20070626

ಮಳೆಯೊಳಗಿನ ಪ್ರೀತಿ


ನೀಲಿ ಪರದೆಯೇ ಕಾಣೆಯಾಗಿದೆ.

ಸೂರ್ಯ ಕೂಡಾ ತನ್ನ ಆಡಂಬರ ಬಿಟ್ಟು ತಣ್ಣಗಾಗಿದ್ದಾನೆ.

ಮಳೆಯ ಕಾರಣವೇ ಅಂಥದ್ದು. ಅದು ಪ್ರಕೃತಿ-ಪುರುಷ ಸಮ್ಮಿಲನದ ಬಹಿರಂಗ ಪ್ರದರ್ಶನ. ಕಾಯುತ್ತಾ ಕಾಯುತ್ತಾ ಬಳಲಿ ಬೆಂಡಾಗಿ ಬಿಸಿಯೇರಿ ಒಡೆದು ಚೂರಾಗಿ ಬೋಳಾಗಿ ಬೆತ್ತಲಾದ ಭೂಮಿಗೆ ಮಳೆಯ ಧಾರೆ ಅಪ್ಪ್ಪುಗೆ, ಜೀವ ಚೈತನ್ಯದ ಸಿಂಚನ, ಪ್ರೇಮೋತ್ಸವದ ತರ್ಪಣ.

ಅದು ಧಾರಾಕಾರ ಮಿಲನ. ಅದು ತುಂಡರಿಸಲಾಗದ, ಮೊಗೆದಷ್ಟು ಮುಗಿಯದ, ಸ್ಪರ್ಶ ಸಾನ್ನಿಧ್ಯದ ವರ್ಷೋತ್ಕರ್ಷ !

ವಾವ್ !

ಅದು ಮಳೆ.

ಮಳೆ ಭೂಮಿಗೆ ಬೀಳದೆ ಇನ್ನೆಲ್ಲಾದರೂ ಬೀಳುವುದನ್ನು ಊಹಿಸಲೂ ಸಾಧ್ಯವಿಲ್ಲದಷ್ಟು ಮಳೆ ನಮ್ಮದಾಗಿದೆ. ನಮ್ಮ ಮನಸ್ಸಿನಾಳದ ಪ್ರೀತಿಯ ಕರೆಯಾಗಿದೆ. ಅದರಲ್ಲೇ ನಮ್ಮ ಹೃದಯದ ಪ್ರೀತಿಯ ಸೆಲೆ ಚಿಮ್ಮಿ, ಕೆರೆ ತುಂಬುತ್ತದೆ.

ಬರೀ ಮಳೆ ಮಾತ್ರ ಇಲ್ಲಿ ಅಲ್ಲ. ಮಳೆ ತನ್ನ ಜೊತೆಗೆ ಏನೆಲ್ಲಾ ತರುತ್ತದೆ ನೋಡಿ ; ಒಂದು ಪುಲಕವೆಬ್ಬಿಸುವ ಕುಳಿರ್ಗಾಳಿ, ಒಂದು ಬೋಗುಣಿ ತುಂಬಾ ಮಂಜಿನ ರಾಶಿ. ಜೊತೆಗೊಂದಿಷ್ಟು ಚಳಿ, ಮಂದ ಬೆಳಕಿನ ಗೋಲಿ !

ಮಳೆ ಅಂದರೆ ಮಳೆ ಮಾತ್ರವಲ್ಲ. ಮಳೆ ಬಿಟ್ಟು ಹೋಗುವ ಇಬ್ಬನಿ ಅಥವಾ ಮಂಜು ಅಥವಾ ಹಿಮವರ್ಷ ಬೆಟ್ಟ ಸಾಲು ಮರ.

ಎಲೆ ಎಲೆಗಳ ಸೆರೆಯಲ್ಲಿ ಸರಿದುಕೊಂಡು ಪೂರ್ತಿ ಆವರಿಸಿ ನಿಂತಾಗ ...........

ಪ್ರೀತಿಯ ಜೋಡಿಗೆ "ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತ s’ ಎಂದು ಕವಿ ಬೇಂದ್ರೆ ಹೇಳಿದ ಅನುಭವ.

ಆ ಮಳೆಯ ಜಳಕಕ್ಕೆ ತಲೆಯೊಡ್ಡಿದ ಬೆಟ್ಟದ ಮೈ ತುಂಬಾ ನೀರ ತೊರೆ ಪ್ರೀತಿಯ ಉತ್ಸವಕ್ಕೆ ಅಮಿತೋಪಖ್ಯಾನ !

... ಇಳೆಗೂ ಬಾನಿಗು ಮಳೆ ಜೋಕಾಲಿ..... ತೂಗಿದೆ, ತಂಗಿದೆ ಚೆಲುವು’ ಎಂದು ಕವಿ ಮಳೆಯನ್ನು ನೆನೆದು ಬರೆದದ್ದು ಓದಿದರೆ ಭಳಿರೆ, ಭಾಪುರೇ ಎಂದನಿಸುತ್ತದೆ.

ಮಳೆಯೆಂಬ ದಢಸಿ ಸೃಷ್ಟಿಸುವ ಉನ್ಮಾದ ಅಪಾರ. ಅದು ಪ್ರೇಮ ಲಹರಿಯೂ ಹೌದು, ವಿರಹ ಕಾವ್ಯವೂ ಹೌದು. ಮಳೆಯ ಬಿರುಸಿನಲ್ಲೇ ಗೆಳತಿಯ ಹಂಬಲ, ಮಳೆಯ ಏಕತಾನತೆಯಲ್ಲೇ ಗೆಳೆಯನ ವಿರಹ.

"ನೀರೇ ಹರಿದಿದೆ, ನೀರೇ ಬೆರೆದಿದೆ, ನೀರೇ ಕರೆದಿದೆ ಮೊರೆದು ಯಾರೆ ? ಎಂದರು, ನೀರೇ ಬರುವುದು ಬೆನ್ನಿನ ಹಿಂದೆಯೆ ಸರಿದು’ ಎಂದು ಚೆನ್ನವೀರ ಕಣವಿಯವರ ಸಾಲು ಇಲ್ಲಿ ನೆನಪಾಗುತ್ತದೆ.

ಮಳೆ ಸೃಷ್ಟಿ ಕ್ರಿಯೆಯ ಮುನ್ನುಡಿ. ಕಾದ ನೆಲದಲ್ಲಿ ಮುಸುಕು ಹೊದ್ದು ಮಲಗಿದ ಜೀವಧಾತು ಮಳೆಯ ಸ್ಪರ್ಶಕ್ಕೆ ಅರಳಿಕೊಳ್ಳುತ್ತದೆ.ಅಂತೆಯೇ ಮನಸ್ಸು, ದೇಹಗಳೆಲ್ಲಾ ಮಳೆಯ ಬಾಗಿನಕ್ಕೆ ಬೆಚ್ಚಗೆ ಟಿಸಿಲೊಡೆದುಕೊಳ್ಳುತ್ತದೆ. ಜೊತೆಗೊಂದು ಬೆಂಬಿಡದ ಹಂಬಲ, ಆರ್ದ್ರತೆ ನಮ್ಮದಾಗಿಬಿಡುತ್ತದೆ. ಯಾವುದೋ ಕನಸಿನಲಿ ಮಳೆಯ ಸದ್ದಿನ ಜೊತೆ ಪಯಣ. ಮಂಜಿನ ಹರಹು ಹೊದ್ದುಕೊಂಡು ಕುಳಿರ್ಗಾಳಿಯ ಕಲರವಕ್ಕೆ ಕಿವಿ ಇಟ್ಟ ಪ್ರಕೃತಿಯ ಪ್ರೀತಿಯಲ್ಲಿ ಕರಗುವುದು ಮತ್ತದೇ....
ಮಳೆಯ ಬೆರಗಿನಲ್ಲಿ ನಿಂತು ಆ ಮಾಯಕದ ಮಳೆಗೂ, ಆ ಮೋಹಕ ಪ್ರೀತಿಗೂ ತಳಕು ಹಾಕಿಕೊಂಡರೆ ಅರೆ, ಮಳೆ ಯಾವುದು, ಪ್ರೀತಿ ಯಾವುದು ಗೊತ್ತೇ ಆಗದಷ್ಟು ಜೊತೆಗಿದ್ದಂತಾಯಿತು.

ಮಳೆಗೊಂದು ಭೋರ್ಗರೆತ. ಪ್ರೀತಿಗೂ ಒಂದು ಜಳಕ.

ಮಳೆ ಆಗೊಮ್ಮೆ ಮಂದಗಮನೆ, ಮತ್ತೊಮ್ಮೆ ಸೋನೆಧಾರೆ, ನೋಡುತ್ತಾ ಹನಿಗುಟ್ಟು, ಹಬ್ಬಿ ನಲಿಯುವ ಮಂಜು, ಅಷ್ಟನ್ನು ಆವರಿಸಿಕೊಳ್ಳುವ ಮೊದಲೇ ಅಗೋ ಮುಸಲಧಾರೆ.

ಪ್ರೀತಿಯೂ ಹೀಗೆಯೇ ಅಲ್ಲವೇ ? ಆಗೊಮ್ಮೆ ಜಿನುಗಿ, ಈಗೊಮ್ಮೆ ಹರಿದು, ಮತ್ತೊಮ್ಮೆ ಮಂದ ಮಂದ್ರ ಸ್ಥಾಯಿ, ಆವರಿಸಿಕೊಂಡಾಗ ಅಗೋ ವಿಪುಲಧಾರೆ !

ಮಳೆ ಸೃಷ್ಟಿ ಕ್ರಿಯೆಯ ಮುನ್ನುಡಿ, ಪ್ರೀತಿ ಜೀವ ಚೈತನ್ಯದ ಪರಿವಿಡಿ. ಮಳೆ ಮಿಲನದ ಸಂಕೇತ, ಪ್ರೀತಿಗೆ ಮಿಲನವೇ ಸಂದೇಶ. ಮಳೆ ಇಲ್ಲದ ಗಿಡವಿಲ್ಲ, ಮೊಗ್ಗಿಲ್ಲ, ಹೂವಿಲ್ಲ. ಪ್ರೀತಿ ಇಲ್ಲದೆ ಹೂವು ಅರಳುವುದೇ ಇಲ್ಲ.

ಮಳೆ ಹನಿಹನಿದು, ಹರಿ ಹರಿದು ಇಂಗುತ್ತಾ ಬಿಟ್ಟು ಹೋದ ಆರ್ದ್ರತೆಯಲ್ಲಿ ಭೂಮಿಗೆ ಸಾಕ್ಷಾತ್ಕಾರದ ನೆನಪುಗಳ ಒತ್ತಣಿಕೆ ; ಪ್ರೀತಿಯೂ ಹೃದಯದಲ್ಲಿ ಹನಿದು, ಹರಿದಿಂಗಿ, ಉಳಿಸುವ ತೇವದಲ್ಲಿ ನಿರಂತರ ಸಂಭ್ರಮಗಳ ಮುಚ್ಚಣಿಕೆ !

ಮಳೆ ಜೀವವಾಹಿನಿ, ಪ್ರೀತಿಯೂ ಜೀವವಾಹಿನಿ.

ಹೀಗೆ ಪ್ರೀತಿ ಮಳೆಯೊಳಗೆ ಅಡಕ, ಮಳೆ ಪ್ರೀತಿಯೊಳಗೆ ಬಂಧಿತ.

ಮಳೆಯ ಜೊತೆಗಾರ ಚಳಿ, ಪ್ರೀತಿಯ ಜೊತೆಗಿರೋದು ಚಳಿ !

"ಯಾರ ನಿಟ್ಟುಸಿರ ಬೇಗೆ ಹಬ್ಬುತಿದೆ ವನ ವನ ಕುಂಜ ನಿಕುಂಜ ?ಯಾರ ಅಂದುಗೆಯ, ಸೊಂಟ ಗಂಟೆಗಳ ಕಿಣಿಕಿಣಿ ಗಣಗಣ ನಾದ ?’

ಒಂದು ಮಳೆಗೆ ಮುನ್ನ ಅಂಧಕಾರ ಕವಿದು, ಮುಗಿಲ ಸರಹದ್ದಿನಲ್ಲಿ ದೌಡು, ಮಿಂಚು ಗೊಂಚಲು, ಗುಡುಗು, ಬಳಿಕ ಮಳೆಯ ನಿನಾದ. ಅಲ್ಲಿ ಮೌನಕ್ಕೆ ನೆಲೆಯಿಲ್ಲ. ನೋಡುತ್ತಾ ನೋಡುತ್ತಾ ಮಳೆಯ ಧಾರೆಯೇ ಮೌನವಾಗುತ್ತದೆ. ಆ ಏಕತಾನತೆಯಲ್ಲೇ ಮನಸ್ಸು ಹುದುಗಿ, ಮೌನ ಆವರಿಸಿಕೊಳ್ಳುತ್ತದೆ.

ಶಬ್ದದಲ್ಲೇ ನಿಶ್ಯಬ್ದ ರೂಪುಗೊಳ್ಳುತ್ತದೆ.

ಪ್ರೀತಿಯಲ್ಲೂ ಹೀಗೆ ಆಗುತ್ತದೆ. ಅದು ಹುಟ್ಟುವ ಮುನ್ನ ಒಂದು ಕತ್ತಲಿರುತ್ತದೆ. ಬದುಕಿನ ಆ ತಮದಲ್ಲೇ ಮಿಂಚಿನ ಚಮತ್ಕಾರವಾಗುತ್ತದೆ, ನಿರ್ಣಯ ನಿರ್ಧಾರಗಳಲ್ಲಿ ಮನಸ್ಸು ಸಿಡಿಲು ಗುಡುಗುಗಳ ಸೆಲೆಯಾಗುತ್ತದೆ. ಮತ್ತೆ ಹುಟ್ಟುವುದೇ ಪ್ರೀತಿ ಅದು ಹನಿಹನಿಯಾಗಿ, ಸೋನೆಯಾಗಿ, ವರ್ಷಧಾರೆಯಾಗಿ ಸುರಿದಾಗ ಪ್ರೀತಿಸೋ ಜೀವ ಶರಣಾಗುತ್ತದೆ.

ಪ್ರೇಮ ವರ್ಷಕ್ಕೆ ಮನಸ್ಸು ಮೈಯೊಡ್ಡುತ್ತದೆ. ಅದರ ನಿರಂತರ ಧಾರೆಯ ಏಕತಾನತೆಯಲ್ಲೂ ಪ್ರೀತಿ ಗುಪ್ತಗಾಮಿನಿಯಾಗುತ್ತದೆ.

ಪ್ರೀತಿಯನ್ನು ಮಳೆಯಿಂದ, ಮಳೆಯನ್ನು ಪ್ರೀತಿಯಿಂದ ಬಿಡಿಸಿಡೋದು ಹೇಗೆ ?

ಪ್ರೀತಿ ಇಷ್ಟಕ್ಕೂ ನಿಂತ ನೀರಲ್ಲ, ಅದು ನಿರಂತರ ಪ್ರವಾಹ, ಮಳೆಯೂ ಹಾಗೇ, ಅದು ಹರಿತ.

ನಿಂತದ್ದು ಮಳೆಯಾಗಲ್ಲ, ಹರಿಯದಿರೋದು ಪ್ರೀತಿಯಾಗಲ್ಲ !

20070619

ನೀವೂ ಪ್ರೀತಿಸ್ತೀರಾ ? ಯಾರನ್ನೂ ಅಂತ ಕೇಳಬಹುದಾ?


ಎಲ್ಲಾ ಪ್ರೀತಿಗಾಗಿಯೇ...

ನಿಮ್ಮ ಬದುಕಲ್ಲಿ ಎಂಥೆಂಥವರು ಬಂದು ಹೋಗುತ್ತಾರೆ.

ಕೆಲವರು ಕೆಲ ಕಾಲ ಇರುತ್ತಾರೆ.

ಮತ್ತೆ ಕೆಲವೇ ಮಂದಿ ಬಂದವರು ಹೋಗುವುದೇ ಇಲ್ಲ.ಇನ್ನೂ ಕೆಲವರು ಹೋಗು ಎಂದರೆ ಹೋಗಲ್ಲ.

ಕೆಲವರು ಹೋಗಬೇಕೆಂದು ನಿಮಗೆ ಅನಿಸುವುದೇ ಇಲ್ಲ.

ಮತ್ತೆ ಕೆಲವೇ ಕೆಲವರು ಹೋದಾಗ ಹೋದರಲ್ಲಾ ಎಂದು ಆಗಿಬಿಡುತ್ತದೆ.

ಇದು ಒಂಥರಾ ಮನೆ ಇದ್ದ ಹಾಗೇ .

ಮನ-ಮನೆ ನಡುವೆ ಎಷ್ಟೊಂದು ಕಡಿಮೆ ಅಂತರ!!

ಮನೆಯೊಳಗೆ ನಾವು ಯಾರನ್ನೆಲ್ಲಾ ಹೇಗೆಲ್ಲಾ ಬರಮಾಡಿಕೊಂಡು ಯಾವ ಬಗೆಯಲ್ಲೆಲ್ಲಾ ಉಪಚರಿಸುತ್ತೇವೆಯೋ ಹಾಗೇ ಮನದಲ್ಲೂ...

ಆದರೆ ನಾವು ಕೊನೆಗೂ ಪ್ರೀತಿಸಲು ಉಳಿಯುವುದು ಒಂದು ಜೀವ ಮಾತ್ರಾ .

ಇನ್ನೊಂದು ಇರುವುದೇ ಇಲ್ಲಾ.

....ಒಂದಕ್ಕಿಂತ ಹೆಚ್ಚು ಬಿಡಿ, ಎರಡನೆಯ ಜೀವ ಎಂದು ಪ್ರೀತಿಯಲ್ಲಿ ಇಲ್ಲವೇ ಇಲ್ಲ.ಇದ್ದರೆ ನೀವು ಪ್ರೀತಿ ಮಾಡಿತ್ತೀರಿ ಎಂದು ಹೇಳಲಾಗದು. ನಿಮ್ಮದು ಪ್ರೀತಿಯಲ್ಲ,ಅದು ನಿಮ್ಮ ಅಂತ್ಯಕ್ಕೆ ನೀವೇ ಬರೆಯುವ ಶಾಯಿರಿ ಅಷ್ಟೇ.

ಹಾಗಾದರೆ ನೀವು ಅವಳನ್ನು ಅಥವಾ ಅವನನ್ನು ಪ್ರೀತಿಸುತ್ತಿದ್ದೀರಿ ಎಂದು ನೀವೇ ತಿಳಿದುಕೊಳ್ಳುವುದು ಹೇಗೆ?

ಹೀಗೆ.

ಈ ಹನ್ನೆರಡು ಸೂತ್ರಗಳನ್ನು ಓದಿ ನೋಡಿ, ನಿಮಗೇ ಗೊತ್ತಾಗುತ್ತದೆ...!!

೧.ಅಷ್ಟೂ ಹೊತ್ತೂ ಆ ರಾತ್ರಿ ಮಾತನಾಡಿ ಫೋನ್ ಇಟ್ಟ ಮೇಲೂ ನಿಮಗೆ ಏನೋ ಮಿಸ್ ಮಾಡಿಕೊಂಡ ಹಾಗಾಗುತ್ತದೆ.

೨.ಅವಳ/ನ ಜೊತೆ ಮಾತ್ರಾ ನೀವು ನಡೆಯುವಾಗ ನಿಧಾನಕ್ಕೆ ವಾಕ್ ಮಾಡುತ್ತೀರಿ.

೩.ಏಕೋ ಅವನು/ಳು ಜೊತೆಗಿದ್ದಾಗ ನಿಮಗೆ ಒಂಥರಾ ನಾಚಿಕೆ.

೪.ಅವಳ/ನ ಸ್ವರ ಕೇಳಿದೊಡನೆ ನಿಮಗೆ ಸಣ್ಣ ನಗು.

೫.ನೋಡಿದೊಡನೆ ಸುತ್ತಾ ಮುತ್ತಾ ಇನ್ಯಾರೂ ನಿಮಗೆ ಕಾಣಿಸುವುದಿಲ್ಲ.ಅವಳೊಬ್ಬಳೇ,ಅವನೊಬ್ಬನೇ.

೭.ಸದಾ ಅವಳ/ನದ್ದೇ ಯೋಚನೆ.

೮.ಅವಳು\ನು ನೋಡಿದಾಗಲೆಲ್ಲಾ ನಿಮಲ್ಲೊಂದು ನಗೆಯ ಮಿಂಚು.

೯.ಅವಳನ್ನು ಅಥವಾ ಅವನನ್ನು ನೋಡಲಿಕ್ಕಾಗಿ ನೀವು ಏನೂ ಮಾಡಲು ರೆಡಿ.

೧೦.ಇದನ್ನು ಓದುತ್ತಾ ಇರುವಾಗ ನಿಮ್ಮ ಮನದಲ್ಲಿ ಇರುವುದು ಅದೇ ಜೀವದ ಬಿಂಬ.

೧೧.ನೀವು ಇದನ್ನು ಓದುತ್ತಾ ಎಷ್ಟೊಂದು ಗರ್ಕರಾಗಿದೀರಿ ಎಂದರೆ ೬ನೇ ನಂಬರ್ ತಪ್ಪಿದ್ದು ನಿಮಗೆ ಗೊತ್ತೇ ಇಲ್ಲ.

೧೨.ಹೌದಾ ಅಂತ ಸ್ಕ್ರೋಲ್ ಮಾಡಿ ನೋಡಿದಿರಿ,ಅಲ್ವಾ ,ಅದೋ ಮನದಲ್ಲಿ ಒಂದು ಮಂದಹಾಸ.

.....

ಈಗ ಹೇಳಿ ನೀವು ನಿಜಕ್ಕೂ ಪ್ರೀತಿಯಲ್ಲಿ ಮುಳುಗಿದ್ದೀರಿ ಅಲ್ವಾ?

well..

thats LOVE!!

20070613

ರಾಧೆ...ಪ್ರೀತಿಯ ಧಾರೆ
ಕಾಯೋ ಸುಖವನ್ನು ನೆನೆದಾಗಲೆಲ್ಲಾ ರಾಧೆ ನೆನಪಾಗುತ್ತಾಳೆ.


ರಾಧೆ ತನ್ನ ಕನ್ನಯ್ಯನಿಗಾಗಿ ಅದೆಂಥಾ ಕಾದಿದ್ದಳು!


ಆಕೆ ಕೃಷ್ಣನಿಗಾಗಿ ಕಾದು ಕುಳಿತ ಪರಿ ಯಾವ ಪ್ರೇಮಿಗಳಿಗೂ ಬೇಡ,ಅಥವಾ ಕಾಯೋರಿಗೆಲ್ಲಾ ಅದು ಒಂದು ಪಾಠ.


ಇಷ್ಟಕ್ಕೂ ರಾಧೆ ಕೃಷ್ಣನ ಮೊದಲ ಗೆಳತಿಯಾ?ರಾಧೆಗೆ ಆತನೇ ಮೊದಲ ಗೆಳೆಯನಾ?


ಎರಡೂ ನಿಜ.


ಅವರಿಬ್ಬರು ಮೊದಲ ಪ್ರೇಮಿಗಳು.ಪ್ರೇಮದ ಹಪಹಪಿಯನ್ನು ತಂತಮ್ಮ ತುಂಟತನದಲ್ಲಿ, ಆಕಾರದಲ್ಲಿ,ಅವಕಾಶದಲ್ಲಿ ಅಚಾನಕತೆಯಲ್ಲಿ ಅನುಭವಿಸಿ,ಅನುಭಾವಿಸಿ ಕೊಂಡವರು.


....ರಾಧೆ ಮೊದಲಾಗಿ ಕೃಷ್ಣನನ್ನು ಸ್ಪರ್ಶಿಸಿದ ಕ್ಷಣ ಕೃಷ್ಣಾವತಾರದಲ್ಲಿ ವಿಪುಲವಾಗಿ ವರ್ಣಿತವಾಗಿದೆ.ಕೈ ಕಾಲನ್ನು ಒರಳಿನಿಂದ ಬಿಗಿದು ಯಶೋದೆ ಹೋಗಿದ್ದರೆ ಕೃಷ್ಣ ಒರಳಿನ ಸಮೇತ ಓಡಿ ಹೋಗಿದ್ದಾನೆ.ಆ ಒರಳನ್ನು ಅವನಿಂದ ಬಿಡಿಸಿದವಳೇ ರಾಧೆ.ಅದೇ ಮೊದಲ ಬಾರಿಗೆ ರಾಧೆ ಕೃಷ್ಣನನ್ನು ಕಂಡಿದ್ದಳು,ಕೃಷ್ಣನೂ..


"ಪುಟ್ಟ ಪುಟ್ಟ ಕೈಗಳ, ಕೋಮಲ ಅವಯವಗಳ ಮಟ್ಟಸದ ಅಂಥ ಪುಟ್ಟ ಚೆಲುವೆಯನ್ನು ಕೃಷ್ಣ ಹಿಂದೆಂದೂ ನೋಡಿರಲಿಲ್ಲ" ಎಂದು ಕೃಷ್ಣಚರಿತೆಯಲ್ಲಿ ಕವಿ ಹೇಳುತ್ತಾನೆ.ರಾಧೆ ಹಗ್ಗವನ್ನು ಸರಿಮಾಡಿ ಧೂಳನ್ನು ಒರಸಿದಾಗ ಕೃಷ್ಣನಿಗೆ ಕಚಕುಳಿ ಇಟ್ಟಂತೆ ಆಯಿತಂತೆ.


"ಏನೋ ಒಂದು ನಿಮಿರು,ಹಿಂದೆ ಯಾವತ್ತೂ ಹೀಗೆ ಆಗಿರಲಿಲ್ಲ.."


ಆಗಲೇ ಕೃಷ್ಣ ಉಳಿದ ಗೋಪಿಕೆಯರ ಬಳಿ ಇದ್ದ ಹಾಗೇ ಇವಳ ಬಳಿ ಇರಬಾರದು ಎಂದು ನಿರ್ಧರಿಸುತ್ತಾನೆ.ಅವಳ ಸಂಗಡ ತುಂಟ ಮಾತು ಆಡಬೇಕು,ಅವಳನ್ನು ಚಿವುಟಬೇಕು ಎಂದನಿಸಿಕೊಳ್ಳುತ್ತಾನೆ.ರಾಧೆಯನ್ನು, ಅವಳ ಅಂದವನ್ನು, ಆತ್ಮವನ್ನು ಹಾಗೇ ಕುಡಿದುಬಿಡಬೇಕೆನಿಸುತ್ತದೆ ಅವನಿಗೆ.


ಅಂದು ಗೋಕುಲದಿಂದ ಅಣ್ಣನ ಜೊತೆ ಹೊರಟ ರಾಧೆ,"ಎಂದಾದರೂ ಬೃಂದಾವನಕ್ಕೆ ಬಾ" ಎನ್ನುತ್ತಾಳೆ. "ಖಂಡಿತಾ" ಎನ್ನುತ್ತಾನೆ ಕ್ರಷ್ಣ. ಹಾಗೇ ಹೋಗುತ್ತಿರುವ ರಾಧೆಯನ್ನು ನೋಡುತ್ತಾ, "ಎಂಥಾ ಗೆಳತಿ ಹೊರಟೇ ಹೋದಳಲ್ಲಾ" ಎಂದು ತನ್ನೊಳಗೆ ಒಂದು ಬಾರಿ ಹಲುಬುತ್ತಾನೆ.


ಅಂದಿನಿಂದ ರಾಧೆ ಕೃಷ್ಣನಿಗಾಗಿ ಕಾದಳು.ಹಲುಬಿದಳು.ಕರೆದಳು, ಕೈ ಬೀಸಿದಳು.


ಕೊನೆಗೊಮ್ಮೆ ಕೃಷ್ಣ ಬರುತ್ತಾನೆ .


ಆಗಲೇ ಆತ ರಾಧಾಕೃಷ್ಣ !!


ರಾಧೆಯ ಕನ್ನಯ್ಯ.ಬಂದದ್ದು ವಸಂತ ಕಾಲದಲ್ಲಿ.ವಸಂತದ ಸಂಭ್ರ್ರಮದಲ್ಲಿ ಹರುಷ ಜೀವಿ ರಾಧೆ.ಆದರೂ ಏನೋ ದುಃಖ,ಕನ್ನಯ್ಯನಿಗಾಗಿ ಕಾತರ.ಅವಳ ಓರಗೆಯ ಹುಡುಗಿಯರಿಗೆ ಮದುವೆ ಎಂದರೆ ಪುಲಕ.ರಾಧೆಗೋ ಬರೀ ಉದಾಸೀನ.ಹೂವು,ಹಣ್ಣು ಹಕ್ಕಿಯ ಹಾಡು,ಆಕಳು,ನವಿಲು..ಅವಳ ಹೃದಯ ತುಂಬಿವೆ,ಜೊತೆಗೆ ಕನ್ನಯ್ಯನ ಅಮೋಘ ಸೆಳೆತ.


ಕಾಯೋ ಸುಖ ಇಷ್ಟಕ್ಕೆ ಉಳಿದಿಲ್ಲ.


ಬೃಂದಾವನದಲ್ಲಿ ರಾಧೆ-ಕೃಷ್ಣರ ರಸಮಯ ಜೀವನ ಕಾಯೋ ಸುಖದ ಉತ್ತರ ಭಾಗ.ಆ ತನಕ ಕಾದು ಕಾದು ಬೆಂದು ಹೋಗಿದ್ದ ರಾಧೆಯೆಂಬ ಆ ಕೋಮಲ ಜೀವಕ್ಕೆ ಕೃಷ್ಣನ ಮನಸ್ಸು,ಸ್ಪರ್ಶ,ಚೇತನ,ಪ್ರೀತಿಯ ಧಾರೆ.ಅದು ಅವಳ ಪಾಲಿಗೆ ನಿತ್ಯ ನಿರಂತರ ಝರಿ.


ತನ್ನ ಗುರು ಗಗನಾಚಾರ್ಯರ ಮುಂದೆ ಕೃಷ್ಣ ರಾಧೆಯ ಕುರಿತು ಹೇಳುವ ಮಾತುಗಳು ಅವನ ಪ್ರೀತಿಯ ಉತ್ಕಟತೆಗೆ ಉದಾಹರಣೆ.


"....ಅವಳು ನನಗಾಗಿ ಕಾಯದ ದಿನ ಒಂದು ದಿನವೂ ಇಲ್ಲ.ಅವಳ ಮನಸ್ಸಿನಲ್ಲಿ ನನ್ನ ಯೋಚನೆಯಿಲ್ಲದ ಒಂದು ಗಳಿಗೆಯೂ ಇಲ್ಲ. ಈ ಎಂಟು ವರ್ಷ ಅವಳು ನನ್ನ ಹಂಬಲದಲ್ಲಿ ಬದುಕಿದ್ದಾಳೆ.ಅದಕ್ಕಾಗಿ ಅಲ್ಲದಿದ್ದರೆ ಅವಳು ಉಸಿರಾಡುತ್ತಲೇ ಇರಲಿಲ್ಲ. ಅವಳ ನಗು ನನಗಾಗಿ ಮಾತ್ರಾ."


ಕೊನೆಗೊಮ್ಮೆ ಆಗೋದು ಗೋಪಾಲನ ಗೋಕುಲ ನಿರ್ಗಮನ.ಕೃಷ್ಣ ಮಥುರೆಗೆ ಹೊರಟು ನಿಂತಿದ್ದಾನೆ.ಎದುರಿಗೆ ರಾಧೆ.ನಾಳೆ ಹೊರಡುತ್ತಿದ್ದಾನೆ.ರಾಧೆಗೆ ಕೃಷ್ಣ ಹೇಳುತ್ತಾನೆ, ಆ ತನಕದ ಗುಟ್ಟನ್ನು.


......ತಾನು ಬರಿಯ ಗೊಲ್ಲನಲ್ಲ, ರಾಜಕುಮಾರ..


ರಾಧೆ ಬೆಚ್ಚಿ ಬೀಳುತ್ತಾಳೆ.


ರಾಜನಾಗಿ ತನ್ನ ಕನ್ನಯ್ಯನನ್ನು ತಾನು ಒಪ್ಪುವುದು ಬಿಡು, ಕಲ್ಪಿಸಿಯೇಕೊಳ್ಳಲಾರೆ ಎನ್ನುತ್ತಾಳೆ.ಕೊಳಲು ಹಿಡಿದ ಆ ತುಂಟ ಕನ್ನಯ್ಯನ ಹೊರತಾಗಿ ಇನ್ಯಾವ ಕನ್ನಯ್ಯನ ರೂಪವೂ ಅವಳಿಗೆ ಒಪ್ಪಿಗೆಯಿಲ್ಲ.


ಕೊನೆಗೂ ರಾಧೆ ಮಥುರೆಗೆ ಬರಲು ಒಪ್ಪುವುದೇ ಇಲ್ಲ.


ಆಕೆ ಹೇಳುತ್ತಾಳೆ, "ನೀನಿನ್ನು ಎಂದಿಗೂ ಇಲ್ಲಿಗೆ ಬರಲ್ಲ,ಬಂದರೂ ನನ್ನ ಕನ್ನಯ್ಯ ಆಗಲಾರೆ.ನಾನು ನಿನ್ನ ಹೆಜ್ಜೆಯ ಸಪ್ಪಳಕ್ಕಾಗಿ ಕಾಯುತ್ತಾ ಹಿಗ್ಗಿನಲ್ಲಿ ನಲಿಯುತ್ತಿರುವ ಯಮುನೆಯ ದಡದಲ್ಲಿ ಸಂಕಟದಿಂದ ಸುತ್ತುತ್ತೇನೆ,ನೀನು ಪ್ರೀತಿಸುತ್ತಿದ್ದ ಗಿಡ ಬಳ್ಳಿ,ಎಲೆ ಹೂವುಗಳಲ್ಲಿ ನಿನ್ನನ್ನು ನೋಡುತ್ತೇನೆ."


ಕ್ರಷ್ಣ ಮಾತನಾಡುವುದಿಲ್ಲ.


ಅಷ್ಟು ಕಾಲ ತನ್ನ ಒಡನಾಡಿಯಾಗಿದ್ದ ಆ ಬೃಂದಾವನವನ್ನು ತೋಯಿಸಿದ್ದ ಆ ಕೊಳಲನ್ನು ಎತ್ತಿ ರಾಧೆಯ ಕೈಗಿಡುತ್ತಾನೆ."ಈ ಕೊಳಲೂ ನೀನೂ ಒಂದೇ" ಎನ್ನುತ್ತಾನೆ.


ಹಾಗೆ ರಾಧೆ ಕೈಗೆ ಕೊಳಲು ಕೊಟ್ಟ ಕೃಷ್ಣ ಮುಂದೆಂದೂ ಕೊಳಲು ಹಿಡಿಯಲೇ ಇಲ್ಲ.


ಮತ್ತೇನಿದ್ದರೂ ಚಕ್ರ...


ಸಂಭವಾಮಿ ಯುಗೇಯುಗೇ..
ಉತ್ತರೋತ್ತರ ಭಾಗ
ಕಾದಿದ್ದವಳು ಕೊನೆಗೂ ರಾಧೆಯೇ.


ಕಾಯುತ್ತಾ ಕಾಯುತ್ತಾ ಏನಾಯಿತು ಅವಳಿಗೆ? ಏನಾದಳು ಅವಳು?


ಯಾರೂ ಎಲ್ಲೂ ಏನೂ ಹೇಳಿಯೇ ಇಲ್ಲ..!


ರಾಧೆ ಏನಾದಳು?


ಅವಳು ಕಾಯುತ್ತಾ ಕಾಯುತ್ತಾ ಕಾಲದ ವರಸೆಗೆ ಸಿಕ್ಕಿ ಹೋದಳಾ?ಅಥವಾ ಅವಳ ಕನ್ನಯ್ಯ ಅವಳನ್ನು ಮರೆತನಾ?ರಾಧೆ ಕೃಷ್ಣನನ್ನು ಕಾದಂತೆ ಕೃಷ್ಣ ರಾಧೆಯನ್ನು ಕಾಯಲೇ ಇಲ್ಲವೇ?ಎಂಟು ಮಂದಿ ಪಟ್ಟದರಸಿಯರ ನಡುವೆ ಅವನಿಗೆ ರಾಧೆ ಒಮ್ಮೆಯಾದರೂ ನೆನಪಾಗಲಿಲ್ಲವೇ?ರಾಧೆ ಬೇಕು ಎಂದು ಒಮ್ಮೆಯಾದರೂ ಅನಿಸಲಿಲ್ಲವೇ?


ರಾಧೆ ಕನ್ನಯ್ಯನನ್ನು ಗಿಡಬಳ್ಳಿಗಳಲ್ಲಿ ಕಂಡಳಂತೆ.ಕೃಷ್ಣ ರಾಧೆಯನ್ನು ಎಲ್ಲಿ ಕಂಡ?


ದೇಹವೂ ಕಾದಂತೆ,ಮನಸ್ಸೂ ಕಾದಂತೆ ಕಾಲವು ಕಾಯುತ್ತಿರುತ್ತದೆ ತಾನೇ?ಎರಡು ದಿವ್ಯ ಪ್ರೇಮಾನುಸಂಧಾನಕ್ಕೆ..ರಾಧಾಕೃಷ್ಣರ ನಡುವೆ ಇದೇಕೆ ಆಗಲಿಲ್ಲ?


ರಾಧೆ ತನ್ನ ಕನ್ನಯ್ಯನ ಆ ಬೆಚ್ಚಗಿನ ಆ ಕ್ಷಣಗಳನ್ನು ಅನುದಿನವೂ ಅನುಭವಿಸುತ್ತಿದಾಳೆ.ಆ ಕಾಡಿನಲ್ಲಿ ಓಡಾಡಿದ್ದು, ತಬ್ಬಿಕೊಂಡದ್ದು,ಮುತ್ತಿಕ್ಕಿದ್ದು,ಆ ದಿವ್ಯ ಪ್ರೀತಿಯ ನೆನಪುಗಳಲ್ಲಿ ವರುಷ ವರುಷಗಳನ್ನು ಕಳೆಯುತ್ತಾಳೆ.


ಅವಳೆಂದೂ ಇನ್ನೊಂದು ಪ್ರೀತಿಗೆ ಎರವಾಗುವುದಿಲ್ಲ, ಇನ್ನೊಬ್ಬ ಪ್ರೀತಿಕೊಡಲು ಬಂದನೆಂದು ಮರುಳಾಗುವುದಿಲ


ಅವಳು ಪ್ರೀತಿಯ ಜೀವ.


ಇರಲಿ.


ಪ್ರತೀ ಬೇಸಗೆಯ ಬೆವರು,ಮಳೆಯ ಹನಿ,ಚಳಿಯ ಹಿತದಲ್ಲಿ ರಾಧೆ ದಿನ ವಾರ ತಿಂಗಳು ವರ್ಷ ವರುಷ ಕಳೆದಳು.


ಅಲ್ಲಿ ಆ ಕೃಷ್ಣ?


ಎಲ್ಲಾ ತುರ್ತುಗಳ ನಡುವೆ ಆತ ತನ್ನ ಆಪ್ತ ಉದ್ಧವನನ್ನು ರಾಧೆಯ ಬಳಿಗೆ ಕಳುಹುತ್ತಾನೆ.ಮಥುರೆಗೆ ಆಹ್ವಾನಿಸುತ್ತಾನೆ.ರಾಧೆ ಇಲ್ಲಾ ಎನ್ನುತ್ತಾಳೆ.ಆಕೆಗೆ ತನ್ನ ಮುದ್ದಿನ ಕನ್ನಯ್ಯನನ್ನು ಇನ್ನೊಬ್ಬನಾಗಿ ಕಾಣುವುದು ಸಾಧ್ಯವೇ ಇರುವುದಿಲ್ಲ.


ಕೊನೆಗೂ ಎಂದಾದರೂ ಒಮ್ಮೆ ಎಲ್ಲಿಯಾದರು ಒಮ್ಮೆ ಅವರು ಮೀಟ್ ಮಾಡುತ್ತಾರಾ?


ರಾಧೆ ಎಲ್ಲಿ ಕಳೆದುಹೋದಳು?


ಕೃಷ್ಣನ ಅದೆಷ್ಟೋ ಕತೆ ಕೇಳುತ್ತೇವೆ,ರಾಧೆಯದ್ದು ಒಂದಾದರೂ ಏಕಿಲ್ಲ ?


ಯಾರೀಕೆ ರಾಧೆ ?


ರಾಧೆ ಶುದ್ದ ಪ್ರೇಮದ ಸಂಕೇತ ಮಾತ್ರವೇ ಅಂತೆ ನಿಜಾನಾ?


ಆಕೆ ಗೋಪಿಕೆಯರ ಸಮೂಹದ ಒಂದು ನಿಶ್ಚಲ ಭಕ್ತಿಯ, ನಿರುಮ್ಮಳ ಪ್ರೀತಿಯ,ನಿಜಾನುಭವದ ಸಂಕೇತ ಮಾತ್ರವೇ ಅಂತೆ ನಿಜಾನಾ?


ಮೂಲ ಭಾಗವತ ಅಂದರೆ ಕೃಷ್ಣ ಕಥೆಯಲ್ಲಿ ರಾಧೆ ಎಂಬ ಕ್ಯಾರೆಕ್ಟರೇ ಇಲ್ಲಎಂದರೆ ಇಷ್ಟೊಂದು ಪ್ರೀತಿಯ ರಾಧೆಯನ್ನು ನಾವು ಕಂಡದ್ದು ಕನಸೇ ಆಯಿತಾ?


ಮೂಲ ಭಾಗವತದಲ್ಲಿ ಇಲ್ಲಾ ಎಂದರೆ ..ಈ ರಾಧೆ ಯಾರು?


ಅವಳು ಜಯದೇವ ಕವಿಯ ಸೃಷ್ಟಿ, ಗೀತ ಗೋವಿಂದದ ಅಧಿನಾಯಕಿ ಎನ್ನುತ್ತಾರೆ ಓದಿದವರು.


ಆಗಲಿ, ಹಾಗೇ ಆಗಲಿ..ಆ ಜಯದೇವ ಕವಿಯಾದರೂ ರಾಧೆಯನ್ನು ಆಮೇಲೆ ಏನು ಮಾಡಿದ ?


ಏನೂ ಮಾಡಲಿಲ್ಲ,ಆಮೇಲೆ ರಾಧೆ ಕುರಿತು ಏನು ಇಲ್ಲ.


ಬ್ರಹ್ಮವೈವರ್ತಪುರಾಣದಲ್ಲ್ಲಿ ರಾಧೆಯ ಪಾತ್ರವಿದೆ. ಕೃಷ್ಣ ಬೀಳ್ಕೊಂಡ ಮೇಲೆ ಅಲ್ಲೂ ರಾಧೆ ಕಾಣಿಸುವುದಿಲ್ಲ.


ಎಲ್ಲಿ ಹುಡುಕಿದರೂ ರಾಧೆ ಇಲ್ಲ.


ಒಂದು ಕಾಯುವ ಪ್ರೀತಿಯನ್ನು ಹೀಗೆ ಕಳೆದುಕೊಳ್ಳುವುದು ಸರೀನಾ ? ನೀವೇ ಹೇಳಿ..


20070612

ಮುಕ್ಕಣ್ಣ ಮುನಿದಾನೋ


ಅಡಕೆ ಎಂಬ ಮುಕ್ಕಣ್ಣ ನಿದ್ದಾನಲ್ಲ,ಯಾರನ್ನೂ ನಂಬಿದರೂ ಈ ಮುಕ್ಕಣ್ಣನನ್ನು ನಂಬಬಾರದು ಎಂಬ ಒಂದು ಮಾತು ಕಾಲಾನುಕಾಲದಿಂದ ಸತ್ಯವಾಕ್ಯವಾಗಿಯೇ ಚಾಲ್ತಿಯಲ್ಲಿದೆ.

ಅನುಮಾನವೇ ಬೇಡಾ,

ಈ ಅಡಕೆ ,ತನ್ನನ್ನು ಬೆಳೆದವನನ್ನು ಉಳಿಸಿದಂತೆ ಎಷ್ಟೋ ಬಾರಿ ಉರುಳಿಸಿದ್ದೂ ಇದೆ.

ಇತಿಹಾಸ ಪುನರಾವರ್ತನೆಯಾಗುತ್ತದೆ ಎಂಬ ಮಾತು ಎಲ್ಲೂ ನಂಬದಿರಬಹುದು ಆದರೆ ಅಡಕೆಯ ವಿಷಯದಲ್ಲಿ ನಂಬಲೇ ಬೇಕು. ಅದೆಷ್ಟು ಬಾರಿ ಈ ಅಡಕೆ ಏರಿದೆಯೋ ಅಷ್ಟೇ ಬಾರಿ ಇಳಿದಿದೆ.

ಏರಿದವನು ಇಳಿಯಲೇ ಬೇಕು ಎಂಬ ಮಾತಿಗೆ ಸೂರ್ಯನ ನಂತರ ಅಡಕೆಯೇ ಪಕ್ಕಾ ಉದಾಹರಣೆ.

ಬರೀ ಜಗಿದುಗುಳುವ ಈ ಅಡಕೆ ಚಟಕ್ಕಾಗಿಯೇ ಇದೆ. ಹಾಗಿದ್ದರೂ ಇದನ್ನು ಆಹಾರ ಬೆಳೆ ಎಂದು ಸಾಬೀತು ಮಾಡಲು ವೀರಪ್ಪ ಮೊಯಿಲಿ ಅಂಥವರು ಹೊರಟಿದ್ದರು ಎಂದರೆ ಏನು ಹೇಳಬೇಕು?

ಅಡಕೆಯನ್ನು ಇಂಗ್ಲೆಂಡು ಅಮೇರಿಕದಲ್ಲಿ ಮಾರುಕಟ್ಟೆ ಮಾಡುತ್ತೇವೆ ಎಂದರೆ ಅದು ಅಬ್ಬೇಪ್ಪಾರಿ ಮಾತು.ಎಲ್ಲಿ ಕಂಡರಲ್ಲಿ ಥೂ>>ಕ್ ಎಂದು ಉಗುಳುವವರಿಗೂ ಅಂಥವರ ನಾಡಿಗೂ ಅಡಕೆ ಸಂದಾಯವಾದೀತು.

ಎಷ್ಟಾದರೂ ನುಂಗುವುದುಂಟೇ?

ಇಂಥ ಬಾಯಿಂದ ಬಾಯಿಗೆ ಮಾತ್ರಾ ಸಲ್ಲುವ ಅಡಕೆ ಹೊಟ್ಟೆಯ ವಿಷಯವಲ್ಲ,ಏನಿದ್ದರೂ ಅದು ಬಾಯಿ ಮಾತು .ಆದ್ದರಿಂದಲೇ ಇರಬೇಕು ,ಅಡಕೆ ವಿಚಾರ ಬರೀ ಬಾಯಿಂದ ಬಾಯಿಗೆ ಹರಡಿ ಸುಮ್ಮನಾಗುವುದು.ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡರೂ ಅಡಕೆ ಕುರಿತಂತೆ ಬೆಳೆಗಾರ ಹೋರಾಟ ಮಾಡಲಾರ.

ಈ ಬಾರಿಯೂ ಹೀಗೇ ಆಗುತ್ತಿದೆ.

ಅಡಕೆ ಮಾರುಕಟ್ಟೆ ಕುಸಿಯುತ್ತಿದೆ.ಈ ಕುರಿತಂತೆ ಎಲ್ಲೆಡೆ ಊಹಾಪೋಹಗಳೂ ಹಾಹಾಕಾರಗಳೂ ಕೇಳಲಾರಂಭಿಸಿವೆ.ಒಂದೆಡೆ ಅಡಕೆ ಆಮದಿನ ಗುಲ್ಲು, ಇನ್ನೊಂದೆಡೆ ಹಣಕಾಸಿನ ಮುಗ್ಗಟ್ಟಿನ ನೆಪ, ಮತ್ತೊಂದೆಡೆ ಅಧಿಕ ದಾಸ್ತಾನಿನ ಕಾರಣ,ಕೊನೆಗೊಮ್ಮೆ ಗುಣಮಟ್ಟದ ಕೊರತೆಯ ಹೇಳಿಕೆ ...ಒಟ್ಟಾರೆಯಾಗಿ ಅಡಕೆ ಮಾರುಕಟ್ಟೆಯನ್ನು ಬೀಳಿಸುವುದರಲ್ಲಿ ಕಾಣದ ಕೈಗಳು ಯಶಸ್ವಿಯಾಗಿವೆ.

ಕೇವಲ ಹತ್ತು ದಿನಗಳ ಹಿಂದೆ ಆಜೂ ಬಾಜೂ ೭೫ ರಷ್ಟಿದ್ದ ಅಡಕೆ ಧಾರಣೆ ದಿನೇ ದಿನೇ ಕುಸಿಯುತ್ತಾ ಮಂಗಳವಾರ ೬೬ ಕ್ಕೆ ತಲುಪಿದ್ದು ,ಮಾರುಕಟ್ಟೆ ಸಾಗುತ್ತಿರುವ ದಿಕ್ಕನ್ನು ಸೂಚಿಸುತ್ತಿದೆ.ಇಷ್ಟೆಲ್ಲಾ ಆದರೂ ಮಾರುಕಟ್ಟೆಯ ಸುಧಾರಣೆಗೆ ಯಾರೂ ಏನೂ ಮಾಡಲಾಗದಂತೆ ಸುಮ್ಮನಿದ್ದಾರೆ.

ನಿಜವಾಗಿಯೂ ಈಗ ಆಗಿರುವುದೇನೂ?

ಒಂದದು ನಂಬಲರ್ಹ ಮೂಲದ ಪ್ರಕಾರ ಭಾರೀ ಪ್ರಮಾಣದಲ್ಲಿ ಅಡಕೆ ಆಮದಾಗುತ್ತಿರುವುದೇ ಎಲ್ಲಾ ಸಂಕಷ್ಟಗಳ ಮೂಲ. ಕಳಪೆ ಗುಣಮಟ್ಟದ ಅಡಕೆ ದೇಶದ ವಿವಿಧ ಬಂದರುಗಳಿಗೆ ಬಂದು ಬೀಳುತ್ತಿರುವುದರಿಂದ ದೇಶಿಯ ಅಡಕೆ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ ಎಂಬುದು ಪ್ರತಿಪಾದನೆ.ಈಗಾಗಲೇ ದೇಶದಲ್ಲಿ ಅಡಕೆ ಉತ್ಪಾದನೆ ಬೇಡಿಕೆಗಿಂತ ಹೆಚ್ಚಾಗಿದ್ದು,ಇದರ ಮೇಲೆ ಹೊರದೇಶಗಳಿಂದ ಅಡಕೆ ಬರಮಾಡಿಕೊಳ್ಳುವುದರಿಂದ ಪರಿಸ್ಥಿತಿ ಶೋಚನೀಯವಾಗುತ್ತಿದೆ. ಏಳು ವರ್ಷಗಳ ಹಿಂದೆ ಅಡಕೆ ಮಾರುಕಟ್ಟೆ ಕುಸಿದಾಗ ಆಮದು ಅಡಕೆಯ ಮೇಲೆ ಕೇಂದ್ರ ಸರಕಾರ ಶೇ.೩೫ ರಿಂದ ೧೦೦ ರ ತನಕ ಆಮದು ಸುಂಕ ವಿಧಿಸಿತ್ತು.ಆಗ ಸ್ವಲ್ಪಮಟ್ಟಿನ ನಿಯಂತ್ರಣವೂ ಬಂದಿತು.ಆದರೆ ಅದು ತಾತ್ಕಾಲಿಕವಾಗಿತ್ತು.

ಡ್ರೈ ಫ್ರೂಟ್ ಎಂಬ ಶಿರೋನಾಮೆಯಲ್ಲಿ ವಿದೇಶೀ ಅಡಕೆ ರಾಜಾರೋಷವಾಗಿ ಭಾರತ ಪ್ರವೇಶಿಸಿತು.ಒಣಹಣ್ಣು ಎಂದ ಮೇಲೆ ಅದರ ಮೇಲೆ ಅಡಕೆಗೆ ಹಾಕಲಾಗುವ ಸುಂಕ ವಿಧಿಸಲು ಸಾಧ್ಯವಿಲ್ಲ,ಎಂದಮೇಲೆ ವಿದೇಶಿ ಅಡಕೆಗೆ ಒಳಬರುವುದಕ್ಕೆ ಯಾವ ಆತಂಕವೂ ಆಗ ಉಳಿದಿರಲಿಲ್ಲ.

ಇದನ್ನು ತಹಬಂದಿಗೆ ತರಲು ಯಾವುದೇ ವಿಶೇಷ ಕೆಲಸ ನಡೆಯಲಿಲ್ಲ.ಕೊನೆಗೊಮ್ಮೆ ಅದು ಅದೆಂತೋ ನಿಯಂತ್ರಣಕ್ಕೆ ಬಂತು ಎಂದು ಭಾವಿಸಲಾಯಿತು.ಆದರೆ ಒಳಗುಟ್ಟು ಮಾತ್ರಾ ಬೇರೆಯೇ ಇತ್ತು.

ಆಡಕೆ ಕಳ್ಳ ಮಾರ್ಗದಲ್ಲಿ ಧಾರಾಳವಾಗಿ ಒಳನುಸುಳುತ್ತಿತ್ತು.ನೇಪಾಳ,ಬರ್ಮಾ ಹಾಗೂ ಬಾಂಗ್ಲಾ ದೇಶಗಳನ್ನು ಬಳಸಿ ಕಳ್ಳದಾರಿಯಲ್ಲಿ ಅಡಕೆ ಉತ್ತರ ಭಾರತವನ್ನು ಯಾವ ತೆರಿಗೆ ,ಯಾವ ಸುಂಕದ ಭೀತಿಯಿಲ್ಲದೆ ಬಂದುಸೇರುತ್ತಿತ್ತು.ಮತ್ತು ಅದು ಈಗಲೂ ಹಾಗೆಯೇ ಮುಂದುವರಿದಿದೆ.

ಹೇಳಿಕೇಳಿ ಉಗ್ರಗಾಮಿಗಳ ಒಳನುಸುಳುವಿಕೆಯನ್ನೇ ನಿಯಂತ್ರಿಸಲು ಆಗದ ನಮ್ಮ ಸರಕಾರ ಯಕಶ್ಚಿತ್ ಅಡಕೆ ಕಳ್ಳಸಾಗಣೆಯನ್ನು ನಿಯಂತ್ರಿಸಲು ಮುಂದಾದೀತೇ?

ಇತ್ತ ಸರಕಾರ ಭಾರೀ ತೆರಿಗೆಯನ್ನು ಹಾಕಿದರೆ, ಆಮದು ಆಡಕೆ ಜಾಲ ಅದಕ್ಕೂ ಒಂದು ಹಿಕ್ಮತ್ ತಯಾರಿಸಿತ್ತು.ವಿದೇಶಿ ಅಡಕೆಗೆ ಧಾರಣೆಯನ್ನು ಕ್ರಾಶ್ ಮಾಡುವ ತಂತ್ರ ಹೂಡಲಾಯಿತು.ಈಗಲೂ ಇದುವೇ ಮುಂದುವರಿದಿದೆ.

ಕಿಲೋಗೇ ಹತ್ತೋ ಹನ್ನೆರಡೋ ರೂಪಾಯಿ ಎಂದು ನಮೂದಿಸಿ ಬಿಲ್ಲು ಮಾಡಲಾಗುತ್ತಿದೆ.ಹಾಗೇ ಮಾಡುವ ಮೂಲಕ ವ್ಯವಸ್ಥಿತವಾಗಿ ತೆರಿಗೆಯನ್ನು ನುಂಗಲಾಗುತ್ತಿದೆ.

ಯಾರೂ ಏನೂ ಮಾಡುವ ಹಾಗಿಲ್ಲ.

ಇತ್ತ ವಿದೇಶೀ ಅಡಕೆ ಅಗ್ಗದ ದರಕ್ಕೆ ಸಿಗುತ್ತಿದೆ ಎಂಬ ಭಾವನೆ ಎಲ್ಲಡೆ ಹರಡಿ, ದೇಶೀಯ ಅತ್ಯುತ್ತಮ ಅಡಕೆ ಧಾರಣೆಯೂ ಜೊತೆಯಾಗಿ ಕುಸಿಯಲೂ ಇದು ಕಾರಣವಾಗುತ್ತಿದೆ.ಅತ್ತ ತೆರಿಗೆ ಭಾರವಿಲ್ಲದೆ ಅಡಕೆಯೂ ಸಿಕ್ಕಿತು, ಇತ್ತ ದೇಶೀಯ ಅಡಕೆ ಧಾರಣೆಯೂ ಕುಸಿದಂತಾಯಿತು,ಒಂದೆ ಕಲ್ಲಿಗೆ ಎರಡು ಹಕ್ಕಿ ಉದುರಿ ತಟ್ಟೆಗೇ ಬಿದ್ದಂತಾಯಿತು.

ಇಲ್ಲಿಗೇ ಈ ಮಾಫಿಯಾ ದ ಕೆಲಸ ಮುಗಿಯುವುದಿಲ್ಲ. ಈ ವ್ಯವಹಾರ ಯಾವುದೇ ಅಡೆತಡೆಯಿಲ್ಲದೆ ನಡೆಯುವಂತಾಗಲು ಬೇಕಾದ ಎಲ್ಲಾ ರಾಜಕಾರಣದ ಹಿಡಿತಗಳನ್ನೂ ಅದು ಸ್ಥಾಪಿಸುತ್ತದೆ.ಯಾವುದೇ ಆಡಳಿತ ಅಡಕೆ ಬಗ್ಗೆ ಯಾಗಲಿ,ಧಾರಣೆ ಕುಸಿಯುತ್ತಿರುವ ಬಗೆಗಾಗಲಿ ಸೊಲ್ಲೆತ್ತದಂತೆ ಆದು ನೋಡಿಕೊಳ್ಳುತ್ತದೆ.

ಅಲ್ಲಿಗೆ ಅಡಕೆ ರೈತ ವಸ್ತುಶಃ ಸಮಾಧಿಯಾದಂತೆ.

ಈಗ ಆಗುತ್ತಿರುವುದೂ ಅದುವೇ.

ಹೋಗಲಿ ನಮ್ಮ ಅಡಕೆ ಬೆಳೆಗಾರ ಎಂಬ ಅಸಾಮಿ ಇದ್ದಾನಲ್ಲ,ಹೆದರುಪುಕ್ಲ ಎಂದರೆಹೆದರುಪುಕ್ಲ.
ಅಡಕೆ ಕುರಿತು ಏನಾದರೂ ಬರೆದರೆ ಮಾರುಕಟ್ಟೆ ಬಿದ್ದೇಹೋಗುತ್ತದೆ ಎಂದು ಅಡಕೆ ರೈತರು ನಂಬುತ್ತಾ ಬಂದಿದ್ದಾರೆ.ಮಾರುಕಟ್ಟೆ ವರ್ತಿಸುತ್ತಿರುವ ಸೂಕ್ಷ್ಮಗಳನ್ನು ಪತ್ರಿಕೆಗಳು ಆಗಿಂದ್ದಾಗೆ ತಿಳಿಸಬೇಕಾದ ಜವಾಬ್ದಾರಿ ಹೊಂದಿವೆ ಮತ್ತು ಅದನ್ನು ಪೂರೈಸಲು ಬರೆಯಲೇ ಬೇಕಾಗುತ್ತದೆ ಎಂದರೆ ಈ ರೈತರು ನಂಬರು.ವಾಸ್ತವವಾಗಿ ಅಡಕೆ ರೈತರದ್ದೂ ಎಂದು ಒಂದೇ ಒಂದು ಲಾಬಿಯಿಲ್ಲ.

ಟೊಮೇಟೋ ಬೆಳೆಗಾರರು ಒಟ್ಟಾಗಿ ಬೀದಿಗಿಳಿಯುವ ಮಾದರಿಯಲ್ಲಿ ಈ ಅಡಕೆ ಬೆಳೆಗಾರರು ಒಂದೇ ಒಂದು ಬಾರಿ ಬೀದಿಗಿಳಿದ ನಿದರ್ಶನವಿಲ್ಲ.

ಎಂದು ಸಂಘಟಿತರಾಗದ ಒಂದು ರೈತ ಸಮುದಾಯವಿದ್ದರೆ ಅದು ಅಡಕೆ ಬೆಳೆಗಾರರು ಮಾತ್ರಾ.

ಮನೆ ಜಗಲಿಯಲ್ಲಿ ,ಅಂಗಡಿ ಬಾಗಿಲಲ್ಲಿ,ಬಸ್ಸಿನಲ್ಲಿ ಮತ್ತು ಊಟದ ಸಾಲಿನಲ್ಲಿ ಮಾತ್ರಾ ಈ ರೈತರ ಘನಗಂಭೀರ ಚರ್ಚೆ ನಡೆಯುತ್ತದೆ,ಮತ್ತು ಅದು ಅಲ್ಲಿಗೇ ಸೀಮಿತವೂ ಆಗುತ್ತದೆ.ಪ್ರತಿ ರೈತನೂ ತನ್ನ ಸರಕನ್ನು ಹೆಚ್ಚಿನ ಕ್ರಯಕ್ಕೆ ವಿಕ್ರಯಿಸುವುದಲ್ಲಿ ಧನ್ಯತೆ ಕಾಣುತ್ತಾನೆ. ತನ್ನ ಕೆಲವಾದೊಡನೇ ಕೈ ತೊಳೆದುಕೊಳ್ಳುತ್ತಾನೆ.

ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅಡಕೆ ರೈತರು ಹಂಚಿಹೋಗಿದ್ದಾರೆ.ಇವರನ್ನು ಒಂದೇ ಸೂರಿನಡಿ ಸಂಘಟಿಸುವ ಪ್ರಾಮಾಣಿಕ ಪ್ರಯತ್ನ ಈತನಕ ಆಗಿಲ್ಲ.ಕೆಲವೊಂದು ಪ್ರಯತ್ನ ನಡೆದಿದ್ದರೂ ಅದೆಲ್ಲಾ ಕಪ್ಪೆ ತುಲಾಭಾರದಂತೆ ಆಗಿ ಮುಗಿದಿದೆ.

ಈ ಎಂಟು ಜಿಲ್ಲೆಗಳಲ್ಲಿ ಅಡಕೆ ಎಂದೂ ಚುನಾವಣಾ ವಿಷಯವೇ ಆಗಿಲ್ಲ.ಹಾಗೇ ಆಗದಂತೆ ನೋಡಿಕೊಳ್ಳುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳೂ ಯಶಸ್ವಿಯಾಗಿವೆ.

ಅಡಕೆ ಶ್ರೀಮಂತರ ಬೆಳೆ ಎಂಬ ಸಂದೇಶ ಈಗಲೂ ವಿಧಾನಸೌಧದ ಮೂರನೇ ಮಹಡಿಯಲ್ಲಿ ಗಟ್ಟಿಯಾಗಿ ಕುಳಿತಿದೆ.

ಆ ಕಾರಣಕ್ಕೇ ಪ್ರತೀ ಬಾರಿಯೂ ಬೆಂಬಲ ಬೆಲೆ ಎಂಬ ನಾಟಕ ಅರ್ಧ ಶೋ ಪೂರೈಸಿ ನಿಲುಗಡೆಯಾಗುತ್ತಿದೆ.

ಕಳೆದ ಆರು ವರ್ಷಗಳಿಂದ ಅಡಕೆಗೆ ಬೆಂಬಲ ಬೆಲೆ ಎಂದರೆ ಅದು ೬೦ ರೂಪಾಯಿ.ಅದನ್ನು ಪರಿಷ್ಕರಿಸುವ ಕೆಲಸ ಯಾರೂ ಮಾಡಿಲ್ಲ.

ಬೆಂಬಲ ಬೆಲೆ ಎಂಬುದೇ ಈಗ ಇಲ್ಲ,ಇನ್ನು ಪರಿಷ್ಕರಿಸುವ ಮಾತೆಲ್ಲಿ ಬಂತು?

ಈಗಂತೂ ಅಡಕೆ ಧಾರಣೆಯೇ ಬೆಂಬಲಬೆಲೆಯ ಬಳಿ ಬರುತ್ತಿದೆ.ಅದಕ್ಕಿಂತಲೂ ಕೆಳಗೆ ಸರಿದರೂ ಆಶ್ಚರ್ಯವೇನಿಲ್ಲ.

20070611

ಎಲ್ಲಿರುವೇ ಮನವ ಕಾಡುವ ರೂಪಸಿಯೇ??


ಸೂಚನೆ : ಇದು ಲೇಖನವಲ್ಲ,ವರದಿಯೂ ಅಲ್ಲ,ಬರೀ ಆಡುಮಾತು.

ದಯವಿಟ್ಟು ಗಮನಿಸಿ.

ನಮಗಿನ್ನೂ ಮಳೆಗಾಲ ಬಂದಿಲ್ಲ.ನಿಮ್ಮೂರಿಗೆ ಬಂತಾ?

ಅದಕ್ಕೆ ಈ ಮಳೆ ಹಾಡು.ಅಥವಾ ಪ್ರಾರ್ಥನೆ ಅಥವಾ ಸುಮ್ಮನೇ ಒಂದೆರಡು ಸಾಲು.

ಇಲ್ಲಿ ಮಳೆ ಒಮ್ಮೆ ಮದುಮಗನಾಗಿ, ಇನ್ನೊಮ್ಮೆ ಮಗುವಾಗಿ ಮತ್ತೊಮ್ಮೆ ಗೆಳತಿಯಾಗಿ ನೋಡುನೋಡುತ್ತಾ ಒಂದು ವಿರಹವೇದನೆಯೇ ಆದರೆ ಅದಕ್ಕೆ ಇನ್ನೂ ಬಾರದ ಮಳೆಯೇ ಹೊಣೆ ನಾನಲ್ಲ.


ಈಗ ಮುಂದೆ ಓದಿ....

ಒಳನಾಡಿನ ಕಾಡುಗಳಲ್ಲಿ ಮಿಂಚು ಹುಳಗಳು ಗುಂಪು ಗುಂಪಾಗಿ ಸೇರಿಬೆಳಕು ಸೂಸುತ್ತಿಲ್ಲ. ಮಿಂಚು ಹುಳಗಳ ಲೈಟಿಂಗ್ಸ್ ಇಲ್ಲದೆ ಆ ಸುರ ಸುಂದರಾಂಗ ಬರುವುದೂ ಇಲ್ಲ. ಪೊಟರೆಗಳಿಂದ ಹೊರಬಂದು ಕಪ್ಪೆಗಳು ವಟರ್ ಗುಟ್ಟುತ್ತಿಲ್ಲ. ಕಪ್ಪೆಗಳ ಜುಗಲ್ ಬಂದಿ ವಾದನವಿಲ್ಲದೆ ಅವನ ದಿಬ್ಬಣ ಬರುವುದಾದರೂ ಹೇಗೆ.?

ಇಳೆ ಕಾಯುತ್ತಿದ್ದಾಳೆ.

ಸಮ್ಮಿಲನಕ್ಕೆ.

ಅದು ಎಂಥಾ ಕಾಯುವಿಕೆ ! ಹಸಿವಲ್ಲ, ಆತುರವಲ್ಲ, ಆಗ್ರಹ ಮೊದಲೇ ಅಲ್ಲ.ಅನಿವಾರ್ಯ..ಎಂದರೆ ಅದು ಯಾವತ್ತೂ ಸರಿ.

ಗಂಡು ಹೆಣ್ಣಿನ ಸಮಾಗಮದಂತೆ.

ನಿಶ್ಚಿತವಾದ ಒಂದು ಹಂಬಲ.

ಅವಳು ಸಿಂಗರಿಸಿಕೊಂಡಿಲ್ಲ,ಮದುರಂಗಿ ಹಾಕಿಕೊಂಡಿಲ್ಲ,ಅವಳ ಕಣ್ಣುಗಳ ಯಾರೂ ತೀಡಿಲ್ಲ,ಅವಳ ಯಾರೂ ಹೊಳಪಿಸಿಲ್ಲ.

ಅವನು ಬರುತ್ತಾನೆ,ಅವಳ ಮೀಯಿಸುತ್ತಾನೆ,ಅವಳ ಶೃಂಗರಿಸಿ ನಳನಳಿಸಿ ತಬ್ಬಿ ಚುಂಬಿಸುತ್ತಾನೆ .ಆ ಮಿಲನ ಮಹೋತ್ಸವ ಎಲ್ಲವೂ ಒಟ್ಟಿಗೇ ಆಗಲಿದೆ.thats how she feels..

ಆದರೆ

ಆದರೆ...ಭೂಮಿ ತಾಯಿಯಾಗಬೇಕಾದ ಈ ಹೊತ್ತಿನಲ್ಲಿ ಇವನೆಲ್ಲಿ ಹೋದ ?

ಬಾ ಎಂದರೆ ಬರಲಾರೆ ಎಂಬ ಧಿಮಾಕಲ್ಲ, ಬರುವುದಿಲ್ಲ ಎಂಬ ಛಲವಲ್ಲ,

ಅವನು ಹೊರಟಿದ್ದಾನೆ,ಬಂದು ಮುಟ್ಟುವ ಹಪಹಪಿಯಲ್ಲಿದ್ದಾನೆ,ಬಂದಿಲ್ಲ,thats all..

ಬರಬಹುದು...

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡ ಹೊಸ ಗಂಡನ ಹಾಗಾಗಿದೆ ಪರಿಸ್ಥಿತಿ.

ಎಲ್ಲಾದರುಂಟೇ..
ಹೀಗಾಗಿ ಇಪ್ಪತ್ತನಾಲ್ಕು ವರ್ಷಗಳಾಗಿವೆ. ಹವಾಮಾನ ತಜ್ಞರು, ಅಧಿಕಾರಿಗಳು, ಬಲ್ಲವರು, ಬಲ್ಲಿದರು ಎಲ್ಲರೂ ಹೇಳಿದ್ದು ಸುಳ್ಳಾಗಿದೆ.

ಮುಂಗಾರು ಮಳೆಯಂತೂ ಇನ್ನೂ ಕರಾವಳಿಗೆ ಕಾಲಿಟ್ಟಿಲ್ಲ.

ಎಲ್ಲವೂ ಹೇಳಿದಂತೆ ಆಗಿದ್ದರೆ ಈ ವೇಳೆಗೆ ಈ ಕರಾವಳಿಯ ನೆಲ ತೊಯ್ದು ಹೋಗಬೇಕಿತ್ತು. ಕಾಸರಗೋಡಿನಿಂದ ಆಗುಂಬೆ ತನಕ, ಮಂಗಳೂರಿನಿಂದ ಸಂಪಾಜೆಯ ತನಕ ಹಳ್ಳಕೊಳ್ಳ ತೊರೆ-ಝರಿ ತುಂಬಿ ತುಳುಕಬೇಕಿತ್ತು. ಹೊಲಗದ್ದೆಗಳಲ್ಲಿ ನಾಟಿ, ಮೇಟಿ ಕಾರ್ಯ ಭರದಿಂದ ಆಗಬೇಕಿತ್ತು. ಈ ವರ್ಷ ಮುಂಗಾರು ನಿಗದಿತ ಅವಧಿಗೆ ಹತ್ತು ದಿನಗಳ ಮೊದಲೇ ಬರಲಿದೆ ಎಂದು ಹವಾಮಾನ ಇಲಾಖೆಯೇ ಅಧಿಕೃತವಾಗಿ ಪ್ರಕಟಿಸಿತ್ತು. ಆದರೆ ಆದದ್ದು ಬೇರೆಯೇ. ಅದು ಬರಬೇಕಾದ ಮುಹೂರ್ತಕ್ಕೆ ಬಂದೇ ಇಲ್ಲ. ಮೇಲಾಗಿ ಹತ್ತು ದಿನ ಕಳೆದಿದೆ.

ಕಾಲವನ್ನು ತಡೆಯೋರು ಯಾರೂ ಇಲ್ಲ ಎನ್ನುವುದು ಇದಕ್ಕೇ.
ಮುಂಗಾರು ಮಾರುತ ಅರಬ್ಬೀ ಸಮುದ್ರದಲ್ಲಿ ಸುಳಿದಾಡುತ್ತಿದೆ. ಅಂಡಮಾನ್ ದ್ವೀಪವನ್ನು ಅದು ತಟ್ಟಿ ವಾರಗಳೇ ಆಗಿವೆ. ಸಮುದ್ರದಲ್ಲೇ ಕುಣಿದಾಡುತ್ತಿರುವ ಅಲೆ ನೆಲವನ್ನು ತಟ್ಟಿಕೊಳ್ಳುತ್ತಿಲ್ಲ. ಅರಬ್ಬೀ ಸಮುದ್ರದಲ್ಲಿ ಕಂಡು ಬರುತ್ತಿರುವ ಚಂಡಮಾರುತದ ಉತ್ಪಾತ ಮುಂಗಾರು ಮಾರುತ ಎಂಬ ಪ್ರಕೃತಿಯ ದಿಬ್ಬಣಕ್ಕೆ ಧಕ್ಕೆ ತಂದಿದೆ. ಚಂಡಮಾರುತದ ಒಳ ಸುಳಿಗಳ ನಡುವೆ ಮುಂಗಾರು ಸಿಕ್ಕಿ ಹಾಕಿಕೊಂಡಿದೆ.

ದಟ್ಟಡವಿಯಲ್ಲಿ ದಾರಿ ತಪ್ಪಿದ ಪುಟ್ಟ ಮಗುವಿನ ಪರಿಸ್ಥಿತಿ ಅದರದ್ದು.
ಮುಂಗಾರು ತಡವಾಗಿರುವುದರ ಪರಿಣಾಮ ಕರಾವಳಿಯ ನೆಲದಲ್ಲಿ ಆಗಲೇ ಗೋಚರಿಸಿದೆ. ಪರಿಸರದಲ್ಲಿ ಮಳೆಯ ಆಗಮನದ ಇಂಡಿಕೇಶನ್‌ಗಳು ಇನ್ನೂ ಶುರುವಾಗಿಲ್ಲ. ಮಳೆ ತಡವಾಗುತ್ತಿರುವುದು ಈ ಸೂಕ್ಷ್ಮಗಳನ್ನು ಅರಿತವರಿಗೆ ಗೊತ್ತೇ ಇದೆ.
ಮಳೆಗಾಲ ಆರಂಭವಾಗದಿರುವ ಕಾರಣ ಕರಾವಳಿಯ ಭತ್ತದ ಗದ್ದೆಗಳಲ್ಲಿ ಚಟುವಟಿಕೆಗಳು ಆರಂಭಗೊಂಡಿಲ್ಲ. ಈ ಬಾರಿ ನಾಟಿ ಕಾರ್ಯ ತಡವಾಗಲಿದೆ. ಬೇಸಾಯ ಕೈಕೊಡುವ ಆತಂಕವಿದೆ. ಅಡಕೆ ತೋಟಗಳು ಆಗಲೇ ಬಿಸಿಲ ಝಳಕ್ಕೆ ಸೊರಗಿವೆ. ಮಳೆ ತಡವಾಗುತ್ತಿರುವುದರಿಂದ ಎಳೆ ಕಾಯಿಗಳು ಬೆಂದು ಉದುರುತ್ತಿದ್ದು, ಬೆಳೆ ಹಾನಿಗೆ ಹಾದಿ ಮಾಡಿದೆ. ಸಕಾಲದಲ್ಲಿ ಮುಂಗಾರು ಬಂದಿದ್ದರೆ ಈ ಹೊತ್ತಿಗೆ ನೆಲದಲ್ಲಿ ಒರತೆ ಒಸರುತ್ತಿತ್ತು. ಕೆರೆ-ಬಾವಿಗಳು ತುಂಬುತ್ತಿದ್ದವು. ಮಳೆಗಾಲ ದೂರವಾಗಿರುವುದರಿಂದ ನೀರಾವರಿಗೆ ಮಾತ್ರವಲ್ಲ, ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.ಮುಂಗಾರು ಪೂರ್ವದ ಮಳೆ-ಸಿಡಿಲು-ಗಾಳಿ ಅಲ್ಲಲ್ಲಿ ಕಾಣಿಸಿಕೊಂಡಿದೆ. ಜತೆಗೆ ಹಾನಿಯೂ ಉಂಟಾಗಿದೆ.

ಒಮ್ಮೆ ಮುಂಗಾರು ಪ್ರವೇಶಿಸಿದ್ದು ಎಂದರೆ ಈ ಅಬ್ಬರಗಳು ಯಾವುದೂ ಇರುವುದಿಲ್ಲ. ಇಂಪಾದ ಮಳೆ ಪುಟ್ಟ ಗೆಳತಿಯ ಪ್ರೀತಿಯ ಮಾತಿನಂತೆ ಮೈಮರಗಳಿಗೆ ತಂಪನ್ನೂ, ಇಂಪನ್ನೂ ನೀಡಲಿದೆ.

ಎಲ್ಲಿ ಹೋದಳು ಆ ಗೆಳತಿ?

ಮಳೆಯೇ ಇಲ್ಲದ ಊರಿಗೆ ಹೋಗಿ ಕುಳಿತ ಪ್ರೇಯಸಿಯ ಹಾಗೇ.

ಏನಿದು ಈ ಮುನಿಸು?

ಏತಕೆ ಈ ದೂರ?

ಇಲ್ಲಿ ಮಳೆಯ ನಾಡಿನಲ್ಲಿ ಇಷ್ಟೊಂದು ವಿರಹವ ಹೊತ್ತು ಈ ರೀತಿ ಬೆವರುತ್ತಾ ಹಂಬಲಿಸುವುದು ಏಕೆ ಕೇಳಿಸುವುದಿಲ್ಲ?

ಆ ಊರಿಗೆ ಈ ವಿರಹವನ್ನು ಹೇಳಿಕಳುಹಿಸುವುದು ಯಾರ ಮೂಲಕ?

20070603

ನನ್ನದೂ ಎಂಬ ನನ್ನೊಳಗುನನ್ನದೂ ಅಂತ ಒಂದು .....

ನೋಡಿ ನೋಡಿ....

ಇಂಥದ್ದೊಂದು ಬಯಕೆ ಒಳಗೊಳಗೆ ನಮ್ಮನ್ನು ಮುಟ್ಟಿ ಹೋಗುತ್ತದೆ. ಈ ಬಯಕೆಯ ಅವತರಣಿಕೆಯಿಂದ ನಾವು ದೂರ ನಿಲ್ಲಲು ಆಗುವುದಿಲ್ಲ. ಏಕೆಂದರೆ ಅದು ತೀರಾ ನಮ್ಮದೇ, ಖಾಸಾ ಬಯಕೆ.

ಅದನ್ನು ಅತ್ತಿತ್ತ ಹಂಚಿಕೊಳ್ಳಲಾಗುವುದಿಲ್ಲ. ಅದಕ್ಕಾಗಿ ಉದ್ಘೋಷಗಳೂ ಇರುವುದಿಲ್ಲ. ಅದು ಅಂತರ್ಯಾಮಿ. ಅದು ಒಳ ಜಗತ್ತಿನ ಪಯಣ.

ಏನದು ?

ಅದು ಕನಲಿಕೆ,ಕನವರಿಕೆ ಮತ್ತು ಎರಡೂ ಏಕಕಾಲಕ್ಕೇ.

"ನನ್ನದೂ ಅಂತ ಒಂದಿರುತ್ತಿದ್ದರೆ’ ಎಂಬುದು ಆಸೆ , ಆಕಾಂಕ್ಷೆ ಮತ್ತು ಎರಡೂ ಏಕ ಕಾಲಕ್ಕೇ.

ಅದು ಅಂತರ್ಯದ ಕರೆ.

ಸುಪ್ತ ಬೇಡಿಕೆ.

ಮನಸ್ಸಿನ ಆಹ್ವಾನ, ಹೃದಯದ ತುಡಿತ ,ದೇಹದ need of the hour .

ಇದು ಯಾರಿಗೆ ತಾನೇ ಆಗುವುದಿಲ್ಲ?ಎಲ್ಲಿ ತಾನೆ ಇಲ್ಲಾ?

ಬೊಕ್ಕಜ್ಜಿ ಎದುರಿಗೆ ಮೊಮ್ಮಗ ಚಕ್ಕುಲಿಯನ್ನು ಮುಕ್ಕುತ್ತಿದ್ದಾನೆ. ಅಜ್ಜಿಯೊಳಗೊಂದು ಮನಸ್ಸು ಧೇನಿಸುತ್ತದೆ, "ನನ್ನದೂ ಅಂತ ಒಂದೇ ಒಂದು ಹಲ್ಲು ಇರುತ್ತಿದ್ದರೆ’

ಎದುರು ಮನೆಯ ಮಗು ದೊಡ್ಡ ಚೆಂಡಿನಲ್ಲಿ ಆಡುತ್ತಿದ್ದರೆ ಈ ಮನೆಯ baby ಅನ್ನಿಸುವುದು ಇದೇ "ನನ್ನದು ಅಂತ ಒಂದು ಚೆಂಡಿರುತ್ತಿದ್ದರೆ’.

ಇದು ಅಜಿ ಪುಳ್ಳಿ ಕಥೆಯಲ್ಲ. ಪೂರ್ತಿ ಸಾಮಾಜಿಕ ಅವಸ್ಥೆ.

ನನ್ನದೂ ಅಂತೊಂದು ಸೈಕಲ್‌ನಿಂದ ಶುರುವಾಗಿ ನನ್ನದೂ ಅಂತೊಂದು ದೊಡ್ಡ ಕಾರಿರುತ್ತಿದ್ದರೆ ಎಂಬಲ್ಲಿ ವರೆಗೆ ಮನೆ, ಆಸ್ತಿ, ಒಡವೆ ಹೀಗೆ ಎಲ್ಲದರಲ್ಲೂ ಈ ಅಂತರ್ಯಾಮಿ ಸರ್ವಂತರ್ಯಾಮಿ.

ಕುಛ್ ಕುಛ್ ಹೋತಾ ಹೆ ಅಂದೆನಿಸುತ್ತದೆ.

ಪ್ರೇಮದ ವಿಷಯಕ್ಕೆ ಬಂದರಂತೂ ಈ ನನ್ನದೂ ಅಂತ ಎಂಬುವುದಕ್ಕೆ ಎಷ್ಟೊಂದು ಒಳನೋಟಗಳು,ಸುತ್ತು ಪೌಳಿಗಳು!ಜೊತೆಗಾತಿಗೆ ಬಾಯ್ ಫ್ರೆಂಡ್ ಸಿಕ್ಕಿದಾಗ ಯಾವ ಹುಡುಗಿಯೂ ತಪಸ್ಸಿಗೆ ಹೋಗುವುದಿಲ್ಲ.ಅವಳಿಗೂ ಕೂಡಲೇ ಅನಿಸುವುದು, ನನಗೂ ಅಂತ ಒಬ್ಬ ಬೇಕು.

HER ಹರೆಯ ಮೊರೆಯಿಡುತ್ತದೆ.

ಮನಸ್ಸು ನನ್ನದೂ ಅಂತೊಬ್ಬ ಗೆಳೆಯ ಇರುತ್ತಿದ್ದರೆ ಎನ್ನುತ್ತದೆ.

ಅದಕ್ಕೆ ಅವಳ ಮನಸು ಎಂದೋ ಸಿದ್ಧಗೊಂಡಿದೆ.ಅವಕಾಶಕ್ಕೆ ಕಾಯುತ್ತಿತ್ತು ಅಷ್ಟೇ.

ಮೋಡ, ಮಿಂಚು, ಸಿಡಿಲುಗಳಿಂದ ಶೃಂಗಾರಗೊಂಡ ಭೂಮಿಯಂತೆ ಗೆಳೆಯನ ಮನಸ್ಸಿನಲ್ಲಿ ಪ್ರೇಯಸಿಯ ನಿಗೂಢತೆ ಅನಾವರಣಗೊಳ್ಳುತ್ತದೆ. ಪ್ರೇಮಿಗಳಲ್ಲೂ ಈ ಬಯಕೆ ಮಿಂಚಿನ ವೇಗ, ಮಿಂಚಿನ ಸಾಕ್ಷಾತ್ಕಾರ ಪಡೆಯುತ್ತದೆ.

ಒಂದು ಆಸೆಗಾಗಿ, ಒಂದು ಕನವರಿಕೆಗಾಗಿ ಜೀವನವನ್ನೇ ಒತ್ತೆಯಿಟ್ಟು ದುಡಿಯುವ, ಧೇನಿಸುವ, ರಮಿಸುವ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಇದ್ದವನನ್ನು ಯಾರೂ ಮರೆಯುವುದಿಲ್ಲ.

ನನ್ನದೂ ಎಂಬೊಂದು ತುಂಡು ಭೂಮಿ ಬೇಕೆಂದು ಬಯಕೆ. ಅದನ್ನು ಪೂರೈಸಿಕೊಂಡ ಒಬ್ಬ ಸಾಮಾನ್ಯ ಜೀವಿ ಅಸಾಮಾನ್ಯನಾಗಿ ನನ್ನೊಳಗೂ, ಸಮಾಜದೊಳಗೂ ನಿಲ್ಲುತ್ತಾನೆ.

ನನ್ನದೂ ಎಂಬೊಂದು ದೇಶ ಬೇಕು ಎಂದು ದೇಶಕ್ಕೆ ದೇಶವನ್ನೇ ಕಟ್ಟಿ ನಿಲ್ಲಿಸಿದ ವ್ಯಕ್ತಿ ಶಕ್ತಿಯಾಗುತ್ತಾನೆ.

ನನ್ನದೆಂಬ ಕಾವ್ಯಕ್ಕಾಗಿ ಹುಡುಕ ಹೊರಟವನು ಮಾತ್ರ ನಿಜವಾದ ಕವಿಯಾಗಿ ಉಳಿಯುತ್ತಾನೆ.

ತನ್ನದೆಂಬುದು ಒಂದು ಆಸೆ ಅಲ್ಲ. ಅದು ಆಕಾಂಕ್ಷೆಯೋ, ತುಡಿತವೋ, ಇನ್ಯಾವುದೋ. ಆದರೆ ಅದುವೇ ತಪಸ್ಸು ನಿಜ, ಹಾಗೇ ಸಿದ್ಧಿಯೂ ನಿಜ.