ್ಟ್ ಕೇಳದೇ ಲಿಫ್ಟ್ ಆಗುತ್ತೇವೆ ಎಂದೆಲ್ಲಾ ಮನದಣಿಯೆ ಸುಖಾ ಸುಮ್ಮನೆ ಖುಷಿ ಪಟ್ಟು ಕಾಯುವವರು.

ಆಮೇಲೆ ಭರ್ಜರಿ ಬೆಂಕಿ ಒಲೆಯಂಥಾ ಬಸ್ಸಿನೊಳಗೆ ಸೇರಿ ಸಾಗುವವರು.

ಗೋದಾಮಿನಲ್ಲಿ ಗೋಣಿಯಲ್ಲಿ ಕುಳಿತ ಅಕ್ಕಿ, ಡಬ್ಬಿಯೊಳಗಿನ ಎಣ್ಣೆ ,ಪಾಲಿಕಾ ಬಜಾರಿನ ಬ್ಯಾಗು,ಶೋರೂಮಿನ ಶರಟು,ಡಿಸ್ಕೌಂಟಿನ ಸಾರಿ,ಫ್ರಾಂಚೈಸಿಯ ಪ್ಯಾಂಟು,ಬಾಟಲಿನ ಕೆಂಪು ಮದ್ದು,ಚೀಲದೊಳಗಿನ ಬೆಲ್ಲ, ಬಾಕ್ಸಿನೊಳಗಿನ ಸೋಪು,ಬುಕ್ಕಿನೊಳಗಿನ ಕತೆ..ಎಲ್ಲಾ ಸದಾ ಲಿಫ್ಟಿಗಾಗಿಯೇ ಕಾಯುತ್ತಿರುತ್ತವೆ.

ಒಂದು ಸುಂದರ ಮನಸ್ಸು,ಒಂದು ಸಂವೇದನಾ ಹೃದಯ,ಒಂದು ಜತೆ ಮುಗ್ಧ ಕಂಗಳ ಹೊತ್ತ ಹುಡುಗಿ ಅವಳಿಗೆ ಅವಳಿಗೆ ಅರಿವಿಲ್ಲದಂತೆ ಲಿಪ್ಟ್ ಆಗಿ ಬಿಡುತ್ತಾಳೆ. ಹೃದಯದಿಂದ ಹೃದಯಕ್ಕೆ ಮನಸ್ಸಿನಿಂದ ಮನಸ್ಸಿಗೆ ಕಣ್ಗಳಿಂದ ಕಣ್ಗಳಿಗೆ ಮಾತಿನಿಂದ ಮನಸ್ಸಿಗೆ ,ಭಾವನೆಗಳಿಗೆ,ಹೃದಯಕ್ಕೆ ಅವನಿಂದ ಅವಳಿಗೆ ಇವನಿಂದ ಇವಳಿಗೆ ಪ್ರತಿ ಕ್ಷಣವೂ ಒಂದು ಲಿಫ್ಟ್ ಕಾಯುತ್ತಾ ಇದೆ ಎಂದರೆ ..

ದಳಿಬಾಗಿಲು ತೆರೆಯುವ ಘಳಿಗೆಗೆ ಕಾಯುವುದರಲ್ಲೇ ಎಲ್ಲಾ ಇರೋದು..

20080115

ನಾಲ್ಕು ಸಾಲು-೩೦


೧.

ಯಾವುದೇ ಸಂಖ್ಯೆಯನ್ನು

ಯಾವುದೇ ಸಂಖ್ಯೆಯಿಂದಲೂ

ಭಾಗಿಸಬಹುದು

ಎಂಬ

ಸತ್ಯದಲ್ಲಿ

ಶೇಷಗಳೆಲ್ಲಾ ಅನುಭಾವ ತೋರುವವು.

೨.


ಒಂದು

ಅಂಕೆ ಕೂಡಾ

ಸಂಖ್ಯೆಯಾಗಲು

ಇನ್ನೊಂದರ

ಗೆಳೆತನ ಮಾಡಲೇಬೇಕು

ಎಂದಾಗ

ಕೂಡುವಿಕೆಯಅರ್ಥ ಸಂಪಾದಿಸಿಕೊಂಡೆ.


೩.


ಇದ್ದ

ಎಲ್ಲಾ

ಸಂಖ್ಯೆಗಳನ್ನು

ಹರಡಿಕೊಂಡು

ಸಾಗಿದವನು

ಮರಳಿ ಬರಲಾರ

ಎಂದರೆ ಅದುವೇ ಮೋಕ್ಷ.


೪.


ಯಾವ

ಸಂಖ್ಯೆಯೂ

ತಾನಾಗಿ ಸೃಷ್ಟಿಯಾಗಲಾರದು

ಎಂದರೆ

ಅದು ಎಂಥಾ ಆಧ್ಯಾತ್ಮ !

20080113

ನೆಲದ ನೆಲೆ ಕಳೆದುಕೊಂಡು..


ಗೆಳೆಯ ವಿನಾಯಕ ಭಟ್ಟ ಮಾತನಾಡುತ್ತಿದ್ದರು.


ಕರಾವಳಿಗೆ ವಿಶೇಷ ವಿತ್ತ ವಲಯ ಬಂದಾಗ ಏನಾಗುತ್ತದೆ ಎಂಬ ಬಗ್ಗೆ ಅವರು ಹೇಳುತ್ತಾ ಹೇಳುತ್ತಾ ಹೇಳಿದ್ದು,"ವಿತ್ತ ವಲಯ ಬಂದಾಗ ಆ ನಕಾಶೆಯಲ್ಲಿ ನಾಲ್ಕು ಗ್ರಾಮಗಳೇ ಇರೋದಿಲ್ಲ.."


ನಾನು ಬೆಚ್ಚಿ ಬಿದ್ದೆ.ನನಗೆ ಅದು ಗೊತ್ತೇ ಇರಲಿಲ್ಲ.


ವಿನಾಯಕ ಭಟ್ಟ ಹೇಳಿದರು,ವಿತ್ತ ವಲಯದ ನಂತರ ಇನ್ನೊಂದು ಬರಲಿದೆ,ಅದು ಪೆಟ್ರೋ ಸ್ಥಾವರ. ಆ ಸ್ಥಾವರಕ್ಕೆ ಅದೆಷ್ಟು ದೊಡ್ಡ ಜಮೀನು ಬೇಕು ಎಂದರೆ ಮಂಗಳೂರು,ಉಡುಪಿನೂ ಸಾಕಾಗೋದಿಲ್ಲ.


ಆಮೇಲೆ ನಾನು ಚಿಂತಿಸುತ್ತಾ ಕುಳಿತೆ.ಹೇಗೆ ನಮ್ಮ ನೆಲವನ್ನು ನಾವು ನಮಗರಿವಿಲ್ಲದಂತೆ ಕಳೆದುಕೊಳ್ಳುತ್ತೇವೆ ಮತ್ತು ಅದು ನಮ್ಮ ಎಂಥಾ ಮಾನಸಿಕತೆಯ ವ್ಯಾಪಾರ ಎಂದು.


ಇದನ್ನೆಲ್ಲಾ ಊಹಿಸೋದು ಕಷ್ಟ.


ಒಂದು ನೆಲದ ಜೊತೆ ಒಬ್ಬನ ಸಂಬಂಧ ಎಷ್ಟೊಂದು ಗಾಢವಾಗಿರಬಹುದು ಎಂದು ನೆಲದ ಪ್ರೀತಿ ತಿಳಿದವರಿಗೆಲ್ಲಾ ಗೊತ್ತಿದೆ. ಯಾವುದೇ ಊರಲ್ಲಿ ಹೋಗಿ ಏನೇ ಆಗಿದ್ದರೂ ಹುಟ್ಟಿದ ನೆಲ ಹುಟ್ಟಿಸುವ ಕಮ್ಮನೆ ಪ್ರತ್ಯೇಕವೇ ಆಗಿರುತ್ತದೆ. ನೀವು ನಾಳೆ ಕೆನಡಾದ ಸೆನೆಟರ್ ಆಗಬಹುದು ಆದರೆ ನಿಮ್ಮ ಆ ಹುಟ್ಟಿದ ಊರು ಆ ಕೇರಿ ಆ ಜನ, ಆ ಸೈಕಲ್ ಅಂಗಡಿ, ಹಳ್ಳಿ ಶಾಲೆಯ ಮಾಸ್ತರರು,ಅವರ ಬೆತ್ತ, ಮೊದಲ ಬಾರಿಗೆ ಕದ್ದು ಬೀಡಿ ಸೇದಿದ್ದು,ದೇವಸ್ಥಾನ,ಜಾತ್ರೆ ಚರುಮುರಿ,ಪುಗ್ಗೆ...ಹೀಗೆ ಪ್ರತಿಯೊಂದೂ ದಿನನಿತ್ಯವೂ ನಿಮ್ಮನ್ನು ಬಂದು ಕಾಡುತ್ತದೆ,ಸೊಂಟದಿಂದ ಇಳಿಸಿದ ಪುಟ್ಟ ಮಗುವಿನ ಹಾಗೇ.


ನಮ್ಮ ಗೆಳೆಯರೊಬ್ಬರಿದ್ದರು.ಅವರು ಹಡಗು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡರು.ಕೈತುಂಬಾ ಸಂಬಳ ಬೇರೆ. ಅವರು ಹಡಗು ಹತ್ತಿ ಹೋದರು.ವಾರ ಕಳೆಯಿತು,ತಿಂಗಳು ಕಳೆಯಿತು.ಅದೇ ಹಡಗು,ಅದೇ ಸಮುದ್ರ. ಒಂದು ದಿನ ಅವರಿಗೆ ಇದ್ದಕ್ಕಿದ್ದಂತೆ ಮನೆಯ ಎದುರಿನ ಬಾವಿಕಟ್ಟೆಯ ಬಳಿ ಇರುವ ಹಲಸಿನಮರದ ನೆನೆಪಾಯಿತು. ಆಗಲೇ ಅವರಿಗೆ ಗೊತ್ತಾದದ್ದು,ಇದು ಹಲಸಿನ ಹಣ್ಣಿನ ಸೀಸನ್ನು ಎಂದು. ಅದು ಹೇಗೆ ಹಲಸು ಆ ಕಾಲಕ್ಕೆ ತನ್ನ ನೆನೆಪನ್ನು ಅವರಿಗೆ ಬಿಚ್ಚಿಕೊಟ್ಟಿತೋ ಎಂದರೆ ಅದೇ ಮಣ್ಣಿನ ಗುಣ.ಅದೇ ಕರುಳುಬಳ್ಳಿಯ ಸಂಬಂಧ.ಆಮೇಲೆ ಅವರಿಗೆ ಜೊತೆಜೊತೆಯಾಗಿ ಹಲಸಿನ ಹಣ್ಣು, ಕೊಟ್ಟಿಗೆ,ಗೆಣಸಲೆ,ಉಂಡಲಕಾಳು,ಸುಕ್ರುಂಡೆ,ಹಲಸಿನಹಣ್ಣಿನಪಾಯಸ ಎಲ್ಲಾ ಎಷ್ಟೊಂದು ನೆನಪಾಗಿ ಬೆನ್ನಟ್ಟಿತು ಎಂದರೆ ಅವರು ಆ ಸಮುದ್ರದ ನಡುವೆ ಏನೂ ಮಾಡಲೂ ಆಗುವುದಿಲ್ಲ ಎಂದು ಗೊತ್ತಾಗಿ ಬಿಕ್ಕಿಬಿಕ್ಕಿ ಅತ್ತರಂತೆ.


ಇದುವೇ ಮಣ್ಣಿನ ಸಂಬಂಧ.


ನಮ್ಮ ಭೂಮಿಯನ್ನು ನಾವು ಇನ್ನೊಬ್ಬರಿಗೊಪ್ಪಿಸಿ ಹೋದಾಗ ಎಂಥಾ ಋಣವನ್ನು ಕಳೆದುಕೊಳ್ಳುತ್ತೇವೆ ಎಂದರೆ ಇದೇ.ಒಂದು ಉದ್ದಿಮೆ ಅಥವಾ ಯೋಜನೆಗಾಗಿ ನೆಲವನ್ನು ಒಪ್ಪಿಸುವುದು ನಿಜಕ್ಕೂ ಅಮಾನವೀಯ ಮತ್ತು ಜೀವ ವಿರೋಧಿ ಕ್ರಿಯೆ.


ಸರಕಾರ ಕಾನೂನುಗಳ ಮೂಲಕ ನೆಲದ ಹಕ್ಕನ್ನು ಕಿತ್ತುಕೊಳ್ಳಬಹುದು ಅಥವಾ ಕಂಪನಿ ಹಣದ ಮೂಲಕ ನೆಲದ ಬಂಧುತ್ವವನ್ನು ಕೊಂಡುಕೊಳ್ಳಬಹುದು.


ಆದರೆ ನೆಲ ಮಾತ್ರಾ ಬಿಟ್ಟುಹೋಗುತ್ತಿರುವವನಿಂದ ದೂರವಾಗಲಾರದು.


ಅದೇ ನೆಲ ದೇವರಾಗಿ ಅಥವಾ ದೈವವಾಗಿ ಕಾಡುತ್ತದೆ.


ನಮ್ಮ ಊರಿನಲ್ಲಿ ಹೀಗೆ ಆಗಿರೋ ಒಂದು ಘಟನೆ ಹೇಳುತ್ತೇನೆ.ರಷ್ಯಾದಲ್ಲಿ ದೊಡ್ಡ ವೈದ್ಯರಾಗಿದ್ದ ಓರ್ವ ವ್ಯಕ್ತಿ ನಮ್ಮ ಗ್ರಾಮದ ಒಂದು ಶೆಟ್ಟರ ಮನೆಗೆ ಬರುತ್ತಾನೆ. ಅವನ ಮೈ ತುಂಬಾ ತುರಿ ಕಜ್ಜಿ. ಸ್ವತಃ ವೈದ್ಯನಾಗಿ ಅದನ್ನು ಗುಣಪಡಿಸಲು ಅವನಿಗೆ ಆಗಿಲ್ಲ. ಕೊನೆಗೊಮ್ಮೆ ಯಾವುದೋ ಜ್ಯೋತಿಷಿಯ ಬಳಿ ಹೋಗಿದ್ದಾನೆ. ಆತ ಅವನಿಗೆ ಈ ಶೆಟ್ಟರ ಮನೆಗೆ ಹೋಗಲು ಸೂಚಿಸಿದ್ದಾನೆ.ರಷ್ಯಾದ ವೈದ್ಯ ಹೇಳಿದ ಪ್ರಕಾರ ಅಥವಾ ಅವನಿಗೆ ಜ್ಯೋತಿಷಿ ಹೇಳಿದ ಪ್ರಕಾರ ಈ ಶೆಟ್ಟರ ಭೂಮಿ ಒಂದಾನೊಂದು ಕಾಲದಲ್ಲಿ ಈತನ ಮೂಲ ನೆಲೆ. ಈತನ ಪೂರ್ವಿಕರು ಇಲ್ಲಿಂದ ಹೊರಟು ಅದೆಂದೋ ಹೋಗಿದ್ದಾರೆ. ಆದರೆ ಈ ನೆಲದಲ್ಲಿ ಅವರು ಆರಾಧಿಸುತ್ತಿದ್ದ ನಾಗದೇವರು ಮಾತ್ರಾ ಇಲ್ಲೇ ಉಳಿದಿದ್ದಾನೆ. ಆತ ಇವರ ಜೊತೆ ಹೋಗಿಲ್ಲ.ಮಾತ್ರವಲ್ಲ ತನ್ನನ್ನು ಬಿಟ್ಟುಹೋದ ಬಗ್ಗೆ ಆತ ತುಂಬಾ ಖತಿಗೊಂಡು ರಷ್ಯಾದಲ್ಲಿರೋ ವೈದ್ಯರಿಗೆ ಕಾಡುತ್ತಿದ್ದಾನೆ. ಆದ್ದರಿಂದ ಆ ನಾಗದೇವರನ್ನು ಪ್ರತೀವರ್ಷ ಇವರು ಬಂದು ಸಂತೃಪ್ತಿಗೊಳಿಸಬೇಕು,ಹಾಗೇ ಮಾಡಿದರೆ ಮಾತ್ರಾ ತುರಿಕಜ್ಜಿ ವಾಸಿಯಾದೀತು.


ಎಲ್ಲಾ ಕಥೆ,ದಂತಕಥೆಗಳನ್ನು ಬದಿಗಿಡೋಣ.


ಆದರೆ ನೆಲದ ಸಂಬಂಧ ಅದು ಯಾವ ರೂಪದಲ್ಲಿ ಬಂದು ಕುಳಿತಿರುತ್ತದೆ ಎಂಬುದನ್ನು ಈ ಘಟನೆಯಲ್ಲಿ ನೆನಪಿಸೋಣ.


ಇಂಥಾ ನೂರಾರು ಕಥೆಗಳು,ಘಟನೆಗಳಿವೆ.ಎಲ್ಲದರಲ್ಲೂ ನೆಲದ ಋಣ ಕಾಡುತ್ತದೆ.


ಮುಳುಗಿದ ಊರಿನಲ್ಲಿ ಒಂದು ಅಡಕೆ ಮರವನ್ನೋ ಒಂದು ದೇವಸ್ಥಾನವನ್ನೋ ಮತ್ತೆ ಕಂಡರೆ ಆ ಊರನ್ನು ಬಿಟ್ಟುಹೋದ ಒಬ್ಬನಿಗೆ ಏನಾಗಬಹುದು ಎಂದು ನಾನಂತೂ ಸುಮ್ಮನೆಯೂ ಊಹಿಸಲಾರೆ.


ಇನ್ನು ವಿಶೇಷ ವಿತ್ತ ವಲಯದ ನಕಾಶೆಯಲ್ಲಿ ಒಂದು ಊರೇ ಕಾಣೆಯಾದಾಗ ಆ ಊರಿನ ಮಂದಿ ಎಲ್ಲೋ ಹೋಗಿ ಕುಳಿತಾಗ ಎಲ್ಲಿಂದ ಬಂದಿರಿ ಎಂದರೆ ಎಲ್ಲಿಂದ ಎಂದು ಹೇಳುವದು ಅಥವಾ ಇಂಥಲ್ಲಿಂದ ಎಂದು ಏನನ್ನು ತೋರಿಸುವುದು..!

20080105

ನಾಲ್ಕು ಸಾಲು-೨೯


೧.


ರಾಜನ

ಆದೇಶಗಳು

ಪ್ರಜೆಗಳ ಅಂಗಳಗಳಲ್ಲಿ

ಬಂಜೆ ಬೀಜಗಳಾಗಿ ಬಿತ್ತಲ್ಪಡುವುವು.


೨.


ಅಂತಃಪುರದ

ಕಿಟಕಿಯಾಚೆ

ವೀರಯೋಧನ ಸಾವು

ಮಹಾರಾಣಿಯ ಕಿಬ್ಬೊಟ್ಟೆಯಲ್ಲಿ

ಆಸೆಯ ಕಿಚ್ಚುಗಳನ್ನುಹಚ್ಚುವುದು.


೩.


ರಾಣಿಯಿಲ್ಲದ

ಯುದ್ಧರಂಗದಲ್ಲಿ

ರಾಜನಿಗೆ ಗೆಲುವು

ಕೊನೆಗೂ

ಏಕಾಂಗಿತನ ಮೂಡಿಸಲಿ ಎಂದು ಹಾರೈಸುವೆ.


೪.


ಯುದ್ಧದ ಮುಗಿಸಿದ

ಮೊದಲ ರಾತ್ರಿ

ಯೋಧನಿಗೆ

ಸಾವಿನ ಭಯಕ್ಕಿಂತಲೂ

ರಾಣಿಯ ಸೌಂದರ್ಯ ಗೆಲ್ಲುವ ತವಕ ಇರುವುದು.

20080103

ನಾಲ್ಕು ಸಾಲು-೨೮೧.


ಅಕ್ಷರಗಳ

ಸೊಕ್ಕನ್ನು ತಣಿಸಿದ

ಮೇಲೆ

ಕಾವ್ಯ ಶಬ್ದಗಳ ಆಲಿಂಗನದಲ್ಲಿ

ನರಳಿತು.


೨.


ಕಾವ್ಯ

ಸೃಷ್ಟಿಸುತ್ತಾ

ಕವಿ

ಹೊಸ ಜೀವವೊಂದನ್ನು

ಮುಟ್ಟಿ ತಣಿಯುವನು.


೩.


ಮೊದಲ

ಕತೆ ಬರೆದು ಕುಳಿತ

ಕತೆಗಾರನಿಗೆ

ಕೊನೆಯ ಕತೆ ತನ್ನದೇ

ಎಂದು ತಿಳಿಯಲಾರದು


೪.


ನೆನಪುಗಳ

ಜಾತ್ರೆಯಲ್ಲಿ

ಕತೆಗಾರ
ಮಂಡಕ್ಕಿ

ಮಾರಾಟಗಾರ.

20080101

ಎಲ್ಲ ಮರೆಯುತ್ತೇನೆ


ಎಲ್ಲವನ್ನೂ ಮರೆಯುವ ಸಂಕಲ್ಪ ಮಾಡಿದ್ದೇನೆ.

ಇದು ಹೊಸ ವರ್ಷ ಅಂತ ಒಂದು ಇಂದು ಆರಂಭವಾಗುತ್ತದೆ ಎಂಬ ನಮಗೆ ನಾವೇ ಹಾಕಿಕೊಂಡ ವೇಳಾಪಟ್ಟಿಯ ಮುಂದೆ.

ಈ ತನಕ ಪಡೆದ ಸುಖ,ಪಟ್ಟ ದುಃಖ,ಕಾಡಿದ ನೆನಪು,ಜಾಲಾಡಿದ ಭ್ರಾಂತಿ,ಇಷ್ಟು ನಗು,ಅಷ್ಟು ಅಳು ಎಲ್ಲವೂ ನನಗೆ ಇನ್ನು ಬೇಡ.

ಅದಕ್ಕಾಗಿ ಎಲ್ಲಾ ಮರೆಯಬೇಕು.

ಮರೆಯುದು ನೆನಪಿಗಿಂತ ಕಷ್ಟ.

ನೆನಪು ತುಂಬಾ ಹಿಂಸ್ರಕ.

ಮೊದಲ ಬಾರಿಗೆ ಅ ಆ ಬರೆದ್ದು,ಕಡ್ಡಿಯಲ್ಲಿ ಯನ್ನು ದಪ್ಪ ಮಾಡಿದ್ದು,ಶಾಯಿ ಪೆನ್ನಿನ ನಿಬ್ಬು ಸರಿ ಮಾಡಿ ಹೆಬ್ಬೆರಳನ್ನು ತಲೆಗೆ ಉಜ್ಜಿದ್ದು..

ಗುಂಡಿ ಹಾರಿದ ಚಡ್ಡಿ,ಕಾಲರ್ ಹರಿದ ಅಂಗಿ,ಸೋರುವ ಕೊಡೆ,ಕೀಜಿ ಬುತ್ತಿ,ನೀರು ದೋಸೆ,ಕಬ್ಬಡ್ಡಿ ಆಟ,ಗೀತಾಳ ಕಾಚ,ಸಂಕಪ್ಪ ಗದ್ದಪ್ಪ ಮಾಸ್ಟ್ರು..

ಮೊದಲು ಕದ್ದು ನೋಡಿದ ಮೊಲೆಗಳು ರಾತ್ರಿ ಮಾಡಿದ ಕಿತಾಪತಿ,ಬಸ್ಸಿನಲ್ಲಿ ತೊಡೆ ಅಂಟಿಸಿದ ತರುಣಿ,ನಾಟಕದ ಹುಡುಗಿಯ ಬೆರಳು,ಬನಶಂಕರಿಯ ಹುಡುಗಿ,ಮಾಳಿಗೆಯಲ್ಲಿ ನೋಡಿದ ಬ್ಲೂಫಿಲಂ,ಮೊದಲ ರಾತ್ರಿ,..

ಹೆದರಿಸಿದ ಹುಚ್ಚು ನಾಯಿ,ಬೈದ ಹುಚ್ಚ,ಬೆದರಿಕೆ ಹಾಕಿದ ದೇವರು,ಮನಸ್ಸಲ್ಲೇ ಕುಳಿತ ರೋಗ,ಕೊಲ್ಲುತ್ತೇನೆಂದ ಫೋನು,ಹೇಳದೇ ಹೋದ ಅಪ್ಪ, ಇರಬೇಕೆಂದು ಬಂದೊಡನೆ ಹೊರಟುಹೋದ ಜೀವ...

ಕತ್ತಿನ ಹಿಂದೆ ಅವಳಿಟ್ಟ ಮುತ್ತುಗಳು,ತುಟಿಯಲ್ಲಿ ಇಂಗಿದ ಅವಳ ಎಂಜಲು,ಕಣ್ಣೊಳಗೆ ಇಳಿದ ಚೇತನ,ಎಂದೂ ಕಾಣದ ಕಲ್ಪನಾ,ಸ್ವಿಚ್ ಆಫ್ ಆದ ಮೊಬೈಲು,ಒಳಗಿದ್ದೇ ಹೊರಗೆ ಹೋದ ನೆನಪುಗಳು,..

ಬರೆದ ಕಥೆಗಳು,ಮಂಡಿಸಿದ ವರದಿಗಳು,ಮಾಡಿದ ಭಾಷಣ,ಕೇಳಿದ ಉಪನ್ಯಾಸ,ನೋಡಿದ ಸಿನಿಮಾ,ಆಡಿದ ನಾಟಕ,ಕುಣಿದ ಯಕ್ಷಗಾನ,ಗೀಚಿದ ಪದ್ಯಗಳು..

ಅಷ್ಟನ್ನೂ ಮರೆಯಲಿದ್ದೇನೆ..

ಈ ವರ್ಷದಿಂದ ನಾನು ಮಾತನಾಡುವುದಿಲ್ಲ. ಮಾತು ಏನಿದ್ದರೂ ರುಚಿಗೆ ತಕ್ಕಷ್ಟು ಉಪ್ಪಿನಂತೆ. ಮಾತಿನ ಭೋಜನ ಬೇಡ, ಎಂತಿದ್ದರೂ ಉಪಾಹಾರ.

ಯಾರನ್ನೂ ಪ್ರೀತಿಸಬಾರದು ಎಂದು ನಿರ್ಧರಿಸಿದ್ದೇನೆ.

ಪ್ರೀತಿಸಿದವರಿಂದೆಲ್ಲಾ ಈ ವರ್ಷ ವಿರಮಿಸುತ್ತಿದೇನೆ.

ಯಾರ ಬಳಿಗೂ ಹೋಗೋದಿಲ್ಲ,ಯಾರನ್ನೂ ಬಳಿಗೆ ಕರೆಯುವುದಿಲ್ಲ.

ಹಾಗಾದರೇನು ಮಾಡುವುದು ?

ಮುಗಿಲುಗಳನ್ನು ಸರಿಸುವೆ,ಚಂದಿರನನ್ನು ಅಟ್ಟುವೆ,ನಕ್ಷತ್ರಗಳನ್ನು ಉದುರಿಸುವೆ,ಭೂಮಿಯನ್ನೇ ಮಲಗಿಸುವೆ; ಮಕಾಡೆ.

ಮಳೆಗೆ ನೆನೆಯಲಾರೆ,ಚಳಿಗೆ ಮುದುಡುವುದಿಲ್ಲ,ಬಿಸಿಲಿಗೆ ಬಾಡುವುದಿಲ್ಲ..

ಧ್ಯಾನ ಇನ್ನಿಲ್ಲ, ಧಾರಣೆ ಮಾಡಲು ಏನೂ ಉಳಿದಿಲ್ಲ,

ಕನಸುಗಳ ಲೋಕಕ್ಕೆ ಕದವಿಕ್ಕುತ್ತೇನೆ.ಒಂದೇ ಒಂದು ಮಾತು ಈ ವರ್ಷ ಯಾವ ಪುಸ್ತಕವನ್ನೂ ಓದುವುದಿಲ್ಲ ಖಂಡಿತಕ್ಕೂ..