20070929

ಬ್ರಾಹ್ಮಣೋಸ್ಯಮುಖಮಾಸೀತ್..


ಜಾಗತೀಕರಣದ ತೆಕ್ಕೆಗೆ ಬ್ರಾಹ್ಮಣರು ತಾವೇ ಸ್ವಸಂತೋಷದಿಂದ ಸೇರಿಕೊಂಡಿದ್ದಾರೆ .

ತಪ್ಪೇನಲ್ಲ.

ಯಾರಿಗೆ ತಾನೇ ಅದೇ ಜನಿವಾರ,ಜುಟ್ಟು,ಮೂರು ನಾಮದ ಬದುಕು ಬೇಕು?

ಬೆಳಗಾತ ಎದ್ದು, ಕೊಡಪಾನತಣ್ಣೀರು ತಲೆಗೆ ಸುರಿದು, ದೇವರ ತಲೆಗೂ ಹೊಯ್ದು,ಕಂಚಿನ ಉರುಳಿಯಲ್ಲಿ ಇಂಗಿಸಿದ ಬೋನ ತಿನ್ನುವ ಕಾಲ ಎಂದೋ ಹೋಗಿದೆ.ಅದೇ ಮೂರು ಖಂಡಿ ಅಡಿಕೆ,ಮೂವತ್ತು ಗುಂಟೆ ಜಮೀನು,ಗೊಬ್ಬರದ ಹಟ್ಟಿ, ಮಂಗಗಳ ಕಾಟ, ಕೊಳೆರೋಗ,ನಂಬ್ರ, ಜಂಬ್ರ ಅಂತ ನಿತ್ಯವೂ ವಾರ್ ಡಿಕ್ಲೇರ್ ಮಾಡುತ್ತಾ ಬದುಕುವುದೂ ಈಗ ಕಷ್ಟ ಎಂದು ಅನಿಸತೊಡಗಿದೆ.

ಹಾಗೇ ಅನಿಸುವಂತೇ ಮಾಡಿದ್ದೇ ಜಾಗತೀಕರಣ.

ಅಸಂತುಷ್ಟೋ ದ್ವಿಜೋ ನಷ್ಟಃ,ಸಂತುಷ್ಟೇನ ಕ್ಷತ್ರಿಯಃ..ಈ ಮಾತು ಈಗ ಔಟ್‌ಡೇಟ್.

ಬ್ರಾಹ್ಮಣ ಮನಸ್ಸೇ ಹೇಳುತ್ತಿದೆ,-ಇದೆಲ್ಲಾ ಅನಿವಾರ್ಯ.ಏಕೆಂದರೆ ಬದುಕನ್ನು ತುಂಬಾ ಸಂತೋಷದಿಂದ ಅನುಭವಿಸಬೇಕು ಎಂಬುದು ಎಲ್ಲರ ಬಯಕೆ. ಬ್ರಾಹ್ಮಣರಿಗೆ ಆ ಸಂತೋಷ ಬೇಗನೇ ಸಿಕ್ಕಿದರೆ ತಪ್ಪೇನು?ಇಷ್ಟಕ್ಕೂ ಯಾರಿಗೆ ತಾನೇ ಸ್ವಂತ ಕಾರಲ್ಲಿ ತಿರುಗಾಡೋ,ಪಾರ್ಲರ್‌ನಲ್ಲಿ ತಿಂಬೋ,ಟಿವಿ ಎದುರು ಕಾಂಬೋ ಆಸೆಗಳು ಇರೋದಿಲ್ಲ?''

ಕಳೆದ ವಾರ ಕನ್ನಡಕದ ಅಂಗಡಿಯೊಂದರಲ್ಲಿ ಒಬ್ಬರು ಮಧ್ಯವಯಸ್ಕರು ಸಿಕ್ಕಿದ್ದರು.ಮಾತನಾಡುತ್ತಾ ಅವರು ಬಹು ದೊಡ್ಡ ದೇವಸ್ಥಾನವೊಂದರ ಪೂಜೆ ಭಟ್ಟರು ಎಂದು ಗೊತ್ತಾಯಿತು.ದೇವಸ್ಥಾನ,ಅಲ್ಲಿನ ವೈಭವ,ಆಡಳಿತಗಾರರ ಕುರಿತು ಅವರು ಬಾಯ್ತುಂಬಾ ಹೇಳಿದ್ದು ನಾವು ಕೇಳಿದ್ದೂ ಆಯಿತು.ನಾನು ಕಣ್ ಬಾಯ್ ಬಿಟ್ಟು ಅವರನ್ನು ನೋಡಿದೆ.ಟೀ ಶರಟು,ಪ್ಯಾಂಟು ಹಾಕಿದ್ದರು. ಮ್ಯಾಚಿಂಗಾಗಿತ್ತು. ಪರವಾಗಿಲ್ಲ ಭಟ್ರಿಗೆ ಡ್ರೆಸ್ ಸೆನ್ಸ್ ಚೆನ್ನಾಗಿದೆ ಎಂದುಕೊಂಡೆ.ಕ್ರಾಪನ್ನು ಹೇಗೆ ಬಾಚಿಕೊಂಡಿದ್ದರು ಎಂದರೆ ಜುಟ್ಟು ಆದಷ್ಟೂ ಫೇಡ್ ಆಗುವಂತೆ ನೋಡಿಕೊಂಡಿದ್ದರು.ಇಂಪೋರ್ಟೆಡ್ ಕೂಲಿಂಗ್ಲಾಸು ಶರಟಿನ ಎದೆಯಂಚಿನಲ್ಲಿ ಕುಳಿತಿತ್ತು.ಊರ ಹೊರಗೆ ಏರ್ಪಾಟಾಗಿರುವ ಉನ್ನತ ಧ್ಯಾನಶಿಬಿರಕ್ಕೆ ಅವರು ಹೋಗಬೇಕಾಗಿತ್ತು.

ಅವರು ಹೋದ ಮೇಲೆ ನನಗೆ ಅಚ್ಚರಿ ಎನಿಸಿದ್ದು. ನನ್ನ ಪ್ಲಾಟಿನಾದಲ್ಲಿ ನಾನು ಹೋಗುತ್ತಿದ್ದಾಗ ಅವರು ನನಗಿಂತ ವೇಗದಲ್ಲಿ ಡಿಸ್ಕವರಿಯಲ್ಲಿ ಧೂಂ ಅಂತ ಹೋದರು.ದಿನಾ ಆ ದೇವರ ಜೊತೆ ಇರುವ,ನಮಗೆಲ್ಲರಿಗಿಂತಲೂ ಆ ದೇವರಿಗೆ ಕ್ಲೋಸ್ ಫ್ರೆಂಡ್ ಆಗಿರುವ, ನಮ್ಮ ಪ್ರಾರ್ಥನೆಗಳನ್ನು ದೇವರಿಗೆ ಕಳುಹಿಸುವ ಮೀಡಿಯೇಟರ್ ಆಗಿರುವ ಭಟ್ಟರಿಗೆ ಊರ ಹೊರಗಿನ ಉನ್ನತ ಧ್ಯಾನ ಶಿಬಿರ ಬೇಕಾಗುತ್ತದಾ?ದೇವರ ಜೊತೆ ಇವರ ಅನುಸಂಧಾನ ಹಾಗಾದರೆ ಏನು?ಅವರು ಮಾಡೋ ಪೂಜೆ ಪ್ರಾರ್ಥನೆ ಕೂಡಾ ಬರೀ ಜಾಬ್ ಮಾತ್ರಾ ಇರಬಹುದಾ?

ಜಾಗತೀಕರಣ ಹುಟ್ಟು ಹಾಕಿದ ಆಸೆಗಳಿವು.

ಕೈಗಾರೀಕಣ ಆದಾಗ ಬ್ರಾಹ್ಮಣ ವರ್ಗದಲ್ಲಿ ಆ ಕಾಲದ ಕಟ್ಟುಪಾಡುಗಳೆಲ್ಲಾ ದಡಬಡ ಆಗಿದ್ದವು, ಒಂದು ಹಂತದಲ್ಲಿ ಬ್ರಾಹ್ಮಣರೆಲ್ಲಾ ಆಗ ಒಂದು ಗೀಟು ದಾಟಿ ಹೋಗಿದ್ದರು ಎಂದು ಅಪ್ಪ ಹೇಳುತ್ತಿದ್ದುದು ಈಗ ನೆನಪಾಗುತ್ತಿದೆ.ಈ ರೀತಿಯ ರೂಪಾಂತರಗಳು ಎಷ್ಟೊಂದು ಬಾರಿ ಆಗಿದ್ದವೋ..

ಈಗ ಆಗುತ್ತಿರುವುದನ್ನು ನೋಡಿ.ಮಲೆನಾಡು ಒಳನಾಡುಗಳಲ್ಲಿ ಬ್ರಾಹ್ಮಣರು ಕೃಷಿಜಮೀನುಗಳನ್ನು ಸಾರಾಸಗಟಾಗಿ ಮಾರುತ್ತಿದ್ದಾರೆ.ಹತ್ತು ವರ್ಷಗಲ ಹಿಂದೆ ಶುಂಠಿ ಕೃಷಿ ಮಾಡಲೆಂದು ಬಂದ ಮಲೆಯಾಳೀ ಕ್ರಿಶ್ಚಿಯನ್ನರು ಸಿಕ್ಕ ಸಿಕ್ಕ ಗದ್ದೆಗಳನ್ನೆಲ್ಲಾ ಗೇಣಿಗೆ ಪಡೆದು ಶುಂಠಿ ಹಾಕಿ ಹಣ ಬಾಚಿದ್ದರು.ಆ ದಿನಗಳ್ಲೇ ಈ ಮಲೆಯಾಳಿಗಳಿಗೆ ಈ ಭಾಗದ ಭೂಮಿಯ ರುಚಿ ಸಿಕ್ಕಿದೆ.ಇದೇ ಹೊತ್ತಿಗೆ ಬ್ರಾಹ್ಮಣ ಕುಟುಂಬಗಳು ಕಿರಿದಾಗುತ್ತಾ ಆಗುತ್ತಾ ಬಾಜಿರಕಂಬದ ಸುತ್ತು ಪೌಳಿಯ ಮನೆಗಳೆಲ್ಲಾ ಬಿದ್ದು ಹೋಗಿ ಸಿಂಗಲ್‌ಬೆಡ್ ರೂಮುಗಳಾಗಿವೆ.

ಅಪ್ಪನಿಗೆ ಐವತ್ತು ವರ್ಷ,ಜೊತೆಗೆ ಬೆನ್ನು ನೋವು. ಅಮ್ಮನಿಗೆ ಮೊಣಕಾಲು ಸೆಳೆತ. ಇದ್ದ ಇಬ್ಬರು ಮಕ್ಕಳಲ್ಲಿ ಮಗಳನ್ನು ಲಂಡನ್ ವಾಸಿ ಡಾಕ್ಟರ್ ಮಾಣಿಗೆ ಧಾರೆ ಎರೆದಿದ್ದಾರೆ.ಮಗ ಎಂಎನ್‌ಸಿಯಲ್ಲಿ ಇಂಜೀನಿಯರ್ ಆಗಿ ಬೆಂಗಳೂರಿಗೆ ನುಸುಳಿಕೊಂಡಿದ್ದಾನೆ.ಇವರ ಎಲ್ಲಾ ಮೋಹ ಮಮಕಾರಗಳೂ ಮಕ್ಕಳ ಜೊತೆಗೆ ತೆರಳಿವೆ.

ಇವನ ಮಗ ಅದು ಹೇಗೆ ಕೃಷಿ ಕೆಲಸ ಮಾಡುವುದಿಲ್ಲವೋ ಇವನ ಆಳಿನ ಮಗನೂ ಕೃಷಿ ಕೂಲಿ ಮಾಡುವುದಿಲ್ಲ.ಅವನೂ ಪೇಟೆ ಸೇರಿದ್ದಾನೆ.

ಇವನ ಅಪ್ಪ ಕೃಷಿಯನ್ನೇ ಬದುಕು ಮಾಡಿಕೊಂಡಿದ್ದ, ಇವನ ಕಾಲಕ್ಕೆ ಅದು ಅರೆಬೆಂದ ಸಿದ್ಧಾಂತವಾಯಿತು ಈಗ ಪೂರ್ತಿ ಕದಡಿದೆ.ತನ್ನಿಚ್ಛೆಯಂತೆ ಕೃಷಿ ಆಗುತ್ತಿಲ್ಲ ಎಂದು ಅವನ ಮನಸ್ಸು ಗೊಣಗುಟ್ಟುತ್ತದೆ.ಮತ್ತು ಅವನ ಮನಸ್ಸಿನಂತೆ ಆಗಿಯೂ ಬಿಡುತ್ತದೆ.

ಜಾಗತೀಕರಣದ ಸವಲತ್ತುಗಳು,ಐಷಾರಾಮಗಳು ಅವನನ್ನೂ ಮತ್ತು ಅವನ ಹೆಂಡತಿಯನ್ನೂ ಹಾಂಟ್ ಮಾಡುತ್ತವೆ. ವರ್ಷ ವರ್ಷ ಅಸಬಡಿದೂ ಮಾಡಿದ್ದಾದರೂ ಏನು ಎಂದು ಮನಸ್ಸು ಕೇಳುತ್ತಿದ್ದರೆ ಉತ್ತರವೇ ಇರುವುದಿಲ್ಲ.ಇದೇ ಡಿಪ್ರೆಶನ್ನು ಅವನನ್ನು ಟೀವಿ ಧಾರಾವಾಹಿಗಳ ಮೂಲಕ ನಗರದ ಸುಖ ಸಂಸ್ಕೃತಿಯಲ್ಲಿ ಪವಡಿಸುತ್ತದೆ.ಅದೇ ಮುರಿದ ಮನಸ್ಸಿನಲ್ಲಿ ಕೊಳೆರೋಗ,ಕುಸಿದ ರೇಟು,ಪಡುವ ಪಾಡು ಬಂದು ಸೇರುತ್ತವೆ.

ಎಲ್ಲಾ ಲೊಳಲೊಟ್ಟೆ ಎಮದು ಅನಿಸುತ್ತಲೇ ಶುಂಠಿ ಮಲೆಯಾಳೀ ದೂರದ ಗದ್ದೆಯಿಂದಲೇ ತನ್ನ ಖಜಾನೆ ತೆರೆಯುತ್ತಾನೆ.ದುಬೈ ಹಣ ಉದುರುತ್ತದೆ.

ಬೆಂಗಳೂರು ಸೇರಿದ ಈ ಬ್ರಾಹ್ಮಣ ದಂಪತಿ ಬ್ಯಾಚುಲರ್ ಮಗ,ಅವನ ರಾತ್ರಿ ಪಾಳಿ,ಜರ್ಮನಿಯ ಟ್ರಿಪ್ಪು, ಐಷಾರಾಮಿ ಸೋಫಾಸೆಟ್ಟು, ಪ್ಲಾಸ್ಮಾ ಟೀವಿ,ಪಕೇಟು ಹಾಲು,ಸ್ವಿಫ್ಟ್ ಕಾರು,ಗರುಡಾ ಮಾಲುಗಳಲ್ಲಿ ಕಳೆದುಹೋಗುತ್ತಾರೆ.ನೋಡ್ತಾ ನೋಡ್ತಾ ಅಮ್ಮನಿಗೆ ನವರಾತ್ರಿಯಲ್ಲಿ ದುರ್ಗಾನಮಸ್ಕಾರ ಮಾಡಿಸಲಿಲ್ಲ ಎಂದನಿಸುತ್ತಾ ಇರುತ್ತಿದ್ದಂತೆಯೇ ಅಪ್ಪನಿಗೆ ಊರಲ್ಲಿ ಅಡಿಕೆ ರೇಟು ಎಷ್ಟಾಗಿದೆಯೋ ಎಂದು ಕೇಳೋಣಾ ಎಂದಾಗುತ್ತದೆ.ಇಷ್ಟೆಲ್ಲಾ ಆದಾಗ ಅವರ ಮನೆಗೆ ಆ ಸೊಸೆ ಬಂದಿದ್ದಾಳೆ,ಅವಳು ಕೊನೆಗೂ ಅವರ ಕಳೆದುಹೋದ ಕಾಮನೆಗಳೇ ಆಗಿದ್ದಾಳೆ.

20070926

ಎಲ್ಲಾ ಖಾವಂದರಿಗಾಗಿ..


ಏನಪ್ಪಾ ! ಚೆನ್ನಾಗಿ ಆಡಿದ್ದಾರೆ, ಗೆದ್ದಿದ್ದಾರೆ,ನಮ್ಮ ಟೀಮು,ನಮ್ಮ ದೇಶಕ್ಕೆ ಹೆಸರು ತಂದಿದ್ದಾರೆ,ಭಲೇ ಖುಷಿ,ಕಂಗ್ರಾಟ್ಸ್..

ಅಷ್ಟು ಸಾಲದೇ?

ಸಿನಿಮಾ ಚೆನ್ನಾಗಿದೆ.ಅವನ ನಟನೆ ಅವಳ ಆಕ್ಟಿಂಗು ಉತ್ತಮವಾಗಿದೆ.ಈ ಸಿನಿಮಾವೂ ಖುಷಿ ಕೊಟ್ಟಿದೆ. ಪಸಂದ್ ಆಯಿತು.ಕೀಪ್ ಇಟ್ ಅಪ್..

ಇಷ್ಟು ಸಾಲದೇ?

ಅಲ್ಲಿಗೆ ಆ ಕ್ರಿಕೆಟ್ಟನ್ನೂ ಮರೆಯೋಣ,ಆ ಸಿನಿಮಾವನ್ನೂ ದೂರವಿಡೋಣ..

ಅವರದ್ದೂ ಆಟ, ಇವರದ್ದೂ ನಟನೆ.ನಮಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ.

ಆದರೂ ನಮ್ಮಿಂದ ಯಾಕೆ ಆಗೋದಿಲ್ಲ ?

ಯಾಕೆ ಆ ಕ್ರಿಕೆಟ್ಟು ಮತ್ತು ಆ ಬ್ಯಾಟ್ಸ್‌ಮ್ಯಾನು, ಯಾಕೆ ಆ ಸಿನಿಮಾ ಮತ್ತು ಆ ಹಿರೋಯಿನ್ನು ನಮ್ಮಲ್ಲಿ ನೇತಾಡುತ್ತಾರೆ?

ನೋಡ್ತಾ ನೋಡ್ತಾ ಏನಿದ್ದರೂ ಅವರೇ ಶ್ರೇಷ್ಠ ಅಂತ ನಾವು ಡಿಸೈಡ್ ಮಾಡ್ತೇವೆ..

ಅದು ಮನುಷ್ಯ ಮಾತ್ರ ಗುಣ.ಸಮಾಜ ಜೀವಿ ಮನುಷ್ಯ ತನ್ನ ಸಮಾಜದಲ್ಲಿ ತಾನೇ ತಾನಾಗಿ ಹೇಗೆ ಇರಲಾರನೋ ಹಾಗೇ ತನ್ನಲ್ಲಿ ತನ್ನನ್ನು ಕಾಣಲಾರನು.ಅವನೇನಿದ್ದರೂ ಪರರಲ್ಲಿ ತನ್ನನ್ನು ಕಂಡು ಸುಖಪಡುವ ಜಾಯಮಾನಿ.

ಅದೇ ಹೀರೋ ವರ್ಷಿಪ್.

ಯಾವ ಕರಡಿಯೂ ಮತ್ತೊಂದು ಕರಡಿಯನ್ನು ಶ್ರೇಷ್ಠ ಅಂತ ಭಾವಿಸುವುದಿಲ್ಲ. ಹುಲಿಗೆ ತನಗಿಂತ ದೊಡ್ಡ ಹುಲಿ ಎಂಬುದಿಲ್ಲ.ಗುಬ್ಬಚ್ಚಿಯೊಂದಕ್ಕೆ ತಾನೇ ತಾನು ಹೀರೋ.ಆನೆ ಕೂಡ ಇನ್ನೊಂದು ಆನೆಯನ್ನು ಎತ್ತಿ ಆರಾಧಿಸುವುದಿಲ್ಲ.ಸಿಂಹ ಏನಿದ್ದರೂ ಸ್ವಯಮೇವ ಮೃಗೇಂದ್ರತಾ.

ಆದರೆ ಮನುಷ್ಯ?

ಅವನಿಗೆ ಸದಾ ಇನ್ನೊಬ್ಬ ಶ್ರೇಷ್ಠ ಇರಲೇ ಬೇಕು. ತನಗಿಂತ ಬಲಶಾಲಿಯೊಬ್ಬ ಅವನಿಗೆ ಬೇಕು.

ತಾನೇನಿದ್ದರೂ ಸೆಕೆಂಡ್.

ಇದು ನಮ್ಮ ರಕ್ತಗತ.

ನಾವು ಎಂದೂ ಹಿರಿಯರಾಗಲಾರೆವು.ನಮಗೊಬ್ಬ ಖಾವಂದರು ಬೇಕು.

ಜೀಹುಜೂರ್ ಎನ್ನದೇ ನಮಗೆ ಇದ್ದು ಇರಲಾಗದು.ಬಾಸ್ ಕೈಕೆಳಗೇ ನಮಗೆ ಸುಖ.ಯಜಮಾನ ಒಬ್ಬ ಇದ್ದರೆ ನಮಗೆ ಸೇಫ್.ರಾಜನೋ ರಾಜಕಾರಣಿಯೋ ಯಾರೂ ಸರಿ ನಾವೇ ನಮಗೊಬ್ಬ ಅಧಿನಾಯಕನನ್ನು ಹಾಕಿಕೊಳ್ಳುವೆವು.ಅರಸೊತ್ತಿಗೆಯೋ ಪ್ರಜಾಸತ್ತೆಯೋ ಅಂತೂ ನಮಗೆ ಮಹಾರಾಜ ಬೇಕೇಬೇಕು.

ಹಾಳಾಗಿ ಹೋಗಲಿ.

ಈ ಕ್ರಿಕೆಟ್ಟಿನಲ್ಲೂ ನಮಗೆ ಹೀರೋ ಬೇಕಾ?ಸಿನಿಮಾ ನೋಡಿ ಸುಮ್ಮನೆ ಇರಲು ನಮಗೇಕೆ ಆಗಲ್ಲ?ಏಕೆಂದರೆ ಅಲ್ಲಿ ನಮಗೆ ಅತಿ ಸುಲಭದಲ್ಲಿ 'ದೇವರುಗಳು' ಸಿಗುತ್ತಾರೆ.ನಮಗೆ ಬೇಕಾದ ಹೀರೋ ಅಥವಾ ಹೀರೋಯಿನ್ನುಗಳು ಅಲ್ಲೇ ನಿತ್ಯವೂ ಕಾಣಲುಸಿಗುತ್ತಾರೆ.ಇಷ್ಟೇ ಅಲ್ಲ,ಇಲ್ಲಿ ಹಣದ ಹೊಳೆ ಇದೆ.ಎಲ್ಲಿ ಕಾಂಚಣ ಝಣಝಣ ಎನ್ನುತ್ತದೆ ಅಲ್ಲಿ ನಾವು ನಮ್ಮ ಆರಾಧ್ಯಮೂರ್ತಿಗಳನ್ನು ನಿರ್ಮಿಸುತ್ತೇವೆ.ಹಣ,ಸೆಕ್ಸ್,ಸಾಧನೆ ನಮ್ಮನ್ನು ಆವರಿಸುವ ರೀತಿ ಏನೆಂಬೆ!

ಈ ದೇವತಾರಾಧನೆ ಕೊನೆಗೂ ನಮ್ಮ ಅತೃಪ್ತ ಕಾಮನೆಯ ಫಲಶೃತಿ.

ಕ್ರಿಕೆಟ್ಟು ಸಿನಿಮಾಗಳಲ್ಲಿ ನಾವು ಹೀರೋ ಹೀರೋಯಿನ್ನುಗಳನ್ನು ತಬ್ಬಿಕೊಳ್ಳುವುದು ಇದೇ ಕಾಮನೆಗಾಗಿಯೇ ಇರಬೇಕು.

ಬೆಡಗಿಯರ ಬಿನ್ನಾಣ, ಹುಡುಗರ ವಡ್ಯಾಣ, ನಮ್ಮಲ್ಲಿ ಕಾಮವಾಸನೆಯಾಗಿ ರೂಪಾಂತರಗೊಂಡು ಕೊನೆಯಲ್ಲಿ ಆರಾಧನೆಯಾಗಿ ಸಾಗುತ್ತದೆ.ನಮ್ಮ ದೌರ್ಬಲ್ಯಗಳೂ ಇಲ್ಲಿ ಬೇಕಾದಷ್ಟು ಕೆಲಸ ಮಾಡುತ್ತವೆ.

ಮನುಷ್ಯನ ನಡಾವಳಿಗಳು ವಿಚಿತ್ರ.

ಬಯಕೆಗಳು ಹೆಪ್ಪುಗಟ್ಟಿದಾಗ ನಾವು ಇನ್ನೊಬ್ಬರಲ್ಲಿ ಪರಕಾಯಪ್ರವೇಶ ಮಾಡುತ್ತೇವೆ.ಹರೆಯದಲ್ಲಿ ಶುರುವಾಗೋ ಈ ಲಾಲಸೆ ಸಾಯೋತನಕ ಸಾಗುತ್ತಲೇ ಇರುತ್ತದೆ.ನಾನು ಯಾರನ್ನೂ ಇಲ್ಲಿ ಹೆಸರಿಸುವುದಿಲ್ಲ.ನಿಮ್ಮನ್ನು ಗೊತ್ತು ಗುರುತೇ ಇಲ್ಲದ ನೀವು ಯಾರೆಂದು ಅರಿತೇ ಇರದ ವ್ಯಕ್ತಿ ನಿಮಗೆ ಏಕಾದರೂ ಅಷ್ಟೊಂದು ಇಷ್ಟವಾಗಬೇಕು...

ಮತ್ತು ನಿಮ್ಮನ್ನೇ ನೀವು ಮಾರಿಕೊಳ್ಳುವಷ್ಟು.. ಎಂದು ನೀವು ಮೊದಲಾಗಿ ನನಗೆ ಹೇಳಬೇಕು.

ಅಷ್ಟು ಮಾಡಿದರೆ ನಾನು ಧನ್ಯ.

20070925

ಕನಸುಗಳೆಲ್ಲಾ ಕೈ ಕೊಡುವ ಜಾತ್ರೆಯಲ್ಲಿ..


ಇದು ಜಾಗತೀಕರಣದ ಪ್ರಭಾವ.

ನಂಬಲಿಕ್ಕಿಲ್ಲ;

ಬ್ರಾಹ್ಮಣ ಜಾತಿಯಲ್ಲಿ ಹುಡುಗಿಯರೇ ಇಲ್ಲ ಎನ್ನುವುದಕ್ಕೂ ಈ ಜಾಗತೀಕರಣಕ್ಕೂ ಏನು ಸಂಬಂಧ ಎಂದು ಕೇಳಬಹುದು.

ನಿಜವನ್ನೇ ಹೇಳುತ್ತಿದ್ದೇನೆ: ಜಾಗತೀಕರಣಕ್ಕೆ ಮೊದಲಾಗಿ ಬಲಿಯಾದವರು ಅಥವಾ ಯೀಲ್ಡ್ ಆದವರು ಬ್ರಾಹ್ಮಣರೇ.ಆದ್ದರಿಂದಲೇ

ಈ ಬ್ರಾಹ್ಮಣರಲ್ಲಿ ಹುಡುಗಿಯರೇ ಇಲ್ಲದೇ ಹುಡುಗರು ಒದ್ದಾಡುತ್ತಿದ್ದಾರೆ ಅಥವಾ ಹುಡುಗರು ಗಂಡಸರಾಗುತ್ತಿದ್ದಾರೆ ಅಥವಾ ಮುದುಕರಾಗುತ್ತಿದ್ದಾರೆ ಅಥವಾ ಮದುವೆಯಿಲ್ಲದ ಬ್ರಹ್ಮಚಾರಿಗಾಳಾಗುತ್ತಿದ್ದಾರೆ ಅಥವಾ ಎಲ್ಲಾ ಕನಸುಗಳು ನಾಶ ಮಾಡಿಕೊಳ್ಳುತ್ತಿದ್ದಾರೆ.

ಬ್ರಾಹ್ಮಣರಲ್ಲಿ ಹಿಂದೆಲ್ಲಾ ಹುಡುಗಿ ದೊಡ್ಡವಳಾದಳೆಂದರೆ ದೊಡ್ಡ ಚಿಂತೆ ಅಪ್ಪ ಅಮ್ಮಂಗಾಗುತ್ತಿತ್ತು.ದೊಡ್ಡದಾದ ಮೇಲೆ ಮದುವೆಯ ಚಿಂತೆ ಆವರಿಸುತ್ತಿತ್ತು.

ನಾನೇನು ಐವತ್ತು ವರ್ಷಗಳ ಹಿಂದಿನ ಕಾಗೆಗುಬ್ಬಿ ಕಥೆ ಹೇಳುತ್ತಿಲ್ಲ. ತೀರಾ ಇಪ್ಪತ್ತು ವರ್ಷಗಳ ಹಿಂದೆ.

ಅದೆಷ್ಟು ಹೆಣ್ಣು ಮಕ್ಕಳು ಮದುವೆ ಎಂಬ ಅನಿವಾರ್ಯ ಸ್ಥಿತಿಯಲ್ಲಿ ತಮ್ಮನ್ನು ತಾವು ಕಳೆದುಕೊಳ್ಳುತ್ತಿದ್ದರು.ಅದೆಲ್ಲೋ ಒಬ್ಬ ಹುಡುಗ ಇದ್ದಾನೆ ಎಂದರೆ ಏನೋ ಆಸೆ ಹೆತ್ತವರಿಗೆ. ಯಾರ್‍ಯಾರನ್ನೋ ಹಿಡಿದು ಕಾಡಿ ಬೇಡಿ ಆ ಹುಡುಗನ ಮನೆಯವರಿಗೆ ಕಾಂಟಾಕ್ಟ್ ಮಾಡಿಸಿ ಜಾತಕ ಒಪ್ಪಿಸಿ ಅದು ಪಾಸ್ ಆಗುತ್ತದೆ ಎಂದು ದಿನಾ ಬರಬಹುದಾದ ಕಾಗದ ಫೋನಿಗೆ ಕಾಯುತ್ತಾ ಕುಳ್ಳಿರುತ್ತಿದ್ದರು.ಹುಡುಗನ ದಂಡೇ ಹುಡುಗಿ ನೋಡಲು ಬರುವುದೇನು, ಅವನ ಕಡೆಯಿಂದ ಹುಡುಗಿಯ ಮೈಕೈ ಟೆಸ್ಟ್ ಮಾಡಲೆಂದೇ ಹೆಂಗಸರು ಬಂದು ಸುತ್ತುಹಾಕುವುದೇನು,ಹುಡುಗಿಯ ಕಡೆಯವರು ತಗ್ಗಿ ಬಗ್ಗಿ ತೆವಳುವುದೇನು, ಕೊನೆಗೊಮ್ಮೆ ಜಾತಕ ಕೂಡಿಬರಲಿಲ್ಲ ಎಂದು ಉತ್ತರ ಬರುವುದೇನು , ಅಂತೂ ಜಾತಕ ಕೂಡಿದರೆ ಹುಡುಗಿಯ ಸರೌಂಡಿಂಗ್ಸ್‌ನಲ್ಲಿ ಸರಿ ತಪ್ಪು ಹೆಕ್ಕುವುದೇನು...

ಎಲ್ಲಾ ಬದಲಾಗಿದೆ.

ಅದೇ ಆ ಹುಡುಗಿ ಈಗ ಅಮ್ಮ ಆಗಿದ್ದಾಳೆ.

ಅವಳ ಅರ್ಧ ಸತ್ತ ಕನಸುಗಳು, ಆಕಾಂಕ್ಷೆಗಳು, ಆಸೆಗಳು..ಅಷ್ಟೇ ಏಕೆ ಅವಳ ಒಳಗಿನ ಹುಡುಗಿ ಎಲ್ಲಾ ಈಗ ಮಗಳಾಗಿ ಬಂದಿದ್ದಾಳೆ.

ಆ ಮಗಳು ಅವಳ ಛಾಲೆಂಜು.

ಇದೇ ಹೊತ್ತಿಗೆ ಜಾಗತೀಕರಣ ಬಂದಿದೆ.ಬ್ರಾಹ್ಮಣರು ಜಾಗತೀಕರಣದ ಬಟ್ಟಲಿಗೆ ಬಿದ್ದಿದ್ದಾರೆ.ಟೀವಿ, ಕೇಬಲ್ಲು, ಟಾಟಾಸ್ಕೈ, ಮೊಬೈಲ್ಲು, ಕಾರು, ಏಸೀ,ವ್ಯಾಕ್ಯೂಂ ಕ್ಲೀನರ್,ಸೋಫಾ ಸೆಟ್ಟು, ತಾರಸಿಮನೆ, ಕಂಪ್ಯೂಟರು, ಮಗನಿಗೆ ಮೊಬೈಕು, ಮಗಳಿಗೆ ಸ್ಕೂಟಿ,ಶನಿವಾರ ರಾತ್ರಿ ಹೋಟೇಲಿನಲ್ಲಿ ತಾಲಿ, ಮನೆಯಲ್ಲಿ ಗೋಬಿ ಮಂಚೂರಿ, ಡೈರಿ ಹಾಲು ಬಂದಿದೆ.

ನೆಲದಲ್ಲಿ ಮಣೆ ಇಟ್ಟು ಪಟ್ಟಾಗಿ ಬಾಳೆ ಎಲೆ ಮೇಲೆ ಬಾಚಿ ಉಣ್ಣುತ್ತಿದ್ದ ಬ್ರಾಹ್ಮಣರು ಟೇಬಲ್ಲು ಮೇಲೆ ಕುಳಿತು,ಪೈಬರ್ ಪ್ಲೇಟಿನಲ್ಲಿ ಫ್ರೈಡ್ ರೈಸ್ ಕಲಸುತ್ತಿದ್ದಾರೆ.

ಸತ್ಯನಾರಾಯಣ ಪೂಜೆಯ ಊಟದಲ್ಲಿ ಪ್ರುಟ್ಸಲಾದ್, ಐಸ್‌ಕ್ರೀಂ ಅವರ ಮೆನು ಆಗಿದೆ.

ಹಟ್ಟಿಯಲ್ಲಿ ಹಸುಗಳಿಲ್ಲ.ತೋಟದಲ್ಲಿ ಕೂಲಿಯಾಳುಗಳು ಕೆಲಸ ಮಾಡುವಾಗ ಯಜಮಾನ ಪೇಟೆಯಲ್ಲಿ ಶಾಪಿಂಗ್ ಮಾಡುತ್ತಿದ್ದಾನೆ.

ಅಂಗಳದಲ್ಲಿ ಅವರೆ ಗಿಡ ಈಗ ಯಾರೂ ಬೆಳೆಯುವುದಿಲ್ಲ, ಪೇಟೆ ಅಂಗಡಿಯಿಂದ ತೊಂಡೆಕಾಯಿ ಖರೀದಿ ಮಾಡುತ್ತಾರೆ.ಬಸಳೆಯ ಸ್ಥಾನದಲ್ಲಿ ಪಾಲಕ್ ಬಂದಿದೆ.ಚಕ್ಕುಲಿಯನ್ನು ಕುರುಕುರೆ ತಿನ್ನುತ್ತಿದೆ.

ಜಾಗತೀಕರಣದ ಮೂಲಕವೇ ಮನೆಯೊಡತಿ ಕಟ್ಟಿಕೊಂಡ ಕನಸುಗಳು. ಮಗಳು ಹಾಸ್ಟೆಲ್‌ನಲ್ಲಿ ಓದುವುದು ಅಮ್ಮನಿಗೆ ಅಪಾರ ಗೌರವ ತಂದಿದೆ. ತೆಂಗಿನ ಕಾಯಿ ತುರಿಯುವುದು ಮಗಳಿಗೆ ತಿಳಿಯುವುದಿಲ್ಲ ಎಂಬುದು ಅಮ್ಮನ ಹೆಗ್ಗಳಿಕೆ.ಬಾಳೆಲೆ ಬಾಡಿಸೋದು ಗೊತ್ತಿದ್ದರೆ ಅದು ತುಂಬಾ ಇನ್‌ಸಲ್ಟು.ಮಗಳು ಸೀರೆ ಉಟ್ಟರೆ ಅದು ಸರಿಯಲ್ಲ. ಸೀರಿಯಲ್ಲಿನಲ್ಲಿ ಹಾಕುವ ಹಾಫ್ ಪ್ಯಾಂಟ್ ಟೀ ಶರಟು ಹಾಕಿದರೆ ಸೊಗಸು.ವಾರಕ್ಕೊಮ್ಮೆ ಬ್ಲೀಚು,ನಿತ್ಯವೂ ಶ್ಯಾಂಪು ಬೇಕು.

ಈ ಮೂಲಕವೇ ಅವಳ ಒಳಗೆ ಆಸೆಗಳನ್ನು ಅಮ್ಮನೇ ನಿರ್ಮಿಸಿದ್ದಾಳೆ.ಏಕೆಂದರೆ ಅವೆಲ್ಲಾ ಅವಳದ್ದೇ ಆಗಿದ್ದವು ಅಂದು.

ಹುಡುಗಿಗೆ ಈ ರೀತಿಯಲ್ಲಿ ಕೋಟೆಗಳನ್ನು ಕಟ್ಟಿಕೊಟ್ಟ ಕಾರಣದಿಂದ ಆ ಹುಡುಗಿ ಈಗ ಏಳುಕೋಟೆ ಏಳು ಸಮುದ್ರ ಏಳು ಬೆಟ್ಟಗಳಾಚೆ ಬಂಧಿ.ಇಪ್ಪತ್ತರ ಮೇಲೆ ವರ್ಷ ಹೊರಳಿ ಹೊರಳಿ ಹೋದರೂ ಮದುವೆಯಾಗಲಾರಳು. ಕಾರಣ ನಮ್ಮ ಹುಡುಗಿಯ ಟೇಸ್ಟೇ ಬೇರೆ. ಅದನ್ನು ಅರಿತ ರಾಜಕುಮಾರ ಈ ಅಮ್ಮನ ಸರ್ಪಗಾವಲನ್ನು ಭೇಧಿಸಿ ಬರುವುದಾದರೂ ಹೇಗೆ?

ಹತ್ತೊಂಭತ್ತಕ್ಕೇ ಸಹಜವಾದ ಬಯಕೆಗಳು ಹುಡುಗಿಯಲ್ಲಿ ಮೊಳೆತಿರುತ್ತವೆ. ಅದು ಅಮ್ಮನಿಗೆ ಗೊತ್ತಿದೆ.ಜಾಗತೀಕರಣದ ಕಾರಣದಿಂದಾಗಿಅದನ್ನು ಹತ್ತಿಕ್ಕಲಾಗುತ್ತದೆ. ಮುಗ್ದ ಹುಡುಗಿ ಕಾಯುತ್ತಾಳೆ.ಅವಳಿಗೂ ಇನ್ನೊಂದು ಜೀವದ ತುಡಿತ.ಸಾಲದ್ದಕ್ಕೆ ಸುತ್ತಲೂ ಬಯಕೆಗಳನ್ನು ಕೆರಳಿಸುವ ತೋಟ.ಈ ಎಲ್ಲದರ ನಡುವೆ ಬ್ರಾಹ್ಮಣ ಹುಡುಗಿಯರು ಮದುವೆಯಿಂದ ದೂರವಾಗುತ್ತಿದ್ದಾರೆ.

ಕೃಷಿ ಕೆಲಸ ಮಾಡೋ ರೈತ ಹುಡುಗ ಬೇಡ.ನಗರವಾಸಿ ಉದ್ಯೋಗಿಯೇ ಬೇಕು ಮತ್ತು ಅವನಿಗೆ ಹಳ್ಳಿಯಲ್ಲಿ ತೋಟ, ಜಮೀನು ಬೇಕು ಮತ್ತು ಆ ಜಮೀನಿನಲ್ಲಿ ಅವನು ಇರಬಾರದು ಮತ್ತು ಅವನು ಅಮೇರಿಕಾ-ಬೆಂಗಳೂರಿನ ಸುತ್ತಾ ಇರಬೇಕು.ಕಾರು ಮಸ್ಟ್.ಗುಂಡು ಹಾಕುವುದಾದರೂ ಪರವಾಗಿಲ್ಲ.ಅಪ್ಪ ಅಮ್ಮ ಸತ್ತರೆ ಉತ್ತಮ, ಒಂದೊಮ್ಮೆ ಜೀವಂತ ಇದ್ದರೂ ಅವರು ಹಳ್ಳಿಯಲ್ಲಿದ್ದರಾಯಿತು.ಹುಡುಗನಿಗೆ ಅವನ ಸಂಸಾರದ ಟಚ್ ಇರಬಾರದು.ಇಂಥಾ ಹುಡುಗನಿಗೆ ಈಗ ಹುಡುಕಾಟ.

ಚೆನ್ನಾಗಿ ಹೆಂಡತಿ ಜೊತೆ ಸೆಕ್ಸ್ ಕೂಡಾ ಮಾಡಲು ಪುರುಸೊತ್ತಿಲ್ಲದ ರಾತ್ರಿ ಹಗಲಿನ ಕತ್ತೆ ದುಡಿತ ಮಾಡುವ ತಥಾಕಥಿತ ಇಂಜೀನೀಯರ್‌ಗಳಿಗೇ ಮಣೆ.

ಇನ್ನು ಹುಡುಗೀನ ಕೇಳಿದರೆ, ಮೊದಲಾಗಿ ಆಕೆ ಹೇಳುವುದು 'ನನ್ನನ್ನು ಫ್ರೀಯಾಗಿ ನನ್ನ ಪಾಡಿಗೆ ಇರಗೊಡುವವನಾಗಬೇಕು..ಅಷ್ಟೇ.'ನನಗೆ ನನ್ನ ಸ್ವಾತಂತ್ರ್ಯ ಮುಖ್ಯ.ಅವನಿಗೆ ಮದುವೆ ಮುಂಚೆ ಗರ್ಲ್ ಫ್ರೆಂಡ್ಸ್ ಇರಲಿ ಪರವಾಗಿಲ್ಲ.ಬಟ್ ಇನ್ನು ಇರದಿದ್ದರಾಯಿತು..ತುಂಬಾ ಬಿಂದಾಸ್ ಆಗಿರೋ ಲೈಫ್ ಬೇಕು ಅಷ್ಟೇ.

ಹುಡುಗ ನನ್ನವನಾಗಿರಬೇಕೆಂಬ ಬಯಕೆ ಯಾವ ಹುಡುಗಿಯಲ್ಲೂ ಇರುವುದಿಲ್ಲ ಎಂದರೆ ಜಾಗತೀಕಣ ಅಲ್ಲದೇ ಇನ್ನೇನು?ಏಕೆಂದರೆ ಜಾಗತೀಕರಣದ ತಿರುಳೇ ನಾವೆಂಬುವುದು ಇಲ್ಲದಾಗುವುದು.

20070915

ನಾಲ್ಕು ಸಾಲು-14


೧.


ಕತ್ತಲಲ್ಲಿ

ನಕ್ಷತ್ರಗಳನ್ನು

ಕದ್ದು ಪ್ರೀತಿಸುತ್ತಾ

ಮೊಗ್ಗು ಅರಳಿತು.

ಹೂವಿನ ಸಡಗರಕ್ಕೆ

ನಕ್ಷತ್ರಗಳು ಬರಲಿಲ್ಲ.೨.


ಹಕ್ಕಿಗಳು

ಚಿಲಿಪಿಲಿಗುಟ್ಟಿ

ಮೌನವನ್ನಿಡೀ ಹರಿದು

ಬಾನಿಗೆಸೆದವು.

ಅದು ಮೋಡವಾಗಿ ತೇಲಿತು.


೩.


ಅವನ ಎದೆಯ ಬಡಿತ

ಅವಳು

ತಟ್ಟಿದ ಕದದ ಸಪ್ಪಳ.


೪.


ಕಣ್ಣಲ್ಲಿ ಅವನನ್ನು

ಕರಗಿಸಿಕೊಂಡ

ಅವಳು

ಮನದಲ್ಲಿ ಮನೆಕಟ್ಟಿದಳು

ಎದೆಯೊಳಗೆ ಅವನು ನೆಲೆಯಾದ.

ಮನದ ಮನೆಯಲ್ಲಿ

ಪ್ರೀತಿಯನ್ನು

ಅವರು ಕೂಡಿಹಾಕಿದರು.

20070914

ಗಣಪನ ಬರ್ತ್‌ಡೇಗೆ ಹೀಗೊಂದು ..ಗ್ರೀಟಿಂಗ್ಸ್ವಾಟ್ ಎ ಸಿಂಪಲ್ !

ಈ ಗಣಪ........ ಬಾಸ್ ಆಫ್ ಆಲ್ ಗಾಡ್ಸ್.

ಈತ ಸೂರ್ಯನಷ್ಟು ತಾಪನಲ್ಲ, ದುರ್ಗೆಯಷ್ಟು ಉಗ್ರನಲ್ಲ, ಶಿವನಂತೆ ಪ್ರಳಯಕಾರಕನಲ್ಲ, ವಿಷ್ಣುವಂತೆ ರಸಿಕನಲ್ಲ.

ಹಾಗೆಯೇ ಈ ಬೆನಕ....

ಸೂರ್ಯನಷ್ಟು ದೂರವೂ ಇರಲ್ಲ, ದುರ್ಗೆಯಂತೆ ಗ್ಯಾಪು ಮಡಗಲ್ಲ, ಶಿವನಂತೆ ಕೋಪಿಸಿಕೊಳ್ಳೋದಿಲ್ಲ, ವಿಷ್ಣುವಿನಂತೆ ಶ್ರೀಮಂತಿಕೆ ತೋರಲ್ಲ.

ಈ ರ್‍ಯಾಟ್ ರೈಡರ್ ಏಕದಂತ ನಮ್ಮೊಳಗೆ ಇರಬಲ್ಲ.

ನಾವು ಹೇಗೇ ಹೇಗೆ ಪೂಜೆ ಮಾಡಿದರೂ, ಆರತಿ ಎತ್ತಿದರೂ, ತಿಂಡಿ ಕೊಟ್ಟರೂ ಇಟ್ಸ್ ಆಲ್‌ರೈಟ್ ಅಂತ ಕೊಟ್ಟದ್ದನ್ನ ಸ್ವೀಕರಿಸುತ್ತಾನೆ.ಯಕಶ್ಚಿತ್ ಒಂದು ಹುಲ್ಲು ಗರುಕೆಯನ್ನು ಇವನಿಗೆ ಅರ್ಚಿಸಬಹುದು, ಒಂದು ತುಂಡು ಕಬ್ಬು, ಒಂದರ್ಧ ಕೊಬ್ಬರಿ ಕೊಟ್ಟರೆ ಈ ಆನೆಕಿವಿಯ ದೇವರ ಪುಟ್ಟ ಕಣ್ಣುಗಳು ಸಂತೋಷದಿಂದ ಮಿನುಗಾಡುತ್ತವೆ.ಇವನಿಗೆ ಹೋಮವೂ ಮಾಡಿ, ಪೂಜೇನೂ ಮಾಡಿ ಅಥವಾ ಎರಡನ್ನೂ ಮಾಡಿ........ ಎಲ್ಲವೂ ಇವನಿಗೆ ತುಂಬಾ ಲೈಕು.

ಇವನನ್ನು ತುಪ್ಪದಿಂದ ತೋಯಿಸಿ, ಕಜ್ಜಾಯದಿಂದ ಮುಚ್ಚಿ ; ಖುಶಿಯೋ ಖುಶಿ ಈ ಲಂಬೋದರನಿಗೆ.

ಏನೇ ಮಾಡಿ, ಆದರೆ ಮೊದಲಾಗಿ ಮಾಡಿ.

ದಟ್ ಈಸ್ ಹಿಸ್ ಸ್ಟೈಲ್ !

ಯಾವ ದೇವರನ್ನೂ ನೀವು ಹೊತ್ತು ತಿರುಗಿ, ಯಾವ ದೇವತೆಯನ್ನು ಎತ್ತಿ ಕೊಂಡಾಡಿ, ಮೂವತ್ತಮೂರು ಕೋಟಿ ದೇವಾನು ದೇವರನ್ನು ಒಟ್ಟಿಗೆ ರಾಶಿ ಹಾಕಿ ಕೈ ಮುಗಿಯಿರಿ, ಏನೇ ಮಾಡಿ... ಫಸ್ಟು ಗಣಪತಿಗೇ ರೆಸ್ಪೆಕ್ಟು.

ಏನೇ ಮಾಡುವ ಮೊದಲು

"ಹಾವಿನಬೆಲ್ಟು ಹಾಕಿದ ಗಣಪನನು

ನೆನೆಯುವುದು ನಮ್ಮವರ ಕಳ್ಟು (cult-ಉ)

ಮೀರಿದರಿದನು ಫಾಳ್ಟು (fault-ಉ)

ದಟ್ ಈಸ್ ಗಣಪತಿ.

ಈತ ಸಾಮಾನ್ಯ ದೇವರಲ್ಲ. ವರ್ಲ್ಡ್‌ನ ಫಸ್ಟ್ ಸ್ಟೆನೋಗ್ರಾಫರ್. ವ್ಯಾಸರು ಡಿಕ್ಟೇಟ್ ಮಾಡುತ್ತಾ ಹೋದಂತೆ ಮಹಾಭಾರತ ಬರೆದವನು. ಇಂಕು ಕೈ ಕೊಟ್ಟಿತೆಂದು, ಟಸ್ಕು ಮುರಿದು ಕಂಟಿನ್ಯೂ ಆದವನು. ಅಮ್ಮನ ಬಾತ್‌ರೂಮಿಗೆ ಅಪ್ಪ ನುಗ್ಗುವುದನ್ನು ತಡೆದು ತಲೆದಂಡ ಕಟ್ಟಿದೋನು, ರಾವಣನ ಆತ್ಮಲಿಂಗ ಹೈಜಾಕ್‌ನ್ನು ಕರ್ಬ್ ಮಾಡಿದೋನು. ಆಕಾಶದಲ್ಲಿ ಚಂದಿರ ಕಿಂಡಲ್ ಮಾಡಿದ ಎಂದು ಫುಲ್ಲೀ ಆಂಗರ್ ಆಗಿ ಅಪವಾದದ ಶಾಪ ಕೊಟ್ಟೋನು. ಅಂಥ ಕೃಷ್ಣನಿಗೇ ಸ್ಯಮಂತಕಮಣಿ ಎಪಿಸೋಡಲ್ಲಿ ಅಕ್ಯುಸ್ಡ್ ಮಾಡಿಸಿದೋನು.....

ಇವನದ್ದು ಅನಾಟಮಿಯೇ ಡಿಫರೆಂಟು.

ಡ್ರೆಸ್ ಕೋಡೇ ಬೇರೆ. ಕಾಸ್ಮಟಿಕ್ ಲುಕ್ಕೇ ಸ್ಪೆಶಲ್.

ಆನೆ ಮುಖ, ದೊಡ್ಡ ಹೊಟ್ಟೆ, ಇಲಿ ಮೇಲೆ ಟ್ರಾವೆಲ್ಲು, ಸ್ನೇಕ್ ಬೆಲ್ಟು, ಸಿಂಗಲ್ ಡೆಂಟು...ಎಂಥಾ ಕಾಂಬಿನೇಶನ್ನು !

ಇವನು ವಿಘ್ನಕಾರಕನೂ ಹೌದು, ವಿಘ್ನ ನಿವಾರಕನೂ ಹೌದು. ಯಾಮಾರಿಸಿದರೆ ಫಿನಿಶ್ ಮಾಡಿ ಬಿಟ್ಟಾನು.

ಫ್ರೆಂಡ್ಲೀ ಅಂದರೆ ಫ್ರೆಂಡ್ಲೀ.

ಮೊದಲಾಗಿ ಕೈ ಮುಗಿದರೆ ಫೇರ್ ಆಂಡ್ ಲವ್ಲೀ ಮತ್ತು ಫಾರ್ ಎವರ್.

"ನಮಸ್ತೇ ಗಣಪತಯೇ... ತ್ವಮೇವ ಪ್ರತ್ಯಕ್ಷಂ ತತ್ವಮಸಿ’..ಹೀಗೊಂದು ಉಲ್ಲೇಖ ಅಥರ್ವವೇದದ ಉಪನಿಷತ್‌ಗಳಲ್ಲೊಂದಾದ ಗಣಪತ್ಯಥರ್ವಶೀರ್ಷದಲ್ಲಿದೆ.

ತತ್ವಮಸಿ ಎಂದರೆ ನೀನೇ ನಾನು ಅಥವಾ ನೀನು ಅವನೇ ಆಗಿದ್ದೀಯಾ ಎಂದು ಸರಳವಾಗಿ ಅರ್ಥೈಸಿಕೊಳ್ಳಬಹುದು. ಹಾಗೆಂದಾಗ ಗಣಪತಿ ನಮ್ಮೊಳಗೆ ಅದೆಷ್ಟು ಸುಲಭವಾಗಿ ನಮ್ಮವನೇ ಆಗಿ ಬಿಡುತ್ತಾನೆ ಅಥವಾ ನಾವೇ ಅವನಾಗುತ್ತೇವೆ !

ದಟ್ ಈಸ್ ಗಣಪತಿ.

ರತ್ನನ ಪದದಲ್ಲಿ ಭಾಮಿನೀ ಷಟ್ಪದಿಯಲ್ಲಿ ಗಣಪತಿಯನ್ನು ಯೆಂಡ್ಕುಕ ರತ್ನ ವರ್ಣಿಸುತ್ತಾ.......

ಕಂಟಕಕೆ ಕಡು ಡೈನಮೈಟ್ ಟಿಎನ್‌ಟಿ

ರೋಗ್ ಎಲಿಫೆಂಟು ಹೆಡ್ಡಿನ

ಒಂಟಿ ಟಸ್ಕಿನ

ಪಾಟ್ ಬೆಲ್ಲಡ್ರ್‍ಯಾಟ್ ರೈಡರ್, ಓ ಬೆನಕ........

ಎಂದದ್ದು ಇಂಥ ಸಲುಗೆಯಿಂದಲೇ.

ಈ ಗಣಪತಿ ಎಂಬ ಎಲ್ಲ ದೇವರುಗಳ ಬಾಸ್

ನಮ್ಮೆಲ್ಲರ ಪ್ರೀತಿಯ "ಗುರೂ’ ಹೌದು.

ಯಾವುದೇ ಕ್ಯಾರೇ ಇಲ್ಲದೆ ಒಬ್ಬ ದೇವರನ್ನು ನಾವು ಸಲುಗೆಯಿಂದ ನೋಡಲು ಸಾಧ್ಯವಾದರೆ ಅದು ಗಣಪತಿ ಮಾತ್ರ.

ಅವನನ್ನು ಯಾವ ಅರಿಭಯಂಕರ ವಿಶೇಷಣಗಳಿಲ್ಲದೆ ವಕ್ರತುಂಡ, ಮಹಾಕಾಯ ಎಂಬ ಅಕರಾಳ ವಿಕರಾಳಗಳನ್ನು ಉಲ್ಲೇಖಿಸಿಯೂ ಸುಮುಖ ಎಂದು ಹೊಗಳಿಯೂ ಪ್ರಾರ್ಥಿಸಿ, ಅಭೀಷ್ಟ ಫಲದಾಯಕನೇ ಎಂದು ಕರೆದು ಕೈ ಮುಗಿಯುತ್ತೇವೆ.ಯಾರನ್ನಾದರೂ ಈ ರೀತಿ ಹೊಗಳಿದರೆ ಅವರು ನಂಬುವರೇ ? ಆದರೆ ಗಣಪತಿ ಮಾತ್ರಾ ಇಟ್ಸ್ ಓಕೆ ಅನ್ತಾನೆ. ಕೇಳಿದ್ದನ್ನು ಕೊಡ್ತಾನೆ.

ಅದು ಹೇಗೆ ಗಣಪತಿ ಎಂಬ ಕಾನ್ಸ್‌ಫ್ಟ್ ಇಷೊಂದು ಸರಳವಾಯಿತೋ ? ತಿಳಿದವರು ಹೇಳಬೇಕು.

ಮೂಲಾಧಾರದಲ್ಲಿ ಕುಳಿತ ಕುಂಡಿಲಿನಿ ಶಕ್ತಿ ಸುಷುಮ್ನ ನಾಡಿಯ ಮೂಲಕ ಮೇಲೆದ್ದು ಸಹಸ್ರಾರದ ಶಿವನೊಡನೆ ಸಂಯೋಗವಾಗುವ ಕಲ್ಪನೆಯಲ್ಲಿ ಮೂಲಾಧಾರದ ಬಾಗಿಲ ಬಳಿ ಕುಳಿತ ಗಣಪತಿಯೇ ಪ್ರಧಾನಎಂದು ಎಲ್ಲೋ ಓದಿದ ನೆನೆಪು. ಶಿವ-ಶಕ್ತಿ ಸಂಯೋಗಕ್ಕೆ ಗಣಪತಿ ಗೇಟ್‌ಕೀಪರ್. ಪಾರ್ವತಿಯ ಸ್ನಾನ, ಗಣಪತಿಯ ಕಾವಲು, ಶಿವನ ಆಗಮನ, ತಲೆ ಕತ್ತರಿಸಿದ್ದು, ಆನೆ ತಲೆ ಮಡಗಿದ್ದು..... ಹೀಗೆಲ್ಲಾ ಸೃಷ್ಟಿಯಾದ ಕತೆಗಳು ಮೂಲಾಧಾರದ ಈ ಮಹಾಶಕ್ತಿಯ ಜನಪದ ರೂಪವಷ್ಟೇ.ಉಪನಿಷತ್‌ನಲ್ಲಿ ನೇರವಾಗಿ ಗಣಪತಿ ಕುರಿತು ಅದನ್ನೇ ಹೇಳಿದ್ದಾರೆ, "ತ್ವಂ ಮೂಲಾಧಾರೇ ಸ್ಥಿತೋಸಿ ನಿತ್ಯಂ’ಗಣಪತಿಯನ್ನು ಆನಂದಮಯನೂ ಹೌದು, ಬ್ರಹ್ಮಮಯನೂ ಹೌದು ಎಂದು ಮಂತ್ರಗಳಲ್ಲಿ ಹೇಳಿರುವುದು ಅವನ ವಿಸ್ತೃತ ವಿಶ್ವರೂಪಕ್ಕೆ ಮುನ್ನುಡಿ.

ಅಂಥವನನ್ನು ನಾವು ಮೊದಲು ನೆನೆಯುವುದು ಅವನ ವಿಶ್ವವ್ಯಾಪ್ತಿಗೆ ಸಾಕ್ಷಿ.

ಆತ ಅಗಜಾನನ ಪದ್ಮಾರ್ಕಂ ಎಂದರೆ ಪಾರ್ವತಿಯ ಮುಖ ಕಮಲವನ್ನು ಅರಳಿಸುವ ಸೂರ್ಯನವ. ಅಂಥವನನ್ನು ನಂಬಿದವರ ಮುಖವೇನು, ಮೈ, ಮನಸೂ ಅರಳದೇ ಇರಬಹುದೇ ?

ಗಣಪತಿಯ ಕುರಿತು ನೂರಾರು ಪುರಾಣಗಳಿವೆ, ನೂರಾರು ಕತೆಗಳಿವೆ. ಕೆಲವು ಪುರಾಣಗಳಲ್ಲಿ ಅವನನ್ನು ಬ್ರಹ್ಮಚಾರಿ ಎಂದರೆ, ಇನ್ನೂ ಕೆಲವು ಪುರಾಣಗಳಲ್ಲಿ ಮದುವೆಯನ್ನೇ ಮಾಡಿಸಿ ಬಿಟ್ಟಿದ್ದಾರೆ. ಈ ರೀತಿಯ ಈ ಮೊದಲ ದೇವರು ರಾಜಾಧಿರಾಜ. ರಾತ್ರಿ ಕೃತ ಪಾಪಗಳನ್ನು ಹಗಲಾಗುತ್ತಲೇ ನಾಶ ಮಾಡುವ, ಹಗಲು ಮಾಡಿದ ಪಾಪಗಳನ್ನು ರಾತ್ರಿಯಾಗುತ್ತಲೇ ಕಳೆದು ಬಿಡುವ ಉದಾರಿ. ಧಮಾರ್ಥ ಕಾಮಮೋಕ್ಷಗಳನ್ನು ಕರುಣಿಸುವವನು.

ಅಷ್ಟಷ್ಟ ಭೈರವರಿಂದ ಸೃಷ್ಟಿಯೊಳು ಪೂಜಿಸಲ್ಪಡುವವನು, ನಕ್ಷತ್ರ ಮಾಲೆಯನ್ನೇ ಪದಕ ಮಾಡಿ ಹಾಕಿಕೊಂಡವನು.ಇವನು ತುಂಡು ಸಕ್ಕರೆ ಬೆಲ್ಲ, ಭಕ್ಷ್ಯ ಭೋಜ್ಯಗಳು, ಬೆಣ್ಣೆ ಕಾಸಿದ ತುಪ್ಪ, ಇಡ್ಲಿ, ವಡೆ, ನೊರೆ ಹಾಲು, ತಂಬಿಟ್ಟುಂಡೆ, ಕರ್ಜುರಿ ಕಾಳು, ಮೋದಕ ಸಹಿತ ಏನು ಕೊಟ್ಟರೂ ಸ್ವೀಟಾಗಿ ಸಪಾಟಾಗಿ ತಿಂದು, ಮತ್ತೊಂದು ಮನೆಗೆ ಡಿನ್ನರ್‌ಗೆ ಹೋಗಿ ಕೂರಬಲ್ಲ ಲಂಬೋದರ.

ಈ ಹೊಟ್ಟೆಬಾಕ ಎಂದೂ ತೇಗಿದವನೇ ಅಲ್ಲ.

ಇವನ ಫುಡ್ ಹ್ಯಾಬಿಟ್‌ನಿಂದಾಗಿ, ಇವನು ಯಾರು ಕೊಟ್ಟರೂ ತಿನ್ನುವುದರಿಂದಾಗಿ, ಎಲ್ಲರ ಮನೆಗೂ ಬರೋದರಿಂದಾಗಿ, ಎಷ್ಟೇ ಕೊಟ್ಟರೂ ಖುಶಿ ಪಡೋದರಿಂದಾಗಿ ಎಲ್ಲರಿಗೂ ತುಂಬಾ ಡಿಯರ್, ಡಿಯರರ್, ಡಿಯರೆಸ್ಟ್.... ಅವರ್ ಬಿಲವ್ಡ್ ಮಹಾಗಣಪತಿ....

20070909

ಪವರ್ ...ಪವರ್ರು..


.....those have most power to hurt us,

that we love...


ಪ್ರಜಾಸತ್ತೆಯ ಪರಮ ನೀಚತನ ಯಾವುದು ಎಂದು ಯಾರೋ ಕೇಳಿದಾಗ ಎಗ್ಗಿಲ್ಲದೆ ಉತ್ತರಿಸಬಹುದಾದ್ದು,

ಅಧಿಕಾರ.

ಹಾಗೆಂದರೆ ಯಾರೂ ನಂಬಲಿಕ್ಕಿಲ್ಲ.

ಅಧಿಕಾರ ನಿಜಕ್ಕೂ ನಮ್ಮನ್ನು ನಮಗೆ ಗೊತ್ತಿಲ್ಲದಂತೆ ತಿಂದು ಬಿಡುತ್ತದೆ.ನಮ್ಮ ಸಹಜತೆಯನ್ನು ಕಿತ್ತು ಹಾಕುತ್ತದೆ. ನೋಡು ನೋಡುತ್ತಾ ನಾವು ಹೇಳ ಹೆಸರಿಲ್ಲದಂತಾಗುತ್ತೇವೆ.ಎಲ್ಲವೂ ಅರಿವಿಗೆ ಬರುವ ಹೊತ್ತಿಗೆ ನಾಶವಾಗಿದ್ದಾಗಿರುತ್ತದೆ.

ಅದು ಅಧಿಕಾರ.

ಒಬ್ಬ ಪೊಲೀಸ್ ಅಧಿಕಾರಿಯನ್ನು ಮುಂದಿಡುತ್ತೇನೆ.ಅಧಿಕಾರದ ಬಳಕೆ ಅಥವಾ ದುರ್ಬಳಕೆ ಎರಡಕ್ಕೂ ಪೊಲೀಸಪ್ಪನಷ್ಟು ಸುಲಭದ ಉದಾಹರಣೆ ಸಿಗಲಿಕ್ಕಿಲ್ಲ.ಅವನ ನಿವೃತ್ತಿಯ ಮರುದಿನ ಏನನಿಸುತ್ತದೆ ಎಂದು ಕೇಳಿನೋಡಿ,ಅಧಿಕಾರದ ಅನಾಹುತ ಅವನಿಗೆ ಅದೇ ದಿನ ಅರ್ಥವಾಗಿದ್ದು.

ರಾಜಕಾರಣಿಗಳು ಇನ್ನೊಂದು ಉದಾಹರಣೆ. ಈಗ ಎಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವಿನ ಅಧಿಕಾರದ ಹೊಯ್ದಾಟ ನೋಡಿದರೆ ಈ ಅಧಿಕಾರ ಎಲ್ಲಿಗೆ ಯಾರನ್ನೂ ಹೇಗೂ ತಲುಪಿಸಬಹುದು ಎಂಬುದು ಯಾರೀಗೂ ಅರ್ಥವಾದೀತು.

ಗುಂಡೂರಾಯರು ಇದ್ದರಲ್ಲ;ಬಹುಶಃ ಅಧಿಕಾರವನ್ನು ಅವರು ಅನುಭವಿಸಿದ ಹಾಗೇ ಯಾರೂ ಅನುಭವಿಸಿರಲಿಕ್ಕಿಲ್ಲ.ಎಂಥಾ ಮಜಾ ಮಾಡಿದರು ಎಂದರೆ ಕರ್ನಾಟಕದ ಜನ ಆಗ ಅದನ್ನು ತೆಪ್ಪಗೇ ಒಪ್ಪಿಕೊಂಡಿದ್ದರು.ಮುಖ್ಯಮಂತ್ರಿ ಎಂದರೆ ಹೀಗೇ ಇರಬೇಕೋ ಏನೋ ಎಂದು ಜನ ನಂಬಿದರು.ಗುಂಡೂರಾಯರ ದರ್ಬಾರು ಏನು ಖಡಕ್ ಆಗಿ ಇತ್ತು ಎಂದರೆ ಅಲ್ಲಿ ದೂಸರಾ ಮಾತೇ ಇರಲಿಲ್ಲ.ಅವರ ಹೆಲಿಕಾಪ್ಟರ್ ಸವಾರಿ ಏನು,ಬೆಳ್ಳಿ ಗದೆಯೇನು, ಸ್ವಿಂಮ್ಮಿಗು ಸ್ಟೈಲು ಏನು ಚಿಕನ್ ಮಟನ್ ಬ್ರಾಹ್ಮಣಿಕೆಯೇನು,ಮಂಜುಳ ನಿನಾದವೇನು॒

ಆಮೇಲೆ ಅವರು ಅಧಿಕಾರ ಕಳೆದುಕೊಂಡು ಹೇಗೆ ನಾಶವಾದರು ಎಂದರೆ ಅವರೇ ಒಮ್ಮೆ ತಾನು ಅಧಿಕಾರದಲ್ಲಿದ್ದಾಗ ಹೇಗೆ ತನ್ನ ಕಾರಲ್ಲಿ ಕೂರಲು ಈ ಕಂತ್ರಿಗಳೆಲ್ಲಾ ದುಂಬಾಲು ಬೀಳುತ್ತಿದ್ದರು ಎಂದು ವಿವರಿಸಿದ್ದರು.ರಾಜೀವ ಗಾಂಧಿಗೆ ಕೂಲಿಂಗ್ಲಾಸ್ ಹಾಕಲು ತಾನೇ ಕಲಿಸಿದ್ದು ಎಂದು ಗುಂಡೂರಾಯರು ಹೇಳಿದ್ದ ಜೋಕ್ ಇನ್ನೂ ಮರೆತಿಲ್ಲ.

ಒಮ್ಮೆ ನನ್ನ ಕಛೇರಿಗೆ ಒಬ್ಬರು ಬಿಳೀ ಪಂಚೆ ಸುತ್ತಿದ ಮುಖ ತುಂಬಾ ನೆರಿ ಬಿದ್ದಿದ್ದ ವ್ಯಕ್ತಿ ಬಂದಿದ್ದರು. ಯಾವುದೋ ಒಂದು ಹೇಳಿಕೆಯನ್ನು ಕೊಟ್ಟು ಪೇಪರಲ್ಲಿ ಹಾಕಬೇಕು ಎಂದರು.ನನಗೆ ಅವರು ಯಾರು ಎoದೇ ಗೊತ್ತಾಗಲಿಲ್ಲ.ಯಾರು ತಾವು ಎಂದಾಗ ತಾನು ರಾಜ್ಯದ ಮಾಜಿ ಎಜುಕೇಶನ್ ಮಿನಿಸ್ಟರು ಎಂದು ಪರಿಚಯಿಸಿದರು. ನಾನು ಆಮೇಲೆಯೇ ಅವರನ್ನು ಕೂರಲು ಹೇಳಿದ್ದು. ಅವರು ಕೂರುವ ಮುನ್ನ ಉದ್ದ ಕೊಡೆ ಸಪಾಟಾಗಿಡಲು ಆಚೀಚೆ ನೋಡಿ ಮತ್ತೊಂದು ಕುರ್ಚಿ ಮೇಲೆ ಇಟ್ಟರು.ಆಮೇಲೆ ಏನೋ ಸಂಕೋಚಕ್ಕೆ ಸಿಕ್ಕಿದವರಂತೆ ನಡೆದುಕೊಂಡೇ ಬಂದೆ,ಅಟೋರಿಕ್ಷಾದವನರು ದುಬಾರಿ ಬಾಡಿಗೆ ಹೇಳ್ತಾರೆ, ಈ ಕೊಡೆ ಇದ್ದರೆ ಎಷ್ಟು ದೂರ ಬೇಕಾದವರು ನಡೆಯಬಲ್ಲೆ ಎಂದಿದ್ದರು.

ಗೂಟದ ಕಾರು ಎಂಬುದು ಅಧಿಕಾರದ ಮಹಾ ಅಹಂಕಾರದ ಸಂಕೇv.ಗೂಟದ ಕಾರು ಹತ್ತಲೂ ಇಳಿಯಲೂ ಬಾಗಿಲು ತೆರೆಯವ ಇವರ ಕೈಗಳು ಮುಂದೆ ಬರಲಾರವು.ಅನೇಕ ಬಾರಿ ಈ ಅಧಿಕಾರಸ್ತರ ಈ ಧಿಮಾಕು ನೋಡಿದ ನಾನು ಅಚ್ಚರಿಗೊಂಡಿದ್ದೇನೆ.ಒಬ್ಬ ಡೀಸಿಗೆ ತನ್ನ ಕಾರಿನ ಬಾಗಿಲು ತೆರೆಯಲು ಜೂನಿಯರು ಬರಬೇಕು, ಒಬ್ಬ ಮಂತ್ರಿಗೆ ಅವನ ಸೆಕ್ಯೂರಿಟಿಯೇ ಬಾಗಿಲು ತೆರೆಯುವುದನ್ನು ನೋಡಿದ ನಾನು ಅದು ಹೇಗೆ ಇವರು ಇದೇ ಕೈಯಲ್ಲಿ ಊಟ ಮಾಡುತ್ತಾರೆ ಎಂದು ಯೋಚಿಸಿ ಈ ದಾರಿದ್ರ್ಯ ಸಂತಾನದ ಬಗ್ಗೆ ಅಸಹ್ಯಪಟ್ಟಿದ್ದೆ.

ಯಾವುದೂ ಶಾಶ್ವತವಲ್ಲ ಎಂದ ಮೇಲೆ ಅಧಿಕಾರ ಶಾಶ್ವತವಾಗುವುದು ಹೇಗೆ?ಎಂಥೆಂಥಾ ಚಕ್ರವರ್ತಿಗಳೂ ಅಧಿಕಾರ ಕಳೆದುಕೊಂಡು ಅನಾಮಿಕರಾಗಿ ಸತ್ತು ಹೋಗಿಲ್ಲ,ಅವರ ಕೋಟೆ ಮಾತ್ರಾ ಅಧಿಕಾರದ ಅವರ ಅಹಮಿಕೆಗಳಿಗೆ ಸಾಕ್ಷಿಯಾಗಿ ಉಳಿದಿದೆ.

ಯಾವ ಅಧಿಕಾರವೂ ಇಲ್ಲದೇ ಸುಖವಾಗಿ ಇರಲು ಸಾಧ್ಯವಾಗದೇ ಮತ್ತು ಜನರೇಕೆ ಅಧಿಕಾರಕ್ಕಾಗಿ ಹಂಬಲಿಸುತ್ತಾರೆ ಎಂದರೆ ನಮ್ಮೊಳಗೇ ನಮಗೆ ಗೊತ್ತಿಲ್ಲದಂತೆ ಒಬ್ಬ ಬಾಸ್ ಅಡಗಿರುತ್ತಾನೆ ಮತ್ತು ಆತ ಆಗಾಗ ಹೊರಬರಲು ಸಮಯ ಕಾಯುತ್ತಾನೆ.ಆದರೆ ಹಲವರಿಗೆ ಆ ಬಾಸ್ ಸದಾ ಹೊರಗೇ ಇರಲು ಆಸೆ.

ಅಧಿಕಾರದ ಮೂಲಕವೇ ಎಲ್ಲವನ್ನೂ ತನ್ನದಾಗಿಸಿಕೊಳ್ಳಲು ಸಾಧ್ಯ ಎಂಬ ಭ್ರಮೆ ಎಲ್ಲಾ ಅಧಿಕಾರಸ್ತರಿಗೆ ಇದೆ.ಅದಕ್ಕೇ ಅವರು ಸದಾ ನೀಚರಾಗಿರುತ್ತಾರೆ.

20070908

ಕುಡಿನೋಟ..the story of THE LINE


ಇದು ದೃಷ್ಟಿಯಲ್ಲ,

ನೋಟವಲ್ಲ,

ವಿಶನ್ ಅಲ್ಲ,

ಲುಕ್ ಕೂಡ ಅಲ್ಲ.

ಇದು ಕುಡಿನೋಟ !

ನಮ್ಮ ಕರಾವಳಿಯ ಹುಡುಗರ ಭಾಷೆಯಲ್ಲಿ ಲೈನ್.

ವಾವ್ !

ಇದಕ್ಕೆ ಒಂದೇ ಒಂದು ಡೆಫಿನೇಶನ್ ಈ ತನಕ ಬಂದಿಲ್ಲ.

ಎದೆಯಾಳದ ಒತ್ತಾಸೆಯ ಬಿಂಬವಿದು.

ಇದು ಹೃದಯದ ಭಾಷೆಯ ಅಕ್ಕರೆಯ ಅಕ್ಷರ.

ಇದು ಖಾಲಿ ಬಿದ್ದ ಪ್ರೇಮ ಸಾಮ್ರಾಜ್ಯದ ಅರಸ/ಸಿ ಗಾಗಿ ಹೊರಟ ದಂಡಯಾತ್ರೆ.

ನಿಮ್ಮ ಜೀವಮಾನದಲ್ಲಿ ನೀವು ಒಮ್ಮೆಯಾದರೂ ಕುಡಿನೋಟದ ಈಡಿಗೆ ಈಡಾಗದಿದ್ದರೆ ಹೇಳಿ. ಹದಿಹರೆಯದಲ್ಲಿ ಇದು ಅಸದೃಶ ಅನುಭವ.

ರೆಸ್ಟುರಾದಲ್ಲಿ ಆರನೇ ಟೇಬಲ್‌ನಲ್ಲಿ ಐಸ್‌ಕ್ರೀಂ ಮೆಲ್ಲುತ್ತಿರುವ ಹರೆಯದ ಹುಡುಗಿಗೆ ಬೇಡ ಬೇಡವೆಂದರೂ ಆ ಹ್ಯಾಂಡ್ಸಮ್ ಬಾಯ್‌ನನ್ನು ನೋಡಿ ಬಿಡುವ ತವಕ.

ಮದುವೆ ಮಂಟಪದಲ್ಲಿ ಮದುಮಗಳ ಪೈಕಿಯ ಆ ಬೊಗಸೆ ಕಂಗಳ ಹುಡುಗಿಯನ್ನು ಈ ತುದಿಯಲ್ಲಿ ಗೆಳೆಯರೊಡನೆ ಮಾತುಕತೆಯಲ್ಲಿ ನಿಂತ ಹುಡುಗನಿಗೆ ಕದ್ದು ಮುಚ್ಚಿ ಕಣ್ಣಲ್ಲೇ ಹಾರಿಸಿ ಬಿಡುವ ಪುಳಕ.

ಬಸ್ಸು, ರೈಲು, ಪಾರ್ಕು, ಕೆಫೆ, ಕಾಲೇಜು, ಸಭೆ, ಸೆಲ್ಲು ಹೀಗೆ ಎಲ್ಲೆಂದರಲ್ಲಿ ಈ ಕುಡಿನೋಟ ಹರಿಸುತ್ತದೆ ಮಾಯಾಜಾಲ.

ಕುಡಿನೋಟ ಬೀರುವ ಅವನಿಗಾಗಲಿ, ಅವಳಿಗಾಗಲಿ ಅದು ಅರಿವೇ ಇಲ್ಲದ ಪ್ರಕ್ರಿಯೆ. ಅದು ಉಸಿರಾಟದಂತೆ, ಹೃದಯ ಬಡಿತದಂತೆ ಸಹಜ. ಅದೊಂದು ಸಂವಾದ. ಅದಕ್ಕೆ ಕಾಲ ಮಿತಿಯಿಲ್ಲ, ಕಟ್ಟು ಕಟ್ಟಳೆಗಳಿಲ್ಲ. ಮನದ ಭಾಷೆ ನೋಟದ ರೂಹಿನಲ್ಲಿ ಮಾತಿಗಿಳಿಯುವ ಪರಿ ಅದು.

ಅದು ಪರಿಶುದ್ಧ, ಅಲ್ಲಿ ಅಸಹಜವಾದುದೇನಿಲ್ಲ, ಅತಿಯಾಗುವುದೂ ಏನಿಲ್ಲ.

ಒಂದು ಎಸೆತಕ್ಕೆ ಒಂದು ಕ್ಯಾಚ್. ಅವನ ಪ್ರಭಾವಲಯದಲ್ಲಿ ಅವಳ ಹೂ ಬಾಣ ನಾಟಿಕೊಂಡೊಡನೆ ಕಂಪನ. ಮರುಕ್ಷಣಕ್ಕೆ ಮತ್ತೊಂದು ಬಾಣ.

ಇದು ಮನ್ಮಥ ಕದನ !

ಜರ್ಮನಿಯಲ್ಲಿ ಇತ್ತೀಚೆಗೆ ಒಂದು ಸಂಶೋಧನೆ ನಡೆದಿದೆ. ಮ್ಯೂನಿಚ್ ನಗರದಲ್ಲಿ ಮನೋವಿಜ್ಞಾನಿಗಳು ಯಾವುದೇ ಸೂಚನೆ ನೀಡದೆ ಮೂವತ್ತು ಜೋಡಿ ತರುಣ ತರುಣಿಯರನ್ನು ಕೂಡಿ ಹಾಕಿದ್ದಾರೆ. ಪರಸ್ಪರ ಪರಿಚಯವಿಲ್ಲದ ಈ ಹುಡುಗ ಹುಡುಗಿಯರ ವರ್ತನೆಗಳನ್ನು ಗುಟ್ಟಾಗಿಟ್ಟ ಕೆಮರಾಗಳಲ್ಲಿ ದಾಖಲಿಸಿದ್ದಾರೆ. ಸುದೀರ್ಘ ಅಧ್ಯಯನದ ಬಳಿಕ ತಿಳಿದು ಬಂದದ್ದೇನೆಂದರೆ..... ಕುಡಿನೋಟ ಬೀರುವುದರಲ್ಲಿ ಹುಡುಗಿಯರೇ ಮುಂದು!

ಹುಡುಗಿಯ ಕುಡಿನೋಟವನ್ನು ಹಿಡಿದಿಟ್ಟ ಹುಡುಗ ಅವಳ ಪ್ರೇಮದ ಬಲೆಗೆ ಬಿದ್ದ ಹಾಗೆಯೇ!

ಅದನ್ನು ಕಬಳಿಸಲಾಗದೇ ಉಳಿದ ಬೆಪ್ಪನನ್ನು ಹುಡುಗಿ ಶಾಶ್ವತವಾಗಿ ತಿರಸ್ಕರಿಸುತ್ತಾಳೆ !

so be on the LINE..

20070902

ನಾಲ್ಕು ಸಾಲು-13೧.


ರಾತ್ರಿಯಿಡೀ

ಮಳೆಯ ತಬ್ಬಿದ

ಇಳೆ

ಮುಂಜಾವಕ್ಕೆ

ಇಬ್ಬನಿಯ ಅಪ್ಪಿ

ಮುದ್ದಾಡಿತು.


೨.


ಮರದ

ಎತ್ತರಕ್ಕೆ

ಕಣ್ಣು ಹಾಯಿಸಿದೆ;

ಬೆಳೆಯುವುದಿಲ್ಲ ಎಂದೂ

ಒಳಗೂ ಹೊರಗೂ

ಎಂದು ಗೊತ್ತಾಯಿತು.

ಹುಲ್ಲಾದೆ.


೩.


ಸಾವಿರ ಜನರು

ಸೇರಿ

ಹಬ್ಬ ಮಾಡಿದರು.

ಪುಟ್ಟ ಇರುವೆ ಸಾಲು

ಚಪ್ಪರದಲ್ಲಿದ್ದೂ

ಹಬ್ಬಕ್ಕೆ ಬರಲಿಲ್ಲ.


೪.


ಚಂದಿರನ

ನೆಲದಿಂದ

ಭೂಮಿಯನ್ನು ನೋಡಿದೆ.

ಎಲ್ಲರೂ

ಒಂದೇ ಥರ ಕಂಡರು.

20070901

ನಾಲ್ಕು ಸಾಲು.


೧.
ಮಿಂಚನ್ನು ಮೊದಲು ಕಳುಹಿಸಿ
ಗುಡುಗು
ಸೆಡವು ತೋರಿಸಿತು
ಗಾಳಿಯನ್ನು ಅಟ್ಟಿದ
ಮಳೆ
ತೆರೆದ ದಾರಿಯಲ್ಲಿ
ಧಾವಿಸಿತು.
ನೆನೆಯುವ ಮುನ್ನಎಷ್ಟೊಂದು ಅಬ್ಬರ!

೨.


ಇಳೆಯನ್ನು
ಅಪ್ಪಿದಮಳೆ ಅವಳೊಳಗೆ
ಇಂಗಿತು.
ಆ ಪ್ರೀತಿಗೆ ಸೋತ
ಇಳೆ ಮೈತುಂಬಿಹರಿಯಿತು.

೩.

ಚಂದಿರನ
ಹಿಡಕೊಂಡು
ಇರುಳು
ಆಕಾಶದಲ್ಲಿ ನಡೆದಾಡಿತು
ನಕ್ಷತ್ರಗಳು
ದಾರಿಗೆ ಬೆಳಕ ಹರಿಸಿದವು.

೪.

ಸೂರ್ಯನಿಲ್ಲದ
ಬಾನಿನಲ್ಲಿ
ಚಂದಿರ
ಸಾಮಂತ.
ನಕ್ಷತ್ರಗಳು ಸರ್ವ ಸ್ವತಂತ್ರ.