20071231

ನೂರೆಂಬ ನಂಬರು


ಇದೇನಿದು ನೂರು ಎಂಬ ನಂಬರು !

ಅನಂತಾನಂತ ಸಂಖ್ಯಾ ಲೋಕದಲ್ಲಿ ಈ ನೂರು ಎಂಬವನಿಗಿರುವ ಗತ್ತು ಮತ್ತು ಗೈರತ್ತು ಇನ್ಯಾವ ನಂಬರಿಗೂ ಇಲ್ಲ.ಸೊನ್ನೆ ಎಂಬ ಆರಂಭಕ್ಕಾಗಲಿ,ನಾವೆಂದೂ ಕಾಣದ ಆ ಅಂತಿಮ ನಂಬರಿಗಾಗಲಿ ಈ ಬೆಲೆ ಮತ್ತು ನೆಲೆ ಸಿಗಲಿಕ್ಕಿಲ್ಲ.

ಸುಮ್ಮನೇ ಕುಳಿತು ಯೋಚಿಸಿ.ಒಂದು, ಎರಡು, ಮೂರು.. ಆಮೇಲೆ ಸಾವಿರ,ಲಕ್ಷ,ಮಿಲಿಯ ಬಿಲಿಯ ಏನೆಲ್ಲಾ ಇವೆ,ಎಷ್ಟೆಲ್ಲಾ ಇವೆ..

ಆದರೆ ಈ ನೂರರಲ್ಲಿ ಮಾತ್ರಾ ಅದೇನೋ ಮಕ್ತಾಯ..ಮತ್ತು..ಅದೇನೋ ನಿಲ್ದಾಣ.

ನೂರರ ನಂತರ ಮತ್ತೊಂದು ಪಯಣ.

ಮಗುವಿನಿಂದಲೇ ಆರಂಭಿಸಿ.ಒಂದು ಮಗು ಒಂದೋ ಎರಡೋ ಮೂರೋ ಎಂದು ಎಣಿಸುತಾ ಎಣಿಸುತ್ತಾ ಕೊನೆಗೊಮ್ಮೆ ನೂರೋ ಎಂದಾಗ ಅದರ ಸ್ವರ ಏನು ತಾರರಕ್ಕೇರುತ್ತದೆ,ಏನೋ ಒಂದು ಮುಗಿದಂತೆ ಅನಿಸುತ್ತದೆ.ಆಮೇಲೆ ಅದಕ್ಕೇ ಇರಬೇಕು ಅದರ ಅಮ್ಮ ನೂರು ಮಾರ್ಕು ಅಂತ ಆ ಮಗುವನ್ನು ಮೇಲೆ ಕೆಳಗೆ ಮಾಡುತ್ತದೆ. ನೂರು ಮಾರ್ಕು ಪಡೆದ ಮಗು ಜಂಭದ ಕೋಳಿಯಾಗುತ್ತದೆ,ಅದರ ಅಪ್ಪ ಅಮ್ಮ ಕೂಡಾ.

ಅದೇಕೆ ನೂರು? ಒಂದು ಕಡಿಮೆಯಾದರೆ ಏನಾಗುತ್ತದೆ ಎಂದರೆ ಯಾರೂ ಸಹಿಸರು.

ಎಲ್ಲರಿಗೂ ನೂರಕ್ಕೆ ನೂರು ಬರಬೇಕು.

ಅಂಗಡಿಗೆ ಹೋಗಿ ಒಂದು ಏನಾದರೂ ಕೋಳ್ಳೋಣ. ಏನು ಗ್ಯಾರಂಟೀ ಅಂತ ಕೇಳೋಣ. ಆತ ನೂಕ್ಕೆ ನೂರು ಗ್ಯಾರಂಟಿ ಎಂದರೆ ನಿಮ್ಮ ಖರೀದಿ. ಆದು ಬಿಟ್ಟು ನೂರರಿಂದ ಒಂದು ಕಡಿಮೆ ಮಾಡಿ ನೂರಕ್ಕೆ ನೂರು ಗ್ಯಾರಂಟಿ ಅಲ್ಲ,ತೊಂಭತೊಂಭತ್ತು ಖಂಡಿತ ಅಂತ ಸತ್ಯವನ್ನೇ ಹೇಳಿದರೂ ನೀವು ಅಲ್ಲಿಂದ ಹೊರಡೋದು ನಿಜ.

ಏನದು ಒಂದು ಕಡಿಮೆಯಾದರೆ ಏನೀಗ?

ನೂರರಲ್ಲೇನಿದೆ ಆ ಮಹತ್ವ?ಯಾವುದೇ ವ್ಯವಹಾರ,ಇನ್ಯಾವುದೋ ಬಂಡವಾಳ,ಒಂದು ಔಷಧಿ,ಇನ್ನೊಂದು ಅಪರೇಶನ್ನು,ಎಲ್ಲಾ ನೂರಕ್ಕೆ ನೂರು ಆಗಬೇಕು.

ಹಾಗಾದರೆ ಮಾತ್ರಾ ನಮಗೆ ನಂಬಿಕೆ.

ಯಾವುದಾರೂ ಟ್ಯಾಕ್ಸಿ ಚಾಲಕ ನನಗೆ ನೂರಕ್ಕೆ ನೂರು ಡ್ರೈವಿಂಗು ಗೊತ್ತಿಲ್ಲ ಎಂದರೆ ನೀವು ಆ ಗಾಡಿ ಮೇಲೆ ಹೋದರೆ ನನ್ನಾಣೆ.ಇಲ್ಲಾ ಸಾರೂ,ತೊಂಭತ್ತೊಂಭತ್ತು ಪಾಲು ಚೆನ್ನಾಗಿ ಗೊತ್ತಿದೆ ಎಂದರೂ ನೀವು ನಂಬರು. ಏಕೆಂದರೆ ನಿಮಗೆ ನೂರೇ ಎಂಬುದು ನಂಬರು.

ಆ ವ್ಯಕ್ತಿ ನೂರಕ್ಕೆ ನೂರು ಸರಿಯಿಲ್ಲ ಎಂದರೆ ಅವನು ಸಮಾಜದಲ್ಲಿ ಡೌನ್ ಆಂಡ್ ಔಟ್.ಅವನಿಗೆ ತೊಂಭತ್ತೊಂಭತ್ತು ಎಂದರೆ ಹುಚ್ಚು ಎಂದೇ ಕರಾವಳಿಯಲ್ಲಿ ಅರ್ಥ.ಇನ್ನು ಕ್ರಿಕೆಟ್ಟಿನಲ್ಲಂತೂ ನೂರು ರನ್ನು ಎಂದರೆ ಅದು ಅರಿಭಯಂಕರ.ನೂರು ಬಡಿದವನಿಗೆ ಇರೋ ಗ್ಲಾಮರ್ರು ಆಮೇಲೆ ಸಾವಿರ ಬಡಿದಾಗಲೂ ಇರಲಾರದು. ನೂರು ವರ್ಷ ಬದುಕಿದವನು ಒಂದು ವರ್ಷ ಹೆಚ್ಚು ಬದುಕಿದರೂ ಅದು ಅಂಥ ವಿಶೇಷವಲ್ಲ,ಇನ್ನು ನೂರು ತುಂಬುವ ಮೂರು ದಿನಕ್ಕೆ ಸತ್ತರೂ ಅದು ಅಂಥ ಆಕರ್ಷಣೀಯವಲ್ಲ.ಇನ್ನು ಸಾಹಸ ಮಾಡೋರೆಲ್ಲಾ ನೂರರವರೇ.ಬಾಹ್ಯಾಕಾಶದಲ್ಲಿ ತೇಲುವವರು,ನೀರಲ್ಲಿ ಮುಳುಗುವವರು,ಮಣ್ಣಿನಲ್ಲಿ ಹುದುಗುವವರು,ಮೀಸೆ,ಉಗುರು ಬೆಳೆಸುವವರು,ರೇಸು ಓಡುವವರು,ಎಲ್ಲಾ ನೂರು ದಿನ,ನೂರು ಗಂಟೆ,ನೂರು ಮಿನಿಟ್ಟು, ನೂರು ಫೀಟು,ನೂರು ಮೀಟರು,..

ಆಹಾ ಈ ನೂರೇ.

ಆ ಕೃಷ್ಣ ಪರಮಾತ್ಮ ಕೂಡಾ ಶಿಶುಪಾಲನಿಗೆ ತೊಂಭತ್ತೊಂಭತ್ತು ಬಾರಿ ಕ್ಷಮಿಸಿ,ನೂರು ತುಂಬಿದಾಗ ಕೊಂದೇ ಹಾಕಿದ್ದಾನೆ.ಪಾಪ ಕೂಪಕ್ಕೂ ನೂರೆಂಬ ನಂಬರಿನ ನಂಟು.ಕೃಷ್ಣ.. ಕೃಷ್ಣಾ..!

ಈ ನೂರೆಂಬುದು ಅದು ಏಕೆ ಮತ್ತು ಅದು ಹೇಗೆ ಪೂರ್ಣತ್ವದ ಸ್ಥಿತಿಯಾಗಿದೆ ಮತ್ತು ಆಗಬೇಕು? ಅದೇನು ಆ ರೀತಿ ಚಿರಯೌವನೆಯಾಗಬೇಕು?ನೂರು ಪರಿಪೂರ್ಣ ಎಂದಾದರೆ ನೂರಾಒಂದು ಏನು ಎಂದು ಕೇಳುತ್ತಾ ನನ್ನ ಬ್ಲಾಗಿನ ನೂರನೇ ಬರೆಹವಾಗಿ ಈ ನೂರೆಂಬ ನಂಬರಿಗೆ ಅನಂತ ಪ್ರಮಾಣಗಳನ್ನು ಸಲ್ಲಿಸುತ್ತೇನೆ.

20071230

ನಾಲ್ಕು ಸಾಲು-೨೭

೧.
ಸೂತ್ರ ಬಿಟ್ಟ
ಗಾಳಿಪಟ
ಆಕಾಶದ ತುಂಬಾ
ಭೂಮಿಯ ಸುದ್ದಿಗಳನ್ನು
ಬಿತ್ತಿತು.

೨.

ಕಾಣದ ಗಾಳಿಯಲ್ಲಿ
ಕೇಳದ ಮಾತುಗಳನ್ನು
ಉಸುರಿ
ಲೀನನಾಗುವೆ.

೩.

ದೇವರು
ಮುಂದಾಗಿ ನಿಂತು
ಅವಳಲ್ಲಿ
ಬಿತ್ತಿದ ಬಯಕೆ
ಅವನ
ಪ್ರೇಮದ ತವರಿನಲ್ಲಿ
ಹವಿಸ್ಸಾಯಿತು.

೪.

ಕಲ್ಲುಗಳೆಲ್ಲಾ
ದ್ರವವಾಗಿ
ಬಿಸಿಲಿನಿಂದ
ವಚನ ತೆಗೆದುಕೊಂಡು
ಹರಳುಗಟ್ಟಿದರೆ
ಅವಳು ಅವನನ್ನು ತಬ್ಬಿ ಅತ್ತಳು

ನಮ್ಮ ಸೋಲು- ೨೦೦೭


ಇದೊಂದು ಸಮೀಕ್ಷೆ ಯಾರಾದರೂ ಮಾಡಬಹುದು ಎಂದುಕೊಂಡಿದ್ದೆ. ಯಾರೂ ಮಾಡುವ ಹಾಗೆ ಕಾಣ್ತಾ ಇಲ್ಲ. ಆದ್ದರಿಂದ ನಾನೇ ಮಾಡಲು ಹೊರಟೆ,ನನ್ನಷ್ಟಕ್ಕೇ.
ನಾನು ಕರ್ನಾಟಕವನ್ನು ಮಾತ್ರಾ ಮುಂದಿಟ್ಟುಕೊಂಡಿದ್ದೇನೆ. ಕರ್ನಾಟಕದಲ್ಲಿ ಈ ವರ್ಷ ಏನೇನು ಆಗಿತ್ತು ಮತ್ತು ಏನೆಲ್ಲಾ ಇಲ್ಲಿ ಆಯಿತು ಎಂದು ಥೇಟ್ ಪತ್ರಕರ್ತನ ಶೈಲಿಯಲ್ಲಿ ವಿವರಿಸಲಾರೆ.

ಆದರೆ ಕರ್ನಾಟಕದ ಈ ವರ್ಷದ ಅತೀ ದೊಡ್ಡ ವೈಫಲ್ಯ ಮಾತ್ರಾ ಏನೆಂದು ನಾನು ಹೇಳಬಲ್ಲೆ,

ಅದು ರಸ್ತೆ.

ಕರ್ನಾಟಕದ ಒಂದಾದರೂ ರಸ್ತೆಯಲ್ಲಿ ನೀವು ನೆಟ್ಟಗೆ ನಡೆಯುವುದೂ ಸಾಧ್ಯವಿಲ್ಲ ಎಂದರೆ ಇಲ್ಲಿ ಆಡಳಿತ ಮಾಡಿದ ಮೂರ್ಖರನ್ನು ಏನೆಂದು ಹಳಿಯೋಣ ಅಥವಾ ಏನೆಂದು ಹೆಸರಿಸೋಣ?ಇವರು ವಚನ ಭ್ರಷ್ಠತೆಯ ಬಗ್ಗೆ ಮಾತಾಡುತ್ತಾ ಯಾರು ಯಾರಿಗೆ ಮಾತು ತಪ್ಪಿದರು ಎಂದು ಹೇಳುತ್ತಾ ಕಾಲಸಾಗಿಸುತ್ತಿದ್ದಾರೆ.ಆದರೆ ಒಂದು ರಸ್ತೆ ಕೂಡಾ ಚೊಕ್ಕವಾಗಿಡಲಾಗದ ಈ ಕರ್ನಾಟಕದ ಆಡಳಿತಾರೂಢರು ಇಷ್ಟೊಂದು ದಗಲ್ಬಾಜಿ ಮಾಡಿದರು ಎಂದು ನೋವಾಗುತ್ತದೆ.ಒಂದೇ ಒಂದು ರಸ್ತೆಯನ್ನು ನಮ್ಮ ರಾಜಕಾರಣಿಗಳು ನೆಟ್ಟಗೆ ರಿಪೇರಿ ಕೂಡಾ ಮಾಡಲಾರರು ಎಂದರೆ ಇಲ್ಲಿ ಹದಗೆಟ್ಟಿರುವುದಕ್ಕೆ ಇನ್ನೇನು ಉಳಿದಿದೆ ಎಂದು ಅಚ್ಚರಿಯಾಗುತ್ತದೆ.

ಹಿಂದೆಲ್ಲಾ ಹಾಗಿರಲಿಲ್ಲ.

ನಮ್ಮ ಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಡಾಂಬರು ಡಬ್ಬಿಗಳು ಬಂದು ಇಳಿಯುತ್ತಿದ್ದವು.ಜಲ್ಲಿ ರಾಶಿ ಬೀಳುತ್ತಿತ್ತು.ನೋಡ್ತಾ ನೋಡ್ತಾ ಡಾಂಬರು ಬಿಸಿ ಮಾಡಲು ಕಟ್ಟಿಗೆ,ಆಮೇಲೆ ದೊಡ್ಡ ರೋಲರು ಬಂದು ನಿಲ್ಲುತ್ತಿತ್ತು.ನಾವು ಹಳ್ಳಿ ಶಾಲೆಗೆ ಹೋಗುವಾಗ ಆ ಡಾಂಬರು ಡಬ್ಬಿಯಿಂದ ಕರಿ ಡಾಂಬರು ಕಿತ್ತು ಉಂಡೆ ಮಾಡಿ ಶಾಲೆಯ ಬೆಂಚಿನಲ್ಲಿ ಅಂಟಿಸಿ ಹುಡುಗಿಯರ ಲಂಗಕ್ಕೆ ಅಂಟಿದ್ದನ್ನು ಕಂಡು ಬಹು ಖುಶಿ ಪಡುತ್ತಿದ್ದೆವು.ಮನೆಗೆ ಬಂದರೆ ಅಪ್ಪ ಮತ್ತಿತರರು ಕಳೆದ ವರ್ಷ ಡಾಂಬರು ಹಾಕಿದರು ಈಗ ಮತ್ತೆ ಎಂಥಾ ಖರ್ಮಕ್ಕೆ ಹಾಕುತ್ತಿದ್ದಾರೆ ಎಂದು ಅಸಬಡಿಯುತ್ತಿದ್ದರು.ಆಮೇಲೆ ಆ ಡಾಂಬರು ಡಬ್ಬಿಗಳು ಬರುವುದು ಕಡಿಮೆಯಾಗುತ್ತಾ ಬಂತು.ಮುಂದೆ ರಸ್ತೆಗಳಲ್ಲಿ ಪ್ರತೀ ವರ್ಷ ದಸರೆ ರಜೆ ಮುಗಿದ ಮೇಲೆ ಹೊಂಡ ಮುಚ್ಚುವ ಗ್ಯಾಂಗು ಮೆನ್ನುಗಳು ಕಾಣುತ್ತಿದ್ದರು.ಅವರು ಒಂದು ಬಾಲ್ದಿಯಲ್ಲಿ ಡಾಂಬರು ಹಿಡಿದುಕೊಂಡು ರಸ್ತೆ ಬದಿ ಬಿದ್ದಿದ್ದ ಜಲ್ಲಿಯನ್ನು ಹಾರೆಯಲ್ಲಿ ಎತ್ತಿ ಹೊಂಡಕ್ಕೆ ಸುರಿದು ಡಾಂಬರು ಅಂಟಿಸುವರು.ಆ ಗ್ಯಾಂಗು ಮೆನ್ನುಗಳೂ ಆಮೇಲೆ ಕಣ್ಮರೆಯಾದರು.

ಹೇಗೆ ಕಾಲ ಬದಲಾದಂತೆ ಭ್ರಷ್ಠತೆ ಕೂಡಾ ಹೊಸರೂಪ ತಾಳುತ್ತಿದೆ ಎಂದರೆ ನಮ್ಮ ರಸ್ತೆಗಳಿಗಿಂತ ಬೇರೆ ಉದಾಹರಣೆ ಬೇಕಾಗಲಿಕ್ಕಿಲ್ಲ.ಈಗ ಪಿಡಬ್ಲ್ಯುಡಿ ಎಂಬ ಇಲಾಖೆ ಅದೆಷ್ಟು ಭ್ರಷ್ಠತೆಯಿಂದ ಬಡವಾಗಿದೆ ಎಂದರೆ ಈ ಇಲಾಖೆಯ ಕಚೇರಿಗೆ ಫೋನು ಕೂಡಾ ಇಲ್ಲ. ರಸ್ತೆ ರಿಪೇರಿ ಮಾಡಲು ಯಾವ ಗುತ್ತಿಗೆದಾರ ಕೂಡಾ ಸಿದ್ಧನಿಲ್ಲ.ಕಾರಣ ಅವನಿಗೆ ಕಳೆದ ಆರು ವರ್ಷಗಳಿಂದ ಸರಕಾರ ಒಂದು ಪೈಸೆ ಪಾವತಿ ಮಾಡಿಲ್ಲ.ಹೊಸ ರಸ್ತೆ ಮಾಡೋದು ಹಾಳಾಗಿ ಹೋಗಲಿ,ಹಳೆ ರಸ್ತೆಯನ್ನಾದರೂ ಚೆನ್ನಾಗಿಡಲು ನಮ್ಮ ರಾಜಕಾರಣಿಗಳಿಗೆ ಆಗಿಲ್ಲ ಎಂದರೆ ಇವರು ಎಷ್ಟೊಂದು ಗಬ್ಬೆದು ಹೋಗಿದ್ದಾರೆ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಯಾವಾಗ ನಮ್ಮ ಕರ್ನಾಟಕವನ್ನು ಅದಿರು ಲಾಬಿ ಖರೀದಿಸಿತೋ ಅಲ್ಲಿಗೆ ಎಲ್ಲವೂ ಮುಗಿದಿದೆ. ಅದಿರು ಲಾಬಿಗೆ ಎಲ್ಲಾ ರಾಜಕೀಯ ಪಕ್ಷಗಳೂ ಮಾರಾಟವಾಗಿವೆ.

ಅದೆಲ್ಲಾ ಹೋಗಲಿ,ಒಂದು ಹೊಂಡ ಮುಚ್ಚುವ ಕೆಲಸ ಎಂದಾದರೂ ಆದೀತೆ ಮತ್ತು ಆದರೂ ಮತ್ತೊಂದು ಹೊಂಡ ನಮ್ಮ ರಸ್ತೆಯಲ್ಲಿ ಆಗದಂತೆ ಮಾಡುವುದನ್ನು ನಾವು ಮಾಡಲು ಶಕ್ತರೇ?

or,

the road to success is always under construction!!!!!!!??????????????

20071226

ಚಪ್ಪರದ ಮಲ್ಲಿಗೆ


ಇದು ತುಂಬಾ ಕಷ್ಟ ಎಂದ ಆ ಹುಡುಗ.

ಇದು ಎಲ್ಲರ ಕಷ್ಟ ಎಂದು ಮನಸ್ಸಲ್ಲೇ ಅವಳೂ ಗುಣುಗುಣಿಸಿದಳು.

"ನಾನು ಈ ತನಕ ನಿನ್ನನ್ನು ಪ್ರೀತಿಸಿದೆ,ಇನ್ನು ಇಲ್ಲ ಅಲ್ವಾ" ಎಂದ.

ಅವಳು ನಕ್ಕಳು.

ಏನಾಯಿತು ಎಂದು ಅವಳು ಕೇಳಲೇ ಇಲ್ಲ.ಏನು ಕೇಳುವುದು,ಎಲ್ಲಾ ಪ್ರೀತಿ ಕೊನೆಗೂ ಹೀಗೇ ಆಗುವುದೇ?! ಎಂದು ಎಂದೂ ಯಾರಿಂದಲೂ ಪ್ರೀತಿಸಲ್ಪಡದ ಮತ್ತು ಯಾರನ್ನೂ ಪ್ರೀತಿಸದ ಅವನು ತುಂಬಾ ಸಂಕಟಪಟ್ಟ.

ಅವನು ಅವಳನ್ನು ಪ್ರೀತಿಸಿದ್ದ.ಎಂಥಾ ಪ್ರೀತಿ ಎಂದರೆ ಅದು ಹುಟ್ಟಿದ್ದೇ ಒಟ್ಟಾಗಿ.ಎಲ್ಲಾ ಪ್ರೀತಿಲಿ ಯಾರೋ ಒಬ್ಬರು ಆರಂಭಿಸುತ್ತಾರೆ ಮತ್ತು ಇನ್ನೊಬ್ಬರು ಅದನ್ನು ಸ್ವೀಕರಿಸುತ್ತಾರೆ.ಆದರೆ ಇವರ ನಡುವೆ ಹಾಗಾಗಲಿಲ್ಲ.ಇಬ್ಬರೂ ಒಟ್ಟಾಗಿ ಒಂದೇ ಕ್ಷಣಕ್ಕೆ ಪ್ರೀತಿಸಲು ಆರಂಭಿಸಿಬಿಟ್ಟರು.ಅದು ಅವರ ಕರ್ಮ ಅಂತ ನಾನೂ ನಿಮ್ಮಂತೆ ಹೇಳಬಹುದು ಆದರೆ ಅಲ್ಲಿ ಇನ್ನೊಂದು ಅಣಿ ಬೇರೆಯೇ ಇದೆ.ಅದುವೇ ವಿಚಿತ್ರವಾದದ್ದು.

ಈ ಹುಡುಗಿ ಆ ಒಂದು ದಿನ ಇವನ ಬಳಿ ಬಂದಾಗ ಚಪ್ಪರದ ಮಲ್ಲಿಗೆಯ ಮಾಲೆ ಮುಡಿದಿದ್ದಳು.ಅದು ನೋಡಿ ಇವನು ಬೆರಗಾಗಿದ್ದ. ಇದೇನಿದು ಎಂದರೆ ಚಪ್ಪರದ ಮಲ್ಲಿಗೆ ಎಂದಳು.ಅವನು ಆಮೇಲೆ ಮಾತಾಡಲಿಲ್ಲ.ಮರುದಿನ ಆವಳು ಬಂದಾಗ ಇವನಿರಲಿಲ್ಲ. ತುರುಬಿನಲ್ಲಿ ಹೂದಂಡೆಯೂ ಇರಲಿಲ್ಲ. ಆದರೆ ಆ ದಿನ ಅವಳು ಆ ನೇರಳೆ ಉಡುಪಿನೊಂದಿಗೆ ಬಂದಿದ್ದಳು.ಅವನು ನೋಡುತ್ತಾನೆ ಎಂಬ ಸಂಭ್ರಮದಿಂದ.ಆದರೆ ಅವನು ನೋಡಲು ಬರಲಿಲ್ಲ.ಮತ್ತೆ ಹಲವಾರು ಬಾರಿ ಆಕೆ ಆ ನೇರಳೆ ಉಡುಪಿನೊಂದಿಗೆ ಬಂದಾಗ ಆವನಿರಲಿಲ್ಲ.

ಆಮೇಲೆಂದೂ ಆಕೆ ಚಪ್ಪರದ ಮಲ್ಲಿಗೆ ಮುಡಿಯಲಿಲ್ಲ.

ಅದೊಂದು ದಿನ ಆತ ಕುಳಿತಲ್ಲೇ ಕನಸು ಕಂಡ.ಕನಸಲ್ಲಿ ತುಂಬಾ ಆಕೆ ಅಲ್ಲದೇ ಇನ್ಯಾರು ಬರಲು ಸಾಧ್ಯ.ಆ ಕನಸಿನಲ್ಲಿ ಆತ ಚಪ್ಪರದ ಮಲ್ಲಿಗೆ ಎಂದು ಬಿಟ್ಟ.ಅದು ಅಲ್ಲಿ ಆ ದಿನ ಆ ಹೊತ್ತಿಗೆ ಆ ಚಪ್ಪರದ ಮಲ್ಲಿಗೆಯನ್ನು ಕೊಯ್ಯುತ್ತಿದ್ದ ಆಕೆಗೆ ಮುಟ್ಟಿತು.ಆ ಮೇಲೆ ಆವಳೇ ಅವನನ್ನು ಕಂಡಾಗ ನಕ್ಕಳು."ಚಪ್ಪರದ ಮಲ್ಲಿಗೆ" ಎಂದಳು.

ಅವರಿಬ್ಬರೂ ಪ್ರೀತಿಸಿದರು.

ಆ ಕಾಡು ಆ ನೆಲ ಆ ಹಸಿರು ಆ ಗಿಡ ಆ ದಾರಿ ಆ ಘಾಟಿ ಆ ಸಂಜೆ ಆ ಹಗಲು ಆ ಕಾರು ಎಲ್ಲಾ ಅವರ ಆ ಪ್ರೀತಿಗೆ ಸಾಕ್ಷಿಯಾಗಿ ನಿಂತವು.

ಅವರು ಪ್ರೀತಿಸಿದರು.ಅವರು ತಬ್ಬಿಕೊಂಡರು.ಅವರು ಮುತ್ತಿನಮಾಲೆ ಪೋಣಿಸಿದರು.

ಅವರು ಬೆತ್ತಲಾದರು.

ಅವರು ಒಬ್ಬರನ್ನೊಬ್ಬರು ನೋಡಿದರು.ಅವರು ಒಬ್ಬರಲ್ಲಿ ಒಬ್ಬರನ್ನು ಹುಡುಕಿದರು.ಅವಳಲ್ಲಿ ಅವಳು ಕಾಣದ್ದನ್ನು ಅವನು ಕಂಡ.ಅವನಲ್ಲಿ ಅವನು ನೋಡಲಾರದ್ದನ್ನು ಅವಳು ನೋಡಿದಳು.ಹಾಗೆಲ್ಲಾ ಅವರು ಪ್ರೀತಿಸುತ್ತಿದ್ದರೆ ಯಾವ ದೇವರೂ ಮಾತೆತ್ತಲಿಲ್ಲ.ಅವರನ್ನು ಎಲ್ಲ ದೇವರೂ ಕೊಂಡಾಡಿದರು.ಆ ಹುಡುಗ ಆ ಜಗತ್ತಿಗೆ ಒಬ್ಬನೇ ಆಗಿದ್ದ.ಆದರೆ ಆ ಹುಡುಗಿಗೆ ಆತ ಇಡೀ ಜಗತ್ತೇ ಆಗಿಬಿಟ್ಟ.ಅವಳೆಂದಳು,"ಪ್ರೀತಿ ಕುರುಡಲ್ಲ."ಅವನು ಅದನ್ನು ಮುಂದುವರಿಸಿದ,"ನಿಜ ಪ್ರೀತಿ ತುಂಬಾ ನೋಡುತ್ತದೆ.ಅದು ತುಂಬಾ ನೋಡೋದರಿಂದ ಅದಕ್ಕೆ ಸಣ್ಣದು ಕಾಣೋದಿಲ್ಲ."

ಆಮೇಲೆ ಒಂದು ದಿನ ಅವನಿಗೆ ಅವಳು ಅವನದ್ದೇ ಆದಳು.ಅವಳನ್ನು ಬಿಟ್ಟು ಇರಲಾಗದು ಎಂದೆನಿಸಿತು.ಅವಳೇ ಅವನ ಸರ್ವಸ್ವ ಎಂದು ಖಚಿತವಾಯಿತು.ಅವನ ನೆನಪಿನ ತುಂಬಾ ಅವಳೇ ನಿಜವಾದ ಸಂಚಿಕೆಗಳಾಗತೊಡಗಿದಳು.

ಆಗಲೇ ಅವಳು ಕೇಳಿದ್ದು,"ನೀನು ನನ್ನನ್ನು ಮದುವೆಯಾಗುತ್ತೀಯಾ?"

ಅವನು ಕುಸಿದುಬಿದ್ದ.

ಆಮೇಲೆ ಅವಳು ಯಾರನ್ನೋ ಪ್ರೀತಿಸಲೇ ಎಂದು ಕೇಳಿದಳು.ಆಗ ಅವನಿಗೆ ಗೊತ್ತಾಯಿತು,ಈ ಪ್ರೀತಿ ನದಿಯಂತೆ,ಅಡ್ಡಗಟ್ಟಿದರೆ ಬೇರೆಡೆಗೆ ಹರಿಯುತ್ತದೆ ಎಂದು.ಅವನು ಮಾತಾಡಲಿಲ್ಲ.ಅವಳೂ ಮಾತಾಡಲಿಲ್ಲ.ಇಬ್ಬರೂ ಆಮೇಲೆ ಸುಮ್ಮನಾದರು.

ಅವನಿಗೆ ಆಮೇಲೆ ಪ್ರೀತಿಸಿದವಳನ್ನು ಮರೆಯುವುದು ಅನಿವಾರ್ಯವಾಗತೊಡಗಿತು.ಪ್ರೀತಿಸಿದವಳನ್ನು ಮರೆಯುವುದು ಎಂದರೆ ಅದು ಎಂದೂ ಕಾಣದವರನ್ನು ನೆನಪಿಸಿಕೊಂಡ ಹಾಗೇ ಎಂದು ಅವನಿಗೆ ಅನಿಸುತ್ತಿದ್ದರೆ,ಅವಳಿಗೆ ಒಡೆದ ಕನ್ನಡಿಯನ್ನು ಜೋಡಿಸಲು ಹೋಗಿ ಗಾಯ ಮಾಡಿಕೊಳ್ಳುವುದು ಬೇಡ ಅನಿಸಿತು.

ಒಂದು ದಿನ ಅವಳು ಅವನಲ್ಲಿ ಕೇಳಿದಳು,"ಒಂದೇ ಒಂದು ಸಲ ನನ್ನನ್ನು ತಬ್ಬಿಕೋ".

ಅವನು ಅವಳನ್ನು ಅಪ್ಪಿಕೊಂಡ.

ಆ ಬಂಧದಲ್ಲಿ ಅವಳಿಗೆ ಹಿತವೆನಿಸಿತು.ಅವಳೆಂದಳು,"ಏನೇ ಆದರೂ ಪ್ರೀತಿಸೋದು ಮತ್ತು ಪ್ರೀತಿಸಲ್ಪಡೋದು ಒಂದೇ ಒಂದು ಸಲ ಕಣೋ."

ಆಮೇಲೆ ಅವನು ಅವರಿಬ್ಬರ ಬದುಕಿಗೆ ಶುಭ ಹಾರೈಸಿದ.

ಆ ಕಾಡು ಆ ನೆಲ ಆ ಹಸಿರು ಆ ಗಿಡ ಆ ದಾರಿ ಆ ಘಾಟಿ ಆ ಸಂಜೆ ಆ ಹಗಲು ಆ ಕಾರು ಎಲ್ಲಾ ಅವನ ಹಾರೈಕೆಗೆ ಸಾಕ್ಷಿಯಾಗಲಾರೆವು ಎಂದವು.

20071225

ಬೇಡಾ ಎಂದರೂ..


ಎಂಥಾ ಜನರೋ ಎಂಥಾ ಮಾತೋ?

ಅನೇಕ ಬಾರಿ ನಮ್ಮ ಮಾತುಗಳಿಗೆ ಅರ್ಥವೇ ಇರುವುದಿಲ್ಲ.ಆದರೂ ಮಾತಾಡುತ್ತೇವೆ,ಯಾಕೆಂದರೆ ನಾವು ಮಾತಾಡಬೇಕು ಅಷ್ಟೇ.

ನೀವು ಯಾವುದಾದರೂ ಬೀದಿಯಲ್ಲಿ ಹೋಗುತ್ತಾ ಸುಮ್ಮನೇ ಇಂತಿಂಥಾ ಹೋಟೇಲೋ ಊರೋ ಅಥವಾ ಕಾಂಪ್ಲೆಕ್ಸೋ ಎಲ್ಲಿದೆ ಎಂದು ಕೇಳಿ ನೋಡಿ; ಆಗ ನಿಮ್ಮ ಮಾರ್ಗದರ್ಶಿ ಶುರುಮಾಡೋದು ಹೀಗೆ, "ನೀವು ಒಂದು ಕೆಲಸ ಮಾಡಿ,ಈ ರೋಡಲ್ಲೇ ಲೆಫ್ಟು ತೆಗಳ್ಳಿ.."

ಸರಿಯಪ್ಪಾ ಅದಕ್ಕೆ ಒಂದು ಕೆಲಸ ಏನು ಮಾಡೋದು ಎಂದು ನೀವು ನಿಮ್ಮೊಳಗೇ ಕೇಳಿಕೊಳ್ಳಬಹುದು.

ದಾರಿ ಹೇಳೊದಕ್ಕೂ ಒಂದು ಕೆಲಸ ಮಾಡೋದಕ್ಕೂ ಏನಪ ಸಂಬಂಧ..

ನಮ್ಮ ಊರಲ್ಲಿ ಒಬ್ಬ ಶಾಸಕರಿದ್ದರು.ಅವರೀಗ ದೊಡ್ಡ ಪಕ್ಷದ ದೊಡ್ಡ ಜನ.ಅವರು ತಮ್ಮ ಭಾಷಣದಲ್ಲಿ, "ಈ ದೇಶದ,," ಅಂತ ಹತ್ತು ಬಾರಿಯಾದರೂ ಹೇಳುವರು.ಪ್ರತಿಯೊಂದಕ್ಕೂ "ಈ ದೇಶದ ಈ ದೇಶದ.."

ಮತ್ತೊಬ್ಬರಿದ್ದರು,ಅವರು ಈಗ ಮಾಜಿಗಳು.ಅವರು "ಮಟ್ಟಿಗೆ"ಎನ್ನದೇ ಒಂದಾದರೂ ಭಾಷಣ ಮಾಡಿದ್ದು ಇರಲಿಕ್ಕಿಲ್ಲ.ಧಾರವಾಡದ ಕಡೆಯ ವಿಮರ್ಶಕರೊಬ್ಬರಿದ್ದಾರೆ.ಅವರು "ಅಂತ ಹೇಳ್ಬುಟ್ಟು"ಎನ್ನದೇ ಒಂದಾದರೂ ಉಪನ್ಯಾಸ ನೀಡಿದ್ದೇ ಇರಲಿಕ್ಕಿಲ್ಲ."ಹಾಗಂತ ಹೇಳ್ಬುಟ್ಟು" ಎಂದೇ ಅವರ ಪ್ರತೀವಾಕ್ಯ ಮುಕ್ತಾಯವಾಗುವುದು.

ತುಳುನಾಡಿನ ಹಳ್ಳಿಗಳಲ್ಲಿ ನೀವು ನಡೆದುಕೊಂಡು ಹೋಗುತ್ತಿದ್ದರೆ,ಪ್ರತೀ ಮನೆಯ ಎದುರು ಒಂದು ಅಜ್ಜಿ ಅಥವಾ ಅಜ್ಜ ಕುಳಿತಿರುತ್ತದೆ.ನೀವು ಅದನ್ನು ನೋಡಿದರೆ ಸಾಕು ಅದು "ಏನೂ ಮಾಡಲು ಆಗುತ್ತಾ ಇಲ್ಲ ಹಾಗೇ ಕುಳಿತದ್ದು" ಎನ್ನುತ್ತದೆ.ಅದಕ್ಕೆ ಏನೀಗ ನಾನು ಏನಾದರೂ ಕೇಳಿದೆನಾ ಎಂದು ನೀವು ಕನಲಬೇಕು.

ಪೇಟೆಗೆ ಬಂದು ನೋಡಿ.ನಿಮ್ಮ ಪಕ್ಕದ ಮನೆಯವನೂ ನಿಮ್ಮಂತೆ ಬಂದವನೇ "ಏನೂ ಪೇಟೆಗೆ ಬಂದಿರೋ" ಎಂದು ವಿಚಾರಿಸುತ್ತಾನೆ.ಹೌದೂ ಪೇಟೆಗೆ ಅಲ್ಲದೇ ನಾನೇನು ಕಾಡಿಗೆ ಬಂದ ಹಾಗೇ ಕಾಣಿಸುತ್ತದಾ ನಿನಗೆ ಎಂದು ನೀವು ಛೇಡಿಸಬೇಕು,ನಿಮ್ಮೊಳಗೆ.

ಹಿಂದೆ ನಮ್ಮ ರೇಡಿಯೋಗಳಿದ್ದವಲ್ಲ.ಅದರಲ್ಲಿ ವಾರ್ತೆ ಅಥವಾ ಪ್ರದೇಶ ಸಮಾಚಾರ ಅಂತ ಸುದ್ದಿ ಬಿತ್ತರವಾಗುತ್ತಿತ್ತು.ಅರ್ಧಕ್ಕೆ ಬಂದೊಡನೇ, "ಈ ವಾರ್ತೆಗಳನ್ನು ಆಕಾಶವಾಣಿಯಿಂದ ಕೇಳುತ್ತಿದ್ದೀರಿ" ಎನ್ನೋರು.ಯಲಾ ಆಕಾಶವಾಣಿಯಿಂದ ಅಲ್ಲದೇ ಇನ್ನೇನದರಿಂದ ಕೇಳುತ್ತಿರಲು ಸಾಧ್ಯ ಎಂದು ನಾನು ಚಿಕ್ಕವನಾಗಿದ್ದಾಗ ಅಕ್ಕಂದಿರ ಬಳಿ ಕೇಳಿ ಅವರನ್ನೂ ಕನ್ಪ್ಯೂಸ್ ಮಾಡಿ ಹಾಕಿದ್ದೆ.ಇನ್ನು ಪ್ರದೇಶ ಸಮಾಚಾರದಲ್ಲಂತೂ "ಪ್ರದೇಶ ಸಮಾಚಾರ ಕೇಳುತ್ತಿದ್ದೀರಿ"ಎನ್ನೋರು.ಅಲ್ಲಾ ಚಿತ್ರಗೀತೆ ಆಲಿಸುತ್ತಿದ್ದೇವೆ ಎಂದು ನಾನೇ ದೊಡ್ದದಾಗಿ ರೇಗುತ್ತಿದ್ದೆ.ಅನೇಕರು ಇರುತ್ತಾರೆ,ಕಂಡೊಡನೇ "ಆರೋಗ್ಯವಾ" ಎಂದು ಕೇಳುತ್ತಾರೆ.ಇದು ಯಾಕೆ ನಮ್ಮ ಆರೋಗ್ಯದ ಬಗ್ಗೆ ಇವರಿಗೆ ಈ ಘನವಾದ ಕಾಳಜಿ ಎಂದು ತಬ್ಬಿಬ್ಬು ಆಗುವುದೇ ಬಾಕಿ."ಆರಾಮಾನಾ" ಎನ್ನುತ್ತಾರೆ,ಆಗಲೂ ಇದೇನು ನಾವು ಆರಾಮವಾಗಿರೋದು ಇವರಿಗೆ ಲಾಭವಾ ನಷ್ಟವಾ ಎಂದು ತಲೆ ಹಾಳು ಮಾಡಿಕೊಳ್ಳುತ್ತೇವೆ."ಊಟ ಆಯಿತಾ ತಿಂಡಿ ತಿಂದಿರಾ" ಎನ್ನುವುದೂ ಇದೇ ಸಾಲಿನದ್ದು.

ಈ ಮೊಬೈಲ್ ಬಂದ ನಂತರವಂತೂ ಈ ಸಾಲಿಗೆ ಇನ್ನೊಂದು ಸೇರಿದೆ,ಮೊಬೈಲ್ ಕಿವಿಗೆ ಇಟ್ಟರೆ ಸಾಕು, "ಎಲ್ಲಿದ್ದೀರಿ?".ನಾನು ಎಲ್ಲೇ ಇದ್ದರೆ ನಿನಗೇನಪ್ಪಾ ಕಷ್ಟ?ನಿನಗೇನು ಹೇಳೋದಿದೆ ಹೇಳಪ್ಪಾ ಅಂತ ನಾವು ಮನಸಲ್ಲೇ ಶಾಪ ಹಾಕಬೇಕು.

ಹೀಗೆ ಎಷ್ಟೊಂದು ಮಾತೇ ಅಲ್ಲದ ಮಾತುಗಳು..! ನಾವು ಬೇಡ ಎಂದರೂ ನಮ್ಮನ್ನು ಹಿಂಬಾಲಿಸುತ್ತವೆ,ಅಥವಾ ನಾವೂ ಹೀಗೇ ಮಾತಾಡುತ್ತೇವೆ ಅಲ್ಲವಾ ?ನಿಮ್ಮ ಬಳಿ ಇಂಥ ಕಲೆಕ್ಷನ್ಸ್ ಇದ್ದರೆ ತಿಳಿಸಿ.

20071217

ನಾಲ್ಕು ಸಾಲು-೨೬


೧.ಸಮುದ್ರದ ಮೇಲೆ

ನಡೆಯುವ ಆಸೆ ಬಂದು

ಮರಳಿನ ಮೇಲೆ ನಿಂತೆ

ತೆರೆ ಬಂದು ಪಾದಗಳನ್ನು

ಮುಟ್ಟಿ ಬಾಜಿ ಕಟ್ಟಿತು.೨.ಚಂದಿರನ

ತುಂಬುತನಕ್ಕೆ

ಎದ್ದೇಳುವ ಸಾಗರ

ನಮ್ಮ ಪ್ರೀತಿಯನ್ನುಅಣಕಿಸುವುದು.೩.ನಾವಿಕನಿಲ್ಲದ

ದೋಣಿಯಲ್ಲಿ

ಸಾಗರವನ್ನು ಶೋಧಿಸಲು ಹೊರಟ

ಸಾಹಸಿಯನ್ನು

ಪರ್ವತಗಳು ಎತ್ತರದಿಂದ ನೋಡಿದವು.೪.ಒಂದು ತೆರೆಯನ್ನೂ

ಹಿಡಿದಿಡಲಾಗದ ಮಾನವ

ಸಮುದ್ರದೆದುರು

ಸೋಲನ್ನೊಪ್ಪಿರುವುದನ್ನು

ನದಿಗಳು

ಬಂದು

ತಿಳಿಸಿದವು.

20071211

ನಾಲ್ಕು ಸಾಲು-೨೪


೧.ಹಾಡನ್ನು

ಕಟ್ಟಿಕೊಳ್ಳಲು

ಬೊಗಸೆ ಎತ್ತಿದರೆ

ಹೃದಯ ಬಿಟ್ಟುಕೊಡೆನೆಂದು

ಮುಚ್ಚಿಕೊಂಡಿತು.

೨.ಬಣ್ಣಗಳೆಲ್ಲಾ ಒಂದೆಡೆ

ಕುಳಿತು

ಕಪ್ಪು ಮತ್ತು ಬಿಳಿ

ಬಣ್ಣಗಳನ್ನು

ಗೇಲಿ ಮಾಡಿದವು.೩.ಪ್ರೀತಿಯ ಆತುರಕ್ಕೆ

ರತಿ

ನಾಚಿ

ದೇವರು

ಹೃದಯದೊಳಗೆ ಬಂಧಿಯಾಗುವನು.೪.ಸೋಲನ್ನು ಒಪ್ಪಿಕೊಂಡ

ಕ್ರೀಡಾಳು

ಅಖಾಡದಿಂದ

ಗೆಲುವನ್ನು ಹುಡುಕುತ್ತಾ

ಶೂನ್ಯಕ್ಕೆ ಸಾಗುವುದು

ಯಾರೂ ಕಾಣರು.

20071210

ಕೊಲೆಗಾರ ಗಂಗಣ್ಣ


ಗಂಗಣ್ಣನ ತಲೆಗೆ ಅದು ಹೇಗೆ ಹೊಳೆಯಿತೋ ಗೊತ್ತಿಲ್ಲ.

ಇದ್ದಕ್ಕಿದ್ದಂತೆ ಅವನಿಗೆ ಒಂದು ಕೊಲೆ ಮಾಡಬೇಕು ಎಂದು ಸಿಕ್ಕಾಪಟ್ಟೆ ಅನ್ನಿಸಿದೆ.ಯಾರನ್ನು ಹೇಗೆ ಕೊಲೆ ಮಾಡೋಣ ಅಂತ ಅವನು ತುಂಬಾ ಯೋಚಿಸುತ್ತಿದ್ದಾನೆ.ಗಂಗಣ್ಣ ಇಂಥಾ ಒಂದು ಕೊಲೆಯನ್ನು ಇಂಥಾ ಒಂದು ಮಾದರಿಯಲ್ಲಿ ಮಾಡಬೇಕು ಎಂದು ನಿರ್ಧರಿಸಲು ತುಂಬಾ ದಿನಗಳಿಂದ ಹೆಣಗಾಡುತ್ತಿದ್ದಾನೆ.

ಕೊಲೆ ಮಾಡೋದು ಎಂದರೆ ಅದೇನು ಸಣ್ಣ ಸಂಗತಿಯಾ?ಯಾರನ್ನು ಕೊಲೆ ಮಾಡಬೇಕು ಅಂತ ಮೊದಲಾಗಿ ನಿರ್ಧರಿಸಬೇಕು.ಆಮೇಲೆ ಅವರನ್ನು ಯಾಕಾದರೂ ಕೊಲೆ ಮಾಡಬೇಕು ಅಂತ ಒಂದು ಸ್ವಂತ ನಿಯಮಾವಳಿಯನ್ನು ಜ್ಯಾರಿ ಮಾಡಬೇಕು.ಇಷ್ಟಾದಮೇಲೆ ಹೇಗೆ ಕೊಲೆ ಮಾಡೋದು ಅಂತ ಆಗಬೇಕು.ಅಲ್ಲಿಗೂ ಮುಗಿಯುತ್ತದಾ?ಯಾವಾಗ ಕೊಲೆ ಮಾಡೋದು ಎಂದು ಮುಹೂರ್ತ ಇಡಬೇಕು.ಒಂದು ವೇಳೆ ಮುಹೂರ್ತ ತಪ್ಪಿದರೆ ಏನು ಮಾಡಬೇಕು ಎಂದು ಉತ್ತರ ಭಾಗವನ್ನು ಈಗಲೇ ನಿರ್ಧರಿಸಬೇಕು.ಎಲ್ಲಾ ಸರಿಯಾಗಿಯೇ ಮತ್ತು ಗಂಗಣ್ಣನ ಆಶಯಗಳಂತೇ ಆಯಿತು ಎಂದಿಟ್ಟುಕೊಳ್ಳೋಣ,ಕೊಲೆ ಮಾಡಿದ ಮೇಲೆ ತಪ್ಪಿಸಿಕೊಳ್ಳುವುದಾ ಅಥವಾ ಸಿಕ್ಕಿಬೀಳೋದಾ ಎಂದೂ ಆಗಬೇಕು.ಒಂದು ವೇಳೆ ತಪ್ಪಿಸಿಕೊಳ್ಳೋದೇ ಆದರೆ ಹೇಗೆ ಮತ್ತು ಎಲ್ಲಿಗೆ ಎಷ್ಟು ದಿನ ತಪ್ಪಿಸಿಕೊಳ್ಳೋದು ಮತ್ತು ಹಾಗೇ ತಪ್ಪಿಸಿಕೊಳ್ಳುವಾಗ ಒಂದೊಮ್ಮೆ ಸಿಕ್ಕಿಬಿದ್ದರೆ ಏನು ಮಾಡೋದು ಎಂದೂ ಯೋಚಿಸಲೇಬೇಕಲ್ಲ.

ಗಂಗಣ್ಣ ಅದನ್ನೆಲ್ಲಾ ಪ್ರತೀ ರಾತ್ರಿ ಮಲಗಿದಾಗ ಯೋಚಿಸುತ್ತಿದ್ದಾನೆ.ತಪ್ಪಿಸಿಕೊಳ್ಳುವುದೇ ಆದರೆ ತುಂಬಾ ಖರ್ಚು ಬೀಳುತ್ತದೆ.ದುಡಿಮೆ ಕೂಡಾ ಇಲ್ಲದೇ ಅಲ್ಲಿ ಇಲ್ಲಿ ತಪ್ಪಿಸಿಕೊಳ್ಳುತ್ತಾ ಸಾಗುವಾಗ ಬಸ್ಸು ,ಕಾರು ಅಂತ ಬರೀ ಓಡಾಟಕ್ಕೇ ದಿನಕ್ಕೆ ನೂರಿನ್ನೂರು ರೂಪಾಯಿ ಬೇಕಾಗಬಹುದು ಎಂದು ಚಿಂತಿಸಿ ಬೆಚ್ಚಿಬೀಳುತ್ತಾನೆ.ಅಷ್ಟೊಂದು ಹಣ ತುಂಬಿಸಿಕೊಳ್ಳಲು ಸಾಲಗೀಲಾ ಅಂತ ಮಾಡಬೇಕು ,ಅದೂ ದುಬಾರಿಯೇ ಅಂತ ದುಃಖಪಡುತ್ತಾನೆ.ಸಿಕ್ಕಿಬೀಳುವುದು ಎಂದು ಮಾಡಿದರೂ ಪೊಲೀಸರಿಗೆ ವಕೀಲರಿಗೆ ರುಸ್ತುಮು ಅಂತ ತುಂಬಾ ಹಣ ಬೇಕಲ್ಲ ಎಂದೂ ಚಕಿತನಾಗುತ್ತಾನೆ.ರಾತ್ರಿ ಹೀಗೆ ಚಿಂತನೆ ಮಾಡುತ್ತಾ ಗಂಗಣ್ಣ ನಿದ್ದೆ ಹೋಗುತ್ತಾನೆ.

ನಸುಕಿನಲ್ಲಿ ಎಚ್ಚರವಾದೊಡನೇ ಯಾರನ್ನು ಕೊಲೆ ಮಾಡೋದು ಎಂಬ ಚಿಂತೆ ಶುರುವಾಗುತ್ತದೆ,ಏನೇ ಆದರೂ ಕೊಲೆ ಮಾಡೋದು ಮಾಡೋದೇ ಎಂದು ಮಧ್ಯಾಹ್ನದ ಹೊತ್ತಿಗೆ ಮತ್ತೊಮ್ಮೆ ತನ್ನೊಳಗೆ ಖಚಿತನಾಗುತ್ತಾನೆ.ಸಂಜೆಯಾಗುತ್ತಲೇ ಹೇಗೆ ಕೊಲೆ ಮಾಡೋಣ,ಚೂರಿಯಿಂದಲಾ,ತಲವಾರದಿಂದಲಾ ಗುಂಡಿನಿಂದಲಾ ಎಂದು ಮತ್ತೊಮ್ಮೆ ಚಿಂತೆ ಶುರುವಾಗುತ್ತದೆ.

ಗಂಡಸನ್ನೇ ಕೊಲ್ಲಬಹುದು ಆದರೆ ಯಾವ ಗಂಡಸು,ಎಷ್ಟು ಪ್ರಾಯದ್ದು ಎಂಬ ಸಮಸ್ಯೆಯೂ ಅವನನ್ನು ಕಾಡುತ್ತದೆ.ಹಾಗೊಮ್ಮೆ ಕೊಲೆ ಮಾಡಿದಾಗ ಅವನಿಗೆ ಸಣ್ಣ ಮಕ್ಕಳೋ ಇದ್ದರೆ ಅವು ಅನಾಥವಾಗುತ್ತವಲ್ಲಾ ಎಂಬ ಕರುಣೆ ಮೂಡುತ್ತದೆ.ಯುವಕನೇ ಆಗಿದ್ದರೆ ಅವನನ್ನೇ ನಂಬಿದ ಅವನ ಅಪ್ಪ ಅಮ್ಮ ಪಾಪ ಎಂದು ಬೇಜಾರಾಗುತ್ತದೆ.ಮುದುಕನನ್ನೇ ಕೊಂದು ಹಾಕಿದರೆ ತನ್ನ ತಾಖತ್ತಿಗೆ ಅದು ತುಂಬಾ ಸಣ್ಣದಾಗಿಬಿಡುತ್ತದೆ.

ಹೆಣ್ಣನ್ನೇ ಕೊಲ್ಲಬಹುದು ಆದರೆ ಅವಳಿಗೆ ಮದುವೆ ಆಗಿದ್ದರೆ ಮತ್ತೆ ಅದೇ ಅವಳನ್ನೇ ನಂಬಿದ ಅವಳ ಗಂಡ,ಮಕ್ಕಳ ಸ್ಥಿತಿ ನೆನಪಿಗೆ ಬರುತ್ತದೆ.ಮದುವೆ ಆಗಿರದಿದ್ದರೆ ಪಾಪ ಒಂದು ಹುಡುಗನಿಗೆ ಒಂದು ಹುಡುಗಿ ಇಲ್ಲದಂತಾಗುತ್ತದಲ್ಲಾ ಎಂದು ಖೇದವಾಗುತ್ತದೆ.

ಗಂಗಣ್ಣ ಹಣ್ಣುಹಣ್ಣಾಗಿದ್ದಾನೆ.

ಅವನು ಕೊಲೆ ಮಾಡೋದು ಎಂದು ತೀರ್ಮಾನಿಸಿದ್ದಾಗಿದೆ.ಅದನ್ನು ತುಂಬಾ ಪ್ರೀತಿಯಿಂದ ಮಾಡಬೇಕು ಎಂದು ಅವನು ನಿರ್ಧರಿಸಿದ್ದೂ ಆಗಿದೆ.ಆದರೆ ಉಳಿದ ಈ ವಿಚಾರಗಳು ಅವನನ್ನು ಹಗಲೂ ಇರುಳೂ ಕಾಡುತ್ತಲೇ ಇವೆ.


೨.

ಈ ಎಲ್ಲಾ ಹಿನ್ನೆಲೆಯಲ್ಲೇ ಗಂಗಣ್ಣ ಆ ಊರಿನ ಮಹಾನ್ ಚಿಂತಕ ಕಂಕಡಿಯನ್ನು ಭೇಟಿಯಾಗಿದ್ದಾನೆ.ಕಂಕಡಿ ಬಾವಿಕಟ್ಟೆಯಲ್ಲಿ ಕುಳಿತು ತುಂಬಾ ಗಂಭೀರವದನನಾಗಿ ಗಂಗಣ್ಣನ ಸಮಸ್ಯೆಯನ್ನು ಆಲಿಸುತ್ತಿದ್ದಾನೆ.ಒಂದು ಬಾರಿ ಕೊಲೆ ಮಾಡದೇ ಇರುವ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡೋಣವೇ ಎಂದು ಕಂಕಡಿ ಆಲೋಚಿಸುತ್ತಾನೆ.ಆದರೆ ಅದರಿಂದ ತಾನೊಬ್ಬ ಚಿಂತಕನೆಂಬ ಹೆಸರಿಗೇ ಧಕ್ಕೆ ಆಗಬಹುದು ಮಾತ್ರವಲ್ಲ,ಯಾವತ್ತೂ ಗಂಗಣ್ಣನ ಮುಂದೆ ತನ್ನ ಇಮೇಜು ಹಾಳಾಗಬಹುದು ಎಂಬ ಮುಂದಾದ ಭಯ ಅವನನ್ನು ಆವರಿಸುತ್ತದೆ.ಏನೇ ಆದರೂ ಗಂಗಣ್ಣ ಕೊಲೆ ಮಾಡಲೇ ಬೇಕು ಎಂದು ಕಂಕಡಿ ತೀರ್ಮಾನಿಸುತ್ತಾ ಆ ವಿಚಾರವನ್ನು ಅವನಿಗೆ ತಿಳಿಸುತ್ತಾನೆ.

ಆಗ ಗಂಗಣ್ಣ "ಅದು ನನಗೂ ಗೊತ್ತಿದೆ.ಆದರೆ ಯಾರನ್ನು ಮತ್ತು ಹೇಗೆ ಮತ್ತು ಎಲ್ಲಿ ಕೊಲೆ ಮಾಡುವುದು" ಅಂತ ಹೇಳಿದರೆ ಸಾಕುಎಂದು ಗೋಗರೆಯುತ್ತಾನೆ.ಕಂಕಡಿ ತನ್ನ ಜೋಳಿಗೆ ಚೀಲಕ್ಕೆ ಬೇಡದಿದ್ದರೂ ಇಣುಕುತ್ತಾನೆ.ಅವನಿಗೆ ಆಗಾಗ ಆ ರೀತಿ ತನ್ನ ಜೋಳಿಗೆ ಚೀಲದಲ್ಲಿ ಗಾಢ ಚಿಂತನೆಯನ್ನು ಹುಡುಕುವ ಚಾಳಿ.ಅದು ಅವನ ಮಟ್ಟಿಗೆ ತುಂಬಾ ಉಪಕಾರಿ.ಏಕೆಂದರೆ ಒಮ್ಮೆ ಅವನನ್ನು ಫೈನಾನ್ಸಿನವರು ದಾರಿ ಮಧ್ಯೆ ಹಿಡಿದು ಸಾಲ ಕೊಡದಿದ್ದರೆ ಕಾಲು ಮುರಿಯುವುದಾಗಿ ಧಮಕಿ ಹಾಕಿದಾಗ ಕಂಕಡಿ ಜೋಳಿಗೆ ಚೀಲಕ್ಕೆ ಹೀಗೆ ಇಣುಕಿ ಗೋಳೋ ಎಂದು ಅತ್ತು ಫೈನಾನ್ಸಿನವರನ್ನೇ ಯಾಮಾರಿಸಿದ್ದ.ಅಂತಿರುವಾಗ ಇಂಥಾ ಸಮಸ್ಯೆಗೆ ಚೀಲಕ್ಕೆ ಇಣುಕಿದರೆ ಪರಿಹಾರ ಸಿಗುತ್ತದೆ ಎಂದು ಅವನು ಇಣುಕಿದ.

ಕಂಕಡಿ ಅಗತ್ಯಕ್ಕಿಂತ ಹೆಚ್ಚು ಸೀನ್ ಕ್ರಿಯೇಟ್ ಮಾಡುವುದನ್ನು ಕಂಡು ಗಂಗಣ್ಣ ರೋಸಿಹೋದ.ಆದರೆ ಕಂಕಡಿಯ ಅದೃಷ್ಟವೋ ಏನೋ ಅವನನ್ನೇ ಕೊಲೆ ಮಾಡುವ ಸಿಟ್ಟಾಗಲಿ, ಐಡಿಯಾವಾಗಲಿ ಗಂಗಣ್ಣನಿಗೆ ಹೊಳೆಯಲಿಲ್ಲ.

"ಏನಾದರೂ ಹೇಳಿ"ಎಂದ ಗಂಗಣ್ಣ.ಕಂಕಡಿ ಏನನ್ನೂ ಹೇಳಲಾರದೇ "ನೀನು ಕೊಲೆ ಮಾಡಲೇ ಬೇಕು.ಅದರಲ್ಲಿ ಯಾವ ಚೇಂಜೂ ಇಲ್ಲ.ಆದರೆ ಯಾರನ್ನು ಅಂತ ಮೊದಲು ನೋಡಿದರಾಯಿತು. ಆಮೇಲೆ ಅವನ ಕೆಪಾಸಿಟಿಗೆ ಬೇಕಾದ ಹಾಗೇ ಕೊಂದರಾಯಿತು"ಎಂದು ಭಯಂಕರ ಮಾದರಿಯಲ್ಲಿ ಪರಿಹಾರ ನೀಡಿದ.

ಗಂಗಣ್ಣನಿಗೂ ಇದು ಮಾತು ಎಂದನಿಸಿತು.

ಯಾವುದಕ್ಕೂ ಮೊದಲು ಜನ ಫಿಕ್ಸ್ ಆಗಲಿ.ಆಮೇಲೆ ನೋಡಿದರಾಯಿತು.ಬಡವ ಅಂತಾದರೆ ಕತ್ತಿಯಲ್ಲಿ.ಶ್ರೀಮಂತ ಆದರೆ ಬುಲ್ಲೆಟ್ಟಿನಲ್ಲಿ.ಹುಡುಗಿ ಆದರೆ ಹಾಡಾ ಹಗಲು.ಬಿಸಿನೆಸ್‌ಮ್ಯಾನ್ ಆದರೆ ಅಂಗಡಿ ಪ್ರಿಮಿಸಿಸ್ಸಲ್ಲಿ.ರೈತನಾದರೆ ಹೊಲದಲ್ಲಿ,ರಾಜಕಾರಣಿಯಾದರೆ ಒಂದು ದೊಡ್ಡ ಸಭೆಯ ನಡುವೆ ಹೀಗೆ ಅವರವರ ಅಂತಸ್ತಿಗೆ ತಕ್ಕ ಹಾಗೇ ಕೊಂದುಬಿಡೋಣ ಎಂದು ಅವನು ಬಹಳ ಜಲ್ದಿ ನಿರ್ಧರಿಸಿದ.ಮತ್ತು ಅದನ್ನು ಕಂಕಡಿಯ ಬಳಿ ಹೇಳಿದ.

ಆಮೇಲೆ ಅವನಿಗೆ ಯಾರನ್ನು ಕೊಲ್ಲುವುದು ಎಂಬ ವಿಚಾರಕ್ಕೆ ಕಂಕಡಿಯೇ ಸಹಾಯ ಮಾಡುವುದಾಗಿ ಹೇಳಿದ.


೩.

ಹಾಗೇ ಅವರು ಸೀದಾ ಬಂದದ್ದು ಜೈಲಿಗೆ.ಜೈಲಲ್ಲಿ ದೊಡ್ಡದೊಡ್ಡ ಕೊಲೆಗಾರಿರುತ್ತಾರೆ ಎಂದು ಆಸೆ ಹುಟ್ಟಿಸಿದವನೇ ಕಂಕಡಿ.ಅವರಲ್ಲಿ ಮೂರ್‍ನಾಲ್ಕು ಜನರನ್ನು ಮೀಟ್ ಆದರೆ ಕೊಲೆಯ ಡಿಟೈಲು ಸಿಗುತ್ತದೆ ಮತ್ತು ಆ ಮೂಲಕ ಗಂಗಣ್ಣ ತುಂಬಾ ವೈಭವದ ಕೊಲೆ ಮಾಡಿ ಯಶಸ್ಸು ಗಳಿಸಬಹುದು ಎಂದು ಕಂಕಡಿ ಶಿಫಾರಸ್ಸು ಮಾಡಿದ್ದ ಮತ್ತು ಅದಕ್ಕಾಗಿಯೇ ಜೈಲಿಗೆ ಗಂಗಣ್ಣನ್ನು ಕರೆ ತಂದಿದ್ದ.ಜೈಲಲ್ಲಿ ಅವರಿಬ್ಬರೂ ತುಂಬಾ ಕ್ರಿಮಿನಲ್ಲುಗಳನ್ನು ಭೇಟಿಯಾದರು.ಆದರೆ ಯಾವನೊಬ್ಬನೂ ತಾನು ಒಂದು ,ಒಂದೇ ಒಂದು ಕೊಲೆ ಮಾಡಿದೆ ಎಂದು ಒಪ್ಪಿಕೊಳ್ಳಲೇ ಇಲ್ಲ.ತನ್ನನ್ನು ಅನ್ಯಾಯವಾಗಿ ಜೈಲಿಗೆ ತಳ್ಳಲಾಗಿದೆ ಎಂದೂ ಪ್ರತಿಯೊಬ್ಬರೂ ಹೇಳಿದರು.ಆದ್ದರಿಂದ ಗಂಗಣ್ಣನಿಗೆ ಅಲ್ಲಿ ಒಂದೇ ಒಂದು ಐಡಿಯಾ ಸಿಗಲೇ ಇಲ್ಲ.

ಕಂಕಡಿ ಹೇಳಿದ "ನಾವು ಕೊಲೆಯಾದವರ ಮನೆಗೆ ಹೋಗುವಾ.ಅಲ್ಲಿ ಸತ್ತವನ ಮನೆ ಮಂದಿ ಕೊಲೆಯ ಬಗ್ಗೆ ಹೇಳುವ ಕ್ರೈಂಸ್ಟೋರಿ ನಿನಗೆ ಸಖತ್ ಇಂಪ್ರೆಸ್ ಮಾಡಬಹುದು." ಗಂಗಣ್ಣ ತಲೆಯಾಡಿಸಿದ.

ಇಬ್ಬರೂ ಒಂದು ಭಾರೀ ದೊಡ್ಡ ಸಾಹಿತಿಯ ಮನೆಗೆ ಹೋದರು.ಆ ಸಾಹಿತಿಯನ್ನು ಯಾರೋ ದಾರಿ ಮಧ್ಯೆ ಬರುತ್ತಿರುವಾಗ ಇನ್ನೂ ಗೊತ್ತೇ ಇಲ್ಲದ ಕಾರಣಕ್ಕಾಗಿ ಕೊಂದು ಹಾಕಿದ್ದರು.ಸಾಹಿತಿಯ ಮಡದಿಯನ್ನು ಗಂಗಣ್ಣ ಹಾಗೂ ಕಂಕಡಿ ಅವರ ಮನೆಯಲ್ಲೇ ಭೇಟಿಯಾದರು. ಆದರೆ "ಅವರೆಲ್ಲಿ ಸತ್ತಿದ್ದಾರೆ.ನೋಡಿ ಇಲ್ಲಿ.ಈ ಕೃತಿಯಲ್ಲಿ ಅವರು ಹೇಗೆ ಜೀವಂತವಾಗಿದ್ದಾರೆ "ಎಂದು ಆಯಮ್ಮ ಹೇಳುವುದಾ!

"ಸಾಹಿತಿಗಳೆಲ್ಲಾ ಹೀಗೆ .ತಾನು ಸಾಯುವ ತನಕ ಪಕ್ಕಾ ಹುಚ್ಚನಾಗಿರುವುದಲ್ಲದೇ ಸತ್ತ ಮೇಲೆ ತನ್ನ ಮನೆಯವರೆಲ್ಲಾ ಹುಚ್ಚರಾಗಿರುವಂತೆ ನೋಡಿಕೊಳ್ಳುತ್ತಾರೆ" ಎಂದು ಕಂಕಡಿಗೂ ಮೊದಲೇ ಗಂಗಣ್ಣ ಹೇಳಿದ.

ಹೀಗಾದ ಮೇಲಾದರೂ ಗಂಗಣ್ಣನ ಮನಸ್ಸು ಬದಲಿರಬಹುದೆಂದು ಕಂಕಡಿ ಊಹಿಸಿದ್ದು ತೀರಾ ತಪ್ಪಾಗಿತ್ತು. ಏಕೆಂದರೆ ಗಂಗಣ್ಣ ತುಂಬಾ ಸ್ಟ್ರಾಂಗ್ ಆಗಿದ್ದ.ಏನೇ ಆದರೂ ಕೊಲೆ ಮಾಡುವ ಬಗ್ಗೆ ತನಗೆ ವಿಪರೀತ ಹುಕ್ಕಿ ಬಂದಿದೆ ಎಂದು ಅವನು ಉಲ್ಲಾಸತನದಲ್ಲಿ ಉವಾಚಿಸಿದ.

ಅವರು ಬೆಂಗಳೂರಿನ ದೊಡ್ಡ ದಿವಂಗತ ರೌಡಿಯ ಅಡ್ಡೆಗೆ ಹೋಗುವುದು ಎಂದು ನಿರ್ಧರಿಸಿ ಹಾಗೇ ಮಾಡಿದರು.ಅಲ್ಲಿ ಕುಳಿತಿದ್ದ ಆ ರೌಡಿಯ ತಮ್ಮಂದಿರು,"ಅಣ್ಣಾ ಎಂದೂ ಸತ್ತೇ ಇಲ್ಲವೆಂದೂ,ಯಾರೇ ಆಗಲಿ ಅಣ್ಣನನ್ನು ಕೊಲ್ಲಲಾರರೆಂದೂ,ಅಣ್ಣಾ ಚಿರಂಜೀವಿಯೆಂದೂ ಹೇಳಿ ಗಂಗಣ್ಣನ್ನು ತುಂಬಾ ನಿರಾಶೆಗೊಳಿಸಿದರು.

ಅಲ್ಲಿಗೆ ಗಂಗಣ್ಣ ಕಂಕಡಿಯ ಸಹವಾಸವನ್ನೇ ಬಿಟ್ಟ.


೪.

ಊರಿಗೆ ಮರಳಿದ ಮೇಲೆ ಗಂಗಣ್ಣನಿಗೆ ತನ್ನ ಗುರಿ ಮುಟ್ಟಲು ತುಂಬಾ ಪ್ರಯತ್ನ ಅಗತ್ಯವೆಂದು ಅನಿಸಿತು.ತನಗೆ ಒಬ್ಬ ನಿಜವಾದ ಗೈಡಿನ ಅಗತ್ಯವಿದೆ ಎಂದು ಅವನು ಭಾವಿಸಿದ.ಆ ವೇಳೆಗೆ ಅವನಿಗೆ ಶಿರಾಡಿ ಕಾಡಿನ ಆ ಗುಡ್ಡದಲ್ಲಿರುವ ಗುಹೆಯಲ್ಲಿ ಕುಳಿತ ಆ ಮೌನಿ ಅವಧೂತನ ನೆನಪಾದದ್ದು.ಆತ ಮುಂದಿನ ಹುಣ್ಣಿಮೆಗೆ ಎಲ್ಲರ ಒತೆ ಮಾತನಾಡುವವನಿದ್ದಾನೆ ಎಂದು ಪೇಪರಲ್ಲಿ ಓದಿದ ಗಂಗಣ್ಣ ತಪ್ಪದೇ ಆ ದಿನ ಎಲ್ಲರಿಗಿಂತಲೂ ಮೊದಲಾಗಿ ಶಿರಾಡಿ ಗುಡ್ಡದ ಅವಧೂತನನ್ನು ಭೇಟಿಯಾದ.

ಇವನ ಬಯಕೆಯನ್ನು ಶಾಂತ ಚಿತ್ತನಾಗಿ ಆಲಿಸಿದ ಅವಧೂತ ಒಂದು ಕಲ್ಲನ್ನು ಎತ್ತಿ ಗಂಗಣ್ಣನ ಕೈಗಿತ್ತು ಈ ಕಲ್ಲು ಕರಗಿದ ದಿನ ಮೊದಲಾಗಿ ಯಾರು ಕಾಣುತ್ತಾರೆಯೋ ಅವರನ್ನು ಕೈಗೆ ಏನು ಸಿಗುತ್ತದೆಯೋ ಆದರಿಂದ ಬೇಕು ಬೇಕಾದ ರೀತಿಯಲ್ಲಿ ಕೊಂದು ಹಾಕುವಂತೆಯೂ ಸೂಚಿಸಿ,ಎಲ್ಲಾ ಭೇಟಿಗಳನ್ನು ರದ್ದು ಮಾಡಿ ಗುಹೆಯೊಳಗೆ ಸೇರಿಕೊಂಡ.

ಗಂಗಣ್ಣ ಕಲ್ಲು ಕೈಯಲ್ಲಿಟ್ಟುಕೊಂಡೇ ಆ ರಾತ್ರಿ ಮಲಗಿದ.

ಏನಾಶ್ಚರ್ಯ! ಬೆಳಗಾಗುತ್ತಲೇ ಕಲ್ಲು ಕರಗಿ ಕೈತುಂಬ ನೀರು ಸೋರುತ್ತಿತ್ತು.

ಕೊನೆಗೂ ತನ್ನ ಮನದಾಸೆಯನ್ನು ಈಡೇರಿಸಿದ ಆ ಶಿರಾಡಿ ಕಾಡಿನ ಅವಧೂತನಿಗೆ ನೂರು ಬಾರಿ ನಮಿಸಿದ.

ಮೊದಲು ಕಣ್ಣಿಗೆ ಯಾರು ಬೀಳುತ್ತಾರೆ ಎಂದು ಸೀದಾ ಬಾಗಿಲು ತೆರೆದ.ದಿನಾ ಬರಬೇಕಾಗಿದ್ದ ಹಾಲಿನವನು ಬರಬಹುದು ಅಥವಾ ಪೇಪರಿನ ಹುಡುಗ ಸಿಗಬಹುದು ಎಂದು ಕಾದ.ಅವರು ಬರಲಿಲ್ಲ. ಅಂಗಳಕ್ಕಿಳಿದ.ಯಾರೂ ಕಾಣಲಿಲ್ಲ.

ಬೀದಿಗೆ ಬಂದ.ಯಾರೂ ಕಣ್ಣಿಗೆ ಬೀಳಲಿಲ್ಲ.ಕೇರಿ ಪೂರಾ ಸುತ್ತಿದ.ಯಾರೂ ತೋರಲಿಲ್ಲ.

ಪಟ್ಟಣವನ್ನೆಲ್ಲಾ ಅಲೆದಾಡಿದ.ಯಾರೂ ಇಲ್ಲ.

ಅರೆ ಅರೆ ಏನಾಗಿದೆ ಈ ಜನರಿಗೆ ಎಲ್ಲಿಗೆ ಹೋದರು ಇವರು ಎಂದು ಸಖೇದಾಶ್ಚರ್ಯಗೊಂಡು ಕಂಗಾಲಾದ.ಏನು ಮಾಡುವುದು ಎಂದು ಸಂಜೆ ತನಕ ಎಲ್ಲೆಂದರಲ್ಲಿ ಅಲೆದಾಡಿ ಸುತ್ತಾಡಿ ಸೋತು ಒಂದು ಮರದಡಿ ಕುಳಿತ. ಯಾರೂ ಅತ್ತಿತ್ತ ಹೋಗುತ್ತಲೂ ಇರಲಿಲ್ಲ.

ದಿಕ್ಕೆಟ್ಟ ಗಂಗಣ್ಣ ಅದೇ ರಾತ್ರಿ ಸೀದಾ ಶಿರಾಡಿ ಕಾಡಿನ ಆ ಗುಹೆಯಲ್ಲಿರುವ ಆ ಅವಧೂತನನ್ನು ಕಂಡು ತನ್ನ ಅವಸ್ಥೆಯನ್ನು ನಿವೇದಿಸಿಕೊಳ್ಳಲು ನಿರ್ಧರಿಸಿದ.

ಇನ್ನೇನು ಗುಹೆ ಹೊಕ್ಕುವುದು ಬಾಕಿ ಎಂದಾಗ ಗಂಗಣ್ಣನಿಗೆ ಫಳ್ಳನೇ ಹೊಳೆದದ್ದು ಇದು.

"ಹೌದಲ್ಲಾ ಈಗ ತಾನು ಮೊದಲಾಗಿ ಕಾಣುತ್ತಿರುವುದು ಅವಧೂತನನ್ನೇ ತಾನೇ.ಅಂದಮೇಲೆ ಅವನನ್ನು ಕೊಲ್ಲಲೇ ಬೇಕಲ್ಲ!"

ಗಂಗಣ್ಣನಿಗೆ ಸಂದಿಗ್ಧವೇ ಮಾಯವಾಯಿತು.ಅವಧೂತನನ್ನು ಕೊಲ್ಲುವುದರ ಮೂಲಕ ಅವಧೂತನ ಮಾತಿಗೂ ತನ್ನ ಘನ ಉದ್ದೇಶಕ್ಕೂ ಒಂದೇ ಸಾಲಿನಲ್ಲಿ ಅರ್ಥ ದೊರಕುತ್ತದೆ ಎಂದು ಸಂತೋಷವಾಯಿತು.

ಸೀದಾ ಹೋಗಿ ಅವಧೂತನ ಮೇಲೆ ಬೀಳಲು ನಿರ್ಧರಿಸಿದ ಗಂಗಣ್ಣ ವೇಗವಾಗಿ ಗುಹೆಗೆ ನುಗ್ಗಿದ.

ಆದರೆ ಏನು ಮಾಡೋಣ ಅಲ್ಲಿ ಆ ಅವಧೂತನೇ ಇರಲಿಲ್ಲ.

ಹಾಗೇ ಗುಹೆ ಒಳಗೆ ಹೋದ ಗಂಗಣ್ಣ ಇಂದಿನ ತನಕ ಯಾರಿಗೂ ಕಾಣಲು ಸಿಕ್ಕಿಲ್ಲ.