20070731

ಮತ್ತೆ ನಾಲ್ಕು ಸಾಲೂ..೧.ಪ್ರೀತಿಸಿದೋರನ್ನು

ಮರೆಯುವುದು ಸುಲಭ

ಎಂದು

ಯಾರೂ ಹೇಳಿಲ್ಲ.

ಮರೆತರೆ

ನೀವು ಎಂದೂ ಅವರನ್ನು

ಪ್ರೀತಿಸಿಯೇ ಇರಲಿಲ್ಲ.೨.ಹೃದಯದೊಳಗೊಂದು

ಕಾವ್ಯ ಇದೆ

ಎಂದರು.

ಎದೆಯ ಪುಟದಲ್ಲಿ

ಹುಡುಕಿದರೂ ಅಕ್ಷರ ಸಿಗಲಿಲ್ಲ.

ಮನಸು ಕವಿಯಾಗದೇ

ಎದೆ ಬರೆಸಿಕೊಳ್ಳಲಿಲ್ಲ.೩.ಪುಟ್ಟ ಮಗುವಿನ

ಮನೆಯಾಟದಲ್ಲಿ

ದೊಡ್ಡವರ ಠಾಕುಠೀಕುಗಳೆಲ್ಲಾ

ರಾಡಿಯಾಗಿ

ಉಳಿದದ್ದು

ಮಗುವಿನ ಮನೆ ಮತ್ತು ನಗು

ಎರಡೂ ಬೆಚ್ಚನೆ.೪.ಆಕಾಶದಲ್ಲಿ

ಒಂದೇ ಒಂದು ನಕ್ಷತ್ರದ

ಗೆಳೆತನ ಕೇಳಿದೆ.

ಕೋಟಿ ತಾರೆಗಳು ನಕ್ಕವು

ಕತ್ತಲನ್ನು ಪ್ರೀತಿಸುವೆಯಾ

ಎಂದು ಕೇಳಿ

ಮೋಡದ ಸೆರೆಗೆ ಜಾರಿಕೊಂಡವು.

20070730

ಕಿಸ್ಸಾ ಕುರ್ಸೀಕಾ!


ಎಷ್ಟಾದರೂ ಒಂದು ಕುರ್ಚಿ.

ಮರದ ಕುರ್ಚಿ!

ಎಂಥೆಂಥಾ ದಿವಾನ್ಸ್, ಸೋಫಾ ಸೆಟ್ಟು, ಆರಾಮ ಪೀಠಗಳು, ತೂಗುಯ್ಯಾಲೆಗಳು, ಪ್ಲಾಸ್ಟಿಕ್ ದಬ್ಬಗಳು, ಕಬ್ಬಿಣದ ತಗಡಿನ ಕಿರಂ ಕಿರಕ್ಕುಗಳು ಬಂದು ನಿಂತು ಹೋಗಿರಬಹುದು, ಈ ಮರದ ಕುರ್ಚಿಯ ಗೆಟ್ಟಪ್ಪೇ ಬೇರೆ.

ನೆಲದಿಂದ ಹದಿನೆಂಟು ಇಂಚೆತ್ತರ ಬೆಳೆದ ನಾಲ್ಕು ಕಾಲುಗಳು, ಕಾಲುಗಳಿಗೆ ಹಲಗೆಯ ಬಂಧ, ಮತ್ತೆ ಬೆನ್ನ ಹಿಂದೆ ಹದಿನೆಂಟು ಇಂಚು ಎತ್ತರದ ಹಾಸು, ಎಡಬಲಗಳಿಗೆ ನಿಡಿದುಕೊಂಡ ಕೈಗಳು....

ಇಷ್ಟೇ ಇದರ ವ್ಯಾಖ್ಯಾನ.

ಒಬ್ಬ ಓದುಗ, ಒಬ್ಬ ಬರಹಗಾರ, ಒಬ್ಬ ವೈದ್ಯ, ಒಬ್ಬ ವಕೀಲ, ದಫ್ತರ ಬಿಡಿಸುವ ಶ್ಯಾನುಭಾಗ, ಲಂಚ ಕೇಳುವ ಭ್ರಷ್ಠ ನೌಕರ... ಬದುಕು ಪೂರ್ತಿ ಈ ಮರದ ಕುರ್ಚಿಯಲ್ಲಿ ಸಂಬಂಧ ಸ್ಥಾಪಿಸುತ್ತಾರೆ.

ಆದರೆ ಅದು ಮೆಲ್ಲುಸಿರಗಾನ, ಮೌನದ ಬಂಧ.

ಒಬ್ಬ ಸ್ಕೂಲ್ ಟೀಚರ್ ವರ್ಷಗಟ್ಟಲೆ ಇದೇ ಮರದ ಖುರ್ಸಿಯಲ್ಲಿ ಸಮಾಜ ಪಾಠ ಓದಿಸಬಹುದು, ಒಬ್ಬ ಕಾದಂಬರಿಕಾರ ಅವನ ಜಗತ್ತಿನ ಸರ್ವಶ್ರೇಷ್ಠ ಕೃತಿಯನ್ನು ಇದೇ ಕುರ್ಚಿಯಲ್ಲಿ ಕುಳಿತು ರಚಿಸಬಹುದು.

ಬದುಕಿನ ಸಿಟ್ಟು, ಸೆಡವು, ಕಳೆದು ಹೋದ ನೆಪು, ಭವಿಷ್ಯದ ಈ ಕುರ್ಚಿಯೊಳಗೆ ಕೊತಕೊತನೆ ಕುದಿದು ಆರಬಹುದು.

ನಿನ್ನೆ ನಕ್ಕ ಪುಟ್ಟ, ಗೆಳತಿಯ ಮೋಹಕ ನಗು, ನಾಳೆ ಬರೆಯಬೇಕಾದ ಪತ್ರ, ಈಗಷ್ಟೇ ಕೇಳಿದ ಹಾಡು ಹೃದಯಾಂತರಾಳದಲ್ಲಿ ಬರ್ಫವಾಗುವ ಗಳಿಗೆ ಈ ಮರದ ಕುರ್ಚಿಯಲ್ಲೇ...

ಅದೊಂದು ಕನಸಿನ ಕಾರ್ಖಾನೆ.

ಅದೊಂದು ನಿತ್ಯ ನೈಮಿತ್ತಿಕಗಳ ಸಾಕ್ಷಿ ಪ್ರಪಂಚ!

ಮರದ ಕುರ್ಚಿಯ ನಿರ್ಮಾತೃ ಜರ್ಮನಿಯ ಆ ಬಡಗಿ. ಅವನ ಹೆಸರು ಯಾರಿಗೂ ಗೊತ್ತಿಲ್ಲ. ಆದರೆ ಆತ ಸರ್ವಶ್ರೇಷ್ಠ ಭಾವುಕನಾಗಿದ್ದನೆಂಬ ಬಗ್ಗೆ ಅನುಮಾನಗಳೇ ಇಲ್ಲ.

ಈ ಮರದ ಕುರ್ಚಿಯನ್ನು "ಭಾವಗೀತೆ’ ಎಂದು ಕರೆಯಬಹುದು .

ಅದರ ಆಯಾಮ, ಆಸನದ ಸುಖ ಕಂಡವರಿಗೆ ಮಾತ್ರಾ ಆ ಭಾವತನ್ಮಯತೆ ಅರ್ಥವಾದೀತು.

ಮಲೆನಾಡಿನ ಹಳ್ಳಿಯ ಮನೆಗಳಲ್ಲಿ ಅತ್ಯುತ್ಕೃಷ್ಟ ಮರದ ಕುರ್ಚಿಗಳು ಈಗಲೂ ತಮ್ಮ ಆಧಿಪತ್ಯ ಉಳಿಸಿಕೊಂಡಿವೆ. ಬೀಟೆ ಮರದ ಫ್ರೇಮಿಗೆ, ಹಲಸಿನ ಮರದ ಹಲಗೆಯನ್ನು ಹದವಾಗಿ ಕಚ್ಚಿಸಿ, ಬಿದಿರ ಆಣಿಗಳಿಂದ ಒಗ್ಗೂಡಿಸಲಾದ ಈ ಮರದ ಕುರ್ಚಿಗಳಿಗೆ ಪ್ರತಿ ವರ್ಷವೂ ಎಣ್ಣೆ ಸ್ನಾನ ಮಾಡಿಸಲಾಗುತ್ತದೆ. ಶತಮಾನದುದ್ದಕ್ಕೂ ಗಟ್ಟಿಗ ಯುವಕನಂತೆ ಶೋಭಿಸುವ ಈ ಕುರ್ಚಿಗಳು ನಾಲ್ಕು ಸುತ್ತಿನ ಮನೆಯ ಮುಖ ಮಂಟಪದಲ್ಲಿ ತಾನೇ ಮನೆಯೊಡೆಯನಂತೆ ಕುಳ್ಳಿರುವ ಧಿಮಾಕೇ ಧಿಮಾಕು.

ಮನೆಯೊಡೆಯನ ಚಿಂತೆಗೆ ಈ ಕುರ್ಚಿಯ ಕೈಗಳಿಗೊತ್ತಿದ್ದು ಅವರ ಮುಂಗೈ ಪತ್ತು, ಮನೆಯಾಕೆಯ ಬಳೆಗಳ ಸ್ಪರ್ಶ, ಮಗನ ಬೆರಳುಗಳ ಮೀಟು, ಆಗಷ್ಟೇ ಬೆಳೆದುನಿಂತ ಮಗಳ ಉಗುರಿನ ಗೀರು.... ಕುರ್ಚಿಯ ನಿತ್ಯ ನಿರಂತರ ಅನುಭವ.

ಇದೇ ಕುರ್ಚಿಯನ್ನೇ ಒಲಿಸಿಕೊಳ್ಳಲು ವಿನಮ್ರತೆಗೆ ಸರಿಸಾಟಿಯಾದದ್ದು ಯಾವುದೂ ಇಲ್ಲ.

ಅರುವತ್ತರ ದಶಕದಲ್ಲಿ ಬಂದ ಸಿನಿಮಾವೊಂದರಲ್ಲಿ ಕುರ್ಚಿಯಲ್ಲಿ ಕೂರಲು ಸೆಣಸಾಡುವ ಯುವಕ ಕೊನೆಗೆ ಅದಕ್ಕೆ ಶರಣು ಹೋಗಿ, ಅದರ ಅನುಗ್ರಹಕ್ಕೆ ಪಾತ್ರನಾಗುವುದೇ ಕಥಾ ವಸ್ತುವಾಗಿದ್ದ .

ತುರ್ತು ಪರಿಸ್ಥಿತಿ ಕಾಲದಲ್ಲಿ ಕುರ್ಚಿಕತೆ ಕುರಿತು ಕಿಸ್ಸಾ ಕುರ್ಸೀಕಾ ಸಿನಿಮಾ ದೊಡ್ಡ ಸುದ್ದಿ ಮಾಡಿತ್ತು.

ಭಾವ ಜೀವನದ ಯಾತ್ರೆಯಲ್ಲಿ ಕುರ್ಚಿ ಕೂಡಾ ಇರುತ್ತದೆ ನೋಡಿ,

ಹೀಗೆ

.......ಒಂದು ಸಣ್ಣ ಕತೆಯಂತೆ!!

20070729

ನಾಲ್ಕು ಸಾಲಿನಲ್ಲೇ..


೧.


ಆಕಾಶದಿಂದ ಬಿದ್ದ ನೀರು

ಸಾಗರವ ಸೇರುತ್ತದೆ.

ಸಾಗರದಿಂದ ನೀರು

ಆಕಾಶ ಏರುತ್ತದೆ.

ಸಾಗರಕ್ಕೂ ನೀರು ಬೇಡ,

ಆಕಾಶಕ್ಕೂ..

ಆದರೂ..


೨.


ಪಾಪಿಗಳೆಲ್ಲಾ ನರಕದಲ್ಲಿ

ಪುಣ್ಯಾತ್ಮರೆಲ್ಲಾ ಸ್ವರ್ಗದಲ್ಲಿ

ಅವರೆಲ್ಲಾ ಅಲ್ಲಲ್ಲಿ ಸುಖವಾಗಿಯೇ ಇರುತ್ತಾರೆ

ಪಾಪಿಯಾಗಿದ್ದರೇ ಸುಖ

ಅವನಿಗೆ

ಸ್ವರ್ಗದ ಭಯವೇ ಇಲ್ಲ.


೩.


ಗಾಳಿಯ ಗೆಳೆತನಕ್ಕೆ

ತರಗೆಲೆ ಸಿಕ್ಕಿತು

ಆಮೇಲೆ ಅದರ ಜೊತೆ ಓಡಿಹೋಯಿತು.

ಅದನ್ನು ನೋಡಿದ ಹಸುರೆಲೆ

ಮರದ ಗೆಳೆತನಕ್ಕೆ ತುಂಬಾ ಅತ್ತಿತು.


೪.


ಅವನ ಎದೆಯ ಮೇಲೆ

ಅವಳು

ಮುಖವಿಟ್ಟು ಉಸಿರ ಬೆರೆಸುವಾಗ

ಅವನಿಗೆ ಅವಳೆದೆ ಮೇಲೆ

ಪ್ರೀತಿ ಹುಡುಕಲು ಆಗುವುದಿಲ್ಲ.

ಪ್ರಕೃತಿ ಕೂಡಾ

ಪ್ರೀತಿಗೂ

ಕಟ್ಟು ಹಾಕಿದೆ.

20070724

ಹೊಸತು ಸಿಕ್ಕರೆ ಹೇಳೀ..ಎಲ್ಲವೂ ಕ್ಷಣಿಕ.

ಹಾಗಾಗಿ ಯಾವುದೂ ಹೊಸತಲ್ಲ.

ಹಾಗೆಂದರೆ ಯಾರೂ ನಂಬುವುದೇ ಇಲ್ಲ.

ನಾವು ಪ್ರತಿ ಕ್ಷಣವೂ ಹೊಸತೆಂದೇ ನಂಬುತ್ತೇವೆ.ಆದ್ದರಿಂದ ಗೆಲುವಾಗಿ ಅಥವಾ ತೀರಾ ಆಶಾವಾದಿಗಳ ಭಾಷೆಯಲ್ಲಿ ನವನವೀನರಾಗಿ ಇರುತ್ತೇವೆ.ಈ ಮುಂಜಾನೆ ಹೊಸತೆಂದು ಹೇಳುತ್ತಾ ಏಳುತ್ತಾ ಹೊಸದಿನ ಹೊಸ ಕ್ಷಣಕ್ಕೆ ಸಜ್ಜಾಗುತ್ತೇವೆ.

ಇರಬಹುದು.

ಆದರೆ
ಹೊಸತೆಂಬುದು ಹಳೆಯದರತ್ತ ಓಟ. ಹೊಸತೆಂಬುದು ಕ್ಷಣಿಕ. ಅದು ಕ್ಷಣದ ಸತ್ಯ. ಈ ಕ್ಷಣದ ಹೊಸತು, ಮರು ಕ್ಷಣಕ್ಕೆ ಹಳತು ಎಂದೂ ನಾವು ನಂಬಲೇ ಬೇಕಲ್ಲ. ಆದರೂ ನಾವೇಕೆ ನಂಬುತ್ತಿಲ್ಲ?

ನಮ್ಮನ್ನೇ ನಾವು ಮೊದಲು ಪರಿಶೀಲಿಸೋಣ. ಈ ದೇಹ ಹೊಸತೇ? ಹೌದೆಂದರೆ ನಿನ್ನೆ ಯೂ ಇದು ಹೊಸತೇ ಆಗಿರಬೇಕಲ್ಲ.ಮತ್ತೆ ಹೌದೆಂದರೆ ಇಂದಿಗೆ ಇದೇ ನಿನ್ನೆಯ ದೇಹ ಅದು ಹೇಗೆ ಹೊಸತಾಗಬೇಕು?ಎಲ್ಲವೂ ಹೀಗೆಯೇ ಅಲ್ಲವೇ.

ನಿನ್ನೆಯ ಅದು ಇಂದಿಗೆ ಹಳತೇ.

ದೇಹದ ಮಾತೇನು ಆತ್ಮ ಕೂಡಾ ಹಳತೇ.ನಶ್ವರ ದೇಹದಲ್ಲಿ ಆತ್ಮ ಠಿಕಾಣಿ ಹೂಡುತ್ತಾ ಸಾಗುತ್ತಿದೆ ಎಂದು ಸಖತ್ ನಂಬುವ ನಾವು ಆತ್ಮವನ್ನಂತೂ ಹೊಸತೆಂದು ಎಂದೂ ಒಪ್ಪುವಂತಿಲ್ಲ.ಹೇಳಿಕೇಳಿ ದೇಹ ಮತ್ತು ಆತ್ಮಗಳೇ ಹಳೆಯದು ಎಂದ ಮೇಲೆ ಉಳಿದವರ ಪಾಡೇನೂ?

ಬಯಕೆಗಳು ಅದು ಆತ್ಮದ್ದೂ ಇರಲಿ ದೇಹದ್ದೂ ಇರಲಿ ಸದಾ ಹಳೆಯದೇ.ಹೊಸ ಬಯಕೆ ಹುಟ್ಟುವುದೇ ಇಲ್ಲ.ಒಂದೊಮ್ಮೆ ಹುಟ್ಟಿದರೂ ಅದು ಇನ್ಯಾರಿಗೋ ನಿಮ್ಮಂತೆ ಮೂಡಿರಲೇ ಬೇಕು.ಕನಸುಗಳೂ ಹೀಗೆಯೇ. ಯೋಚನೆಗಳೂ ಕೂಡಾ.ಆದರೆ ಬಯಕೆ ,ಕನಸು, ಯೋಚನೆ ಕಾಮನೆ ಎಲ್ಲಾ ನಮ್ಮೊಳಗೆ ಮಾತ್ರಾ ಹೊಸತಾಗಿರುತ್ತವೆ ಅಷ್ಟೇ.

ಲೋಕದ ವ್ಯಾಪಾರಗಳನ್ನೇ ನೋಡಿ.
ಸೂರ್ಯ ಹಳತು. ಬೆಳಕು ಹೊಸತು.ಹೊಸ ಬೆಳಕು ಹೊಸತಾಗುತ್ತಲೇ ಹಳತೂ ಆಗುತ್ತದೆ. ನದಿ ಹಳತು. ನೀರು ಹೊಸತು. ಹರಿಯುವ ನೀರು ಅಲ್ಲಿಗೆ, ಆ ಕ್ಷಣಕ್ಕೆ ಮಾತ್ರಾ ಹೊಸತು .ಹರಿಯುತ್ತಾ ಹರಿಯುತ್ತಾ ಅದೂ ಹಳತಾಗುತ್ತದೆ.ಯಾವ ಮಾತೂ ಯಾವ ನೋಟವೂ ಹೊಸತೇ ಆಗಿ ಉಳಿಯುವುದಿಲ್ಲ.
- ಹೀಗೆ ಸಾಗುತ್ತದೆ ಹೊಸತು ಎಂಬ ಅಚ್ಚರಿಯ, ಸಂಭ್ರಮದ ವ್ಯಾಖ್ಯೆ, ವ್ಯಾಖ್ಯಾನ.

ವೈಎನ್‌ಕೆ ಹೇಳುತ್ತಿದ್ದರು,ಜಗತ್ತಿನಲ್ಲಿರೋದು ೧೪೩೮ ಜೋಕ್‌ಗಳು ಮಾತ್ರ. ಉಳಿದದ್ದೆಲ್ಲಾ ರಿಪೀಟ್ ಅಂತ.ಅಂದರೆ ಹೊಸಾ ಜೋಕ್ ಎಂಬುದೇ ಇಲ್ಲ ಎಂದೂ ಆಯಿತಲ್ಲ.ನಾವು ಕೇಳುವ ಜೋಕ್ ನಮಗೆ ಹೊಸತು , ಮತ್ತು ಅದಾಗಲೇ ಎಲ್ಲೋ ರಿಪೀಟ್.

ವೇದಾಂತಿಗಳು ವೇದ ಎಲ್ಲವನ್ನೂ ಹೇಳಿದೆ. ಆದ್ದರಿಂದ ಎಲ್ಲವೂ ವೇದಗಳಿಂದ ಉದ್ಧ್ರತ. ಮನುಷ್ಯರು ಹೊಸತನ್ನು ಹೇಳುವುದೆಂಬುದಿಲ್ಲ ಎನ್ನುತ್ತಾರೆ. ಕಾವ್ಯದಲ್ಲೂ ಅಷ್ಟೇ. ಹೊಳಹುಗಳೆಲ್ಲಾ ಹೊಸತೆಂದಲ್ಲ. ಕವಿಯ ಭಾವಕ್ಕೆ, ಶಾರೀರಕ್ಕೆ ತಕ್ಕಂತೆಸೃಷ್ಟಿಯಾಗುತ್ತದೆ. ಅದು ಯಾರೋ ಎಲ್ಲೋ ಇನ್ನೊಂದು ಬಗೆಯಲ್ಲಿ ಹೇಳಿದ್ದೇ ಆಗಿದೆ.

ಹಾಗಾದರೆ ಹೊಸತೆಂಬುದು ಏನು ? ಇಂದಿನ ದಿನ. ಅದು ನಿನ್ನೆ ಅಲ್ಲವೇ ಅಲ್ಲ ತಾನೇ. ಅದೇ ಭೂಮಿ, ಅದೇ ಬೆಳಗು, ಅದೇ ಸ್ಥಿತಿ ಅಲ್ಲವೂ ನಿಜ. ಆದರೆ ಈ ಕಾಲ ಪ್ರಪಂಚದಲ್ಲಿ ಇಂದು ಇಂದು ಮಾತ್ರ ಇರುತ್ತದೆ.

ನಮ್ಮ ನಿಮ್ಮ ನೂರು ವರುಷಗಳ ಬದುಕಿನ ಹಾದಿಯಲ್ಲಿ ಇಂದು ನಿನ್ನೆ ಬರುವುದಿಲ್ಲ, ನಾಳೆಯೂ ಸಿಗುವುದಿಲ್ಲ. ಆ ಮಟ್ಟಿಗೆ ಇಂದು ಹೊಸತೇ ಅಲ್ಲವೇ?ನಮ್ಮ ದೇಹದಲ್ಲಿ ಈ ಕ್ಷಣದಲ್ಲಿ ಸಂಭವಿಸಿದ ಉಸಿರಾಟ, ಹೃದಯದ ಬಡಿತ, ರಕ್ತದೋಟ, ಮನೋ ವಿಹಾರ, ಅಷ್ಟಿಷ್ಟು ಸಂತಸ, ಮರು ಕ್ಷಣದ ಆಯಾಸ ಆಯಾ ಕ್ಷಣದ ಮಟ್ಟಿಗೆ ಹೊಸತೇ ತಾನೇ?

still ಹೊಸತು ಎಂಬುದು ಅರ್ಥೈಸಿಕೊಳ್ಳಲಾಗದ ಒಂದು ಸ್ಥಿತಿ.

ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸೆದು ತರಬಹುದು ಎಂದು ನಂಬುತ್ತೇವೆ. ಯುಗಾದಿ ದಿನ ವರ್ಷ ಪೂರ್ತಿ ಸುಖವಾಗಿರಲು ಪ್ರಾರ್ಥಿಸುತ್ತೇವೆ, ಸಂಕಲ್ಪ ತೊಡುತ್ತೇವೆ. ಮರುದಿನ ಎದ್ದರೆ ನಿನ್ನೆ ಹಳತಾಗಿರುತ್ತದೆ, ಯುಗಾದಿಯೂ.

ಜೂನ್ ತಿಂಗಳ ಮಳೆಯ ಓಟದ ಆರಂಭದಲ್ಲಿ ಹೊಸ ಕ್ಲಾಸಿಗೆ ಸೇರಲು ಹೊರಟ ಹುಡುಗ ಹೊಸ ಪುಸ್ತಕದ ಪುಟ ಬಿಡಿಸಿ ಮೂಗು ನೆಡುತ್ತಾನೆ. ಪುಸ್ತಕ ಹೊಮ್ಮಿಸಿದ ಆ ಪರಿಮಳ ಅವನಲ್ಲಿ ಹೊಸತನ ಮೂಡಿಸುತ್ತದೆ ಅದು ಮಾತ್ರಾ ಅವನ ಜೀವನದುದ್ದಕ್ಕೂ ನೆನೆದಾಗಲೆಲ್ಲಾ ಹೊಸತೇ ಆಗಿರುತ್ತದೆ.

ಹೊಸ ಬದುಕಿನಲ್ಲಿ ಬಂದ ಹೊಸಬನ ಜೊತೆ ಕಾಲ ಹೆಬ್ಬೆರಳಿನಲ್ಲಿ ನೆಲವ ಗೀರುವ ಹುಡುಗಿ ಬಿಡಿಸಿಟ್ಟ ಮೌನ ಹೊಚ್ಚ ಹೊಸತಾಗುತ್ತದೆ.ಅವಳಿಗೆ ಆ ಗೀರು ಸದಾ ಹೊಸತಾಗಿಯೇ ಉಳಿಯುತ್ತದೆ. and.... ಆ ಒಂದು ಮೌನ.

ನನಗೆ ಹೊಸತು ಯಾವುದಿರಿಬಹುದೆಂಬ ಕುತೂಹಲ ಇನ್ನೂ ತಣಿದಿಲ್ಲ.

ನಾನು ಹೊಸತಿಗಾಗಿ ಎಷ್ಟೊಂದು ಹುಡುಕಾಡಿದೆ, ತಡಕಾಡಿದೆ.ಆದರೆ ಸಿಕ್ಕಿಲ್ಲ.

ನಿಮಗೇನಾದರೂ ಹೊಸತೆಂಬುದು ಸಿಕ್ಕಿತಾ ? ಮತ್ತು ಅದು ನಿಮ್ಮಲ್ಲಿ ಹೊಸತಾಗಿ ಉಳಿಯಿತಾ?

20070720

ಇದೂ ನಾಲ್ಕೇ ಸಾಲು4


೧.ಇರೋದುಏಳೇ ಬಣ್ಣಗಳು.

ಅಲ್ಲೇ ಇಲ್ಲ

ಕಪ್ಪು ಮತ್ತು ಬಿಳಿ

ಎಲ್ಲಿದೆ ಎಂದರೆ

ನಮ್ಮೊಳಗೇ.೨.ಮಾನವ ..

ಮೂಳೆ ಮಾಂಸದ ಗಡಿಗೆ

ಎಂದರು

ಎಲ್ಲರೂ

ಆ ಗಡಿಗೆಯನ್ನೇ ಕುಡಿದರು.೩.ಅವಳೇಕೆ ಇವನನ್ನು ಪ್ರೀತಿಸಿದಳು?

ಎಂಬ ಪ್ರಶ್ನೆಗೆ

ಈ ತನಕ

ಕುತೂಹಲ ಮಾತ್ರಾ

ಉತ್ತರವಾಗಿ ಉಳಿದಿದೆ.

ಪ್ರೀತಿಗೆ ಪ್ರಶ್ನೆಗಳೇ ಇರುವುದಿಲ್ಲ.೪.ಈ ನದಿ ಎಂದಿನಿಂದ ಇದೆ?

ಎಂದು ಈ ದಂಡೆಯಲ್ಲಿ ನಿಂತು ಕೇಳಿದೆ

ಆ ದಂಡೆಯಿಂದೊಬ್ಬ

ಎರಡೂ ಕೈ ಎತ್ತಿದ

ಒಂದು ಬೆಟ್ಟಕ್ಕೆ ಇನ್ನೊಂದು ಸಮುದ್ರಕ್ಕೆ

ಚಾಚಿಕೊಂಡಿತ್ತು

ನನಗೆ

ಉತ್ತರ ಸಿಕ್ಕಿತು.

20070717

ಆಟಿ


"ಆಟಿ ಆಡ್ಯಾಡಿ ಹೋತು’ ಎಂದರು .

ಏನು ಆಟ ?ಯಾವ ಆಟ? ಯಾರು ಆಡಿದ್ದು ?ಯಾವಾಗ...? ಎಂಬ ಪ್ರಶ್ನೆಗಳಿಗೆ ಅದೆಷ್ಟೋ ಉತ್ತರಗಳು.

ಆಟಿಯ "ಆಟ’ ಆರಂಭವಾಗಿದೆ.

ಆಗೊಮ್ಮೆ ಈಗೊಮ್ಮೆ ಎಂಬಂತೆ ಕಣ್ಣು ಮಿಟುಕಿ ಮೋಡಿ ಮಾಡಿದ್ದ ಮಳೆ ಆಟಿ ಬಂತೆಂದರೆ ಭೂಮಿಯನ್ನಪ್ಪಿ ,ಎಲ್ಲವನ್ನೂ ಅರ್ಪಿಸುವ ಗೆಳತಿಯಂತೆ ಇಳೆಗೆ ಶರಣೆನ್ನುತ್ತದೆ. ಭೂಮಿಗೂ ಅದೆಂಥಾ ಪ್ರೀತಿ ! ಮಳೆಯ "ನೆನ’ಕೆಗಳನ್ನೆಲ್ಲಾ ತನ್ನ ಅಂತರಾಳದಲ್ಲಿ ಇಳಿಗೊಡುತ್ತದೆ.

ಆಟಿ ಆರಂಭವಾಯಿತೆಂದರೆ ಅದೆಷ್ಟು ಆಟಗಳು !

ಮೊದಲಾಗಿ ಆಟ ಪ್ರಕೃತಿಯದ್ದೇ. ಈ ಸರಿಹೊತ್ತಿನಲ್ಲಿ ಅದೆಷ್ಟು ಆಟಗಳು. ಪೂರ್ತಿ ಒಂದು ತಿಂಗಳ ಕಾಲ ಸೂರ್ಯ ದೇವರಿಗೆ ರಜೆ ! ಭೂಮಿಗೇ ಕೊಡೆ ಹಿಡಿದ ಮೋಡ ಆಕಾಶ ತುಂಬಾ ಲಾಸ್ಯವಾಡುತ್ತದೆ. ಮರಗಿಡಗಳ ಮೇಲೆಲ್ಲಾ ಕುಳಿರ್ಗಾಳಿಯ ಕಚಗುಳಿ. ಆ ಪರಮಾನಂದಕ್ಕೆ ಗಿರಿ ಕಾನನಗಳೆಲ್ಲಾ ತೋಯ್ದು ಎಲ್ಲೆಲ್ಲೂ ಸೃಷ್ಟಿ ಸಂಭ್ರಮ.ಬೀಜವೊಂದು ಮಣ್ಣಿನ ಸ್ಪರ್ಶಕ್ಕೆ ಮಾಗಿಕೊಂಡು, ಬಯಕೆ ಬಿರಿದು, ಅದೆಷ್ಟು ಕಾಲದಿಂದ ಒಳಗೆ ಹುದುಗಿದ್ದ ಧ್ಯಾನಸ್ಥ ಬಯಕೆ ಅರಳಿಕೊಳ್ಳುತ್ತದೆ ಈ ಸಾನ್ನಿಧ್ಯದಲ್ಲಿ ! ಅಚ್ಚರಿಯಾಗದೇನು ಈ ಆಟಕ್ಕೆ !

ಮನಸ್ಸು ಕೂಡಾ ಪ್ರಫುಲ್ಲಗೊಳ್ಳಬೇಕಾದ ಕಾಲವಿದು. ಹೊರಗೆ ಮಬ್ಬುಗತ್ತಲು, ಒಳಗೆ ಫಳ್ಳನೆ ಬೆಳಕು ! ಹೊರಗೆ ಅದೆಂಥಾ ಥಂಡಿ, ಒಳಗೆ ಜೀವಲಹರಿಯ ಬಿಸಿ ! ಹೊರಗೆ ಕಲರವ, ಒಳಗೆ ಶುದ್ಧಾಂಗ ಮೌನ ! ಹೊರಗೆ ಜೀವೋತ್ಪತ್ತಿ, ಒಳಗೆ ಭಾವಸಮಾಧಿ ! ಹೊರಗೆ ದ್ವೈತ ಒಳಗೆ ಅದ್ವೈತ !

ಆಟಿ ಮುಂದುವರಿಯುತ್ತಿದ್ದಂತೆ ಋಷಿ ಮುನಿಗಳು ತಮ್ಮ ತಿರುಗಾಟ ನಿಲ್ಲಿಸಿ ಧ್ಯಾನಕ್ಕಿಳಿದು ಬಿಡುತ್ತಾರೆ. ಈ ಚಾತುರ್ಮಾಸ್ಯ ಋಷಿಗಳಿಗೇ ಸೀಮಿತವಲ್ಲ, ಗೃಹಸ್ಥನಿಗೂ ಅಗತ್ಯ. ಆಟಿಯ ಒಂದು ಸಂಜೆ ಹೊರಗೆ ಚಟಪಟಗುಟ್ಟುವ ಮಳೆಯ ಹೊತ್ತಿಗೆ ಕಣ್ಮುಚ್ಚಿ ಕುಳಿತು ನೋಡಿ.... ಈ ಅನನ್ಯ ಅನುಭವ ನಿಮ್ಮದಾಗದಿದ್ದರೆ ಹೇಳಿ.

ಆಟಿಯ ನೂರಾರು ಆಚರಣೆಗಳೂ ಆಟವೇ. ಅನೇಕರು ಆಟಿಯಲ್ಲಿ ಚೆನ್ನೆಮಣೆ, ದಾಬೇಲು ಆಡಿದರೆ ಅದೇ ಆಟ ಎಂದುಕೊಳ್ಳುತ್ತಾರೆ. ಅದು ಕೂಡಾ ನಿಜ. ಹೊರಗೆ ಉಕ್ಕುಕ್ಕಿ ಹರಿವ ಮಳೆ, ಗಾಳಿ, ನೀರಾಟಗಳಿಗೆ ಆಗಷ್ಟೇ ಹೊಲಗದ್ದೆ ಕೆಲಸವನ್ನೆಲ್ಲಾ ಮುಗಿಸಿ ಬೆಳೆಯ ಭಾಗ್ಯವನ್ನು ಮಳೆಯ ಮೋಡಿಗೊಪ್ಪಿಸಿದ ರೈತ ಆಟಿ ತಿಂಗಳು ಪೂರ್ತಿ ಆಟದಲ್ಲಿ ನಿರತ. ಅದು ಬಗೆ ಬಗೆಯ ಆಟಗಳಿಗೆ ಪರ್ವಕಾಲ.

ಆಟಿಗೂ ಆಹಾರಕ್ಕೂ ಒಂದು ವಿಚಿತ್ರ ನಂಟು. ಸೂರ್ಯನ ತಾಪವೇನು, ಬೆಳ್ಳನೆ ಬೆಳಕು ಕೂಡಾ ಭೂಮಿಯನ್ನು ಮುಟ್ಟದ ಕಾರಣ ಉಷ್ಣವಲಯದ ನಮ್ಮ ಜನ ಇಡೀ ಜಗತ್ತು ಕಲಕಿ ಹೋಗಿದೆ ಎಂದೇ ಭಾವಿಸುತ್ತಾರೆ. ಸೂರ್ಯನಿಲ್ಲದ ದಿನಗಳಲ್ಲಿ ಎಲ್ಲವೂ ವಿಷಮಯ ಎಂದು ಅನಿಸಿಕೊಳ್ಳುತ್ತಾರೆ.ಮಣ್ಣೊಳಗೆ ಏನೋ ವಿಷವಿದೆ ಎಂದು ಮರದ ಮೇಲಿನ ಎಲೆ ಹೂವು ಕಾಯಿ ಹುಡುಕಿ ತಿನ್ನುತ್ತಾರೆ.ಆಟಿ ಎಂಥಾ ಗಡುಸು ಎಂದರೆ ಒಂದು ಹೂವು ಕೂಡಾ ಅರಳಲಾರದು. ಮಳೆಯ ತಾಡನಕ್ಕೆ ಮೊಗ್ಗು ಮುರಟೀತು, ಹೂವು ಉರುಳೀತು. ಪ್ರಕೃತಿಯ ಆಟಕ್ಕೆ ಆಟಿಯ ಅಖಾಡ.

ಹಿಂದೆಲ್ಲಾ ಇದ್ದದ್ದು ಕಷ್ಟದ ದಿನಗಳು. ಅದೆಂಥಾ ದುಡಿಮೆ ವರ್ಷಪೂರ್ತಿ ಮಾಡಿದರೂ ಆಟಿಯಲ್ಲಿ ಬಡತನ ಬುತ್ತಿಕಟ್ಟಿ ಬಂತೇ ಬಂತು ; ಒಂದು ಮನೆಯನ್ನೂ ಬಿಡದೆ. ಕೈಯಲ್ಲಿ ಕಾಸಿಲ್ಲ ದುಡಿದರೆ ಏನೂ ಸಿಗುವುದಿಲ್ಲ. ಸಂಪಾದನೆಯಿಲ್ಲದೆ ಮನೆಯೊಳಗೆ ಕುಳಿತವನಿಗೆ ಇಡೀ ತಿಂಗಳೇ ತನ್ನನ್ನು ಆಡಿಸಿದಂತೆ ಆಗುತ್ತದೆ. ಅದಕ್ಕಾಗಿ ಆಟ ಆಡುತ್ತಾ ಆಡುತ್ತಾ ಆಟಿ ಕಳೆಯುತ್ತಾರೆ, ಆಟಿಯ ಹಸಿವಿನಾಟವನ್ನು ಸಹಿಸಿಕೊಳ್ಳುತ್ತಾರೆ.

ಆಟಿ ತಿಂಗಳಲ್ಲಿ ನವವಧು ತವರಿಗೆ ಹೋಗುವುದು ಇದೇ ಕಾರಣಕ್ಕೆ. ಆಟಿಯಲ್ಲಿ ಗಂಡನ ಮನೆಯಲ್ಲಿ ಮಗಳು ಪಾಪ ಪರದಾಡಬೇಕಲ್ಲಾ ಎಂದು ಅಪ್ಪ ಅಮ್ಮ ಅವಳನ್ನು ತವರಿಗೆ ಕರೆಸಿಕೊಳ್ಳುತ್ತಾರೆ. ತವರಿನ ಪ್ರೀತಿ, ತವರಿನ ರುಚಿ, ತವರಿನ ಹೆಮ್ಮೆಯಲ್ಲಿ ವಧುವಿಗೆ ಗಂಡನ ಸಾನ್ನಿಧ್ಯವೇ ಮರೆತು ಹೋಗುತ್ತದೆ.ಗಂಡನಿಂದ ಹೆಂಡತಿಯನ್ನು ಆಟಿಯಲ್ಲಿ ದೂರ ಮಾಡಿಕೊಂಡ ಅಪ್ಪ ಅಮ್ಮ ಸುಗ್ಗಿ ತಿಂಗಳ ಧಗೆಯಲ್ಲಿ ಮಗಳು ಮಾತೆಯಾಗುವ ಕಷ್ಟ ತಪ್ಪಿಸುತ್ತಾರೆ ! ಹಾಗೂ ಆಟಿಯ "ಆ ಆಟ"ಕ್ಕೂ ಸವಾಲು ಹಾಕುತ್ತಾರೆ !

ಆಟಿಯ ಆಟ ಇಲ್ಲಿಗೇ ಮುಗಿಯಿತೆನ್ನಬೇಡಿ. ಎಲ್ಲಾ ಬಂಧಗಳ ಬೆಸುಗೆಗೂ ಇಲ್ಲಿ ಅವಕಾಶವಿಲ್ಲ. ಒಂದು ಅಪ್ಪುಗೆಯೂ ನಿಷಿದ್ಧ. ಈ ದಿನಗಳಲ್ಲಿ ಮದುವೆ ಮಾತ್ರವೇನು ಮದುವೆಯ ಮಾತೂ ಇರುವುದಿಲ್ಲ. ಎರಡು ಮನಸ್ಸುಗಳ ಮಿಲನಕ್ಕೂ ಆಟಿ ವಿಷಕಾರಿ.

ಆಟಿ ಅಂತರ್ಮುಖಿಯಾಗೆನ್ನುತ್ತದೆ. ಹೊರಗೆ ಗಾಳಿ ಮಳೆಯ ಏಕಾತನತೆಗೆ ಎಂಥ ಚಂಚಲ ಮನಸ್ಸು ಕೂಡಾ ತಿಳಿಗೊಳ್ಳುತ್ತದೆ. ಹೊರಗಿನ ಛಳಿಗೆ ಒಳಗೆಲ್ಲೋ ಜೀವ ಧ್ಯಾನ ಧಾರಣ, ಸಮಾಧಿಯಾಗುವ ಹೊತ್ತು ಇದು.

ಇಂಥ ಹೊತ್ತನ್ನು ಮಾತ್ರ ಆಧುನಿಕ ಜಗತ್ತು ಕತ್ತರಿಸಿ ಹಾಕಿದೆ ಎಂದರೆ ಅದು ಎಂಥಾ ಕ್ರೂರ. ಇ-ಯುಗದಲ್ಲಿ ಆಟಿ ಬಂದದ್ದೂ ಗೊತ್ತಿಲ್ಲ, ಹೋದದ್ದೂ ತಿಳಿದಿಲ್ಲ. ಅದೇ ಮುಂಜಾನೆ, ಅದೇ ಶೆಡ್ಯೂಲ್, ಅದೇ ಅವಸರ, ಅದೇ ತಿರುಗಾಟ, ಅದೇ ಬ್ರೇಕ್‌ಫಾಸ್ಟ್, ಅದೇ ಕಂಪ್ಯೂಟರ್, ಅದೇ ಸರ್ಚ್, ಅದೇ ಜಾಬ್, ಅದೇ ಸ್ಯಾಲರಿ, ಅದೇ ಪೇಮೆಂಟು, ಅದೇ ಟೀವಿ, ಅದೇ ಚಾನಲ್ಲು, ಅದೇ ಸೀರಿಯೆಲ್ಲು, ಅದೇ ಫಿಲಮ್ಮು, ಅದೇ ಗುಡ್‌ನೈಟ್ ಮತ್ತೆ ಮರುದಿನ ಅದೇ ಶೆಡ್ಯೂಲ್.ಈ ಇ-ಆಟದಲ್ಲಿ ಆಟಿಯ ಆ ವೈಭವವೆಲ್ಲಾ ಅಪ್ರಸ್ತುತ.ಆಕಾಶ ಬಿಕ್ಕುತಿದೆ ಮುಗಿಲು ಕರಗಿ ಸುರಿಯುತ್ತಿದೆ.

ಮಳೆ-ಇಳೆ ಮಾತ್ರ ಏನೂ ಆಗಿಲ್ಲ ಎಂಬ ಹಾಗೆ ಪ್ರೀತಿಸುತ್ತಿವೆ ಅಂದಿನಂತೆ, ಇಂದೂ.

20070716

ಕೊನೆಯ ಯುದ್ಧಕ್ಕೆ ಮೊದಲು
ಮೊದಲ ಯುದ್ಧ ಎಂದು ಆಯಿತು?


ಎಂದು


ಹೇಳುವಿರಾ? ಹಾಗೇ


ಕೊನೆಯ ಯುದ್ಧ ಎಂದು?


ಎಂದು


ಹೇಳಿ ದಯವಿಟ್ಟು....

ಯುದ್ಧದ ಕುರಿತು ಬರೆಯುವುದು ಹೊಸತೇನಲ್ಲ


ಅಥವಾ ಬರೆದದ್ದನ್ನು ಓದುವುದು ಹೊಸತಲ್ಲ.


ಏಕೆಂದರೆ ಯುದ್ಧವೂ ಹೊಸತಲ್ಲ.


"ಪ್ರತಿ ಯುದ್ಧವೂ ಇನ್ನೊಂದರ ತತ್ ಪ್ರತಿ’ ಎಂದು ಎರಡನೇ ಮಹಾಯುದ್ಧದಲ್ಲಿ ಹಲವಾರು ದೇಶಗಳಲ್ಲಿ ಯುದ್ಧ ಮಾಡಿ ಬಂದು ವಿರಮಿಸಿದ ರಷ್ಯಾದ ಸೈನಿಕನೊಬ್ಬ ಹೇಳಿದ್ದು ಯುದ್ಧಾಸಕ್ತರಿಗೆ ಮರೆತಿಲ್ಲ.


"ಪ್ರತಿ ಯುದ್ಧವೂ ಕೊಳ್ಳೆ ಹೊಡೆಯಲು ಶುರುವಾಗುತ್ತದೆ, ಕೊಲ್ಲುವುದರಲ್ಲಿ ಮುಗಿಯುತ್ತದೆ’ ಎನ್ನುತ್ತಾನೆ ಸ್ಪಾನಿಶ್‌ನ ಟೀವಿ ವಿಮರ್ಶಕ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಆತ ಯುದ್ಧದಲ್ಲಿ ಮಾನವೀಯತೆ ಸಾಧ್ಯ ಎಂದು ಹೇಳುವಾಗ ಯುದ್ಧ ಪ್ರಿಯರಿಗೆ ಅಚ್ಚರಿ.


ಒಳ್ಳೆಯ ಯುದ್ಧ ಮತ್ತು ಕೆಟ್ಟ ಶಾಂತಿ ಎಂಬ ಮಾತು ಎಲ್ಲೂ ಇರುವುದಿಲ್ಲ.


"ಎಲ್ಲರೂ ಸಾಗರದಂತೆ ಒಂದೇ ಆಗಿದ್ದರೆ ಏಕಾಗಿ ಅಲೆಗಳು ಈ ಪಾಟಿ ಬಡಿದಾಡುತ್ತಿವೆ ?" ಎಂದು ಜಪಾನಿನ ಚಕ್ರವರ್ತಿ ಹಿರೋಹಿಟೋ ಒಮ್ಮೆ ಕೇಳಿದ್ದ. ಅವನ ಪ್ರಶ್ನೆಗೆ ಜಗತ್ತು ಈ ತನಕ ಉತ್ತರಿಸಿಲ್ಲ.


"ದೇಶಕ್ಕಾಗಿ ಸಾಯೋದು ಅತಿ ಮಧುರವೂ ಅತಿ ಅಗತ್ಯವೂ ಆಗಿದೆ ಎಂದು ಆ ಕಾಲದಲ್ಲಿ ಬರೆದಿರಬಹುದು ಆದರೆ ಕಾಲದಲ್ಲಿ ನೀವು ಕಾರಣವೇ ಇಲ್ಲದೆ ನಾಯಿ ಸತ್ತಂತೆ ಸಾಯುತ್ತೀರಿ, ಅದು ಅತಿ ಮಧುರವಾ? ಅತಿ ಅಗತ್ಯವಾ?" ಎಂದು ಅರ್ನೆಸ್ಟ್ ಹೆಮಿಂಗ್ವೇ ಎಂದೋ ಎಲ್ಲೋ ಹೇಳಿದ್ದ.
ಯುದ್ಧ ಕೈದಿಗಳ ಕುರಿತು ಬರುವ ಸುದ್ದಿ ಜಗತ್ತಿನಲ್ಲಿ ಯುದ್ಧಕ್ಕಿಂತಲೂ ಮಿಗಿಲಾದ ದಿಗಿಲು ಹುಟ್ಟಿಸುತ್ತದೆ.ಈಗೀಗ ಯುದ್ಧಕ್ಕಿಂತಲೂ ಯುದ್ಧೋತ್ತರ ವಿಚಾರಗಳೇ ಪ್ರಚಲಿತವಾಗುತ್ತವೆ.


ಅಲ್ಲವೇ ಮತ್ತೆ? ಯುದ್ಧ ಕೈದಿಗಳನ್ನು ಏನೂ ಮದುಮಗನ ಥರ ಹಸೆಮಣೆಯಲ್ಲಿ ಕೂರಿಸಲಾಗುವುದಿಲ್ಲ. ಆದರೆ ಅಷ್ಟಿಷ್ಟು ಸೌಜನ್ಯದಿಂದಾದರೂ ನೋಡಿಕೊಳ್ಳಬಾರದಾ? ಎಂದರೆ ಅದು ಈ ಶತಮಾನದ ಹಾಸ್ಯ.ಏಕೆಂದರೆ ಯುದ್ಧ ಎಂದ ಮೇಲೆ ಹಗೆ, ಸೇಡು, ಧಾರ್ಷ್ಟ್ಯ. ಅದು ಅಟ್ಟಹಾಸ. ಅಲ್ಲಿ ಮಾನವೀಯತೆ ಮೈಮನ ಮುರಿದುಕೊಂಡು ಬಿದ್ದಿರುತ್ತದೆ. ಸೆರೆಸಿಕ್ಕ ವ್ಯಕ್ತಿಯನ್ನಂತೂ ಜೀವ ಸಹಿತ ಬಿಟ್ಟರೆ ಅದೇ ಮಹಾ ಮಾನವೀಯತೆ. ಯಾವ ಯುದ್ಧದಲ್ಲೂ ಕೈದಿಗಳಿಗೆ ಪಾಯಸದೂಟ ಬಡಿಸಿದ ಉದಾಹರಣೆ ಇದ್ದರೆ ಹೇಳಿ. ಇತಿಹಾಸದುದ್ದಕ್ಕೂ ನಡೆದ ಬಡಿದಾಟ ಅಥವಾ ಕದನಗಳಲ್ಲಿ ಕೈದಿಗಳನ್ನು ಸಿಂಗರಿಸಿದ ದಾಖಲೆ ಇರಲಿಕ್ಕಿಲ್ಲ. ಅಷ್ಟಿಷ್ಟು ಇದ್ದರೂ ಅದು ತೋರಿಕೆಗೆ ಮಾತ್ರ.


ಯುದ್ಧದ ವ್ಯಾಖ್ಯಾನವೇ ಅದು."


everthing is FAIR in war and love ಎಂಬ ಉಕ್ತಿ ಇದೆ. ಯುದ್ಧ ಮತ್ತು ಪ್ರೇಮದಲ್ಲಿ ಮಾಡಿದ್ದೆಲ್ಲಾ ಸರಿ ಎಂದ ಮೇಲೆ..nothing to elaborate..


ಜಾರ್ಜ್ ಬುಶ್,-" ಇರಾಕ್‌ನಲ್ಲಿ ಬಡಪಾಯಿಗಳ ಮೇಲೆ ಬಾಂಬು ಹಾಕುತ್ತೀರಿ" ಎಂದ ನ್ಯೂಸ್‌ವೀಕ್‌ನ ವರದಿಗಾರನಿಗೆ ,"ನೋಡಪ್ಪಾ ನಾನು ಎರಡು ಮಿಲಿಯನ್ ಡಾಲರ್‌ನ ಮಿಸೈಲ್‌ನ್ನು ಆ ಅಬ್ಬೇಪ್ಪಾರಿ ಹತ್ತು ಡಾಲರ್ ಬೆಲೆಯ ಖಾಲಿ ಟೆಂಟ್ ಮೇಲೆ ಹಾಕಿ ಒಂಟೆಯ ಕುಂಡೆಗೆ ಸುಡಿ ಇಡಬೇಕು ಅಂತ ಕೇಳ್ತೀಯಲ್ಲಾ "_ ಎಂದು ಹೇಳಿದ್ದು ಯಾರೂ ಮರೆಯಲಿಕ್ಕಿಲ್ಲ


.ಹಿಂಸೆಯೇ ಪ್ರಧಾನವಾದ ಯುದ್ಧದಲ್ಲಿ ಅಹಿಂಸೆ ಊಹಿಸುವುದೇ ತಪ್ಪು.


ಯುದ್ಧದಲ್ಲಿ ಮೊದಲು ಸಾಯೋದು ಯಾರು?


ಸತ್ಯ!!


ನೀವು ನಂಬಲಿಕ್ಕಿಲ್ಲ.


ಆದರೆ ಅದು ನಿತ್ಯ ಸತ್ಯ.


ಸ್ವರ್ಣ ಮಂದಿರ ದಾಳಿ ವೇಳೆ ಸೆರೆಸಿಕ್ಕ ಸೈನಿಕನೊಬ್ಬನನ್ನು ಖಾಲಿಸ್ತಾನಿ ಉಗ್ರರು ಬಾಣಲೆಯಲ್ಲಿ ಹುರಿದು ಹೊರಕ್ಕೆಸೆದದ್ದು ದಶಕ ಕಳೆದರೂ ಮರೆತಿಲ್ಲ. ತಿಯಾನ್ಮೆನ್ ಚೌಕದಲ್ಲಿ ಸ್ವಾತಂತ್ರ್ಯ ಕೇಳಿದ ಹುಡುಗರನ್ನು ಸೆರೆ ಹಿಡಿದ ಚೀನಾ ಸರಕಾರ ಹೆಡೆಮುರಿ ಕಟ್ಟಿ ಗುಂಡು ಹೊಡೆದದ್ದು... ನಾಗರಿಕ ಜಗತ್ತಿನಲ್ಲಿ ಇನ್ನೂ ಮಾಸಿ ಹೋಗಿಲ್ಲ.


ಇಷ್ಟಕ್ಕೂ ಯುದ್ಧವೊಂದನ್ನು ಗೆಲ್ಲುವುದು ಎಂಬುದೇ ಇಲ್ಲ. ನೀವು ಭೂಕಂಪವನ್ನಾದರೂ ಗೆಲ್ಲಬಲ್ಲಿರಿ ಆದರೆ ಯುದ್ಧವನ್ನಲ್ಲ.ಏಕಕಾಲದಲ್ಲಿ ಯುದ್ಧಕ್ಕೆ ಸಿದ್ಧರಾಗುವುದು ಮತ್ತು ಯುದ್ಧವನ್ನು ನಿಲ್ಲಿಸುವುದು ಸಾಧ್ಯವಿಲ್ಲ , ಯಾವುದಾದರೊಂದನ್ನು ಮಾಡಲೆಬೇಕಾಗುತ್ತದೆ ಎಂದು ಐನ್‌ಸ್ಟೈನ್ ಹೇಳಿದ್ದು ಯುದ್ಧದ ಅಸಹಾಯಕತೆಗೆ ಒಂದು ಉತ್ತಮ ಉದಾಹರಣೆ.
ಯುದ್ಧದ ಕುರಿತು ನೀತಿ ಸಂಹಿತೆ ಬರೆದ ಜಿನೇವಾ ಒಪ್ಪಂದ ಪುಸ್ತಕದ ಬದನೆಕಾಯಿ.


೧೬೪ ದೇಶಗಳು ಅದನ್ನು ಪಾಲಿಸುತ್ತವೆ ಎಂದಾದರೆ ವಿಶ್ವದಲ್ಲಿ ಯುದ್ಧದ ಕಾರಣದಿಂದ ಈ ತನಕ ಕಾಣೆಯಾದ ಆರು ಕೋಟಿ ಮಂದಿಯಲ್ಲಿ ಒಬ್ಬನಾದರೂ ಸಿಗುತ್ತಿದ್ದ.


ಕೊನೆಗೂ ಯುದ್ಧ ಯಾರನ್ನಾದರೂ ಘಾಸಿಗೊಳಿಸುತ್ತದಾ ? ಎಲ್ಲರೂ ಒಂದಲ್ಲ ಒಂದು ಕಾರಣಕ್ಕಾಗಿ ಅದನ್ನು ಇಷ್ಟಪಡುತ್ತಾ ಹೋಗುತ್ತಾರೆ .ಯುದ್ಧ ನೆಲ,ಧರ್ಮ,ಪಂಥ, ಹೀಗೆ ಯಾವ ಯಾವ ಕಾರಣಕ್ಕೆ ಆರಂಭವಾಗುತ್ತದೋ ಆಯಾಯಾ ಕಾರಣಕ್ಕೆ ಆಯಾಯಾ ಮನಸುಗಳಿಗೆ ಇಷ್ಟವಾಗುತ್ತಾ ಸಾಗುತ್ತದೆ.ಸತ್ತವನಿಗೆ ಮಾತ್ರಾ ಅದು ಘಾಸಿ ಉಂಟುಮಾಡುತ್ತದೆ ಮತ್ತು


ಪ್ಲಾಟೋ ಹೇಳಿದಂತೆ


only the dead have seen the end of the war...

20070713

ನಾಲ್ಕು ಸಾಲು ಮಾತ್ರಾ-3


೧.


ಹುಟ್ಟಿದವನಿಗೆ ಸಾವು ನಿಶ್ಚಯ

ಹಾಗಾದರೆ

ಪ್ರೀತಿಗೂ

ಸಾವು ಇರುತ್ತದಾ?

ಪ್ರೀತಿ ಕೂಡಾ

ನಮ್ಮಲ್ಲಿ ಹುಟ್ಟಿದ್ದೇ

ಆಗಿರುವಾಗ..
.ಹನಿ ಹನಿ

ಪ್ರೀತಿ

ತೊಟ್ಟಿಕ್ಕಿ

ಜೀವ ಹೊಳೆಯಲ್ಲಿ

ಜಲ ಪ್ರಳಯವಾಯಿತು

ಎಂದರೆ "ಏನು ಕವಿಸಮಯ" ಎಂದು ಕೇಳಿದರು

ಪ್ರೀತಿ ಎಂದರೆ

ಬರೀ ವರತೆ ಮಾತ್ರವಾ?


೩.


ಶಬ್ದಕ್ಕೆ ಹೆದರಿ

ಮೌನಿಯಾದ

ಆದರೆ

ಮೌನವೇ ಟಿಸಿಲೊಡೆದು

ಬಳ್ಳಿಯಾಗಿ ಸುತ್ತಿಕೊಂಡಿತು

ಅಲ್ಲಿ ಹೂವರಳಿ

ಕಂಪು ಹರಡಿ ಘಮಘಮಿಸಿತು

ಆ ಶಬ್ದ ಅವನಿಗೆ ಕೇಳಲೇ ಇಲ್ಲ

ಏಕೆಂದರೆ

ಅವನು ಪ್ರೇಮಿಯಾಗಿದ್ದ.


೪.


ಅವನು ಕೊಟ್ಟ ಆ ಪ್ರೀತಿಯ ಸಾಲನ್ನು

ಅವಳು

ಹರಿದು ಚೂರು ಮಾಡಿದಳು

ಆಮೇಲೆ

ಆ ಮರದ ಬುಡದಲ್ಲಿ ಹೂತಳು.

ಮರ

ಆ ಋತುವಿನಲ್ಲಿ

ಒಂದೇ ಒಂದು

ಹೂವನ್ನು ಇಳಿಸಿತು

ಅವಳಿಗೆ ಗೊತ್ತಾಗಲಿಲ್ಲ,

ಹೂವು

ಮಣ್ಣಿನ ತಬ್ಬಿತು.

20070711

ಚೆಲುವಿನ ಡೊಂಕು ಡೊಂಕಿನ ಚೆಲುವು


"a straight line is shortest in morals as well as in geometry."


ಸರಳರೇಖೆ ಎಂಬುದೇ ಇಲ್ಲ !

ಅದು ಮನುಷ್ಯ ನಿರ್ಮಿತ.

ಪ್ರಕೃತಿ ಎಂದೂ , ಎಂದೆಂದೂ ವಾರೆಯೇ!

ಆಹಾ !

so ಸೀದಾ ಎಂಬುದೊಂದು ಆಷಾಢಭೂತಿತನದ ಸೃಷ್ಟಿ.

ಚಚ್ಚೌಕ, ಆಯತ, ತ್ರಿಕೋನಗಳೆಂಬ ಕೋಣೆಗಳು, ಸರಳರೇಖೆಗಳ ಹಂದರಗಳೆಲ್ಲಾ ಮನುಷ್ಯ ಭಾವನೆಗಳ ಪ್ರತೀಕ ಮತ್ತು ಪಕ್ಕಾ ಕೃತಕ.

ಅದು ಅಸಹಜ ಅದು ಅಪ್ರಾಕೃತಿಕ ಮತ್ತು ಅದು ಅದೈವಿಕ.

ವಾರೆ ಮಾತ್ರಾ ನಿಜ .

ಅದು ಮಾತ್ರಾ ಸತ್ಯ ,ಅದು ಪ್ರಕೃತಿ, ಅದು ದೇವಸೃಷ್ಟಿ, ಅದು ನಿರಂತರ.

ಬೆಟ್ಟ ಗುಡ್ಡಗಳ ಮೈ, ಗಿಡಮರಗಳ ಮೈ ಕೈ, ಕೊಂಬೆ ರೆಂಬೆ, ಎಲೆಯ ಹರಹು, ನೀರ ಹರಿವು, ಧುಮುಕುವ ತೊರೆ, ಸಮುದ್ರದ ಅಲೆ, ಗಾಳಿಯ ಬೀಸು ಎಲ್ಲವೂ ಓರೆ ಕೋರೆ. ಬಂಡೆ, ಹೊಂಡ, ಕಾಯಿ, ಬೀಜ, ಹೂವಿನ ಕೋಮಲ ಮೈ ಕೂಡಾ ಒಂದಾದರೂ ಸರಳರೇಖೆಯಾಗಿದೆಯಾ?

ಅಷ್ಟೇಕೆ ನಿಮ್ಮ ನರ, ನಾಡಿ, ಬೆರಳು, ಉಗುರು, ಹಲ್ಲು, ನಾಲಗೆ ಎಲ್ಲವೂ ಓರೆಯೇ!

ಸ್ಟ್ರೈಟ್ ಇದೆ ಎಂದು ನೀವು ಅನಿಸಿಕೊಳ್ಳುವುದು ಕೇವಲ ಭ್ರಮೆ.

ನಾಯಿಬಾಲ ಮಾತ್ರ ಡೊಂಕಲ್ಲ.

ಪ್ರಕೃತಿ ಎಂದರೆ ಡೊಂಕೇ.

ಸೂರ್ಯನ ಕಿರಣ ಸರಳರೇಖೆ ಎಂದರೂ, ಅದು ನಮ್ಮ ಭೂಮಂಡಲಕ್ಕೆ ನುಗ್ಗುವಾಗ ವಕ್ರೀಭವನಕ್ಕೀಡಾಗಿ ಡೊಂಕೇ ಆಗಿ ಬಿಡುತ್ತದೆ.

ಇಷ್ಟಕ್ಕೂ ಸುಂದರ ಯಾವುದು? ಅಂಕುಡೊಂಕಾ? ಅಥವಾ ಸರಳರೇಖೆಯಾ?

ಹುಣ್ಣಿಮೆಯ ಪೂರ್ಣ ಚಂದಿರ ಚಚ್ಚೌಕ ಆಕೃತಿಯಲ್ಲಿರುತ್ತಿದ್ದರೆ ನಾವು ಹಾಗೊಂದು ಅವನನ್ನು ಪ್ರೀತಿಸಲಿಕ್ಕಿತ್ತಾ ? ಆಕಾಶ ಆಯತಾಕಾರವಾಗಿರುತ್ತಿದ್ದರೆ ನಮ್ಮದು ಎನಿಸುತ್ತಿತ್ತಾ? ಮುಳುಗುವ ಸೂರ್ಯ ಉರುಟಲ್ಲದೆ, ಇನ್ನೊಂದಾಗಿ ಕಂಡರೆ ಸೂರ್ಯಾಸ್ತಕ್ಕೆ ಸೊಬಗು ಉಳಿಯುತ್ತಿತ್ತಾ?ಅಗ್ನಿ ಜ್ವಾಲೆಯ ನಿಗಿನಿಗಿ ವೈಯಾರ ದೊಡ್ಡ ದೊಡ್ಡ ಸೂಜಿಗಳಂತೆ ಚಾಚುತ್ತಿದ್ದರೆ ಅದಕ್ಕೇನಾದರೂ ದಿವ್ಯತೆ ಸಿಗುತ್ತಿತ್ತಾ?ಮರಗಳೆಲ್ಲಾ ಗೋಡೆಯ ರೀತಿ, ಸ್ತಂಭಗಳ ರೀತಿ ನಿಂತು ಬಿಟ್ಟಿದ್ದರೆ ಏನಾಗುತ್ತಿತ್ತು? ಬಳ್ಳಿಗಳೆಲ್ಲಾ ಕಬ್ಬಿಣದ ಪಟ್ಟಿಗಳಂತೆ ಸೀದಾ ಎದ್ದು ಬಿಟ್ಟರೆ ಆ ಬಳುಕು ಎಲ್ಲಿ ಹುಡುಕುತ್ತೀರಿ? ಆ ವೈಯಾರ ಎಲ್ಲಿ ಕಾಣುತ್ತೀರಿ? ಮಾವಿನ ಹಣ್ಣು ಆದರೆ ವಾರೆನೋಟದಿಂದಲೇ ಚೆಂದ. ಕಲ್ಲಂಗಡಿಗೆ ಅದರ ಉರುಟುರುಟಾದ ದಢೂತಿತನವೇ ಅಂದ. ಹಕ್ಕಿಯ ರೆಕ್ಕೆ ಕೊರಕಲಾಗಿದ್ದ ಕಾರಣ ಅದಕ್ಕೆ ಹಾರಲು ಸಾಧ್ಯ..

...ನಿಜಕ್ಕೂ ಹೇಳಿ, ನಿಮ್ಮ ಗೆಳತಿಯ ಸೊಂಟ ನಿಮ್ಮ ಕೋಣೆಯ ಗೋಡೆ ಥರ ಇದ್ದರೆ, ನಿಮ್ಮ ಗತಿ ?!

ವಿಚಾರವಾದಿ ನೀಶ್ಚೆ ಎಂಬ ಅಸಾಮಿ ಹೇಳುತ್ತಿದ್ದ, ಪ್ರಕೃತಿಯಲ್ಲಿ ಸರಳ ರೇಖೆ,ವೃತ್ತ ಇತಯಾದಿ ಇಲ್ಲ ಎಂಬುದು ಮೊದಲೇ ಗೊತ್ತಿದ್ದಿದ್ದರೆ ಮೆಥಮೆಟಿಕ್ಸ್ ಎಂಬುದು ಹುಟ್ತಾನೇ ಇರಲಿಲ್ಲ.

ಈ ವಾರೆಕ್ವಾರೆ ಮಹಿಮೆ ಅನಂತಾನಂತ.

ನಾವೇನು, ಸುಮ್ಮ ಸುಮ್ಮನೇ ಸ್ಟ್ರೈಟಾಗಿರಬೇಕು, ಫರ್ಫೆಕ್ಟಾಗಿರಬೇಕು ಎನ್ನುತ್ತಾ, ಗರಿಗರಿಯಾಗಿರೋದೆಂದರೆ ಸೀದಾಗಿರೋದು ಎಂದುಕೊಳ್ಳುತ್ತೇವೆ. ಆದ್ದರಿಂದಲೇ ಇಸ್ತ್ರಿ ಮಾಡಿದ ಶರಟು ಹಾಕಿ ಸಂಭಾವಿತ ಎಂದುಕೊಳ್ಳುತ್ತೇವೆ,ಅಥವಾ ಲೋಕ ಹಾಗೇ ನಮ್ಮನ್ನು ತಿಳಿದುಕೊಳ್ಳುತ್ತದೆ ಎಂದು ತಿಳಿಯುತ್ತೇವೆ.

ಇಡೀ ಜಗತ್ತೇ ವಾರೆ ಎಂದ ಮೇಲೆ ನಮ್ಮದೊಂದು ಸ್ಟ್ರೈಟು ನಿಜಕ್ಕೂ ವೇಸ್ಟು.

ಬದುಕನ್ನೇ ವಾರೆಯಾಗಿ ಒಪ್ಪಿಕೊಳ್ಳಲಾಗುವುದಿಲ್ಲ ಏಕೆ ನಮಗೆ?

ಇನ್ನು ಸೀದಾ ಮನುಷ್ಯನಾಗಿ ಏಕೆ ಅದೈವಿಕವಾಗಿರಬೇಕು?

straight is the line of duty, curved is the line of of beauty..ಎಂದು ನಂಬಿ ಸುಖವಾಗಿರಬಾರದೇ..!

20070709

ನಾಲ್ಕೇ ನಾಲ್ಕು ಸಾಲು-2


ಇದು ಖಂಡಿತಕ್ಕೂ ಪದ್ಯವಲ್ಲ. ಒಂದು ಭಾವನೆಯೋಟ. ಹಾಗೆಂದೇ ಇದನ್ನು ಓದಿದರೆ ಸಾಕು.ಯಾಕೆಂದರೆ ಪದ್ಯಕ್ಕಿಂತ ಮೊದಲು ಇರೋದು ಭಾವನೆಯೇ..............!

ಮುರಿದ ಗೆಲ್ಲಿನ ಮೇಲೆ

ಕುಳಿತಿದೆ ಪುಟ್ಟ ಹಕ್ಕಿ

ಗೆಲ್ಲಿಗೋ ಹಗುರ...

ಪುಟ್ಟ ಹಕ್ಕಿಗೂ ಸಂತಸ....

ಗೆಲ್ಲಿಗೆಲ್ಲಿಯ ಮಾತಿದೆ?

ಹಕ್ಕಿಗೆಲ್ಲಿಗೋ ಸೆಳೆತವಿದೆ

ಆದರೂ

ಗೆಲ್ಲಿಗೂ ಗೊತ್ತಿದೆ..

"ಈ ಹಕ್ಕಿ ಇನ್ನಷ್ಟು ಹೊತ್ತು

ನನ್ನೆದೆಯ ಮೇಲಿರುವುದಿಲ್ಲ

ಪುಟ್ಟ ಪಾದಗಳಿಂದ ಮೆಟ್ಟಿ

ಸಂತೈಸುವುದಿಲ್ಲ...

ಹಕ್ಕಿಗೂ ಗೊತ್ತಿದೆ

"ಈ ಗೆಲ್ಲು ಮರದಲ್ಲೇ ಇಲ್ಲ

ಮರದ ಹಂಗು ಮುರಿದಿದೆ

ಈ ಹಸುರು

ಈ ನೊಂಪು

ಇನ್ನು ಬಹು ಕಾಲ ಇರುವುದಿಲ್ಲ...

ಆದರೂ

ಗೆಲ್ಲು ಮತ್ತು ಹಕ್ಕಿ

ಇದ್ದಷ್ಟು ಕಾಲ ಪ್ರೀತಿಸಿದವು

ಕಾಲಕ್ಕೆ ಸೆಡ್ಡು ಹೊಡೆದವು

ಆಮೇಲೆ

ಆ ಹಕ್ಕಿ ಹಾರಿತು ಮೇಲೆಗೆ

ಗೆಲ್ಲು ಕುಸಿದು ಬಿತ್ತು ಕೆಳಗೆ

ಹಕ್ಕಿಯ ಕೊಕ್ಕಿನ ಮುತ್ತು ಮಾತ್ರಾ ಗೆಲ್ಲಿನ ಮೇಲಿತ್ತು

ಮಣ್ಣಾಗುವವರೆಗೆ

ಸೆಲ್ಲು ಕಿತ್ತ ಸೆಲ್ಲುಯಾರಾದರೂ ಸಣ್ಣ ಆಗಲು ಇಷ್ಟಪಡ್ತಾರಾ?

ನಾನು ಬರೀ ಸಣ್ಣ ಅನಿಸಿಕೊಳ್ಳಲು ಯಾರಿಗಾದರೂ ಇಷ್ಟವಿದೆಯಾ?

ಇದು ದೈತ್ಯಯುಗ.

ದೊಡ್ಡ ಕಾರು , ದೊಡ್ಡ ಮನೆ ದೊಡ್ಡ ಟಿವಿ,, ದೊಡ್ಡ ದೇಹ, ದೊಡ್ಡ ಜಮೀನು,ದೊಡ್ಡ ದುಡ್ಡು ..ಒಟ್ಟಾರೆ ದೊಡ್ಡ ಜನ

ಆದರೆ ಮೊಬೈಲ್ ಫೋನ್‌ಗೆ ಮಾತ್ರಾ ಈ ದೊಡ್ಡದು ಅಪ್ಲೈ ಆಗೋದಿಲ್ಲ.

mobile phones are the only subject on which men boast about who's got the smallest.

ಈ ಮೊಬೈಲ್ ಎಂಬ ಮಾಯಾವಿ ಈ ಮಾನವ ಯುಗದ ಒಂದು ಅವತಾರ ಪುರುಷ.

ಇದು ದೇವನೋ ದಾನವನೋ ಬಲ್ಲವರೇ ಬಲ್ಲರು.

ಕಿಸೆಯೊಳಗೆ ಕುಳಿತ ಈ ಪುಟ್ಟ ಯಂತ್ರ ಮಡಗಿ ಕೊಂಡವನನ್ನೇ ಮಾಯ ಮಾಡುತ್ತದೆ !

ಸ್ಥಾವರವನ್ನು ಜಂಗಮ ಮಾಡುತ್ತದೆ.

ಅದೊಂದು ಅರಚಿಕೊಂಡರೆ ಸಾಕು, ಅಲ್ಲಿದ್ದವರೆಲ್ಲಾ ಗರ ಬಡಿದವರಂತೆ ಎದೆಗೆ ಕೈ ಅದುಮುತ್ತಾರೆ. ಕರೆ ಬಂದವನಂತೂ ದೇವರೇ ಬಂದು ಮಾತಾಡುತತಿದ್ದಾನೆ ಎಂಬ ಗೆಟ್ಟಪ್ಪಿನಲ್ಲಿ ಎದ್ದು ಓಡುತ್ತಾನೆ.

ಅಬ್ಬಬ್ಬಾ, ಮೊಬೈಲ್‌ನಲ್ಲಿ ಮಾತನಾಡಲು ಮೊಬೈಲ್ ಆಗಲೇ ಬೇಕಾ? ಅದಕ್ಕೆ ಇದನ್ನು ಮೊಬೈಲ್ ಫೋನು ಎಂದು ಕರೆಯುತ್ತಾರಾ ?? ಗುಂಪಿನಲ್ಲಿ ಗೋವಿಂದನಾಗಿದ್ದವನು ಈ ಯಂತ್ರ ಠಣ ಗುಟ್ಟಿದರೆ ಗಂಡಾಗುಂಡಿಯಾಗಿ ಬಿಡುತ್ತಾನಲ್ಲಾ. ಎಂಥ ಮಾಯದ ಚೌಕುಳಿ ಇದು ?

ಕುಂತರೂ, ನಿಂತರೂ, ನಡೆಯುತ್ತಿದ್ದರೂ ಕಿವಿ ಹಾಳೆಯ ಬಳಿ ಗುಣಗುಣಿಸುವ ಈ ಕೀಟದ ಕಾಟ ಒಂದಾ, ಎರಡಾ?

ಈ ಮೊಬೈಲು ಸಂಪರ್ಕ ಸಾಧನವಾಗಿ, ಸಂಪರ್ಕ ಮಾಡಿದ್ದಕ್ಕಿಂತಲೂ, ಕತ್ತರಿಸಿದ್ದೇ ಹೆಚ್ಚು.

ಮನುಷ್ಯರ ಭಾವನಾ ಪ್ರಪಂಚಕ್ಕೆ ದಾಳಿ ಇಟ್ಟು, ನವಿರು ಮನಸ್ಸುಗಳ ಸೆಲ್ಲುಗಳನ್ನೇ ಹತ್ತಿಕ್ಕಿದ ಕಾರಣಕ್ಕೋ ಇದನ್ನು ಸೆಲ್^ನ್ ಎನ್ನಬಹುದು.

ಮೊಬೈಲ್ ಇದ್ದದರಿಂದ ಬಿಸಿನೆಸ್ ಬಂತು, ಮೊಬೈಲ್ ಇದ್ದದರಿಂದ ಮಗನ ಮಾತು ಕೇಳಿದ್ದಾಯಿತು, ಮೊಬೈಲ್ ಇದ್ದರಿಂದ ಮಗಳು ಮಾತನಾಡಿದಳು, ಮೊಬೈಲ್ ಇದ್ದದರಿಂದ ಗೆಳತಿ ಸಿಕ್ಕಿದಳು..... ಹೀಗೆ ಎಷ್ಟೊಂದು ಅನುಕೂಲಗಳನ್ನು ಕಲ್ಪಿಸಿಕೊಳ್ಳಬಹುದು.

ಆದರೆ ಮಗನ ಒಡನಾಟಕ್ಕಾಗಿದ್ದ ಅಮ್ಮನ ಕಾತರ, ಮಗಳಿಗಾಗಿ ಕುಳಿತ ಅಪ್ಪನ ಹಾತೊರೆ, ಗೆಳತಿಗಾಗಿ ಬೆಳೆದ ಪ್ರತೀಕ್ಷೆ, ಅಷ್ಟೇ ಏಕೆ ಬಿಸಿನೆಸ್ ಬರಲೆಂದು ಪಟ್ಟ ಧಾವಂತ..... ಒಂದಾದರೂ ಉಳಿಯುತ್ತದಾ ?

ಆತುರ, ಕಾತರ, ಪ್ರತೀಕ್ಷೆಗಳನ್ನೆಲ್ಲಾ ಕಿತ್ತೆಸೆಯಿತಲ್ಲಾ ಈ ಮೊಬೈಲ್ಲು.

ಏನು ಉಳಿದಿದೆ ಇನ್ನು ?

ನಾವು ಹತ್ತಿರವಾಗುತ್ತಾ ಆಗುತ್ತಾ ದೂರದ ಸುಖ ಎಂಬ ""ಹಿತಾನುಭವ”ವನ್ನು ಕಳೆದುಕೊಳ್ಳುತ್ತೇವಲ್ಲಾ ?

ವಿರಹವೆಂಬ ಸುಖಕ್ಕೆ ಇನ್ನೆಲ್ಲಿಯ ಅರ್ಥ ?

ಗೆಳತಿಯ ಮನದಲ್ಲಿ ಮೂಡಿತೇ ನಲ್ಲನ ಚಿತ್ರ ?

ಫ್ರೆಂಚ್ ಸಿನಿಮಾ ""ಹ್ಯಾಪಿ ಅನಿವರ್ಸರಿ”ಯ ತರುಣ ದಂಪತಿಯ ಮದುವೆ ವಾರ್ಷಿಕೋತ್ಸವದ ಹರ್ಷ. ಭೋಜನದ ವೇಳೆ ಪುಷ್ಪಗುಚ್ಛ ತರಲು ಹೋದ ಗಂಡ ಬಾರದಿದ್ದಾಗ ಕಾಯುತ್ತಾ ಕುಳಿತ ಹೆಂಡತಿ, ಕೊನೆಗೆ ತಾನೊಬ್ಬಳೇ ಉಂಡು ನಿದ್ದೆ ಹೋಗುತ್ತಾಳೆ. ಇಡೀ ಚಿತ್ರ ಕಾಯುವಿಕೆಯ ಕ್ಷಣವನ್ನೇ ನಿರೂಪಿಸುತ್ತಾ ಬೆಳೆಯುತ್ತದೆ. ಆ ಕಾಲದಲ್ಲಿ ಮೊಬೈಲ್ ಇರುತ್ತಿದ್ದರೆ ನಿರ್ದೇಶಕ ಪೀರೆ ಎಟೇ ಈ ಚಿತ್ರ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ.

ಅಥವಾ ಮೊಬೈಲ್ ಇದ್ದ ಕಾಲದಲ್ಲಿ ಕವಿ ""ತೌರಾ ಸುಖದೊಳಗೆನ್ನ ಮರೆತಿಹಳು ಎನ್ನದಿರಿ, ನಿಮ್ಮ ಪ್ರೇಮವ ನೀವೇ ....” ಎಂಬ ಕಾವ್ಯ ಲಹರಿ ಮೂಡಿಸಲು ಅವಕಾಶವೇ ಉಳಿಯುತ್ತಿರಲಿಲ್ಲ.

ಆತುರ, ಪೇಚಾಟ, ಕಾತರಗಳೆಲ್ಲಾ ಇಲ್ಲದ ಬದುಕು ಬದುಕೇ ಅಲ್ಲ.

ಅಂಥ ಬದುಕೇ ಇಲ್ಲದಾಗಲು ಒಂದು ಕಾರಣ ಈ ಮೊಬೈಲ್ಲಾ ?

WE DIDN'T NEED CELL PHONES UNTILL WE HAD THEM..

20070707

ಎಂದೂ ಮುಗಿಯದ ಸಿ-ಕಥಾನಕ


ಪ್ರಚಂಡ ವಿದ್ವಾಂಸ ಬಿ ಅವರಿಗೆ ತುಂಬಾ ಮಕ್ಕಳು.

ಅವರಲ್ಲಿ ಮೊದಲನೆಯವರೇ ಸಿ.

ಇತ್ತೀಚೆಗಷ್ಟೇ ಸಿ ತಮ್ಮ ಎಲ್ಲಾ ಕೆಲಸವನ್ನೂ ತೊರೆದು ಅವರ ಕೋಣೆಯೊಳಗೆ ಬಾಗಿಲು ಹಾಕಿ, ಅಗುಳಿಯನ್ನೂ ಹಾಕಿಕೊಂಡು ಕುಳಿತಿರುವ ಸುದ್ದಿ ಬಯಲಾದದ್ದು.ಅವರು ಕೋಣೆಯೊಳಗೆ ಕುಳಿತಿರುವುದನ್ನು ಮೊತ್ತ ಮೊದಲ ಬಾರಿಗೆ ಬಹಿರಂಗಪಡಿಸಿದ್ದು ಬಿಬಿಸಿಯೂ ಅಲ್ಲ, ಸಿಎನ್ನೆನ್ನೂ ಅಲ್ಲ.ಅನೇಕರು ಹಾಗೆಂದೇ ತಿಳಿದಿದ್ದರು.

ಕಳೆದ ವಾರವಷ್ಟೇ ಬಿಬಿಸಿಯಲ್ಲಿ ಆ ಕುರಿತು ಮೂರ್‍ನಾಲ್ಕು ದಿನ ಹಲವಾರು ಬಾರಿ ಸುದ್ದಿ ಗಂಟೆ ಗಂಟೆ ಪ್ರಸಾರವಾಗಿದ್ದನ್ನು ಕಂಡು ನವದೆಹಲಿಯ ಸಫ್ದರ್‌ಜಂಗ್‌ನಲ್ಲಿರುವ ತಮಿಳ್ನಾಡು ಭವನದಲ್ಲಿ ಪಚ್ಚೆ ಬಾಳೆಲೆಯಲ್ಲಿ ಸೌತ್ ಇಂಡಿಯನ್ ಊಟವನ್ನು ಕಲಸಿ ಕಲಸಿ ಉಣ್ಣುತ್ತಾ ಇದ್ದ ಅವರ ಮಗಳು ವೈ ನೋಡಿ ಅವಾಕ್ಕಾದಳು.

ತಮಿಳ್ನಾಡಿನ ಸಚಿವಾಲಯದಲ್ಲಿ ದೊಡ್ಡ ಅಧಿಕಾರಿಣಿಯಾಗಿರುವ ವೈ ಮೇಡಂ ಸರಕಾರದ ಕೆಲಸ ದೇವರ ಕೆಲಸ ಎಂದೇ ನಂಬಿದಾಕೆ.ಹಾಗೆಂಬ ಕೆಲಸಕ್ಕೆ ಮಿನಿಷ್ಟ್ರು ತಂಗವೇಲು ಅವರ ಜೊತೆ ಬಂದಿದ್ದವಳಿಗೆ ಎದೆ ಒಡೆದೇ ಹೋಗುವ ಹಾಗಾಗಿತ್ತು.

ಬಿಬಿಸಿಯಲ್ಲಿ ಅವಳ ಆ ಹೆಂಚಿನ ಮಾಡಿನ ಸುತ್ತು ಪೌಳಿಯ ಮನೆ,ಎದುರಿನ ಹುಣಿಸೇ ಮರ, ಕೆಂಪು ದಾಸವಾಳದ ಗಿಡ, ಪುರೋಹಿತ ಮಾವ ಬೈರಾಸು ಸುತ್ತಿಕೊಂಡು ಸರಸರನೇ ಏರಿ ಚೀಲ ತುಂಬಾ ಗಂಡು ಪರಿಮಳದ ಆ ಕೆಂಡಸಂಪಗೆ ಹೂವು ಇಳಿಸಿ ತರುತ್ತಿದ್ದ ಕರಾಚಿ ಸಂಪಗೆ ಮರ, ಮಾಪಲದ ಗಿಡ,ಅಲಸಂಡೆ ಸಾಲು,ತುಳಸೀ ಕಟ್ಟೆ..ಅರೆರೆ..ನೋಡುತ್ತಾ ನೋಡುತ್ತಾ ಮನೆಯೊಳಗಿನ ಕೆಂಪು ಸಾರಣೆ,ಬೀಟಿಮರದ ಕುರ್ಚಿ,ಜೋಡುನಳಿಗೆಯ ಬೆಡಿ..

ಬಿಬಿಸಿ ವರದಿಗಾರ ಅದನೆಲ್ಲಾ ತೋರಿಸುತ್ತಾ ಯಾವುದೋ ನಿಗೂಢವನ್ನೇ ಹರಿದು ಹಾಕುವನಂತೆ ಮಾಡುತ್ತಿದ್ದ.ವೈ ಮೇಡಂ ಅರ್ಧ ಊಟದಿಂದಲೇ ಎದ್ದಳು. ಸೀದಾ ರೂಮಿಗೆ ಹೋಗಿ ಫೋನು ಹಾಯಿಸಿದಳು.ಅವಳ ಅಪ್ಪ ಪ್ರಚಂಡ ವಿದ್ವಾಂಸ ಬಿ ಅವರೇ ಫೋನು ಎತ್ತಿಕೊಂಡರು.

"ಏನಪ್ಪಾ ಈ ಬಾರಿ ಬೆಂಡೆಸಾಲು ಮಾಡೇ ಇಲ್ಲವಾ" ಎಂದಳು ವೈ

"ಎಂತ ಮಾಡುವುದಾ.ಕೆಲಸಕ್ಕೆ ಜನ ಬೇಕಲ್ಲಾ "ಎಂದರು ಅತ್ತಲಾಗಿಂದ ಬಿ ಯವರು.

"ಬೊಮ್ಮಣ್ಣ, ಚನಿಯ, ಬ್ಯಾರ್ತಿ ಎಲ್ಲಾ ಏನಾದರು?" ವೈ ಪ್ರಶ್ನೆ.

"ಬೊಮ್ಮನೂ ಇಲ್ಲಾ ಬ್ರಹ್ಮನೂ ಇಲ್ಲಾ.."ಎಂದರು ಬಿ.

"ಯಾಕೆ"

"ಎಲ್ಲಾ ಈಗ ಅನುಕೂಲವಾಗಿದ್ದಾರೆ.ಯೋಜನೆ, ಗುರ್ಪು ಅಂತ ಅವರೆಲ್ಲಾ ಈಗ ಅನುಕೂಲವಾಗಿದ್ದಾರೆ.ಇಲ್ಲೀಂತ ಅಲ್ಲ ಎಲ್ಲಾ ಮನೆಯದ್ದೂ ಇದೇ ಕತೆ" ಎಂದರು ಬಿ, ಮುಂದುವರಿಸುತ್ತಾ "ಮತ್ತೆ ನಿನ್ನ ಅಣ್ಣ ಸಿ ಯ ಅವಸ್ಥೆ ಗೊತ್ತುಂಟಲ್ಲಾ .."ಎಂದು ಏನೋ ಹೇಳಬೇಕು ಎಂದು ಶುರುಮಾಡಿ ಏನೂ ಹೇಳಲಾಗದೇ ಉಳಿದರು.

ವೈ ಏನೂ ಹೇಳಲಿಲ್ಲ. ಫೋನು ಕಟ್ ಮಾಡಿದಳು.ಅವಳು ಅದೇ ದಿನ ಮಿನಿಷ್ಟ್ರು ತಂಗವೇಲು ಅವರ ಪರ್‍ಮಿಶನ್ ತೆಗೆದುಕೊಂಡು ಸೀದಾ ಬೊಂಬಾಯಿ ಮಾರ್ಗವಾಗಿ ಮಂಗಳೂರಿಗೆ ವಿಮಾನ ಟಿಕೇಟು ಮಾಡಿಸಿಕೊಂಡಳು.

...........................>>>...>>......>>>>>


ಸಿ ಅವರು ಏಕಾಏಕಿ ಹೀಗೇ ಮನೆಯೊಳಗೆ ಕದ ಹಾಕಿ ಕುಳಿತುಬಿಡಲು ಯಾರು, ಏನು ಕಾರಣ ಎಂಬುದು ಕತೆಗಾರನಾದ ನನ್ನ ಪ್ರಕಾರ ಅಂಥ ದೊಡ್ಡ ವಿಷಯವೇ ಅಲ್ಲ. ಅದು ಅವರ ಇಷ್ಟ. ಆದರೆ ಹಾಗೇ ಕುಳಿತುಕೊಳ್ಳುವ ಮೊದಲು ಮನೆಯವರಿಗೆ ಒಂದು ಮಾತಾದರೂ ಹೇಳಬೇಕಿತ್ತು ಎಂದು ಅನೇಕರು ಹೇಳುತ್ತಿರುವುದಕ್ಕೆ ಈ ಕತೆಗಾರನ ಸಹಮತವೂ ಇದೆ.

ಸಿ ಎಂಬ ಈ ಪ್ರಾಣಿ ಬಹಳ ವರ್ಷಗಳ ಹಿಂದೆ ಒಮ್ಮೆ ಕುಮಾರಪರ್ವತಕ್ಕೆ ಒಬ್ಬನೇ ಹೋಗಿ ಅದೇನೋ ತಪಸ್ಸು ಮಾಡುತ್ತೇನೆ ಎಂದು ಕುಳಿತಿದ್ದ.ಒಂದು ವಾರ ಅಲ್ಲಿ ಇದ್ದು ಕೆಳಗೆ ಬಂದವನು ಆಮೇಲೆ ನಮ್ಮ ಕಾಮತರ ಆಸ್ಪತ್ರೆಗೆ ಸೇರಬೇಕಾಯಿತು.

ಮೊದಲಿಂದಲೇ ಹೀಗೆ ಈ ಸಿ.

ಅವನಿಗೆ ಯಾರೂ ಮಾಡದ್ದನ್ನು ತಾನು ಮಾಡಬೇಕು ಎಂಬ ಒಂದು ಚಟ.ಅದಕ್ಕಾಗಿ ಆತ ಹಲವಾರು ಬಾರಿ ಊರೆಲ್ಲ ಸುದ್ದಿಯಾಗಿದ್ದ. ತಪ್ಪೇನು ಎಂದು ಅವನ ಫಾದರ್ ವಿದ್ವಾಂಸ ಬಿ ಯವರು ಅನೇಕ ಸಲ ತಮ್ಮೊಳಗೇ ಹೇಳಿಕೊಂಡಿದ್ದರು.ಎಲ್ಲರೂ ಅಡಕೆಗೆ ರೇಟು ಆಯಿತು ಎಂದು ತೋಟ ಮಾಡುತ್ತಿದ್ದರೆ, ಸಿ ಮಾತ್ರಾ ಭತ್ತದ ಗದ್ದೆ ಮಾಡುವುದು ಎಂದು ನೆಕ್ಕರೆ ಮಾವಿನ ದೊಡ್ಡ ಮರವನ್ನೇ ಕಡಿಸಿ ಬುಲ್ಡೊಜರು ತಂದು ತಟ್ಟು ಮಾಡಿಸಿದ. ಗದ್ದೆಯೂ ಆಯಿತು ಆದರೆ ಯಾವ ಬೀಜ ಎಲ್ಲಿಂದ ತಂದರೂ ಬೆಳೆ ಮಾತ್ರಾ ಬರ್ಕತ್ತಾಗಲಿಲ್ಲ.ಊರವರೆಲ್ಲಾ ಬರೇ ಜಗುಡಾ ಎಂದು ಗೇಲಿ ಮಾಡಿದಾಗ ಪ್ರಚಂಡ ವಿದ್ವಾಂಸ ಬಿ ಯವರೇ ಬೇಕಯ್ಯಾ ಹಾಗೇ ..ಎಂದು ಮಗನ ಪರವಾಗಿಯೇ ವಾದ ಮಾಡಿದ್ದರು.

ಇದು ಒಂದು ಉದಾಹರಣೆ ಮಾತ್ರಾ. ಯಾಕೆ ಗೊತ್ತಾ ಈ ಜಗುಡನ ಅಸಂಬದ್ದಗಳನ್ನೆಲ್ಲಾ ಹೇಳುತ್ತಾ ಹೋದರೆ ನೀವು ಭಯಂಕರ ಬೋರಾಗಿ ಕತೆ ಓದದೇ ಇರಬಹುದು ಎಂಬ ಹೆದರಿಕೆ ಈ ಕತೆಗಾರನಿಗೆ.


ಇದು ಹೇಗಾಯ್ತು ಗೊತ್ತಿಲ್ಲ.ಸಿ ಯ ಹೆಂಡತಿ ಎರಡನೇ ಹೆರಿಗೆಗೆ ಸಿದ್ಧಳಾಗುತ್ತಿರುವಾಗಲೇ ಸಿ ಬೆಳಗ್ಗೆ ಆ ದಿನ ಎದ್ದವನು "ಯಾಕೋ ಎಲ್ಲಾ ಕದಡಿದಂತಿದೆ,ಜಗತ್ತು ತುಂಬಾ ಬೇರೆಯೇ ಇದೆ" ಎಂದು ಹೇಳಿದ್ದನಂತೆ.ಅವನ ಹೆಂಡತಿ (ಅವಳಿಗೆ ಅಂಥಾ ಪಾತ್ರ ಇಲ್ಲಿ ಇರದ ಕಾರಣ ಹೆಸರು ಇಟ್ಟಿಲ್ಲ) ಅದನ್ನು ಕೇಳಿ "ಏನಾಗಿದೆ ನಿಮಗೆ,ನಿನ್ನೆ ರಾತ್ರಿ ತನಕ ಚೆನ್ನಾಗಿಯೇ ಇದ್ದೀರಲ್ಲಾ" ಎಂದು ತಮಾಶೆ ಮಾಡಿದಳಂತೆ.ಅದಕ್ಕೆ ಎಂದಿನಂತೆ ಕೋಪವಾಗಲಿ, ಹಾಸ್ಯವಾಗಲಿ ಮಾಡದ ಸಿ ನೀನು ಇನ್ನು ಏಳು ಮಕ್ಕಳನ್ನು ಹೆರಬೇಕು ಎಂದು ಹೇಳಿದನಂತೆ.ಯಾಕೋ ಈ ಅಸಾಮಿ ರಾಂಗ್ ಆಗಿರುವ ಚಹರೆ ಮೊದಲಾಗಿಯೇ ಕಂಡ ಅವಳು ಮರು ಮಾತಾಡಲಿಲ್ಲವಂತೆ.

ಆ ದಿನ ಆ ಬೆಳಗ್ಗೆ ಎಂದಿನಂತೆ ಹಟ್ಟಿಯ ಕೆಲಸಕ್ಕೂ ಹೋಗದೇ, ಬಚ್ಚಲೂ ಕಾಯಿಸದೇ, ಆಮೇಲೆ ಮುಕ್ಕಾಲು ಲೀಟರು ಕಾಫಿಯನ್ನು ಕುಡಿಯದೇ, ಒಂಭತ್ತು ದೋಸೆಯನ್ನೂ ಬೆಳ್ಳುಳ್ಳಿ ಚಟ್ನಿ ಮಾಡಿದ್ದರೂ ಮುಟ್ಟದೇ, ಸೀದಾ ಮೇಲಿನ ಮಾಳಿಗೆಯ ಅಡಕೆ ಪತ್ತಾಯದ ನೆಕ್ಸ್ಟ್ ಕೋಣೆಯಲ್ಲಿ ಸೇರಿಯೇ ಬಿಟ್ಟ.

ಇಪ್ಪತ್ತು ದಿನವಾಗಿದೆ. ಏನು ಮಾಡಿದರೂ ಬಾಗಿಲು ತೆರೆಯುತ್ತಿಲ್ಲ. ಯಾರು ಕರೆದರೂ ಮಾತಿಲ್ಲ.

ಆದರೆ ಅವನ ಪುಟ್ಟ ಮಗಳಿದಾಳಲ್ಲ,ಎಂ ಅವಳು ಅಪ್ಪಾ ಎಂದರೆ, ಒಳಗಿಂದ "ಹಾಗೇ ಕರೆಯಬಾರದು ಕಂದಾ ದೇವರೇ ಎಂದು ದನಿಗೊಳ್ಳಬೇಕು" ಎಂದು ಒಳಗಿಂದ ಹೇಳುತ್ತಿದ್ದ.

ಸಿ ಹೀಗೆ ಕುಳಿತ ಮೂರೇ ದಿನಕ್ಕೆ ತೋಟದ ಕೆಲಸದ ಆಳುಗಳೆಲ್ಲಾ ಕೆಲಸ ಮಾಡೇವು ಎಂದು ಹೊರಟೇ ಹೋಗಿದ್ದರು. ಸಿ ಮೇಲೆ ಯಾವುದೋ ಬ್ರಹ್ಮರಕ್ಕಸ ಆವಾಹನೆ ಆಗಿದೆ ಮತ್ತು ಅದರಿಂದ ನಮಗ್ಯಾಕೆ ತೊಂದರೆ ಬರಬೇಕು ಎಂದು ಅವರು ಹೇಳಿದರು ಎಂದು ಸುದ್ದಿ.ಆದರೆ ನಿಜವಾಗಿಯೂ ಅವರೂ ಈ ಮನೆಯಿಂದ ಹೊರಡಲು ಕಾರಣ ಹುಡುಕುತ್ತಿದ್ದರು ಎಂಬುದೂ ಬೇರೆಯೆ ಸಂಗತಿ.ಹತ್ತನೇ ದಿನಕ್ಕೆ ನೆರೆಯವರೆಲ್ಲಾ ಈ ಕುರಿತು ಪೊಲೀಸ್ ಕಂಪ್ಲೇಂಟು ಕೊಡುವುದೇ ಉಚಿತ ಎಂದು ಉಚಿತ ಸಲಹೆ ನೀಡಿದರು. ಊರಿನ ಕೆಲವು ಗಟ್ಟಿ ಜವ್ವನಿಗರು ಬಾಗಿಲು ಮುರಿದು ಸಿ ಯನ್ನು ಹೊರಗೆ ತರಲು ಮುಂದಾದರು.ಹದಿನೈದನೇ ದಿನಕ್ಕೆ ಈ ಸಿ ಎಂಬ ಅಸಾಮಿ ಅದು ಹೇಗೆ ನೀರು ಕೂಡಾ ಇಲ್ಲದೇ ಹೀಗೆ ಕತ್ತಲು ಕೋಣೆಯಲ್ಲಿ ಕುಳಿತಿದ್ದಾನೆ ಎಂದು ನಿಮ್ಮಂತೆ ಹಲವರೇನು, ಎಲ್ಲರೂ ಆಶ್ಚರ್ಯಪಟ್ಟರು.

ಆಗಲೇ ನಮ್ಮ ಕಿಟ್ಟಣ್ಣನ ಮಗ ಇದ್ದಾನಲ್ಲ, ಆ ದಪ್ಪ ಮೀಸೆಯ ಗೋಪಾಲ, ಅವನ ಪೇಪರಲ್ಲಿ ಈ ಅವಧೂತನ ಬಗ್ಗೆ ಮೊದಲಾಗಿ ಬರೆದದ್ದು ಮತ್ತು ಅದು ಅವನ ಪೇಪರಲ್ಲಿ ಫ್ರಂಟು ಪೇಜಲ್ಲಿ ಬಂದದ್ದು.ಆಮೇಲೆ ಅದು ದೊಡ್ಡ ಸುದ್ದಿಯಾಯಿತು.ಉಸ್ತುವಾರಿ ಸಚಿವರೇ ಅಲ್ಲಿಗೆ ಬಂದು ಹಾಕಿದ ಬಾಗಿಲಿನ ಎದುರು ಕೈಮುಗಿದು ಹೋದ ಮೇಲಂತೂ ಪ್ರಚಂಡ ವಿದ್ವಾಂಸ ಬಿ ಯವರ ಮನೆ ದೊಡ್ಡ ಯಾತ್ರಾ ಸ್ಥಳವಾಗುವ ಸೂಚನೆ ಕಾಣತೊಡಗಿತು.

ಆದರೆ ಹಾಗಾಗಲಿಲ್ಲ.

ಸಿ ಮುಂದಿನ ಕಾರ್ತಿಕ ಹುಣ್ಣಿಮೆಗೆ ತಾನು ಅವತರಿಸುವುದಾಗಿ ಹೇಳಿದ್ದಾನೆ ಎಂದು ವಿಮಾನದಲ್ಲಿ ದೆಹಲಿಯಿಂದ ಸೀದಾ ಬಂದ ವೈ ,ಬಂದ ದಿನವೇ ಪ್ರಕಟಿಸಿದ್ದೂ ಅಲ್ಲದೇ ಎನ್ಡಿಟಿವಿಗೆ ಆ ಕುರಿತು ಇಂಟ್ರ್ಯೂ ಕೊಟ್ಟಳು.ಅವಳು ಬಂದವರಲೆಲ್ಲಾ ಅದನ್ನೇ ಹೇಳುತ್ತಿದ್ದಳು. ಆದರೆ ಅವಳು ಮನೆಯಲ್ಲಿದ್ದ ನಾಲ್ಕೂ ದಿನ ಸಿ ಯನ್ನು ಮಾತನಾಡಿಸಲು ಮುಂದಾಗಿ ವಿಫಲಳಾದಳು.

ಹೊರಡುವ ದಿನ ಬೆಳ್ಳಂಬೆಳಗ್ಗೆ ವೈ ಸೀದಾ ಎದ್ದು ಪ್ರಚಂಡ ವಿದ್ವಾಂಸ ಬಿ ಅಂದರೆ ಅವಳ ಅಪ್ಪನ ಜೊತೆ ಮತ್ತೆ ಆ ಮುಚ್ಚಿದ ಕೋಣೆ ಎದುರು ನಿಂತಳು.

ಪಕ್ಕದಲ್ಲಿ ಆ ಪುಟ್ಟ ಮಗು ಎಂ.

ಮೂವರೂ ಜೋರಾಗಿ ಬಾಗಿಲು ಬಡಿದರು.ಒಳಗಿಂದ ಸುದ್ದಿಯಿಲ್ಲ.

ವೈ ಮೇಡಂ ಸೀ ಸೀ ಸೀ ಎಂದು ಮೂರು ಬಾರಿ ಕೂಗಿದಳು.

ಮಾತಿಲ್ಲ.

ಪ್ರಚಂಡ ವಿದ್ವಾಂಸ ಬಿ ಅವರೂ ಸೀ ಸೀ ಸೀ ಎಂದು ಕರೆದರು.

ಮೌನ.

ಆಮೇಲೆ ಆ ಪುಟ್ಟ ಮಗು ಎಂ "ದೇವರೇ ದೇವರೇ ದೇವರೇ" ಎಂದಿತು.

ಆಗ ಅದೆಂಥಾ ಅದ್ಭುತ!

ಬಾಗಿಲು ತೆರೆಯಿತು.

ಸೀ..

ಸೀ..

ಎನ್ಡಿಟೀವಿ ಅಥವಾ ಆಜ್ತಕ್ನವರು ಈಗ ಇದ್ದಿದ್ದರೆ ಲೈವ್ ತೋರಿಸುತ್ತಿದ್ದರು ಎಂದು ವೈ ಮೇಡಂ ಅಂದುಕೊಂಡರು.ಆದರೆ ಆ ಹೊತ್ತಿಗೆ ಅಲ್ಲಿ ಯಾರೂ ಇರಲಿಲ್ಲ.

ಸಿ ಹೊರಗೆ ಕಂಡರು.......

ಅವರು ಎಂದಿನಂತೆ ಇದ್ದರು.

ಮತ್ತೇನಾಯಿತು ಎಂದು ಕೇಳಬಾರದು.

ವೈ ಮೇಡಂ ಮತ್ತು ಪ್ರಚಂಡ ವಿದ್ವಾಂಸ ಬಿ ಯವರೊಂದಿಗೆ ಅವಧೂತ ಸಿ ಆ ಹಾಡು ಹಗಲೇ ಎಲ್ಲಿಗೋ ಹೋದರು.

ಎಲ್ಲಿಗೆ ಎಂದು ಯಾರಿಗೂ ಗೊತ್ತಿಲ್ಲ.

ಪುಟ್ಟ ಮಗು ಎಂ ಏನೂ ಹೇಳುತ್ತಿಲ್ಲ.

ದೇವರನ್ನು ನೋಡಿದ ಮೇಲೆ ಅದು ಮಾತೇ ಆಡುತ್ತಿಲ್ಲ.

ಜಗತ್ತು ಮಾತ್ರಾ ಏನೂ ಆಗಿಲ್ಲ. ಹಾಗೇ ಇದೆ.
<<<<<<<>>>>>>>>>>>>>>>
ಸೂಚನೆ:--- ಈ ಕತೆಯೊಂದಿಗೆ ಈ ಚಿತ್ರವನ್ನೂ ಗಮನಿಸುವುದು.
ನೀವು ಕತೆ ಓದಿದ ಮೇಲೆ ಈ ಚಿತ್ರ ನೋಡುತ್ತಾ ಹಿಂದೆ ಹಿಂದೆ ಹೋಗಿ.
ಸ್ವಲ್ಪ ಹಿಂದೆ ಹೋದಾಗ ಚಿತ್ರ ಏನು ಹೇಳುತ್ತದೆ ಎಂದು ಈ ಕತೆಗಾರನಿಗೂ ತಿಳಿಸಿ.

20070706

ಕ್ಲಾಸುಮೇಟು ಎಂಬ ನೆನಪಿನೋಟ


"ನನ್ನ ಕ್ಲಾಸ್‌ಮೇಟು’ -ಹಾಗೆಂದು ಹೇಳಿಕೊಂಡಾಗ ಅಲ್ಲೊಂದು ದೊಡ್ಡ ನೆನಪಿನೋಟ.

ಅಲ್ಲಿ ಭಾವ ಬಂಧುತ್ವದ ಬೆಸುಗೆ.

ಅರೆಕ್ಷಣಕ್ಕೊಮ್ಮೆ ನೆನಪಾದರೆ ಅದು ಗಂಟಲಿನರ್ಧದಲ್ಲಿ ನಿಂತು ಮನಸ್ಸನ್ನು ಹದಗೊಳಿಸುತ್ತದೆ.

"ವಾಜಪೇಯಿ ನನ್ನ ಕ್ಲಾಸ್‌ಮೇಟು ’ ಎಂದವರನ್ನು ನಾನು ಕಂಡಿಲ್ಲ. "ದಾವೂದ್ ಇಬ್ರಾಹಿಂ ನನ್ನ ಸಹಪಾಠಿ’ ಎಂದವರು ಯಾರೂ ಇಲ್ಲ.

ಗಾಂಧಿಜೀಯ ಕ್ಲಾಸ್‌ಮೇಟುಗಳ್ಯಾರೂ ಗಾಂಧೀಜಿ ಜೊತೆ ಇರಲಿಲ್ಲವಂತೆ.

ದೊಡ್ಡವರ ಸಹವಾಸದಲ್ಲಿ ಕ್ಲಾಸ್‌ಮೇಟು ಇರುವುದಿಲ್ಲ ?!

ಆದರೆ ಸಾಮಾನ್ಯರಲ್ಲಿ ಸಾಮಾನ್ಯರಿಗೆ ಈ ಪದಸಮುಚ್ಚಯ ಆಪ್ಯಾಯಮಾನ ಬಾಲ್ಯದ ಬದುಕನ್ನು ಕಳೆದುಕೊಳ್ಳದಂತೆ ಕಾಪಾಡುವ ಜತನಗಾರ! ಮಾನವ ಸಂಬಂಧಗಳಲ್ಲೇ ಸರ್ವಶ್ರೇಷ್ಠವೆನಿಸುವ ದಿವ್ಯತೆ ಇವನಿಗೆ.ಕ್ಲಾಸ್‌ಮೇಟುಗಳ ಬೆಸುಗೆ ಕಾಲಾತೀತ.

ಬಾಲ್ಯದ ಸಹಪಾಠಿಗಳೆಲ್ಲರೂ ಗೆಳೆಯರಲ್ಲ, ಗೆಳೆಯರೆಲ್ಲರೂ ಸಹಪಾಠಿಗಳಲ್ಲ. ಆದರೆ ಸಹಪಾಠಿಯೂ ಗೆಳೆಯನೂ ಆಗಿದ್ದವನು ಮನೋಲೋಕದಲ್ಲಿ ಶಾಶ್ವತ.

ಎಲಿಮೆಂಟರಿಯಲ್ಲಿ ಅದೇ ಮಾಸಲು ಚಡ್ಡಿ, ಹರಿದ ಅಂಗಿ ಹಾಕಿದ ಕ್ಲಾಸ್‌ಮೇಟು ಮುಂಬೈಯ ದೊಡ್ಡ ಉದ್ಯಮಿ. ಮೇಸ್ತರರು ಬೆತ್ತ ತೆಗೆದರೆ ಉಚ್ಚೆ ಹೊಯ್ಯುತ್ತಿದ್ದವನು ಪೊಲೀಸ್ ಅಧಿಕಾರಿ. ಅಲ್ಲಿಂದಲ್ಲಿಗೆ ಪಾಸಾಗುತ್ತಿದ್ದ ಡಬ್ಬಾ ಅಮೇರಿಕೆಯಲ್ಲಿ ವಿeನಿ.

ಡಬ್ಬಲ್ ಡೆಕ್ಕರ್‌ನಂತಿದ್ದೂ ಕಣ್ಣು ತುಂಬದಿದ್ದವಳು ಈಗ ಬ್ಯೂಟಿಫುಲ್ ಆಂಟಿ ಮತ್ತು ವೈಸ್‌ವರ್ಸಾ.

ಇದು ಎಂಥ ವಿಚಿತ್ರವೆಂದರೆ, ಒಂದನೇ ತರಗತಿಯಲ್ಲಿ ಒಂದೇ ವರ್ಷ ಜೊತೆಗಿದ್ದವನು ಮೂವತ್ತು ವರ್ಷ ಕಳೆದ ಬಳಿಕ ಎದುರಾದಾಗ, ಮೊದಲ ನೋಟಕ್ಕೇ "ಎಲ್ಲೋ ನೋಡಿದ್ದೇನಲ್ಲಾ’ ಎಂದನಿಸುತ್ತದೆ.

ಮತ್ತಿನ ಗಳಿಗೆಗೇ ಕ್ಲಾಸ್‌ಮೆಂಟು ಎಂಬ ಪೂರ್ವ ಜನ್ಮದ ವಾಸನೆ ಅಡರುತ್ತದೆ. ಅವನು ತನ್ನ ಹೆಸರು ಹೇಳಿಬಿಟ್ಟರೆ ಸಾಕು, ಒಂದನೇ ತರಗತಿಯಲ್ಲಿ ಐಸ್‌ಕ್ಯಾಂಡಿ ತಿಂದದ್ದು, ಅಡಿಕೋಲು ಮುರಿದದ್ದು ಸಹಿತ ಎಲ್ಲವೂ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ. ಅಂಥ ಹೆಸರಿನ ಅರುವತ್ತು ಮಂದಿ ಜೀವನದ ಹಾದಿಯಲ್ಲಿ ಬಂದು ಹೋಗಿದ್ದರೂ, ಅವನೊಬ್ಬ ನೆಲೆಗೊಳ್ಳುವ ರೀತಿಯೇ ಬೇರೆ.

ಅದೇ ಕ್ಲಾಸ್‌ಮೇಟಿನ ಜಬರದಸ್ತಿ !

ಅದೇ ದೋಸ್ತಿಯೆಂಬ ಬದುಕಿನ ಛಾತಿ. ಆ ರೂಬುರೂಬಿನಲ್ಲಿರುವ ಒಲವಿನ ಸೆಲೆ ಮತ್ತೆಲ್ಲೂ ಇರದು. ಅಲ್ಲಿ ಮಾತು, ನೋಟ, ಮೌನ ಸೆಳೆತಗಳನ್ನೆಲ್ಲಾ ಮೀರಿದ್ದು ಭೂತ, ಭವಿಷ್ಯಗಳನ್ನು ಮೀರಿದ ಪ್ರೀತಿಯ ಹಂದರ.ಇಂಥ ಹಂದರಡಿ ಯಾರಿಲ್ಲ ಹೇಳಿ ?

ಆದರೆ ನಮ್ಮ ಗೆಟ್ಟಪ್ಪುಗಳೆದುರು ಅದನ್ನು ಒಳಗೊಳಿಸಲಾರದಂತೆ ನಾವು ರೂಪುಗೊಳ್ಳುತ್ತವೆ.

ಜೆ.ಎಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದಾಗಲೂ ಕ್ಲಾಸ್‌ಮೇಟು ಎಂದರೆ ಪಕ್ಕಾ ಹುಡುಗನಾಗಿ ಬಿಡುತ್ತಿದ್ದರಂತೆ. ಅವರಿಗೆ ಕ್ಲಾಸ್‌ಮೇಟು ಗ್ಲಾಸ್‌ಮೇಟೂ ಹೌದು. ಶಿವಮೊಗ್ಗೆಯ ಕ್ಲಬ್‌ನೊಳಗೆ ಅವರು ಹೊಕ್ಕರೆಂದರೆ ಮುಖ್ಯಮಂತ್ರಿತ್ವ ಹೊರಗೆ ನೇತಾಡುತ್ತಿತ್ತು. ಒಳಗೆ "ಬಾರ್ಲಾ ಮಗನೇ ಎರಡಾಟ ಆಡೋಣ’ ಎಂದು ಇಸ್ಪೀಟು ಎಲೆ ಕಲಸಿದರೆ ಬೆಳಗಾದದ್ದೇ ಗೊತ್ತಾಗುತ್ತಿರಲಿಲ್ಲವಂತೆ.

ನಮ್ಮ ಅಧಿಕಾರ, ಅಹಮಿಕೆ, ಅಂತಸ್ತುಗಳ ನಡುವೆ ಒಂದು ಅಂತ:ಕರಣ ಕಾರಣ ಈ ಕ್ಲಾಸ್‌ಮೇಟು. ಆತನೊಳಗೆ ಇಳಿಯುವ ಘನತೆ ಮಾತ್ರ ನಮ್ಮದಾಗಬೇಕಷ್ಟೇ.
now go back to your class room.........

20070704

A TRIBUTE..ARY..TO MY DEAR NETRAVATHIಒಂದು ಜಿನುಗು.

ನೋಡು ನೋಡುತ್ತಾ ಹರಿವು.

ಮುಂದಕ್ಕೆ ಸಾಗುತ್ತಾ ತೊರೆ.

ಇಳಿದು ಬಂದು, ನಿಡಿದಾಗಿ ಮೈಚಾಚಿ ಉಧೋ ಉಧೋ ಎನ್ನುತ್ತಾ ಬಳುಕಿ, ಬಾಗಿ ಬಾಳು- ಬೆಳೆ ಹಸನಾಗಿಸಿ ಸಾಗರದ ತೆಕ್ಕೆಯಲ್ಲಿ ಕರಗಿದಾಗ ಒಂದು ಸಾರ್ಥಕ ಪಯಣಕ್ಕೆ ವಿರಾಮ.

ಇವಳು ನೇತ್ರಾವತಿ.

ಕರ್ನಾಟಕದ ಪಶ್ಚಿಮ ವಾಹಿನಿಯಲ್ಲಿ ಒಬ್ಬಾಕೆ. ಪಶ್ಚಿಮ ಘಟ್ಟದಿಂದ ಇಳಿದು ನಾಲ್ಕೇ ನಾಲ್ಕು ತಾಲೂಕುಗಳಲ್ಲಿ ಸಾಗುವ ನದಿ. ದೇಶಕ್ಕೆ ಇದು ಪುಟ್ಟ ನದಿಯೇ ಇರಬಹುದು. ಆದರೆ ದಕ್ಷಿಣ ಕನ್ನಡಕ್ಕೆ ಈಕೆ ಜೀವನದಿ. ಸಾಕ್ಷಾತ್ ಗಂಗೆ. ಪವಿತ್ರ ಸ್ನಾನದಿಂದ ತೊಡಗಿ ಜನರ ಜೀವಾಮೃತವಾಗುವ ತನಕ...

ನೇತ್ರಾವತಿಗೆ ನೇತ್ರಾವತಿಯೇ ಸಾಟಿ.

ತೊಂಬತ್ತಾರು ಕಿ.ಮೀ. ಉದ್ದದ ನೇತ್ರಾವತಿಗೆ ಮಳೆಗಾಲದಲ್ಲಿ ಮೈತುಂಬ ಸೊಕ್ಕು.

ಬೇಸಗೆಯಲ್ಲಿ ಆಕೆ ಮಂದಗಮನೆ.

ಆಷಾಢದಲ್ಲಿ ಅಹಂಕಾರಿ.

ಶಿಶಿರದಲ್ಲಿ ನಾಚಿ ಮುದ್ದೆ.

ಇಂಥ ಸುರಸುಂದರಿಗೆ ಒಬ್ಬನೇ ಒಬ್ಬ ಮುಖ್ಯ ಗೆಳೆಯ. ಉಪ್ಪಿನಂಗಡಿಯಲ್ಲಿ ಬಂದಪ್ಪಿಕೊಳ್ಳುವ ಕುಮಾರಧಾರಾ. ಆತನನ್ನು ತನ್ನೊಳಗೆ ಆವಾಹಿಸಿಕೊಂಡ ನೇತ್ರಾವತಿ ಕರಾವಳಿಯ ಸಾವಿರಾರು ಘಟನೆಗಳಿಗೆ ಸಾಕ್ಷಿ.

ಈ ನದಿಯ ಒಡಲಲ್ಲೇ ಪೋರ್ಚುಗೀಸರ ನೌಕೆ ಜಿಲ್ಲೆಗೆ ಬಂದಿಳಿಯಿತು. ಈ ನದಿಯ ಹಾದಿಯಲ್ಲೇ ಅಡಕೆ ವ್ಯವಹಾರ ನಡೆಯಿತು. ಈ ನದಿಯ ದಂಡೆಯಲ್ಲಿ ರಾಣಿ ಅಬ್ಬಕ್ಕಳ ಹೋರಾಟ ಸಾಗಿತ್ತು. ಈ ನದಿಯು ಬಲಿ ತೆಗೆದುಕೊಂಡ ಜೀವಗಳೆಷ್ಟೋ, ಸಾಕ್ಷಿಯಾದ ಘಟನೆಗಳೆಷ್ಟೋ ಎಲ್ಲದಕ್ಕೂ ಇತಿಹಾಸದ ಒಡಲ ಬಗೆಯಬೇಕು.

ಇಂಥ ನೇತ್ರಾವತಿಯ ಮೇಲೆ ಜನ ದೌರ್ಜನ್ಯಕ್ಕಿಳಿದಿದ್ದಾರೆ. ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ಲಲನೆಯ ಮೇಲೆ ಆಸೆಬುರುಕರ, ಅನಾಗರಿಕರ, ಆಡಳಿತಕಾರರ ಕಣ್ಣು ಬಿದ್ದಿದೆ. ನೇತ್ರಾವತಿ ಶೋಷಣೆಗೀಡಾಗಿದ್ದಾಳೆ. ಅವಳ ಬದುಕು ದುರ್ಭರವಾಗುತ್ತಿದೆ. ಯಾರೂ ಏನೂ ಮಾಡದಿದ್ದರೆ ಮುಂದೊಂದು ದಿನ ನೇತ್ರಾವತಿ ಬತ್ತಿ ಬಸವಳಿದು ಕೈ ಚೆಲ್ಲಲಿದ್ದಾಳೆ.ಆಗ ದಕ್ಷಿಣ ಕನ್ನಡವೆಂಬ ಪರಶುರಾಮನ ಸೃಷ್ಟಿಯಲ್ಲಿ ಬರಗಾಲದ ಅಧ್ಯಾಯ ಆರಂಭವಾಗುತ್ತದೆ.

ನೇತ್ರಾವತಿಯ ಕುರಿತು ಗೆಳೆಯ ವಿನಾಯಕ ಭಟ್ಟ ಮೂರೂರು ಜೊತೆ ಕುಳಿತು ಅದೇನೋ ಮಾತನಾಡಿ ಮಾತನಾಡಿ ಕೊನೆಗೆ ಬರೆದದ್ದು ನಿಮಗೂ ಗೊತ್ತಾಗಲಿ ಅಂತ ಇಲ್ಲಿದೆ.

ಏನಿದ್ದರೂ ಇದು ನನ್ನ ಪ್ರೀತಿಯ ನೇತ್ರಾವತಿಗಾಗಿ..

ಕೊಂಚ ಲಾಂಗ್ ಅಂತ ನಿಮಗೆ ಅನಿಸಬಹುದು ಆದರೂ ಓದಿ ನೋಡಿ,ನೀವೂ ನೇತ್ರಾವತಿನಾ ಪ್ರೀತಿಸೋಕೆ ಶುರುಮಾಡದಿದ್ದರೆ ನನ್ನಾಣೆ.


ಮೊದ ಮೊದಲಲ್ಲಿ ಎಲ್ಲರೂ ಹೀಗೇ ತಿಳಿದುಕೊಂಡಿದ್ದರುನೇತ್ರಾವತಿ ನದಿಯನ್ನು ಹೇಗೆ ಇಲ್ಲಿಂದ ಎತ್ತಿ ಅಲ್ಲಿಗೆ ಸಾಗಿಸುತ್ತಾರೆ? ಯಾರೋ ಜೋಕ್ ಮಾಡುತ್ತಿದ್ದಾರೆ.. ಹೇಳಿಕೇಳಿ ನದಿ ಹರಿಯುವುದು ತಗ್ಗಿನಲ್ಲಿ. ಹರಿಸಬೇಕಾಗಿರೋದು ಘಟ್ಟ ಪ್ರದೇಶಕ್ಕೆ. ಪಶ್ಚಿಮಕ್ಕೆ ಹರಿಯುವ ನದಿಯನ್ನು ಪೂರ್ವಕ್ಕೆ ತಿರುಗಿಸುವುದು ಎಂದರೇನು ? ಎಲ್ಲಾದರುಂಟೇ ?

ಆದರೆ... ಆಮೇಲೆ ಗೊತ್ತಾಗುತ್ತಾ ಹೋಯಿತು. ಇದು ಜೋಕೇ ಅಲ್ಲ. ಇದರ ಹಿಂದೆ ನೂರಾರು ಒಳ ಸುಳಿಗಳಿವೆ,ಎಂಥೆಂಥದ್ದೋ ಹಕೀಕತ್ತುಗಳಿವೆ, ಯಾವ್ಯಾವುದೋ ಆಸಕ್ತಿಗಳಿವೆ.

ಸಾವಿರದ ಆರುನೂರು ಕಿಲೋ ಮೀಟರ್ ಉದ್ದದ ಪಶ್ಚಿಮ ಘಟ್ಟ ಕರ್ನಾಟಕದ ಮಟ್ಟಿಗೆ ಮಣಿ ಮುಕುಟ. ಜಗತ್ತಿನ ಜೈವಿಕ ವಿಶೇಷಣ ಗಳ ದೃಷ್ಟಿಯಿಂದ ಗುರುತಿಸಲಾದ ೨೫ ಹಾಟ್‌ಸ್ಪಾಟ್‌ಗಳಲ್ಲಿ ಒಂದು. ಇಂಥ ಪಶ್ಚಿಮ ಘಟ್ಟದಲ್ಲಿ ೩೮ ತೊರೆಗಳು ಮೂಡಿ, ಚಿಮ್ಮಿ, ಜಿಗಿದು, ಕುಣಿದು ಕುಪ್ಪಳಿಸಿ ಹರಿಯುತ್ತಾ ಪಶ್ಚಿಮದತ್ತ ಮುಖವಿಟ್ಟು ಓಡೋಡಿ ಕಡಲು ಸೇರುತ್ತವೆ. ಇವುಗಳಿಗೆ ತಾನೇ ತಾನಾಗಿ ಹೆಸರೇನಿಲ್ಲ.ಇವೆಲ್ಲಾ ಒಟ್ಟಾರೆ ಸೇರಿ ಒಂದಾದಾಗ ಪುಟ್ಟ ನೇತ್ರಾವತಿಗೆ ಏರು ಜವ್ವನೆಯ ಧಿಮಾಕು.

ಈ ತೊರೆಗಳನ್ನೆಲ್ಲಾ ಎತ್ತಿ ತಿರುಗಿಸಿದರೆ ನೇತ್ರಾವತಿಯನ್ನೇ ಎತ್ತಿ ಆಚೆಗೆ ತಳ್ಳಿದಂತೆಯೇ..

ಇದೆಲ್ಲಾ ಹೇಗೆ ಆಗುತ್ತದೆ ಎಂದರೆ ..

ಹರಿಯುವ ನದಿಗಳ ನೀರೆಲ್ಲಾ ಸುಮ್ ಸುಮ್ಮನೆ ಸಮುದ್ರ ಸೇರಿ ವೇಸ್ಟ್ ಆಗುತ್ತಿದೆ ಎಂದು ಸರಕಾರದ ಯಾವನೋ ಒಬ್ಬನಿಗೆ ಕುಳಿತಲ್ಲಿಗೆ ಅನಿಸುತ್ತದೆ , ಅನಿಸಿದ್ದೇ ತಡ ಯೋಜನೆಯ ನೀಲ ನಕಾಶೆ ರೂಪ ತಳೆಯುತ್ತದೆ.ನೇತ್ರಾವತಿ ಯೋಜನೆಯೂ ಇಂಥದ್ದೇ ಕನಸಿನಿಂದ ಆಗುತ್ತದೆ,ಕೆಟ್ ಕನಸು..

ಆಮೇಲೆ ಆ ಕನಸು ರಾಜಕೀಯ ಪಕ್ಷಗಳಿಗೂ ಆಗುತ್ತದೆ.ಪಕ್ಷಗಳು ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತವೆ.ಎಲ್ಲಿ ಎಷ್ಟು ಹೊಡೆಯಬಹುದು ಮತ್ತು ಹೇಗೆ ಗೊತ್ತಾಗದಂತೆ ತಿನ್ನಬಹುದು ಎಂದು ನೋಡ ನೋಡುತ್ತಾ ಎಲ್ಲಾ ಅಸಂಭವಗಳನ್ನು ತಳ್ಳಿ ಹಾಕಿ ಸಂಭವದತ್ತ ಮುಖವಿಡುತ್ತವೆ.

೧೪ ಕೋಟಿ ಖಚು ಮಾಡಿ ಸಮೀಕ್ಷೆ ನಡೆಸುತ್ತವೆ.

ಯೋಜನೆ ಅಕ್ಷರಶಃ ಗರಿಗೆದರುತ್ತದೆ.

ನೀರನ್ನೆಲ್ಲಾ ನೀರಿಲ್ಲದ ಊರಲ್ಲಿ ಹರಿಸುತ್ತೇವೆ ಎಂದು ಆಗಿಂದಾಗ್ಗೆ ಹೇಳುತ್ತಾ ನದಿ ತಿರುಗಿಸುವ ಯೋಜನೆ ಓಟು ತಿರುಗಿಸುವ ಯೋಜನೆಯೂ ಆಗುತ್ತದೆ.

ಪಶ್ಚಿಮ ಘಟ್ಟದಲ್ಲಿ ಹರಿಯುವ ೩೮ ತೊರೆಗಳನ್ನು ಅಡ್ಡಹಾಕಿ ೩೮ ಜಲಾಶಯಗಳನ್ನು ನಿರ್ಮಿಸುವುದು. ಎರಡು ಬದಿಯಿಂದ ಅವುಗಳನ್ನು ಸಂಪರ್ಕಿಸುವ ದೊಡ್ಡ ಕಾಲುವೆ ನಿರ್ಮಿಸಿ ನೀರನ್ನು ಗುರುತ್ವಾಕರ್ಷಣೆ ಮೂಲಕ ಸರ್ರನೆ ಪೂರ್ವಕ್ಕೆ ತಿರುಗಿಸಿದರಾಯಿತು ಎಂಬುದು ಈ ಯೋಜನೆಯ ಹೂರಣ.ಹಾಗೆ ಮಾಡಿದಾಗ ಚಿಕ್ಕಮಗಳೂರು, ಹಾಸನ, ಮಂಡ್ಯ, ತುಮಕೂರು, ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ ಚಿತ್ರದುರ್ಗ, ಬಳ್ಳಾರಿಗಳಿಗೆ ಬೇಕೆಂಬಷ್ಟು ನೀರು ಬೇಕಾದಾಗಲೆಲ್ಲಾ ಸಿಗುತ್ತದೆ.. ಸುಮ್ಮನೆ ಸಮುದ್ರ ಸೇರುವ ೧೪೯ ಟಿಎಂಸಿ ನೀರು ನೀರೇ ಇಲ್ಲದ ಊರಿಗೆ ದೊರೆಯುತ್ತದೆ, ಉಪಕಾರವಾಗುತ್ತದೆ.

.......ಈ ಉಪಕಾರ ಮಾಡಲು ಈಗ ಲೆಕ್ಕ ಮಾಡಿದರೆ ೧೨,೫೦೦ ಕೋಟಿ ರೂಪಾಯಿ ಬೇಕು. ಬಡ ಕರುನಾಡಿನ ಖಜಾನೆಯಲ್ಲಂತೂ ಹಣ ಇಲ್ಲ. ಹಣ ಎಲ್ಲಿಂದ ತರುತ್ತೀರಿ ಎಂದರೆ ವಿಶ್ವಬ್ಯಾಂಕ್ ಉಂಟಲ್ಲ. ಒಂದು ಸಾವಿರ ಕೋಟಿ ಅವರು ಕೊಡುತ್ತಾರೆ, ಉಳಿದದ್ದನ್ನು ಕೆಲವು ವಿದೇಶಿ ಬ್ಯಾಂಕ್‌ಗಳು ಕೊಡಬಹುದು.ಅಂತೂ ನಮ್ಮ ಹಣದಿಂದ ಕಾರುಬಾರು ಮಾಡಲಿಕ್ಕಿಲ್ಲ.ಇನ್ಯಾರೋ ಕೊಟ್ಟರೆ ಕಾರುಬಾರು ಮಾಡದೇ ಉಳಿಯುವುದೂ ಇಲ್ಲ.

ಈ ಬೃಹತ್ ಸಾಲದ ಬಡ್ಡಿಯನ್ನಾದರೂ ಪಾವತಿಸಲು ನಮ್ಮಿಂದ ಸಾಧ್ಯವೇ ಎಂಬುದನ್ನು ಮಾತ್ರ ಈಗ ಕೇಳಬಾರದು. ಅಂತೂ ಅತ್ತ ಪೂರ್ವಕ್ಕೆ ನದಿ ತಿರುಗಿದಾಗ ಎಣಿಸಿದಂತೆ ಹರಿಯುತ್ತದೆಯೇ ಉದ್ದುದ್ದ ಕಾಲುವೆಗಳಲ್ಲಿ ಎಷ್ಟೊಂದು ನೀರು ಆವಿಯಾಗಲ್ಲ, ಎಷ್ಟು ನೀರು ಇಂಗಲ್ಲ? ನೀರಿನ ಜಗಳ ಜಿಲ್ಲೆಜಿಲ್ಲೆ ಗ್ರಾಮ ಗ್ರಾಮಗಳಿಗೂ ಬರಲಾರದೆಂಬ ಖಾತ್ರಿ ಏನು? ಕೊನೆಗೊಮ್ಮೆ ನೀರು ಅಲ್ಲೂ ಸಲ್ಲಲಿಲ್ಲ, ಇಲ್ಲೂ ಸಲ್ಲಲಿಲ್ಲ ಎಂಬಲ್ಲಿಗೆ ಎಲ್ಲವೂ ಮುಕ್ತಾಯವಾಗಲಿದೆ ಎಂಬುದು ಮಾತ್ರಾ ಸತ್ಯ.

ಸರಕಾರ ಮಾಡೋದೆಲ್ಲಾ ಹಾಗೆಯೇ ಇರುತ್ತೆ ನೋಡಿ.

ಹೌದೂ ನೇತ್ರಾವತಿ ನದಿಯನ್ನು ಇವರೆಂದಂತೆ ತಿರುಗಿಸಲು ಸಾಧ್ಯವಾಗುತ್ತದೆಯೇ ? ತಿರುಗಿಸಿದ ಮೇಲೆ ಎಲ್ಲವೂ ಮೌನವಾಗಿ, ಏನೂ ಆಗಿಲ್ಲ ಎಂಬ ಹಾಗೆ ಉಳಿಯುತ್ತದೆಯೇ? ಇವರು ಪಶ್ಚಿಮ ಘಟ್ಟದಲ್ಲಿ ಕಾಲುವೆ ತೋಡುತ್ತಾರೆ.೨೩೦ ಕಿ.ಮೀ. ಉದ್ದಕ್ಕೆ ಪಶ್ಚಿಮ ಘಟ್ಟವನ್ನು ಸೀಳುತ್ತಾರೆ ಹಾಗೇ ಮಾಡಿದಾಗ..

ನೇತ್ರಾವತಿ ತಾನೇ ತಾನಾಗಿ ಪಶ್ಚಿಮಕ್ಕೂ ಇವರ ಒತ್ತಾಯಕ್ಕಾಗಿ ಪೂರ್ವಕ್ಕೂ ಹರಿಯುತ್ತಾಳೆ.ಇದನ್ನು ಅವಳು ಸಹಿಸೋದು ಸಾಧ್ಯಾನಾ ?

ಆಗ...

ಸುಬ್ರಹ್ಮಣ್ಯ ಮೀಸಲು ಅರಣ್ಯ, ಕಡಮಕಲ್ಲು ಮಳೆಕಾಡು, ಬಿಸಲೆ ಮಳೆಕಾಡು, ಪುಷ್ಪಗಿರಿ ಅಭಯಾರಣ್ಯ, ಭಾಗಿಮಲೆ ರಕ್ಷಿತಾರಣ್ಯ, ಮೂಜೂರು, ಕೊಂಬಾರು, ಕೊಣಾಜೆ, ರಕ್ಷಿತಾರಣ್ಯ, ಕಂಗೇರಿ ಮಳೆಕಾಡು, ಶಿರಾಡಿ, ಶಿಶಿಲ ರಕ್ಷಿತಾರಣ್ಯ, ಮಿಯಾರು ರಕ್ಷಿತಾರಣ್ಯ, ಕಬ್ಬಿನಾಲೆ, ಕೆಂಪೊಳೆ ಮಳೆಕಾಡು, ಕುದುರೆಮುಖ ರಾಷ್ಟ್ರೀಯ ಉದ್ಯಾನ, ಸೋಮೇಶ್ವರ ಅಭಯಾರಣ್ಯ... ಮುಂತಾಗಿ ವಿಶಾಲ ಪ್ರಾಕೃತಿಕ ಜೀವ ಜಗತ್ತನ್ನು ಕದಡಲಿದೆ. ೭೭೧೬ ಹೆಕ್ಟೇರ್ ಪಶ್ಚಿಮ ಘಟ್ಟ ಪ್ರದೇಶ ಮುಳುಗಡೆಯಾಗಲಿದೆ. ಕಾಡಮನೆ, ಎತ್ತಿನಹಳ್ಳ, ಎಡಕುಮೇರಿ, ಕೇರಿಹೊಳೆ, ಹೊಂಗದ ಹೊಳೆ, ಎರುತ್ತಿ ಹೊಳೆ, ಲಿಂಗದ ಹೊಳೆ, ಕುಮಾರಧಾರಾ ಜಲಾನಯನ ಪ್ರದೇಶಗಳಲ್ಲಿ ಶೋಲಾಗಳು, ಹುಲ್ಲುಗಾವಲುಗಳು, ಫ್ಲೋರಾ, ಫೋನಾಗಳು ಮುಳುಗುತ್ತವೆ.ಅಪಾರ ಜೀವ ವೈವಿಧ್ಯಗಳಂತೂ ದಡಬಡ ಆಗುತ್ತವೆ. ಪಶ್ಚಿಮ ಘಟ್ಟವೇ ಅಂಥದ್ದು.

ಈಗಾಗಲೇ ಇಲ್ಲಿ ಹತ್ತರಿಂದ ಹದಿನೈದು ಸಾವಿರ ಬಗೆಯ ಜೀವ ಸಂಕುಲವಿದೆ. ಆ ಪೈಕಿ ಶೇ.೪೦ ಅಳಿವಿನಂಚಿನಲ್ಲಿವೆ. ವಲಸೆ ಹಕ್ಕಿಗಳನ್ನು ಬಿಟ್ಟೂ ಪಶ್ಚಿಮ ಘಟ್ಟದ ಒಡಲಲ್ಲಿ ೯೩೮ ಪಕ್ಷಿ ಪ್ರಭೇದಗಳಿವೆ. ಆ ಪೈಕಿ ಶೇ.೩೬ ಅಳಿವಿನಂಚಿನಲ್ಲಿವೆ. ೩೩೦ ಬಗೆಯ ಬಣ್ಣದ ಚಿಟ್ಟೆಗಳಿವೆ. ಆ ಪೈಕಿ ಶೇ.೧೧ ಅಳಿವಿನಂಚಿನಲ್ಲಿ ಇರುವವು. ನಾಲ್ಕು ಸಾವಿರ ವಿಧದ ಹೂ ಗಿಡಗಳಿವೆ, ಆ ಪೈಕಿ ಶೇ.೪೦ ಅಳಿವಿನ ಹಾದಿಯಲ್ಲಿವೆ. ಪಶ್ಚಿಮ ಘಟ್ಟವೆಂಬ ಈ ಪ್ರಕೃತಿಯ ಸೆರಗನ್ನು ಈಗಾಗಲೇ ದುಶ್ಯಾಸನ ದ್ರೌಪದಿ ಸೀರೆ ಎಳೆದಂತೆ ಎಳೆದೆಳೆದು ಹಾಕಲಾಗಿದೆ. ಗಣಿಗಾರಿಕೆ, ಕಲ್ಲುಕೋರೆ, ರಸ್ತೆ, ರೈಲು ಪೈಪ್‌ಲೈನ್, ಜಲವಿದ್ಯುತ್, ತಂತಿ ,ಬೇಟೆ, ಕಳ್ಳ ಸಾಗಣೆ, ಕ್ರಿಮಿನಾಶಕ, ಸೊಪ್ಪುಸೌದೆ, ಮರಮುಟ್ಟು, ಬೆಂಕಿ, ಅತಿಕ್ರಮಣ, ಕೃಷಿ, ಭೂ ಸವೆತಗಳಿಂದ ಪಶ್ಚಿಮ ಘಟ್ಟ ನಲುಗಿದೆ. ಕರ್ನಾಟಕದಲ್ಲಿ ನಿಜಕ್ಕೂ ಈ ಪಶ್ಚಿಮ ಘಟ್ಟದ ಶೇ.೯೦ ರಷ್ಟು ಪ್ರದೇಶಕ್ಕೆ ಭದ್ರತೆಯೇ ಇಲ್ಲ, ಕಾನೂನಿನ ಸುರಕ್ಷಾ ಚಕ್ರವಿಲ್ಲ.

ಇಂತಿರ್ಪ ಈ ಪಶ್ಚಿಮ ಘಟ್ಟದ ದಟ್ಟಡವಿಯಲ್ಲಿ ಈಗ ನೇತ್ರಾವತಿಯ ಪೂರ್ವಾಭಿಮುಖ ಪಯಣ ಆರಂಭವಾದರೆ ನೇತ್ರಾವತಿಗೂ ನಮಗೂ ಅಧೋಗತಿ..ನಿರ್ಮಾಣ ಕಾರ್ಯದ ಯಂತ್ರಗಳ ಸದ್ದು ಮತ್ತು ಸ್ಫೋಟ ಕಾಲುವೆ, ರಸ್ತೆ, ಅಣೆಕಟ್ಟು ನಿರ್ಮಾಣಗಳಿಂದ ಮೌನ ಮುರಿಯುತ್ತದೆ. ಇದಕ್ಕಾಗಿ ನಿರ್ಮಿಸಿದ ರಸ್ತೆಗಳು ಕಾಡುಗಳ್ಳರಿಗೆ ಸಹಾಯ ಮಾಡುತ್ತವೆ. ಕಾಮಗಾರಿಗೆ ತೆರಳಿದವರು ಕಾಡುಪ್ರಾಣಿಗಳನ್ನು ಹೊಡೆದು ಹೊಟ್ಟೆಗೆ ಹಾಕಿಕೊಳ್ಳುವುದಿಲ್ಲ ಎಂಬುದಕ್ಕೇನು ಗ್ಯಾರಂಟಿ?

ಈ ಅರಣ್ಯ ಪ್ರದೇಶದ ಹುಲಿ, ಚಿರತೆ, ಸಿಂಗಳೀಕ, ಪುನುಗು ಬೆಕ್ಕು, ಬರಿಂಕ ನಿಂದ ತೊಡಗಿ ಹಾರೋತಿ, ರಕ್ಕಸ ಜೇಡ, ನಾಗರ ಹಾವಿನ ತನಕ ಪ್ರಾಣಿ ಸಂಕುಲ ತತ್ತರಿಸಲಿದೆ. ಕೆಂಪುಹೊಳೆ ಪರಿಸರದಲ್ಲಿ ಕಂಡು ಬಂದಿರುವ ಜಗತ್ತಿನಲ್ಲಿ ಇನ್ನೆಲ್ಲೂ ಕಾಣದ ಏಳು ಅಪರೂಪದ ಕಪ್ಪೆ ತಳಿಗಳು ಶಾಶ್ವತವಾಗಿ ನಾಶವಾಗಲಿರುವುದು ಒಂದು ಉದಾಹರಣೆ ಅಷ್ಟೇ.
ಹೇಗೋ ಮಾಡಿ ಅದೊಂದು ದಿನ ನದಿ ಕೊನೆಗೂ ತಿರುಗಿಯೇ ಬಿಟ್ಟಿತು ಎಂದುಕೊಳ್ಳಿ.ಆಗ?ಪಶ್ಚಿಮಕ್ಕೆ ತನ್ನ ಅಚಲ ನಿಲುವಿನಿಂದ ಹರಿಯುವ ನೇತ್ರಾವತಿಯಲ್ಲಿ ಮಳೆಗಾಲವೆಲ್ಲಇನ್ನಷ್ಟು ಕೆಂಪು ನೀರೇ ಹರಿಯುತ್ತದೆ ಹೂಳು ಧಾರಾಳ ಹರಿದು ಬರುತ್ತದೆ. ಕಾಮಗಾರಿ ಸಮಯದ ತ್ಯಾಜ್ಯಗಳು ಕಾಡು ಹಾಗೂ ನದಿ ನೀರನ್ನು ಮಲಿನ ಮಾಡಲಿವೆ. ಇತ್ತ ಓಡೋಡಿ ಕಡಲು ಸೇರುವ ನೀರನ್ನು ತಡೆದ ಪರಿಣಾಮ ಸಮುದ್ರವೇ ನದಿಯತ್ತ ಉಪ್ಪು ನೀರನ್ನು ದೂಡಬಹುದು. ಉಪ್ಪು ನೀರಿನ ಜಾಗ ಹೆಚ್ಚಬಹುದು. ನದಿ ನೀರಿನ ಮೂಲಕ ಮಳೆಗಾಲದಲ್ಲಿ ಸಮುದ್ರ ಸೇರುತ್ತಿದ್ದ ಖನಿಜಾಂಶ, ಆಹಾರ ವಸ್ತುಗಳ ಪ್ರಮಾಣ ಕಡಿಮೆಯಾಗುತ್ತದೆ. ಇದು ಜಲಚರಗಳ ಜೀವ ಚಕ್ರದ ಮೇಲೆ ಪ್ರಭಾವ ಬೀರುತ್ತವೆ. ಮಳೆಗಾಲದಲ್ಲಿ ನದಿಗಳು ಸಮುದ್ರ ಸೇರುವ ಪ್ರದೇಶದಲ್ಲಿ ಮೀನುಗಳ ಸಂತಾನೋತ್ಪತ್ತಿ ನಡೆಯುತ್ತದೆ. ಒಂದೊಮ್ಮೆ ನದಿಗಳ ಮೂಲಕ ಸಮುದ್ರ ಸೇರುವ ನೀರು ಕಡಿಮೆಯಾದರೆ ಅದಕ್ಕೂ ಹಾನಿಯಾಗಬಹುದು..ಪಶ್ಚಿಮ ಘಟ್ಟ ತತ್ತರಿಸಿದ್ದರಿಂದ ಗ್ರೀನ್‌ಹೌಸ್ ಗ್ಯಾಸ್ ಸೂಸುತ್ತದೆ, ಗ್ಲೋಬಲ್ ವಾರ್ಮಿಂಗ್ ಇನ್ನಷ್ಟು ಹೆಚ್ಚಲಿದೆ. ಅದು ಮಳೆಯನ್ನು, ಕರಾವಳಿಯ ಮುಂಗಾರು ಋತುವನ್ನು ಏರುಪೇರು ಮಾಡಬಹುದು. ಈಗಾಗಲೇ ಕರಾವಳಿಯಲ್ಲಿ ಅಂತರ್ಜಲ ಇಳಿದಿದೆ. ಉಪ್ಪು ನೀರು ಒಳಬರುತ್ತಿದೆ. ಅಂತರ್ಜಲ ದೃಷ್ಟಿಯಿಂದ ಹಲವಾರು ಪ್ರದೇಶಗಳನ್ನು ಕಪ್ಪು ಬೂದು ಎಂದು ಗುರುತು ಮಾಡಲಾಗಿದೆ. ಇಡೀ ಮಂಗಳೂರು ಕುಡಿಯುವ ನೀರಿಗೆ ನೇತ್ರಾವತಿಯನ್ನೇ ಅವಲಂಬಿಸಿದೆ. ಈಗಲೇ ದಿನಕ್ಕೆ ಮಂಗಳೂರು ೪೫ ಲಕ್ಷ ಲೀಟರ್ ನೀರು ಕೇಳುತ್ತಿದೆ. ವಿಶೇಷ ಆರ್ಥಿಕ ವಲಯ ಸೇರಿದಂತೆ ದೊಡ್ಡ ಪ್ರಮಾಣದ ಉದ್ದಿಮೆಗಳು ಬರುವುದು ಖಚಿತಗೊಂಡಿರುವುದರಿಂದ ನೀರಿನ ಬೇಡಿಕೆ ಒಂದೆರಡು ವರ್ಷದಲ್ಲಿ ಮೂರ್‍ನಾಲ್ಕು ಪಟ್ಟು ಹೆಚ್ಚಲಿದೆ.

ಕೇವಲ ಕುಡಿಯಲು ಮತ್ತು ಕೃಷಿಗಾಗಿ ನೀರು ಮೊಗೆದಾಗಲೇ ಇತಿಹಾಸದಲ್ಲೇ ಮೊದಲು ಎಂಬಂತೆ ೨೦೦೫ ರಲ್ಲಿ ನೇತ್ರಾವತಿ ನದಿ ಹರಿವು ನಿಲ್ಲಿಸಿದ್ದಳು ಎಂಬುದು ಪರಶುರಾಮನ ಸೃಷ್ಟಿಯಲ್ಲೂ ಕ್ಷಾಮ ಅಡರುತ್ತಿದೆ ಎಂಬುದನ್ನು ಸೂಚಿಸಿದೆ. ತೊರೆಗಳನ್ನು ತಿರುಗಿಸಿದರೆ ಏನು ಗತಿ ಉಳಿದೀತು?

ಇದೊಂದು ವಿಷಯ ನಿಮಗೆ ಗೊತ್ತಾ?
ನದಿ ಜೋಡಣೆ ಅಥವಾ ನದಿ ತಿರುಗಿಸುವ ಈ ಕೈಂಕರ್ಯ ಹೊಸ ಕಲ್ಪನೆಯೇ ಅಲ್ಲ. ಬ್ರಿಟಿಷರು ಯೋಚನೆ ಮಾಡಿ, ಕೈಬಿಟ್ಟದ್ದು ಇದು. ೧೯ನೇ ಶತಮಾನದ ಮಧ್ಯದಲ್ಲಿ ಸರ್ ಆರ್ಥರ್ ಕಾಟನ್ ಮೊದಲಾಗಿ ದಕ್ಷಿಣ ಭಾರತದ ನದಿಗಳನ್ನೆಲ್ಲಾ ಜೋಡಿಸಿ ಬಿಟ್ಟರೆ, ಉದ್ದಕ್ಕೂ ನದಿ ಮಾರ್ಗವೇ ಆಗಿ ಪ್ರಯಾಣಕ್ಕೆ ಅನುಕೂಲ ಎಂದು ಭಾವಿಸಿದ್ದ. ಅದನ್ನು ಕಾರ್ಯರೂಪಕ್ಕಿಳಿಸಲೂ ಶುರು ಮಾಡಿದ್ದ. ಅಲ್ಲಲ್ಲಿ ಒಂದೆರಡು ಜೋಡಣೆ ಕಾಲುವೆ ಆರಂಭವಾದಾಗ ರೈಲು ಸಂಚಾರ ಅಳವಡಿಕೆಯಾಯಿತು. ನದಿ ಯಾನ ನಗೆಪಾಟಲಾಯಿತು. ಯೋಜನೆ ಮುಳುಗಿ ಹೋಯಿತು.ಮುಂದೆ ಸ್ವತಂತ್ರ ಭಾರತದಲ್ಲಿ ಅನೇಕ ಬಾರಿ ನದಿ ಜೋಡಣೆ ಪ್ರಸ್ತಾಪ ಎದ್ದುಬಿದ್ದು ಹೋಗಿದೆ. ೭೦ ರ ದಶಕದಲ್ಲಿ ಗಂಗೆ-ಬ್ರಹ್ಮಪುತ್ರಾ ಜೋಡಣೆ ಮಾಡುವ, ಆ ಮೂಲಕ ಒಂದು ಲಕ್ಷ ಕ್ಯೂಸೆಕ್ ನೀರು ಹರಿಸುವ ಭಾರತದ ಪ್ರಸ್ತಾಪವನ್ನು ಬಾಂಗ್ಲಾ ತಳ್ಳಿ ಹಾಕಿತು. ಡಾ.ಕೆ.ಎಲ್.ರಾವ್ ಸಮಿತಿ ಗಂಗಾ-ಕಾವೇರಿ ಜೋಡಣೆಯ ದೈತ್ಯ ಯೋಜನೆ ರೂಪಿಸಿತ್ತು. ಪಟನಾದಿಂದ ಗಂಗೆಯನ್ನು ಎಳೆದು ನರ್ಮದೆ, ಗೋದಾವರಿ, ಕೃಷ್ಣೆ, ಕಾವೇರಿಗಳಿಗೆ ಜೋಡಿಸುವ ೨೬೪೦ ಕಿ.ಮೀ. ಉದ್ದದ, ೬೦ ಸಾವಿರ ಕ್ಯುಸೆಕ್ಸ್ ಗಂಗಾಜಲವನ್ನು ದಕ್ಷಿಣಕ್ಕಿಳಿಸುವ ಯೋಜನೆ ಹಲವಾರು ಬಾರಿ ಕಡತಗಳಿಂದ ಜೀವ ತಳೆದು ಎದ್ದು ಬರುತ್ತಿದೆ. ಆದರೆ ಸಿಕ್ಕಾಪಟ್ಟೆ ಹಣ ಬೇಕು ಎಂಬ ಕಾರಣಕ್ಕೆ ಅದು ಮತ್ತೆ ಸುಪ್ತಾವಸ್ಥೆಗೆ ಹೋಗುತ್ತಿದೆ.ನದಿ ಜೋಡಣೆಗಾಗಿಯೇ ೧೯೮೨ ರಲ್ಲಿ ರಾಷ್ಟ್ರೀಯ ಜಲಾಭಿವೃದ್ಧಿ ಸಂಸ್ಥೆ ರೂಪಿಸಲಾಗಿತ್ತು. ಅದರ ವರದಿಯಂತೆ ಸರಕಾರ ಟಾಸ್ಕ್^ರ್ಸ್‌ನ್ನು ೨೦೦೨ ರಲ್ಲಿ ರೂಪಿಸಿತ್ತು. ಅದೇ ವರ್ಷ ದೇಶದ ಪ್ರಮುಖ ನದಿಗಳ ಜೋಡಣೆ ಕುರಿತಂತೆ ಸುಪ್ರೀಂಕೋರ್ಟ್ ಅಭಿಪ್ರಾಯಗಳನ್ನು ಆದೇಶ ಎಂದೇ ಭಾವಿಸಿದ್ದೂ ಆಯಿತು. ಇತ್ತ ಟಾಸ್ಕ್^ರ್ಸ್ ೨೦೦೩ ರಿಂದ ಅಧ್ಯಯನ ಆರಂಭಿಸಿ, ಕಾರ್ಯ ಯೋಜನೆ ರೂಪಿಸಿ, ರಾಜ್ಯ ರಾಜ್ಯಗಳ ಸಭೆ ನಡೆಸಿ, ಯೋಜನಾ ವರದಿ ಸಿದ್ದಪಡಿಸಿ, ೨೦೧೬ ರ ವೇಳೆಗೆ ನದಿ ಜೋಡಣೆ ಕಾರ್ಯಗತವೇ ಮಾಡುವ ಟೈಂಟೇಬಲ್ ತಯಾರಿಸಿದೆ.

ಅದರಲ್ಲಿ ನೇತ್ರಾವತಿಯೂ ಇದೆ.

20070702

ನಾಲ್ಕು ಸಾಲು


ನಾಲ್ಕೇ ನಾಲ್ಕು ಸಾಲು ಇದು. ಕವನ , ಕಾವ್ಯ ಅಥವಾ ಇನ್ಯಾವುದೋ ಎಂದು ಆರೋಪಿಸಬೇಡಿ....

ಸುಮ್ಮನೇ ನಾನು ನನಗಿಷ್ಟ ಎಂದು ಬರೆದೆ.ಅದು ನಿಮ್ಮ ಇಷ್ಟವೂ ಆದೀತು..


ಮುಗಿಲನ್ನು ನೋಡಿ

ಕಾಲಾಂತರದಿಂದ ಜನ

ಕಾವ್ಯ ಬರೆದರು

ಚಿತ್ರ ಬಿಡಿಸಿದರು

ಯಾರೂ

ಮುಗಿಲನ್ನು ಮುಟ್ಟಲೇ ಇಲ್ಲ

ಮುಗಿಲು

ಸ್ಪರ್ಶಾತೀತಒಳಗೊಂದು

ಸಣ್ಣ ದೀಪಕ್ಕೆ

ಪೂರ್ತಿ ಬೆಳಕಾಗಿದ್ದವಳು

ಹೊರಗಿನ ಕಡುಗತ್ತಲೆಯಲ್ಲಿ

ಬೀಸಿದ ಮಿಂಚ ಹಿಡಿಯಲೋಡಿದಳು

ಆಮೇಲೆ

ಒಳಗಿನ ದೀಪ ಉರಿಸಲು

ಅವಳಿಗೆ .....

ಆಗಲೇ ಇಲ್ಲ.ಬಿಸಿಲಲ್ಲಿ ನಡೆಯತ್ತಾ

ಅವನು ಬಸವಳಿದ

ಮಳೆ ಬರಲಿ ಎಂದ

ಮಳೆ ಬಂತು

ಅವನು ಮಳೆಯಲ್ಲಿ ನೆನೆದ

ಆಮೇಲೆ ಬಿಸಿಲಿಗಾಗಿ

ಹುಡುಕಾಡಿದ

ಬಿಸಿಲು ಮಳೆಯಲ್ಲಿ

ಲೀನವಾಗಿತ್ತು.

ಅವನು ಕಾಣಲಿಲ್ಲ..!ಇನ್ನೊಂದು ಊರಿನಲ್ಲೂ

ಇದೇ ಬಾನು

ಇದೇ ಸೂರ್‍ಯ

ಮತ್ತು ತಾರೆ ಚಂದಿರ ಹೀಗೇ..

ತೋರಬಹುದು.

ಆದರೆ

ಅಲ್ಲಿ ಅದನ್ನು ಕಾಣುವ

ಮನಸು

ಈ ಊರಿನ

ಬಾನು ಅಥವಾ ತಾರೆಗಳಂತೆ

ಇರಲಾರದು

ಇದೇ ಜಗತ್ತಿನ ಸಂಹಿತೆ.