20081225

ಅವನಲ್ಲಿ ಸಿಕ್ಕಿತು ಆ ಹುಡುಕಿದ್ದು


ಗುಹಾಂತರ್ಗತ-೯


ರೂಪಿಯ ಸ್ಟೋರಿಗೆ ಆರಂಭ ಅದೇ ಕುಮಾರಧಾರೆಯಿಂದ .ಅದೇ ಕಟಾರದಿಂದ..
ಅದೇ ಅಬ್ಬರದಲ್ಲಿ ಆಕೆಯನ್ನು ತಬ್ಬಿಕೊಳ್ಳೋ ಧಾವಂತದಿಂದ ಸಾಗುವ ಗಂಡಸ್ತನದಿಂದ.
ರೂಪಿ ಆ ಕಾಡಿನಲ್ಲಿ ಆ ಕುಮಾರಧಾರೆಯ ಹೊದ್ದಿನಲ್ಲಿ ಆ ನದಿಯ ಅಬ್ಬರದ ಆವೇಶದಲ್ಲಿ ಅವನನ್ನು ತಬ್ಬಿಕೊಂಡಳು.
ಅದು ಅವಳದ್ದೇ ಆಹ್ವಾನವಾಗಿತ್ತು. ಆಕೆಗೆ ಅದು ಅಷ್ಟು ಕಾಲದ ಕಾತರವಾಗಿತ್ತು. ಅವಳಿಗೆ ಆ ಗಳಿಗೆ ಬೇಕಿತ್ತು. ಅವಳ ಜೀವ ಅವಳ ದೇಹ ಅದನ್ನು ಬಯಸಿತ್ತು.
ರೂಪಿಗೆ ವಯಸ್ಸು ಮೂವತ್ತೈದು ಆಗಿರಬಹುದು. ಗಂಡ ಸುರಸುಂದರಾಂಗನ ಅಂಗಸಂಗದಲ್ಲಿ ಮರ್ದನಗೊಂಡು ಹಣ್ಣುಗಾಯಿ ನೀರುಗಾಯಿ ಆಗಿದ್ದಾಗಿತ್ತು. ಮನೆ ಮಂದಿ ಮಕ್ಕಳು ಸಂಸಾರ ಎಲ್ಲವೂ ಆಗಿ ಹೋಗಿತ್ತು.ನಿತ್ಯವೂ ಸಮಾರಾಧನೆ ನಡೆದಿತ್ತು.
ಆದರೂ ಜೀವದ ಜಾತ್ರೆಯಲ್ಲಿ ಏನೋ ಶೂನ್ಯ.ಎಲ್ಲೋ ಒಂದೆಡೆ ಯಾರೂ ಬಂದಿಲ್ಲ ಎಂಬ ಖಾಲಿತನ.ರೂಪಿಗೆ ಹಾಗೇ ಅನಿಸುತ್ತಿರುವುದು ಅದೇ ಮೊದಲಲ್ಲ. ಗಂಡನ ಸಾನ್ನಿಧ್ಯದಲ್ಲೂ ಹಾಗೊಮ್ಮೆ ಮೊದಲಾಗಿ ಅನಿಸಿದಾಗ ಭಯಪಟ್ಟು ಅವಳು ಎದ್ದು ಮೈಮಂಡೆಗೆ ತಣ್ಣೀರು ಸುರುವಿಕೊಂಡಿದ್ದಳು.ದೇವಸ್ಥಾನಕ್ಕೆ ಸುತ್ತುಹಾಕುತ್ತಿರುವಾಗ ಇವನೊಬ್ಬನೇ ಏಕೆ ಬೇಕು ಎಂದು ಆವರಿಸಿದ ಮಾಯೆಗೆ ಹೆದರಿ ದೀರ್ಘದಂಡ ಹೊಡೆದಿದ್ದಳು.
ಆಮೇಲೆ ಆ ಬೇಡಿಕೆ ಹೆಚ್ಚುತ್ತಾ ಹೆಚ್ಚುತ್ತಾ ಹೋಯಿತು. ಅವಳು ಅದನ್ನು ಹದ್ದುಬಸ್ತಿನಲ್ಲಿಡಲು ಮುಂದಾದಳು. ಯೋಗ ಪ್ರಾಣಾಯಾಮ ಅಂತ ಕೋರ್ಸ್‌ಗಳಿಗೆ ಶರಣೆಂದಳು. ಕಂಪ್ಯೂಟರ್ ಕ್ಲಾಸು ಡ್ರೈವಿಂಗ್ ಸ್ಕೂಲ್ ಮುಂತಾಗಿ ಸೇರಿದಳು. ಮರೆಯುವುದಕ್ಕೆ ಸಾಧ್ಯವಗಲಿಲ್ಲ.ದೂರ ಹೋಗಲಾರೆ ಎಂದನಿಸಿದಾಗ ಹೆದರಿ ಬೆಂಡಾದಳು. ಬಾವುಟಗುಡ್ಡದ ಸೈಕೀ ಡಾಕ್ಟರ್‌ನ ಭೇಟಿ ಮಾಡಿದಳು. ಕೌನ್ಸೆಲಿಂಗ್ ಮಾಡಿಸಿಕೊಂಡಳು.
ಊಹೂಂ ಜಗ್ಗಲಿಲ್ಲ.
ಖಾಸಾ ಗೆಳತಿಯೊಂದಿಗೆ ಹಂಚಿಕೊಂಡಳು.
ಆದರೂ ಮನಸ್ಸು ದೇಹ ಇನ್ನೇನೋ ಬೇಡುತ್ತಿರುವುದು ಹೆಚ್ಚುತ್ತಾಹೋಯಿತು.
ಪುಸ್ತಕ ಓದಿದಳು.ಲೇಖನ ಬರೆದಳು.
ತಾನು ವಿಮುಖಳಾಗುತ್ತಿರುವುದು ಗೊತ್ತಾಗಿ ಸೋತೇ ಹೋದಳು.
ಆ  ವೇಳೆಗೆ ಸಿಕ್ಕವನು ಆದರ್ಶ.
ಅವನು ಜರ್ಮನ್ ಮೂಲದ ಖಾಸಗೀ ಬ್ಯಾಂಕ್ ಅಧಿಕಾರಿ. ಅವನು ಇನ್ನೂ ಹುಡುಗ.ವಯಸ್ಸು ಹೆಚ್ಚೆಂದರೆ ಇಪ್ಪತ್ತೈದು.
ಅವನನ್ನು ರೂಪಿ ಭೇಟಿಯಾದದ್ದು ಯೋಗ ತರಗತಿಯೊಂದರಲ್ಲಿ. ಅವಳ ಹುಡುಕಾಟ ಅವನಿಗೆ ಅದು ಹೇಗೆ ಅರ್ಥವಾಗಿತ್ತೋ ಅಥವಾ ಅವನ ಬಳಿ ತಾನು ಅರಸುತ್ತಿರುವುದು ಎಲ್ಲಾ ಇದೆ ಎಂದು ಅವಳಿಗೆ ಹೇಗೆ ಗೊತ್ತಾಯಿತೋ..
ಉತ್ತರಪ್ರದೇಶದ ಹಳ್ಳಿಯೊಂದರ ಹುಡುಗ ಕೊಡೆಯಾಲದಲ್ಲಿ ರೂಪಿಯ ಗೆಳೆಯನಾಗಿಬಿಟ್ಟ. ಗೆಳೆತನ ಅವರನ್ನು ಹೆಚ್ಚು ದಿನ ಹಾಗೇ ಇರಗೊಡಲಿಲ್ಲ.ಆಕೆಗೆ ಬೇಕಾಗಿದ್ದ ಆ ಪ್ರೀತಿ ಅವನು ತುಂಬಿಕೊಟ್ಟ.ಮನಸ್ಸಿನ ಸಲುಗೆ ದೇಹಕ್ಕೂ ಬಂದಿಳಿಯಿತು.
ಅದು ಆದದ್ದು ಇದೇ ಕುಮಾರಧಾರೆಯ ತಟದಲ್ಲಿ. ಕಟಾರದ ಕಾಡಿನಲ್ಲಿ.
ಮೊದಲಬಾರಿಗೆ ಈ ಸಂತೋಷ ಸಿಗುತ್ತಿದೆ ಎಂದು ರೂಪಿಗೆ ಆಗ ಅನಿಸಿದ್ದು ತಪ್ಪೇನಲ್ಲ.ಕುಮಾರಧಾರೆಗೆ ಆ ಶಕ್ತಿ ಇದೆ ಎಂಬುದು ಎಂಥಾ ಪ್ರೇಮಿಗೂ ಅರ್ಥವಾಗಲೇಬೇಕು.ರೂಪಿಗೆ ಆ ಕ್ಷಣಕ್ಕೆ ಎಲ್ಲವೂ ಮರೆತುಹೋಗಿದೆ. ಮನೆಯೊಳಗಿನ ಮಕ್ಕಳು
ಪ್ರೀತಿಸೋ ಗಂಡ,ಪಕ್ಕದ ಮನೆಯ ನಾದಿನಿ, ಅವಳ ಜೊತೆಗಿರೋ ಅತ್ತೆಮ್ಮ, ತೀರಿಕೊಂಡ ಅಪ್ಪ, ಆಶ್ರಮದಲ್ಲಿರೋ ಅಮ್ಮ,ಮದುವೆ ಮನೆಯಲ್ಲಿ ಮಂತ್ರ ಹೇಳಿದ ಪುರೋಹಿತರು,ಸಾಲಾಗಿ ಕುಳಿತುಂಡ ಬಂಧುಗಳು..
ಅವಳಿಗೆ ಆದರ್ಶ ಸರ್ವಸ್ವವನ್ನೂ ಕರುಣಿಸುತ್ತಿದ್ದ. ಅವನ ಸಮಾಗಮದಲ್ಲಿ ಆಕೆಗೆ ಈ ತನಕ ಪಡೆದದ್ದೆಲ್ಲಾ ಸುಳ್ಳು ಈ ಹೊತ್ತಿನದ್ದೇ ಪರಮಸತ್ಯ ಎಂಬ ಭಾವನೆ ಕೆನೆಗಟ್ಟುತ್ತಿದೆ. ತನಗಿಂತ ಹತ್ತು ವರುಷವಾದರೂ ಕಿರಿಯನಲ್ಲಿ ನೂರು ವರುಷದ ಆಪ್ತತೆ ಹನಿಹನಿಯಾಗಿ ಸುರಿಯುತ್ತಿದೆ.ಜನ್ಮಜನ್ಮಾಂತರದಲ್ಲಿ ಬಾಕಿ ಉಳಿದ ಲೆಕ್ಕಾಚಾರಗಳು ಚುಕ್ತಾ ಆಗುತ್ತಿರುವಂತೆ ಅನಿಸುತ್ತಿದೆ.
ಆದರ್ಶನ ಮುಂದೆ ರೂಪಿ ಸಕಲವನ್ನೂ ಮಂಡಿಸಿದ್ದಾಳೆ. ಇಲ್ಲದುದನ್ನು ಸೃಷ್ಟಿಸಿಕೊಟ್ಟಿದ್ದಾಳೆ. ಅವನಲ್ಲಿ ಹುಡುಕಿದ್ದೆಲ್ಲವೂ ಸಿಕ್ಕಂತೆ, ಅದನ್ನೆಲ್ಲಾ  ಮೊಗೆದು ಮೊಗೆದು ತೆಗೆಯುತ್ತಿದ್ದಾಳೆ.
ಆ ಪ್ರೀತಿಯ ಧಾಟಿ ಅಂತೆ ಸಾಗುತ್ತಿದೆ.ಅಲ್ಲಿ ಅವಳಿಗೆ ಭದ್ರಳಾಗಿರುವೆ ಎಂಬ ಪರಿಪೂರ್ಣತೆ ಬಂದೇಬಿಟ್ಟಿದೆ.
ಕುಮಾರಧಾರೆ ಅದೇ ಸೊಕ್ಕಿನಿಂದ ಹರಿಯುತ್ತಿದ್ದಾನೆ.ಅವನಿನ್ನೂ ನೇತ್ರಾವತಿಯನ್ನು ಮುಟ್ಟಲು ಕೆಲವು ಗಾವುದ ದೂರ ಬಾಕಿ ಉಳಿದಿದೆ. ಉನ್ಮತ್ತ ದೇಹಗಳು ಕರಗುತ್ತಿವೆ.
ಅಲ್ಲಿಂದ ಶುರುವಾಯಿತು ರೂಪಿಯ ಭಾಗ ಎರಡು ಎಂಬ ಅಧ್ಯಾಯ.
ಕೊಡೆಯಾಲದ ಏಕತಾನತೆ ಅವಳನ್ನು ಕುಮಾರಧಾರೆಯ ಜುಳುಜುಳುವಿನತ್ತ ಸೆಳೆಯುತ್ತಿತ್ತು.ಆದರ್ಶನ ಐಶಾರಾಮಿ ಕಾರು ಅವಳಿಗೆ ಪ್ರೀತಿಯ ಪಲ್ಲಂಗವಾಗಿತ್ತು. ಗಂಡನ ಬಳಿ ಕುಳಿತು ಇನನು ದೊಡ್ಡದಾದ ಕಾರಲ್ಲಿ ಹಿಂಬದಿಯಲ್ಲಿ ಮಕ್ಕಳನ್ನು  ತುಂಬಿಕೊಂಡು ಸಂಜೆಯ ಹದಕ್ಕೆ ಸಾಗಿದ್ದು, ವೀಕ್‌ಎಂಡ್‌ನಲ್ಲಿ ಕುಡಿದದ್ದು, ಮಾಲ್‌ನ ಶಾಪಿಂಗ್,ಮಲ್ಟಿಫ್ಲೆಕ್ಸ್‌ನ ಪಾಪ್‌ಕಾರ್ನ್ ಪಬ್ಬಾಸ್‌ನ ಐಸ್‌ಕ್ರೀಂ,ಟೈಟಾನ್ ಶೋರೂಂ,ಪುಸ್ತಕಮೇಳದ ಬಜಾರು, ಫ್ರಾಂಚೈಸಿಯ ಶರಟು,ಸೆಲ್‌ಫೋನ್‌ನ ಕರೆನ್ಸಿ, ಹ್ಯಾಂಡಿಕ್ಯಾಂ,ಸೋಫಾಸೆಟ್,ಮುಂಬೈಯ ವಿಮಾನಯಾನ,ದೆಹಲಿಯಲ್ಲಿ ಇಂಡಿಯಾಗೇಟ್,ಸಿಂಗಾಪುರದ ಸ್ಕೇಟಿಂಗು,ಮಲೇಶ್ಯಾದ ಮಸಾಜು..
ಅದೆಲ್ಲಾ ತಾನು ಅನುಭವಿಸಿದ್ದೇ ಅಲ್ಲ. ಅಷ್ಟೆಲ್ಲಾ ಪಡೆದುದರಲ್ಲಿ ಏನೂ ಇಲ್ಲ..
ಎಲ್ಲಕ್ಕೂ ಮಿಗಿಲಾದುದು ಈ ಕಟಾರದ ಕಾಡು..ಹರಿಯೋ ಕುಮಾರಧಾರೆ,ಆದರ್ಶನ ಮೈಥುನ..
ರೂಪಿ ಆ ದಿನದಿಂದ ಅವನ ದಾಸಿಯಾದಳು.
ಆದರ್ಶನ ಸಂಗ ರೂಪಿಯ ಮನೆಯ ಬಾಗಿಲ ಬಳಿ ಬಂತು.
ಕದ ತಟ್ಟಿ ಕರೆದವನು ಆದರ್ಶನೇ.
ನಮ್ಮ ಯೋಗ ಕ್ಲಾಸ್‌ಮೇಟ್.ತುಂಟ ಹುಡುಗ.ಇನ್ನೂ ಬ್ಯಾಚ್‌ಲರ್.. ಎಂದು ಗಂಡನ ಮುಂದೆ ಪರಿಚಯಕ್ಕಿಟ್ಟಾಗ ಅವನಿಗೂ ಆದರ್ಶನಲ್ಲಿ ಆತ್ಮೀಯತೆ ಹುಟ್ಟೇಬಿಟ್ಟಿತು.
ಹಾಗೇ ಮಾಡಿಸುವಲ್ಲಿ ನೀನು ಸಫಲಳಾಬೇಕು,ತಪ್ಪಿದರೆ ಸಂಬಂಧ ರುಚಿಕೆಟ್ಟೀತು ಎಂದು ಅವನೇ ಸೂಚಿಸಿದ್ದ. ಮನಸ್ಸಿಗೆ ಬಂದವನು ಮನೆಯೊಳಗೂ ಬಂದು ನಿಂತ.
ಮಕ್ಕಳಿಗೆ ಆತ ಆದರ್ಶ ಅಣ್ಣ.ಅತ್ತೆಗೆ ಪೋಕರಿ ಹುಡುಗ.ಗಂಡನಿಗೆ ಗುಡ್‌ಬಾಯ್,ರೂಪಿಗೆ ಜಸ್ಟ್ ಎ ಪ್ರೆಂಡ್..
ಐವತ್ತು ತಿಂಗಳು ಸಾಗಿತು ಈ ಬಾಂಧವ್ಯ.ಯಾವ ಅಡಚಣೆಯೂ ಇಲ್ಲದೇ..ಕಾರು,ಪಬ್,ಸಿನೆಮಾ,ಹೋಟೇಲ್,ಅಂತ ಮೊದಮೊದಲು ಕೊಡೆಯಾಲದಲ್ಲಿ ಸಾಗಿದ್ದು ಆಮೇಲೆ ರಾಜಧಾನಿಗೆ ಆಗಾಗ ಹಾರೋ ವಿಮಾನದಲ್ಲಿ,ಮುಂಬೈಯ ತಾಜ್‌ನಲ್ಲಿ,ಕಮಲಶಿಲೆಯ ಕಿನಾರೆಯಲ್ಲಿ,ಮಕ್ಕಳೆಲ್ಲ ಅಜ್ಜನ ಮನೆಗೆ ಹೋಗಿ,ಗಂಡ ಇಂಗ್ಲೆಂಡ್‌ನಲ್ಲಿ ತಂಗಿ,ಅತ್ತೆ ಮೊಮ್ಮಕ್ಕಳ ಜೊತೆಗೆ ತೆರಳಿದಾಗೆಲ್ಲಾ ಅದೇ ತಾಳಿಕಟ್ಟಿದ ಗಂಡ ಕೊಟ್ಟ ಗರ್ಭವನ್ನು ಒಪ್ಪಿಕೊಂಡ ಅದೇ ಹಾಸಿಗೆಯಲ್ಲೂ ಸಾಗಿತು.
ಐವತ್ತನೇ ತಿಂಗಳಿಗೆ ಆಗಿ ಹೋದದ್ದು ಅನಾಹುತ.
ಅದೂ ಆ ಕಟಾರದ ಕಾಡಿನಲ್ಲೇ..
ರೂಪಿ ಮತ್ತು ಆದರ್ಶ ಎಂಬಿಬ್ಬರು ಪ್ರೇಮಿಗಳು ಪ್ರೇಮಿಸುತ್ತಿರುವಾಗಲೇ ಕಾಡಿನಲ್ಲಿ ಸಂಗಮಕ್ಷೇತ್ರದ ಪರಿವಾರ ಸಂಘಟನೆಯೊಂದರ ಹಠಾತ್ ದಾಳಿಗೆ ಸಿಕ್ಕಿಬಿದ್ದಿದ್ದಾರೆ.ತನಗಿಂತ ಹತ್ತು ವರ್ಷದ ಕಿರಿಯನ ಜೊತೆ ಮೂರು ಮಕ್ಕಳ ತಾಯಿ ರಮಿಸುತ್ತಿರುವಾಗ ಈ ಸಂಘಟನೆಯ ಕಾರ್ಯಕರ್ತರು ರೆಡ್‌ಹ್ಯಾಂಡಾಗಿ ಅವರಿಬ್ಬರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸಂಗಮಕ್ಷೇತ್ರದ ಜನರಿಗೆ ಯಾರನ್ನೂ ಮರೆತರೂ ರೂಪಿಯನ್ನು ಮರೆಯಲು ಸಾಧ್ಯವೇ ಇರಲಿಲ್ಲ.ಹದಿನೈದು ವರ್ಷಗಳ ಬಳಿಕವೂ ಆ ಚೆಲುವೆಯ ಕುರುಹು ಒಂಚೂರೂ ಮಾಸಿರಲಿಲ್ಲ.ರೂಪಿ ಠಾಣೆಯಲ್ಲಿ ಕುಳಿತಿರುವುದನ್ನು ಸಂಗಮಕ್ಷೇತ್ರದ ಪಡ್ಡೆಗಳೂ ಪ್ರೌಢರೂ ಕಣ್ತುಂಬಾ ನೋಡಿದರು.
ಇಂಗ್ಲೆಂಡಿನಿಂದ ಆಕೆಯ ಗಂಡ ಬರೋ ತನಕ ಇಬ್ಬರೂ ಇಲ್ಲೇ ಇರಬೇಕು ಎಂದು ಸಂಘಟನೆಯ ಕಾರ್ಯಕರ್ತರು ಬೇರೆ ಪಟ್ಟು ಹಿಡಿದಿದ್ದರು.
ಯಾರ ಹೆಂಡತಿ ಆಕೆ..ಚೆಕ್ ಮಾಡಿ..ಸ್ಟುಡಿಯೋದಿಂದ ನ್ಯೂಸ್ ಕಾರ್ಡಿನೇಟರ್ ಗೋಪಾಲನಿಗೆ ಸೂಚಿಸಿದ.ಅದನ್ನು ಪತ್ತೆ ಮಾಡಲು ಗೋಪಾಲನಿಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ.
ಸುಹಾಸ್..ಸುಹಾಸ್ ಶರ್ಮಾ..ಮೂನ್ ಕೆಫೆಯ ಮಾಲೀಕ..ಎಂದ ಗೋಪಾಲ.
ಅರೆ..ಮೂನ್ ಕೆಫೆ..!.ಅತ್ಯಂತ ಜನಪ್ರಿಯ ಕಂಪ್ಯೂಟರ್  ಸಾಫ್ಟ್‌ವೇರ್ ಸಂಸ್ಥೆ ಆ ಮೂನ್ ಕೆಫೆಯ ಮಾಲೀಕ ಸುಹಾಸ್ ಶರ್ಮಾ..ಈಸ್ ಇಟ್.?! .ಸ್ಟುಡಿಯೋದಿಂದ ಆಶ್ಚರ್ಯದ ಧ್ವನಿ.
ಯೆಸ್ ಸಾರ್..
ವಾವ್..ಸ್ಕೂಪ್ ಸಿಕ್ತು..ಸ್ಕ್ರೋಲ್ ಕೊಡಿ.. ತಕ್ಷಣವೇ ಸಂಗಮಕ್ಷೇತ್ರಕ್ಕೆ ಹೋಗಿ..ಸಂಜೆ ಐದೂವರೆಗೆ ಸ್ಪೆಶಲ್ ಸ್ಟೋರಿ ಹಾಕಲಿದ್ದೇವೆ..ಲೈವ್ ಬೇಕು ಲೈವ್..ಡು ಇಟ್ ಫಾಸ್ಟ್..ನನಗೆ ಗೊತ್ತಿದೆ ಗೋಪಾಲ್ ಕ್ಯಾನ್ ಡು ಇಟ್..ಕಾರ್ಡಿನೇಟರ್ ಪುಶ್ ಮಾಡ್ದ.
ಗೋಪಾಲ ಸಂಗಮಕ್ಷೇತ್ರ ಎಂಬ ತನ್ನ ಊರನ್ನೂ ಕುಮಾರಧಾರೆ ಎಂಬ ಆ ನದಿಯನ್ನೂ ರೂಪಿ ಎಂಬ ಆ ಜೀವವನ್ನೂ ಆದರ್ಶ ಎಂಬ ನಾರ್ಥ್‌ನ ಹುಡುಗನನ್ನೂ ಕೆಮೆರಾದ ಮುಂದಿಟ್ಟ.
ಲೈವ್ ಶುರುವಾಯಿತು..


20081223

ವಿರಹಿಗಳಿಗಿದು ಶೃಂಗಾರ


ಗುಹಾಂತರ್ಗತ-೮


ಕುಮಾರಧಾರೆಯನ್ನು  ಯಾರೂ ನದಿ ಎಂದು ಭಾವಿಸುವುದಿಲ್ಲ. ಎಲ್ಲರೂ ಅದೊಂದು ಗಂಡಸು ಅಂತಲೇ ಕರೆಯುತಾರೆ.
ಆಶ್ಚರ್ಯವಾಗಬೇಕು..ನದಿ ಅಂದರೆ ಹೆಣ್ಣು ಅಂತ ವಾಡಿಕೆಯಲ್ಲಿದ್ದರೆ ಇತ್ಲಾಗಿ ಅದರಲ್ಲೂ ಸಂಗಮಕ್ಷೇತ್ರದ ಜನರಿಗೆ ಕುಮಾರಧಾರೆ ನದಿಯೇ ಅಲ್ಲ ಹೆಣ್ಣನ್ನು ಸೇರೋ ತವಕದ ಗಂಡಸಿನಂತೆ ಕಾಣುತ್ತದೆ ಸದಾ..
ತಪ್ಪೇನಲ್ಲ. ಹಾಗೇ ಇದೆ ಕುಮಾರಧಾರೆ.ಹೆಚ್ಚೆಂದರೆ ಇಪ್ಪತ್ತು ಮೈಲಿ ಕೂಡಾ ಇಲ್ಲ ಅದರ ಹರಿವು. ಆದರೆ ಆ ಹರಿವಿನ ಮೋಡಿಯನ್ನು ನೋಡಿದರೆ ಯಾರೂ ಸಂಗಮಕ್ಷೇತ್ರದ ಜನರ ಮಾತನ್ನು ತಳ್ಳಿ ಹಾಕಲಾರರು.ಇನ್ನು ಪ್ರೀತಿ ಪ್ರೇಮ ಅಂತೆಲ್ಲ ಭಾವನೆ ಹೊತ್ತವರಂತೂ ಕುಮಾರಧಾರೆಯ ಮುಂದೆ ನಿಂತು ಗಳಗನೆ ಅತ್ತರೂ ತಪ್ಪಲ್ಲ. 
ವಿರಹಿಗಳಿಗಿದು ಶೃಂಗಾರ.. 
ಕುಮಾರಧಾರೆಯ ಈ ಸೆಡವು ಕಾಣೋದು ಕಟಾರದಲ್ಲಿ. ಅಬ್ಬಾ ಅಲ್ಲಿ ಅದೇನು ಆಗುತ್ತದೋ ಈ ಘಡವನಿಗೆ.ಯಾರೂ ಕಾಣದಂಥ ಹಾದಿ ಇದು. ದಟ್ಟ ಕಾನನ.ಬಂಡೆ ರಾಶಿ. ಕುಮಾರಧಾರೆ ಇಲ್ಲಿ ಸೀಳಿ ಎರಡಾಗಿ ನೂರು ಗಜ ಸಾಗಿ ಮತ್ತೆ ಒಂದಾಗಿ ಹರಿಯೋ ಧಾಷ್ಟ್ರ್ಯ ಇದೆಯಲ್ಲ ..ಹೋಗಿ ಅಪ್ಪಿಕೊಳ್ಳಬೇಕು ಅನ್ಸುತ್ತೆ.ಇನ್ನೇನು ಸಂಗಮಕ್ಷೇತ್ರಕ್ಕೆ ಈ ಹಾದಿಯಲ್ಲಿ ಮೂರು ಮೈಲಿ ಉಳಿದಿದೆ.ಅಂದರೆ ನೇತ್ರಾವತಿ ಬಲು ಹತ್ತಿರ.ಕುಮಾರಧಾರೆಗೆ ಸೊಕ್ಕು ಉಕ್ಕುವುದೇ ಇಲ್ಲಿಂದ.ಕಟಾರದಲ್ಲಿ ಇವನ ಅಬ್ಬರ ಹೇಗಿದೆ ಎಂದರೆ ಮಳೆಗಾಲದಲ್ಲಿ ಮುಂಜಾನೆಯ ನೀರವ ಮೌನದಲ್ಲಿ ಹತ್ತು ಮೈಲಿ ದೂರಕ್ಕೂ ಆ ಅಬ್ಬರದ ನಾದ ಕೇಳಿಸುತ್ತದೆ.
ನೇತ್ರಾವತಿಯನ್ನು ಅಪ್ಪಿ ಅವಳ ತೆಕ್ಕೆಯಲ್ಲಿ ಕರಗಿ ಹೋಗುವ ಆತುರ.ಹೆಣ್ಣಿನೊಳಗೆ ಸೇರಿಬಿಟ್ಟ ಗಂಡಸು ಎಷ್ಟು ದೊಡ್ಡ ಯುದ್ಧವನ್ನು ಗೆದ್ದೆ ಎಂದೇ ಭ್ರಮಿಸಿದರೂ ಕ್ಷಣ ಕಾಲ ಪುಟ್ಟ ಮಗುವೇ ಆಗುವ ಹಾಗೇ..
ನೇತ್ರಾವತಿಯನ್ನು ತಬ್ಬಿಕೊಂಡ ಕುಮಾರಧಾರೆಯನ್ನು ಮುಂದೆ ಕಂಡವರಿಲ್ಲ.ಅದಕ್ಕೇ ಇರಬೇಕು 
ಇಂಥ ಕಟಾರದಲ್ಲಿ ಕುಮಾರಧಾರೆ ಎಂಬ ಕಾಲದ ನಿತ್ಯ ಪ್ರೇಮಿ ಆ ಪಾಟಿ ಕಾಣಿಸೋದು..ಪ್ರೇಮಿಯಂತೆ,ಹುಚ್ಚನಂತೆ,ವಿರಹಿಯಂತೆ..
ಕಾಮಾತುರಾಣಾಂ....ನ ಭಯಂ ನ ಲಜ್ಜಾ..
ಗೋಪಾಲ ಮಹೇಂದ್ರನ ಜೊತೆ ಕಾರಲ್ಲಿ ಕುಳಿತಾಗ ನೇತ್ರಾವತಿ ಕಿನಾರೆಯಲ್ಲಿ ಸಾಗುತ್ತ ಕುಮಾರಧಾರೆಯ ಚಿತ್ರ ಕಣ್ಣ ಮುಂದೆ ಹೀಗೆ ಕಟ್ಟಿಕೊಳ್ಳುವುದಕ್ಕೆ ಸಕಾರಣಗಳಿದ್ದವು.ಆಗಷ್ಟೇ ಮಹೇಂದ್ರ ಕೇಳಿದ ಪ್ರಶ್ನೆ ಆತನನ್ನು ಹಿಂಡಿದೆ. 
ರೂಪಿ ಕುಮಾರಧಾರೆಯನ್ನು ಹಿಂದಿಕ್ಕಿ ಬಂದು ನಿಂತಿದ್ದಾಳೆ..
ಪೋಸ್ಟ್‌ಮಾಸ್ತರರ ಮಗಳು ರೂಪಿ..
ಅವಳು ಅಂದಗಾತಿ..ಚಂದದ ಚೆಲುವೆ..ಹಾಗೆಂದರೆ ಸಾಕು.. ವಿಸ್ತರಿಸಲು ನಮಗೇನು ತೆವಲುಗಳೇ.
ರೂಪಿಯನ್ನು ಮನಸ್ಸಲ್ಲೇ ಮದುವೆಯಾಗಿದ್ದ ಹುಡುಗರಿಗೆ ಲೆಕ್ಕವೇ ಇಲ್ಲ.ಅವಳು ಸಂಗಮಕ್ಷೇತ್ರದಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಪಡ್ಡೆಗಳಿಗೂ ಪ್ರಬುದ್ಧರಿಗೂ ಹಚ್ಚಿದ ಹುಚ್ಚು ಸಣ್ಣದೇನಲ್ಲ..
ರೂಪಿಯನ್ನು ಕಂಡಾಗಲೆಲ್ಲಾ ಹೊಸತಾಗಿ ಬದುಕೋಣ ಎಂದು ಅನೇಕರಿಗೆ ಆಗುತ್ತಿತ್ತು. ಅವಳ ಹಾಗೇ ಶಿಸ್ತಿನಿಂದ ಇರಬೇಕು ಎಂದು ಅವಳ ಕಾಲೇಜಿನ ಅಧ್ಯಾಪಕರುಗಳಿಗೇ ಒಳಗೊಳಗೇ ಅನಿಸುವುದಿತ್ತು. ರೆಡ್ಡಿ ಮಾಸ್ತರರರಿಂದ ಹಿಡಿದು ಹಿಂದಿನ ಬೆಂಚಿನ ಶುಕೂರ್ ತನಕ ಎಲ್ಲರೂ ಅವಳ ಮೋಡಿಗೆ ಮೋಹಕ್ಕೆ ಈಡಾದವರೇ..
ಹಾಗೊಬ್ಬಳು ಚೆಲುವೆ ಸಂಗಮಕ್ಷೇತ್ರದ ಹೆಗ್ಗಳಿಕೆ ಕೂಡಾ ಆಗಿದ್ದಳು.
ರೂಪಿಗೆ ಯಾರೂ ಪ್ರೇಮ ಪತ್ರ ಬರೆಯುವಂತಿರಲಿಲ್ಲ. ಮಾತ್ರವಲ್ಲ ಅವಳಿಗೂ ಬರೆಯೋದು ಸಾಧ್ಯವೂ ಇರಲಿಲ್ಲ. ಏಕೆಂದರೆ ಅವಲ ಅಪ್ಪನೇ ಸಂಗಮಕೇತ್ರದ ಎಲ್ಲಾ ಕಾಗದ ಪತ್ರಗಳ ವಾರೀಸುದಾರ. ಆ ಕಾಲದಲ್ಲಿ ಈ ಕಾಲದ ಸೆಲ್‌ಫೋನ್ ಕೂಡಾ ಇರಲಿಲ್ಲ.
ರೂಪಿಗೆ ಪತ್ರ ಬರೆಯಲಾದೇ ಒದ್ದಾಡಿದ ಅಖಂಡ ಪ್ರೇಮಿಗಳು ಯಾವುದೋ ಹುಡುಗಿಯರ ನೆರವು ಪಡೆದು ಕೈ ಕಾಗದ ಕೊಟ್ಟು ನೋಡಿದ್ದರೂ ಅದು ಯಶಸ್ಸು ಪಡೆದಿರಲಿಲ್ಲ..
ಮರದ ಬುಡದಲ್ಲಿ ಮಾತನಾಡಿದ ಹೈಕಳುಗಳಿಗೆ ಅವಳಲ್ಲಿ ಅಂಥದ್ದೊಂದು ಪ್ರತ್ಯುತ್ತರ ಕಾಣಿಸುತ್ತಲೇ ಇರಲಿಲ್ಲ.
ಹಾಗಾಗಿ ರೂಪಿ ಘಮಘಮಸುತ್ತಲೇ ಕಿತ್ತು ಹೋದಳು. ಕಾಲೇಜಲ್ಲಿ ಇನ್ನೂ ಪೂರ್ತಿ ಓದು ಮುಗಿಸುವ ಮುನ್ನವೇ ಅವಳ ಮದುವೆಯಾಗಿಹೋಯಿತು.
 ಆ ದಿನ ಒಂಥರಾ ಸಂಗಮಕ್ಷೇತ್ರಕ್ಕೆ ಸೂತಕ ಅಡರಿಕೊಂಡಿತ್ತು.
ರೂಪಿ ಕೊಡೆಯಾಲದಲ್ಲಿದ್ದಾಳೆ ಎಂದು ಕೆಲವು ಕಾಲ ಸಂಗಮಕ್ಷೇತ್ರದಲ್ಲಿ ಸುದ್ದಿಯಿತ್ತು. ಪೋಸ್ಟ್‌ಮಾಸ್ಟರ್ ಕೂಡಾ ಅಮೇಲೆ ಕೊಡೆಯಾಲಕ್ಕೆ ವರ್ಗವಾಗಿ ಹೋದರು. ರೂಪಿಯೂ ಇಲ್ಲ, ಪೋಸ್ಟ್‌ಮಾಸ್ಟರರೂ ಇಲ್ಲದ ಮೇಲೆ ಹಾಗೊಂದು ಚೆಲುವೆಯ ವರ್ತಮಾನವೇ ಇತಿಹಾಸಕ್ಕೆ ಸೇರಿಕೊಂಡಿತು.
ಗೋಪಾಲ ರೂಪಿಯನ್ನು ನೋಡುವ ಹೊತ್ತಿಗೆ ವರ್ಷಗಳು ಕಳೆದಿದ್ದವು.ಅವಳಿಗೆ ಮೂವರು ಮಕ್ಕಳಿದ್ದರು. ಮೊದಲನೆಯವಳು ಥೇಟ್ ರೂಪಿಯನ್ನೇ ಕಾಪಿ ಮಾಡಿಕೊಂಡಿದ್ದಳು. ಅವಳು ಹೈಸ್ಕೂಲ್‌ನಲ್ಲಿ ಮೆಟ್ರಿಕ್ಕು ಓದುತ್ತಿದ್ದಳು.ಎರಡನೆಯವನು ಹೈಸ್ಕೂಲ್ ಹತ್ತಿದ್ದ. ಮೂರನೇ ಹುಡುಗಿ ಯುಕೆಜಿಗೆ ಹೋಗುತ್ತಿದ್ದಳು.
ರೂಪಿಯ ಗಂಡ ಸುಂದರವಾಗಿದ್ದ. ಅವನ ಯೌವನದ ಗುಟ್ಟೇನು ಇರಬಹುದು ಎಂದು ಅಸೂಯೆ ಪಡುವಂತಿದ್ದ.ರೂಪಿಯೂ ಅಸಾಮಾನ್ಯಳಾಗಿದ್ದಳು.
ಅವಳ ಬಳಿ ಭಾವನೆಗಳಿದ್ದವು. ಅವಳ ಬಳಿ ಕನಸುಗಳಿದ್ದವು. ಅವಳ ಬಳಿ ಆಕಾಂಕ್ಷೆಗಳಿದ್ದವು. ಅವಳ ಬಳಿ ಅಸದೃಶ ಲಹರಿಗಳಿದ್ದವು. ಅವಳು ಯಾವುದೋ ಗಮ್ಯವನ್ನು ಹುಡುಕುತ್ತಿದ್ದಳು.ಅವಳು ಎತ್ತಲೋ ಏನನ್ನೋ ಬೆಂಬತ್ತುತ್ತಿದ್ದಳು.ಅವಳು ಹುಡುಕಾಟದಲ್ಲಿದ್ದಳು. ಅವಳೊಂದಿಗೆ ಗರಿಗಳಿದ್ದವು .ರೆಕ್ಕೆಗಳಿದ್ದವು.ನಕ್ಷತ್ರಗಳು ತೋರುವ ಹಾದಿ ಅವಳೀಗೆ ಅರಿವಾಗಿತ್ತು. ಇನ್ನೊಂದು ತಾಣದಲ್ಲಿ ತನ್ನ ನಿಲುಗಡೆಯಿದೆ ಎಂದು ಅವಳಿಗೆ ಗೊತ್ತಾಗಿತ್ತು.
ಅವಳು ಬದುಕನ್ನು ಅನುಭವಿಸಿದ್ದಳು. ಸುಖ ಅವಳ ಕೂಡೆ ಹೊದ್ದುಕೊಂಡಿತ್ತು.ಎಲ್ಲ ಬೇಕುಗಳು ಅವಳದ್ದಾಗಿತ್ತು.ಆದರೂ ಯಾವುದೋ ಒಂದು ಅವಳಿಗೆ ಬೇಕಾಗಿತ್ತು.
ಅದು ಗೋಪಾಲನಿಗೆ ಸವಾಲಾಗಿತ್ತು.ರೂಪಿಯ ಆ ಒಂದು ಹುಡುಕಾಟದ ಹಿಂದೆ ಹೆಜ್ಜೆ ಇಟ್ಟವನೇ ಅವನು.
ರೂಪಿ ಅದನ್ನು ನಿರೀಕ್ಷಿಸಿರಲಿಲ್ಲ.
ಗೋಪಾಲನೂ.. 

ರೂಪಿಯ ಕಥೆ ಮತ್ತೆ ಆರಂಭವಾಗುವ ಹೊತ್ತಿಗೆ ಗೋಪಾಲ ಟೀವಿ ಚಾನಲ್‌ನಲ್ಲಿ ದೊಡ್ಡ ವರದಿಗಾರನಾಗಿದ್ದ. ಸಂಗಮಕ್ಷೇತ್ರದ ವರದಿಗಾರನ ಮೂಲಕವೇ ಒಂದು ಕಾಲದಲ್ಲಿ ಸಂಗಮಕ್ಷೇತ್ರದದ ಚೆಂದುಳ್ಳಿ ಚೆಲುವೆ ರೂಪಿ ಮತ್ತೆ ಅನಾವರಣಗೊಂಡಳು..
ಗೋಪಾಲನ ಮಟ್ಟಿಗೆ ಅದು ಒಂದು ದಯನೀಯ ಸೋಲು.
ಅದಕ್ಕೆ ಅವನು ಕಾರಣನಾಗಿರಲಿಲ್ಲ.ಅವನಿಗೆ ಅದು ಅಗತ್ಯವೂ ಆಗಿರಲಿಲ್ಲ.
ಅವನಿಗಾಗಿ ಅಲ್ಲದ ಕೆಲಸ ಯಾರಾದರೂ ಮಾಡಬೇಕಾದರೆ ಪತ್ರಕರ್ತನಾಗಬೇಕು ಎಂದು ಅವನ ಬಳ್ಳ ಮೇಸ್ಟ್ರು ಹೇಳುತ್ತಿದ್ದರು.ಆ  ಮಾತನ್ನು ಅವನು ಅನೇಕರಲ್ಲಿ ಹೇಳಿಕೊಂಡಿದ್ದ. ಬೇಸರವಾದಾಗಲೆಲ್ಲಾ ಪತ್ರಕರ್ತರು ಆ ಮಾತನ್ನೇ ಪುನರಪಿ ಉವಾಚಿಸುತ್ತಿದ್ದರು.ಇನ್‌ಕ್ರಿಮೆಂಟು ಬಾರದಿದ್ದಾಗಲೂ ಅದನ್ನೇ ಹೇಳುವ ಸಹೋದ್ಯೋಗಿಗಳು ಹುಟ್ಟಿದ ಮೇಲೆ ಗೋಪಾಲ ಬಳ್ಳ ಮಾಸ್ಟ್ರ ಕೋಟ್‌ನ್ನು ಕೋಟ್ ಮಾಡುವುದು ಬಿಟ್ಟುಬಿಟ್ಟಿದ್ದ.
ರೂಪಿಯ ವಿಚಾರದಲ್ಲಿ ಗೋಪಾಲನಿಗೆ ಹೀಗೊಂದು ಕೆಲಸಕ್ಕೆ ತಾನು ಮುಂದಾಗಿರುವುದರ  ಅರಿವೇ ಇರಲಿಲ್ಲ. ಸುದ್ದಿಯ ಹಿಂದೆ ತಾನು ಇಷ್ಟೊಂದು ಮೃಗವಾಗುತ್ತೇನೆ ಎಂದು ಗೊತ್ತೂ ಅಗಿರಲಿಲ್ಲ. ಆದರೆ ಯಾರದ್ದೋ ಔತಣಕ್ಕೆ ಯಾರನ್ನೋ ಕಡಿದು ಕತ್ತರಿಸಿ ಸುಲಿದು ಬೇಯಿಸಿ ಕುದಿಸಿ ಕಾರಾಪುಡಿ ಇಕ್ಕಿ ಒಗ್ಗರಣೆಯೂ ಇಟ್ಟು ಘಮ್ಮೆನ್ನುವ ಮೊದಲೇ ಹಳಸಿದ ವಾಸನೆ ಅಡರಿದಂತಾಗಿತ್ತು ಗೋಪಾಲನಿಗೆ.
ಚಹದ ಕಪ್ಪಲ್ಲಿ ಬಿರುಗಾಳಿ ಕಂಡಿದ್ದ.
ನಾನೇನು ತಪ್ಪು ಮಾಡಿದೆ ಹೇಳಿ..
ಯಾರು ಹಾಗೆಂದವರು..
ರೂಪಿಯೇ ಇರಬೇಕು..
ಅಲ್ಲಾ 
ಅದು ನಾನೇ..
ಗೋಪಾಲ ಎಂಬ ಧೀಮಂತ ಪತ್ರಕರ್ತ..
ಇಲ್ಲಿಲ್ಲ..
ಕಟಾರದಲ್ಲಿ ಕಂಡದ್ದು ಕೇಳಿದ್ದು ಯಾವುದೂ ಸುಳ್ಳಲ್ಲ..
ಸತ್ಯವೂ ಅಲ್ಲ..
ಹಾಗಾದರೆ ಅದೇನು..
ಈಗಷ್ಟೇ ಈ ಮಹೇಂದ್ರ ಕೇಳಿದ್ದು ಏನಂತ..
ಗೋಪಾಲ ಹಿಂದಿನ ಸೀಟಿನಿಂದ ಏನಂದೆ ಮಹೇಂದ್ರ..''ಎಂದ.
ಮತ್ತೊಮ್ಮೆ ಅಸ್ವಸ್ಥನಾಗಲಾರೆ ಎಂಬ ಭಂಡತನದಲ್ಲಿದ್ದ.
 ''ಏನಿಲ್ಲಾ..ರೂಪಿಯ ಸ್ಟೋರಿ ಏನಾಯಿತು'' ಅಂತ ಕೇಳಿದೆ..ಎಂದ ಮಹೇಂದ್ರ ಪುನರಪಿ..

20081222

ಗುಹಾಂರ್ತಗತ-೭


ಮರಳಿ ಇಹಕ್ಕೆ

ಪೂವೆಯ ಬೆಳಕು ನೇತ್ರಾವತಿಯುದ್ದಕ್ಕೂ ಹರಡಿತ್ತು. ಆ ಬೆಳಕಲ್ಲಿ ಗೋಪಾಲನಿಗೆ ಕಂಡದ್ದು ಕಂಚಿಕಲ್ಲು.
ತಣ್ಣಗೆ ನೀರ ನಡುವೆ ಕುಳಿತಿದೆ ಆ ಬಂಡೆ. ಅದರ ಜೊತೆಗೆ ನೂರಾರು ಕತೆಗಳಿವೆ.ಸಂಗಮಕ್ಷೇತ್ರದ ಜನರಿಗೆ ಅದು ಎಂದೂ ಪೂಜ್ಯ ಏನಲ್ಲ. ಆದರ ರಗಳೆಗೆ ಯಾರೂ ಹೋಗಿಲ್ಲ. ಆದರೂ ಕಂಚಿಕಲ್ಲಿಗೆ ಕತೆ ಕಟ್ಟಿದ್ದಾರೆ.ಅದು ಧರ್ಮಸ್ಥಳಕ್ಕೆ ಅಣ್ಣಪ್ಪ ದೈವ ರಾತ್ರೋರಾತ್ರಿ ಹೊತ್ತು ಸಾಗಿಸುತ್ತಿದ್ದ ಲಿಂಗವಂತೆ. ಕೋಳಿ ಕೂಗಿಬಿಟ್ಟ ಕಾರಣದಿಂದ ದೈವ ಅದನ್ನು ಇಲ್ಲೇ ಈ ನದಿಯ ನಡುವೆ ಇಟ್ಟುಬಿಟ್ಟಿತಂತೆ ಎಂಬುದು ಅತ್ಯಂತ ಮುಖ್ಯ ಕತೆಯಲ್ಲೊಂದು.
ಗೋಪಾಲನಿಗೆ ಸಣ್ಣವನಾಗಿರುವಾಗಲೇ ಈ ಕಂಚಿಕಲ್ಲು ದೂರದಿಂದಲೇ ಕರೆಯುತ್ತಿದೆ ಎಂಬ ಹಾಗಾಗುತ್ತಿತ್ತು. ಒಂದಲ್ಲ ಒಂದು ದಿನ ಅದರ ಮೇಲೆ ಹತ್ತಿ ಕುಳಿತುಕೊಳ್ಳಬೇಕು ಎಂಬುದು ಅವನ ಬಾಲ್ಯದ ಆಸೆಯಾಗಿತ್ತು. ಯಾರೂ ಅದನ್ನು ಮುಟ್ಟಲಾರರು ಎಂದು ಸಂಗಮಕ್ಷೇತ್ರದ ಮುದುಕರ ಹೇಳಿಕೆ. ಕಂಚಿಕಲ್ಲು ಒಡೆದು ಹಾಕಿದ ದಿನ ನೇತ್ರಾವತಿಯಲ್ಲಿ ಬೆಂಕಿಯೂ ಕುಮಾರಧಾರೆಯಲ್ಲಿ ಎಣ್ಣೆಯೂ ಹರಿದು ಬಂದೀತು..ಆಮೇಲೆ ಏನಾಗುತ್ತದೆ ಎಂದು ಯಾರೂ ಹೇಳುವ ಅಗತ್ಯವಿಲ್ಲ ಎಂದು ಜನ ಹೇಳುತ್ತಿದ್ದರು. 
ಗೋಪಾಲನಿಗೆ ಈ ಕೋಳಿಕೂಗುವ ಹೊತ್ತಿನಲ್ಲೇ ತಂಬೆಳಕಲ್ಲಿ ಕಂಚಿಕಲ್ಲು ಕಾಣಿಸಿದೆ.ಗುಹೆಯೊಳಗೆ ಕಂಡ ಆ ಅವಧೂತನನ್ನು ಹುಡುಕಾಡುವ ಹೊತ್ತು ಬಂತೆಂದು ಭಾಸವಾಗುತ್ತಿದೆ.
ನೇತ್ರಾವತಿಯಲ್ಲಿ ಮುಳುಗಿ ಬರಬೇಕೆಂದು ಅವನಿಗೆ ಆ ಸಣ್ಣ ಛಳಿಯಲ್ಲೂ ಟೆಂಪ್ಟ್ ಆಗುತ್ತಿದೆ.ಗೋಪಾಲ ಸೀದಾ ನದಿಗೆ ಇಳಿವ ಹಾದಿಯನ್ನು ಪರಡುತ್ತಿರುವಾಗಲೇ ಎದುರಿನಿಂದ ಬಂದ ಕಾರು ಜರ್ರನೇ ಬ್ರೇಕು ಹಾಕಿ ನಿಂತಿದೆ.
ಆ ಕಾರು ಬೀಸುತ್ತಿರುವ ಬೆಳಕು ಗೋಪಾಲನ ಮೈ ತುಂಬಾ ಹರಿದಾಡಿತು.ಕಣ್ಣು ಕಟ್ಟಿತು.ನದಿ ಎಲ್ಲಿದೆ? ರಸ್ತೆ ಎಲ್ಲಿದೆ? ಯಾವುದು ಕಂಚಿಕಲ್ಲು? ಯಾವುದು ಕಾರು? ಎಂದು ಗೊತ್ತಾಗದೇ ಅಯೋಮಯ ಎಂದನಿಸಿತು.
ಅಷ್ಟರಲ್ಲಿ ಕಾರಿಂದ ಒಂದು ಪರಿಚಿತ ಧ್ವನಿ.
ಗೋಪಾಲ್..ಎಂದು ಕರೆಯುತ್ತಲೇ ಗೊತ್ತಾದದ್ದು..
ಮಹೇಂದ್ರ..
ಜೊತೆಯಾಗಿ ಅವನೊಂದಿಗೆ ಇಳಿದು ಬಂದವನು ರಾಧಾಕೃಷ್ಣ..
ಎಂಥದ್ದು ಮಾರಾಯ ..ನೀನು ಈ ರಾತ್ರಿ ಇಲ್ಲಿ ಎಂದು ಆರಂಭವಾದ ಪ್ರಶ್ನೆಗಳ ಸುರಿಮಳೆ ಮುಗಿದದ್ದು ಗೋಪಾಲ ಏನೇನಾಗಿದೆ ಎಂದು ಹೇಳಿ ಮುಗಿಸಿದ ನಂತರವೇ..
ಮಹೇಂದ್ರ ಆ ಹೊತ್ತಿಗೆ ಮೂರಾದರೂ ಸಿಗರೇಟು ಸೇದಿ ಎಸೆದಿದ್ದ.ರಾಧಾಕೃಷ್ಣ ಮತ್ತೆರೆಡು ಸ್ಟಾರ್ ಜಗಿದಿದ್ದ.
ಅಂತೂ ಸ್ಕೂಟರ್‌ಗೆ ಬೆಂಕಿ ಬಿದ್ದಿದೆ ಎಂದು ನೀನು ಹೀಗೆ ಹುಚ್ಚನ ಹಾಗೇ ಹೋಗುವುದಾ ಎಂದ ಮಹೇಂದ್ರ.
ಇನ್ನೇನು ಮಾಡೋದು ಮನೆಗೆ ಹೋಗಬೇಕಲ್ಲಾ..ನಡೆದುಕೊಂಡೇ ಹೋಗದೇ ಸಾಯೋದಾ..ಇಷ್ಟೆಲ್ಲಾ ಆಗೋ ಹೊತ್ತಿಗೆ ಇಷ್ಟು ತಡವಾಯಿತು ನೋಡಿ ಎಂದ ಗೋಪಾಲ.
ಇರಲಿ ನಾವು ಈ ಬಗ್ಗೆ ಏನಾದರೂ ಮಾಡಲೇ ಬೇಕು. ಸ್ಕೂಟರ್‌ಗೆ ಬೆಂಕಿ ಬಿದ್ದದೋ ಅಥವಾ ಬೀಳಿಸಿದ್ದೋ ಅಂತ ಗೊತ್ತಾಗಬೇಕಲ್ಲಾ..ನಾಳೆ ಏನಾದರೂ ಪೊಲೀಸರಿಗೆ ಇದನ್ನು ಕ್ಲಿಯರ್ ಮಾಡಲೇ ಬೇಕಾಗುತ್ತದೆ..ಎಂದ ರಾಧಾಕೃಷ್ಣ.
ಅಲ್ಲಾ ನನ್ನ ಸ್ಕೂಟರ್ ಅದೇನೋ ಬೆಂಕಿಗೆ ಸುಟ್ಟುಹೋದರೆ ಪೊಲೀಸರಿಗೆ ಏನು ಕಷ್ಟ? ಆಗ ನೋಡಿದರೆ ಸೀತಾರಾಮ ಕೂಡಾ ಪೊಲೀಸ್ ಪೊಲೀಸ್ ಅಂತಾನೆ ದರಿದ್ರ ದರಿದ್ರ ಎಂದ ಗೋಪಾಲ ಸಿಟ್ಟಿನಲ್ಲಿ.
ಸ್ವಾಮೀ ಹಾಗಲ್ಲ. ನೀನು ಒಬ್ಬ ಪತ್ರಕರ್ತನಾಗಿರುವವನು ನಿನಗೂ ಗೊತ್ತಾಗಬೇಕು. 
ನಿನ್ನ ಸ್ಕೂಟರ್ ಸುಟ್ಟುಹೋದದ್ದು ಒಂದು ಸಾರ್ವಜನಿಕ ಘಟನೆ.ನಿನ್ನ ಅಬ್ಬಿ ಒಲೆಗೆ ಬೆಂಕಿ ಹಾಕಿದ ಹಾಗೆ ಅಂತ ನೀನು ತಿಳಕೊಂಡ್ಯಾ..?ಸ್ಕೂಟರ್ ಪಾರ್ಕ್ ಮಾಡಿದಲ್ಲಿ ಅದೂ ರಾತ್ರಿ ಹೊತ್ತಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹಿಡಿದು ಸುಟ್ಟುಹೋಗೋದು ಎಂದರೆ ಸುಮ್ಮನೇ ಆಗುತ್ತದಾ.. ನಾವಾಗಿಯೇ ಪಿಟಿಶನ್ ಕೊಡೋದು ವಾಸಿ..ಪೊಲೀಸರೇ ಸುದ್ದಿ ಹಿಡಿದು ಬಂದರೆ ಕಷ್ಟ.''ಎಂದು ಮಹೇಂದ್ರ ಗೋಪಾಲನಿಗೆ ಬೋಧಿಸಿದ.
ಹಾಳಾಗಿ ಹೋಗಲಿ ಅದೇನು ಮಾಡುತ್ತೀರೋ ನನಗೆ ಗೊತ್ತಿಲ್ಲ. ಸ್ಕೂಟರ್ ಮೇಲೆ ನನಗೇನೂ ಮೋಹ ಇಲ್ಲ. ಅದು ಆ ಕಪಣೂರ ಡಾಕ್ಟ್ರದ್ದು.. ಅಂದು ಇದೇ ಸ್ಕೂಟರ್ ಪಲ್ಟಿ ಆಗಿ ಆ ಡಾಕ್ಟ್ರಿಗೆ ಹಾವು ಕಚ್ಚಿದ್ದು..''ಎಂದ ಗೋಪಾಲ.
ಒಟ್ಟಾರೆ ಶನಿ ಹಿಡಿದ ಸ್ಕೂಟರ್ ಅದು..ಯಾವುದಕ್ಕೂ ಬೆಳಗಾಗಲಿ..ನಾವು ಈ ಬಗ್ಗೆ ಪೊಲೀಸ್‌ನ್ನು ಭೇಟಿ ಆಗಲೇ ಬೇಕು.ಅದರಲ್ಲಿ ಆನೆಕುದುರೆ ಏನಿದೆ. ನಿನಗೆ ಸ್ಟೇಶನ್ ಗೊತ್ತು. ನೀನು ಬೇರೆ ಜರ್ನಲಿಸ್ಟು.''.ಎಂದು ರಾಧಾಕೃಷ್ಣ ಗೋಪಾಲನನ್ನು ಸಮಾಧಾನಿಸಿದ.
ಹೀಗೆ ಅವರು ಮೂವರು ಗೆಳೆಯರು ಅಯಾಚಿತವಾಗಿ ಆ ಉದೆಕಾಲದಲ್ಲಿ ಆ ನದಿ ಸಮೀಪದಲ್ಲಿ ಹೆದ್ದಾರಿ ಪಕ್ಕ ನಿಂತು ಮಾತನಾಡುತ್ತಾ ಕಾಲಯಾಪನೆ ಮಾಡಿದರು.
ಗೋಪಾಲನಿಗೆ ಈ ಹೊತ್ತಿಗೆ ಮತ್ತೆ ಇಹಲೋಕ ಪ್ರವೇಶವಾಗಿತ್ತು.ಗುಹೆ.ಅವಧೂತ..ಮರೆಯಾಗಿದ್ದವು. ಗುಹೆ ಹೊಕ್ಕು ಬಿಡಬೇಕು ಎಂದು ಅನಿಸಿದ್ದು ತನಗಲ್ಲ ಇನ್ಯಾರಿಗೋ ಇರಬೇಕು ಎಂಬಷ್ಟರ ಮಟ್ಟಿಗೆ ಅವನು ಬದಲಾಗಿದ್ದ.
ಅದೆಲ್ಲಾ ಇರಲಿ..ನಿಮ್ಮ ಬಾಡಿ ಈ ವೇಳೆಗೆ ಬರುತ್ತಿರುವುದು ಎಲ್ಲಿಂದ ಎಂದು ಗೋಪಾಲ ಕೇಳಿದ.
ನಾವು ಮೆಡ್ರಾಸ್‌ಗೆ ಹೋಗಿದ್ದೆವು. ಆಮೇಲೆ ಕೊಯಂಬತ್ತೂರಿಗೆ..ಜೆಸಿಬಿ ನೋಡಲಿಕ್ಕೆ..''
ಎಂದ ಮಹೇಂದ್ರ.
''ಪಾರ್ಟ್ನ್‌ರ್‌ಶಿಪ್ಪಲ್ಲಿ ಜೆಸಿಬಿ ತೆಗಯೋದು.. ಒಳ್ಳೇ ಲಾಭ ಇದೆ.. ಅಂತ ಗೊತ್ತಾಗಿದೆ.ಈಗ ಸೀಸನ್ನು ಬೇರೆ.. ರೈಲು ಮಾರ್ಗಕ್ಕೆ ಕಂತ್ರಾಟು ಹಿಡಿದರೆ ಲಾಟ್ರಿ ಹೊಡೆದ ಹಾಗೇ..''ಎಂದು ಮಹೇಂದ್ರ ವಿವರಿಸುತ್ತಾ ಹೇಗೆ ದುಡ್ಡು ಮಾಡಬಹುದು ಮತ್ತು ಏಕೆ ಮಾಡಬೇಕು ಎಂಬುದನ್ನು ಪ್ರವಚನ ಮಾದರಿಯಲ್ಲಿ ವಿವರಿಸುತ್ತಾ ಹೋದರೆ ಇತ್ತ ಗೋಪಾಲ ಕಾರು ಹತ್ತಿ ಕುಳಿತಿದ್ದ.
ಕಾರು ಹೊರಟಿತು.ಗೋಪಾಲ ಮನೆಗೆ ತಿರುಗಿಸಿ ಎಂದ.ಕಾರು ತಿರುಗಿತು.
ದಾರಿ ಮಧ್ಯೆ ಮಹೇಂದ್ರನೇ ಗೋಪಾಲನಿಗೆ ಈ ಕ್ಷಣಕ್ಕೆ ಕೊಂಚವೂ ಇಷ್ಟವಾಗದ ಮತ್ತು ಅವನನ್ನು ಅಸ್ವಸ್ಥಗೊಳಿಸುವ ಆ ಪ್ರಶ್ನೆಯನ್ನು ಕೇಳಿಯೇಬಿಟ್ಟ..

20081221

ಗುಹಾಂರ್ತಗತ-೬ಹೋಗಲಿ ಏನಂತೆ ಎಂದ ಗೋಪಾಲ


ಸ್ಕೂಟರ್ ಪೂರ್ತಿ ಕರಕಲಾದದ್ದನ್ನು ನೋಡಿದ ಮೇಲೆ ಗೋಪಾಲ ತನ್ನೊಳಗೇ ಆಶ್ಚರ್ಯಪಟ್ಟ.
ಎಷ್ಟೊಂದು ಗಟ್ಟಿಯಾಗಿದ್ದೇನೆ ಎಂದು ಅವನಿಗೇ ಅಚ್ಚರಿ.ಹಿಂದೆಲ್ಲಾ ಆಗಿದ್ದರೆ ಹೀಗೆ ಆದಾಗ ಅಳು ಬಾಯಿಗೆ ಬರುತ್ತಿತ್ತು. ಶಾಲೆಯಲ್ಲಿ ಪೆನ್ಸಿಲ್ ಮೊನೆ ಮುರಿದಾಗ ಗೋಳೋ ಎಂದು ಅತ್ತವನು ಅವನು.
ಎಳಸು ಎಳಸು
ಈಗ ಇದೇಕೆ ಹಾರ್ಡ್ ಆಗಿದ್ದೇನೆ ಎಲ್ಲಿಂದ ಬಂತು ಈ ಗಟ್ಟಿತನ ಎಂದು ಅವನಿಗೇ ಸಂತೋಷವಾಗತೊಡಗಿತು.
ಸ್ಕೂಟರ್ ಸುಟ್ಟುಹೋಗಿದೆ. ಹೋಗಲಿ ಏನಂತೆ..
ಅದನ್ನು ರಿಪೇರಿ ಮಾಡಿದರಾಯಿತು..ಅಥವಾ ಹೊಸತೊಂದು ಕೊಂಡರಾಯಿತು.
ಒಂಭತ್ತು ಸಾವಿರ ರೂಪಾಯಿ ಅಂದು ಕೊಟ್ಟಿದ್ದುಂಟಲ್ಲಾ ನಷ್ಟವಾಗಲಿಲ್ಲವೇ..
ಹೌದು ಆಗಿದೆ ಏನೀಗ..
ನಷ್ಟವೇ ಆಗಿದೆ ಅದೂ ಕೂಡಾ ಒಂದು ಅನುಭವ..
ಸ್ಕೂಟರ್ ಏಕೆ ಸುಟ್ಟುಹೋಗಿದೆ ಎಂಬುದಷ್ಟೇ ತನಗೆ ಚಿಂತಿಸಲು ಉಳಿದಿರುವ ವಿಷಯ.
ಮರದ ಮಿಲ್ಲಿನ ಸೀತಾರಾಮ ಆ ಜನಜಂಗುಳಿಯ ನಡುವೆ ಸೀದಾ ಗೋಪಾಲನ ಬಳಿಗೇ ಬಂದು ಬನ್ನಿ ಬನ್ನಿ ಎಂದು ದೂರದ ಕತ್ತಲಲ್ಲಿ ಕರೆದೊಯ್ದ..ಸ್ಕೂಟರ್‌ನಲ್ಲಿ ಏನಾದರೂ ಇಟ್ಟದ್ದಿತ್ತಾ ಎಂದು ದೊಡ್ಡ ತನಿಖೆ ಆರಂಭಿಸುವವನ ಹಾಗೇ ಕೇಳಿದ.
ಗೋಪಾಲ ಹಾಗೇನೂ ಇಲ್ಲವಲ್ಲಾ ಎಂದ.
ಆದರೂ..ಎಂದ ಸೀತಾರಾಮ.
ಏಕೆ ಕೇಳಿದ್ದೀರಿ ಅಂತ ಗೊತ್ತಾಗಲಿಲ್ಲ ಎಂದ ಗೋಪಾಲ.
ಕೆಲವೊಂದು ಬಾರಿ ಏನಾದರೂ ಉರಿಯುವ ವಸ್ತು  ಇಟ್ಟರೂ ಹೀಗೇ ಆಗುತ್ತದೆ..ನೋಡಿ ಎಂದ
ತಕ್ಷಣ ಗೋಪಾಲನಿಗೆ ಉಡುಪಿಯಲ್ಲಿ ಆದ ಘಟನೆ ನೆನಪಾಯಿತು.ಗಿರೀಶನ ಜೊತೆ ಅವನ ಕಾರಲ್ಲಿ ಹೋಗುತ್ತಿರುವಾಗ ಡಾಶ್ ಬೋರ್ಡಲ್ಲಿಟ್ಟಿದ್ದ ಸಿಗರ್‌ಲೈಟ್ ಢಬ್ ಅಂತ ಒಡೆದು ಬೆಂಕಿ ಚಿಮ್ಮಿದ್ದು ನೆನಪಾಯಿತು.
ಹಾಗೇನಿಲ್ಲನ॒ನ್ನ ಸ್ಕೂಟರ್‌ನಲ್ಲಿ ಏನೂ ಇರಲಿಲ್ಲ ಎಂದ ಗೋಪಾಲ.
ಇರಲಿಲ್ಲ ಅಂತ ನೀವು ಹೇಳಬಹುದು ಆದರೆ ಪೊಲೀಸರು ಸುಮ್ಮನೇ ಬಿಡುವುದಿಲ್ಲ ಎಂದ ಸೀತಾರಾಮ.
ಪೊಲೀಸರಿಗೂ ನಾನು ಇದನ್ನೇ ಹೇಳುವುದು ಎಂದ ಗೋಪಾಲ.
ಅಷ್ಟು ಮಾತುಕತೆ ಮುಗಿಸಿ ಮತ್ತೆ ಸ್ಕೂಟರ್ ಉರಿದ ಜಾಗಕ್ಕೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ.ಆ ರಾತ್ರಿ ಈ ಯಕಶ್ಚಿತ್ ಸ್ಕೂಟರ್ ಬಗ್ಗೆ ಯಾರಿಗೂ ಅಂಥದ್ದೊಂದು ಉಮೇದು ಉಳಿಯುವುದು ಶಕ್ಯವಿರಲಿಲ್ಲ.
ಏನು ಮಾಡುತ್ತೀರಿ ಎಂದು ಸೀತಾರಾಮ ಕೇಳಿದ.
ಏನೂ ಮಾಡಲಿಕ್ಕಿಲ್ಲ ಸೀದಾ ಮನೆಗೆ ಹೋಗಿ ಮಲಗುತ್ತೇನೆ ಎಂದ ಗೋಪಾಲ.
ಅಲ್ಲಾ ನೀವು ಒಬ್ಬರೇ ಈ ದುರ್ಘಟನೆಯ ಬಳಿಕ ಮನೆಗೆ ಏಕಾದರೂ ಹೋಗುತ್ತೀರಿ,ನನ್ನ ಮನೆಗೆ ಬನ್ನಿ,,ನಾಳೆ ಸ್ಕೂಟರ್‌ನ್ನು ಸ್ಟೇಶನ್ನಿಗೆ ಸಾಗಿಸುವಾ..ಒಂದು ಪಿಟಿಶನ್ ಕೊಡುವಾ..ಇನ್ಶೂರೆನ್ಸು ಆದರೂ ಸಿಕ್ಕದರೂ ಆಯಿತಲ್ಲಾ..ಎಂದೆಲ್ಲಾ ಸಲಹೆಗಳ ಸರಮಾಲೆ ಮುಂದಿಟ್ಟ.
ಗೋಪಾಲನಿಗೆ ಅದು ಯಾವುದೂ ಪಥ್ಯ ಅಂತಾಗಲಿಲ್ಲ.
ಸೀತಾರಾಮ ನನಗೆ ಇದು ಯಾವುದೂ ಬೇಡ..ಎಂತಕೆ ಗೊತ್ತುಂಟಾ..ಸ್ಕೂಟರ್‌ಗೆ ಎಂದೂ ಇನ್ಶೂರೆನ್ಸು, ಮಣ್ಣು ಮಸಿ ಅಂತ ನಾನು ಮಾಡಿದವನೇ ಅಲ್ಲ ಎಂದ.
ಸೀತಾರಾಮನಿಗೆ ಮುಂದೇನೂ ಮಾತನಾಡಬಹುದು ಎಂದು ತೋರಲಿಲ್ಲ.ಒಂದು ಕ್ಷಣ ಗೋಪಾಲನನ್ನು ಅವನ ಮನೆಗೆ ಡ್ರಾಪ್ ಕೊಟ್ಟುಬರೋಣ ಎಂದು ಯೋಚಿಸಿದ್ದನ್ನೂ ಆತ ಹಿಂತೆಗೆದುಕೊಂಡ.
ಗೋಪಾಲನಿಗೆ ಅದೂ ಅರ್ಥವಾಗಿತ್ತು.ಎಲ್ಲಿ ಈ ಮನುಷ್ಯ ತನಗೆ ಡ್ರಾಪ್ ಆಫರ್ ಮಾಡಿ ಕಷ್ಟಕೊಡುವನೋ ಎಂದು ಅವನಿಗೆ ಆತಂಕವಿತ್ತು.
ಗೋಪಾಲ ನಿರಾಳವಾದ.
ಸ್ಕೂಟರ್ ಸುಟ್ಟುಹೋಗುವ ಮೂಲಕ ತಾನು ಯಾವುದೋ ಅನಗತ್ಯ ಸ್ಥಿತಿಯಿಂದ ಮುಕ್ತನಾಗುತ್ತಿರುವಂತೆ ಅವನಿಗೆ ಅನುಭವಕ್ಕೆ ಬಂತು.
ನೇತ್ರಾವತಿಗೆ ಸಮಾನಾಂತರವಾಗಿ ಸಾಗುವ ಟಾರು ರಸ್ತೆಯಲ್ಲಿ ಗೋಪಾಲ ಆ ನಸುಕಿನಲ್ಲಿ ಒಬ್ಬನೇ ಹೆಜ್ಜೆ ಹಾಕುತ್ತ ಪರಮಾನಂದಪಟ್ಟ.
ಚಂದಿರ ಗೋಪಾಲನ ಜೊತೆಜೊತೆಗೆ ಬರುತ್ತಿದ್ದ. ಅವನೂ ಆಕಾಶದ ಮುಕ್ಕಾಲು ಭಾಗ ದಾಟಿದ್ದಾಗಿತ್ತು.ಏಕೋ ತಾನೂ ಯಾವುದೋ ಹಂತದಿಂದ ಹೀಗೆ ಮುಕ್ಕಾಲು ಭಾಗ ದಾಟುತ್ತಿದ್ದೇನೆ ಎಂದು ಗೋಪಾಲನಿಗೆ ವೇದ್ಯವಾಗತೊಡಗಿತು.
ಟೀವಿ ಕೆಲಸಕ್ಕೆ ರಾಜೀನಾಮೆ ಮಡಗಿದೊಡನೆ ಇಷ್ಟು ಕಾಲ ತಾನು ಅದನ್ನು ಯಾಕಾದರೂ ಮಾಡಬೇಕಾಯಿತೋ ಎಂದು ಅವನಿಗೆ ಅಚ್ಚರಿಯಾಗಿತ್ತು. ಯಾರ ಸುದ್ದಿಯನ್ನು ಯಾರಿಗೆ ಯಾಕಾದರೂ ಹೇಳಬೇಕು ಅದರಿಂದ ಯಾರಿಗಾದರೂ ಏನಾಗುತ್ತದೆ..
ಇನ್ನೊಬ್ಬರ ಸುದ್ದಿ ಕಟ್ಟಿಕೊಂಡು ಏನುಮಾಡುವುದಿದೆ..ಅವನು ಸತ್ತ ಇವನು ಗೆದ್ದ ಅವನಿಗೆ ಪ್ರಶಸ್ತಿ ಇವನ ಬಂಧನ ಅಂತ ಏಕೆ ಬೇಕು..
ಏನೂ ಗೊತ್ತಿರಬಾರದು..
ಹಾಗೊಂದು ಸ್ಥಿತಿ ಏಕೆ ಇರಬಾರದು..ವರ್ತಮಾನವೇ ಇಲ್ಲದ ವರ್ತಮಾನ..
ಭವಿಷ್ಯದ ಹಂಗಿಲ್ಲದ ವರ್ತಮಾನ ರೂಪಿಸಿಕೊಳ್ಳಬೇಕು..
ಕಾಲದಲ್ಲೇ ಇರಬಾರದು.. ಹಾಗೇ ಇರೋದು ನಿಜವಾದ ದಿವ್ಯ ಸ್ಥಿತಿ.
 ಯಾರೂ ತನಗೆ ಗೊತ್ತಿಲ್ಲ ಯಾರಿಗೂ ತಾನು ಗೊತ್ತಿಲ್ಲ ಎಂಬ ಹಾಗೇ ಇರಲು ಏಕೆ ಸಾಧ್ಯ ಮಾಡಿಕೊಳ್ಳಬಾರದು ಎಂದು ಗೋಪಾಲ ತರ್ಕಿಸಿದ.
ಆಗಲೇ ಅವನಿಗೆ ನೆನಪಾದದ್ದು ಗುಹೆಯೊಳಗೆ ಕಂಡ ಆ ಅವಧೂತ.
ಅವನು ಹೇಗಿದ್ದ ಎಂದರೆ ಯಾವ ಚಿತ್ರವೂ ಕಣ್ಣ ಮುಂದೆ ಕಾಣುವುದಿಲ್ಲ..ಆದರೆ ಅವನು ಅದೇನು ಕೇಳಿದ..
ರಾಮ-ರಾವಣರ ಯುದ್ಧ ಮುಗಿಯಿತೇ ಎಂದು ಅಲ್ಲವೇ..
ಗೋಪಾಲನಿಗೆ ಈ ಕ್ಷಣಕ್ಕೆ ಆ ಅವಧೂತನ ವಾಕ್ಯಕ್ಕೆ ಹೊಸತಾದ ಅರ್ಥ ಕೆನೆಗಟ್ಟತೊಡಗಿತು.
ರಾಮ-ರಾವಣರ ಯುದ್ಧದ ಹೊತ್ತಿಗೆ ಅವನು ಆ ಗುಹೆ ಹೊಕ್ಕು ತಪಸ್ಸಿಗೆ ಕುಳಿತಿರಬೇಕು ಎಂದು ತಾನು ಈ ತನಕ ನಂಬಿದ್ದು ಎಷ್ಟೊಂದು ರಬ್ಬಿಶ್ ಎಂದು ತನಗೆ ತಾನೇ ಹೇಳಿಕೊಂಡ.
ಅದನ್ನು ಬಿಡಿಸಿಕೊಳ್ಳಲೇಬೇಕು..ಆ ಅವಧೂತನನ್ನು ಕಾಣದೇ ಇನ್ನು ಈ ಜಗತ್ತನ್ನು ಪ್ರವೇಶಿಸಬಾರದು..ಈ ಕ್ಷಣಕ್ಕೇ ಗುಹೆ ಹೊಕ್ಕು ಬಿಡುತ್ತೇನೆ..ಆ ಕತ್ತಲಲ್ಲಿ ಹುಡುಕಾಟ ಮಾಡುತ್ತೇನೆ..ಮೈಕೈ ಬಿಟ್ಟರೆ ಬೇರೇನೂ ಇರಬಾರದು..
ಗೋಪಾಲ ಖಡಕ್ಕಾಗಿ ನಿರ್ಧರಿಸಿದ್ದು ಹಾಗೇ ಗಟ್ಟಿಯಾಗುತ್ತಾ ಹೋಯಿತು..ಅವನಿಗೆ ತಾನೇ ತಾನಾಗಿ ಒಂದು ಹೊಸ ಜಗತ್ತು ಎದುರು ನಿಂತಂತಾಗಿತ್ತು..
ಬೆಳಕು ಹರಿಯುತ್ತಿರುವುದು ಗೋಪಾಲನಿಗೆ ಭಯ ಹುಟ್ಟಿಸಿತು.ವೇಗವೇಗವಾಗಿ ಆತ ಹೆಜ್ಜೆ ಹಾಕತೊಡಗಿದ.
ನೇತ್ರಾವತಿ ಹೇಮಂತಋತುವಿನ ಚಹರೆಯನ್ನು ಹೊದ್ದು ಹರಿಯುತ್ತಿದ್ದಳು.
ಗುಹೆ ಒಳಗೆ ಈಗಿಂದೀಗಲೇ ಸೇರಿಬಿಡಬೇಕು ಎಂದು ಗೋಪಾಲ ನಿರ್ಧರಿಸಿದ್ದು ಆಗಲೇ..
ನಾಳೆಯೇ ಕಾರ್ತಿಕ ಹುಣ್ಣಿಮೆ..20081219

ಗುಹಾಂತರ್ಗತ-೫ಘಟ್ಟದ ಡಾಕ್ಟ್ರ ಟ್ರಾಜಿಕ್ಕ್ ಎಂಡ್

ಇಸ್ಮಾಲಿಗೆ ಹಾವು ಕಾಣಿಸಿರಲಿಲ್ಲ. ಕಂಡದ್ದು ಕಪಣೂರ ಡಾಕ್ಟ್ರಿಗೇ.ಕಿರ್ರ್‌ರ್‌ರ್ ಎಂದು ಅವರ ಸ್ಕೂಟರ್ ಬ್ರೇಕು ಹಾಕಿತೊ ಅದೇ ವೇಗದಲ್ಲಿ ಡುಬ್ಬನೇ ಬಿದ್ದೇ ಹೋಯ್ತು.
ಇಸ್ಮಾಲಿ ಮೂರು ಪಲ್ಟಿ ಹೊಡೆದು ಮೈಲುಕಲ್ಲಿನ ಬಳಿಗೆ ಉರುಳಿ ಹೋಗಿದ್ದ. ಕಪಣೂರ ಡಾಕ್ಟ್ರು ಮಾತ್ರಾ ಹಾವಿನ ಮೇಲೆಯೇ ಬಿದ್ದುಬಿಟ್ಟರು.
ಆಗಲೇ ಎಲ್ಲಾ ಮುಗಿದಿತ್ತು.
ಇಸ್ಮಾಲಿ ಡಾಕ್ಟ್ರೇ ಡಾಕ್ಟ್ರೇ ಅಂತ ಕೂಗಿಕೊಂಡು ಓಡಿ ಬಂದ. ಡಾಕ್ಟ್ರು ಎದ್ದು ಕುಳಿತಿದ್ದರು.
ಏನಾಯಿತು ಎಂದ.
ಹಾವು ಅಡ್ಡ ಬಂತು ಎಂದರು ಡಾಕ್ಟ್ರು.
ಆಮೇಲೆ ಕಚ್ಚಿಬಿಟ್ಟಿತಲ್ಲಾ ಇಸ್ಮಾಲೀ..''ಎಂದರು.
ಇಸ್ಮಾಲಿ ಹಾವಿಗಾಗಿ ತಡಕಾಡಿದ. ಬಗ್ಗಿ ಕಲ್ಲು ಎತ್ತಿದ.
ಕಚ್ಚಿತ್ತಾ ಡಾಕ್ಟ್ರೇ ಎಂದ.
ಹೂಂ ಇಸ್ಮಾಲಿ.. ಹಾವು ಕಚ್ಚಿತು..ಮನೆಯಲ್ಲಿ ಎರಡು ಸಣ್ಣ ಮಕ್ಕಳಿದ್ದಾರೆ ನೋಡು ಎಂದರು.

ಇಸ್ಮಾಲಿ ಈ ಮಾತನ್ನು ಹುಚ್ಚು ಹಿಡಿದಗಲೆಲ್ಲಾ ಸಿಕ್ಕಸಿಕ್ಕವರ ಬಳಿ ಹೇಳಿ ಗೋಳೋ ಅಂತ ಅಳುತ್ತಿದ್ದ. ತಪ್ಪೆಲ್ಲಾ ನನ್ನದೇ ಅನ್ನುತ್ತಿದ್ದ. ಆ ದಿನ ಅಷ್ಟೂ ಕಲಿತ ಡಾಕ್ಟ್ರು ಕೂಡಾ ನಾನು ಹೇಳಿದ್ದಕ್ಕೆ ತಲೆಯಾಡಿಸಿದರು..ಎಂದು ಆಗಾಗ ಅವನು ಪೆರಿಯಡ್ಕಕ್ಕೆ ಹುಚ್ಚು ಹಿಡಿಸಿಕೊಂಡು ಬಂದಾಗಲೆಲ್ಲಾ ಹೇಳುವನು.
ಹಾಗೇ ಮನೆಯ ಮಕ್ಕಳನ್ನು ನೆನದುಕೊಂಡ ಡಾಕ್ಟ್ರು ತನಗೆ ವಿಪರೀತ ಸುಸ್ತಾಗುತ್ತಿರುವ ಬಗ್ಗೆ ಹೇಳಿದರು.
ನೀರು ಕುಡಿಯಬೇಕಿತ್ತು ಎಂದರು. ಆ ರಾತ್ರಿ ಅಲ್ಲಿ ನೀರು ಎಲ್ಲಿಂದ ತರೋದು.ಕಾಡು ಅಂದರೆ ಕಾಡು ಬೇರೆ. ಪಕ್ಕದಲ್ಲಿ ಸನ್ಯಾಸಿಮೂಲೆ ಗುಡ್ಡ.ಇಸ್ಮಾಲಿ ಅದನ್ನೇ ನೊಡಿದ. ಆಕಾಶ ಕಪ್ಪಾಗಿತ್ತು.ಮಳೆಗಾಲದ ದಿನಗಳು. ಯಾವಾಗ ಮಳೆ ಬರುತ್ತದೋ ಏನೋ..
ಇಸ್ಮಾಲಿ ಇನ್ನು ತಡ ಮಾಡಬಾರದು ಎಂದುಕೊಂಡ.ಸೀದಾ ಸ್ಕೂಟರನ್ನು ತಾನೇ ಎತ್ತಿದ.ಕಿಕ್ ಹೊಡೆದಾಗ ಸ್ಟಾರ್ಟು ಆಯಿತು.ಡಾಕ್ಟ್ರೇ ಕುಳಿತುಕೊಳ್ಳಿಸಾರ್ ಎಂದ.ಡಾಕ್ಟ್ರು ಕುಳಿತರು.ಇಸ್ಮಾಲಿ ಹೇಳಿದ ಇಲ್ಲಿ ಬೆದ್ರೋಡಿ ಅಂತ ಊರಿದೆ. ಅಲ್ಲಿ ಶೀನಪ್ಪ ಅಂತ ಒಬ್ಬ ಇದ್ದಾನೆ .ಹಳ್ಳಿಪಂಡಿತ. ಹುಚ್ಚು ನಾಯಿಗೆ ಅವನ ಮದ್ದು ಅಂದರೆ ಅದು ಅದ್ಭುತ.ಅವನು ಕೊಟ್ಟ ಎಲೆ ಮತ್ತು ಬೇರುಗಳ ಕಟ್ಟನ್ನು ಗಂಜಿ ಜೊತೆ ಹಾಕಿ ಬೇಯಿಸಿ ಬರೀ ಹೊಟ್ಟೆಗೆ ತಿಂದರೆ ಯಾವ ರೇಬಿಸ್ಸೂ ಇಲ್ಲ..ಆ ಪಂಡಿತ ಹಾವು ಕಚ್ಚಿದ್ದಕ್ಕೂ ಮದ್ದು ಕೊಡತಾನೆ ಅಂತ ನನಗೆ ಚೆನ್ನಾಗಿ ಗೊತ್ತಿದೆ.ನಾವು ಸೀದಾ ಅಲ್ಲಿಗೇ ಹೋಗೋಣ..
ಸ್ಕೂಟರ್ ಕೂಡಾ ಅಲ್ಲಿಗೇ ಹೋಗುತ್ತಿತ್ತು.
ಡಾಕ್ಟರ್ ಕಪಣೂರ ಇಸ್ಮಾಲಿ ಹೇಳಿದ್ದಕ್ಕೆ  ಬೇಡ ಅನ್ನಲಿಲ್ಲ.
ಶೀನಪ್ಪ ಪಂಡಿತನನ್ನು ಕರೆದೆಬ್ಬಿಸಬೇಕಾದೀತು ಎಂದು ಇಸ್ಮಾಲಿ ಭಾವಿಸಿದ್ದ. ಈ ತಡ ರಾತ್ರಿಯಲ್ಲಿ ಅವನ ಮನೆ ಅಂಗಳಕ್ಕೆ ಹೋಗಿ ಕೂಗಿ ಕರೆದು ಅವನ ಕಾಟು ನಾಯಿಗಳ ಅಪಾಯ ತಪ್ಪಿಸಿಕೊಂಡು ಆಮೇಲೆ ಅವನು ಎದ್ದು ಬಂದು ವಿಷಯ ತಿಳಿದು ಮದ್ದು ಹುಡುಕಿ ಎಲ್ಲಾ ಆಗೋ ಹೊತ್ತಿಗೆ ಅರ್ಧಗಂಟೆಯಾದರೂ ಬೇಕು ಅಂತ ಇಸ್ಮಾಲಿ ಲೆಕ್ಕ ಹಾಕಿದ್ದ. 
ಆದರೆ ಅದೃಷ್ಟವಶಾತ್ ಶೀನಪ್ಪ ಪಂಡಿತ ಎಚ್ಚೆತ್ತೇ ಇದ್ದ. ಇಸ್ಮಾಲಿ ಸ್ಕೂಟರ್ ನಿಲ್ಲಿಸೋ ವೇಳೆಗೇ ಆತನ ಮಗಳು ಪ್ರಮೀಳಾ ಧಾವಿಸಿಬಂದಳು.ಪ್ರಮೀಳಾ ಕಂಪ್ಯೂಟರ್ ಕಲಿಯಲು ಕಪಣೂರ ಡಾಕ್ಟ್ರ ಮಾಳಿಗೆಗೆ ಸದಾ ಬರುತ್ತಿರುವುದರಿಂದ ಇಸ್ಮಾಲಿಗೂ ಅಕೆಯನ್ನು ಗೊತ್ತಿತ್ತು ಆಕೆಗೂ ಇಸ್ಮಾಲಿಯನ್ನು ಪರಿಚಯವಿತ್ತು.
ಪ್ರಮೀಳಾ ಬಳಿ ಹೀಗೀಗಾಗಿದೆ ಎಂದು ಇಸ್ಮಾಲಿ ವಿವರಿಸಿದ.ಈಗಷ್ಟೇ ಒಂದು ಕಂದಡಿ ಕಚ್ಚಿದ ಕೇಸು ಬಂದು ಅವರು ಮದ್ದು ತೆಗೆದುಕೊಂಡು ಹೋದದಷ್ಟೇ ಎಂದಳು ಪ್ರಮೀಳಾ.
ಕಪಣೂರ ಡಾಕ್ಟ್ರನ್ನು ಸ್ಕೂಟರ್‌ನಿಂದ ಕೈ ಹಿಡಿದೇ ಕರೆ ತಂದ ಇಸ್ಮಾಲಿ ನೋಡ್ತಾ ಇರಿ ಸಾರ್ ಬೆಳಗಾಗೋ ವೇಳೆಗೆ ವಿಷವೆಲ್ಲ ಖತಂ ಎಂದು ಅಪಾರ ಭರವಸೆ ನೀಡಿದ.
ಕಪಣೂರ ಸರಿ ಸರಿ ಎಂಬಂತೆ ತಲೆಯಾಡಿಸಿದ್ದು ಪ್ರಮೀಳಾಗೆ ಮಂದ ಬೆಳಕಲ್ಲಿ ಕಂಡಿತು.
ಶೀನಪ್ಪ ಪಂಡಿತನಿಗೆ ಸರೀಸುಮಾರು ಅರುವತ್ತು ವರ್ಷ ವಯಸ್ಸು.ಅವನ ಔಷಧಿ ಅಂದರೆ ಅದು ಬಹು ಜನಪ್ರಿಯ.ಮೈ ಬಾಪು, ದದ್ದು,ಕೋಟ್ಲೆ,ಕಾಮಾಲೆ ಹಾಗೇ ರೇಬಿಸ್ಸು ಅಂತೆಲ್ಲಾ ಅವನ ಔಷಧಿಗೆ ಪರವೂರಿನಿಂದಲೂ ಜನ ಬರುತ್ತಾರೆ.
ಇತ್ತೀಚೆಗೆ ಶೀನಪ್ಪ ಪಂಡಿತ ಏಡ್ಸ್‌ಗೆ ಮದ್ದು ಕೊಡುತ್ತಾನೆ ಅಂತ ಗೋಪಾಲನೇ ಅವನ ಟೀವಿಯಲ್ಲಿ ಸುದ್ದಿ ಹಾಕಿದ್ದ. ಆ ಸಂದರ್ಶನದಲ್ಲಿ ಶೀನಪ್ಪ ತಾನು ನೂರಾಮೂವತ್ತು ಏಡ್ಸ್ ರೋಗಿಗಳನ್ನು ಗುಣಪಡಿಸಿದ್ದಾಗಿ ಹೇಳಿದ್ದ.ಕ್ಯಾನ್ಸರ್ ಅಂತೂ ಮಣಿಪಾಲ ಡಾಕ್ಟ್ರುಗಳು ರಿಜೆಕ್ಟ್ ಮಾಡಿದ್ದು ಶೀನಪ್ಪನ ಮದ್ದಿನಲ್ಲಿ ಗುಣ ಆಗಿದೆ ಎಂದು ಸಂಗಮಕ್ಷೇತ್ರದಲ್ಲಿ ಆಗಾಗ ಸುದ್ದಿಯಾಗುತ್ತಿತ್ತು.
ಅಂತಹ ಶೀನಪ್ಪ ಪಂಡಿತ ಘಟ್ಟದ ಡಾಕ್ಟ್ರನ್ನು ತನ್ನ ಮನೆ ಜಗುಲಿಯಲ್ಲಿ ಮಲಗಿಸಿದ. ತನ್ನ ಕೈಯಾರೆ ಅವರ ಶರೀರವನ್ನೊಮ್ಮೆ ಪೂಸಿದ.
ಇಸ್ಮಾಲಿಯತ್ತ ಮುಖ ಮಾಡಿ ಹೇಳಿದ..ವಿಷ ತುಂಬಿದ ಹಾವು ಕಾಲಿಗೆ ಕಚ್ಚಿದೆ.ಶರೀರದಲ್ಲಿ ವಿಷ ಏರುವ ಹೊತ್ತು ಬರುತ್ತಾ ಇದೆ. ಗಾಯ ಕೊಯಿದು ಹಾಕಿದರೆ ಮಾತ್ರಾ ಸಾಕಾಗುವುದಿಲ್ಲ..ಯಾವುದಕ್ಕೂ ನೆತ್ತಿಯಲ್ಲಿ ತೂತು ಮಾಡಿಯೇ ವಿಷ ಎಳೆದು ತೆಗೆಯಬೇಕು..''
ಹಾಗೇ ಆಗಲಿ ಎಂದ ಇಸ್ಮಾಲಿ.
ಸಾರ್ ಹಾಗೇ ಮಾಡೋಣವೇ ಎಂದು ಅವರ ಒಪ್ಪಿಗೆಗೆ ಕಾದ.
ಡಾಕ್ಟ್ರು ಕಪಣೂರ..ಮನೆಯಲ್ಲಿ ಇಬ್ಬರು ಮಕ್ಕಳಿದ್ದಾರೆ ಪಂಡಿತರೇ..''ಎಂದು ನರಳಿ ಮುಖ ನೆಲಕ್ಕಿಟ್ಟು ಬೋರಲು ಮಲಗಿದರು.
ಶೀನಪ್ಪ ಪಂಡಿತ ಆ ರಾತ್ರಿ ಕಡು ಕತ್ತಲಿನಲ್ಲಿ ಕಪಣೂರ ಡಾಕ್ಟ್ರನ್ನು ಚಿಕಿತ್ಸೆಗೆ ಒಳಪಡಿಸಿದ.ಗಾಯ ಕೊಯಿದು ರಕ್ತ ಹಿಂಡಿದ.ಕಾಲುಗಳು ಊದುತ್ತಿದ್ದಲ್ಲಿಗೆ ಕಪ್ಪುಪಟ್ಟೆನೂಲು ಮಂತ್ರ ಹೇಳುತ್ತಾ ಸುತ್ತಿದ.ಆಮೇಲೆ ಬೊಂಡ ನೀರು ಚಿಮುಕಿಸಿದ.ಬೋರಲು ಮಲಗಿದ್ದ ಡಾಕ್ಟ್ರ ಶರೀರಕ್ಕೆ ಹಳದಿ ಎಸರನ್ನು ಉದ್ದಾನುಉದ್ದಕ್ಕೆ ಲೇಪಿಸಿದ.
ಆಮೇಲೆ ಡಾಕ್ಟ್ರ ನೆತ್ತಿಗೆ ಸಣ್ಣ ದಬ್ಬಳದಲ್ಲಿ ಕುಟ್ಟಿದ.ಒಂದಾವರ್ತಿ ಎರಡಾವರ್ತಿ ಮೂರಾವರ್ತಿ..ಕುಟ್ಟಿದ ಮೇಲೆ ನೆತ್ತಿ ಛಳ್ಳನೇ ರಕ್ತ ಕಾರಿತು.
ಕಂಪೌಂಡ್ರೇ..ಇಲ್ಲಿ ನೋಡಿ ವಿಷ ಹೊರಡುತ್ತಾ ಇದೆ ಎಂದು ಶೀನಪ್ಪ ಪಂಡಿತ ಜೋಡು ಬ್ಯಾಟರಿ ಟಾರ್ಚಿನ ಮಬ್ಬು ಬೆಳಕಲ್ಲಿ ಇಸ್ಮಾಲಿಗೆ ಕರೆದು ತೋರಿಸಿದ.
ಇಸ್ಮಾಲಿ ಬಗ್ಗಿ ನೋಡುತ್ತಿರಬೇಕಾದರೆ ಯಾವುದೋ ಅಸಹನೀಯ ವೇದನೆಯಿಂದ ಯಾರೋ ಬುಸುಗುಡುತ್ತಿರುವಂತೆ ಕೇಳಿಸಿತು.
ಏನದು ಪಂಡಿತರೇ ಅಂದ ಇಸ್ಮಾಲಿ..
ಹಾವು ಕಚ್ಚಿಸಿಕೊಂಡವರಲ್ಲಿ ವಿಷ ಹೊರಟಾಗ ಹೀಗೆ ಹಾವಿನಂತೆ ಥೇಟ್ ಹಾವಿನಂತೆ ಅದು ವಿಷ ಬುಸುಗುಡುತ್ತಾ ಹೋಗುವುದು ಎಂದು ಪಂಡಿತ ವಿವರಿಸಿದ.
ಕೋಳಿ ಕೂಗುವ ವೇಳೆಗೆ ಚಿಕಿತ್ಸೆ ಮುಗಿದಿತ್ತು.
ಶೀನಪ್ಪ ಪಂಡಿತ ಡಾಕ್ಟ್ರನ್ನು ಅಂಗಾತ ಹೊರಳುವಂತೆ ಸೂಚಿಸಿದ.
ಡಾಕ್ಟ್ರು ಮಾತನಾಡಲಿಲ್ಲ. 
ಇಸ್ಮಾಲಿಯೇ ಅವರನ್ನೆತ್ತಿ ಹೊರಳಿಸಲು ಮುಂದಾದರೆ ಡಾಕ್ಟ್ರ ಶರೀರ ಕಪ್ಪುಕರಿಗಟ್ಟಿತು.ಜೀವ ಎಂದೋ ಹಾರಿ ಹೋಗಿತ್ತು.
ಡಾಕ್ಟ್ರನ್ನು ತಪ್ಪು ಚಿಕಿತ್ಸೆ ನೀಡಿ ಸಾಯಿಸಿದ ಕೇಸಲ್ಲಿ ಶೀನಪ್ಪ ಪಂಡಿತನನ್ನು ಪೊಲೀಸರು ಜೈಲಿಗೆ ಹಾಕಿದರು.ಇಸ್ಮಾಲಿ ಮಾತ್ರ ತನ್ನಿಂದಾಗಿಯೇ ಡಾಕ್ಟ್ರ ಜೀವ ಹೋಯಿತು ಎಂದು ಸಂಗಮಕ್ಷೇತ್ರದಲ್ಲಿ ಹೇಳುತ್ತಾ ಹೇಳುತ್ತಾ ಬುದ್ಧಿಸ್ವಾಧೀನ ಕಳೆದುಕೊಂಡು ಮಂಗಳೂರು ಆಸ್ಪತ್ರೆಗೆ
ದಾಖಲಿಸಲ್ಪಟ್ಟ.
ಶೀನಪ್ಪ ಈಗ ಜಾಮೀನಿನಲ್ಲಿ ಬಂದಿದ್ದಾನೆ. ಹಾವಿನ ವಿಷಕ್ಕೆ ಮದ್ದು ಕೊಡುವುದಿಲ್ಲ ಎಂದು ಘೋಷಿಸಿದ್ದಾನೆ. ಉಳಿದಂತೆ ಅವನ ಪಾಂಡಿತ್ಯ ಮುಂದುವರಿದಿದೆ.
ಕಪಣೂರ ಡಾಕ್ಟ್ರ ಆ ಸ್ಕೂಟರ್‌ನ್ನು ಗೋಪಾಲ ಆಮೇಲೆ ಒಂಭತ್ತು ಸಾವಿರ ರೂಪಾಯಿಗೆ ಖರೀದಿಸಿದ.
ಅದೇ ಸ್ಕೂಟರ್‌ಗೆ ಬೆಂಕಿ ಹಿಡಿದದ್ದು..ಅದೂ ಆ ರಾತ್ರಿ ನಿಗೂಢವಾಗಿ.

20081218

ಗುಹಾಂತರ್ಗತ-4


ಕಪಣೂರ 
 ಎಂಬ ಘಟ್ಟದ ಡಾಕ್ಟ್ರು

ಅವರ ಹೆಸರು ಎಸ್.ವಿ.ಕಪಣೂರ ಅಂತ.ಅವರು ಬಿಜಾಪುರದವರು ಎಂದಷ್ಟೇ ಸಂಗಮಕ್ಷೇತ್ರದ ಜನರಿಗೆ ಗೊತ್ತಿತು.ಆದರೆ ಎಲ್ಲರೂ ಅವರು ಘಟ್ಟದ ಡಾಕ್ಟ್ರು ಅಂತಲೇ ಕರೆಯುತ್ತಿದ್ದುದು.
ಅದು ಈ ಕರಾವಳಿಯ ಜನರ ಕ್ರಮ.ಘಟ್ಟದ ಮೇಲಿಂದ ಬಂದವರೆಲ್ಲಾ ಅವರು ಘಟ್ಟದವರೇ ಅವರಿಗೆ ಆಗುತ್ತಾರೆ. ಅವರು ಪಕ್ಕದ ಹಾಸನದವರೋ ದೂರದ ಬೀದರ್‌ನವರೋ ಮಡಿಕೇರಿಯೋ ಶಿವಮೊಗ್ಗದವರೋ ಯಾರೇ ಆಗಲಿ ಏನೇ ಅಗಲಿ ನಮ್ಮೂರವರಲ್ಲದಿದ್ದರೆ ಅವರೆಲ್ಲಾ  ಘಟ್ಟದವರೇ. ಅವರ ಜಿಲ್ಲೆ ತಾಲೂಕು ಹಳ್ಳಿ ಹಾಳಾಗಿ ಹೋಗಲಿ,ಜಾತಿ ಜನ್ಮ ಯಾವುದೂ ಸಂಗಮಕ್ಷೇತ್ರದವರಿಗೆ ಬೇಡ.
ಟೆಲಿಫೋನ್ ಕಣಿ ತೋಡಲು ಬರುತ್ತಾರಲ್ಲ, ಅವರೆಲ್ಲಾ ಧಾರವಾಡದವರು..ತೋಟದ ಕೆಲಸಕ್ಕೆ ಬರುತ್ತಾರಲ್ಲಾ ಅವರೂ ಧಾರವಾಡದವರೇ..ಹಾಗಂತ ಆ ಕೆಲಸಗಾರರರೇ ಹೇಳುವುದು. ಯಾವೂರೂ ಅಂತ ಕೇಳಿದರೆ ಸಾಕು,ಧಾರವಾಡಾರೀ..ಅಂತಾರೆ. ಆಮೇಲೆ ಧಾರವಾಡದಲ್ಲಿ ಎಲ್ಲಿ ಅಂದರೆ ಚಿತ್ರದುರ್ಗ ಅಂತಾನೋ ಹಾವೇರಿ ಅಂತಾನೋ ಹುಬ್ಳಿ ಅಂತಾನೋ ರಾಯಚೂರು ಅಂತಾನೋ ಹೇಳುತ್ತಾರೆ. ಬಿಲ್‌ಕುಲ್ ಈ ಕೆಲಸಗಾರರು ತಮ್ಮ ನಿಜನಾಮಧೇಯವನ್ನಾಗಲಿ, ತಮ್ಮ ನಿಜಊರನ್ನಾಗಲಿ ಹೇಳುವುದಿಲ್ಲ.
ಸಂಗಮಕ್ಷೇತ್ರದ ಜನರಿಗೆ ಅದರ ಅಗತ್ಯವೂ ಇರುವುದಿಲ್ಲ.ಹಾಗಾಗಿ ಎಲ್ಲರೂ ಅವರಿಗೆ ಘಟ್ಟದವರೇ.
ಕಪಣೂರ ಆಥವಾ ಘಟ್ಟದ ಡಾಕ್ಟ್ರು ಸಂಗಮಕೇತ್ರದಲ್ಲಿ ಬಹುಬೇಗ ಜನಪ್ರಿಯರಾಗಲು ಕಾರಣ ಅವರ ಕೈ ಗುಣ. ಅವರು ಮುಟ್ಟಿದ ದನ ಎತ್ತು ಎಮ್ಮೆ ಕೋಳಿ ಎಲ್ಲಾ ಗುಣಮುಖ ಆಯಿತು ಅಂತಾನೇ ಅರ್ಥ.ಅವರಿಂದಾಗದಿದ್ದರೆ ಬೇರೆ ಯಾರಿಂದಲೂ ಆಗದು ಅಂತಾನೇ ಅರ್ಥ. ಅದಕ್ಕೇ ಬೆಳ್ತಂಗಡಿ,ಬಂಟ್ವಾ:ಳ,ವಾಮದಪದವಿನಿಂದಲೂ ಕ್ಲೈಂಟುಗಳು ಅವರತ್ತ ಬರುತ್ತಾರೆ,ಮದ್ದು ತೆಗೆದುಕೊಂಡು ಹೋಗುತ್ತಾರೆ.
ಘಟ್ಟದ ಡಾಕ್ಟ್ರು ಬಂದ ಟೈಮಲ್ಲೇ ಸಂಗಮಕ್ಷೇತ್ರದಲ್ಲಿ ಹಾಲಿನ ಡಿಪೋ ಆರಂಭವಾಗಿದೆ.ಆಗಷ್ಟೇ ಕೊಯಂಬತ್ತೂರಿನಿಂದ ದೊಡ್ಡ ದೊಡ್ಡ ದನಗಳನ್ನು ಸೊಸೈಟಿಯವರು ಸಾಲ ಕೊಡುತ್ತಾರೆ ಎಂದು ಸಂಗಮಕ್ಷೇತ್ರದ ರೈತರು ಸಾಲುಸಾಲಾಗಿ ತಂದಿದ್ದರು.ಬಿಳಿ ಬಣ್ನದ ದೊಡ್ಡ ದನಗಳು ದಿನಕ್ಕೆ ನಲುವತ್ತು ಲೀಟರ್ ಹಾಲು ಕೊಡುತ್ತವೆ ಎಂದು ಏಜೆನ್ಸಿಯವರು ಹೇಳಿದ್ದು ಪೂರ್ತಿ ಸುಳ್ಳೇನೂ ಆಗಿರಲಿಲ್ಲ.ನೆಕ್ಕರೆ ಗೋವಿಂದ ಗೌಡ, ಆರ್ತಿಲ ಸುಬ್ರಹ್ಮಣ್ಯ ಶೆಟ್ಟಿ ಮೂವತ್ತೈದು ಲೀಟರ್‌ಗೆ ಕಮ್ಮಿ ಇಲ್ಲದಂತೆ ಹಾಲು ಹಿಂಡಿದವರೇ..
ಘಟ್ಟದ ಡಾಕ್ಟ್ರು ಈ ದನಗಳ ಆರೈಕೆ ಮಾಡಿದ ರೀತಿಯೂ ಹಾಗಿತ್ತು.
ಅದೆಲ್ಲಾ ಹಾಗಿರಲಿ,ನಾವು ಸೀದಾ ಈ ಘಟ್ಟದ ಡಾಕ್ಟ್ರು ಸತ್ತು ಹೋದ ಸಂಗತಿಯತ್ತಲೇ ಬಂದು ಬಿಡೋಣ..ಅದೊಂದು ಅಮಾನವೀಯ ಸಾವು.ಯಾವ ಸಾವು ತಾನೇ ಅಲ್ಲಾ ಅಂತ ನೀವು ಕೇಳಬಹುದು ಆದರೆ ಈ ಕಪಣೂರ ಅವರ ಸಾವು ಅನ್ಯಾಯದ್ದಾಗಿತ್ತು.ಅದನ್ನು ಪೂರ್ತಿ ಮನಮುಟ್ಟುವ ಹಾಗೇ ಹೇಳಬೇಕಾದರೆ ಸಂಗಮಕ್ಷೇತ್ರದ ಜಿಯೋಗ್ರಾಫಿಯನ್ನೂ ತಕ್ಕಮಟ್ಟಿಗಾದರೂ ವಿವರಿಸಲೇಬೇಕು.
ಸಂಗಮಕ್ಷೇತ್ರ ಅತ್ತ ಹಳ್ಳಿಯೂ ಅಲ್ಲ, ಇತ್ತ ಪಟ್ಟಣವೂ ಅಲ್ಲ.ಹಳ್ಳಿಯೇ ಅಂದರೆ ಹಳ್ಳಿ ಥರ ಜನರು ,ಅವರ ಪ್ರೀತಿ,ಮೌಢ್ಯ,ಮುಗ್ದತೆ,ಸಂಸ್ಕಾರ ಮುಂತಾಗಿ ಇರಬೇಕು..ಅದು ಈ ಸಂಗಮಕ್ಷೇತ್ರದಲ್ಲಿ ಕಾಣಿಸುವುದಿಲ್ಲ.ಭಯಂಕರ ಬೆಳೆದವರು ಇಲ್ಲಿಯ ಜನ. ಯಾರೂ ಯಾರಿಗೂ ಕ್ಯಾರೇ ಇಲ್ಲದ ಹಾಗೇ..ಅದಕ್ಕೆ ಎಷ್ಟೊಂದು ಉದಾಹರಣೆ ಬೇಕಾದರೂ ಕೊಡಬಹುದು,ನೋಡೋಣ..ಯಾವತ್ತಾದರೂ ಆ ಕುರಿತು ದಾಖಲೆಗಳು ಹಾದು ಹೋಗಬಹುದು.
ಹಾಗಂತ ಇದು ಪಟ್ಟಣವೋ ಅದೂ ಅಲ್ಲ..ಪಟ್ಟಣದ ಅಹಂಕಾರ,ಮರೆವು,ಸಿಡುಕು,ಸೋಲು,ಭೋಳೇತನ ಮುಂತಾಗಿ ಇಲ್ಲಿಯ ಜನರಲ್ಲಿ ದುರ್ಬೀನು ಇಟ್ಟರೂ ಕಾಣುವುದಿಲ್ಲ.
ಇಂಥ ಸಂಗಮಕ್ಷೇತ್ರದ ಸುತ್ತಾ ನೂರಾರು ಊರುಗಳಿವೆ.ಊರು ಎಂದರೆ ತೋಟ,ಗದ್ದೆ,ಜನ,ಜಾನುವಾರು..ಅವರು ಗುರುವಾರದ ಸಂತೆಗೆ ಬರೋದು,ಬಾಳೆಗೊನೆ,ಬಸಳೆ ಮಾರೋದು,ವಾಚು ಖರೀದಿಸೋದು,ಸ್ಟೇಶನ್ನನಲ್ಲಿ ಬೇಲಿ ಗಲಾಟೆ ದೂರು ಕೊಡೋದು..ಗಡಂಗಿನಲ್ಲಿ ಹೊಡೆದಾಡೋದು..ಭಜನಾಮಂದಿರ ಕಟ್ಟೋದು,ಅಷ್ಟಮಿಗೆ ಗ್ರೀಸು ಉಜ್ಜಿದ ಅಡಕೆ ಮರ ಕಂಬ ಏರೋದು..ಮದುವೆಗೆ ಪೇಟೆಯಿಂದ ಮೈಕ್‌ಸೆಟ್ಟು ತೆಗೆದುಕೊಂಡು ಹೊಗೋದು,ಪ್ರತೀ ಮಂಗಳವಾರ ಅನಿಲ್‌ನ ಸಿನಿಮಾ ಟಾಕೀಸಿನಲ್ಲಿ ಹಾಕುವ ಸೆಕ್ಸು ಪಿಚ್ಚರ್ ನೋಡಲು ರಿಕ್ಷಾ ಹತ್ತಿ ಬರೋದು..
ಅಂಥ ಊರುಗಳ ಪೈಕಿ ಕಣಿಯಾ ಕೂಡಾ ಒಂದು.ಕಣಿಯಾ ಸಂಗಮಕ್ಷೇತ್ರದಿಂದ ಹತ್ತು ಮೈಲಿಯಾದರೂ ದೂರದಲ್ಲಿದೆ.ಪೆರಿಯಡ್ಕ ದಾಟಿ ಹೋಗುವುದು ಅಥವಾ ಬೆದ್ರೋಡಿ ಮೂಲಕ ಬರೋದು ಹೀಗೆ ಎರಡು ಮಾರ್ಗಗಳೂ ಕಣಿಯಾದತ್ತ ಹೋಗುತ್ತವೆ. ಹೆಚ್ಚಾಗಿ ಎಲ್ಲರೂ ಪೆರಿಯಡ್ಕ ಮೂಲಕವೇ ಹೋಗುತ್ತಾರೆ. ಪೆರಿಯಡ್ಕದ ಸನ್ಯಾಸಿಮೂಲೆ ಗುಡ್ಡದ ಹಿಂಬದಿಯಿಂದ ಹೋದರೆ ಕಣಿಯಾ ಬೇಗ ಸಿಗುತ್ತದೆ ಎಂದು ಕಣಿಯಾದ ಜನರು ಗಡಂಗಿನಲ್ಲಿ ಕುಡಿದು ತೂರಾಡುವಗ ಹೇಳುವುದುಂಟು.
ಇದೇ ದಾರಿಯಲ್ಲಿ ಆ ಕೆಟ್ಟ ರಾತ್ರಿ ಕಪಣೂರ ಡಾಕ್ಟ್ರು ಬಂದದ್ದು.
ಘಟ್ಟದ ಡಾಕ್ಟ್ರ ಸರ್ವೀಸು ಪ್ರಶ್ನಾತೀತ. ಅವರು ಯಾವ ಹೊತ್ತಿಗೂ ಕರೆದರೂ ಎದ್ದು ಬರುವವರೇ.ಅವರೂ ಇರೋದು ಒಂಟಿ.ಹೆಂಡತಿ ಮಕ್ಕಳು ಇರೋದು ಏನಿದ್ದರೂ ಬಿಜಾಪುರದಲ್ಲಿ.ಕಣಿಯಾದ ಸುಬ್ಬ ಪಾಟಾಳಿಯ ಗಬ್ಬದ ದನ ಕರು ಹಾಕುವಾಗ ತಿಣುಕುತ್ತಿದೆ ಅಂತ ಘಟ್ಟದ ಡಾಕ್ಟ್ರ ಬಿಡಾರಕ್ಕೆ ಫೋನ್ ಮಾಡಿ ಬರಹೇಳಿದಾಗ ರಾತ್ರಿ ಹತ್ತೂವರೆ ಗಂಟೆ. ರಾತ್ರಿ ಹೊತ್ತಿನಲ್ಲಿ ಕಣಿಯಾ ಕಾಡಿನ ದಾರಿಯಲ್ಲಿ ಒಬ್ಬನೇ ಹೋಗುವುದಕ್ಕೆ ಬಯಲುಸೀಮೆಯ ಡಾಕ್ಟ್ರಿಗೆ ಅಂಜಿಕೆ.ಅದಕ್ಕೆ ಅವರು ಕಂಪೌಂಡರ್ ಇಸ್ಮಾಲಿಯನ್ನು ಅವನ ರೂಮಿಗೆ ಹೋಗಿ ಜೊತೆಗೆ ಕರೆದುಕೊಂಡರು.ಇಸ್ಮಾಲಿ ಹೊರಟುದರ ಹಿಂದೆ ಎರಡು ಕಾರಣವಿತ್ತು.ಒಂದು ಡಾಕ್ಟ್ರು ಕರೆದಾಗ ಇಲ್ಲಾ ಅಂತ ಹೇಳುವುದಕ್ಕಾಗುವುದಿಲ್ಲ,ಎರಡು ದನದ ಕೆಲಸ ಮುಗಿಸಿ ಹೊರಡುವಾಗ ಪಾರ್ಟಿಯವರು ಐವತ್ತಾದರೂ ಕೈಗೆ ಹಾಕದೇ ಇರುವುದಿಲ್ಲ.
ಡಾಕ್ಟ್ರು ಕಣಿಯಾ ತಲುಪಿದಾಗ ಮಾರ್ಗದ ಬಳಿಯೇ ಸುಬ್ಬ ಪಾಟಾಳಿ ನಿಂತಿದ್ದ.ಅವನ ಲಟಾರಿ ಟಾರ್ಚು ಅವರಿಗೆ ದಾರಿದೀಪ.ಸುಬ್ಬ ಪಾಟಾಳಿ ಮುಂದೆ ಡಾಕ್ಟ್ರು ಹಿಂದೆ.ರಾತ್ರಿ ಹೊತ್ತಲ್ಲಿ ಅದೂ ಹಳ್ಳಿಗಳಲ್ಲಿ ಅದೂ ಕಣಿಯಾದಂಥ ಕಾಡು ದಾರಿಯಲ್ಲಿ ಆಗೋ ಸಂಕಷ್ಟವೇ ಇಂಥದ್ದು.ಟಾರ್ಚ್ ಹಿಡಿದವನು ಮುಂದೆ ಹೋಗದಿದ್ದರೆ ದಾರಿ ಗೊತ್ತಾಗುವುದಿಲ್ಲ,ಮುಂದೆ ಹೋದರೆ ಹಿಂದಿನವರಿಗೆ ದಾರಿ ಕಾಣುವುದಿಲ್ಲ.ಹಾಗಂತ ಸುಬ್ಬ ಪಾಟಾಳಿ ಡಾಕ್ಟ್ರ ಕೈಯಲ್ಲಿ ಟಾರ್ಚು ಕೊಡುವುದೂ ಇಲ್ಲ.ಅದು ಅವರಿಗೆ ಇನ್ಸಲ್ಟು ಅಂತ ಅವನ ಭಕ್ತಿ.ಕಂಪೌಂಡರ್ ಇಸ್ಮಾಲಿ ಕೈಲಿ ಬೇರೆ ಡಾಕ್ಟ್ರ ಕಟ್ಟಂಚೀಲ.
ಪುಣ್ಯಕ್ಕೆ ಯಾವ ತೊಂದರೆಯೂ ಆಗದೇ ಸುಬ್ಬ ಪಾಟಾಳಿಯ ಮನೆಗೆ ತಲುಪಿದರೆ ಅವನ ಹೈಸ್ಕೂಲ್ ಓದುವ ಮಗ ಉರುವೇಲು ಬಳಿಯೇ ನಿಂತಿದ್ದ. ದನ ಕರು ಹಾಕಿದೆ ಎಂದು ಪ್ರಕಟಿಸಿದ. ಡಾಕ್ಟ್ರು ಆಮೇಲೆ ಬಂದಾಯಿತಲ್ಲ ಅಂತ ಹಟ್ಟಿಗೆ ಹೋಗಿ ಟಾರ್ಚು ಹಾಕಿ ನೋಡಿದರು.ಕರು ಎದ್ದು ಮೊಲೆ ಚೀಪುತ್ತತ್ತು.ದನ ಹೂಂಕರಿಸುತ್ತಿತ್ತು.
ಎಲ್ಲಾ ಸರಿಯಾಗಿದೆ ಎಂದಾಯಿತಲ್ಲಾ..ಡಾಕ್ಟ್ರಿಗೆ ಸುಮ್ಮನೇ ಕಷ್ಟ ಕೊಟ್ಟೆ ಎಂದು ಸುಬ್ಬ ಪಾಟಾಳಿ ಬಾಯಿಬಾಯಿ ಬಡಿದುಕೊಂಡ.ಸ್ಕೂಟರ್ ಪೆಟ್ರೋಲಿಗೆ ಅಂತ ಐವತ್ತು ರೂಪಾಯಿ ಡಾಕ್ಟ್ರ ಕಿಸೆಗೆ ಬಲವಂತವಾಗಿ ತಳ್ಳಿದ.ಇಸ್ಮಾಲಿಗೂ ಒಂದು ಸಣ್ಣ ನೋಟು ಮಡಗಿದ.
ಹಾಗೇ ವಾಪಾಸಾದ ಡಾಕ್ಟ್ರು ಕಪಣೂರ ಇಸ್ಮಾಲಿ ಜೊತೆ ಆ ರಾತ್ರಿ ಹನ್ನೆರಡರ ನಂತರದ  ಘಂಟೆಗೆ ಪೆರಿಯಡ್ಕದ ಸನ್ಯಾಸಿಮೂಲೆ ಗುಡ್ಡದ ಬಳಿ ಅದೇನೋ ಡಿಪಾರ್ಟ್‌ಮೆಂಟಿನವರ ಸುದ್ದಿ ಮಾತನಾಡುತ್ತಾ ಬರುತ್ತಿದ್ದಾಗ ಕಂಡದ್ದು ರಸ್ತೆಗೆ ಅಡ್ಡಲಾಗಿದ್ದ ಹಾವು..
ಅದು ನಾಗರಹಾವು..

20081217

ಗುಹಾಂತರ್ಗತ-೩ನದಿಯಲ್ಲಿ ತೇಲಿದ ರುಮಾಲುಗಳು

ರುಮಾಲು ..

ಬರೀ ರುಮಾಲುಗಳು ಮಾತ್ರಾ ಕಾಣುತ್ತಿವೆ..

ನೀರ ಮೇಲೆಲ್ಲಾ ರುಮಾಲುಗಳ ಓಡಾಟ..

ಗೋಪಾಲ ಲೆಕ್ಕ ಹಾಕಲು ಅನೇಕ ಬಾರಿ ಯತ್ನಿಸಿ ಸೋತ.ಎಷ್ಟಿರಬಹುದು..ನೂರು ?

ಗೊತ್ತಿಲ್ಲ..

ತಿಂಗಳಬೆಳಕಲ್ಲಿ ಎರಡೂ ನದಿಗಳ ಕೂಡುವಿನಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಚೆಲ್ಲಾಡುತ್ತಿರುವುದೇನಿವು?

ಬರೀ ರುಮಾಲುಗಳೇ..

ಅಥವಾ ಯಾರಾದರೂ ಈಜುತ್ತಿದ್ದಾರೆಯೇ..

ಈಜುವುದು..ಹೀಗೇ.. ಈ ರಾತ್ರಿಯಲ್ಲಿ..ಅದೂ ಈ ದಡ್ಡ ಸಂಗಮಕ್ಷೇತ್ರದಲ್ಲಿ..

ಇದೇನು ವಾಟರ್‌ಪಾರ್ಕಾ..?

ಈ ರಾತ್ರಿ ಹೊತ್ತಲ್ಲಿ ಈ ತಾಣದಲ್ಲಿ ಈ ರೀತಿ ಈಜುತ್ತಿರುವುದು ಮನುಷ್ಯರಂತೂ ಅಲ್ಲವೇ ಅಲ್ಲ..

ಗೋಪಾಲ ಖಚಿತಾಗಿಬಿಟ್ಟ.

ಮನುಷ್ಯರಲ್ಲದಿದ್ದರೆ ಯಾರು?

ಪ್ರೇತ ಪಿಶಾಚಿಗಳನ್ನಂತೂ ಗೋಪಾಲ ನಂಬುವವನಲ್ಲ.ಹಾಗೇ ನಂಬಲು ಅವನಿಗೆ ಬಿಡುವೂ ಇರುವುದಿಲ್ಲ.

ಆದರೆ ಇಲ್ಲಿ ಈಗ ಈ ರೀತಿ ಈಜುತ್ತರಿವುದೇನು? ಪ್ರಾಣಿಗಳೋ..ದೊಡ್ಡ ಮೀನುಗಳೋ..ಇರಬಹುದೇನೋ ಎಂದು ಗೋಪಾಲ ಕಣ್ಣುಗಳನ್ನು ಸೂಕ್ಷ್ಮ ಮಾಡಿದ.

ಸನ್ಯಾಸಿ ಕಯದ ಹತ್ತಿರವೇ ತಾನಿದ್ದೇನೆ ಎಂದು ಅವನಿಗೆ ಹೊಳೆದ್ದೇ ಆಗ.


ಸನ್ಯಾಸಿಕಯ ಎಂದರೆ ನೇತ್ರಾವತಿಯ ಬಲಿಪೀಠ.ನದಿಗಳಲ್ಲಿ ಕೆಲವೆಡೆ ಆಳವಾದ ಕಮರಿಗಳಿರುತ್ತವೆ ಅಂತೆ.ಅವುಗಳು ಎಷ್ಟೊಂದು ಆಳ ಎಂದು ಅವುಗಳನ್ನು ಅಳೆದವರೇ ಇಲ್ಲವಂತೆ.ಹಾಗೇನಾದರೂ ಅಳೆಯಲು ಹೋದರೆ ಅವರು ಮರಳಿ ಬಂದದ್ದೇ ಇಲ್ಲವಂತೆ.ನೇತ್ರಾವತಿ ಎಂಬ ಮಹಾತಾಯಿಗೂ ಇಂಥ ಆಳಗಳಿವೆ.ಅವುಗಳಲ್ಲಿ ಸನ್ಯಾಸಿಕಯವೂ ಒಂದು.

ಸಂಗಮಕ್ಷೇತ್ರದ ಸನ್ಯಾಸಿಕಯ ಎಂದರೆ ನೇತ್ರಾವತಿ ಬಗ್ಗೆ ಇರೋ ಪ್ರಿತಿಯೇ ಕಿತ್ತು ಹೋಗುತ್ತದೆ.ಎಷ್ಟೊಂದು ಜನ ಆ ಕಯಕ್ಕೆ ಬಿದ್ದು ಸತ್ತು ಹೋಗಿದ್ದಾರೆ ಎಂದರೆ ಅದಕ್ಕೆ ಲೆಕ್ಕವೇ ಇಟ್ಟವರಿಲ್ಲ.

ಯಾರೋ ಒಬ್ಬ ಸನ್ಯಾಸಿ ಈ ಕಯದ ಸಮೀಪವಿರೋ ಕಲ್ಲಿನಲ್ಲಿ ಸದಾ ತಪಸ್ಸು ಮಾಡುತ್ತಿದ್ದನಂತೆ. ಆತನನ್ನು ಯಾರೂ ಮಾತನಾಡಿಸಿದವರೇ ಇಲ್ಲವಂತೆ.ಅವನ ಬಳಿ ಇದ್ದುದು ಒಂದು ಲಂಗೋಟಿ ಮಾತ್ರಾ. ಅದನ್ನು ಆತ ಎಂದೂ ಬಿಚ್ಚಿದ್ದೇ ಇಲ್ಲವಂತೆ. ಅದರಲ್ಲೇ ಸ್ನಾನ.ಅದರಲ್ಲೇ ಮಾರ್ಜನ.ಅದರಲ್ಲೇ ಮೈ ಒರೆಸುವುದು ಅದನ್ನೇ ಹೊದೆಯುವುದು. ಆ ಸನ್ಯಾಸಿ ಅದೆಷ್ಟೋ ವರ್ಷ ಆ ರೀತಿ ಆ ಕಲ್ಲಿನಲ್ಲಿ ಕುಳಿತೇ ಇದ್ದ. ಅವನು ನದಿ ದಾಟಿ ಹೋಗುವುದು ಮಳೆಗಾಲ ಬಂದಾಗ ಮಾತ್ರಾ. ಆಗ ಆತ ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ಗೊತ್ತಿರಲಿಲ್ಲ. ಇಷ್ಟಕ್ಕು ಆ ಅಸಾಮಿ ಮಾತನಾಡುವುದೇ ಇಲ್ಲವಲ್ಲ..

ಸನ್ಯಾಸಿ ಕಲ್ಲಿನಿಂದ ಎದ್ದು ಹೋದರೆ ನೇತ್ರಾವತಿ ಮತ್ತು ಕುಮಾರಧಾರೆ ಉಕ್ಕಿ ಹರಿಯುತ್ತದೆ ಎಂಬುವುದು ಆ ಕಾಲದ ನಂಬಿಕೆಯಾಗಿತ್ತಂತೆ.

ಸನ್ಯಾಸಿ ಕಾಣಿಸುತ್ತಿಲ್ಲ ಎಂದರೆ ಮಳೆ ಬರೋಬ್ಬರಿ ಹೊಡೆಯುತ್ತದೆ ಮತ್ತು ನೆರೆ ಬರುತ್ತದೆ ಎಂದು ಸಂಗಮಕ್ಷೇತ್ರದ ಜನರಿಗೆ ಖಚಿತವೇ ಆಗಿತ್ತಂತೆ.

ಒಮ್ಮೆ ಈ ಸನ್ಯಾಸಿ ವಿಚಾರ ಆಗಿನ ದೊರೆಗಳಿಗೆ ಹೋಯಿತಂತೆ.ಕೆಂಪು ಮುಸುಡಿ ದೊರೆಗಳು ಎಂದರೆ ಸುಮ್ಮನೇ ಇರುತ್ತಾರಾ?..ಅವರು ಅವರದೇ ಜಾತಿಯ ಡೆಪ್ಟೀ ಕಮೀಶನರಿಗೆ ಆರ್ಡರ್ ಮಾಡೇ ಬಿಟ್ಟರಂತೆ.ಡೆಪ್ಟೀಕಮೀಶನರೇ ಕುದುರೆ ಹತ್ತಿ ಇದೇ ಸಂಗಮಕ್ಷೇತ್ರಕ್ಕೆ ಬಂದೇ ಬಂದರು.ಜೊತೆಗೆ ಸಿಪಾಯಿಗಳೂ..

ಆಗ ಆದದ್ದು ಮಾತ್ರಾ ಸಂಗಮಕ್ಷೇತ್ರಕ್ಕೆ ಹಿತವಾದುದಾಗಿರಲಿಲ್ಲ.ಡೆಪ್ಟೀಕಮೀಶನರ್ ಬರೋ ಹೊತ್ತಿಗೇ ಸಂಗಮಕ್ಷೇತ್ರದ ರಥ ಬೀದಿಯಲ್ಲಿ ಹನ್ನೊಂದು ಮನೆಗಳು ಬೆಂಕಿ ಹಿಡಿದುಕೊಂಡವಂತೆ.ಡೆಪ್ಟೀಕಮೀಶನರ್ ಬಂಗ್ಲೆಯಲ್ಲಿ ಬಿಡಾರ ಹೂಡಿ ಅರೆ ಹೊತ್ತು ವಿಶ್ರಾಂತಿಯಲ್ಲಿದ್ದಾವಾಗಲೇ ಈ ದುರಂತ ಆಗಿ ಹೋಗಿತ್ತಂತೆ.ಆಮೇಲೆ ಅದೇನಾಯಿತೋ ಆವನಿಗೆ.. ಸನ್ಯಾಸಿಯೂ ಇಲ್ಲಾ ಮಣ್ಣುಮಸಿಯೂ ಇಲ್ಲ ಎಂದು ಆತ ದೊರೆಗಳಿಗೆ ರಿಪೋರ್ಟು ಹಾಕಿದನಂತೆ.

ಅಮೇಲೆ ಆ ಸನ್ಯಾಸಿಯ ತಂಟೆಗೆ ಯಾರೂ ಬರಲಿಲ್ಲ. ಸಂಗಮಕ್ಷೇತ್ರದ ಜನರಂತೂ ಆತನ ತಂಟೆಗೆ ಎಂದೂ ಹೋಗಿರಲಿಲ್ಲ.

ಆ ಕಯದ ಬಳಿ ಆ ಸನ್ಯಾಸಿ ಆಮೇಲೂ ಬಹಳ ವರ್ಷಗಳ ಕಾಲ ಹಾಗೇ ಇದ್ದನಂತೆ. ಅವನು ಯಾರು.. ಏನು.. ಯಾಕೆ ಇದ್ದಾನೆ.. ಎಂದು ಕೇಳುವ ಕಾಲವೂ ಅದಲ್ಲವಾದ್ದರಿಂದ ಆತನ ಬಗ್ಗೆ ಇಂದಿಗೂ ಯಾವುದೇ ವಿವರಗಳು ಉಳಿಯಲೇ ಇಲ್ಲ.

ಗೋಪಾಲನಿಗೆ ಇದೆಲ್ಲಾ ಗೊತ್ತಿತ್ತು.

ಕೊನೆಗೊಮ್ಮೆ ಆ ಸನ್ಯಾಸಿ ಅದೇ ಕಯದಲ್ಲಿ ಇಳಿದುಹೋದ ಎಂದು ಹೇಳುವುದನ್ನು ಆತ ನಂಬದೇ ಇದ್ದರೂ ಮೊನ್ನೆಯ ದಿನ ಪೆರಿಯಡ್ಕದ ಆ ಸನ್ಯಾಸಿಮೂಲೆಯಲ್ಲಿ ಆ ಗುಡ್ಡದಲ್ಲಿ ಆ ರೈಲು ಮಾರ್ಗ ತೋಡುವವರು ತೋಡಿದ ಸುರಂಗದೊಳಗೆ ಕಂಡ ಗುಹೆಯಲ್ಲಿ ಆ ರಾತ್ರಿ ಕಂಡ ಆ ಅವಧೂತನನ್ನು ಪ್ರತ್ಯಕ್ಷ ಕಂಡು ಆವಾಕ್ಕಾದ ಮೇಲೆ ಈ ಹೊತ್ತಿನಲ್ಲಿ ಈ ವಿಲಕ್ಷಣ ಸನ್ನಿವೇಶಗಳ ನಡುವೆ ಆತ ನಂಬಲೇ ಬೇಕಾಗಿತ್ತು.

ರುಮಾಲುಗಳು ಮತ್ತಷ್ಟು ವೇಗವಾಗಿ ಚಿಮ್ಮತ್ತಿದ್ದವು..

ಗೋಪಾಲ ಕುಸಿದು ಕುಳಿತ.

ಎರಡೂ ನದಿಗಳಲ್ಲಿ ಏನೋ ಬೆಂಕಿಯಂಥ ಹರಿವು ಆವನಿಗೆ ಕಾಣಿಸಲಾರಂಭಿಸಿತು.ರುಮಾಲುಗಳ ನೀರಾಟ ವೇಗವಾಗುತ್ತಿತ್ತು.ನೇತ್ರಾವತಿ ಮತ್ತು ಕುಮಾರಧಾರೆಯ ನೀರು ಚಿಮ್ಮಿ ನೆಗೆದು ಹತ್ತಾಳು ಎತ್ತರಕ್ಕೆ ನೆಗೆಯುತ್ತಿತ್ತು.

ಹಾಗೇ ಎಷ್ಟು ಹೊತ್ತಾಯಿತೋ ಏನೋ..ಇದ್ದಕ್ಕಿದ್ದಂತೆ ರುಮಾಲುಗಳು ನೀರೊಳಗೆ ಮುಳುಗಿಹೋಗತೊಡಗಿದವು.ನೋಡುತ್ತಾ ನೋಡುತ್ತಾ ಒಂದಾದ ಮೇಲೊಂದರಂತೆ ಸಾಲುಗಟ್ಟಿ  ಅವುಗಳು ಆಳಕ್ಕಿಳಿದು ಮಾಯವಾದವು.

ಎರಡೂ ನದಿಗಳು ತಣ್ಣಗಾದವು.ಆಮೇಲೆ ಏನು ಆಗಿಲ್ಲ ಎಂಬ ಹಾಗೇ ಅಲ್ಲಿ ನದಿಗಳು ಹರಿಯುತ್ತಿದ್ದವು.ತಣ್ಣಗಿನ ಸುಳಿಗಾಳಿ ಗೋಪಾಲನಲ್ಲಿ ಯಾವುದೋ ಹುಕ್ಕಿ ಹಚ್ಚಿಬಿಟ್ಟಿತು.ಸೇತುವೆಯಲ್ಲಿ ಬೆಂಗಳೂರಿನತ್ತ ಹೋಗುವ ರಾತ್ರಿ ಬಸ್ಸುಗಳ ಬರ್ಮಿನ ಲೈಟು ನದಿಗಳ ಮೇಲೆ ಹಾಸಿಬೀಸಿ ಹೋಗತೊಡಗಿತು.

ಗೋಪಾಲ ನದಿಗಳೆರಡರಿಂದ ಬೀಳ್ಕೊಂಡ.ನದಿ ಗರ್ಭದಲ್ಲಿ ಕಂಡ ಆ ವಿಚಿತ್ರವಿದ್ಯಮಾನವನ್ನು ತನ್ನೊಳಗೆ ಹುದುಗಿಸಿಕೊಂಡ.

ಇದನ್ನೂ ಯಾರಲ್ಲೂ ಹೇಳಬಾರದು ಎಂದು ಆತ ಆಗಲೇ ಖಚಿತವಾಗಿಬಿಟ್ಟಿದ್ದ.

ಮರಳಿನ ಮೇಲೆ ವೇಗವೇಗವಾಗಿ ನಡೆಯುತ್ತಾ ಹೊರಟರೆ ಯಾಕೋ ಕಾಲುಗಳು ಜಗ್ಗಿದಂತೆ ಹೂತುಕೊಂಡಂತೆ ಆಗುತ್ತಿರುವುದು ಕೇವಲ ಭ್ರಮೆ ಎಂದು ಆತನಿಗೆ  ಅನಿಸುತ್ತಿತ್ತು.

ರುಮಾಲು ಕಂಡದ್ದು ಇಂಥಾ ಭ್ರಮೆಯೇ ಇರಬಹುದೇ ಅಥವಾ ಆ ಗುಹೆಯಲ್ಲಿ ಕಂಡ ಅವಧೂತನೂ ಈ ಭ್ರಮೆಯಿಂದಲೇ ಆಗಿರಬಹುದೇ..ಎಂದು ಆತ ತಲ್ಲಣಿಸುತ್ತಾ ಅನಿಲ್‌ನ ಸಿಮಿಮಾ ಟಾಕೀಸು ದಾಟಿ ಸೀತಾರಾಮನ ಮರದ ಮಿಲ್ಲಿನ ಹತ್ತಿರಕ್ಕೆ ವೇಗವಾಗಿ ನಡೆದ.

ಸೆಂಕೆಂಡ್ ಶೋ ಬಿಟ್ಟು ಗಂಟೆಗಳೇ ಕಳೆದಿರಬೇಕು.ಆದರೂ ಸೀತಾರಾಮನ ಮಿಲ್ಲಿನ ಬಳಿ ಬಾರೀ ಸಂಖ್ಯೆಯಲ್ಲಿ ಜನ ಜಂಗುಳಿ ಕಂಡು ಗೋಪಾಲ ಭಲೇ ಆಶ್ಚರ್ಯಚಕಿತನಾದ.ಓಡೋಡಿಯೇ ಜನರ ನಡುವೆ ಬಂದು ನಿಂತರೆ ಅವನ ಬಜಾಜು ಕಬ್ಬು ಸ್ಕೂಟರು ಬೆಂಕಿ ಹಿಡಿದು ಉರಿದು ಕರಕಲಾಗಿ ಬಿದ್ದಿತ್ತು.


20081216

ಗುಹಾಂತರ್ಗತ-೨ಗೋಪಾಲ ಟಿವಿ ಕೆಲಸಕ್ಕೆ ರಾಜೀನಾಮೆ ಮಡಗಿ ಸುಮ್ಮನೇ ಇರುವುದಿಲ್ಲ ಅಂತ ಅವನ ಖಾಸಾ ದೋಸ್ತು ಬೆಂಗಳೂರಿನ ಗಿರೀಶನಿಗೂ ಗೊತ್ತಿತ್ತು.ಗೋಪಾಲ ಮಹಾ ಸೋಮಾರಿ ಅಂತಲೂ ಅವನಿಗೆ ಗೊತ್ತಿತ್ತು.ಮನಸ್ಸು ಮಾಡಿದ್ದರೆ ಗೋಪಾಲ ಬೆಂಗಳೂರಿಗೆ ಬಂದು ದೊಡ್ಡ ಜನ ಆಗುತ್ತಿದ್ದ. ಆದರೆ ಅವನ ಸೋಮಾರಿತನ ಆ ಮಟ್ಟಿಗೆ ಅವನನ್ನು ಕಾಪಾಡಿತ್ತು.
ಟೀವಿ ಕೆಲಸ ಯಾಕೋ ಬಿಟ್ಟೆ ಎಂದು ಬೆಂಗಳೂರಿಂದ ಫೋನು ಮಾಡಿ ಕೇಳಿದ್ದು ಗಿರೀಶನೇ.
ಏನು ಹೇಳುವುದು ಎಂದು ಗೋಪಾಲ ಕ್ಷಣ ಹೊತ್ತು ಯೋಚಿಸಿದ.ಅದಕ್ಕೇ ಕೇಳುವುದಿಲ್ಲ, ಕೇಳುವುದಿಲ್ಲ ಎಂದು ಪದೇ ಪದೇ ಹೇಳುತ್ತಾ ಹೋದ. ಗಿರೀಶನಿಗೆ ಗೊತ್ತಾಗಲಿಲ್ಲ. ಆಮೇಲೆ ಮಾಡುತ್ತೇನೆ ಬಿಡು ಎಂದು ಕಟ್ ಮಾಡಿದ್ದಾಯಿತು.
ಮತ್ತೊಮ್ಮೆ ಗಿರೀಶನ ಫೋನು ಬರುವ ಮೊದಲೇ ಹೇಳಬೇಕಿತ್ತು. ಪೆರಿಯಡ್ಕ ಗುಡ್ಡದ ಸನ್ಯಾಸಿಮೂಲೆಯಲ್ಲಿ ತಾನು ಕಂಡದ್ದನ್ನು ಹೇಳಿಬಿಡಲೇ ಎಂದು ಯೋಚಿಸಿ,ಹಾಗೇ ಹೇಳಿದರೆ ಅವನಿಗೇನಾದರೂ ಹುಕ್ಕಿ ಬಂದು ನೋಡೇ ಬಿಡೋಣ,ತಾನೂ ಬರುತ್ತೇನೆ ಎಂದುಬಿಟ್ಟರೆ.. ಎಂದು ಭಯವಾಯಿತು.
ಆಮೇಲೆ ಗಿರೀಶ ಫೋನು ಮಾಡಲಿಲ್ಲ. ಗೋಪಾಲ ಆ ಮಟ್ಟಿಗೆ ಬಚಾವಾಗಿದ್ದ.
ಇತ್ತ ಮಹೇಂದ್ರ ಮತ್ತು ರಾಧಾಕೃಷ್ಣ ಇಬ್ಬರೂ ಗೋಪಾಲನನ್ನು ಭೇಟಿಯಾಗಲೇ ಇಲ್ಲ. ಅವರಿಬ್ಬರೂ ಜೆಸಿಬಿ ಖರೀದಿಸುವ ವಿಚಾರದಲ್ಲಿ ತುಂಬಾ ಸೀರಿಯಸ್ಸಾಗಿ ನಿರ್ಧಾರ ಮಾಡಿ ಮಡ್ರಾಸ್‌ಗೆ ಪಾಂಡಿಚೇರಿಗೆ ತೆರಳಿದ್ದರು.ಅವರಿಬ್ಬರೂ ಹೋದದ್ದು ಗೋಪಾಲನಿಗೆ ನಿರಾಳವಾಗಿತ್ತು.
ಇನ್ನೇನಿದ್ದರೂ ಆ ಗುಹೆಯನನು ಹೊಗಲೇ ಬೇಕು ಎಂದು ಆತ ನಿರ್ಧಾರಮಾಡಿಯೂ ಆಗಿತ್ತು.
ಯಾವ ಲಾಭವನ್ನು ಇಟ್ಟುಕೊಳ್ಳದೇ ಆ ಗುಹೆಯೊಳಗೆ ಹೋಗಿ ಸೇರಬೇಕು.ಅಲ್ಲಿ ಆ ಅವಧೂತನನ್ನು ನೋಡಬೇಕು. ಅವನು ಸಿಗುವ ತನಕ ವಿರಮಿಸಲಿಕ್ಕಿಲ್ಲ.ರಾಮ-ರಾವಣರ ಯುದ್ಧ ಮುಗಿಯಿತೇ ಎಂದು ಕೇಳಿದ್ದರ ಹಿಂದಿರುವುದೇನು ಎಂದು ನೋಡಬೇಕು ಎಂದೆಲ್ಲಾ ಗೋಪಾಲ ನಿರ್ಧರಿಸಿದ.
ಯಾರೀತ..?ಇವನು ರಾಮ-ರಾವಣರ ಯುದ್ಧಕ್ಕೂ ಮುನ್ನ ಗುಹೆ ಹೊಕ್ಕವನಿರಬಹುದೇ..ಏಕಿರಬಾರದು..ಹಿಮಾಲಯದಲ್ಲಿ ಇಂಥ ಅವಧೂತರಿರುತ್ತಾರಂತಲ್ಲ..ಕಠೋರ ತಪಸ್ವಿಗಳು..ಸಾಧಕರು..ಹಠಯೋಗಿಗಳು..ನೀರು ಕುಡಿದೇ ಬದುಕುವವರು..ಗಾಳಿ ಸೇವಿಸಿ ಶತಮಾನಗಳ ಕಾಲ ಬಾಳುವವರು..ಸಾಧ್ಯವಿದೆಯಂತೆ..ಉಸಿರನ್ನು ಎಲ್ಲೋ ಒಂದು ಹಂತದಲ್ಲಿ ಹಿಡಿದಿಟ್ಟು ಆಯುಸ್ಸನ್ನು ಗೆಲ್ಲುವುದು ಸಾಧ್ಯವಂತೆ..ಉಸಿರು ಜೀವ ಲಹರಿಯನ್ನು ತನ್ನೊಳಗೆ ಬಂಧಿಸಿದಾಗ ಸಾವನ್ನು ಗೆಲ್ಲಬಹುದಂತೆ..
ಇಷ್ಟಕ್ಕೂ ಸಾವು ಎಂದರೆ ದೇಹದ ಅವಸಾನ ಮಾತ್ರಾ ತಾನೇ..ದೇಹವನ್ನೇ ಅವಸಾನಕ್ಕೆ ಸಿಗದಂತೆ ಮಾಡಿದರೆ ಸಾವು ಸಂಭವಿಸಿತಾದರೂ ಹೇಗೆ..ಸಾವನ್ನು ಗೆಲ್ಲುವ ಪ್ರಯತ್ನ ಕಷ್ಟವೇನಲ್ಲ..ದೇಹವನ್ನು ನಿಯಂತ್ರಿಸುವ ಉಸಿರನ್ನು ವಶಕ್ಕಿಟ್ಟುಕೊಂಡಾಗ ಸಾವೇ ಇರುವುದಿಲ್ಲ..
ಹೀಗೆ ಅಖಂಡವಾಗಿ ಯೋಚಿಸುತ್ತಾ ಯೋಚಿಸುತ್ತಾ ಗೋಪಾಲ ಸಂಗಮಕ್ಷೇತ್ರದತ್ತ ತನ್ನ ಬಜಾಜು ಕಬ್ಬು ಸ್ಕೂಟರಲ್ಲಿ ದೌಡಾಯಿಸಿದ..
ಅವನು ಸಂಗಮಕ್ಷೇತ್ರಕ್ಕೆ ಬಂದದ್ದು ಗುಹೆಯೊಳಗೆ ಪ್ರವೇಶಿಸುವ ಮುನ್ನ ಕೆಲವೊಂದು ಕೆಲಸ ಮಾಡುವುದಕ್ಕಾಗಿತ್ತು.ಅವನ ಇಷ್ಟದ ಕುಮಾರಧಾರೆ ಹಾಗೂ ನೇತ್ರಾವತಿ ನದಿಗಳನ್ನು ಅವನು ನೋಡಿ ಮಾತನಾಡಿಸಬೇಕಿತ್ತು.ಗೋಪಾಲ ಸಂದಿಗ್ಧತೆ ಉಂಟಾದಾಗಲೆಲ್ಲಾ ಹಾಗೇ ಮಾಡಿ ತಣಿಯುತ್ತಿದ್ದ.ನದಿ ಸಂಗಮ ತಾಣದಲ್ಲಿ ಮರಳಿನ ರಾಶಿಯಲ್ಲಿ ಹೆಜ್ಜೆ ಹಾಕುತ್ತಾ ಒಂಟಿಯಾಗಿ ನಡೆಯುವುದು.. ತನ್ನೊಳಗೇ ಸೃಷ್ಟಿಯಾಗುವ ಮನೋ ನಿರ್ಮಾಣವನ್ನು ಗಟ್ಟಿಗೊಳಿಸುವುದು ಅವನಿಗೆ ಸಿದ್ಧಿಸಿತ್ತು.ಹಾಗೇ ಅಚಲನಾಗುವ ಮೂಲಕ ಅವನು ಹಲವಾರು ವ್ಯವಹಾರಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದ.ಅದಕ್ಕೆಲ್ಲಾ ಕಾರಣ ನೇತ್ರಾವತಿ ಮತ್ತು ಕುಮಾರಧಾರೆ ಎಂದು ಆತ ಬಹಳವಾಗಿ ನಂಬಿದ್ದ.
ಸ್ಕೂಟರನ್ನು ಸೀತಾರಾಮನ ಮರದ ಮಿಲ್ಲಿನ ಹತ್ತಿರ ನಿಲ್ಲಿಸಿದಾಗ ಎದುರಿಗೆ ಬಂದವನು ಸೀತಾರಾಮನೇ..ಮಿಲ್ಲಿನ ಒಳಗೆ ಅವನ ಯಂತ್ರಗಳು ಗಟ್ಟಿಯಾಗಿ ಸದ್ದುಮಾಡುತ್ತಿದ್ದುದರಿಂದ ಅವನೇನು ಹೇಳುತ್ತಿದ್ದಾನೆ ಎಂದು ಗೋಪಾಲನಿಗೂ ಗೋಪಾಲ ಏನು ಹೇಳುತ್ತಾನೆಂದು ಸೀತಾರಾಮನಿಗೂ ಗೊತ್ತಾಗಲಿಲ್ಲ. ಆದರೆ ಇಬ್ಬರಿಗೂ ಸ್ಕೂಟರ್ ಇಲ್ಲಿ ಪಾರ್ಕು ಮಾಡುವ ವಿಚಾರ ವಿನಿಮಯವಾಗಿತ್ತು.
ಸೀತಾರಾಮನ ಮಿಲ್ಲು ದಾಟಿ ನೇತ್ರಾವತಿ ಹೊಳೆಗೆ ಇಳಿಯುವುದು ಕೊಂಚ ಕಷ್ಟದ ದಾರಿ.ಆದರೆ ಗೋಪಾಲ ಅದನ್ನೇ ಆಯ್ದುಕೊಳ್ಳುತ್ತಿದ್ದ.ಏಕೆಂದರೆ ಅಲ್ಲಿ ಸಾಧಾರಣವಾಗಿ ಸಂಗಮಕ್ಷೇತ್ರದ ಪಡಾರಿಗಳು ಹೇಲಲು ಹೋಗುವುದಿಲ್ಲ. ಉಳಿದಂತೆ ದೇವಸ್ಥಾನದ ಬದಿಯಿಂದಲೂ ನದಿಗೆ ಇಳಿಯುವಂತಿಲ್ಲ. ಎಲ್ಲಿ ಕಾಲಿಗೆ ಅಂಟಿಕೊಳ್ಳುತ್ತದೋ ಎಂಬುದೇ ಆಯಿತು.
ಈ ದಾರಿಯಲ್ಲೇ ನದಿಗೆ ಹತ್ತಿರವಾಗಿ ಇರೋದು ಅನಿಲ್‌ನ ಸಿನಿಮಾ ಟಾಕೀಸು. ಅದರಲ್ಲಿ ನೋಡಿದ ಸಿನಿಮಾಗಳಿಗೆ ಲೆಕ್ಕ ಇಟ್ಟವರಿಲ್ಲ.ಗಿರೀಶ  ವಿಷ್ಣುವರ್ಧನನ ಅಭಿಮಾನಿ ಸಂಘ ಅಂತ ಮಾಡಿ ಇದೇ ಟಾಕೀಸಿನಲ್ಲಿ ವಿಷ್ಣುವ ಸಿನಿಮಾ ಬಂದಾಗಲೆಲ್ಲಾ ಗೋಪಾಲನನ್ನು ಪೀಡಿಸಿ ಬಣ್ಣದ ಕಾಗದ ಮಾಲೆ ಕಟ್ಟಿಸುತ್ತಿದ್ದ..ಹಾಗೇ ದುಡಿದದ್ದಕ್ಕೆ ರಥಬೀದಿಯ ಗಣೇಶಮಾಮರ ಹೋಟೇಲಿನಲ್ಲಿ ಚಟ್ಟಂಬಡೆ ಕೊಡಿಸುತ್ತಿದ್ದ.
ಸಿನಿಮಾ ಟಾಕೀಸಿನಲ್ಲಿ ಅಪ್ಪುಚ್ಚ ಮತ್ತು ಅನಿಲ್ ಕೂತಿರುವುದು ಕಂಡರೂ ಕಾಣದಂತೆ ಗೋಪಾಲ ನಡೆದ.ಅವರ ಜೊತೆ ಹರಟುವುದಕ್ಕೆ ಈ ದಿನದಲ್ಲಿ ಅವನಿಗೆ ಆಸಕ್ತಿಯಿರಲಿಲ್ಲ.ಆದರೆ ಅವರು ಬಿಡಬೇಕಲ್ಲ..ವಾಯ್..ಪತ್ರಕರ್ತರೇ..ಸೀದಾ ಹೋಗುವುದೆಲ್ಲಿಗೆ ಎಂದು ಕರೆದೇ ಬಿಟ್ಟರು..
ಗೋಪಾಲ ನೇತ್ರಾವತಿ ದಂಡೆಯಲ್ಲಿ ತಿರುಗಾಡುವುದು ಅವರಿಗೆ ಗೊತ್ತಿತ್ತು.ಗೋಪಾಲ ನದಿಯತ್ತ ಬೊಟ್ಟು ಮಾಡಿದ.
ಅಪ್ಪುಚ್ಚ..ಒಳ್ಳೇ ಕಥೆ ಆಯ್ತಲ್ಲ ಮಾರಾಯರೇ..ಒಮ್ಮೆ ಬಂದು ಹೋಗಿ..ಸಿನಿಮಾ ಒಳಗೆ ನಡೀತಾ ಇದೆ..ನಾವು ಒಂದು ಚಹ ಕುಡಿಯುವಾ..ನದಿ ಏನು ಬೊಳ್ಳಕ್ಕೆ ಹೋಗುವುದಿಲ್ಲ..ಗೊತ್ತಾಯ್ತಾ..ಎಂದು ರೇಗಿಸಿ ಗೋಪಾಲನನ್ನು ಒಳಗೆ ಎಳೆದುಕೊಂಡೇ ಬಿಟ್ಟ.
ಆದ್ದರಿಂದಲೇ ಗೋಪಾಲ ನದಿಗಳೆರಡರ ಕೂಡುಕಟ್ಟಿನಲ್ಲಿ ಬಂದು ನಿಲ್ಲುವ ಹೊತ್ತಿಗೆ ರಾತ್ರಿಯಾದದ್ದು..ಹಾಗೇ ರಾತ್ರಿ ದಾಟುತ್ತ ಹೋಗುತ್ತಿತ್ತು..
ಅದು ಎಷ್ಟು ರಾತ್ರಿ ಎಂದು ಅವನಿಗೆ ಹೊಳೆದಿರಲಿಲ್ಲ.ಕಾಲವನ್ನು ಮೀರುವ ಅವನ ನಿರ್ಧಾರಕ್ಕೆ ಆ ಗುಹೆಯ ಅವಧೂತ ಹೇಗೆ ಕಾರಣವಾಗುತ್ತಿದ್ದನೋ ಹಾಗೇ ಆ ರಾತ್ರಿಯೂ ಆ ನದಿಗಳೂ ಕಾರಣವನ್ನು ಕಟ್ಟಿ ಕೊಡುತ್ತಿದ್ದವು..
ಆಗಲೇ ಅವನಿಗೆ ಆ ನದಿಗಳ ಸಂಗಮ ತಾಣದಲ್ಲಿ ರುಮಾಲು ಕಟ್ಟಿದವರು ಹಿಂಡು ಹಿಂಡಾಗಿ ಅತ್ತಿಂದಿತ್ತ ಇತ್ತಿಂದತ್ತ ದಾಟುತ್ತಿರುವುದೂ..ನೀರಾಟವಾಡುತ್ತಿರುವುದೂ ಕಂಡದ್ದು...
ಕಾರ್ತಿಕ ಹುಣ್ಣಿಮೆಗೆ ಇನ್ನು ಮೂರೇ ದಿನಗಳಿದ್ದವು..
ಬಾನಲ್ಲಿ ಚಂದಿರ ಗೆಲುವಾಗಿದ್ದ.ಚಂದಿರನ ಬೆಳಕಲ್ಲಿ ಕುಮಾರಧಾರೆ ಹಾಗೂ ನೇತ್ರಾವತಿಗಳ ನೀರಲ್ಲಿ ಆ ರುಮಾಲುಗಳು ರುಯ್ಯನೇ ಅತ್ತ ಇತ್ತ ನೀರನ್ನು ಸೀಳಿಕೊಂಡು ಹೋಗುವುದು ಗೋಪಾಲನಿಗೆ ರೋಮ ನಿಮಿರಿಸಿತು.


 

20081215

ಗುಹಾಂತರ್ಗತ..........
ಜೆಸಿಬಿ ಅಂದರೆ ಒಂದು ಕಂಪನಿಯ ಹೆಸರು..ಆದರೆ ಆ ಯಂತ್ರದ ಹೆಸರು ಡೋಜರು ಹಾಗೆ ಅಂತ ಏನೋ ಇದೆ.. ಎಂದ ಮಹೇಂದ್ರ.
ಗೋದ್ರೇಜು ಕಪಾಟು ಅಂತ ನಾವು ಹೇಳ್ತೇವಲ್ಲ..ಎಲ್ಲಾ ಅಲ್ಮೇರಾಕ್ಕೂ ಮತ್ತು ಅದರಂಥ ಡಬ್ಬಾಗಳಿಗೂ ಅಂದ ರಾಧಾಕೃಷ್ಣ..
ಹಾಗೇ ಅವರೆಲ್ಲಾ ಜೆಸಿಬಿ ಬಂದ ಮೇಲೆ ಆಗಿರುವ ಕ್ರಾಂತಿಗಳ ಬಗ್ಗೆ ಮಾತನಾಡುತ್ತಾ ನಾವೂ ಒಂದು ಇಂಥ ಅರ್ಥ್‌ಮೂವರನ್ನು ಯಾಕೆ ಖರೀದಿಸಿ ದುಡ್ಡು ಮಾಡಬಾರದು ಎಂದು ಗಹನವಾಗಿ ಯೋಚಿಸುತ್ತಾ ರಾತ್ರಿಯಾಗಲು ಕಾಯುತ್ತಿದ್ದರು.
ಅವರು ಕಾಯುತ್ತಿದ್ದುದರ ಹಿಂದೆ ಎರಡು ಕಾರಣಗಳಿದ್ದವು..ಒಂದು ಪೆರಿಯಡ್ಕ ಗುಡ್ಡೆಯಲ್ಲಿ ಗುಹೆ ಕಾಣಿಸಿಕೊಂಡಿದೆ ಎಂಬ ಸುದ್ದಿಯನ್ನು ಗಮನಿಸಿ ಅದನ್ನು ನೋಡಿಬರುವುದು ಮತ್ತು ಗುಹೆ ನೋಡಿಬಂದಮೇಲೆ ವಿಸ್ಕಿ ಹಾಕೋದು.
ಪೆರಿಯಡ್ಕ ತುಂಬಾ ದೂರವೇನಲ್ಲ.ಪತ್ರಕರ್ತ ಗೋಪಾಲನ ಮನೆ ಇರೋದೇ ಅಲ್ಲಿ ಪಕ್ಕದಲ್ಲಿ.ಗುಹೆ ಕಾಣಿಸಿಕೊಂಡ ಬಗ್ಗೆ ಹೇಳಿದ್ದೇ ಆತ.
 ಮಹೇಂದ್ರನಿಗೇ ಆತ ಫೋನ್ ಮಾಡಿದ್ದರಿಂದ ಮಹೇಂದ್ರ ತುಂಬಾ ಖುಷಿಯಲ್ಲಿದ್ದ.
ಸಾಮಾನ್ಯವಾಗಿ ಗೋಪಾಲ ಯಾರಿಗೂ ಫೋನ್ ಮಾಡುವುದಿಲ್ಲ. ಅಪರೂಪಕ್ಕೊಮ್ಮೆ ಮಾಡಿದರೆ ಅದು ಮಹೇಂದ್ರನಿಗೆ ಮಾತ್ರಾ ಅಂತ ಸಂಗಮಕ್ಷೇತ್ರದಲ್ಲಿ ವಾಡಿಕೆಯ ಮಾತಿದೆ.
ಗೋಪಾಲ ಮಧ್ಯಾಹ್ನವೇ ಫೋನ್ ಮಾಡಿದ್ದ.
 ಪೆರಿಯಡ್ಕದ ಮೇಲೆಯೇ ಹೊಸತಾಗಿ ನಿರ್ಮಾಣವಾಗುತ್ತಿರುವ ರೈಲು ಮಾರ್ಗಕ್ಕೆ ಈಗ ಕೆಲಸ ನಡೆಯುತ್ತಿರುವುದರಿಂದ ಸಂಗಮಕ್ಷೇತ್ರದ ಜನರಿಗೆಲ್ಲಾ ಬಿಡುವಾದಾಗ ಪೆರಿಯಡ್ಕಕ್ಕೆ ಹೋಗಿ ಆ ದೈತ್ಯ ಗಾತ್ರದ ಯಂತ್ರಗಳ ಕೆಲಸ ಕಾರ್ಯಗಳನ್ನೂ  ವೈಖರಿಗಳನ್ನೂ ನೋಡುವುದು ಕೆಲಸ.
ಜೆಸಿಬಿಯ ಅಪ್ಪನಂಥ ಯಂತ್ರಗಳು ಗುಡ್ಡ ಬೆಟ್ಟಗಳನ್ನು ದೂಡಿಹಾಕುವುದನ್ನು ಅವರೆಲ್ಲಾ ಅದೇ ಮೊದಲ ಬಾರಿಗೆ ನೋಡುವ ಮಕ್ಕಳ ಹಾಗೇ ನೊಡುತ್ತಿದ್ದರು.
ಪೆರಿಯಡ್ಕದಲ್ಲಿ ರೈಲು ಮಾರ್ಗಕ್ಕೆ  ಮತ್ತೊಂದು ಮಹತ್ವವೂ ಇತ್ತು.ಅದೇನೆಂದರೆ ಪೆರಿಯಡ್ಕದ ಸನ್ಯಾಸಿಮೂಲೆ ಗುಡ್ಡದೊಳಗೆ ಅದು ಹಾದುಹೋಗಬೇಕಿತ್ತು.
ಸನ್ಯಾಸಿಮೂಲೆ ಗುಡ್ಡ ಅಂದರೆ ಅದು ಬಹಳ ದೊಡ್ಡದು.ಅದನ್ನು ಅಗೆದು ತೆಗೆಯುವುದಂತೂ ಬಿಡಿ, ಅದರ ಮೇಲೆ ಜೆಸಿಬಿ ಹಾಯಿಸಿ ಸಫಾಯಿ ಮಾಡಲೂ ಸಾಧ್ಯವಿಲ್ಲ.ಅಷ್ಟೂ ಕಠಿಣ.ವಿಶ್ವೇಶ್ವರಯ್ಯನವರೇ ಈ ಗುಡ್ಡ ಮುಟ್ಟ ಬೇಡಿ ಅಂತ ಹೇಳಿದ್ದರಂತೆ ಎಂದು ಸಂಗಮಕ್ಷೇತ್ರದ ಜನ ಮಾತಾಡಿಕೊಳ್ಳುತ್ತಿದ್ದರು.
ಯಾವ ವಿಶ್ವೇಶ್ವರಯ್ಯ..ಅವರು ಯಾವಾಗ ಯಾಕೆ ಬಂದಿದ್ದರು ಎಂದು ಯಾರೂ ಕೇಳಿರಲಿಲ್ಲವಾದ್ದರಿಂದ ಆ ಮಾತು ಆದರಷ್ಟಕ್ಕೇ ಹುಟ್ಟುತ್ತಾ ಸಾಯುತ್ತಾ ಸಾಗುತ್ತಾ ಇತ್ತು.
ಪೆರಿಯಡ್ಕ ಗುಡ್ಡ ಕಡಿದರೆ ನೇತ್ರಾವತಿ ನದಿಗೆ ಅಪಾಯ ಬರಬಹುದಂತೆ ಎಂದು ವಿಶ್ವೇಶ್ವರಯ್ಯನವರು ಹೇಳಿದ್ದರಿಂದ ಅದು ಉಳಿದಿದೆ ಎಂದು ಹೇಳಲಾಗಿತ್ತು.
ಆದರೆ ಈಗ ಸೆಂಟ್ರಲ್ ಗವರ್‍ನಮೆಂಟಿನವರು ರೈಲು ಹೋಗಲು ಪೆರಿಯಡ್ಕ ಗುಡ್ಡವನ್ನು ತೂತು ಮಾಡಿಯೇ ಮಾರ್ಗಮಾಡುವ ಪ್ಲಾನ್ ಮಾಡಿರುವುದು ಕೂಡಾ ಆ ಕಾರಣಕ್ಕೇ ಎಂದು ಸಂಗಮಕ್ಷೇತ್ರದ ಜನ ತಮ್ಮ ಊರಿನ ಗುಡ್ಡದ ಬಗ್ಗೆ ಹೆಮ್ಮೆ ಪಡುತ್ತಿದ್ದರು.
ಹೀಗೆ ಇರುವಾಗಲೇ ಗೋಪಾಲ ಮಹೇಂದ್ರನಿಗೆ ಫೋನ್ ಮಾಡಿ ಗುಡ್ಡ ಕೊರೆಯುವಾಗ ಗುಹೆ ಸಿಕ್ಕಿದ ಬಗ್ಗೆ ಹೇಳಿದ್ದು.
ಸುರಂಗ ತೋಡುವಾಗ ಗುಹೆ ಸಿಕ್ಕಿದ್ದು ಅಂದರೆ ಏನೂಂತ ಅರ್ಥವಾಗಲಿಲ್ಲ ಎಂದು ಫೋನ್‌ನಲ್ಲೇ ಹೇಳಿದ್ದ ಪೆದ್ದು ಪೆದ್ದಾಗಿ ಮಹೇಂದ್ರ.ಗೋಪಾಲನಿಗೆ ಆ ಪೆದ್ದು ಪ್ರಶ್ನೆ ಸಿಟ್ಟು ತರಿಸಿ ಆತ ಫೋನ್ ಕುಕ್ಕಿದ್ದ.
ಆಮೇಲೆ ಮಹೇಂದ್ರನೇ ಗೋಪಾಲನ ಮನೆಗೆ ಹೋಗಿ ವಿಷಯ ತಿಳಿದುಕೊಂಡು ಬಂದದ್ದು.ಅಂದರೆ ಸುರಂಗ ತೋಡುತ್ತಿರಬೇಕಾದರೆ ಯಂತ್ರ ಸರ್ರನೇ ಒಳಗೆ ನುಗ್ಗಿ ಹೋಗಿ ಪಲ್ಟಿ ಆಯಿತಂತೆ.ಅದರ ಕೆಲಸಗಾರರು ಅದು ಹೇಗೋ ಜೀವ ಸಹಿತ ಹೊರಬಂದು ಓಡಿದ್ದಾರಂತೆ..
ಅಂದರೆ ಗುಡ್ಡದೊಳಗೆ ಇವರು ಈಗ ತೋಡಲು ಆರಂಭಿಸಿದ ಸುರಂಗ  ಎಂದೋ ತೋಡಲಾಗಿದೆ..
ಎಂದು?

ಎಂದು ತೋಡಿದ್ದಾರೆ..ಯಾರು ತೋಡಿದ್ದಾರೆ..ಏನಿದೆ ಅದರೊಳಗೆ..ತೋಡಿದ ಸುರಂಗ ಮುಚ್ಚಿದ್ದು ಯಾರು..
ಇದು ಶಿಲಾಯುಗದ್ದೇ ಲೋಹಯುಗದ್ದೇ..ಅಥವಾ ಅದಕ್ಕು ಮುಂಚಿನದ್ದೇ..
ಗೋಪಾಲ ಮತ್ತು ಮಹೇಂದ್ರ ತುಂಬಾ ಹೊತ್ತು ಅದನ್ನು ಡಿಸ್ಕಸ್ ಮಾಡಿದ್ದರು.
ಯಾವುದಕ್ಕೂ ಈ ವಿಚಾರವನ್ನು ಯಾರಲ್ಲೂ ಹೇಳಬಾರದು..ಇಂದೇ ರಾತ್ರಿ ಆ ಗುಹೆಗೆ ನುಗ್ಗಬೇಕು ಎಂದು ಅವರು ನಿರ್ಧರಿಸಿಯೇಬಿಟ್ಟರು.
ಜೊತೆಗೆ ರಾಧಾಕೃಷ್ಣ ಕೂಡಾ ಬರಲಿ ಎಂದು ಹೇಳಿದ್ದೇ ಗೋಪಾಲ.ರಾಧಾಕೃಷ್ಣ ಬಂದರೆ ಇತಿಹಾಸದ ವಿಚಾರ ಮಾತನಾಡಬಹುದು ಎಂಬುದು ಅವನ ಅಭಿಪ್ರಾಯ.ಏಕೆಂದರೆ ರಾಧಾಕೃಷ್ಣ ಹಿಸ್ಟರಿ ಪ್ರೋಫೆಸ್ಸರ್ ಕೂಡಾ.
ಎಲ್ಲವೂ ಗುಟ್ಟಾಗಿ ಇರಬೇಕು..ನಾಳೆ ಬೆಳಗಾಗುವುದರೊಳಗೆ ಈ ಸುದ್ದಿಯನ್ನು ತಾನೇ ತನ್ನ ಟಿವಿ ಚಾನಲ್‌ನಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರಿಸಿ ದಾಖಲೆ ಮಾಡಬೇಕು ಎಂಬುದು ಗೋಪಾಲನ ಅದಮ್ಯ ಆಸೆ.ಸಂಗಮಕ್ಷೇತ್ರದ ಜನರಿಗೂ ಈ ಸುದ್ದಿ ತನ್ನ ಚಾನಲ್ ಮೂಲಕವೇ ಗೊತ್ತಾಗಬೇಕು ಎಂಬುದು ಅವನ ಹಠ.
ಜೆಸಿಬಿಯಂಥ ಮಾಯಾವಿಯಿಂದ ಪೆರಿಯಡ್ಕ ಗುಡ್ಡದೊಳಗೆ ಗುಹೆ ಕಾಣುವುದಕ್ಕೆ ಸಾಧ್ಯವಾಯಿತು ಎಂದು ಅಪಾರ ಅಚ್ಚರಿಪಟ್ಟ ಮಹೇಂದ್ರ ಮತ್ತು ರಾಧಾಕೃಷ್ಣ ಅದನ್ನು ಖರೀದಿಸುವ ಮಟ್ಟದಲ್ಲಿ ಮಾತನಾಡಿದ್ದು.
ಹಾಗೇ ಮಾತನಾಡುವಾಗಲೇ ಗೋಪಾಲ ಬಂದ. ಜೊತೆಗೆ ಅವನ ಕೆಮೆರಾ..ಉದ್ದದ ಟಾರ್ಚ್‌ನ್ನು ರಾಧಾಕೃಷ್ಣ ತಂದಿದ್ದ.ಅದರ ಬೆಳಕು ಒಂದು ಮೈಲಿ ಹೋಗುತ್ತದೆ ಎಂದು ಅವನು ಆಗಾಗ ಹೇಳುತ್ತಿದ್ದ.
ಮೂವರೂ ಗುಡ್ಡದತ್ತ ಹೊರಟರು.
ಕಾರ್ತಿಕ ಹುಣ್ಣಿಮೆಗೆ ವಾರ ಬಾಕಿಯಿದೆ ಎಂದು ಮಹೇಂದ್ರ ಆಕಾಶ ನೋಡುತ್ತಾ ಸುಮ್ಮನೇ ಹೇಳಿದ.ದೊಡ್ಡ ಕತ್ತಲು ಏನೂ ಇರಲಿಲ್ಲ.ಮೋಡದ ಕಾರಣ ಚಂದಿರನೂ ಕಾಣುತ್ತಿರಲಿಲ್ಲ. ಅವರಿಗೂ ಅದೇ ಬೇಕಾಗಿತ್ತು.ರೈಲು ಮಾರ್ಗದ ಕೆಲಸಗಾರರು ಪೆರಿಯಡ್ಕದ ಅಂಗಡಿ,ಗಡಂಗುಗಳಲ್ಲಿ ಠಳಾಯಿಸುತ್ತಿದ್ದರು.ಅವರ ದೊಡ್ಡ ಹರಟೆ ಗುಡ್ಡದ ತನಕ ಕೇಳುತ್ತಿತ್ತು.ಡೇರೆಗಳೊಳಗೆ ರೇಡಿಯೋ ಪದ್ಯ ಹಾಡುತ್ತಿತ್ತು. ಇದು ಯಾವುದರ ಹಂಗೂ ಇಲ್ಲದಂತೆ ಮೂವರೂ ತೋಡುತ್ತಿರುವ ಸುರಂಗದೊಳಗೆ ನುಗ್ಗಿದರು.
ರಾಧಾಕೃಷ್ಣ ಟಾರ್ಚು ಹಾಯಿಸಿದ.ಗೋಪಾಲ ಕೆಮೆರಾ ಆನ್ ಮಾಡಿದ.ಸುರಂಗದೊಳಗೆ ಐವತ್ತು ಗಜ ದೂರದಲ್ಲಿ ಜೆಸಿಬಿ ಕಂತಮುಟ್ಟೆಯಾಗಿ ಬಿದ್ದುಕೊಂಡಿತ್ತು. ಅದನ್ನು ಹಾದು ಬೆಳಕು ಹಾಯಿಸಿದರೆ ಸುಂದರವಾಗಿ ಕೊರೆದಂತೆ ಗುಹೆ..ಒಬ್ಬ ಮಾತ್ರಾ ನುಸುಳುತ್ತಾ ತೆವಳುತ್ತಾ ಹೋಗುವಂತೆ ಇದೆ.
ಗೋಪಾಲನೇ ಮುಂದಾಗಿ ನುಗ್ಗಿದ.ಅವನ ಹಿಂದೆ ಮಹೇಂದ್ರ. ಟಾರ್ಚು ಹಾಯಿಸುತ್ತಾ ರಾಧಾಕೃಷ್ಣ. 
ಗೋಪಾಲನ ಹ್ಯಾಂಡೀಕ್ಯಾಮ್ ಗುರ್ರೆನ್ನುತ್ತಾ ತಿರುಗುತ್ತಿತ್ತು.ಒಂದಂಶವೂ ಬಿಟ್ಟುಹೋಗದಂತೆ ಅದು ದಾಖಲಿಸುತ್ತಿತ್ತು.
ನೂರು ಮಾರು ಮುಂದೆ ಹೋಗುತ್ತಿದ್ದಂತೆ ರಾಧಾಕೃಷ್ಣ ಶ್..ಎಂದ.
ಇಬ್ಬರೂ ಅವನತ್ತ ತಿರುಗಿದರು.
ರಾಧಾಕೃಷ್ಣ ಟಾರ್ಚ್‌ನ್ನು ಬಲಭಾಗಕ್ಕೆ ತಿರುಗಿಸಿದ.
ಹೌದು,ಅಲ್ಲೊಂದು ಕವಲಿತ್ತು, ಗುಹೆ ಅತ್ತಲೂ ಚಾಚಿತ್ತು.
ಗೋಪಾಲ ಕೆಮೆರಾ ತಿರುಗಿಸಿದ.
ರಾಧಾಕೃಷ್ಣನ ಪವರ್‌ಫುಲ್ ಲೈಟ್‌ನ ಬೆಳಕಿನ ಕೊನೆಯಲ್ಲಿ ಅಗೋ ಒಂದು ಮಾನವಾಕೃತಿ..
ವಾಯ್..ಯಾರೋ ಒಬ್ಬ ಕಾಣಿಸುತ್ತಿದ್ದಾನೆ ಎಂದ ಮಹೇಂದ್ರ..
ಗೋಪಾಲನ ಕೆಮೆರಾ ಅಷ್ಟರಲ್ಲೇ ಢಬ್ ಅಂದಿತು.
ಏನಾಯಿತು ಎಂದು ಮೂವರೂ ಬೆಚ್ಚಿಬಿದ್ದರು.ಕೆಮೆರಾ ಟರ್ನ್‌ಆಫ್ ಆಗಿದೆ ಎಂದ ಗೋಪಾಲ.
ಮಹೇಂದ್ರ ನೋಡಿ ನೋಡಿ ಅದು ಯಾರು..ಎಂದ.
ಜಟಾಧಾರಿಯಂತಿರುವ ವ್ಯಕ್ತಿಯೊಬ್ಬ ಇವರತ್ತ ಬರುತ್ತಾ ಇದ್ದಾನೆ!
ಸಾಧ್ಯವೇ ಇಲ ಎಂದು ಗೋಪಾಲ ತನ್ನೊಳಗೆ ಹೇಳಿದ್ದು ಉಳಿದಿಬ್ಬರಿಗೂ ಕೇಳಿಸಿತು.
ಮಹೇಂದ್ರ ಮಾರಾಯರೇ ಅತ ಇತ್ಲಾಗಿಯೇ ಬರುತ್ತಿದ್ದಾನೆ ಎಂದ.
ಗೋಪಾಲ ಕೆಮೆರಾ ಆನ್ ಮಾಡಲು ಮುಂದಾದರೆ ಅದು ಜಗ್ಗುತ್ತಿಲ್ಲ.
ಕ್ಷಣಾರ್ಧದಲ್ಲಿ ಆ ವ್ಯಕ್ತಿ ಇವರೆದುರು ಬಂದೇ ಬಿಟ್ಟಿತು.ಇವರು ಮೂವರೂ ತಗ್ಗಿ ಬಗ್ಗಿ ಗುಹೆಯೊಳಗೆ ಸೊಂಟ ಎತ್ತಿ ನಿಲ್ಲಲು ಪ್ರಯತ್ನಿಸಿದರೆ ಆ ವ್ಯಕ್ತಿ ಸಾವಕಾಶವಾಗಿ ನಡೆದುಕೊಂಡು ಬರುತ್ತಿತ್ತು.
ಮೂವರೂ ಮಾತೇ ಬಿದ್ದು ಹೋಗಿದ್ದರು.
ಚಂದಮಾಮದ ಋಷಿಯಂತೆ ಆ ವ್ಯಕ್ತಿ ಕಾಣಿಸುತ್ತಿತ್ತು.ಸಣಕಲಾಗಿತ್ತು..
ಮಕ್ಕಳೇ..ಎಂದು ಆರಂಭಿಸಿದ್ದು ಆ ಋಷಿಯೇ..
ರಾಮ-ರಾವಣರ ಯುದ್ಧ ಮುಗಿಯಿತೇ ಎಂದು ಕೇಳುತ್ತಿದೆ.
ಗೋಪಾಲ ನಾಲಿಗೆ ಒಣಗಿ ತತಪಪ ಆಗಿದ್ದ. ಮಹೇಂದ್ರನಿಗೆ ಉಚ್ಚೆ ಚೆಲ್ಲಿದ್ದು ಅನುಭವಕ್ಕೆ ಬಂದಿತ್ತು.ರಾಧಾಕೃಷ್ಣ ಆಗಲೇ ಟಾರ್ಚು ಬಿಟ್ಟು ಹಿಂದಕ್ಕೆ ತೆವಳುತ್ತಾ ಓಡಿದ್ದ.
ಹಾಗೇ ಕೇಳಿದ ಆ ಜೀವ ಗುಹೆಯ ಮತ್ತೊಂದು ಕವಲಿನಲ್ಲಿ ಸಾಗಿಹೋಯಿತು.
ಗುಹೆಯೊಳಗೆ ತಾವು ಕಂಡದ್ದನ್ನು ಹೇಳಿದರೆ ಯಾರೂ ನಂಬುವುದಿಲ್ಲ ಎಂದು ಖಚಿತವಾಗಿ ಗೊತ್ತಿದ್ದುದರಿಂದ ಮೂವರೂ ಈ ವಿಚಾರವನ್ನು ಯಾರಿಗೂ ಹೇಳಲಿಲ್ಲ.
ಗೋಪಾಲ ಮರು ದಿನವೇ ಟೀವಿ ಕೆಲಸಕ್ಕೆ ರಾಜೀನಾಮೆ ಇಟ್ಟ.
20081125

ಒಳಗೆ ಕೆಲಸ ನಡೆಯುತ್ತಿದೆ


ಪ್ರಿಯ ಓದುಗ ಗೆಳತಿ- ಗೆಳೆಯರೇ,

ಬ್ಲಾಗ್ ತಾತ್ಕಾಲಿಕವಾಗಿ ಮುಚ್ಚಲಾಗಿದೆ.
 ಒಳಗೆ ದುರಸ್ತಿ ಕಾರ್ಯ ನಡೆಯುತ್ತಿದೆ,ನನ್ನೊಳಗೂ..
ರಿಪೇರಿ ಕೆಲಸ ಸಾವಧಾನವಾಗಿ ನಡೆಯುತ್ತಿದೆ, ಸ್ವಲ್ಪ ಸಮಯದಲ್ಲೇ ಮತ್ತೆ ತೆರೆದುಕೊಳ್ಳಬಹುದು..
ಅಲ್ಲಿಯ ತನಕ ಶಾಂತಂ ಪಾಪಂ..!
ಇಷ್ಟಕ್ಕೂ ನನ್ನ ಬ್ಲಾಗು ಮುಚ್ಚಿಯೇ ಇದ್ದರೆ ಅದರಿಂದ ಯಾರಿಗೂ ನಷ್ಟವಾಗುವುದಿಲ್ಲ, ಇದೇನೂ ಅನಿವಾರ್ಯವೂ ಅಲ್ಲ..ಹಾಗಂತ ನಾನು ತಿಳಿದುಕೊಂಡಿದ್ದೇನೆ
ಇಂತಿ ನಿಮ್ಮ 
ಗೆಳೆಯ20081117

ನಾಲ್ಕು ಸಾಲು೧.

ಯಾರಿಗೂ
 ನಿಲುಕದ
ಸಾವು
ಎಲ್ಲರನ್ನೂ ಸ್ವೀಕರಿಸುವುದು
ಹುಟ್ಟಿನ ಆಯ್ಕೆಯಲ್ಲಿ
ಸಾವಿನ ಉಡುಗೊರೆ ಉಚಿತ


೨.
ದೇಹದ 
ಸಾವಿಗೆ ಅಂಜುವವನು
ಮನಸ್ಸಿನ
ಸಾವನ್ನು ಮರೆಯುವನು


೩.

ಎಲ್ಲರಿಗೂ 
ಒಪ್ಪುವ
ಸಾವನ್ನು
ದೇವರೂ ಸೃಷ್ಟಿಸಲಾಗದೇ
ಒದ್ದಾಡಿದ.೪.

ಮರೆಯುವುದು
ಕೂಡಾ
ಸಾವೇ
ಎಂದರೆ
ಪ್ರೇಮಿಗಳು
ಮಾತ್ರಾ
ಅಂಜುವರು.

20081109

ಹಾಡು-ಪಾಡು-೨

ವಿರಹ 
ಎಂದರೆ
ನಕ್ಷತ್ರಗಳಿಲ್ಲದ
ರಾತ್ರಿ

ವಿರಹ
ಎಂದರೆ
ಅರುಣೋದಯಕ್ಕೆ
ಅಸ್ತಮಾನ

ವಿರಹ
ಎಂದರೆ
ಗಾಳಿ
ಬೀಸದ
ಮುಗಿಲು

ವಿರಹ
ಎಂದರೆ
ಭೂಮಿಗೆ ಚಲನೆಯ ಮರೆವು

ವಿರಹ 
ಎಂದರೆ
ಪಕಳೆಗಳುರುಳಿದ
ಗುಲಾಬಿ

ವಿರಹ ಎಂದರೆ
ಹಾರಲಾರದ
ದುಂಬಿ

ವಿರಹ 
ಎಂದರೆ
ಕಂತಿದ ಭೂಮಿ
ಚಿಮ್ಮಿದ
ಬಾನು

ವಿರಹ
ಎಂದರೆ
ಕನಸೇ
ಇಲ್ಲದ 
ನಿದ್ದೆ
ಅವಳು ಇನ್ಯಾರಿಗೋ ನೆನಪು
ಸಂಭ್ರಮ..

20081107

ಮುದ್ದಿನಮೂಟೇ ಉರುಳೇ ಹೋಯ್ತು..
ಐವತ್ತನೇ ತಿಂಗಳಿಗೆ ಹೊರಟು ನಿಂತಳು.
ಬೇಜಾರು ಮಾಡ್ಕೋಬಾರದು ನೀನು. ಎಷ್ಟೊಂದು ರೀತಿಯಲ್ಲಿ ಹೀಗೆ ಮಾಡಲೇ ಬೇಡವೇ ಅಂತ ಯೋಚಿಸಿದ್ದೆ.ಕೊನೆಗೂ ಬೀಳ್ಕೊಳ್ಳುತ್ತಿದ್ದೇನೆ,ಪ್ರೀತಿಯಿಂದ ಕಳುಹಿಸಿಕೊಡೋ..
ಮಾತಾಡಲಿಲ್ಲ.
ಎಲ್ಲಿಂದ ಹೊರಡುವುದು ಮಾತು? ಅದೇ ಗಂಟಲಿನಿಂದ ಭಾವನೆಗಳನ್ನು ಕಟ್ಟಿಕೊಂಡು ಮಾತು ನಾಲಗೆ ಮೇಲೆ ಹೊರಳಬೇಕಾಗಿದೆ ತಾನೇ..ಸಾಧ್ಯವೇ ಇಲ್ಲ. ಗಂಟಲು ತುಂಬಿಕೊಂಡಿದೆ. ಭಾವನೆ ಆಳದಲ್ಲಿ ಹೂತುಹೋಗಿದೆ. ಹೃದಯವೇ ಕರಗಿ ಹಾದಿ ಮುಚ್ಚಿದಂತಿದೆ.ನಾಲಗೆ ಕಟ್ಟಿಕೊಂಡಿದೆ.
ಉಬ್ಬಸದ ಅನುಭವ.
ಅಂದು ಹೀಗೆ ಆಕೆ ಹೇಳಿದ್ದಳು.
ನಿನ್ನನ್ನು ಪ್ರೀತಿಸಿಬಿಟ್ಟೆ.. ಏನು ಮಾಡುತ್ತಿಯೋ ನನಗೆ ಗೊತ್ತಿಲ್ಲ.

@@@@@@@@@@@@@@@@@@@@

ಆ ಬೆಳಗು ಜೀವನದಲ್ಲಿ ಹೀಗೊಂದು ಸೃಷ್ಟಿಯನ್ನು ತಂದೊಪ್ಪಿಸೀತು ಎಂದು ಎಂದೂ ಎಂದೆಂದೂ ನೆನೆಸಿರಲಿಲ್ಲ.ಹಾಗೇ ಕಛೇರಿಯಲ್ಲಿ ಕುಳಿತವನಿಗೆ ಅವಳ ನಿರೀಕ್ಷೆ ಇತ್ತು. ಹಿಂದಿನ ದಿನವಷ್ಟೇ ಆಕೆ ಕಿಸೆಯಲ್ಲಿದ್ದ ಸೆಲ್‌ಫೋನ್‌ಗೆ ಕರೆಮಾಡಿದಾಗ ಗುರ್ ಎಂದಂತಾಗಿತು. ಎಂದೂ ಸೆಲ್‌ನ್ನು ಅಲ್ಲಾಡುವ ಸ್ಥಿತಿಯಲ್ಲಿಡುವ ಜಾಯಮಾನ. ಎತ್ತಿಕೊಂಖಡರೆ ಹುಡುಗಿ.ಪುಳಕಿತಯಾಮಿನೀ ಆಗಿ ಸಲ್ಲದ ಸ್ಟೈಲ್ಲಲ್ಲಿ ಮಾತನಾಡಿದ್ದಾಯಿತು.
ನಾಳೆ ಬರುತ್ತೇನೆ ॒ಮೀಟ್ ಮಾಡಬೇಕು. ಹಾಗಂತ ಕೇಳಿಕೊಂಡೇ ಬರುತ್ತೇನೆ.ಶಿಷ್ಟಾಚಾರ ಅಂದಳು.
ಈಗ ಹೇಳಿಕೊಂಡು ಹೋಗುವುದು ಶಿಷ್ಟಾಚಾರವೇ ಇರಬೇಕು.
ಕಛೇರಿಗೆ ಹೊರಡುತ್ತಿದ್ದಂತೆ ಎಂದೂ ಮುಟ್ಟದ ಪರಿಮಳದ್ರವ್ಯವನ್ನು ಎತ್ತಿಕೊಂಡು ಅತ್ತಿತ್ತ ನೋಡಿ ಫುಫ್ ಅಂತ ಬಡಿ ಮೇಲೆ ಸಿಂಪರಿಸಿಕೊಂಡಾಯಿತು.ಯಾಕೆ ಮಾಡಿದ್ದೋ ಈಗಲೂ ಗೊತ್ತಿಲ್ಲ. ಯಾವಾಗಿನ ಧಿರಸನ್ನು ಕೈಬಿಟ್ಟು ಎತ್ತಿಕೊಂಡದ್ದು ಟೀ ಶರಟು ಮತ್ತು ನೀಲಿ ಜೀನ್ಸ್..ಬಂಗಾರದ ಬೊಟ್ಟಿನ ಪೆನ್ನನ್ನೇ ಕಿಸೆಗೆ ಸಿಕ್ಕಿಸಿಕೊಂಡಾಗ ಅದೆಂಥದ್ದೋ ಹುಕ್ಕಿ ಹರಿದಾಡಿದಂತಾಗಿ ಫುಲ್ಲಕುಸುಮಿತಾಂ..

@@@@@@@@@@@@@@@@

ಅದು ನಿರೀಕ್ಷೆ ಹೇಗಾದೀತು, ಪ್ರತೀಕ್ಷೆಯೇ..ಆ ಕ್ಷಣಕ್ಕೆ ಅದೂ ನಡೆದೇಹೋಯಿತು.
ಕಮ್‌ಇನ್..ಸರಸಿ 
ಯಲಾ ಇವನಾ..ಸರಸೀ ಅಂತ ಹೇಳೇ ಬಿಟ್ಟ.ಮೊನ್ನೆಯ ದಿನದಿಂದ ಇವನು ಹೇಗಿರಬಹುದು ಅಂತ ಅದೆಷ್ಟು ರೀತಿ ಊಹಿಸಿದ್ದೆ,ಅದಕ್ಕಿಂತ ಸುಂದರವಾಗಿದ್ದಾನೆ.ದುಷ್ಟ.ಇಷ್ಟೊಂದು ಇನ್‌ಫಾರ್ಮಲ್ ಆಗಿ ಇರುತ್ತಾನೆ ಅಂದರೆ ನಂಬುವುದು ಹೇಗೆ ಫಟಿಂಗ.
ಸರಸಿ,ಪ್ಲೀಸ್ ಬಿ ಸೀಟೆಡ್..
ಕೂತದ್ದಾಯಿತು. ಎದುರಲ್ಲಿ ಈ ಹಾಫ್ ತೋಳಂಗಿಯ ಹುಡುಗ.ಬೇಕೆಂದೇ ಹಾಕಿದ್ದಿರಬೇಕು,ಕೈ ತುಂಬಾ ಕಪ್ಪುಗೂದಲ ರಾಶಿ.ಅರೆ,ಎದೆಯಲ್ಲಿ ತುಂಬಿ ತುಳುಕಿದ ರೋಮರಾಶಿ ಟೀಶರಟನ್ನೂ ಉಲ್ಲಂಘಿಸಿ ಇಣುಕುತ್ತಿದೆ,ನನ್ನನ್ನು ಆಹ್ವಾನಿಸಲೆಂದೇ..
ಕರಡಿ ಬೋಳಿಮಗ.
ಸೆಕ್ಸೀ ಇದ್ದಾನೆ ಅಂತ ಒದ್ದಾಡಿದಾಗ ನೆನಪಾದದ್ದು ಒಳಗೆ ಪ್ಯಾಡ್ ಛೇಂಜ್ ಮಾಡಬೇಕಾಗಿದೆ.ಇವನ ಕಛೇರಿಗೆ ಟಾಯ್ಲೆಟ್ಟು ಅಂತ ಎಲ್ಲಿದೆಯೋ ಕೇಳುವುದಾದರೂ ಈಗ ಹೇಗೆ ?
ಸರಸೀ.. ಹೊರಡೋಣ್ವಾ..
ಹೂಂ..ನಾನು ರೆಡೀ..
ಭೂಪ ಸೀದಾ ಟಾಯ್ಲೆಟ್ಟು ಬಾಗಿಲು ತಳ್ಳಿ ಒಳಗೆ ಹೋದವನು ಬಂದು ನಿಂತು ಪುಶಪ್..ಎಂದು ಪ್ಯಾಂಟನ್ನು ಅಡ್ಜಸ್ಟ್ ಮಾಡಿದ ರೀತಿಗೆ ಛಳಿ ಛಳಿ..

@@@@@@@@@@@@@@@@@@@@@@@@@@

ಆ ಕ್ಷಣಕ್ಕೇ ಪ್ರೀತಿಸಿಬಿಟ್ಟಳೇ..
ಗೊತ್ತಾಗಲಿಲ್ಲ.ಆದರೆ ಆ ದಿನ ಆ ಚಪ್ಪರದ ಮಲ್ಲಿಗೆ ಮಾಲೆ ಮುಡಿದು ಬಂದಳಲ್ಲ.ಎಲ್ಲರಿಗಿಂತಲೂ ಮೊದಲು ಎಂಬ ಹಾಗೇ.ಹಿಂದಿನಿಂದ ಬಂದಿ ಕಣ್ಣುಮುಚ್ಚಿಹಿಡಿಯೋಣ ಎಂದನಿಸಿತಲ್ಲಾ ಆ ವೇಳೆಗೆ..ಆ ಮೋಹಕ ನಗುವಿನಲ್ಲೇ ಎದೆಯ ಅಗ್ಗಿಷ್ಟಿಕೆಗೆ ಅರಣೀಮಥನ ಮಾಡಿದಳು.
ಅಂದು ಕಾರಲ್ಲಿ ಕುಳಿತಿದ್ದಾಗ ಯಾವುದೋ ಮಾತಿಗೆ ..ಯಾಕೋ ಆ ದಿನ ನೀನು ಚಪ್ಪರದ ಮಲ್ಲಿಗೆಗೆ ಸೋತಿದ್ದೆ ಎಂಬುದು ಗೊತ್ತಾಗಿ ಹೋಗಿತ್ತು ಎಂದು ಹೇಳಿಯೇ ಬಿಟ್ಟಿದ್ದಳು..ಎಂಥಾ ಸೇಡು! 
ಏನೆಂದು ಆರಂಭಿಸಲಿ ಎಂದುಕೊಳ್ಳುವ ಹೊತ್ತಿಗೆ ಒಮ್ಮೆ ಹಗ್ ಮಾಡು ಗಟ್ಟಿಯಾಗಿ ಅಷ್ಟೇ ಸಾಕು ಎಂದಳು..
ಪ್ರೀತಿಸಬಾರದು..ಎಂದು ಎಲ್ಲರೂ ಹೇಳುತ್ತಾರೆ, ಆದರೆ ಪ್ರೀತಿಸದೇ ಇರೋದು ಹೇಗೆ ಎಂದು ಯಾರೂ ಹೇಳಿಲ್ಲ. ಅವಳಿಗೂ ಹೀಗೆಯೇ ಆಗಿತ್ತಾ .. ಅಥವಾ ಈಗ ಹೀಗೆ ಅನಿಸಲೂಬಹುದಾ.? ಯಾಕೆ ಕೇಳಬೇಕು. ಅವಳೇನು ಇನ್ನು ಈ ಜೀವಕ್ಕೆ ತಟ್ಟುವವಳಲ್ಲ. ಹಾಗಾದರೆ ಅಂದೇಕೆ ತಟ್ಟಿದಳು, ಈ ಪಾಳುಮನೆಯ ಗಟ್ಟಿಬಾಗಿಲನ್ನು ? ಅದು ಏಕೆ ಆ ತಾಳಕ್ಕೆ ಸಂವಾದಿಯಾಗಿ ತೆರೆಯಬೇಕಿತ್ತು ಆ ಗಟ್ಟಿ ಚಿಲಕವನ್ನು ?
ಗೊತ್ತಿಲ್ಲ,
ವೇದನೆಯಾಗುತ್ತಿದೆ,ಇನ್ನು ಮುಂದೆ ಇವಳು ನನ್ನ ಹುಡುಗಿ ಅಲ್ಲ ಎಂಬುದನ್ನು ನೆನೆಯಲಾರೆ..ಆ ಮಿಲನದ ಕ್ಷಣಗಳನ್ನು ಊಹಿಸಲಾರೆ.. 
ಏನಿತ್ತು ಅಲ್ಲಿ ? ಪ್ರೀತಿಯೇ ಅಲ್ಲವೇ ?

@@@@@@@@@@@@@@@@@@

ನಾವು ತಪ್ಪು ಮಾಡಿದ್ದೇವೆ ಅಂತ ನನಗೆ ಈಗಲೂ ಅನಿಸುತ್ತಿಲ್ಲ..ಎಂದಳು.
ನಾನೂ ಹಾಗೆಂದು ಊಹಿಸಿಲ್ಲವಲ್ಲಾ.
ಏನು ತಪ್ಪು ಎಂದರೆ. 
ಸರಿಯಾದುದು ಇದು ಅಂತ ಹೇಳಿದರೆ ಅಲ್ಲದ್ದು ತಪ್ಪು ಎಂದಾಗುತ್ತದಾ ?
ಇಷ್ಟಕ್ಕೂ ಇದು ಸರಿ ಇದೇ ಸರಿ ಅಂತ ಹೇಳಿದ್ದು ಯಾರು?
ತಪ್ಪು ಎಲ್ಲಿದೆ ?
ನಮ್ಮ ಮನಸ್ಸಿಗೆ ಹಿತ ಅಂತ ಆಗದಿದ್ದರೆ ಅದು ತಪ್ಪು ಅಂತ ಆಗಿಬಿಡುತ್ತದೆ.
ನನಗೆ ಈ ಕ್ಷಣವೂ ಮಾಡಿದ್ದೆಲ್ಲಾ ಹಿತವಾಗಿಯೇ ಇದೆ.
ಆ ಕಾಡು ದಾರಿಗೆ ಹೆಸರಿಟ್ಟವಳು ಅವಳೇ..
ಬೃಂದಾವನ..
ಮೊದಲಬಾರಿಗೆ ಕರೆದವಳೂ ಅವಳೇ..
ಒಮ್ಮೆ ಹೋಗಿಬರೋಣ.
ಯಾಕೆ ಕರೆದಳು?
ಆ ಫೆಬ್ರವರಿ ಇಪ್ಪತ್ತೆರಡನೇ ತಾರೀಕಿಗೆ ಮೊದಲ ಬಾರಿಗೆ ಅಲ್ಲಿಗೆ ಹೋಗುತ್ತಿದ್ದಾಗ..
ಉಫ್.. ನೀನು ಬಂದಿದ್ದೀ ಎಂದರೆ ನನಗೆ ಈಗಲೂ ನಂಬಲಾಗುತ್ತಿಲ್ಲ.. ಎಂದಳು.
ಬೆನ್ನಹಿಂದೆ ಅವಳು ಬರಸೆಳೆದು ಅಪ್ಪಿಕೊಂಡು ಕೊರಳು ತುಂಬಾ ಪೋಣಿಸಿದ ಮುತ್ತಿನಹಾರದಲ್ಲಿ ರಾತ್ರಿ ಮನೆಗೆ ಬಂದು ಹುಡುಕಿದಾಗ ಕಂಡದ್ದು ಅವಳ ಹಲ್ಲಿನ ಗುರುತು ಅಂದರೆ ಒಂದು ಕಪ್ಪು ಕಲೆ.
ಹಾಗೆಂದು ಹೇಳಿದರೆ,
ನನ್ನ ತೊಡೆಯಲ್ಲಿ ನೀನು ಒತ್ತಿದ ಬೆರಳಚ್ಚು ಇನ್ನೂ ಹಾಗೇ ಇದೆ ವಾರ ಕಳೆದರೂ ಎಂದಿದ್ದಳು.
ಎಷ್ಟು ಬಾರಿ ಬೃಂದಾವನದಲ್ಲಿ ಓಡಿಯಾಡಿದೆವು ಅಂತ ಅವಳಿಗೆ ಲೆಕ್ಕ ಸಿಕ್ಕಿರಲಿಲ್ಲ,
ಹೇಳಿದಾಗ ನಂಬಲೂ ಇಲ್ಲ.
ಇಪ್ಪತ್ತೊಂದು ಬಾರಿ..
ಇನ್ನೊಂದೇ ಒಂದು ಸಾರಿ ಹೋಗೋಣ..ಎಂದಿದ್ದಳು..
ಹಬ್ಬಾ ಅಷ್ಟೊಂದು ಬಾರಿ ಹೋಗಿಯೂ ನಮ್ಮ ಸಂಯಮವನ್ನು ನಾವು ಕಳೆದುಕೊಳ್ಳಲಿಲ್ಲ ಅಲ್ಲಾ 
ಏಕೋ ಕಳೆದುಕೊಳ್ಳಬೇಕಿತ್ತಾ..
ಊಹೂಂ..
ಅದನ್ನೇ ಡಿವೈನಿಟಿ ಅಂತ ನೀನು ಅನೇಕ ಬಾರಿ ಕರೆದಿದ್ದೆ.
ಒಮ್ಮೆ ಆ ಸಂಯಮ ಕಳೆದವಳಂತೆ ಆಹ್ವಾನಿಸಿದ್ದೆ..
ಹಬ್ಬಾ..
ಈಗ ಊಹಿಸಿದರೆ ನಿನ್ನ ಸಂಯಮ ಅಚ್ಚರಿ ಹುಟ್ಟಿಸುತ್ತದೆ..ನನ್ನೊಳಗೆ ಒಮ್ಮೆ ಬಂದು ಬಿಡು ಎಂದುಬಿಟ್ಟೆ.
ನೀನು ಆಗ ಅದು ಹೇಗೆ ನನ್ನನ್ನು ಸಂತೈಸಿದೆ ಮುಠ್ಠಾಳ..ಈಗ ಹಾಯೆನಿಸುತ್ತದೆ.
ಹಗ್..ಬರೀ ಹಗ್..ಮತ್ತು ಅದೇ ಹಗ್..
ಅದರಲ್ಲಿ ಅಷ್ಟೊಂದು ಆಪ್ತ ಎನಿಸಿಬಿಟ್ಟೆ.
ಅಷ್ಟು ಸಾಕು.

@@@@@@@@@@@@@@@@@@@@@@@@@@


ಏನಿದೆ ಅಂತ ನನ್ನಲ್ಲಿ ನೀನು ಹುಡುಕಿದ್ದು.ಒಡೆದು ಬಿದ್ದ ಕೊಳಲು ನಾನೀಗ.ಇದರಲ್ಲಿ ಎಲ್ಲಿದೆ ನಾದ ? ಕೇಳಬೇಕು ಹಾಗೇ ಅಂದರೆ ಹೊರಟವಳ ಸಂತೋಷವನ್ನು ಕಸಿಯಬಾರದು ಎಂದು ಮನಸ್ಸು ಮುಂದಾಗಿ ಬೋಧಿಸುತ್ತದೆ.
ಅಂದೆಲ್ಲಾ..ಪ್ರತೀ ನಿತ್ಯ ಮಾತನಾಡದಿದ್ದರೆ ಏನೋ ಕಾಣದಂಥ ಅನುಭವ. ಮಾತನಾಡಿದ ಮೇಲೆ ಇನ್ನೇನೋ ಬಾಕಿ ಇತ್ತು ಎಂಬ ಸಂಕಟ..
ಇಂದೂ ಹಾಗೇ ಆಗುತ್ತಿದೆ,ಮಾತನಾಡಲಾರೆ ಮಾತಾಡದೇ ಉಳಿಯಲಾರೆ..
ಇವಳಿಲ್ಲದೇ ಇರೋದಾದರೂ ಹೇಗೆ 
ಅವಳಿಗೂ ಹಾಗೇ ಅನಿಸಬಹುದಾ ?
ಎಲ್ಲಾ ನನಗೇ ಬಿಟ್ಟುಬಿಡು ಎಂದಳು.
ನಿನ್ನ ಬಿಟ್ಟುಹೋಗುತ್ತಿದ್ದೇನೆ ನಿಜ,
ಆದರೆ 
ನಿನ್ನನ್ನು ಬಿಟ್ಟೇ ಬಿಟ್ಟೇ ಎಂದರ್ಥ ಅಲ್ಲ ಎಂದಳು.
ಅವಳು ಹಾಗೆಂದಾಗ ದುಃಖ ಉಮ್ಮಳಿಸಿದಂತಾಗುತ್ತದೆ,ಅದು ಅವಳಿಗೂ ಗೊತ್ತಾಗುತ್ತದೆ.
ನನಗೆ ಅವನ ಸಾನ್ನಿಧ್ಯದಲ್ಲಿ ಸೆಕ್ಯೂರ್ ಅನಿಸುತ್ತಿದೆ ಎನ್ನುತ್ತಾಳೆ
ನಿನ್ನ ಜೊತೆ ಆ ಕಾರಲ್ಲಿ ಬೃಂದಾವನಕ್ಕೆ ಹೋಗುತ್ತಿದ್ದಾಗಲೆಲ್ಲಾ ನೀನು ಡ್ರೈವ್ ಮಾಡ್ತಾ ಇದ್ದರೆ ನಾನು ನಿನ್ನ ತೊಡೆ ಮೇಲೆ ಮಲಗಿ ಕಣ್ಣುಮುಚ್ಚಿ ಅನುಭವಿಸುತ್ತಿದ್ದೆ ನೋಡು ಆ ಭದ್ರತೆ..ಆಗ ನೀನು ಒಂದು ಕೈಯಲ್ಲಿ ನನ್ನ ತಲೆ ನೇವರಿಸುತ್ತಿದ್ದೆ..
ಆ ಸೆಕ್ಯೂರ್ ಇವನಲ್ಲಿ ಹುಡುಕುತ್ತೇನೆ..
ಸಿಕ್ಕರೆ ಅದು ನಿನ್ನದು ಅಂತ ತಿಳ್ಕೊಳ್ಳುವೆ..
ಒಂದೇ ಒಂದು ಬಾರಿ ಹಗ್ ಮಾಡು.. ನಾನು ಹೊರಡುವ ಮೊದಲು..॒
ಯಾರನ್ನು ಹಗ್ ಮಾಡಲಿ,ನೀನೇ ಇಲ್ಲದ ಮೇಲೆ..ಎಂದರೆ,
ನನ್ನ ಎಂದು ಮುಂದಾದಳು..
ಸರಸೀ ನೀನು ನನಗೆ ಕಾಣಿಸ್ತಾನೇ ಇಲ್ಲ..ಎನ್ನುತ್ತಿದ್ದಂತೆ ಕಣ್ಣು ತೋಯ್ದಿತ್ತು..
ಅವಳು ಕಾಣಿಸುತ್ತಿರಲಿಲ್ಲ..
ಆಮೇಲೆ ಅವಳು ಅವನ ಜೊತೆ ಸುಖವಾಗಿದ್ದಳು.


20081031

ಹಾಡು-ಪಾಡುವಿರಹ
ಎಂದರೆ
ಹಾಯಿ ಇಲ್ಲದ
ಒಂಟಿ ದೋಣಿ

ವಿರಹ 
ಎಂದರೆ
ಒಂದೇ ದಡದ
ನದಿ

ವಿರಹ
ಎಂದರೆ
ನೀರು ಆರಿದ
ಮರಳು

ವಿರಹ
ಎಂದರೆ
ಯಾರೂ ಮೆಟ್ಟದ
ಸೇತು

ವಿರಹ
ಎಂದರೆ
ಬತ್ತದ ಹಳ್ಳ
ಹರಿಯದ ಹೊಳೆ
ಮೀನಿಲ್ಲಿದ ನದಿ
ಮತ್ತು
ಅವಳಿಲ್ಲದ ಅವನು


20081026

ಅಶಾಶ್ವತಪ್ರೀತಿಗಿಂತಲೂ
ವಿರಹ
ಆಪ್ತ
ಕಂಸನಿಗೆ 
ಕೃಷ್ಣನ ಕನಸಿನಂತೆ
ರಾಧೆಗೂ ಗಂಡನಿದ್ದ
ಕೃಷ್ಣನಲ್ಲಿ
ಅವಳಿಗೆ
ವಿರಹದ ಭಯವಿತ್ತಂತೆ
ಪ್ರೀತಿಸುವುದು
ಆಕಸ್ಮಿಕ
ವಿರಹ ಮಾತ್ರಾ ಅನಿವಾರ್ಯ
ಒಂದೇ ಕೊಡೆ
ಒಂದೇ ಬಿಸಿಲು
ನೆರಳು ಮಾತ್ರಾ ಎರಡು
ಒಂದೇ ಮನಸ್ಸು
ಒಂದು ಕ್ಷಣ
ಎರಡಾದಾಗ ಅದು ಜಗದ ನಿಯಮ
ದ್ವೈತ ಎಂದರೆ ಅವನೂ ಅವಳೂ
ಅದ್ವೈತ ಎಂದರೆ ಅಖಂಡ ಪ್ರೇಮ

20081024

ಣಮೋ ವೆಜ್ಜಿಸಂ

ಜನ ಮಾಂಸ ತಿನ್ನೋದನ್ನು ಬಿಡುತ್ತಿದಾರಂತೆ !
 ಗಡ್ಡೆಗೆಣಸಿನತ್ತ  ನೋಡಲಾರಂಭಿಸಿದ್ದಾರಂತೆ.
ಹುಲ್ಲು ತಿನ್ನೋ ದನಗಳಿಗೇ ಮಾಂಸ ತಿನ್ನಿಸಿ ದನಗಳಿಗೆ ಹುಚ್ಚು ಹಿಡಿಸಿ,ಮನುಷ್ಯರೂ ಹುಚ್ಚು ಹಿಡಿಸಿಕೊಂಡು ಸತ್ತದ್ದು ಹಳೆ ಕಥೆ.
ಈಗ ಎಲ್ಲೆಲ್ಲೂ ವೆಜ್ಜಿಸಂ.. ಹೆಲ್ತ್ ವೆಲ್ತ್ ಹೆಪ್ಪಿನೆಸ್..ಘೋಷಣೆ.
ವೆಜ್ಜಿಸಂ ಕ್ಲಬ್‌ಗೆ ಸೇರಿ ಅಂತ ಅಂತರ್‌ಜಾಲ ತುಂಬಾ ಆಹ್ವಾನ.
ಒಂದು ದಿಟ್ಟ ನಿರ್ಧಾರ ಮಾಡಿಬಿಡಿ,ಅಂದರೆ ಮಾಂಸ ಸಾಕು ಸಸ್ಯ ಬೇಕು ಅಂತ ಹೊರಟುಬಿಡಿ, ಆಮೇಲೆ ಯೂ ಆರ್ ಡಿಫೆರೆಂಟ್..ಅಂತ ಕರೆಗಳು.. 
ಒಂದು ಬಿಸ್ಕಿಟ್ ಪ್ಯಾಕೇಟಲ್ಲೂ ಚೌಕುಳಿಯ ನಡುವೆ ಹಸುರು ಬಿಂದು ಮುದ್ರೆ ಕಾಣಿಸುತ್ತಿರುವುದು ಈ ಜಾಗತಿಕ ನೋಟವಾದ ವೆಜ್ಜಿಸಂ ಕಾರಣಕ್ಕೇ.
ಮಾಂಸ ಏನು ಅಗ್ಗ ಅಲ್ಲವಂತೆ.
ಒಂದು ಕಿಲೋ ಚಿಕನ್ ನಿಮ್ಮ ಮನೆಗೆ ಬರಬೇಕಾದರೆ ಅದಕ್ಕೆ ಹತ್ತು ಕಿಲೋ ಧಾನ್ಯ ಖರ್ಚಾಗಿದೆ ಎಂದರ್ಥ. ಅದೇ ನಿಮ್ಮ ಬಾಡೂಟಕ್ಕೆ ಒಂದು ಕಿಲೋ ಮಟನ್ ತಂದರೆ, ಅಷ್ಟೂ ಮಟನ್ ನೂರು ಕಿಲೋ ಧಾನ್ಯ ಮುಕ್ಕಿ ತಯಾರಾಗಿರುತ್ತದೆ.
ಕೃಷಿ ಅಂಕಿ ಅಂಶ ಇಲಾಖಾ ವರದಿ ಪ್ರಕಾರ ಒಂದು ಹೆಕ್ಟೇರು ಪ್ರದೇಶದಲ್ಲಿ ಇಪ್ಪತ್ತು ಸಾವಿರ ಕಿಲೋ ಬಟಾಟೆ ಬೆಳೆಯಬಹುದು. ಅದೇ ಜಾಗದಲ್ಲಿ ಹುಲ್ಲು ಬೆಳೆಸಿ ಆಡು, ಕುರಿಗಳಿಗೆ ತಿನ್ನಿಸಿದರೆ ೫೦ ಕಿಲೋ ಮಾಂಸ ಸಿಗುತ್ತದೆ.
ಒಂದು ಸಾವಿರ ಹೆಕ್ಟೇರ್ ಸೋಯಾ ಬೆಳೆದರೆ ೧೧೨೪ ಕಿಲೋ ಪ್ರೋಟೀನ್ ಸಿಗುತ್ತದೆ. ಅದೇ ಭತ್ತ ಬೆಳೆದರೆ ೯೩೮ ಕಿಲೋ ಪ್ರೋಟೀನ್ ಉತ್ಪಾದನೆ ಆದಂತಾಯಿತು. ಜೋಳ ಹಾಕಿದರೆ ೧೦೪೩ ಕಿಲೋ ಪ್ರೋಟೀನ್ ಲಭ್ಯ.
ಇಷ್ಟನ್ನೆಲ್ಲಾ ಸೇರಿಸಿ ಕೋಣಗಳಿಗೆ ತಿನ್ನಿಸಿ ಆಮೇಲೆ ಆ ಕೋಣವನ್ನು ಸಿಗಿದರೆ ಸಿಗೋದು ೬೦ ಕಿಲೋ ಪ್ರೋಟೀನ್ ಮಾತ್ರ ಎನ್ನುತ್ತದೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿ.
ಬ್ರಿಟನ್‌ನಿಂದ ಬಂದಿರೋ "ವೆಜ್ಜಿಸಂ' ವರದಿ ನೋಡಿ. ಅಲ್ಲಿ ಹೇಳಿಕೇಳಿ ೭೦-೮೦ ಮಿಲಿಯ ಜನ. ಅಲ್ಲಿ ಶೇ.೯೦ ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಹಾಕೋದು ಜಾನುವಾರುಗಳಿಗೆ. ಏಕೆಂದರೆ ಜಾನುವಾರು ಕೊಬ್ಬಿ ಮಾಂಸ ಉತ್ಪಾದನೆ ಮಾಡಬೇಕು. ಕೃಷಿ ಭೂಮಿಯಲ್ಲಿ ಬೆಳೆದದ್ದನ್ನು ಜನ ತಿಂದರೆ ೨೫೦ ಮಿಲಿಯ ಜನರಿಗೆ ಬಿರಿಯುವಷ್ಟು ತಿಂದು ತೇಗಬಹುದು.
ಇನ್ನು ಅಮೆರಿಕಾದ ಕತೆ. ಅಲ್ಲಿ ಜೋಳ ಬೆಳೆದು, ತಿನ್ನೋದು ಜನರಲ್ಲ, ದನಗಳು. ಬೀಫ್ ಮಾರುಕಟ್ಟೆಗೆ ಅವರು ಕೊಡುವ ಜೋಳ ಜಾಗತಿಕ ಮಾರುಕಟ್ಟೆಗೆ ಬಂದರೆ ಜೋಳ ಧಾರಣೆ ಈಗಿರುವ ಅರ್ಧಕ್ಕೆ ಇಳಿಯಬಹುದು. ಇನ್ನು ದಕ್ಷಿಣ ಅಮೆರಿಕೆಯ ನಿತ್ಯ ಹರಿದ್ವರ್ಣ ಕಾಡುಗಳು ಬೀಫ್‌ಗಾಗಿ ಆಹಾರ ಬೆಳೆಸಲು ನಾಶವಾಗುತ್ತಿವೆ. ದಿನಾ ಮಾಂಸ ತಿನ್ನುವವರಿಂದಾಗಿ ಭಾರತದಲ್ಲಿ ಇಪ್ಪತ್ತು ಮಿಲಿಯ ಹೆಕ್ಟೇರ್ ಭೂಮಿಯಲ್ಲಿ ಬೆಳೆದ ಧಾನ್ಯ ಪೋಲಾಗುತ್ತಿದೆ.
 ಈಗಿರುವ ಮಾಂಸ ಉತ್ಪಾದನೆಯಲ್ಲಿ ಶೇ.೧೦ರಷ್ಟು ಕುಸಿತವಾದರೆ ಸಾಕು, ೬೦ ಮಿಲಿಯ ಜನರಿಗೆ ಬೇಕಾದಷ್ಟು ಬೇಳೆ ಕಾಳು ತರಕಾರಿ ನೀಡಬಹುದು ಎನ್ನುತ್ತಾರೆ ವಿeನಿಗಳು.
ನಿಮಗೆ ಗೊತ್ತಾ? ಈ ಭಾರತದಲ್ಲಿ ಇಷ್ಟೊಂದು ಜನ ಇದ್ದರೂ ಹಸಿವಿನ ತಾಂಡವ ಏಕಿಲ್ಲ ಎಂದರೆ ಅದಕ್ಕೆ ಕಾರಣ ನಾವು ವೆಜ್‌ಗಳಾಗಿರೋದೇ. ಒಂದು ವೇಳೆ ಭಾರತೀಯರೆಲ್ಲಾ ಮಾಂಸ ಮುಕ್ಕಲು ಶುರು ಮಾಡಿದರೆ, ಈ ಭೂಗ್ರಹದಲ್ಲಿ ಬೆಳೆದದ್ದು ಏನೇನೂ ಸಾಲದು.
ಇಷ್ಟಕ್ಕೂ ಜೀವನದ ಯಶಸ್ಸಿನ ಗುಟ್ಟು ಇರೋದು ಸಸ್ಯಾಹಾರದಲ್ಲೇ. ಪ್ರಾಣಿಜನ್ಯ ಪ್ರೋಟೀನ್ ಸೇವಿಸುವವರಲ್ಲಿ ಐಕ್ಯೂ ಕೊರತೆ ಢಾಳಾಗಿ ಕಾಣುತ್ತದೆ ಎನ್ನುತ್ತದೆ ಮಾಂಸ ತಿಂದ ವಿeನಿಗಳೇ ಕೊಟ್ಟ ವರದಿ.
ಇಷ್ಟೆಲ್ಲಾ ಈಗ ಗೊತ್ತಾಗುತ್ತಿದೆ ಎಂದಲ್ಲ.ಎಂದೋ ಗೊತ್ತೇ ಇದೆ,
ಆದರೆ ತಿನ್ನುವಾಗ ಯಾವುದೂ ನೆನಪಾಗುವುದಿಲ್ಲ!

20081021

ಸಾಯಬಾರದು ಎಂದುಕೊಂಡ ರಾಜನ ಕತೆಒಬ್ಬ ರಾಜ. ಅವನ ಹೆಸರು ಏನೋ ಇದೆ.ಇಲ್ಲಿ ಅದರ ಅಗತ್ಯವಿಲ್ಲ. ಅವನಿಗೆ ಮಕ್ಕಳಿಲ್ಲ ಎಂಬ ಚಿಂತೆ ಇಲ್ಲ.ಏಕೆಂದರೆ ಅವನಿಗೆ ತುಂಬಾ ಮಕ್ಕಳಿದ್ದರು. ದೇಶ, ಕೋಶಗಳ ಬಗ್ಗೆ ಚಿಂತೆಯೂ ಇರಲಿಲ್ಲ. ಅವನೊಬ್ಬ ಅಜೇಯ.ಅವನು ಶಕ್ತಿಶಾಲಿ.
ಆದರೆ ಅವನಿಗೆ ಇದ್ದಕ್ಕಿದ್ದಂತೆ ಒಂದು ಭಯ ಆವರಿಸಿಬಿಟ್ಟಿತು. ನಮಗೂ ಆಗುವಂಥದ್ದೇ.ಅದೇನೆಂದರೆ ಸಾವು. ಸಾವಿನ ಭಯ.ಸಾಯುತ್ತೇನಲ್ಲಾ ಎಂಬ ಹೆದರಿಕೆ.ವಯಸ್ಸಾಗುತ್ತದಲ್ಲಾ ಎಂಬ ದುಃಖ.ದಿನೇ ದಿನೇ ವಯಸ್ಸಾಗುತ್ತದೆ. ಆಮೇಲೆ ಮುದುಕನಾಗುತ್ತೇನೆ ಆಮೇಲೆ ಕಾಯಿಲೆ ಬೀಳುತ್ತೇನೆ..ಕಾಯಿಲೆ ಬೀಳದಿದ್ದರೂ ಸಾಯುವುದಂತೂ ಖಂಡಿತ.
ರಾಜ ಆಸ್ಥಾನಪಂಡಿತರ ಸಭೆ ಕರೆದ.ದೀರ್ಘಕಾಲ ಎಂದರೆ ಎಷ್ಟು ವರ್ಷ ಬದುಕಬಹುದು ಎಂದ.ನೂರಾಇಪ್ಪತ್ತು ಎಂದರು ಪಂಡಿತರು.
ರಾಜ ತನ್ನ ವಯಸ್ಸು ಎಷ್ಟೆಂದು ಕೇಳಿದ.
ಐವತ್ತು ಎಂದರು ಮಂತ್ರಿಗಳು.
ಹಾಗಾದರೆ ತಾನು ಇನ್ನು ಅಬ್ಬಬ್ಬಾ ಎಂದರೂ ಎಪ್ಪತ್ತು ವರ್ಷ ಮಾತ್ರಾ ಬದುಕುವುದುಂಟು ಎಂದು ರಾಜ ಚಿಂತಾಕ್ರಾಂತನಾದ.
ಸಾವೇ ಬರಬಾರದು.. ಎಂದು ಹೇಳಿದ.
ಅಂಥದ್ದೊಂದು ಔಷಧ ಬೇಕು. ಇಡೀ ರಾಜ್ಯದಲ್ಲಿ ಡಂಗುರ ಸಾರಿರಿ. ರಾಜನಿಗೆ ಸಾವೇ ಇರದಂಥ ಔಷಧ ತಂದು ಕೊಟ್ಟವರಿಗೆ ಅರ್ಧರಾಜ್ಯ ಕೊಡಲಾಗುವುದು ಎಂದು ಹೇಳಿರಿ ಎಂದ.
ರಾಜಾಜ್ಞೆ. 
ಹಾಗೇ ಮಾಡಲಾಯಿತು.
ಎಂಥೆಂತ ವೈದ್ಯರು ಸಾಲುಗಟ್ಟಿ ಬಂದರು.ಔಷಧ ಇದೆ ಎಂದರು.ಅದನ್ನು ರಾಜ್ಯದ ಮೂಲೆಮೂಲೆಗಳಿಂದ ಹೊತ್ತು ತಂದ ಇನ್ನೇನು ಸಾಯುತ್ತಾರೆ ಎಂಬ ಹಾಗಿದ್ದ ಮುದುಕರು,ರೋಗಿಗಳಿಗೆ ನೀಡಿ ಪ್ರಯೋಗಿಸಲಾಯಿತು.
ಪ್ರಯೋಜನವಾಗಲಿಲ್ಲ.
ಸುಳ್ಳು ಔಷಧ ತಂದರೆ ತಲೆ ಕತ್ತರಿಸಲಾಗುವುದು ಎಂದು ರಾಜ ಘೋಷಿಸಿದ.
ಆಮೇಲೆ ಯಾರೂ ಔಷಧ ತರೋ ದುಸ್ಸಾಹಸ ಮಾಡಲಿಲ್ಲ.
ಹೀಗಿದ್ದಾಗ ಒಬ್ಬ ಪಂಡಿತ ಆಸ್ಥಾನ ಪ್ರವೇಶಿಸಿದ.
ಸಾವೇ ಬಾರದ ಔಷಧಿ ತನ್ನ ಬಳಿ ಇದೆ ಎಂದ.
ತಲೆದಂಡ ಗೊತ್ತಲ್ಲಾ ಎಂದ ರಾಜ
ಹೌದು ಮಹಾ ಪ್ರಭೂ..ಗೊತ್ತಿದೆ.ಎಂದ ಆ ಪಂಡಿತನ ಮಾತಿನಲ್ಲಿ ಅದ್ಯಾವುದೋ ಗತ್ತು ಘನಸ್ತಿಕೆಯನ್ನು ರಾಜಸಭೆಯೇ ಕಂಡಿತು.
ಎಲ್ಲಿದೆ ನಿನ್ನ ಔಷಧ ಎಂದು ಕೇಳಿದ ರಜ.
ಒಂದು ಪಾತ್ರೆಯನ್ನು ಜೋಳಿಗೆಯಿಂದ ಹೊರತೆಗೆದ ಪಂಡಿತ.
ಅದರಲ್ಲಿ ಇದದ್ದ್ದು ಎಣ್ಣೆ.
ಮಹಾರಾಜಾ ಈ ಎಣ್ಣೆಯನ್ನು ದಿನವೂ ರಾತ್ರಿ ಹಾಸಿಗೆಯಲ್ಲಿ ಮಲಗುವ ಮುನ್ನ ತಲೆಗೆ ಹಚ್ಚಿಕೊಳ್ಳಿ ಅಷ್ಟು ಸಾಕು.ಈ ಪಾತ್ರೆಯಲ್ಲಿ ಎಣ್ಣೆ ಮುಗಿದ ಮೇಲೆ ನಿಮಗೆ ಚಿರಂಜೀವಿತ್ವ ಖಚಿತ ಎಂದ ಪಂಡಿತ.
ರಾಜನಿಗೆ ಅಚ್ಚರಿ.
ಹೌದೇ.. ಎಂದಿತು ರಾಜಸಭೆ.
ಆದರೆ..ಎಂದ ಪಂಡಿತ,
ಆದರೆ? ಏನು ಆದರೆ..?ಇಡೀ ಸಭೆ ಕೇಳಿತು.
ಮಹಾರಾಜಾ ನಾನು ನೀಡಿರುವ ಈ ತೈಲವನ್ನು ತಾವು ತಲೆಗೆ ಹಚ್ಚಿಕೊಳ್ಳುವ ಹೊತ್ತಿನಲ್ಲಿ ತಮಗೆ ಕೋತಿಯ ನೆನಪಾಗಬಾರದು..ಕೋತಿಯ ನೆನಪು ಏನಾದರೂ ಬಂದರೆ ಈ ತೈಲ ಪ್ರಯೋಜನ ನೀಡಲಾರದು..ಎಂದ ಪಂಡಿತ.
ಅಷ್ಟೇ ತಾನೇ ..ಎಂದ ರಾಜ.
ಪಂಡಿತನನ್ನು ಅರಮನೆಯ ಅತಿಥಿಗೃಹದಲ್ಲಿ ರಾಜೋಪಚಾರಗಳೊಂದಿಗೆ ಉಪಚರಿಸುವಂತೆ ರಾಜ ಆದೇಶಿಸಿದ.
ರಾತ್ರಿಯಾಯಿತು.
ರಾಜ ಶಯ್ಯಾಗೃಹಕ್ಕೆ ಬಂದ.
ಎಣ್ಣೆ ಪಾತ್ರೆ ಎತ್ತಿಕೊಂಡ.
ಕೋತಿಯ ನೆನಪಾಗಬಾರದು ಎಂದು ಪಂಡಿತ ಹೇಳಿದ್ದು ನೆನಪಾಯಿತು.
ಝುಂ ಎಂದಿತು ಮನಸ್ಸು.
ಮರುದಿನವೂ ರಾತ್ರಿ ಹಾಸುಗೆಗೆ ಹೋಗಲು ಅನುವಾದಗಲೂ ಎಣ್ಣೆ ಕೈಗೆ ಹಾಕಿಕೊಳ್ಳಬೇಕೆಂಬಷ್ಟರಲ್ಲೇ ಮತ್ತೆ ಕೋತಿಯ ನೆನಪು..
ಮೂರನೇ ದಿನವೂ ಅದೇ ಕೋತಿಯ ನೆನಪು.
ಯಾವಾಗ ಎಣ್ಣೇ ತಲೆಗೆ ಹಚ್ಚಿಕೊಳ್ಳಬೇಕು ಎಂದು ಪಾತ್ರೆ ಎತ್ತಿದನೋ ಕೋತಿಯ ನೆನಪು ಬಂದೇಬರತೊಡಗಿತು.
ಆಮೇಲೆ ಆ ರಾಜ ಆ ದಿವ್ಯೌಷಧಿಯನ್ನು ಎಂದೂ ತಲೆಗೆ ಹಚ್ಚಿಕೊಳ್ಳಲು ಆಗಲೇ ಇಲ್ಲ.
ಪ್ರತೀ ಬಾರಿಯೂ ಆ ಕೋತಿಯ ನೆನಪು ಅವನನ್ನು ಬಿಡಲೇ ಇಲ್ಲ.

(ಈ ಕತೆ ನಾನು ಎಲ್ಲೋ ಕೇಳಿದ್ದು.ಯಾರೋ ಹೇಳಿದ್ದು.ಈ ವರ್ತಮಾನಕ್ಕೆ ಈ ಕತೆ ತುಂಬಾ ಹೊಂದಿಕೊಳ್ಳುತ್ತಿದೆ.ಅದಕ್ಕೆ ನಿಮಗೂ ಹೇಳಿದ್ದೇನೆ)


20081017

ಅಂತೆಕಂತೆಹಕ್ಕಿಯಷ್ಟು  ಎತ್ತರ 
ನಾನು 
ಎಂದೂ ಏರಿಲ್ಲ
ಅದಕ್ಕೆ ಭೂಮಿ ನನಗೆ ಈಗಲೂ ತುಂಬಾ ದೊಡ್ಡದು,
ಹಕ್ಕಿ ಚಿಕ್ಕದು.
ಚಿರತೆಯಷ್ಟು ವೇಗವಾಗಿ
ನಾನು
ಎಂದೂ ಓಡಿಲ್ಲ
ಅದಕ್ಕೆ ಸಾವು ನನಗೆ ಅಂಜಿಕೆ,
ಚಿರತೆ ಎಂದರೆ ಹೆದರಿಕೆ.
ಹೂವಿನಂತೆ 
ನಾನು 
ಎಂದೂ ಅರಳಿಲ್ಲ,
ನಿನ್ನೆ ಮೊಗ್ಗಾಗಿ
ಇಂದು ಹೂವಾಗಿ
ಅದಕ್ಕೆ ಹೂವು ನನಗೆ
ಅಚ್ಚರಿ
ಅವಳಂತೆ ನಾನು ಎಂದೂ 
ಈ ತನಕ 
ಪ್ರೀತಿಸಿಲ್ಲ
ಅದಕ್ಕೇ ಅವಳು
ನನಗೆ ಹಕ್ಕಿಯಂತೆ,ಚಿರತೆಯಂತೆ 
ಮತ್ತು 
ಹೂವಿನಂತೆ..

20081006

ಒಬ್ಬಳೇ...ಏಳು ಮಲ್ಲಿಗೆ ತೂಕದ 
ರಾಜಕುವರಿ..
ಏಳು ಕೋಟೆಯಾಚೆ
ಏಳು ನದಿಗಳಾಚೆ
ಏಳು ಬೆಟ್ಟಗಳಾಚೆ..
ಅವನಿಗೆ ಮಾತ್ರಾ ಗೊತ್ತಿದೆ
ಅವಳು ಏಳು ಮಲ್ಲಿಗೆಯ ಘಮ
ಅವಳು ಏಳು ಬೆಟ್ಟಗಳ ಪ್ರೀತಿ
ಅವಳು ಏಳು ನದಿಗಳ ಆತುರ
ಅವಳು ಏಳು ಕೋಟೆಗಳ ಬೆಚ್ಚನೆ
ನದಿಗಳು ಮಳೆಯನ್ನು ನುಂಗುವವು
ಬೆಟ್ಟಗಳು ಗಾಳಿಯನ್ನು ತಡೆಯುವವು
ಕೋಟೆಗಳು ಛಳಿಯನ್ನು ಕದಿಯುವವು
ಅವನು ಎಂದು ಬರುವನೋ
ಕಾಯಬೇಕು
ಅವಳು ಮತ್ತು
ನದಿ ಬೆಟ್ಟ ಕೋಟೆ ಎಲ್ಲವೂ 

20081003

ಮಿಸ್ಸಿಂಗ್ಅವನ ಮೇಲೆ
ಈ ಹೊತ್ತಿಗೇ 
ಅದೆಂತು
ಹೆಚ್ಚಿದೆ
ಈ ಪ್ರೇಮ%&&?
ಆಷಾಢದ ಮಳೆಯಂತೆ
ಮಾಗಿಯ ಚಳಿಯಂತೆ
ವೈಶಾಖದ ಹಗಲಿನಂತೆ..!
ಈ ಹೊತ್ತಿಗೆ 
ಅವನಿಗಾಗಿ ಹಂಬಲಿಸಬೇಕು
ಒಳಗೆ ಇದ್ದವನನ್ನು
ಕಳುಹಬೇಕು
ಆಕೆ?
ಒಲಿದ ಜೀವ
ಒಳಗಿನ ಜೀವ
ಎರಡಕ್ಕೂ 
ಮೀರಿದ ಆತ್ಮ
ನಿತ್ಯವೂ ಧ್ಯಾನ
ಪಕ್ಕದಲ್ಲಿ ಪುಟ್ಟ ಮಗುವಿನ
ಮಾತು
ಅರ್ಥವಾಗದಿದ್ದರೂ
ನೀಡುತ್ತಾಳೆ ಒಪ್ಪಿಗೆ
ನಗರದಲ್ಲೆಲ್ಲೋ
ಯಾರೋ ಇಟ್ಟ ಬಾಂಬು
ಕಳೆದು ಹೋಗಲಿರಲಿಕ್ಕಿಲ್ಲ
ಅವನು
ಸಂಜೆ ಹೊತ್ತಿಗೆ ಬರಬೇಕಾದ ಕರೆ
ಈ ಮಾರ್ಗ ತುಂಬಾ ಕಾರ್ಯನಿರತವಾಗಿವೆ
ಅವರು ಕರೆಯುತ್ತಿರುವ ಜೀವಗಳು
ಮಾರ್ಗ ಬಿಟ್ಟು ತೆರಳಿವೆ..

20080926

ಬಡಾ ಆದ್ಮಿ
ಮದುವೆಯಾಗುವಾಗ ಗಂಡೇ ಏಕೆ ದೊಡ್ಡವನಾಗಿರಬೇಕು? 
ಗೊತ್ತಿದ್ದರೆ ಯಾರಾದರೂ ಹೇಳುತ್ತೀರಾ?
ಯಾವ ದೇಶದಲ್ಲೂ ಇನ್ಯಾವುದೇ ಕೋಶದಲ್ಲೂ ಮತ್ಯಾವುದೇ ಕಾಲದಲ್ಲೂ ಎಲ್ಲಾ ಜನಾಂಗಗಳಲ್ಲೂ ಎಲ್ಲಾ ಬಗೆಯ ಮದುವೆಗಳಲ್ಲೂ ಗಂಡೇ ದೊಡ್ಡವನು.ಹೆಣ್ಣು ಅವನಿಗಿಂತ ಕಿರಿಯಳು
ಗಾತ್ರದಲ್ಲೂ ವಯಸ್ಸಲ್ಲೂ.
ಇದು ಎಂತಕೆ ಹೀಗಾಗುತ್ತದೆ?
ಹೋ ತೋ ಬಿಗ್ ಹೋ ಜಾಯೇ?!
ಹೀಗಿರಬಹುದೇ?
ಗಂಡು ಎಷ್ಟಾದರೂ ದುಡಿಯಬೇಕು. ದುಡಿದೂ ದುಡಿದೂ ಜೀವ ತೇಯಬೇಕು. ಪಾಪ ಸಾವಿರಾರು ವ್ಯವಹಾರ ಓಡಾಟ ತಲೆಹರಟೆಗಳ ನಡುವೆ ಅದು ಹೈರಾಣವಾಗಬೇಕು. ಇಷ್ಟೆಲ್ಲಾ ಆದಾಗ ಅದಕ್ಕೆ ಮುಪ್ಪು ಬೇಗನೇ ಅಡರುತ್ತದೆ. ವಯಸ್ಸಾದಾಗ ಮಕ್ಕಳು ನೋಡುತ್ತಾರೆ ಅಂತ ಏನು ಗ್ಯಾರಂಟಿ? 
ಹಾಗಿದ್ದಾಗ ಸ್ವಲ್ಪ ಎಳೆ ಪ್ರಾಯದ ಹೆಂಡತಿಯಾದರೆ ಆ ಕಷ್ಟದ ದಿನಗಳಲ್ಲಿ ಸಲಹಬಹುದು ಸೇವಾ ಮಾಡಬಹುದು. ಅವಳು ಗಟ್ಟಿಮುಟ್ಟಾಗಿರಬೇಕಾದರೆ ಗಂಡನ ಸೇವೆ ಮಾಡಬೇಕಾದರೆ ಆಕೆಗೆ ಅವನಿಗಿಂತ ಪ್ರಾಯ ಕಡಿಮೆ ಇರಬೇಕು ಮಿನಿಮಮ್ ಏಳು ವರ್ಷ?!
ಹೀಗಿರಬಹುದೇ?
ಹೆಣ್ಣು ಅಂದರೆ (ಹಿಂದೆಲ್ಲಾ) ನಾಚಿಕೆ ಸ್ವಭಾವ. ಮುಗುದೆ. ಪಾಪ ಏನೂ ಅರಿಯಳು. ಇಂಥ ಹುಡುಗಿಯನ್ನು ಅರಳಿಸಲು ಹೆಚ್ಚು ವಯಸ್ಸಿನ ಗಂಡೇ ಆಗಬೇಕು. ಆಗ ಮಾತ್ರಾ ಅತನಿಗೆ ಮುದ್ದಾಡುವ, ಗುದ್ದಾಡುವ ಪಾಠ ಹೇಳಿಕೊಡಲು ಗೊತ್ತು. ಶೃಂಗಾರಕಾವ್ಯ ಬರೆಯಲು ಗೊತ್ತು.ಸಂಸಾರ ಎಂದರೆ ಹಾಗೇ ತಾನೇ.ಕಲಿಸಬೇಕು ಕಲಿಯಬೇಕು?!
ಹೀಗಿರಬಹುದೇ?
ಮಿಲನಮಹೋತ್ಸವದಲ್ಲಿ ಗಂಡು ದೊಡ್ಡವನಾಗಿದ್ದರೆ ಹೆಣ್ಣಿಗೆ ಸುಖ.ಹೆಣ್ಣು ಚಿಕ್ಕವಳಾಗಿದ್ದರೆ ಗಂಡಿಗೆ ಹಿತ.ಎಷ್ಟಾದರೂ ಯುದ್ಧದಲ್ಲಿ ಸೋಲುವ ತವಕ ಹೆಣ್ಣಿನದ್ದು, ಯುದ್ಧ ಗೆದ್ದ ತೃಪ್ತಿ ಗಂಡಿನದ್ದೇ.ಮೇಲ್ ಯಾವತ್ತೂ ಮೇಲೆಯೇ.?!
 ಹೀಗಿರಬಹುದೇ?

ಹೆಣ್ಣು ಅಂದರೆ ಪಾಪಚ್ಚಿ. ಅವಳಿಗೆ ಭದ್ರತೆ ಬೇಕು. ಅದನ್ನು ಗಂಡಿನಿಂದ ಮಾತ್ರ ಆಕೆ ಪಡೆಯಬಹುದು. ಸ್ಟ್ರಾಂಗ್ ಹಸ್ಬೆಂಡ್ ಜೊತೆಗಿದ್ದರೆ ಸೇಫ್..
ಹೀಗಿರಬಹುದೇ?
ಮನೆ ಹೊಲ ಗದ್ದೆ ವ್ಯಾಪಾರ ವಹಿವಾಟು ಮುಂತಾಗಿ ಮಾಡಬೇಕಾದರೆ ಗಂಡು ದೊಡ್ಡವನಾಗಿದ್ದಾಗಲೇ ಸಾಧ್ಯ. ಈ ಹೆಣ್ಣು ಪಾಪ ತಿಂಗಳ ಕಷ್ಟ, ಬಸಿರು, ಬಾಣಂತನ ಮಕ್ಕಳ ಲಾಲನೆ ಪಾಲನೆ ಅಂತ ನಿತ್ಯವೂ ಪರದಾಟ.ಗಂಡೊಂದು ಬಲಿಷ್ಠವಾಗಿದ್ದರೆ ಸಂಸಾರ ಸುಸೂತ್ರ.
ಇದೆಲ್ಲಾ ಗತಕಾಲದ ರೂಲ್ಸ್. ಈಗ ಇದು ಯಾವುದೂ ನಾಟ್ ಅಪ್ಲಿಕೇಬಲ್.ಸ್ಟಿಲ್ ಈ ಗಂಡು ಮಸ್ಟ್ ಬಿ ಬಿಗ್ ಬೋತ್ ಇನ್ ಏಜ್ ಅಂಡ್ ಸೈಜ್. ಸ್ವಲ್ಪಾನೂ ಛೇಂಜೇ ಆಗಿಲ್ಲ.
ಸಂಪ್ರದಾಯದ ಮದುವೆ ಹಾಳಾಗಿ ಹೋಗಲಿ, ಈವನ್ ಲವ್ ಮ್ಯಾರೇಜುಗಳಲ್ಲೂ ಗಂಡ ಈಸ್ ಬಡಾ ಆದ್ಮಿ..!
ಯಲಾ ಇವನಾ!
ಈ ಬಿಗ್ ಬಾಯ್ ಕಾನ್ಸೆಪ್ಟ್ ವೇದಕಾಲದಲ್ಲಿ ಇರಲಿಲ್ಲ, ತಿಳಿದಿರಲಿ.
ರಾಮಾಯಣ ಕಾಲದಲ್ಲೂ ಯಾರೇ ಬಿಗ್ ಇರಬಹುದಿತ್ತು. ರಾಧೆ ಕನ್ನಯ್ಯನಿಗಿಂತ ಎಂಟು ವರ್ಷ ದೊಡ್ಡವಳಾಗಿದ್ದಳು.(ಆಕೆ ಹೆಂಡತಿಯಲ್ಲ, ಪ್ರೇಯಸಿ)
ಅದು ಯಾವಾಗ ಬಡಾ ಗಂಡ ಛೋಟಾ ಹೆಂಡತಿ ನಿಯಮ ಜ್ಯಾರಿಯಾಯಿತು ಗೊತ್ತಿದ್ದರೆ ತಿಳಿಸಿ.
ನನ್ನ ಪ್ರಕಾರ ಈ ನಿಯಮ ಮೊದಲು ಬಂದದ್ದು ಹಿಂದುಗಳಲ್ಲಿ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಹಿತ ಎಲ್ಲಾ ಕಮ್ಯೂನಿಟಿ ಅದನ್ನು ಫಾಲೋ ಮಾಡಿದೆ..
ಬಡೇ ಬಡೇ ವಿಚಾರ್..!20080924

ನದಿ ಮಾತನಾಡಲಿಲ್ಲ
ಕುಮಾರಧಾರೆಗೆ ಸೇತುವೆ ಇಲ್ಲ ಎಂಬ ವಿಚಾರ ಊರಿನ ಜನರಿಗೆ ಬೇಸರ ತರಿಸಿದ್ದು ಮೋನಪ್ಪನ ಭಾಷಣ ಕೇಳಿದಮೇಲೆಯೇ.
ಏನೇ ಹೇಳಿ ನಮ್ಮ ಊರಿಗೆ ಇನ್ನೂ ನಾವು ದೋಣಿ ಹಿಡಿದೇ ಬರುವುದು ಎಂದರೆ ಅದು ತುಂಬಾ ವಿಷಾದ ಸಂಗತಿ ಚಂದ್ರಲೋಕಕ್ಕೆ ಹೋಗುತ್ತಾರಂತೆ ಆದರೆ ನಮ್ಮೂರಿಗೆ ಒ0ದು ಸೇತುವೆ ಮಾಡಿಲ್ಲ ಎಂದು ಮೋನಪ್ಪ ಥೇಟ್ ಕಮ್ನಿಸ್ಟರ ಥರ ಹೇಳಿ ಊರವರನ್ನು ಬೆಚ್ಚಿಬೀಳಿಸಿದ ಮರುದಿನವೇ ಎಮ್ಮೆಲ್ಲೆ ಆಫೀಸಿಗೆ ಹತ್ತು ಸಮಸ್ತರು ಹೋಗಿ ಅರ್ಜಿ ಕೊಟ್ಟದ್ದು.
ನಮಗೆ ಸೇತುವೆ ಬೇಕು ಎಂದು ಅವರು ಅರ್ಜಿಯಲ್ಲಿ ಕೇಳಿಕೊಂಡಿದ್ದರು.
ಕೊಡೋಣ, ಏನಂತೆ ಈ ಸಾರೆ ಮಲ್ನಾಡು ಅಭಿವೃದ್ಧಿ ಯೋಜನೆಯಲ್ಲಿ ಅದನ್ನು ಹಾಕಿಸುತ್ತೇನೆ.
ಆದರೆ ಎಂಥಾ ಸೇತುವೆ ಹಾಕೋಣ?ತೂಗು ಸೇತುವೆಯಾ, ಸಿಂಗಲ್ ಸೇತುವೆಯಾ ಅಥವಾ ಲಾರಿ ಬಸ್ಸು ಬರುವಂಥದ್ದಾ ಎಂದು ಎಮ್ಮೆಲ್ಲೆ ಕೇಳಿದಾಗ ಹತ್ತುಸಮಸ್ತರು ಸ್ವಲ್ಪ ಮಟ್ಟಿಗೆ ಕನ್ಫ್ಯೂಸ್ ಆಗಿಹೋದರು.
ಅದನ್ನು ನಿಧಾನಕ್ಕೆ ಹೇಳುತ್ತೇವೆ ಸಾರ್.. ಆದರೆ ಸೇತುವೆಯಂತೂ ಬೇಕೇ ಬೇಕು. ತಾವು ಅದನ್ನು ಪಾಸ್ ಮಾಡಿಸಿ. ಆಮೇಲೆ ಕಟ್ಟುವ ಹೊತ್ತಿಗೆ ಯಾವ ಸೇತುವೆ ಅಂತ ವಿಚಾರ ಮಾಡೋಣ ಎಂದು ಹತ್ತು ಸಮಸ್ತರು ಅರಿಕೆ ಮಾಡಿಕೊಂಡಾಗ ಎಮ್ಮೆಲ್ಲೆ ಆಫೀಸಿನಲ್ಲಿ ಬಿಡಾರ ಹೂಡಿದ್ದ ಪೇಟೆ ಹುಡುಗರು ಈ ಹತ್ತು ಸಮಸ್ತರು ಬರೀ ಪೆಂಗಗಳೇ ಎಂದು ವಿಚಾರಮಾಡಿದರು.
ಆಮೇಲೆ ಊರಲ್ಲಿ ಹತ್ತುಸಮಸ್ತರು ಸೇತುವೆ ಸಂಬಂಧ ಒಂದು ಸಭೆ ಕರೆದರು.ತೂಗು ಸೇತುವೆ ಮಾಡಿದರೆ ವಾಹನಗಳು ಬರಲಿಕ್ಕಿಲ್ಲ.ವಾಹನಗಳು ಬಾರದಿದ್ದರೆ ಸೇತುವೆ ಮಾಡಿಯೂ ಪ್ರಯೋಜನವಿಲ್ಲ ಎಂದು ಯುವಕರು ಹೇಳಿದರು.
ಹೌದೌದು ಇಷ್ಟು ಕಾಲ ಸೇತುವೆ ಇಲ್ಲದೇ ನಾವು ಬದುಕಿಲ್ಲ. ತೂಗು ಸೇತುವೆ ಧಾರಾಳ ಸಾಕು.ಸುಮ್ಮನೇ ದೊಡ್ಡ ಸೇತುವೆ ಮಾಡಿದರೆ ಯುವಕರೇನು, ಮುದುಕರೂ ಹಾಳಾಗುವುದೇ ಎಂದು ಅರೆಮುದುಕರು ಹೇಳಿದರು.
ಸೇತುವೆಯಂತೆ ಸೇತುವೆ ಎಂಥಾ ಖರ್ಮಕ್ಕೆ ಸೇತುವೆ..ಕುಂಜೀರನ ದೋಣಿಯುಂಟು ಅವನೂ ಉಂಟು. ನಡುರಾತ್ರಿ ಕರೆದಾಗಲೂ ಆತ ಬರುವುದುಂಟು.ಬೇಕಾದ್ದು ಮಳೆಗಾಲ ನಾಲ್ಕು ತಿಂಗಳು.. ಆಮೇಲೆ ಹೊಳೆದಾಟುವುದಕ್ಕೆ ಏನಾಗುತ್ತದೆ ಎಂದರು ಮುದುಕರು.
ಇಷ್ಟರ ತನಕ ನಮ್ಮ ಹಳ್ಳಿಯಲ್ಲಿ ನಾವೇ ಇದ್ದದ್ದು.. ದೊಡ್ಡ ಸೇತುವೆ ಮಾಡಿದರೆ ಇನ್ನು ಯಾರ್‍ಯಾರೋ ಬರುತ್ತಾರೆ.. ಕಳ್ಳರೂ ಬಂದು ಸೇರಬಹುದು.. ಹೊಳೆ ಆಚೆಗೆ ನೆತ್ತರುಮುಜಲಿ ಉಂಟು. ಮಹಾ ವಿಷಕಾರಿ. ಸೇತುವೆ ಹಾಕಿದರೆ ಅದೂ ಇತ್ಲಾಗಿ ಬಂದು ಸೇರಿಕೊಂಡರೆ ಮತ್ತೆ ಅದರ ಸಂತಾನ ಅಳಿಸಲಿಕ್ಕೆ ಸಾಧ್ಯವಿಲ್ಲ ಎಂದು ಉಳಿದವರು ಹೇಳಿದರು.
ಆ ಸಭೆಯಲ್ಲಿ ಹೆಣ್ಮಕ್ಕಳು ಪಾಲ್ಗೊಂಡಿರಲಿಲ್ಲ. ಆದರೆ ಸೇತುವೆ ವಿಚಾರದಲ್ಲಿ ಅವರಿಗೆಲ್ಲಾ ಗಂಡಸರಿಗಿಂತ ಹೆಚ್ಚು ಆಸಕ್ತಿ ಇತ್ತು.
ಸೇತುವೆ ಆದರೆ ಬಸ್ಸು ಕಾರು ಬರುತ್ತವೆ. ಆಮೇಲೆ ಏನಾದರೂ ನೆಪ ಹಾಕಿ ಪೇಟೆಗೆ ಹೋಗಬಹುದು ಎಂದು ಹುಡುಗಿಯರು ಆಡಿಕೊಂಡರು.
ತಮ್ಮ ಹುಡುಗಿಯರು ಪೇಟೆ ಸಹವಾಸದಿಂದ ಹಾಳಾಗಬಹುದು ಎಂದು ಅಮ್ಮಂದಿರು ಹೆದರಿಕೊಂಡರು.
ದೊಡ್ಡ ಸೇತುವೆಯೇ ಮಾಡಿಸೋಣ. ಏಕೆಂದರೆ ಮುಂದೊಂದು ದಿನ ಅದು ಬೇಕು ಅಂತ ನಮಗಾಗಿಬಿಟ್ಟರೆ ಆಮೇಲೆ ಏನು ಮಾಡೋಣ ಆದ್ದರಿಂದ ದೊಡ್ಡ ಸೇತುವೆಯೇ ಮಾಡಿಸಿದರೆ ರಗಳೆಯೇ ಇಲ್ಲ ಎಂದು ಆ ಸಭೆಯಲ್ಲಿ ತೀರ್ಮಾನಕ್ಕೆ ಬಂದ ಊರಿನ ಹತ್ತು ಸಮಸ್ತರು ಆ ವಿಚಾರವನ್ನು ಅತಿ ಶೀಘ್ರದಲ್ಲೇ ಎಮ್ಮೆಲ್ಲೆಗೆ ತಿಳಿಸುವ ನಿಧಾರ ಕೈಗೊಂಡರು.
++++++++++
ಕುಮಾರಧಾರೆಗೆ ಸೇತುವೆ ಹಾಕುತ್ತಾರೆ ಎಂದು ಗೊತ್ತಾದ ಮೇಲೆ ಗೋಪಾಲ ತುಂಬಾ ದುಃಖಿತನಾಗಿಬಿಟ್ಟ. ಹೊಳೆ ಎಂದ ಮೇಲೆ ಅದಕ್ಕೆ ನಾವು ಒಪ್ಪಿಕೊಳ್ಳಬೇಕು. ಅಣೆಕಟ್ಟು ಸೇತುವೆ ಅಂತ ಮಾಡಿ ಹಾಕಿದರೆ ಹೊಳೆ ಎಂಬುದು ಯಾಕಿರಬೇಕು ಎಂದು ಗೋಪಾಲ ಆ ದಿನ ರಾತ್ರಿ ತನ್ನ ತೋಟದ ದಂಡೆಯಲ್ಲಿ ಕುಳಿತು ಚಿಂತಿಸಿದ. ಕೆಳಗೆ ಕುಮಾರಧಾರೆ ಇದು ಯಾವುದೂ ಗೊತ್ತಿಲ್ಲದಂತೆ ಹರಿಯುತ್ತಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಅದರ ರೀತಿರಿವಾಜು ಏನೋ ಬೇರೆಯೇ ಇದ್ದಂತೆ ಗೋಪಾಲನಿಗೆ ಕಾಣಿಸಿತು.ಸೇತುವೆ ಮಾಡಿದರೆ ಆಮೇಲೆ ಕುಮಾರಧಾರೆಯ ಮೇಲೆ ಯಾರಿಗೂ ಅಕ್ಕರೆ ಉಳಿಯುವುದಿಲ್ಲ, ಭಯವೂ ಇರುವುದಿಲ್ಲ ಎಂದುಕೊಂಡ ಗೋಪಾಲ.
ಚಂದಿರನ ಮೇಲೆ ಎಷ್ಟೊಂದು ಪ್ರೀತಿ ಮಮತೆ ಇತ್ತು ಒಂದು ಕಾಲದಲ್ಲಿ ಭೂಲೋಕದ ಜನತೆಗೆ. ಯಾವಯಾವ ದೇಶಕೋಶಗಳಲ್ಲಿ ನೋಡಿದರೂ ಚಂದಿರನನ್ನು ಆರಾಧಿಸುವ ಪ್ರೀತಿಸುವ ಮೆಚ್ಚುವ ಕಲ್ಪನೆ ನಂಬಿಕೆಗಳಿದ್ದವು. ಚಂದಿರನ ಮೇಲೆ ಈ ತಗಡು ವಿಜ್ಞಾನಿಗಳು ಯಾವಾಗ ಮನುಷ್ಯರನ್ನು ಕಳುಹಿಸಿ ಯಂತ್ರಗಳನ್ನು ಹಾಕಿ ಬೇಡವಾದ ಸಂಶೋಧನೆಗಳನ್ನು ಮಾಡಿಟ್ಟರೋ, ಜನರಿಗೆ ಚಂದಿರನ ನೋಡುವಾಗಲೆಲ್ಲಾ ಯಾವುದೋ ಲ್ಯಾಬ್‌ನಲ್ಲಿ ರಸಾಯನಿಕ ವಸ್ತು ನೋಡಿದ ಹಾಗೇ ಆಗುತ್ತದೆ. ಆ ಪ್ರೀತಿ ಮರುಕಳಿಸಲಾಗದಂತಾಗಿ ತನ್ನಂಥ ಎಳೆಮನಸ್ಸಿನ ಮಂದಿ ಸಂಕಟ ಪಡುವಂತಾಗಿದೆ ಎಂದು ಗೋಪಾಲ ದುಃಖಿಸಿದ.
ಹಾಗೇ ಅಲ್ಲವೇ ಈ ಕುಮಾರಧಾರೆ ಕೂಡಾ. ಸಾವಿರಾರು ವರ್ಷಗಳಿಂದ ಕುಮಾರಧಾರೆಗೆ ಊರು ಮಣಿದಿದೆ. ನಾಳೆ ನದಿ ದಾಟಬೇಕು ಅಂದರೆ ಕುಮಾರಧಾರೆ ಒಪ್ಪಬೇಕು. ಕುಮಾರಧಾರೆ ತುಂಬಿ ಹರಿದಾಗ, ಸೊರಗಿ ಸಣಕಲಾದಾಗ, ಮಂದಗಾಮಿನಿಯಾಗಿ ಕುಣಿದಾಗ, ಸೊಕ್ಕೇ ಸುಪ್ಪತ್ತಿಗೆ ಎಂಬ ಹಾಗೇ ಭೋರ್ಗರೆದಾಗ ಊರೆಲ್ಲಾ ಕುಮಾರಧಾರೆಯನ್ನು ಎಷ್ಟೊಂದು ಗೌರವ, ಸಿಟ್ಟು ,ಪ್ರೀತಿ, ಮೋಹಗಳಿಂದ ನೋಡಿದೆ. ಇನ್ನು ಸೇತುವೆ ಹಾಕಿದರೆ ಮುಂದೆ ಕುಮಾರಧಾರೆಯನ್ನು ಯಾರಾದರೂ ಯಾಕೆ ಲೆಕ್ಕಕ್ಕೆ ಇಡುತ್ತಾರೆ ಎಂದು ಗೋಪಾಲ ಹಳಹಳಿಸಿದ.ಮಳೆಗಾಲದ ಪ್ರವಾಹ, ಬೇಸಗೆಯ ನೀರವತೆಯನ್ನು ಕೇಳುವವರೇ ಇರುವುದಿಲ್ಲ ಎಂದು ಗೋಪಾಲ ಅಪಾರವಾಗಿ ನೊಂದುಕೊಂಡ.

ಅಂತೂ ಕುಮಾರಧಾರೆಗೆ ದೊಡ್ಡ ಸೇತುವೆ ಮಂಜೂರಾಯಿತು. ಎಮ್ಮೆಲ್ಲೆ ತನ್ನ ಮಂತ್ರಿಯ ಜೊತೆಗೆ ಇಂಥಾ ದಿನ ಕೆಸರುಗಲ್ಲು ಹಾಕುವುದಾಗಿ ಊರಿನ ಹತ್ತು ಸಮಸ್ತರಿಗೆ ಹೇಳಿಕಳುಹಿಸಿದ್ದರು. ಊರು ತುಂಬಾ ಕಮಾನು ಕಟ್ಟಬೇಕು ,ಬಣ್ಣದ ಪತಾಕೆ ಹಾರಿಸಬೇಕು ಎಂದೂ ಎಮ್ಮಲ್ಲೆ ಕಡೆಯವರು ಹೇಳಿದ್ದರು. ಕೆಸರುಗಲ್ಲು ಹಾಕುವ ಹೊತ್ತಿಗೇ ಮಾಲೆಪಟಾಕಿ ಸಿಡಿಸಬೇಕು ಎಂದೂ ಹತ್ತು ಸಮಸ್ತರು ನಿರ್ಧರಿದರು.
++++++++++++
ಆ ರಾತ್ರಿಯೇ ಆದದ್ದು ಅನಾಹುತ. ಎಲ್ಲಿತ್ತೊ ಆ ಉಗ್ರ ಮಳೆ. ಘಟ್ಟದ ತಪ್ಪಲಿನಲ್ಲಿ ಆಕಾಶವೇ ತೂತಾಗಿ ಹೋದಂತೆ ಮಳೆ ಬಿದ್ದಿತ್ತಂತೆ. ಹಾಗಾಗಿ ಕುಮಾರಧಾರೆ ರೌದ್ರರೂಪ ತಾಳಿದಂತೆ ಸೊಕ್ಕಿನಿಂದಲೂ ಸೇಡಿನಿಂದಲೂ ಎಂಬಂತೆ ಹರಿಯಿತು. ಕೆಸರುಗಲ್ಲು ಹಾಕಲು ಎಮ್ಮೆಲ್ಲೆ ಮತ್ತು ಮಂತ್ರಿ ಬರುವುದಾದರೂ ಹೇಗೆ ಎಂದು ಹತ್ತುಸಮಸ್ತರು ಕೈಕೈಹಿಸುಕಿಕೊಂಡರು.
ಗೋಪಾಲ ಕುಮಾರಧಾರೆಯ ಅಸಮ್ಮತಿಯನ್ನು ಅರ್ಥಮಾಡಿಕೊಂಡವನಂತೆ ಹೊಳೆ ಬದಿ ಹೋಗಿ ನಿಂತು ವಿಚಿತ್ರವಾಗಿ ಸಂಕಟಪಟ್ಟ.
ಬೆಳಗಾದರೆ ಗೋಪಾಲನೇ ಊರಿಗೆ ಸುದ್ದಿ ತಂದದ್ದು. ಅದೇನೆಂದರೆ ಕುಮಾರಧಾರೆಯೇ ಕಾಣೆಯಾಗಿದೆ ಎಂಬುದು. ಇಷ್ಟು ವರ್ಷ ಇಲ್ಲೇ ಇದ್ದ ಹೊಳೆ ಎಲ್ಲಿ ಹೋಯಿತು ಎಂದು ಜನ ಕಂಗಾಲಾದರು. ಕುಮಾರಧಾರೆ ಮಾತ್ರಾ ಅಲ್ಲಿರಲಿಲ್ಲ.
ಆ ದಿನ ಪೂರ್ತಿ ಟಿವಿ, ರೇಡಿಯೋ, ಪೇಪರುಗಳಲ್ಲಿ ಕುಮಾರಧಾರೆ ತನ್ನ ಪಾತ್ರ ಬದಲಾಯಿಸಿದ ಸುದ್ದಿ ದೊಡ್ಡದಾಗಿತ್ತು.
20080921

ತೈಲಧಾರೆಯಂತೆ ಮನಸು ಕೊಡು.......ಇದು ಭಕ್ತಿಯೋ ಅಥವಾ ಪ್ರೀತಿಯೋ ಅಥವಾ ಭಕ್ತಿ ಪ್ರೀತಿ ಎರಡನ್ನೂ ಮೀರಿದ್ದೋ..
ನನಗೂ ಆಣೆ ರಂಗಾ ನಿನಗೂ ಆಣೆ
ನನಗೂ ನಿನಗೂ ಇಬ್ಬರಿಗೂ ಭಕ್ತರಾಣೆ
ಎನ್ನ ಬಿಟ್ಟು ಅನ್ಯರ ಸಲಹಿದರೆ ನಿನಗೆ ಆಣೆ ರಂಗಾ 
ನಿನ್ನ ಬಿಟ್ಟು ಅನ್ಯರ ಭಜಿಸಿದರೆ ಎನಗೆ ಆಣೆ

ಇದಿಷ್ಟೇ ಸಾಲು ಸಾಕು.
ಯಾರು ಹೇಳಿದ್ದು ಈ ಅನುಬಂಧವನ್ನು!
ದಾಸರೇ ಅಥವಾ ಭಕ್ತನೇ ಅಥವಾ ಆ ರಂಗನನ್ನು ಅದ್ಭುತವಾಗಿ ಪ್ರೀತಿಸುತ್ತಿರೋ ಆ ಹುಡುಗಿಯೇ..
ಯಾರು ಬೇಕಾದರೂ ಆಗಬಹುದು ಅಲ್ಲವಾ?
ಏಕೆಂದರೆ ಇದು ಆ ಅಸದಳವಾದ ಅನುಬಂಧದ, ಬಂಧುತ್ವದ, ಗೆಳೆತನದ, ಮೋಹದ, ಮರುಳು ಭಕ್ತಿಯ, ಬಿಡದ ನಂಟಿನ, ಬಿಟ್ಟಿರಲಾರದ ಪೊಸೆಸ್ಸಿವ್‌ನೆಸ್‌ನ ಲಹರಿ.
ಅಲ್ಲ ಎಂದರೆ ನಿಮ್ಮಾಣೆ.
ಎನ್ನ ಬಿಟ್ಟು ಇನ್ಯಾರನ್ನು ನೀನು ವಹಿಸಿಕೊಳ್ಳಬಾರದು ಎಂದು ತಾಕೀತು ಮಾಡಬೇಕಾದರೆ ಆ ಪ್ರೀತಿಯೋ ಭಕ್ತಿಯೋ ಅದೆಷ್ಟು ಪ್ರಬಲವಾದುದು ಇರಬೇಕು. ಅಬ್ಬಾ !
ಇದನ್ನು ಹೀಗೂ ಹೇಳಬಹುದು , ನೀವೇನಾದರೂ ಪ್ರೀತಿಯ ವರ್ತುಲದಲ್ಲಿ ಒಳಗೊಂಡಿದ್ದರೆ ಇದು ನಿಮಗೆ ಚೆನ್ನಾಗಿ ತಾನೇ ತಾನಾಗಿ ಅರ್ಥವಾದೀತು.ನಿಮ್ಮ ಹುಡುಗ ನಿಮ್ಮನ್ನು ಬಿಟ್ಟು ಇನ್ಯಾರನ್ನೋ ಹೆಸರೆತ್ತಿ ಮಾತನಾಡಲು ನೀವು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ನಿಮ್ಮ ಪ್ರೀತಿ ಕಠಿಣ.ನೀವು ಹುಡುಗನಾಗಿದ್ದರೆ ನಿಮ್ಮ ಹುಡುಗಿ ನಿಮ್ಮನ್ನು ಹೊರತುಪಡಿಸಿ ಇನ್ಯಾರನ್ನೋ ಗುರುತಿಸಲೂ ಆಗುವುದಿಲ್ಲ. ಏಕೆಂದರೆ ನಿಮ್ಮ ಅನುಬಂಧದಿಂದ ಆಕೆ ಎಂದಾದರೂ ಹೊರಗೆ ಬಾರದಂತೆ ನಿಮ್ಮ ಪ್ರೀತಿ ಮಾಡಿರುತ್ತದೆ.
ಪ್ರೇಮಿಗಳು ಗೋಳೋ ಅಂತ ಅಳುತ್ತಾರೆ. ಜಗಳ ಆಡುತ್ತಾರೆ. ಒಬ್ಬರಿಗೊಬ್ಬರು ವ್ಯಾಖ್ಯಾನ ಹೊರಡಿಸುತ್ತಾರೆ. ಅನೇಕ ಬಾರಿ ಫತ್ವಾ ಹೊರಡಿಸುವುದೂ ಇದೆ. 
ಆಮೇಲೆ ಒಂದಾಗುತ್ತಾರೆ. ಏಕೆಂದರೆ ಅವರಿಗೆ ಬಿಟ್ಟಿರಲು ಆಗುವುದೇ ಇಲ್ಲ. ಮನಸಾ ಬಿಟ್ಟಿರುವುದು ಸಾಧ್ಯವಾಗುವುದಾದರೆ ಅದು ಪ್ರೀತಿಯೇ ಅಲ್ಲ.
ಇಲ್ಲೂ ಅದೇ ಆಣೆಮಾತಿನ ಮಟ್ಟಿಗೆ ಹೋಗಿದೆ.ನಿನ್ನ ಬಿಟ್ಟಿರಲಾರೆ ನೀನೂ ಬಿಡಬಾರದು ಎಂದು ಹೇಳುವ ತುಡಿತ ನಾಲ್ಕೇ ನಾಲ್ಕು ಸಾಲಲ್ಲಿ ಇದಕ್ಕಿಂತ ಚೆಂದಕ್ಕೆ ಹೇಳುವುದು ಹೇಗೆ ?
ಇದು ಎಲ್ಲರಿಗೂ ಎಲ್ಲೆಡೆಯೂ ಎಲ್ಲಾ ಕಾಲದಲ್ಲೂ ಆಗುವಂಥದ್ದೇ ತಾನೇ ?
ಇದನ್ನೂ ಮೀರಿಸುವ ಇನ್ನೊಂದು ಸಾಲು ಇಲ್ಲಿ ಕೋಟ್ ಮಾಡಬಹುದು.
ಕೈಲಾಸವಾಸಾ ಗೌರೀಶ ಈಶಾ..
ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ ಶಂಭೋ..
ಆಹಾ .. ತೈಲ ಧಾರೆಯಂಥ ಮನಸು ನೀಡಬೇಕಂತೆ. ಅಲ್ಲವೇ ಮತ್ತೆ..
ಅಂಥದ್ದೊಂದು ಮನಸು ಹಾಗೇ ಇರಬೇಕೇ ತಾನೇ?
ತೈಲಧಾರೆಯಂತೆ..
ಎಂದೂ ಎಲ್ಲೂ ಕಡಿದು ಹೋಗದಂತೆ.. ತೈಲ ಸುರುವುತ್ತಿದ್ದಂತೆ..ಅದರ ಜಿಡ್ಡಿನಂತೆ ಅದರ ಮೃದುಲದಂತೆ..ಅದರ ಉದ್ದೇಶದಂತೆ..
ನೀರನ್ನು ಬಿಟ್ಟು ತೈಲವೇ ಏಕೆ ಅಂತ ಕೇಳಬಹುದು..
ನೀರು ನಮ್ಮದಲ್ಲ, ತೈಲ ನಾವೇ ಮಾಡಿದ್ದು.
ನೀರು ಬತ್ತಲಾರದು. ತೈಲ ಎಂದಾದರೂ ಆರಬಹುದು ಬತ್ತಲೂ ಬಹುದು..
ಇದನ್ನು ಭಕ್ತಿಗೂ ಪ್ರೀತಿಗೂ ಎಲ್ಲಿಗೂ ಯಾರಿಗೂ ಅನ್ವಯಿಸಬಹುದು..ಹೇಗೇ ಮಾಡಿಕೊಂಡರೂ ಒಂದು ಮುಕ್ತಾಯವಿದೆ ಎಂಬುದನ್ನು ನಂಬಲೇಬೇಕು. ಅಲ್ಲಿಯ ತನಕ ಮನಸು ಕೊಡು...