20070824

ಬಾಂಬು ಕುರಿತು ಬರೆಯುವುದು.


ಬಾಂಬು!

ಆಕರ್ಷಣ-ವಿಕರ್ಷಗಳ ಸಾನ್ನಿಧ್ಯದಲ್ಲಿ ಉಂಟಾಗುವ ಅನೂಹ್ಯ ಆಘಾತ.

ಈ ರಾಸಾಯನಿಕ ರಾಕ್ಷಸನ ನಿರ್ಮಾಣವನ್ನು ಒಂದಾದರೂ ಸದುದ್ದೇಶಕ್ಕೆ ಬಳಸುವುದಿಲ್ಲ, ಅದು ನಾಶದ ಸಂಕೇತ.

ಮಾನವ ಕೋಟಿಯೇನು, ಒಂದು ಕನಸು, ಒಂದು ನಗು, ಒಂದು ಪಲುಕು ಅಷ್ಟೇ ಏಕೆ ಒಂದು ಗರುಕೆ ಹುಲ್ಲನ್ನು ಕೂಡಾ ಹೊಸಕಿ ಹಾಕಬಲ್ಲ ಬಾಂಬು ಈಗ ಕಾಲ್ಚೆಂಡಿನಾಟ.

ಬರೋಬ್ಬರಿ ಅರುವತ್ತು ವರ್ಷಗಳ ಹಿಂದೆ ಇದರ ದೈತ್ಯ ನರ್ತನ ಜಪಾನಿನಲ್ಲಿ ಪರಿಚಯಗೊಂಡ ಕ್ಷಣದಿಂದ ನಿನ್ನೆ ರಾತ್ರಿ ಇರಾಕ್‌ನ ಬೀದಿಯಲ್ಲಿ ಆ ಬಡಪಾಯಿಯನ್ನು ಮಟ್ಟಸವಾಗಿ ಛಿದ್ರಗೊಳಿಸುವ ತನಕ ಈ ರಕ್ತ ಬೀಜಾಸುರನ ಅಟ್ಟಹಾಸ ನಿತ್ಯ ನಿರಂತರ.

ಫಿಲಿಫ್ ಮೊರಿಸನ್!

ಅಮೇರಿಕಾದ ಮ್ಯಾನ್‌ಹಟನ್ ಪ್ರಾಜೆಕ್ಟ್‌ನ ವಿಜ್ಞಾನಿಯಾಗಿದ್ದವನು. ಮೊದಲ ಅಣು ಬಾಂಬಿನ ಜನಕರಲ್ಲೊಬ್ಬ. ಸರಕಾರ ಹೇಳಿದ ಕೆಲಸ ಮಾಡಿಟ್ಟ.

ಅದೇ ಆ ಹಿರೊಶಿಮಾಕ್ಕೆ ಎಸೆಯಲಾದ ಆ ಬಾಂಬು.

ಅದು ಹಿರೊಶಿಮಾದ ಯಾವಜ್ಜೀವಗಳನ್ನು ಹುರಿದು ಹಾಕಿತೋ;"ಆ ಬಾಂಬಿನ ವಿನಾಶಕರ ಸಾಮರ್ಥ್ಯ ಮೊದಲೇ ಗೊತ್ತಿತ್ತು. ಆದರೆ ಅದು ಹೀಗೆ ಬಳಕೆಯಾಗುತ್ತದೆ ಎಂದು ಗೊತ್ತೇ ಇರಲಿಲ್ಲ ’ ಎಂದು ಅತ್ತುಬಿಟ್ಟ ಮೊರಿಸನ್.

ಜಪಾನಿನಿಂದ ಯಾವ ಅಪಾಯವೂ ಇರಲಿಲ್ಲ. ಅದು ಅಮೆರಿಕಾಕ್ಕೂ ಗೊತ್ತಿತ್ತು. ಒಂದು ಬಾರಿ ಒಂದು ಎಚ್ಚರಿಕೆ ಕೊಟ್ಟು ಗುರ್ರೆಂದಿದ್ದರೆ ಸಾಕಿತ್ತು. ಹಾಗೆ ಮಾಡಿ ಎಂದಿದ್ದರು ಮ್ಯಾನ್‌ಹಟನ್ ಪ್ರಾಜೆಕ್ಟ್‌ನ ವಿಜ್ಞಾನಿಗಳು.

"ಅಮೇರಿಕಾ ಹಾಗೆ ಮಾಡಲಿಲ್ಲ! ನೋಡಿ’ ಎಂದಾಗ ಮೊರಿಸನ್ ಮುಖದಲ್ಲಿ ವಿಷಣ್ಣ ಛಾಯೆ.

ಆ ಮೊರಿಸನ್ ಈಗ ಇದ್ದಾನೋ, ಇಲ್ಲವೋ ಗೊತ್ತಿಲ್ಲ.

ಬಾಂಬಿನ ಯುಗ ಆರಂಭಗೊಂಡ ಇಪ್ಪತ್ತು ವರ್ಷಗಳ ಬಳಿಕ ಆತ "ಓಹ್! ನಾಶ ತೀರಾ ಅಗ್ಗ !’ (destruction is so inexpensive) ಎಂದು ಹೇಳಿ ಸುದ್ದಿಯಾಗಿದ್ದ.

ಯುದ್ಧ ಎಂದರೆ ಒಂದು ಖಡ್ಗ, ಮತ್ತೊಂದು ಗುರಾಣಿ. ಯುದ್ಧವೆಂದರೆ ಕಾಳಗ, ಕುದುರೆಗಳ ಖರಟದಾಟ, ಧೂಳಿನ ಹಾರಾಟ. ಅದು ತನಗೆ ಗೊತ್ತಿಲ್ಲದಂತೆ ಒಂದು ಗೆರೆಯ ಮಿತಿ ನಡುವೆ ನಡೆದು ಬಿಡುತ್ತಿತ್ತು. ಯಾರ ಬಳಿ ಯಾವ ಖಡ್ಗವಿದೆ, ಯಾರು ಎಷ್ಟು ಚೆನ್ನಾಗಿ ಅದನ್ನು ಬೀಸುತ್ತಾರೆ... ಎಂದು ಗೊತ್ತಿದ್ದರೆ ಯುದ್ಧ ಸಲೀಸಾಗುತ್ತಿತ್ತು.

ಬಾಂಬು ಬಂತು ಅಣುಬಾಂಬು... ಪರಮಾಣು ಬಾಂಬು... ರಾಸಾಯನಿಕ ಬಾಂಬು... ಇದರ ಮುಂದೆ ಗೆರೆಗಳು ಅಳಿಸಿಹೋದವು, ಸಾಮರ್ಥ್ಯ, ತೂಕ ಲೆಕ್ಕಕ್ಕೆ ಬಾರದೆ ಹೋದವು.

ಒಂದು ನ್ಯೂಕ್ಲಿಯರ್ ಬಾಂಬು ಕಟ್ಟಿ ಮಡಗಲು ಹೆಚ್ಚೇನೂ ಖರ್ಚಿಲ್ಲ. ಒಂದು ಜಿಲ್ಲೆಗೆ ಕುಡಿಯುವ ನೀರಿನ ಪೈಪು ಹಾಕುವ ಖರ್ಚು ಸಾಕು. ಆ ಸಣ್ಣ ಉಂಡೆ ಎಸೆದು ಬಿಟ್ಟರೆ ಇನ್ಯಾವುದೂ ಲೆಕ್ಕ ಉಳಿಯಲಾರದು. ಇದನ್ನೇ ಫಿಲಿಫ್ ಮೊರಿಸನ್ "ನಾಶ ತೀರಾ ಅಗ್ಗ’ ಎಂದದ್ದು.

ಈ ತಂತ್ರಜ್ಞಾನ ಇರದಿದ್ದರೆ ಯುದ್ಧ ನಿಲ್ಲಿಸೋದು ಸುಲಭ.

ಆದರೆ ಜಪಾನಿ ಕವಿಯೊಬ್ಬ "ಎಲ್ಲಿವರೆಗೆ ದೇಶಗಳಿರುತ್ತವೋ, ಎಲ್ಲಿ ವರೆಗೆ ವ್ಯವಸ್ಥೆಗಳಿರುತ್ತವೋ, ಅಲ್ಲಿವರೆಗೆ ಯುದ್ಧದ ಸಾಂಘಿಕತೆ ಇರುತ್ತದೆ’ ಎಂದು ಅರೆಬೆಂದ ದಾರ್ಶನಿಕನ ಧಾಟಿಯಲ್ಲಿ ಪ್ರಸ್ತುತ ಪಡಿಸಿದ್ದಾನೆ.

ಪತ್ರಕರ್ತ ಅಲೆನ್‌ರೆನೈ ೧೯೫೯ರಲ್ಲಿ ನಿರ್ಮಿಸಿದ "ಹಿರೊಶಿಮಾ ಮಾನ್ ಅಮೊರ್’ ಸಿನಿಮಾದಲ್ಲಿ ಹಿರೊಶಿಮಾ ದುರಂತದ ದಾಖಲೆಗಳಿವೆ. ಈ ದುರಂತದ ಹದಿನೈದು ವರ್ಷಗಳ ಬಳಿಕ ಪುನರ್‌ನಿರ್ಮಾಣಗೊಂಡ ಹಿರೊಶಿಮಾದಲ್ಲಿ ವಿಶ್ವ ಶಾಂತಿಗಾಗಿ ಬಂದ ಚಿತ್ರನಟಿ ಹಾಗೂ ಜಪಾನಿ ವಾಸ್ತುಶಿಲ್ಪಿಯ ನಡುವೆ ಚಿತ್ರ ಪ್ರಸ್ತುತಗೊಳ್ಳುತ್ತದೆ. ಕಾಲದ ಸ್ಮೃತಿ-ವಿಸ್ಮೃತಿಗಳ ಜಾಲದಲ್ಲಿ ಯಾವತ್ತೂ ಮುಕ್ತಿ ಇಲ್ಲದೆ ಹೆಣಗುವ ಮನುಷ್ಯ ಬದುಕಿನ ದುರಂತ ಚಿತ್ರಣವನ್ನು ರೆನೈ ದಾಖಲಿಸಿದ್ದ.

ಹಿರೊಶಿಮಾ ಘಟನೆ ಬಳಿಕ ಹದಿನೈದೇ ದಿನಗಳಲ್ಲಿ ಫಿಲಿಫ್ ಮೊರಿಸನ್ ನೇತೃತ್ವದ ತಂಡ ಹಿರೊಶಿಮಾಕ್ಕೆ ಬಂದಿಳಿಯಿತು. ಬಾಂಬಿನ ಪ್ರತಿ ಪರಿಣಾಮ ಕುರಿತು ಅಮೇರಿಕಾ ಅಧ್ಯಯನಕ್ಕಾಗಿ ಈ ತಂಡವನ್ನು ಕಳುಹಿಸಿತ್ತು.

ಈ ತಂಡ ಐದು ಸಾವಿರ ಜಪಾನಿ ಸೈನಿಕರ ಕಾವಲಿನಲ್ಲಿ ಬಾಂಬಿನ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಿತ್ತು. ಜಪಾನಿ ಸೈನಿಕರು ಮನಸ್ಸು ಮಾಡಿದ್ದರೆ ಇರುವೆಯನ್ನು ಹೊಸಕಿದಂತೆ ಈ ಬಾಂಬು ಜನಕರನ್ನು ಹೊಸಕಬಹುದಿತ್ತು.

ಆದರೆ ಹಾಗಾಗಲಿಲ್ಲ.

ಈ ತಂಡವನ್ನು ವಿವಿಧೋಪಚಾರಗಳಿಂದ ನೋಡಿಕೊಳ್ಳಲಾಯಿತು.

ಅದು ಜಪಾನಿಯರ ಅಂತ:ಕರಣವಾ?

ಅಥವಾ

ಬಾಂಬು ಸೃಷ್ಟಿಸಿದ ಆ ಪರಿಯ ಭಯ-ತಲ್ಲಣವಾ?

20070822

ಈ ನಾಲ್ಕು ಸಾಲಿನಲ್ಲಿ

೧.
ಎಷ್ಟೊಂದು ಬೆಳಕು

ಚೆಲ್ಲಿದರೂ

ಅಷ್ಟು ಕತ್ತಲು ಉಳಿದೇ ಇತ್ತು.

ಕತ್ತಲೊಳಗೆ

ಎಷ್ಟು ಹುಡುಕಿದರೂ

ಇಷ್ಟು ಬೆಳಕೂ ಸಿಗಲೇ ಇಲ್ಲ.೨.ಅವರುಪ್ರೀತಿಸಿದರು.

ಆಮೇಲೆ ಸತ್ತರು.

ಅವರ ಪ್ರೀತಿ

ಇಲ್ಲೇ ಉಳಿಯಿತು.

ಆ ಪ್ರೀತಿಯನ್ನು ಪ್ರೀತಿಸುವವರೇ ಇರಲಿಲ್ಲ.
೩.
ಒಂದಾನೊಂದು ಕಾಲದಲ್ಲಿ

ರಾಜ ಕಟ್ಟಿಸಿದ ಕೋಟೆ ಮೇಲೆ

ಮೊನ್ನೆ

ಎಲ್ಲಿಂದಲೋ ಬಂದ

ಹಕ್ಕಿಗಳು

ಕುಳಿತು

ಖಾಲಿ ಫಿರಂಗಿಗಳೊಳಗೆ ಇಣುಕಿದವು.


೪.ದಿಗಂತದಲ್ಲಿ ಕದ್ದು ಕೂಡುವ

ಬಾನು ಮತ್ತು ಭೂಮಿಯ

ಬಳಿ ಹೋದರೆ

ಅಲ್ಲಿ ಇಬ್ಬರೂ

ದೂರವೇ ಇರುವುದುಕಂಡಿತು.

ಪ್ರೀತಿಯ ದಿಕ್ಕು

ಮತ್ತೂ ಆಚೆಗಿತ್ತು.

20070817

ನಾಲ್ಕು ಸಾಲಲ್ಲಿ ಲೆಕ್ಕ ..


೧.
ಒಂದು ಕೂಡಿಸು ಒಂದು


ಎಂದರೆ


ಎಲ್ಲವೂ;


ಎರಡು ಕಳೆ ಒಂದು


ಎಂದರೆ


ಏನೂ ಇಲ್ಲ;


ಅದು ಪ್ರೀತಿ ಗಣಿತ.
೨.
ಎಲ್ಲಾ ರೇಖೆಗಳೂ


ಕೊನೆಗೂ ಎಲ್ಲಾದರೂ


ಒಂದಾಗುತ್ತವೆ


ಸಮಾನಾಂತರ ರೇಖೆಗಳು


ಹಾಗೇ ಸಾಗುತ್ತವೆ.


ಪ್ರೀತಿ ಮತ್ತು ವಿರಹ


ಗೆರೆಗಳಾಗಿರಬಾರದಿತ್ತು.
೩.
ಅವನು


ಒಂದರಿಂದ ಎಣಿಸುತ್ತಾ ಹೋದ


ಅನಂತಕ್ಕೆ.


ಅವಳು


ಅನಂತದಿಂದ ಎಣಿಸುತ್ತಾ ಬಂದಳು


ಒಂದಕ್ಕೆ.


ಅವರೆಲ್ಲಿ ಒಂದಾಗುವರೋ?
೪.
ಮರ ಎಂದೂ ತನ್ನ ಎಲೆಗಳ


ಲೆಕ್ಕ ಇಡಲಿಲ್ಲ


ಹೂವು ಎಸಳುಗಳ


ಲೆಕ್ಕ ಮಾಡಲಿಲ್ಲ


ಎಲೆ ಮತ್ತು ಎಸಳು


ಉದುರಿದವು.


ಭೂಮಿ ಲೆಕ್ಕ ಒಪ್ಪಿಸಿತು.

20070816

ನಾನೇನು ಮಾಡಲಿ? ಬಡವನಯ್ಯಾ..


ಈ ನಮ್ಮ ದೇಶ ಇದೆಯಲ್ಲಾ

ಭಾರತ;

ಯಾಕೆ ಈ ಥರಾ ಬಡಕಲಾಗಿದೆ?

ಅನೇಕ ಬಾರಿ ಅನೇಕರು ಇದನ್ನೇ ಯೋಚಿಸಿದ್ದಾರೆ.

ನೂರು ಕೋಟಿ ಜನರಿದ್ದೂ ಈ ದೇಶ ಇನ್ನೂ ಬಡವ ಆಗಿದೆ ಎಂದರೆ ಏನೋ ಒಂದು ಐಬು ಇರಬೇಕು.

ಐಬು ಏನಲ್ಲಾ;

ಯಾರೂ ಕೆಲ್ಸಾನೇ ಮಾಡಲ್ಲ,ಅಷ್ಟೆ.

ಇದನ್ನು ಹೀಗೆ ಡಿಫೈನ್ ಮಾಡಬಹುದು.

ನೋಡಿ ೧೦೦ ಕೋಟಿ ಜನ.

ಆ ಪೈಕಿ ೧ ಕೋಟಿ ಇನ್ನೂ ಐದು ವರ್ಷಕ್ಕಿಂತ ಕೆಳಗಿನವರು.ಹಸುಗೂಸುಗಳು.

೨೫ ಕೋಟಿ ಮಕ್ಕಳು, ಶಾಲೆಗೆ ಹೋಗಬೇಕು ಮತ್ತು ಹೋಗ್ತಾ ಇದ್ದಾರೆ.

೧೫ ಕೋಟಿ ಜನ ನಿರುದ್ಯೋಗಿಗಳು,ಇನ್ನೂ ಕೆಲಸ ಸಿಕ್ಕಿಲ್ಲ; ಕೆಲಸ ಹುಡುಕುತ್ತಾ ಇದ್ದಾರೆ.

೩೦ ಕೋಟಿ ಜನ ವಿವಿಧ ರಾಜ್ಯಗಳಲ್ಲಿ ರಾಜ್ಯ ಸರಕಾರಿ ನೌಕರರು.

೧೭ ಕೋಟಿ ಜನ ಕೇಂದ್ರ ಸರಕಾರಿ ನೌಕರರು.

ಇಬ್ಬರೂ ಕೆಲಸ ಮಾಡಲ್ಲ.ಅದು ಬೇರೆ ಮಾತು.

೯ ಕೋಟಿ ಜನ ರಿಟೈರ್ ಆಗಿದ್ದಾರೆ. ಅಂದರೆ ನಿವೃತ್ತರು;ಪಾಪ ಅವರಿಗೆ ವಿಶ್ರಾಂತಿ ಬೇಕು;ಸೀನಿಯರ್ ಸಿಟಿಜನ್ನು.

ಒಂದು ಕೋಟಿ ಜನ ಐಟಿ ಬಿಟಿಗಳಲ್ಲಿದ್ದಾರೆ;

ಅವರೇನು ನಮ್ಮ ದೇಶಕ್ಕಾಗಿ ಕೆಲಸ ಮಾಡ್ತಾ ಇಲ್ಲವಲ್ಲ.

ಇನ್ನು ಸರೀಸುಮಾರು ೧.೨ ಕೋಟಿ ಜನ ಕಾಯಿಲೆ ಬಿದ್ದವರು, ನಮ್ಮ ಆಸ್ಪತ್ರೆಗಳಲ್ಲಿ ಇವರ ವಾಸ.

೭೯,೯೯,೯೯೮ ಮಂದಿ ಖದೀಮರು ಜೈಲಲ್ಲಿದ್ದಾರೆ.

ಹುಂ!

ಉಳಿದವರು ನಾನು ಮತ್ತು ನೀನು.

ನೀನು ಈ ಬ್ಲಾಗು ನೋಡ್ತಾ ಇದ್ದೀಯಾ;

ಉಳಿದದ್ದು ನಾನೊಬ್ಬನೇ.

ನಾನೊಬ್ಬ ಏನ್ ಮಾಡಲಿ?

ಇಷ್ಟು ದೊಡ್ಡ ದೇಶ ಬೇರೆ..

20070815

ನಾಲ್ಕು ಸಾಲು...


೧.


ಭೂಮಿ -ಬಾನು

ಎಷ್ಟೊಂದು

ಯುಗಗಳಿಂದ ಪ್ರೀತಿಸುತ್ತಿವೆ

ಎಂದೂ ಒಂದಾಗಲಾರದೇ

ಅದೆಂಥಾ ವಿರಹ

ಎಂದೆಂದೂ

೨.

ಮರ

ಬೋಳಾಗಿ ನಿಂತಿತ್ತು

ಉದುರಿದೆಲೆಗಳ ನಡುವಿಂದ

ಚಿಗಿತು ಬಂದ

ಹುಲ್ಲು

ಬೋಳು ಮರವ ತಬ್ಬಿಕೊಂಡಿತು.


೩.


ಅವಳ ಎದೆಯೊಳಗೊಬ್ಬ

ಹಾಡುಗಾರ

ಅವಳ ಮೌನವ

ತಾನೇ ಜೋಡಿಸಿ ಹಾಡಿದ

ಅದಕ್ಕೆ ಅವಳು ಶ್ರೋತೃ.


೪.


ಹೂವರಳಿ

ಇಬ್ಬನಿಯ ತಬ್ಬಿಕೊಂಡಿತು

ಮೊಗ್ಗು
ಬಿಸಿಲ

ಬರುವಿಕೆಗೆ ಕಾಯುತ್ತಿತ್ತು

ಅದೂ ಅರಳಲು.

20070814

ಓನ್ಲೀ ಸಿಕ್ಸ್ಟೀ..


ಅರುವತ್ತು ವರ್ಷ !

ಮನುಷ್ಯನಿಗೆ ನಿವೃತ್ತಿಯ ಹೊತ್ತು.

ಆದರೆ ದೇಶವೊಂದಕ್ಕೆ ಇನ್ನೂ ಒಂದು ಕಣ್‌ರೆಪ್ಪೆ ಹಂದಾಡಿದಷ್ಟೂ ಆಗಿರಲಿಕ್ಕಿಲ್ಲ.

ನೆಲದ ಗುಣವೇ ಅಂಥದ್ದು. ಕಾಲದೊಂದಿಗೆ ಅದರ ಓಟವಿಲ್ಲ. ಏನಿದ್ದರೂ ಕಾಲವೇ ನೆಲದ ಜತೆ ಹೊಂದಿಕೊಳ್ಳಬೇಕು.

ಭಾರತಕ್ಕೆ ಅರುವತ್ತು ವರ್ಷ ತುಂಬಿದೆ.

ಅದಕ್ಕೂ ಮೊದಲು ಭಾರತ ಇರಲಿಲ್ಲವೇ ಎಂದರೆ ಇಲ್ಲ ಎಂಬುದೇ ಉತ್ತರ.

ಏಕೆಂದರೆ ಈ ಭಾರತ ದೇಶದ ಒಂದು ಸಮಗ್ರ ಸ್ವರೂಪ ರೂಪುಗೊಂಡದ್ದೇ ಸ್ವಾತಂತ್ರ್ಯ ಚಳವಳಿಯ ಮೂಲಕ.

ಬಹುಶಃ ಅಶೋಕ ಚಕ್ರವರ್ತಿ ಮಾತ್ರಾ ಇಡೀ ಭಾರತವನ್ನು ಆಳಿದ್ದ.ಅಂಥಾ ಮೊಘಲರು ಅದೆಷ್ಟು ಶತಮಾನ ಆಳಿಕೊಂಡಿದ್ದರೂ ಇಡೀ ಭಾರತವನ್ನು ಅವರಿಗೂ ಆಳಲು ಸಾಧ್ಯವಾಗಲಿಲ್ಲ.ಅಷ್ಟೇ ಏಕೆ ಈ ಬ್ರಿಟೀಷರೂ ಅದೆಂಥ ಬಂಬಡಿ ಬಿಟ್ಟಿದ್ದರೂ ಅವರೂ ಇಡೀ ಭಾರತದ ಒಡೆಯರು ಎಂದೂ ಆಗಿರಲೇ ಇಲ್ಲ.

ಸಮಗ್ರ ಭಾರತದ ಕಲ್ಪನೆ ರೂಪುಗೊಂಡಿದ್ದೇ ಸ್ವಾತಂತ್ರ್ಯ ಚಳವಳಿ ಮೂಲಕ.

ಹಾಗೂ-ಹೀಗೂ ಕೂಡಿಸಿ ಕಳೆದರೆ ತೊಂಬತ್ತು ವರ್ಷಗಳ ಒಂದು ನಿರಂತರ ಅಭಿಯಾನದ ಮೂಲಕ ಟಿಸಿಲೊಡೆದು ಅದು ಕೊಂಬೆ ರೆಂಬೆಗಳಾಗಿ ಮಹಾನ್ ವೃಕ್ಷವಾಗಿ ಅರಳಿಕೊಂಡಿತು.

ಆ ಮರ ಇಂದಿಗೂ ಅಜರಾಮರ.

ಅದೆಷ್ಟು ಕೊಡಲಿ ಏಟು ಬಿದ್ದರೂ ಇದರ ಒಂದೂ ಗೆಲ್ಲೂ ಉರುಳಿಲ್ಲ.ನಮ್ಮ ದೇಶಕ್ಕೆ ಒಂದು ಸಾಕಾರ ಸ್ವರೂಪ ರೂಪುಗೊಳ್ಳಲು ತೊಂಭತ್ತು ವರ್ಷಗಳೇ ಬೇಕಾದವು.

ಅಂದರೆ ಭರ್ತಿ ಒಂದು ತಲೆಮಾರು !

ಒಂದು ಪೀಳಿಗೆಯೇ ದೇಶಕ್ಕೆ ಚಿತ್ರ ಬರೆಯಲು ಆಯಸ್ಸು ಬಿಟ್ಟುಕೊಟ್ಟಿದೆ. ಎಂದರೆ "ಕಟ್ಟುವೆವು ನಾವು ಹೊಸ ನಾಡೊಂದನ್ನು... ಎಷ್ಟು ಅಮೂಲ್ಯ !

ಇದೆಲ್ಲಾ ಆಗಿ ಅರುವತ್ತು ವರ್ಷಗಳಾಗಿವೆ.

ನಾವು ಈಗ ಕಾಣುತ್ತಿರುವ ಈ ಭಾರತ ನಮ್ಮದಾಗಿ ನಮ್ಮ ಪ್ರೀತಿಯನ್ನು ಕೊಂಡುಕೊಳ್ಳುತ್ತಿದೆ. ಈ ನೆಲದ ಜೀವ ತುಡಿಯುತ್ತಿದೆ.

ಕೊನೆಗೂ ಸ್ವಾತಂತ್ರ್ಯ ಯಾರೂ ತಂದು ಕೊಡಲಿಲ್ಲ ಎಂದೂ ಹೇಳಲಾಗುತ್ತಿದೆ. ಎರಡನೇ ಮಹಾಯುದ್ಧದ ಬಳಿಕ ಜಾಗತಿಕ ವಿದ್ಯಮಾನಗಳು ಬದಲಾಗುತ್ತಿದ್ದವು. ಸೂರ್ಯ ಮುಳುಗದ ಸಾಮ್ರಾಜ್ಯವೇ ಕುಸಿದು ಬೀಳುವುದನ್ನು ಬ್ರಿಟನ್ ರಾಣಿ ಕಣ್ಣಾರೆ ಕಾಣುವುದು ಅನಿವಾರ್ಯವಾಗಿತ್ತು. ಭಾರತ ಸಹಿತ ಎಲ್ಲಾ ವಸಾಹತುಗಳನ್ನು ಬ್ರಿಟನ್ ತ್ಯಜಿಸಲೇ ಬೇಕಿತ್ತು.

ಇತ್ತ ಸ್ವಾತಂತ್ರ್ಯ ದೊರಕಿಸುವಲ್ಲಿ ಗಾಂಧೀಜಿಗಿಂತಲೂ ನೆಹ್ರೂ ಪ್ರೀತಿ ಕೆಲಸ ಮಾಡಿತ್ತು ಎಂಬ ಒಂದು ಗಾಸಿಪ್ ಇದೆ.

ನೆಹ್ರು ಹಾಗೂ ಶ್ರೀಮತಿ ಬ್ಯಾಟನ್ಗೆ ಭಯಂಕರ ಲವ್ ಇದ್ದುದು ಜೊತೆಗೆ ಫಿಸಿಕಲ್ ರಿಲೇಶನ್ ಕೂಡಾ ಇದ್ದುದು ಸ್ವಾತಂತ್ರ್ಯ ಸಿಗಲು ಹಾದಿ ಸುಗಮಗೊಳಿಸಿತು ಎಂದು ಕಿಲಾಡಿ ವಿಮರ್ಶಕರು ಹೇಳುತ್ತಾರೆ. ನೆಹ್ರೂ ಮೌಂಟ್‌ಗೆ ಸೋತ ಶ್ರೀಮತಿ ಬ್ಯಾಟನ್ ಮೌಂಟ್ ಮಹಾಶಯರಲ್ಲಿ ಒತ್ತಾಸೆಯನ್ನು ಒತ್ತಡ ಮಾಡಿದಳೆಂದೂ ಆದು ಕಾರಣ ಬ್ಯಾಟನ್ ಮಹಾಶಯರು ಬ್ರಿಟನ್ ರಾಣಿಗೆ ಒತ್ತಡ ಹೇರಿದರೆಂದೂ ಈ ಕಿಲಾಡಿ ವಿಮರ್ಶಕರು ಉವಾಚಿಸುತ್ತಾರೆ.

ಅದು ಹೌದೇ ಆಗಿದ್ದರೆ ಆ ಪ್ರೀತಿಗೆ ಜಯವಾಗಲಿ.ಈ ಪ್ರೀತಿಯ ಫಲವಾಗಿಯೇ ಬ್ಯಾಟನ್ ಮಹಾಶರು ಸ್ವತಂತ್ರ ಭಾರತದಲ್ಲೂ ಪ್ರಥಮ ಪ್ರಜೆ ಆದರು ಎಂಬುದು ನಮ್ಮನ್ನು ಸ್ವಲ್ಪ ಪಿಂಚ್ ಮಾಡುತ್ತದೆ.

INDIA MY LOVE:

31 states

1618 languages

6400 castes

6 religion

6 ethnic groups

29 major festivals

INDIA IS ONE..ONLY ONE ....

AlWaYs..

I LOVE YOU MY INDIA.

20070811

ನಾಲ್ಕು ಸಾಲು ಹೀಗೆ..


೧.
ಎಲ್ಲದರಿಂದಲೂ

ಕಳಚಿ

ಮುಕ್ತನಾದವನು

ಎಲ್ಲರಿಂದಲೂ ಕಳಚಿಕೊಳ್ಳದೇ

ಸಂತನಾಗಲಿಲ್ಲ.


೨.


ಸೂಜಿ ರಂಧ್ರದಲ್ಲಿ

ಆಕಾಶ ಕಂಡು

ಬೆರಗಾದೆ.

ಸಮುದ್ರದೆದುರು ನಿಂತರೆ

ಒಂದು ತೆರೆ

ಸಮುದ್ರವನ್ನೇ ಮುಚ್ಚಿಸಿತು.
೩.
ನೀನು ಸಿಕ್ಕಿದ್ದು

ಪೂರ್ವ ಜನ್ಮದ ಪುಣ್ಯ

ಎಂದಳು ಅವಳು.

ಆಮೇಲೆ ಅವನು

ಪಾಪಿಯೇ ಆಗಿ ಉಳಿದ.
೪.
ದ್ವೀಪದ

ನಡುವೆ ನಿಂತು

ಸುತ್ತಲೂ ನೋಡಿದೆ.

ನೀರನ್ನು ದಾಟದೇ

ಇನ್ನೊಂದು ನೆಲ ಮುಟ್ಟಲಾರೆ

ಎಂದು ದ್ವೀಪವೇ

ಹೇಳಿತು.

20070810

ಇದು ಯಾವ ಸುಮಧುರ ಯಾತನೆ ?


ಆ ಕ್ಷಣದ ಧ್ವನಿ ಹಾಗಿರುತ್ತದೆ

ಮತ್ತು ಹಾಗಿರಲೇಬೇಕು.

ಅದು ಉತ್ಪಾತದ ಗಳಿಗೆಯೋ, ತೃಪ್ತ ಸ್ಥಿತಿಯ ಸಿಂಚನವೋ ಅಥವಾ ಉನ್ಮೀಲನದ ಭಾವ ಬಿಂಬವೋ ?

ಯಾರಿಗೆ ಗೊತ್ತು?

ಅದು ಇರುವುದಂತೂ ನಿಜ. ಆದರೆ ಅದಕ್ಕೆ ಹೆಸರಿಲ್ಲ.

ಫುಟ್‌ಬಾಲ್ ಆಟ ನೋಡಿ, ಪೂರ್ತಿಯಾಗಿ ನೋಡಿ. ಆಟ ಕೊನೆಗಳಿಗೆಗೆ ಬಂದು ನಿಂತಿದೆ. ಎರಡು ಮದಗಜಗಳ ಸೆಣಸಾಟ ಸಾಗಿದೆ. ಜನ ಕಾತರದ ತುದಿ ತಲುಪಿದ್ದಾರೆ. ಆ ಗಳಿಗೆಯಲ್ಲಿ ಆತನ ಪಾದದಡಿ ಆ ಚೆಂಡು ಹೊರಳಾಡುತ್ತಿದೆ. ಚೆಂಡಿನ ಪಟ್ಟು ಅವನದ್ದಾಯಿತು. ಚೆಂಡಿನೊಂದಿಗೆ ಅವನ ಸರಸ... ಕೇವಲ ಸೆಕೆಂಡುಗಳ ಕ್ಷಣಗಣನೆ. ಎಲ್ಲರೂ ದಂಗಾಗಿದ್ದಾರೆ. ಎದುರು ಪಾಳಯದ ಖಿಲಾಡಿಗಳಷ್ಟೇ ಅಲ್ಲ, ಅವನ ಜೊತೆಗಾರರೂ! ಬೇಕಾದದ್ದು ಅವನು ಹೊಡೆಯುವ ಗೋಲು. ಅವನು ಹೊಡೆದೇ ಬಿಟ್ಟ!ಆ ಕ್ಷಣವೇ ಅದು ಅನನ್ಯ.

ಅದು ಅವನ ಬದುಕಿನ ಅಗ್ನಿದಿವ್ಯ.

ಗೋಲುಗಾರನ ವೈಭವ ನೋಡಿ. ಅವನ ಕಣ್ಣಿನ ಭಾಷೆ, ಮುಖದಲ್ಲಿ ಮಿಂಚಿನಂಥ ಝಲಕ್, ಗಟ್ಟಿ ರೆಟ್ಟೆಯ ಮಾಂಸಖಂಡಗಳ ಕುಣಿತ, ಅದುಮಿ ನಿಂತ ಮುಷ್ಠಿ, ನೆಲಕ್ಕೂರಿದ ಮೊಣಕಾಲು, ಅರಿಯದಂತೆ ಹೊರಳಿದ ಆನಂದ ಭಾಷ್ಪ!

ಈ ಸ್ಥಿತಿಗೆ ಏನೆಂದು ಹೆಸರಿಡುತ್ತೀರಿ? ಭಾವ ಉತ್ತುಂಗವೆಂದೇ? ಉನ್ಮಾದವೆಂದೇ?

ಅಥವಾ

ಇದೇ ಅಲ್ಲವೇ ಸುಮಧುರ ಯಾತನೆ?

ಏನೇ ಹೇಳಿ ಆ ಸಂಭ್ರಮದ ವ್ಯಕ್ತಿ ನೀವಾದಾಗ ಮಾತ್ರ ಅದಕ್ಕೆ ಹೆಸರು ಮಡಗಿಕೊಳ್ಳಿ.

ಯಾರಿಗುಂಟು, ಯಾರಿಗಿಲ್ಲ ಹೇಳಿ ಈ ದಿವ್ಯದ ಸ್ಥಿತಿ?

ಆ ತಾಯಿ ಮೊದಲ ಬಾರಿಗೆ ತನ್ನ ಪಾಪುವನ್ನು ಕಂಡಾಗ ಇರುವುದು ಇದೇ ಸುಮಧುರ ಯಾತನೆಯೇ.

ಆ ಪ್ರೀತಿಯ ಎರವಿಗೆ ಬಿದ್ದ ಹುಡುಗನಿಗೆ ಹುಡುಗಿಯ ನೋಟ ದಕ್ಕಿದಾಗಲೂ ಇದೇ ಆಗುತ್ತದೆ.

ತೇನ್‌ಸಿಂಗ್ ಎವರೆಸ್ಟು ಏರಿ ನಿಂತ ಆ ಗಳಿಗೆಯಲ್ಲಿ "ತುಝಿ ಛೇ ಚೋಮೋಲುಂಗ್ಮಾ !’ ಎಂದು ಬಿಟ್ಟ.

ಅದು ಇದುವೇ.

ನೂರೇ ನೂರು ಮೀಟರ್ ಓಡಿ ಒಲಿಪಿಂಕ್ಸ್ ಚಿನ್ನಗೆದ್ದ ಓಟಗಾರ ಆ ಉಸಿರಿನ ಪ್ರವಾಹದಲ್ಲಿ ಕೈ ಮುಷ್ಠಿಗಳನ್ನೊತ್ತಿ, ಕಣ್ಣಿನಲ್ಲಿ ಚೆಲ್ಲುವ ಧೀರತನ ಇದೇ ಅನುಭೂತಿ.

ಕೋಲನ್ನೂರಿ ಹಾರಿದ ಸರ್ಗೇಯಿ ಬುಬ್ಕಾ ಪೋಲೋವಾಲ್ಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದಾಗ, ಆಕಾಶಕ್ಕೆ ಬೆರಳು ತೋರಿಸಿದ. ಪತ್ರಕರ್ತನೊಬ್ಬ ಆ ಅನುಭೂತಿಯನ್ನು "ಬುಬ್ಕಾನಿಗೆ ಆಕಾಶವೇ ಮಿತಿ’ ಎಂದು ಸೆಡವಿನಿಂದ ಬರೆದುಬಿಟ್ಟ.

ಒಬ್ಬ ಕಥೆಗಾರ ಕತೆ ಬರೆದು ಪೆನ್ನು ಕೆಳಗಿಟ್ಟಾಗ ಇದೇ ಯಾತನೆ ಅನುಭವಿಸುತ್ತಾನೆ.

ವಿಶ್ವ ಸುಂದರಿ ಕಿರೀಟ ಘೋಷಣೆಯಾದಾಗ ಆ ಚೆಲುವೆ ಎರಡೂ ಅಂಗೈಗಳನ್ನು ಬಾಯಿಗಿಟ್ಟು ತನಗೆ ತಾನೇ ನಂಬದಂತೆ ನಿಂತು ಕಲ್ಲಾಗುವುದು ಈ ಯಾತನೆಯಿಂದಲೇ.

ಯುದ್ಧಗೆದ್ದ ಸೈನಿಕ, ಓಟು ಗೆದ್ದ ಜನ ಸೇವಕ, ಮದುವೆಯ ಮೊದಲ ರಾತ್ರಿಯ ವಧು-ವರ ಎಲ್ಲರ ಕತೆಯೂ ಹೀಗೆಯೇ!

ಅಷ್ಟೇ ಏಕೆ ಸಾಕ್ಷಾತ್ಕಾರಕ್ಕೀಡಾದ ತಪಸ್ವಿಯಲ್ಲೂ ಈ ದಿವ್ಯಾನುಭೂತಿ.

ಇದು ಶಬ್ದಗಳೇ ಇಲ್ಲದ ಒಂದು ಮೌನ ಪ್ರಪಂಚ.

ಹತ್ತನೇ ಮಹಡಿ ಮೇಲಿರುವ ಗೆಳೆಯನನ್ನು ಹುಡುಕುತ್ತಾ ಓಡೋಡಿಯೇ ಮೆಟ್ಟಲೇರಿ ಬಂದ ಪುಟ್ಟ ಗೆಳತಿ, ಅವನನ್ನು ಕಂಡೊಡನೆ ಬೊಗಸೆ ಕಂಗಳಲ್ಲಿ ನಗುಚೆಲ್ಲಿ ನಿಂತರೆ ಅದೂ ಈ ತಪಸ್ವಿಯಂತೆ ದಿವ್ಯಾನುಭೂತಿಯೇ!

ಹಲವು ವರ್ಷಗಳ ಹಿಂದೆ ಸ್ಕ್ವಾಡ್ರನ್‌ಲೀಡರ್ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಲಂಘಿಸಿ, ನಳನಳಿಸುವ ಭೂಗೋಲವನ್ನು ಕಾಣುತ್ತಿದ್ದಾಗ, ಪ್ರಧಾನಿ ಇಂದಿರಾಗಾಂಧಿ ಕೇಳಿದ್ದು, "ಊಪರ್ ಸೇ ಭಾರತ್ ಕೈಸಾ ಲಗ್‌ತಾ ಹೆ ?’

ಶರ್ಮಾ ಉತ್ತರ "ಸಾರೇ ಜಹಾಂ ಸೇ ಅಚ್ಛಾ!’

ಇದೇ ಧನ್ಯತೆಯ ಸಾಕಾರ.

ಕೊನೆಗೊಮ್ಮೆ ನೀವೇ ಹೇಳಬೇಕು;ಮೊಗ್ಗು ಅರಳಿ ಹೂವಾದಾಗಲೂ ಹೂವಿಗೋ ಗಿಡಕ್ಕೊ ಇಂಥದ್ದೇ ಸುಮಧುರ ಯಾತನೆ ಇರುತ್ತದೆಯಾ?

.... ನಾವು ಎಂದೂ ಕಾಣಲಾಗದ್ದು !!

20070808

ಈ ನಾಲ್ಕು ಸಾಲು


೧.


ಭತ್ತ ಬಿತ್ತಿದರು

ತೆನೆಯಾಯಿತು

ತೆನೆಯಲ್ಲಿ ಮತ್ತೆ ಭತ್ತ.

ಭತ್ತ ಹೊಟ್ಟು ಕಳಚಿತು.

ಅಕ್ಕಿಯನ್ನು ಯಾರೂ ಬಿತ್ತಲಿಲ್ಲ

ಅಲ್ಲಿತ್ತು ಮೋಕ್ಷ,

ಅದುವೇ.೨.ಎರಡು ಮೌನದ

ನಡುವೆ

ಒಂದು ಮಾತು

ಎರಡು ಮಾತಿನ

ನಡುವೆ

ಒಂದು ಮೌನ

ಅದನ್ನು ಹಿಡಿದಿಡು

ಸಂತನಾಗುವೆ.೩.ಹರಿವ ನೀರಿನಲ್ಲಿ

ಅವನಿಟ್ಟು ಕಳುಹಿಸಿದ ಪ್ರೀತಿ

ಸಾಗರವ ಸೇರದೆ

ಮುಗಿಲಾಯಿತು.

ಅವಳ ಮಳೆಯಲ್ಲಿಆ ಪ್ರೀತಿ

"ಹನಿ"ಯಿತು.೪.ನಗು ಎಂದಿತು

ಅಳುವೇ

ನೀನೇ ಧನ್ಯ,

ಪ್ರೀತಿಗೆ ನೀನು

ಯಾವತ್ತೂ ಹತ್ತಿರ

ನನಗಿಂತಲೂ..

ಸಂಭವಾಮಿ...ಲೋಕವನ್ನೇ ಬದಲಿಸುತ್ತೇನೆಂದು ಸಾಕ್ಷಾತ್ ದೇವರೂ ಕೂಡಾ ಹೇಳಿಲ್ಲ.

ಕೃಷ್ಣ ಹೇಳಿದ್ದು ಸಂಭವಾಮಿ ಯುಗೇ ಯುಗೇ...

ಯಾವಾಗಾ ಎಂದರೆ ಧರ್ಮ ಹಾಳಾದಾಗ.

ಧರ್ಮ ಹಾಳಾದಾಗ ಎಂದರೆ ಧರ್ಮ ಮಾತ್ರಾ ಹಾಳಾದಾಗಲೋ ಅಥವಾ ಧರ್ಮ ಹಾಳಾದಾಗ ಮಾತ್ರವೋ ಎಂಬುದನ್ನು ಈ ತನಕ ಕೃಷ್ಣ ಭಗವಾನ್ ಸ್ಪಷ್ಟಪಡಿಸಿಲ್ಲ.

ಈಗ ಆಗುತ್ತಿರುವುದನ್ನು ನೋಡಿದರೆ ಇನ್ನೂ ಯಾವುದೂ ಹಾಳಾಗಿಲ್ಲ ಎಂದನಿಸುತ್ತಿದೆ,

ಭಗವಾನನ ಮಟ್ಟಿಗೆ ಹಾಳಾಗಿರುವುದು ಇನ್ನೂ ಕಮ್ಮಿಯೇ. ಏಕೆಂದರೆ ಆತ ಇನ್ನು ಬಾರ್ನ್ ಆಗಿಯೇ ಇಲ್ಲವಲ್ಲ.

ಲೋಕವನ್ನು ಬದಲಾಯಿಸೋದು ತನಗೂ ಸಾಧ್ಯವಿಲ್ಲ ಎಂದು ದೇವರಿಗೂ ಆಲ್‌ರೆಡಿ ಗೊತ್ತಿತ್ತು.ಹತ್ತು ಬಾರಿ ಅವತಾರ ತಳೆದು ಯಾವ ಯಾವ ರೂಪದಲ್ಲಿ ಬಂದು ಅವರಿವರನ್ನು ಕೊಂದು ಅಲ್ಲಿಂದಲ್ಲಿಗೆ ಪಾಚ್ ವರ್ಕ್ ಮಾಡಿದನೇ ಹೊರತು, ಸಂಪೂರ್ಣ ಬದಲಾವಣೆ ಅವನೂ ಮಾಡಲಿಲ್ಲ.

ಅವನೇ ಮಾಡಲಿಲ್ಲ ಎಂದರೆ ಇನ್ಯಾರೂ ಮಾಡಲು ಸಾಧ್ಯವಾ?

ಅವನೇಕೆ ಮಾಡಲಿಲ್ಲ ಎಂದರೆ ಮಾಡಲು ಮನಸಿಲ್ಲ ಎಂದಲ್ಲ.ಮಾಡಲು ತಾಖತ್ತು ಇರಲಿಲ್ಲ ಎಂದೂ ಅಲ್ಲ, ಆಗೋದಿಲ್ಲ; ಚೇಂಜ್ ಮಾಡಲು ಆಗೋದಿಲ್ಲ ಎಂದು ಅವನಿಗೇ ಅಂದೇ ಗೊತ್ತಾಗಿತ್ತು.

ಏಕೆಂದರೆ ಈ ವ್ಯವಸ್ಥೆ ಎಂದೂ ಬದಲಾಗುವುದಿಲ್ಲ.

ಹೀಗೇ ಇರುವುದು ಕೂಡಾ ಒಂದು ನಿಯಮ.ಹಾಗೆಂದು ದೇವರಿಗೇ ಗೊತ್ತಿತ್ತು. ಆದರೂ ನಮ್ಮ ಜನ ಇದನ್ನು ಬದಲಿಸುತ್ತೇವೆಂದು ಹೊರಡುತ್ತಾರಲ್ಲಾ..ದೇವರಿಗಿಂತಲೂ ಇವರು ದೊಡ್ಡವರಾ?

ಇಂದು ಆಗಸ್ಟ್ ಎಂಟು.ಇದು ಎಲ್ಲೆಡೆ ಅಂಗೀಕೃತ.ಇದನ್ನು ಸುಲಭವಾಗಿ ನಾವು ತಿಳಿಯುತ್ತೇವೆ.ಇದರ ಬದಲು ಕಲಿಯುಗೇ ಪ್ರಥಮ ಪಾದೇ ಆಷಾಢ ಸಂವತ್ಸರೇ ಕೃಷ್ಣ ಪಕ್ಷೇ ದಶಮಿ ಎಂದು ತಿದ್ದಲು ಹೊರಟರೆ ಯಾರಿಗೆ ಬೇಕು?

ಪೂಜೆ ಮಾಡಿಸುವಾಗ ಹೇಳಿದರೆ ಇಂಟ್ರೆಸ್ಟಿಂಗ್ ಆಗಿರುತ್ತದೆ.ಅದು ಬಿಟ್ಟು ಇದನ್ನೇ ಕ್ಯಾಲೆಂಡರ್ ಮಾಡಿದರೆ?

ಕೆಲವು ವರ್ಷಗಳ ಹಿಂದೆ ೨೦೦೦ ಆರಂಭವಾದಾಗ ಅದನ್ನು ಒಪ್ಪಬಾರದು, ಕಲಿಯುಗ ೫೦೫೧ ಅಂತ ಮಾಡಬೇಕು ಎಂದು ಯಾರೋ ಚಳವಳಿ ಮಾಡಲು ಹೊರಟು ಮೈ ತುರಿಸಿಕೊಂಡಿದ್ದ ನೆನೆಪು.

ಸಂಡೇ ಹಾಲಿಡೇ ಎಂದಾಗಲೂ ಕೆಲವರಿಗೆ ಸದಾ ದುಃಖವಾಗುತ್ತದೆ. ಈ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಒಣ ಗಂಟಲಿನಿಂದ ಸ್ವರಹೊರಡಿಸುತ್ತಾರೆ.ಅವರಿಗೆ ಗೊತ್ತೇ ಇದೆ; ಆಗಲ್ಲ. ಈ ಸಂಡೇ ಹಾಲಿಡೇ ಮುಸ್ಲಿಂ ದೇಶಗಳನ್ನು ಬಿಟ್ಟರೆ ಎಲ್ಲೆಡೆ ಎಂದಿನಿಂದಲೇ ಇದೆ ಎಂದು.

ಮತ್ತೆ ಈ ಮುಸ್ಲಿಂ ಜನರಿದ್ದಾರಲ್ಲ, ಇವರಲ್ಲಿ ಮೆಜಾರಿಟಿ ಮಂದಿ ಇನ್ನೂ ಭಯಂಕರ ಭ್ರಮೆಯಲ್ಲೇ ಬದುಕುವವರು. ಇವರು ಯಾವತ್ತೂ ಬದಲಾ ಮಾಡುವ ಭ್ರಾಂತಿಯಲ್ಲೇ ಇರುವವರು.ಎಂಥಾ ಬದಲಾವಣೆ ಎಂದರೆ ಎಲ್ಲಾ ಜಗತ್ತೂ ಇಸ್ಲಾಮಿಕ್ ಆಗಿಬಿಡುತ್ತದೆ ಮತ್ತು ಹಾಗೇ ಮಾಡಬೇಕು ಎಂದು ಈ ಇಸ್ಲಾಮಿಗಳು ಪಡುವ ಪಾಡು ಯಾರೀಗೂ ಬೇಡ.

ಇವರ ಬಾಂಬೇನು, ತರಬೇತಿಯೇನು, ಭಾಷಣವೇನು,ವಹಿವಾಟೇನು!ಎಂಥೆಂಥಾ ಡಾಕುಟರುಗಳೂ ಟೆರರುಗಳಾಗುತ್ತಾರೆ ಎಂದರೆ ಇವರ ಹುಚ್ಚಿಗೆ ಸ್ವಲ್ಪವಾದರೂ ಮೆಚ್ಚಲೇ ಬೇಕು. ತಾವೇ ಬಾಂಬಾಗಿ ಸಿಡಿದು ಯಾರದ್ದೋ ಜೀವಗಳನ್ನು ಸಪಾಯಿ ಮಾಡಿ ಇವರು ಪಡೆದದ್ದೆನೋ ಮಾಡಿದ್ದೇನೋ!

ಸಿಡಿದದ್ದಂತೂ ನಿಜ.

ಇವರು ಎಲ್ಲರನ್ನೂ ಇಸ್ಲಾಮು ಮಾಡುವಾಗ ಉಳಿದ ಮೂರುಸಾವಿರದ ಒಂಭೈನ್ನೂರಾತೊಂಭತ್ತೊಂಭತ್ತು ಮಾನವ ವರ್ಗ ಏನು ಕಡ್ಲೆಕಾಯಿ ತಿನ್ನುತ್ತಾ ಕೂತಿರುತ್ತದಾ?ಇನ್ನು ಪಾಪದ ಮುಸ್ಲಿಮರನ್ನು ಯಾರೂ ನಂಬದ ಪರಿಸ್ಥಿತಿ ಬಂದಿರೋದು ಹೀಗೇ.

ಅರಿಭಯಂಕರ ಬದಲಾವಣೆ ಭ್ರಾಂತಿ ವರ್ಗ ದೇಶದಿಂದ ಎಲ್ಲಾ ಮುಸ್ಲಿಮರನ್ನು ಓಡಿಸಬೇಕು ಎಂದು ಅನ್ನ ಛತ್ರದಲ್ಲಿ ಕೂತು ಹೇಳೋದು,ಅದನ್ನು ನಮ್ಮ ಜನ ನಂಬೋದು,ಎಂದಿನಿಂದ ನಡೆದು ಬಂದಿದೆ.ಇದೆಲ್ಲಾ ಆಗೋದಿಲ್ಲ ಎಂದು ಹೇಳುವವರಿಗೂ ಕೇಳುವವರಿಗೂ ಗೊತ್ತಿದೆ.ಆದರೂ ಹೇಳೋದು, ಕೇಳೋದು ಮಾಡುತ್ತಾ ಇರುತ್ತಾರೆ.

ನಮ್ಮ ಗೆಳೆಯನೊಬ್ಬ ಇದ್ದಕ್ಕಿದ್ದಂತೆ ಭಯಂಕರ ಬ್ರಾಹ್ಮಣನಾಗಿದ್ದಾನೆ.ಅದು ಹೇಗೆ ಮಜಾ ಆಗಿ ಇದ್ದವನು ಈಗ ಅಪ್ಪಟ ಬ್ರಾಹ್ಮಣ ವೇಷ, ಮಾತು, ಫುಡ್ಡು,..

ಇಡೀ ಲೋಕ ಹಾಳಾಗಿದೆ, ಬ್ರಾಹ್ಮಣರು ಸರಿಯಾದರೆ ಎಲ್ಲರೂ ಸರಿಯಾಗುತ್ತಾರೆ ಎಂಬುದು ಅವನ ಘೋಷ ವಾಕ್ಯ.

ಇದು ಅವನದ್ದು ಮಾತ್ರಾ ಅಲ್ಲ.ಎಲ್ಲಾ ಧರ್ಮದಲ್ಲೂ ಇಂಥಾ ಘೋರ ಭ್ರಾಂತಿಕಾರರೂ, ಕೋರರೂ ಇದ್ದಾರೆ.ಇದನ್ನೇ ಕಸುಬು ಮಾಡಿಕೊಂಡವರೂ ಆ ಮೂಲಕ ಸಖತ್ ಸಂಪಾದನೆ ಮಾಡುವವರೂ ಅದುವೇ ಉದ್ಯೋಗ ಆಗಿರುವವರೂ ಎಲ್ಲಾ ಮೂಲೆಯಲ್ಲೂ ಕಾಣುತ್ತಾರೆ.

ಎಲ್ಲಾ ಇಸಂಗಳ ಮೂಲ ಮಂತ್ರವೇ ಅದು.

ನೀವೇ ಹೇಳಿ ಏನಾದರೂ ಎಂದಾದರೂ ಲೋಕ ಬದಲಾಗಿದೆಯಾ?

ಅಷ್ಟಿಷ್ಟು ಆದರೂ ಅದು ತಾತ್ಕಾಲಿಕ.